ಪರಿಸರದ ಮೇಲೆ ಮಾನವ ಮಾಡಿರುವ ಆಘಾತವನ್ನು ಅರಿತುಕೊಂಡ ಮೇಲೆ, ಪರಿಸರ ಸಂರಕ್ಷಣೆಯ ಜಾಗೃತಿ ಎಲ್ಲರಲ್ಲಿ ಮೂಡುತ್ತಿದೆ. ಜಗತ್ತಿನಾದ್ಯಂತ ಪರಿಸರ ರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸರ ರಕ್ಷಣೆಯಲ್ಲಿ ಮಾನವನ ಹಿತವೂ ಅಡಗಿದೆ ಎಂಬ ಸತ್ಯ ಅರಿವಾಗುತ್ತಿದೆ. ವಾಯುಗುಣ ಬದಲಾವಣೆಯು ಒಂದು ಬೃಹತ್ ಪರಿಸರ ಸಮಸ್ಯೆಯಾಗಿದ್ದು ಅದರ ಪರಿಣಾಮಗಳು ಒಂದು ಪ್ರದೇಶ, ದೇಶಕ್ಕೆ ಸೀಮಿತವಾಗದೆ ಜಗತ್ತಿನ ಜೀವಿಗಳ ಅಸ್ಥಿತ್ವವನ್ನೇ ನಾಶ ಮಾಡಬಲ್ಲವಾಗಿವೆ. ಭೂಗ್ರಹದ ಎಲ್ಲ ಪರಿಸರ ವ್ಯವಸ್ಥೆಗಳೂ ಹಾಳಾಗಲಿವೆ. ಮಾಲಿನ್ಯದ ಪರಿಣಾಮವು ಮಾಲಿನ್ಯ ಉಂಟಾದ ಸ್ಥಳಕ್ಕೆ ಸೀಮಿತವಾಗಿರದೆ, ಅದು ದೇಶಗಳ ಗಡಿಯನ್ನೂ ದಾಟುತ್ತದೆ. ಹವಾಗುಣ ಬದಲಾವಣೆಯ ಪರಿಣಾಮವು ಕೇವಲ ಒಂದು ಸ್ಥಳಕ್ಕೆ, ದೇಶಕ್ಕೆ ಸೀಮಿತವಲ್ಲ. ಇಡೀ ವಿಶ್ವದ ಎಲ್ಲ ರಾಷ್ಟ್ರಗಳು ಮತ್ತು ಪರಿಸರ ವ್ಯವಸ್ಥೆಗಳು ಆಘಾತಕ್ಕೆ ಒಳಗಾಗುತ್ತವೆ. ಆದ್ದರಿಂದ ವಾಯುಗುಣ ಬದಲಾವಣೆಯ ಪರಿಣಾಮಗಳ ತೀವ್ರತೆಯನ್ನು ಕಡಿಮೆ ಮಾಡಬೇಕಾದರೆ ಅಥವಾ ನಿವಾರಣೆ ಮಾಡಬೇಕಾದರೆ ವಿಶ್ವದ ಎಲ್ಲ ರಾಷ್ಟ್ರಗಳು ಸೇರಿ ಸಾಮೂಹಿಕ ಪ್ರಯತ್ನ ಮಾಡಬೇಕೆಂಬ ಅರಿವಾಗಿದೆ. ಜಾಗತಿಕ ಸಮುದಾಯ ಕೈಗೊಂಡಿರುವ ಅಂತಹ ಪ್ರಯತ್ನಗಳ ಪರಿಚಯ ಕೆಳಗೆ ನೀಡಲಾಗಿದೆ.

ಮಾನವನ ಪರಿಸರದ ಬಗ್ಗೆ ವಿಶ್ವ ಸಂಸ್ಥೆಯ ಸಮಾವೇಶ (೧೯೭೨)

ಈ ಸಮಾವೇಶ ೧೯೭೨ರ ಜೂನ್ ೫ ರಿಂದ ೧೬ ರವರೆಗೆ ಸ್ಟಾಕ್‌ಹೋಮ್‌ನಲ್ಲಿ ನಡೆಯಿತು. ಇದರಲ್ಲಿ ೧೧೪ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದರು. ಮಾನವನ ಪರಿಸರವನ್ನು ಉತ್ತಮಪಡಿಸಲು ಮತ್ತು ಸಂರಕ್ಷಿಸಲು ಜಗತ್ತಿನ ಎಲ್ಲ ಜನರು ಒಟ್ಟಾಗಿ ಶ್ರಮಿಸಬೇಕೆಂಬುದಕ್ಕೆ ಈ ಸಮಾವೇಶ ಮಹತ್ವ ನೀಡಿತು. ಎಲ್ಲ ದೇಶಗಳ ಪರಿಸರ ಸಮಸ್ಯೆಗಳಿಗೆ ವಿಶೇಷವಾಗಿ ಪರಿಸರ ಅವನತಿಗೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ‘ಗಡಿದಾಟುವ ಮಾಲಿನ್ಯ’ಕ್ಕೆ ಗಮನ ನೀಡಲಾಯಿತು.

ಪರಿಸರ ಸಮಸ್ಯೆಗಳಿಗೆ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ನೀಡಲಾಯಿತು. ಇದರಿಂದ ಜಾಗತಿಕ ಪರಿಸರ ಪ್ರಜ್ಞೆ ಅಧಿಕವಾಗಲು ಕಾರಣವಾಯಿತು. ಸಮಾವೇಶದ ನಂತರ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)ವನ್ನು ಸ್ಥಾಪಿಸಲಾಯಿತು. ಜಾಗತಿಕ ಪರಿಸರ ಯೋಜನೆ ಮತ್ತು ನಿರ್ವಹಣೆ ಈ ಸಂಸ್ಥೆಯ ಪ್ರಮುಖ ಉದ್ದೇಶವಾಯಿತು. ಭಾರತದ ಅಂದಿನ ಪ್ರಧಾನಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ನೆನಪಿನಲ್ಲಿ ಉಳಿಯುವಂತಹ ಹೇಳಿಕೆಯನ್ನು ನೀಡಿದರು. “ಬಡತನವೇ ದೊಡ್ಡ ಮಾಲಿನ್ಯ ಉಂಟು ಮಾಡುವುದು” – ಈ ಹೇಳಿಕೆಯನ್ನು ಆಗಾಗ್ಗೆ ಪರಿಸರವಾದಿಗಳು ಉದ್ಧರಿಸುತ್ತಾರೆ.

ಓಜ಼ೋನ್ ಪದರ ರಕ್ಷಣೆಗಾಗಿ ವಿಯನ್ನಾ ಕೂಟ

ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲೆ ಹಾಗೂ ಓಜ಼ೋನ್ ಪದರದ ಮೇಲೆ ಆಗಿರುವ ಅಥವಾ ಆಗಬಹುದಾದ ದುಷ್ಪರಿಣಾಮಗಳನ್ನು ಎದುರಿಸಲು ಮತ್ತು ಮಾನವನ ಆರೋಗ್ಯವನ್ನು ಕಾಪಾಡಲು ಬೇಕಾದ ಯುಕ್ತ ಕ್ರಮಗಳನ್ನು ಕೈಗೊಳ್ಳಲು ಈ ಕೂಟದಲ್ಲಿ ೨೦ ದೇಶಗಳು ಒಪ್ಪಿದವು. CFC ಮಾತ್ರ ಅಪಾಯಕಾರಿ ವಸ್ತುವೆಂದು ಮತ್ತು ಅದರ ನಿರ್ವಹಣೆಯನ್ನು ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಮಾಹಿತಿ ವಿನಿಮಯ ಈ ಸಮಾವೇಶದ ಪ್ರಮುಖ ಗುರಿಯಾಗಿತ್ತು. ಈ ಸಮಾವೇಶ ಒಂದು ವಿಶಿಷ್ಠವಾದುದಾಗಿತ್ತು. ಓಜೋನ್‌ಪದರ ನಾಶದಿಂದಾಗುವ ದುಷ್ಪರಿಣಾಮಗಳನ್ನು ಅನುಭವಿಸುವ ಮೊದಲೇ ವಿಶ್ವದ ಎಲ್ಲ ರಾಷ್ಟ್ರಗಳು ಈ ಜಾಗತಿಕ ಪರಿಸರ ಸಮಸ್ಯೆಯ ವಿರುದ್ಧ ಮೊದಲ ಬಾರಿಗೆ ಹೋರಾಡಲು ತತ್ವಶಃ ಒಪ್ಪಿದವು.

ಮಾಂಟ್ರಿಯಲ್ ಪ್ರೊಟೋಕಾಲ್ (೧೯೮೭)

೧೯೮೭ರ ಸೆಪ್ಟೆಂಬರ್‌ನಲ್ಲಿ ಓಜೋನ್ ಪದರವನ್ನು ನಾಶ ಮಾಡುವ ವಸ್ತುಗಳನ್ನು ಕಡಿತಗೊಳಿಸಲು ಮಾಂಟ್ರಿಯಲ್ ಒಪ್ಪಂದಕ್ಕೆ ೨೪ ರಾಷ್ಟ್ರಗಳು ಸಹಿ ಹಾಕಿದವು. ಪ್ರಸ್ತುತ ೧೬೦ ದೇಶಗಳು ಸಹಿ ಹಾಕಿವೆ. ಈ ಒಪ್ಪಂದಕ್ಕೆ ೧೯೯೦ ಮತ್ತು ೧೯೯೨ರಲ್ಲಿ ತಿದ್ದುಪಡಿ ತರಲಾಗಿದೆ.

“ಸ್ತರಗೋಳದಲ್ಲಿನ ಓಜ಼ೋನ್ ನಾಶಪಡಿಸುವಂತಹ CFC ಗಳು, ಹಲಾನ್‌ಗಳು, ಕಾರ್ಬನ್ ಟೆಟ್ರಕ್ಲೋರೈಡ್‌ಗಳ ಉತ್ಪಾದನೆ ಮತ್ತು ಬಳಕೆಯನ್ನು ೨೦೦೦ ಹೊತ್ತಿಗೆ ಮತ್ತು  ಮಿಥೈಲ್ ಕ್ಲೊರೋಪಾರ್ಮ್‌ಗಳನ್ನು ೨೦೦೫ನೇ ಹೊತ್ತಿಗೆ ನಿಲ್ಲಿಸಬೇಕು” ಎಂದು ಈ ಒಪ್ಪಂದದಲ್ಲಿ ಹೇಳಲಾಗಿದೆ.

ಈ ಶತಮಾನದ ಬೃಹತ್ ಅಂತಾರಾಷ್ಟ್ರೀಯ ಸಾಧನೆಗಳಲ್ಲಿ ಈ ಒಪ್ಪಂದವೂ ಒಂದು ಎಂದು ವಿಶ್ವ ಹವಾಮಾನ ಸಂಸ್ಥೆ (World  Meterological  Organization – WMO) ಮತ್ತು UNEP ಹೇಳಿವೆ. ಅಪಾಯಕಾರಿ ಅನಿಲಗಳಲ್ಲಿ ಕೆಲವನ್ನು ಯಶಸ್ವಿಯಾಗಿ ನಿರ್ಬಂಧಿಸಿರುವುದರಿಂದ ಓಜ಼ೋನ್ ಪದರ ಹಾಗೂ ಭೂಮಿಯ ಜೀವಿಗಳನ್ನು ರಕ್ಷಿಸುವಲ್ಲಿ ಈ ಒಪ್ಪಂದ ಯಶಸ್ವಿಯಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಯಶಸ್ಸನ್ನು ಹೊಂದಲು ಪ್ರಪ್ರಥಮ ಬಾರಿಗೆ ಜಾಗತಿಕ ಪರಿಸರ ನಿಧಿಯನ್ನು ಸ್ಥಾಪಿಸಲಾಯಿತು. ಆಧುನಿಕ ತಂತ್ರಜ್ಞಾನದಲ್ಲಿ ಅತ್ಯಂತ ಅವಶ್ಯವೆನಿಸಿದ್ದ ಓಜ಼ೋನ್ ನಾಶಪಡಿಸುವ ವಸ್ತುಗಳನ್ನು ಈಗ ಅಗತ್ಯವೇ ಇಲ್ಲದ ವಸ್ತುಗಳನ್ನಾಗಿ ಮಾಡಲು ಸಾಧ್ಯವಾಗಿದೆ. ಉತ್ತರ-ದಕ್ಷಿಣ ಗೋಳದ ರಾಷ್ಟ್ರಗಳ ಸಹಕಾರಿ ಸಂಶೋಧನೆಯಿಂದ ಈ ಅಭೂತಪೂರ್ವ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು.

ವಾಯುಗುಣ ಬದಲಾವಣೆಯ ಅಂತರ ಸರ್ಕಾರಿ ಸಮಿತಿ (೧೯೮೭)

Intergovernmental Panel for Climate Change – IPCC

ಜಾಗತಿಕ ಹವಾಗುಣ ಬದಲಾವಣೆಯಿಂದಾಗಿ ಉಂಟಾಗಬಹುದಾದ ಸಮಸ್ಯೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಸಲುವಾಗಿ WMO ಮತ್ತು UNEP ಸಂಸ್ಥೆಗಳು ೧೯೮೮ರಲ್ಲಿ ಈ ಸಮಿತಿಯನ್ನು ರಚಿಸಿತು. ಜಾಗತಿಕ ಬಿಸಿಯೇರುವಿಕೆಯ ಬಗ್ಗೆ ವೈಜ್ಞಾನಿಕ ಜ್ಞಾನವನ್ನು ಮೌಲ್ಯೀಕರಿಸುವುದು ಈ ಸಮಿತಿಯ ಪ್ರಮುಖ ಉದ್ದೇಶವಾಗಿತ್ತು. ಈ ಸಮಿತಿಯ ಸಲಹಾ ಸಾಮರ್ಥ್ಯದಡಿಯಲ್ಲಿ ವಾಯುಗುಣ ಬದಲಾವಣೆಗೆ ಸಂಬಂಧಿಸಿದ ವಿಷಯಗಳ  ಸಾಹಿತ್ಯವನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ವಿಮರ್ಶಿಸಲಾಗುವುದು. ಜೊತೆಗೆ ವಾಯುಗುಣ ಬದಲಾವಣೆಗೆ ಕಾರಣಗಳು, ಆಗಬಹುದಾದ ಪರಿಣಾಮಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಇರುವ ವರದಿಗಳನ್ನು ಮೌಲ್ಯೀಕರಿಸುವುದು. ಇದು ಪ್ರಮುಖವಾಗಿ ವೈಜ್ಞಾನಿಕ ಮತ್ತು ತಾಂತ್ರಿಕ ಪತ್ರಿಕೆಗಳ ಪ್ರಕಟಿತ ಮತ್ತು ವಿಮರ್ಶಿಸಲ್ಪಟ್ಟ ಸಾಹಿತ್ಯವನ್ನು ಆಧರಿಸಿ ವರದಿ ತಯಾರಿಸುವುದು. ೧೯೯೦ರಲ್ಲಿ ಪ್ರಥಮ ಮೌಲ್ಯಮಾಪನ ವರದಿಯನ್ನು ಪ್ರಕಟಿಸಿತು. ಇಂದಿನ ವಾಯುಗುಣ ಬದಲಾವಣೆ ಮಾನವಪ್ರೇರಿತ ಎಂಬ ಬಗ್ಗೆ ಸಮ್ಮತವಿರುವುದನ್ನು ಸ್ಪಷ್ಟಪಡಿಸಿತು. ವಾಯುಗುಣ ಬದಲಾವಣೆ ಒಂದು ಜಾಗತಿಕ ಸಮಸ್ಯೆ. ಇದಕ್ಕೆ ಜಾಗತಿಕ ಮಟ್ಟದ ಪರಿಹಾರಬೇಕೆಂದು ತಿಳಿಸಿತು.

ವಿಶ್ವಸಂಸ್ಥೆಯ ಹವಾಗುಣ ಬದಲಾವಣೆ ಚೌಕಟ್ಟು ಸಮಾವೇಶಕ್ಕಾಗಿ (United Nations Framework Convention on Climate Change – UNFCCC) ಅಂತರ ಸರ್ಕಾರಿ ಚರ್ಚಾ ಸಮಿತಿ ರಚಿಸುವಲ್ಲಿ ಪ್ರಥಮ ಮೌಲ್ಯಮಾಪನ ವರದಿಯಲ್ಲಿನ ಪ್ರಮುಖಾಂಶಗಳು ನಿರ್ಣಾಯಕ ಪಾತ್ರ ವಹಿಸಿದವು. ಈ ಸಮಾವೇಶದ ಒಪ್ಪಂದ ೧೯೯೨ರಲ್ಲಿ ಸಿದ್ಧವಾಯಿತು ಮತ್ತು ೧೯೯೪ರಿಂದ ಜಾರಿಗೆ ಬಂತು. ಹವಾಗುಣ ಬದಲಾವಣೆಯ ಸಮಸ್ಯೆಗಳನ್ನು ಎದುರಿಸಲು ಈ ಸಮಾವೇಶ ಒಂದು ವಿಸ್ತೃತ ನೀತಿ ಚೌಕಟ್ಟು ಒದಗಿಸಿತು. ೧೯೯೫ರಲ್ಲಿ ದ್ವಿತೀಯ ಮೌಲ್ಯಮಾಪನ ವರದಿ ಪ್ರಕಟವಾಯಿತು. ಇದರಿಂದ ಕ್ಯೊಟೋ ಒಪ್ಪಂದವನ್ನು ಒಪ್ಪಿಕೊಳ್ಳಲು ಸಾಧ್ಯವಾಯಿತು.

IPCC ಯ ಅಧ್ಯಕ್ಷರಾದ ಭಾರತದ ವಿಜ್ಞಾನಿ ಡಾ|| ರಾಜೇಂದ್ರಕುಮಾರ್ ಪಚೋರಿಯವರು ತಾಳ್ಮೆಯಿಂದ, ನಿರಂತರ ಪ್ರಯತ್ನದಿಂದ ಮತ್ತು ಸೌಹಾರ್ದಯುತ ಮಾತುಕತೆಯಿಂದ ವಾಯುಗುಣ ಬದಲಾವಣೆಯ ತೀವ್ರತೆಯನ್ನು ಎಲ್ಲ ರಾಷ್ಟ್ರ ನಾಯಕರಿಗೆ ಮನದಟ್ಟು ಮಾಡಿದ್ದಾರೆ. ಜಾಗತಿಕ ಸಮಸ್ಯೆಗೆ ಶ್ರೀಮಂತ, ಬಡರಾಷ್ಟ್ರವೆನ್ನದೆ ಎಲ್ಲರ ಸಾಮೂಹಿಕ ಪ್ರಯತ್ನ ಅತ್ಯಗತ್ಯವೆಂಬುದನ್ನು ತಿಳಿಸಿದ್ದಾರೆ. ವಾಯುಗುಣ ಬದಲಾವಣೆಗೆ ನೈಸರ್ಗಿಕ ಕಾರಣಗಳಿಗಿಂತ ಮಾನವಕೃತ ಚಟುವಟಿಕೆಗಳೇ ಪ್ರಮುಖ ಕಾರಣವೆಂಬುದನ್ನು ಆಧಾರ ಸಹಿತ ವರದಿಯಲ್ಲಿ ಮಂಡಿಸಿದ್ದಾರೆ. ಮೂರನೇ ವರದಿಯಲ್ಲಿ ಮಾನವನ ಚಟುವಟಿಕೆಗಳು ಪ್ರತಿಶತ ೬೮ರಷ್ಟು ಕಾರಣ ಎಂದು ತಿಳಿಸಲಾಯಿತು. ನಾಲ್ಕನೇ ವರದಿಯಲ್ಲಿ ಮಾನವ ಚಟುವಟಿಕೆಗಳು ಪ್ರತಿಶತ ೯೦ರಷ್ಟು ಕಾರಣ ಎಂಬುದನ್ನು ದೃಢಪಡಿಸಿದ್ದಾರೆ. ೨೦೦೭ರ ಶಾಂತಿಗಾಗಿ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು IPCC ಹಾಗೂ ಅಮೆರಿಕಾದ ಮಾಜಿ ಉಪಾಧ್ಯಕ್ಷರಾದ ಆಲ್‌ಗೋರ್‌ರವರಿಗೆ ನೀಡಲಾಯಿತು.

ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿಯ ಸಮಾವೇಶ (೧೯೯೨)

೧೯೯೨ರ ಜೂನ್ ೩ ರಿಂದ ೧೪ರವರೆಗೆ ಬ್ರೆಜಿಲ್ ರಾಜಧಾನಿಯಾದ ರಿಯೊ ಡಿ ಜನೈರೋನಲ್ಲಿ ಭೂಶೃಂಗ ಸಭೆ ನಡೆಯಿತು. ೧೭೮ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ೧೦೦ ದೇಶಗಳು ಅಧ್ಯಕ್ಷರು ಮತ್ತು ೧೦೦೦ಕ್ಕೂ ಅಧಿಕ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಹಾಜರಿದ್ದರು. ಬಡತನ, ಆರ್ಥಿಕ ಸ್ಥಿತಿ ಮತ್ತು ಸಮಾಜಕ್ಕೆ ಸಂಬಂಧಿಸಿದ ಪರಿಸರ ಸಮಸ್ಯೆಗಳ ಬಗ್ಗೆ ಪ್ರಥಮ ಬಾರಿಗೆ ಜಾಗತಿಕ ಗಮನವನ್ನು ಸೆಳೆಯಲಾಯಿತು. ಪರಿಸರ ಅವನತಿಗೆ ಒಳಗಾದರೆ ಮತ್ತು ಸಂಪನ್ಮೂಲಗಳನ್ನು ಅತಿಯಾಗಿ ಬಳಸಿದರೆ ಜನ ಮತ್ತು ಆರ್ಥಿಕತೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಅರಿವು ಉಂಟು ಮಾಡಲಾಯಿತು. ಅಷ್ಟೇ ಅಲ್ಲದೆ ದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟರೆ ಮತ್ತು ಜನರು ಬಡವರಾಗಿದ್ದರೆ ಆಗ ಪರಿಸರವೂ ಹಾಳಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.

ಭೂಶೃಂಗ ಸಭೆಯಲ್ಲಿ ನಾಲ್ಕು ಪ್ರಮುಖ ಒಪ್ಪಂದಗಳಾದವು :

  • ಸುಸ್ಥಿರ ಅಭಿವೃದ್ಧಿಯ ತತ್ವಗಳ ಮೇಲೆ ಪರಿಸರ ಮತ್ತು ಅಭಿವೃದ್ಧಿಯ ರಿಯೋ ಘೋಷಣೆ ಮಾಡಲಾಯಿತು.
  • ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಗುರಿ ಮತ್ತು ಕಾರ್ಯಕ್ರಮಗಳನ್ನು ಅಜೆಂಡ ೨೧ರಲ್ಲಿ ಸೇರಿಸಲಾಗಿದೆ.
  • ಎಲ್ಲ ರೀತಿಯ ಅರಣ್ಯಗಳ ನಿರ್ವಹಣೆ, ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಬೇಕಾದ ಮಾರ್ಗದರ್ಶನದ ತತ್ವಗಳನ್ನು ಸಿದ್ಧಪಡಿಸಲಾಯಿತು. ಅರಣ್ಯ ರಕ್ಷಣೆ ಮತ್ತು ನಿರ್ವಹಣೆಗೆ ಒಪ್ಪಂದವನ್ನು ತಯಾರಿಸಲಾಯಿತು.
  • UNFCCC ಒಪ್ಪಂದ ೧೫೪ ದೇಶಗಳು ಸಹಿ ಹಾಕಿದವು. GHG ಗಳ ಸಾಂದ್ರತೆಯನ್ನು ೧೯೯೦ರಲ್ಲಿದ್ದ ಮಟ್ಟಕ್ಕೆ ಕಡಿಮೆ ಮಾಡುವ ಮೂಲಕ ಹವಾಗುಣ ಬದಲಾವಣೆಯ ತೀವ್ರತೆಯನ್ನು ತಗ್ಗಿಸುವುದೇ ಈ ಒಪ್ಪಂದದ ಪ್ರಮುಖ ಉದ್ದೇಶ. ೧೯೯೪ರ ಮಾರ್ಚ್ ೨೧ರಂದು ಈ ಒಪ್ಪಂದ ಜಾರಿಗೆ ಬಂತು. ಮಾನವನ ಚಟುವಟಿಕೆಗಳಿಂದ ಉಂಟಾಗಿರುವ ಹವಾಗುಣ ಬದಲಾವಣೆಯ ದುಷ್ಪರಿಣಾಮಗಳನ್ನು ತಪ್ಪಿಸಿ ವರ್ತಮಾನ ಹಾಗೂ ಭವಿಷ್ಯ ಜನಾಂಗಕ್ಕೆ ಉತ್ತಮ ಪರಿಸರ ನೀಡುವುದು, ಇಂದಿನ ಜನರ ಜವಾಬ್ದಾರಿ ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಶ್ರೀಮಂತ ರಾಷ್ಟ್ರಗಳು ಮೊದಲಿಗೆ GHG ಗಳ ಇಳಿಕೆಗೆ ಆದ್ಯತೆ ನೀಡಬೇಕು. ಏಕೆಂದರೆ ಅವರೇ ಅಧಿಕ GHG ಗಳು ವಾಯುಗೋಳ ಸೇರಲಿಕ್ಕೆ ಕಾರಣ ಎಂದು ಒತ್ತಾಯಿಸಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು GHG ಗಳ ಹೊರಸೂಸುವಿಕೆಗೆ ಯಾವ ರೀತಿಯಲ್ಲಿಯೂ ಬಾಧ್ಯರಲ್ಲವೆಂಬ ಸೂಚ್ಯಾರ್ಥ ಇದರಲ್ಲಿದೆ.
  • ಜೀವಿವೈವಿಧ್ಯ ಸಮಾವೇಶವು ಜೈವಿಕ ಸಂಪನ್ಮೂಲಗಳ ರಕ್ಷಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಒಪ್ಪಂದ.

ಕ್ಯೊಟೋ ಒಡಂಬಡಿಕೆ (೧೯೯೭)

೧೯೯೭ರ ಡಿಸೆಂಬರ್‌ನಲ್ಲಿ ಜಪಾನಿನ ಕ್ಯೊಟೊನಲ್ಲಿ ೧೬೦ ದೇಶಗಳ ಪ್ರತಿನಿಧಿಗಳು ಸಭೆ ಸೇರಿ ಕ್ಯೊಟೊ ಒಡಂಬಡಿಕೆ ಸಿದ್ಧಪಡಿಸಿದವು. GHG ಗಳ ಹೊರಸೂಸುವಿಕೆಯಲ್ಲಿ ಕಡಿತ ಉಂಟು ಮಾಡುವ ಚಾರಿತ್ರಿಕ ಒಪ್ಪಿಗೆ ನೀಡಿದ್ದು ಮಹತ್ವದ ಅಂಶ. ಕೈಗಾರಿಕಾ ದೇಶಗಳು GHG ಗಳ ಹೊರಸೂಸುವಿಕೆ ಸೀಮಿತಗೊಳಿಸಲು ಕರಡನ್ನು ಸಿದ್ಧಪಡಿಸಿದರು. ಈ ಒಪ್ಪಂದಕ್ಕೆ ೮೪ ದೇಶಗಳು ಮಾತ್ರ ಸಹಿ ಹಾಕಿವೆ.

ಕೈಗಾರಿಕಾ ದೇಶಗಳು ತಮ್ಮ GHG ಹೊರಸೂಸುವಿಕೆಯನ್ನು ಒಂದು ನಿರ್ದಿಷ್ಟ ಅವಧಿಯಲ್ಲಿ ಸರಾಸರಿ ೫ ರಷ್ಟು ಇಳಿಕೆ ಮಾಡಲು ಒಪ್ಪಲಾಯಿತು. ೧೯೯೦ರಲ್ಲಿದ್ದ GHG ಹೊರಸೂಸುವಿಕೆ ಪ್ರಮಾಣಕ್ಕೆ ೮% ಇಳಿಕೆಯನ್ನು ಯುರೋಪ್ ದೇಶಗಳು, ಅಮೆರಿಕಾ ೭% ರಷ್ಟು ಮತ್ತು ಜಪಾನ್ ೬% ಇಳಿಕೆ ಮಾಡಬೇಕೆಂದು ತೀರ್ಮಾನಿಸಲಾಯಿತು. GHG ಯ ಪ್ರಮುಖ ಅನಿಲಗಳಾದ CO2, CH4, N2O ಹೈಡ್ರೊ ಪ್ಲೊರೋ ಕಾರ್ಬನ್‌ಗಳು, ಪರ್‌ಪ್ಲೊರೋ ಕಾರ್ಬನ್‌ಗಳು ಮತ್ತು ಸಲ್ಫರ್ ಹೆಕ್ಸಪ್ಲೂರೈಡ್‌ಗಳ ಹೊರಸೂಸುವಿಕೆಯಲ್ಲಿ ಇಳಿಕೆ ಮಾಡಲು ಒಪ್ಪಲಾಯಿತು.

ಈ ಗುರಿಗಳನ್ನು ಅಧಿಕ ವೆಚ್ಚವಿಲ್ಲದೆ ಸಾಧಿಸಲು ಕ್ಯೊಟೊ ಒಡಂಬಡಿಕೆಯು ಹೊಂದಿಕೊಳ್ಳಬಲ್ಲ (Flexible) ಮಾರುಕಟ್ಟೆ ಆಧಾರಿತ ವಿಧಾನಗಳನ್ನು ಒಳಗೊಂಡಿದೆ.

. ರಾಷ್ಟ್ರಗಳಲ್ಲಿ ಅಂತಾರಾಷ್ಟ್ರೀಯ ಹೊರಸೂಸುವಿಕೆ ವಹಿವಾಟು (ವ್ಯಾಪಾರ)

ಯಾವ ರಾಷ್ಟ್ರಗಳು ಅಥವಾ ಕಂಪನಿಗಳು GHG ಗಳ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವುದು ಅತಿ ದುಬಾರಿ ಎಂದು ಪರಿಗಣಿಸುತ್ತವೆಯೋ ಅವು ನಿಗಧಿತ GHG ಹೊರಸೂಸುವಿಕೆಯಲ್ಲಿ ಯಶಸ್ಸು ಪಡೆದಿರುವ ಇತರೆ ರಾಷ್ಟ್ರಗಳು ಅಥವಾ ಕಂಪನಿಗಳಿಂದ ಕೊಳ್ಳಬಹುದು. ಈ ವ್ಯಾಪಾರವನ್ನು ಕಾರ್ಬನ್ ವಹಿವಾಟು (Carbon Trading) ಎನ್ನುವರು.


೨. ಸ್ವಚ್ಛ ಅಭಿವೃದ್ಧಿ ವಿಧಾನ (
Clean Development Mechanism-CDM)

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಯೋಜನೆಗಳಿಂದ ಪ್ರಮಾಣೀಕೃತ ಹೊರಸೂಸುವಿಕೆ ಯಲ್ಲಿನ ಇಳಿಕೆಯನ್ನು ಕೈಗಾರಿಕಾ ರಾಷ್ಟ್ರಗಳು ಬಳಸಲು ಅವಕಾಶವಿದೆ.

. ಜಂಟಿ ಜಾರಿಗೊಳಿಸುವಿಕೆ (Joint implementation – JI) :

ಇತರೆ ಕೈಗಾರಿಕಾ ದೇಶಗಳಲ್ಲಿನ ಯೋಜನೆಗಳಿಂದ ಪ್ರಮಾಣೀಕೃತ ಹೊರಸೂಸುವಿಕೆ ಯಲ್ಲಿನ ಇಳಿಕೆಯನ್ನು ಕೈಗಾರಿಕಾ ರಾಷ್ಟ್ರಗಳು ಬಳಸಲು ಅವಕಾಶವಿದೆ.

ಈ ಒಡಂಬಡಿಕೆ ಜಾರಿಯಾಗಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ೧೯೯೦ರಲ್ಲಿ CO2 ಹೊರಸೂಸುವಿಕೆಯಲ್ಲಿ ೫೫% ಪಾಲು ಹೊಂದಿರುವ ಕನಿಷ್ಠ ೫೫ ರಾಷ್ಟ್ರಗಳು ಒಪ್ಪಬೇಕು ಅಥವಾ ಸಹಿ ಹಾಕಬೇಕು. ಸುಮಾರು ೩೫% ಹೊರಸೂಸುವಿಕೆಗೆ ಕಾರಣವಾಗಿರುವ ಅಮೆರಿಕಾ ದೇಶ ಈ ಒಡಂಬಡಿಕೆಗೆ ಸಹಿ ಹಾಕಲು ತಿರಸ್ಕರಿಸಿದೆ. ಇದಕ್ಕೆ ಸಹಿ ಹಾಕಿದರೆ ಅಮೆರಿಕಾದ ಆರ್ಥಿಕತೆಗೆ ಭಾರಿ ಪೆಟ್ಟು ಬೀಳುವುದು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಈ ಒಡಂಬಡಿಕೆ ಯಾವ ನಿರ್ಬಂಧವನ್ನು ಹೇರಿಲ್ಲ ಎಂಬ ಕಾರಣದಿಂದ ಒಡಂಬಡಿಕೆಯನ್ನು ತಿರಸ್ಕರಿಸಿದೆ.

ಹವಾಗುಣ ಬದಲಾವಣೆಯನ್ನು ತಡೆಗಟ್ಟಲು ವಿವಿಧ ಪ್ರಯತ್ನಗಳನ್ನು ಕೈಗೊಂಡರೆ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ವಾದಿಸುತ್ತವೆ. ಪರಿಸರಸ್ನೇಹಿ ಮತ್ತು ಕಡಿಮೆ ಬಂಡವಾಳ ತಂತ್ರಜ್ಞಾನ ದೊರೆತಾಗ ಮಾತ್ರ ಅಭಿವೃದ್ಧಿಶೀಲ ರಾಷ್ಟ್ರಗಳು ಹವಾಗುಣ ಬದಲಾವಣೆ ಇಳಿಕೆಯಲ್ಲಿ ಭಾಗವಹಿಸಬಹುದು. ಫಾಸಿಲ್ ಇಂಧನ ದಹಿಸುವ ತಂತ್ರಜ್ಞಾನಕ್ಕೆ ಬದಲಿಯಾಗಿರುವ ತಂತ್ರಜ್ಞಾನವನ್ನು ಮತ್ತು ಬಂಡವಾಳವನ್ನು ಶ್ರೀಮಂತ ರಾಷ್ಟ್ರಗಳು ನೀಡಬೇಕು. ವಾಸ್ತವವಾಗಿ ಸ್ಥಳೀಯ ಪರಿಸರ ಬಿಕ್ಕಟ್ಟುಗಳನ್ನು ಪರಿಹರಿಸುವ ಜೊತೆ ಜೊತೆಗೆ GHG ಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಅವಕಾಶಗಳಿವೆ. ಕೆಲವು ದೇಶಗಳು ಈ ದಿಶೆಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿವೆ.

UNFCC ಯ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳು (COP) ಆಗಾಗ್ಗೆ ಸಭೆ ಸೇರಿ ಪ್ರಗತಿಯನ್ನು ವಿಮರ್ಶಿಸುತ್ತಿವೆ ಹಾಗೂ ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುತ್ತಿವೆ.

ಇದುವರೆವಿಗೆ COP ಗಳ ಹತ್ತು ಸಭೆಗಳಾಗಿವೆ.

—-

ನಿಷ್ಠುರ ಸತ್ಯದ ಆಲ್‌ಗೋರ್

೨೦೦೭ರ ಶಾಂತಿಗಾಗಿ ಮೀಸಲಾದ ನೊಬೆಲ್ ಪ್ರಶಸ್ತಿ ಆಲ್‌ಗೋರ್ ಮತ್ತು IPCC ಗೆ ದೊರಕಿತು. ‘ಓಜ಼ೋನ್ ಮನುಷ್ಯ’ನೆಂದೇ ಖ್ಯಾತಿ ಪಡೆದಿದ್ದ ಆಲ್‌ಗೋರ್ ಅಮೆರಿಕಾದ ಮಾಜಿ ಉಪಾಧ್ಯಕ್ಷ. ಹವಾಗುಣ ಬದಲಾವಣೆಯ ವಿಶ್ವದಾದ್ಯಂತ ಜಾಗೃತಿ ಮೂಡಿಸಿದ ಸಲುವಾಗಿ ಈ ಪ್ರಶಸ್ತಿ ನೀಡಲಾಯಿತು. ಆಲ್‌ಗೋರ್ ಸಿದ್ಧಪಡಿಸಿದ ಸ್ಲೈಡ್‌ಶೋ-ಡಾಕ್ಯುಮೆಂಟರಿ ಚಲನಚಿತ್ರ ‘ಇನ್‌ಕನ್ವೀಯನೆಂಟ್ ಟ್ರೂಥ್’ (ನಿಷ್ಠುರ ಸತ್ಯ) ವಾಯುಗುಣ ಬದಲಾವಣೆಯ ಕಾರಣಗಳು, ಪರಿಣಾಮಗಳು ಹಾಗೂ ಪರಿಹಾರೋಪಾಯಗಳ ಚಿತ್ರವಾಗಿದೆ. ಈ ಚಲನಚಿತ್ರಕ್ಕೆ ಅತ್ಯುತ್ತಮ ಡಾಕ್ಯುಮೆಂಟರಿ ಮತ್ತು ಅತ್ಯುತ್ತಮ ಹಾಡಿಗಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆಯಿತು.

೧೯೮೨ರಲ್ಲಿಯೇ ಆಲ್‌ಗೋರ್‌ರವರು ಅಮೆರಿಕಾ ಲೋಕಸಭೆ ಪ್ರತಿನಿಧಿಗಳಿಗೆ ಜಾಗತಿಕ ಬಿಸಿಯೇರುವಿಕೆಯ ಬಗ್ಗೆ ಹವಾಗುಣ ತಜ್ಞ ಜೇಮ್ಸ್ ಹಾನ್ಸನ್‌ರವರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರು.

೧೯೮೯ರಲ್ಲಿ ಅಮೆರಿಕಾದ ಸೆನೆಟ್ ಸದಸ್ಯರಿಗೆ ಹವಾಗುಣ ಬದಲಾವಣೆಯ ಅಂಕಿ ಅಂಶಗಳನ್ನು ಡಾ|| ಹಾನ್ಸನ್ ವಿವರಿಸಲು ಬಂದಾಗ ನಾಸ ಸಮಸ್ಥೆಯು ಅವರ ಮೇಲೆ ಒತ್ತಡ ಹೇರಿ ಕೆಲವು ವಿಷಯಗಳನ್ನು ಪ್ರಸ್ತಾಪಿಸದಿರಲು ತಿಳಿಸಿತ್ತು. ಆಗ ಹಾನ್ಸನ್‌ರವರು ತಮ್ಮ ಮೂಲ ಪ್ರಬಂಧವನ್ನು ಸೆನೆಟ್ ಸಭೆ ಅಧ್ಯಕ್ಷರಾಗಿದ್ದ ಆಲ್‌ಗೋರ್‌ಗೆ ಫ್ಯಾಕ್ಸ್ ಮಾಡಿದ್ದರು. ಸಭೆಯಲ್ಲಿ ಹಾನ್ಸನ್ ಮಾತನಾಡುವಾಗ, ನ್ಯಾಸದ ಅಧಿಕೃತ ವರದಿ ಬಿಟ್ಟು ನಿಮ್ಮ ಪ್ರತ್ಯೇಕ ವರದಿ ಇದೆಯೇ ಎಂದು ಪ್ರಶ್ನಿಸಿ, ಎಲ್ಲ ವಿವರಗಳನ್ನು ಮಂಡಿಸುವಂತೆ ತಿಳಿಸಿದರು.

ಆಲ್‌ಗೋರ್ ವಿಶ್ವದಾದ್ಯಂತ ಪ್ರವಾಸ ಮಾಡುತ್ತಾ ತನ್ನ ಸ್ಲೈಡ್‌ಶೋಗಳ ಮೂಲಕ IPCC ತಿಳಿಸಿರುವ ಹವಾಗುಣ ಬದಲಾವಣೆಗೆ ಮಾನವ ಕೃತ ಅಪರಾಧಗಳೇ ಪ್ರಮುಖವೆಂದು ತಿಳಿಸುತ್ತಾ ಜನಜಾಗೃತಿ ಉಂಟು ಮಾಡಿದ್ದಾರೆ.