ವಾಯುಗುಣದ ಬದಲಾವಣೆಯ ಪರಿಣಾಮವು ಬದಲಾವಣೆಯ ಮಟ್ಟ ಮತ್ತು ಉಂಟಾಗುವ ವೇಗವನ್ನು ಅವಲಂಬಿಸಿದೆ. ನಾವು ಭೂಮಿಯ ಮಿಲಿಯಾಂತರ ವರ್ಷಗಳ ಇತಿಹಾಸವನ್ನು ಗಮನಿಸಿದರೆ ವಾಯುಗುಣದಲ್ಲಿ ತೀವ್ರತರ ಬದಲಾವಣೆ ಆದಾಗ ಅಪಾರ ಸಂಖ್ಯೆಯ ಪ್ರಭೇದಗಳು ನಶಿಸಿವೆ ಮತ್ತು ಹಿಮಯುಗಗಳಲ್ಲಿ ಆದಂತೆ ಅಧಿಕ ಸಂಖ್ಯೆಯ ನೈಸರ್ಗಿಕ ಪರಿಸರಗಳು ಹಾಳಾಗಿವೆ. ಆದರೆ ವಾಯುಗುಣ ಬದಲಾವಣೆಯು ನಿಧಾನ ಗತಿಯಲ್ಲಿ ಉಂಟಾದಾಗ, ಭೂಮಿಯು ಅದಕ್ಕೆ ಚೆನ್ನಾಗಿ ಹೊಂದಾಣಿಕೆ ಮಾಡಿಕೊಂಡಿದೆ! ಹಿಂದೆಂದೂ ಆಗಿರದ ವೇಗದಲ್ಲಿ ಇಂದು ಭೂಮಿಯ ತಾಪ ಅಧಿಕಗೊಳ್ಳುತ್ತಿದೆ. ಅದರಿಂದಾಗಿ ತೀವ್ರತರ ಸಮಸ್ಯೆಗಳು ತಲೆದೋರುತ್ತಿವೆ. ನಾವು ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಮತ್ತಷ್ಟು ಭೀಕರ ಸಮಸ್ಯೆಗಳು ಉಂಟಾಗಲಿವೆ.

ನಾವು ಬದುಕಿ ಬಾಳುವುದಕ್ಕೆ ಭೂಮಿಯಲ್ಲಿನ ಎಲ್ಲವೂ ಅಗತ್ಯ. ವಾಯುಗುಣ ಬದಲಾವಣೆಯು ಪರಿಸರ ವ್ಯವಸ್ಥೆಗಳು, ಜಲ ಸಂಪನ್ಮೂಲ, ಆಹಾರ ಸಂಪನ್ಮೂಲ, ಕಡಲ ತೀರದ ವ್ಯವಸ್ಥೆ, ಆರೋಗ್ಯ ಮತ್ತು ಮಾನವನ ವಸತಿ ಪ್ರದೇಶಗಳ ಮೇಲೆ ತಕ್ಷಣ ಪ್ರಭಾವ ಬೀರುತ್ತದೆ. ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ನೈಸರ್ಗಿಕ ಸಂಪನ್ಮೂಲಗಳು, ಸುಸ್ಥಿರವಲ್ಲದ ನಿರ್ವಹಣಾ ಪದ್ಧತಿಗಳು ಮತ್ತು ಮಾಲಿನ್ಯ ಈ ಪ್ರಮುಖ ಪರಿಸರ ವ್ಯವಸ್ಥೆಗಳನ್ನು ಹಾಳು  ಮಾಡಿವೆ. ಜಾಗತಿಕ ಬಿಸಿಯೇರುವಿಕೆಯ ಪರಿಣಾಮ ಜಗತ್ತಿನಾದ್ಯಂತ ಅನುಭವಕ್ಕೆ ಬರುತ್ತಿದೆ. ಪ್ರವಾಹಗಳು, ಬರಗಾಲಗಳು ಅಧಿಕವಾಗುತ್ತಿವೆ. ಹಿಮ ಪರ್ವತಗಳು ಕರಗುತ್ತಿವೆ, ಸ್ಥಳೀಯ ಹವಾಮಾನ ಹೆಚ್ಚು ತೀವ್ರವಾಗುತ್ತಿದೆ ಮತ್ತು ರೋಗಗಳು ಹೆಚ್ಚು ಹರಡುತ್ತಿವೆ. ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತು ಪರಿಹಾರೋಪಾಯಗಳನ್ನು ಕೈಗೊಳ್ಳದಿದ್ದರೆ, ಜೀವಿವೈವಿಧ್ಯ ಅಪಾರವಾಗಿ ನಶಿಸಿ ಹೋಗುತ್ತದೆ. ವಾಯುಮಾಲಿನ್ಯ ಹೆಚ್ಚಾಗುತ್ತದೆ. ಕೃಷಿ ವಿಧಾನಗಳಲ್ಲಿ ಬದಲಾವಣೆಗಳಾಗುತ್ತವೆ ಮತ್ತು ಕಡಲ ತೀರ ಪ್ರದೇಶಗಳು ಅಪಾಯಕ್ಕೆ ತುತ್ತಾಗುತ್ತವೆ. ಇವೆಲ್ಲವುಗಳ ಒಟ್ಟು ಪರಿಣಾಮದಿಂದ ಜನರ ಜೀವನ ಅಸ್ತವ್ಯಸ್ತವಾಗುತ್ತದೆ.

ಶ್ರೀಮಂತ ರಾಷ್ಟ್ರಗಳಿಗಿಂತ ಹೆಚ್ಚಾಗಿ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಿರುವ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಮೇಲೆ ಅಪಾರ ದುಷ್ಪರಿಣಾಮಗಳಾಗುತ್ತವೆ. ಅಲ್ಲಿಯ ಸಂಪನ್ಮೂಲಗಳ ಮೇಲೆ ಅಧಿಕ ಒತ್ತಡ ಉಂಟಾಗುವುದು. ಅಲ್ಲದೆ ಈ ದೇಶಗಳ ಹೆಚ್ಚಿನ ಜನ ಶಿಕ್ಷಿತರಲ್ಲ ಮತ್ತು ಅವರಲ್ಲಿ ಪರಿಸರ ಜಾಗೃತಿಯೂ ಕಡಿಮೆ. ಇಲ್ಲಿ ಸೀಮಿತ ಸೌಲಭ್ಯ (infrastructure)ಗಳಿವೆ, ಅಸ್ಥಿರ ಸರ್ಕಾರಗಳಿವೆ ಮತ್ತು ಮಾನವನಿಂದ ನಾಶಗೊಂಡ ನೈಸರ್ಗಿಕ ಪರಿಸರವಿದೆ. ಇವೆಲ್ಲವು ವಾಯುಗುಣ ಬದಲಾವಣೆಯನ್ನು ಮತ್ತಷ್ಟು ತೀವ್ರಗೊಳಿಸುತ್ತವೆ.

ವಿಚಿತ್ರವೆಂದರೆ ಉತ್ತರಾರ್ಧಗೋಳದ ಕೆಲವು ದೇಶಗಳಿಗೆ ಹವಾಗುಣ ಬದಲಾವಣೆ ಯಿಂದ ಪ್ರಯೋಜನವಾಗುತ್ತದೆ. ಆ ದೇಶಗಳು ಬಿಸಿ ವಾತಾವರಣ ಪಡೆದಂತೆ ಬೆಳೆ ಬೆಳೆಯಲು ದೀರ್ಘ ಅವಧಿಯ ಸಮಯ ಪಡೆಯುತ್ತಾರೆ ಮತ್ತು ಮನೆ ಹಾಗೂ ಯಂತ್ರಗಳನ್ನು ಬಿಸಿ ಮಾಡಿಕೊಳ್ಳಲು ಕಡಿಮೆ ಶಕ್ತಿ ಸಾಕಾಗುತ್ತದೆ. ಉತ್ತರಾರ್ಧ ಗೋಳದ ಎತ್ತರದ ಪ್ರದೇಶಗಳು (higher altitudes) ಹೆಚ್ಚು ಪರಿಣಾಮಕ್ಕೆ ಒಳಗಾಗುತ್ತವೆ. ಈ ಪ್ರದೇಶಗಳು ಅತಿ ಹೆಚ್ಚು ಬಿಸಿಗೆ ಒಳಗಾಗುತ್ತವೆಂದು ನಿರೀಕ್ಷಿಸಲಾಗಿದೆ. ಉತ್ತರ ಧ್ರುವದ ಪರಿಸರ ವ್ಯವಸ್ಥೆಗಳು ಸ್ಥಳೀಯ ಹವಾಗುಣದೊಡನೆ ಅತಿಸೂಕ್ಷ್ಮವಾದ ಸಮತೋಲನ ಹೊಂದಿವೆ. ಸಮಶೀತೋಷ್ಣ ಅಥವಾ ಉಷ್ಣ ಪ್ರದೇಶದ ಪರಿಸರ ವ್ಯವಸ್ಥೆಗಳಿಗೆ ಹೋಲಿಸಿದರೆ ಧ್ರುವ ಪ್ರದೇಶದ ಪರಿಸರ ವ್ಯವಸ್ಥೆಗಳು ಹವಾಗುಣ ಬದಲಾವಣೆಗೆ, ಸೂರ್ಯನ ಬೆಳಕು, ತಾಪ ಮತ್ತು ಹಿಮ-ಮಳೆ ಬೀಳುವುದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೇಗ ದುಷ್ಪರಿಣಾಮಕ್ಕೆ ಒಳಗಾಗುತ್ತವೆ.

ಹವಾಮಾನದಲ್ಲಿ ಏರುಪೇರು

ಪ್ರಪಂಚವು ಬಿಸಿಯಾದಂತೆ, ಹವಾಮಾನದಲ್ಲಿ ವಿಪರೀತ ಏರುಪೇರುಗಳಾಗಬಹುದು. ಮಾನವರಿಗೆ ಅಪಾರ ಸಾವು ನೋವುಗಳಾಗಬಹುದು. ನಮ್ಮ ಸುತ್ತಲಿರುವ ಜೀವಿಗಳಿಗೆ ಹಾಗೂ ಪರಿಸರಕ್ಕೆ ಅಪಾರ ಹಾನಿ ಉಂಟಾಗಬಹುದು. ಒಟ್ಟಾರೆ ಬಿಸಿಯಾದಂತೆ ಮೇಲ್ಮೈ ನೀರು ಶಾಖದಿಂದ ನೀರಾವಿಯಾಗುವ ಪ್ರಮಾಣ ಹೆಚ್ಚಾಗುವುದು, ವಾಯು ಸಹ ವಿಕಸನ (Expand) ವಾಗಿ ಮತ್ತಷ್ಟು ನೀರಾವಿ ಹಿಡಿದಿಟ್ಟುಕೊಳ್ಳುವಂತಾಗುವುದು. ಇದರಿಂದ ಬಿಸಿಗಾಳಿ ಬೀಸುವುದು ಅಧಿಕವಾಗುವುದು, ಮಳೆ, ಹಿಮ ಬೀಳುವ ಪ್ರಮಾಣ ಹೆಚ್ಚುವುದು, ಪ್ರವಾಹಗಳು ಹೆಚ್ಚಾಗುವವು. ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವುದು. ಇದರಿಂದ ಬರಗಾಲಗಳು ಉಂಟಾಗುತ್ತವೆ.

ಉಷ್ಣ ವಲಯದಲ್ಲಿ ಶುಷ್ಕ ಮತ್ತು ಅತಿಶುಷ್ಕ ಪ್ರದೇಶಗಳಿದ್ದು ಅಲ್ಲಿ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಿವೆ. ಇವು ಹವಾಗುಣ ಬದಲಾವಣೆಗೆ ಬೇಗ ತುತ್ತಾಗುತ್ತವೆ. ಚಂಡಮಾರುತಗಳು ಹಾಗೂ ಬಿರುಗಾಳಿಗಳ ಸಂಖ್ಯೆ ಅಧಿಕವಾಗುವುದೆಂದು ಕೆಲವು ವಿಜ್ಞಾನಿಗಳು ನಂಬಿದ್ದಾರೆ. ಉತ್ತಾರಾರ್ಧಗೋಳದ ಹಲವು ನದಿಗಳು ಮತ್ತು ಸರೋವರಗಳು ಕಳೆದ ದಶಕದಲ್ಲಿ ಒಂದು ವಾರ ತಡವಾಗಿ ಹಿಮಗಟ್ಟುತ್ತಿವೆ ಮತ್ತು ಎರಡು ವಾರ ಮುಂಚಿತವಾಗಿ ಹಿಮ ಕರಗಲಾರಂಭಿಸುತ್ತವೆ ಎಂಬುದನ್ನು ಗಮನಿಸಲಾಗಿದೆ. ಇದರಿಂದ ಸರೋವರಗಳ ಸಸ್ಯ, ಮೀನು ಮತ್ತು ಇತರೆ ಜೀವಿಗಳ ಮೇಲೆ ಪ್ರಭಾವ ಉಂಟಾಗುತ್ತದೆ.

ಅಧಿಕಗೊಳ್ಳುವ ಪರಿಸರ ಸಮಸ್ಯೆಗಳು

ಪರಿಸರ ವ್ಯವಸ್ಥೆಗಳು ಭೂಮಿಯ ಎಲ್ಲ ಜೀವಿಗಳಿಗೆ ಅತ್ಯಗತ್ಯವಾದ ಪೂರಕ ವ್ಯವಸ್ಥೆಗಳನ್ನು ಒದಗಿಸುತ್ತವೆ. ಆದ್ದರಿಂದ ಜೀವಿಗಳ ಸುಸ್ಥಿರತೆಗೆ ಹಾಗೂ ಪರಿಸರಕ್ಕೆ ಇವು ಅತಿ ಪ್ರಮುಖವಾದವು. ಇವು ಇಡೀ ಭೂಮಿಯ ಎಲ್ಲ ಪ್ರಭೇದಗಳ ಹಾಗೂ ಅನುವಂಶೀಯ ವೈವಿಧ್ಯದ ಉಗ್ರಾಣ. ಇವು ಆಹಾರ, ಶಕ್ತಿ, ವಸತಿ, ಔಷಧಗಳು, ಮೇವು ಮತ್ತು ಹುಲ್ಲು ಒದಗಿಸುವ ತಾಣಗಳು. ಗಿಡಮರಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ. ಸವಕಳಿಯನ್ನು ತಪ್ಪಿಸುತ್ತವೆ ಮತ್ತು ಮಣ್ಣು ಅವನತಿಯನ್ನು ಕಡಿಮೆ ಮಾಡುತ್ತವೆ. ಇವು ಪ್ರವಾಹಗಳನ್ನು ನಿಯಂತ್ರಿಸುತ್ತವೆ, ನೀರನ್ನು ಸಂಗ್ರಹಿಸುತ್ತವೆ, ಶುದ್ಧಗೊಳಿಸುತ್ತವೆ ಹಾಗೂ ಮೇಲ್ಮೈ ಮಳೆನೀರನ್ನು ನಿಯಂತ್ರಿಸುತ್ತವೆ. ನೈಸರ್ಗಿಕವಾದ ಹವಾಗುಣ ಏರುಪೇರಿಗೆ ಹೊಂದಿಕೊಳ್ಳುವ ಶಕ್ತಿ ಇವಕ್ಕಿದೆ. ಆದರೆ ಇಂದು ಆಗುತ್ತಿರುವ ವೇಗದ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಅಥವಾ ಆಘಾತ ಅನುಭವಿಸಿದ ನಂತರ ಪುನಃ ಸ್ಥಾಪನೆಯಾಗುವುದು ತುಂಬ ಕಷ್ಟವಾಗಿದೆ. ಮಾನವನ ಜನಸಂಖ್ಯೆ ಬೆಳೆಯುತ್ತಿರುವುದರಿಂದ ಅವಾಸಗಳ ನಾಶ ಮತ್ತು ಮಾಲಿನ್ಯ ಉಂಟಾಗುತ್ತಿದ್ದು ನೈಸರ್ಗಿಕ ಪರಿಸರ ವ್ಯವಸ್ಥೆಗಳ ಅಸ್ಥಿತ್ವವೇ ಅಪಾಯದಲ್ಲಿದೆ.

ನೈಸರ್ಗಿಕ ಪರಿಸರದಲ್ಲಿರುವ ಸಸ್ಯ ಮತ್ತು ಪ್ರಾಣಿಗಳು ವಾಯುಗುಣ ಬದಲಾವಣೆಗಳಿಗೆ ಅತಿಸೂಕ್ಷ್ಮತೆಯನ್ನು ಹೊಂದಿವೆ. ವಾಯುಗುಣ ಬದಲಾವಣೆಯಿಂದ ದುಷ್ಪರಿಣಾಮಕ್ಕೆ ಒಳಗಾಗಲಿರುವ ಪರಿಸರ ವ್ಯವಸ್ಥೆಗಳೆಂದರೆ ಎತ್ತರದ ಅಕ್ಷಾಂಶಗಳಲ್ಲಿರುವವು. ಅದರಲ್ಲಿಯೂ  ಬೋರಿಯಲ್ ಅಥವಾ ಟಂಡ್ರಾ ಅರಣ್ಯಗಳು. ಇವುಗಳ ವಿಸ್ತಾರ ಕುಗ್ಗುತ್ತದೆ. ಉಷ್ಣ ಮತ್ತು  ಸಮಶೀತೋಷ್ಣ ಪ್ರದೇಶಗಳು ಹೆಚ್ಚು ಬಿಸಿಯಾದಂತೆ ಸಹಜವಾಗಿ ಜೀವಿಸಿರುವ ಪ್ರಭೇದಗಳು ಉತ್ತರದ ಕಡೆ ವಲಸೆ ಹೋಗುತ್ತವೆ ಮತ್ತು ಉತ್ತರಾರ್ಧ ಗೋಳದ ಎತ್ತರದ ಸ್ಥಳಗಳಿಗೆ ವಲಸೆ ಹೋಗುತ್ತವೆ. ಚಲಿಸುವ ಹಾಗೂ ಬದಲಾಗುತ್ತಿರುವ ವಾಯುಗುಣವನ್ನು ಅನುಸರಿಸಿ ಸಸ್ಯ, ಪ್ರಾಣಿ ಮತ್ತು ಇತರೆ ಪ್ರಭೇದಗಳ ಆವಾಸದಲ್ಲಿ ಬದಲಾವಣೆಗೆ ಕಾರಣವಾಗುವುದು. ಆದರೆ ಹೊಸ ಆವಾಸವು ಅನುಕೂಲಕರವಲ್ಲದಿದ್ದರೆ, ಈ ಪ್ರಭೇದಗಳು ನೋವು ಅನುಭವಿಸುತ್ತವೆ ಮತ್ತು ನಶಿಸುತ್ತವೆ.

ಬಿಸಿಯೇರುವಿಕೆಯು ಭೂಮಧ್ಯರೇಖೆಯ ಸ್ಥಳಕ್ಕಿಂತ ಹೆಚ್ಚು ಧ್ರುವ ಪ್ರದೇಶಗಳಲ್ಲಿರುವುದು. ಇದರಿಂದ ಧ್ರುವ ಪ್ರದೇಶದ ಸೂಕ್ಷ್ಮ ಪರಿಸರ ವ್ಯವಸ್ಥೆಯು ಹಾಗೂ ಅಲ್ಲಿನ ವನ್ಯ ಪ್ರಭೇದಗಳು ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಸಮುದ್ರದಿಂದ ಸಾಕಷ್ಟು ದೂರವಿರುವ ಭೂಖಂಡಗಳ ಒಳಪ್ರದೇಶಗಳು ಕಡಲ ತೀರ ಪ್ರದೇಶಗಳಿಗಿಂತ ಹೆಚ್ಚಿನ ಬಿಸಿಯನ್ನು ಅನುಭವಿಸುತ್ತವೆ. ಹೊಸ ಪರಿಸರ ವ್ಯವಸ್ಥೆಗಳು ಅಸ್ಥಿತ್ವಕ್ಕೆ ಬರುವುದಕ್ಕಿಂತ ವೇಗವಾಗಿ ಹಾಲಿ ಇರುವ ಪರಿಸರ ವ್ಯವಸ್ಥೆಗಳು ನಾಶ ಹೊಂದುತ್ತವೆ.

ಪೆರು ದೇಶದ ಆಂಡಿಸ್ ಪರ್ವತಗಳ ಹಿಮಾಚ್ಛಾದಿತ ಪ್ರದೇಶವು ಕಳೆದ ೨೦ ವರ್ಷಗಳಿಂದ ಪ್ರತಿವರ್ಷ ೪.೩ ಮೀಟರುಗಳಷ್ಟು ಹಿಂದಕ್ಕೆ ಸರಿಯುತ್ತಿದೆ. ಇಂದು ಪ್ರತಿವರ್ಷ ೩೦.೨ ಮೀಟರುಗಳಷ್ಟು ಕಡಿಮೆಯಾಗುತ್ತದೆ. ಗ್ರೀನ್‌ಲ್ಯಾಂಡಿನ ಹಿಮ ಬಂಡೆಯು ವಿಶ್ವದಲ್ಲಿಯೇ ಎರಡನೇ ಬೃಹತ್ ಬಂಡೆಯಾಗಿದ್ದು ಇಂದು ಪ್ರತಿವರ್ಷ ೦.೯ ಮೀಟರ್‌ಗಳಷ್ಟು ತೆಳ್ಳಗಾಗುತ್ತಿದೆ.

ವನ್ಯಜೀವಿಗಳ ಮೇಲಾಗುವ ಪರಿಣಾಮಗಳು

ವಲಸೆ ಪಕ್ಷಿಗಳು : ವಲಸೆ ಪಕ್ಷಿಗಳಿಗೆ ವಲಸೆಯನ್ನು ಯಶಸ್ವಿಯಾಗಿ ಪೂರೈಸುವುದಕ್ಕೆ ವಲಸೆ ಮಾರ್ಗದಲ್ಲಿನ ಹವಾಮಾನ, ಮತ್ತು ಆಹಾರ ಸಂಪನ್ಮೂಲಗಳು ತುಂಬ ಪ್ರಮುಖ. ಎಲ್ಲ ವಲಸೆ ಪಕ್ಷಿಗಳಿಗೆ ವಲಸೆ ಸಮಯವು ಅತ್ಯಗತ್ಯವಾದುದು. ಅವು ಹೆಚ್ಚೂ ಕಡಿಮೆ ಸ್ಥಿರವಾದ ಹವಾಮಾನ ನಮೂನೆಯನ್ನು ಅವಲಂಬಿಸಿರುತ್ತವೆ. ವಲಸೆ ಕಾಲದಲ್ಲಿ ಪಕ್ಷಿಗಳು ಅಧಿಕ ಪ್ರಮಾಣದ ಆಹಾರ ತಿಂದು ಪ್ರಯಾಣದಲ್ಲಿ ಅಗತ್ಯವಾಗಿ ಬೇಕಾದ ಶಕ್ತಿ ಮತ್ತು ಕೊಬ್ಬನ್ನು ಶೇಖರಿಸಿಕೊಳ್ಳುತ್ತವೆ. ಹವಾಗುಣ ಬದಲಾದಲ್ಲಿ ವಲಸೆಯ ಮಾರ್ಗದಲ್ಲಿ ಆಹಾರ ಪಡೆಯುವ ಸ್ಥಳಗಳ ಬದಲಾವಣೆ ಹಾಗೂ ಹವಾಮಾನ ಬದಲಾವಣೆಯಿಂದ ಪಕ್ಷಿಗಳು ಯಶಸ್ವಿಯಾಗಿ ವಲಸೆ ಪೂರೈಸುವುದು ಕಷ್ಟ. ಇತ್ತೀಚೆಗೆ ಪಕ್ಷಿಗಳ ವಲಸೆಯು ಭೂಮಧ್ಯರೇಖೆಯ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಭೂಮಧ್ಯದಿಂದ ಸ್ವಲ್ಪ ಉತ್ತರ ಅಥವಾ ದಕ್ಷಿಣಕ್ಕೆ ವಲಸೆ ಹೋಗುತ್ತಿವೆ. ಅತ್ಯಂತ ಅಪಾಯದಲ್ಲಿರುವ ವಲಸೆ ಪಕ್ಷಿಗಳೆಂದರೆ ಬಾತುಕೋಳಿಗಳು (Ducks) ಮತ್ತು ಹಂಸಗಳು (Geese).  ವಿಶ್ವ ಸಂರಕ್ಷಣಾ ಸಂಘದ ಪ್ರಕಾರ ವಿಶ್ವದಲ್ಲಿರುವ ೯೬೦೦ ಪ್ರಭೇದಗಳಲ್ಲಿ ಸುಮಾರು ಮೂರನೇ ಎರಡರಷ್ಟು ಪಕ್ಷಿ ಪ್ರಭೇದಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕೆಲವು ವಲಸೆ ಪಕ್ಷಿಗಳು ಉದಾಹರಣೆಗೆ ಅಮೆರಿಕಾದ ರೊಬಿನ್ ಪಕ್ಷಿಯು ಕಳೆದ ೨೦ ವರ್ಷಗಳಿಗೆ ಹೋಲಿಸಿದರೆ ಈಗ ಎರಡು ವಾರ ಮುಂಚಿತವಾಗಿ ವಲಸೆ ಆರಂಭಿಸುವುದು.

ಕಾರಿಬೊ : ಟಂಡ್ರ ಪ್ರದೇಶದಲ್ಲಿ ಅಪಾಯಕ್ಕೆ ತುತ್ತಾಗಿರುವ ಪ್ರಾಣಿಗಳಲ್ಲಿ ಕಾರಿಬೊ ಅತಿಹೆಚ್ಚು ಅಪಾಯದಲ್ಲಿದೆ. ಚಳಿಗಾಲದ ತಿಂಗಳುಗಳಲ್ಲಿ ಈ ಪಕ್ಷಿ ಆಹಾರ ದೊರೆಯುವ ದಕ್ಷಿಣ ಪ್ರದೇಶಗಳಿಗೆ ವಲಸೆ ಹೋಗುವುದು ಮತ್ತು ಅಲ್ಲಿ ಮರಿಗಳ ಪಾಲನೆ ಮಾಡುವುದು.  ಪರಿಸರ ವ್ಯವಸ್ಥೆಗಳು ದಕ್ಷಿಣದಿಂದ ಉತ್ತರ ಕಡೆ ಚಲಿಸುತ್ತಿರುವುದರಿಂದ, ಈ ಪ್ರಾಣಿಗಳು ಪರಿಚಯವಿಲ್ಲದ ಉಷ್ಣ ಪ್ರದೇಶದ ಪ್ರಭೇದಗಳ ಜೊತೆ ಸಂಪರ್ಕ ಹೊಂದಬೇಕಾಗುತ್ತದೆ. ಈ ಹೊಸ ಪ್ರಭೇದಗಳು ಸೀಮಿತವಾಗಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಪಡೆಯಲು ಹೋರಾಟ ನಡೆಸಬೇಕಾಗುವುದು ಮತ್ತು ಕೆಲವು ಬೇಟೆ ಮಾಡುವ ಪ್ರಾಣಿಗಳೂ ಆಗಿರಬಹುದು.

ಅಡಿಲಿ ಪೆಂಗ್ವಿನ್ : ಅಂಟಾರ್ಟಿಕದ ಉತ್ತರದಲ್ಲಿ ವಾಸಿಸುವ ಅಡಿಲಿ ಪೆಂಗ್ವಿನ್ ಪಕ್ಷಿಗಳು ಹಿಮ ಬಂಡೆಗಳ ಸೀಳುಗಳ ನಡುವೆ ನೀರಿನಲ್ಲಿ ಜೀವಿಸುವ ಕ್ರಿಲ್ ಎಂಬ ಸೀಗಡಿಗಳನ್ನು ತಿನ್ನುತ್ತವೆ. ಹಿಮ ಕರಗಿದಂತೆ ಈ ಪಕ್ಷಿಗಳಿಗೆ ಆಹಾರ ದೊರಕುವ ತಾಣಗಳು ಅಪರೂಪವಾಗುತ್ತಿವೆ. ಬೇಸಗೆಯಲ್ಲಿ ಹಿಮ ಬೀಳುವ ವಿಧಾನದಲ್ಲಿ ಮತ್ತು ಹಿಮ ಕರಗುವ ವಿಧಾನದಲ್ಲಿ ಬದಲಾವಣೆಯಾಗಿರುವುದರಿಂದ ಈ ಪಕ್ಷಿಗಳು ಗೂಡು ಕಟ್ಟುವ ಸ್ಥಳಗಳನ್ನೂ ಬದಲಿಸಿ ಕೊಳ್ಳಬೇಕಿದೆ. ಇದರಿಂದ ಮರಿಗಳು ಯಶಸ್ವಿಯಾಗಿ ದೊಡ್ಡದಾಗುವ ಸಾಧ್ಯತೆ ಕಡಿಮೆ.

ದ್ವಿಚರಿಗಳು : ಜಗತ್ತಿನಾದ್ಯಂತ ದ್ವಿಚರಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹವಾಗುಣದಲ್ಲಿ ಸ್ವಲ್ಪ ಬದಲಾವಣೆ ಯನ್ನೂ ಕಪ್ಪೆ ಮತ್ತು ನೆಲಗಪ್ಪೆಗಳು ಸಹಿಸಲಾರವು. ಈಗಾಗಲೇ ಹಲವಾರು ದ್ವಿಚರಿ ಪ್ರಭೇದಗಳು ನಶಿಸಿವೆ ಅಥವಾ ವಿನಾಶದ ಅಂಚಿಗೆ ಸಾಗಿವೆ. ಒಂದು ಉತ್ತಮ ಉದಾಹರಣೆ ಎಂದರೆ ದಕ್ಷಿಣ ಅಮೆರಿಕಾದ ಅರಣ್ಯಗಳಲ್ಲಿದ್ದ ಬಂಗಾರದ ಕಪ್ಪೆ ಈಗ ನಶಿಸಿ ಹೋಗಿದೆ ಎನ್ನಲಾಗುತ್ತಿದೆ.

ಸೀಲ್ ಮತ್ತು ತಿಮಿಂಗಿಲಗಳು : ಸಾಗರಗಳ ಉಷ್ಣತೆ ಅಧಿಕವಾಗಿರುವುದರಿಂದ, ಆಹಾರದ ಲಭ್ಯತೆ ಕಡಿಮೆಯಾಗಿದೆ.  ಕೆಲವು ಸೀಲ್ ಮತ್ತು ತಿಮಿಂಗಿಲಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇವು ಸಾಗರದ ಹಿಮಬಂಡೆಗಳ ನಡುವೆ ಜೀವಿಸುವ ಕ್ರಿಲ್‌ಗಳನ್ನು ತಿಂದು ಬದುಕುತ್ತವೆ. ಹಿಮ ಕರಗುತ್ತಿರುವುದರಿಂದ, ಕ್ರಿಲ್‌ಗಳು ಮೊದಲಿನಂತೆ ದೊರಕುತ್ತಿಲ್ಲ.

ಧ್ರುವ ಕರಡಿ : ಇವು ಶ್ವೇತ ವರ್ಣದ ಬೃಹತ್ ಗಾತ್ರದ ಕರಡಿಗಳು. ಇವು ಹಿಮ ಪ್ರದೇಶದಲ್ಲಿ ಮಾತ್ರ ಬದುಕುತ್ತವೆ. ಹವಾಗುಣ ಬದಲಾವಣೆಯಿಂದ ಧ್ರುವ ಕರಡಿಗಳ ಬೇಟೆಯಾಡುವ ಕಾಲ ಕಡಿಮೆಯಾಗಿದೆ. ಆದ್ದರಿಂದ ಅವು ಹಸಿವೆಯಿಂದ ನರಳುತ್ತಿವೆ. ಅವುಗಳ ಪ್ರಿಯ ಆಹಾರವಾದ ಉಂಗುರದ ಸೀಲ್ ಜೀವಿಗಳು ಈಗ ಸಾಕಷ್ಟು ದೊರಕುತ್ತಿಲ್ಲ. ಅಲ್ಲದೆ ಅವು ಬೇಟೆಯಾಡಲು ಹಿಮಗಡ್ಡೆಗಳನ್ನು ಅಟ್ಟಣೆಯನ್ನಾಗಿ ಬಳಸುತ್ತವೆ. ಕಳೆದ ಕೆಲವು ದಶಕಗಳಿಗೆ ಹೋಲಿಸಿದರೆ ಈಗ ಹಿಮಗಡ್ಡೆಗಳು ಬೇಗ ಕರಗುತ್ತಿವೆ. ಹಾಗಾಗಿ ಕರಡಿಗಳಿಗೆ ನಿಲ್ಲಲು ನೆಲೆ ಇಲ್ಲವಾಗಿದೆ. ಬೇಸಗೆ ಆರಂಭವಾಗುವ ಮುನ್ನ ಹಿಮ ಕರಡಿಗಳು ಸೀಲ್ ಪ್ರಾಣಿಗಳನ್ನು ಕೊಂದು ತಿಂದು ಸಾಕಷ್ಟು ಕೊಬ್ಬನ್ನು ದೇಹದಲ್ಲಿ ಶೇಖರಿಸುವುದು ಬಹು ಮುಖ್ಯ. ಬೇಸಗೆಯ ನಾಲ್ಕೈದು ತಿಂಗಳುಗಳ ಕಾಲ ಅವು ಕಡಲ ದಂಡೆಯಲ್ಲಿ ಓಡಾಡಿಕೊಂಡಿರುತ್ತವೆ ಮತ್ತು ದೀರ್ಘಕಾಲ ಆಹಾರವಿಲ್ಲದೆ ಬದುಕಿರುತ್ತವೆ. ಹೆಣ್ಣು ಹಿಮ ಕರಡಿಗಳು ತನ್ನ ಮರಿಗಳನ್ನು ಹೊತ್ತು ಸಾಕಲು ಮತ್ತು ಆಹಾರ ಉಣಿಸಲು ಅಗತ್ಯವಾದ ಶಕ್ತಿ ಹೊಂದಿರಬೇಕು. ಅಂದರೆ ಕೊಬ್ಬನ್ನು ಸಂಗ್ರಹ ಮಾಡಿಕೊಂಡಿರಬೇಕು. ಅವುಗಳ ಪ್ರಮುಖ ಆಹಾರದ ಕೊರತೆಯಿಂದಾಗಿ ೧೯೮೧ ರಿಂದ ಈಚೆಗೆ ಹಿಮಕರಡಿ ಮರಿಗಳ ಸಂಖ್ಯೆ ನಿಧಾನವಾಗಿ ಕ್ಷೀಣಿಸುತ್ತಿದೆ.

ಇತರೆ ಉದಾಹರಣೆಗಳು : ಮರ್ಮಾಟುಗಳು ಸಾಮಾನ್ಯವಾಗಿ ಸುಮಾರು ಎಂಟು ತಿಂಗಳ ಕಾಲ ದೀರ್ಘ ನಿದ್ದೆ ಮಾಡುತ್ತಿದ್ದವು. ಈಗ ಚಳಿಗಾಲ ಪುಟ್ಟದಾಗುತ್ತಿರುವುದರಿಂದ ಬೇಗನೆ ಎಚ್ಚರಗೊಳ್ಳುತ್ತಿವೆ. ಮೆಕ್ಸಿಕೊ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ಚಿಟ್ಟೆಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಅದೇ ಜಾತಿಯ ಚಿಟ್ಟೆಗಳ ಸಂಖ್ಯೆ ಕೆನಡಾದಲ್ಲಿ ಹೆಚ್ಚಾಗಿದೆ ಎಂದು ಡಾ. ಕಾಮಿಲ್ ಪರಮೇಸನ್ ೧೯೯೬ರಲ್ಲಿ ವರದಿ ಮಾಡಿದ್ದಾರೆ. ಮೊದಲು ಅನುಭವಿಸುತ್ತಿದ್ದ ವಾಯುಗುಣವಿರುವೆಡೆಗೆ ಅಂದರೆ ಉತ್ತರದ ಕಡೆಗೆ ಈ ಚಿಟ್ಟೆಗಳು ವಲಸೆ ಹೋಗುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಕೆಲವು ಚಿಟ್ಟೆ ಮತ್ತು ಪತಂಗಗಳ ಪ್ರಭೇದಗಳು ನಶಿಸಿ ಹೋಗುವ ಉದಾಹರಣೆಗಳಿವೆ. ಆದರೆ ಕೀಟಗಳು ಸಾಮಾನ್ಯವಾಗಿ ಹವಾಗುಣ ಬದಲಾವಣೆಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ ಮತ್ತು ಸಂತಾನವನ್ನು ಆಗಾಗ್ಗೆ ಅಭಿವೃದ್ಧಿಪಡಿಸಿಕೊಳ್ಳುತ್ತವೆ.

ವಿಶ್ವ ವನ್ಯಜೀವಿ ನಿಧಿ (World Wildlife Fund) ವರದಿಯ ಪ್ರಕಾರ ಚೀನಾದ ವೊಲಾಂಗ್ ಪ್ರಕೃತಿ ಧಾಮದ ಬೃಹತ್ ಪಾಂಡ, ಅಮೆರಿಕಾದ ಎಲ್ಲೊ ಸ್ಟೋನ್ ರಾಷ್ಟ್ರೀಯ ಉದ್ಯಾನದ ಗ್ರಿಜ್ಲೆ ಬೃಹತ್ ಕರಡಿ ಮತ್ತು ಭಾರತದ ಕನ್ಹ ರಾಷ್ಟ್ರೀಯ ಉದ್ಯಾನದ ಹುಲಿಗಳು ಜಾಗತಿಕ ಬಿಸಿಯೇರುವಿಕೆಯಿಂದ ಅಪಾಯಕ್ಕೆ ಒಳಗಾಗುತ್ತವೆ. ಪೀಕಿಂಗ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯಾದ ಡಾ|| ಲುಜಿ ೧೯೮೫ ರಿಂದಲೂ ಬೃಹತ್ ಪಾಂಡದ ಕ್ಷೇತ್ರ ಸಂಶೋಧನೆ ಹಾಗೂ ಸಂರಕ್ಷಣಾ ಯೋಜನೆಗಳಲ್ಲಿ ನಿರತರಾಗಿದ್ದಾರೆ. ೧೯೯೫ ರಿಂದ ೨೦೦೦ ರವರೆಗೆ ಅವರು ವಿಶ್ವವನ್ಯಜೀವಿ ನಿಧಿಯ ಪಾಂಡ ಯೋಜನೆಯ ಸಂಯೋಜಕರಾಗಿ ಮತ್ತು ಪಾಂಡ ವರದಿಗಳ ಸಹಲೇಖಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವಸಾಗವಾಗಲಿರುವ ಅರಣ್ಯಗಳು

ಭೂಗ್ರಹದ ನೆಲವಿರುವ ಸ್ಥಳದ ಸುಮಾರು ಕಾಲುಭಾಗದಲ್ಲಿ ಅರಣ್ಯಗಳಿವೆ. ಇವು ಕೈಗಾರಿಕೆಗೆ ಚೌಬೀನೆ, ಉರುವಲು, ಆಹಾರ, ಮೇವು ಮತ್ತು ಔಷಧಗಳನ್ನು ಒದಗಿಸುತ್ತವೆ. ಇವು ಕೆಲವು ಜನರಿಗೆ ಜೀವನ ಸಾಗಿಸಲು ಸಂಪನ್ಮೂಲಗಳಾಗಿವೆ. ಅಲ್ಲದೆ ಪ್ರವಾಸಿಗರನ್ನು ಆಕರ್ಷಿಸುತ್ತವೆ. ವಿಶ್ವದ ಬಹುತೇಕ ಜೀವಿ ವೈವಿಧ್ಯಕ್ಕೆ ಅರಣ್ಯಗಳು ಆಶ್ರಯ ನೀಡಿವೆ. ಅಲ್ಲದೆ ಅರಣ್ಯಗಳು ಜಲಚಕ್ರ ಮತ್ತು ಜಲಶಕ್ತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನೀರಿನ ಸಮತೋಲನ ಮತ್ತು ಗುಣಮಟ್ಟವನ್ನು ಕಾಪಾಡುವಲ್ಲಿ ಅರಣ್ಯಗಳ ಪಾತ್ರ ಮಹತ್ತರವಾದುದು. ಜೀವಿ ವೈವಿಧ್ಯದ ಉಗ್ರಾಣಗಳು ಮತ್ತು ವನ್ಯಜೀವಿಗಳ ಆವಾಸ ಸ್ಥಾನಗಳೂ ಆದ ಅರಣ್ಯಗಳು ಹವಾಗುಣ ಬದಲಾವಣೆಯಿಂದಾಗಿ ಇತ್ತೀಚೆಗೆ ಬಹುದೊಡ್ಡ ಅಪಾಯದಲ್ಲಿವೆ.

ಉಷ್ಣತೆಯು ಅಧಿಕವಾಗುವುದು ಮುಂದುವರೆದರೆ ಹಾಲಿ ವಾಯುಗುಣ ಪ್ರದೇಶದಲ್ಲಿರುವ ಬಹುತೇಕ ಮರ ಪ್ರಭೇದಗಳು ಸಹಿಸಲಾರದೆ ಹೋಗಬಹುದು. ಎತ್ತರದ ಅಕ್ಷಾಂಶಗಳಿಗೆ ಪ್ರಭೇದಗಳು ಚಲಿಸುವುದರಿಂದ, ಪ್ರಸ್ತುತ ಅಸ್ಥಿತ್ವದಲ್ಲಿರುವ ಪರಿಸರ ವ್ಯವಸ್ಥೆಗಳು ನಾಶವಾಗಬಹುದು ಮತ್ತು ಹೊಸ ಪರಿಸರ ವ್ಯವಸ್ಥೆಗಳು ಸೃಷ್ಟಿಯಾಗಬಹುದು. ಆದರೆ ಕೆಲವು ಪ್ರಕರಣಗಳಲ್ಲಿ ಒಂದು ಪರಿಸರ ವ್ಯವಸ್ಥೆಯಲ್ಲಿನ ಕೆಲವು ಪ್ರಭೇದಗಳು ನಶಿಸುವುದರಿಂದ ಇಡೀ ಪರಿಸರ ವ್ಯವಸ್ಥೆಯೇ ಅವನತಿ ಹೊಂದಬಹುದು. ‘ಕಳೆ ಗಿಡ’ ಪ್ರಭೇದಗಳು ಸಂಖ್ಯೆಯಲ್ಲಿ ಹೆಚ್ಚಾಗುತ್ತವೆ ಮತ್ತು ಅಧಿಕ ಪ್ರದೇಶವನ್ನು ಆಕ್ರಮಿಸುತ್ತವೆ. ಬರಗಾಲಗಳು, ಪ್ರವಾಹಗಳು, ಕೀಟಗಳ ಹಾವಳಿ, ರೋಗ, ಕಾಳ್ಗಿಚ್ಚು ಮತ್ತು ಮಾನವನ ಚಟುವಟಿಕೆಗಳು ಅರಣ್ಯನಾಶಕ್ಕೆ ಕಾರಣವಾಗುತ್ತವೆ. ಕೆಲವು ಗಿಡ ಮತ್ತು ಮರಗಳು ಬೀಜ ಪ್ರಸರಣಕ್ಕಾಗಿ ಪ್ರಾಣಿಗಳನ್ನು ಅವಲಂಬಿಸುತ್ತವೆ. ಮಾರಿಷಿಯಸ್‌ನಲ್ಲಿದ್ದ ದೊಡೊ ಪಕ್ಷಿನಾಶವಾದ ಮೇಲೆ ಬೀಜ ಪ್ರಸರಣಕ್ಕೆ ದೊಡೊ ಅವಲಂಬಿಸಿದ್ದ ಮಾರಿಷಿಯಸ್ ಕಾಲ್ವೇರಿಯ ಮರವೂ ಸಹ ನಾಶವಾಯಿತು ! ಕೆಲವು ಪ್ರಾಣಿ, ಪಕ್ಷಿ ಮತ್ತು ಕೀಟಗಳು ಎತ್ತರದ ಅಕ್ಷಾಂಶ ಪ್ರದೇಶಗಳಿಗೆ ಚಲಿಸುವುದರಿಂದ ಬೀಜ ಪ್ರಸರಣ ಮತ್ತು ಜೀನ್‌ಗಳ ಪರಸ್ಪರ ಬದಲಾವಣೆಯು ಕಡಿಮೆ ಸಂಖ್ಯೆಯ ಜೀವಿಗಳಿಗೆ ಸೀಮಿತವಾಗುತ್ತದೆ. ಇದರಿಂದ ಅನಾನುಕೂಲವಾದ ಪರಿಸರ ಬದಲಾವಣೆಗಳಿಗೆ ಹೊಂದಿಕೊಳ್ಳಲು ಅಗತ್ಯವಾದ ಅಧಿಕ ಅನುವಂಶೀಯ ವೈವಿಧ್ಯ ಮಟ್ಟ ಕುಸಿಯುತ್ತದೆ.

ಕಾಳ್ಗಿಚ್ಚು

೧೯೯೮ರಲ್ಲಿ ಇಂಡೊನೇಶಿಯದಲ್ಲಿ ಉಂಟಾದ ದೀರ್ಘಕಾಲದ ಸರಣಿ ಕಾಳ್ಗಿಚ್ಚಿನಿಂದ ತೀವ್ರತರವಾದ ವಾಯುಮಾಲಿನ್ಯ ಉಂಟಾಯಿತು. ಇದರಿಂದ ದೂರದ ಸಿಂಗಾಪುರದಲ್ಲಿನ ಜನರಿಗೂ ಶ್ವಾಸಕೋಶ ಸಂಬಂಧಿ ರೋಗಗಳು ಉಂಟಾದವು. ಪೂರ್ವ ಬೋರ‍್ನಿಯೊದಲ್ಲಿಯ (ಕಾಲಿಮಂತನ್) ದಾಯಕ್ ಅರಣ್ಯವಾಸಿಗಳು ಉರಿಯುತ್ತಿದ್ದ ಅರಣ್ಯದ ಮಧ್ಯದಲ್ಲಿದ್ದು ನರಕ ಯಾತನೆ ಅನುಭವಿಸಿದರು. ಅನೇಕರು ಹಸಿವಿನಿಂದ ಸತ್ತರು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಂದ ಸಾವು-ನೋವು ಅನುಭವಿಸಿದರು.

ಆಹಾರ ಮತ್ತು ಔಷಧಿಗಳಿಗೆ ಅರಣ್ಯಗಳನ್ನು ಅವಲಂಬಿಸಿರುವ ಜನರು ಅರಣ್ಯಗಳ ನಾಶದಿಂದ ಅಥವಾ ಸ್ಥಳ ಬದಲಾವಣೆಯಿಂದ ತೀವ್ರತರವಾದ ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಾರೆ. ಹವಾಗುಣ ಬದಲಾವಣೆವು ಮಣ್ಣಿನ ಲಕ್ಷಣಗಳು ಮೇಲೂ ಪ್ರಭಾವ ಬೀರಬಲ್ಲದು. ತತ್ಪರಿಣಾಮವಾಗಿ ಪರಿಸರ ವ್ಯವಸ್ಥೆಗಳ ಪ್ರಭೇದಗಳ ಸಂಯೋಜನೆಯಲ್ಲಿ ವ್ಯತ್ಯಾಸಗಳಾಗಬಹುದು ಮತ್ತು ಮಾರಕ ಕೀಟಗಳು ಮತ್ತು ರೋಗಗಳು ಹರಡಬಹುದು.


ಸಾಗರಗಳ ಮಟ್ಟ ಹೆಚ್ಚುವುದು

ಜಗತ್ತಿನಾದ್ಯಂತ ಕಡಲ ದಂಡೆಯ ಪ್ರದೇಶಗಳು ಶ್ರೀಮಂತ ಜೀವಿ ವೈವಿಧ್ಯ ಹೊಂದಿವೆ. ಅಲ್ಲದೆ ಇಲ್ಲಿ ಹಲವಾರು ಮಾನವನ ಸಾಮಾಜಿಕ-ಆರ್ಥಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಕಳೆದ ಕೆಲವು ಸಾವಿರ ವರ್ಷಗಳಲ್ಲಿ ಸಮುದ್ರ ಮಟ್ಟ ಮತ್ತು ಹಾಲಿ ಇರುವ ಬೀಸುಗಾಳಿಗಳಲ್ಲಿನ ನಿಧಾನಗತಿಯ ಬದಲಾವಣೆಗೆ ಅಳಿವೆ ಪ್ರದೇಶಗಳು, ಜೌಗು ಪ್ರದೇಶಗಳು, ಕಡಲ ತೀರಗಳು ಮತ್ತು ಇತರೆ ಪರಿಸರ ವ್ಯವಸ್ಥೆಗಳು ಚೆನ್ನಾಗಿ ಹೊಂದಿಕೊಂಡಿವೆ. ಕಳೆದ ಹಲವು ದಶಕಗಳಿಂದ ಸಮುದ್ರ ಮಟ್ಟವು ಪ್ರತಿವರ್ಷ ಸುಮಾರು ೧-೨ ಮಿ.ಮೀ. ಅಧಿಕ ವಾಗುತ್ತಿದೆ ಎಂಬುದು ದೃಢಪಟ್ಟಿದೆ. ಆದರೆ ಜಾಗತಿಕ ಬಿಸಿಯೇರುವಿಕೆಯಿಂದಾಗಿ ಸಮುದ್ರ ಮಟ್ಟವು ಇನ್ನು ಮೇಲೆ ಪ್ರತಿವರ್ಷ ೫ ಮಿ.ಮೀ. ಮತ್ತು ೨೧೦೦ರಲ್ಲಿ ೨-೯ ಮಿ.ಮೀ. ಅಧಿಕವಾಗ ಬಹುದೆಂದು ಅಂತರ ಸರ್ಕಾರಿ ಹವಾಗುಣ ಬದಲಾವಣೆಯ ಸಮಿತಿ ಅಂದಾಜು ಮಾಡಿದೆ. ಬಿಸಿಯಾದಾಗ ನೀರು ಹಿಗ್ಗುವುದೇ ಸಮುದ್ರ ಮಟ್ಟ ಅಧಿಕವಾಗುವುದಕ್ಕೆ ಪ್ರಮುಖ ಕಾರಣ. ಅಲ್ಲದೆ ಹಿಮ ಬಂಡೆಗಳು, ಹಿಮ ಹಾಸುಗಳು, ಪರ್ವತಗಳ ಮೇಲಿನ ಹಿಮ ಕರಗುವುದು ಸಮುದ್ರ ಮಟ್ಟ ಏರುವುದಕ್ಕೆ ಕಾರಣವಾಗುತ್ತಿವೆ. ಇದರಿಂದ ಖಾರಿ ಪ್ರದೇಶಗಳಲ್ಲಿ (Delta), ಅಳಿವೆ ಪ್ರದೇಶಗಳಲ್ಲಿ ಮತ್ತು ಇತರೆ ಸಿಹಿನೀರು ಮೂಲಗಳಲ್ಲಿ ದಂಡೆಗಳು ಕೊಚ್ಚಿಹೋಗುತ್ತವೆ. ಕಡಲಕೊರೆತ ಅಧಿಕವಾಗುತ್ತದೆ ಮತ್ತು ಪ್ರವಾಹಗಳು ಹೆಚ್ಚಾಗುತ್ತವೆ. ಜೊತೆಗೆ ಕಡಲುಗಳ ಮೇಲ್ಮೈ ಉಷ್ಣತೆ ಮತ್ತು ಮಹಾಸಾಗರಗಳಲ್ಲಿನ ಪರಿಚಲನೆ ಅಧಿಕವಾಗುತ್ತದೆ. ಈ ಎಲ್ಲ ಬದಲಾವಣೆಗಳು ಜಗತ್ತಿನಾದ್ಯಂತ ಮೀನು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ.

ಜೌಗು ಪ್ರದೇಶಗಳು, ಹವಳ ದಿಬ್ಬಗಳು, ಕಾಂಡ್ಲವನಗಳು, ಅಟಾಲ್‌ಗಳು ಮತ್ತು ನದಿ ಮುಖದ ಪ್ರದೇಶಗಳಂತಹ ಕಡಲ ತೀರದ ಪರಿಸರ ವ್ಯವಸ್ಥೆಗಳು ಪ್ರಮುಖವಾಗಿ ಅಪಾಯ ಎದುರಿಸಬೇಕಾಗುತ್ತದೆ. ಸಮುದ್ರ ಮಟ್ಟ ಏರುವುದರಿಂದ ಜೌಗು ಪ್ರದೇಶಗಳು ಅವನತಿ ಹೊಂದುತ್ತವೆ ಅಥವಾ ಇತರೆ ವ್ಯವಸ್ಥೆಗಳಾಗಿ ಪರಿವರ್ತನೆಯಾಗುತ್ತವೆ. ತಗ್ಗು ಪ್ರದೇಶಗಳು ಸಮುದ್ರದ ನೀರು ನಿಂತು ಹಾಳಾಗುತ್ತವೆ. ಉಕ್ಕಿದ ಕಡಲಿಂದ ಪ್ರವಾಹಗಳಾಗುತ್ತವೆ ಮತ್ತು ಸವಕಳಿಯೂ ಒಂದು ಬೃಹತ್ ಸಮಸ್ಯೆಯಾಗುತ್ತದೆ. ಪರಿಸರ ವ್ಯವಸ್ಥೆಗಳಲ್ಲಾಗುವ ಬದಲಾವಣೆಗಳಿಂದ ಜೀವವೈವಿಧ್ಯ ಮತ್ತು ಆವಾಸಗಳ ಮೇಲೆ ಹಾಗೂ ಪ್ರವಾಸೋದ್ಯಮ, ಮೀನುಗಾರಿಕೆ ಮುಂತಾದವುಗಳ ಮೇಲೆ ಪ್ರಮುಖ ದುಷ್ಪರಿಣಾಮಗಳಾಗುತ್ತವೆ. ಉಪ್ಪು ನೀರು ಒಳನುಗ್ಗುವುದರಿಂದ ಸಿಹಿನೀರಿನ ಪ್ರಮಾಣ ಮತ್ತು ಗುಣಮಟ್ಟ ಕುಸಿಯುತ್ತದೆ. ಕಡಲ ತೀರಗಳಲ್ಲಿರುವ ಫಲವತ್ತಾದ ಜಮೀನುಗಳು ಉಪ್ಪುಮಯವಾಗುವುದರಿಂದ, ಕೃಷಿಗೆ ಅಪ್ರಯೋಜಕವಾಗುತ್ತವೆ. ಕಡಲ ತೀರಗಳಲ್ಲಿ, ಪುಟ್ಟ ದ್ವೀಪಗಳಲ್ಲಿ ವಾಸಿಸುವ ಜನ ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಜನ ವಸತಿ ಹೀನರಾಗುವರು.

ಉಗ್ರವಾಗಲಿರುವ ಎಲ್‌ನಿನೊ (El Nino)

ಪೆಸಿಫಿಕ್ ಸಾಗರದಲ್ಲಿ ಉಂಟಾಗುವ ಒಂದು ವಿದ್ಯಮಾನವೇ ಎಲ್‌ನಿನೊ. ಫೆಸಿಫಿಕ್‌ನ ಉಷ್ಣಪ್ರದೇಶದ ವಾಯುಗೋಳದಲ್ಲಿನ ಉಷ್ಣತೆಯ ಪರಿಣಾಮವಾಗಿ ಸಾಗರದ ಉಷ್ಣತೆಯಲ್ಲಿ ಬದಲಾವಣೆ ಉಂಟಾದಾಗ ಎಲ್‌ನಿನೊ ಆರಂಭವಾಗುವುದು. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಹಿಂದು ಮುಂದು ಸಾಗರದಲ್ಲಿ ಈ ಬದಲಾವಣೆಗಳಾಗುವುದರಿಂದ ದಕ್ಷಿಣ ಅಮೆರಿಕಾದ ಜನ ಈ ವಿದ್ಯಮಾನವನ್ನು ಎಲ್‌ನಿನೊ ಅಂದರೆ ಪುಟ್ಟ ಬಾಲಕ ಎಂದು ಹೆಸರಿಸಿದ್ದಾರೆ !

ಎಲ್‌ನಿನೊ ಜಗತ್ತಿನ ಎಲ್ಲ ಹವಾಮಾನ ಸ್ಥಿತಿಯ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ಗಮನಿಸಲಾಗಿದೆ. ಇದು ಸುಮಾರು ನಾಲ್ಕು ವರ್ಷಗಳಿಗೊಮ್ಮೆ ಉಂಟಾಗುವುದು ಮತ್ತು ದಕ್ಷಿಣ ಅಮೆರಿಕಾದ ಪೆಸಿಫಿಕ್ ತೀರದ ಮೇಲೆ ೮ ರಿಂದ ೧೦ ತಿಂಗಳ ಕಾಲ ಪ್ರಮುಖ ಪರಿಣಾಮ ಬೀರುತ್ತದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ವಿದ್ಯಮಾನ ಉಂಟಾಗುವ ಸಮಯದಲ್ಲಿ ಬದಲಾಗಿದೆ. ಬೇಗ ಬೇಗ ಉಂಟಾಗುತ್ತಿದೆ. ವಾಯುಗುಣ ಬದಲಾವಣೆಯೇ ಈ ವ್ಯತ್ಯಾಸಕ್ಕೆ ಕಾರಣವೆನ್ನಲಾಗಿದೆ. ಹಾಗಾಗಿ ಎಲ್‌ನಿನೊ ಉಗ್ರವಾಗಲಿದೆ.

ವಾಣಿಜ್ಯ ಮಾರುತಗಳು ಸಾಮಾನ್ಯವಾಗಿ ಪೆಸಿಫಿಕ್ ಸಾಗರದ ಪಶ್ಚಿಮದ ಕಡೆ ಬೀಸುತ್ತಿರುತ್ತವೆ. ಇದರಿಂದ ಸಾಗರದ ಬಿಸಿಯಾದ ಮೇಲ್ಮೈ ನೀರನ್ನು ದಕ್ಷಿಣ ಅಮೆರಿಕಾದ ಕರಾವಳಿಯಿಂದ ದೂರ ನೂಕಲ್ಪಡುವುದು. ಪೆರುದೇಶ ಕಡಲ ತೀರದಲ್ಲಿ ಪೋಷಕಾಂಶಭರಿತ ತಂಪಾದ ನೀರಿದ್ದು, ಇದು ವೈವಿಧ್ಯಮಯ ಕಡಲ ಜೀವಿಗಳಿಗೆ ಆಧಾರವಾಗಿದೆ.

ಎಲ್‌ನಿನೊ ಸಮಯದಲ್ಲಿ ವಾಣಿಜ್ಯ ಮಾರುತಗಳು ಮಂದಗತಿ ಹೊಂದುತ್ತವೆ. ಮೇಲ್ಭಾಗದಲ್ಲಿ ಬಿಸಿನೀರು ಶೇಖರಣೆಯಾಗುತ್ತದೆ. ಇದರಿಂದ ಪೋಷಕಾಂಶಗಳು ಪ್ಲಾವಕ ಜೀವಿಗಳು ಮತ್ತು ಮೀನುಗಳ ಪ್ರಮಾಣದ ಕುಸಿತ ಉಂಟಾಗುವುದು. ಅಲ್ಲದೆ ಇದು ಹವಾಮಾನ ಬದಲಾವಣೆಗೂ ಕಾರಣವಾಗುವುದು.  ಈ ಸಮಯದಲ್ಲಿ ವಿಶ್ವದಲ್ಲಾಗುವ ಅನೇಕ ರೀತಿಯ ಅನಾಹುತಗಳಿಗೆ ಎಲ್‌ನಿನೋ ಕಾರಣವೆಂದು ತರ್ಕಿಸಲಾಗಿದೆ. ೧೯೯೭-೯೮ರಲ್ಲಿ ಉಂಟಾದ ಎಲ್‌ನಿನೊ ವಿದ್ಯಮಾನವು ಅತಿ ಆಘಾತಕಾರಿಯಾಗಿತ್ತು. ಪ್ರಚಂಡ ಚಂಡಮಾರುತಗಳು ಚೀನಾವನ್ನು ಅಪ್ಪಳಿಸಿದವು. ಪ್ರವಾಹಗಳಿಂದ ಅಮೆರಿಕಾ ತತ್ತರಿಸಿತು. ಆಗ್ನೇಯ ಏಷ್ಯಾದಲ್ಲಿ ಬೃಹತ್ ಕಾಳ್ಗಿಚ್ಚುಗಳು ಉಂಟಾದವು ಮತ್ತು ಕಳೆದ ೫೦ ವರ್ಷಗಳಲ್ಲೇ ಭೀಕರವಾದ ಬರಗಾಲ ಇಂಡೊನೇಷ್ಯಾವನ್ನು ಕಾಡಿತು. ಪೆಸಿಫಿಕ್ ಪ್ರದೇಶದಲ್ಲಿ ವಾಯುಭಾರ ಒತ್ತಡ ಹೆಚ್ಚಾದಾಗ, ಹಿಂದೂ ಮಹಾಸಾಗರದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಮಾನ್‌ಸೂನ್ (ಮಲಯ) ಮಾರುತಗಳ ಚಲನೆಯ ಮೇಲೆ ಪ್ರಭಾವ ಉಂಟಾಗುವುದು.

ಮುಳುಗಲಿರುವ ದ್ವೀಪಗಳು

ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಕಿರಿಬಟಿ ಎಂಬ ದ್ವೀಪಗಳ ರಾಷ್ಟ್ರವಿದೆ. ಅಲ್ಲಿ ಟೇಬು ತರವ ಮತ್ತು ಅಬನುಮಿಯೆ ಎಂಬ ಹೆಸರಿನ ಎರಡು ಮಾನವ ರಹಿತ ದ್ವೀಪಗಳು ಸಮುದ್ರ ಮಟ್ಟ ಏರಿದ್ದರ ಪರಿಣಾಮವಾಗಿ ೧೯೯೯ರ ಜೂನ್ ತಿಂಗಳಲ್ಲಿ ಮುಳುಗಿ ಹೋದವು. ಈ ದ್ವೀಪಗಳ ಹೆಸರಿನ ಅರ್ಥ ‘ಚಿರಂತನ ಕಡಲ ದಂಡೆ’ ಎಂಬುದಾಗಿತ್ತು ! ಮಾನವನಿರುವ ಮತ್ತೊಂದು ದ್ವೀಪ ತುಲವು ಈಗ ಮುಳುಗಡೆಯ ಅಂತಿಮ ಹಂತದಲ್ಲಿದೆ.

ಬಿಸಿ ಭೂಮಿಯಿಂದಾಗಿ ಅಪಾಯಕ್ಕೊಳಗಾಗಿರುವ ಜೀವಿಗಳು

ವಾಯುಗುಣ ಬದಲಾವಣೆಯಿಂದ ಪ್ರತಿ ಮೂರು ಪಕ್ಷಿಗಳಲ್ಲಿ ಒಂದು, ಅರ್ಧದಷ್ಟು ದ್ವಿಚರಿಗಳು ಮತ್ತು ಹವಳ ಜೀವಿಗಳಲ್ಲಿ ಮುಕ್ಕಾಲು ಭಾಗ ಅಪಾಯಕ್ಕೆ ಒಳಗಾಗಲಿವೆ.

IUCN ಅಧ್ಯಯನದಿಂದ ಈ ಕೆಳಕಂಡ ಅಂಶಗಳು ಬೆಳಕಿಗೆ ಬಂದಿವೆ.

೧. ವಿಶ್ವದಲ್ಲಿರುವ ೯೮೫೬ ಪಕ್ಷಿ ಪ್ರಭೇದಗಳಲ್ಲಿ ೩,೪೩೮ ಪಕ್ಷಿಗಳ ೧೧ ಲಕ್ಷಣಗಳಲ್ಲಿ ಕನಿಷ್ಠ ಪಕ್ಷ ಒಂದು ಲಕ್ಷಣವು ಹವಾಗುಣ ಬದಲಾವಣೆಯ ಹೊಡೆತಕ್ಕೆ ಒಳಗಾಗುತ್ತಿದೆ.

೨. ವಿಶ್ವದಲ್ಲಿರುವ ೬,೨೨೨ ದ್ವಿಚರಿಗಳಲ್ಲಿ ೩,೨೧೭ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.

೩. ಹವಳ ದಿಬ್ಬ ನಿರ್ಮಾಣ ಮಾಡುವ ೭೯೯ ಹವಳ ಜೀವಿಗಳಲ್ಲಿ ೫೬೮ ಪ್ರಭೇದಗಳು ಅಪಾಯಕ್ಕೆ ತುತ್ತಾಗಲಿವೆ.

ಕಡಲ ಜೀವಿಗಳ ಮೇಲಿನ ಪರಿಣಾಮಗಳು

ಹವಳ ಜೀವಿಗಳು : ಸಮುದ್ರದ ಮಟ್ಟ ಏರಿದಂತೆ ಹವಳ ಜೀವಿಗಳ ಬೆಳವಣಿಗೆ ಹೆಚ್ಚಾಗುವುದು. ಆದರೆ ಹವಳ ಜೀವಿಗಳು ಅಧಿಕ ಉಷ್ಣತೆಯನ್ನು ಸಹಿಸಲಾರವು. ಏರುತ್ತಿರುವ ಉಷ್ಣತೆಯಿಂದ ಹವಳ ಜೀವಿಗಳು ನಾಶವಾಗಲಿವೆ. ಇವು ನೀರಿನ ಅಧಿಕ ಉಷ್ಣತೆ ಮತ್ತು ಮಾಲಿನ್ಯಕ್ಕೆ ತುಂಬ ಸೂಕ್ಷ್ಮ ಸ್ವಭಾವದವು. ಎಲ್‌ನಿನೊ ಸಂದರ್ಭದಲ್ಲಿ ಉಷ್ಣತೆ ಅಧಿಕವಾದಾಗ ಈ ಪರಿಣಾಮವನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಆಸ್ಟ್ರೇಲಿಯಾದ ಕಡಲ ತೀರದಿಂದ ದೂರದಲ್ಲಿರುವ ‘ಗ್ರೇಟ್ ಬ್ಯಾರಿಯಲ್ ರೀಫ್’ ಎಂಬ ಹವಳ ದಿಬ್ಬಗಳಲ್ಲಿ ಬೃಹತ್ ಅವನತಿ ೧೯೯೮ರಲ್ಲಿ ಉಂಟಾಯಿತು. ಅಲ್ಲದೆ ವಿಶ್ವದ ಹಲವಾರು ಸ್ಥಳಗಳಲ್ಲಿ ಹವಳ ಜೀವಿಗಳು ಸತ್ತು ಸುಣ್ಣವಾಗಿದ್ದು ಭೂಗೋಳಿಕ ಇತಿಹಾಸದಲ್ಲಿಯೇ ದಾಖಲೆಯಾಗಿದೆ.

ಸಾಲ್ಮನ್ : ತಂಪಾದ ನೀರಿನಲ್ಲಿ ಸಾಲ್ಮನ್ ಮೀನು ಚೆನ್ನಾಗಿ ಬದುಕುತ್ತದೆ. ಹವಾಗುಣ ಬದಲಾವಣೆಗೆ ಈ ಮೀನು ತುಂಬ ಸೂಕ್ಷ್ಮ. ಹವಾಗುಣ ಬದಲಾವಣೆಯಿಂದಾಗಿ ಸಾಗರದ ನೀರಿನ ಉಷ್ಣತೆಯು ಅಧಿಕಗೊಳ್ಳುವುದರಿಂದ ಸಾಲ್ಮನ್ ಮೀನಿಗೆ ಅಪಾಯ ಕಾದಿದೆ. ಈ ಮೀನು ಸಂತಾನೋತ್ಪತ್ತಿ ಮಾಡುವಾಗ ಮತ್ತು ತತ್ತಿಗಳನ್ನು ಇಡುವಾಗ ಸ್ಥಿರವಾದ ಪರಿಸ್ಥಿತಿ ಇರಬೇಕು. ಇಲ್ಲವಾದಲ್ಲಿ ಮೊಟ್ಟೆ ಗಳು ಸಾಯುತ್ತವೆ. ಮೀನಿನ ವಲಸೆ ಹಂತದಲ್ಲಿ ನೀರಿನ ಉಷ್ಣತೆ ಅಧಿಕವಾಗು ವುದರಿಂದ ಮತ್ತು ನೀರಿನ ಹರಿತದಲ್ಲಿ ಕಡಿಮೆಯಾಗುವುದರಿಂದ ಸಾವುಂಟಾಗುತ್ತದೆ. ಹೆಣ್ಣುಮೀನು ಮೊಟ್ಟೆ ಇಡುವುದನ್ನು ಮತ್ತು ಗಂಡು ಮೀನು ವೀರ್ಯ ಸುರಿಸಿ ಮೊಟ್ಟೆಗಳು ಫಲವಂತ ಮೊಟ್ಟೆಗಳನ್ನಾಗಿ ಮಾಡುವ ಕ್ರಿಯೆಯನ್ನು ಸ್ಪಾನಿಂಗ್ ಎನ್ನುವರು. ಈ ಕ್ರಿಯೆ ಸಾಲ್ಮನ್ ಮೀನಿನಲ್ಲಿ ವಿಶಿಷ್ಟವಾಗಿರುವುದು. ಏಕೆಂದರೆ ಸಾಗರಗಳಲ್ಲಿದ್ದ ಪ್ರೌಢ ಸಾಲ್ಮನ್ ಮೀನುಗಳು ನದಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಈಜುತ್ತಾ ಇಳಿಜಾರುಗಳನ್ನು ಏರುತ್ತಾ ನದಿಗಳ ಮೂಲ ಸ್ಥಳಗಳಲ್ಲಿನ ಇಳುಕಲುಗಳಲ್ಲಿ ಮೊಟ್ಟೆಗಳನ್ನಿಡುತ್ತವೆ. ಈ ರೀತಿ ತಾವು ಹುಟ್ಟಿದ ಸ್ಥಳಕ್ಕೆ ಏರಿ ಬರುವುದೇ ಪ್ರಕೃತಿಯ ಒಂದು ಪವಾಡ. ಅವು ನೀರಿನೊಳಗಿನ ವಾಸನೆಯ ಬೆನ್ನತ್ತಿ ಬರುತ್ತವೆ ಎಂದು ಅಧ್ಯಯನಗಳು ತೋರಿವೆ.

ಪ್ರಾಣಿಪ್ಲಾವಕ ಜೀವಿಗಳು (Zooplankton) : ಸಮುದ್ರದ ಮೇಲ್ಮೈ ನೀರಿನಲ್ಲಿ ತೇಲುವ ಮತ್ತು ಸಸ್ಯ ಪ್ಲಾವಕ ಜೀವಿಗಳನ್ನು ತಿಂದು ಬದುಕುವ ಕೋಪಪಾಡ್ ಮತ್ತು ಕ್ರಿಲ್‌ನಂತಹ ಪುಟ್ಟ ಪ್ರಾಣಿಗಳನ್ನು ಪ್ರಾಣಿ ಪ್ಲಾವಕ ಜೀವಿಗಳೆನ್ನುವರು. ಸಾಗರಗಳ ಉಷ್ಣತೆ ಅಧಿಕವಾಗುತ್ತಿರುವುದರಿಂದ ಸಸ್ಯಪ್ಲಾವಕಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದ್ದರಿಂದ ಪ್ಲಾಣಿ ಪ್ಲಾವಕಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಆ ಪ್ರದೇಶದಲ್ಲಿ ಇವನ್ನು ತಿಂದು ಬದುಕುತ್ತಿದ್ದ ಮೀನು ಮತ್ತು ಕಡಲ ಪಕ್ಷಿಗಳ ಸಂಖ್ಯೆಯೂ ಕಡಿಮೆಯಾಗಿದೆ.

ಕೃಷಿ ಮತ್ತು ಆಹಾರ ಉತ್ಪಾದನೆಯಲ್ಲಿ ಕುಸಿತ

ಮಾನವ ಜನಸಂಖ್ಯೆಯ ತೀವ್ರ ಹೆಚ್ಚಳದಿಂದ ಇನ್ನು ಕೆಲವು ದಶಕಗಳಲ್ಲಿ ಆಹಾರದ ಬೇಡಿಕೆಯು ಎರಡು ಪಟ್ಟಾಗುವುದೆಂದು ನಿರೀಕ್ಷಿಸಲಾಗಿದೆ. ಹವಾಗುಣದಲ್ಲಿನ ಗಣನೀಯ ಬದಲಾವಣೆಯಿಂದ ಕೃಷಿಯ ಮೇಲೆ ಪ್ರಮುಖ ಪರಿಣಾಮ ಉಂಟಾಗಬಹುದು ಮತ್ತು ವಿಶ್ವದ ಆಹಾರ ಉತ್ಪಾದನೆಯೇ ಇಳಿಮುಖವಾಗಬಹುದು.

ಅಧಿಕ ಪ್ರಮಾಣದ ಜಮೀನನ್ನು ಕೃಷಿಗೆ ಒಳಪಡಿಸುವುದರಿಂದ ನೈಸರ್ಗಿಕ ಪರಿಸರ ವ್ಯವಸ್ಥೆಗಳ ಮೇಲೆ ಒತ್ತಡ ಅಧಿಕವಾಗುವುದು. ಕೃಷಿ ಸಂಬಂಧಿತ ಚಟುವಟಿಕೆಗಳಿಂದ ಬರುವ ಹಸಿರು ಮನೆ ಅನಿಲಗಳ ಪ್ರಮಾಣವೂ ಅಧಿಕವಾಗುವುದು. ಅರಣ್ಯಗಳು ಅಪರೂಪವಾಗುವುದರಿಂದ ಕಾರ್ಬನ್ ಹೀರುವ ನೈಸರ್ಗಿಕ ಕ್ರಿಯೆ ಕುಂಠಿತಗೊಳ್ಳುವುದು. ತತ್ಪ್ರಯುಕ್ತ ಉಷ್ಣತೆಯಲ್ಲಿ ಬದಲಾವಣೆಗಳಾಗುತ್ತವೆ. ಅಧಿಕ ಉಷ್ಣತೆ, ಅಧಿಕ ಮಳೆ, ಪ್ರವಾಹಗಳು, ಬರಗಾಲಗಳು, ಚಂಡಮಾರುತಗಳು, ವಾಯುಭಾರ ಕುಸಿತಗಳಂತಹ ತೀವ್ರ ಹವಾಗುಣದಿಂದ ಧಾನ್ಯಗಳ ಉತ್ಪಾದನೆ ಪರಿಣಾಮಕ್ಕೊಳಗಾಗುವುದು. ಉಷ್ಣತೆಯ ಏರಿಕೆ ಮತ್ತು ಅತಿ ಮಳೆಯು ಬೆಳೆಯನ್ನು ನಾಶಪಡಿಸುತ್ತದೆ. ಆಗಾಗ್ಗೆ ಅಥವಾ ನಿರಂತರವಾಗಿ ಬರಗಾಲ ಬೀಳುವುದರಿಂದ ನೀರಿನ ತೀವ್ರ ಸಮಸ್ಯೆ ಉಂಟಾಗುವುದು. ಸಸ್ಯಗಳ ಬಾಷ್ಪೀಕರಣಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುವುದು.

ಆಧುನಿಕ ಕೃಷಿ ಪದ್ಧತಿಯಿಂದ ಮಣ್ಣಿನ ಮೇಲೆ ಅಧಿಕ ಒತ್ತಡ ಉಂಟಾಗಿದೆ. ತತ್ಪ್ರಯುಕ್ತ ರಾಸಾಯನಿಕ ಮತ್ತು ಜೈವಿಕ ಸಂಯೋಜನೆಗಳು ಹರಿವ ನೀರಿನಲ್ಲಿ ಸೇರುವ, ಮಣ್ಣು ಕ್ಷಾರೀಯತೆ, ಮಣ್ಣಿನ ಸವಕಳಿ ಮತ್ತು ಜೌಳಾಗುವಿಕೆಯಂತಹ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ಸಮುದ್ರದ ಮಟ್ಟ ಏರುವುದರಿಂದ ಕಡಲ ತೀರದಲ್ಲಿರುವ ತಗ್ಗಿನ ಪ್ರದೇಶಗಳಲ್ಲಿ ಕಡಲು ಪ್ರವಾಹದಿಂದ ನೀರು ತುಂಬಿಕೊಳ್ಳುತ್ತದೆ ಮತ್ತು ಕೃಷಿ ಭೂಮಿ ಚೌಳಾಗುವುದು.

ತಾಪ ಹೆಚ್ಚಾದಾಗ ಕೀಟಗಳಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿ ಅವುಗಳ ಸಂತಾನವೂ ಅಧಿಕವಾಗುವುದು. ಬೇಸಗೆ ಇರುವ ದಿನಗಳ ಸಂಖ್ಯೆ ಹೆಚ್ಚಾದಂತೆ ಮಿಡತೆಗಳಂತಹ ಹಾವಳಿ ಕೀಟಗಳು ಸಂತಾನ ಅಭಿವೃದ್ಧಿಯ ಚಕ್ರಗಳನ್ನು ಹೆಚ್ಚು ಪೂರೈಸಿಕೊಳ್ಳುತ್ತವೆ. ಹಾಗಾಗಿ ಅವುಗಳ ಸಂಖ್ಯೆ ಒಂದು ಋತುಗಾಲದಲ್ಲಿ ಗಣನೀಯವಾಗಿ ಹೆಚ್ಚಾಗುತ್ತದೆ. ಬೀಸುವ ಗಾಳಿಯ ದಿಕ್ಕುಗಳಲ್ಲಿ ಬದಲಾವಣೆಯಾಗುವುದರಿಂದ ಗಾಳಿಯೊಡನೆ ಇತರೆ ಕಡೆ ಹರಡುವ ಹಾಗೂ ಬೆಳೆಗಳಿಗೆ ರೋಗ ಉಂಟು ಮಾಡುವ ಕೀಟಗಳು, ಬೂಸ್ಟು ಮತ್ತು ಬ್ಯಾಕ್ಟೀರಿಯಾಗಳು ವಿತರಣೆಯಲ್ಲಿಯೂ ಬದಲಾವಣೆಗಳಾಗುತ್ತವೆ. ಮಣ್ಣು ಮತ್ತು ಜಲ ಮೂಲಗಳ ಅವನತಿಯು ಕೃಷಿಯ ಮೇಲೆ ಮತ್ತಷ್ಟು ಒತ್ತಡ ಸೃಷ್ಟಿಸುವುದು.

ಉಷ್ಣ ಪ್ರದೇಶದ ಕೃಷಿಯು ಅಧಿಕಗೊಳ್ಳುತ್ತಿರುವ ಉಷ್ಣತೆಯಿಂದ ದುಷ್ಪರಿಣಾಮಗಳನ್ನು ಅನುಭವಿಸುವುದು. ಉಷ್ಣತೆ ಅಧಿಕವಾದರೆ ಭತ್ತದಂತಹ ಬೆಳೆ ಉತ್ಪಾದನೆಯಲ್ಲಿ ಕುಸಿತ ಉಂಟಾಗುವುದು.

ಎತ್ತರದ ಅಕ್ಷಾಂಶ ಪ್ರದೇಶದಲ್ಲಿ ಬೆಳೆ ಬೆಳೆಯುವ ಕಾಲಾವಧಿ ದೀರ್ಘವಾಗುವುದು ಮತ್ತು ಚಳಿಗಾಲದ ಅವಧಿ ಕಡಿಮೆಯಾಗುವುದು ಮತ್ತು ಸಸ್ಯಗಳು ವೇಗವಾಗಿ ಬೆಳೆಯುತ್ತವೆ. ಈ ಪ್ರದೇಶಗಳಲ್ಲಿ ಏರಿದ ಉಷ್ಣತೆಯಿಂದ ಕೃಷಿಗೆ ಲಾಭವಾಗುವುದು. ಇಳುವರಿ ಇಲ್ಲಿ ಅಧಿಕವಾಗುವುದೆಂದು ನಿರೀಕ್ಷಿಸಲಾಗಿದೆ. ಆದರೆ ಕೆಲವು ಪ್ರಭೇದಗಳು ಎತ್ತರದ ಪ್ರದೇಶಗಳಿಗೆ ವಲಸೆ ಹೋಗುವುದರಿಂದ ಮತ್ತು ಅದರಿಂದ ಪರಿಸರ ವ್ಯವಸ್ಥೆಗಳ ಸಂಬಂಧಗಳಲ್ಲಿ ಉಂಟಾದ ವ್ಯತ್ಯಾಸಗಳಿಂದ ಹಲವು ಸಮಸ್ಯೆಗಳು ತಲೆದೋರಬಹುದು. ಕೆಲವು ಕೀಟ, ಕಳೆ ಮತ್ತು ಸಸ್ಯಗಳ ಪ್ರವೇಶದಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಆಗಬಹುದು. ಹಸಿರುಮನೆ ಅನಿಲಗಳ ಅಧಿಕ ಶೇಖರಣೆಯು ಸಸ್ಯಗಳ ಬೆಳವಣಿಗೆಯ ಮೇಲೆ ನೇರ ಪ್ರಭಾವ ಬೀರುತ್ತದೆ. ಆದ್ದರಿಂದ ಆಹಾರ ಧಾನ್ಯಗಳ ಉತ್ಪಾದನೆಯ ಮೇಲೆ ಪ್ರಭಾವವಿರುತ್ತದೆ. ವಾಯುಗೋಳದಲ್ಲಿ CO2 ಅಧಿಕವಾಗುವುದರಿಂದ ಕೆಲವು ಸಸ್ಯಗಳು ಚೆನ್ನಾಗಿ ಬೆಳೆಯಲು ಸಹಾಯವಾಗುವುದು ಮತ್ತು ಹೊಂದಿಕೊಳ್ಳಲಾಗದ ಸಸ್ಯಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಹದಗೆಡಲಿರುವ ಆರೋಗ್ಯ ಮತ್ತು ಕಾಡಲಿರುವ ರೋಗಗಳು

ಸ್ಥಳೀಯ ಹವಾಮಾನ ಪರಿಸ್ಥಿತಿಯು ಮಾನವನ ಜನಸಂಖ್ಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಭಾರತದಲ್ಲಿ ಗಮನಿಸಿರುವಂತೆ ಉಷ್ಣತೆಯು ಅಧಿಕವಾದಾಗ ಉಷ್ಣ ಸಂಬಂಧಿತ ರೋಗಗಳ ಬಾಧೆ ಹೆಚ್ಚಾಗುವುದು ಮತ್ತು ಮರಣ ಪ್ರಮಾಣವೂ ಅಧಿಕಗೊಳ್ಳುವುದು. ವಿಪರ‍್ಯಾಸವೆಂದರೆ ಚಳಿಗಾಲದ ಉಷ್ಣತೆ ಕುಸಿದಾಗಲೂ ಮರಣ ಪ್ರಮಾಣ ಅಧಿಕವಾಗುವುದು. ಸಾಂಕ್ರಾಮಿಕಗಳು ಎಲ್ಲಿ ಮತ್ತು ಯಾವಾಗ ಹರಡುತ್ತವೆ ಎಂಬುದನ್ನು ಹವಾಮಾನ ತೀರ್ಮಾನಿಸುತ್ತದೆಂದು ಪ್ರಖ್ಯಾತ ಗ್ರೀಕ್ ತತ್ವಜ್ಞಾನಿ ಹಾಗೂ ಚಿಂತಕನಾದ ಹಿಪೊಕ್ರೇಟಸ್ ಹೇಳಿದ್ದಾನೆ. ಇಂದಿಗೂ ವಿಶ್ವದಾದ್ಯಂತ ಇರುವ ವಿಜ್ಞಾನಿಗಳು ಈ ಹೇಳಿಕೆ ಸತ್ಯವೆಂದು ಹೇಳುತ್ತಾರೆ. ಸೊಳ್ಳೆಯಿಂದ ಹರಡುವ ರೋಗಗಳು ಸಾಮಾನ್ಯವಾಗಿ ಬಿಸಿಯಾದ ಹವಾಮಾನದೊಂದಿಗೆ ತಳುಕು ಹಾಕಿಕೊಂಡಿವೆ. ಕರಳು ಸಂಬಂಧಿ ರೋಗಗಳಾದ ಕಾಲರಾ ಮತ್ತು ಟೈಪಾಯ್ಡ್‌ಗಳು ಮಳೆಯೊಂದಿಗೆ, ಪ್ಲೂ ಅಥವಾ ಇಂಪ್ಲೂಯೆಂಜ ತಂಪು ಹವಾಮಾನದೊಂದಿಗೆ ಮತ್ತು ವೈರಸ್ ಜ್ವರವು ಋತುಗಾಲದ ಬದಲಾವಣೆಯ ಸಮಯದೊಂದಿಗೆ ತಳುಕು ಹಾಕಿಕೊಂಡಿವೆ. ಪ್ರವಾಹ ಮತ್ತು ಬರಗಾಲಗಳಿಂದ ಸಾಂಕ್ರಾಮಿಕಗಳೂ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ವಾಹನ ಮತ್ತು ಕೈಗಾರಿಕೆಗಳಿಂದ ಹೊರಬರುವ ಅನಿಲಗಳಿಂದ ನಗರಗಳಲ್ಲಿನ ವಾಯುಮಂಡಲ ಅಧಿಕವಾಗಿ ಮಲಿನಗೊಂಡಿದೆ. ದೊಡ್ಡ ನಗರಗಳಲ್ಲಿ ಧೂಳಿನ ಕವಳವು ಒಂದು ದೊಡ್ಡ ಸಮಸ್ಯೆಯಾಗಿದೆ. ವಿವಿಧ ಅನಿಲಗಳು ನೀರಾವಿ ಮತ್ತು ಧೂಳಿನೊಡನೆ ಸೇರುವುದರಿಂದ ಸ್ಮಾಗ್ ಎಂಬ ಧೂಳಿನ ಕವಳ ಉಂಟಾಗುವುದು. ಫಾಸಿಲ್ ಇಂಧನಗಳನ್ನು ದಹನ ಮಾಡಿದಾಗ ಧೂಳಿನ ಕವಳಕ್ಕೆ ಕಾರಣವಾಗುವ ಅನಿಲಗಳು ಬಿಡುಗಡೆಯಾಗುತ್ತವೆ.

ವಾಯುಗುಣ ಬದಲಾವಣೆಯು ನಗರಗಳ ವಾಯುಮಾಲಿನ್ಯದ ದುಷ್ಪರಿಣಾಮಗಳನ್ನು ಅಧಿಕಗೊಳಿಸಿ ಮಾನವನ ಆರೋಗ್ಯವನ್ನೂ ಹದಗೆಡಿಸಬಲ್ಲದು. ಹವಾಮಾನದ ಏರುಪೇರು ಪ್ರಮುಖವಾಗಿ ಉಷ್ಣತೆ, ಮಳೆ ಪ್ರಮಾಣ ಮತ್ತು ತೇವಾಂಶ ; ಸಾಂಕ್ರಾಮಿಕ ರೋಗಗಳು ಹೆಚ್ಚಾಗುವುದಕ್ಕೆ ಮತ್ತು ಹರಡುವುದಕ್ಕೆ ಕಾರಣವಾಗಬಲ್ಲವು. ವಾಸ್ತವವಾಗಿ ಹವಾಗುಣ ಬದಲಾವಣೆಯಿಂದಾಗುವ ಪರಿಣಾಮವನ್ನು ಗ್ರಾಮೀಣ ಜನರಿಗಿಂತ ನಗರದ ಜನ ಹೆಚ್ಚು ಅನುಭವಿಸುವರೆಂದು ನಂಬಲಾಗಿದೆ. ನಗರ ಪ್ರದೇಶಗಳಲ್ಲಿ ಸಿಮೆಂಟ್ ಕಟ್ಟಡಗಳು, ಪಾದಚಾರಿ ರಸ್ತೆಗಳು, ಟಾರ್ ರಸ್ತೆಗಳು ಮತ್ತು ಅದೇ ರೀತಿಯ ಇತರೆ ಚಟುವಟಿಕೆಗಳಿಂದ ‘ಉಷ್ಣ ದ್ವೀಪಗಳು’ (heat  islands) ಸೃಷ್ಠಿಯಾಗಿವೆ. ಇವೆಲ್ಲವು ಉಷ್ಣತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ಅನೇಕ ರೋಗಗಳು ಅಧಿಕವಾಗುವುದಕ್ಕೆ ಕಾರಣವಾಗುತ್ತವೆ. ವಯೋವೃದ್ಧರು, ಮಕ್ಕಳು ಮತ್ತು ಹೃದಯ ಸಂಬಂಧೀ ಸಮಸ್ಯೆಗಳಿರುವ ಜನರು ಹೆಚ್ಚಿನ ದುಷ್ಪರಿಣಾಮ ಅನುಭವಿಸಬೇಕಾಗುವುದು.

ಕೀಟಗಳ ಉಷ್ಣ ಆವಾಸ ವಲಯವು ಎರಡೂ ಧ್ರುವಗಳ ಕಡೆ ವಿಸ್ತರಿಸುವುದರಿಂದ, ಕೀಟಗಳಿಂದ ಹರಡುವ ರೋಗಗಳು ಉಲ್ಬಣಗೊಳ್ಳುತ್ತವೆ. ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಅನೇಕ ಸಾಂಕ್ರಾಮಿಕ ರೋಗಗಳು, ವಿಶೇಷವಾಗಿ ಸೊಳ್ಳೆಗಳಿಂದ ಹರಡುವ ರೋಗಗಳು ವಾಯುಗುಣ ಬದಲಾವಣೆಗಳಿಗೆ ತುಂಬ ಸೂಕ್ಷ್ಮತೆಯನ್ನು ಹೊಂದಿವೆ. ಮಾನವನ ಅತ್ಯಂತ ಘೋರ ಮತ್ತು ಎಲ್ಲ ಕಡೆಯೂ ಕಾಡುತ್ತಿರುವ ಮಾನವನ ಆರೋಗ್ಯ ಸಮಸ್ಯೆಗಳಲ್ಲಿ ಮಲೇರಿಯ ಪ್ರಮುಖವಾದುದು. ಹವಾಗುಣ ಪರಿಸ್ಥಿತಿಯು ಮಲೇರಿಯಾ ಹರಡುವಿಕೆಯ ಮೇಲೆ ಪ್ರಮುಖ ಪರಿಣಾಮ ಬೀರಲಿದೆ.  ಹರಿಷಿಣದ ಜ್ವರ ಮತ್ತು ಮಿದುಳ ಜ್ವರದ ಜೊತೆಗೆ ಸೊಳ್ಳೆಯಿಂದ ಹರಡುವ ಮತ್ತೊಂದು ರೋಗ ಡೆಂಗ್ಯೂ ಜ್ವರ ಕಳೆದ ಕೆಲವು ವರ್ಷಗಳಲ್ಲಿ ಉಲ್ಬಣಗೊಳ್ಳುತ್ತಿದೆ. ರೋಗ ಹರಡುವ ಮಧ್ಯಂತ ಪ್ರಾಣಿಯ ಸಹಾಯವಿಲ್ಲದೆ ಬರುವ ರೋಗಗಳಾದ ಸಾಲ್ಮನೆಲ, ಗೆಯಾರ್ಡಿಸ್, ಕಾಲರ ಮತ್ತು ವಿವಿಧ ವೈರಸ್ ರೋಗಗಳು ಸಹ ಇತ್ತೀಚೆಗೆ ಹೆಚ್ಚಾಗುತ್ತಿವೆ. ವಾಯುವಿನಲ್ಲಿ ಹೆಚ್ಚಾಗುವ ಉಷ್ಣತೆ ಮತ್ತು ತೇವಾಂಶದಿಂದ ಈ ರೋಗಗಳ ಹಾವಳಿ ಹೆಚ್ಚಾಗುತ್ತದೆ. ಹವಾಗುಣ ಬದಲಾವಣೆಯಿಂದ ಇಲಿಗಳಿಂದ ಹರಡಲ್ಪಡುವ ಪ್ಲೇಗ್‌ನಂತಹ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಸ್ತರಗೋಳದಲ್ಲಿ (Stratosphere) ಓಜ಼ೋನ್ ಪದರ ತೆಳುವಾಗುವುದರಿಂದ ಯು.ವಿ. ಕಿರಣಗಳು ಭೂವಾತಾವರಣಕ್ಕೆ ಪ್ರವೇಶಿಸುವುದು ಅಧಿಕವಾಗಿದೆ. ಅದರಿಂದಾಗಿ ಎತ್ತರ ಪ್ರದೇಶಗಳಲ್ಲಿ ವಾಸಿಸುತ್ತಿರುವವರಲ್ಲಿ ಚರ್ಮದ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ಕಣ್‌ಪೊರೆಯಂತಹ ಕಣ್ಣಿನ ರೋಗಗಳು ಸಹ ಅಧಿಕವಾಗಬಹುದು.


ಲಂಡನ್ನಿನ ಬೃಹತ್ ಧೂಳುಕವಳ

೧೯೫೨ರಲ್ಲಿ ಲಂಡನ್‌ನಗರದಲ್ಲಾದ ಧೂಳಿನ ಕವಳವು ನಾಲ್ಕು ದಿನ ಹಾಗೆಯೇ ಇತ್ತು. ಇದು ೪೦೦೦ ಜನರನ್ನು ಬಲಿ ತೆಗೆದುಕೊಂಡಿತು. ಕೈಗಾರಿಕಾ ಕ್ರಾಂತಿಯಾದಂದಿನಿಂದ ೧೯ನೇ ಶತಮಾನದವರೆಗೆ ನಡೆದ ದುರಂತಗಳಲ್ಲಿ ಇದು ಒಂದು ದೊಡ್ಡ ದುರಂತ. ಬ್ರಿಟನ್ ಹಾಗೂ ಸುತ್ತಲ ಪ್ರದೇಶದ ಮೇಲೆ ಈ ಧೂಳಿನ ಕವಳ -ಸ್ಮಾಗ್ ಉಂಟಾಯಿತು. ಗೃಹೋಪಯೋಗಕ್ಕೆ ಮೊದಲು ಉರುವಲು ಸೌದೆಯನ್ನು ಬಳಸುತ್ತಿದ್ದರು. ಅನಂತರ ಬಿಟುಮಿನಸ್ ಕಲ್ಲಿದ್ದಲಿನಂತಹ ಕಡಿಮೆ ದರ್ಜೆಯ ಇಂಧನವನ್ನು ಮನೆಯನ್ನು ಬೆಚ್ಚಗಿಡಲು ಮತ್ತು ಅಡಿಗೆ ಮಾಡಲು ಬಳಸಿದರು. ಇದರಿಂದ ಅಗಾಧ ಪ್ರಮಾಣದ ಹೊಗೆ, ಧೂಳು ವಾತಾವರಣವನ್ನು ಸೇರಿತು. ಆ ಸಮಯಕ್ಕಾಗಲೇ ಕೈಗಾರಿಕೆಗಳ ಯಂತ್ರಗಳು ಅಪಾರವಾಗಿ ಕಲ್ಲಿದ್ದಲನ್ನು ಅವಲಂಬಿಸಿದ್ದವು. ಹೀಗೆ ಕಲ್ಲಿದ್ದಲನ್ನು ನಿರಂತರವಾಗಿ ದಹನ ಮಾಡಿದ್ದರಿಂದ ಹೊಗೆ ಮತ್ತು ಗಂಧಕದ ಆಕ್ಸೈಡ್ ಅನಿಲ ಅಪಾರ ಪ್ರಮಾಣದಲ್ಲಿ ವಾಯುಮಂಡಲವನ್ನು ಪ್ರವೇಶಿಸಿತು. ಈ ಮಲಿನ ವಸ್ತುಗಳು ಮಂಜಿನ ಕವಳದ ಜೊತೆಗೂಡಿದವು ಹಾಗೂ ದಿನಗಟ್ಟಲೆ ನಗರಗಳ ಮೇಲೆ ದಟ್ಟೈಸಿದವು. ಸ್ಮಾಗ್‌ನಿಂದಾಗಿ ಬೆಳಕಿಗೆ ತಡೆ ಉಂಟಾಯಿತು ಮತ್ತು ಜನರಿಗೆ ತೀವ್ರವಾದ ಶ್ವಾಸ ಸಂಬಂಧಿ ರೋಗಗಳು ಕಾಡಿದವು.

೧೮೭೩ರಲ್ಲಿ ಸ್ಮಾಗ್ ಧೂಳಿನ ಕವಳಕ್ಕೆ ಲಂಡನ್ ನಗರದಲ್ಲಿನ ೫೦೦ ಜನ ಸ್ಮಾಗ್ ಸಂಬಂಧಿ ಸಾವಿಗೆ ಒಳಗಾದರು. ೧೮೮೦ರಲ್ಲಿ ೨೦೦೦ ಜನ ಮತ್ತು ೧೮೯೨ರಲ್ಲಿ ೧೦೦೦ ಜನ ಸತ್ತರು. ೧೯೫೨ರ ಡಿಸೆಂಬರ್‌ನಲ್ಲುಂಟಾದ ಲಂಡನ್ನಿನ ಬೃಹತ್ ಸ್ಮಾಗ್ ದೊಡ್ಡ ದುರಂತವಾಗಿತ್ತು. ಸರ್ಕಾರಕ್ಕೆ ಅದರ ತೀವ್ರತೆಯು ಪ್ರಥಮ ಬಾರಿಗೆ ಅರಿವಾಯಿತು. ಶುದ್ಧ ವಾಯು ಕಾಯ್ದೆ ೧೯೫೬ರಲ್ಲಿ ಜಾರಿಯಾಯಿತು.

೧೯೫೨ರಲ್ಲಿ ಉಂಟಾದ ಬೃಹತ್ ಸ್ಮಾಗ್‌ಗೆ ಸ್ಪಂದಿಸಿ ಈ ಕಾಯ್ದೆಯನ್ನು ತರಲಾಯಿತು. ವಾಯುಮಾಲಿನ್ಯ ವಿಶೇಷವಾಗಿ ಹೊಗೆಯನ್ನು ಕಡಿಮೆ ಮಾಡುವ ಉತ್ತಮವಾದ ಇಂಧನಗಳ ಬಳಕೆ, ದಕ್ಷವಾದ ದಹನಾಗಾರ (Furnace) ಮತ್ತು ವಿದ್ಯುತ್ ಉಷ್ಣತೆಯನ್ನು ಪ್ರೋತ್ಸಾಹಿಸುವುದು ಈ ಕಾಯ್ದೆಯ ಪ್ರಮುಖ ಉದ್ದೇಶ. ಈ ಕಾಯ್ದೆಯಡಿಯಲ್ಲಿ ನಗರದಲ್ಲಿನ ಹೊಗೆರಹಿತ ಪ್ರದೇಶಗಳನ್ನು ಗುರುತಿಸಲಾಯಿತು. ಅಂತಹ ಸ್ಥಳಗಳಲ್ಲಿ ಹೊಗೆ ಉಂಟು ಮಾಡದ ಇಂಧನಗಳನ್ನು ಮಾತ್ರ ಬಳಸಲು ಅವಕಾಶ ನೀಡಲಾಯಿತು. ಹೊಗೆಗೂಡುಗಳ ಎತ್ತರವನ್ನು ಹೆಚ್ಚು ಮಾಡಲಾಯಿತು. ಅಲ್ಲದೆ ಕಪ್ಪು ಹೊಗೆಯನ್ನು ಬಿಡದಂತೆ ನಿರ್ಬಂಧಿಸಲಾಯಿತು. ಈ ಕಾಯ್ದೆಯ ಜಾರಿಯಿಂದಾಗಿ ಕೆಲವೇ ವರ್ಷಗಳಲ್ಲಿ ಇಂಗ್ಲೆಂಡಿನ ವಾಯು ಹೆಚ್ಚು ಶುದ್ಧವಾಯಿತು.

—-

ಟೆಕ್ಸಾಸ್ ವಿಶ್ವವಿದ್ಯಾಲಯದ ಜೀವ ವಿಜ್ಞಾನಗಳ ಶಾಲೆಯ ಜಾಗತಿಕ ಬಿಸಿಯೇರುವಿಕೆ ವಿಭಾಗದಲ್ಲಿ ಡಾ|| ಕಾಮಿಲ್ ಪರಮೇಸನ್ ಪ್ರಾಧ್ಯಾಪಕಿಯಾಗಿದ್ದಾರೆ. ಇವರು ಪರಿಸರಶಾಸ್ತ್ರ, ವರ್ತನಾಶಾಸ್ತ್ರ ಮತ್ತು ಸಂರಕ್ಷಣೆಯ ತಜ್ಞೆ. ಇವರು ವಾಯುಗುಣ ಬದಲಾವಣೆ ಮತ್ತು ಜೈವಿಕ ಬದಲಾವಣೆಗೂ ಇರುವ ಸಂಬಂಧವನ್ನು ಮೊದಲು ಕಂಡು ಹಿಡಿದವರು. ೨೦ನೇ ಶತಮಾನದಲ್ಲಿ ಹವಾಗುಣ ಬದಲಾವಣೆಯು ವನ್ಯಜೀವಿಗಳ ಮೇಲೆ ಉಂಟು ಮಾಡಿರುವ ಪರಿಣಾಮವನ್ನು ಅಧ್ಯಯನ ಮಾಡಲು ಪ್ರಮುಖ ಗಮನ ಡಿದ್ದಾರೆ. ಇವರು ಕೈಗೊಂಡ ಪಟ್ಟೆ ಚುಕ್ಕೆ ಚಿಟ್ಟೆಗಳ ವಿತರಣೆಯಲ್ಲಾಗಿರುವ ಬದಲಾವಣೆಯ ಅಧ್ಯಯನವು ಬಹುಶಃ ಮೊದಲ ರ್ಣಾಯಕ ಸಂಶೋಧನೆಯಾಗಿದ್ದು, ಅಧಿಕಗೊಂಡ ಉಷ್ಣತೆಯಿಂದಾಗಿ ವನ್ಯಜೀವಿಗಳು ಪರಿಣಾಮ ಅನುಭವಿಸುತ್ತಿವೆ ಮತ್ತು ಈ ಚಿಟ್ಟೆಗಳು ಉತ್ತರ ಕಡೆ ಚಲಿಸುತ್ತವೆ ಎಂಬುದನ್ನು ದೃಢಪಡಿಸಿದೆ.