`ಉಬ್ಬಸ’ ಎಂಬ ಶಬ್ದ ಕಷ್ಟ, ಸಂಕಟ, ಹಿಂಸೆ ಅನ್ನುವ ಅರ್ಥವನ್ನು ಸೂಚಿಸುತ್ತದೆ.

ಉಬ್ಬಸದ ಬಗ್ಗೆ ಸರ್ವಜ್ಞನ ಒಂದು ವಚನ ಹೀಗೆ ಹೇಳುತ್ತದೆ.

ಉದ್ದು ಮದ್ದಿಗೆ ಹೊಲ್ಲ, ನಿದ್ದೆ ಯೋಗಿಗೆ ಹೊಲ್ಲ
ಬಿದ್ದಿರಲು ಹೊಲ್ಲ ಉದ್ಯೋಗಿ, ರೋಗದೊಳು ಉಬ್ಬಸವೇ ಹೊಲ್ಲ ಸರ್ವಜ್ಞ

ಇಲ್ಲಿ ಹೊಲ್ಲವೆಂಬುದು ಗುಣವಾಚಕ ಅಂದರೆ ನಿಂದ್ಯ. ಉದ್ದು ಯಾವ ಔಷಧಿಗೂ ನಿಂದ್ಯ. ನಿದ್ದೆ ಯೋಗಿಗಳಿಗೆ ನಿಂದ್ಯ. ಉದ್ಯೋಗಿ ಸುಮ್ಮನೆ ಇರುವುದು ನಿಂದ್ಯ. ಹಾಗೆಯೇ ಎಲ್ಲ ರೋಗಿಗಳಲ್ಲಿ ಉಬ್ಬಸ ರೋಗ ನಿಂದ್ಯವಾದದ್ದು. ಈಗ ಉಬ್ಬಸದ ಸಂಕಟ, ನೋವು ಎಷ್ಟೆಂದು ಅರ್ಥವಾಗುತ್ತದಲ್ಲವೇ? ವರ್ಷಗಳ ಕಾಲ ಕಾಡುವ ಈ ಉಬ್ಬಸ ಅನುಭವಿಸಿದವರಿಗೆ ಗೊತ್ತು ಅದರ ಯಾತನೆ. ಕ್ರಿಸ್ತಪೂರ್ವ ಸುಮಾರು 1ನೇ ಶತಮಾನದಲ್ಲಿ ಬರೆದ ಚರಕಸಂಹಿತೆ ಮತ್ತು ಸುಮಾರು ಕ್ರಿ.ಪೂ. 600ರಲ್ಲಿ ಬರೆದ ಸುಶ್ರುತ ಸಂಹಿತೆಯಲ್ಲಿ ಈ ಉಬ್ಬಸವನ್ನು ಶ್ವಾಸ ಎಂದು ವಿಷದವಾಗಿ ವಿವರಣೆ ಕೊಡಲಾಗಿದೆ. ಅಸ್ತಮಾ ಎಂಬುದು ಗ್ರೀಕಭಾಷೆಯ ಒಂದು ಶಬ್ದ.

ಉಸಿರಾಟ ಒಂದು ಅನೈಚ್ಛಿಕ ಕ್ರಿಯೆ. ಎಲ್ಲ ಜೀವಿಗಳಲ್ಲಿ ಹುಟ್ಟಿನಿಂದ ಸಾಯುವವರೆಗೂ ನಡೆಯುವ ಕ್ರಿಯೆ. ಉಸಿರಾಟ ಒಂದು ನಿಮಿಷಕ್ಕೆ 16-18 ಬಾರಿ ಸಹಜವಾಗಿ ಇರುತ್ತದೆ. ಇದರ ವೇಗ ಮಕ್ಕಳಲ್ಲಿ ಮತ್ತು ಗರ್ಭಿಣಿಯರಲ್ಲಿ ಹೆಚ್ಚಾಗಿರುತ್ತದೆ. ಉಸಿರಾಟದಲ್ಲಿ ತಡೆಯುಂಟಾದಾಗ ಉಬ್ಬಸ ಎಂದು ಹೇಳುತ್ತೇವೆ. ಉಬ್ಬಸ ಒಂದು ರೋಗವಾಗಿರಬಹುದು ಇಲ್ಲವೇ ಅನೇಕ ರೋಗಗಳಲ್ಲಿ ಲಕ್ಷಣವಾಗಿ ಕಂಡುಬರ ಬಹುದು. ಅಲ್ಲದೆ ಕೆಲವು ಕಾಯಿಲೆಗಳಿಗೆ ತೆಗೆದುಕೊಳ್ಳುವ ಔಷಧಿಗಳ ಪಾರ್ಶ್ವ ಪರಿಣಾಮಗಳಿಂದಲೂ ಉಬ್ಬಸ ಕಾಣಿಸಿಕೊಳ್ಳಬಹುದು. ದಪ್ಪಗಿರುವವರಲ್ಲಿ ಮತ್ತು ವ್ಯಾಯಾಮದ ನಂತರ ಉಂಟಾಗುವ ಉಸಿರಾಟದ ಏರುಪೇರು ಸಹಜವಾದುದು. ಕೆಲ ಹೊತ್ತಿನ ನಂತರ ಸರಿಹೋಗುತ್ತದೆ. ಉಬ್ಬಸದಲ್ಲಿ ಕಷ್ಟದಿಂದ ಉಸಿರಾಟ ಉಂಟಾಗುತ್ತದೆ. ಶ್ವಾಸಕೋಶಗಳಲ್ಲಿ ಹೆಚ್ಚಾಗಿ ಶ್ವಾಸನಾಳಗಳು ಸಂಕುಚಿತವಾಗುವುದರಿಂದ ಉಸಿರಾಟದ ತೊಂದರೆ ಬರುತ್ತದೆ.

ಕಾರಣಗಳು :

ಹುಳಿ, ಉಪ್ಪು, ಖಾರದಿಂದ ಕೂಡಿದ ಆಹಾರದಿಂದ ಹೊಟ್ಟೆಯಲ್ಲಿ ಪಿತ್ತವು ವೃದ್ಧಿಯಾಗಿ ದಾಹ ಉಂಟು ಮಾಡುತ್ತದೆ. ಅರ್ಧ ಬೆಂದ ಆಹಾರ ಪದಾರ್ಥಗಳು, ಹೊರಗಡೆಯ ಆಹಾರದಿಂದಲೂ ಅಂದರೆ ಹೋಟೆಲ್‌ಗಳಲ್ಲಿ ಕರಿದ ಎಣ್ಣೆಯನ್ನೇ ಮತ್ತೆ ಕಾಯಿಸಿ ಬಳಸುವುದರಿಂದ, ಜೀರ್ಣಕ್ಕೆ ಜಡವಾಗಿರುವಂತಹ ಅಲಸಂದೆ, ಕಡಲೆಕಾಳು, ಅವರೆಕಾಳು, ಬಟಾಣಿ ಮುಂತಾದವುಗಳ ಸೇವನೆಯಿಂದ, ಬಾಳೆಕಾಯಿ, ಆಲೂಗೆಡ್ಡೆ, ಮೆಣಸಿನಕಾಯಿ, ಕಡಲೆಹಿಟ್ಟು ಬೆರೆಸಿ ತಯಾರಿಸಿರುವಂತಹ ಬಜ್ಜಿ, ಬೋಂಡಾಗಳು ಕೂಡ ಜೀರ್ಣಕ್ಕೆ ಜಡವಾಗಿರುತ್ತವೆ. ಮೈದಾ ಹಿಟ್ಟಿನಿಂದ ತಯಾರಿಸುವ ರೋಟಿ, ನಾನ್‌, ಪರೋಟ ಮುಂತಾದವುಗಳ ಸೇವನೆಯಿಂದ ಉಬ್ಬಸ ಹೆಚ್ಚಾಗುತ್ತದೆ. ಲಸ್ಸಿ, ಐಸ್‌ಕ್ರೀಂ, ಕೇಕಮೇಲಿನ ಕ್ರೀಂ, ಉದ್ದಿನ ವಡೆ, ಉದ್ದಿನಿಂದ ತಯಾರಿಸಿದ ಪದಾರ್ಥಗಳು, ಚೀಸ್ ಮುಂತಾದ ಆಹಾರ ಪದಾರ್ಥಗಳು ಜೀರ್ಣಕ್ಕೆ ಕಷ್ಟಕರವಾದವುಗಳು. ಈ ಆಹಾರಗಳನ್ನು ಅತಿಯಾಗಿ ಬಳಸುವುದರಿಂದ ಉಬ್ಬಸ ಬರಬಹುದು. ಉಬ್ಬಸ ರೋಗಿಗಳಿಗೆ ಮೊಸರಿಗಿಂತ ಮಜ್ಜಿಗೆ ಒಳ್ಳೆಯದು. ಮಜ್ಜಿಗೆಗೆ ಸ್ವಲ್ಪ ಉಪ್ಪು ಮತ್ತು ಕಾಳು ಮೆಣಸಿನ ಪುಡಿ ಹಾಕಿ ಕುಡಿಯಬೇಕು. ಘೀ ರೈಸ್, ಪಲಾವ್  ಮತ್ತು ಫ್ರೈಡ್‌ರೈಸ್ ಮುಂತಾದ ವಿವಿಧ ರೀತಿಯ ಕಲೆಸಿದ ಅನ್ನಗಳನ್ನು ತಯಾರಿಸುವಾಗ ಹೆಚ್ಚು ಮಸಾಲೆ ಪದಾರ್ಥಗಳಾದ ಮೆಣಸು, ಚಕ್ಕೆ, ಲವಂಗ, ಹಸಿ ಅಥವಾ ಒಣಗಿದ ಮೆಣಸಿನಕಾಯಿ ಮುಂತಾದವುಗಳನ್ನು ಉಪಯೋಗಿಸುವುದರಿಂದ ಉಬ್ಬಸದ ತೊಂದರೆ ಹೆಚ್ಚಾಗುತ್ತದೆ. ಇವುಗಳನ್ನು ಅಪರೂಪಕ್ಕೆ ಅಂದರೆ ಯಾವಾಗಲಾದರೊಮ್ಮೆ ಬಳಸುವುದರಿಂದ ತೊಂದರೆಯಿಲ್ಲ. ಹಳಸಿದ ಆಹಾರ, ಒಡೆದು ಹೋದ ಹಾಲಿಗೆ ಹೆಪ್ಪು ಹಾಕಿದ ಮೊಸರು, ಅರೆಬೆಂದ ತರಕಾರಿ ಸೇವನೆಯಿಂದ, ಅತಿಯಾಗಿ ಅಂದರೆ ಹೊಟ್ಟೆ ತುಂಬ ತಿನ್ನುವುದರಿಂದ ಮತ್ತು ರಾತ್ರಿ ಹೊತ್ತು ತಡವಾಗಿ ಆಹಾರ ಸೇವಿಸುವುದು ಇವೆಲ್ಲವುಗಳಿಂದ ಉಬ್ಬಸದ ತೊಂದರೆ ಹೆಚ್ಚಾಗುತ್ತದೆ.

ಉಬ್ಬಸ ರೋಗಿಗೆ ತಣ್ಣಗಿನ ನೀರು, ಫ್ರಿಜ್‌ನಲ್ಲಿರಿಸಿದ ನೀರು, ತಂಪು ಪಾನೀಯಗಳು, ತಣ್ಣಗಿರುವ ಆಹಾರ ಸೇವನೆ ಒಳ್ಳೆಯದಲ್ಲ. ಇದಲ್ಲದೆ ತಣ್ಣಗಿನ ನೀರಿನಲ್ಲಿ ಸ್ನಾನ, ತಣ್ಣನೆಯ ಗಾಳಿಯಲ್ಲಿ ತಿರುಗಾಡುವುದು, ಏರ್ ಕಂಡೀಷ್ ರೂಮಿನಲ್ಲಿ ಹೆಚ್ಚು ಹೊತ್ತು ಕಳೆಯುವುದು ಮುಂತಾದವುಗಳಿಂದ ಉಬ್ಬಸ ರೋಗಿಗಳಲ್ಲಿ ತೊಂದರೆಯಾಗುವುದು.

ಉಬ್ಬಸ ರೋಗಿಗಳು ಧೂಳಿನಿಂದ ದೂರವಿರುವುದು ಒಳ್ಳೆಯದು. ಮನೆಯಲ್ಲಿ ಕಸ ಗುಡಿಸುವಾಗ, ಧೂಳು ಹೊಡೆಯುವಾಗ, ಕಛೇರಿಗಳಲ್ಲಿ ಕೆಲಸ ಮಾಡುವವರಿಗೆ ಫೈಲ್‌ಗಳಿಂದ ಧೂಳು, ಮಣ್ಣಿನ ಧೂಳು, ರಸ್ತೆಗಳಲ್ಲಿ ವಾಹನಗಳಿಂದ ಕಂಡು ಬರುವ ಹೊಗೆ, ಮನೆ ಕಟ್ಟುವಾಗ ಸಿಮೆಂ್ ಮುಂತಾದವುಗಳಿಂದ ಕಂಡು ಬರುವ ಧೂಳು ಉಬ್ಬಸ ರೋಗಿಗಳಲ್ಲಿ ತೊಂದರೆ ಉಂಟುಮಾಡುತ್ತದೆ. ಇಂತಹ ಸಮಯದಲ್ಲಿ ಮೂಗಿಗೆ ಬಟ್ಟೆ ಕಟ್ಟಿಕೊಳ್ಳುವುದು ಒಳ್ಳೆಯದು. ಮಲಗುವ ಹಾಸಿಗೆ, ದಿಂಬುಗಳಲ್ಲಿನ ಧೂಳಿನ ಕಣಗಳಿಂದಲೂ ತೊಂದರೆ ಉಂಟಾಗಬಹುದು. ಆದ್ದರಿಂದ ಮಲಗುವ ಮೊದಲು ಬೆಡ್‌ಶೀಟ್, ದಿಂಬಿನ ಕವ್ ಬದಲಾಯಿಸಬೇಕು ಇಲ್ಲವೇ ಪ್ರತಿದಿನ ಬೆಳಿಗ್ಗೆ ಅದನ್ನು ತೆಗೆದಿಟ್ಟು ರಾತ್ರಿ ಹಾಕಿಕೊಳ್ಳಬೇಕು.

ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಬರುವ ಹೊಗೆ, ಚಪಾತಿ ಬೇಯಿಸುವಾಗ, ಒಗ್ಗರಣೆ ಹಾಕುವಾಗ, ಒಲೆಯ ಉರಿಯಿಂದ ಬರುವ ಹೊಗೆ ಇವೆಲ್ಲವೂ ತೊಂದರೆ ಉಂಟು ಮಾಡುತ್ತದೆ. ಹಾಗೆಯೇ ರಸ್ತೆಗಳಲ್ಲಿ ಒಣಗಿದ ಎಲೆಗಳಿಗೆ ಮತ್ತು ಕಸಕ್ಕೆ ಬೆಂಕಿ ಹಚ್ಚಿದಾಗ ಬರುವ ಕೆಟ್ಟ ಹೊಗೆ, ವಾಹನಗಳ ಹೊಗೆ, ಬೀಡಿ ಸಿಗರೇಟಿನ ಹೊಗೆ ಉಸಿರಾಟದ ತೊಂದರೆಯನ್ನು ಉಂಟುಮಾಡುವುದಲ್ಲದೇ ಪರಿಸರ ಮಾಲಿನ್ಯ ಹೆಚ್ಚಿಸುವುದು.

ಈ ರೀತಿಯಾಗಿ ಹೊಗೆಯನ್ನು ಉಸಿರಾಡುವುದರಿಂದ ಸೀನು ಬರುವುದು, ಗಂಟಲಿನಲ್ಲಿ ಕೆರೆತ, ಕಣ್ಣು ಮೂಗುಗಳಿಂದ ನೀರು ಸುರಿಯುವುದು ಉಂಟಾಗುತ್ತದೆ. ಉಸಿರಾಟದ ತೊಂದರೆ ಇರುವವರು ಹೊಗೆ ಸೇರದಂತೆ ಮುಖ ಮುಚ್ಚಿಕೊಳ್ಳುವ ಹೆಲ್ಮೆಟ್ ಧರಿಸಬೇಕು. ಮನೆಗಳಲ್ಲಿ ಕಿಟಕಿ ತೆರೆದು ಗಾಳಿಯಾಡುವಂತೆ ನೋಡಿ ಕೊಳ್ಳಬೇಕು. ಇದಲ್ಲದೇ ಗಾಳಿಯಲ್ಲಿ ಬರುವ ಪರಾಗಗಳು, ಪೆಟ್ರೋಲ್ ವಾಸನೆ, ರಾಸಾಯನಿಕ ದ್ರವ್ಯಗಳ ಅಂದರೆ ಸೆಂಟ್, ಡೈ ಮುಂತಾದವುಗಳ ವಾಸನೆಯಿಂದಲೂ ಉಬ್ಬಸ ರೋಗಿಗಳಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೆ ಅಪಘಾತಗಳಿಂದಲೂ ಕೆಲವು ಬಾರಿ ಉಬ್ಬಸ ಉಂಟಾಗುತ್ತದೆ. ಹೃದಯ, ಶ್ವಾಸಕೋಶ ಮುಂತಾದ ಮುಖ್ಯ ಅಂಗಾಂಗಗಳಿಗೆ ಏಟು ಬಿದ್ದಾಗ ಉಬ್ಬಸ ಉಂಟಾಗುತ್ತದೆ. ಅಪಘಾತದಿಂದ ತಲೆಗೆ ಏಟು ಬಿದ್ದು ಮೆದುಳಿನಲ್ಲಿ ರಕ್ತಸ್ರಾವವಾಗಿ ಅಥವಾ ಎದೆಯ ಭಾಗಕ್ಕೆ ಏಟು ಬಿದ್ದು ಅಲ್ಲಿನ ಮೂಳೆ ಮುರಿದು ಶ್ವಾಸಕೋಶಕ್ಕೆ ಏಟು ಬಿದ್ದು ಉಬ್ಬಸದ ತೊಂದರೆ ಉಂಟಾಗುತ್ತದೆ. ಅಪಘಾತದ ಆಘಾತದಿಂದಲೂ ಉಬ್ಬಸ ಶುರುವಾಗುತ್ತದೆ.

ವ್ಯಾಯಾಮ, ಜಾಗಿಂಗ್, ಜಿಮ್, ಏರೋಬಿಕಯೋಗಾಭ್ಯಾಸ ಮುಂತಾದವುಗಳನ್ನು ಶಕ್ತಿ ಮೀರಿ ಮಾಡುವುದು, ಶಾರೀರಿಕವಾಗಿ ಹೆಚ್ಚು ಶ್ರಮಪಡುವುದು, ಹೆಚ್ಚು ಭಾರ ಹೊರುವುದು, ತುಂಬಾ ದೂರ ವೇಗವಾಗಿ ನಡೆಯುವುದು, ಗುಡ್ಡ ಬೆಟ್ಟಗಳನ್ನು ಹತ್ತಿ ಇಳಿಯುವುದು, ಟ್ರಕಿಂಗ್ ಅತಿಯಾಗಿ ಮಾಡುವುದರಿಂದ ಉಬ್ಬಸ ಬರಬಹುದು.

ಮಾದಕವಸ್ತುಗಳ ಸೇವನೆ, ಹೊಗೆಸೊಪ್ಪು (ಗುಟಕಾ) ಸೇವನೆ, ಸಿಗರೇಟು ಸೇವನೆ, ನೋವು ನಿವಾರಕ ಔಷಧಿಗಳ ಸೇವನೆಯಿಂದ ಉಬ್ಬಸ ಬರಬಹುದು. ರಕ್ತಹೀನತೆ (ಅನಿಮಿಯ), ನಿಶ್ಶಕ್ತಿಯಿಂದಲೂ ಉಬ್ಬಸ ಬರಬಹುದು. ರಕ್ತದಲ್ಲಿ ಆಮ್ಲಜನಕ ಕಡಿಮೆಯಾದಾಗ ಉಸಿರಾಟದ ಏರುಪೇರಾಗುತ್ತದೆ. ಉಬ್ಬಸ ಅನುವಂಶೀಯವಾಗಿ ಬರಬಹುದು. ತಂದೆ, ತಾಯಿ ಇಬ್ಬರಿಗೂ ಇದ್ದಲ್ಲಿ ಮಕ್ಕಳಲ್ಲಿ ಬರುವ ಸಾಧ್ಯತೆ ಹೆಚ್ಚು. ಮಾನಸಿಕ ಆಘಾತದಿಂದಲೂ ಉಬ್ಬಸ ಬರಬಹುದು. ಹತ್ತಿರದವರ ಅನಿರೀಕ್ಷಿತ ಮರಣದಿಂದ, ದೂರವಾಗುವಿಕೆಯಿಂದ, ಆತಂಕ, ಖಿನ್ನತೆಯಿಂದ, ಸಾಕು ಪ್ರಾಣಿಗಳಿಂದ, ನಾಯಿ, ಬೆಕ್ಕುಗಳ ಚರ್ಮದ ಕೂದಲಿನಿಂದ ಉಬ್ಬಸ ಉಂಟಾಗುವುದು. ಸಾಕು ಪ್ರಾಣಿಗಳನ್ನು ಪ್ರೀತಿಸುವವರು ಅವುಗಳ ಸ್ವಚ್ಛತೆ ಬಗ್ಗೆ ಗಮನ ಕೊಡಬೇಕಾದುದು ಅತ್ಯವಶ್ಯಕ. ಸ್ನಾನ ಮಾಡಿಸುವುದು, ಆಗಾಗ ಬ್ರಶ್ ಮಾಡುವುದು ಒಳ್ಳೆಯದು. ಮಲಗುವ ಕೋಣೆಯಲ್ಲಿ ಅವುಗಳನ್ನು ನಮ್ಮೊಂದಿಗೆ ಮಲಗಿಸಿಕೊಂಡಾಗ ಕೂದಲು ಹೊದಿಕೆಯೊಂದಿಗೆ ಸೇರಿಕೊಳ್ಳಬಹುದು.

ಕಾಂಗ್ರೆಸ್ ಗಿಡವೆಂದು ಖ್ಯಾತವಾಗಿರುವ ಪಾರ್ಥೆನಿಯಂ ಎಲ್ಲೆಂದರಲ್ಲಿ ಕಳೆಯಂತೆ ಬೆಳೆಯುತ್ತಿದ್ದು ಅದರ ಪರಾಗಗಳಿಂದಲೂ ಉಬ್ಬಸ ಉಂಟಾಗುತ್ತದೆ. ಮನೆಯ ಸುತ್ತ ಮುತ್ತ ಆ ಕಳೆ ಇದ್ದಲ್ಲಿ ಕಿತ್ತು ಹಾಕಬೇಕು. ಮೈಗೆ ಸಿಂಪಡಿಸುವ ಸೆಂಟುಗಳು, ಕೆಲವು ಕಾಸ್ಮೆಟಿಕ(ಸೌಂದರ್ಯ ವರ್ಧಕಗಳು) ಬಳಕೆಯಿಂದ, ಸೊಳ್ಳೆಯ ಕಾಟ ತಡೆಯಲು ಬಳಸುವ ಮಸ್ಕಿಟೋ ರಿಪೆಲ್ಲ್ಗಳು, ಮಾನಸಿಕ ಒತ್ತಡದಿಂದಲೂ ಮತ್ತು ಚಳಿಗಾಲದಲ್ಲಿ  ಉಬ್ಬಸ ಕಂಡು ಬರುತ್ತದೆ.

ಲಕ್ಷಣಗಳು :

ಮಳೆಯಾಗುವ ಮುಂಚೆ ಮಿಂಚು, ಗುಡುಗುಗಳು ಬರುವಂತೆ ಉಬ್ಬಸ ಬರುವ ಮುಂಚೆ ಬಾಯಿಗೆ ರುಚಿ ಇಲ್ಲದಿರುವುದು, ಹೊಟ್ಟೆಯುಬ್ಬರ, ಕೆಮ್ಮು, ಕೋಪ, ಪಕ್ಕೆಗಳಲ್ಲಿ ನೋವು, ಆಕಳಿಕೆ ಕಂಡುಬರುತ್ತದೆ. ಉಸಿರಾಡಿದಾಗ ಮೇಲುಸಿರು ಕಾಣಿಸಿಕೊಳ್ಳುತ್ತದೆ. ಕೆಲವು ವೇಳೆ ನಿದ್ದೆಯಲ್ಲಿಯೂ ಉಸಿರು ಕಟ್ಟಿದಂತಾಗಿ ರೋಗಿ ಎದ್ದು ಕುಳಿತುಕೊಳ್ಳಬಹುದು. ಒಮ್ಮೆ ಕೆಮ್ಮು ಪ್ರಾರಂಭವಾಯಿತೆಂದರೆ ಕೆಲವು ಗಂಟೆಗಳವರೆಗೆ ಸತತವಾಗಿರುತ್ತದಲ್ಲದೆ ಆಯಾಸ ಕಾಣಿಸಿಕೊಳ್ಳುತ್ತದೆ. ಉಸಿರಾಡಲು ಕಷ್ಟವಾಗಿದ್ದು ಮಲಗಿಕೊಂಡರೆ ತೊಂದರೆ ಹೆಚ್ಚಾಗಿದ್ದು ಎದ್ದು ಕುಳಿತರೆ ಸಮಾಧಾನವೆನಿಸುವುದು. ಪ್ರತಿಬಾರಿ ಉಸಿರು ಬಿಡುವಾಗ ಸುಂಯ್ ಸುಂಯ್ ಶಬ್ದ ಬರುವುದು. ಕೆಮ್ಮು ಬಂದು ಕಫ ಬಂದಲ್ಲಿ ಸ್ವಲ್ಪ ಆರಾಮವೆನಿಸುತ್ತದೆ. ಕ್ರಮೇಣ ಉಸಿರಾಟದ ಬಿಗಿ ಹೆಚ್ಚುತ್ತಾ ಹೋಗುತ್ತದೆ. ಉಸಿರಾಟದ ಶಬ್ದ ದೂರದವರೆಗೂ ಕೇಳಿಸುವಷ್ಟು ಜೋರಾಗಿರುತ್ತದೆ. ಬಾಯಿ ತೆಗೆದು ಉಸಿರಾಡುವಂತಾಗುತ್ತದೆ. ಭಯ, ವ್ಯಾಕುಲತೆ ಹೆಚ್ಚುತ್ತದೆ. ಎದೆ ಬಿಗಿತ ಹೆಚ್ಚಾಗುತ್ತದೆ, ಕುತ್ತಿಗೆ ಮತ್ತು ಎದೆಯ ಮಾಂಸಖಂಡಗಳು ಉಬ್ಬಿಕೊಳ್ಳುತ್ತವೆ. ಮಾತನಾಡಲು ಬಹಳ ಕಷ್ಟವೆನಿಸುತ್ತದೆ. ಪಕ್ಕೆಗಳಲ್ಲಿ ನೋವು ಕಂಡುಬರುತ್ತದೆ.

ಕೆಲವರಲ್ಲಿ ಉಬ್ಬಸ ಯಾವಾಗೆಂದರೆ ಆಗ ಬರಬಹುದು. ಒಮ್ಮೆ ಆರಂಭವಾದದ್ದು ಕೆಲವೇ ನಿಮಿಷಗಳಲ್ಲಿ ಪರಿಹಾರವಾಗಬಹುದು. ಕೆಲವರಲ್ಲಿ ವಾರಗಟ್ಟಲೆ ಇರಬಹುದು. ಉಬ್ಬಸ ಉಂಟಾದ ಸಮಯ ಹೊರತುಪಡಿಸಿ ಉಳಿದ ವೇಳೆಯಲ್ಲಿ ಅವರು ಇತರೆ ಆರೋಗ್ಯವಂತರಂತೆಯೇ ಉಸಿರಾಡಬಲ್ಲರು.

ಮನೆ ಔಷಧಿ :

* ಹುರುಳಿ, ಶುಂಠಿ, ನೆಲಗುಳ್ಳ, ಆಡುಸೋಗೆ ಇವುಗಳ ಸಮಭಾಗ ಪುಡಿಯಿಂದ ಕಷಾಯ ತಯಾರಿಸಿ ಸೇವಿಸಬೇಕು.

* ಆಡುಸೋಗೆ, ಅರಿಶಿನ, ಧನಿಯಾ, ಅಮೃತಬಳ್ಳಿ, ಭಾರಂಗಿ, ಹಿಪ್ಪಲಿಗಳ ಕಷಾಯ ಸೇವಿಸಬೇಕು.

* ಹಳೆಯ ಬೆಲ್ಲ, ಕಾಳು ಮೆಣಸು, ಅರಿಶಿನ, ದ್ರಾಕ್ಷಿ, ಹಿಪ್ಪಲಿ ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದು ಕೊಂಡು ಪುಡಿಮಾಡಿ ಅರ್ಧ ಚಮಚದಷ್ಟನ್ನು ದಿನಕ್ಕೆ ಎರಡು ಬಾರಿ ಸೇವಿಸಬೇಕು.

* ಒಂದು ಚಮಚ ಹಸಿಶುಂಠಿ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಬೆರೆಸಿ ಕುಡಿಯಬೇಕು.

* ನೆಲಗುಳ್ಳ, ಅಮೃತಬಳ್ಳಿ, ಶುಂಠಿ ಇವುಗಳ ಕಷಾಯ ತಯಾರಿಸಿ ಅದಕ್ಕೆ ಹಿಪ್ಪಲಿ ಪುಡಿ ಸೇರಿಸಿ ಸೇವಿಸಬೇಕು.

* ತ್ರಿಫಲಾ ಪುಡಿಯೊಂದಿಗೆ ಹಿಪ್ಪಲಿ ಪುಡಿ ಸೇರಿಸಿ ಜೇನುತುಪ್ಪ ಬೆರೆಸಿ ತಿನ್ನಬೇಕು.

* ಬೆಳ್ಳುಳ್ಳಿ, ಮೆಣಸು, ನಾಗದಾಳಿ ಸೊಪ್ಪು ಸಮ ಪ್ರಮಾಣದಲ್ಲಿ ಅರೆದು ಮಾತ್ರೆ ತಯಾರಿಸಿಟ್ಟುಕೊಂಡು ದಿನಕ್ಕೆ ಮೂರು ಬಾರಿ ಸೇವಿಸಬೇಕು.

* ಹಿಪ್ಪಲಿ ಪುಡಿ, ಕಾಳು ಮೆಣಸಿನ ಪುಡಿ, ಜೇಷ್ಠ ಮಧುವಿನ ಪುಡಿ ಸಮಪ್ರಮಾಣದಲ್ಲಿ ಬೆರೆಸಿಕೊಂಡು ಅರ್ಧ ಚಮಚೆ ತೆಗೆದುಕೊಂಡು ವೀಳ್ಯೆದೆಲೆ ರಸ ಮತ್ತು ಜೇನು ತುಪ್ಪ ಬೆರೆಸಿ ಸೇವಿಸಬೇಕು.

* ಒಣಗಿದ ಆಡುಸೋಗೆ ಎಲೆ ಮತ್ತು ದತ್ತೂರಿ ಎಲೆಗಳನ್ನು ಕೆಂಡದ ಮೇಲೆ ಹಾಕಿ ಬರುವ ಹೊಗೆ ಸೇದುವುದು.

* ಶುಂಠಿ, ಹಿಪ್ಪಲಿ, ಕಾಳುಮೆಣಸಿನ ಪುಡಿ ಅರ್ಧ ಚಮಚೆ ಮತ್ತು ಜೇನು ತುಪ್ಪ ಬೆರೆಸಿ ಸೇವಿಸಬೇಕು.

* ಎರಡು ಚಮಚೆ ಎಳ್ಳೆಣ್ಣೆ ಮತ್ತು ಕಾಲು ಚಮಚೆ ಉಪ್ಪು ಬೆರೆಸಿ ರೋಗಿಯ ಬೆನ್ನಿಗೆ ಹಚ್ಚಿ ಮೇಲಿನಿಂದ ಕೆಳಮುಖವಾಗಿ ಮಸಾಜ್ ಮಾಡಬೇಕು. ದಿನಕ್ಕೆ ಮೂರು- ನಾಲ್ಕು ಬಾರಿ ಹೀಗೆ ಮಾಡುವುದರಿಂದ ಕಫ ಕರಗುತ್ತದೆ.

* ಮೂಗು ಕಟ್ಟಿ ಉಸಿರಾಡಲು ಕಷ್ಟವಾದಾಗ ಎಳ್ಳೆಣ್ಣೆ ಮತ್ತು ಉಪ್ಪು ಬಿಸಿ ಮಾಡಿಕೊಂಡು ರೋಗಿಯ ಹಣೆ, ಮೂಗಿನ ಎರಡು ಬದಿಗೆ ಎರಡು ನಿಮಿಷ ಮಸಾಜ್ ಮಾಡಬೇಕು. ನಂತರ ದಪ್ಪನೆಯ ವಸ್ತ್ರವನ್ನು ಬಿಸಿನೀರಿನಲ್ಲಿ ಅದ್ದಿ ಎಣ್ಣೆ ಹಚ್ಚಿರುವ ಭಾಗಕ್ಕೆ ಶಾಖ ಕೊಡಬೇಕು. ನಂತರ ಒಣಬಟ್ಟೆಯಿಂದ ಒರೆಸಬೇಕು.

* ತುಳಸಿ ಎಲೆಗಳನ್ನು ಒಂದು ಲೀಟ್ ಕುದಿಯುವ ನೀರಿಗೆ ಹಾಕಿ ಕುದಿಸಿಟ್ಟು ಕೊಂಡು ಆಗಾಗ ಕುಡಿಯುತ್ತಿರಬೇಕು.

ಯಾವ ಆಹಾರ ಉತ್ತಮ ?

ಹಳೆಯ ಅಕ್ಕಿ, ಕೆಂಪು ಅಕ್ಕಿ, ಹುರುಳಿ, ಗೋಧಿ, ಜೋಳ, ಮಾಂಸಾಹಾರಿಗಳಿಗೆ ಕೋಳಿಯ ಮಾಂಸ ಒಳ್ಳೆಯದು.

ಕಹಿ ಪಡವಲಕಾಯಿ, ಬದನೆಕಾಯಿ, ಬೆಳ್ಳುಳ್ಳಿ, ತೊಂಡೆಕಾಯಿ, ಗಜನಿಂಬೆ ಹಣ್ಣು, ಕಿರುಕಸಾಲೆ ಸೊಪ್ಪು, ಚಕ್ಕೋತ ಸೊಪ್ಪು ಒಳ್ಳೆಯದು. ಒಣದ್ರಾಕ್ಷಿಯ ಸೇವನೆಯು ಉತ್ತಮವಾದುದು. ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು, ಅರಿಶಿನ, ಗೋರಿಕಾಯಿ, ಏಲಕ್ಕಿಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಬೇಕು.

ಅಡುಗೆ

ಹಸಿವೆ ಕಡಿಮೆ ಇರುತ್ತದಾದ್ದರಿಂದ ಉಬ್ಬಸ ರೋಗಿಗಳು ಅಜವಾನ (ಓಮದಕಾಳು), ಹುಣಸೆಹಣ್ಣು, ಶುಂಠಿ, ಧನಿಯ, ಕರಿಜೀರಿಗೆ, ಕೆಂಪು ಕಲ್ಲು ಸಕ್ಕರೆ ಪುಡಿ ಮಾಡಿಟ್ಟುಕೊಂಡು ಇವೆಲ್ಲವನ್ನು ಒಟ್ಟಿಗೆ ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಮೂರು ಚಿಟಿಕೆ ಉಪಯೋಗಿಸುವುದರಿಂದ ಹಸಿವೆ ಉಂಟಾಗುತ್ತದೆ.

ಕುಡಿಯುವ ನೀರನ್ನು ಕುದಿಸುವಾಗ ತೆಳ್ಳಗಿನ ಶುಂಠಿ ಚೂರುಗಳನ್ನು ಹಾಕಿ ಕಾದಾರಿದ ಮೇಲೆ ಕುಡಿಯಲು ಬಳಸಿ.

ಬದನೆಕಾಯಿ ಭಾತ್ :

ಒಂದು ಲೋಟ ಅಕ್ಕಿಯನ್ನು (ಐದು-ಆರು ವರ್ಷ ಹಳೆಯದು) ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಹುರಿದಿಟ್ಟುಕೊಳ್ಳಿ. ಆ ಅಕ್ಕಿಗೆ ಎರಡು ಲೋಟ ನೀರನ್ನು ಸೇರಿಸಿ ಬೇಯಿಸಿ. ಅನ್ನ ಬೇಯುವುದರೊಳಗೆ ಬದನೆಕಾಯಿ ತೊಳೆದು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.

ಬಾಣಲೆಗೆ ಮೂರು ಚಮಚ ತುಪ್ಪ ಹಾಕಿ, ಒಂದು ಚಿಟಿಕೆ ಅರಿಶಿನ ಹಾಕಿ, ಸಾಸುವೆ ಹಾಕಿ ಒಗ್ಗರಣೆಯ ನಂತರ ಹೆಚ್ಚಿದ ಬದನೆಕಾಯಿಯನ್ನು ಹಾಕಿ ಬಾಡಿಸಿ. ಅಷ್ಟರಲ್ಲಿ ಜೀರಿಗೆ ಅರ್ಧ ಚಮಚ, ಚಕ್ಕೆ ಅರ್ಧ ತುಂಡು, ಕಾಳು ಮೆಣಸು ಸ್ವಲ್ಪ ಹುರಿದು

ಪುಡಿ ಮಾಡಿಟ್ಟುಕೊಳ್ಳಿ. ಬೆಂದ ಬದನೆಕಾಯಿಗೆ ಈ ಪುಡಿ ಸೇರಿಸಿ, ನಂತರ ಉಪ್ಪನ್ನು ರುಚಿಗೆ ತಕ್ಕಷ್ಟು ಬೆರೆಸಿ, ಗಜನಿಂಬೆ ಹಣ್ಣಿನ ರಸ ಕಲೆಸಿ ಬಿಸಿಬಿಸಿಯಾಗಿ ಉಬ್ಬಸ ರೋಗಿಗೆ ಸೇವಿಸಲು ಕೊಡಬೇಕು.

ಪಡವಲಕಾಯಿ ಸಾರು :

ಪಡವಲಕಾಯಿಯನ್ನು ಸಣ್ಣಗೆ ಹೆಚ್ಚಿ ಬೇಯಿಸಿಟ್ಟುಕೊಳ್ಳಬೇಕು. ಪಾತ್ರೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಕಾಯಿಸಿ, ನೀರುಹಾಕಿ ಬಿಸಿಯಾದ ಮೇಲೆ ಎರಡು ಚಿಟಿಕೆ ಅರಿಶಿನ, ಕಾಲು ಚಮಚ ಕರಿಜೀರಿಗೆ, ಮೂರು-ನಾಲ್ಕು ಚಿಕ್ಕ ಶುಂಠಿ ಚೂರು, ಮೂರು-ನಾಲ್ಕು ಎಸಳು ಬೆಳ್ಳುಳ್ಳಿ, ಕಾಳು ಮೆಣಸಿನ ಪುಡಿ ಸೇರಿಸಿ ಕುದಿಯಲು ಆರಂಭಿಸಿದಾಗ ಬೆಂದ ಪಡವಲಕಾಯಿ ಹೋಳನ್ನು ಸೇರಿಸಿ ಇಳಿಸುವ ಮೊದಲು ಸೈಂಧವ ಲವಣವನ್ನು ರುಚಿಗೆ ತಕ್ಕಷ್ಟು ಸೇರಿಸಿ ಬಿಸಿ ಅನ್ನದೊಂದಿಗೆ ಸೇವಿಸಿ.

ಗೋರಿಕಾಯಿ ಪಲ್ಯ :

ಗೋರಿಕಾಯಿಯನ್ನು ತೊಳೆದು ನಾರು ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ನಂತರ ಬೇಯಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ, ಕಾದ ನಂತರ ಸಾಸುವೆ, ಜೀರಿಗೆ, ಅರಿಶಿನ ಸೇರಿಸಿ, ಹುಣಸೆಹಣ್ಣಿನ ರಸ ಸೇರಿಸಿ ಕುದಿದ ನಂತರ ಧನಿಯ ಪುಡಿ, ಉಪ್ಪು, ಬೆಂದ ಹೋಳು ಸೇರಿಸಿದರೆ ಪಲ್ಯ ತಯಾರಾಗುತ್ತದೆ.

ಮಸಾಲೆ ಚಪಾತಿ :

ಮೂರು ಲೋಟ ಗೋಧಿ ಹಿಟ್ಟಿಗೆ ಆರರಿಂದ ಹತ್ತು ಕಾಳು ಮೆಣಸಿನ ಪುಡಿ, ಕಾಲು ಚಮಚ ಅರಿಶಿನ, ಒಂದು ಅಥವಾ ಎರಡು ಮೂಲಂಗಿ ತುರಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನೀರಿನಲ್ಲಿ ಕಲೆಸಿ, ಹಿಟ್ಟನ್ನು ಲಟ್ಟಿಸಿ ಚಪಾತಿ ಸುಟ್ಟು ಬಿಸಿಯಾಗಿರುವಾಗಲೇ ಉಬ್ಬಸ ರೋಗಿಗೆ ತಿನ್ನಲು ಕೊಡಬೇಕು.

ಹಣ್ಣುಗಳಲ್ಲಿ ಸೇಬು, ಪಪ್ಪಾಯ ಮಾತ್ರ ಸೇವಿಸಬಹುದು. ಹುಳಿ ಹಣ್ಣುಗಳ ಸೇವನೆ ಬೇಡ.

ಉಬ್ಬಸ ರೋಗಿಗಳು ತಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಂಡು ಮನೆಯ ಒಳಗಿನ ಸ್ವಚ್ಛತೆ ಮತ್ತು ಹೊರಗಿನ ವಾತಾವರಣದಲ್ಲಿ ತಿರುಗಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ, ಔಷಧಿಗಳನ್ನು ಸೇವನೆ ಮಾಡಿದಲ್ಲಿ ಯೋಗ, ವ್ಯಾಯಾಮ ಮತ್ತು ಮಾನಸಿಕ ಒತ್ತಡ ನಿಭಾಯಿಸಿಕೊಂಡಲ್ಲಿ ಯಾವುದೇ ತೊಂದರೆಗಳಾಗದಂತೆ ಸಹ್ಯವೆನಿಸುವ ಬದುಕು ಬಾಳಬಹುದು.