ಒಂದು ಅಳಿದರೆ ಉಳಿದುದೆಲ್ಲ ಮುಕ್ಕು‘’fcs1
– ಎಂ. ಗೋಪಾಲಕೃಷ್ಣ ಅಡಿಗ

 

“ನಾವಿಲ್ಲದ ರಾಜ್ಯವಿರಲಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಎಲ್ಲ ಅರಣ್ಯಗಳಲ್ಲಿಯೂ ವಿಹರಿಸುತ್ತಾ ವನರಾಜನೆಂಬ ಬಿರುದನ್ನೇ ನಾವು ಪಡೆದಿದ್ದೆವು. ಶಕ್ತಿಯ ಸಂಕೇತವಾದ ಕಾಳಿಕಾದೇವಿಯ ವಾಹನವೆಂದು ನಮ್ಮನ್ನು ಜನ ಭಾವಿಸಿದ್ದರು. ಧೈರ್ಯ, ಶೌರ್ಯಕ್ಕೆ ನಮ್ಮನ್ನು ಮನುಷ್ಯರು ಉಪಮೆಯಾಗಿ ಬಳಸುತ್ತಿದ್ದುದುಂಟು. ಭಾರತಕ್ಕೆ ಸ್ವಾತಂತ್ರ್ಯ ಬಂದು ಕೆಲವು ದಶಕಗಳಾಗುವವರೆಗೂ ನಮ್ಮನ್ನು `ರಾಷ್ಟ್ರೀಯ ಪ್ರಾಣಿ‘ ಎಂದು ಗೌರವಿಸುತ್ತಿದ್ದರು. ಆದರೆ ನಾವು ವಾಸಿಸುತ್ತಿದ್ದ ಅರಣ್ಯಗಳನ್ನು ಜನ ಕಡಿದರು, ಉದ್ಯಮ, ತೋಟಗಳನ್ನು ನಿರ್ಮಿಸಿದರು. ನಮ್ಮ ತಲೆಗಳನ್ನೂ ಕಡಿದುರುಳಿಸಿ ಮನೆ, ಮಹಲುಗಳಲ್ಲಿ `ಸೌಂದರ್ಯ‘ಕ್ಕಾಗಿ ನೇತುಹಾಕಿದರು. ವಿನೋದಕ್ಕೆ, ಪ್ರತಿಷ್ಠೆಗೆ, ಹಣದ ದುರಾಸೆಗೆ ನಮ್ಮನ್ನು ಬೇಟೆಯಾಡಿದರು. ನಮ್ಮ ಚರ್ಮ, ಮೂಳೆ, ಉಗುರುಗಳಲ್ಲಿ ಔಷಧವಿದೆ ಎಂಬ ಮೌಢ್ಯಕ್ಕೆ ಒಳಗಾಗಿ ನಮ್ಮನ್ನು ನಿರ್ದಯವಾಗಿ ಕೊಂದರು…‘’

“ವಿಪುಲವಾಗಿದ್ದ ನಮ್ಮ ಸಂಖ್ಯೆ ದಿನದಿನಕ್ಕೆ ಕ್ಷೀಣಿಸಿತು. ನಾವು ವಾಸಿಸುತ್ತಿದ್ದ ಕ್ಷೇತ್ರ ಕಿರಿದಾಯಿತು. ಎಲ್ಲ ರಾಜ್ಯಗಳಲ್ಲಿದ್ದ ನಾವು ಕೆಲವೇ ರಾಜ್ಯಗಳಿಗೆ, ಅರಣ್ಯಗಳಿಗೆ ಸೀಮಿತರಾದೆವು. ಈಗ ಕೆಲವೇ ರಕ್ಷಿತ ಅರಣ್ಯಧಾಮ ಮತ್ತು ಮೃಗಾಲಯಗಳಲ್ಲಿ ಬಿಗಿ ಉಸಿರು ಹಿಡಿದು ಜೀವಿಸುತ್ತಿದ್ದೇವೆ. `ರಾಷ್ಟ್ರೀಯ ಪ್ರಾಣಿ‘ ಎಂಬ ಬಿರುದನ್ನು ಕಿತ್ತು ಹಾಕಿದ್ದಾರೆ. ಬೋನಿನಲ್ಲಿ ಕುಳಿತು, ಮನುಷ್ಯ ಎಸೆಯುವ ಎಂಜಲು ಮಾಂಸಕ್ಕೆ ಕಾದು ಕುಳಿತಿರುವ ನಮ್ಮನ್ನು ನೋಡುವವರು ಮಾಜಿ ವನರಾಜ ಎಂದು ಚುಚ್ಚಿ ನುಡಿಯುತ್ತಾರೆ. ಈ ಬಡಕಲು ಪ್ರಾಣಿ ಶೌರ್ಯದ ಪ್ರತೀಕವೇ ಎಂದು ಬಾಲಕರು ನುಡಿದಾಗ ನಮ್ಮ ಹೃದಯ ಹಿಂಡಿದಂತಾಗುತ್ತದೆ. ಹೀಗೆ ಮುಂದುವರೆದರೆ ನಮ್ಮ ಸಂತತಿಯು ಇಂದೊ, ನಾಳೆಯೋ ನಾಶವಾಗಲಿದೆ. ನಮ್ಮ ಅಳಲನ್ನು ಕೇಳುವರಾರು?’’

ಇದು ಕೇವಲ ವನರಾಜನಾಗಿದ್ದ ಸಿಂಹದ ರೋಧನವಲ್ಲ. ಆನೆ, ಚಿರತೆ, ಶ್ರೀಗಂಧ, ಹೆಬ್ಬಾವು, ಹುಲಿ ಮುಂತಾದ ಸಹಸ್ರ ಸಹಸ್ರ ಜೀವಿಗಳು ಇಂದು ಮೌನವಾಗಿ ರೋಧಿಸುತ್ತಿವೆ. ಹಾರುವ ಅಳಿಲು, ಸಿಂಗಳೀಕ, ಪಾಂಡ, ಕೃಷ್ಣ ಮೃಗ, ಘೇಂಡಾ ಮೃಗ, ಬಿದಿರು ಮುಂತಾದ ಜೀವಿಗಳು ವಿನಾಶದ ಅಂಚಿಗೆ ಸಾಗುತ್ತಿವೆ. ಡುಡೊ, ಕಂದು ತಲೆಯ ಬಾತುಕೋಳಿ ಈಗಾಗಲೇ ನಶಿಸಿವೆ. ಭೂಮಿಯ ಮೇಲೆ ವಾಸಿಸುವ ವಿವಿಧ ಜೀವ ಜಾತಿಗಳನ್ನು ಶಾಸ್ತ್ರೀಯವಾಗಿ ಪ್ರಭೇದ (species) ಎನ್ನುವರು. ಯಾವುದೇ ಒಂದು ಪ್ರಭೇದದ ಸದಸ್ಯರು ಆಕಾರ, ರಚನೆಯಲ್ಲಿ ಒಂದೇ ರೀತಿಯಲ್ಲಿದ್ದು, ಅದರ ಗಂಡು – ಹೆಣ್ಣು ಕೂಡಿದರೆ ಸಂತಾನ ಶಕ್ತಿಯುಳ್ಳ ಮರಿಗಳು ಹುಟ್ಟುತ್ತವೆ. ಉದಾಹರಣೆಗೆ, ಭೂಮಿಯಲ್ಲಿರುವ ಎಲ್ಲ ಮನುಷ್ಯರು ಒಂದು ಪ್ರಭೇದವಾಗಿದ್ದಾರೆ. ಮಾನವ ಪ್ರಭೇದವನ್ನು ವೈಜ್ಞಾನಿಕವಾಗಿ ಹೊಮೊ ಸೆಪಿಯನ್ (Homo sapiens) ಎಂದು ಕರೆಯುವರು. ಅದೇ ರೀತಿ ಶ್ರೀಗಂಧದ ಮರ (Santalum album) ಒಂದು ಪ್ರಭೇದ. ಕುದುರೆಗಳೆಲ್ಲ ಮತ್ತೊಂದು ಪ್ರಭೇದ. ಆನೆಗಳೆಲ್ಲ ಮಗದೊಂದು ಪ್ರಭೇದ. ಇಂತಹ ಪ್ರಭೇದಗಳು ಈ ಭೂಮಿಯಲ್ಲಿ ಅಂದಾಜು ಒಂದು ಕೋಟಿಯಿಂದ ಮೂರು ಕೋಟಿಯವರೆಗೆ ಇರಬಹುದು. ವಿಜ್ಞಾನಿ ಪೀಟರ್ ರಾವೆನ್‌ರ ಪ್ರಕಾರ ಮನುಷ್ಯನ ಚಟುವಟಿಕೆಯಿಂದಾಗಿ ಪ್ರತಿ ದಿನ ಒಂದು ನೂರು ಜೀವಿ ಪ್ರಭೇದಗಳು ನಶಿಸಿ ಹೋಗುತ್ತಿವೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಲ್ಸನ್‌ರ ಹೇಳಿಕೆಯಂತೆ ಪ್ರತಿ ದಿನ 50 ಪ್ರಭೇದಗಳು ನಾಶವಾಗುತ್ತಿವೆ. ಮಾನವನ ವಿನಾಶ ಪ್ರವೃತ್ತಿ ಹೀಗೆಯೇ ಮುಂದುವರೆದರೆ ಬರುವ 25 ವರ್ಷಗಳಲ್ಲಿ ಪ್ರಪಂಚದಲ್ಲಿರುವ ಸೇಕಡಾ 25ರಷ್ಟು ಜೀವಿ ಪ್ರಭೇದಗಳು ನಶಿಸುತ್ತವೆ! ಪ್ರಕೃತಿಯಲ್ಲಿ ನಡೆಯುವ ವಿನಾಶದ ಸಹಜ ಕ್ರಿಯೆಗೆ ಹೋಲಿಸಿದರೆ, ಮಾನವನ ಚಟುವಟಿಕೆಯಿಂದ ಈ ವಿನಾಶದ `ಪ್ರಗತಿ‘ 40,000ಪಟ್ಟು ಹೆಚ್ಚಿದೆ!!

ಜೀವಿ ಪ್ರಭೇದಗಳ ಸಾಮೂಹಿಕ ಹತ್ಯೆಯನ್ನು ನಾವು ಹಗುರವಾಗಿ ಪರಿಗಣಿಸುವಂತಿಲ್ಲ. ಈ ಭೂಮಿಯ ಮೇಲೆ ಮಾನವ ವಿಕಾಸವಾಗುವ ಪೂರ್ವದಿಂದಲೂ ವೈವಿಧ್ಯಮಯ ಸಸ್ಯರಾಶಿಗಳು ಜೀವ ಜಂತುಗಳು ಇಲ್ಲಿ ವಾಸಿಸುತ್ತಿವೆ. ಅವು ವಾಸಿಸುವ ವಿಶಿಷ್ಟ ಪರಿಸರ ತಾಣಗಳು ಭೂಮಿಯಲ್ಲಿವೆ. ಅವುಗಳ ಚಟುವಟಿಕೆ ಹಾಗೂ ಇರುವಿಕೆಯಿಂದ ಜಗತ್ತಿನ ನಿರ್ಜೀವ ಹಾಗೂ ಸಜೀವ ವಸ್ತುಗಳ ನಡುವೆ ಸೂಕ್ಷ್ಮವಾದ ಸಂಬಂಧ, ಸಮತೋಲನ ಹಾಗೂ ಪರಸ್ಪರ ಅವಲಂಬನೆ ಇದೆ. ಮಾನವನ ಅಸ್ಥಿತ್ವಕ್ಕೂ ಎಲ್ಲ ಜೀವಿಗಳ ಕೊಡುಗೆ ಇದೆ. ಪ್ರತಿ ಪ್ರಭೇದದ ಕೊಡುಗೆಯೂ ಅನನ್ಯ. ಕೆಲವೊಮ್ಮೆ ಕೊಡುಗೆಯ ಮಹತ್ವ ತಿಳಿಯುವುದು ಸುಲಭ, ಕೆಲವು ಸಾರಿ ಅಗೋಚರ ಹಾಗೂ ಅಮೂರ್ತ. ಒಂದು ವೇಳೆ ನಾವು ಪೆನ್ಸಿಲಿನ್ ಮತ್ತು ಕ್ವಿನೈನ್ ಎಂಬ ಔಷಧಗಳನ್ನು ಕಂಡುಹಿಡಿಯುವ ಮುನ್ನ ಭೂಮಿಯಿಂದ ಪೆನ್ಸೀಲಿಯಮ್ ಶಿಲೀಂದ್ರ ಮತ್ತು ಸಿಂಕೋನ ಮರವು ನಾಶವಾಗಿದ್ದರೆ, ಮಾನವನ ಗತಿ ಏನಾಗಿರುತ್ತಿತ್ತು? ಇದು ಊಹೆಗೂ ಮೀರಿದ ಭಯಾನಕ ಚಿತ್ರ. ಇಂದು ವಿನಾಶದ ಅಂಚಿನಲ್ಲಿರುವ ಹಾಗೂ ನಶಿಸಿರುವ ಜೀವಿಗಳ ಶರೀರದಲ್ಲಿ ಎತೆಂತಹ ದಿವ್ಯೌಷಧಗಳ ರಸಾಯನಿಕಗಳಿವೆಯೋ ಯಾರಿಗೆ ಗೊತ್ತು? ಪ್ರಕೃತಿಯ ಮಡಿಲಲ್ಲಿ ಇರುವ ಪ್ರತಿ ಪ್ರಭೇದವೂ ಭವಿಷ್ಯದಲ್ಲಿ ಮಾನವನಿಗೆ ಸಂಜೀವಿನಿಯಾಗಬಹುದು! ಅದರ ನಾಶ ಈ ಭೂಮಿಯಿಂದ ಮಾನವನ ನಾಶಕ್ಕೂ ನಾಂದಿ ಹೇಳಬಹುದು! ಪ್ರಭೇದಗಳ ಮೌನ ರೋದನವನ್ನು ಆಲಿಸದೇ ಹೋದರೆ, ಭವಿಷ್ಯದಲ್ಲಿ ಮಾನವ ಶಾಶ್ವತವಾಗಿ ಅಳಿದು ಹೋಗಬೇಕಾದೀತು!! `ಒಂದು ಅಳಿದರೆ ಉಳಿದೆಲ್ಲ ಮುಕ್ಕು‘ ಎಂಬುದು ಅಕ್ಷರಶಃ ಸತ್ಯ.