“ಇಲ್ಲಿ ನೆಲ, ನೀರು, ಗಾಳಿ, ಬಾಗಿದ ಬಾನು
ಎಲ್ಲರಿಗು; ನಮಗೆ ನಿನಗಷ್ಟೆ ಅಲ್ಲ;
ಒಂದೆ ಜೀವದ ಅನಂತ ರೂಪಾಂತರ ವಿಲಾಸ,
ವಿಕಾಸಕ್ಕೆ ಏಕತೆಯ ಅರಿವಗತ್ಯ‘’

 

ಪ್ರಮುಖವಾಗಿ ನಿಸರ್ಗದ ಪರಿಸರ ವ್ಯವಸ್ಥೆಗಳ ನಾಶ ಮತ್ತು ಅವುಗಳ ವಿಸ್ತಾರ ಕ್ಷೀಣಿಸುತ್ತಿರುವುದರಿಂದ ಹಲವಾರು ಜೀವ ಪ್ರಭೇದಗಳು ನಶಿಸುತ್ತಿವೆ. ಸಹಾರ ಮರುಭೂಮಿಯಿಂದ ದಕ್ಷಿಣಕ್ಕೆ ಇರುವ ಪರಿಸರ ವ್ಯವಸ್ಥೆಗಳಲ್ಲಿ ಸೇಕಡಾ 65ರಷ್ಟು ನಶಿಸಿವೆ ಅಥವಾ ಅಸ್ತವ್ಯಸ್ಥಗೊಂಡಿವೆ. ಏಷ್ಯಾದ ನೈರುತ್ಯ (South-East)ದಲ್ಲಿನ ಅರಣ್ಯಗಳಲ್ಲಿ ಸೇಕಡಾ 67ರಷ್ಟು ನಾಶಗೊಂಡಿವೆ. ಜೀವಾವಾಸಗಳೇ ಇಲ್ಲವಾದಾಗ ಜೀವಿ ವೈವಿಧ್ಯ ನಾಶವಾಗದೆ ಉಳಿಯಲು ಸಾಧ್ಯವಿಲ್ಲ. ಒಂದು ಅಂದಾಜಿನ ಪ್ರಕಾರ ಜೀವಾವಾಸಗಳ ಗಾತ್ರವು ಸುಮಾರು 90ರಷ್ಟು ಕಡಿಮೆಯಾದರೆ; ಅಲ್ಲಿನ ಪ್ರಭೇದಗಳು ಸೇಕಡಾ 50ರಷ್ಟು ನಶಿಸಿ ಹೋಗುತ್ತವೆ.

ಸಸ್ಯ ಮತ್ತು ಪ್ರಾಣಿ ಪ್ರಭೇದದ ಅತಿ ಬಳಕೆ ಅಥವಾ ದುರ್ಬಳಕೆಯು ಜೀವಾವಾಸಗಳ ನಾಶಕ್ಕೆ ಪ್ರಮುಖ ಕಾರಣವಾಗುವುದು. ಉದಾಹರಣೆಗೆ, ಅರಣ್ಯಗಳಲ್ಲಿ ಹುಲಿಯ ಪ್ರಭೇದ ನಾಶವಾದರೆ ಅಲ್ಲಿಯ ಪರಿಸರ ಸಮತೋಲನ ಏರು-ಪೇರಾಗಿ ಜೀವಾವಾಸವೇ ನಾಶವಾಗಬಹುದು. ಹುಲಿಗಳಿಲ್ಲದಾಗ ಜಿಂಕೆಗಳ ಸಂಖ್ಯೆ ಹೆಚ್ಚುತ್ತದೆ. ಅವು ಹೆಚ್ಚು ಹುಲ್ಲನ್ನು ತಿಂದು ಮೇಲ್ಮಣ್ಣು ಕಾಣುವಂತೆ ಮಾಡುತ್ತವೆ. ಹುಲ್ಲು ಕಡಿಮೆಯಾಗುವುದರಿಂದ ಬಾಷ್ಪವಿಸರ್ಜನೆ ಕಡಿಮೆಯಾಗಿ ಗಾಳಿಯಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಮೊದಲಿಗೆ ಬಿದ್ದ ಮಳೆಯ ಹೊಡೆತಕ್ಕೆ ಮಣ್ಣು ಕರಗಿ ನೀರಿನ ಜೊತೆ ಸೇರುತ್ತದೆ. ಹಾಗಾಗಿ ಮಣ್ಣಿನ ಸವಕಳಿ ನಿರಂತರವಾಗಿ ನಡೆಯುತ್ತದೆ. ನದಿ ಹಳ್ಳಕೊಳ್ಳಗಳ ನೀರು ಮಣ್ಣಿನಿಂದ ಕೂಡಿರುವುದರಿಂದ ಹೂಳು ತುಂಬುತ್ತದೆ. ಸವಕಳಿಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಸಸ್ಯರಾಶಿಗೆ ಆಶ್ರಯವಿಲ್ಲವಾಗುವುದು. ಗಾಳಿಯಲ್ಲಿ ತೇವಾಂಶ ಕಡಿಮೆಯಾಗಿ ಮಳೆ ಬೀಳುವ ಪ್ರಮಾಣವೂ ಕಡಿಮೆಯಾಗುವುದು. ಈ ಎಲ್ಲ ಪ್ರಕ್ರಿಯೆಗಳಿಂದ ಇಡೀ ಜೀವಾವಾಸವೇ ನಾಶಕ್ಕೆ ತುತ್ತಾಗುವುದು. ಇಂದು ವನ್ಯ ಪ್ರಾಣಿಗಳ ಮೂಳೆ, ಹಲ್ಲು, ಚರ್ಮ, ಕೊಂಬುಗಳಲ್ಲಿ ಔಷಧ ಗುಣಗಳಿವೆ ಎಂಬ ತಪ್ಪು ತಿಳುವಳಿಕೆಯಿಂದ ಹುಲಿ, ಘೆಂಡಾಮೃಗ, ಉಡ ಮಂತಾದ ಪ್ರಾಣಿಗಳ ಹತ್ಯೆ ನಡೆದಿದೆ. ದಂತದ ಹಾಗೂ ಶ್ರೀಗಂಧದ ಬೊಂಬೆಗಳ ಮೋಹಕ್ಕಾಗಿ ಹಣ ಸುರಿಯುವ ಮೂಢರಿರುವುದರಿಂದ ವೀರಪ್ಪನ್ ಅಂತಹ ಕಾಡುಗಳ್ಳರು ಆನೆ ಮತ್ತು ಶ್ರೀಗಂಧದ ಮರಗಳ ಸಂತತಿಯ ನಾಶಕ್ಕೆ ಕಾರಣರಾಗುತ್ತಿರುವರು. ಇತ್ತೀಚೆಗೆ ಆಯುರ್ವೇದ ಪದ್ದತಿಗೆ ಹೆಚ್ಚಿನ ಪ್ರಚಾರ ಸಿಗುತ್ತಿರುವುದರಿಂದ ಅರಣ್ಯಗಳಲ್ಲಿರುವ ಗಿಡಮೂಲಿಕೆಗಳಿಗೆ ಕುತ್ತು ಬಂದಿದೆ. ಚವನಪ್ರಾಶಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಮತ್ತು ಈ ಔಷಧಗಳಿಗೆ ಅಡ್ಡಪರಿಣಾಮಗಳಿಲ್ಲವೆಂಬ ನಂಬಿಕೆಯಿಂದ ಔಷಧೀಯ ಗಿಡಗಳ ಸಾಮೂಹಿಕ ನಾಶ ಆರಂಭವಾಗಿದೆ. ಮರುಯೌವನ ತರುವುದೆಂದು ಹೇಳುವ ಹಾಗೂ ನೆನಪನ್ನು ಹೆಚ್ಚಿಸುವುದೆಂಬ ಜಾಹಿರಾತುಗಳಿರುವ ವನ್ಯ ಔಷಧಗಳಿಗೆ ಇಂದು ತೀವ್ರ ಬೇಡಿಕೆಯಿದೆ. ಇಂತಹ ಔಷಧಗಳ ತಯಾರಿಕೆಗೆ ಕೆಲವು ನಿರ್ದಿಷ್ಟ ಸಸ್ಯಗಳನ್ನು ಬುಡಸಮೇತ ಕಿತ್ತು ಬಳಸುತ್ತಿದ್ದಾರೆ. ಕೆಲವು ಸಸ್ಯಗಳನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸುತ್ತಾರೆ. ಆರಣ್ಯಗಳಲ್ಲಿನ ಈ ಸಸ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಲೂಟಿ ಮಾಡುತ್ತಿರುವ ಪ್ರಯುಕ್ತ ಅವು ವಿನಾಶದ ಅಂಚಿಗೆ ಸಾಗುತ್ತಿವೆ.

ಕೆಲವೊಮ್ಮೆ ಹೊರದೇಶಗಳಿಂದ ತಂದ ಪ್ರಭೇದವು ಸ್ಥಳೀಯ ಪ್ರಭೇದಗಳನ್ನು ಹಾಗೂ ಜೀವಾವಾಸವನ್ನು ನಾಶಮಾಡುವುದುಂಟು. ನಮ್ಮ ದೇಶಕ್ಕೆ ತರಲಾದ ಲಾಂಟಾನ (ಬೇಲಿ) ಪೊದೆಗಿಡವು ಅರಣ್ಯಗಳಲ್ಲಿನ ಅನೇಕ ಪ್ರಭೇದಗಳಿಗೆ ಜೀವಿಸಲು ಸ್ಥಳವೇ ಇಲ್ಲದಂತೆ ಮಾಡಿದೆ. ಅಮೇರಿಕದ ದೇಶದಿಂದ ಗೋದಿಯ ಜೊತೆ ಬಂದಿದೆಯೆಂದು ಹೇಳಲಾಗುತ್ತಿರುವ ಪಾರ್ಥೇನಿಯಮ್ ಸಸ್ಯವು ಭಾರತದ ಎಲ್ಲ ಪ್ರದೇಶಗಳಲ್ಲಿ ಒಂದು ಪ್ರಮುಖ ಕಳೆಗಿಡವಾಗಿದೆ. ಸ್ಥಳೀಯ ಕಳೆಗಿಡಗಳಿಗೆ ಸ್ಥಾನವೇ ಇಲ್ಲದಂತಾಗಿದೆ. ಅಲ್ಲದೆ ಹೊಲ, ರಸ್ತೆ ಬದಿ, ಅರಣ್ಯಗಳನ್ನೂ ಪ್ರವೇಶಿಸಿರುವ ಪಾರ್ಥೇನಿಯಮ್ ಸಸ್ಯ; ಪ್ರಾಣಿಗಳಿಗೆ ಮತ್ತು ಮನುಷ್ಯನಿಗೆ ಅಸ್ತಮಾ, ತುರಿಕೆ ಮುಂತಾದ ಪರಿಣಾಮಗಳನ್ನುಂಟು ಮಾಡುತ್ತಿದೆ. ವಿದೇಶದಿಂದ ತರಲಾದ ಟಿಲಾಪಿಯ ಮೀನು ಎಂತಹ ನೀರಿನಲ್ಲಿಯೂ ಬದುಕುವ ಹಾಗೂ ಅತಿ ಸಂತಾನ ಮಾಡುವ ಶಕ್ತಿ ಪಡೆದಿರುವುದರಿಂದ ಸ್ಥಳೀಯ ಮೀನು ಪ್ರಭೇದಗಳು ಒತ್ತಡಕ್ಕೆ ಸಿಲುಕಿವೆ. ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಟಿಲಾಪಿಯ ಮೀನುಗಳು ಸಮೃದ್ಧವಾಗಿ ಹೆಚ್ಚುತ್ತಿವೆ.

ಕೈಗಾರಿಕಾ ಸಮಾಜದ `ಕೊಡುಗೆ‘ಗಳಾದ ಕೀಟ ನಾಶಕಗಳು, ಕಳೆನಾಶಕಗಳು ಇಂದು ನಿಸರ್ಗದ ವ್ಯವಸ್ಥೆಗಳ ಅವನತಿ ಹಾಗೂ ಪ್ರಭೇದಗಳ ನಾಶಕ್ಕೆ ಕಾರಣವಾಗಿದೆ. ಪೂರ್ವ ಹಾಗೂ ಮಧ್ಯ ಯುರೋಪಿನ ಸುಮಾರು 98ರಷ್ಟು ಸೂಜಿ ಅರಣ್ಯ (ಶಂಕುದಾರಿ ಮರಗಳ ಅರಣ್ಯ)ವು ಅವನತಿಯ ಹಾದಿಯಲ್ಲಿದೆ. ಕೃಷಿ ಕ್ಷೇತ್ರಗಳಲ್ಲಿ ಬಳಸಲಾಗುವ ಕೀಟನಾಶಕಗಳು ಮಳೆ ನೀರಿನ ಮೂಲಕ ಅರಣ್ಯಗಳಲ್ಲಿನ, ಜಲಪರಿಸರದಲ್ಲಿನ ಜೀವಿಗೆ ಮೃತ್ಯು ತರುತ್ತಿವೆ. ಕೊಡಗು, ಮಂಗಳೂರು, ಚಿಕ್ಕಮಗಳೂರು, ಮುಂತಾದ ಪಶ್ಚಿಮ ಘಟ್ಟಗಳಲ್ಲಿನ ಜಿಲ್ಲೆಗಳಲ್ಲಿ ಕಾಫಿ, ಟೀ, ರಬ್ಬರ್ ತೋಟಗಾರಿಕೆಯಲ್ಲಿ ಹೇರಳವಾಗಿ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇವು ನೀರಿನ ಮೂಲಕ ನದಿಗಳಿಗೆ ಸೇರುವುದರಿಂದ ಹಾಗೂ ಗಾಳಿಯ ಮೂಲಕ ಸುತ್ತಲ ಅರಣ್ಯವನ್ನು ತಲುಪುವುದರಿಂದ ಅನೇಕ ವಿಶಿಷ್ಟ ಜೀವಿಗಳು ನಿರಂತರವಾಗಿ ಸಾಯುತ್ತಿವೆ. ಕಳೆನಾಶಕಗಳ ಬಳಕೆಯಿಂದ ನದಿ ದಂಡೆಗಳನ್ನು ರಕ್ಷಿಸುತ್ತಿರುವ ಗಿಡಗಳು ನಾಶವಾಗುವುದಲ್ಲದೆ, ದಂಡೆಗಳು ಕುಸಿಯುವುದಕ್ಕೆ ಮತ್ತು ಮಣ್ಣಿನ ಸವಕಳಿಗೆ ಕಾರಣವಾಗುತ್ತಿದೆ.

ಕೈಗಾರಿಕೆಗಳಿಂದ ಉಂಟಾಗುವ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯದಿಂದಲೂ ಜೀವ ಪ್ರಭೇದಗಳು ನಾಶವಾಗುವುವು. ಮುಂಬಯಿಯಲ್ಲಿನ ಕೈಗಾರಿಕೆಗಳ ಹಾಗೂ ವಾಹನಗಳ ವಾಯು ಮಾಲಿನ್ಯದಿಂದ ಆಮ್ಲ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಆಮ್ಲ ಮಳೆಯು ಮಹಾರಾಷ್ಟ್ರದ ಅರಣ್ಯಗಳ ಮೇಲೆ ಸುರಿದಾಗ ಅಲ್ಲಿನ ಜೀವಿ ವೈವಿಧ್ಯ ವಿನಾಶದ ಅಂಚಿಗೆ ನೂಕಲ್ಪಡುವುದರಲ್ಲಿ ಅನುಮಾನವಿಲ್ಲ. ಕೈಗಾರಿಕೆಗಳಿಂದ ಬಿಡುವ ತ್ಯಾಜ್ಯವಸ್ತುಗಳನ್ನು ನದಿಗಳಿಗೆ ಹಾಗೂ ಸಮುದ್ರಗಳಿಗೆ ಬಿಡುಗಡೆ ಮಾಡುವುದರಿಂದಲೂ ಜೀವಿವೈವಿಧ್ಯ ನಾಶವಾಗುತ್ತದೆ. ತ್ಯಾಜ್ಯವಸ್ತುಗಳಲ್ಲಿನ ಉಷ್ಣತೆ, ಆಮ್ಲೀಯತೆ, ರಾಸಾಯನಿಕ ವಸ್ತುಗಳ ವಿಷಗಳು ಜೀವಿಗಳನ್ನು ಸಾಯಿಸುತ್ತವೆ. ಜನರಲ್ಲಿ ಜೀವಿವೈವಿಧ್ಯ ಹಾಗೂ ಅದರ ಪ್ರಾಮುಖ್ಯತೆಯ ಬಗೆಗಿನ ಅಜ್ಞಾನ ಹಾಗೂ ಮೂಢನಂಬಿಕೆಗಳು ಸಹ ಜೀವಿವೈವಿಧ್ಯದ ನಾಶಕ್ಕೆ ಕಾರಣವಾಗಬಲ್ಲವು. ಹೊಲಗದ್ದೆಗಳ ಸುತ್ತ ನೈಸರ್ಗಿಕವಾಗಿ ಬೆಳೆಯುವ ಪೊದೆ, ಗಿಡ ಗೆಂಟೆಗಳನ್ನು ಕಿತ್ತುಹಾಕಿ ಕೃಷಿ ಭೂಮಿಯನ್ನು ವಿಸ್ತರಿಸುವುದರಿಂದಲೂ ಜೀವಿ ವೈವಿಧ್ಯ ನಾಶವಾಗುವುದು. ಈ ಕ್ರಿಯೆಯಿಂದ ಪೊದೆಗಳಲ್ಲಿ ಜೀವಿಸುವ ಕ್ರಿಮಿ ಕೀಟಗಳು, ಸಣ್ಣಪುಟ್ಟ ಪಕ್ಷಿಗಳು, ಸಸ್ತನಿಗಳು, ಗಿಡಮೂಲಿಕೆಗಳು ನಶಿಸಿ ಹೋಗುವುವು.

ಹಿಂದೆ ನಮ್ಮಲ್ಲಿ ರಾಜ ಮಹಾರಾಜರು ವಿನೋದಕ್ಕೆ ವನ್ಯ ಜೀವಿಗಳನ್ನು ಬೇಟೆಯಾಡುತ್ತಿದ್ದರು. ತನ್ನ ಜೀವಿತ ಕಾಲದಲ್ಲಿ ಒಂದು ಸಾವಿರದ ಇನ್ನೂರಕ್ಕೂ ಹೆಚ್ಚು ಹುಲಿಗಳನ್ನು ಹೊಡೆದುರುಳಿಸಿದ ರಾಜ ಮಧ್ಯ ಪ್ರದೇಶದಲ್ಲಿದ್ದ. ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಗ್ರಾಮಗಳಲ್ಲಿ ವನ್ಯ ಪ್ರಾಣಿಗಳನ್ನು ಬೇಟೆಯಾಡಿ ಸಮಾಜದಲ್ಲಿ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುವ ಜಮೀನುದಾರರು, ನಾಯಕರು ಇದ್ದರು. ಬೇಟೆಯಾಡುವುದೂ ಒಂದು ರೀತಿಯ ಮೋಜಿನ ಕ್ರೀಡೆಯಾಗಿತ್ತು. ಈಗಲೂ ಅರಣ್ಯಗಳ ಸಮೀಪ ವಾಸಿಸುವ ಕೆಲವರು ಕದ್ದು ಬೇಟೆಯಾಡುವುದುಂಟು. ಮೋಜಿಗಾಗಲೀ, ಆಹಾರಕ್ಕಾಗಲೀ ಬೇಟೆಯಿಂದ ಜೀವಿವೈವಿಧ್ಯಕ್ಕೆ ಕುಂದಾಗುವುದಂತೂ ಸಹಜ.

ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲಿ ಮಾನವನ ಜನಸಂಖ್ಯೆಯು ಸ್ಪೋಟಕರೂಪದಲ್ಲಿ ಹೆಚ್ಚುತ್ತಿದೆ. 34 ಕೋಟಿಯಿದ್ದ ಭಾರತೀಯರ ಸಂಖ್ಯೆ 94 ಕೋಟಿಯನ್ನು ಮೀರಿ ಬೆಳೆಯುತ್ತಿದೆ. ಸುಮಾರು ಒಂದೂವರೆ ಕೋಟಿಯಿದ್ದ ಕನ್ನಡಿಗರ ಸಂಖ್ಯೆ ನಾಲ್ಕು ಕೋಟಿಯನ್ನು ಮೀರಿಸಿದೆ. ಜನಸಂಖ್ಯಾ ಹೆಚ್ಚಳವು ಪರಿಸರ ವ್ಯವಸ್ಥೆಗಳ ಮೆಲೆ ಭಾರಿ ಒತ್ತಡವನ್ನುಂಟು ಮಾಡುವುದು. ಜನರು ವಸತಿ, ಕೃಷಿ, ಆಹಾರಕ್ಕೆ ಜೀವಾವಾಸಗಳನ್ನು ನಾಶಮಾಡುವರು, ಕೃಷಿಯನ್ನು ವಿಸ್ತರಿಸುವರು, ಅರಣ್ಯ ಉತ್ಪನ್ನಗಳನ್ನು ಲೂಟಿ ಮಾಡಲು ಆರಂಭಿಸುವರು. ಜೊತೆಗೆ ಬಡತನವೂ ಜೈವವೈವಿಧ್ಯ ನಾಶಕ್ಕೆ ಕಾರಣವಾಗುವುದು. ಬಡತನ, ಹಸಿವುಗಳ ಮುಂದೆ ಜೀವಿ ವೈವಿಧ್ಯ ರಕ್ಷಣೆಯ ಕರೆ ಅರ್ಥ ಕಳೆದುಕೊಳ್ಳುವುದು.

ಆಧುನಿಕ ಕೃಷಿ ಪದ್ಧತಿಯೂ ಜೀವಿ ವೈವಿಧ್ಯದ ನಾಶಕ್ಕೆ ತನ್ನ `ಕೊಡುಗೆ‘ ನೀಡುತ್ತಿದೆ. ಸಾವಿರಾರು ವರ್ಷಗಳಿಂದಲೂ ರೂಢಿಯಲ್ಲಿದ್ದ ಬಹು ಬೆಳೆಗಳ ಪದ್ಧತಿ ಮಾಯವಾಗಿ ಏಕ ಬೆಳೆಯ ಕೃಷಿ ಪದ್ಧತಿ ಜಾರಿಗೆ ಬಂದಿದೆ. ಹೊಲಗಳಲ್ಲಿ ರಾಗಿ, ಜೋಳ, ತೊಗರಿ, ಕಡಲೆ ಮುಂತಾದ ಪ್ರಭೇದಗಳನ್ನು ಒಟ್ಟಿಗೇ ಬೆಳೆಯುವ ಪದ್ಧತಿ ಕಡಿಮೆಯಾಗಿದೆ. ಅಲ್ಲದೆ ಪ್ರತಿ ಬೆಳೆಗೂ ಸ್ಥಳೀಯವಾದ ಮಣ್ಣಿಗೆ ಒಗ್ಗಿಕೊಂಡಿದ್ದ ತಳಿಗಳನ್ನು ಬಳಸುವ ಬದಲು ಈಗ ಹೈಬ್ರಿಡ್ ತಳಿ ಬೀಜಗಳನ್ನು ರೈತರು ಬಳಸುತ್ತಿದ್ದಾರೆ. ಬಹುಬೆಳೆಗಳ ಪದ್ಧತಿಯಲ್ಲಿ ಕೀಟಗಳ ಹಾವಳಿ ಕಡಿಮೆ. ಅಲ್ಲದೆ ಇದು ಮಣ್ಣಿನ ಪೋಷಕಾಂಶಗಳ ಸಮತೋಲನ ಕಾಪಾಡಲು ಸಹಾಯಕ. ಏಕ ಬೆಳೆ ಕೃಷಿಯಲ್ಲಿ ಕೀಟಗಳ ಹಾವಳಿ ಹೆಚ್ಚು. ಆದ್ದರಿಂದ ಕೀಟನಾಶಕಗಳನ್ನು ಹೇರಳವಾಗಿ ಬಳಸಬೇಕಾಗುತ್ತದೆ. ಹೈಬ್ರಿಡ್ ತಳಿಗಳು ಮಣ್ಣಿನ ಪೋಷಕಾಂಶಗಳನ್ನು ತೀವ್ರ ವೇಗದಲ್ಲಿ ಬಳಸುವುದರಿಂದ ರಸಗೊಬ್ಬರಗಳನ್ನು ನೀಡಬೇಕಾಗುತ್ತದೆ. ಅಲ್ಲದೆ ಈ ತಳಿಗಳಿಗೆ ರೋಗ ನಿರೋಧಕ ಗುಣ ಕಡಿಮೆಯಿರುವುದರಿಂದ ಕೀಟನಾಶಕಗಳನ್ನು ಹೆಚ್ಚು ಬಳಸಬೇಕಾಗುವುದು. ಅಲ್ಲದೆ ರೈತರು ಹೆಚ್ಚು ಲಾಭ ಪಡೆಯುವ ದೃಷ್ಟಿಯಿಂದ ಸ್ಥಳೀಯ ತಳಿಗಳನ್ನು ಮರೆತೇ ಬಿಡುತ್ತಾರೆ. ಹಿಂದೆ ಕರ್ನಾಟಕದಲ್ಲಿ ಕೃಷಿಗೊಳ್ಳುತ್ತಿದ್ದ ದೊಡ್ಡ ಭತ್ತ, ಬಾಲದ ಭತ್ತ, ಹಾಲುಬ್ಬಲು, ಗಂಗಡಲೆ, ಬಳ್ಳಿ ಕಡಲೆಕಾಯಿ ಈಗ ಅಪರೂಪಕ್ಕೂ ಸಿಗುವುದಿಲ್ಲ!

ಮಾನವ ನಡೆಸುವ ಯುದ್ಧ ಹಾಗೂ ಯುದ್ಧ ಸಾಮಗ್ರಿಗಳ ಬಳಕೆಯಿಂದ ಜೀವಿವೈವಿಧ್ಯವು ನಶಿಸುವ ಸಾಧ್ಯತೆ ಹೆಚ್ಚು. ಜೀವಾವಾಸ ಹಾಗೂ ಅರಣ್ಯಗಳನ್ನು ನೆಲಸಮ ಉರುಳಿಸಿ ಮುಂದೆ ಸಾಗುವ ಸೈನ್ಯ ಅನಿವಾರ್ಯವಾಗಿ ಜೀವಿ ವೈವಿಧ್ಯವನ್ನು ನಾಶಪಡಿಸುತ್ತದೆ. ವಿಯಟ್ನಾಂ ಯುದ್ಧದಲ್ಲಿ ಅಮೇರಿಕ ಸೈನ್ಯವು ವಿಯಟ್ನಾಂ ಜನರ ಗೆರಿಲ್ಲಾ ಯುದ್ಧದ ತಂತ್ರಗಳನ್ನು ಸೋಲಿಸಲು ಹೆಲಿಕಾಪ್ಟರ್ ಹಾಗೂ ವಿಮಾನಗಳ ಮೂಲಕ ವಿಷವಸ್ತುಗಳನ್ನು ಸಿಂಪಡಿಸಿ ಅರಣ್ಯಗಳೇ ನಶಿಸಿಹೋಗುವಂತೆ ಮಾಡಿತು. ಯಾವ ಸಸ್ಯಗಳೂ ಬೆಳೆಯದಂತೆ ಮಣ್ಣನ್ನು ವಿಷಮಯಗೊಳಿಸಿತು.

ಕೆಲವು ಪ್ರಾಣಿಗಳಲ್ಲಿ ಒಳಸಂತಾನ (inbreading)ದಿಂದಾಗಿ ಅನುವಂಶೀಯ ವೈವಿಧ್ಯ ಕಡಿಮೆಯಾಗುವುದು. ಅವುಗಳಲ್ಲಿನ ವೈವಿಧ್ಯದ ಕೊರತೆಯಿಂದಾಗಿ ಅವು ಬೇಗ ರೋಗಕ್ಕೆ ತುತ್ತಾಗಬಹುದು ಅಥವಾ ಸಂತಾನ ಶಕ್ತಿ ಕ್ಷೀಣಿಸಬಹುದು ಅಥವಾ ಅನುವಂಶೀಯ ರೋಗಗಳು ಹೆಚ್ಚಾಗಬಹುದು. ಉದಾಹರಣೆಗೆ ಹುಲಿ ಸಂತತಿಯು ಈ ಒಳಸಂತಾನದಿಂದ ಆಘಾತಕ್ಕೆ ಒಳಗಾಗುತ್ತಿದೆ.

ನಿಸರ್ಗದಲ್ಲಿ ಆಗಾಗ್ಗೆ ಉಂಟಾಗುವ ಪ್ರಕೃತಿ ವಿಕೋಪಗಳಿಂದಲೂ ಜೀವಿ ವೈವಿಧ್ಯ ನಾಶವಾಗುವುದು. ಭೂಕಂಪ, ಪ್ರವಾಹ, ಹವಾಗುಣ ಬದಲಾವಣೆ, ಬರಗಾಲ ಮುಂತಾದವು ಜೀವಿ ವೈವಿಧ್ಯದ ನಾಶಕ್ಕೆ ಕಾರಣವಾಗುತ್ತವೆ. ವಾಯು ಮಾಲಿನ್ಯದಿಂದ ಭವಿಷ್ಯದಲ್ಲಿ ತೀವ್ರತರವಾದ ಬದಲಾವಣೆಗಳಾಗುತ್ತವೆ. ಭೂಗ್ರಹದ ಸರಾಸರಿ ಉಷ್ಣತೆ ಹೆಚ್ಚಿ ಜಲಪ್ರಳಯ, ಸಮುದ್ರಗಳ ನೀರಿನ ಪ್ರಮಾಣದಲ್ಲಿನ ಹೆಚ್ಚಳ ಉಂಟಾಗುವುದು. ಇಂಗಾಲದ ಡೈಆಕ್ಸೈಡ್‌ನ ಪ್ರಮಾಣದಲ್ಲಿನ ಏರು-ಪೇರು, ಭೂವಾತಾವರಣದಲ್ಲಿ ಬದಲಾವಣೆ ತಂದು ಅಗಾಧ ಜೀವಿ ವೈವಿಧ್ಯ ನಾಶ ಸನ್ನಿಹಿತವಾಗಲಿದೆ.

ಜೀವಿ ವೈವಿಧ್ಯದ ನಾಶಕ್ಕೆ ಮೇಲೆ ಸೂಚಿಸಿರುವ ಎಲ್ಲ ಕಾರಣಗಳ ಹಿಂದೆ ಕೆಲವು ಅಗೋಚರವಾದ ಕಾರಣಗಳಿವೆ. ಸ್ಥೂಲವಾಗಿ ಮಾನವನ ಪ್ರಭೇದವೇ ಇತರೆ ಪ್ರಭೇದಗಳ ಅವನತಿಗೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲ ದೇಶಗಳ ಜನರೂ ಕಾರಣರೆ? ಅಥವಾ ಕೆಲವೇ ದೇಶಗಳು ಕಾರಣವೇ? ಅಥವಾ ಪ್ರತಿ ದೇಶದ ಕೆಲವು ಜನರು ಕಾರಣವೇ? ಎಂಬುದನ್ನು ವಿಮರ್ಶಿಸಬೇಕಾಗುತ್ತದೆ. ಜೀವಾವಾಸಗಳ ನಾಶ, ಪ್ರಭೇದಗಳ ಅತಿ ಬಳಕೆ ಹಾಗೂ ವಾತಾವರಣದಲ್ಲಿನ ಬದಲಾವಣೆಗಳ ಹಿಂದೆ ಅಡಗಿರುವ ರಾಜಕೀಯ – ಆರ್ಥಿಕ ಕಾರಣಗಳನ್ನು ನಾವು ಮನಗಾಣಬೇಕು.

ಕೈಗಾರಿಕೆ, ಕೃಷಿ ಹಾಗೂ ಶಕ್ತಿ ಉತ್ಪಾದನಾ ಕಾರ್ಯಗಳಿಗೆ ಸತ್ಕಾರ ಮತ್ತು ಅಂತಾರಾಷ್ಟ್ರೀಯ ಬೆಂಬಲ ಮತ್ತು ಪ್ರೋಬರುವುದರಿಂದ ಸ್ಥಳೀಯವಾದ ಹಾಗೂ ಪರಿಸರ ಸ್ನೇಹಿ ಅಭಿವೃದ್ದಿ ವಿಧಾನಗಳು ಕಣ್ಮರೆಯಾಗುತ್ತಿವೆ. ಕೃಷಿಯಲ್ಲಿನ ತೀವ್ರ ಇಳುವರಿ ಪದ್ಧತಿ, ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಹತೋಟಿಯಿಲ್ಲದಿರುವ ಸ್ಥಿತಿ, ಬೃಹತ್ ಜಲಾಶಯಗಳ ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಸಹಾಯ ಮತ್ತು ಮನ್ನಣೆಗಳಿಂದ ಜೀವಿ ವೈವಿಧ್ಯದ ನಾಶ ಮುಂದುವರೆಯುವುದಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ.

ವಿದೇಶಿ ಸಂಸ್ಕೃತಿಯ ಆಕ್ರಮಣದಿಂದ ಅರಣ್ಯಗಳ ನಾಶ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಅತಿಬಳಕೆ ಹೆಚ್ಚುತ್ತಿರುವುದು ಜೀವಿ ವೈವಿಧ್ಯದ ನಾಶಕ್ಕೆ ಪ್ರಮುಖ ಕಾರಣವಾಗಿದೆ. ಮಲೇಷಿಯಾದ `ಭೂ ಗೆಳೆಯರು‘ ಸಂಸ್ಥೆಯ ಹ್ಯಾರಿಸನ್‌ರವರು ಈ ಬಗ್ಗೆ ನೀಡಿರುವ ಹೇಳಿಕೆ ಅಕ್ಷರಶಃ ಸತ್ಯವಾಗಿದೆ.

ಮುಂದುವರೆದ ಕೈಗಾರಿಕಾ ದೇಶಗಳೇ ನಮ್ಮ ಅರಣ್ಯಗಳ ನಾಶ ಹಾಗೂ ಸಂಪನ್ಮೂಲಗಳ ಶೋಷಣೆಯ ಮೂಲ ಕಾರಣ. ಅವು ನಮ್ಮಿಂದ ಬೆಲೆಬಾಳುವ ಮರುಮುಟ್ಟುಗಳನ್ನು, ತೈಲ, ನೈಸರ್ಗಿಕ ಅನಿಲ ಹಾಗೂ ಪ್ರಾಣಿಗಳ ಮಾಂಸವನ್ನು ಆಮದುಮಾಡಿಕೊಳ್ಳುತ್ತವೆ. ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ವಾಸಿಸುವವರ ಪ್ರಮಾಣ ಸೇಕಡಾ 25. ಆದರೆ ಅವರು ಜಗತ್ತಿನ 4/5ನೇ ಭಾಗದಷ್ಟು ಪ್ರಾಕೃತಿಕ ಸಂಪನ್ಮೂಲಗಳನ್ನು ಕಬಳಿಸುತ್ತಿದ್ದಾರೆ. ಆ ದೇಶದ `ಬಳಸಿ-ಎಸೆಯುವ ಸಂಸ್ಕೃತಿಯನ್ನು ಸಮೂಹ ಮಾಧ್ಯಮಗಳ ಮೂಲಕ ಅಭಿವೃದ್ದಿಶೀಲ ರಾಷ್ಟ್ರಗಳ ಜನರಿಗೂ ಹೇರುತ್ತಿದ್ದಾರೆ. `ಪ್ರಗತಿ ಎನ್ನಲಾಗುವ ಇವರ ಮಾರ್ಗದರ್ಶನದಿಂದ ಅವನತಿ – ನಾಶ ಎಲ್ಲೆಲ್ಲೂ ಕಂಡುಬರುತ್ತಿದೆ‘’.

ಯಾವ ರೀತಿಯ ಅಧ್ಯಯನವನ್ನೂ ಮಾಡದೆ ವಿದೇಶಿ ತಳಿಗಳನ್ನು ಭಾರತಕ್ಕೆ ತರುತ್ತಿರುವುದು ಮೂರ್ಖತನವಾಗಿದೆ. ಸಾಮಾನ್ಯವಾಗಿ ವಿದೇಶಿ ತಳಿಗಳು ಹೆಚ್ಚು ಸಂತಾನಗೊಂಡಾಗ ಅವನ್ನು ತಡೆಯುವ ಅಥವಾ ನಿಯಂತ್ರಿಸುವ ಸಮತೋಲನದ ವಿಧಾನಗಳು ಇಲ್ಲಿರುವುದಿಲ್ಲ. ಆದ್ದರಿಂದ ಅವು ಯತೇಚ್ಛವಾಗಿ ಬೆಳೆದು ಇಲ್ಲಿಯ ಪ್ರಭೇದಗಳಿಗೆ ಕಂಟಕವಾಗುತ್ತವೆ. ಸ್ಥಳೀಯ ಪ್ರಭೇದಗಳು ಎಷ್ಟು ಬೆಳೆದರೂ ಸಹ ಅವನ್ನು ತಡೆಯುವ ಅಥವಾ ನಿಯಂತ್ರಿಸುವ ನೈಸರ್ಗಿಕ ವಿಧಾನಗಳು ಇಲ್ಲಿರುತ್ತವೆ. ಭಕ್ಷಕ ಜೀವಿ ಅಥವಾ ಪರತಂತ್ರ ಜೀವಿ ಇರುತ್ತದೆ.

ಜೀವಿಗಳನ್ನು ಹತೋಟಿಯಲ್ಲಿಡುವ ಅಥವಾ ರಕ್ಷಿಸುವ ಸ್ಥಳೀಯ ವಿಧಾನಗಳು, ಸರಳ ತಂತ್ರಜ್ಞಾನಗಳು, ಅತಿ ಬಳಕೆಯನ್ನು ವಿರೋಧಿಸುವ ಧಾರ್ಮಿಕ, ನೈತಿಕ ಮೌಲ್ಯಗಳು, ಸರಳ ಜೀವನದಲ್ಲಿಯೇ ತೃಪ್ತಿಯನ್ನು ಕಾಣುವ ಜೀವನಶೈಲಿ – ಇಂತಹ ಸ್ಥಳೀಯ ರೂಢಿಗಳು ಮಾಯವಾಗಿ ಮಾನವೀಯತೆಯನ್ನೇ ಮರೆಸುವ ಅತಿ ಬಳಕೆಯ ಸಂಸ್ಕೃತಿ, ಬಳಸಿ ಎಸೆಯುವ ಸಂಸ್ಕೃತಿ, ಆರ್ಥಿಕ ಸ್ಥಾನಕ್ಕೇ ಮನ್ನಣೆ ನೀಡುವ ಹಾಗೂ ಲಾಭಕ್ಕಾಗಿ ಏನನ್ನೂ ಮಾಡಲು ಹೇಸದ ಜೀವನಶೈಲಿಗಳು ಬರುತ್ತಿರುವುದೇ ಜೀವಿ ವೈವಿಧ್ಯದ ನಾಶಕ್ಕೆ ಪ್ರಮುಖ ಕಾರಣ. ಮನುಷ್ಯನ ಮಾನವೀಯ ಕರ್ತವ್ಯಗಳಿಗೆ ಗೌರವಾದರಗಳು ಕಡಿಮೆಯಾಗಿರುವುದರಿಂದ ಪರಿಸರ ರಕ್ಷಣೆಯು ಮಹತ್ವ ಕಳೆದುಕೊಳ್ಳುತ್ತಿದೆ. ಅಭಿವೃದ್ದಿಕಾರ್ಯಗಳಿಗಾಗಿ ಶ್ರೀಮಂತ ರಾಷ್ಟ್ರಗಳು ನೀಡುವ ನೆರವು, ಏಡ್ಸ್ ವೈರಸ್ಸಿನಂತೆ ಸ್ವದೇಶದ ಸ್ವಾವಲಂಬನೆಯನ್ನು ನಾಶಮಾಡಿ, ವಿದೇಶಗಳ ಸಾಮಾಜಿಕ, ಆರ್ಥಿಕ ಆಕ್ರಮಣಕ್ಕೆ ತುತ್ತಾಗುವಂತೆ ಮಾಡುತ್ತಿವೆ. ಮೂರನೇ ಜಗತ್ತಿನ ರಾಷ್ಟ್ರಗಳಿಗೆ ನೀಡಲಾಗುತ್ತಿರುವ ಆರ್ಥಿಕ ನೆರವು ಹಾಗೂ ತಂತ್ರಜ್ಞಾನದ ವರ್ಗಾವಣೆಯಿಂದಾಗಿ ಸ್ಥಳೀಯ ಸಂಪ್ರದಾಯಿಕವಾದ ಹಾಗೂ ಸುಸ್ಥಿರ ಅಭಿವೃದ್ದಿಗೆ ಪೂರಕವಾದ ಮಣ್ಣು ಬಳಕೆ ವಿಧಾನಗಳು ನಶಿಸುತ್ತಿವೆ. ಅರಣ್ಯಗಳು ನಾಶವಾಗಿ, ಕೈಗಾರಿಕಾ ದುಷ್ಟಕೂಟಗಳಿಗೆ ಕೃಷಿ ಭೂಮಿಯೂ ತುತ್ತಾಗುತ್ತಿದೆ.

ಮೂರನೆಯ ಜಗತ್ತಿನ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಜೈವಿಕ ನಾಶವನ್ನು ತಡೆಗಟ್ಟಬೇಕಾದರೆ ನಾವು ಆರ್ಥಿಕ ಹಾಗೂ ಸಾಮಾಜಿಕವಾದ ಸೂಕ್ಷ್ಮ ಸಂಬಂಧಗಳನ್ನು ಅರ್ಥಮಾಡಿಕೊಳ್ಳಬೇಕು. ಪರಿಸರ ಸ್ನೇಹಿ ಸಂಪ್ರದಾಯಗಳನ್ನು ಗೌರವಿಸಬೇಕು. ಪ್ರತಿಯೊಂದು ಸಸ್ಯವೂ ದೇವಸ್ವರೂಪಿ ಎಂಬುದನ್ನು ಪರಿಗಣಿಸಬೇಕು. `ಸರಳ ಜೀವನ ಉನ್ನತ ಚಿಂತನ‘ – ಜೀವನ ಶೈಲಿಯು ಅನುಕರಣೀಯವಾಗಬೇಕು.