ಮಾನವನ ಚಟುವಟಿಕೆಯಿಂದ ವಾಯುಗೋಳದಲ್ಲಿ CO2ನ ಪ್ರಮಾಣ ಅಧಿಕವಾಗಿದೆ. CO2 ವಾಯುಮಂಡಲದಲ್ಲಿರುವ ಜೀವಿತಾವಧಿ ನೂರಕ್ಕೂ ಹೆಚ್ಚು ವರ್ಷಗಳು. ಕೈಗಾರಿಕಾ ಕ್ರಾಂತಿಯ ಪೂರ್ವದಲ್ಲಿ CO2ನ ಪ್ರಮಾಣ ೨೮೦ ppm. ಈಗ ೩೮೦ ppm ನ್ನು ದಾಟಿದೆ. ಪ್ರತಿವರ್ಷ ಫಾಸಿಲ್ ಇಂಧನಗಳ ದಹನ ಮತ್ತು ಭೂಬಳಕೆ ಬದಲಾವಣೆಯಿಂದ ಸುಮಾರು ೮ GtC (Giga tonnes of Carbon)  ಮತ್ತು ೨ GtC ಅನುಕ್ರಮವಾಗಿ ವಾಯುಗೋಳ ಸೇರುತ್ತಿದೆ. ಸಾಗರಗಳು ಮತ್ತು ಭೂ ಪರಿಸರ ವ್ಯವಸ್ಥೆಗಳಿಂದ ೪೦-೫೦% ರಷ್ಟು CO2 ವಾರ್ಷಿಕ ಹೊರಸೂಸುವಿಕೆ ಉಂಟಾಗುತ್ತಿದೆ. ವರ್ಷಕ್ಕೆ ಸುಮಾರು ೨.೫ – ೩ ppm ನಷ್ಟು  ಹೆಚ್ಚುತ್ತಿದೆ. ( 1 ppm of CO2 = 2 GtC)

ಕೈಗಾರಿಕಾ ಕ್ರಾಂತಿಯ ಪೂರ್ವಕ್ಕೆ ಹೋಲಿಸಿದರೆ ೨೦೦೧-೨೦೦೫ರ ಸಮಯಕ್ಕೆ

೦.೮೦ ಸೆ. ಉಷ್ಣತೆ ಹೆಚ್ಚಿದೆ. ಹಾಗಾಗಿ ಸಾಗರಗಳು ಬಿಸಿಯಾಗಿವೆ. ವಾಯುಮಂಡಲದಲ್ಲಿ ನೀರಾವಿ ಅಧಿಕಗೊಂಡಿದೆ. ಸಮುದ್ರದ ಮಟ್ಟ ಏರಿದೆ. ಪರ್ವತಗಳ ಹಿಮ ಹಿಂದಕ್ಕೆ ಸರಿದಿದೆ ಮತ್ತು ಹಿಮಾವೃತ ಪ್ರಮಾಣ ಕಡಿಮೆಯಾಗಿದೆ. ಈ ಪ್ರಕ್ರಿಯೆ ಮುಂದುವರೆದರೆ ೨೧ನೇ ಶತಮಾನದಲ್ಲಿ ೧.೮-೪೦ ಸೆ. ಉಷ್ಣತೆ ಹೆಚ್ಚಬಹುದು. ೨೩೦೦ ಇಸವಿಗೆ ಲಭ್ಯವಿರುವ ಎಲ್ಲ ಫಾಸಿಲ್ ಇಂಧನಗಳನ್ನು ದಹನ ಮಾಡಿದರೆ, ಬಿಡುಗಡೆಯಿಂದಾಗಿ ಜಾಗತಿಕ ಸರಾಸರಿ ಉಷ್ಣತೆ ಸುಮಾರು ೮೦ ಸೆ. ಅಧಿಕವಾಗಬಹುದು !

ಹವಾಗುಣ ಭೂ ಇಂಜಿನಿಯರಿಂಗ್ ವಿಧಾನಗಳನ್ನು ಬಳಸಿ GHG ಗಳ ಪ್ರಭಾವ ಪರಿಹಾರ ಮಾಡುವ ಪ್ರಯತ್ನ, ಪ್ರಯೋಗ, ಸಿದ್ಧಾಂತ, ಆಧಾರಿತ ಕಲ್ಪನೆ ಮಾಡಲಾಗುತ್ತಿದೆ. ಈ ಯೋಜನೆಗಳನ್ನು ಎರಡು ರೀತಿ ವಿಂಗಡಿಸಬಹುದು. ಮೊದಲ ರೀತಿಯ ಯೋಜನೆಗಳಲ್ಲಿ ಸೂರ್ಯನ ಬೆಳಕಿಗೆ ತಡೆ ಒಡ್ಡುವ ಪ್ರಯತ್ನಗಳಿವೆ. ಎರಡನೆಯ ರೀತಿಯ ಯೋಜನೆಗಳಲ್ಲಿ ವಾಯುಗೋಳದ CO2 ನ್ನು ಸಾಗರದ ಆಳದಲ್ಲಿ ಹೂಳುವುದು, ಗಿಡಮರಗಳ ರೂಪದಲ್ಲಿರುವಂತೆ ಮಾಡುವುದು ಅಥವಾ ಭೂ ಅಂತರಾಳಕ್ಕೆ ನೂಕುವ ಪ್ರಯತ್ನಗಳಿವೆ.

ಭೂಮಿಯಲ್ಲಿ ಅಧಿಕ ಪ್ರತಿಫಲನ ಉಂಟಾಗುವಂತೆ ಮಾಡುವುದು. ಕಟ್ಟಡಗಳ ಛಾವಣಿ ಮೇಲೆ ಬಿಳಿ ಬಣ್ಣ ಲೇಪನ ಮಾಡುವುದು. ಭೂ ಕಕ್ಷೆಯಲ್ಲಿ ಸೂರ್ಯನ ಬೆಳಕನ್ನು ಹಿಂತಿರುಗಿಸಲು ಕನ್ನಡಿಗಳನ್ನು, ಹೊಳೆಯುವ ವಸ್ತುಗಳನ್ನು ಅಥವಾ ಸಹಸ್ರಾರು ಪುಟ್ಟ ಆಕಾಶ ಲಾಳಿಗಳನ್ನು ಸ್ಥಾಪಿಸುವ ಚರ್ಚೆ ನಡೆದಿದೆ. ಅದೇ ರೀತಿ ಸಾಗರಗಳ ಮೇಲ್ಮೈಯಲ್ಲಿ ಪ್ರತಿಫಲನ ಶಕ್ತಿಯಿರುವ ಕಣಗಳನ್ನು ವಿತರಿಸುವ ಪ್ರಸ್ತಾವನೆ ಇದೆ. ಹವಾಗೋಳ (Troposphere) ದಲ್ಲಿ ತೇಲು ದೂಳನ್ನು ಸಿಂಪಡಿಸುವುದೂ ಒಂದು ಸೂಕ್ತ ಉತ್ತರವೆಂದು ಚಿಂತಿಸಿದ್ದಾರೆ. ಗಂಧಕವನ್ನು ಹವಾಗೋಳ (Troposphere) ದಲ್ಲಿ ಇಂಜೆಕ್ಟ್ ಮಾಡುವುದರಿಂದ ಅಧಿಕ ಕಾಲ ತೇಲು ಧೂಳು ಇರುವಂತೆ ಮಾಡಬಹುದೆಂದು ರಷ್ಯಾ ವಿಜ್ಞಾನಿ ಬುಡಿಕೊ ತಿಳಿಸಿದ್ದಾರೆ. ತೇಲುಧೂಳಿನ ಜೀವಿತಾವಧಿ ೧-೨ ವರ್ಷ ಮಾತ್ರವಿರುವುದರಿಂದ ಹೆಚ್ಚಿನ ಪ್ರಮಾಣದ ಗಂಧಕ ಬೇಕಾಗುವುದು. ಆದರೆ ಗಂಧಕದಿಂದ ಪರಿಸರ ವ್ಯವಸ್ಥೆಗಳು ನಾಶವಾಗುವ ಸಾಧ್ಯತೆ ಇದೆ. ೧೯೯೨ರಲ್ಲಿ ಅಮೆರಿಕಾದ ವಿಜ್ಞಾನ ಅಕಾಡೆಮಿಯು ಗಂಧಕಕ್ಕಿಂತ ಮಣ್ಣಿನ ಧೂಳೇ ಹೆಚ್ಚು ಪರಿಣಾಮಕಾರಿ ಎಂದಿದೆ. ಸುಮಾರು ೧ ಕೆ.ಜಿ. ಧೂಳಿನಿಂದ ೧೦೦ ಟನ್ CO2 ಹೊರಸೂಸುವಿಕೆ ದುಷ್ಪರಿಣಾಮ ತಡೆಗಟ್ಟಬಹುದೆಂದು ಹೇಳಿದೆ. CO2 ಎರಡು ಪಟ್ಟಾದರೆ ಅದರ ಪರಿಣಾಮ ತಡೆಯಲು ೧೦-೧೦ ಕೆ.ಜಿ. ಧೂಳು ಸಾಕಾಗುತ್ತದೆಂದು ಲೆಕ್ಕ ಹಾಕಿದೆ.

ಅಲ್ಲದೆ ಗಂಧಕ ಮತ್ತು ಧೂಳಿನ ಬದಲಿಗೆ ಪ್ರತಿಫಲನ ಮಾಡುವ ಪುಟ್ಟ ಕನ್ನಡಿಗಳು, ಬಲೂನ್‌ಗಳು ಅಥವಾ ಅತಿಹೆಚ್ಚು ಪ್ರತಿಫಲನ ಗುಣವಿರುವ ನ್ಯಾನೊ ಕಣಗಳನ್ನು ಬಳಸಬಹುದೆಂದೂ ತಿಳಿಸಿದೆ. ಪ್ರತಿಫಲಕಗಳನ್ನು ವಾಯುಯಾನದ ಮೇಲಿನ ಸ್ತರದಲ್ಲಿರುವಂತೆ ಮಾಡಬಹುದು. ಆದರೆ ಇದರ ವೆಚ್ಚ ಧೂಳಿನ ಸಿಂಪರಣೆಗಿಂತ ೨೦ ಪಟ್ಟು ದುಬಾರಿ. ಅಲ್ಲದೆ ಅಧಿಕ ಸಂಖ್ಯೆಯ ಪ್ರತಿಫಲಕಗಳಿಂದ ಆಕಾಶ ಮಾಲಿನ್ಯ ಮತ್ತು ಒಂದಲ್ಲಾ ಒಂದು ದಿನ ಅವು ಕೆಳಗೆ ಬೀಳುವುದರಿಂದ ಆಗುವ ಸಮಸ್ಯೆಗಳಿವೆ.

ಸಾಗರಗಳ ಮೇಲೆ ಮೋಡಗಳು ಹೆಚ್ಚಾಗುವ ಮಳೆ ಬೀಜ ಹಾಕುವ ಯೋಜನೆಯೂ ಪ್ರಸ್ತಾಪವಾಗಿದೆ. ಮೋಡಗಳ ದಟ್ಟಣೆ ಸುಮಾರು ೪% ಹೆಚ್ಚಾದರೂ ಸಾಕು. CO2 ಎರಡು ಪಟ್ಟು ಅಧಿಕವಾದರೂ ಅದರ ಪರಿಣಾಮ ತಡೆಯಬಹುದು. ಕೆಳಹಂತದಲ್ಲಿರುವ ಮೋಡಗಳಿಗೆ ಗಂಧಕಾಮ್ಲ ಸಿಂಪಡಿಸುವ ಮೂಲಕ ಮಳೆ ಬೀಜಗಳನ್ನು ಹಾಕಬಹುದು. ಬಾಹ್ಯಾಕಾಶದಲ್ಲಿ (೨೦೦ ಕಿ.ಮೀ.) ಕನ್ನಡಿಗಳ ಜೋಡಣೆ ಮಾಡಬಹುದು. 5.5×10–6 km2 ವಿಸ್ತಾರದ ಬೃಹತ್ ಕನ್ನಡಿ ಸ್ಥಾಪಿಸುವ ಮೂಲಕ CO2 ನ ಎರಡು ಪಟ್ಟು ಪರಿಣಾಮ ತಡೆಯಬಹುದು.

ಸಾಗರಗಳಿಗೆ ಕಬ್ಬಿಣದ ಪುಡಿ ಎರಚುವ ಮೂಲಕ ಸಾಗರಗಳಲ್ಲಿ ಸಸ್ಯ ಪ್ಲಾವಕಗಳು ಅಧಿಕವಾಗುವಂತೆ ಮಾಡಿ, ಅವು CO2 ಹೀರುವ ಯೋಜನೆಯೂ ಇದೆ. ಅಲ್ಪ ಪ್ರಮಾಣದಲ್ಲಿ ಈ ಯೋಜನೆಯನ್ನು ಇತ್ತೀಚೆಗೆ ಕೈಗೊಳ್ಳಲಾಯಿತು. ಆದರೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಅರಣ್ಯೀಕರಣದಿಂದ CO2 ಹೀರುವಿಕೆಯಲ್ಲಿ ಯಶಸ್ಸು ಪಡೆಯುವ ಪ್ರಸ್ತಾಪವಿದೆ. ಆಳ ಸಾಗರಗಳ ತಳಕ್ಕೆ CO2ನ್ನು ಇಂಜೆಕ್ಟ್ ಮಾಡುವ ಅಥವಾ ಭೂ ಗರ್ಭದೊಳಕ್ಕೆ CO2 ಸಾಗಿಸುವ ಯೋಜನೆಯೂ ಇದೆ.

ಮೇಲೆ ಸೂಚಿಸಿರುವ ಎಲ್ಲ ಭೂ ಇಂಜಿನಿಯರಿಂಗ್ ವಿಧಾನಗಳಲ್ಲಿ ಲೋಪ ದೋಷಗಳಿವೆ. ಅವುಗಳ ಗಣಕೀಕೃತ ಮಾದರಿಗಳು ಇನ್ನೂ ಪರಿಷ್ಕಾರಗೊಳ್ಳಬೇಕಿದೆ. ಈ ಬಗ್ಗೆ ವಾದ-ವಿವಾದಗಳ ಚರ್ಚೆ ನೆಡೆಯಬೇಕಿದೆ. ಇವುಗಳಿಂದ CO2ನ ಪರಿಣಾಮ ತಪ್ಪಿಸಬಹುದಾದರೂ ಮಿಕ್ಕ ಪ್ರಕ್ರಿಯೆಗಳು ಅಪಾಯ ತರಬಹುದೆಂಬ ತರ್ಕವಿದೆ. ಜಲ ಚಕ್ರಗಳಲ್ಲಾಗುವ ಏರುಪೇರು ಅಷ್ಟು ಬೇಗ ಪುನರ್‌ಸ್ಥಾಪನೆ ಆಗುವುದೇ ಎಂಬ ಬಗ್ಗೆ ಅನುಮಾನವಿದೆ. ಈ ಕ್ಷೇತ್ರದ ಮತ್ತಷ್ಟು ಸಂಶೋಧನೆ-ಚಿಂತನೆ ನೆಡೆಯಬೇಕಿದೆ. ಸದ್ಯಕ್ಕೆ ಅರಣ್ಯೀಕರಣ, ನವೀಕರಿಸಬಹುದಾದ, ಪರಿಸರಸ್ನೇಹಿ ಶಕ್ತಿಮೂಲಗಳ ಬಳಕೆ, ಸರಳ ಜೀವನ, ಸೀಮಿತ ಗ್ರಾಹಕತೆಯೇ ಅತ್ಯುತ್ತಮ ಮಾರ್ಗ.