ಭಾರತವು 329 ಮಿಲಿಯ ಹೆಕ್ಟೇರುಗಳಷ್ಟು ಭೂ ಪ್ರದೇಶವನ್ನು ಹೊಂದಿದ್ದು, ಎಲ್ಲ ರೀತಿಯ ಜೀವಾವಾಸಗಳನ್ನು ಪಡೆದಿದೆ. ಹಿಮಾಲಯದ ಹಿಮತುಂಬಿದ ಪರ್ವತಗಳು, ಹಸಿರು ತುಂಬಿದ ಪಶ್ಚಿಮ ಘಟ್ಟದ ಅರಣ್ಯಗಳು, ವಿಶಾಲವಾದ ಹುಲ್ಲುಗಾವಲುಗಳು, ಥಾರ್ ಮರುಭೂಮಿ, ಕುರುಚಲು ಕಾಡು ಮುಂತಾದ ಎಲ್ಲ ರೀತಿಯ ಜೀವಾವಾಸಗಳು ಇಲ್ಲಿವೆ. ನಮ್ಮ ದೇಶದ ಮೂರು ದಿಕ್ಕುಗಳಲ್ಲಿ ಸಮುದ್ರವಿದ್ದು, ಕರಾವಳಿಯು 7000 ಕಿಮೀ. ಇದೆ. ಮಳೆಯ ಪ್ರಮಾಣ ಸುಮಾರು 100 ಮಿಮೀ (ಥಾರ್)ನಿಂದ ಹಿಡಿದು 5000ೊಮಿಮೀ (ಚಿರಾಪೂಂಜಿ)ವರೆಗೆ ಇದೆ. ಉಷ್ಣವಲಯ ಸಮುದ್ರಗಳು ಇಲ್ಲಿರುವುದರಿಂದ ಕಡಲ ಜೀವಿಗಳ ವೈವಿಧ್ಯವೂ ಅಪಾರ. ಮೀನುಗಳು, ಡಾಲಿೇನ್‌ಗಳು, ಕಡಲಾಮೆಗಳು, ಚಿಪ್ಪು ಜೀವಿಗಳು, ತಿಮಿಂಗಿಲಗಳು, ಹವಳ ಜೀವಿಗಳು ಇಲ್ಲಿ ಹೇರಳವಾಗಿವೆ.

ಭಾರತದ ಭೂ ಪ್ರದೇಶವು ಪ್ರಪಂಚದ ಸೇಕಡ 2ರಷ್ಟು ಮಾತ್ರ ಇದೆ. ಆದರೆ ಇಲ್ಲಿಯ ಪ್ರಭೇದಗಳು ಪ್ರಪಂಚದ ಸೇಕಡಾ 8ರಷ್ಟು ಇವೆ. ಇಲ್ಲಿನ ಜೀವಿ ವೈವಿಧ್ಯವು ಭೂ ಪರಿಸರ ವ್ಯವಸ್ಥೆಯ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವೆಂದರೆ ಇಲ್ಲಿಯ ವೈವಿಧ್ಯವು ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ ಮತ್ತು ಔಷಧ ಉದ್ಯಮಗಳ ಪ್ರಗತಿಗೆ ಅತ್ಯಂತ ಪೂರಕವಾಗಿದೆ. ನಮ್ಮ ಜನರಿಗೆ ಗಿಡಮೂಲಿಕೆಗಳ ಬಗ್ಗೆ ಸಹಸ್ರಾರು ವರ್ಷಗಳ ಸಂಪ್ರದಾಯದ ಜ್ಞಾನವಿದೆ. ಆಯುರ್ವೇದ, ನಾಟಿ ಔಷಧಿ, ಮುಂತಾದ ಪದ್ಧತಿಗಳ ಪರಂಪರೆಯಿರುವುದರಿಂದ ಸಸ್ಯ ಮತ್ತು ಪ್ರಾಣಿಗಳ ಸದುಪಯೋಗದ ಬಗ್ಗೆ ಹೇರಳವಾದ ಮಾಹಿತಿ ಇದೆ.

ಭಾರತದಲ್ಲಿ ಇದುವರೆವಿಗೆ ಗುರುತಿಸಿ, ವಿವರಿಸಲಾಗಿರುವ ಬ್ಯಾಕ್ಟೀರಿಯಾ, ಶಿಲೀಂದ್ರ, ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಸಂಖ್ಯೆಯು 1,08,276ಕ್ಕೂ ಹೆಚ್ಚಿದೆ. ಇವುಗಳಲ್ಲಿ ಶೇಕಡ 84ರಷ್ಟು ಪ್ರಭೇದಗಳು ಶಿಲೀಂದ್ರಗಳು (21.2%), ಹೂಬಿಡುವ ಸಸ್ಯಗಳು (13.9%) ಮತ್ತು ಕೀಟಗಳು (49.3%) ಸೇರಿವೆ. ಪ್ರಭೇದಗಳ ಸಂಖ್ಯೆಯನ್ನು ಆಧರಿಸಿದರೆ ಕೀಟಗಳೇ ಸುಮಾರು ಶೇಕಡ 50ರಷ್ಟು ಇವೆ. ಇಲ್ಲಿನ ಪ್ರಭೇದಗಳು ಭೂಮಿಯ ಮೇಲಿರಬಹುದು, ನೀರಿನಲ್ಲಿರಬಹುದು, ಪರತಂತ್ರ ಜೀವಿಗಳಾಗಿರಬಹುದು ಅಥವಾ ಬೇರೆ ಜೀವಿಗಳ ಶರೀರದಲ್ಲಿ ಸಹಜೀವಿಗಳಾಗಿ ಬದುಕುತ್ತಿರಬಹುದು.

ನಮ್ಮಲ್ಲಿ 45,000 ಸಸ್ಯ ಪ್ರಭೇದಗಳಿದ್ದು ಅವುಗಳಲ್ಲಿ ಹೂಬಿಡುವ ಸಸ್ಯ ಪ್ರಭೇದಗಳ ಸಂಖ್ಯೆ 15,000ಕ್ಕೂ ಹೆಚ್ಚಿದೆ. ಸಸ್ಯ ಸಂಪತ್ತಿನ ರಾಷ್ಟ್ರಗಳಲ್ಲಿ ಭಾರತವು ವಿಶ್ವದಲ್ಲಿ ಹತ್ತನೆಯ ಸ್ಥಾನ ಪಡೆದಿದೆ, ಏಷ್ಯಾದ ರಾಷ್ಟ್ರಗಳಲ್ಲಿ ನಾಲ್ಕನೆಯ ಸ್ಥಾನ ಪಡೆದಿದೆ. ಉನ್ನತ ಕಶೇರುಕಗಳಾದ ದ್ವಿಚರಿಗಳು, ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಸ್ಥಳೀಯ ಪ್ರಭೇದಗಳ ಶ್ರೀಮಂತಿಕೆಯನ್ನು ಆಧರಿಸಿದರೆ ಭಾರತ ಜಗತ್ತಿನಲ್ಲಿ ಹನ್ನೊಂದನೇ ಸ್ಥಾನವನ್ನು ಹೊಂದಿದೆ. ಸಸ್ತನಿಗಳ ಶ್ರೀಮಂತಿಕೆಯಲ್ಲಿ ಭಾರತವನ್ನು ಹತ್ತನೆಯ ಸ್ಥಾನ ಹೊಂದಿದೆ.

ಜಗತ್ತಿನ ಜೀವಿ ಪ್ರಭೇದಗಳ ಶ್ರೀಮಂತಿಕೆಯನ್ನಾಧರಿಸಿದ 18 ಅಗ್ರತಾಣಗಳಲ್ಲಿ ಭಾರತದಲ್ಲಿ ಎರಡು ಅಗ್ರತಾಣಗಳಿರುವುದು ಹೆಮ್ಮೆಯ ಸಂಗತಿ. ಅವೇ ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಹಿಮಾಲಯ. ಈ ಎರಡು ಪ್ರದೇಶಗಳಲ್ಲಿ ಸ್ಥಳೀಯವಾದ ಸಸ್ಯ ಪ್ರಭೇದಗಳ ಸಂಖ್ಯೆ 5332. ಪಶ್ಚಿಮ ಘಟ್ಟಗಳಲ್ಲಿನ ಸ್ಥಳೀಯ ಸಸ್ಯ ಪ್ರಭೇದಗಳ ಸಂಖ್ಯೆ 1600 ಮತ್ತು ಪೂರ್ವ ಹಿಮಾಲಯದಲ್ಲಿನ ಸಂಖ್ಯೆ 3,500. ಕೇವಲ ಪಶ್ಚಿಮ ಘಟ್ಟಗಳಲ್ಲಿಯೇ 1800 ಸಸ್ಯಗಳು, 6 ಪಕ್ಷಿಗಳು, 6 ಸಸ್ತನಿಗಳು, 77 ಸರೀಸೃಪಗಳು ಮತ್ತು 84 ಸ್ಥಳೀಯ ದ್ವಿಚರಿಗಳಿವೆ. ನೀಲಗಿರಿ ಜೀವಾವಾಸದಲ್ಲಿ ಭಾರತದಲ್ಲಿನ ಸೇಕಡಾ 15ರಷ್ಟು ಚಿಟ್ಟೆಗಳು ಮತ್ತು 25ರಷ್ಟು ಕಶೇರುಕಗಳಿವೆ ಎಂದು ವರದಿಯಾಗಿದೆ.

ಮಾನವ ಸಾಕುವ ಪ್ರಾಣಿ ಹಾಗೂ ಕೃಷಿ ಮಾಡುವ ಪ್ರಭೇದಗಳಲ್ಲಿ 167ಕ್ಕೂ ಹೆಚ್ಚಿನ ಪ್ರಭೇದಗಳ ಹುಟ್ಟು ಭಾರತದಲ್ಲಾಗಿದೆ ಎಂಬುದು ಅಭಿಮಾನದ ವಿಷಯ. ಬೆಳೆಗಳ ಕಾಡು ಪ್ರಭೇದಗಳಲ್ಲಿ 320 ಪ್ರಭೇದಗಳು ಭಾರತದಲ್ಲಿ ಜನಿಸಿವೆ. ಭತ್ತವೊಂದರಲ್ಲಿಯೆ 50,000ರಿಂದ 60,000 ವಿವಿಧ ತಳಿಗಳು ಭಾರತದಲ್ಲಿವೆ. ಭಾರತದಲ್ಲಿನ ಹೂಬಿಡುವ ಸಸ್ಯಗಳಲ್ಲಿ ಸೇಕಡಾ 33ರಷ್ಟು ಮತ್ತು ಸಸ್ಯಗಳಲ್ಲಿ ಸೇಕಡಾ 18ರಷ್ಟು ಸ್ಥಳೀಯ (endemic)ವಾದವು. ಸಾಕು ಪ್ರಾಣಿಗಳಲ್ಲಿ 27 ಜಾತಿಯ ದನಗಳು, 40 ಜಾತಿಯ ಕುರಿಗಳು ಮತ್ತು 22 ಜಾತಿಯ ಮೇಕೆಗಳು ಭಾರತದಲ್ಲಿವೆ. ಜಗತ್ತಿನ ದ್ವಿಚರಿಗಳಲ್ಲಿ ಶೇಕಡಾ 62ರಷ್ಟು ಭಾರತದಲ್ಲಿಯೇ ಇರುವುದು ಸಂತೋಷದ ವಿಷಯ.

ಇಂದು ಭಾರತದಲ್ಲಿ ದಾಖಲಿಸಿರುವ ಸಸ್ಯಗಳಲ್ಲಿ ಸೇಕಡಾ 10ರಷ್ಟು ಹಾಗೂ ಪ್ರಾಣಿಗಳಲ್ಲಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಪ್ರಭೇದಗಳು ವಿನಾಶದ ಅಂಚಿನಲ್ಲಿವೆ. ಕಳೆದ ಕೆಲವು ದಶಕಗಳಲ್ಲಿ ಭಾರತದ ಅರಣ್ಯಗಳು ಸೇಕಡಾ 50ರಷ್ಟು ಅಳಿದಿವೆ; ಸೇಕಡಾ 70ರಷ್ಟು ಜಲ ಪರಿಸರ ವ್ಯವಸ್ಥೆಗಳು ಮಾಲಿನ್ಯಗೊಂಡಿವೆ, ಸೇಕಡಾ 40ರಷ್ಟು ಅಳಿವೆ ಅರಣ್ಯಗಳು ಅವನತಿ ಹೊಂದಿವೆ ಮತ್ತು ಬಹಳಷ್ಟು ಹುಲ್ಲುಗಾವಲುಗಳು ಹಾಳಾಗಿವೆ ಅಥವಾ ಕೃಷಿಗೆ ಒಳಗಾಗಿವೆ.

ನಮಗೆ ತಿಳಿದಂತೆ ಮಾನವನ ಚಟುವಟಿಕೆಯಿಂದ ಭಾರತದಲ್ಲಿ ಇತ್ತೀಚೆಗೆ ನಶಿಸಿಹೋದ ಪ್ರಭೇದಗಳಲ್ಲಿ ಮುಖ್ಯವಾದವು ಎರಡು. ಒಂದು ಚೀಟ (Acinonyx jubatus) ಮತ್ತೊಂದು ಕಂದು ತಲೆಯ ಬಾತುಕೋಳಿ (Rhodonessa caryophyllacea). ನಿತ್ಯಹಸಿರು ಕಾಡುಗಳಲ್ಲಿ ಬೆಳೆಯುತ್ತಿದ್ದ ಮದುಕವೆಂಬ ಮರ (Madhuca insignis) ಕಳೆದ ಶತಮಾನದಿಂದ ಕಂಡು ಬಂದಿಲ್ಲ. ನಮಗೆ ಗೊತ್ತಿಲ್ಲದೆ ನಶಿಸಿ ಹೋಗಿರುವ ಪ್ರಭೇದಗಳೆಷ್ಟು ಎಂಬುದು ತಿಳಿದಿಲ್ಲ. ಬೆಳೆಗಳ ನೂರಾರು, ಸಹಸ್ರಾರು ತಳಿಗಳು ಕಾಣೆಯಾಗಿವೆ. ಬಹುಶಃ ಅವು ಜೀನ್‌ಬ್ಯಾಂಕ್‌ನಲ್ಲಿಯೂ ಇರಲಾರವು.

ಭಾರತದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪ್ರಸಾರವಾಗಿರುವ ಕೆಲವು ಮುಖ್ಯ ಸಸ್ಯ ಪ್ರಭೇದಗಳೆಂದರೆ ಭತ್ತ, ಕಬ್ಬು, ಮಾವು, ನಿಂಬೆ, ಬಾಳೆ, ಸೆಣಬು, ಹಲಸು, ಸೌತೆ, ಮೆಣಸು, ಶುಂಠಿ, ವೀಳೆದೆಲೆ, ಗೋಡಂಬಿ, ಔಷಧೀಯ ಸಸ್ಯಗಳು, ಬಿದಿರು, ಮುಂತಾದವು. ಅಲ್ಲದೆ ಇಲ್ಲಿ ಹುಟ್ಟದಿದ್ದರೂ ಭಾರತಕ್ಕೆ ಬಂದ ಮೇಲೆ ವಿಕಾಸ ಕ್ರಿಯೆಯಿಂದ ಅಭಿವೃದ್ದಿಯಾಗಿ ಮಾನವನ ಕಲ್ಯಾಣಕ್ಕೆ ಕೊಡುಗೆ ನೀಡುತ್ತಿರುವ ಸಸ್ಯ ಪ್ರಭೇದಗಳೂ ಇವೆ. ಅವುಗಳಲ್ಲಿ ತಾಳೆ, ಕೆಂಪು ಮೆಣಸು, ಸೋಯ ಅವರೆ ಮುಂತಾದವು ಪ್ರಮುಖವಾದವು. ಭಾರತದ ಸಸ್ಯಗಳಲ್ಲಿನ ಅನುವಂಶೀಯ ಸಂಪತ್ತನ್ನು ಬಳಸಿಕೊಂಡು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿದ ಅನೇಕ ಉದಾಹರಣೆಗಳಿವೆ. ಕೇರಳದಲ್ಲಿ ಸುಮಾರು 20ಕ್ಕೂ ಹೆಚ್ಚಿನ ಕಾಡುಭತ್ತದ ತಳಿಗಳಿವೆ. ಇವು ರೋಗ ನಿರೋಧಕ ಗುಣಗಳನ್ನು ಹೊಂದಿವೆ. ಈ ಗುಣಗಳನ್ನು ಬೇರೆ ಸಸ್ಯಗಳಿಗೆ ವರ್ಗಾಯಿಸಿ ಕೃಷಿ ಕ್ಷೇತ್ರದಲ್ಲಿ ರೋಗ ನಿರೋಧಕ ಗುಣದ ಅಧಿಕ ಇಳುವರಿಯ ತಳಿಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಭಾರತದಲ್ಲಿನ ಕಾಡು ಕಲ್ಲಂಗಡಿ ಸಸ್ಯಗಳಲ್ಲಿ ಮಂಜುಹನಿಗಳಂತೆ ಪುಡಿಯಾಗುವುದಕ್ಕೆ ನಿರೋಧಕ ಗುಣ ಲಕ್ಷಣವಿದೆ. ಈ ನಿರೋಧಕ ಜೀನನ್ನು ಕ್ಯಾಲಿಫೋರ್ನಿಯಾದ ಕಲ್ಲಂಗಡಿಗಳಿಗೆ ವರ್ಗಾಯಿಸಲಾಗಿದೆ. ಇದರಿಂದ ಅಮೇರಿಕದ ಕಲ್ಲಂಗಡಿ ಕೃಷಿ ಉದ್ಯಮವು ಪ್ರತಿವರ್ಷ ಹಲವು ಕೋಟಿ ಡಾಲರುಗಳಷ್ಟು ಲಾಭ ಗಳಿಸುತ್ತಿದೆ.

ಭಾರತದಲ್ಲಿನ ಪ್ರಾಣಿ ಸಂಪತ್ತು 65,000ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಅವುಗಳಲ್ಲಿ ಕೀಟಗಳ ಪ್ರಭೇದಗಳು ಸುಮಾರು 50,000, ಮೀನುಗಳು 2000, ಸಸ್ತನಿಗಳು 340. ಇಲ್ಲಿನ ಸಾಕು ಪ್ರಾಣಿಗಳಲ್ಲಿನ ವೈವಿಧ್ಯವು ಅಪಾರವಾಗಿದೆ. ಎಮ್ಮೆ, ದನ, ಮೇಕೆ, ಕುರಿ, ಹಂದಿ, ಕೋಳಿ, ಕುದುರೆ, ಒಂಟೆ, ಮಿಥುನ ಮತ್ತು ಯಾಕ್ ಪ್ರಾಣಿಗಳ ವೈವಿಧ್ಯತೆ ಕುತೂಹಲಕಾರಿಯಾದುದು. ಈ ಸಾಕು ಪ್ರಾಣಿಗಳ ತಳಿಗಳಲ್ಲಿ ಉತ್ಪಾದನೆಯ ಮಟ್ಟ ಕೆಳಮಟ್ಟದ್ದಾದರೂ ಸಹ ಉಷ್ಣತೆಯ ಏರುಪೇರಿಗೆ, ಪರತಂತ್ರಜೀವಿಗಳ ಸಹಿಷ್ಣುತೆಗೆ ಉತ್ತಮ ಹೊಂದಾಣಿಕೆ ಪಡೆದಿವೆ. ಹೈನುಗಾರಿಕೆಯಲ್ಲಿ ವಿದೇಶೀ ಹಸುಗಳು ಅಧಿಕ ಇಳುವರಿ ನೀಡಿದರೂ ಸಹ ಇಲ್ಲಿಯ ವಾತಾವರಣದಲ್ಲಿ ಹೊಂದಿಕೊಂಡು ಬದುಕಲಾರವು. ಆದರೆ ನಮ್ಮ ದೇಶದ ತಳಿಗಳಾದ ಹಳ್ಳಿಕಾರ್, ಅಮೃತಮಹಲ್, ಸಿಂಧಿ, ಮುಂತಾದವು ಉತ್ತಮ ಹೊಂದಾಣಿಕೆಯ ಗುಣ ಪಡೆದಿವೆ. ಆದ್ದರಿಂದ ಡೆನ್‌ಮಾರ್ಕ್‌ನ ವಿದೇಶಿ ತಳಿ ಹಾಗೂ ನಮ್ಮ ದೇಶಿ ತಳಿಗಳ ನಡುವೆ ಅಡ್ಡಹಾಯಿಸಿ ಮಿಶ್ರತಳಿ ಅಭಿವೃದ್ದಿಪಡಿಸಲಾಗಿದೆ. ಇವು ಅಧಿಕ ಇಳುವರಿಯನ್ನೂ ನೀಡುತ್ತವೆ ಮತ್ತು ರೋಗ ನಿರೋಧಕ ಗುಣವನ್ನೂ ಪಡೆದಿವೆ. ನಮ್ಮ ದೇಶದ ರಾಸುಗಳ ನಿರೋಧಕ ಜೀನುಗಳಿಗೆ ಆಸ್ಟ್ರೇಲಿಯಾ, ಸಂಯುಕ್ತ ಅಮೇರಿಕ ಮತ್ತು ಲ್ಯಾಟಿನ್ ಅಮೇರಿಕ ದೇಶಗಳಲ್ಲಿ ಬಾರಿ ಬೇಡಿಕೆ ಇದೆ.

 

ಭಾರತದ ಜೀವಿ ವೈವಿಧ್ಯ ವಿವರಗಳು ಮತ್ತು ಶೇಕಡಾವಾರು ಪ್ರಮಾಣ

 

ಜೀವಿಗಳು              ಪ್ರಭೇದಗಳ ಸಂಖ್ಯೆ            ಶೇಕಡಾವಾರು

ಬ್ಯಾಕ್ಟೀರಿಯಾ                       850                        0.8

ಶಿಲೀಂಧ್ರ                   23,000                    21.2

ಶೈವಲ                              2,500                      2.3

ಬ್ರಯೊಫೈಟ               2,564                               2.4

ಜರಿಗಿಡ (ಟೆರಿಡೊಪೈಟ)             1,022                       0.9

ಹೂಬಿಡದ ಸಸ್ಯಗಳು                64                         0.1

ಹೂ ಬಿಡುವ ಸಸ್ಯಗಳು              15,000           13.9

ಕೀಟಗಳು                  53,430                    49.3

ಮೃದ್ವಂಗಿಗಳು                       5,050                      4.7

ಮೀನುಗಳು                2,546                               2.4

ದ್ವಿಚರಿಗಳು                 204                                  0.2

ಸರೀಸೃಪಗಳು                       446                        0.4

ಪಕ್ಷಿಗಳು                    1,228                                 1.1

ಸಸ್ತನಿಗಳು                 372                                  0.3

ಒಟ್ಟು                   1,08,276                       100.00
ಮೂಲ : BSI ಮತ್ತು ZSI, 1994