ಜೀವಿ ವೈವಿಧ್ಯವು ಪ್ರಕೃತಿಯ ಅಮೂಲ್ಯ ಸಂಪನ್ಮೂಲವಾಗಿದ್ದು ಅದು ದೊರಕುವ ಸ್ಥಳವನ್ನು ಆಧರಿಸಿ ಮೂರು ಮುಖ್ಯ ಭಾಗಗಳನ್ನಾಗಿ ಅಧ್ಯಯನ ಮಾಡಬಹುದು.

1. ಭೂ ಸಂಪನ್ಮೂಲಗಳು

2. ಜಲ ಸಂಪನ್ಮೂಲಗಳು

3. ಸೂಕ್ಷ್ಮ ಜೀವಿಗಳು

1. ಭೂ ಸಂಪನ್ಮೂಲಗಳು

ಪೃಥ್ವಿಯ ಸೇಕಡ 29ರಷ್ಟು ಪ್ರದೇಶದಲ್ಲಿ ಮಾತ್ರ ನೆಲವಿದ್ದು ಮನುಷ್ಯನು ನೆಲದ ಮೇಲಿನ ಸಂಪನ್ಮೂಲಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾನೆ ಮತ್ತು ಹಾಳು ಮಾಡುತ್ತಿದ್ದಾನೆ. ಇಲ್ಲಿನ ಜೈವಿಕ ಸಂಪನ್ಮೂಲಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು

ಅ) ಸಸ್ಯ ಅನುವಂಶೀಯ ಸಂಪನ್ಮೂಲಗಳು

ಆ) ಪ್ರಾಣಿ ಅನುವಂಶೀಯ ಸಂಪನ್ಮೂಲಗಳು

ಇ) ಪರಿಸರ ವ್ಯವಸ್ಥೆಯ ತಾಣಗಳು

 

ಅ) ಸಸ್ಯ ಅನುವಂಶೀಯ ಸಂಪನ್ಮೂಲಗಳು

ಜಗತ್ತಿನ ಎಲ್ಲ ಜೀವಿಗಳೂ ಆಹಾರಕ್ಕಾಗಿ ಸಸ್ಯಗಳನ್ನೇ ಅವಲಂಬಿಸಿವೆ. ಮನುಷ್ಯನೂ ಸಹ ಸಸ್ಯಗಳ ಅತಿಥಿಯಾಗಿಯೇ ಬದುಕುತ್ತಿದ್ದಾನೆ. ಆದರೆ ಈತ ಎಲ್ಲ ಸಸ್ಯ ಪ್ರಭೇದಗಳನ್ನು ಆಹಾರಕ್ಕೆ ಅವಲಂಬಿಸದೆ ಕೆಲವು ಪ್ರಭೇದಗಳನ್ನು ಆಯ್ಕೆ ಮಾಡಿ ಅವುಗಳನ್ನು ತನ್ನ ಬುದ್ದಿಶಕ್ತಿಯಿಂದ ಅಭಿವೃದ್ದಿ ಪಡಿಸಿದ್ದಾನೆ. ಉತ್ತಮವಾದ ಇಳುವರಿ ನೀಡುವ ತಳಿಗಳನ್ನು ಅಡ್ಡಹಾಯಿಸಿ ಅಧಿಕ ಇಳುವರಿ ತಳಿಗಳನ್ನು ಪಡೆದಿದ್ದಾನೆ. ಇಂದು ಸುಮಾರು 30 ಸಸ್ಯ ಪ್ರಭೇದಗಳು ಮನುಷ್ಯನ ಸೇ. 95ರಷ್ಟು ಆಹಾರವನ್ನು ಪೂರೈಕೆ ಮಾಡುತ್ತಿವೆ. ಅವುಗಳಲ್ಲಿ ಗೋದಿ, ಜೋಳ, ಭತ್ತ ಮತ್ತು ಆಲುಗೆಡ್ಡೆ ಪ್ರಮುಖವಾದವು. ಮನುಷ್ಯ ಮಾಂಸಾಹಾರಿಯೂ ಹೌದು. ಅದಕ್ಕಾಗಿ ಮಾಂಸ ಒದಗಿಸುವ ತಳಿಗಳನ್ನು ಆಯ್ಕೆ ಮಾಡಿ ಅಭಿವೃದ್ದಿ ಪಡಿಸಿದ್ದಾನೆ.

ಮುಖ್ಯ ಆಹಾರದ ಜೊತೆಗೆ ಮನುಷ್ಯ ಹಲವಾರು ಸಸ್ಯ, ಪ್ರಾಣಿಗಳನ್ನು ಉಪ ಆಹಾರವಾಗಿ ಬಳಸುವನು. ತರಕಾರಿ, ಹಣ್ಣು, ಎಣ್ಣೆ, ಸಾಂಬಾರ ಪದಾರ್ಥಗಳು, ಔಷಧ, ಪಾನೀಯ ಹಾಗೂ ಸೌಂದರ್ಯ ಸಾಧನಗಳಿಗಾಗಿ ಹಲವು ರೀತಿಯ ಪ್ರಭೇದಗಳ ಬಳಕೆ ಮಾಡುತ್ತಿದ್ದಾನೆ. ಮನೆಯಂಗಳದ ಸೊಬಗು ಹೆಚ್ಚಿಸಲು ನಮಗೆ ಸಸ್ಯಗಳು ಬೇಕು, ಮುಡಿಯಲು ಸುಗಂಧಯುಕ್ತ ಹೂಗಳು ಬೇಕು ಮತ್ತು ಆಹಾರದ ಪರಿಮಳ, ರುಚಿ ಹೆಚ್ಚಿಸಲು ಸಾಂಬಾರ ಪದಾರ್ಥ ಒದಗಿಸುವ ಸಸ್ಯಗಳಿರಬೇಕು. ಕೈಗಾರಿಕಾ ಉತ್ಪಾದನೆಗೂ ಕೆಲವು ಸಸ್ಯಗಳು ಕಚ್ಛಾ ಪದಾರ್ಥಗಳಾಗಿ ಬೇಕು. ಆದ್ದರಿಂದ ಮನುಷ್ಯನಿಗೆ ಸಸ್ಯಗಳ ಬೇಡಿಕೆ ನಿರಂತರವಾಗಿದೆ. ಮಾನವನ ಹೊಸ ಅಗತ್ಯ, ಅಭಿಲಾಷೆಗಳನ್ನು ಪೂರೈಸಲು ಹೊಸ ಹೊಸ ಸಸ್ಯ ಪ್ರಭೇದಗಳನ್ನು ಹುಡುಕಬೇಕಾಗುತ್ತದೆ. ಈಗ ಇರುವ ಎಲ್ಲ ರೀತಿಯ ಸಸ್ಯ ಪ್ರಭೇದಗಳಿದ್ದಲ್ಲಿ ಮಾತ್ರ ನಾವು ಹೊಸ ಸಸ್ಯ ಶೋಧಿಸಲು ಸಾಧ್ಯ.

ಮನುಷ್ಯನು ಇಂದು ಬೆಳೆಯುತ್ತಿರುವ ಸಸ್ಯಗಳು ಸಿದ್ಧವಾಗುವುದಕ್ಕೆ ಅವುಗಳಲ್ಲಿನ ವೈವಿಧ್ಯ, ಪುನಸ್ಸಂಯೋಜನೆ ಮತ್ತು ಆಯ್ಕೆಯೇ ಪ್ರಧಾನ ಕಾರಣಗಳು. ಅಧಿಕ ಇಳುವರಿಯ ತಳಿಗಳಲ್ಲಿ ಅನುವಂಶೀಯ ಏಕತೆಯಿರುತ್ತದೆ. ಆದರೆ ಮನುಷ್ಯನು ಈ ಪ್ರಭೇದಗಳಲ್ಲಿದ್ದ ಅನುವಂಶೀಯ ವೈವಿಧ್ಯಗಳನ್ನು ಬಳಸಿಯೇ ಅವುಗಳನ್ನು ಅಭಿವೃದ್ದಿಪಡಿಸಿದ್ದಾನೆ. ಮತ್ತೆ ಇವುಗಳಿಂದ ಮತ್ತಷ್ಟು ಅಧಿಕ ಇಳುವರಿಯ ಹಾಗೂ ರೋಗ ನಿರೋಧಕ ತಳಿಗಳನ್ನು ಅಭಿವೃದ್ದಿಪಡಿಸಲು, ನಾವು ಈ ಪ್ರಭೇದಗಳ ಕಾಡು ತಳಿಗಳನ್ನು ಅವಲಂಬಿಸಲೇ ಬೇಕು. ಅಲ್ಲದೆ ಮೊದಲಿಗೆ ಮನುಷ್ಯ ಬೆಳೆಯುತ್ತಿದ್ದ ವಿವಿಧ ತಳಿಗಳನ್ನು ಆಶ್ರಯಿಸಬೇಕಾಗುತ್ತದೆ. ಇದನ್ನು 1930ರಲ್ಲಿಯೇ ರಷ್ಯಾದ ಕೃಷಿ ತಜ್ಞ ವಾವಿರೊರವರು ಕೃಷಿ ಬೆಳೆಗಳ ಎಲ್ಲ ತಳಿಗಳನ್ನು ಸಂಗ್ರಹಿಸಿದರು. ಇಂದು ಸಂಯುಕ್ತ ಅಮೇರಿಕಾ ಮತ್ತು ರಷ್ಯಾದಲ್ಲಿ ಕೃಷಿ ಬೆಳೆಗಳ ಎಲ್ಲ ರೀತಿಯ ತಳಿಗಳ ಸಂಗ್ರಹ (ಜೀವ ದ್ರವ್ಯ ಬ್ಯಾಂಕ್) ಇದೆ. ಮಿಶ್ರತಳಿಯನ್ನು ಅಭಿವೃದ್ದಿ ಪಡಿಸುವುದಕ್ಕೆ ಮತ್ತು ಜೀವ ತಂತ್ರಜ್ಞಾನದ ರೀತಿಯಲ್ಲಿ ತಳಿಯನ್ನು ಉತ್ತಮಪಡಿಸುವುದಕ್ಕೆ ಜೀವ ದ್ರವ್ಯದ ಬ್ಯಾಂಕ್ ಬೇಕೇಬೇಕು. ಆದ್ದರಿಂದ `ಬೆಳೆ ಸಸ್ಯಗಳ‘ ವಿವಿಧ ಜಾತಿ, ಉಪಜಾತಿಗಳು, ಕೃಷಿ ಅಭಿವೃದ್ದಿಗೆ ಮೂಲ ಸಾಮಗ್ರಿಗಳು.

ಬೆಳೆ ಸಸ್ಯಗಳಲ್ಲಿನ ಅನುವಂಶೀಯ ಸಂಪನ್ಮೂಲಗಳು ಪ್ರಕೃತಿಯ ಮಡಿಲಲ್ಲಿ ಆಯ್ಕೆಗೊಂಡಿರುವಂತಹವು. ಅವುಗಳನ್ನು ಐದು ಗುಂಪುಗಳನ್ನಾಗಿ ವಿಂಗಡಿಸ- ಬಹುದು.

 

ಕಾಡು ಸಂಬಂಧಿ ಸಸ್ಯಗಳು : ಇವು ನೈಸರ್ಗಿಕ ಆಯ್ಕೆಯಲ್ಲಿ ವಿಕಾಸಗೊಂಡಿರುತ್ತವೆ. ಹಾಗಾಗಿ ಈ ಸಸ್ಯಗಳಲ್ಲಿ ಶಾಖ, ತಂಪು, ತೇವಾಂಶ, ಬರಗಾಲ, ಅತಿಮಳೆ, ರೋಗಗಳು, ಕೀಟಗಳು ಮುಂತಾದವಕ್ಕೆ ಪ್ರತಿರೋಧ ಗುಣವಿರುವ ಜೀನ್‌ಗಳಿರುತ್ತವೆ.

ಕಳೆ ಸಂಬಂಧಿ ಸಸ್ಯಗಳು : ಇವು ಬೆಳೆ ಸಸ್ಯದ ಸಂಬಂಧಿಗಳಾಗಿದ್ದು ಮನುಷ್ಯನು ಬದಲಿಸಿರುವ ಜೀವಾವಾಸಗಳಲ್ಲಿ ವಾಸಿಸುತ್ತವೆ. ಇವು ಬೆಳೆ ಸಸ್ಯ ಹಾಗೂ ಕಾಡುಸಂಬಂಧಿ ಸಸ್ಯಗಳ ನಡುವೆ ಸೇತುವೆಯಂತೆ ವರ್ತಿಸುವವು ಹಾಗೂ ಅವುಗಳ ನಡುವೆ ಜೀನುಗಳು ಅದಲು ಬದಲಾಗಲು ಸಹಾಯ ಮಾಡುವುವು.

ಪ್ರಾಚೀನ ಬೆಳೆ ಸಸ್ಯಗಳು : ಇವು ಪ್ರಾಚೀನ ಕೃಷಿ ಪದ್ಧತಿಯಲ್ಲಿ ವಿಕಾಸಗೊಂಡ ಅಥವಾ ಪ್ರಕೃತಿ ಹಾಗೂ ಮಾನವನ ಆಯ್ಕೆಯಿಂದ ಅಭಿವೃದ್ದಿಯಾಗಿರುವ ಸಸ್ಯಗಳು. ಇವುಗಳಲ್ಲಿ ಸಾಕಷ್ಟು ಪ್ರಮಾಣದ ಅನುವಂಶೀಯವಾದ ವೈವಿಧ್ಯವಿದ್ದು, ಮಾನವ ಸೃಷ್ಟಿಸುವ ಮತ್ತು ಅಥವಾ ನಿಸರ್ಗದ ವಿವಿಧ ವಾತಾವರಣಗಳಿಗೆ ಹೊಂದಿಕೊಳ್ಳುವ ಗುಣಗಳನ್ನು ಪಡೆದಿರುತ್ತವೆ. ಇವು ಅನುವಂಶೀಯ ವೈವಿಧ್ಯದ ಸಂಗ್ರಹಾಲಯವಾಗಿರುವುದರಿಂದ ಸಸ್ಯ ತಳಿಶಾಸ್ತ್ರಜ್ಞರಿಗೆ ಹಾಗೂ ಜೀವ ತಂತ್ರಜ್ಞಾನಿಗಳಿಗೆ ತುಂಬ ಅಗತ್ಯವಾಗಿ ಬೇಕಾಗುತ್ತವೆ.

ನೂತನ ಬೆಳೆ ಸಸ್ಯಗಳು : ಇವು ಮನುಷ್ಯನ ಆಯ್ಕೆಯಿಂದಾಗಿಯೇ ಅಭಿವೃದ್ದಿಗೊಂಡ ಸಸ್ಯಗಳು. ಮನುಷ್ಯನು ಇವುಗಳ ಅಭಿವೃದ್ದಿಗೆ ತಳಿ ಅಡ್ಡಹಾಯಿಸುವ ಅಥವಾ ಜೀನ್ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾನೆ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಇವುಗಳ ಅಭಿವೃದ್ದಿಯಿಂದಾಗಿ ಕೃಷಿ ಉತ್ಪಾದನೆಯಲ್ಲಿ ಕ್ರಾಂತಿ ಉಂಟಾಗಿದೆ. ಈ ಸಸ್ಯಗಳು ಕೃಷಿಯ ಪರಿಸರಕ್ಕೆ ಎಷ್ಟು ಒಗ್ಗಿಹೋಗಿವೆ ಎಂದರೆ ಅವು ಸ್ವತಂತ್ರವಾಗಿ ಬದುಕಲಾರವು.

ಅಭಿವೃದ್ದಿ ತಳಿಯ ಸರಣಿಗಳು : ಈ ಸಸ್ಯಗಳು ಒಂದೇ ಮೂಲದ ಅಥವಾ ವಿವಿಧ ಮೂಲದ ಜೀನುಗಳನ್ನು ಪಡೆದಿರುತ್ತವೆ. ಇವನ್ನು ತಳಿ ತಂತ್ರಜ್ಞರು ಅಭಿವೃದ್ದಿಪಡಿಸಿರುತ್ತಾರೆ. ಇವುಗಳಿಂದಲೇ ನೂತನ ಬೆಳೆ ಸಸ್ಯಗಳನ್ನು ಪಡೆಯುತ್ತಾರೆ.

ಇಂದು ಬೆಳೆ ಸಸ್ಯಗಳ ಅಭಿವೃದ್ದಿಯು ಹೆಚ್ಚೆಚ್ಚು ಸಂಕೀರ್ಣವಿಧಾನವಾಗಿ ಬೆಳೆದಿದೆ. ಅಧಿಕ ಇಳುವರಿಗೆ ಹೆಚ್ಚು ಆದ್ಯತೆ ನೀಡುವುದರಿಂದ ಈ ಸಸ್ಯಗಳು ಮಾನವನ ಸಹಾಯವಿಲ್ಲದೆ ಬೆಳೆಯಲಾರವು ಹಾಗೂ ರೋಗದ ವಿಷಯದಲ್ಲಿ ಕಾಡು ಸಸ್ಯಗಳೊಡನೆ ಸ್ಪರ್ಧಿಸಲಾರವು. ಮನುಷ್ಯ ಈ ಸಸ್ಯಗಳಿಗೆ ಆಗಾಗ್ಗೆ ಕಾಡು ಸಸ್ಯಗಳಿಂದ ಅಥವಾ ಇತರೆ ಮೂಲಗಳಿಂದ ಹೊಸ ಜೀನುಗಳನ್ನು ವರ್ಗಾಯಿಸಬೇಕಾಗುತ್ತದೆ. ಆದ್ದರಿಂದ ಕಡಿಮೆ ಇಳುವರಿ ನೀಡಿದರೂ ಸಹ ರೋಗ ನಿರೋಧಕ ಹಾಗೂ ವಾತಾವರಣದ ಏರು ಪೇರುಗಳನ್ನು ಸಹಿಸುವ ಕಾಡು ಪ್ರಭೇದಗಳು ಮನುಷ್ಯನಿಗೆ ಬೇಕೇಬೇಕು.

ಬೆಳೆ ಸಸ್ಯಗಳ ಅನುವಂಶೀಯ ಸಂಪನ್ಮೂಲಗಳು ಹೆಚ್ಚೂ ಕಡಿಮೆ 12 ಜೀವಿ ವೈವಿಧ್ಯದ ಅಗ್ರತಾಣಗಳಿಂದ ಬಂದಿವೆಯೆಂದು ವಾವಿಲಾವ್‌ರವರು ಗುರುತಿಸಿದ್ದಾರೆ. ಈ ತಾಣಗಳು 5 ಭೂ ಖಂಡಗಳಲ್ಲಿವೆ. ಈ ಸಸ್ಯಗಳ ಅಭಿವೃದ್ದಿಯಲ್ಲಿ ಕೆಲವು ದ್ವಿತೀಯ ಕೇಂದ್ರಗಳು ಪ್ರಮುಖ ಪಾತ್ರವಹಿಸಿವೆ. ದ್ವಿತೀಯ ಕೇಂದ್ರಗಳ ಪರಿಸರವು ಭಿನ್ನವಾಗಿದ್ದು ಬೆಳೆಸಸ್ಯಗಳು ವಿಶಿಷ್ಟ ಹೊಂದಾಣಿಕೆಗಳನ್ನು ಪಡೆಯಲು ಮತ್ತು ಮನುಷ್ಯನಿಂದ ಆಯ್ಕೆಗೆ ಒಳಗಾಗಲು ಅವಕಾಶ ನೀಡಿದೆ. ವೈವಿಧ್ಯದ ಪ್ರಾಥಮಿಕ ಕೇಂದ್ರಗಳಿರುವ ಸ್ಥಳಗಳನ್ನು ಗಮನಿಸಿದಾಗ ಮೂರು ಮುಖ್ಯ ಅಂಶಗಳು ಕಾಣುತ್ತವೆ.

ವೈವಿಧ್ಯದ ಪ್ರಾಥಮಿಕ ಕೇಂದ್ರಗಳು ಪ್ರಪಂಚದ ಉಷ್ಣ ಹಾಗೂ ಉಪ ಉಷ್ಣವಲಯದಲ್ಲಿರುವ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿವೆ.

ಬೆಳೆಗಳನ್ನು ಅಭಿವೃದ್ದಿ ಪಡಿಸಿದ ಮತ್ತು ಮೊದಲಿಗೆ ಕೃಷಿ ಮಾಡಿದ ಸ್ಥಳಗಳು ಇಂದು ಕೃಷಿ ಉತ್ಪಾದನೆಯಲ್ಲಿ ಹಿಂದೆ ಬಿದ್ದಿವೆ.

ಬುಡಕಟ್ಟಿನ ಜನಾಂಗಗಳು ವಾಸಿಸುವ ಸ್ಥಳಗಳಲ್ಲಿ ಬಹುತೇಕ ಪ್ರಾಥಮಿಕ ಕೇಂದ್ರಗಳಿವೆ. ಆ ಪ್ರದೇಶಗಳ ಸರ್ಕಾರಗಳು ಬುಡಕಟ್ಟಿನ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ಒಮ್ಮೆ ಈ ಜನರು ಸಾಂಪ್ರದಾಯಿಕವಾಗಿ ಬೆಳೆಯುವ ಕಡಿಮೆ ಇಳುವರಿ ಹಾಗೂ ರೋಗ ನಿರೋಧಕ ತಳಿಗಳನ್ನು ಕೈಬಿಟ್ಟು ಅಧಿಕ ಇಳುವರಿಯ ತಳಿಗಳ ಕೃಷಿ ಆರಂಭಿಸುತ್ತಾರೆ. ಅನಂತರ ಸ್ಥಳೀಯ ತಳಿಗಳು ನಿಧಾನವಾಗಿ ನಶಿಸುತ್ತವೆ. ಸಾವಿರಾರು ವರ್ಷಗಳ ಆಯ್ಕೆಯಿಂದ ಸೃಷ್ಟಿಯಾಗಿರುವ ಹಾಗೂ ಅನುವಂಶೀಯ ವೈವಿಧ್ಯವಿರುವ ಈ ತಳಿಗಳು ಅತ್ಯಂತ ಉಪಯುಕ್ತ ಜೀನುಗಳ ಕೋಠಿಯೇ ಹೌದು. ಇವು ನಾಶವಾದರೆ ಮಾನವ ಸಂತತಿಗೇ ಬೃಹತ್ ನಷ್ಟವಾಗುವಲ್ಲಿ ಅನುಮಾನವಿಲ್ಲ.

1980ರಿಂದ ಈಚೆಗೆ ಕೃಷಿಯಲ್ಲಿ ಉಂಟಾಗಿರುವ ಹೆಚ್ಚಿನ ಉತ್ಪಾದನೆಗೆ ಬೆಳೆ ಸಸ್ಯಗಳಲ್ಲಿದ್ದ ವೈವಿಧ್ಯದ ಜೀನುಗಳೇ ಕಾರಣ. ಭಾರತದಲ್ಲಿ ಗೋದಿ ಉತ್ಪಾದನೆ ಹೆಚ್ಚಲು ಮೆಕ್ಸಿಕೋದ ಗಿಡ್ಡ ತಳಿಯ ಗೋದಿ ಸಸ್ಯವೇ ಪ್ರಮುಖ ಕಾರಣ.

ಮೇಲಿನ ಅಂಶಗಳಿಂದ ಸಸ್ಯಗಳ ಅನುವಂಶೀಯ ಸಂಪನ್ಮೂಲಗಳು ಭವಿಷ್ಯದಲ್ಲಿ ಅಧಿಕ ಇಳುವರಿ ಹಾಗೂ ರೋಗ ನಿರೋಧಕ ತಳಿಗಳನ್ನು ಅಭಿವೃದ್ದಿಪಡಿಸಲು ಅತ್ಯಗತ್ಯವಾಗಿ ಬೇಕೆಂಬುದು ದೃಢವಾಗುತ್ತದೆ. ಆದ್ದರಿಂದ ಪ್ರಪಂಚದಲ್ಲಿರುವ ಎಲ್ಲ ಬೆಳೆಸಸ್ಯ ಅನುವಂಶೀಯ ವೈವಿಧ್ಯವನ್ನು ಸಂಗ್ರಹಿಸಲು ಅಂತಾರಾಷ್ಟ್ರೀಯ ಸಸ್ಯ ಆನುವಂಶೀಯ ಸಂಪನ್ಮೂಲ ಕೇಂದ್ರವನ್ನು (International Bureau of Plant Genetic Resources IBPGR) 1974ರಲ್ಲಿ ಸ್ಥಾಪಿಸಲಾಯಿತು. ಜಾಗತಿಕವಾಗಿ ಈ ಸಂಪನ್ಮೂಲಗಳ ಸಂಗ್ರಹಣೆ, ಸಂರಕ್ಷಣೆ, ಮೌಲ್ಯಮಾಪನ, ದಾಖಲಾತಿ, ಬಳಕೆ ಮತ್ತು ವಿನಿಮಯದ ಜವಾಬ್ದಾರಿಯನ್ನು IBPGR ವಹಿಸಿಕೊಂಡಿತು. ಅದಲ್ಲದೆ ಅಮೆರಿಕಾ, ರಷ್ಯಾ ದೇಶಗಳು ಪ್ರತ್ಯೇಕ ಸಂಗ್ರಹಣಾ ಕೇಂದ್ರಗಳನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (Food and Agricultural Organisation – FAO), UNESCO, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (United Nations Environment Programme, UNEP) ಮತ್ತು ಪ್ರಕೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಸಂಘ (IUCN)ಗಳು ಸಸ್ಯ ಅನುವಂಶೀಯ ಕೇಂದ್ರಗಳನ್ನು ಸ್ಥಾಪಿಸಲು 1985ರಲ್ಲಿ ಮಾತುಕತೆ ಆರಂಭಿಸಿದವು. ಆದರೆ ತಳಿತಜ್ಞರ ಹಕ್ಕುಗಳ ಸಮಸ್ಯೆ ಚರ್ಚೆಗೆ ಬಂದು ಈ ಪ್ರಯತ್ನ ಪೂರ್ಣ ಯಶಸ್ಸು ಕಂಡಿಲ್ಲ. ಅಂತಾರಾಷ್ಟ್ರೀಯ ಜೀನ್ ಬ್ಯಾಂಕ್ ರಚನೆಗೂ ಪ್ರಯತ್ನ ನಡೆಯುತ್ತಿದೆ.

ಬೆಳೆಗಳಲ್ಲದ ಸಸ್ಯಗಳ ಅನುವಂಶೀಯ ಸಂಪನ್ಮೂಲಗಳು : ಮನುಷ್ಯನಿಗೆ ಈಗ ಆಹಾರದ ಬೆಳೆಗಳಲ್ಲದಿದ್ದರೂ ಭವಿಷ್ಯದಲ್ಲಿ ಬೆಳೆಯಾಗಬಹುದಾದ ಹಲವಾರು ಸಸ್ಯಗಳು ಅರಣ್ಯಗಳಲ್ಲಿವೆ. ಅವುಗಳನ್ನು ಗುರುತಿಸಿ, ಅಭಿವೃದ್ದಿಪಡಿಸುವ ಜವಾಬ್ದಾರಿ ಆಧುನಿಕ ಮಾನವನ ಮೇಲಿದೆ. ಅಲ್ಲದೆ ವಿವಿಧ ಜೀವಾವಾಸಗಳಲ್ಲಿರುವ ವಿವಿಧ ಸಸ್ಯಗಳು ಔಷಧಗಳ ತಯಾರಿಕೆಗೆ ಅಥವಾ ಕೈಗಾರಿಕಾ ಉತ್ಪಾದನೆಗೆ ಉಪಯೋಗವಾಗಬಹುದು. ಜಮ್ಮುನಲ್ಲಿರುವ ವಲಯ ಸಂಶೋಧನಾ ಕೇಂದ್ರವು (RRL) ಮೂರು ವನ್ಯ ಅಣಬೆಗಳನ್ನು ಆಹಾರಕ್ಕಾಗಿ ಕೃಷಿ ಮಾಡುವ ವಿಧಾನಗಳನ್ನು ಕಂಡುಹಿಡಿದಿದೆ. (Agrocybe cylindrica, Coprinus commatus ಮತ್ತು stopharia) ಸದ್ಯದಲ್ಲಿ ಅವನ್ನು ಕಾಡುಗಳಿಂದ ಸಂಗ್ರಹಿಸಿ ತಿನ್ನುವ ರೂಢಿಯಿದೆ. ಆದ್ದರಿಂದ ಇವುಗಳ ಸಂಖ್ಯೆ ಕ್ಷೀಣಿಸಿ ವಿನಾಶದ ಅಂಚಿಗೆ ಸಾಗಿವೆ. ಲಕ್ನೋನಲ್ಲಿರುವ ಔಷಧ ಮತ್ತು ಸುಗಂಧ ಸಸ್ಯಗಳ ಕೇಂದ್ರ ಸಂಸ್ಥೆಯು ಊತಕ ಕೃಷಿ ವಿಧಾನದಿಂದ ಹಿಮಾಲಯದಲ್ಲಿನ ಗಿಡಮೂಲಿಕೆಗಳನ್ನು ಸಂರಕ್ಷಿಸುತ್ತಿದೆ ಹಾಗೂ ಅಭಿವೃದ್ದಿಪಡಿಸುತ್ತಿದೆ. ಅಖಿಲ ಭಾರತ ಬೀಜ ಜೀವ ವಿಜ್ಞಾನ ಹಾಗೂ ಊತಕ ಕೃಷಿ ಸಂಸ್ಥೆಯು ಬೆಳೆಸಸ್ಯಗಳಲ್ಲದ ವಾಣಿಜ್ಯ ಸಸ್ಯಗಳಾದ 100 ಸಸ್ಯಗಳನ್ನು ಸಂರಕ್ಷಿಸಲು ಹಾಗೂ ಅಧ್ಯಯನ ಮಾಡಲು ತೊಡಗಿದೆ.

ಅರಣ್ಯ ಮರಗಳ ಅನುವಂಶೀಯ ಸಂಪನ್ಮೂಲಗಳು ಬಹಳ ಪ್ರಮುಖವಾದವು. ಅರಣ್ಯಗಳಲ್ಲಿನ ಕೆಲವು ಸಸ್ಯ ಪ್ರಭೇದಗಳನ್ನು ಆದ್ಯತೆಯ ಮೇರೆಗೆ ರಕ್ಷಿಸಬೇಕಿದೆ. ಶ್ರೀಗಂಧ, ತೇಗ, ಹೊನ್ನೆ, ಬಿದುರು ಮುಂತಾದ ಮರಗಳಲ್ಲಿ ಅನುವಂಶೀಯ ವೈವಿಧ್ಯವನ್ನು ಕಾಪಾಡಲು ಮತ್ತು ಅಭಿವೃದ್ದಿಪಡಿಸಲು ಊತಕ ಕೃಷಿ, ತಳಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಹಜ ನೆಲೆ ಹಾಗೂ ಕೃತಕ ನೆಲೆಗಳಲ್ಲಿ ಸಂರಕ್ಷಿಸುವುದರ ಜೊತೆಗೆ ಬೀಜಗಳನ್ನು ಸಂರಕ್ಷಿಸುವ ಕಾರ್ಯವೂ ನಡೆಯುತ್ತಿದೆ. ಸಾಮಾಜಿಕ ಅರಣ್ಯ, ಅರಣ್ಯ ಕೈಗಾರಿಕೆ, ಉರುವಲು, ಕಾಗದ, ವಾಣಿಜ್ಯ ಮರಮುಟ್ಟು ಮುಂತಾದವುಗಳಿಗಾಗಿ ಅರಣ್ಯ ಅನುವಂಶೀಯ ವೈವಿಧ್ಯದ ಅಗತ್ಯವಿದೆ.

 

ಆ) ಪ್ರಾಣಿಗಳ ಅನುವಂಶೀಯ ಸಂಪನ್ಮೂಲಗಳು

ಇವುಗಳಲ್ಲಿ ಎರಡು ವಿಧ. ವನ್ಯ ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳು. ವನ್ಯ ಪ್ರಾಣಿಗಳೆಂದ ತಕ್ಷಣ ನಮ್ಮ ಗಮನ ಕಾಡಿನ ದೊಡ್ಡ ಪ್ರಾಣಿಗಳಾದ ಆನೆ, ಸಿಂಹ, ಹುಲಿ, ಚಿರತೆಗಳ ಕಡೆ ಹರಿಯುತ್ತದೆ. ವನ್ಯ ರಕ್ಷಣೆಯ ಅನೇಕ ಕಾರ್ಯಕ್ರಮಗಳು ಬೃಹತ್‌ವನ್ಯ ಪ್ರಾಣಿಗಳ ರಕ್ಷಣೆಗೇ ಆದ್ಯತೆ ನೀಡುತ್ತವೆ. ಹುಲಿ ಅಥವಾ ಚಿರತೆಗೆ ರಕ್ಷಣೆ ಒದಗಿಸಿದರೆ ಬೇರೆಲ್ಲ ವನ್ಯಜೀವಿಗಳಿಗೂ ರಕ್ಷಣೆ ನೀಡಿದಂತೆಯೇ ಎಂಬುದು ಸಾಮಾನ್ಯ ತಿಳಿವಳಿಕೆ. ಆದರೆ ಇದು ಸರಿಯಲ್ಲ. ಪರಿಸರ ವ್ಯವಸ್ಥೆಯಲ್ಲಿ ಜೀವಿಗಳು ದೊಡ್ಡವಾಗಲಿ, ಚಿಕ್ಕವಾಗಲೀ, ಪ್ರತಿಯೊಂದಕ್ಕೂ ತನ್ನದೇ ಆದ ಪಾತ್ರವಿರುತ್ತದೆ. ರಕ್ಷಿತವಾದ ವನ್ಯಪ್ರಾಣಿಯ ಅನುವಂಶೀಯತೆಯಲ್ಲಿ ಏಕತಾನತೆಯಿದ್ದರೂ ಅಪಾಯ ಕಟ್ಟಿಟ್ಟದ್ದು. ಏಕೆಂದರೆ ಅನುವಂಶೀಯ ಏಕತಾನತೆಯಿದ್ದಾಗ ಅವು ಪರಿಸರದಲ್ಲಿನ ಸ್ವಲ್ಪ ಬದಲಾವಣೆಗೆ ಹೊಂದಿಕೊಳ್ಳಲಾಗುವುದಿಲ್ಲ ಮತ್ತು ರೋಗಗಳಿಗೆ ನಿರೋಧಕ ಗುಣ ಹೊಂದಿರುವುದಿಲ್ಲ. ಚಿರತೆ ಮತ್ತು ಹುಲಿಗಳಲ್ಲಿನ ಅನುವಂಶೀಯ ಏಕತಾನತೆ ಅವುಗಳ ಅಸ್ತಿತ್ವಕ್ಕೆ ಮುಳುವಾಗಿದೆ. ವನ್ಯ ಪ್ರಾಣಿಗಳಲ್ಲಿ ವೈವಿಧ್ಯವಿದ್ದಷ್ಟೂ ಮತ್ತು ವೈವಿಧ್ಯದ ಪೋಷಣೆ ಹಾಗೂ ಸೃಷ್ಟಿಗೆ ಅಗತ್ಯವಾದ ವಾತಾವರಣ, ಪರಿಸರ ಇದ್ದಷ್ಟೂ ಒಳ್ಳೆಯದು.

ಕೆಲವು ವನ್ಯ ಪ್ರಾಣಿಗಳು ಅಭಿವೃದ್ದಿಶೀಲ ರಾಷ್ಟ್ರಗಳ ಆರ್ಥಿಕ ಅಭಿವೃದ್ದಿಗೆ ಗಮನಾರ್ಹ ಕೊಡುಗೆ ನೀಡುತ್ತಿವೆ. ಪ್ರವಾಸ ಉದ್ಯಮದಿಂದ ಬರುವ ಲಾಭದ ಜೊತೆಗೆ ಕೆಲವು ಪ್ರಾಣಿಗಳ ಚರ್ಮ, ಮಾಂಸ, ಮೂಳೆ, ಕೊಂಬುಗಳ ಮಾರಾಟದಿಂದಲೂ ಹಣ ಬರುತ್ತಿದೆ. ಒಮ್ಮೆ ಇಂತಹ ವಸ್ತುಗಳ ಮಾರಾಟದಿಂದ ಹಣ ಗಳಿಸುವ ಮಾರ್ಗ ರೂಢಿಯಾದರೆ ಆ ಪ್ರಾಣಿಜನ್ಯ ವಸ್ತುಗಳ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಿದಂತೆ ಆ ಪ್ರಾಣಿಗಳ ಬೇಟೆ, ಹತ್ಯೆ ವಿಪರೀತವಾಗಿ ಅವು ವಿನಾಶದ ಅಂಚಿಗೆ ತಳ್ಳಲ್ಪಡಬಹುದು. ಸೀತಾಳೆ ಗಿಡಗಳು, ಘೇಂಡಾಮೃಗ, ಅಪರೂಪದ ಜರಿಗಿಡಗಳು, ಪಿಚರ್ ಗಿಡ ಮುಂತಾದವುಗಳ ಸಂಖ್ಯೆ ಕ್ಷೀಣಿಸಲು ವಾಣಿಜ್ಯ ಬಳಕೆಯೇ ಕಾರಣ. ಬೇಡಿಕೆ ಇರುವ ಕೆಲವು ಪ್ರಾಣಿಗಳನ್ನು ಕೃತಕವಾಗಿ ಸಾಕಿ, ಸಂಖ್ಯೆ ಹೆಚ್ಚಿಸಿ ಅನಂತರ ಮಾರಾಟ ಮಾಡುವ ಉದ್ಯಮವನ್ನು ಪ್ರೋಸರಿಯಾದ ಮಾರ್ಗ. ಕಪ್ಪೆಯ ತೊಡೆ ಮಾಂಸಕ್ಕೆ ಬೇಡಿಕೆ ಹೆಚ್ಚಿ ವನ್ಯ ಪ್ರದೇಶದಲ್ಲಿರುವ ಎಲ್ಲ ಕಪ್ಪೆಗಳನ್ನು ಹತ್ಯೆ ಮಾಡಲಾಗುತ್ತಿದೆ. ಬಹುಶಃ ಕಪ್ಪೆಗಳ ಸಾಕಾಣಿಕೆಯನ್ನು ಪ್ರೋನಾವು ಕಪ್ಪೆ ಮಾಂಸದ ಬೇಡಿಕೆಯನ್ನು ಪೂರೈಸಬಹುದು ಮತ್ತು ಕೆಲವರಿಗೆ ಉದ್ಯೋಗವನ್ನೂ ನೀಡಬಹುದು.

ಸಾಕು ಪ್ರಾಣಿಗಳು ಮಾನವನ ಹಸಿವನ್ನು ಹಿಂಗಿಸುವ ಹಾಗೂ ಆತನ ಶ್ರಮವನ್ನು ಹಗುರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಶ್ರೀಮಂತ ರಾಷ್ಟ್ರಗಳಲ್ಲಿ ಮಾಂಸ ತಿನ್ನುವುದು ಅಭಿವೃದ್ದಿಯ ಚಿಹ್ನೆಯಂತೆ ಹೆಚ್ಚಾಗುತ್ತಿದೆ. ಹೆಚ್ಚು ಮಾಂಸ ನೀಡುವ ತಳಿಗಳನ್ನು ಅಭಿವೃದ್ದಿಪಡಿಸಲು ಅನುವಂಶೀಯ ವೈವಿಧ್ಯವಿರಬೇಕು. ದನಕರುಗಳಲ್ಲಿ ವೈವಿಧ್ಯವಿರುವ ಕಾರಣದಿಂದಾಗಿಯೇ ಇಂದು ಭಾರತದಲ್ಲಿ ಅಧಿಕ ಹಾಲು ನೀಡುವ, ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಅಭಿವೃದ್ದಿಪಡಿಸಲು ಹಾಗೂ ಹಾಲು ಉತ್ಪಾದನೆಯಲ್ಲಿ ದಾಖಲೆ ಸ್ಥಾಪಿಸಲು ಸಾಧ್ಯವಾಗಿದೆ. ಭವಿಷ್ಯದಲ್ಲೂ ಈ ವೈವಿಧ್ಯದ ಅಗತ್ಯವಿದೆ. ಹಸು, ಎಮ್ಮೆ, ಮೇಕೆ, ಕುರಿ, ಕುದುರೆ, ಒಂಟೆ, ಕೋಳಿ, ಮಿಥುನ, ಯಾಕ್ ಪ್ರಾಣಿಗಳಲ್ಲಿನ ವೈವಿಧ್ಯ ಭಾರತದಲ್ಲಿ ಅಪಾರವಾಗಿದೆ. ಅದೇ ರೀತಿ ಇತರೆ ದೇಶಗಳಲ್ಲಿಯೂ ಇದೆ. ಈ ಪ್ರಾಣಿ ವೈವಿಧ್ಯವನ್ನು ವೀರ್ಯ ರಕ್ಷಣೆಯ ಬ್ಯಾಂಕ್, ಭ್ರೂಣಗಳ ಬ್ಯಾಂಕ್, ಕ್ಲೋನಿಂಗ್ ಮುಂತಾದ ವಿಧಾನಗಳಿಂದ ಸಂರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ.

 

ಇ) ಪರಿಸರ ತಾಣಗಳು

ಇವು ಪ್ರಕೃತಿಯ ಸಹಜ ಪ್ರಯೋಗಾಲಯಗಳು, ಹೊಸ ಪ್ರಭೇದಗಳ ಸೃಷ್ಟಿ ಕೇಂದ್ರಗಳು ಹಾಗೂ ವಿವಿಧ ಸಸ್ಯ ಪ್ರಾಣಿಗಳ ಜೀವಾವಾಸಗಳು. ಇವು ಸ್ವಯಂ ಅವಲಂಬನೆಯ, ಸ್ವಯಂ ದುರಸ್ತಿ ಮಾಡಿಕೊಳ್ಳುವ ಪರಿಸರದ ವಿಶಿಷ್ಟ ವಾಸಗಳು. ನಿರ್ಜೀವ ಹಾಗೂ ಸಜೀವ ಘಟಕಗಳ ನಡುವೆ ಪರಸ್ಪರ ಅವಲಂಬನೆ ಮತ್ತು ಸಂಕೀರ್ಣ ಸಂಬಂಧವಿರವ ತಾಣಗಳು. ಅನುವಂಶೀಯ ಭಿನ್ನತೆ, ಪುನಸ್ಸಂಯೋಜನೆ ಹಾಗೂ ವಿಕಾಸ ನಡೆಯುವ ಕೇಂದ್ರಗಳು. ಆದ್ದರಿಂದ ಇಲ್ಲಿರುವ ಜೀವಿಗಳ ಅನುವಂಶೀಯ ವೈವಿಧ್ಯವನ್ನು ಪೋಷಿಸುವ ಹಾಗೂ ಸಂರಕ್ಷಿಸುವ ಅಗತ್ಯವಿದೆ. ಸಹಜನೆಲೆ ಮತ್ತು ಕೃತಕ ನೆಲೆ ಸಂರಕ್ಷಣೆ ವಿಧಾನಗಳನ್ನು ಅನುಸರಿಸಬೇಕಾಗುವುದು. ಪರಿಸರ ವ್ಯವಸ್ಥೆಗಳ ಸಂರಕ್ಷಣೆಯಿಂದ ವನ್ಯಪ್ರಾಣಿ, ವನ್ಯಸಸ್ಯ ಬೆಳೆಗಳ ಕಾಡುತಳಿಗಳು, ಹಾಗೂ ಸಾಕು ಪ್ರಾಣಿಗಳ ಕಾಡು ಜಾತಿಗಳನ್ನು ಒಟ್ಟಿಗೇ ಹಾಗೂ ಕಡಿಮೆ ಖರ್ಚಿನಲ್ಲಿ ಸಂರಕ್ಷಿಸಿದಂತಾಗುತ್ತದೆ. ಆಯ್ದ ಪರಿಸರ ತಾಣಗಳ ಸಂರಕ್ಷಣೆಯು ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆಯುತ್ತವೆ.

 

2. ಜಲ ಸಂಪನ್ಮೂಲಗಳು

ನದಿ ಸರೋವರಗಳು, ಸಿಹಿನೀರು ಮತ್ತು ಸಮುದ್ರಗಳ ಜೌಗುಪ್ರದೇಶಗಳು, ಅಳಿವೆಕಾಡುಗಳು ಮತ್ತು ಕಡಲುಗಳೇ ಜಲ ಸಂಪನ್ಮೂಲಗಳು. ಪ್ರಪಂಚದ ಸೇಕಡ 71ರಷ್ಟು ಪ್ರದೇಶವು ಸಮುದ್ರಗಳಿಂದ ಆವರಿಸಿದೆ. ಇಲ್ಲೆಲ್ಲಾ ವಿಶಿಷ್ಟವಾದ ಜೀವಿಗಳು ವಾಸಿಸುತ್ತವೆ. ಮನುಷ್ಯನಿಗೆ ಇಲ್ಲಿಂದ ಗಮನಾರ್ಹ ಪ್ರಮಾಣದ ಆಹಾರವೂ ದೊರಕುತ್ತದೆ. ಸಿಹಿನೀರಿನ ಮೀನುಗಳು, ಕಡಲ ಮೀನುಗಳು ಮಾನವಿಗೆ ಪ್ರೋಪೂರೈಕೆ ಮಾಡುತ್ತಿವೆ. ಮೆಕರೆಲ್, ಟುನ, ಸಾಲ್ಮನ್, ಕಾಟ್ಲ, ರೋಹು, ಸೀಗಡಿ ಮುಂತಾದವು ಸಾಕಷ್ಟು ಬೇಡಿಕೆಯಿರುವ ಆಹಾರವಾಗಿವೆ. ಸಿಹಿನೀರಿನ ಜೌಗು ಹಾಗೂ ಅಳಿವೆ ಪ್ರದೇಶಗಳಲ್ಲಿ ಜೀವಿಗಳ ಸಂಪತ್ತು ಸಮೃದ್ಧವಾಗಿರುತ್ತದೆ. ಅವುಗಳಲ್ಲಿನ ವೈವಿಧ್ಯವೂ ಅಪಾರ.

ಇಂದು ಯಂತ್ರಚಾಲಿತ ದೋಣಿಗಳ ಸಹಾಯದಿಂದ ಮೀನು ಹಿಡಿಯುತ್ತಿದ್ದಾರೆ. ಮೀನು ಹಿಡಿಯಲು ನವೀನ ವಿಧಾನಗಳನ್ನು ಬಳಸುತ್ತಿರುವುದರಿಂದ ಮತ್ಸ್ಯ ಸಂಪತ್ತು ತೀವ್ರಗತಿಯಲ್ಲಿ ನಾಶವಾಗುತ್ತಿದೆ. ಲಾಭದ ಏಕೈಕ ದೃಷ್ಟಿಯಿಂದ ಅಳಿವೆ ಪ್ರದೇಶಗಳಲ್ಲಿ ಸಮುದ್ರ ಸೀಗಡಿ ಕೃಷಿಗಾರಿಕೆಯನ್ನು ಕೈಗೊಳ್ಳುತ್ತಿರುವುದರಿಂದ ಅಮೂಲ್ಯವಾದ ಅಳಿವೆ ಪ್ರದೇಶದ ಜೀವಿ ವೈವಿಧ್ಯ ನಾಶವಾಗುತ್ತಿದೆ. ಜಲ ಮಾಲಿನ್ಯ, ಜಲಚರ ಜೀವಿಗಳ ಅತಿಯಾದ ಬಳಕೆ, ಜಲಪರಿಸರ ವ್ಯವಸ್ಥೆಗಳ ನಾಶ ಮುಂತಾದ ಮಾನವ ಚಟುವಟಿಕೆಯಿಂದ ಜಲ ಸಂಪನ್ಮೂಲಗಳು ನಾಶವಾಗುತ್ತಿವೆ. ಕಡಲಾಮೆಗಳು ಮೊಟ್ಟೆ ಇಡಲು ಬಂದಾಗ ಮೊಟ್ಟೆ ಮತ್ತು ಆಮೆಗಳನ್ನು ಹಿಡಿದು ತಿನ್ನುವ ಮಾನವನ ಚಾಳಿಯಿಂದ ಕಡಲಾಮೆಗಳು ವಿನಾಶದ ಅಂಚಿಗೆ ಸಾಗಿವೆ. ಎಲ್ಲ ಗಾತ್ರದ ಮೀನುಗಳನ್ನು ಹಿಡಿಯುತ್ತಿರುವುದರಿಂದ ವಾರ್ಷಿಕ ಮೀನು ಉತ್ಪಾದನೆ ಕುಸಿಯುವ ಸಾಧ್ಯತೆಯಿದೆ. ಸಹಸ್ರಾರು ಬೆಸ್ತರು ತಮ್ಮ ಸಂಪ್ರದಾಯಿಕ ವೃತ್ತಿ ಬಿಡಬೇಕಾದ ಪ್ರಮೇಯ ಸಮೀಪಿಸುತ್ತಿದೆ.

ಮಾನವನ ಸೇಕಡ 17ರಷ್ಟು ಆಹಾರವು ಮೀನುಗಳಿಂದಲೇ ಬರುತ್ತಿದೆ. ಮೀನುಗಳನ್ನು ಆಹಾರ, ಜಲಕಳೆಗಳ ನಿಯಂತ್ರಣ, ಕೀಟಗಳ ಹತೋಟಿ ಹಾಗೂ ವಿವಿಧ ವಸ್ತುಗಳ ಉತ್ಪಾದನೆಗೆ ಬಳಸುತ್ತಾರೆ. ಸೌಂದರ್ಯದ ಜೀವಿಗಳನ್ನಾಗಿಯೂ ಮೀನುಗಳನ್ನು ಮತ್ಸಾಲಯಗಳಲ್ಲಿ ಸಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಅಲ್ಲದೆ ಮೀನು ಆಧಾರಿತ ರಸಾಯನಿಕಗಳ ಉತ್ಪಾದನೆಯು ಒಂದು ಉದ್ಯಮವಾಗಿ ಬೆಳೆಯುವ ಎಲ್ಲ ಸೂಚನೆಗಳಿವೆ.

ಸಿಹಿನೀರಿನ ಹಾಗೂ ಕಡಲ ಮೀನುಗಳ ಉತ್ಪಾದನೆಯು ಒಂದು ಉದ್ಯಮವಾಗಿ ರೂಪುಗೊಂಡಿದೆ. ಕಾಟ್ಲ, ರೋಹುಗಳ ವಿವಿಧ ಮಿಶ್ರತಳಿಗಳನ್ನು ಅಭಿವೃದ್ದಿಪಡಿಸಲಾಗಿದೆ. ವಿದೇಶಗಳಿಂದ ಆಮದುಮಾಡಿಕೊಂಡಿರುವ ಟಿಲಾಪಿಯ ಜಾತಿ ಮೀನು ಎಂತಹ ಪರಿಸರದಲ್ಲಿಯೂ ಬೆಳೆಯುವ ಮೀನಾಗಿದ್ದು ಸ್ಥಳೀಯ ಮೀನುಗಳ ಜೀವನಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಅಂತರಗಂಗೆ (ಐಕಾರ್ನಿಯ) ಮತ್ತು ಸಾಲ್ವಿನಿಯ ಎಂಬ ಜಲಕಳೆಗಳು ನಮ್ಮ ದೇಶದ ಮಲಿನಗೊಂಡ ಕೆರೆ, ಸರೋವರ ಹಾಗೂ ನದಿಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದು ಜಲಚರ ಜೀವಿಗಳಿಗೆ ಕಂಟಕವಾಗುತ್ತಿದೆ. ನಗರದ ಹೊಲಸು ಹಾಗೂ ಕೈಗಾರಿಕಾ ತ್ಯಾಜ್ಯಗಳಿಂದ ನದಿ, ಸರೋವರಗಳ ಪರಿಸರ ವ್ಯವಸ್ಥೆಗಳು ನಾಶವಾಗುತ್ತಿರುವುದು ಅತ್ಯಂತ ವಿಷಾದನೀಯ.

ಆಳವಾದ ಸಮುದ್ರಗಳ ಪರಿಸರವನ್ನು ಅರ್ಥಮಾಡಿಕೊಂಡಿರುವುದು ಅಲ್ಪವಾದರೂ, ನಾಶ ಮಾಡಿರುವ ಪ್ರಮಾಣ ಅಗಾಧ. ಯಂತ್ರ ಚಾಲಿತ ಬೇಟೆ, ಪರಿಸರದ ನಾಶ, ಸಂತಾನ ಕಾಲದಲ್ಲಿ ಅಡಚಣೆ ಮತ್ತು ಮಾಲಿನ್ಯದಿಂದಾಗಿ ಆಳ ಸಮುದ್ರಗಳ ಜೀವಾವಾಸಗಳು ಹೆಚ್ಚಿನ ಆಘಾತಕ್ಕೆ ಒಳಗಾಗಿವೆ. ಡಾಲಿೇನ್, ತಿಮಿಂಗಿಲ, ಮುಂತಾದ ಸಸ್ತನಿಗಳ ಕೊಲೆ ಅವ್ಯಾಹತವಾಗಿ ನಡೆಯುತ್ತಿರುವ ಕಾರಣ ಅವೂ ವಿನಾಶದ ಅಂಚಿಗೆ ಸಾಗಿವೆ.

 

3. ಸೂಕ್ಷ್ಮ ಜೀವಿಗಳು

ಸೂಕ್ಷ್ಮ ಜೀವಿಗಳೆಂದರೆ ಸಾಮಾನ್ಯವಾಗಿ ನಮಗೆ ರೋಗಕಾರಕ ಸೂಕ್ಷ್ಮಜೀವಿಗಳೇ ನೆನಪಿಗೆ ಬರುತ್ತವೆ. ಅಪಾಯಕಾರಿ ಸೂಕ್ಷ್ಮಜೀವಿಗಳಿಗಿಂತ ಸಹಾಯಕಾರಿ ಸೂಕ್ಷ್ಮಜೀವಿಗಳ ಪ್ರಮಾಣವೇ ಈ ಭೂಮಿಯಲ್ಲಿ ಹೆಚ್ಚಿದೆ ಎಂಬುದು ನೆಮ್ಮದಿ ತರುವ ವಿಚಾರ. ಬ್ಯಾಕ್ಟೀರಿಯ, ಆದಿಮ ಜೀವಿಗಳು, ಶೈವಲಗಳು ಹಾಗೂ ಶಿಲೀಂಧ್ರಗಳನ್ನು ನಾವು ಸೂಕ್ಷ್ಮಜೀವಿಗಳೆಂದು ಕರೆಯುತ್ತೇವೆ. ಪ್ರಭೇದ ವೈವಿಧ್ಯದಲ್ಲಿ ಇವು ಸಸ್ಯಗಳ ನಂತರ ಪ್ರಮುಖ ಸ್ಥಾನ ಪಡೆದಿವೆ. ಪ್ರಮಾಣದಲ್ಲಿಯೂ ಸಹ ಸೂಕ್ಷ್ಮಜೀವಿಗಳು ಸಸ್ತನಿ ಹಾಗೂ ಪಕ್ಷಿಗಳ ನಂತರದ ಸ್ಥಾನ ಪಡೆಯುತ್ತವೆ. ಇವು ಕೃಷಿ, ಆಹಾರ ಹಾಗೂ ಶಕ್ತಿಯ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸಿ ಸಸ್ಯಗಳಿಗೆ ಒದಗುವಂತೆ ಮಾಡುತ್ತವೆ. ಆಹಾರ ಹಾಗೂ ರಾಸಾಯನಿಕ ಉದ್ಯಮದಲ್ಲಿ ಸೂಕ್ಷ್ಮಜೀವಿಗಳು ಅಗತ್ಯವಾಗಿ ಬೇಕು. ಸತ್ತ ಸಸ್ಯ ಮತ್ತು ಪ್ರಾಣಿಗಳ ಶರೀರದಲ್ಲಿರುವ ರಸಾಯನಿಕ ವಸ್ತುಗಳನ್ನು ವಿಘಟಿಸಲು ಸೂಕ್ಷ್ಮಜೀವಿಗಳು ಬೇಕೇ ಬೇಕು. ಸೂಕ್ಷ್ಮಜೀವಿಗಳು ಅರಣ್ಯಗಳಲ್ಲಿ ಬಿದ್ದ ಎಲೆ, ಕಡ್ಡಿ, ಮರಗಳನ್ನು ವಿಘಟಿಸಿ ಮಣ್ಣನ್ನು ಫಲವತ್ತಾಗಿಸುತ್ತವೆ.

ಸೂಕ್ಷ್ಮಜೀವಿಗಳಲ್ಲಿನ ವೈವಿಧ್ಯ ಅಪಾರವಾದುದು. ಅವು ಮಣ್ಣಿನ ರಚನೆ ಹಾಗೂ ಫಲವತ್ತತೆಯ ಅಂಗವಾಗಿವೆ. ಕೈಗಾರಿಕಾ ಸೂಕ್ಷ್ಮಜೀವವಿಜ್ಞಾನ ಎಂಬ ನೂತನ ವಿಜ್ಞಾನ ಶಾಖೆಯೇ ಅಸ್ಥಿತ್ವಕ್ಕೆ ಬಂದಿದೆ. ಭವಿಷ್ಯದಲ್ಲಿ ತಳಿ ತಂತ್ರಜ್ಞಾನದ ಬೆಂಬಲದಿಂದ ಈ ಶಾಖೆಯು ಉಜ್ವಲವಾಗಿ ಬೆಳೆಯುವ ಸಾಧ್ಯತೆ ಇದೆ.

1980ರಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ವಿಭಾಗವು ಸೂಕ್ಷ್ಮಜೀವಿಗಳ ಪಾತ್ರವನ್ನು ಅರಿಯುವ ಹಾಗೂ ಕೆಲವನ್ನು ಸಾಕುಜೀವಿಗಳನ್ನಾಗಿ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ. ಇದು ಉನ್ನತ ತಂತ್ರಜ್ಞಾನದ ಕ್ಷೇತ್ರವಾಗಿರುವುದರಿಂದ ಶ್ರೀಮಂತ ರಾಷ್ಟ್ರಗಳು ಗಮನ ನೀಡಿರುವಷ್ಟು ಬಡರಾಷ್ಟ್ರಗಳು ನೀಡಲಾಗುತ್ತಿಲ್ಲ. ಜಪಾನ್ ದೇಶವು ಈಗಾಗಲೇ ಸೂಕ್ಷ್ಮಜೀವಿಗಳ ದಾಖಲೆಗಳನ್ನು ನಿರ್ಮಿಸುವ, ಪ್ರಭೇದಗಳನ್ನು ಸಂಗ್ರಹಿಸಿ ಕಾಯ್ದಿಟ್ಟುಕೊಳ್ಳುವ ಕಾರ್ಯ ಆರಂಭಿಸಿದೆ.