ಹಸಿರುಮನೆ ಅನಿಲಗಳ ಹೆಚ್ಚಳ ಹಾಗೂ ಜಾಗತಿಕ ಹವಾಗುಣ ಬದಲಾವಣೆ ತೀವ್ರತೆ ಕಡಿಮೆ ಮಾಡಲು ನಾವು ಕೆಳಕಂಡಂತೆ ಪ್ರಯತ್ನಿಸಬೇಕು :

೧. ಆದಷ್ಟು ಸಾರ್ವಜನಿಕ ಸಾರಿಗೆಗಳಾದ ರೈಲು, ಬಸ್ಸುಗಳಲ್ಲಿ ಪ್ರಯಾಣಿಸೋಣ.

೨. ಸ್ಕೂಟರ್, ಕಾರು, ಮೋಟಾರ್ ಬೈಕುಗಳನ್ನು ಬಳಸುತ್ತಿದ್ದಲ್ಲಿ ವಾರಕ್ಕೆ ಒಂದು ದಿನ ಅವಕ್ಕೆ ವಿಶ್ರಾಂತಿ ನೀಡುವುದು. ಓಡಾಡುವುದರಿಂದ ಆರೋಗ್ಯವೂ ಹೆಚ್ಚುವುದು.

೩. ಸ್ಕೂಟರ್, ಮುಂತಾದ ವಾಹನಗಳ ಫಿಲ್ಟರ್‌ನ್ನು ಆಗಾಗ್ಗೆ ಚೊಕ್ಕಟಗೊಳಿಸುವುದು, ಪ್ಲಗ್ ಅನ್ನು ಚೊಕ್ಕಗೊಳಿಸಿ ಮತ್ತು ಕೆಟಲಿಟಿಕ್ ಕನ್ವರ್ಟರ್ ಬಳಸುವುದರಿಂದ, ವಾಹನದ ದಕ್ಷತೆ ಹೆಚ್ಚುವುದು. ಇಂಧನ ಉಳಿಯುವುದು. CO2ನ ಪ್ರಮಾಣವು ಕಡಿಮೆ ಯಾಗುವುದು.

೪. ನಡೆದಾಟ, ಸೈಕಲ್ ಸವಾರಿ ಹೆಚ್ಚು ಮಾಡೋಣ.

೫. ವಿದ್ಯುತ್ ಶಕ್ತಿಯಿಂದ ಅಥವಾ LPG, CNG ಇಂಧನಗಳಿಂದ ಓಡುವ ವಾಹನ ಬಳಸುವುದು.

೬. ಮನೆಯಲ್ಲಿ ಬಿಸಿ ನೀರು ಪಡೆಯುವುದಕ್ಕೆ ಸೌರಫಲಕ ಬಳಸೋಣ.

೭. ಮನೆಯಲ್ಲಿ ಬೆಳಕು, ವಿದ್ಯುತ್ ಪಡೆಯಲು ಗೋಬರ್ ಸ್ಥಾವರ ಬಳಸಿಕೊಳ್ಳೋಣ. ಸೌರಶಕ್ತಿಯಿಂದಲೂ ಬೆಳಕು ಹಾಗೂ ವಿದ್ಯುತ್ ಪಡೆಯಬಹುದು.

೮. ಬೆಳಕಿಗಾಗಿ ದುಂಡನೆಯ ಬಲ್ಬು ಬಳಸುವ ಬದಲು CFL ಬಳಸೋಣ.

೯. ಅಗತ್ಯವೆನಿಸಿದಾಗ ಮಾತ್ರ ವಿದ್ಯುತ್ ಹಾಗೂ ಫ್ಯಾನ್ ಬಳಸುವುದು.

೧೦. ಕೊಠಡಿ ಹಾಗೂ ಮನೆಯಿಂದ ಹೊರಬರುವ ಮುನ್ನ ವಿದ್ಯುತ್ ಸ್ವಿಚ್‌ಗಳನ್ನು ಆರಿಸುವುದು.

೧೧. ಮನೆಯ ಮುಂದೆ ಹೂಗಿಡಗಳನ್ನು ಬೆಳೆಸಿ, ಹಿತ್ತಲಲ್ಲಿ ಪುಟ್ಟತೋಟ ನಿರ್ಮಿಸುವುದು.

೧೨. ಶಾಲಾ ಆವರಣದಲ್ಲಿ ಶಾಲಾವನ ಬೆಳೆಸುವುದು.

೧೩. ಹಳೆಯ ಕಾಗದ, ಪುಸ್ತಕಗಳನ್ನು ಸುಡಬೇಡಿ. ಮಾರಾಟ ಮಾಡಿ, ಅವನ್ನು ಪುನಃ ಕಾಗದ ತಯಾರಿಸಲು ಬಳಸುವರು. ಇದರಿಂದ ಅರಣ್ಯನಾಶವನ್ನು ಕಡಿಮೆ ಮಾಡಿದಂತಾಗುವುದು.

೧೪. ಪರಿಸರ ಸ್ನೇಹಿ ಜೀವನ ವಿಧಾನಗಳನ್ನು ಅನುಸರಿಸಿ ಅನಗತ್ಯ ವಸ್ತುಗಳನ್ನು ಕೊಳ್ಳಬೇಡಿ (Refuse) ವಸ್ತುಗಳನ್ನು ಹಿತಮಿತವಾಗಿ ಬಳಸಿ (Reduce). ವಸ್ತುಗಳು ಕೆಟ್ಟರೆ ಸಕಾಲದಲ್ಲಿ ದುರಸ್ತಿ ಮಾಡಿಸಿ (Repair). ಕೆಲವು ವಸ್ತುಗಳನ್ನು ಪುನಃ ಬಳಸಬಹುದು. ಹಾಗಾಗಿ ಮರುಬಳಸಿ (Reuse) ಮತ್ತು ಕೆಲವು ವಸ್ತುಗಳನ್ನು (ಕಾಗದ, ಪ್ಲಾಸ್ಟಿಕ್, ಮುಂತಾದವುಗಳನ್ನು) ಪುನರುತ್ಪಾದನೆಗೆ ನೀಡಿ. (Recycle)

೧೬. ದೀಪಾವಳಿಯಲ್ಲಿ ಪಟಾಕಿ ಸುಡುವುದನ್ನು ನಿಲ್ಲಿಸೋಣ.

ಜನ ಸಮೂಹ ಹಾಗೂ ಸಮಾಜದಿಂದ ಜಾಗತಿಕ ಬಿಸಿಯೇರುವಿಕೆ ತಡೆಗಟ್ಟುವ ವಿಧಾನಗಳು :

೧. ಸಿಂಪಡಕಗಳನ್ನು ಬಳಸದಿರುವುದು.

೨. CFC ಇಲ್ಲದ ರೆಫ್ರಿಜರೇಟರ್‌ಗಳನ್ನು ಬಳಸೋಣ.

೩. ಸಾಲುಮರಗಳು, ಗೋಮಾಳ, ಗೋಕಟ್ಟೆಗಳನ್ನು ಉಳಿಸಿ ಬೆಳೆಸೋಣ.

೪. ಅರಣ್ಯ ಸಂವರ್ಧನೆಯಲ್ಲಿ ಭಾಗಿಯಾಗಲು ಪ್ರಯತ್ನಿಸೋಣ.

೫. ಪರಿಸರ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗೋಣ.

೬. ಪ್ಲಾಸ್ಟಿಕ್ ಸುಡದೆ ಸೂಕ್ತವಾಗಿ ವಿತರಣೆ ಮಾಡೋಣ.

೭. ಜಲಸಂವರ್ಧನೆ ಕಾರ್ಯಗಳಲ್ಲಿ ಭಾಗಿಯಾಗಬಹುದು.

೮. ಸಾರ್ವಜನಿಕ ಸಾರಿಗೆ ದಕ್ಷವಾಗಿರುವಂತೆ ಬೆಂಬಲಿಸುವುದು.

೯. ಪವನಶಕ್ತಿ, ಸೌರಶಕ್ತಿ ಹಾಗೂ ಅಸಂಪ್ರದಾಯ ಇಂಧನಗಳ ಬಳಕೆಯನ್ನು ಪ್ರೋತ್ಸಾಹಿಸುವುದು.

೧೦. ಜೈವಿಕ ಅನಿಲ ಸ್ಥಾವರ, ಗೋಬರ್ ಅನಿಲ ಸ್ಥಾವರಗಳ ಬಳಕೆ ಬೆಂಬಲಿಸೋಣ. ಇದರಿಂದ ಮಿಥೇನ್ ಹೆಚ್ಚಳ ಕಡಿಮೆಯಾಗುವುದು.

೧೧. ವೈಭೋಗ ಜೀವನಕ್ಕಿಂತ ಸರಳ ಹಾಗೂ ಪರಿಸರ ಸ್ನೇಹಿ ಜೀವನ ಉತ್ತಮ ಎಂಬ ಮೌಲ್ಯ ಹೆಚ್ಚುವಂತೆ ಮಾಡೋಣ.

೧೨. ಬೀದಿ ದೀಪಗಳನ್ನು ಬೆಳಗಿನ ಹೊತ್ತು ಉರಿಯದಂತೆ ನೋಡಿಕೊಳ್ಳುವುದು.

೧೩. ಹಸಿರುಮನೆ ಅನಿಲಗಳ ಹೆಚ್ಚಳ ಕಡಿಮೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಗೆ ಸರ್ಕಾರಗಳು ಪ್ರೋತ್ಸಾಹಿಸುವಂತೆ ಮಾಡುವುದು.

೧೪. ಹಸಿರುಮನೆ ಅನಿಲಗಳ ಹೆಚ್ಚಳದಿಂದ ಕಡಿಮೆ ಮಾಡುವ ಯಂತ್ರೋಪಕರಣಗಳಿಗೆ ಸರ್ಕಾರ ಸಬ್ಸಿಡಿ ನೀಡುವಂತೆ ಮಾಡುವುದು.

೧೫. ಕಸದ ವಿಲೇವಾರಿ ದಕ್ಷವಾಗಿರುವಂತೆ ನಗರಸಭೆಗಳು ನಿಭಾವಣೆ ಮಾಡಬೇಕಿದೆ.

೧೬. ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸುವಂತೆ ರಾಷ್ಟ್ರಗಳ ಮೇಲೆ ಒತ್ತಾಯ ತರಬೇಕಾಗಿದೆ.

೧೭. ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆ ನಿಲ್ಲುವಂತೆ ಮಾಡಬೇಕಾಗಿದೆ. ರಾಷ್ಟ್ರಗಳ ನಡುವಿನ ಯಾವುದೇ ತರಹದ ಭಿನ್ನಾಭಿಪ್ರಾಯಗಳನ್ನು ಮಾತುಕತೆಗಳ ಮೂಲಕ ಪರಿಹರಿಸಿಕೊಳ್ಳುವಂತಹ ವಾತಾವರಣ ಉಂಟು ಮಾಡುವಂತೆ ಮಾಡಬೇಕಾಗಿದೆ.

೧೮. ಜೈವಿಕ ತಂತ್ರಜ್ಞಾನದ ಸಹಾಯದಿಂದ ಕಡಿಮೆ ನೀರಲ್ಲಿ ಬೆಳೆಯುವಂತಹ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಬೇಕು.

೧೯. ಸಾಗರಗಳಲ್ಲಿ ತೈಲ ಸೋರಿಕೆಯುಂಟಾಗುವುದನ್ನು ನಿವಾರಿಸಬೇಕಾಗಿದೆ.

೨೦. ಪಟ್ಟಣ, ನಗರಗಳಲ್ಲಿ ಉದ್ಯಾನವನ, ಸಾಲುಮರಗಳು, ಜೈವಿಕ ವೈವಿಧ್ಯಗಳು ಹೆಚ್ಚಾಗುವಂತೆ, ಹಸಿರುನಗರಗಳ ಪರಿಕಲ್ಪನೆಗೆ ಸಾಕಾರವಾಗುವಂತೆ ಮಾಡಬೇಕಾಗಿದೆ.

೨೧. ಪರಿಸರ ಸಂಘ, ಕೂಟಗಳನ್ನು ರಚಿಸಿಕೊಂಡು ತಮ್ಮ ಸುತ್ತಲ ಸ್ಥಳಗಳನ್ನು ಹೆಚ್ಚು ಚೊಕ್ಕಟವಾಗಿಟ್ಟುಕೊಳ್ಳಲು ಸೂಕ್ತವಾಗಿ ಯೋಜಿಸಿ ಕಾರ್ಯಕ್ರಮಗಳು ಕಾಳಜಿಯಿಂದ ಜಾರಿಯಾಗುವಂತೆ ಮಾಡಬೇಕಾಗಿದೆ.