ವಿವಿಧ ಭಾಷೆ, ಪ್ರಾಂತ್ಯ, ಜನಾಂಗಗಳಿದ್ದರೂ ಭಾರತೀಯರಲ್ಲಿ ಏಕತೆ ಇದೆ ಎಂದು ಹೇಳುವ ನಮಗೆ ಜೀವಿ ವೈವಿಧ್ಯವನ್ನು ಅರಿಯುವುದು ಕಷ್ಟವೇನಲ್ಲ. ನಮ್ಮ ಭೂಗ್ರಹದಲ್ಲಿ ವಿವಿಧ ರೀತಿಯ ಜೀವಿಗಳು ಹಾಗೂ ವೈವಿಧ್ಯಮಯ ಜೀವಾವಾಸಗಳಿವೆ. ಹಿಮಾಚ್ಛಾದಿತ ಪರ್ವತಗಳು, ಹಸಿರು ತುಂಬಿದ ಅರಣ್ಯಗಳು, ವಿಶಾಲವಾದ ಸಾಗರಗಳು, ತಿಳಿನೀರಿನ ನದಿ ಸರೋವರಗಳು, ಸುಂದರ ವನರಾಜ ಇರುವ ಕಣಿವೆಗಳು, ಕಣ್ಣಂಚಿನವರೆಗೂ ವಿಸ್ತಾರವಾಗಿರುವ ಹುಲ್ಲುಗಾವಲುಗಳು, ಮುಳ್ಳು ಪೊದೆಗಳಿರುವ ಕುರುಚಲು ಕಾಡುಗಳು, ಬಿಸಿಲ್ಗುದುರೆಗಳ ಮರುಭೂಮಿ ಮುಂತಾದ ಜೀವಾವಾಸಗಳ ಆಗರ ಈ ಭೂಮಿ. ಈ ಎಲ್ಲ ಸ್ಥಳಗಳಲ್ಲಿಯೂ ಯಶಸ್ವಿಯಾಗಿ ಬದುಕಿ ಬಾಳುವ ಲಕ್ಷಾಂತರ ಜೀವಿಪ್ರಭೇದಗಳಿವೆ. ಅವುಗಳ ಗಾತ್ರ, ಆಕಾರ, ರಚನೆ, ವರ್ತನೆ ಮುಂತಾದವುಗಳಲ್ಲಿ ವೈವಿಧ್ಯತೆಯಿದೆ. ಬರಿಗಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳಿಂದ ಹಿಡಿದು ಶಿಲೀಂಧ್ರ, ಶೈವಲ, ಜರಿಗಿಡಗಳು, ಆಲ, ಅಶೋಕ, ಸಿಕೋಯ ಮುಂತಾದ ವೃಕ್ಷಗಳು, ಹೇನು, ಇರುವೆ, ಜೇನು ಮುಂತಾದ ಕೀಟಗಳು, ನವಿಲು, ಕೋಗಿಲೆ, ಕಾಡುಪಾಪ, ಜಿಂಪಾಂಜಿಗಳು ಬೃಹತ್ ಪ್ರಾಣಿಗಳಾದ ತಿಮಿಂಗಿಲಗಳು ಈ ಭೂಮಿಯಲ್ಲಿ ವಾಸಿಸುತ್ತಿವೆ.

ಸಾಮಾನ್ಯವಾಗಿ ಈ ಭೂಗ್ರಹದಲ್ಲಿ ಜೀವಿಸಿರುವ ವಿವಿಧ ರೀತಿಯ ಜೀವಿಗಳು ಇರುವ ಶ್ರೀಮಂತಿಕೆಯನ್ನು ಜೀವಿ ವೈವಿಧ್ಯವೆಂದು ಕರೆಯುವರು. ಜೀವಿ ವೈವಿಧ್ಯವೆನ್ನುವ ಪದದ ಬಳಕೆ 1980ರಿಂದ ಈಚೆಗೆ ಹೆಚ್ಚಾಗಿದೆ.

ಜೀವಿ ವೈವಿಧ್ಯದ ಪದದ ಅರ್ಥವನ್ನು ಇತ್ತೀಚೆಗೆ ವಿಜ್ಞಾನಿಗಳು ಮತ್ತಷ್ಟು ವಿಸ್ತರಿಸಿದ್ದಾರೆ. ಜೀವಿ ವೈವಿಧ್ಯವು ಈಗ ಕೇವಲ ಪ್ರಭೇದಗಳ ಶ್ರೀಮಂತಿಕೆಗೆ ಮಾತ್ರ ಬಳಕೆಯಾಗುತ್ತಿಲ್ಲ. ಈಗ ಪ್ರತಿ ಪ್ರಭೇದದ ಸದಸ್ಯರ ನಡುವೆ ಇರುವ ವ್ಯತ್ಯಾಸಗಳ ಶ್ರೀಮಂತಿಕೆಗೆ, ಜೆನರಾ ಗುಂಪಿಗೆ ಸೇರಿದ ಪ್ರಭೇದಗಳಲ್ಲಿನ ಅನುವಂಶೀಯ ಶ್ರೀಮಂತಿಕೆಗೆ, ವಿವಿಧ ಜೀವಿ ಸಮೂಹಗಳಲ್ಲಿನ ವ್ಯತ್ಯಾಸದ ಶ್ರೀಮಂತಿಕೆಗೆ ಹಾಗೂ ವಿವಿಧ ಜೀವಾವಾಸಗಳ ಶ್ರೀಮಂತಿಕೆಗೆ ಜೀವಿ ವೈವಿಧ್ಯ ಎನ್ನುವರು. ಆದ್ದರಿಂದ ಜೀವಿ ವೈವಿಧ್ಯವನ್ನು ಮೂರು ಹಂತಗಳಲ್ಲಿ ಅಧ್ಯಯನ ಮಾಡುತ್ತಾರೆ. 1. ಪ್ರಭೇದ ವೈವಿಧ್ಯ 2. ಅನುವಂಶೀಯ ವೈವಿಧ್ಯ ಮತ್ತು 3. ಪರಿಸರ ವ್ಯವಸ್ಥೆಯ ವೈವಿಧ್ಯ.

 

ಪ್ರಬೇಧ ವೈವಿಧ್ಯ

ಭೂಮಿಯಲ್ಲಿರುವ ವಿವಿಧ ರೀತಿಯ ಪ್ರಭೇದಗಳ ಶ್ರೀಮಂತಿಕೆಗೆ ಪ್ರಬೇಧ ವೈವಿಧ್ಯ (Species diversity) ಎನ್ನುತ್ತಾರೆ. ಕಣ್ಣಿಗೇ ಕಾಣದ ವೈರಸ್ಸುಗಳು, ಬ್ಯಾಕ್ಟೀರಿಯ, ಏಕಾಣು ಜೀವಿಗಳು ಈ ಭೂಮಿಯಲ್ಲಿ ಅಪಾರವಾಗಿವೆ. ಇವೆಲ್ಲವನ್ನು ನಾವು ಸಾಮಾನ್ಯವಾಗಿ ಸೂಕ್ಷ್ಮ ಜೀವಿಗಳೆಂದು ಕರೆಯುತ್ತೇವೆ. ಶೈವಲಗಳು, ಶಿಲೀಂದ್ರಗಳು, ಜರಿಗಿಡಗಳು, ಅನಾವೃತ ಬೀಜದ ಸಸ್ಯಗಳು, ಆವೃತ ಬೀಜವಿರುವ ಗಿಡ ಮರ ಬಳ್ಳಿಗಳು ಸಸ್ಯ ಸಾಮ್ರಾಜ್ಯಕ್ಕೆ ಸೇರುತ್ತವೆ. ಮೂಳೆಯಿಲ್ಲದ ಪ್ರಾಣಿಗಳಾದ ಸ್ಪಂಜುಗಳು, ಕುಟುಕ ಕಣವಂತಗಳು, ಚಪ್ಪಟೆ ಹುಳಗಳು, ಎರೆಹುಳದಂತಹ ವಲಯವಂತಗಳು, ಜಿರಲೆ, ಸೊಳ್ಳೆ ಮುಂತಾದ ಸಂಧಿಪದಿಗಳು, ಬಸವನ ಹುಳು, ಕಪ್ಪೆಚಿಪ್ಪು, ಅಷ್ಠಪದಿಯಂತಹ ಮೃದ್ವಂಗಿಗಳು ಹಾಗೂ ನಕ್ಷತ್ರ ಮೀನು, ಕಡಲ ಪೋರದಂತಹ ಕಂಟಕ ಚರ್ಮಿಗಳ ಲಕ್ಷಾಂತರ ಪ್ರಭೇದಗಳು ಇಲ್ಲಿವೆ. ಅಲ್ಲದೆ ಕಶೇರುಕ ಅಂದರೆ ಮೂಳೆಯಿರುವ ಪ್ರಾಣಿಗಳಾದ ಮೀನು, ಕಪ್ಪೆ, ಹಲ್ಲಿ, ಹಾವು, ಪಕ್ಷಿ, ಸಸ್ತನಿಗಳಾದ ನರಿ, ಆನೆ, ಹುಲಿ, ಸಿಂಹ ಮುಂತಾದವು ವಿಪುಲವಾಗಿದೆ.

ಜೀವ ವಿಜ್ಞಾನಿಗಳು ಇದುವರೆವಿಗೆ 14 ಲಕ್ಷ ಪ್ರಭೇದಗಳನ್ನು ಗುರುತಿಸಿದ್ದಾರೆ. ಪ್ರತಿ ದಿನ ಪ್ರಪಂಚದ ಒಂದಲ್ಲ ಒಂದು ಮೂಲೆಯಿಂದ ಹೊಸ ಪ್ರಭೇದಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ವಾಸ್ತವವಾಗಿ ಈ ಭೂಮಿಯಲ್ಲಿ ಎಷ್ಟು ಪ್ರಭೇದಗಳಿವೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರು ಇಲ್ಲಿ 50 ಲಕ್ಷ ಪ್ರಭೇದಗಳಿರಬಹುದೆಂದು ಅಂದಾಜು ಮಾಡಿದ್ದಾರೆ. ಮತ್ತೆ ಕೆಲವು ವಿಜ್ಞಾನಿಗಳು 800 ಲಕ್ಷ ಪ್ರಭೇದಗಳಿರಬಹುದೆಂದು ಲೆಕ್ಕಾಚಾರ ಹಾಕಿದ್ದಾರೆ! ಬಹುಶಃ 300 ಲಕ್ಷ ಪ್ರಭೇದಗಳು ಇಲ್ಲಿರಬಹುದು. ಉಷ್ಣವಲಯದಲ್ಲಿ ಕಾರ್ಯನಿರತನಾಗಿರುವ ಕೀಟ ತಜ್ಞ ಟೆರಿ ಇರ್ವಿನ್ ಪ್ರಕಾರ ಉಷ್ಣವಲಯದ ಮಳೆಕಾಡುಗಳಲ್ಲಿಯೇ ಸುಮಾರು 300 ಲಕ್ಷ ಕೀಟ ಪ್ರಭೇದಗಳಿರಬಹುದು! ಶಿಲೀಂಧ್ರಗಳಲ್ಲಿಯೂ ಪ್ರಭೇದಗಳ ಸಂಖ್ಯೆ ಅಗಾಧವಾಗಿದೆ.

ಮಳೆಕಾಡುಗಳಲ್ಲಿ ದೊಡ್ಡದಾದ ಸಸ್ಯ ಹಾಗೂ ಪ್ರಾಣಿ ಪ್ರಭೇದಗಳನ್ನು ನಿರಂತರವಾಗಿ ಕಂಡುಹಿಡಿಯಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಅಮೆಜಾನ್ ಪ್ರದೇಶದಿಂದ 300ಕ್ಕೂ ಹೆಚ್ಚು ಹೊಸ ಪ್ರಭೇದಗಳನ್ನು ಗುರುತಿಸಲಾಗಿದೆ. ಕೇರಳದ ಮೌನ ಕಣಿವೆಯಲ್ಲಿ ಇತ್ತೀಚೆಗೆ ಚಿಟ್ಟೆಯ ಹೊಸ ಪ್ರಭೇದಗಳನ್ನು ಗುರುತಿಸಲಾಯಿತು. ಮಳೆಕಾಡುಗಳಲ್ಲಿರುವ ಹೂಬಿಡುವ ಸಸ್ಯಗಳಲ್ಲಿ ಗೊತ್ತಿಲ್ಲದ ಪ್ರಭೇದಗಳ ಸಂಖ್ಯೆ 15,000ರಿಂದ 20,000 ಎಂದು ಅಂದಾಜು ಮಾಡಿದ್ದಾರೆ. ಮಳೆಕಾಡುಗಳಲ್ಲಿರುವ ಸೇಕಡಾ 5ರಷ್ಟು ಪ್ರಭೇದಗಳನ್ನು ಮಾತ್ರ ಇದುವರೆವಿಗೆ ಗುರುತಿಸಿರಬಹುದು. ಪ್ರಪಂಚದಲ್ಲಿರುವ ಎಲ್ಲ ಪ್ರಭೇದಗಳನ್ನು ಗುರುತಿಸಿ, ಹೆಸರಿಸಲು ಕನಿಷ್ಠ 25,000 ವರ್ಗೀಕರಣ ಜೀವಶಾಸ್ತ್ರಜ್ಞರು ಬೇಕಾಗುತ್ತಾರೆ. ಆದರೆ ಇಂದು ಕೇವಲ 1500 ತಜ್ಞರಿದ್ದಾರೆ. ಒಂದು ವೇಳೆ ಅಷ್ಟು ಜನ ತಜ್ಞರನ್ನು ಸಿದ್ಧಪಡಿಸಿದರೂ ಸಹ ಅವರಿಗೆ ಪ್ರಭೇದಗಳನ್ನು ಗುರುತಿಸಿ, ಹೆಸರಿಸುವುದಕ್ಕೇ 30-40 ವರ್ಷಗಳು ಬೇಕಾಗುತ್ತವೆ! ಆದರೆ ಇಂದು ಮನುಷ್ಯನ ಚಟುವಟಿಕೆಗಳಿಂದ ಪ್ರತಿ ದಿನ 50-100 ಪ್ರಭೇದಗಳು ನಶಿಸುತ್ತಿವೆ. ಇನ್ನು ಮೂರು ವರ್ಷಗಳಲ್ಲಿ ಭೂಮಿಯಲ್ಲಿರುವ 10 ಲಕ್ಷ ಪ್ರಭೇದಗಳು ನಶಿಸಿಹೋಗುತ್ತವೆ ಎಂದು ಅಂದಾಜು ಮಾಡಲಾಗಿದೆ!

 

ಅನುವಂಶೀಯ ವೈವಿಧ್ಯ

ಪ್ರತಿ ಪ್ರಭೇದದ ಸದಸ್ಯರ ನಡುವೆ ಹಾಗೂ ಪ್ರತಿ ಜೆನರಾದ ಒಳಗಿರುವ ಪ್ರಭೇದಗಳ ನಡುವೆ ಇರುವ ಅನುವಂಶೀಯ ವ್ಯತ್ಯಾಸವನ್ನು ಅನುವಂಶೀಯ ವೈವಿಧ್ಯ (Genetic diversity) ಎನ್ನುವರು. ಎಲ್ಲ ಪ್ರಭೇದದ ಸದಸ್ಯರ ನಡುವೆ ಸ್ವಲ್ಪವಾದರೂ ಅನುವಂಶೀಯ ವ್ಯತ್ಯಾಸಗಳಿರುತ್ತವೆ. ಉದಾಹರಣೆಗೆ ಭಾರತದಲ್ಲಿ 94 ಕೋಟಿಗೂ ಹೆಚ್ಚು ಜನರಿದ್ದರೂ ಸಹ ಯಾರೇ ಇಬ್ಬರು ಒಂದೇ ರೀತಿಯಿರುವುದಿಲ್ಲ. ಒಬ್ಬೊಬ್ಬರ ಮುಖ ಚರ್ಯೆಯೂ ಒಂದೊಂದು ರೀತಿ. ಒಬ್ಬ ಸೂಕ್ಷ್ಮ ಪ್ರವೃತ್ತಿಯವನಾಗಿರಬಹುದು; ಮತ್ತೊಬ್ಬ ಒರಟನಿರಬಹುದು. ಅದೇ ರೀತಿ ಒಂದೇ ಪ್ರಭೇದಕ್ಕೆ ಸೇರಿದ ಸಸ್ಯಗಳಲ್ಲಿಯೂ ಅನುವಂಶೀಯ ವ್ಯತ್ಯಾಸವಿರುತ್ತದೆ. ಭತ್ತದ ಪ್ರಭೇದ ಒರೈಜ ಸಟೈವ (Oryza sativa) ತಳಿಯೊಂದರಲ್ಲಿಯೇ 70,000 ಉಪತಳಿಗಳನ್ನು ಗುರುತಿಸಲಾಗಿದೆ. ಒಂದು ಉಪತಳಿಯು ರೋಗಕ್ಕೆ ಬೇಗ ತುತ್ತಾಗುವ ಗುಣ ಹೊಂದಿದ್ದರೆ, ಮತ್ತೊಂದು ರೋಗ ನಿರೋಧಕ ಗುಣ ಹೊಂದಿರಬಹುದು. ಅದೇ ರೀತಿ ಒಂದು ಜೆನರಕ್ಕೆ ಸೇರಿರುವ ಹಲವು ಪ್ರಭೇದಗಳಲ್ಲಿ ಅನುವಂಶೀಯ ವ್ಯತ್ಯಾಸವಿರುತ್ತದೆ. ಉದಾಹರಣೆಗೆ ಫೆಲಿಸ್ ಎಂಬ ಜೀನಸ್ (ಜೆನರದ ಏಕವಚನ)ಗೆ ಹುಲಿ, ಸಿಂಹ, ಬೆಕ್ಕುಗಳ ಪ್ರಭೇದಗಳು ಸೇರುತ್ತವೆ. ಹುಲಿ, ಸಿಂಹಗಳ ನಡುವೆ ಸಾಕಷ್ಟು ವ್ಯತ್ಯಾಸಗಳೂ ಇವೆ. ಒರೈಜ ಎಂಬ ಹೆಸರಿನ ಸಸ್ಯ ಜೀನಸ್‌ಗೆ ಸುಮಾರು 22 ಪ್ರಭೇದಗಳಿವೆ.

ಅನುವಂಶೀಯ ವೈವಿಧ್ಯವು ಕೃಷಿ, ತೋಟಗಾರಿಕೆ, ಅರಣ್ಯೀಕರಣ ಹಾಗೂ ಹೈನುಗಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭತ್ತದ ತಳಿಗಳಲ್ಲೇ ವೈವಿಧ್ಯವಿದೆ. ಒಂದು ಉಪತಳಿಯಾದ ದೊಡ್ಡಿ ಭತ್ತ ಬೆಳೆಯುವುದಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ; ಮಳೆಯ ಆಶ್ರಯವೇ ಸಾಕು. ಅದು ದಿಣ್ಣೆ ಹೊಲಗಳಲ್ಲಿಯೇ ಬೆಳೆಯುವುದು. ಮತ್ತೊಂದು ಉಪತಳಿಯು ಬೆಳೆಯಬೇಕಾದರೆ ಕನಿಷ್ಠ 10-12 ಅಡಿಗಳಷ್ಟು ನೀರು ನಿಂತಿರಲೇ ಬೇಕು. ಇದು ಅಸ್ಸಾಂ ರಾಜ್ಯದಲ್ಲಿ ದೊರಕುತ್ತದೆ. ಹೀಗೆ ಒಂದು ತಳಿಯಲ್ಲಿ ಇಳುವರಿ ಹೆಚ್ಚಿದ್ದರೆ ಮತ್ತೊಂದಕ್ಕೆ ರೋಗಗಳ ಬಾದೆ ಇರುವುದಿಲ್ಲ. ಇಂತಹ ವೈವಿಧ್ಯಮಯ ತಳಿಗಳನ್ನು ಆಯ್ಕೆಮಾಡಿ, ಅಡ್ಡಹಾಯಿಸಿ ಕೃಷಿ ವಿಜ್ಞಾನಿಗಳು ಅಧಿಕ ಇಳುವರಿ ನೀಡುವ ಹಾಗೂ ರೋಗಗಳಿಗೆ ಪ್ರತಿರೋಧವಿರುವ ಉತ್ತಮ ತಳಿಗಳನ್ನು ಅಭಿವೃದ್ದಿ ಪಡಿಸುತ್ತಾರೆ. ಇತ್ತೀಚೆಗೆ ಜೈವಿಕ ತಂತ್ರಜ್ಞಾನ ಎಂಬ ನೂತನ ವಿಜ್ಞಾನ ಶಾಖೆ ಬೆಳೆದು ಬಂದಿದೆ. ಇದರ ಸಹಾಯದಿಂದ ಗುಣಲಕ್ಷಣಗಳನ್ನು ನಿರ್ಧರಿಸುವ ಅನುವಂಶೀಯ ಘಟಕಗಳಾದ ಜೀನ್‌ಗಳನ್ನು ಒಂದು ಪ್ರಭೇದದಿಂದ ಮತ್ತೊಂದು ಪ್ರಭೇದಕ್ಕೆ ವರ್ಗಾಯಿಸಬಹುದು. ಈ ವಿಧಾನವನ್ನು ಅನುಸರಿಸುವುದರಿಂದ ಜೈವಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಬಹುದು. ಮನುಷ್ಯನ ಜೀನ್ ಒಂದನ್ನು ಕುರಿಯೊಂದಕ್ಕೆ ವರ್ಗಾಯಿಸಿರುವ ವಾರ್ತೆ ಈಗಾಗಲೇ ಬಂದಿದೆ. ಮನುಷ್ಯನಲ್ಲಿ ಇನ್ಸುಲಿನ್ ಉತ್ಪತ್ತಿ ಮಾಡುವ ಜೀನ್ ಇದೆ. ಮನುಷ್ಯನ ಶರೀರದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದಿದ್ದರೆ, ಆ ವ್ಯಕ್ತಿಗಳಿಗೆ ಸಕ್ಕರೆ ಕಾಯಿಲೆ ಬರುವುದು. ಈಗ ಇನ್ಸುಲಿನ್ ಜೀನನ್ನು ಬ್ಯಾಕ್ಟೀರಿಯಾಗಳಿಗೆ ವರ್ಗಾಯಿಸಿ ಕಡಿಮೆ ಸಮಯದಲ್ಲಿಯೇ ಹೆಚ್ಚು ಇನ್ಸುಲಿನ್ ಉತ್ಪಾದಿಸುತ್ತಿದ್ದಾರೆ. ಇದು ಸಕ್ಕರೆ ಕಾಯಿಲೆಯ ರೋಗಿಗಳಿಗೆ ತುಂಬಾ ಸಹಾಯಕವಾಗಿದೆ. ಇಂತಹ ಕಾರಣಗಳಿಂದಾಗಿ ಹಾಗೂ ಮಾನವನ ಕಲ್ಯಾಣಕ್ಕಾಗಿ ಈ ಜಗತ್ತಿನಲ್ಲಿರುವ ಎಲ್ಲ ಪ್ರಭೇದಗಳು, ಅವುಗಳ ಉಪತಳಿಗಳು ಅಸ್ಥಿತ್ವದಲ್ಲಿರುವ ಅಗತ್ಯವಿದೆ.

 

ಪರಿಸರ ವ್ಯವಸ್ಥೆಯ ವೈವಿಧ್ಯ

ಪ್ರಕೃತಿಯಲ್ಲಿ ಒಂದೊಂದು ರೀತಿಯ ಜೀವಿ ಪ್ರಭೇದಗಳು ಒಂದು ನಿರ್ದಿಷ್ಟವಾದ ಸ್ಥಳಗಳಲ್ಲಿ ಮಾತ್ರ ಜೀವಿಸುತ್ತವೆ. ಉದಾಹರಣೆಗೆ ತೇಗ, ಹೊನ್ನೆ ಮರಗಳು ನಿತ್ಯ ಹಸಿರು ಅಥವಾ ಎಲೆ ಉದುರುವ ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತವೆ. ಅವು ಮರಳುಗಾಡು ಅಥವಾ ಕುರುಚಲು ಕಾಡು ಪ್ರದೇಶಗಳಲ್ಲಿ ಬೆಳೆಯುವುದಿಲ್ಲ. ನಿರ್ಜೀವ ಪರಿಸರದ ಒಂದು ಘಟಕವು ಒಂದೊಂದು ಸ್ಥಳದಲ್ಲಿ ಪ್ರಮುಖವಾಗಿರುತ್ತದೆ. ಉದಾಹರಣೆಗೆ ನದಿ ಸರೋವರಗಳಲ್ಲಿ ನೀರು ಪ್ರಮುಖ ಘಟಕ. ಮರುಭೂಮಿಯಲ್ಲಿ ಮರಳು ಪ್ರಮುಖ ಘಟಕ. ಇಂತಹ ಸ್ಥಳಗಳಲ್ಲಿ ಯಶಸ್ವಿಯಾಗಿ ಜೀವಿಸಬಲ್ಲ ಸಸ್ಯ ಹಾಗೂ ಪ್ರಾಣಿಗಳನ್ನು ನಾವು ನೋಡುತ್ತೇವೆ. ಒಂದು ನಿರ್ದಿಷ್ಟ ರೀತಿಯ ನಿರ್ಜೀವ ಘಟಕಗಳನ್ನು ಹಾಗೂ ಜೀವಿಗಳನ್ನು ಹೊಂದಿರುವ ವ್ಯವಸ್ಥೆಗಳನ್ನು ನಾವು ಪರಿಸರ ವ್ಯವಸ್ಥೆಗಳೆಂದು ಕರೆಯುತ್ತೇವೆ. ಉದಾಹರಣೆಗೆ ಕೊಳ, ಸರೋವರ, ಕಡಲು, ಅರಣ್ಯ, ಮರುಭೂಮಿ ಇತ್ಯಾದಿ. ಹೀಗೆ ಭೂಮಿಯ ಮೇಲಿರುವ ವಿವಿಧ ರೀತಿಯ ಪರಿಸರ ವ್ಯವಸ್ಥೆಗಳ ಶ್ರೀಮಂತಿಕೆಯನ್ನು ಪರಿಸರ ವ್ಯವಸ್ಥೆಯ ವೈವಿಧ್ಯ (Ecosystem diversity) ಎನ್ನುವರು. ಭೂಗ್ರಹದಲ್ಲಿ ಎರಡು ಪ್ರಮುಖ ಪರಿಸರ ವ್ಯವಸ್ಥೆಗಳನ್ನು ಗುರುತಿಸುತ್ತಾರೆ. ಅವೇ ಜಲ ಪರಿಸರ ವ್ಯವಸ್ಥೆ ಹಾಗೂ ಭೂ ಪರಿಸರ ವ್ಯವಸ್ಥೆ. ಇವೆರಡರೊಳಗೆ ನೂರಾರು ಪರಿಸರ ವ್ಯವಸ್ಥೆಗಳಿರುತ್ತವೆ. ಉದಾಹರಣೆಗೆ ಅರಣ್ಯ ವ್ಯವಸ್ಥೆಯೊಳಗೆ ನಿತ್ಯ ಹಸಿರಿನ ಅರಣ್ಯ, ಎಲೆ ಉದುರುವ ಅರಣ್ಯ, ಸೂಜಿ ಮರಗಳ ಅರಣ್ಯ, ಕಣಿವೆ ಅರಣ್ಯ ಮುಂತಾದವುಗಳಿವೆ. ಅಷ್ಟೇಕೆ ಅರಣ್ಯದ ಒಂದು ಮರದಲ್ಲಿ ನೂರಾರು ಸೂಕ್ಷ್ಮ ಪರಿಸರ ವ್ಯವಸ್ಥೆಗಳಿರುತ್ತವೆ. ಉದಾಹರಣೆಗೆ ಕೊಳೆಯುವ ಬೇರಿನ ಹತ್ತಿರ ವಿಶಿಷ್ಟವಾದ ಜೀವಿ ಸಮುದಾಯವಿರುತ್ತದೆ. ಕಾಂಡದ ತೊಗಟೆಯೊಳಗೆ ಜೀವಿಸುವ ಕೀಟಗಳದೇ ಒಂದು ವ್ಯವಸ್ಥೆಯಿರುತ್ತದೆ. ಕೊಂಬೆ, ರೆಂಬೆಗಳ ಕವಲುಗಳಲ್ಲಿ ವಾಸಿಸುವ ಹುಳ, ಹುಪ್ಪಟೆ, ಪಕ್ಷಿಗಳದೇ ಒಂದು ವ್ಯವಸ್ಥೆಯಿರುತ್ತದೆ. ಈ ಪರಿಸರ ವ್ಯವಸ್ಥೆಗಳು ಹೊಸ ಹೊಸ ಪ್ರಭೇದಗಳ ಸೃಷ್ಟಿಯ ಸ್ಥಳಗಳು. ಒಂದು ಪರಿಸರ ವ್ಯವಸ್ಥೆಯಲ್ಲಿರುವ ಪ್ರಭೇದಗಳು ಬೇರೊಂದು ಪರಿಸರ ವ್ಯವಸ್ಥೆಯಲ್ಲಿ ಬದುಕಲಾರವು. ಸಾಕಷ್ಟು ಮರಗಳಿಲ್ಲದ ಸ್ಥಳದಲ್ಲಿ ಮರಕುಟಿಕ ಪಕ್ಷಿ ಬದುಕಲಾರದು. ಕೊಳ, ಕೆರೆ, ಸರೋವರಗಳಿಲ್ಲದಿದ್ದರೆ ಮೀನು ತಿಂದು ಬದುಕುವ ಮೀಂಚುಳ್ಳಿ ಪಕ್ಷಿ ಉಳಿಯಲಾರದು. ಆದ್ದರಿಂದ ಪರಿಸರ ವ್ಯವಸ್ಥೆಯ ವೈವಿಧ್ಯವನ್ನು ಸಂರಕ್ಷಿಸಿಕೊಳ್ಳುವುದು ಅತ್ಯವಶ್ಯಕ.

ಪರಿಸರ ವ್ಯವಸ್ಥೆಗಳನ್ನು ಮಾನವ ನಿರ್ಮಿತ ಹಾಗೂ ನೈಸರ್ಗಿಕ ಪರಿಸರ ವ್ಯವಸ್ಥೆಗಳೆಂದೂ ವರ್ಗೀಕರಿಸುತ್ತಾರೆ. ಹೊಲ ಗದ್ದೆಗಳು, ತೋಟ, ಉದ್ಯಾನವನ, ತೋಪುಗಳು ಮುಂತಾದವು ಮಾನವ ನಿರ್ಮಿತ ಪರಿಸರ ವ್ಯವಸ್ಥೆಗಳು. ನದಿ, ಸರೋವರ, ಅರಣ್ಯ, ದ್ವೀಪಗಳು, ಹುಲ್ಲುಗಾವಲುಗಳು ಮುಂತಾದವು ನೈಸರ್ಗಿಕ ಪರಿಸರ ವ್ಯವಸ್ಥೆಗಳು.

 

ವಿಕಾಸ ಕ್ರಿಯೆಯೇ ನಿಲ್ಲಬೇಕೇ…?

ಸುಮಾರು ನಾಲ್ಕು ಬಿಲಿಯ (ನಾನೂರು ಕೋಟಿ) ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಜೀವ ಹುಟ್ಟಿತು. ಅಂದಿನಿಂದಲೂ ಕೆಲವು ಪ್ರಭೇದಗಳು ಹುಟ್ಟುತ್ತಿವೆ, ಹಲವು ನಶಿಸುತ್ತಿವೆ. ಜೀವ ಉಗಮವಾದ ನಂತರ ಸುಮಾರು 1.5 ಬಿಲಿಯ (150 ಕೋಟಿ) ವರ್ಷಗಳವರೆಗೆ ಜೀವಿಗಳಲ್ಲಿ ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಹೊಸ ಪ್ರಭೇದಗಳು ಜನ್ಮತಾಳುವ ಕ್ರಿಯೆ ನಿಧಾನವಾಗಿ ಸಾಗುತ್ತಿತ್ತು. ಸುಮಾರು ಎರಡು ಬಿಲಿಯ ವರ್ಷಗಳ ಹಿಂದೆ ಜೀವಿ ವೈವಿಧ್ಯದ ಪ್ರಕ್ರಿಯೆ ಹೆಚ್ಚಲು ಆರಂಭಿಸಿತು. ಮತ್ತೆ ಒಂದು ಬಿಲಿಯ ವರ್ಷಗಳ ನಂತರ ಪ್ರಭೇದಗಳ ವಿಕಾಸ ವೃಕ್ಷವು ಕವಲು, ಕವಲುಗಳಾಗಿ ನೂತನ ಪ್ರಭೇದಗಳು ಅಸ್ಥಿತ್ವಕ್ಕೆ ಬಂದವು. ಹೀಗಾಗಿ, ಇಂದಿನ ಜೀವಿ ವೈವಿಧ್ಯಕ್ಕೆ ಕನಿಷ್ಟ ಪಕ್ಷ ಒಂದು ಬಿಲಿಯ (ಒಂದು ನೂರು ಕೋಟಿ) ವರ್ಷಗಳ ಇತಿಹಾಸವಿದೆ.

ಒಂದು ಪ್ರಭೇದದಿಂದ ಮತ್ತೊಂದು ಪ್ರಭೇದ ಜನ್ಮತಾಳುವುದಕ್ಕೆ ಹಾಗೂ ವೈವಿಧ್ಯಕ್ಕೆ ಮೂರು ಮುಖ್ಯ ಕ್ರಿಯೆಗಳು ನಡೆಯಬೇಕು. ಅವೇ ವಿಕೃತಿ (ಮ್ಯುಟೇಷನ್‌ಗಳು) ಗಳು, ಪುನಸ್ಸಂಯೋಜನೆಗಳು ಮತ್ತು ನೈಸರ್ಗಿಕ ಆಯ್ಕೆ. ವ್ಯಕ್ತಿಗಳ ನಡುವೆ, ಪ್ರಭೇದಗಳ ನಡುವೆ ವೈವಿಧ್ಯ ಬರುವುದಕ್ಕೆ ಈ ಕ್ರಿಯೆಗಳು ಸದಾ ಅಗತ್ಯ. ಜೊತೆಗೆ ಈ ಕ್ರಿಯೆಗಳು ನಡೆಯುವುದಕ್ಕೆ ಮಾನವನೂ ಸಹಾಯ ಮಾಡಬಹುದು. ಇಂದು ಭೂಮಿಯಲ್ಲಿರುವ ಲಕ್ಷಾಂತರ ಪ್ರಭೇದಗಳಿಗೆ ಕಳೆದ ಮೂರು ನೂರು ಕೋಟಿ ವರ್ಷಗಳಿಂದ ನಡೆದಿರುವ ವಿಕಾಸವೇ ಮೂಲ ಕಾರಣ.

ಜೀವಿಗಳು ವಾಸಿಸುವ ಪರಿಸರದಲ್ಲಿ ಉಂಟಾಗುವ ಬದಲಾವಣೆಗಳೇ ವಿಕಾಸಕ್ಕೆ ಚಾಲನೆ ನೀಡುತ್ತವೆ. ಹಿಮಾನಿ, ವಾತಾವರಣದ ಉಷ್ಣತೆಯ ಏರು ಪೇರು, ಅಗ್ನಿಪರ್ವತಗಳಿಂದ ಉಂಟಾಗುವ ಬದಲಾವಣೆ, ಬಾಹ್ಯಾಕಾಶದಿಂದ ಬಂದು ಬೀಳುವ ಉಲ್ಕೆ, ಧೂಮಕೇತುಗಳಿಂದ ಉಂಟಾಗುವ ವಾತಾವರಣದಲ್ಲಿನ ವ್ಯತ್ಯಾಸ, ಧೂಳು ಕವಿಯುವ, ಸೂರ್ಯನೇ ಕಾಣದಾಗುವ, ದೀರ್ಘ ಚಳಿಗಾಲ ಉಂಟಾಗುವ ಸಾಧ್ಯತೆಗಳಿಂದ ಹಾಗೂ ಒಮ್ಮೊಮ್ಮೆ ಸಾಂಕ್ರಾಮಿಕ ರೋಗ, ಬರಗಾಲ, ಪ್ರವಾಹಗಳಿಂದ ಜೀವಿಗಳಲ್ಲಿ ಬದಲಾವಣೆಗಳು ಅನಿವಾರ್ಯವಾಗುತ್ತವೆ. ಆಗ ವಿಕೃತಿಗಳು, ಪುನಸ್ಸಂಯೋಜನೆಗಳು ಜೀವಿಗಳಿಗೆ ಸೂಕ್ತವಾದ ಅನುವಂಶೀಯ ಗುಣಗಳನ್ನು ಒದಗಿಸಬಹುದು. ಅಂತಹ ಸಂದರ್ಭದಲ್ಲಿ ನಡೆಯುವ ನೈಸರ್ಗಿಕ ಆಯ್ಕೆಯಲ್ಲಿ ಉತ್ತಮವಾದ, ಉಪಯುಕ್ತವಾದ ಅನುವಂಶೀಯ ಗುಣ ಲಕ್ಷಣಗಳುಳ್ಳ ಪ್ರಭೇದಗಳು ಉಳಿಯುತ್ತವೆ ಮತ್ತು ಸಂತಾನಕ್ರಿಯೆಯಿಂದ ಕಾಲಚಕ್ರದಲ್ಲಿ ಮುಂದುವರೆಯುತ್ತವೆ. ಯಾವ ಜೀವಿಗಳು, ಪ್ರಭೇದಗಳು ಬದಲಾದ ಪರಿಸರಕ್ಕೆ ಹೊಂದಿಕೊಳ್ಳುವುದಿಲ್ಲವೊ; ಅವು ನೈಸರ್ಗಿಕ ಆಯ್ಕೆಯಲ್ಲಿ ತಿರಸ್ಕರಿಸಲ್ಪಟ್ಟು ನಶಿಸಿ ಹೋಗುತ್ತವೆ. ಹೀಗೆ ನೈಸರ್ಗಿಕ ಆಯ್ಕೆಯ ನಿರಂತರ ಕ್ರಿಯೆಯಿಂದ ಹೊಸ ಪ್ರಭೇದಗಳ ಜನನ, ಹಲವು ಪ್ರಭೇದಗಳ ಮರಣ ಸಾಗುತ್ತಾ ಬಂದಿದೆ. ಈ ಭೂಮಿಯಲ್ಲಿ ಹುಟ್ಟಿ, ಬಾಳಿ ನಶಿಸಿಹೋದ ಎಲ್ಲ ಪ್ರಭೇದಗಳಿಗೆ ಹೋಲಿಸಿದರೆ ಇಂದು ಜೀವಂತವಾಗಿರುವ ಪ್ರಭೇದಗಳ ಪ್ರಮಾಣ ಸೇಕಡ 1ರಷ್ಟು ಮಾತ್ರ. ಮಿಕ್ಕವೆಲ್ಲಾ ನಶಿಸಿವೆ. ದೈತ್ಯ ಡೈನೋಸಾರುಗಳು, ಜೂಲಾನೆಗಳು, ಜರಿಗಿಡಗಳ ಅರಣ್ಯಗಳು ನಶಿಸಿ ಹೋಗಿರುವುದು ನಮಗೆಲ್ಲ ತಿಳಿದಿರುವ ವಿಷಯ.

ಭೂ ಇತಿಹಾಸದಲ್ಲಿ ಪ್ರಭೇದಗಳ ಉಗಮ ಹಾಗೂ ನಾಶ ಅತ್ಯಂತ ಸಹಜವಾದ ಕ್ರಿಯೆ. ಯಾವುದೇ ಒಂದು ಪ್ರಭೇದವೂ 2-3 ಮಿಲಿಯ ವರ್ಷಗಳಿಗಿಂತ ಹೆಚ್ಚು ಮುಂದುವರೆದ ದಾಖಲೆ ಇದ್ದಂತಿಲ್ಲ. ಬದಲಾಗುವ ಪರಿಸರದಂತೆ ಪ್ರಭೇದಗಳೂ ಬದಲಾಗುತ್ತಿವೆ. ಪರಿಸರದಲ್ಲಿ ತೀವ್ರವಾದ ಬದಲಾವಣೆಯಾದರೆ ಪ್ರಭೇದಗಳ ನಾಶದ ಗತಿಯೂ ತೀವ್ರವಾಗಿರುತ್ತದೆ. ಹಾಗಾಗಿ ಕೆಲವೊಮ್ಮೆ ಸಹಸ್ರಾರು ಪ್ರಭೇದಗಳು ಸಾಮೂಹಿಕ ನಾಶಕ್ಕೆ ಒಳಗಾಗಿವೆ. ಸುಮಾರು 250 ಮಿಲಿಯ ವರ್ಷಗಳ ಹಿಂದೆ ಸೇಕಡಾ 44ರಷ್ಟು ಮೀನು ಪ್ರಭೇದಗಳು, ಸೇಕಡಾ 58ರಷ್ಟು ಚತುಷ್ಟಾದಿಗಳ ಪ್ರಭೇದಗಳು ನಶಿಸಿದವು. ಸುಮಾರು 140 ಮಿಲಿಯ ವರ್ಷಗಳ ಹಿಂದೆ ಇದ್ದ ಜುರಾಸಿಕ್ ಯುಗದ ಅಂತ್ಯದಲ್ಲಿ ಡೈನಾಸಾರುಗಳ ಪ್ರಭೇದಗಳು ನಶಿಸಿಹೋದವು. ಇತ್ತೀಚೆಗೆ ಅಂದರೆ ಸುಮಾರು 10,000 ವರ್ಷಗಳ ಹಿಂದೆ ಜೂಲಾನೆ (wooly mammoth)ಗಳು ನಶಿಸಿಹೋದವು.

ವಿಕಾಸದ ಪಥದಲ್ಲಿ ಹುಟ್ಟಿದ ಅನೇಕ ಪ್ರಭೇದಗಳಲ್ಲಿ ಮಾನವ ಪ್ರಭೇದವೂ ಒಂದು. ಮನುಷ್ಯನ ಪೂರ್ವಜರು – ಕಪಿ ಮಾನವರು ಸುಮಾರು ಎರಡು ಮಿಲಿಯ ವರ್ಷಗಳ ಹಿಂದೆ ಕಾಣಿಸಿಕೊಂಡರು. ಒಂದು ಮಿಲಿಯ ವರ್ಷಗಳಲ್ಲಿ ಆದಿಮಾನವನು ವಿಕಾಸವಾಗಿ ವಲಸೆಯ ಪ್ರವೃತ್ತಿಯಿಂದ ಆಫ್ರಿಕ, ಯುರೋಪ್, ಏಷ್ಯಾ ಪ್ರದೇಶಗಳಲ್ಲಿ ವಾಸಿಸತೊಡಗಿದ. ಆದರೂ ಆತ ನಿಸರ್ಗದ ಒಂದು ಭಾಗವಾಗಿ ಬದುಕಿ ಬಾಳುತ್ತಿದ್ದ. ಅನಂತರ ಮನುಷ್ಯನು ಬುದ್ದಿವಂತ ಜೀವಿಯಾದ. ಸುತ್ತಲ ಪರಿಸರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಬಲ್ಲ ಶಕ್ತಿ ಪಡೆದ. ಕೃಷಿ ಪದ್ದತಿಯನ್ನು ಮೈಗೂಡಿಸಿಕೊಂಡ. ಹೈನುಗಾರಿಕೆಯನ್ನೂ ಆರಂಭಿಸಿದ. ಕೃಷಿಯಿಂದ ತನಗೆ ಬೇಕಾದಷ್ಟು ಆಹಾರವನ್ನು ಬೆಳೆದುಕೊಳ್ಳುವ ಸಾಧ್ಯತೆಯನ್ನು ತಿಳಿದ ಮಾನವ ಅರಣ್ಯಗಳನ್ನು ತೆರವು ಮಾಡಿ ಕೃಷಿ ಭೂಮಿಯನ್ನು ವಿಸ್ತರಿಸಿದ. ಸಾಕು ಪ್ರಾಣಿಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾಕಿದ. ಇದರಿಂದ ಪರಿಸರ ವ್ಯವಸ್ಥೆಯಲ್ಲಿ ಮನುಷ್ಯ ಮಧ್ಯ ಪ್ರವೇಶ ಮಾಡಲು ಆರಂಭಿಸಿದ. ಸಿಂಧೂ ನದಿಯ ತೀರದಲ್ಲಿದ್ದ ಹರಪ್ಪ ಮೊಹೆಂಜೊದಾರೊ ಸಂಸ್ಕೃತಿಯು ನಾಶವಾಗಿರುವುದನ್ನು ನಾವು ತಿಳಿದಿದ್ದೇವೆ. ಗಮನಾರ್ಹ ಪ್ರಮಾಣದಲ್ಲಿ ಅರಣ್ಯ ಹಾಗೂ ವನ್ಯಜೀವಿಗಳಿದ್ದ ಆ ಪ್ರದೇಶ ಇಂದು ಅರೆ ಮರುಭೂಮಿಯಾಗಿದೆ.

ಮೆಡಿಟರೇನಿಯನ್ ಭಾಗದಲ್ಲಿ ವಾಸಿಸುತ್ತಿದ್ದ ರೋಮನ್ನರೂ ನಿಸರ್ಗವನ್ನು ಕಡೆಗಣಿಸಿದರು. ಪ್ರಕೃತಿಯ ಸೂಕ್ಷ್ಮ ನಿಯಮಗಳ ಬಗ್ಗೆ ಅನಾದರ, ಮೌಢ್ಯ ಹಾಗೂ ತಿರಸ್ಕಾರ ತೋರಿದ ಕಾರಣದಿಂದ ರೋಮನ್ನರ ನಾಗರೀಕತೆಯೂ ನಾಶವಾಯಿತು.

ಹದಿನಾರನೇ ಶತಮಾನದಿಂದ ಯುರೋಪಿಯನ್ನರು ನಡೆಸಿದ ವಸಾಹತುಶಾಹಿ ಆಡಳಿತದಿಂದ ಹಾಗೂ ಕೈಗಾರಿಕಾ ಕ್ರಾಂತಿಯಿಂದ ಪರಿಸರ ವ್ಯವಸ್ಥೆಗಳ ನಾಶ ತೀವ್ರಗತಿಯಲ್ಲಿ ಸಾಗಿತು. ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ತಂತ್ರಜ್ಞಾನದ ಪ್ರಗತಿ, ಸಾರಿಗೆಯಲ್ಲಿನ ಪ್ರಗತಿ ಹಾಗೂ ಯುದ್ಧಗಳಿಂದಾಗಿ ಪರಿಸರದ ಅವನತಿ ಹಾಗೂ ಪ್ರಭೇದಗಳ ನಾಶ ಅಡೆತಡೆಯಿಲ್ಲದೆ ಮುಂದುವರೆಯಿತು.

ಇಪ್ಪತ್ತನೆಯ ಶತಮಾನದಲ್ಲಿ ಪರಿಸರದ ಅವನತಿ ವೇಗದಲ್ಲಿ ಸಾಗುತ್ತಿದೆ. ಕಳೆದ 150 ವರ್ಷಗಳಲ್ಲಿ ಜಗತ್ತಿನಾದ್ಯಂತ ಸುಮಾರು 10,000 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಗಿದೆ. ಅದಕ್ಕಾಗಿ ಅರಣ್ಯಗಳು, ಹುಲ್ಲುಗಾವಲುಗಳು ನಾಶವಾಗಿವೆ. ಉಷ್ಣವಲಯದ ಕಾಡುಗಳು ಜಗತ್ತಿನ ಭೂ ಪ್ರದೇಶದ ಸೇಕಡ 7ರಷ್ಟು ಮಾತ್ರ ಇದ್ದರೂ, ಇಲ್ಲಿರುವ ಪ್ರಭೇದಗಳ ಸಂಖ್ಯೆಯು ಜಗತ್ತಿನ ಒಟ್ಟು ಪ್ರಭೇದಗಳ ಅರ್ಧದಷ್ಟಿವೆ. ಇಂದು ಈ ಕಾಡುಗಳು ಒಂದು ನಿಮಿಷಕ್ಕೆ ಎರಡುವರೆ ಹೆಕ್ಟೇರಿನಷ್ಟು ನಾಶವಾಗುತ್ತಿವೆ. ಇದರಿಂದಾಗಿ ಒಂದು ವರ್ಷಕ್ಕೆ 15,000ರಿಂದ 50,000 ಪ್ರಭೇದಗಳು ನಶಿಸಿ ಹೋಗುತ್ತಿವೆ. ಕ್ರಿ.ಶ. 1600ರಿಂದ ಈಚೆಗೆ 724 ಪ್ರಭೇದಗಳು ಕಣ್ಮರೆಯಾಗಿರುವ ದಾಖಲೆ ಇದೆ. ಇಂದು ಸುಮಾರು 3,956 ಪ್ರಭೇದಗಳು ವಿನಾಶದ ಅಂಚಿನಲ್ಲಿವೆ, 3,647 ಪ್ರಭೇದಗಳು ನಶಿಸುವ ಸಾಧ್ಯತೆ ಇದೆ ಹಾಗೂ 7,240 ಪ್ರಭೇದಗಳು ಅಪರೂಪವಾಗಿವೆ. ಜೀವಾವಾಸಗಳು ಇಲ್ಲವಾದಾಗ ಪ್ರಭೇದಗಳು ನಶಿಸುವುದರ ಜೊತೆಗೆ ಹೊಸ ಪ್ರಭೇದಗಳ ಹುಟ್ಟಿಗೂ ಕೊನೆಯಾದೀತು!

 

ಜೀವಿ ವೈವಿಧ್ಯಕ್ಕೆ ಕೊನೆಗಾಲ ಬಂದಿದೆಯೇ?

ಕೊಲ್ಲುವುದು ಮನುಷ್ಯ ಲಕ್ಷಣವಲ್ಲ, ಹೆಚ್ಚಳವಲ್ಲವೇ ಅಲ್ಲ;
ಬದುಕುವುದು, ಬದುಕ ಬಿಡುವುದು, ಬೆಳೆವುದು
ಮಾನವತ್ವದ ಮಹತ್ವ ಇಲ್ಲಿ ಇದೆ ತಿಳಿಯೋಣ‘’

ಇಂದು ಪ್ರಪಂಚಾದ್ಯಂತ ಮೂರೂ ರೀತಿಯ ಜೀವಿ ವೈವಿಧ್ಯಕ್ಕೆ ಅಪಾಯ ಉಂಟಾಗುತ್ತಿದೆ. ಪ್ರಭೇದಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಪ್ರಭೇದದ ಸದಸ್ಯರಲ್ಲಿರುವ ವ್ಯತ್ಯಾಸಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಪರಿಸರ ವ್ಯವಸ್ಥೆಗಳೂ ನಾಶ ಹೊಂದುತ್ತಿವೆ. ಜೀವಿ ವೈವಿಧ್ಯದ ನಾಶಕ್ಕೆ ಕಾರಣ ಅನೇಕ. ಅವನ್ನು ನಿಸರ್ಗದತ್ತ ಹಾಗೂ ಮಾನವ ಜನ್ಯ ಕಾರಣಗಳೆಂದು ವಿಂಗಡಿಸಬಹುದು.

ಜೀವ ಪ್ರಭೇದಗಳು ಉಗಮವಾದ ದಿನದಿಂದ ನಿಸರ್ಗದ ಹಲವಾರು ಬೆದರಿಕೆಗಳನ್ನು ಎದುರಿಸಿ ಬದುಕಬೇಕಾಗುವುದು. ಭೂಕಂಪನಗಳಿಂದ ಹಾಗೂ ಭೂಕುಸಿತಗಳಿಂದ ಹಲವಾರು ಜೀವಿಗಳು ಸತ್ತು ಹೋಗುತ್ತವೆ ಮತ್ತು ಭೂಮಿಯ ಪದರದೊಳಗೆ ಮುಚ್ಚಲ್ಪಡುತ್ತವೆ. ಅದೇ ರೀತಿ ಬರಗಾಲ ಬಂದಾಗ ನೀರು ಮತ್ತು ಆಹಾರದ ಕೊರತೆಯಿಂದ ಕೆಲವು ಜೀವಿಗಳು ಸಾವಿಗೆ ಒಳಗಾಗುತ್ತವೆ. ಪ್ರವಾಹ ಬಂದಾಗ ನೀರು ಹರಿಯುವ ಭರಾಟೆಯಲ್ಲಿ ಸಸ್ಯಗಳು ಬುಡಮೇಲಾಗಿ ಕೊಚ್ಚಿಹೋಗುತ್ತವೆ; ಪ್ರಾಣಿಗಳು ಜೀವಿಸಲು ಸ್ಥಳವಿಲ್ಲದೆ ನೀರು ಪಾಲಾಗುತ್ತವೆ. ಕೆಲವೊಮ್ಮೆ ರೋಗಕಾರಕ ಸೂಕ್ಷ್ಮಾಣುಗಳಿಂದ ಸಾಂಕ್ರಾಮಿಕ ರೋಗಗಳು ಹರಡಿ ಲಕ್ಷಾಂತರ ಜೀವಿಗಳು ಒಮ್ಮೆಗೇ ಸತ್ತು ಹೋಗುವುದುಂಟು. ಒಮ್ಮೆ ಭದ್ರಾ ಅರಣ್ಯದಲ್ಲಿನ ಕಾಡುಕೋಣಗಳಿಗೆ ಕಾಲು ಬಾಯಿ ರೋಗ ಸಾಂಕ್ರಾಮಿಕವಾಗಿ ಹಲವಾರು ಕಾಡುಕೋಣಗಳು ಸತ್ತು ಹೋದವು. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಪ್ಲೇಗ್ ಕಾಯಿಲೆ ಸಾಂಕ್ರಾಮಿಕವಾಗಿ ಲಕ್ಷಾಂತರ ಜನ ಸಾವಿಗೆ ಒಳಪಟ್ಟರು. ಸಸ್ಯಗಳಲ್ಲಿ ಪರಾಗ ಸ್ಪರ್ಶ ಕ್ರಿಯೆ ಉಂಟುಮಾಡುವ ಚಿಟ್ಟೆ ಮುಂತಾದವು ಇಲ್ಲದೆ ಹೋದಾಗ ಅಥವಾ ಬೀಜ ಪ್ರಸರಣವನ್ನುಂಟು ಮಾಡುವ ಜೀವಿಗಳು ಇಲ್ಲದೆ ಹೋದಾಗ, ಅವು ಸಾವಿಗೆ ಒಳಗಾಗಬಹುದು. ನಿಸರ್ಗದಲ್ಲಿ ಬದುಕಿ ಉಳಿಯಲು ಪ್ರತಿ ಪ್ರಭೇದವೂ ಮತ್ತೊಂದು ಪ್ರಭೇದದೊಡನೆ ಸ್ಪರ್ಧಿಸಬೇಕು. ಆ ಸ್ಪರ್ಧೆ ಆಹಾರ, ವಸತಿ ಪಡೆಯುವುದಕ್ಕಿರಬಹುದು ಅಥವಾ ಇನ್ನಾವುದೇ ಕಾರಣಕ್ಕಿರಬಹುದು. ಜಿಂಕೆಗಳು ಹುಲಿಗಳಿಂದ ಉಳಿಯಬೇಕಾದರೆ ಓಡಿ ತಪ್ಪಿಸಿಕೊಳ್ಳುವ ಗುಣವನ್ನು ಪಡೆದಿರಲೇಬೇಕು. ಒಮ್ಮೊಮ್ಮೆ ಪ್ರಭೇದ-ಪ್ರಭೇದಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಒಂದು ಪೂರ್ತಿಯಾಗಿ ನಶಿಸಿಹೋಗಬಹುದು. ಆಕ್ರಮಣಕಾರಿ ಪ್ರಭೇದಗಳ ಆಗಮನದಿಂದ ಅಥವಾ ಅತಿವೇಗವಾಗಿ ವೃದ್ದಿಯಾಗುವ ಪ್ರಭೇದಗಳಿಂದ ಜೀವಿ ವೈವಿಧ್ಯ ನಾಶವಾದ ದಾಖಲೆಗಳಿವೆ. ಭೂ ಇತಿಹಾಸದಲ್ಲಿ ಮರಿ ಹಾಕುವ ಉನ್ನತ ಸಸ್ತನಿಗಳು ಬಂದಾಗ ಮೊಟ್ಟೆಯಿಡುವ ಸಸ್ತನಿಗಳು ಹಾಗೂ ಚೀಲವಿರುವ ಸಸ್ತನಿಗಳು ಭಾರತದ ಪ್ರದೇಶದಲ್ಲಿ ಅಳಿದವು.

ಜೀವಿ ವೈವಿಧ್ಯದ ನಾಶಕ್ಕೆ ನಿಸರ್ಗದತ್ತ ಕಾರಣಗಳಿಗಿಂತ ಮಾನವನಿಂದ ಉಂಟಾಗುವ ಕಾರಣಗಳ ಕೊಡುಗೆಯೇ ಹೆಚ್ಚು. ಜೀವಿಗಳು ವಾಸಿಸುತ್ತಿರುವ ಸ್ಥಳಗಳನ್ನು ಮಾನವ ತನ್ನ ವಾಸಕ್ಕೆ, ಕೃಷಿಗೆ, ರಸ್ತೆಗೆ, ಕೈಗಾರಿಕೆಗಳಿಗೆ, ಗಣಿ ಉದ್ಯಮಕ್ಕೆ, ಮುಂತಾದ ಹಲವಾರು ಕಾರಣಗಳಿಗೆ ನಾಶಮಾಡುತ್ತಿದ್ದಾನೆ. ಅಣೆಕಟ್ಟು, ಜಲಾಶಯಗಳ ನಿರ್ಮಾಣದಿಂದ ನಿರ್ಮಿಸಿ ಹರಿವ ನೀರು, ನಿಂತ ನೀರಾಗುತ್ತಿದೆ. ಅರಣ್ಯಗಳು ಮುಳುಗಡೆಯಾಗುತ್ತಿವೆ. ಕಾಫಿ, ಟೀ, ರಬ್ಬರ್, ತೆಂಗು ಮುಂತಾದ ತೋಟಗಾರಿಕೆಗಳಿಂದ ಅರಣ್ಯ ಪ್ರದೇಶದ ವಿಸ್ತಾರ ಕಡಿಮೆಯಾಗುತ್ತಿದೆ. ಬೆಟ್ಟ ಗುಡ್ಡಗಳಿಗೆ, ಅರಣ್ಯಗಳಿಗೆ ದನ, ಕುರಿ, ಮೇಕೆಗಳನ್ನು ಮೇಯಲು ಬಿಟ್ಟು ಸಸ್ಯಗಳ ನಾಶಕ್ಕೆ ಕಾರಣವಾಗಿದ್ದಾನೆ. ಕುರಿ ಮೇಕೆಗಳನ್ನು ಹುಲಿ, ಚಿರತೆ, ಸಿಂಹಗಳು ಹಿಡಿದು ತಿನ್ನುತ್ತವೆ ಎಂಬ ಕಾರಣದಿಂದ ಪಾಲಿಡಾಲ್, ಡಿಡಿಟಿ ಮಂತಾದ ವಿಷಗಳಿಂದ ಅವನ್ನು ಸಾಯಿಸುತ್ತಾನೆ. ಪಟ್ಟಣ, ನಗರಗಳ ವಿಸ್ತರಣೆಯಿಂದಲೂ ಪ್ರಭೇದಗಳು ನಾಶವಾಗುತ್ತಿವೆ.

ನಿಸರ್ಗದತ್ತ ಅಥವಾ ಮಾನವನ ಕಾರಣಗಳಿಂದ ಜೀವಿ ವೈವಿಧ್ಯ ಕುಂದುತ್ತಾ ಹಲವಾರು ಪ್ರಭೇದಗಳು ನಶಿಸಿ ಹೋಗಿವೆ, ಕೆಲವು ಅಪಾಯಕ್ಕೊಳಗಾಗಿವೆ ಮತ್ತೆ ಕೆಲವು ಅಪರೂಪವಾಗಿವೆ. ಇಂತಹ ಜೀವಿ ಪ್ರಭೇದಗಳ ಹೆಸರನ್ನು ಕೆಂಪು ದತ್ತಕ ಪುಸ್ತಕದಲ್ಲಿ (Red data book) ದಾಖಲು ಮಾಡಲಾಗಿದೆ. ಆ ಪ್ರಭೇದಗಳನ್ನು ವಿವಿಧ ಶೀರ್ಷಿಕೆಗಳಡಿಯಲ್ಲಿ ಬರೆದಿಡಲಾಗಿದೆ.

1. ವಿನಾಶವಾದ ಪ್ರಭೇದಗಳು (Extinct species): ಭೂಮಿಯ ಯಾವ ಭಾಗದಲ್ಲಿಯೂ ಜೀವಂತವಾಗಿ ಬದುಕಿರದ ಹಾಗೂ ಅವು ಬದುಕಿದ್ದ ಅಥವಾ ಬದುಕಬಹುದಾದ ಸ್ಥಳಗಳಲ್ಲಿ ಅನೇಕ ಬಾರಿ ಶೋಧಿಸಿದರೂ ಸಿಗದ ಪ್ರಭೇದಗಳು. ಉದಾ: ಡೋಡೋ ಪಕ್ಷಿ.

2. ಅಪಾಯಕ್ಕೊಳಗಾದ ಪ್ರಭೇದಗಳು (Endangered species): ವಿನಾಶದ ಅಪಾಯಕ್ಕೆ ಸಿಲುಕಿರುವ ಹಾಗೂ ಈಗಿರುವ ಪರಿಸ್ಥಿತಿ ಹಾಗೇ ಮುಂದುವರೆದರೆ ಬದುಕುಳಿಯಲು ಸಾಧ್ಯತೆ ಕಡಿಮೆಯಿರುವ ಪ್ರಭೇದಗಳು. ಉದಾ: ಸಿಂಹ, ಹುಲಿ.

3. ಅಪಾಯಕ್ಕೊಳಗಾಗಬಲ್ಲ ಪ್ರಭೇದಗಳು (Threatened species): ಕೆಲವು ಪ್ರಭೇದಗಳು ವಾಸಿಸುವ ಸ್ಥಳದ ಹಾಲಿ ಪರಿಸ್ಥಿತಿ ಹಾಗೆಯೇ ಮಂದುವರೆದರೆ ಅಲ್ಪ ಕಾಲದಲ್ಲಿಯೇ ಅಪಾಯಕ್ಕೊಳಗಾದ ಪ್ರಭೇದಗಳ ಗುಂಪಿಗೆ ಸೇರುವ ಸಾಧ್ಯತೆಗಳಿರುತ್ತವೆ. ಅಂತವನ್ನು ಅಪಾಯಕ್ಕೊಳಗಾಗಬಲ್ಲ ಪ್ರಭೇದಗಳೆಂದು ಕರೆಯುವರು.

4. ಅಪರೂಪದ ಪ್ರಭೇದಗಳು (Rare species): ಪ್ರಪಂಚದಲ್ಲಿ ಪ್ರಭೇದದ ಸದಸ್ಯರ ಸಂಖ್ಯೆ ಕಡಿಮೆಯಿದ್ದು, ಅದು ಅಪಾಯಕ್ಕೊಳಗಾದ ಅಥವಾ ಅಪಾಯ- ಕ್ಕೊಳಗಾಗಬಲ್ಲ ಪ್ರಭೇದವಲ್ಲದಿದ್ದರೂ ಸಹ, ಹಾಗಾಗುವ ಸಾಧ್ಯತೆಯಿರುವ ಪ್ರಭೇದವನ್ನು ಅಪರೂಪದ ಪ್ರಭೇದವೆಂದು ಕರೆಯುವರು.

5. ನಿಖರವಾಗಿ ತಿಳಿಯದ ಪ್ರಭೇದಗಳು: ವಿನಾಶ, ಅಪಾಯಕ್ಕೊಳಗಾದ, ಒಳಗಾಗಬಲ್ಲ ಅಥವಾ ಅಪರೂಪದ ಗುಂಪಿಗೆ ಸೇರಿರಬಹುದೆಂದು ನಂಬಲಾಗಿರುವ ಹಾಗೂ ಮೇಲಿನ ಯಾವ ಗುಂಪಿಗೆ ಸೇರಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲದ ಪ್ರಭೇದಗಳು.

6. ಅಪೂರ್ಣವಾಗಿ ತಿಳಿದಿರುವ ಪ್ರಭೇದಗಳು: ಮಾಹಿತಿ ದೊರಕದ ಕಾರಣ ಮೇಲೆ ಸೂಚಿಸಿದ ಯಾವುದೇ ಗುಂಪಿಗೂ ನಿಖರವಾಗಿ ಸೇರದ, ಆದರೆ ಈ ಬಗ್ಗೆ ಅನುಮಾನವಿರುವ ಪ್ರಭೇದಗಳು.

7. ಅಪಾಯದ ರೇಖೆ ದಾಟಿದ ಪ್ರಭೇದಗಳು: ಮೇಲೆ ತಿಳಿಸಿರುವ ಗುಂಪುಗಳಿಗೆ ಮೊದಲು ಸೇರಿದ್ದ, ಆದರೆ ಈಗ ಅವುಗಳ ಸಂಖ್ಯೆ ಹೆಚ್ಚಾಗಿ, ಸರಿಸುಮಾರು ಈಗ ಸುರಕ್ಷಿತವೆಂದು ಪರಿಗಣಿಸಿರುವ ಪ್ರಭೇದಗಳು.

ವಿಶ್ವ ಪರಿಸರ ಸಂಘಗಳು ಪ್ರಭೇದಗಳನ್ನು ವಿಂಗಡಿಸಿ ಕೆಂಪುದತ್ತಕ ಪುಸ್ತಕದಲ್ಲಿ ದಾಖಲಿಸುತ್ತವೆ.

ಮಾನವನನ್ನು ಬಿಟ್ಟು ಮತ್ತಾವುದೇ ಒಂದು ಪ್ರಭೇದ ಭೂಗ್ರಹದ ಎಲ್ಲ ಪ್ರಭೇದ ಹಾಗೂ ಪರಿಸರ ಸ್ಥಿತಿಯ ಮೇಲೆ ದಟ್ಟ ಪ್ರಭಾವ ಬೀರಿದ ಉದಾಹರಣೆ ಮತ್ತೊಂದಿಲ್ಲ. ಮಾನವ ಇಂದು ಕೃಷಿ, ಕೈಗಾರಿಕೆ, ನಗರೀಕರಣ, ಅರಣ್ಯನಾಶ, ಹೈನುಗಾರಿಕೆ ಮುಂತಾದ ಚಟುವಟಿಕೆಗಳಿಗಾಗಿ ಭೂಗ್ರಹದ ವಾರ್ಷಿಕ ದ್ಯುತಿ ಸಂಶ್ಲೇಷಣೆಯ ಒಟ್ಟು ಉತ್ಪಾದನೆಯ ಸೇಕಡ 40ರಷ್ಟನ್ನು ಬಳಸುತ್ತಿದ್ದಾನೆ. ಭೂಮಿಯಲ್ಲಿ ಉತ್ಪಾದನೆಯಾಗುತ್ತಿರುವ ಆಹಾರದಲ್ಲಿ 2/5 ಭಾಗವನ್ನು ಮನುಷ್ಯನೇ ಕಬಳಿಸುತ್ತಿದ್ದಾನೆ. ಇದರಿಂದ ಜೀವಿ ವೈವಿಧ್ಯಕ್ಕೆ ನಿಜವಾದ ಕುತ್ತು ಬರಲಿದೆ.

ಮಾನವನ ದುಷ್ಟತನ ಹಾಗೂ ದುರಾಸೆಯಿಂದಾಗಿ ಇಂದು ಜಗತ್ತಿನ ಎಲ್ಲ ಪರಿಸರ ವ್ಯವಸ್ಥೆಗಳೂ ಅಪಾಯದಲ್ಲಿವೆ. ಹೊಸ ಪ್ರಭೇದಗಳ ಉಗಮದಲ್ಲಿ ಪರಿಸರ ವ್ಯವಸ್ಥೆಗಳ ಪಾತ್ರ ನಿರ್ಣಾಯಕವಾದುದು. ಇಂದು ಹವಳದ ಕ್ಷೇತ್ರಗಳು, ಪ್ರಾಚೀನ ಸರೋವರಗಳು, ಉಷ್ಣವಲಯದ ಕಾಡುಗಳು ತೀವ್ರ ಆಘಾತಕ್ಕೆ ಒಳಗಾಗಿವೆ. `ಜೀವದ ಗರ್ಭಗಳೆಂದೇ ಹೆಸರಾಗಿದ್ದ ಈ ಸ್ಥಳಗಳು ನಶಿಸುತ್ತಿರುವುದು ಶೋಚನೀಯ ಸಂಗತಿ.

ಬರುವ 20 ವರ್ಷಗಳಲ್ಲಿ ಭೂಮಿಯ ಮೇಲಿರುವ 1/5 ಭಾಗ ಸಸ್ಯ ಪ್ರಭೇದಗಳು ಕಣ್ಮರೆಯಾಗುವವು. ಸಸ್ಯ ಪ್ರಭೇದಗಳು ನಾಶವಾದರೆ, ಅವನ್ನು ಅವಲಂಬಿಸಿ ಬದುಕುವ ಪ್ರಾಣಿ ಹಾಗೂ ಇತರ ಪ್ರಭೇದಗಳೂ ಅನಿವಾರ್ಯವಾಗಿ ನಶಿಸುತ್ತವೆ. ಇದರಿಂದ ಪ್ರಕೃತಿಯ ಸಂಪನ್ಮೂಲದ ಅಡಿಪಾಯವೇ ಇಲ್ಲವಾಗುತ್ತದೆ. ವಿಕಾಸದ ಕ್ರಿಯೆಗಳಿಗೆ ಮೂಲ ಸಾಮಗ್ರಿಯೇ ಇಲ್ಲವಾಗುತ್ತದೆ. ಹಾಗಾಗಿ ಜೀವಿ ವೈವಿಧ್ಯದ ಹುಟ್ಟಿಗೇ ಕೊನೆ ಉಂಟಾಗುವುದು.