ಪ್ರಭೇದಗಳ ಹಂಚಿಕೆಯು ಭೂಮೇಲ್ಮೈಯಲ್ಲಿ ಹಾಗೂ ಕಡಲುಗಳಲ್ಲಿ ಒಂದೇ ರೀತಿಯಲ್ಲಿರುವುದಿಲ್ಲ. ಧೃವ ಪ್ರದೇಶಗಳಲ್ಲಿ ಪ್ರಭೇದಗಳ ಸಂಖ್ಯೆ ಕಡಿಮೆ. ಆದರೆ ಸಮಭಾಜಕ ವೃತ್ತದ ಸಮೀಪ ಪ್ರಭೇದಗಳ ಸಂಖ್ಯೆ ಹೆಚ್ಚು. ಉದಾಹರಣೆಗೆ ಸಿಹಿನೀರಿನ ಕೀಟ ಪ್ರಭೇದಗಳ ಸಂಖ್ಯೆಯು ಸಮಶೀತೋಷ್ಣವಲಯಕ್ಕಿಂತ ಉಷ್ಣವಲಯದಲ್ಲಿ 3ರಿಂದ 6 ಪಟ್ಟು ಹೆಚ್ಚಿದೆ. ಒಂದು ನಿಗದಿತ ಪ್ರದೇಶದಲ್ಲಿ ವಾಸಿಸುವ ಸಸ್ತನಿ ಪ್ರಭೇದಗಳ ಸಂಖ್ಯೆಯು ಉಷ್ಣವಲಯದ ದೇಶಗಳಲ್ಲಿಯೇ ಅತಿ ಹೆಚ್ಚು. ಅಲ್ಲದೆ ಉನ್ನತ ಸಸ್ಯ ಪ್ರಭೇದಗಳ ವೈವಿಧ್ಯತೆಯು ಎತ್ತರವಾದ ಪ್ರದೇಶಗಳಲ್ಲಿಯೇ ಅಧಿಕ. ಲ್ಯಾಟಿನ್ ಅಮೇರಿಕದ ದೇಶಗಳಲ್ಲಿನ ಉಷ್ಣವಲಯದ ಒಂದು ಹೆಕ್ಟೇರ್ ಅರಣ್ಯದಲ್ಲಿ 40ರಿಂದ 100 ಪ್ರಭೇದಗಳಿರಬಹುದು. ಆದರೆ ಉತ್ತರ ಅಮೇರಿಕದ ಪೂರ್ವಭಾಗದಲ್ಲಿನ ಅರಣ್ಯಗಳಲ್ಲಿ ಒಂದು ಹೆಕ್ಟೇರಿಗೆ 10ರಿಂದ 30 ಪ್ರಭೇದಗಳು ಮಾತ್ರವಿರುತ್ತವೆ. ಬೋರ್ನಿಯೊ ದ್ವೀಪದಲ್ಲಿರುವ ಮಳೆಕಾಡಿನ ಸುಮಾರು 15 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 700 ಪ್ರಭೇದಗಳನ್ನು ಗುರುತಿಸಲಾಗಿದೆ. ಇದು ಉತ್ತರ ಅಮೇರಿಕದಲ್ಲಿರುವ ಮರಗಳ ಎಲ್ಲ ಪ್ರಭೇದಗಳ ಸಂಖ್ಯೆಗೆ ಸಮ! ಮಲೇಶಿಯಾದ ಕೌಲಲಂಪೂರಿನ ಸಮೀಪವಿರುವ ತಗ್ಗಿನ ಪ್ರದೇಶವೊಂದರಲ್ಲಿ ಹೆಕ್ಟೇರ್ ಒಂದಕ್ಕೆ 570 ಪ್ರಭೇದಗಳನ್ನು ಗುರುತಿಸಲಾಗಿದೆ. ಇಡೀ ಡೆನ್‌ಮಾರ್ಕ್ ದೇಶದಲ್ಲಿರುವ ಸಸ್ಯ ಪ್ರಭೇದಗಳ ಎರಡರಷ್ಟು ಪ್ರಭೇದಗಳು ಮಲೇಷಿಯಾದ ಒಂದು ಹೆಕ್ಟೇರಿನಲ್ಲಿ ದೊರಕುತ್ತವೆ. ಹಾಗಾಗಿ ಉಷ್ಣವಲಯದ ದೇಶಗಳ ಅರಣ್ಯಗಳು ಜೀವಿ ವೈವಿಧ್ಯದಲ್ಲಿ ಶ್ರೀಮಂತಿಕೆ ಹೊಂದಿವೆ.

ಸಮುದ್ರಗಳಲ್ಲಿನ ಪ್ರಭೇದಗಳ ಹಂಚಿಕೆಯೂ ಭೂ ಮೇಲ್ಮೈಯಲ್ಲಿರುವ ಹಂಚಿಕೆಯ ವಿಧಾನವನ್ನೇ ಹೋಲುತ್ತದೆ. ಧೃವ ಪ್ರದೇಶದ ಸಮುದ್ರಗಳಲ್ಲಿ ಟುನಿಕೇಟ್‌ಗಳೆಂಬ ಆದಿಮ ಕಶೇರುಕಗಳ ಪ್ರಭೇದಗಳು 103 ಇದ್ದು, ಉಷ್ಣವಲಯದ ಸಮುದ್ರಗಳಲ್ಲಿ ಅವುಗಳ ಪ್ರಭೇದ 629ನ್ನು ಮೀರುತ್ತದೆ. ಒಟ್ಟಾರೆ ಉಷ್ಣವಲಯದ ಅರಣ್ಯಗಳಲ್ಲಿ ಹಾಗೂ ಹವಳ ದಿಬ್ಬಗಳಲ್ಲಿ ಜೀವಿ ವೈವಿಧ್ಯ ಸಮೃದ್ಧವಾಗಿದೆ.

ಸಮಶೀತೋಷ್ಣ ವಲಯಗಳಲ್ಲಿ ಅಲ್ಲಿಗೇ ಸೀಮಿತವಾಗಿರುವ ಸ್ಥಳೀಯ ಪ್ರಭೇದಗಳು ಹೇರಳವಾಗಿವೆ. ಇಂತಹ ಪ್ರಭೇದಗಳನ್ನು ಸ್ಥಳೀಯ ಪ್ರಭೇದಗಳೆನ್ನುವರು. ಉದಾಹರಣೆಗೆ ಕಾಂಗರೂ ಪ್ರಾಣಿಯು ಆಸ್ಟ್ರೇಲಿಯಾದ ಸ್ಥಳೀಯ ಪ್ರಭೇದವಾಗಿದೆ. ಜೌಗು ಪ್ರದೇಶಗಳಲ್ಲಿಯೂ ವಿಶಿಷ್ಟವಾದ ಪ್ರಭೇದಗಳು ಜೀವಿಸುತ್ತವೆ.

 

ಜೀವಿ ವೈವಿಧ್ಯದ ಅಗ್ರ ತಾಣಗಳು

ಸ್ಥಳೀಯ ಪ್ರಭೇದಗಳ ಶ್ರೀಮಂತಿಕೆಯು ಸಾಮಾನ್ಯವಾಗಿ ಬಡ ಹಾಗೂ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿರುವುದು ಒಂದು ವಿಶೇಷ ಸಂಗತಿ. ಮೆಕ್‌ನೀಲಿ ಎಂಬ ವಿಜ್ಞಾನಿ ಹಾಗೂ ಇತರರು 1990ರಲ್ಲಿ ಸ್ಥಳೀಯ ಜೀವಿ ವೈವಿಧ್ಯ ಸಂಪತ್ತನ್ನು ಆಧರಿಸಿ ಜಗತ್ತಿನಲ್ಲಿ 12 ಬೃಹತ್ ಜೀವಿ ವೈವಿಧ್ಯ ರಾಷ್ಟ್ರಗಳನ್ನು ಗುರುತಿಸಿದ್ದಾರೆ. ಈ ರಾಷ್ಟ್ರಗಳಲ್ಲಿ ಜಗತ್ತಿನ ಜೀವ ಸಂಪತ್ತಿನ ಬಹುಭಾಗ ಕೇಂದ್ರೀಕೃತವಾಗಿದೆ. ಬೃಹತ್ ಜೀವಿವೈವಿಧ್ಯ ರಾಷ್ಟ್ರಗಳೆಂದರೆ ಮೆಕ್ಸಿಕೊ, ಕೊಲಂಬಿಯಾ, ಈಕ್ವೆಡಾರ್, ಪೆರು, ಬ್ರೆಜಿಲ್, ಜೈರ್, ಮಡಗಾಸ್ಕರ್, ಚೀಣಾ, ಭಾರತ, ಮಲೇಶಿಯಾ, ಇಂಡೊನೇಶಿಯಾ ಮತ್ತು ಆಸ್ಟ್ರೇಲಿಯಾ. ಇಂದು ಭೂಮಿಯ ಮೇಲೆ ಲಭ್ಯವಿರುವ ಸೇಕಡಾ 70ರಷ್ಟು ಜೀವರಾಶಿಯು ಈ ಹನ್ನೆರಡು ರಾಷ್ಟ್ರಗಳಿಗೆ ಸೇರಿದೆ. ಈ ರಾಷ್ಟ್ರಗಳು ಆರ್ಥಿಕವಾಗಿ ಹಾಗೂ ಇಂದಿನ `ನಾಗರೀಕ‘ ಸಮಾಜದ ದೃಷ್ಟಿಯಲ್ಲಿ ಬಡರಾಷ್ಟ್ರಗಳಾಗಿದ್ದರೂ ಸಹ ಜೀವಿ ವೈವಿಧ್ಯದಲ್ಲಿ ಶ್ರೀಮಂತ ರಾಷ್ಟ್ರಗಳು. ಆದ್ದರಿಂದಲೇ ಅಮೇರಿಕ, ಇಂಗ್ಲೆಂಡ್, ಜರ್ಮನಿ ಮುಂತಾದ ಶ್ರೀಮಂತ ರಾಷ್ಟ್ರಗಳು ಈ 12 ರಾಷ್ಟ್ರಗಳ ಮೇಲೆ ವಕ್ರದೃಷ್ಟಿ ಬೀರುತ್ತಿವೆ. ಮುಂಬರುವ ಶತಮಾನಗಳಲ್ಲಿ ಮಾನವನ ಅಳಿವು-ಉಳಿವು ಈ ಹನ್ನೆರಡು ರಾಷ್ಟ್ರಗಳ ಜೀವಿ ವೈವಿಧ್ಯವನ್ನು ಆಧರಿಸಲಿದೆ.

ಸ್ಥಳೀಯ ಪ್ರಭೇದಗಳು ಹೆಚ್ಚಿರುವ ಅಥವಾ ಜೀವಿ ವೈವಿಧ್ಯದ ಅಗಾಧತೆಯನ್ನು ಆಧರಿಸಿ ಜಗತ್ತಿನಲ್ಲಿ 18 ಸ್ಥಳಗಳನ್ನು ಗುರುತಿಸಿ, ಅವನ್ನು ಅತ್ಯಂತ ಪ್ರಮುಖ ಸ್ಥಳಗಳು, ಅಗ್ರತಾಣಗಳೆಂದು ಮೇಯರ್ ಎಂಬ ವಿಜ್ಞಾನಿ 1988ರಲ್ಲಿ ಕರೆದಿದ್ದಾನೆ. ಈ ಅಗ್ರತಾಣಗಳ ಭೂ ಪ್ರದೇಶವು ಕೇವಲ ಶೇ. 0.5ರಷ್ಟು (7,46,900 ಚದರ ಕಿಮೀ) ಇದ್ದರೂ ಸಹ ಇಲ್ಲಿನ ಜೀವಿ ವೈವಿಧ್ಯವು ಜಗತ್ತಿನ ಸೇ. 20ರಷ್ಟು ಇದೆ (ಉದಾ: 49,155 ಸಸ್ಯ ಪ್ರಭೇದಗಳು). ಜಗತ್ತಿನ 18 ಅಗ್ರತಾಣಗಳಲ್ಲಿ 2 ಅಗ್ರತಾಣಗಳು ಭಾರತದಲ್ಲಿರುವುದು ಹೆಮ್ಮೆಯ ವಿಷಯ. ಅವೇ ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಹಿಮಾಲಯದ ಪ್ರದೇಶಗಳು. ಅಗ್ರತಾಣಗಳಲ್ಲಿ ವಿಶಿಷ್ಟವಾದ ಜೀವಿಗಳಿವೆ, ಸ್ಥಳೀಯವಾದ ಪ್ರಭೇದಗಳಿವೆ ಮತ್ತು ಇಲ್ಲಿರುವ ವೈಶಿಷ್ಟ್ಯಪೂರ್ಣವಾದ ಪರಿಸರ ವ್ಯವಸ್ಥೆಗಳಲ್ಲಿ ನೂತನ ಪ್ರಭೇದಗಳ ಸೃಷ್ಠಿ ಕ್ರಿಯೆ ಸದಾ ನಡೆಯುತ್ತಿರುತ್ತದೆ. ಇವು ಲಕ್ಷಾಂತರ ವರ್ಷಗಳಿಂದ ವಿಕಾಸಗೊಂಡ ನಿಸರ್ಗದ ವಿಶಿಷ್ಟ ಜೀವಾವಾಸಗಳು, ನೂತನ ಪ್ರಭೇದಗಳ ತೊಟ್ಟಿಲುಗಳು ಹಾಗೂ ಸದಾ ನಿಸರ್ಗದ ಪ್ರಕ್ರಿಯೆ ನಡೆಯುವ ಪ್ರಯೋಗಾಲಯಗಳು.

 

ಜೀವಿವೈವಿಧ್ಯದ 18 ತಾಣಗಳು ಮತ್ತು ಸ್ಥಳೀಯ ಜೀವ ಪ್ರಭೇದಗಳು

 

ಸಂಖ್ಯೆ        ಸ್ಥಳ    ಮೇಲ್ವರ್ಗದ            ಸಸ್ತನಿಗಳ      ಸರೀಸೃಪಗಳ ಉಭಯಚರಿಗಳ

ಸಸ್ಯಗಳ ಸಂಖ್ಯೆ        ಸಂಖ್ಯೆ         ಸಂಖ್ಯೆ         ಸಂಖ್ಯೆ

1.        ದ., ಆಫ್ರಿಕಾ                6,000                           15                    43                    23

2.        ಪ. ಅಮೆಜಾನ್             5,000                           –                       –                       70

3.        ಅಟ್ಲಾಂಟಿಕ್ ತೀರದ ಬ್ರೆಜಿಲ್5,000                         40                    92                    168

4.        ಮಡಗಾಸ್ಕರ್              4,900                           86                    234                  142

5.        ಫಿಲಿಪೈನ್ಸ್                 3,700                           98                    120                  41

6.        ಉ. ಬೋರ್ನಿಯೊ         3,500                           42                    69                    47

7.        ಪೂ. ಹಿಮಾಲಯ          3,500                           –                       20                    25

8.        ನೈ. ಆಸ್ಟ್ರೇಲಿಯಾ         2,830                           10                    25                    22

9.        ಪ. ಈಕ್ವೆಡಾರ್             2,500                           9                      –                       –

10.      ಚೊಕೊ (ಕೊಲಂಬಿಯಾ)   2,500                           8                      137                  111

11.      ಮಲೇಶಿಯಾ               2,400                           4                      25                    7

12.      ಕ್ಯಾಲಿಫೋರ್ನಿಯಾ        2,140                           15                    15                    16

13.      ಪಶ್ಚಿಮಘಟ್ಟ                1,600                           7                      91                    84

14.      ಮಧ್ಯ ಚಿಲಿ                 1,450                           –                       –                       –

15.      ನ್ಯೂ ಕೆಲಿಡೋನಿಯಾ      1,400                           2                      21                    6

16.      ಪೂ. ಆರ್ಕ್ ಪರ್ವತ
(ಟಾಂಜೇನಿಯಾ)          535                             20                    –                       49

17.      ನೈರುತ್ಯ ಶ್ರೀಲಂಕ         500                              4                      –                       –

18.      ನೈರುತ್ಯ ಕೋಚಡವೈರ್  200                              3                      –                       2

(ಮೂಲ : ಜಾಗತಿಕ ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆ ಕೇಂದ್ರ, 1992)