ಹಿಂದಿನ ಅಧ್ಯಾಯಗಳಿಂದ ಹವಾಗುಣ ಬದಲಾವಣೆಯು ತೀವ್ರವಾದ ಸಮಸ್ಯೆ ಎಂಬುದು ಸ್ಪಷ್ಟ. ನಾವು ತುರ್ತಾಗಿ ಪರಿಹಾರ ಮಾರ್ಗಗಳನ್ನು ಕೈಗೊಳ್ಳಬೇಕಿದೆ ಎಂಬುದೂ ಸುಸ್ಪಷ್ಟ. ಸೌರವ್ಯೂಹದಲ್ಲಿ ಜೀವವಿರಲು ಸಾಧ್ಯವಿರುವ ಏಕೈಕ ಗ್ರಹವೆಂದರೆ ಭೂಗ್ರಹ. ನಾವೆಲ್ಲರೂ ಒಂದೇ ವಾಯುಗೋಳವನ್ನು ಹಂಚಿಕೊಂಡಿದ್ದೇವೆ. ಆದ್ದರಿಂದ ವಿಶ್ವದ ನಾಗರೀಕರಾಗಿ ಅದನ್ನು ಉಳಿಸುವ, ಸಂರಕ್ಷಿಸುವ, ಚೊಕ್ಕಟವಾಗಿಟ್ಟುಕೊಳ್ಳುವ ಮತ್ತು ಅದನ್ನು ಜಾಗ್ರತೆಯಾಗಿ ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ. ಈ ಬಗ್ಗೆ ಎಲ್ಲರಿಗೆ ಅರಿವುಂಟು ಮಾಡಲು ಜಗತ್ತಿನಾದ್ಯಂತ ವಿವಿಧ ಸಮಾವೇಶ ಮತ್ತು ಗೋಷ್ಠಿಗಳನ್ನು ಸಂಘಟಿಸಲಾಗಿದೆ. ವಿವಿಧ ಒಪ್ಪಂದ ಹಾಗೂ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. ಈ ಪ್ರಕ್ರಿಯೆಯು ಪರೋಕ್ಷವಾಗಿ ೧೯೭೨ರಲ್ಲಿ ನಡೆದ ಸ್ಟಾಕ್‌ಹೋಮ್ ಸಮಾವೇಶದಿಂದ ಆರಂಭವಾಯಿತು. ವಾಸ್ತವವಾಗಿ ೧೯೯೨ರಲ್ಲಿ ಹವಾಗುಣ ಬದಲಾವಣೆಯ ಚರ್ಚೆಗಳು UNFCCC ರಚನೆಯಿಂದ ಆರಂಭವಾದವು. ಅನಂತರ ಕ್ಯೊಟೊ ಒಡಂಬಡಿಕೆಯಾಯಿತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಕಡಿತ ಮಾಡಲು ನಿರ್ದಿಷ್ಟ ಗುರಿಗಳನ್ನು ಈ ಒಡಂಬಡಿಕೆಯಲ್ಲಿ ಹಾಕಿಕೊಳ್ಳಲಾಯಿತು. ಹವಾಗುಣ ಬದಲಾವಣೆಯ ಗತಿಯನ್ನು ನಿಲ್ಲಿಸಲು ಅಥವಾ ತಗ್ಗಿಸಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬಹುದು.

ಭವಿಷ್ಯ ಒಂದು – ಮಾರ್ಗ ಹಲವು

ಫಾಸಿಲ್ ಇಂಧನಗಳ ಬಳಕೆ ಕಡಿಮೆ ಮಾಡುವುದರಿಂದ, ಅರಣ್ಯನಾಶ ತಪ್ಪಿಸುವುದರಿಂದ ಕೃಷಿ ವಿಧಾನಗಳನ್ನು ವ್ಯವಸ್ಥಿತಗೊಳಿಸುವುದರಿಂದ ಮತ್ತು ಕೊಳ್ಳುಬಾಕ ಸಂಸ್ಕೃತಿಯನ್ನು ಕಡಿಮೆ ಮಾಡುವುದರಿಂದ ಮಾತ್ರ ನಾವು GHG ಗಳ ಪ್ರಮಾಣ ತಗ್ಗಿಸಬಹುದು. ರಾಷ್ಟ್ರಗಳಿಗೆ ಈ ಕಾರ್ಯ ಕೈಗೊಳ್ಳುವುದು ಸುಲಭದ ಮಾತಲ್ಲ. ಇವು ಶಕ್ತಿಗಾಗಿ ಫಾಸಿಲ್ ಇಂಧನಗಳನ್ನು ಮತ್ತು ವಿವಿಧ ಕಚ್ಚಾ ಪದಾರ್ಥಗಳಿಗೆ ಅರಣ್ಯ ಸಂಪತ್ತನ್ನು ಅವಲಂಭಿಸಿವೆ. ಫಾಸಿಲ್ ಇಂಧನಗಳ ಬಳಕೆ ಕಡಿಮೆ ಮಾಡುವುದರಿಂದ ಕೈಗಾರಿಕೆ ಮತ್ತು ಸಾರಿಗೆ ವ್ಯವಸ್ಥೆಗಳಿಗೆ ಭಾರಿ ಪೆಟ್ಟು ಬೀಳುತ್ತದೆ. ಅತಿ ತುರ್ತಾಗಿ ಇಂಧನಗಳ ಬಳಕೆ ಕಡಿಮೆ ಮಾಡಿದರೆ ಅನೇಕ ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ ಮತ್ತು ಆರ್ಥಿಕ ಪ್ರಗತಿ ಕುಂಠಿತವಾಗುವುದು.

GHG ಗಳ ಹೊರಸೂಸುವಿಕೆಯ ಪ್ರಮಾಣ ತಗ್ಗಿಸುವ ಯಾವುದೇ ಪ್ರಕ್ರಿಯೆ ಅಥವಾ ತಂತ್ರ ವಿಧಾನವನ್ನು ವಿವರಿಸಲು ‘ಮಿಟಿಗೇಶನ್’-‘ಪರಿಹಾರೋಪಾಯಗಳು’ ಎಂಬ ಪದವನ್ನು ಬಳಸುವರು. GHG ಗಳಾದ CO2, CH4 ಮತ್ತು ಇತರೆ ಹಸಿರುಮನೆ ಅನಿಲಗಳು ವಾಯುಗೋಳಕ್ಕೆ ಸೇರುತ್ತಿರುವ ಪ್ರಮಾಣವನ್ನು ತಗ್ಗಿಸುವುದೇ ಪರಿಹಾರೋಪಾಯಗಳ ಪ್ರಮುಖ ಉದ್ದೇಶ. ನಾವು ಪರಿಹಾರೋಪಾಯಗಳನ್ನು ಸರಿಯಾಗಿ ಅನುಸರಿಸಿದ್ದೇ ಆದರೆ, ಯಶಸ್ಸನ್ನು ಗಳಿಸಬಹುದು. ಭವಿಷ್ಯದಲ್ಲಿ ಹವಾಗುಣ ಬದಲಾವಣೆ ತೀವ್ರತೆಯನ್ನು ತಗ್ಗಿಸಬಹುದು.

. ಶಕ್ತಿಯ ವಿಭಾಗ

ಶಕ್ತಿ ಬೇಡಿಕೆಯನ್ನು ತಗ್ಗಿಸುವುದು, ಶಕ್ತಿ ಉತ್ಪಾದನಾ ತಂತ್ರಜ್ಞಾನದ ದಕ್ಷತೆಯನ್ನು ಅಧಿಕಗೊಳಿಸುವುದು ಮತ್ತು ನವೀಕರಿಸಬಹುದಾದ ಹಾಗೂ ಪರಿಸರಸ್ನೇಹಿ ಶಕ್ತಿ ಮೂಲಗಳನ್ನು ಬಳಸುವುದರಿಂದ GHGಗಳ ಹೊರಸೂಸುವಿಕೆ ಕಡಿಮೆ ಮಾಡಬಹುದು. ಕಾರ್ಬನ್‌ರಹಿತ ಶಕ್ತಿ ಮೂಲಗಳಾದ ಪವನ, ಸೌರ, ಭೂ ಉಷ್ಣ ಹಾಗೂ ಸಾಗರ ಉಷ್ಣ ಶಕ್ತಿ ಪರಿವರ್ತನಾ ಶಕ್ತಿ ಮೂಲಗಳನ್ನು ಪ್ರೋತ್ಸಾಹಿಸಬೇಕು. ಇಡೀ ವಿಶ್ವವೇ ಶಕ್ತಿಗಾಗಿ ಫಾಸಿಲ್ ಇಂಧನಗಳನ್ನು ಅವಲಂಬಿಸುವ ಬದಲು ಮೇಲ್ಸೂಚಿಸಿದ ಪರಿಸರ ಸ್ನೇಹಿ ಶಕ್ತಿ ಮೂಲಗಳ ಬಳಕೆ ಮಾಡುವಂತಾಗಬೇಕು. ಈ ದಿಶೆಯಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳು ಕಾರ್ಯಪ್ರವೃತ್ತರಾಗಿವೆ. ಚೀನಾದಂತಹ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳು ಕಲ್ಲಿದ್ದಲ ಉತ್ಪಾದನೆಯನ್ನು ಕಡಿಮೆ ಮಾಡಿವೆ ಮತ್ತು ಶಕ್ತಿಯ ಇತರೆ ಮೂಲಗಳತ್ತ ಕಣ್ಣು ಹಾಯಿಸಿವೆ. ಪೊಲೆಂಡ್, ರಷ್ಯಾ ಮತ್ತು ಇಂಗ್ಲೆಂಡ್ ದೇಶಗಳು ಫಾಸಿಲ್ ಇಂಧನಗಳಿಗೆ ಇದ್ದ ರಿಯಾಯಿತಿಯನ್ನು ಕಡಿಮೆ ಮಾಡಿವೆ.

ವಾಹನಗಳು ಪ್ರಮುಖವಾಗಿ ಫಾಸಿಲ್ ಇಂಧನಗಳನ್ನು ಬಳಸುತ್ತವೆ. ಇವು ಜಗತ್ತಿನ ಮಾಲಿನ್ಯದ ಬೃಹತ್ ಮೂಲ. ಪರಿಸರಕ್ಕೆ ಹಾನಿ ಮಾಡದ ಹಾಗೂ ಶುದ್ಧ ತಂತ್ರಜ್ಞಾನಗಳು ಮತ್ತು ಇಂಧನಗಳು ಇಂದಿನ ಅಗತ್ಯ. ವಿದ್ಯುತ್ತಿನಿಂದ ಚಲಿಸುವ ವಾಹನಗಳು, ದಕ್ಷ ಹಾಗೂ ಮಾಲಿನ್ಯ ಮಾಡದ ಡೀಸೆಲ್ ಇಂಜಿನ್‌ಗಳು, ಅತಿ ಕಡಿಮೆ ಗಂಧಕವಿರುವ ಡೀಸೆಲ್, ಒತ್ತಲ್ಪಟ್ಟ ನೈಸರ್ಗಿಕ ಅನಿಲ, ಹೈಡ್ರೋಜನ್ ಇಂಧನ ಬಳಕೆಯ ವಾಹನಗಳು ಮತ್ತು ಕೆಟಲಿಟಿಕ್ ಕನ್ವರ್ಟರ‍್ಸ್ ಮುಂತಾದವನ್ನು ಎಲ್ಲ ದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಹೊರ ಸೂಸುವ ಅನಿಲಗಳ ಬಗ್ಗೆ ಕಠಿಣವಾದ ಗುಣಮಟ್ಟವನ್ನು – ‘ಯುರೊ ನಾರ್ಮ್ಸ್’ಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

) ‘ಮಾಲಿನ್ಯ ಮಾಡುವವನೇ ದಂಡ ನೀಡು’

ಕೆಲವು ದೇಶಗಳು ಕೈಗಾರಿಕೆ ಮತ್ತು ಇತರೆ ವಿಭಾಗಗಳಲ್ಲಿ ಮಾಲಿನ್ಯ ಮಾಡುವ ಇಂಧನಗಳಿಗೆ ಹೆಚ್ಚಿನ ತೆರಿಗೆ ವಿಧಿಸುತ್ತಿವೆ. ಮಾಲಿನ್ಯದಿಂದ ಸಮಾಜಕ್ಕೆ ಆಗುವ ಅಪಾಯದ ವೆಚ್ಚವನ್ನು ಮಾಲಿನ್ಯ ಮಾಡಿದ ವ್ಯಕ್ತಿಯೇ ಭರಿಸಬೇಕೆಂಬುದು ಈ ತೆರಿಗೆಯ ಉದ್ದೇಶ. ಹಸಿರು ಮನೆ ಅನಿಲಗಳ ಹೊರಸೂಸುವಿಕೆ ತಡೆಗಟ್ಟಲು ಮಾಡಿರುವ ಅತ್ಯಂತ ನೇರ ಮಾರ್ಗವೆಂದರೆ ತೆರಿಗೆ ಹಾಕುವುದು. ಇಂತಹ ತೆರಿಗೆಯನ್ನು ಬ್ರೆಜಿಲ್, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಇಟಲಿ, ಸ್ವೀಡನ್, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಜಾರಿಗೆ ತರಲಾಗಿದೆ.

ಶಕ್ತಿಯ ಬಳಕೆ ಮತ್ತು ಪರಿವರ್ತನೆಯಲ್ಲಿ ಅಧಿಕ ದಕ್ಷತೆ ಬರುವುದರಿಂದ ಹೊರಸೂಸುವಿಕೆ ಸಹಜವಾಗಿ ಕಡಿಮೆಯಾಗುವುದು. ಕಡಿಮೆ ಶಕ್ತಿ ಬಳಸುವ ಹಾಗೂ ಕಡಿಮೆ ಅನಿಲಗಳನ್ನು ಹೊರಸೂಸುವ ಕಲ್ಲಿದ್ದಲು ಮತ್ತು ಉರುವಲು ಸೌದೆ ಒಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಚೀನಾ, ಭಾರತ, ಕೀನ್ಯಾ ಮತ್ತು ಯುಗಾಂಡದಂತಹ ದೇಶಗಳು ದಕ್ಷತೆಯಿರುವ ಒಲೆಗಳನ್ನು ಉತ್ಪಾದಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಅಡಿಗೆಗೆ ಹಾಗೂ ಶಾಖ ಪಡೆಯುವುದಕ್ಕೆ ಉರುವಲನ್ನು ಅವಲಂಬಿಸಿರುವ ಜನಕ್ಕೆ ಮಂದ ಶಕ್ತಿಯ ಬದಲೀ ಮೂಲಗಳನ್ನು ನೀಡಬೇಕಾಗುವುದು.

ಈ ಎಲ್ಲ ಪ್ರಯತ್ನಗಳಿದ್ದರೂ ಸಹ ಭವಿಷ್ಯದಲ್ಲಿ ಕಲ್ಲಿದ್ದಲು ಶಕ್ತಿಯ ಒಂದು ಪ್ರಮುಖ ಸಂಪನ್ಮೂಲವಾಗಿ ಮುಂದುವರೆಯಲಿದೆ. ಕೈಗಾರಿಕೆಗಳು ಕಲ್ಲಿದ್ದಲನ್ನು ಪ್ರಮುಖವಾಗಿ ಅವಲಂಬಿಸಿವೆ. ಹಾಗಾಗಿ ಸದ್ಯದಲ್ಲಿ ಪೂರ್ಣವಾಗಿ ಕಲ್ಲಿದ್ದಲು ತೊರೆಯಲು ಸಾಧ್ಯವಿಲ್ಲ. ಅಮೆರಿಕಾದಂತಹ ಕೆಲವು ಶ್ರೀಮಂತ ರಾಷ್ಟ್ರಗಳು ಕಲ್ಲಿದ್ದಲ ಬಳಕೆಯಲ್ಲಿ ಸ್ವಚ್ಛ ತಂತ್ರಜ್ಞಾನವನ್ನು ಅನ್ವಯಿಸಿದ್ದಾರೆ. ಹಾಗಾಗಿ NOX, SO2 ಮತ್ತು ಕಣಗಳ ದ್ರವ್ಯ ಹೊರಸೂಸುವಿಕೆಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಿದೆ. ೧೯೯೬ರಲ್ಲಿ ವಿಶ್ವಬ್ಯಾಂಕ್ ಕಲ್ಲಿದ್ದಲ ಸ್ವಚ್ಛ ದಹನ ತಂತ್ರಜ್ಞಾನವನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವರ್ಗಾಯಿಸಲು ಆರಂಭಿಕ ಕ್ರಮಗಳನ್ನು ಕೈಗೊಂಡಿದೆ.

ಶಕ್ತಿಯ ದಕ್ಷ ಬಳಕೆ ಮತ್ತು ಬದಲಿ ಶಕ್ತಿ ಮೂಲಗಳ ಅಭಿವೃದ್ಧಿಯಲ್ಲಿ ನೇತೃತ್ವ ಹೊಂದಿರುವ ರಾಷ್ಟ್ರಗಳಲ್ಲಿ ಜಪಾನ್‌ದೇಶ ಮುಂಚೂಣಿಯಲ್ಲಿದೆ. ಶಕ್ತಿ ಉಳಿತಾಯ ಮತ್ತು ಉತ್ಪಾದನಾ ಯೋಜನೆಗಳಿಗೆ ಜಪಾನ್ ದೇಶವು ರಿಯಾಯಿತಿ ನೀಡುತ್ತಿದೆ. ಪೆಟ್ರೋಲ್ ಅಲ್ಲದೆ ಇತರೆ ಇಂಧನ ಬಳಸುವ ಶಕ್ತಿಸ್ಥಾವರಗಳ ನಿರ್ಮಾಣಕ್ಕೆ ಮತ್ತು ದಕ್ಷತೆ ಹೆಚ್ಚಿಸುವ ನೂತನ ತಂತ್ರಜ್ಞಾನದ ತರಬೇತಿಗೆ ಸಾಲ ನೀಡುವುದು ಮತ್ತು ತೆರಿಗೆ ವಿನಾಯಿತಿ ನೀಡುವ ಕಾರ್ಯಕ್ರಮಗಳನ್ನು ಜಪಾನ್ ಹಮ್ಮಿಕೊಂಡಿದೆ.

) ಸ್ವಚ್ಛ ತಂತ್ರಜ್ಞಾನ

GHG ಗಳ ಹೊರಸೂಸುವಿಕೆಯನ್ನು ನಿಯಂತ್ರಿಸುವಲ್ಲಿ ನವೀಕರಿಸುವ ಶಕ್ತಿ ಮೂಲಗಳು ಗಣನೀಯ ಪಾತ್ರ ವಹಿಸುತ್ತವೆ. ಪರಿಸರಾತ್ಮಕವಾಗಿ ಸುಸ್ಥಿರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ದೇಶಗಳು, ಈ ತಂತ್ರಜ್ಞಾನವು ಅಗತ್ಯವಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವರ್ಗಾಯಿಸಬೇಕು. ಆ ತಂತ್ರಜ್ಞಾನವನ್ನು ಕಡಿಮೆ ಬೆಲೆಗೆ ದೊರಕುವಂತಿರಬೇಕು ಮತ್ತು ಅದನ್ನು ಸ್ಥಳೀಯ ಹಾಗೂ ಪ್ರಾಂತೀಯ ಅಗತ್ಯಗಳಿಗೆ ತಕ್ಕನಾಗಿರುವಂತೆ ವಿನ್ಯಾಸಗೊಳಿಸಬೇಕು. ಈ ತಂತ್ರ ವಿಧಾನಗಳನ್ನು ಬಳಸಲು ಸ್ಥಳೀಯ ಕೌಶಲಗಳನ್ನು ಸಹ ಅಭಿವೃದ್ಧಿಪಡಿಸಬೇಕು. ವಾಸ್ತವವಾಗಿ ಸಂಪ್ರದಾಯಕ ಶಕ್ತಿ ವ್ಯವಸ್ಥೆಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ನವೀಕರಿಸಬಹುದಾದ ಶಕ್ತಿ ಬಳಸಲು ವಿನ್ಯಾಸವನ್ನು ರೂಪಿಸಬಹುದು ಹಾಗೂ ನಿರ್ಮಿಸಬಹುದು. ಇಂತಹ ತಂತ್ರ ವಿಧಾನಗಳು ಕೇವಲ ಪರಿಸರ ಸ್ನೇಹಿ ವಿಧಾನಗಳಲ್ಲದೆ ಆರ್ಥಿಕವಾಗಿ ಲಾಭ ತರುವಂತಹವಾಗಿರಬೇಕು.

) ಪವನ ಮತ್ತು ಸೌರ ಶಕ್ತಿ

ನವೀಕರಿಸಬಹುದಾದ ಶಕ್ತಿ ಉತ್ಪಾದನೆಯ ಆರಂಭಿಕ ಬಂಡವಾಳ ಅಧಿಕವಾದರೂ ಸಹ, ದೀರ್ಘ ಕಾಲಾವಧಿಯಲ್ಲಿ ಲಾಭ ತರುವುದು. ಪವನ ಮತ್ತು ಸೌರಶಕ್ತಿ ಪಡೆಯುವುದಕ್ಕೆ ಯಾವುದೇ ಹಣ ನೀಡಬೇಕಿಲ್ಲ. ಉಪಕರಣಗಳ ನಿರ್ವಹಣಾ ವೆಚ್ಚವೂ ತುಂಬ ಕಡಿಮೆ. ಸೌರಶಕ್ತಿ ಪಡೆಯುವ ತಂತ್ರವಿಧಾನಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಧಿಕವಾಗುತ್ತಿವೆ. ಬ್ರೆಜಿಲ್, ಚೀನಾ, ಇಂಡೊನೇಶಿಯ, ಕಿನ್ಯಾ, ಮೆಕ್ಸಿಕೊ, ಶ್ರೀಲಂಕಾ ಮತ್ತು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಧಿಕ ಸಂಖ್ಯೆಯ ಸೌರಫಲಕಗಳಿಂದ ಸೌರಶಕ್ತಿ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಸೌರ ಅಡಿಗೆ ಒಲೆ ಮತ್ತು ಸೌರದೀಪದಂತಹ ಪುಟ್ಟ ಉಪಕರಣಗಳು ಭಾರತದಲ್ಲಿ ಜನಪ್ರಿಯವಾಗಿವೆ.

ಗ್ರಾಮೀಣ ಪ್ರದೇಶದ ಗೃಹಬಳಕೆಗೆ ವಿದ್ಯುತ್ ಒದಗಿಸುವ ಸೌರ ವಿದ್ಯುತ್ ವ್ಯವಸ್ಥೆಗಳನ್ನು ಭಾರತ ಮತ್ತು ಜಿಂಬಾಬ್ವೆಗಳಂತಹ ವಿವಿಧ ದೇಶಗಳಲ್ಲಿ ಆರಂಭಿಸಲಾಗಿದೆ. ಕೀನ್ಯಾ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯ ಮೂಲದಿಂದ ಅಧಿಕ ವಿದ್ಯುತ್ತನ್ನು ಪಡೆಯಲಾಗುತ್ತಿದೆ. ಅಧಿಕ ಸಮಯ ಸೂರ್ಯನ ಬೆಳಕನ್ನು ಪಡೆಯುವ ಉಷ್ಣ ಪ್ರದೇಶಗಳಲ್ಲಿ ಈ ಕಾರ್ಯ ಯೋಜನೆಗಳಿಗೆ ಪ್ರೋತ್ಸಾಹ ನೀಡಬೇಕಿದೆ.

ಕಳೆದ ಕೆಲವು ವರ್ಷಗಳಲ್ಲಿ ವಿಶ್ವದಾದ್ಯಂತ ಪವನಶಕ್ತಿಯ ಬಳಕೆ ನಾಲ್ಕು ಪಟ್ಟಿಗಿಂತ ಹೆಚ್ಚಾಗಿದೆ. ಡೆನ್ಮಾರ್ಕ್ ದೇಶವು ಪವನಶಕ್ತಿಯನ್ನು ಪ್ರಥಮ ಬಾರಿಗೆ ಬಳಸಿತು. ಇಂದು ಆ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇಕಡ ೭ ರಷ್ಟನ್ನು ಪವನಶಕ್ತಿ ಮೂಲದಿಂದ ಪಡೆಯುತ್ತಿದೆ. ಸೌರಶಕ್ತಿಯಲ್ಲಿರುವಂತೆ ಪವನ ಶಕ್ತಿಯಿಂದ ಅನೇಕ ಪ್ರಯೋಜನಗಳಿವೆ. ಈ ಮೂಲದಿಂದ ಬರುವ ಶಕ್ತಿ ಅಪರಿಮಿತವಾದುದು. ಇದು ಜಲ ಅಥವಾ ವಾಯುಮಾಲಿನ್ಯ ಉಂಟು ಮಾಡುವುದಿಲ್ಲ. ವಾಸ್ತವವಾಗಿ ನವೀಕರಿಸಬಹುದಾದ ಎಲ್ಲ ಶಕ್ತಿಮೂಲಗಳಿಗೆ ಗಮನಾರ್ಹ ಪಾರಿಸಾರಿಕ ಪ್ರಯೋಜನಗಳಿವೆ.

ಆದರೆ ಪವನ ಶಕ್ತಿ ಉತ್ಪಾದನೆಯಿಂದ ಒಂದು ಪ್ರಮುಖ ತೊಂದರೆಯಿದೆ. ಪಕ್ಷಿಗಳು ಪವನ ಗಿರಣಿಗಳ ರೆಕ್ಕೆಗಳಿಗೆ ಬಡಿದು ಅಧಿಕ ಸಂಖ್ಯೆಯಲ್ಲಿ ಸಾಯುತ್ತಿವೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯನ್ನು ಕಡಿಮೆ ಮಾಡುವಂತಹ ಉತ್ತಮ ವಾಯುಗಿರಣಿಗಳನ್ನು ವಿನ್ಯಾಸಗೊಳಿಸುವ ಕಾರ್ಯ ನಡೆದಿದೆ.

) ಜಲ ವಿದ್ಯುತ್ ಸ್ಥಾವರ

ಜಲವಿದ್ಯುತ್ ಸ್ಥಾವರಗಳೂ ಸಹ ಶಕ್ತಿಯನ್ನು ಪಡೆಯುವ ಸ್ವಚ್ಛ ತಂತ್ರಜ್ಞಾನವೆಂದು ಹೆಸರಾಗಿವೆ. ಇದರಿಂದ ಹಸಿರುಮನೆ ಅನಿಲಗಳು ಬಿಡುಗಡೆಯಾಗುವುದಿಲ್ಲ. ತ್ಯಾಜ್ಯವೂ ನಿರ್ಮಾಣವಾಗುವುದಿಲ್ಲ. ನಾರ್ವೆ ದೇಶವು ತನ್ನ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪ್ರತಿಶತ ೯೯ಕ್ಕೂ ಹೆಚ್ಚಿನ ವಿದ್ಯುತ್ತನ್ನು ಜಲಮೂಲದಿಂದ ಪಡೆಯುತ್ತಿದೆ. ನ್ಯೂಜಿಲೆಂಡ್ ಪ್ರತಿಶತ ೭೫ ರಷ್ಟನ್ನು ಪಡೆಯುತ್ತಿದೆ. ಆದರೆ ಬೃಹತ್ ಅಣೆಕಟ್ಟು ನಿರ್ಮಾಣ ಮಾಡಿ, ವಿದ್ಯುತ್ ಪಡೆದಾಗ ಹಿನ್ನೀರಿನಿಂದ ಅಪಾರವಾದ ಭೂಮಿ, ಅರಣ್ಯ ಮುಳುಗಡೆಯಾಗುತ್ತದೆ. ಅದರಿಂದ ಪಾರಿಸಾರಿಕ ಸಮಸ್ಯೆಗಳು ಮತ್ತು ನಿರಾಶ್ರಿತರ ಸಮಸ್ಯೆ ಉಂಟಾಗುತ್ತಿದೆ. ಪುಟ್ಟ ಜಲ ವಿದ್ಯುತ್ ಸ್ಥಾವರಗಳು ಹೆಚ್ಚು ಪರಿಸರಸ್ನೇಹಿ ವಿಧಾನಗಳಾಗಿವೆ. ಹಾಗಾಗಿ ಅವನ್ನು ಪ್ರೋತ್ಸಾಹಿಸಲೇಬೇಕು.

ಮಾಲಿನ್ಯ ಉಂಟು ಮಾಡುವ ಶಕ್ತಿ ಮೂಲಗಳ ಬಳಕೆ ಸ್ಥಾನದಲ್ಲಿ ಬದಲಿ ಇಂಧನ ವಾಗಿ ಕಸ ತುಂಬಿದ ಗುಂಡಿಗಳಿಂದ, ಗೊಬ್ಬರದಿಂದ ಮತ್ತು ಕಲ್ಲಿದ್ದಲ ಗಣಿಗಳಿಂದ ಹೊರಬರುವ CH4 ಸಂಗ್ರಹಿಸಿ ಬಳಸಬೇಕು. ಜೈವಿಕ ಅನಿಲ ಸ್ಥಾವರಗಳು ಕರ್ನಾಟಕದಲ್ಲಿ ಜನಪ್ರಿಯವಾಗುತ್ತಿವೆ.

ದನಗಳ ಸಗಣಿ ಮತ್ತು ಘನ ತ್ಯಾಜ್ಯವನ್ನು ಡೈಜಸ್ಟರ‍್ಸ್‌ಗಳಲ್ಲಿ (ಪಾಚಕಗಳಲ್ಲಿ) ಹಾಕಿದರೆ, ಆಕ್ಸಿಜನ್‌ರಹಿತ ವಿಧಾನದಲ್ಲಿ ಅದು ಕೊಳೆತು CH4 ಹೊರಬರುತ್ತದೆ. ಇದನ್ನು ವಿದ್ಯುತ್ ಉತ್ಪಾದಿಸಲು ಬಳಸಬಹುದು. ಗೋಬರ್ ಅನಿಲ ಸ್ಥಾವರಗಳು ಪರಿಸರಸ್ನೇಹಿ ಶಕ್ತಿ ಮೂಲಗಳಾಗಿವೆ.

. ಕೃಷಿ ವಿಭಾಗ

ಹವಾಗುಣ ಬದಲಾವಣೆ ಪರಿಹಾರ ಮಾರ್ಗದ ದೀರ್ಘಾವಧಿ ಪ್ರಯತ್ನದಲ್ಲಿ ಜೈವಿಕ ತಂತ್ರಜ್ಞಾನವು ಒಂದು ಪ್ರಮುಖ ಅಂಶ. ಇದು ಬೆಳೆ ಇಳುವರಿಯನ್ನು ಹೆಚ್ಚಿಸಬಲ್ಲದು. ತ್ಯಾಜ್ಯವನ್ನು ಕನಿಷ್ಟ ಮಾಡಬಲ್ಲದು ಹಾಗೂ ನೀರು ಮತ್ತು ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಲ್ಲದು. ಆದ್ದರಿಂದ ಜೈವಿಕ ತಂತ್ರಜ್ಞಾನವು GHG ಅನಿಲಗಳ ಹೊರಸೂಸುವಿಕೆ, ಶಕ್ತಿಬಳಕೆ ಮತ್ತು ಕೃಷಿ ಬಳಕೆ ಜಮೀನನ್ನು ಕಡಿಮೆ ಮಾಡಬಲ್ಲದು. ಹವಾಗುಣ ಬದಲಾವಣೆಯ ನೇರ ಪರಿಣಾಮವನ್ನು ತಗ್ಗಿಸಲು ಅಗತ್ಯವಾದ ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಬಳಸಬಹುದು. ಉದಾಹರಣೆಗೆ ಕಡಿಮೆ ನೀರು ಅಗತ್ಯವಿರುವ ಅಥವಾ ಕಡಿಮೆ CH4 ಹೊರಹಾಕುವ ನವೀನ ಬೆಳೆಯ ತಳಿಗಳನ್ನು ಅಭಿವೃದ್ಧಿಪಡಿಸಬಹುದು. ಅಲ್ಲದೆ ದಕ್ಷವಾಗಿ ನೀರು ಹಾಯಿಸುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬಹುದು.

ಮೈದಾನ ಪ್ರದೇಶದಲ್ಲಿ ಭತ್ತದ ಗದ್ದೆಗಳಿಂದ ಅಧಿಕ ಪ್ರಮಾಣದ ಮೀಥೇನ್ ಹೊರಬರುತ್ತದೆ. ಬೆಳೆಯುವ ಸಂದರ್ಭದಲ್ಲಿ ಭತ್ತದ ಸಸಿಗಳು ನಿಂತ ನೀರಿನಲ್ಲಿರಬೇಕು. ಕಡಿಮೆ ನೀರಿನಲ್ಲಿ ಬೆಳೆಯಬಲ್ಲ ಭತ್ತದ ತಳಿಗಳನ್ನು ಪ್ರಯೋಗಾಲಯ ಮತ್ತು ಪ್ರಾತ್ಯಕ್ಷಿಕೆಗಳಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಜೈವಿಕ ಗೊಬ್ಬರಗಳ ಬಳಕೆಯಿಂದ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಕಡಿಮೆಯಾಗುತ್ತದೆ. ಹಾಗಾಗಿ ಜೈವಿಕ ಗೊಬ್ಬರ ಬಳಕೆಯನ್ನು ಪ್ರೋತ್ಸಾಹಿಸಬೇಕು. ಕೃಷಿಯಲ್ಲಿ ಹೆಚ್ಚು ಸುಸ್ಥಿರ ವಿಧಾನಗಳನ್ನು ಪ್ರೋತ್ಸಾಹಿಸಬೇಕು.

. ನೈಸರ್ಗಿಕ ಹೀರಕಗಳು

ಅರಣ್ಯ, ಸಸ್ಯರಾಶಿ, ಸಾಗರಗಳು ಹಾಗೂ ಸ್ವಲ್ಪ ಮಟ್ಟಿಗೆ ಮಣ್ಣು CO2 ನ್ನು ಹೀರಿಕೊಳ್ಳುವ ಸಾಮರ್ಥ್ಯ ಪಡೆದಿವೆ. ವಾಸ್ತವವಾಗಿ CH4 ನ್ನು ಹೀರುವ ಶಕ್ತಿ ಮಣ್ಣಿಗಿದೆ.

ವಿಶ್ವದ ಎಲ್ಲ ರಾಷ್ಟ್ರಗಳು ಅರಣ್ಯಗಳ ವಿಸ್ತಾರವನ್ನು ಹೆಚ್ಚಿಸಲು ಸಕಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಮರಗಳನ್ನು ಉರುಳಿಸಿದ ತಕ್ಷಣ, ಮರು ಅರಣ್ಯೀಕರಣವನ್ನು ಆರಂಭಿಸಬೇಕು. ಮಣ್ಣನ್ನು ಹೆಚ್ಚು ಕಾಲ ಗಾಳಿ, ಮಳೆ ಹೊಡೆತಕ್ಕೆ ಸಿಗದಂತೆ ಜೋಪಾನ ಮಾಡಬೇಕು. ವಿಶ್ವದ ಅನೇಕ ಕಡೆ ಹೊಲಗಳನ್ನು ಕೃಷಿ ಮಾಡದೆ ಹಾಗೆ ಬೀಳು ಬಿಡುತ್ತಿದ್ದಾರೆ. ಅಂತಹ  ಜಮೀನು ಅಧಿಕ ಇಳುವರಿ ಪದ್ಧತಿ ಅನುಸರಿಸಿದ ನಂತರ ಅಥವಾ ಆ ಜಮೀನಿನನಲ್ಲಿ ಸಸ್ಯಗಳು ಬೆಳೆಯಲು ಬೇಕಾದ ಪೋಷಕಾಂಶಗಳಿಲ್ಲದ ಕಾರಣ ಬೀಳು ಬಿಡಲಾಗುತ್ತಿದೆ. ಬೀಳು ಬಿಟ್ಟಿರುವ ಜಮೀನಿನ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ. ಆ ಸ್ಥಳಕ್ಕೆ ಆ ವಾಯುಮಾನಕ್ಕೂ ಆ ಮಣ್ಣಿನ ಹೊಂದಿಕೊಳ್ಳಬಲ್ಲ ಸಸ್ಯಗಳನ್ನು ಬೆಳೆಯಲು ಕ್ರಮ ಕೈಗೊಳ್ಳಬೇಕು.

ಸಸಿಗಳ ಪಾಲನೆ

ವೈವಿಧ್ಯವಿರುವ ಸಸ್ಯಗಳಿರುವಲ್ಲಿ CO2 ಹೀರುವಿಕೆ ಏಕರೀತಿಯ ಸಸ್ಯವಿರುವ ಹೀರುವಿಕೆಗೆ ಹೋಲಿಸಿದರೆ ಅಧಿಕವೆಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅಂದರೆ ಹೆಚ್ಚಿನ ಪ್ರಭೇದಗಳಿವೆ ಎಂದರೆ ಅಧಿಕ CO2 ಹೀರುವಿಕೆ ಇದೆ ! ಆದರೆ ಜೀವಿ ವೈವಿಧ್ಯ ಜಗತ್ತಿನಾದ್ಯಂತ ಕಡಿಮೆಯಾಗುತ್ತಿದೆ. ನಿಸರ್ಗದಲ್ಲಿ ಸಹಜವಾಗಿ ನಾಶ ಹೊಂದುತ್ತಿರುವ ಪ್ರಭೇದಗಳಿಗಿಂತ ಈಗ ಸುಮಾರು ೫೦-೧೦೦ ಪಟ್ಟು ವೇಗವಾಗಿ ಪ್ರಭೇದಗಳು ನಶಿಸುತ್ತಿವೆಂದು ವಿಶ್ವಸಂಸ್ಥೆಯ ಜೀವಿವೈವಿಧ್ಯ ಸಂರಕ್ಷಣಾ ವಿಭಾಗ ದಾಖಲಿಸಿದೆ. ಸೂರ್ಯನ ಶಾಖವನ್ನು ಹೀರಿಕೊಂಡು ಸಸ್ಯಗಳು ಗಾಳಿಯನ್ನು ತಂಪು ಮಾಡುತ್ತವೆ. ಅಲ್ಲದೆ ಸಸ್ಯಗಳು ತೇವಾಂಶವನ್ನು ಗಾಳಿಯಿಂದ ಹೀರುತ್ತವೆ ಮತ್ತು ಬಿಡುಗಡೆಯೂ ಮಾಡುತ್ತವೆ.

ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಜೌಗು ಪ್ರದೇಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಜೌಗು ಪ್ರದೇಶಗಳು ವಾಯುಗುಣ ಸ್ಥಿರತೆಯನ್ನು ಕಾಪಾಡುತ್ತವೆ ಅಲ್ಲದೆ ಇವು ಪ್ರಮುಖ ಕಾರ್ಬನ್ ಹೀರಕಗಳು. ಸುಂದರಬನದಂತಹ ಅರಣ್ಯವಿರುವ ಜೌಗು ಪ್ರದೇಶಗಳು ಚಂಡಮಾರುತಗಳ, ಬೀಸುಗಾಳಿಗಳ ಹಾಗೂ ಅಲೆಗಳ ಹೊಡೆತದ ತೀವ್ರತೆಯನ್ನು ಕಡಿಮೆ ಮಾಡುತ್ತವೆ.  ಒಳನಾಡಿನ ಜನರಿಗೆ, ಜೀವಿಗಳಿಗೆ ರಕ್ಷಣೆ ನೀಡುತ್ತವೆ. ವಿಶ್ವದ CO2 ನ ಸುಮಾರು ೪೦% ಜೌಗು ಪ್ರದೇಶಗಳಲ್ಲಿ ಬಂಧಿತವಾಗಿದೆ ಎಂದು ರಾಮಸಾರ್ ಸಮಾವೇಶ ಅಂದಾಜು ಮಾಡಿದೆ.

ಫಾಸಿಲ್ ಇಂಧನಗಳ ದಹನದಿಂದ ಬರುವ CO2 ನ ಸುಮಾರು ಅರ್ಧದಷ್ಟನ್ನು  ಸಾಗರಗಳು ಹೀರುತ್ತವೆ. ಹವಳ ದಿಬ್ಬಗಳು, ಪ್ಲಾವಕ ಜೀವಿಗಳು ಮತ್ತು ಶೈವಲಗಳು ಈ ಕ್ರಿಯೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ. ಹವಳ ದಿಬ್ಬಗಳು ಸಾಗರಗಳ ಶ್ರೀಮಂತ ಪರಿಸರ ವ್ಯವಸ್ಥೆಗಳು. ಅನೇಕ ವೇಳೆ ಇವನ್ನು ಸಾಗರಗಳಲ್ಲಿನ ‘ಉಷ್ಣವಲಯದ ಮಳೆ ಕಾಡುಗಳು’ ಎಂದು ಸಂಬೋಧಿಸಲಾಗುತ್ತದೆ. ಸಾಗರದಿಂದಾಗುವ CO2 ಹೀರುವಿಕೆಯಲ್ಲಿ ಇವು ಅತಿ ಪ್ರಮುಖ ಜೀವಿಗಳು.

ಸಾಗರಗಳಲ್ಲಿನ ಸಸ್ಯಪ್ಲಾವಕಗಳು CO2 ಹೀರುವಿಕೆಯಲ್ಲಿಯೂ ಪ್ರಮುಖವಾದವು. ಭೂಮಿಯ ಮೇಲಿನ ಸಸ್ಯಗಳಂತೆ ಪ್ಲಾವಕಗಳು ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅಧಿಕ ಪ್ರಮಾಣದ CO2 ನ್ನು ಬಳಸಿಕೊಳ್ಳುತ್ತವೆ. ಸಾಗರಗಳಲ್ಲಿನ ತಂಪು ಹಾಗೂ ಬಿಸಿ ನೀರಿನ ಪ್ರವಾಹಗಳು ಸಂಧಿಸುವ ಸ್ಥಳಗಳಲ್ಲಿ ಈ ಜಲ ಸಸ್ಯಗಳಾದ ಪ್ಲಾವಕಗಳಿರುತ್ತವೆ. ಕಾರ್ಬನ್ ಆವರ್ತದಲ್ಲಿ ಈ ಸಸ್ಯಗಳ ಪಾತ್ರ ಭೂಮಿಯ ಮೇಲಿನ ಸಸ್ಯ ಮತ್ತು ಮರಗಳ ಪಾತ್ರಕ್ಕಿಂತ ಭಿನ್ನ. ಇವು ಹೀರಿಕೊಂಡ CO2 ನಲ್ಲಿ ಸ್ವಲ್ಪ ಪ್ರಮಾಣವನ್ನು ಒಂದು ವರ್ಷದೊಳಗಾಗಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಉಳಿದ CO2 ಸತ್ತ ಸಸ್ಯ ಮತ್ತು ಇವನ್ನು ತಿಂದ ಪ್ರಾಣಿ ಪ್ಲಾವಕಗಳ ಸಾವಿನ ಮೂಲಕ ಸಾಗರಗಳ ತಳ ಸೇರುತ್ತದೆ. ಅವು ಕೊಳೆತಾಗ, CO2 ಬಿಡುಗಡೆಯಾಗುತ್ತದೆ ಮತ್ತು ಸಾಗರಗಳ ನೀರಿನಲ್ಲಿ ಲೀನವಾಗುತ್ತದೆ.

ಸಾಗರದ ನೀರಿಗೆ ಅಧಿಕ ಪ್ರಮಾಣದ CO2 ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಆದರೆ ಉಷ್ಣ ಪ್ರದೇಶಗಳಲ್ಲಿ CO2 ಸಾಗರವನ್ನು ಸೇರುವುದು ಕಡಿಮೆ. ಏಕೆಂದರೆ ಬಿಸಿಯಾದ ನೀರು CO2 ವಿಷಯದಲ್ಲಿ ಸಂತೃಪ್ತವಾಗಿರುತ್ತದೆ. ಶೀತ ಪ್ರದೇಶಗಳ ಸಾಗರ ನೀರು CO2ನ್ನು ಅಧಿಕವಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವುದು. CO2 ತಂಪಾದ ನೀರಿನಲ್ಲಿ ಹೆಚ್ಚು ಕರಗುವುದು ಮತ್ತು ಸುಮಾರು ಒಂದು ಸಾವಿರ ವರ್ಷಗಳವರೆಗೆ ಹಿಡಿದಿಟ್ಟುಕೊಳ್ಳಬಹುದು.

೧೯೭೧ರ ಫೆಬ್ರವರಿ ೨ ರಂದು ಇರಾನಿನ ರಾಮಸಾರ್‌ನಲ್ಲಿ ಪ್ರಥಮ ಬಾರಿಗೆ ಜೌಗು ಪ್ರದೇಶಗಳ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಸಮಾವೇಶ ನಡೆಯಿತು. ೧೮ ರಾಷ್ಟ್ರಗಳು ಭಾಗವಹಿಸಿದ್ದವು. ಅತ್ಯಂತ ಹೆಚ್ಚು ಅಪಾಯಕ್ಕೊಳಗಾಗಿರುವ ಆವಾಸಗಳಾದ ಜೌಗು ಪ್ರದೇಶಗಳ ರಕ್ಷಣೆ ಮತ್ತು ಸಂರಕ್ಷಣೆಯೇ ಈ ಸಮಾವೇಶದ ಉದ್ದೇಶವಾಗಿತ್ತು. ಇಂದು ೮೦ಕ್ಕೂ ಹೆಚ್ಚಿನ ದೇಶಗಳು ಈ ಸಮಾವೇಶದ ಒಪ್ಪಂದಕ್ಕೆ ಭಾಗಿಯಾಗಿವೆ.

ವ್ಯಕ್ತಿ, ಸಮುದಾಯ ಹಾಗೂ ಸಮಾಜದ ಹಂತದಲ್ಲಿ ನಾವೇನು ಮಾಡಬಹುದು?

ಸಮಸ್ಯೆಯೇನೋ ಭೀಕರ. GHG ಗಳ ಪ್ರಮಾಣದ ಇಳಿಕೆಯಲ್ಲಿ ನಾವೆಲ್ಲರೂ ವ್ಯಕ್ತಿಮಟ್ಟ ಹಾಗೂ ಸಮಾಜದ ಮಟ್ಟದಲ್ಲಿ ಪಾತ್ರವಹಿಸಬಹುದು. ಅದರಿಂದಾಗಿ ವಾಯುಗುಣ ಬದಲಾವಣೆಯ ದುಷ್ಪರಿಣಾಮಗಳನ್ನು ತಗ್ಗಿಸಬಹುದು. ಇವೇ ನಾವು-ನೀವು ಕೈಗೊಳ್ಳಬಹುದಾದ ಕೆಲವು ಮಾರ್ಗಗಳು :

 • ವಾಯುಗುಣ ಬದಲಾವಣೆಯ ಬಗ್ಗೆ ನಮಗಿರುವ ಮಾಹಿತಿಯನ್ನು ಎಲ್ಲರಲ್ಲಿ ಹಂಚಿಕೊಳ್ಳೋಣ.
 • ಸರ್ಕಾರ, ಕೈಗಾರಿಕೆ ಮತ್ತು ಜನ ಸಮುದಾಯದ ನಾಯಕರು ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಂತೆ ಸಾಮೂಹಿಕ ಅಭಿಪ್ರಾಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡೋಣ. ಅವರೆಲ್ಲರೂ ಕಾರ್ಯಪ್ರವೃತ್ತರಾಗುವಂತೆ ಮಾಡೋಣ.
 • ಮನೆ, ಶಾಲೆ, ಕಾಲೇಜು, ಕಛೇರಿ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ದಕ್ಷತೆಯುಳ್ಳ ಬೆಳಕಿನ ವ್ಯವಸ್ಥೆಯನ್ನು ಸ್ಥಾಪಿಸೋಣ.
 • ಹೆಚ್ಚು ದಕ್ಷವಾಗಿರುವ ಗೃಹೋಪಕರಣಗಳನ್ನು ಬಳಸೋಣ.
 • ದುಂಡನೆಯ ಬಲ್ಬುಗಳಿಗೆ ಬದಲಾಗಿ ಸಿ.ಎಫ್.ಎಲ್.ಗಳನ್ನು ಹಾಕಿಸಿಕೊಳ್ಳೋಣ. ಸಿ.ಎಫ್.ಎಲ್.ಗಳು ನಾಲ್ಕು ಪಟ್ಟು ದೀರ್ಘ ಕಾಲ ಬಾಳಿಕೆ ಬರುತ್ತವೆ ಮತ್ತು ಕೇವಲ ಕಾಲು ಭಾಗ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತವೆ.
 • ತರಕಾರಿ, ಹಾಲು, ಕಿರಾಣಿ ವಸ್ತುಗಳನ್ನು ತರಲು ಬಟ್ಟೆ ಚೀಲಗಳನ್ನು ಬಳಸೋಣ. ಪ್ಲಾಸ್ಟಿಕ್ ಚೀಲಗಳನ್ನು ಬೇಡ ಎನ್ನೋಣ.
 • ಸೂರ್ಯನ ಬೆಳಕು ಸಾಕಷ್ಟು ಒಳನುಗ್ಗುವಂತೆ ಮನೆ ಕಟ್ಟಡಗಳ ವಿನ್ಯಾಸವಿರುವಂತೆ ನೋಡಿಕೊಳ್ಳೋಣ.
 • ಬೀದಿ ಬೆಳಕಿಗಾಗಿ ಸೋಡಿಯಮ್ ವೇಪರ್ ದೀಪಗಳನ್ನು ಬಳಸೋಣ. ಇತರೆ ದೀಪಗಳಿಗಿಂತ ಇವು ಹೆಚ್ಚು ದಕ್ಷ, ತೆರಿಗೆದಾರರಿಗೆ ಉಳಿತಾಯ ಮಾಡುತ್ತವೆ ಮತ್ತು ಪರಿಸರಕ್ಕೆ ಹಾನಿಯನ್ನು ಕಡಿಮೆ ಮಾಡುತ್ತವೆ.
 • ವಾಹನಗಳನ್ನು ಆಗಾಗ್ಗೆ ಸರ್ವಿಸ್ ಮಾಡಿಸೋಣ.
 • ಇಂಧನದ ಅಧಿಕ ದಕ್ಷತೆಯಿರುವ ವಾಹನಗಳನ್ನು ಆದಷ್ಟು ಹೆಚ್ಚಿಗೆ ಬಳಸೋಣ.
 • ಇತರೆ ದೇಶದ ಮಾದರಿಗಳನ್ನು ಅನುಸರಿಸಿ ವಾಹನ ಸಾರಿಗೆಯನ್ನು ನಿರ್ವಹಣೆ ಮಾಡಬೇಕು. ಫ್ರಾನ್ಸ್ ಮತ್ತು ಇಟಲಿ ದೇಶಗಳಲ್ಲಿ ‘ಕಾರು ರಹಿತ’ ದಿನಗಳು ರೂಢಿಗೆ ಬಂದಿವೆ. ಕಾರು ನಿಲ್ದಾಣ ಸ್ಥಳವನ್ನು ಸೀಮಿತಗೊಳಿಸಲಾಗಿದೆ. ಸರಿಸಂಖ್ಯೆಯ ಕಾರುಗಳಿಗೆ ಒಂದು ದಿನ, ಬೆಸ ಸಂಖ್ಯೆಯ ಕಾರುಗಳಿಗೆ ಮತ್ತೊಂದು ದಿನ ನಿಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಇಂಧನ ಬಳಕೆ ಮತ್ತು ಮಾಲಿನ್ಯ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ.
 • ವಾಹನಗಳನ್ನು ನೂಟ್ರಲ್‌ನಲ್ಲಿ ಬಹಳ ಹೊತ್ತು ಇಡಬಾರದು. ಇದರಿಂದ ಅನಗತ್ಯವಾಗಿ ಇಂಧನ ವೆಚ್ಚವಾಗುವುದು. ವೃತ್ತಗಳಲ್ಲಿ ಮತ್ತು ಟ್ರಾಫಿಕ್ ಜಾಮ್‌ಗಳಾದಾಗ ಈ ತಂತ್ರ ಬಳಸಬಹುದು.
 • ವಾಹನಗಳಲ್ಲಿ ಹಲವರು ಕೂಡಿ ಪ್ರಯಾಣ ಮಾಡುವ ರೂಢಿ ಜಾರಿಗೆ ತರಬೇಕು.
 • ಸಮೀಪ ಮಾರುಕಟ್ಟೆಗೆ ನಡೆದು ಅಥವಾ ಸೈಕಲ್ಲಿನಲ್ಲಿ ಪ್ರಯಾಣಿಸುವುದು ಒಳ್ಳೆಯದು.
 • ಅಗತ್ಯವಿಲ್ಲದಿದ್ದಾಗ ಎಲ್ಲ ದೀಪ, ಟಿ.ವಿ., ಫ್ಯಾನು, ಹವಾನಿಯಂತ್ರಕ ಮತ್ತು ಇತರೆ ವಿದ್ಯುತ್ ಉಪಕರಣಗಳನ್ನು ಬಳಸದಿರೋಣ. ಸ್ವಿಚ್ ಆಫ್ ಮಾಡೋಣ.
 • ಸುತ್ತಮುತ್ತಲ ಪ್ರದೇಶದಲ್ಲಿ ಸಸ್ಯ ಗಿಡಮರಗಳನ್ನು ಕಾಪಾಡೋಣ ಮತ್ತು ಬೆಳೆಸೋಣ.
 • ಎಲ್ಲ ಪ್ಲಾಸ್ಟಿಕ್ ಚೀಲ, ಡಬ್ಬಿ, ಬಾಟಲಿಗಳನ್ನು ಆದಷ್ಟು ಮರು ಬಳಕೆ ಮಾಡೋಣ. ಮರು ತಯಾರಿಸಿದ ವಸ್ತುಗಳನ್ನು ಕೊಳ್ಳೋಣ.
 • ಬಟ್ಟೆ ಒಗೆಯುವ ಮತ್ತು ಪಾತ್ರೆ ತೊಳೆಯುವ ಯಂತ್ರಗಳನ್ನು ಆದಷ್ಟು ಕಡಿಮೆ ಬಳಸೋಣ.
 • ಸಾಧ್ಯವಾದಷ್ಟು ಕಡಿಮೆ ತ್ಯಾಜ್ಯವನ್ನು ಉತ್ಪತ್ತಿ ಮಾಡೋಣ.
 • ಸಸ್ಯಾಹಾರಿಗಳಾಗಿ, ಗಿಡಮೂಲಿಕೆಗಳನ್ನು ಬಳಸೋಣ.
 • ಸ್ಥಳೀಯವಾಗಿ ದೊರಕುವ ಧಾನ್ಯ ಹಾಗೂ ಆಹಾರಗಳನ್ನು ಬಳಸೋಣ.
 • ಹವಾಗುಣ ಬದಲಾವಣೆಗೆ ಹೊಂದಾಣಿಕೆಯೂ ಅಗತ್ಯ. ಬಿಸಿಯಾದ ವಾತಾವರಣಕ್ಕೆ ನಾವು ಒಗ್ಗಿಕೊಳ್ಳಬೇಕು. ತಂಪು ಮಾಡುವ ನೂತನ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗುವುದನ್ನು ಇದರಿಂದ ತಪ್ಪಿಸಬಹುದು.
 • ಪ್ರವಾಹ, ಬರಗಾಲಗಳಿಗೆ ಪೂರ್ವ ಸಿದ್ಧತೆಯನ್ನು ವ್ಯಕ್ತಿ ಮತ್ತು ಸರ್ಕಾರಗಳು ಹಾಕಿಕೊಳ್ಳಬೇಕು.
 • ನೀರನ್ನು ಮಿತವಾಗಿ ಬಳಸಬೇಕು.
 • ನವೀಕರಿಸಬಹುದಾದ ಶಕ್ತಿ ಮೂಲಗಳನ್ನು ಅಧಿಕವಾಗಿ ಪಡೆಯಲು ವ್ಯಕ್ತಿ ಪ್ರಯತ್ನಿಸಬೇಕು. ಸರ್ಕಾರಗಳು ಪ್ರೋತ್ಸಾಹ ನೀಡಬೇಕು. ತೆರಿಗೆ ವಿನಾಯಿತಿ, ಕಡಿಮೆ ಬಡ್ಡಿಯ ಸಾಲ ಹಾಗೂ ತಂತ್ರಜ್ಞಾನ ನೆರವು ನೀಡಿ ನವೀಕರಿಸಬಹುದಾದ ಶಕ್ತಿ ಬಳಕೆಗೆ ಬೆಂಬಲ ನೀಡಬೇಕು.
 • ಹಸಿರು ಗಿಡ ಮರಗಳನ್ನು ಬೆಳೆಸಲು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು.
 • ಸ್ವಚ್ಛ ತಂತ್ರಜ್ಞಾನ ಅಭಿವೃದ್ಧಿಗೆ ಸರ್ಕಾರಗಳು ಒತ್ತು ನೀಡಬೇಕು.

ಹವಾಗುಣ ಬದಲಾವಣೆ ಹತೋಟಿಗೆ ಪಂಚ ಸೂತ್ರಗಳು

೧. ತಿರಸ್ಕರಿಸು (Refuce) : ನಮಗೆ ಅಗತ್ಯವಲ್ಲದ ವಸ್ತುವನ್ನು ಕೊಳ್ಳದಿರೋಣ. ಸರಳ ಜೀವನಕ್ಕೆ ಬೇಕಾದ ವಸ್ತುಗಳಿರಲಿ. ವೈಭೋಗದ ವಸ್ತುಗಳು ಮತ್ತು ಜೀವನ ಶೈಲಿಗೆ ತಿರಸ್ಕಾರವಿರಲಿ.

೨. ಮಿತವಾಗಿ ಬಳಸು (Reduce) : ನೀರು, ವಿದ್ಯುತ್, ಪೆಟ್ರೋಲ್‌ನಂತರ ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸೋಣ.

೩. ಮರುಬಳಕೆ (Reuse) : ಮನೆಗೆ ತಂದ ವಸ್ತುವನ್ನು ಗರಿಷ್ಠ ಮಟ್ಟದಲ್ಲಿ ಮರುಬಳಕೆ ಮಾಡೋಣ. ಅಂಗಡಿಯಿಂದ ಕಿರಾಣಿ ಸಾಮಾನುಗಳನ್ನು ತಂದಾಗ ನೀಡುವ ಪ್ಲಾಸ್ಟಿಕ್ ಚೀಲವನ್ನು ತರಕಾರಿ ತರಲು, ಹಾಲು ತರಲು ಹಾಗೂ ಒಂದೆರಡು ವಸ್ತುಗಳನ್ನು ಮನೆಗೆ ತರಲು ಮರುಬಳಕೆ ಮಾಡೋಣ.

೪. ಪುನರ್‌ಸ್ಥಾಪಿಸು (Restore) : ಒಂದು ಮರ ಕಡಿದರೆ ಕನಿಷ್ಠ ಮತ್ತೊಂದು ಗಿಡವನ್ನು ನೆಡಿ. ಮರವಾಗುವವರೆಗೆ ಕಾಪಾಡಿ. ನಿಸರ್ಗದಿಂದ ಪಡೆದ ಪ್ರಯೋಜನಗಳಿಗೆ ತಕ್ಕದಾಗಿ ನಿಸರ್ಗವನ್ನು ರಕ್ಷಿಸಿ. ಯಂತ್ರಗಳನ್ನು ಸುಸ್ಥಿತಿಯಲ್ಲಿಡಿ.

೫. ಪುನರುತ್ಪಾದಿಸಿ (Recycle) : ನಿಸರ್ಗದ ಬಹುತೇಕ ವಸ್ತುಗಳನ್ನು ಪುನರುತ್ಪಾದಿಸಲು ಸಾಧ್ಯ. ಹಳೇ ಪೇಪರ್, ನೋಟ್‌ಬುಕ್, ಗಾಜು, ಪ್ಲಾಸ್ಟಿಕ್, ಕಬ್ಬಿಣ ಮುಂತಾದವನ್ನು ಗುಜರಿ ಅಂಗಡಿಗೆ ಹಾಕಿ. ಅವುಗಳಿಂದ ಹೊಸ ವಸ್ತುಗಳನ್ನು ಉತ್ಪಾದಿಸುತ್ತಾರೆ.

—-

ಕೊಳ್ಳುಬಾಕ – ಮಾನವ

ಜಾಗತಿಕ ದುರಾಸೆಯೇ ಜಾಗತಿಕ ಬಿಸಿಯೇರುವಿಕೆ ಮೂಲ ಕಾರಣವೆಂದು ಪರಿಸರ ತಜ್ಞರು ಹೇಳುವುದರಲ್ಲಿ ಸತ್ಯವಿದೆ. ನಮ್ಮ ರಾಷ್ಟ್ರಪಿತ ಗಾಂಧೀಜಿ ಹೇಳಿದಂತೆ ಮನುಷ್ಯರ ಅಗತ್ಯಗಳನ್ನು ಪೂರೈಸುವಷ್ಟು ಸಂಪತ್ತು ಭೂಮಿಯಲ್ಲಿದೆ ; ಆದರೆ ದುರಾಸೆಗಳನ್ನಲ್ಲ.

ಪ್ರಕೃತಿಯೊಡನೆ ಮಾನವ ಸಮನ್ವಯ ಬದುಕು ಸಾಧಿಸಿದರೆ, ಸಂತೋಷ, ಸಂತುಷ್ಟ ಜೀವನ ಸಾಗಿಸಬಹುದು. ಚಿನ್ನದ ಮೊಟ್ಟೆಯಿಡುವ ಕೋಳಿ ಸಾಕಿಕೊಂಡು ಅದು ಪ್ರತಿದಿನ ಡುವ ಒಂದು ಕೋಳಿ ಮೊಟ್ಟೆಯನ್ನು ಬಳಸಿದರೆ ಬದುಕು ಸಂತಸದಿಂದ ಕೂಡಿರಲು ಸಾಧ್ಯ. ದುರಾಸೆಯಿಂದ ಹೆಚ್ಚು ಚಿನ್ನದ ಮೊಟ್ಟೆ ಪಡೆಯಲು ಆ ಕೋಳಿಯನ್ನೇ ಕತ್ತರಿಸಿದರೆ ಸಿಗುವುದು ಕಷ್ಟ ಕೋಟಲೆಗಳ ಸಾಲು.

ಪ್ರಗತಿ ಎಂದರೆ ಹಣ. ವ್ಯಕ್ತಿ, ಸಮಾಜ ಹಾಗೂ ದೇಶ ಪ್ರಗತಿ ಸಾಧಿಸಬೇಕಿದ್ದರೆ ಯಾವುದಾದರೂ ಹಣ ಮಾಡುವುದೊಂದೇ ಮಾರ್ಗ ಎಂಬ ಚಿಂತನೆ ನಮ್ಮನ್ನು ಅಡ್ಡದಾರಿಗೆ ಎಳೆದಿದೆ. ಹಣ ಮಾಡಬೇಕು. ವಸ್ತುಗಳನ್ನು ಸಂಗ್ರಹಿಸಬೇಕು. ಭೋಗದ ವಸ್ತುಗಳಿದ್ದರೆ ಸಮಾಜದಲ್ಲಿ ಸ್ಥಾನ ಮಾನ ಎಂಬ ತಪ್ಪು ತಿಳುವಳಿಕೆ ಜನರನ್ನು ಗ್ರಾಹಕತೆಗೆ, ಕೊಳ್ಳು-ಬಾಕ ಸಂಸ್ಕೃತಿಗೆ ಎಳೆದಿದೆ. ಕೈಗಾರಿಕೆಗಳು ಗ್ರಾಹಕರನ್ನು ಮರಳು ಮಾಡಲು ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಜಾಹಿರಾತುಗಳ ಮೂಲಕ ಹೊಸ ವಸ್ತುಗಳನ್ನು ಕೊಳ್ಳಲು ಪ್ರೋತ್ಸಾಹಿಸುತ್ತವೆ. ಬಳಸಿ-ಬಿಸಾಡುವ ಪ್ರವೃತ್ತಿ ಯುವಕರಲ್ಲಿ ಬೆಳೆಯುವಂತೆ ಮೋಡಿ ಮಾಡುತ್ತಿವೆ. ಡಾಟ್ ಪೆನ್ನುಗಳ ರಿಫಿಲ್, ಚಾಕಲೆಟ್‌ನ ಪ್ಲಾಸ್ಟಿಕ್ ಹಾಳೆ, ವಸ್ತುಗಳನ್ನು ಕಟ್ಟಿದ ಬಣ್ಣ ಬಣ್ಣದ ಪ್ಯಾಕೇಜು ಕವರುಗಳು, ಹಳೆಯದಾದ ಮೊಬೈಲ್, ಬೈಸಿಕಲ್, ಬೈಕ್, ಕಾರು .. ಹೀಗೆ ಬಳಸಿ-ಬಿಸಾಡುವ ಹೊಸದನ್ನು ಅಗತ್ಯವಿಲ್ಲದಿದ್ದರೂ ಕೊಳ್ಳುವ ಪ್ರವೃತ್ತಿ-ಪ್ರಕೃತಿಗೆ ಮಾರಕವಾಗಿದೆ.

ಲಾಭ ಬರುವುದಾದರೆ ಪ್ರಕೃತಿಗೆ ಪೆಟ್ಟಾದರೂ ಚಿಂತೆಯಿಲ್ಲ ಎಂಬುದು ಇಂದಿನ ಬಹುತೇಕ ಉದ್ಯಮಿಗಳ ಮನೋಭಾವ. ವಾಯುಮಾಲಿನ್ಯ ಯಂತ್ರಣಕ್ಕೆ ಕಾನೂನು ಇದ್ದರೂ, ವಿದ್ಯುತ್ ಖರ್ಚು ಹೆಚ್ಚಾಗುವುದೆಂದು ಧೂಳುಹೀರಕ ಯಂತ್ರಗಳನ್ನು ಲ್ಲಿಸುವ ಕೈಗಾರಿಕಾ ಮಾಲೀಕರಿದ್ದಾರೆ. ನಡೆದಾಡುವ ಶಕ್ತಿಯಿದ್ದರೂ ಮೋಜಿಗೆ, ಶ್ರೀಮಂತಿಕೆಯ ಪ್ರದರ್ಶನಕ್ಕೆ ನೂರು ಹೆಜ್ಜೆ ಸಮೀಪದ ಮಾರುಕಟ್ಟೆಗೆ ಕಾರುಗಳಲ್ಲಿ ಹೋಗುವವರಿದ್ದಾರೆ.

ಗೌತಮ ಬುದ್ಧನ, ಮಹಾತ್ಮ ಗಾಂಧೀಜಿಯ ಮಾರ್ಗ ಅನುಸರಿಸಿದರೆ ನಮ್ಮ ಮರಿ ಮಕ್ಕಳಿಗೆ ನಾವು ಅನುಭವಿಸುತ್ತಿರುವ ಈ ಪ್ರಕೃತಿಯನ್ನು ಭೂಗ್ರಹವನ್ನು ಮತ್ತಷ್ಟು ಸುಂದರ, ವಾಸಯೋಗ್ಯ ಸ್ಥಳವನ್ನಾಗಿ ಡಬಹುದು. ಇಲ್ಲವಾದಲ್ಲಿ ಕಸ ತುಂಬಿದ, ಬಿಸಿಯಾದ, ಮಾಲಿನ್ಯಭರಿತ, ರು, ಆಹಾರಗಳ ಕೊರತೆಯಿಂದ ಕೂಡಿದ ಭೂಮಿ ಡಬೇಕಾದೀತು !

—-

—-

ವಿಶಿಷ್ಟ ಕಾರುಗಳು : ಟಯೊಟ ಮತ್ತು ಹೊಂಡ ವಾಹನ ಉತ್ಪದನಾ ಕಂಪೆಗಳು GHG ಗಳ ಹೊರಸೂಸುವಿಕೆಯನ್ನು ಗಣಯವಾಗಿ ಕಡಿಮೆ ಮಾಡುವ ಹೈಬ್ರಿಡ್ ಕಾರುಗಳನ್ನು ತಯಾರಿಸುತ್ತಿವೆ. ಟಯೊಟಾದ ಕಾರನ್ನು ಪ್ರಿಯುಸ್ ಎಂದು ನಾಮಕರಣ ಮಾಡಲಾಗಿದೆ. ಇವನ್ನು ಜಪಾನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲಾಗುತ್ತಿದೆ. ಕಾರಿನ ವೈಶಿಷ್ಟ್ಯಗಳ ಬಗ್ಗೆ ಕಂಪೆ prius.toyota.com ಅಂತರಜಾಲದಲ್ಲಿ ಪ್ರಕಟಿಸಿದೆ.

—-

—-

ಜೈವಿಕ ತೈಲ

ವಿಶ್ವದಲ್ಲಿ ಪ್ರತಿದಿನ ೮೫ ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲವನ್ನು ದಹಿಸಲಾಗುತ್ತಿದೆ. ೨೦೧೧-೧೨ರ ವೇಳೆಗೆ ಹೈಸ್ಪೀಡ್ ಡೀಸೆಲ್‌ಗೆ ಬೇಡಿಕೆ ೬೬.೯ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗುವುದು. ಇದು ಇಂದಿನ ಬೇಡಿಕೆಯ ೧.೬ರಷ್ಟು ಹೆಚ್ಚು.

ಇತ್ತೀಚಿನ ವರ್ಷಗಳಲ್ಲಿ ಎಥನಾಲ್‌ಗೆ ಭಾರಿ ಬೇಡಿಕೆ ಉಂಟಾಗಿದೆ. ಜೈವಿಕ ತೈಲ ಬರುವ ದಿನಗಳಲ್ಲಿ ಉತ್ತಮ ಶಕ್ತಿ ಮೂಲವಾಗಲಿದೆ. ೨೦೦೮ರ ಸೆಪ್ಟೆಂಬರ್ ಭಾರತ ಸರ್ಕಾರ ಜೈವಿಕ ಇಂಧನ ತಿ ಪ್ರಕಟಿಸಿದ್ದು ೨೦೧೭ರ ವೇಳೆಗೆ ೨೦% ಜೈವಿಕ ಇಂಧನವನ್ನು ಉತ್ಪಾದಿಸಲು ಯೋಜಿಸಿದೆ. ಹರಳು, ಹೊಂಗೆ, ಜಟ್ರೋಪ, ಕಡಲೆ, ಸೂರ್ಯಕಾಂತಿ ಬೀಜಗಳಿಂದ ಜೈವಿಕ ತೈಲ ತಯಾರಿಸುವರು ಮುಂದಿನ ದಿನಗಳಳ್ಲಿ ಜೈವಿಕ ತೈಲಕ್ಕೆ ಉತ್ತಮ/ಅಧಿಕ ಬೆಲೆ ದೊರೆತರೆ ಖಾದ್ಯ ತೈಲದ ಬೆಲೆಯೂ ಅಧಿಕವಾಗುವುದು. ಮತ್ತೊಮ್ಮೆ ಆಹಾರ ತೈಲದ ಕೊರತೆ, ಬಡವರಿಗೆ ಆಹಾರದ ಲಭ್ಯತೆಯ ಕೊರತೆ ಅಧಿಕವಾಗುವುದು.

IPCCಯ ಪ್ರಕಾರ ಬರುವ ದಶಕದೊಳಗೆ ಭಾರತವು ಸೌರಶಕ್ತಿ ಪಡೆಯುವುದರಲ್ಲಿ ಅಧಿನಾಯಕನಾಗಬಹುದು. ತೈಲ ಆಮದನ್ನು ಲ್ಲಿಸುವ ಮಟ್ಟಕ್ಕೆ ಏರಬಹುದು. ಶೈವಲಗಳಿಂದ ಜೈವಿಕ ತೈಲ ಪಡೆಯಬಹುದು.

—-

—-

ಸೃಜನಶೀಲ ಪ್ರಯತ್ನ : ೧೯೯೮ರಲ್ಲಿ ಜಪಾನ ಸೈಟಮ ಪ್ರಪೆಕ್ಟರ್  ಸಂಸ್ಥೆಯು ವಿಶಿಷ್ಟ  ಹಾಗೂ ಸೃಜನಶೀಲ ಪ್ರಯತ್ನವೊಂದನ್ನು  ಕೈಗೊಂಡಿತು. ವಾಯುಗುಣ ಬದಲಾವಣೆ ಲ್ಲಿಸಿ ಎಂಬ ಶೀರ್ಷಿಕೆಯ ಟಿಪ್ಪಣಿ ಪುಸ್ತಕವನ್ನು ಸುಮಾರು ೫೦,೦೦೦ ಜನ ಮತ್ತು ಸಂಸ್ಥೆಗಳಿಗೆ ವಿತರಿಸಿತು. ಈ ಪುಸ್ತಕದಲ್ಲಿ ಯಾವಾವ ಚಟುವಟಿಕೆಯಿಂದ ಎಷ್ಟು ಅ‌ಔ೨ ಹೊರಬರುತ್ತದೆ ಮತ್ತು ಆ ಅ‌ಔ೨ ಂದ ಎಷ್ಟು ವಾಯುಗುಣ ಬದಲಾವಣೆಗೆ ಕಾರಣವಾಗುತ್ತದೆ ಎಂಬ ವಿವರಗಳಿದ್ದರೆ ವಿದ್ಯುತ್, ಅಲ, ರು ಮತ್ತು ತ್ಯಾಜ್ಯದಿಂದ ಉಂಟಾಗುವ ಉ‌ಊ‌ಉ ಗಳನ್ನು ಲೆಕ್ಕ ಹಾಕುವ ವಿಧಾನಗಳು ಅದರಲ್ಲಿದ್ದವು. ಈ ಪುಸ್ತಕ ಪಡೆದವರು ಜೂನ್ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಅವರು ಕೈಗೊಂಡ ದಿನತ್ಯ ಚಟುವಟಿಕೆಗಳನ್ನು ದಾಖಲಿಸಲು ತಿಳಿಸಲಾಗಿತ್ತು. ಆಶ್ಚರ್ಯವೆಂದರೆ ನವೆಂಬರ್ ತಿಂಗಳಲ್ಲಿ ಅವರ ಚಟುವಟಿಕೆಗಳಿಂದಾಗಿ ಹೊರಬರುವ ಅ‌ಔ೨ ನ ಪ್ರಮಾಣ ಕಡಿಮೆಯಾಗಿತ್ತು ! ಈ ಯೋಜನೆಯಿಂದಾಗಿ ನಮ್ಮ ದಿನತ್ಯ ಜೀವನದಲ್ಲಿ ಶಕ್ತಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿತೆಂದು ಬಹುತೇಕ ಜನ ಒಪ್ಪಿಕೊಂಡರು.