“ಪ್ರತಿಯೊಂದು ಜೀವಕ್ಕು ಇನ್ನೊಂದು ಪೂರಕವಯ್ಯ;

ಚಿತ್ರ:

 


ಜೀವ ಜೀವದ ನಂಟು ಬ್ರಹ್ಮ ಗಂಟು‘’

ಅಡಿಗರು

ಜೀವಿ ವೈವಿಧ್ಯವು ಮಾನವನ ದೃಷ್ಟಿಯಲ್ಲಿ ಒಂದು ಸಂಪನ್ಮೂಲ. ಇದರಿಂದ ಮಾನವನ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ-ಗತಿಗಳು ಉತ್ತಮವಾಗಬಲ್ಲವು. ಜೀವ ಶಾಸ್ತ್ರೀಯ ದೃಷ್ಟಿಯಿಂದ ಜೀವಿ ವೈವಿಧ್ಯವು ಭೂ ಗ್ರಹದಲ್ಲಿ ಜೀವಿಗಳು ಬದುಕಿ-ಬಾಳಲು ಅತ್ಯಗತ್ಯವಾದ ಅಂಶ. ಜೀವಿ ವೈವಿಧ್ಯದಿಂದಾಗಿ ಜೀವಿಗಳು ಸೌರಶಕ್ತಿಯನ್ನು ಬಳಸಿಕೊಂಡು ಇಂಗಾಲದ ಡೈ ಆಕ್ಸೈಡ್ ಮತ್ತು ನೀರನ್ನು ಆಹಾರದ ಶಕ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಾಗಿದೆ. ಆಹಾರದ ಉತ್ಪಾದನೆ ಒಂದು ಮುಖ್ಯಾಂಶವಾದರೆ, ಅದೇ ಸಮಯದಲ್ಲಿ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆಮಾಡುವುದು ಮತ್ತೊಂದು ಪ್ರಮುಖ ಅಂಶ. ನಾಗರೀಕ ಮಾನವನು ಕಲ್ಲಿದ್ದಲು, ಪೆಟ್ರೋಲ್, ಮುಂತಾದ ಫಾಸಿಲ್ ಇಂಧನಗಳನ್ನು ಹೇರಳವಾಗಿ ದಹಿಸುವುದರಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣ ಹೆಚ್ಚುತ್ತಿದೆ. ಅದರಿಂದ ಭೂಮಿಯ ಸರಾಸರಿ ಉಷ್ಣತೆ ಹೆಚ್ಚಿ ವಾತಾವರಣದಲ್ಲಿ ತೀವ್ರ ಬದಲಾವಣೆಗಳಾಗಬಹುದು. ಹೆಚ್ಚಿನ ಇಂಗಾಲದ ಡೈ ಆಕ್ಸೈಡನ್ನು ಹೀರಲು ಜಗತ್ತಿನಲ್ಲಿ ಜೀವಿ ವೈವಿಧ್ಯವಿರುವ ಅರಣ್ಯಗಳ ಅಗತ್ಯವಿದೆ. ಆದ್ದರಿಂದಲೇ ಅರಣ್ಯಗಳನ್ನು ಇಂಗಾಲದ ಡೈ ಆಕ್ಸೈಡ್‌ನ `ಜಾಗತಿಕ ಹೀರಕ‘ಗಳೆಂದು ಹೇಳುವರು.

ಜೀವಿ ವೈವಿಧ್ಯವು ಆಹಾರದ ಉತ್ಪಾದನೆಯ ಜೊತೆಗೆ ನಾರು, ಇಂಧನ, ಉರುವಲು, ಗೊಬ್ಬರ, ಮರಮುಟ್ಟು, ಔಷಧ, ಉಪಯುಕ್ತ ರಸಾಯನಿಕಗಳು ಹಾಗೂ ಇತರ ವಸ್ತುಗಳ ಉತ್ಪಾದನೆಗೆ ಕಾರಣವಾಗಿದೆ.

ಜೀವಿ ವೈವಿಧ್ಯದಿಂದಾಗಿ ಸಜೀವ ಮತ್ತು ನಿರ್ಜೀವ ವಸ್ತುಗಳ ನಡುವೆ ಖನಿಜಾಂಶಗಳು ಹಾಗೂ ಪೋಷಕಾಂಶಗಳು ನಿರಂತರವಾಗಿ ಪುನರ್ಬಳಕೆಯಾಗಲು ಸಾಧ್ಯವಾಗಿದೆ. ಮಣ್ಣು ಮತ್ತು ನೀರಿನಲ್ಲಿರುವ ಪೋಷಕಾಂಶಗಳು ಬೇರುಗಳ ಮೂಲಕ ಸಸ್ಯಗಳ ಶರೀರಕ್ಕೆ ಬರುತ್ತವೆ. ಸಸ್ಯಗಳಿಂದ ಆಹಾರದ ಮೂಲಕ ಪ್ರಾಣಿಗಳ ಶರೀರಕ್ಕೆ ಬರುತ್ತವೆ. ಸಸ್ಯ ಹಾಗೂ ಪ್ರಾಣಿಗಳು ಸತ್ತು ಹೋಗಿ ಮಣ್ಣಿನಲ್ಲಿ ಕೊಳೆಯುವುದರಿಂದ ಪೋಷಕಾಂಶಗಳು ಮತ್ತೆ ನಿರ್ಜೀವ ಪರಿಸರಕ್ಕೆ ಚಲಿಸುತ್ತವೆ. ಮಣ್ಣಿನಲ್ಲಿನ ಪೋಷಕಾಂಶಗಳನ್ನು ಸಸ್ಯಗಳು ಪುನಃ ಪಡೆದುಕೊಳ್ಳಲು ಸಿದ್ಧವಿರುತ್ತದೆ. ಈ ವಿಧಾನದಿಂದಲೇ ಗಂಧಕ, ರಂಜಕ, ಸಾರಜನಕ, ಇಂಗಾಲ ಮುಂತಾದವು ಆವರ್ತನಗೊಳ್ಳಲು ಸಾಧ್ಯವಾಗಿದೆ.

ಜಗತ್ತಿನಲ್ಲಿ ಜಲಚಕ್ರದ ಸಮತೋಲನವನ್ನು ಕಾಪಾಡುವಲ್ಲಿ ಜೀವಿ ವೈವಿಧ್ಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಮಳೆಯ ಹೊಡೆತವನ್ನು ತಡೆದು ಮಣ್ಣಿನ ಸವಕಳಿಯನ್ನು ಭೂ ಮೇಲ್ಮೆಯಲ್ಲಿರುವ ಸಸ್ಯಗಳು ತಪ್ಪಿಸುತ್ತವೆ. ಅಲ್ಲದೆ ಕೊಳೆತ ಎಲೆಗಳು, ಬೇರುಗಳು ಸ್ಪಂಜಿನ ರೀತಿಯಲ್ಲಿ ನೀರನ್ನು ಹೀರಿಕೊಂಡು ನಿಧಾನವಾಗಿ ಮಣ್ಣಿನ ಒಳಭಾಗಕ್ಕೆ ಬಿಡುತ್ತವೆ. ಅದರಿಂದ ಅಂತರ್ಜಲದ ಮಟ್ಟ ಏರಲು ಸಹಾಯಕ. ಉಷ್ಣವಲಯದ ಮಳೆ ಕಾಡುಗಳು ಭೂಮೇಲ್ಮೆಯ 1/16 ಭಾಗವಿದ್ದರೂ ಸಹ, ಭೂ ಮೇಲ್ಮೆಯಲ್ಲಾಗುವ ಅರ್ಧದಷ್ಟು ಮಳೆಯನ್ನು ಪಡೆಯುತ್ತಿವೆ. ಮಿಲಿಯ ಟನ್‌ಗಳಷ್ಟು ನೀರು ಅರಣ್ಯಗಳಲ್ಲಿ ಮಳೆಯಾಗಿ ಸುರಿದು, ನೀರಾಗಿ ಹರಿದು ಅನಂತರ ಆವಿಯಾಗಿ ಮತ್ತೆ ಮೋಡವಾಗುತ್ತಿರುತ್ತದೆ. ಅರಣ್ಯಗಳು ಇಲ್ಲವಾದರೆ ಜಲಚಕ್ರದಿಂದಾಗುತ್ತಿರುವ ಉಷ್ಣತೆಯ ನಿಯಂತ್ರಣ ಹಾಗೂ ತೇವಾಂಶಭರಿತ ಗಾಳಿ ಇಲ್ಲವಾಗುತ್ತದೆ. ಸುತ್ತಲ ವಾತಾವರಣದಲ್ಲಿ ತೀವ್ರ ಬದಲಾವಣೆಗಳಾಗುತ್ತವೆ.

ಜೀವಿ ವೈವಿಧ್ಯವು ಜಗತ್ತಿನಲ್ಲಿರುವ ವೈವಿಧ್ಯಮಯ ಪರಿಸರ ವ್ಯವಸ್ಥೆ- ಗಳನ್ನು ಉಳಿಸುತ್ತಿದೆ. ಎಲ್ಲ ಪರಿಸರ ವ್ಯವಸ್ಥೆಗಳಲ್ಲಿಯೂ ಉತ್ಪಾದಕರಾದ ಸಸ್ಯಗಳು, ಭಕ್ಷಕರಾದ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳು, ವಿಘಟಕ ಜೀವಿಗಳು ಹಾಗೂ ನಿರ್ಜೀವ ವಸ್ತುಗಳ ನಡುವೆ ಪರಸ್ಪರ ಸಂಬಂಧ ಮತ್ತು ಅವಲಂಬನೆ ಇರುತ್ತದೆ. ಅಲ್ಲದೆ ಅವುಗಳ ನಡುವೆ ಸೂಕ್ಷ್ಮವಾದ ಸಮತೋಲನವಿರುತ್ತದೆ. ಜೀವಿವೈವಿಧ್ಯ ಹಾಳಾದಲ್ಲಿ ಘಟಕಗಳ ಗಾತ್ರ, ಪ್ರಮಾಣದಲ್ಲಿ ಹಾಗೂ ಅವುಗಳ ಅಸ್ಥಿತ್ವಕ್ಕೆ ಧಕ್ಕೆ ಬರುವುದು. ಜಗತ್ತಿನಲ್ಲಿರುವ ಒಂದೊಂದು ಪ್ರಭೇದದ ಸಸ್ಯವನ್ನು ಅವಲಂಬಿಸಿ ಬದುಕುವ ಪ್ರಾಣಿಗಳ ಪ್ರಭೇದಗಳ ಸಂಖ್ಯೆಯು 13ರಿಂದ 120ಕ್ಕೂ ಹೆಚ್ಚಿರಬಹುದೆಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಸಸ್ಯದ ಒಂದು ಪ್ರಭೇದ ನಾಶವಾದರೆ ಹಲವು ಪ್ರಾಣಿ ಪ್ರಭೇದಗಳು ಅನಿವಾರ್ಯವಾಗಿ ನಶಿಸಿ ಹೋಗುತ್ತವೆ. ಅದೇ ರೀತಿ ಪ್ರಾಣಿಯ ಪ್ರಭೇದವೊಂದು ನಶಿಸಿದರೆ, ಅದನ್ನು ಪರಾಗಸ್ಪರ್ಶ ಕ್ರಿಯೆಗೆ ಅಥವಾ ಬೀಜ ಪ್ರಸರಣಕ್ಕೆ ಅವಲಂಬಿಸಿರುವ ಸಸ್ಯಗಳೂ ನಾಶವಾಗಬಹುದು.

ಹಲವು ಕಾರಣಗಳಿಂದ ಪರಿಸರ ವ್ಯವಸ್ಥೆಗಳಿಗೆ ಸ್ವಲ್ಪ ಪ್ರಮಾಣದ ಧಕ್ಕೆಯಾದರೂ ಸಹ, ಜೀವಿ ವೈವಿಧ್ಯವಿದ್ದರೆ ಅದರ ಆಘಾತವನ್ನು ದುರಸ್ತಿಮಾಡಿಕೊಳ್ಳುವ ಶಕ್ತಿಯಿರುತ್ತದೆ. ಒಂದು ಉಪಪ್ರಭೇದ ಅಥವಾ ಪ್ರಭೇದ ನಶಿಸಿದರೂ ಅದರ ಸಂಬಂಧಿಯೊಂದು ಆ ಜೀವಿ ನಿರ್ವಹಿಸುತ್ತಿದ್ದ ಪಾತ್ರವನ್ನು ಕೈಗೆತ್ತಿಕೊಳ್ಳಬಹುದು. ಉದಾಹರಣೆಗೆ ಒಂದು ಸಸ್ಯಾಹಾರಿ ನಾಶವಾದರೂ ಮತ್ತೊಂದು ಸಸ್ಯಾಹಾರಿ ಹುಲ್ಲು ಬೆಳೆಯುವುದನ್ನು ಅಂಕೆಯಲ್ಲಿಡಲು ಸಾಧ್ಯ. ಅದರ ಬದಲು ಯಾವುದೇ ವ್ಯವಸ್ಥೆ ಏಕ ಪ್ರಭೇದವನ್ನು ಅವಲಂಬಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಜೀವಿ ವೈವಿಧ್ಯವು ಮಾನವನ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿಗೂ ಸಹಾಯಕ. ಇಂದು ನಾವು ಒಂದು ಪ್ರಭೇದದ ಜೀನನ್ನು ಮತ್ತೊಂದು ಪ್ರಭೇದ ಅಥವಾ ಉಪ ಪ್ರಭೇದಕ್ಕೆ ವರ್ಗಾಯಿಸಲು ಸಾಧ್ಯ ಎಂಬುದನ್ನು ತಿಳಿದಿದ್ದೇವೆ. ನಾವು ನಿಸರ್ಗದಲ್ಲಿರುವ ವೈವಿಧ್ಯಮಯ ತಳಿಗಳನ್ನು, ಪ್ರಭೇದಗಳನ್ನು ಕಾಪಾಡಿಕೊಂಡರೆ, ಅವುಗಳಲ್ಲಿರುವ ರೋಗ ನಿರೋಧಕ, ಕೀಟ ನಿರೋಧಕ, ಹಾಗೂ ವಾತಾವರಣದ ಏರುಪೇರಿಗೆ ಒಗ್ಗಿಕೊಳ್ಳುವ ಗುಣಲಕ್ಷಣಗಳಿರುವ ಜೀನುಗಳನ್ನು ಕೃಷಿ ಬೆಳೆಗಳಿಗೆ ವರ್ಗಾಯಿಸಿ ಆಹಾರದ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದು. ಈ ಮಾರ್ಗದಲ್ಲಿ ಮಾನವ ಸಾಕಷ್ಟು ಪ್ರಗತಿ ಮತ್ತು ಯಶಸ್ಸು ಸಾಧಿಸಿದ್ದಾನೆ. ಹಸಿರು ಕ್ರಾಂತಿ, ಶ್ವೇತಕ್ರಾಂತಿ ಯಶಸ್ವಿಯಾಗಲು ಜೀವಿವೈವಿಧ್ಯದ ಕೊಡುಗೆ ಪ್ರಮುಖವಾದುದು. ಮುಂಬರುವ ವರ್ಷಗಳಲ್ಲಿಯೂ ಈ ಪ್ರಯತ್ನ ಮುಂದುವರೆಯುವುದು.

1962ರಲ್ಲಿ ಪೆರು ದೇಶದ ಆಂಡಿಸ್ ಪ್ರದೇಶದಲ್ಲಿ ಕಾಡು ಟೊಮೆಟೊ ಪ್ರಭೇದವನ್ನು ಗುರುತಿಸಲಾಯಿತು. ಅದರ ಹಣ್ಣುಗಳಲ್ಲಿ ಸಕ್ಕರೆ ಅಂಶ ಹೆಚ್ಚಿತ್ತು. ಈ ಅನುವಂಶೀಯ ಗುಣವನ್ನು ಕೃಷಿ ಮಾಡುವ ಟೊಮೆಟೊ ಸಸ್ಯಗಳಿಗೆ ವರ್ಗಾವಣೆ ಮಾಡಿದ್ದರಿಂದ ಟೊಮೆಟೊಗಳಿಗೆ ಹೆಚ್ಚಿನ ಬೇಡಿಕೆ ಬಂದಿತು. ಹಾಗಾಗಿ ಈಗ ಟೊಮೆಟೊ ಉದ್ಯಮವು ಪ್ರತಿ ವರ್ಷ 500 ಕೋಟಿ ಡಾಲರ್ ಲಾಭ ಪಡೆಯುತ್ತಿದೆ.

ಟರ್ಕಿ ದೇಶದಲ್ಲಿ ಗೋದಿಯ ಕಾಡು ಜಾತಿಯೊಂದಿತ್ತು. ಅದರ ಇಳುವರಿ ಕಡಿಮೆ ಇದ್ದರೂ ಸಹ ಆ ಸಸ್ಯವು ರೋಗ ನಿರೋಧಕ ಗುಣವನ್ನು ಹೊಂದಿತ್ತು. ಈ ರೋಗ ನಿರೋಧಕ ಲಕ್ಷಣವಿರುವ ಜೀನನ್ನು ಬೇರ್ಪಡಿಸಿ ಕೃಷಿ ಮಾಡುವ ಗೋಧಿ ಸಸ್ಯಕ್ಕೆ ವರ್ಗಾಯಿಸಲಾಯಿತು. ಅದರಿಂದ ಗೋಧಿ ಬೆಳೆಯ ಉತ್ಪಾದನೆಯೂ ಹೆಚ್ಚಾಯಿತು. ಕೀಟ ನಾಶಕಗಳ ಬಳಕೆಯೂ ತಪ್ಪಿತು. ಈ ಕಾರ್ಯದಿಂದಾಗಿ 1982ರಿಂದಲೇ ಗೋಧಿ ಉದ್ಯಮ ಕ್ಷೇತ್ರಕ್ಕೆ ಪ್ರತಿ ವರ್ಷ 5000 ಕೋಟಿ ಡಾಲರ್ ಲಾಭವಾಗುತ್ತಿದೆ.

1981ರಲ್ಲಿ ಇಂಗ್ಲೆಂಡಿನ ಮದ್ಯದ ಉದ್ಯಮವು ಕಾಡು ಸಸ್ಯ ಒಂದರಿಂದ `ಪ್ರಿಯವಾಗುವ ಒಗರು ಗುಣ ಲಕ್ಷಣವಿರುವ ಜೀನನ್ನು ಪಡೆದು ಪ್ರಿಯವಾದ ಒಗರು ಇರುವ ಮದ್ಯ ತಯಾರಿಸಿ ಮಾರುತ್ತಿದೆ. ಇದರಿಂದ ಮದ್ಯಮಾರಾಟ ಹಾಗೂ ಸೇವನೆ ಹೆಚ್ಚಾಗಿ ಆ ಉದ್ಯಮ ಪ್ರತಿ ವರ್ಷ 15000 ಕೋಟಿ ಡಾಲರ್ ಲಾಭ ಪಡೆಯುತ್ತಿದೆ.

ಜಪಾನಿನಲ್ಲಿ ಗೋದಿಯ ಗಿಡ್ಡ ತಳಿಯೊಂದಿತ್ತು. ಈ ಗಿಡ್ಡ ಗುಣವಿರುವ ಜೀನನ್ನು ಮೆಕ್ಸಿಕೊ ಗೋಧಿ ಸಸ್ಯಗಳಿಗೆ ವರ್ಗಾಯಿಸಿದುದರಿಂದ ಉತ್ಪಾದನೆಯು ತೀವ್ರದರದಲ್ಲಿ ಏರಿತು. ಈಗ ಮೆಕ್ಸಿಕೊ ಗೋದಿಯು ಒಂದು ಬಿಲಿಯ ಜನರಿಗೆ ಆಹಾರವಾಗಿದೆ ಮತ್ತು 100 ಮಿಲಿಯ ಜನರ ಹಸಿವನ್ನು ಹಿಂಗಿಸಿದೆ.

ಇಥಿಯೋಪಿಯಾದ ಬಾರ್ಲಿ ಗಿಡದಲ್ಲಿ ರೋಗಕಾರಕ ವೈರಸ್ ಒಂದನ್ನು (ಹಳದಿ-ಕುಳ್ಳ) ಪ್ರತಿರೋಧಿಸುವ ಗುಣವಿತ್ತು. ಈ ಜೀನನ್ನು ಕ್ಯಾಲಿಫೋರ್ನಿಯಾದ ಬಾರ್ಲಿ ಗಾಡದ ಜಾತಿಗೆ ವರ್ಗಾವಣೆ ಮಾಡಲಾಯಿತು. ತತ್ಪ್ರಯುಕ್ತ ಅಮೇರಿಕದ ಬಾರ್ಲಿ ಬೆಳೆಯ ಉತ್ಪಾದನೆಯಿಂದ ಪ್ರತಿ ವರ್ಷ 160 ಮಿಲಿಯ ಡಾಲರ್‌ನಷ್ಟು ಲಾಭ ಬರುತ್ತಿದೆ.

ಜೀವಿ ವೈವಿಧ್ಯದಿಂದ ಮನುಷ್ಯನಿಗೆ ಆಹಾರ ಒದಗಿಸುವ ಹೊಸ ಹೊಸ ಸಸ್ಯ ಮತ್ತು ಪ್ರಾಣಿಗಳನ್ನು ಕಂಡುಹಿಡಿದು ಅಭಿವೃದ್ದಿಪಡಿಸಲು ಸಾಧ್ಯವಿದೆ. ಇಂದು ಮನುಷ್ಯನ ಆಹಾರ ಪೂರೈಕೆಯು ಸುಮಾರು 30 ಸಸ್ಯಪ್ರಭೇದಗಳಿಂದ ಬರುತ್ತಿದೆ. ಅವುಗಳಲ್ಲಿ ಸೇಕಡ 75ರಷ್ಟು ಆಹಾರ ಪೂರೈಕೆಯು 8 ಸಸ್ಯ ಪ್ರಭೇದಗಳಿಂದ ಬರುತ್ತಿದೆ. ಈ 8ರಲ್ಲಿ ಗೋಧಿ, ಜೋಳ, ಭತ್ತ ಮತ್ತು ಆಲೂಗೆಡ್ಡೆ ಸಸ್ಯಗಳೇ ಅತ್ಯಂತ ಪ್ರಮುಖವಾದವು. ಅರಣ್ಯಗಳಲ್ಲಿ ಮಾನವ ಸೇವಿಸಬಹುದಾದ 125ಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿವೆ ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ. ಮೂಲ ನಿವಾಸಿಗಳು ಬಳಸುತ್ತಿರುವ ಆ ಪ್ರಭೇದಗಳನ್ನು ಅಭಿವೃದ್ದಿ ಪಡಿಸಿದ್ದೇ ಆದರೆ ಆಹಾರ ಉತ್ಪಾದನೆಯಲ್ಲಿ ಹೊಸ ಕ್ರಾಂತಿಯಾಗುವ ಸಾಧ್ಯತೆ ಇದೆ. ಮಾಂಸಕ್ಕಾಗಿ ಮಾನವ 6 ಪ್ರಾಣಿ ಪ್ರಭೇದಗಳನ್ನು ಅವಲಂಬಿಸಿದ್ದಾನೆ. ಜೀವಿ ವೈವಿಧ್ಯವಿದ್ದಲ್ಲಿ ಹೊಸ ಪ್ರಾಣಿ ಪ್ರಭೇದಗಳನ್ನು ಮಾಂಸಕ್ಕಾಗಿ ಅಭಿವೃದ್ದಿ ಪಡಿಸಬಹುದು. ಇತ್ತೀಚೆಗೆ ಯುರೋಪಿನಲ್ಲಿ ಉಷ್ಟ್ರಪಕ್ಷಿಯನ್ನು ಮೊಟ್ಟೆ ಹಾಗೂ ಮಾಂಸಕ್ಕಾಗಿ ಅಭಿವೃದ್ದಿಪಡಿಸಲಾಗುತ್ತಿದೆ.

ಜೀವಿ ವೈವಿಧ್ಯದಿಂದ ಮನುಷ್ಯನು ಔಷಧ ಉದ್ಯಮವನ್ನು ಸದಾ ಉತ್ತಮ- ಪಡಿಸಿಕೊಳ್ಳಲು ಸಾಧ್ಯವಿದೆ. ಇಂದು ಮಾರುಕಟ್ಟೆಯಲ್ಲಿರುವ ಬಹುತೇಕ ಔಷಧಗಳನ್ನು ಮೊದಲು ಸಸ್ಯಮೂಲಗಳಿಂದಲೇ ಪಡೆಯಲಾಯಿತು. ಅನಂತರ ರಾಸಾಯನಿಕ ಸಂಶ್ಲೇಷಣೆ ಮಾಡಿ ಔಷಧವನ್ನು ತಯಾರಿಸುತ್ತಿದ್ದಾರೆ. ಇದುವರೆವಿಗೂ ಬಳಸದಿರುವ ಸಸ್ಯಗಳಲ್ಲಿ ಔಷಧ ಗುಣಗಳಿರಬಹುದು. ಕ್ಯಾನ್ಸರ್ ಮತ್ತು ಏಡ್ಸ್ ರೋಗವನ್ನೂ ಗುಣಪಡಿಸಬಲ್ಲ ಗಿಡಮೂಲಿಕೆಗಳು ಅರಣ್ಯಗಳಲ್ಲಿರಬಹುದು. ಆದ್ದರಿಂದ ಜೀವಿವೈವಿಧ್ಯದಿಂದ ಕೂಡಿದ ಅರಣ್ಯಗಳೆಂದರೆ “ನಾಮಾಂಕಿತವಿಲ್ಲದ ಔಷಧಗಳ ಸಂಗ್ರಹಾಲಯ‘’ಗಳೇ ಹೌದು.

ಜಗತ್ತಿನಾದ್ಯಂತ ಅರಣ್ಯಗಳ ಗಿಡಮೂಲಿಕೆಗಳಿಂದ ಉತ್ಪಾದಿಸುವ ಔಷಧಗಳ ಮೌಲ್ಯವು ಪ್ರತಿ ವರ್ಷ 40 ಬಿಲಿಯ ಡಾಲರುಗಳಿಗಿಂತ ಹೆಚ್ಚಿದೆ.

1960ರ ದಶಕದಲ್ಲಿ ಮಕ್ಕಳಿಗೆ ರಕ್ತದ ಕ್ಯಾನ್ಸರ್ ಬಂದರೆ ಬದುಕಿ ಉಳಿಯುವ ಸಾಧ್ಯತೆ ಐದರಲ್ಲಿ ಒಂದಿರುತ್ತಿತ್ತು. ಮೆಡಗಾಸ್ಕರ್ ಮೂಲದ ಸಸ್ಯವಾದ ಕಾಸಿ ಕಣಗಲೆ (Rosy periwinkle)ಯಿಂದ ಪಡೆದ ರಾಸಾಯನಿಕ ವಸ್ತುಗಳನ್ನು ಈಗ ರಕ್ತದ ಕ್ಯಾನ್ಸರ್‌ಗೆ ಔಷಧವಾಗಿ ನೀಡಲಾಗುತ್ತಿದೆ. ಅದರಿಂದ ಈಗ ಐದು ರೋಗಿಗಳಲ್ಲಿ ನಾಲ್ಕು ಮಕ್ಕಳು ಬದುಕುಳಿಯುವ ಸಾಧ್ಯತೆ ಇದೆ.

(ಚಿತ್ರ)

1970ರ ದಶಕದಲ್ಲಿ ಗೋಧಿ ಮತ್ತು ಭತ್ತದ ತಳಿಗಳಿಗೆ ಗಿಡ್ಡ ಗುಣವಿರುವ ಜೀನನ್ನು ವರ್ಗಾಯಿಸಿದ ಪ್ರಯುಕ್ತ ಏಷ್ಯಾ ಖಂಡದಲ್ಲಿ ಗೋಧಿ ಉತ್ಪಾದನೆಯು ಹೆಚ್ಚಾಗಿ ಅದರಿಂದ 2 ಬಿಲಿಯ ಡಾಲರ್ ಲಾಭ ಹಾಗೂ ಭತ್ತದ ಉತ್ಪಾದನೆ ಹೆಚ್ಚಿ ಅದರಿಂದ 5 ಬಿಲಿಯ ಡಾಲರುಗಳಷ್ಟು ಲಾಭ ಉಂಟಾಗುತ್ತಿದೆ.

1977ರಲ್ಲಿ ಮೆಕ್ಸಿಕೊ ದೇಶದ ಸಸ್ಯಶಾಸ್ತ್ರದ ವಿದ್ಯಾರ್ಥಿಯು ಮೆಕ್ಕೆ ಜೋಳದ ಕಾಡು ಪ್ರಭೇದವನ್ನು ಕಂಡುಹಿಡಿದ (Zea diploperensis). ಈ ಪ್ರಭೇದವು ನಶಿಸಿಹೋಗಿದೆ ಎಂದು ಭಾವಿಸಲಾಗಿತ್ತು. ಈ ಸಸ್ಯಕ್ಕೆ ಹಲವಾರು ರೋಗ ನಿರೋಧಕ ಗುಣಗಳಿವೆ. ಅಲ್ಲದೆ ಇದು ಬಹುವಾರ್ಷಿಕ ಸಸ್ಯವೂ ಆಗಿದೆ. ಇಂದು ಜೋಳದ ಬೆಳೆಗೆ ಆಗಾಗ್ಗೆ ಬರುವ ಏಳು ದೊಡ್ಡ ರೋಗಗಳನ್ನು ತಡೆಯುವ ಶಕ್ತಿಯು ಈ ಸಸ್ಯಕ್ಕೆ ಇದೆ. ಜೋಳಕ್ಕೆ ಬರುತ್ತಿರುವ ರೋಗಗಳಿಂದಾಗಿ ಉತ್ತರ ಅಮೇರಿಕ, ದಕ್ಷಿಣ ಅಮೇರಿಕ ಮತ್ತು ಆಫ್ರಿಕ ದೇಶದಲ್ಲಿ ಜೋಳದ ಉತ್ಪಾದನೆಯು ಕುಸಿಯುವ ಹಂತದಲ್ಲಿದೆ. ಈ ಸಸ್ಯವನ್ನು ಕಂಡುಹಿಡಿದಿರುವ ಪ್ರಯುಕ್ತ ಈಗ ಎಲ್ಲರಲ್ಲಿಯೂ ಆಶಾಭಾವನೆ ಮೂಡಿದೆ. ಜೀನ್‌ಗಳ ವರ್ಗಾವಣೆಯಿಂದ ಜೋಳದ ಬೆಳೆಗೆ ಉತ್ತಮ ಭವಿಷ್ಯ ಇದೆ. ಆದ್ದರಿಂದಲೇ ಈ ಸಸ್ಯವನ್ನು `ಈ ಶತಮಾನದ ಸಂಶೋಧನೆ ಎಂದು ಪರಿಗಣಿಸಲಾಗಿದೆ.

ಜೀವಿ ವೈವಿಧ್ಯವಿರುವುದರಿಂದ ಕಾಡಿನ ಸಸ್ಯಗಳನ್ನು ಕೈಗಾರಿಕಾ ಉದ್ದೇಶಗಳಿಗೂ ಬಳಸಬಹುದು. ಇಂದು ಸಂಯುಕ್ತ ಅಮೇರಿಕ ದೇಶವು ಕಾಡು ಪ್ರಭೇದಗಳ ಜೀನ್‌ಗಳಿಂದಾಗಿ ಪ್ರತಿವರ್ಷ 87 ಬಿಲಿಯ ಡಾಲರ್ ಹಣವನ್ನು ಲಾಭವಾಗಿ ಪಡೆಯುತ್ತಿದೆ.

ಜೀವಿ ವೈವಿಧ್ಯದಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಅಭಿವೃದ್ದಿಪಡಿಸಿ, ಜನರಿಗೆ ಉದ್ಯೋಗ ನೀಡಲು ಹಾಗೂ ಜನರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಸಾಧ್ಯತೆ ಇದೆ.

ಮನುಷ್ಯ ಹುಟ್ಟಿದಾಗ ಮರದ ತೊಟ್ಟಿಲು ಬೇಕು. ಸತ್ತಾಗ ಬಿದಿರಿನ ಚಟ್ಟ ಬೇಕು. ಸುಡಲು ಸೌದೆ ಬೇಕು. ಅಡಿಗೆ ಮಾಡಲು ಸೌದೆ ಬೇಕು. ಮನುಷ್ಯನ ಎಲ್ಲ ಅಗತ್ಯ, ಐಭೋಗ, ಸವಲತ್ತುಗಳನ್ನು ಜೀವಿ ವೈವಿಧ್ಯ ಒದಗಿಸುತ್ತದೆ.

ಜೀವಿ ವೈವಿಧ್ಯ ಜಗತ್ತಿನ ಶ್ರೇಷ್ಠ ಸಂಪತ್ತು. ಅದರ ಅಸ್ತಿತ್ವದಲ್ಲಿ ಪರಿಸರ ಸಮತೋಲನ, ಪರಸ್ಪರ ಅವಲಂಬನೆ, ಜೀವ ವಿಕಾಸ ಮುಂದುವರೆಯಲು ಸಾಧ್ಯ. ಮನುಷ್ಯನನ್ನೂ ಸೇರಿಸಿ ಈ ಭೂಮಿಯ ಎಲ್ಲ ಜೀವಿಗಳ ಇರುವಿಕೆಗೆ ಹಾಗೂ ಸುಸ್ಥಿರ ಅಭಿವೃದ್ದಿಗೆ ಜೀವಿ ವೈವಿಧ್ಯ ಅತ್ಯಗತ್ಯ.