ವಿಶ್ವದಲ್ಲಿ ಭಾರತ ಏಳನೇ ಬೃಹತ್ ರಾಷ್ಟ್ರ. ಏಷ್ಯಾ ಖಂಡದಲ್ಲಿ ಎರಡನೇ ದೊಡ್ಡದೇಶ. ಜನಸಂಖ್ಯೆಯಲ್ಲಿ ಭಾರತಕ್ಕೆ ವಿಶ್ವದಲ್ಲಿ ಎರಡನೇ ಸ್ಥಾನ. ಕ್ರಿ.ಶ. ೨೦೦೦ ರಲ್ಲಿ ನೂರುಕೋಟಿ ಜನಸಂಖ್ಯೆ ದಾಟಿದ ಕೀರ್ತಿ ನಮ್ಮದು. ಇಲ್ಲಿಯ ವಾಯುಗುಣದಲ್ಲಿ ಎರಡು ಪ್ರಮುಖ ಮಳೆಗಾಲಗಳಿವೆ. ಮುಂಗಾರು ಮಾರುತಗಳು ಮೇ ನಿಂದ ಸೆಪ್ಟೆಂಬರ್ ತಿಂಗಳುಗಳ ವಾಯುಗುಣ ನಿರ್ಧರಿಸುತ್ತವೆ. ಹಿಂಗಾರು ಮಾರುತಗಳು ನವೆಂಬರ್ ನಿಂದ ಫೆಬ್ರವರಿ ತಿಂಗಳುಗಳ ವಾಯುಗುಣವನ್ನು ನಿರ್ಧರಿಸುತ್ತವೆ. ಭಾರತಕ್ಕೆ ಜನದಟ್ಟಣೆಯಿರುವ ೬೫೦೦ ಕಿಲೋಮೀಟರಿಗೂ ಹೆಚ್ಚಿನ ಕಡಲ ತೀರವಿದೆ.

ಪುರಾತನ ಕಾಲದಿಂದಲೂ ಭಾರತೀಯರು ಪ್ರಕೃತಿ-ಪರಿಸರವನ್ನು ಪೂಜ್ಯ ಭಾವನೆಯಿಂದ ನೋಡುತ್ತಾ ಬಂದಿದ್ದಾರೆ. ಹಿಂದೂ, ಜೈನ ಮತ್ತು ಬೌದ್ಧ ಧರ್ಮದ ಗ್ರಂಥಗಳು ನಿಸರ್ಗದ ಪ್ರಾಮುಖ್ಯತೆಯನ್ನು ಎತ್ತಿಹಿಡಿದಿವೆ. ಭೂತಾಯಿ, ವಾಯು, ಜಲ, ವೃಕ್ಷ, ಪ್ರಾಣಿ ಮುಂತಾದವುಗಳ ಬಗ್ಗೆ ಗೌರವಾದರಗಳಿವೆ. ಅರಣ್ಯಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅರಣ್ಯದ ಕೆಲವ ಪ್ರದೇಶಗಳನ್ನು ದೇವರುಗಳಿಗೆ ಮುಡಿಪಿಡುವ ರೂಢಿ ಇಲ್ಲಿದೆ. ಅರಳಿ, ತುಳಸಿಯಂತಹ ಗಿಡಮರಗಳನ್ನು ನಾವು ಪೂಜಿಸುತ್ತೇವೆ. ಚಂದ್ರಗುಪ್ತ ಮೌರ್ಯ ಮತ್ತು ಅಶೋಕನ ಕಾಲದಿಂದಲೇ ಪ್ರಕೃತಿಯ ರಕ್ಷಣೆ ಮತ್ತು ಸಂರಕ್ಷಣೆಗೆ ಮಹತ್ವ ನೀಡಲಾಗಿದೆ. ಈ ಸಂಪ್ರದಾಯವನ್ನು ಮೊಘಲರ ಕಾಲದಲ್ಲಿ ಮುಂದುವರೆಸಲಾಯಿತು. ಜಹಾಂಗೀರ್, ಅಕ್ಬರ್ ಮತ್ತು ಷಹಜಹಾನ್ ಚಕ್ರವರ್ತಿಗಳು ಪ್ರಕೃತಿಯನ್ನು ಪ್ರೀತಿಸುತ್ತಿದ್ದರು. ಅವರು ಉತ್ತರ ಭಾರತದ ಕೆಲವು ಪ್ರದೇಶಗಳನ್ನು ಗುರುತಿಸಿ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಿದರು.

೧೯೭೨ರಲ್ಲಿ ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ಮಾತನಾಡುತ್ತಾ ಭಾರತಕ್ಕೆ ಅಭಿವೃದ್ಧಿಯೆಂದರೆ ಆಹಾರ, ನೀರು,  ನೈರ್ಮಲ್ಯ ಮತ್ತು ವಸತಿ ಒದಗಿಸಲು ಬದುಕಲು ಪರಿಸರವನ್ನು ಉತ್ತಮಪಡಿಸುವುದು, ಮರಳುಗಾಡನ್ನು ಹಸಿರು ಮಾಡುವುದು ಮತ್ತು ಪರ್ವತಗಳನ್ನು ಆವಾಸಯೋಗ್ಯವನ್ನಾಗಿ ಮಾಡುವುದೆಂದು ತಿಳಿಸಿದ್ದರು. ಅನಂತರ ಭಾರತ ಪರಿಸರ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾರಂಭಿಸಿತು.

ಭಾರತವು ವಿಶ್ವದ ಉಷ್ಣವಲಯದಲ್ಲಿರುವುದರಿಂದ ಜಾಗತಿಕ ಬಿಸಿಯೇರುವಿಕೆಯಿಂದ ಮತ್ತಷ್ಟು ಹೆಚ್ಚಿದ ಉಷ್ಣತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಭಾರತವು ಒಂದು ಪರ್ಯಾಯ ದ್ವೀಪವಾಗಿರುವ ಕಾರಣ ಸಮುದ್ರ ಮಟ್ಟ ಏರುವುದರಿಂದ ಗಣನೀಯ ಪ್ರಮಾಣದ ಭೂಪ್ರದೇಶ ಮುಳುಗಡೆಯಾಗುವುದು ಹಾಗೂ ಕಡಲ ಕೊರೆತಕ್ಕೆ ಒಳಗಾಗುವುದು. ೨೦೩೫ರ ವೇಳೆಗೆ ಒಂದು ಮೀಟರ್ ಸಮುದ್ರ ಮಟ್ಟ ಹೆಚ್ಚಿ ಪಶ್ಚಿಮ ಬಂಗಾಳದ ಸುಂದರ ಬನ ಪ್ರದೇಶದ ದ್ವೀಪಗಳು ಮುಳುಗುತ್ತವೆ. ಒರಿಸ್ಸಾ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತಿನ ತೀರ ಪ್ರದೇಶಗಳು ಮುಳುಗಡೆಯಾಗುತ್ತವೆ. ಒಂದು ವೇಳೆ ಸಮುದ್ರದ ಮಟ್ಟ ಎರಡು ಮೀಟರ್‌ನಷ್ಟು ಏರಿದರೆ ಭಾರತದ ಭೂಪಟ ಪಕ್ಕದ ಚಿತ್ರದಲ್ಲಿರುವಂತೆ ಬದಲಾಗುವ ಸಾಧ್ಯತೆ ಹೆಚ್ಚಿದೆ. ಪುಣೆಯಲ್ಲಿರುವ ಉಷ್ಣ ವಲಯದ ಹವಾಮಾನ ಸಂಸ್ಥೆಯ ಡಾ|| ಜಿ.ಬಿ. ಪಂತ್‌ರವರು ಭಾರತದ ಹವಾಮಾನ ಪದ್ಧತಿಯನ್ನು ಅಧ್ಯಯನ ಮಾಡಿದ್ದಾರೆ. ಅವರ ಅಧ್ಯಯನ ಸೂಚಿಸಿರುವಂತೆ ಕಳೆದ ಮೂರು ದಶಕಗಳಲ್ಲಿ ಭಾರತದ ಉಷ್ಣತೆಯು ಹೆಚ್ಚಾಗಿದೆ. ಭಾರತದ ಸರಾಸರಿ ಉಷ್ಣತೆಯು ೦.೪೦ ಸೆ. ರಷ್ಟು ಕಳೆದ ಶತಮಾನದ ಮೊದಲ ಭಾಗದಲ್ಲಿ ಹೆಚ್ಚಾಗಿದೆ. ಕಳೆದ ೩೦ ವರ್ಷಗಳಲ್ಲಿ ೦.೬೦ಸೆ. ಉಷ್ಣತೆ ಏರಿದೆ. ಭಾರತದಲ್ಲಿ ಹಗಲು ಗಳು ಹೆಚ್ಚು ಉಷ್ಣತೆಯನ್ನು ಹೊಂದಿದವು ಗಳಾಗಿ ಬದಲಾಗಿವೆ. ರಾತ್ರಿಗಳ ಉಷ್ಣತೆ ಮೊದಲಿನಂತೆಯೇ ಇದೆ. ಈ ಕಾರಣದಿಂದ ಗರಿಷ್ಠ ಹಾಗೂ ಕನಿಷ್ಠ ಉಷ್ಣತೆಗಳ ನಡುವಿನ ವ್ಯತ್ಯಾಸ ಹೆಚ್ಚಾಗಿದೆ. ಆದ್ದರಿಂದ ಭಾರತದ ಹವಾಮಾನ ಬದಲಾಗುತ್ತಿದೆ ಎಂದು ದೃಢವಾಗಿ ಹೇಳಬಹುದು. ಕಳೆದ ಹತ್ತು ವರ್ಷಗಳಲ್ಲಿ ಮಳೆ ಬೀಳುವ ಪ್ರಮಾಣ ಹೆಚ್ಚಾಗಿದೆ. ೧೯೮೮ರಲ್ಲಿ ಭಾರತದಲ್ಲಿನ ಮಳೆ ಪ್ರಮಾಣ ಸರಾಸರಿಗಿಂತ ಹೆಚ್ಚಿತ್ತು. ಬಹುಶಃ ಜಾಗತಿಕ ಬಿಸಿಯೇರುವಿಕೆಯ ಪರಿಣಾಮವೇ ಇರಬಹುದು. ಬೇಸಿಗೆ ಕಾಲದಲ್ಲಿ ಮಣ್ಣಿನಲ್ಲಿರುವ ತೇವಾಂಶವನ್ನು ಅಧ್ಯಯನ ಮಾಡಿ ಜಾಗತಿಕ ಹವಾಮಾನ ಬದಲಾವಣೆಯ ಮಾದರಿಗಳನ್ನು ಸಲಹೆ ಮಾಡುವ ವಿಜ್ಞಾನಿಗಳು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಮಳೆ ಬೀಳಬಹುದೆಂದು ಹೇಳುತ್ತಾರೆ. ೧೯೯೮ರ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಹಿಮಾಲಯ ಪ್ರದೇಶದಲ್ಲಿ ಬಾರಿ ಮಳೆ ಸುರಿಯಿತು. ಭೂಕುಸಿತಗಳು ಉಂಟಾದವು. ಉತ್ತರ ಪ್ರದೇಶದ ರುದ್ರ ಪ್ರಯಾಗದಲ್ಲಿ ಉಂಟಾದ ಭೂಕುಸಿತದಿಂದ ೬೫ ಜನ ಪ್ರವಾಸಿಗಳು ಸಾವನ್ನಪ್ಪಿದರು. ಇತ್ತೀಚಿನ ವರ್ಷಗಳಲ್ಲಿ ಭಾರತದ ಕೆಲವು ಕಡೆ ಬೇಸಗೆಯಲ್ಲಿ ಬಿಸಿಗಾಳಿ ಬೀಸುವ ಪ್ರಮಾಣ ಹೆಚ್ಚಾಗಿ ಸಾವು ನೋವುಗಳಾಗಿರುವುದನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಅದೇ ರೀತಿ ಹಲವು ಕಡೆ ಕುಂಭದ್ರೋಣ ಮಳೆ ಸುರಿದು ಅನೇಕ ಜನ ಪ್ರವಾಹಕ್ಕೆ ತುತ್ತಾಗಿರುವುದು ನಮ್ಮ ನೆನಪಿನಲ್ಲಿದೆ. ಚಳಿಗಾಲದಲ್ಲಿ ಅತಿ ಚಳಿಯೂ ವರದಿಯಾಗಿದೆ. ಹಿಮಾಲಯದಲ್ಲಿ ಹಿಮಚ್ಛಾದಿತ ಪ್ರದೇಶ ಕಡಿಮೆಯಾಗುತ್ತದೆ. ಪರ್ವತಗಳ ಮೇಲಿದ್ದ ಹಿಮದ ಪ್ರಮಾಣ ಕಡಿಮೆಯಾಗುತ್ತಿದೆ. ತಪ್ಪಲುಗಳಲ್ಲಿ ಹರಡಿದ್ದ ಹಿಮರಾಶಿ ಹಿಂದಕ್ಕೆ ಸರಿಯುತ್ತಿದೆ. ಆ ಕಾರಣದಿಂದ ಹಿಮಾಲಯದಿಂದ ಹುಟ್ಟಿ ಬರುವ ನದಿಗಳು ಉಕ್ಕಿ ಹರಿಯುವುದು ಹೆಚ್ಚುತ್ತಿದೆ.

ಪಿ.ವಿ. ಜೋಷ್ ಭಾರತದ ಹವಾಮಾನ ವಿಭಾಗದ ನಿವೃತ್ತ ನಿರ್ದೇಶಕರು : “ಹಿಂದೂ ಮಹಾಸಾಗರದ ಮಧ್ಯಭಾಗದ ಮೇಲ್ಮೈನಲ್ಲಿ (ಶ್ರೀಲಂಕಾದ ದಕ್ಷಿಣದ ಕಡೆ) ೧.೫೦ ಸೆ. ಅಧಿಕ ಉಷ್ಣತೆ ಉಂಟಾಗಿದೆ. ಕಳೆದ ೫೦ ವರ್ಷಗಳಲ್ಲಿ ಉಂಟಾಗಿರುವ ಈ ಬದಲಾವಣೆಯಿಂದ ಮಲಯ ಮಾರುತಗಳ ಚಲನೆಯಲ್ಲಿ ವ್ಯತ್ಯಾಸಗಳಾಗುತ್ತಿವೆ. ಇದರಿಂದ ಭೂಮಧ್ಯರೇಖೆಯ ಸಮೀಪ ಸಾಗರಗಳ ಮೇಲೇ ಅಧಿಕ ಮಳೆ ಬೀಳಬಹುದು. ಬಂಗಾಳ ಕೊಲ್ಲಿ ಪ್ರದೇಶದಲ್ಲಿ ವಾಯುಭಾರ ಕುಸಿತಗಳ ಸಂಖ್ಯೆ ಕಡಿಮೆಯಾಗಿದೆ. ಮಹಾರಾಷ್ಟ್ರದಲ್ಲಿ ಅಧಿಕ ಮಳೆ ಉಂಟಾಗುತ್ತಿದೆ ಎಂದು ಕಳೆದ ೧೦೦ ವರ್ಷಗಳ ಅಂಕಿ ಅಂಶಗಳು ತೋರಿಸುತ್ತವೆ.” ಎಂದು ತಿಳಿಸಿದ್ದಾರೆ.

ಜಾಗತಿಕ ಬಿಸಿಯೇರುವಿಕೆಯಿಂದ ಭಾರತದ ಕೃಷಿಕ್ಷೇತ್ರದಲ್ಲಿಯೂ ಬದಲಾವಣೆ ಗಳಾಗುತ್ತವೆ. IPCC ವರದಿಯ ಪ್ರಕಾರ ಉಷ್ಣತೆ ೨೦ ಸೆ. ಹಾಗೂ ಮಳೆಯಲ್ಲಿ ೭% ಅಧಿಕವಾದರೆ ಕೃಷಿ ಉತ್ಪಾದನೆಯಲ್ಲಿ ಸುಮಾರು ೮% ಕುಸಿತ ಉಂಟಾಗುತ್ತದೆ. ಹಿಮಾಲಯ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವುದು. ಪುಣೆಯಲ್ಲಿರುವ ರಾಷ್ಟ್ರೀಯ ಹವಾಗುಣ ಬದಲಾವಣೆ ಕೇಂದ್ರದ ವರದಿಯಂತೆ ಭಾರತದಲ್ಲಿ ಧಾನ್ಯ ಬೆಳೆಯುವ ಪ್ರದೇಶಗಳಲ್ಲಿ ಮಳೆಯು ಜುಲೈ ತಿಂಗಳಲ್ಲಿ ಕಡಿಮೆಯಾಗಿದೆ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚಾಗಿದೆ. ಮಲಯ ಮಾರುತಗಳಲ್ಲಿಯೂ ವ್ಯತ್ಯಾಸಗಳಾಗಿವೆ. ಅವು ಹೆಚ್ಚು ಪಶ್ಚಿಮ ಕಡೆ ಸಾಗುತ್ತಿವೆ. ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚಿನ ಮಳೆ ಸುರಿದು ಪ್ರವಾಹಗಳಿಗೆ ಕಾರಣವಾಗುತ್ತಿದೆ. ಏರಿದ ಉಷ್ಣತೆಯಿಂದ ಪರಾಗಸ್ಪರ್ಶ ಕ್ರಿಯೆಯಲ್ಲಿ ಏರುಪೇರಾಗುವುದು, ರೋಗಗಳ ಪ್ರಮಾಣ ಹೆಚ್ಚುವುದು, ಕೃಷಿಯಲ್ಲಿ ನೀರಿನ ಬೇಡಿಕೆ ಹೆಚ್ಚುವುದು, ಜಲ ಸಂಪನ್ಮೂಲಗಳು ನೀರಿನ ಕೊರತೆಯಿಂದ ಬಳಲುವವು ಹಾಗೂ ಅಂತರ್ಜಲದ ಮಟ್ಟ ಕುಸಿಯುವುದು. ಈ ಎಲ್ಲ ಬದಲಾವಣೆಗಳಿಗೆ ರೈತರು ಸ್ಪಂದಿಸಬೇಕಾಗುವುದು. ಅವರ ಜೀವನ ಮತ್ತಷ್ಟು ದುಸ್ತರವಾಗುವುದು. ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೂ ಜಾಗತಿಕ ಬಿಸಿಯೇರುವಿಕೆಗೂ ನೇರ ಸಂಬಂಧವಿದೆಯೆಂದು ಕೆಲವರು ಹೇಳುತ್ತಿದ್ದಾರೆ.

ಕರ್ನಾಟಕದ ಮೇಲೆ ಜಾಗತಿಕ ಬಿಸಿಯೇರುವಿಕೆಯ ಪರಿಣಾಮಗಳೇನು?

ಮುಂಗಾರು ಮತ್ತು ಹಿಂಗಾರು ಮಳೆ ಬೀಳುವ ಸಮಯ ಹಾಗೂ ಪ್ರಮಾಣದಲ್ಲಿ ಏರುಪೇರಾಗುವುದು. ಬೆಂಗಳೂರು, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆ ಬೀಳುವ ಪ್ರಮಾಣ ಈಗಾಗಲೇ ಹೆಚ್ಚಾಗಿದೆ ಎಂದು ವರದಿಯಾಗಿದೆ. ಉತ್ತರ ಕರ್ನಾಟಕದಲ್ಲಿಯೂ ಮಳೆ ಕೆಲವು ಕಡೆ ಒಮ್ಮೆಲೇ ಸುರಿದು ಪ್ರವಾಹಕ್ಕೆ ಎಡೆ ಮಾಡಿಕೊಡುತ್ತಿದೆ. ವಾತಾವರಣದ ಉಷ್ಣತೆ ಏರುವುದರಿಂದ ಸಾಂಕ್ರಾಮಿಕ ರೋಗಗಳು ವಿಶೇಷವಾಗಿ ನುಸಿಪೀಡೆ, ಮೆದುಳು ಜ್ವರ, ಚಿಕುನ್‌ಗೂನ್ಯ ಮುಂತಾದವುಗಳು ಜನರನ್ನು ಹೆಚ್ಚು ಕಾಡುವ ಸಾಧ್ಯತೆ ಇದೆ. ಮಂಗಳೂರು, ಉಡುಪಿ ಹಾಗೂ ಕಾರವಾರದ ಕರಾವಳಿಗಳಲ್ಲಿ ಕಡಲ ಕೊರೆತ, ಅಲೆಗಳ ಆರ್ಭಟ ಹೆಚ್ಚುವುದು. ಅಳಿವೆ ಕಾಂಡ್ಲವನಗಳು ಆಘಾತಕ್ಕೆ ಒಳಗಾಗುವುವು. ಕರಾವಳಿಯ ಪ್ರದೇಶದ ಹಿನ್ನೀರುಗಳಲ್ಲಿ ಉಪ್ಪಿನ ಅಂಶ ಹೆಚ್ಚಾಗಿ ಫಲವತ್ತಾದ ಕೃಷಿ ಭೂಮಿ ಅವನತಿಗೆ ಒಳಗಾಗುವುದು.

ನದಿ, ಕೆರೆಗಳು ಒಣಗಿ ಹೋಗುವ ಪ್ರಮಾಣ ಹೆಚ್ಚುವುದು. ಅಂತರ್ಜಲ ಮಟ್ಟ ಹೆಚ್ಚು ಕುಸಿಯುವುದು, ಪಶ್ಚಿಮ ಘಟ್ಟದಲ್ಲಿ ಅರಣ್ಯ ದಟ್ಟಣೆ ಕಡಿಮೆಯಾಗುವುದು. ಕಾಫಿ, ಅಡಿಕೆ ಬೆಳೆಗಳು ನಷ್ಟ ಅನುಭವಿಸಬೇಕಾಗುವುವು. ಪರಾಗಸ್ಪರ್ಶ ಕ್ರಿಯೆ ನಡೆಸುವ ಚಿಟ್ಟೆಗಳು, ದುಂಬಿಗಳು ಕಡಿಮೆಯಾಗುವುದರಿಂದ ಇಳುವರಿಯೂ ಕಡಿಮೆಯಾಗುವುದು.

ಭಾರತದ ಸಿದ್ಧತೆ

ಹವಾಗುಣ ಬದಲಾವಣೆಗೆ ಭಾರತವು ಹೊಂದಿಕೊಳ್ಳಲು ಮತ್ತು ಅಲ್ಪಸ್ವಲ್ಪ ತಡೆಗಟ್ಟಲು ಪ್ರಯತ್ನಿಸುತ್ತಿದೆ. ಹಸಿರು ಪ್ರದೇಶ ವಿಸ್ತರಿಸಲು, ನಿಸರ್ಗದ ಸಂಪನ್ಮೂಲಗಳನ್ನು ರಕ್ಷಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ೨೦೦೮ರ ಜುಲೈನಲ್ಲಿ ಭಾರತ ಸರ್ಕಾರವು ‘ಹವಾಗುಣ ಬದಲಾವಣೆಗೆ ರಾಷ್ಟ್ರೀಯ ಕಾರ್ಯ ಯೋಜನೆ’ ಸಿದ್ಧಪಡಿಸಿತು.

ಜಿ.೮ರ ಸಮಾವೇಶದ ಮುನ್ನ ಪ್ರಧಾನ ಮಂತ್ರಿ ಡಾ|| ಮನಮೋಹನ್ ಸಿಂಗ್‌ರವರು ‘ಹವಾಗುಣ ಬದಲಾವಣೆಗೆ ರಾಷ್ಟ್ರೀಯ ಕಾರ್ಯ ಯೋಜನೆ’ ಬಿಡುಗಡೆ ಮಾಡಿದರು. “ಕೈಗಾರಿಕಾ ರಾಷ್ಟ್ರಗಳು ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿತಗೊಳಿಸುವುದರಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಜವಾಬ್ದಾರಿ ಹೊರಬೇಕು. ನಾವು ನ್ಯಾಯಯುತ ಹಾಗೂ ಸಮಯೋಚಿತ ತೀರ್ಮಾನಗಳಿಗೆ ಬದ್ಧರಾಗಿದ್ದೇವೆ” ಎಂದರು. ಭೂಗ್ರಹದ ವಾಯುಗೋಳದ ಸ್ಥಳದಲ್ಲಿ ಪ್ರತಿ ನಾಗರಿಕನಿಗೂ ಸಮ ಪಾಲಿರಬೇಕು. ಹಾಗಾಗಿ ತಲಾವಾರು ಹೊರಸೂಸುವಿಕೆಯನ್ನು ಆಧಾರವಾಗಿಟ್ಟುಕೊಂಡು ಹವಾಗುಣ ಬದಲಾವಣೆಗೆ ಪರಿಹಾರ ಸೂತ್ರಗಳನ್ನು ರೂಪಿಸಬೇಕು.

“ಭಾರತದಲ್ಲಿನ ಬಡತನ ನಿರ್ಮೂಲನ ಮಾಡಲು ತೀವ್ರವಾದ ಆರ್ಥಿಕ ಪ್ರಗತಿ ಅಗತ್ಯ. ಪರಿಸರ ಪೂರಕವಾದ ಪ್ರಗತಿ ನಮ್ಮ ಧ್ಯೇಯವಾಗಬೇಕು. ಪ್ರಗತಿಯು ವಸ್ತು ಮತ್ತು ಸೇವೆಗಳ ಕ್ರೋಢೀಕರಣವಾಗದೆ ಜೀವನದ ಗುಣಮಟ್ಟ ಉತ್ತಮವಾಗುವಂತಿರಬೇಕು.” ಎಂದು ತಿಳಿಸಿದರು.

ರಾಷ್ಟ್ರೀಯ ಕಾರ್ಯಯೋಜನೆ ೮ ಮಿಶನ್‌ಗಳನ್ನು ಹೊಂದಿದೆ. ಇವು ಸುಸ್ಥಿರ ಅಭಿವೃದ್ಧಿಯ ಪ್ರಮುಖ ಅಂಶಗಳಾಗಿರುತ್ತವೆ. ಸೌರಶಕ್ತಿ ಮಿಶನ್, ದಕ್ಷತೆ ಹೆಚ್ಚಿಸುವ ಶಕ್ತಿ ಮಿಶನ್, ಸುಸ್ಥಿರ ಆವಾಸ ಮಿಶನ್, ಜನ ಸಂರಕ್ಷಣಾ ಮಿಶನ್, ಹಿಮಾಲಯ ಪರಿಸರ ವ್ಯವಸ್ಥೆ ಸಂರಕ್ಷಣೆಯ ಹಸಿರು ಭಾರತಿ (ಗ್ರೀನ್ ಇಂಡಿಯಾ) ಮಿಶನ್, ಸುಸ್ಥಿರ ಕೃಷಿ ಮಿಶನ್ ಮತ್ತು ಹವಾಗುಣ ಬದಲಾವಣೆಯ ತಾಂತ್ರಿಕ ಜ್ಞಾನ ವೇದಿಕೆ ಮಿಶನ್. ಸೌರಶಕ್ತಿ ಮಿಶನ್ ಭಾರತದಲ್ಲಿ ಸೌರಶಕ್ತಿ ಪಡೆಯುವ ಪ್ರಮಾಣವನ್ನು ಅಧಿಕಗೊಳಿಸುವುದರ ಜೊತೆಗೆ ಫಾಸಿಲ್ ಇಂಧನ ಬಳಸದ ಶಕ್ತಿಮೂಲಗಳಾದ ಪವನ, ಪರಮಾಣು ಮತ್ತು ಜೈವಿಕ ಅನಿಲ ಶಕ್ತಿ ಮೂಲಗಳಿಗೂ ಪ್ರೋತ್ಸಾಹ ನೀಡುವುದು.

ಪರಿಸರವನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ರಾಜ್ಯಗಳಿಗೆ ಅಧಿಕಾರ ನೀಡುವ ಸಲುವಾಗಿ ಭಾರತ ಮೊದಲು ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದಿತು. ಸಂವಿಧಾನದ ೪೨ನೇ ತಿದ್ದುಪಡಿಗೆ ೧೯೭೬ರಲ್ಲಿ ಒಪ್ಪಿಗೆ ನೀಡಲಾಯಿತು ಮತ್ತು ೧೯೭೭ರ ಜನವರಿಯಿಂದ ಜಾರಿಗೆ ತರಲಾಯಿತು. ೧೯೮೦ರಲ್ಲಿ ಪರಿಸರ ಇಲಾಖೆಯನ್ನು ಸ್ಥಾಪಿಸಲಾಯಿತು. ೧೯೮೫ರಲ್ಲಿ ಈ ಇಲಾಖೆ ಪರಿಸರ ಮತ್ತು ಅರಣ್ಯ ಸಚಿವಾಲಯವಾಗಿ ಪರಿವರ್ತನೆಯಾಯಿತು. ಅಲ್ಲಿಂದ ಪರಿಸರ ರಕ್ಷಣೆ ಹಾಗೂ ಸಂರಕ್ಷಣೆಯ ವಿವಿಧ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.

ಹವಾಗುಣ ಬದಲಾವಣೆ ಎದುರಿಸಲು ಹಲವಾರು ಕಾರ್ಯಕ್ರಮಗಳನ್ನು ಭಾರತ ತನ್ನ ಅಭಿವೃದ್ಧಿ ಕಾರ್ಯಗಳಲ್ಲಿ ಸೇರಿಸಿಕೊಂಡಿದೆ. GHG ಗಳ ಇಳಿಕೆ ಮಾಡುವುದಕ್ಕೆ ಯಾವುದೇ ಗುರಿಯನ್ನು ಭಾರತಕ್ಕೆ ನೀಡದಿದ್ದರೂ ಸಹಾ ಭಾರತ ಈ ದಿಶೆಯಲ್ಲಿ ಹಲವು ಕ್ರಮಗಳನ್ನು ಜಾರಿ ಮಾಡಿದೆ.

  • ೧೯೯೨ರ ಜೂನ್ ೧೦ರಂದು UNFCCC ಯ ಬಹು‌ಉದ್ದೇಶದ ಒಪ್ಪಂದಕ್ಕೆ ಸಹಿ ಹಾಕಿದೆ. ೧೯೯೩ರ ನವೆಂಬರ್‌ನಲ್ಲಿ ಸಮಾವೇಶಕ್ಕೆ ಒಪ್ಪಿಗೆ ನೀಡಿರುವ ದೇಶಗಳಲ್ಲಿ ಭಾರತ ೩೮ನೇ ರಾಷ್ಟ್ರ.
  • ಪರಿಸರ ಮತ್ತು ಅರಣ್ಯ ಸಚಿವಾಲಯವು ಕ್ಯೊಟೋದಲ್ಲಿ ನಡೆದ ಹವಾಗುಣ ಬದಲಾವಣೆಯ ಚರ್ಚೆಗಳಲ್ಲಿ ಮೂಡಿಬಂದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದು ತಜ್ಞರ ತಂಡ ಹಾಗೂ UNFCCC ಗೆ ಸಂಬಂಧಿಸಿದಂತೆ ಒಂದು ತಜ್ಞರ ತಂಡವನ್ನು ರಚಿಸಿದೆ.
  • ನವೀಕರಿಸಬಹುದಾದ ಶಕ್ತಿ ಕಾರ್ಯಕ್ರಮಗಳು ಮತ್ತು ಅರಣ್ಯೀಕರಣ ಯೋಜನೆಗಳನ್ನು ಪ್ರೋತ್ಸಾಹಿಸುವುದನ್ನು ಒಳಗೊಂಡಂತೆ ಪರಿಸರ ರಕ್ಷಣೆಯ ವಿವಿಧ ಕ್ರಮಗಳನ್ನು ಎಂಟನೇ ಪಂಚವಾರ್ಷಿಕ ಯೋಜನೆ (೧೯೯೨-೯೭) ಯಲ್ಲಿ ಕೈಗೊಳ್ಳಲಾಯಿತು. ಈ ಯೋಜನೆಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳಾದ ಹೊಗೆರಹಿತ ಒಲೆ, ಸುಧಾರಿತ ಒಲೆ, ಗೋಬಲ್ ಅನಿಲ ಸ್ಥಾವರ, ಜೈವಿಕ ಅನಿಲ ಸ್ಥಾವರ ಮತ್ತು ಕಡಿಮೆ ದರ್ಜೆ ಸೌರ ಉಷ್ಣ ಉಪಕರಣಗಳು ಮುಂತಾದವು ಯಶಸ್ವಿಯಾದವು. ಆಂಧ್ರಪ್ರದೇಶ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಗಾಳಿಗಿರಣಿಗಳು ಸಾಕಷ್ಟು ಸಂಖ್ಯೆಯಲ್ಲಿ ಸ್ಥಾಪನೆಯಾಗಿ ಪವನ ಶಕ್ತಿ ಯೋಜನೆಯು ತನ್ನ ಗುರಿಯನ್ನು ಸಾಧಿಸಿತು.
  • ಒಂಭತ್ತನೇ ಪಂಚವಾರ್ಷಿಕ ಯೋಜನೆ (೧೯೯೭-೨೦೦೨)ಯಲ್ಲಿ ನೇರಕ್ರಿಯೆಗಿಂತ ಹೆಚ್ಚಾಗಿ ಶಿಕ್ಷಣ, ಸಾರಿಗೆ ಮತ್ತು ಶಕ್ತಿ ವಿಭಾಗಗಳ ನೀತಿ ನಿಯಮಗಳು ಹಾಗೂ ಕಾರ್ಯಯೋಜನೆಗಳಿಗೆ ಬೆಂಬಲ ನೀಡಲಾಯಿತು. ಶಕ್ತಿ ಮತ್ತು ಕಲ್ಲಿದ್ದಲು ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳು CO2 ಉತ್ಪತ್ತಿ ಮಾಡಿದ ಮತ್ತು ಅದರ ಹೀರುವಿಕೆಗೆ ಕೈಗೊಂಡ ಚಟುವಟಿಕೆಗಳ ಬಗ್ಗೆ ಆಯ-ವ್ಯಯ ಪತ್ರ ನೀಡಲು ಸೂಚಿಸಲಾಯಿತು. LPG ಅನಿಲವನ್ನು ಪರಿಸರಸ್ನೇಹಿ ಶಕ್ತಿ ಮೂಲವನ್ನಾಗಿ ಪ್ರೋತ್ಸಾಹಿಸಲಾಯಿತು. ಹಸಿರುಮನೆ ಅನಿಲಗಳ ಇಳಿಕೆಗೆ ಪ್ರೋತ್ಸಾಹ ನೀಡಲಾಯಿತು.
  • ಹತ್ತು ಮತ್ತು ಹನ್ನೊಂದನೇ ಪಂಚವಾರ್ಷಿಕ ಯೋಜನೆಗಳಲ್ಲಿಯೂ ಶಕ್ತಿಯ ಮಿತ ಬಳಕೆ ಹಾಗೂ ಪರಿಸರ ಸ್ನೇಹಿ ಶಕ್ತಿ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗಿದೆ.

ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತು ಜಾಗತಿಕ ಪರಿಸರ ಸೌಲಭ್ಯಗಳ ಅಧ್ಯಯನದಿಂದ (೧೯೯೦ರ ಲೆಕ್ಕಾಚಾರದಂತೆ) ವಿಶ್ವದ CO2 ಹೊರಸೂಸುವಿಕೆಯಲ್ಲಿ ಭಾರತದ ಪಾಲು ಸುಮಾರು ೩%. ಇದರಲ್ಲಿ ಶಕ್ತಿ ವಿಭಾಗದ್ದೇ ಸಿಂಹಪಾಲು ಅಂದರೆ ೫೫% ಸಾರಿಗೆ, ಕಲ್ಲಿದ್ದಲ ಗಣಿಗಾರಿಕೆ, ಜೈವಿಕ ಅನಿಲಗಳ ದಹನ ಮತ್ತು ತೈಲ ಹಾಗೂ ನೈಸರ್ಗಿಕ ಅನಿಲಗಳಿಂದ ಸೋರಿಕೆಗಳು ಉಳಿದ ಕೊಡುಗೆಗೆ ಕಾರಣವಾಗಿವೆ. ಕೈಗಾರಿಕೆಗಳಲ್ಲಿ ಸಿಮೆಂಟ್ ಕೈಗಾರಿಕೆಯದು ದೊಡ್ಡ ಪಾಲು. ಫಾಸಿಲ್ ಇಂಧನಗಳನ್ನು ಬಳಸುವುದರಿಂದ ಶಕ್ತಿ ಉಷ್ಣ ಸ್ಥಾವರಗಳೂ ಪ್ರಮುಖ ಕೊಡುಗೆ ನೀಡುತ್ತಿವೆ. ದೆಹಲಿಯಲ್ಲಿ ಮೂರು ಶಕ್ತಿ ಸ್ಥಾವರಗಳಿದ್ದು ಅವುಗಳಿಂದ ಈಗಾಗಲೇ ಮಲಿನಗೊಂಡಿರುವ ವಾಯು ಮತ್ತಷ್ಟು ಮಲಿನವಾಗುತ್ತಿದೆ.

ಕೃಷಿಯಿಂದ ಪ್ರಮುಖವಾಗಿ ಭತ್ತದ ಬೇಸಾಯ, ಪಶುಸಂಗೋಪನೆ, ಗೊಬ್ಬರ ಮತ್ತು ಕೃಷಿ ತ್ಯಾಜ್ಯ ದಹನದಿಂದ ೩೪% ರಷ್ಟು ಹಸಿರುಮನೆ ಅನಿಲಗಳು ವಾತಾವರಣ ಸೇರುತ್ತವೆಂದು ಅಂದಾಜಿಸಲಾಗಿದೆ.

ಪರಿಣಾಮಗಳು

ಭಾರತದಂತ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಹವಾಗುಣ ಬದಲಾವಣೆಯು ಪರಿಸರ ವ್ಯವಸ್ಥೆಗಳು, ಆರ್ಥಿಕತೆ ಮತ್ತು ಸಮಾಜದ ಮೇಲೆ ಮತ್ತಷ್ಟು ಒತ್ತಡವನ್ನುಂಟು ಮಾಡುವುದು. ಭಾರತ ಉಷ್ಣವಲಯದಲ್ಲಿದೆ. ಅಧಿಕ ಪ್ರಮಾಣದ ಕಡಲ ತೀರ ಇಲ್ಲಿದೆ. ಹಾಗಾಗಿ ಹವಾಗುಣದ ಹೊಡೆತಕ್ಕೆ ಭಾರತ ಬೇಗ ಸಿಲುಕುವುದು. ಭಾರತದ ಆರ್ಥಿಕತೆಯು ವಾಯುಗುಣದಿಂದ ನಿರ್ಧಾರವಾಗುವ ಕೃಷಿ ಮತ್ತು ಅರಣ್ಯ ವಿಭಾಗಗಳನ್ನು ಅವಲಂಬಿಸಿದೆ. ಭಾರತದ ರೈತರು ಇಂದಿಗೂ ಹವಾಮಾನ ಪರಿಸ್ಥಿತಿಯ ಮೇಲೆ ಅವಲಂಬಿತರಾಗಿದ್ದಾರೆ. ವಾಯುಗುಣದ ಬದಲಾವಣೆಯು ಅವರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಹಿಂದಿನ ಅಧ್ಯಾಯದಲ್ಲಿ ತಿಳಿಸಿರುವಂತೆ ವಾಯುಗುಣ ಬದಲಾಗುವುದರಿಂದ, ಕೀಟಗಳ ಹಾವಳಿ, ಪೀಡಕ ಕೀಟಗಳು ಮತ್ತು ರೋಗಗಳು ಹೆಚ್ಚಾಗುತ್ತವೆ. ಇದರ ಜೊತೆಗೆ ಜನಸಂಖ್ಯಾ ಹೆಚ್ಚಳ ಆಹಾರ ಲಭ್ಯತೆ ಮತ್ತು ಆಹಾರ ಉತ್ಪಾದನೆಯ ಮೇಲೆ ಒತ್ತಡ ಹೇರಲಿದೆ.

ಕಡಲ ತೀರದ ತಗ್ಗು ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಿದ್ದಾಗ ಸಮುದ್ರದ ಮಟ್ಟ ಹೆಚ್ಚಾದಲ್ಲಿ ಹಲವು ದುಷ್ಪರಿಣಾಮಗಳಾಗುತ್ತವೆ. UNEP ೧೯೮೯ರ ವರದಿ ಪ್ರಕಾರ ಸಮುದ್ರ ಮಟ್ಟದ ಹೆಚ್ಚಳದಿಂದ ಅಪಾಯಕ್ಕೆ ಒಳಗಾಗುವ ೨೭ ದೇಶಗಳಲ್ಲಿ ಭಾರತವೂ ಸೇರಿದೆ. ಆಂಧ್ರಪ್ರದೇಶ, ಒರಿಸ್ಸಾ ಮತ್ತು ತಮಿಳುನಾಡಿನ ಕಡಲ ತೀರಗಳು ಅಪಾಯ ಎದುರಿಸಬೇಕಿದೆ. ೧೯೯೯ರಲ್ಲಿ ಒರಿಸ್ಸಾ ರಾಜ್ಯವನ್ನು ಬೃಹತ್ ಚಂಡಮಾರುತ ಅಪ್ಪಳಿಸಿತು. ಇದರಿಂದ ಮುಂದೆ ಆಗಬಹುದಾದ ಇನ್ನೂ ಬೃಹತ್ ಆಘಾತಗಳ ಬಗ್ಗೆ ಮುನ್ಸೂಚನೆ ನೀಡಿತು. ೨೦೦೯ರಲ್ಲಿ ಪಶ್ಚಿಮ ಬಂಗಾಳದ ಮೇಲೆ ಚಂಡಮಾರುತ ಭೀಕರ ಆಘಾತ ಉಂಟು ಮಾಡಿದೆ.

ಇವುಗಳ ಜೊತೆಗೆ ಅಧಿಕಗೊಂಡ ಉಷ್ಣತೆಯಿಂದ ಜೀವಿಗಳು ಮತ್ತು ಪರಿಸರ ವ್ಯವಸ್ಥೆಗಳು ಇನ್ನಷ್ಟು ಒತ್ತಡಕ್ಕೆ ಒಳಗಾಗುತ್ತವೆ. ಮಳೆಗಾಲಗಳು ಮತ್ತಷ್ಟು ಉತ್ತರಕ್ಕೆ ಚಲಿಸುತ್ತವೆಂದು ನಿರೀಕ್ಷಿಸಲಾಗಿದೆ. ಈ ಮಾರುತಗಳು ತರುವ ನೀರಿನ ಪ್ರಮಾಣ ಈಗಾಗಲೆ ಅಧಿಕವಾಗಿದ್ದು ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಬಿಸಿಗಾಳಿ, ಬರಗಾಲಗಳು, ಪ್ರವಾಹಗಳು ಮತ್ತು ಉಷ್ಣದಿಂದ ಕೂಡಿದ ಬಿರುಗಾಳಿಗಳು ಮತ್ತು ಯದ್ವತದ್ವಾ ಬೀಳುವ ಮಳೆಯಿಂದ ಕೃಷಿ ಉತ್ಪಾದನೆ ಕುಸಿದಿದೆ. ನೂರಾರು ಜೀವಗಳು ಬೆಲೆ ತೆತ್ತಿವೆ ಹಾಗೂ ಸಹಸ್ರಾರು ಜನರಿಗೆ ತೊಂದರೆಗಳಾಗಿವೆ.

ಗುಜರಾತ್, ಕರ್ನಾಟಕ ಮತ್ತು ಮಹಾರಾಷ್ಟ್ರದ ಕಡಲ ತೀರದಲ್ಲಿರುವ ರೈತರಿಗೆ ಇದರ ಆಘಾತದ ಪರಿಚಯವಾಗಿದೆ. ಊಹಿಸಿರುವಂತೆ ಮಲೆಯ ಮಾರುತಗಳು ಉತ್ತರಕ್ಕೆ ಸಾಗಿದಂತೆ ಉತ್ತರ ಭಾರತ ಹಾಗೂ ವಾಯವ್ಯ (North-western) ಭಾಗದ ಭಾರತ ಹೆಚ್ಚು ಮಳೆ ಪಡೆಯುತ್ತವೆ. ಇದರಿಂದ ಈ ವಿಭಾಗದ ಪ್ರಮುಖ ಬೆಳೆಯಾದ ಗೋಧಿ ಬೆಳೆಗೆ ಸಮಸ್ಯೆಗಳುಂಟಾಗುತ್ತವೆ. ಗುಜರಾತಿನಲ್ಲಿ ಬರಗಾಲ ಒಂದು ಕಡೆ, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಪ್ರವಾಹದಿಂದ ಉಂಟಾದ ಹಾನಿ ಮತ್ತೊಂದು ಕಡೆ. ಹೀಗೆ ಈ ಪ್ರದೇಶದಲ್ಲಿ ಅನಾಹುತಗಳ ಸರಮಾಲೆಯೇ ಉಂಟಾಗುತ್ತಿದೆ.

ಉತ್ತರ ಭಾರತದ ಭಾಗಗಳಲ್ಲಿ ೦.೫೦ ಸೆ.ನಷ್ಟು ಉಷ್ಣತೆ ಅಧಿಕವಾದರೂ ಗೋಧಿ ಇಳುವರಿಯಲ್ಲಿ ಕುಸಿತ ಉಂಟಾಗುತ್ತದೆಂದು ಅಧ್ಯಯನಗಳು ಅಂದಾಜು ಮಾಡಿವೆ. ಉತ್ತರ ಭಾರತದಲ್ಲಿ ಅಧಿಕ ಮಳೆ ಉಂಟಾದರೆ ಅದು ಗೋಧಿ ಬೆಳೆಯುವುದಕ್ಕೆ ಪ್ರಶಸ್ತ ಸ್ಥಳವಾಗಿ ಉಳಿಯುವುದಿಲ್ಲ. ಗೋಧಿ ಚೆನ್ನಾಗಿ ಬೆಳೆಯಲು ಆಗಾಗ್ಗೆ ಶುಷ್ಕ ಹವಾಮಾನವಿರಬೇಕು. ಅದೇ ರೀತಿ ಭತ್ತ ಬೆಳೆಯುವ ಪ್ರದೇಶದಲ್ಲಿ ಉಷ್ಣತೆ ಅಧಿಕವಾದರೆ ಅದರ ಇಳುವರಿಯೂ ಕಡಿಮೆಯಾಗುತ್ತದೆ.

ಅಲ್ಪ ಆದಾಯವಿರುವ ರೈತರು ಸಾಮಾನ್ಯವಾಗಿ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸುತ್ತಾರೆ. ಹವಾಗುಣ ಬದಲಾವಣೆಯ ಹೊಡೆತಕ್ಕೆ ಇವರು ಖಚಿತವಾಗಿ ಒಳಗಾಗುವರು.

ಸಮುದ್ರದ ಮಟ್ಟ ಏರುವುದರಿಂದ ಮತ್ತು ಉಷ್ಣತೆಯಿಂದಾಗುವ ಏರುಪೇರಿನಿಂದ ಕಡಲ ತೀರದಲ್ಲಿರುವ ಜೌಗು ಪ್ರದೇಶಗಳು ಮತ್ತು ಕಾಂಡ್ಲವನಗಳು ತೀವ್ರ ಪರಿಣಾಮ ಎದುರಿಸುತ್ತವೆ. ಚಿಲ್ಕ ಸರೋವರ, ಸುಂದರಬನ ಅರಣ್ಯ ಪ್ರದೇಶ ಹಾಗೂ ಬಿಟ್ಟಾರ್‌ಕನಿಕ ವನ್ಯಧಾಮಗಳು ಪರಿಣಾಮವನ್ನು ಅನುಭವಿಸುತ್ತಿವೆ. ಈ ಪ್ರದೇಶಗಳು ಈಗಾಗಲೇ ಅರಣ್ಯಪ್ರದೇಶ ನಾಶ, ಜೀವಿ ವೈವಿಧ್ಯ ಅವನತಿ ಮತ್ತು ಮಾಲಿನ್ಯದಿಂದ ಸೊರಗುತ್ತಿವೆ. ಪ್ರಸ್ತುತ ಒರಿಸ್ಸಾ ಕಡಲುತೀರದ ಉಪ್ಪು ನೀರಿನ ಮೀನು ಹೊಂಡಗಳು ಮತ್ತು ಸೀಗಡಿ ಕೃಷಿಯು ಪರಿಣಾಮಕ್ಕೆ ಒಳಗಾಗಿವೆ.

ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಟಿಕ ಹಿಮ ಹಾಸುಗಳ ನಂತರ ವಿಶ್ವದಲ್ಲಿ ಬೃಹತ್ ಹಿಮಹಾಸು ಹಿಮಾಲಯ ಪರ್ವತ ಶ್ರೇಣಿಯಲ್ಲಿದೆ. ಇಲ್ಲಿ ಹಿಮ ಕರಗುವುದು ಗಮನಾರ್ಹ ಪ್ರಮಾಣದಲ್ಲಿ ಅಧಿಕಗೊಂಡಿದೆ. ಇದು ಮುಂದುವರೆದರೆ ಏಷ್ಯಾದಲ್ಲಿನ ಬಹುತೇಕ ಪ್ರದೇಶಗಳ ನೀರಿನ ಸರಬರಾಜಿನ ಮೇಲೆ ಪರಿಣಾಮ ಬೀರುತ್ತದೆ. ಭಾರತದ ಅನೇಕ ನದಿಗಳು ನೀರಿಗೆ ಹಿಮಾಲಯದ ಪರ್ವತಗಳನ್ನು ಆಶ್ರಯಿಸಿವೆ. ಉಷ್ಣತೆ ಅಧಿಕವಾಗುವುದರಿಂದ ಪರ್ವತಗಳನ್ನು ಆವರಿಸಿರುವ ಹಿಮ, ಹಿಮರಾಶಿ ವೇಗವಾಗಿ ಕರಗಲಾರಂಭಿಸುವುದು. ಅದರಿಂದ ಮೊದಲಿಗೆ ಅಧಿಕ ಪ್ರಮಾಣದ ನೀರು ನದಿಗಳಿಗೆ ಪ್ರವೇಶ ಮಾಡುವುದು. ನದಿಗಳು ಉಕ್ಕಿ ಹರಿಯುವವು. ನದಿದಂಡೆಗಳು ಒಡೆದು ಪ್ರವಾಹಗಳು ಉಂಟಾಗುತ್ತವೆ. ಹಿಮಹಾಸುವಿನ ಪ್ರಮಾಣ ಕಡಿಮೆಯಾದಂತೆ ನದಿಗಳಿಗೆ ನೀರು ಬರುವ ಪ್ರಮಾಣ ಕಡಿಮೆಯಾಗುವುದು. ಕಾಲ ಸರಿದಂತೆ ಚಳಿಗಾಲ ಹಾಗೂ ಬೇಸಗೆಕಾಲದಲ್ಲಿಯೂ ನೀರು ಹರಿದು ಬರುವುದು ಕಡಿಮೆಯಾಗುವುದು. ಉತ್ತರ ಭಾರತದ ಕೃಷಿಗೆ ನೀರು ಒದಗಿಸುತ್ತಿರುವ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಹಾಗೂ ಅವುಗಳ ಉಪನದಿಗಳ ನೀರಿನ ಪ್ರಮಾಣ ಕಡಿಮೆಯಾಗುವುದು. ನೀರಾವರಿಗೆ ಈ ನದಿಗಳನ್ನು ಅವಲಂಬಿಸಿರುವ ರೈತರ ಸ್ಥಿತಿ ಚಿಂತಾಜನಕವಾಗುವುದು. ಹಿಮ ಕರಗುವುದನ್ನು ಆಶ್ರಯಿಸಿರುವ ಕೆಲವು ನದಿಗಳಿಗೆ ಜಲ ವಿದ್ಯುತ್ತು ಸ್ಥಾವರಗಳನ್ನು ನಿರ್ಮಿಸಲಾಗಿದೆ. ಆ ಜಲ ವಿದ್ಯುತ್ ಸ್ಥಾವರಗಳು ಸಹ ದುಷ್ಪರಿಣಾಮ ಎದುರಿಸಬೇಕಾಗುತ್ತದೆ.

ಭಾರತದ ಸುಮಾರು ೨೬% ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. ವಾಯುಗುಣ ಬದಲಾವಣೆಯಿಂದ ಈ ಜನವರ್ಗ ಹೆಚ್ಚು ತೊಂದರೆಗೆ ಒಳಗಾಗುವುದು. ಇವರು ಈಗಾಗಲೇ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಹವಾಗುಣ ಬದಲಾವಣೆ ಹೆಚ್ಚಾದಲ್ಲಿ ಮಲೇರಿಯ, ಮಿದುಳು ಜ್ವರ, ಡೆಂಗ್ಯೂ, ಕಾಲರಾ, ಟೈಫಾಯ್ಡ್, ಪ್ಲೇಗ್ ಮುಂತಾದ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಅರಣ್ಯಗಳ ಸಮೀಪ ಜೀವಿಸುತ್ತಿರುವ ಸುಮಾರು ೫೫೦ ಲಕ್ಷ ಜನ ತಮ್ಮ ಜೀವನಕ್ಕೆ ಅರಣ್ಯಗಳ ಉಪ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ. ಹವಾಗುಣ ಬದಲಾವಣೆಯಿಂದ ಅರಣ್ಯಗಳ ವಿಸ್ತಾರ ಮತ್ತು ಸಂಯೋಜನೆ ಬದಲಾಗಲಿದೆ. ಅರಣ್ಯ ಅವಲಂಬಿತರ ಜೀವನ ಮೂರಾಬಟ್ಟೆಯಾಗಲಿದೆ.

ನಿಯಂತ್ರಣ ಮತ್ತು ಪರಿಹಾರೋಪಾಯಗಳು ಶಕ್ತಿ ವಿಭಾಗದಲ್ಲಿ

ವಿಶ್ವದ ನವೀಕರಿಸಬಹುದಾದ ಶಕ್ತಿಮೂಲಗಳ ಯೋಜನೆಗಳಲ್ಲಿ ಭಾರತವು ಪ್ರಮುಖ ಯೋಜನೆ ಹೊಂದಿದ್ದು ಪವನ, ಸೌರ, ಭೂ, ಉಷ್ಣ, ಜೈವಿಕ ಮತ್ತು ಸಾಗರ ಉಬ್ಬರವಿಳಿತ ಶಕ್ತಿ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಪವನಶಕ್ತಿ ಉತ್ಪಾದನಾ ಕ್ಷೇತ್ರದಲ್ಲಿ ಜರ್ಮನಿ, ಅಮೆರಿಕಾ, ಡೆನ್ಮಾರ್ಕ್ ಮತ್ತು ಇಂಗ್ಲೆಂಡಿನ ನಂತರದ ಸ್ಥಾನ ಭಾರತಕ್ಕೆ ಸಲ್ಲುತ್ತದೆ. ಕ್ರಿಸ್ತಶಕ ೨೦೦೦ರ ಮಾರ್ಚ್‌ಗೆ ಪವನಶಕ್ತಿ ಉತ್ಪಾದನೆಯು ೧೦೮೦ ಮೆಗಾವಾಟ್. ತಮಿಳುನಾಡು ಅತ್ಯಧಿಕ ಸಾಮರ್ಥ್ಯ ಹೊಂದಿದೆ. ಅನಂತರದ ಸ್ಥಾನ ಗುಜರಾತ್ ಮತ್ತು ಆಂಧ್ರಪ್ರದೇಶ ಪಡೆದಿವೆ.

ಸೌರಶಕ್ತಿ ವಿಭಾಗದಲ್ಲಿ ಅಲ್ಪ ಪ್ರಮಾಣದ ಉತ್ಪಾದನಾ ಉಪಕರಣಗಳು ಹೆಚ್ಚು ಜನಪ್ರಿಯವಾಗಿವೆ. ಸೌರ‌ಒಲೆ, ಸೌರದೀಪ, ಸೌರ ನೀರು ಕಾಯಿಸುವ ಉಪಕರಣ ಮತ್ತು ಸೌರ ಒಣಗಿಸುವ ಯಂತ್ರಗಳು ಹೆಸರುವಾಸಿಯಾಗಿವೆ. ಇವುಗಳ ಬೆಲೆ ಹೆಚ್ಚೇನಿಲ್ಲ. ಈ ಕ್ಷೇತ್ರವನ್ನು ಮತ್ತಷ್ಟು ಪ್ರೋತ್ಸಾಹಿಸಬೇಕಿದೆ.

ಬಹು‌ಉಪಯೋಗಿ ಬೃಹತ್ ಅಣೆಕಟ್ಟುಗಳಿಂದ ಅನೇಕ ಪರಿಸರ ಸಮಸ್ಯೆ ಗಳುಂಟಾಗುತ್ತವೆ ಎಂಬುದನ್ನು ನಾವು ಗಮನಿಸಿದ್ದೇವೆ. ನರ್ಮದಾ ಅಣೆಕಟ್ಟು ಮತ್ತು ತೆಹ್ರಿ ಅಣೆಕಟ್ಟುಗಳ ನಿರ್ಮಾಣದಲ್ಲಿ ವಿರೋಧ ವ್ಯಕ್ತವಾಗಿರುವುದನ್ನು ಮತ್ತು ಅವುಗಳಿಂದಾಗ ಬಹುದಾದ ಸಮಸ್ಯೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಪುಟ್ಟ ಜಲ ವಿದ್ಯುತ್ ಸ್ಥಾವರಗಳ ಅಗತ್ಯವನ್ನು ಎಲ್ಲರೂ ಒತ್ತಿ ಹೇಳುತ್ತಿದ್ದಾರೆ. ೨೫ ಮೆಗಾವಾಟ್ ಸಾಮರ್ಥ್ಯವಿರುವಂತಹ ೩೦೦ಕ್ಕೂ ಸ್ಥಾವರಗಳನ್ನು ಪರ್ವತ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಸುಧಾರಿತ ಉರುವಲು ಒಲೆ, ಹೊಗೆರಹಿತ ಒಲೆ, ಜೈವಿಕ ಅನಿಲ ಸ್ಥಾವರ ಮತ್ತು ಕಡಿಮೆ ಮಾಲಿನ್ಯ ಉಂಟು ಮಾಡುವ ಸುಧಾರಿತ ಜೈವಿಕ ಅನಿಲದ ಒಲೆಗಳನ್ನು ಲಕ್ಷಾಂತರ ಕುಟುಂಬಗಳಿಗೆ ವಿತರಿಸಲಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಸಿಪ್ಪೆಯಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ರೈತರ ಹೊಲದಲ್ಲಿನ ಕೃಷಿ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದಿಸುವ ಪ್ರಯತ್ನಗಳು ನಡೆಯುತ್ತಿವೆ.

ಫಾಸಿಲ್ ಇಂಧನಗಳು ಪ್ರಮುಖವಾಗಿ ಕಲ್ಲಿದ್ದಲನ್ನು ಅವಲಂಬಿಸಿರುವ ಉಷ್ಣ ವಿದ್ಯುತ್  ಸ್ಥಾವರಗಳು ಇನ್ನು ಮೇಲೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಇರುವಂತೆ ಸ್ವಚ್ಛ ಕಲ್ಲಿದ್ದಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು.

ಸಾರಿಗೆ ವಿಭಾಗದಲ್ಲಿ GHG ಗಳ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಸರ್ಕಾರವು ಅಧಿಕ ಸಂಖ್ಯೆಯ ಕ್ರಮಗಳನ್ನು ಕೈಗೊಂಡಿದೆ. ಸೀಸರಹಿತ ಪೆಟ್ರೋಲ್ ಹಾಗೂ ಕಡಿಮೆ ಗಂಧಕವಿರುವ ಡೀಸೆಲ್ ಇಂಧನಗಳನ್ನು ಬಳಕೆಗೆ ತರಲಾಗಿದೆ. ಒತ್ತಲ್ಪಟ್ಟ (ಸಂಕುಚಿತ) ನೈಸರ್ಗಿಕ ಅನಿಲದ ವಾಹನಗಳು, ಯೂರೋ II ನಿಯಮಗಳು, ವಾಹನಗಳಿಗೆ ಮಾಲಿನ್ಯ ಪರೀಕ್ಷೆ ಮತ್ತಿತರೆ ಕ್ರಮಗಳನ್ನು ಜಾರಿ ಮಾಡಲಾಗಿದೆ.

ಕೃಷಿ ವಿಭಾಗದಲ್ಲಿ

ಅಧಿಕಗೊಳ್ಳುತ್ತಿರುವ ಉಷ್ಣತೆಯನ್ನು ಸಹಿಸಬಲ್ಲ ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸ ಬೇಕಿದೆ. ಸುಲಭ ಬೆಲೆಯಲ್ಲಿ ಈ ತಳಿಗಳ ಬೀಜಗಳು ಬಡರೈತರಿಗೆ ದೊರಕುವಂತಾಗಬೇಕು. ಕೃಷಿಯಲ್ಲಿ ಮತ್ತಷ್ಟು ಸುಸ್ಥಿರ ಕೃಷಿ ವಿಧಾನಗಳನ್ನು ಒಳಗೊಳ್ಳಬೇಕು. ಮಳೆಗಾಲಗಳು ಇನ್ನೂ ತೀವ್ರವಾಗುತ್ತವೆ ಎಂಬ ನಿರೀಕ್ಷೆ ಇರುವುದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಛಾವಣಿ ಅಥವಾ ಸಮತಟ್ಟು ಕೃಷಿ ವಿಧಾನವನ್ನು ಪ್ರೋತ್ಸಾಹಿಸಬೇಕು. ಇದರಿಂದ ಹರಿಯುವ ನೀರಿನಿಂದಾಗುವ ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು. ಅರಣ್ಯಗಳ ಸಮೀಪ ವಾಸಿಸುವ ರೈತರು ಅರಣ್ಯ ಕೃಷಿ ಆರಂಭಿಸಲು ಪ್ರೋತ್ಸಾಹಿಸಬೇಕು. ಬೆಳೆಗಳ ಜೊತೆಗೆ ಪೊದೆಗಿಡ ಮತ್ತು ಮರಗಳನ್ನು ಬೆಳೆಸುವುದರಿಂದ ಬೆಳೆಗಳಿಗೆ ಬೀಸುವ ಗಾಳಿ ಮತ್ತು ನೀರಿನಿಂದ ಉಂಟಾಗುವ ಸವಕಳಿಯನ್ನು ತಪ್ಪಿಸಬಹುದು.

ಮಳೆ ಬೀಳುವ ವಿಧಾನದಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ನಿರೀಕ್ಷಿಸಿರುವು ದರಿಂದ ಗೋಧಿ ಬೆಳೆಯುವ ಪ್ರದೇಶದ ರೈತರು ಇತರೆ ಆಯ್ಕೆಗಳ ಬಗ್ಗೆ ಯೋಚಿಸಬೇಕು. ಈ ಬದಲಾವಣೆ ತಡೆದುಕೊಳ್ಳುವ ಬೆಳೆಗಳನ್ನು ಬೆಳೆಯಲು ಸಿದ್ಧರಾಗಬೇಕು.

ಯುರೋ II ರ ನಿಯಮಗಳು

ಯುರೋಪಿನ ಸಂಘವು ಪೆಟ್ರೋಲ್/ಡೀಸೆಲ್ ಬಳಸುವ ವಾಹನಗಳಿಗೆ ಅನಿಲಗಳ ಹೊರಸೂಸುವಿಕೆಯಲ್ಲಿ ಕೆಲವು ನಿರ್ದಿಷ್ಟ ಗುಣಮಾನಗಳನ್ನು ನಿಗಧಿಗೊಳಿಸಿದೆ. ಒಂದು ನಿರ್ಧಿಷ್ಟ ದೂರವನ್ನು ಗಮಿಸಿದಾಗ ಹೊರಬರುವ ಮಲಿನ ವಸ್ತುಗಳ ಪ್ರಮಾಣವನ್ನೇ ಯುರೋ ಹೊರಸೂಸುವಿಕೆ ಮಟ್ಟ ಎನ್ನುವರು. ಕಾರ್ಬನ್ ಮಾನಾಕ್ಸೈಡ್ (CO), ಕಣಗಳಿರುವ ದ್ರವ್ಯ, ಹೈಡ್ರೊಕಾರ್ಬನ್‌ಗಳ (HC) ಮತ್ತು ನೈಟ್ರೋಜನ್ ಆಕ್ಸೈಡ್‌ಗಳಿಗೆ ನಿರ್ಧಿಷ್ಟ ಪ್ರಮಾಣದ ಮಟ್ಟವನ್ನು ನಿಗದಿಪಡಿಸಲಾಗಿದೆ. ಯುರೋ II ರ ನಿಯಮಗಳು ಯುರೋ I ರ ನಿಯಮಗಳಿಗಿಂತ ೨ ರಿಂದ ಮೂರು ಪಟ್ಟು ಹೆಚ್ಚು ನಿರ್ದಿಷ್ಟವಾದವು. ಕೆಲವು ವರ್ಷಗಳ ಹಿಂದೆ ಯುರೋ II ನಿಯಮಗಳನ್ನು ಭಾರತದಲ್ಲಿಯೂ ಜಾರಿಗೆ ತರಲಾಗಿದೆ. ಈಗಿನ ಎಲ್ಲ ಹೊಸ ಕಾರುಗಳನ್ನು ಯುರೋ II ಸೂಚಿಸಿರುವ ಗುಣಮಟ್ಟಕ್ಕೆ ತಕ್ಕವಾಗಿ ಉತ್ಪಾದಿಸಲಾಗುತ್ತಿದೆ. ಭಾರತದಲ್ಲಿ ಯಾಂತ್ರೀಕೃತಗೊಂಡ ವಾಹನಗಳ ಸಂಖ್ಯೆಯು ೧೯೪೭ರಲ್ಲಿ ೨ ಲಕ್ಷವಿತ್ತು. ೧೯೯೭ರಲ್ಲಿ ೩೬೩೦ ಲಕ್ಷಗಳಷ್ಟಾಗಿತ್ತು.

ವ್ಯಕ್ತಿ ಮತ್ತು ಸಮುದಾಯ ಮಟ್ಟದಲ್ಲಿ

ಮಕ್ಕಳ ಪ್ರಯತ್ನಗಳು : ನಮ್ಮ ದೇಶದ ಶಾಲಾ ಮಕ್ಕಳು ವಾಯುಗುಣವನ್ನು ತಡೆಗಟ್ಟುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಾಷ್ಟ್ರದಾದ್ಯಂತ ಶಾಲೆಗಳಲ್ಲಿ ಪರಿಸರ ಸಂಘಗಳು ರಚನೆಯಾಗಿವೆ. ಪರಿಸರ ರಕ್ಷಣೆ ಹಾಗೂ ಸಂರಕ್ಷಣೆಯ ವಿವಿಧ ಚಟುವಟಿಕೆಗಳನ್ನು ಈ ಸಂಘಗಳು ಆರಂಭಿಸಿವೆ. ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ, ಸಂವಾದ, ರಸಪ್ರಶ್ನೆ, ಚಿತ್ರ ಬರೆಯುವ ಸ್ಪರ್ಧೆ ಮುಂತಾದವನ್ನು ಎಲ್ಲ ಶಾಲೆಗಳಲ್ಲಿ ನಿರಂತರವಾಗಿ ಏರ್ಪಡಿಸಲಾಗುತ್ತಿದೆ. ಶಾಲಾ ಮಕ್ಕಳು ಪ್ರತಿ ವಾಹನವೂ ‘ಮಾಲಿನ್ಯ ಹತೋಟಿ’ ಪ್ರಮಾಣ ಪತ್ರ ಹೊಂದಿರಬೇಕೆಂಬುದರ ಬಗ್ಗೆ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಮಕ್ಕಳು ತಮ್ಮ ಆಸುಪಾಸಿನಲ್ಲಿರುವ ಕಾರುಗಳು, ದ್ವಿಚಕ್ರ ವಾಹನಗಳು ನಿಗಧಿತ ವೇಳೆಯಲ್ಲಿ ‘ಮಾಲಿನ್ಯ ಹತೋಟಿ’ ಪರೀಕ್ಷೆಗೆ ಒಳಗಾಗುವಂತೆ ಜನರನ್ನು ಪ್ರೇರೇಪಿಸುತ್ತಿದ್ದಾರೆ.

ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದರ ವಿರುದ್ಧವೂ ಮಕ್ಕಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಪಟಾಕಿ ಹೊಡೆಯುವುದರಿಂದ ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ಅಧಿಕವಾಗಿರುತ್ತಿತ್ತು. ಮಕ್ಕಳ ಈ ರೀತಿಯ ಪ್ರಯತ್ನದಿಂದಾಗಿ ನಗರಗಳಲ್ಲಿ ಪಟಾಕಿ ಸಿಡಿಸುವ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಾಳಿ ಹೆಚ್ಚು ಶುದ್ಧವಾಗಿದೆ. ಅಲ್ಲದೆ ಮಕ್ಕಳು ಸಸಿ ನೆಡುವ ಹಾಗೂ ಪ್ಲಾಸ್ಟಿಕ್ ಬೇಡ ಎನ್ನುವ ಆಂದೋಲನಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಸಮುದಾಯದ ಪ್ರಯತ್ನಗಳು – ಪವಿತ್ರ ವನಗಳು : ಭಾರತದಲ್ಲಿ ಪ್ರಕೃತಿಯ ಎಲ್ಲ ಸಂಪನ್ಮೂಲಗಳನ್ನು ಗೌರವದಿಂದ ನೋಡುವ, ಸಂರಕ್ಷಿಸುವ ಮತ್ತು ಎಚ್ಚರಿಕೆಯಿಂದ ಬಳಸುವ ಸಂಪ್ರದಾಯ ಬಹಳ ಹಿಂದಿನಿಂದ ಬಂದಿದೆ. ಅರಣ್ಯಗಳು ಗುಡ್ಡಗಾಡು ಜನರ ಜೀವನಾಡಿ. ಅವರು ಅರಣ್ಯವನ್ನು ತಾಯಿ ಎಂದೇ ಪರಿಗಣಿಸಿ ಸಮನ್ವಯ ಜೀವನ ವಿಧಾನವನ್ನು ಪಾಲಿಸುತ್ತಾ ಬಂದಿದ್ದಾರೆ. ಹಸಿರು ಸಂಪನ್ಮೂಲವಾದ ಅರಣ್ಯಗಳು ಉಸಿರಿಗೆ ಮೂಲ ಎಂದು ತಿಳಿದೇ ನಮ್ಮ ಪೂರ್ವಿಕರು ಅರಣ್ಯವನ್ನು ಪವಿತ್ರವೆಂದು ಭಾವಿಸಿದ್ದರು. ಅರಣ್ಯದ ಸ್ವಲ್ಪ ಭಾಗವನ್ನು ಸ್ಥಳೀಯ ದೇವರಿಗೆ ಮುಡುಪಾಗಿಡುತ್ತಿದ್ದರು. ಆ ದೇವರು ಅರಣ್ಯಕ್ಕೆ ಮತ್ತು ಅಲ್ಲಿರುವ ಎಲ್ಲ ಜೀವಿಗಳಿಗೆ ರಕ್ಷಣೆ ನೀಡುತ್ತಾನೆ ಎಂಬ ದೃಢನಂಬಿಕೆ ಮೊದಲಿನಿಂದಲೂ ರೂಢಿಯಲ್ಲಿದೆ. ಅಲ್ಲಿರುವ ಸಸ್ಯ, ಪ್ರಾಣಿ, ಬೀಜ ಮುಂತಾದವು ಆ ದೇವರ ಸ್ವತ್ತು. ಅವನ್ನು ಬಳಸಿದರೆ ದೇವರು ಮುನಿಸಿಕೊಳ್ಳುತ್ತದೆ, ಶಾಪ ನೀಡುತ್ತದೆ. ಆ ಅರಣ್ಯದ ಸಸ್ಯ, ಜೀವಿಗಳನ್ನು ಗೌರವಿಸಿದರೆ, ರಕ್ಷಿಸಿದರೆ ದೇವರು ಒಳ್ಳೆಯದನ್ನು ಮಾಡುತ್ತದೆ, ವರವನ್ನು ನೀಡುತ್ತದೆ ಎಂದು ಅನೂಚಾನವಾಗಿ ನಂಬುತ್ತಾರೆ. ಅಂತಹ ಅರಣ್ಯ ಪ್ರದೇಶವನ್ನು ಪವಿತ್ರವನ, ನಾಗವನ, ಸುಬ್ರಮಣ್ಯ ವನ ಎಂದು ಕರೆಯುವರು. ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಕರ್ನಾಟಕಗಳಲ್ಲಿ ಪವಿತ್ರವನಗಳನ್ನು ಗುರುತಿಸಲಾಗಿದೆ.

ಬಿಷ್ಲೋಯಿಗಳು : ಇವರು ರಾಜಸ್ಥಾನಿಗಳು. ಹಿಂದೂ ಧರ್ಮಕ್ಕೆ ಸೇರಿದವರು. ಪ್ರಕೃತಿಯನ್ನು ಪೂಜಿಸುವ ಮತ್ತು ಸಂರಕ್ಷಿಸುವ ಸಂಪ್ರದಾಯವಿರುವವರು. ಬೇಜ್ರಿಮರ (Prosopis cinararia) ಮತ್ತು ಕೃಷ್ಣ ಮೃಗವನ್ನು (Black buck) ದೇವರೆಂದು ಭಾವಿಸುವವರು. ಅವರು ವಾಸಿಸುವ ಸ್ಥಳದ ಆಸುಪಾಸಿನಲ್ಲಿರುವ ಎಲ್ಲ ಸಸ್ಯ ಮತ್ತು ಪ್ರಾಣಿಗಳನ್ನು ಪವಿತ್ರವೆಂದು ತಿಳಿಯುವವರು. ಅವರಿರುವ ಹಳ್ಳಿಗಳಲ್ಲಿ ಪ್ರಾಣಿಗಳು ಯಾವ ಭಯ ಭೀತಿಯಿಲ್ಲದೆ ಜನರು ನೀಡುವ ಆಹಾರ ತಿನ್ನುತ್ತಾ ಅಲೆದಾಡುತ್ತಿರುತ್ತವೆ. ಸಾಮಗ್ರಿಗಳನ್ನು ತಯಾರಿಸಲು ಇವರು ಮರಗಳನ್ನು ಕಡಿಯುವುದಿಲ್ಲ. ಮರಗಳು ಸತ್ತ ಮೇಲೆಯೇ ಅವನ್ನು ಕತ್ತರಿಸಿ ಬಳಸುತ್ತಾರೆ. ಅವರು ಹೆಣವನ್ನು ಸುಡುವುದಿಲ್ಲ. ನೆಲದಲ್ಲಿ ಹೂಳುತ್ತಾರೆ. ದೇಹದ ವಸ್ತುಗಳು ಪ್ರಕೃತಿಯಲ್ಲಿ ಲೀನವಾಗಿ ಸಸ್ಯಗಳ ಬೆಳವಣಿಗೆಗೆ ದೊರೆಯಲಿ ಎಂಬುದು ಇವರ ಉದ್ದೇಶ. ಇವರು ಕೆರೆಕಟ್ಟೆಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವರು. ತಮಗೂ, ಇತರೆ ಪ್ರಾಣಿಗಳಿಗೂ ಜೀವಜಲ ದೊರಕುವಂತೆ ಮಾಡುವರು.

ವನಗುಜ್ಜಾರರು : ಇವರು ಅರಣ್ಯವಾಸಿಗಳು. ಶತಮಾನಗಳಿಂದ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ತಾವು ಸಾಕಿರುವ ಎಮ್ಮೆಗಳನ್ನು ಕಾಡುಮೇಡುಗಳಲ್ಲಿ ಮೇಯಿಸುವರು. ಚಳಿಗಾಲದಲ್ಲಿ ಮೇವಿಗಾಗಿ ಮರದ ತುದಿಯಲ್ಲಿನ ಸಣ್ಣ ರೆಂಬೆಗಳನ್ನು ಕತ್ತರಿಸುವರು. ಆದರೆ ದೊಡ್ಡ ಕೊಂಬೆಗಳು ಇರುವಂತೆ ಎಚ್ಚರಿಕೆ ವಹಿಸುವರು. ಮತ್ತೆ ಆ ಮರಗಳು ಚಿಗಿರೊಡೆದು ಎಲೆಗಳು ತುಂಬಿ ಮರ ಮೊದಲಿನಂತೆ ಆಗುವ ಬಗ್ಗೆ ಅವರಿಗೆ ಪಾರಂಪರಿಕ ಜ್ಞಾನವಿದೆ. ಕೆಲವು ಮರಗಳನ್ನು ಎಲೆಗಳು ಉದುರುವ ಮೊದಲು ಅದರ ರೆಂಬೆಗಳನ್ನು ಕತ್ತರಿಸಿ ಬಳಸುವರು. ಹೊಸದಾಗಿ ಎಲೆಗಳು ಚಿಗುರಿದಾಗ ರೆಂಬೆಗಳನ್ನು ಕತ್ತರಿಸುವುದಿಲ್ಲ. ಹೀಗೆ ಹಸಿರು ಎಲೆಗಳ ಪ್ರಯೋಜನ ಮರಗಳಿಗೆ ಪೂರ್ಣವಾಗಿ ಸಿಗುವಂತೆ ಎಚ್ಚರಿಕೆ ವಹಿಸುವರು. ಎಮ್ಮೆಗಳ ಸಗಣಿಯು ಅರಣ್ಯಕ್ಕೆ ತುಂಬ ಒಳ್ಳೆಯ ಗೊಬ್ಬರ. ಇವರು ಅರಣ್ಯ ಮತ್ತು ವನ್ಯಜೀವಿಗಳೊಡನೆ ಸಮನ್ವಯ ಸಾಧಿಸಿದ್ದಾರೆ. ಇವರು ಇರುವೆಡೆ ವನ್ಯಜೀವಿಗಳು ಸುಖವಾಗಿರುತ್ತವೆ. ಇವರು ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವರು. ಇವರಿಗೆ ಅರಣ್ಯದ ಪ್ರತಿ ಪ್ರಭೇದ, ಕೀಟ, ಪಕ್ಷಿ, ಪ್ರಾಣಿಯ ಪರಿಚಯವಿರುತ್ತದೆ. ಅವುಗಳ ಜೀವನ ಶೈಲಿ, ಸ್ವಭಾವದ ಅರಿವಿದೆ. ಅವುಗಳ ಕೂಗಿನಿಂದಲೇ ಗುರುತಿಸುವ ಸಾಮರ್ಥ್ಯವಿದೆ.

ಚಿಪ್ಕೊ ಚಳುವಳಿ

ಹಿಂದಿ ಭಾಷೆಯಲ್ಲಿ ‘ಚಿಪ್ಕೊ’ ಎಂದರೆ ಅಪ್ಪಿಕೊ ಎಂಬರ್ಥ. ೧೯೭೩ರ ಏಪ್ರಿಲ್ ತಿಂಗಳಲ್ಲಿ ಉತ್ತರ ಪ್ರದೇಶ ಅಲಕಾನಂದ ಕಣಿವೆ ಪ್ರದೇಶದಲ್ಲಿರುವ ಮಂಡಲ್ ಗ್ರಾಮದ ಮಹಿಳೆಯರು ಮರ ಅಪ್ಪಿಕೊಳ್ಳುವ ಕ್ರಮವನ್ನು ಕೈಗೊಂಡರು. ಮರಗಳ ರಕ್ಷಣೆ ಮಾಡುವುದಕ್ಕೆ ಮಹಿಳೆಯರು ಮರಗಳನ್ನು ತಬ್ಬಿಕೊಂಡರು. ಮರ ಕಡಿಯುವವರಿಂದ ರಕ್ಷಿಸಿದರು. ದಸೋಲಿ ಗ್ರಾಮ ಸ್ವರಾಜ್ ಸಂಘ ಎಂಬ ಸೇವಾ ಸಂಘದ ಪ್ರೋತ್ಸಾಹದಿಂದಾಗಿ ಸ್ಥಳೀಯ ಮಹಿಳೆಯರು ಅರಣ್ಯದೊಳಗೆ ಪ್ರವೇಶಿಸಿದರು. ಮರಗಳ ಸುತ್ತ ಮಾನವ ಸರಪಳಿಯನ್ನು ನಿರ್ಮಿಸಿದರು. ಮರ ಕಡಿಯಲು ಬಂದವರಿಗೆ ವಿನೂತನ ರೀತಿಯ ಪ್ರತಿಭಟನೆ ಮಾಡಿದರು. ಮರ ಕಡಿಯಲು ಬಿಡಲಿಲ್ಲ. ಈ ಚಳವಳಿಯ ಯಶಸ್ಸು ಎಲ್ಲ ಕಡೆ ಹರಡಿತು. ಅದೇ ರೀತಿಯ ಪ್ರತಿಭಟನೆಗಳು ಮತ್ತು ಮರಗಳ ಸಂರಕ್ಷಣಾ ಚಳವಳಿ ದೇಶದೆಲ್ಲೆಡೆ ಪಸರಿಸಿತು. ಈ ಚಳವಳಿಯ ಬೆಂಬಲಿಗರು ಪ್ರಮುಖವಾಗಿ ಮಹಿಳೆಯರು. ಹಲವಾರು ಪ್ರದೇಶಗಳಲ್ಲಿ ಮರ ಉರುಳಿಸುವುದನ್ನು ತಡೆದರು.

ಉತ್ತರ ಪ್ರದೇಶದಲ್ಲಿ ವಿಸ್ತೃತವಾಗಿ ಹರಡಿದ ಚಿಪ್ಕೊ ಚಳವಳಿಯು ರಾಜಕೀಯ ಪ್ರತಿನಿಧಿಗಳ ಹಾಗೂ ಸರ್ಕಾರದ ಗಮನವನ್ನು ಸೆಳೆಯಿತು. ೧೯೮೦ರಲ್ಲಿ ಅಂದಿನ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಹಿಮಾಲಯ ತಪ್ಪಲಿನಲ್ಲಿರುವ ಅರಣ್ಯದ ಮರಗಳನ್ನು ಕತ್ತರಿಸುವುದಕ್ಕೆ ೧೫ ವರ್ಷಗಳ ನಿರ್ಬಂಧವನ್ನು ಕಾನೂನಿನ ಮೂಲಕ ಜಾರಿಗೆ ತಂದರು. ಈ ಚಳವಳಿಯಿಂದ ಪ್ರೇರಣೆ ಪಡೆದು ಪಶ್ಚಿಮ ಘಟ್ಟಗಳಲ್ಲಿ ‘ಅಪ್ಪಿಕೊ’ ಚಳವಳಿ ಆರಂಭವಾಯಿತು. ವಿಂಧ್ಯಾ ಪರ್ವತ ಪ್ರದೇಶದಲ್ಲಿಯೂ ಚಿಪ್ಕೊ ರೀತಿಯ ಚಳವಳಿ ಆರಂಭವಾಯಿತು. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ ಬಗ್ಗೆ ನೀತಿ-ನಿಯಮಗಳನ್ನು ರೂಪಿಸಲು ಒತ್ತಡ ನಿರ್ಮಾಣವಾಯಿತು. ಜನರ ಅಗತ್ಯಗಳನ್ನು ಮತ್ತು ಪಾರಿಸಾರಿಕ ಅಗತ್ಯಗಳನ್ನು ದೃಷ್ಠಿಯಲ್ಲಿರಿಸಿಕೊಂಡು ಪರಿಸರ ನೀತಿ ರಚನೆಯಾಗಬೇಕೆಂಬ ಅಭಿಪ್ರಾಯ  ಮೂಡಿತು.

ಹವಾಗುಣ ಬದಲಾವಣೆಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ದುಷ್ಪರಿಣಾಮಗಳಿಗೆ ಪರಿಹಾರಗಳನ್ನು ಸೂಚಿಸುವಲ್ಲಿ ಪಾತ್ರ ವಹಿಸುವ ಅನೇಕರಲ್ಲಿ ಕೆಲವು ಪ್ರಮುಖರ ಪರಿಚಯ ಮತ್ತು ಅವರ ಕೊಡುಗೆಯನ್ನು ಕೆಳಗೆ ನೀಡಲಾಗಿದೆ.

ಅಣ್ಣ ಹಜಾರೆ ಅಥವಾ ಕಿಶನ್ ಬಾಬುರಾವ್ ಹಜಾರೆ : ಪ್ರಖ್ಯಾತ ಸಮಾಜ ಸೇವಕ. ಮಹಾರಾಷ್ಟ್ರದ ಅಹಮದಾಬಾದ್ ಜಿಲ್ಲೆಯ ರಿಲೆಗಾನ್ ಸಿದ್ದಿಹಳ್ಳಿಯನ್ನು ಬರಗಾಲ ಮತ್ತು ಬಡತನದ ಕ್ರೂರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಸಮೃದ್ಧ ಸ್ವಾವಲಂಬಿ ಮಾದರಿ ಹಳ್ಳಿಯನ್ನಾಗಿ ಪರಿವರ್ತಿಸಿದ ಹರಿಕಾರ. ಸುಸ್ಥಿರ ವಿಧಾನಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದ ನೇತಾರ. ಅವರ ನೇತೃತ್ವದಲ್ಲಿ ಮಳೆ ನೀರಿನ ಹರಿವನ್ನು ತಡೆಯಲು, ಮಣ್ಣಿನಲ್ಲಿ ಹಿಂಗುವಂತೆ ಮಾಡಲು ಹಲವಾರು ಕಾಲುವೆ, ಕಟ್ಟೆ, ಬದುಗಳನ್ನು ನಿರ್ಮಿಸಲಾಯಿತು. ಮಳೆ ನೀರು ಸಂಗ್ರಹಣೆ ಯಶಸ್ವಿಯಾಗಿ ಭೂಮಿಯಲ್ಲಿ ಅಂತರ್ಜಲದ ಮಟ್ಟ ಮೇಲಕ್ಕೇರಿತು. ನೀರಾವರಿ ಅನುಕೂಲ ಅಧಿಕವಾಯಿತು. ಈಗ ಕೃಷಿಯಲ್ಲಿ ಬೆಳೆಗಳ ಇಳುವರಿ ಹೆಚ್ಚಿದೆ. ಮರಾವಳಿ ಮಾಡುವುದನ್ನು ಮತ್ತು ಇಳಿಜಾರು ಪ್ರದೇಶಗಳಲ್ಲಿ ಸಮತಟ್ಟು ಕೃಷಿಯನ್ನು ಅಣ್ಣ ಹಜಾರೆ ಪ್ರೋತ್ಸಾಹಿಸಿದರು. ಮಳೆ ನೀರು ಚೆನ್ನಾಗಿ ಮಣ್ಣಿನಲ್ಲಿ ಹಿಂಗಲು ಸಾಧ್ಯವಾಯಿತು. ಹಳ್ಳಿಯ ಎಲ್ಲಕಡೆ ಸೌರಫಲಕಗಳನ್ನು ಹಾಕಿ ವಿದ್ಯುತ್ ಪಡೆಯಲಾಗಿದೆ. ಜೈವಿಕ ಅನಿಲ ಸ್ಥಾವರಗಳ ಮೂಲಕ ಅಡಿಗೆಗೆ ಅನಿಲ ಪಡೆಯಲಾಗಿದೆ. ಇಲ್ಲಿ ಗಾಳಿ ಗಿರಣಿಯನ್ನು ಸ್ಥಾಪಿಸಿದರು. ೧೯೯೦ರಲ್ಲಿ ಅಣ್ಣ ಹಜಾರೆಗೆ ರಾಷ್ಟ್ರದ ಉನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಶ್ರೀ ಚಂಡಿ ಪ್ರಸಾದ್ ಭಟ್ : ಚಿಪ್ಕೊ ಚಳವಳಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಇವರು ಮಹಿಳೆಯರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಅಹರ್ನಿಶಿ ದುಡಿದರು. ಮಹಿಳೆಯರು ತಮ್ಮ ಪರಿಸರ ಹಕ್ಕುಗಳನ್ನು ಪಡೆಯಲು ಪ್ರೋತ್ಸಾಹಿಸಿದರು. ಮಾನವನ ಚಟುವಟಿಕೆಗಳಿಂದ ಪರಿಸರದ ಮೇಲಾಗುವ ಆಘಾತಗಳು ಮಹಿಳೆಯರಿಗೆ ಮನಮುಟ್ಟುವಂತೆ ವಿವರಿಸಿದರು. ಆಘಾತದ ಪ್ರಮಾಣವನ್ನು ಲೆಕ್ಕ ಹಾಕುವುದನ್ನು ಮಹಿಳೆಯರಿಗೆ ತಿಳಿಸಿಕೊಟ್ಟರು. ಅಲಕಾನಂದ ಕಣಿವೆ ಪ್ರದೇಶದಲ್ಲಿ ಮತ್ತೆ ಮರಗಳನ್ನು ಬೆಳೆಸಲು ಕಾರ್ಯಕ್ರಮಗಳನ್ನು ಸಂಘಟಿಸಿದರು. ಪರಿಸರ ಅಭಿವೃದ್ಧಿ ಶಿಬಿರಗಳನ್ನು ಏರ್ಪಡಿಸಿದರು. ಸಸಿ ನೆಡುವುದರಲ್ಲಿ ಮಹಿಳೆಯರು ಸ್ಥಳೀಯ ಜನರು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು. ಚಂಡಿ ಪ್ರಸಾದ್ ಭಟ್ಟರು ದಸೋಲಿ ಗ್ರಾಮ ಸ್ವರಾಜ್ ಮಂಡಲಿಯನ್ನು ಸಂಸ್ಥಾಪಿಸಿದರು. ಅಲಕಾನಂದ ನದಿ ಪ್ರದೇಶದಲ್ಲಿ ಪೂರ್ಣವಾಗಿ ಹಾಳಾಗಿದ್ದ ಪ್ರದೇಶದಲ್ಲಿ ಸಮುದಾಯದಿಂದ ಅರಣ್ಯೀಕರಣ ಯೋಜನೆಯನ್ನು ಈ ಮಂಡಲಿ ಯಶಸ್ವಿಯಾಗಿ ಪೂರೈಯಿಸಿತು. ಪರ್ವತಗಳ ಪ್ರದೇಶದಲ್ಲಿ ಪರಿಸರ ರಕ್ಷಣೆಗಾಗಿ ದುಡಿದ ಶ್ರೀ ಭಟ್ಟರ ಪಾತ್ರವನ್ನು ಗುರುತಿಸಿ ೧೯೮೨ರಲ್ಲಿ ಶ್ರೀಯುತರಿಗೆ ರಾಮನ್ ಮ್ಯಾಗೆಸ್ಸೆ ಪ್ರಶಸ್ತಿಯನ್ನು ಸಮುದಾಯ ನಾಯಕತ್ವಕ್ಕಾಗಿ ನೀಡಲಾಯಿತು.

ಡಾ|| ಎಂ.ಎಸ್. ಸ್ವಾಮಿನಾಥನ್ : ಭಾರತದ ಪ್ರಖ್ಯಾತ ಕೃಷಿ ವಿಜ್ಞಾನಿ. ಭಾರತ ಹಸಿರು ಕ್ರಾಂತಿಯ ಪ್ರವರ್ತಕ. ಇವರು ಅಧಿಕ ಇಳುವರಿಯ ಗೋಧಿ ಮತ್ತು ಭತ್ತದ ತಳಿಗಳನ್ನು ಅಭಿವೃದ್ಧಿಪಡಿಸಿದರು. ಉತ್ತಮವಾದ ಆಲೂಗೆಡ್ಡೆ ಹಾಗೂ ಸೆಣಬಿನ ಹೈಬ್ರಿಡ್ ತಳಿಗಳನ್ನು ಸೃಜಿಸಿದರು. ಸಂಶೋಧನೆಯ ಲಾಭ ಕೃಷಿಕರಿಗೆ ಸಿಗುವಂತೆ ಮಾಡಲು ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದರು. ಅವರು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಆಧುನಿಕ ವಿಧಾನ ಮತ್ತು ತಂತ್ರವಿಧಾನಗಳನ್ನು ಪರಿಚಯಿಸಿದರು. ಇವರು ಕೃಷಿಕ್ಷೇತ್ರಕ್ಕೆ ಕೊಡುಗೆ ನೀಡಿರುವಂತೆ, ಪರಿಸರ ರಕ್ಷಣೆ, ಜೀವಿ ವೈವಿಧ್ಯ ಸಂರಕ್ಷಣೆ ಮತ್ತು ಬಡತನ ನಿರ್ಮೂಲನೆಗೂ ಅಪಾರ ಕೊಡುಗೆ ನೀಡಿದ್ದಾರೆ.

ಇವರ ಕೊಡುಗೆಯನ್ನು ಪರಿಗಣಿಸಿ ೧೯೯೯ರಲ್ಲಿ UNESCO ಗಾಂಧಿ, ಬಂಗಾರದ ಪದಕ, ೧೯೭೧ರಲ್ಲಿ ರಾಮನ್ ಮ್ಯಾಗೆಸ್ಸೆ ಪ್ರಶಸ್ತಿ ಮತ್ತು ೧೯೮೭ರಲ್ಲಿ ವಿಶ್ವ ಆಹಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶ್ರೀ ಮಹೇಶ್‌ಚಂದ್ರ ಮೆಹ್ತ : ವೃತ್ತಿಯಲ್ಲಿ ನ್ಯಾಯವಾದಿ, ಪ್ರವೃತ್ತಿಯಲ್ಲಿ ಪರಿಸರವಾದಿ, ದೇಶದ ಪರಿಸರ ರಕ್ಷಣೆಗೆ ಮತ್ತು ಶ್ರೀಸಾಮಾನ್ಯರಲ್ಲಿ ಶುದ್ಧಗಾಳಿ, ನೀರು ಪಡೆಯುವ ಹಕ್ಕಿನ ಜಾಗೃತಿಯ ಬಗ್ಗೆ ವಿವಿಧ ಪ್ರಯತ್ನಗಳನ್ನು ಕೈಗೊಂಡ ವ್ಯಕ್ತಿ. ವಿಶ್ವದ ಅದ್ಭುತಗಳಲ್ಲಿ ಒಂದಾದ ಹಾಗೂ ಪ್ರೀತಿಯ ಸಂಕೇತವಾದ ತಾಜ್‌ಮಹಲ್ ರಕ್ಷಣೆಗೆ ೧೯೮೪ರಲ್ಲಿ ಒಂದು ಹೋರಾಟವನ್ನೇ ಆರಂಭಿಸಿದವರು ಶ್ರೀ ಮೆಹ್ತ. ಅವರ ಪ್ರಯತ್ನ ಯಶಸ್ಸು ಪಡೆದು, ಇಂದು ತಾಜ್‌ಮಹಲ್ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ೧೯೮೫ರಲ್ಲಿ ಶ್ರೀ ಮೆಹ್ತರವರು ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಆಸಕ್ತಿ ದಾವೆಯಲಿ ದೆಹಲಿಯ ಮಾಲಿನ್ಯ ಉಂಟು ಮಾಡುತ್ತಿದ್ದ ೧೨೦೦ ಕೈಗಾರಿಕೆಗಳ ವಿರುದ್ಧ ವಾದ ಮಂಡಿಸಿದರು. ೧೯೯೬ರಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿ ಕೆಲವು ಕೈಗಾರಿಕೆಗಳು ಬೇರೆಡೆಗೆ ಹೋಗುವಂತೆ ಅಥವಾ ಅನೇಕ ಕಾರ್ಖಾನೆಗಳು ಮುಚ್ಚುವಂತೆ ಆದೇಶ ನೀಡಿತು. ಶ್ರೀಯುತರ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ೧೯೯೭ರಲ್ಲಿ ರಾಮೊನ್ ಮ್ಯಾಗೆಸ್ಸೆ ಪ್ರಶಸ್ತಿ ನೀಡಲಾಯಿತು.

ಶ್ರೀಮತಿ ಮೇಧಾ ಪಾಟ್ಕರ್ : ನರ್ಮದಾ ಬಚಾವತ್ ಆಂದೋಲನದ ಪ್ರಮುಖ ನಾಯಕಿ, ಸಂಘಟನಾ ಚತುರೆ ಮತ್ತು ನಿರ್ಧಿಷ್ಟ ನಿಲುವ ತಾಳಿರುವ ವ್ಯಕ್ತಿ. ಭಾರತದಲ್ಲಿ ಪಶ್ಚಿಮ ಮುಖವಾಗಿ ಹರಿಯುವ ನದಿಗಳಲ್ಲಿ ನರ್ಮದಾ ಅತಿ ದೊಡ್ಡ ನದಿ. ಈ ನದಿಗೆ ಹಲವು ಅಣೆಕಟ್ಟುಗಳನ್ನು ನಿರ್ಮಿಸುತ್ತಿರುವ ಯೋಜನೆಯನ್ನು ಕೈಬಿಡಲು ಆಗ್ರಹಿಸುತ್ತಿರುವ ಸಂಘಟನೆಯೇ ನರ್ಮದಾ ಬಚಾವತ್ ಆಂದೋಲನ. ಪ್ರಮುಖ ಅಣೆಕಟ್ಟಾದ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಾಣದಿಂದ ೩೭೦೦೦ ಹೆಕ್ಟೇರಿಗೂ ಅಧಿಕ ಪ್ರಮಾಣದ ಅರಣ್ಯ ಹಾಗೂ ಕೃಷಿ ಭೂಮಿ ಮುಳುಗಡೆಯಾಗುವುದು ಮತ್ತು ೩೨೦೦೦೦ ಜನ ನಿರಾಶ್ರಿತರಾಗುವರು. ಅವರ ಜೀವನ ಅಸ್ತವ್ಯಸ್ತವಾಗುವುದು. ಈ ಆಂದೋಲನದ ನಾಯಕತ್ವವನ್ನು ಬದ್ಧತೆಯಿಂದ ನಿರ್ವಹಿಸುತ್ತಿರುವುದರಿಂದ ೧೯೯೨ರಲ್ಲಿ ಇವರಿಗೆ ಗೋಲ್ಡಮನ್ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಡಾ. ರಾಜೇಂದ್ರ ಕುಮಾರ್ ಪಚೋರಿ : ಇವರು IPCC ಯ ಅಧ್ಯಕ್ಷರು.ಹವಾಗುಣ ಬದಲಾವಣೆಯ ಬಗ್ಗೆ ವಿವಿಧ ರಾಷ್ಟ್ರನಾಯಕರಿಗೆ ಮನದಟ್ಟಾಗುವಂತೆ ವಿವರಿಸುವಲ್ಲಿ ಸಿದ್ಧಹಸ್ತರು. ಪರಿಸರಕ್ಕೆ ಸಂಬಂಧಿಸಿದ ೨೩ ಪುಸ್ತಕಗಳನ್ನು ಬರೆದಿದ್ದಾರೆ. ೨೦೦೧ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೦೭ರಲ್ಲಿ ಇವರಿಗೆ ಆಲ್‌ಗೋರ್ ಜೊತೆಗೆ ನೊಬೆಲ್ ಶಾಂತಿ ಪುರಸ್ಕಾರ ದೊರಕಿದೆ.