ಭೂಮಿಯ ವಾಯುಗುಣ ನಿರಂತರವಾಗಿ ಬದಲಾಗುವ ಹಾಗೂ ಸಂಕೀರ್ಣವಾದ  ಕ್ರಿಯೆ. ಕಳೆದ ಕೆಲವು ಮಿಲಿಯನ್ ವರ್ಷಗಳಲ್ಲಿ ಹಿಮಕಾಲ ಹಾಗೂ ಉಷ್ಣತಾ ಕಾಲಗಳು ಹಲವು ಬಾರಿ ಉಂಟಾಗಿವೆ. ಹವಾಗುಣದ ಈ ಬದಲಾವಣೆಗಳು ನಿಸರ್ಗದತ್ತವಾದವು. ಆದರೆ ಇಂದು ವಾಯುಗುಣದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಗೆ ಮಾನವನ ಚಟುವಟಿಕೆಗಳೇ ಕಾರಣವೆಂಬುದು ಆತಂಕದ ವಿಷಯ. ವಿಜ್ಞಾನಿಗಳು ವಾಯುಗುಣದಲ್ಲಿ ಇಂದು ಉಂಟಾಗುತ್ತಿರುವ ಬದಲಾವಣೆಗಳನ್ನು ಹಾಗೂ ಹಿಂದೆ ಉಂಟಾಗಿದ್ದ ಬದಲಾವಣೆಗಳನ್ನು ಅಧ್ಯಯನ ಮಾಡಲು ಸಾಕ್ಷ್ಯಾಧಾರಗಳನ್ನು ಅವಲಂಬಿಸುತ್ತಾರೆ. ಮರಗಳಲ್ಲಿನ ಉಂಗುರಗಳು, ಹಿಮದ ಗರ್ಭ, ಪರಾಗರೇಣುಗಳ ಮಾದರಿಗಳು, ಕಡಲ ಕೆಸರು ಮತ್ತು ಪಳೆಯುಳಿಕೆಗಳನ್ನು ಪ್ರಮುಖವಾಗಿ ಅವಲಂಬಿಸುವರು.

ಪ್ರಮುಖ ಸಾಕ್ಷ್ಯಾಧಾರಗಳು :

ಕಡಲ ಕೆಸರು : ಕಡಲ ತಳದಲ್ಲಿ ಪ್ರತಿವರ್ಷ ಸಹಸ್ರಾರು ಟನ್ನುಗಳಷ್ಟು ಕೆಸರು ಉಂಟಾಗುತ್ತದೆ. ಇದು ಮಿಲಿಯಾಂತರ ವರ್ಷಗಳ ಕಾಲ ಹೂಳಾಗಿರುತ್ತದೆ. ಇದರ ಪದರಗಳು ಏರುಪೇರಾಗದೆ ಉಳಿಯುವುದರಿಂದ ಅಧ್ಯಯನಕ್ಕೆ ಪ್ರಮುಖ ಆಕರಗಳಾಗುತ್ತವೆ. ಆ ಹೂಳು ಉಂಟಾದ ಸಮಯದಲ್ಲಿದ್ದ ತಾಪವನ್ನು ಮತ್ತು ಖಂಡಾಂತರ ಚಲನೆಯನ್ನು ಇದರಿಂದ ತಿಳಿಯಬಹುದು. ಹೂಳಿನಲ್ಲಿರುವ ಪ್ಲಾವಕ ಜೀವಿಗಳನ್ನು ವಿಜ್ಞಾನಿಗಳು ವಿವರವಾಗಿ ಅಧ್ಯಯನ ಮಾಡಿದ್ದಾರೆ. ಇದರಿಂದ ಆಗಿನ ಕಾಲದಲ್ಲಿದ್ದ ವಾಯುಗುಣ ಹಾಗೂ ಸಾಗರದ ಜಲ ಪ್ರವಾಹಗಳ ವ್ಯೂಹವನ್ನು ತಿಳಿಯಬಹುದು.

ಹಿಮಗರ್ಭ : ಅಂಟಾರ್ಟಿಕ ಹಿಮ ಬಂಡೆಗಳ ಕೆಳಗಿರುವ ಹಿಮಗರ್ಭದಲ್ಲಿ ಬಂಧಿಸಲ್ಪಟ್ಟ ಗಾಳಿ ಗುಳ್ಳೆಗಳು ಹಿಂದಿನ ವಾಯುಗುಣ ಸೂಚಕಗಳು. ಆ ಸಂದರ್ಭದಲ್ಲಿ ಉಂಟಾದ ಹಿಮದಲ್ಲಿನ ಗಾಳಿ ಗುಳ್ಳೆಗಳು ಸುಮಾರು ೨೦೦,೦೦೦ ವರ್ಷಗಳ ಹಿಂದೆ ರಚನೆಯಾಗಿವೆ. ಆಳವಿಲ್ಲದ ಹಿಮ ಬಂಡೆಗಳಲ್ಲಿ ಕೆಲವೇ ದಶಕಗಳ ಹಿಂದಿನ ಗಾಳಿಯಿದ್ದರೆ, ಅದರ ಕೆಳಗಿನ ಹಿಮದಲ್ಲಿ ಇನ್ನೂ ಪ್ರಾಚೀನ ಕಾಲದ ಗಾಳಿಗುಳ್ಳೆಗಳಿರುತ್ತವೆ. ಅಂತಹ ಗುಳ್ಳೆಗಳಲ್ಲಿ ಇಂದು ವಾಯುಗೋಳದಲ್ಲಿರುವ CO2 ನ ಪ್ರಮಾಣಕ್ಕಿಂತ ಪ್ರತಿಶತ ೨೫ ರಷ್ಟು ಕಡಿಮೆ CO2 ಇತ್ತು  ಎಂದು ತಿಳಿದು ಬಂದಿದೆ.

ಮರದ ಉಂಗುರಗಳು : ಮರಗಳು ವಿಶ್ವದ ಅತ್ಯಂತ ವಿಶ್ವಾಸಾರ್ಹ ಹಾಗೂ ನಿಖರ ಸಮಯ ಸೂಚಕಗಳು. ಮರದ ಕಾಂಡವನ್ನು ಅಡ್ಡವಾಗಿ ಕೊಯ್ದಾಗ ಕಂಡು ಬರುವ ವಾರ್ಷಿಕ ಉಂಗುರಗಳು ಮರದ ವಯಸ್ಸನ್ನು ಸೂಚಿಸುತ್ತವೆ. ಈ ಉಂಗುರಗಳು ಆ ಮರದ ಜೀವಿತಾವಧಿಯಲ್ಲಿ ಆ ಸ್ಥಳದ ವಾಯುಗುಣದ ದಾಖಲೆಯನ್ನು ನೀಡುತ್ತವೆ. ವಾರ್ಷಿಕ ಉಂಗುರಗಳ ಬೆಳವಣಿಗೆಯು ಹವಾಮಾನವನ್ನು ಅವಲಂಬಿಸಿರುತ್ತದೆ. ಬೇಸಗೆ ಕಾಲವು ಹೆಚ್ಚು ಶುಷ್ಕವಾಗಿದ್ದರೆ, ಮರ ಹೆಚ್ಚು ಬೆಳೆಯುವುದಿಲ್ಲ. ಒಂದು ವೇಳೆ ಬೇಸಗೆಯು ಸಾಮಾನ್ಯವಾಗಿದ್ದರೆ ಮರದ ಬೆಳವಣಿಗೆ ಚೆನ್ನಾಗಿರುತ್ತದೆ. ಮರದ ಉಂಗುರಗಳು ಆ ಕಾಲದಲ್ಲಾದ ಪ್ರವಾಹ, ಬರಗಾಲ, ಭೂಕಂಪ, ಕೀಟಗಳ ಹಾವಳಿ ಮತ್ತು ಸಿಡಿಲುಗಳ ಬಡಿತವನ್ನು ದಾಖಲಿಸಿರುತ್ತವೆ. ಮರಗಳ ಉಂಗುರಗಳ ವಿನ್ಯಾಸಗಳನ್ನು ಗಮನಿಸಿ, ವಿಜ್ಞಾನಿಗಳು ಸ್ಥಳೀಯವಾದ ಬರಗಾಲ ಮತ್ತು ಮಳೆ ಬಿದ್ದುದನ್ನು ಲೆಕ್ಕ ಹಾಕುತ್ತಾರೆ. ಈ ವಿಜ್ಞಾನವನ್ನು ‘ಡೆಂಡ್ರೊಕ್ರೊನೊಲಜಿ’ ಎನ್ನುವರು. ಅಮೆರಿಕಾದ ಖಗೋಳತಜ್ಞ ಆಂಡ್ರು ಎಲ್ಲಿಕಾಟ ಡಗ್ಲಾಸ್ ಎಂಬುವ ಈ ವಿಜ್ಞಾನವನ್ನು ೧೯ನೇ ಶತಮಾನದ ಮೊದಲಲ್ಲಿ ಆರಂಭಿಸಿದನು.

ಲಂಬೊ ವಿಶ್ವವಿದ್ಯಾಲಯದವರು ಮಂಗೋಲಿಯದಲ್ಲಿ ಕೈಗೊಂಡ ಅಧ್ಯಯನದಿಂದ ಸೂಜಿ ಅರಣ್ಯದ ಮರಗಳು ಕಳೆದ ಶತಮಾನದಲ್ಲಿ ಅಸಹಜವಾದ ಅಧಿಕ ಬೆಳವಣಿಗೆ ಯಾಗಿರುವುದನ್ನು ಗಮನಿಸಿದರು. ಇದರಿಂದ ಆ ಸಮಯದಲ್ಲಿ ಆ ಸ್ಥಳದಲ್ಲಿ ತಾಪ ಹೆಚ್ಚಾಗಿತ್ತು ಎಂಬುದು ತಿಳಿಯಿತು.

ಮರದ ಉಂಗುರಗಳನ್ನು ಜೀವಂತ ಮರದ ಬಡ್ಡೆಯಿಂದ ಅಥವಾ ಕಾಂಡದ ಅಡ್ಡ ಕೊಯ್ತ ಮಾಡಿ ಪಡೆದು ಅಧ್ಯಯನ ಮಾಡುವರು. ಸಾಮಾನ್ಯವಾಗಿ ಸತ್ತ ಮರಗಳ ಕಾಂಡವನ್ನು ಕೊಯ್ಯಲಾಗುವುದು. ಬದುಕಿರುವ ಮರಗಳಿಂದ ಇಂಕ್ರಿಮೆಂಟ್ ಬೋರರ್ ಎಂಬ ವಿಶೇಷ ಉಪಕರಣದ ಸಹಾಯದಿಂದ ಒಂದೇ ಒಂದು ಪುಟ್ಟ ಸೀಳನ್ನು ಕೊರೆದು ತೆಗೆಯುವರು. ಬದಲಾವಣೆಗಳಿಗೆ ಸ್ಪಂದಿಸುವ ಅತಿಸೂಕ್ಷ್ಮತೆ ಇರುವ ಮತ್ತು ವೇಗವಾಗಿ ಬೆಳೆಯುವ ಮರಗಳನ್ನು ವಿಜ್ಞಾನಿಗಳು ಹಿಂದಿನ ವಾಯುಗುಣ ತಿಳಿಯಲು ಅಧ್ಯಯನ ಮಾಡುವರು. ಇದಕ್ಕೆ ಅಲಾಸ್ಕದಲ್ಲಿನ ಬಿಳಿ ಸ್ಪುರ‍್ಸ್ ಎಂಬ ಮರ ಒಂದು ಉತ್ತಮ ಉದಾಹರಣೆ.

ನೈಸರ್ಗಿಕ ಕಾರಣಗಳು :

ವಾಯುಗುಣವು ಬದಲಾವಣೆ ಹೊಂದುವುದಕ್ಕೆ ಹಲವಾರು ನೈಸರ್ಗಿಕ ಕಾರಣಗಳಿವೆ ಎಂಬುದಕ್ಕೆ ಹವಾಮಾನ ತಜ್ಞರು ಆಧಾರಗಳನ್ನು ಗಮನಿಸಿದ್ದಾರೆ. ಈ ಕಾರಣಗಳಲ್ಲಿ  ಭೂಮಿಯು ಕಕ್ಷೆಯಲ್ಲಿ ಚಲಿಸುವಾಗ ಇರುವ ವ್ಯತ್ಯಾಸಗಳು ಪ್ರಮುಖವಾದ ನೈಸರ್ಗಿಕ ಕಾರಣ. ಸೂರ್ಯನ ಸುತ್ತ ಭೂಮಿ ತಿರುಗುವಾದ ಇರುವ ವ್ಯತ್ಯಾಸಗಳ ನಮೂನೆಯನ್ನು ಮಿಲಂಕೊವಿಚ್ (Milankovitch) ಆವರ್ತಗಳೆನ್ನುವರು. ಈತ ಮೊದಲಿಗೆ ಈ ಆವರ್ತಗಳನ್ನು ಕಂಡು ಹಿಡಿದನು. ಈ ಆವರ್ತಗಳಿಂದಾಗಿ ಸೂರ್ಯನಿಂದ ಬರುವ ಸೌರ ವಿಕಿರಣ ಅಥವಾ ಇನ್ಸೂಲೇಶನ್‌ನಲ್ಲಿ ವ್ಯತ್ಯಾಸಗಳಾಗುತ್ತವೆ.

ಭೂ ವಾಲುವಿಕೆ

ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವ ಭೂಕಕ್ಷೆಯ ಸಮತಲದಲ್ಲಿ ಭೂಮಿಯು ಅಕ್ಷದಿಂದ ಲಂಬವಾಗಿ ವಾಲಿದೆ. ಹಾಲಿ ಇದರ ವಾಲುವಿಕೆಯು ಲಂಬಾಕಾರ ವಾಗಿ ಸುಮಾರು ೨೩½ ಡಿಗ್ರಿಯಷ್ಟಿದೆ. ಈ ವಾಲುವಿಕೆ ಯಿಂದಾಗಿಯೇ ನಾವು ಋತುಗಳನ್ನು ಅನುಭವಿಸಲು ಸಾಧ್ಯವಾಗಿರುವುದು. ಪ್ರತಿ ಆರು ತಿಂಗಳಿಗೊಮ್ಮೆ ಭೂಮಿಯ ಉತ್ತರ ಮತ್ತು ದಕ್ಷಿಣಾರ್ಧಗೋಳಗಳು ಸೂರ್ಯನ ಕಡೆ ವಾಲುವುದರಿಂದ ಋತುಗಳಾಗುತ್ತಿವೆ. ಇದರಿಂದಾಗಿಯೇ ನಾವು ಪ್ರತಿವರ್ಷ ವಿಷುವ (Equinoxes) ಮತ್ತು ಅಯನಾಂತಗಳನ್ನು (Solstices) ಅನುಭವಿಸುತ್ತಿದ್ದೇವೆ. ಒಂದು ವೇಳೆ ಭೂಗ್ರಹವು ಈ ರೀತಿ ವಾಲದಿದ್ದರೆ ಋತುಮಾನಗಳೇ ಇರುತ್ತಿರಲಿಲ್ಲ. ಧ್ರುವ ಪ್ರದೇಶಗಳು ಬೇಸಗೆಯಲ್ಲಿ ಸೂರ್ಯನ ಬೆಳಕನ್ನು ಪಡೆಯುತ್ತಿರಲಿಲ್ಲ ಮತ್ತು ಪ್ರಾಯಶಃ ಭೂಮಿಯು ಸದಾ ಹಿಮಯುಗದಲ್ಲಿಯೇ ಬಂಧಿಸಲ್ಪಡುತ್ತಿತ್ತು.

ಆಯನಾಂತಗಳು (Solstices)

ಆಯನಾಂತ ಅಥವಾ ಸೋಸ್ಟಿಸಸ್ ಎಂಬ ಪದದ ಅರ್ಥ ‘ಚಲಿಸದ ಸೂರ್ಯ’. ಭೂಮಿಯು ತನ್ನ ಕಕ್ಷೆಯ ಮೂಲಕ ಸೂರ್ಯನನ್ನು ಪ್ರದಕ್ಷಣೆ ಹಾಕುವಾಗ ಭಾಗುವುದರಿಂದ, ಅದರ ಒಂದು ಪಾರ್ಶ್ವಗೋಳವು ಮತ್ತೊಂದಕ್ಕಿಂತ ಹೆಚ್ಚಿನ ಬೆಳಕನ್ನು ಪಡೆಯುತ್ತದೆ. ಉತ್ತರಾರ್ಧಗೋಳವು ಜೂನ್ ತಿಂಗಳಲ್ಲಿ ಸೂರ್ಯನ ಕಡೆ ಗರಿಷ್ಠ ಬಾಗುವುದು ಮತ್ತು ದೀರ್ಘ ಕಾಲದ ಹಗಲು ದಿನವನ್ನು ಅನುಭವಿಸುವುದು (ಜೂನ್ ೨೧ ಅಥವಾ ೨೨). ಅದೇ ವೇಳೆ ದಕ್ಷಿಣಾರ್ಧ ಗೋಳವು ಸೂರ್ಯನಿಂದ ದೂರಕ್ಕೆ ಗರಿಷ್ಠ ಬಾಗುವುದರಿಂದ ಅತಿ ಪುಟ್ಟ ಹಗಲು ದಿನವನ್ನು ಅನುಭವಿಸುವುದು. ದಕ್ಷಿಣಾರ್ಧ ಗೋಳವು ಡಿಸೆಂಬರ್ ತಿಂಗಳಲ್ಲಿ ಸೂರ್ಯನ ಕಡೆ ಗರಿಷ್ಠ ಬಾಗುವುದು ಮತ್ತು ದೀರ್ಘವಾದ ಹಗಲು ದಿನವನ್ನು ಅನುಭವಿಸುವುದು (ಡಿಸೆಂಬರ್ ೨೧ ಅಥವಾ ೨೨). ಅದೇ ವೇಳೆ ಉತ್ತರಾರ್ಧ ಗೋಳವು ಅತಿ ಪುಟ್ಟ ಹಗಲು ದಿನವನ್ನು ಅನುಭವಿಸುವುದು.


ವಿಷುವ (
Equinox)

ಈಕ್ವಿನಾಕ್ಸ್ ಎಂಬ ಪದ ಲ್ಯಾಟಿನ್ ಮೂಲದಿಂದ ಬಂದಿದ್ದು ಅದರ ಅರ್ಥ ‘ಸಮ ರಾತ್ರಿ’. ವಸಂತ ವಿಷುವ (Spring Equinox) ಮಾರ್ಚ್ ೨೦ ಅಥವಾ ೨೧ ರಂದು ಮತ್ತು ಶರತ್ ವಿಷುವ (Autumnal Equinox) ಸೆಪ್ಟೆಂಬರ್ ೨೦ ಅಥವಾ ೨೧ ರಂದು ಉಂಟಾಗುತ್ತದೆ. ವರ್ಷದ ಈ ದಿನಗಳಲ್ಲಿ ಭೂಮಿಯ ಎರಡೂ ಪಾರ್ಶ್ವಗೋಳಗಳಲ್ಲಿ ರಾತ್ರಿ ಮತ್ತು ಹಗಲು ಸಮನಾಗಿರುತ್ತವೆ. ಈ ಸಮಯದಲ್ಲಿ ಭೂಮಿಯ ಉತ್ತರಾರ್ಧಗೋಳವಾಗಲಿ ಅಥವಾ ದಕ್ಷಿಣಾರ್ಧ ಗೋಳವಾಗಲಿ ಸೂರ್ಯನ ಕಡೆ ಬಾಗಿರುವುದಿಲ್ಲ. ಸೂರ್ಯ ಕಿರಣಗಳು ಲಂಬವಾಗಿ ಭೂಮಿಯನ್ನು ತಲುಪುತ್ತಿರುತ್ತವೆ. ಇದು ಮಾರ್ಚ್‌ನಲ್ಲಿ ವಸಂತಕಾಲ ಮತ್ತು ಸೆಪ್ಟೆಂಬರ್‌ನಲ್ಲಿ ಶರತ್‌ಕಾಲ ಆರಂಭವಾಗುವುದನ್ನು ಸೂಚಿಸುತ್ತದೆ.

ಮಿಲಂಕೊವಿಚ್ ಆವರ್ತಗಳಲ್ಲಿ ಭೂಮಿಯ ಅಕ್ಷದ ಬಾಗುವಿಕೆಯ ಕೋನ, ಈ ಅಕ್ಷ ಬಾಗುವಿಕೆಯ (direction) ದಿಕ್ಕು ಮತ್ತು ಸೂರ್ಯನ ಪ್ರದಕ್ಷಿಣೆ ಹಾಕುವ ಭೂ ಮಾರ್ಗಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಆದ್ದರಿಂದ ಅಕ್ಷದ ಬಾಗುವಿಕೆಯಲ್ಲಿನ ಯಾವುದೇ ವ್ಯತ್ಯಾಸವು ಋತುಗಳಲ್ಲಿ ಬದಲಾವಣೆ ತರುತ್ತದೆ. ಬಾಗುವಿಕೆ ಹೆಚ್ಚಾದಲ್ಲಿ ಒಂದು ಪ್ರದೇಶದ ಋತುಗಾಲಗಳ ನಡುವಿನ ವ್ಯತ್ಯಾಸಗಳೂ ಹೆಚ್ಚಾಗುತ್ತವೆ. ಭೂಮಿಯ ಕಕ್ಷೆಯ ಆಕಾರದಲ್ಲಿ ಈಗಿರುವಂತೆ ಸುಮಾರು ವೃತ್ತಾಕಾರದಿಂದ ಹೆಚ್ಚು ದೀರ್ಘ ವೃತ್ತಾಕಾರ (elliptical) ವಾದರೆ ಋತುಮಾನಗಳಲ್ಲಿ ವ್ಯತ್ಯಯ ಉಂಟಾಗುವುದು. ಇದರಿಂದ ಒಂದು ಬೇಸಗೆಕಾಲಕ್ಕೂ ಮತ್ತು ಇನ್ನೊಂದಕ್ಕೂ ಮಧ್ಯೆ ಇರುವ ಸಮಯವೂ ಬದಲಾಗುವುದು. ಅಂದರೆ ಇದರಿಂದ ವರ್ಷದ ಸಮಯವೇ ಹೆಚ್ಚು ದೀರ್ಘವಾಗುವುದು ! ಮಿಲಂಕೊವಿಚ್ ಆವರ್ತಗಳನ್ನು ಒಗ್ಗೂಡಿಸಿದಾಗ ಸಂಕೀರ್ಣ ಪರಿಣಾಮಗಳುಂಟಾಗುವುವು. ಇವು ನೈಸರ್ಗಿಕವಾದ ಹವಾಗುಣ ಬದಲಾವಣೆಯ ಮೇಲೆ ಪ್ರಮುಖ ಪ್ರಭಾವ ಬೀರುತ್ತವೆ.

ಖಂಡಾಂತರ ಚಲನೆ (Continental drift)

ಮಿಲಿಯಾಂತರ ವರ್ಷಗಳ ಹಿಂದೆ ಎಲ್ಲ ಭೂ ಖಂಡಗಳು ಸೇರಿ ಒಂದೇ ಭೂ ಪ್ರದೇಶವಾಗಿದ್ದವು. ಅನಂತರ ನಿಧಾನವಾಗಿ ಈ ಭೂ ಪ್ರದೇಶ ವಿಭಾಗಗಳಾಗಿ ದೂರ ದೂರ ಸರಿಯಲಾರಂಭಿಸಿ ನಮಗಿಂದು ಪರಿಚಯ ವಿರುವ ಭೂಖಂಡಗಳಾಗಿ ರೂಪಗೊಂಡಿವೆ. ಭೂಖಂಡಗಳು ಇಂದಿಗೂ ನಿಧಾನವಾಗಿ ಪರಸ್ಪರ ದೂರ ಸರಿಯುತ್ತಾ ತಮ್ಮ ಸ್ಥಾನಗಳನ್ನು ಬದಲಿಸಿಕೊಳ್ಳುತ್ತಿವೆ. ನಮಗೆ ಗೊತ್ತಾಗದಷ್ಟು ನಿಧಾನವಾಗಿ ಅಥವಾ ಒಬ್ಬರ ಜೀವಿತಕಾಲದಲ್ಲಿ ಅನುಭವಕ್ಕೆ ಬರದಷ್ಟು ನಿಧಾನವಾಗಿ ಈ ಚಲನೆ ನಡೆಯುತ್ತಿದೆ. ಈ ಖಂಡಾಂತರ ಚಲನೆಯಿಂದ ಹವಾಗುಣ ಬದಲಾಗುತ್ತದೆ. ಇದು ಶಿಲಾಗೋಳಿಕ ಲಕ್ಷಣಗಳನ್ನು ಬದಲಿಸುತ್ತದೆ. ಭೂ ಪ್ರದೇಶಗಳ ಸ್ಥಳಗಳಲ್ಲಿ ವ್ಯತ್ಯಾಸಗಳನ್ನುಂಟು ಮಾಡುತ್ತದೆ ಮತ್ತು ಪರ್ವತ ಹಾಗೂ ನದಿಗಳಲ್ಲಿ ವ್ಯತ್ಯಾಸಗಳನ್ನು ಉಂಟು ಮಾಡುತ್ತದೆ. ಖಂಡಾಂತರ ಚಲನೆಯ ಪ್ರಭಾವವು ವಾಯುಗೋಳ ಮತ್ತು ಸಮುದ್ರಗಳ ಮೇಲುಂಟಾಗುವುದು. ಅದರಿಂದ ವಾಯುಗುಣ ಪ್ರಭಾವಕ್ಕೆ ಒಳಗಾಗುವುದು. ಪ್ರತ್ಯೇಕ ಭೂಖಂಡಗಳು ರಚನೆಯಾದ ಪ್ರಯುಕ್ತ ಸಾಗರಗಳ ಒಳಪ್ರವಾಹ ಹಾಗೂ ಬೀಸುವ ಗಾಳಿಯ ದಿಕ್ಕುಗಳಲ್ಲಿ ಬದಲಾವಣೆ ಉಂಟಾಯಿತು ಮತ್ತು ಅಂಟಾರ್ಟಿಕಾ ಪ್ರತ್ಯೇಕಿಸಲ್ಪಟ್ಟಿತು.

ನಮ್ಮ ಅರಿವಿಗೆ ಬರದಿದ್ದರೂ ಸಹ ಇಂದಿಗೂ ಖಂಡಾಂತರ ಭೂ ಚಲನೆ ನಡೆಯುತ್ತಿದೆ. ಭಾರತದ ಉಪಖಂಡ ಇದಕ್ಕೊಂದು ಉತ್ತಮ ಉದಾಹರಣೆ. ಇಂದಿಗೂ ಈ ಪ್ರದೇಶ ಉತ್ತರದ ಕಡೆ ಚಲಿಸುತ್ತಿದ್ದು ಯುರೇಶಿಯ ಭೂ ಪ್ರದೇಶಕ್ಕೆ ಢಿಕ್ಕಿ ಹೊಡೆಯುತ್ತಿದೆ. ಆದ್ದರಿಂದ ಹಿಮಾಲಯ ಪರ್ವತ ಮೇಲಕ್ಕೇರುತ್ತಿದೆ. ಹಿಮಾಲಯ ಪರ್ವತ ಶ್ರೇಣಿಗಳು ಪ್ರತಿವರ್ಷ ಸುಮಾರು ಒಂದು ಮಿಲಿ ಮೀಟರಿನಷ್ಟು ಏರುತ್ತಿವೆ ಎಂದು ದೃಢಪಟ್ಟಿದೆ !

ಸಾಗರ ಪ್ರವಾಹಗಳು (Ocean currents)

ಭೂ ವಾಯುಗುಣದ ಮೇಲೆ ಸಾಗರಗಳು ಪ್ರಮುಖ ಪ್ರಭಾವ ಬೀರುತ್ತಿವೆ. ಅವು ಭೂಮಿಯ ಪ್ರತಿಶತ ೭೦ ಕ್ಕಿಂತ ಪ್ರದೇಶವನ್ನು ಆಕ್ರಮಿಸಿವೆ. ಸೂರ್ಯನಿಂದ ಬರುವ ಶಕ್ತಿಯಲ್ಲಿ ವಾಯುಗೋಳಕ್ಕಿಂತ ಅಧಿಕ ಶಕ್ತಿಯನ್ನು ಸಾಗರಗಳು ಸಂಗ್ರಹಿಸಿರುತ್ತವೆ. ಸಾಗರಗಳ ಪ್ರವಾಹಗಳು ಸಾಗರಗಳ ಮೇಲ್ಮೈಯ ಸಮೀಪ ಮತ್ತು ಒಳಗೆ ಆಳದಲ್ಲಿ ಹರಿಯುತ್ತಿರುತ್ತವೆ. ಆದ್ದರಿಂದ ಈ ಪ್ರವಾಹಗಳು ಭೂಮಿಯ ತಾಪವನ್ನು ಎಲ್ಲ ಕಡೆ ಹರಡುತ್ತವೆ. ಕೆಲವು ಪ್ರವಾಹಗಳು ಬಿಸಿ, ಕೆಲವು ತಂಪು. ಹಿಂದೆ ಈ ಪ್ರವಾಹಗಳು ತಮ್ಮ ದಿಕ್ಕನ್ನು ಬದಲಿಸಿವೆ, ನಿಧಾನವಾಗಿವೆ, ಹಿಂದುಮುಂದಾಗಿವೆ ಅಥವಾ ನಿಂತೇ ಹೋಗಿವೆ ಎಂದು ತಿಳಿದು ಬಂದಿದೆ.

ಸೌರಚಟುವಟಿಕೆಗಳು

ಭೂಗ್ರಹವು ಸೌರ ಜ್ವಾಲೆ ಹಾಗೂ ಸೌರಕಲೆಗಳಿಂದಲೂ ಪ್ರಭಾವಕ್ಕೆ ಒಳಗಾಗಿದೆ. ವಾಸ್ತವವಾಗಿ ಸೂರ್ಯನಲ್ಲಾಗುವ ಬೃಹತ್ ಚಂಡಮಾರುತಗಳು (Storms), ಸೌರಕಲೆಗಳು ಭೂಮಿಯ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ. ಸೂರ್ಯನು ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಅಧಿಕ ಚಟುವಟಿಕೆ ಅವಧಿ-ಸೌರ ಗರಿಷ್ಠ ಹಾಗೂ ಕಡಿಮೆ ಚಟುವಟಿಕೆಯ ಅವಧಿ-ಸೌರಕನಿಷ್ಠಗಳನ್ನು ಅನುಭವಿಸುತ್ತಾನೆಂದು ನಂಬಲಾಗಿದೆ. ಇದರಿಂದ ಭೂಮಿಯ ಮೇಲಾಗುವ ಪರಿಣಾಮಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ. ಯುರೋಪಿನಲ್ಲಾದ  ಮಿನಿ ಹಿಮಯುಗಕ್ಕೆ ೧೬೪೫ರಿಂದ ೧೭೧೫ರ ಸಮಯದಲ್ಲಿ ಸೂರ್ಯನ ಕಡಿಮೆ ಚಟುವಟಿಕೆಯ ಅವಧಿ – ಸೌರ ಕನಿಷ್ಠ ಅನುಭವಿಸುತ್ತಿದ್ದುದೇ ಕಾರಣವೆಂದು ಕೆಲವು ವಿಜ್ಞಾನಿಗಳು ನಂಬಿದ್ದಾರೆ.

ಅಗ್ನಿಪರ್ವತಗಳು

ಅಗ್ನಿ ಪರ್ವತಗಳು ಆಗಾಗ್ಗೆ ಸಕ್ರಿಯವಾಗುವುದು ಹಾಗೂ ವಾಯುಗುಣದ ಮೇಲೆ ಪ್ರಭಾವ ಬೀರುವುದು ನೈಸರ್ಗಿಕ ಅಂಶ. ಬೃಹತ್ ಅಗ್ನಿಪರ್ವತಗಳು ಸಕ್ರಿಯವಾಗಿರುವ ಅವಧಿಗೂ ಮತ್ತು ಕಡಿಮೆ ಕಾಲಾವಧಿಯ ಹವಾಗುಣ ಬದಲಾವಣೆಗೂ ಸಂಬಂಧ ವಿರುವುದನ್ನು ಗುರುತಿಸಲಾಗಿದೆ. ಅಗ್ನಿಪರ್ವತ ಗಳ ಚಟುವಟಿಕೆಯಿಂದ ಬೃಹತ್ ಪ್ರಮಾಣದ ಗಂಧಕದ ಆಕ್ಸೈಡ್ (SO2), ನೀರಾವಿ, ಧೂಳು ಮತ್ತು ಬೂದಿ ವಾಯುಗೋಳವನ್ನು ಸೇರುತ್ತದೆ. ಇವು ಸೂರ್ಯನಿಂದ ಬರುವ ಬೆಳಕನ್ನು ಸ್ವಲ್ಪಮಟ್ಟಿಗೆ ತಡೆಯುತ್ತವೆ. ಇದರಿಂದ ಭೂಮಿ ತಂಪಾಗಲು ಕಾರಣವಾಗುವುದು. ಗಂಧಕದ ಆಕ್ಸೈಡ್ ಅನಿಲವು ನೀರಿನೊಡನೆ ಸೇರಿ ಗಂಧಕಾಮ್ಲ ರಚನೆಯಾಗುವುದು. ಇದು ಆಮ್ಲ ಮಳೆಯ ಪ್ರಮುಖ ಸಂಯೋಜನೆ. ಇತ್ತೀಚಿನ ವರ್ಷಗಳಲ್ಲಿ ಕಂಡು ಬಂದ ಬೃಹತ್ ಕ್ರಿಯಾಶೀಲ ಅಗ್ನಿಪರ್ವತವೆಂದು ಹೇಳುವ ಪಶ್ಚಿಮ ಇಂಡೊನೇಶಿಯಾದ ಕ್ರಾಕ್ಟೋವ ಅಗ್ನಿಪರ್ವತ ೧೮೮೩ರಲ್ಲಿ ಅಧಿಕ ಸಕ್ರಿಯವಾದಾಗ ವಾಯುಗುಣದಲ್ಲಿ ಬದಲಾವಣೆಯನ್ನು ಗಮನಿಸಲಾಯಿತು.

೧೯೯೧ರ ಏಪ್ರಿಲ್‌ನಲ್ಲಿ ಫಿಲಿಪೈನ್ಸ್‌ನ ಪಿನಟೋಬ ಅಗ್ನಿಪರ್ವತದಿಂದ ಅತ್ಯಧಿಕ ಪ್ರಮಾಣದ  SO2 ವಾಯುಗೋಳವನ್ನು ಸೇರಿತು. ಅದಾದ ಎರಡು ವರ್ಷಗಳಲ್ಲಿ ಜಾಗತಿಕ ತಾಪವು ಸರಾಸರಿ ೦.೮೦ ಸೆ. ನಷ್ಟು ಕಡಿಮೆಯಾದುದಕ್ಕೆ ಈ ಅಗ್ನಿಪರ್ವತದ ಚಟುವಟಿಕೆಯೇ ಪ್ರಾಥಮಿಕ ಕಾರಣವೆಂದು ವಿಜ್ಞಾನಿಗಳು ನಂಬಿದ್ದಾರೆ. ಅಗ್ನಿಪರ್ವತದಿಂದ ಹೊರಬಂದ SO2 ಸೂರ್ಯನ ಬೆಳಕು ವಾಯುಗೋಳಕ್ಕೆ ಬರದಂತೆ ತಡೆಯಿತು ಎಂಬುದನ್ನು ಉಪಗ್ರಹಗಳ ಅಂಕಿ ಅಂಶಗಳು ತಿಳಿಸಿವೆ. ಅದರಿಂದ ಭೂ ವಾಯುಗುಣ ತಂಪಾಯಿತು.

ಧೂಮಕೇತು ಮತ್ತು ಉಲ್ಕೆಗಳು

ಆಕಾಶದಲ್ಲಿ ವೇಗವಾಗಿ ಚಲಿಸಿ ಉರಿದು ಹೋಗುವ ವಿಶಿಷ್ಟ ಕಾಯಗಳೇ ಉಲ್ಕೆಗಳು ಅಥವಾ ಬೀಳುವ ನಕ್ಷತ್ರಗಳು. ಅಪರೂಪಕ್ಕೆ ಆಕಾಶದಲ್ಲಿ ಕಾಣುವ, ದಿನಕ್ಕೊಂದು ರೂಪ ತಳೆಯುವ ಆಕಾಶಕಾಯಗಳೇ ಧೂಮಕೇತು ಗಳು. ಬಹುತೇಕ ಉಲ್ಕೆಗಳು ಭೂಮಿ ತಲುಪುವ ಮುನ್ನ, ವಾಯುಗೋಳದಲ್ಲಿ ಉರಿದು ಹೋಗುತ್ತವೆ. ಆದರೆ ಮಿಲಿಯಾಂತರ ವರ್ಷಗಳಲ್ಲಿ  ಕೆಲವು ಆಕಾಶಕಾಯಗಳು ಭೂಮಿಗೆ ಢಿಕ್ಕಿ ಹೊಡೆದಿವೆ. ಬೃಹತ್ ಗಾತ್ರದ ಉಲ್ಕೆಗಳು ಢಿಕ್ಕಿ ಹೊಡೆದಾಗ, ಅಗ್ನಿಪರ್ವತಗಳು ಉಗುಳುವ ಹಾಗೆ ಬೃಹತ್ ಪ್ರಮಾಣದ ಸ್ಫೋಟ ಉಂಟಾಗಿ ಧೂಳು, ಹೊಗೆ ಮತ್ತು ಅನಿಲಗಳು ಬಿಡುಗಡೆಯಾಗುತ್ತವೆ. ಸೂರ್ಯನ ಕಿರಣಗಳು ಕೆಲವು ತಿಂಗಳುಗಳ ಕಾಲ ಭೂಮಿಯನ್ನು ತಲುಪದಂತೆ ಇವು ತಡೆಹಿಡಿಯುತ್ತವೆ. ಹಾಗಾಗಿ ಭೂಮಿ ತಂಪಾಗುತ್ತದೆ. ಸುಮಾರು ೬೦ ಮಿಲಿಯನ್ ವರ್ಷಗಳ ಹಿಂದೆ ಬೃಹತ್ ಗಾತ್ರದ ಉಲ್ಕೆ ಅಥವಾ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿತೆಂದು ಅನೇಕ ವಿಜ್ಞಾನಿಗಳು ನಂಬಿದ್ದಾರೆ. ಅಪ್ಪಳಿಸಿದ ಪರಿಣಾಮವಾಗಿ ಅಪಾರ ಧೂಳು ಮೋಡಗಳ ರೂಪದಲ್ಲಿ ಶೇಖರಣೆಯಾಗಿ ಮುಂದೆ ಹಲವು ವರ್ಷಗಳ ಕಾಲ ಸೂರ್ಯನ ಬೆಳಕು ಭೂಮಿ ತಲುಪದಂತೆ ತಡೆಯಾಯಿತು. ಇದರಿಂದಾಗಿ ಹಲವು ಸಸ್ಯ ಮತ್ತು ಪ್ರಾಣಿಗಳು ನಶಿಸಿಹೋದವು. ಬೃಹತ್ ಶರೀರಿಗಳಾಗಿದ್ದ ಡೈನೋಸಾರುಗಳು ಸಹ ನಾಶವಾದವು. ಅಲ್ಲದೆ ಹಿಮಯುಗ ಆರಂಭವಾಗಲು ಕಾರಣವಾಯಿತು. ಈ ಬಗ್ಗೆ ಇನ್ನೂ ಹಲವಾರು ವಾದವಿವಾದಗಳಿವೆ.

ಮಾನವಕೃತ ಕಾರಣಗಳು :

ಕೈಗಾರಿಕಾ ಕ್ರಾಂತಿಯ ನಂತರ ಫಾಸಿಲ್ ಇಂಧನಗಳ ಬಳಕೆ ನಿರಂತರವಾಗಿ ಅಧಿಕವಾಗುತ್ತಿದೆ. ಕೈಗಾರಿಕಾ ಕ್ರಾಂತಿಯು ಅಧಿಕ ಸಂಖ್ಯೆಯ ಕೈಗಾರಿಕೆಗಳು ಉಂಟಾಗಲು ಕಾರಣವಾಯಿತು. ಇಂಗ್ಲೆಂಡಿನ ದೊಡ್ಡ ಪಟ್ಟಣಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾದವು. ಯುರೋಪಿನ ಇತರೆ ನಗರಗಳಲ್ಲಿಯೂ ಕೈಗಾರೀಕರಣ ಉಂಟಾಯಿತು. ವಸಾಹತುಗಳಿಂದ ಹತ್ತಿಯನ್ನು ತರಿಸಿಕೊಂಡು, ವಿವಿಧ ರೀತಿಯ ಯಂತ್ರಗಳನ್ನು ಫಾಸಿಲ್ ಇಂಧನದ ಸಹಾಯದಿಂದ ಚಾಲನೆ ಮಾಡಿ ಸಿದ್ಧ ಉಡುಪು ಮುಂತಾದವನ್ನು ಉತ್ಪಾದಿಸಲಾಯಿತು. ಗಣಿಗಾರಿಕೆಯ ಪಟ್ಟಣ ಮತ್ತು ಕೈಗಾರಿಕಾ ನಗರ ಪ್ರದೇಶಗಳು ಸ್ಥಾಪನೆಯಾದವು. ಜನರು ಬೃಹತ್ ಸಂಖ್ಯೆಯಲ್ಲಿ ಈ ಪ್ರದೇಶಗಳಲ್ಲಿ ವಾಸಿಸಲಾರಂಭಿಸಿದರು. ನಗರದ ಕಡೆ ಜನರ ವಲಸೆ ಆರಂಭವಾಯಿತು. ಇಂದಿಗೂ ಈ ಪದ್ಧತಿ ನಿಂತಿಲ್ಲ. ಜಗತ್ತಿನಾದ್ಯಂತ ಕೈಗಾರಿಕೆಗಳು ನೌಕರಿಯನ್ನು ಸೃಷ್ಟಿಸುತ್ತಿವೆ. ಜನರು ಗ್ರಾಮೀಣ ಪ್ರದೇಶದಿಂದ ನಗರಗಳ ಕಡೆ ವಲಸೆ ಬರುತ್ತಿದ್ದಾರೆ. ಇದರಿಂದಾಗಿ ಜನರ ವಸತಿಗೆ, ರಸ್ತೆಗಳಿಗೆ ಮತ್ತು ಇತರೆ ಸೌಲಭ್ಯಗಳಿಗಾಗಿ ಅರಣ್ಯ ಪ್ರದೇಶಗಳನ್ನು ನಾಶ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ, ಕೈಗಾರಿಕೆ, ಸಾರಿಗೆ ಮತ್ತು ಗ್ರಾಹಕತೆಗಾಗಿ ಬೃಹತ್ ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳು ಬಳಕೆಯಾಗುತ್ತಿವೆ. ಅತ್ಯಧಿಕ ವೇಗದಲ್ಲಿ ಹೆಚ್ಚಾಗಿರುವ ಗ್ರಾಹಕತೆಯಿಂದ ತ್ಯಾಜ್ಯ ವಸ್ತು ಪರ್ವತೋಪಾದಿಯಲ್ಲಿ ಸೃಷ್ಟಿಯಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ವಾಯುಗೋಳದಲ್ಲಿ GHG ಗಳ ಮಟ್ಟವು ಅಧಿಕಗೊಂಡಿದೆ ಮತ್ತು ಜಾಗತಿಕ ವಾಯುಗುಣದಲ್ಲಿ ಬದಲಾವಣೆಯಾಗಿದೆ.

ಮಾನವ ಪ್ರೇರಿತ GHGಗಳು ಅಧಿಕಗೊಳ್ಳುವುದಕ್ಕೆ ಶಕ್ತಿ ವಿಭಾಗವು ಪ್ರಮುಖ ಎಂಬುದರಲ್ಲಿ ಅನುಮಾನವಿಲ್ಲ. ಯಂತ್ರಗಳ ಚಲನೆ, ಕೈಗಾರಿಕೆ ಹಾಗೂ ಗೃಹೋಪಯೋಗಕ್ಕೆ ಶಕ್ತಿ ಉತ್ಪಾದಿಸಲು ತೈಲ, ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲವನ್ನು ಬಳಸಲಾಗುವುದು. ಈ ವಿಭಾಗದಿಂದ ಮುಕ್ಕಾಲು ಭಾಗದಷ್ಟು CO2, ಐದರಲ್ಲಿ ಒಂದನೇ ಭಾಗದಷ್ಟು CH4  ಮತ್ತು ಅಧಿಕ ಪ್ರಮಾಣದ N2O ಗಳು ಹೊರಬರುತ್ತಿವೆ. ಈ ವಿಭಾಗದಿಂದ GHGs ಗಳಲ್ಲದ NOX (ನೈಟ್ರೋಜನ್ ಆಕ್ಸೈಡ್‌ಗಳು) ಮತ್ತು CO (ಕಾರ್ಬನ್ ಮಾನಾಕ್ಸೈಡ್) ಹೊರಬರುತ್ತವೆ. ಇವು GHGs ಗಳನ್ನು ಉತ್ಪಾದಿಸುವ ಅಥವಾ ನಶಿಸುವ ವಾಯುಗೋಳಿಕ ರಾಸಾಯನಿಕ ಆವರ್ತಗಳನ್ನು ಪ್ರಭಾವಿಸುತ್ತವೆ.

ಕಾರ್ಬನ್ ಡೈ‌ಆಕ್ಸೈಡ್ (CO2) : ಇದು ವಾಯುಗೋಳದಲ್ಲಿರುವ ಪ್ರಮುಖ GHG. ಪ್ರಸ್ತುತ ಜಾಗತಿಕ ತಾಪದಲ್ಲಿ ಏರಿಕೆ ಉಂಟಾಗಿರುವುದಕ್ಕೆ CO2 ಪ್ರಮಾಣವು ವಾಯುಗೋಳದಲ್ಲಿ ಅಧಿಕಗೊಂಡಿರುವುದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಗಿಡಮರಗಳ ದ್ರವ್ಯದಲ್ಲಿ CO2 ಇದೆ. ಈ ದ್ರವ್ಯ ಕೊಳೆತಾಗ ಅಥವಾ ದಹನಗೊಂಡಾಗ CO2 ಅಧಿಕ ಪ್ರಮಾಣದಲ್ಲಿ ಗಾಳಿ ಯನ್ನು ಸೇರುತ್ತದೆ. ಗಿಡ, ಮರ ಮತ್ತು ಪ್ರಾಣಿಗಳು ಮಿಲಿಯಾಂತರ ವರ್ಷಗಳಲ್ಲಿ ಪಳೆಯುಳಿಕೆ ಕ್ರಿಯೆಗೆ ಒಳಗಾಗುವುದರಿಂದ ಫಾಸಿಲ್ ಇಂಧನಗಳು ರಚನೆಯಾಗುತ್ತವೆ. ಆದ್ದರಿಂದ ಫಾಸಿಲ್ ಇಂಧನಗಳಲ್ಲಿ ಕಾರ್ಬನ್ ಅಧಿಕ ಸಾಂದ್ರತೆಯಲ್ಲಿರುವುದು ಮತ್ತು ಅವನ್ನು ದಹಿಸಿದಾಗ ಬೃಹತ್ ಪ್ರಮಾಣದ CO2 ಬಿಡುಗಡೆಯಾಗುವುದು. ಅರಣ್ಯನಾಶ, ಕೃಷಿ, ಭೂ ಬಳಕೆ ವಿಧಾನದಲ್ಲಿ ಬದಲಾವಣೆ, ಗಿಡ ಮರ ಕಡಿದು ನೆಲ ಅಚ್ಚುಕಟ್ಟು ಮಾಡುವುದು ಮುಂತಾದ ಚಟುವಟಿಕೆಗಳಿಂದ CO2 ಹೊರಸೂಸುವಿಕೆ ಮತ್ತಷ್ಟು ಹೆಚ್ಚಾಗಿದೆ. ವಾಯುಗೋಳದಲ್ಲಿ CO2 ಅಧಿಕವಾದಂತೆ ತಾಪವೂ ಅಧಿಕವಾಗುತ್ತದೆ.

ಮಿಥೇನ್ (CH4) : CO2 ಅನ್ನು ಬಿಟ್ಟರೆ CH4 ಮತ್ತೊಂದು ಪ್ರಮುಖ ಹಸಿರುಮನೆ ಅನಿಲ. CH4ಗೆ ಎರಡನೇ ಸ್ಥಾನವಿದೆ. CO2 ಗಿಂತ ೨೦ ಪಟ್ಟು ಹಸಿರುಮನೆ ಪರಿಣಾಮವನ್ನು CH4 ಹೊಂದಿದೆ ಎಂಬುದು ವಿಶೇಷ ಸಂಗತಿ. ಪ್ರಪಂಚದ ಒಟ್ಟು CH4 ಹೊರಸೂಸುವಿಕೆಯಲ್ಲಿ ಹಸು, ಎಮ್ಮೆ, ಮೇಕೆ, ಹಂದಿ, ಒಂಟೆ, ಕುದುರೆ ಮತ್ತು ಕುರಿಗಳಂತಹ ಸಾಕುಪ್ರಾಣಿಗಳಿಂದ ನಾಲ್ಕನೇ ಒಂದು ಭಾಗ ಬರುತ್ತದೆ ಎಂಬುದು ಆತಂಕದ ವಿಷಯ. ಈ ಪ್ರಾಣಿಗಳು ಮೆಲುಕು ಹಾಕುವಾಗ ಹಾಗೂ ಮಲವಿಸರ್ಜನೆ ಮಾಡುವಾಗ CH4 ಉತ್ಪಾದನೆಯಾಗುವುದು.

ಮಿಥೇನ್‌ನ ಒಟ್ಟು ಉತ್ಪಾದನೆಯಲ್ಲಿ ಸುಮಾರು ೧೫% ರಿಂದ ೨೦% ರಷ್ಟು ಭತ್ತದ ಗದ್ದೆಗಳಿಂದ ವಿಶೇಷವಾಗಿ ನಾಟಿ ಮಾಡುವಾಗ ಹಾಗೂ ಕಾಳುಗಳು ಹಾಲು ತುಂಬುವಾಗ ಅಧಿಕ ನೀರು ನಿಲ್ಲಿಸುವುದರಿಂದಾಗಿ ಹೊರಸೂಸಲ್ಪಡುತ್ತದೆ. ಗದ್ದೆಗಳಲ್ಲಿ ನೀರು ನಿಂತಾಗ, ಮಣ್ಣಿನಲ್ಲಿ ಆಕ್ಸಿಜನ್ ಇಲ್ಲದ ಸ್ಥಿತಿ (ಅನೆರೊಬಿಕ್) ಉಂಟಾಗುವುದು. ಆಗ ಮಣ್ಣಿನಲ್ಲಿರುವ CH4 ಉತ್ಪಾದನಾ ಬ್ಯಾಕ್ಟಿರಿಯಾಗಳು ಮಣ್ಣಿನ ಆರ‍್ಗಾನಿಕ್ ದ್ರವ್ಯವನ್ನು ಕೊಳೆಯಿಸುವುದರಿಂದ CH4 ಬಿಡುಗಡೆಯಾಗುತ್ತದೆ. ಭತ್ತ ಬೆಳೆಯುವ ಸುಮಾರು ೯೦ ರಷ್ಟು ಭಾಗವು ಏಷ್ಯಾದಲ್ಲಿಯೇ ಇದೆ. ಭತ್ತ ಇಲ್ಲಿಯ ಜನರ ಪ್ರಧಾನ ಆಹಾರ.

ಜನಸಂಖ್ಯೆ ಬೆಳೆಯುತ್ತಾ ಹೋದಂತೆ ಜನರ ಗ್ರಾಹಕತೆಯೂ ಹೆಚ್ಚುತ್ತಿದೆ. ಹಾಗಾಗಿ ಪ್ರಪಂಚಾದ್ಯಂತ ತ್ಯಾಜ್ಯ ನಿರ್ಮಾಣ ಹೆಚ್ಚುತ್ತಲೇ ಇದೆ. ತ್ಯಾಜ್ಯದ ವಿಲೇವಾರಿಯೇ ಒಂದು ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ತ್ಯಾಜ್ಯವನ್ನು ಹಾಳು ಗುಂಡಿಗಳಲ್ಲಿ ಮುಚ್ಚಿದಾಗ, ಅದರ ಕೊಳೆಯುವಿಕೆಯಿಂದಲೂ CH4 ಬಿಡುಗಡೆಯಾಗುವುದು. ಒಂದು ವೇಳೆ ತ್ಯಾಜ್ಯವನ್ನು ಸುಟ್ಟು ಹಾಕಿದರೆ CO2 ಬಿಡುಗಡೆಯಾಗುವುದು. ತೈಲ ನಿಕ್ಷೇಪಗಳನ್ನು ಕೊರೆಯುವಾಗ ಮತ್ತು ಕಲ್ಲಿದ್ದಲ ಗಣಿಗಾರಿಕೆ ಮಾಡುವಾಗ CH4 ಬಿಡುಗಡೆಯಾಗುವುದು. ನೈಸರ್ಗಿಕ ಅನಿಲ ಸರಬರಾಜು ಪೈಪುಗಳ ಸೋರಿಕೆಯಿಂದ ಅಥವಾ ಅಪಘಾತಗಳಿಂದ ಅಥವಾ ಕಡಿಮೆ ದರ್ಜೆಯ ನಿರ್ವಹಣೆಯಿಂದಲೂ CH4 ಹೊರಸೂಸುವಿಕೆ ಉಂಟಾಗುವುದು.

ನೈಟ್ರೋಜನ್ ಆಕ್ಸೈಡ್‌ಗಳು : ರಸಗೊಬ್ಬರಗಳ ಬಳಕೆಯಿಂದ ಅಧಿಕ ಪ್ರಮಾಣದ N2O ಹೊರಸೂಸುವಿಕೆ ಉಂಟಾಗುವುದು. ರಸಗೊಬ್ಬರದ ವಿಧ, ಬಳಸುವ ವಿಧಾನ, ಹಾಕುವ ಸಮಯ ಮತ್ತು ಉಳುಮೆ ವಿಧಾನಗಳಿಂದ ಎಷ್ಟು ಪ್ರಮಾಣದ N2O ಹೊರಸೂಸುವುದು ಎಂಬುದು ತೀರ್ಮಾನವಾಗುತ್ತದೆ. ಕಡಲೆ, ಅವರೆ ಮತ್ತು ಕಾಳುಗಳ ಸಸ್ಯಗಳಂತಹ ಮಣ್ಣಿಗೆ ನೈಟ್ರೋಜನ್ ಸೇರಿಸುವ ಸಸ್ಯಗಳಿಂದಲೂ N2O ಹೊರಸೂಸುವಿಕೆ ಉಂಟಾಗುವುದು.

ತೇಲುಧೂಳು (Aerosols) : ನೈಸರ್ಗಿಕವಾಗಿ ಮತ್ತು ಮಾನವ ಚಟುವಟಿಕೆಯಿಂದ ದ್ರವ್ಯಗಳ ಸಣ್ಣಕಣಗಳು ಅಥವಾ ದ್ರವದ ಸೂಕ್ಷ್ಮ ಹನಿಗಳು ಏರೋಸಾಲ್‌ಗಳಾಗಿ ವಾಯುಗೋಳ ಸೇರುತ್ತವೆ. ಅಗ್ನಿಪರ್ವತಗಳಿಂದ ಬರುವ ಸಲ್ಫೇಟುಗಳು, ಸಾಗರದ ಸೂಕ್ಷ್ಮಜೀವಿಗಳು, ಫಾಸಿಲ್ ಇಂಧನಗಳ ದಹನದ ಸೂಕ್ಷ್ಮಕಣಗಳು, ಕಾರ್ಬನ್‌ಯುಕ್ತ ಕಣಗಳು, ಖನಿಜಗಳ ಧೂಳು ಮತ್ತು ಕಡಲ ಉಪ್ಪಿನ ಕಣಗಳು ಕೆಲವು ಪ್ರಮುಖ ಏರೋಸಾಲ್‌ಗಳು. ಇವು ಪ್ರಮುಖವಾಗಿ ಸೌರಶಕ್ತಿಯನ್ನು ಬಾಹ್ಯಾಕಾಶಕ್ಕೆ ಪ್ರತಿಫಲನವಾಗುವಂತೆ ಮಾಡುವುದರಿಂದ ವಾಯುಗುಣದ ಮೇಲೆ ತಂಪಿನ ಪ್ರಭಾವವಾಗುತ್ತದೆ. ಅಲ್ಲದೆ ಹೊಗೆಯಂತಹ ಕೆಲವು ಏರೋಸಾಲ್‌ಗಳು ಸೌರಕಿರಣಗಳನ್ನು ಹೀರಿಕೊಳ್ಳುವುದರಿಂದ ವಾಯುಗುಣದ ಮೇಲೆ ಬಿಸಿಯಾಗುವ ಪ್ರಭಾವ ಬೀರುತ್ತವೆ.

ಕ್ಲೋರೋಪ್ಲೋರೋ ಕಾರ್ಬನ್‌ಗಳು : ೧೯೬೦ ಮತ್ತು ೧೯೮೦ರ ದಶಕಗಳಲ್ಲಿ ಮಾನವ ನಿರ್ಮಿತ ಅನಿಲಗಳಾದ ಕ್ಲೋರೋಪ್ಲೊರೋ ಕಾರ್ಬನ್‌ಗಳು ಅಧಿಕ ಪ್ರಮಾಣದಲ್ಲಿ ವಾಯುಗೋಳ ಸೇರಿದವು. ಇವು ವಾಯುಗೋಳದ ಸ್ತರಗೋಳದಲ್ಲಿರುವ ಓಜ಼ೋನ್ ಪದರವನ್ನು ನಾಶ ಮಾಡುತ್ತವೆ. ಓಜ಼ೋನ್ (O3) ಪದರವು ಸೂರ್ಯನಿಂದ ಬರುವ ಅಪಾಯಕಾರಿ ಯು.ವಿ. ಕಿರಣಗಳನ್ನು ಹೀರಿಕೊಳ್ಳುತ್ತದೆ. ಅದರಿಂದಾಗಿ ಭೂಮಿಯ ಎಲ್ಲ ಜೀವಿಗಳಿಗೆ ರಕ್ಷಣೆ ದೊರೆಯುತ್ತದೆ. ೧೯೫೦ರ ದಶಕದಿಂದಲೂ CFC (ಕ್ಲೋರೋಪ್ಲೋರೋ ಕಾರ್ಬನ್) ಗಳನ್ನು ರೆಫ್ರಿಜಿರೇಟರ್, ಹವಾ ನಿಯಂತ್ರಕ ಹಾಗೂ ಏರೋಸಾಲ್ ಸಿಂಪಡಕಗಳು, ಅಗ್ನಿಶಾಮಕಗಳು ಮತ್ತು ಪ್ಲಾಸ್ಟಿಕ್ ಫೋಮ್ ಮತ್ತು ಸಾಲ್ವೆಂಟ್‌ಗಳ ಉತ್ಪಾದನೆಯಲ್ಲಿ ಹೇರಳವಾಗಿ ಬಳಸುತ್ತಾರೆ. ಮಾಂಟ್ರಿಯಲ್ ಒಡಂಬಡಿಕೆಯು ಸಕರಾತ್ಮಕ ಕಾರ್ಯ ಕೈಗೊಂಡಿದ್ದು ೧೯೯೦ ರಿಂದ CFC ಬಳಕೆಯಲ್ಲಿ ತುಂಬ ಕಡಿಮೆಯಾಗುವಂತೆ ಮಾಡಿದೆ. CFC ಬದಲಿಗೆ ಅಷ್ಟು ಅಪಾಯಕಾರಿಯಲ್ಲದ ವಸ್ತುಗಳನ್ನು ಅಭಿವೃದ್ಧಿಪಡಿಸಲಾಗಿದೆ. ತತ್ಪ್ರಯುಕ್ತ CFC ಸಾಂದ್ರತೆಯು ತೀವ್ರದರದಲ್ಲಿ ಕಡಿಮೆಯಾಗಿದೆ. ಸದ್ಯದಲ್ಲಿ ಅವು ಪರಿಸರ ಬಿಕ್ಕಟ್ಟುಗಳಲ್ಲಿ ಅತಿ ಪ್ರಧಾನವಲ್ಲವೆಂಬುದು ಸ್ವಲ್ಪ ಸಮಾಧಾನ ತರುವ ಸಂಗತಿ.


ಹವಾಗುಣ ಬದಲಾವಣೆಗೆ ದಿನನಿತ್ಯ ನಮ್ಮ ಕೊಡುಗೆ

ಇಂದಿನ ಪ್ರಪಂಚದಲ್ಲಿ ಪ್ರತಿಯೊಬ್ಬರು ಆತ ಅಥವಾ ಆಕೆ ಸ್ವಲ್ಪವಾದರೂ ಹವಾಗುಣ ಬದಲಾವಣೆಗೆ ಪ್ರತ್ಯಕ್ಷ ಅಥವ ಪರೋಕ್ಷವಾಗಿ ಕಾರಣವಾಗುತ್ತಿದ್ದಾರೆ. ಈ ಕೆಳಗಿನ ಅಂಶಗಳನ್ನು ಗಮನಿಸಿ :

೧. ನಗರ ಪ್ರದೇಶಗಳಲ್ಲಿ ಮನೆ, ರಸ್ತೆ, ಶಾಲೆ, ಕಛೇರಿ ಮತ್ತು ಅಂಗಡಿಗಳಿಗೆ ಬೆಳಕಿನ ಶಕ್ತಿ ಒದಗಿಸಲು ವಿದ್ಯುತ್ ಒಂದು ಪ್ರಮುಖ ಶಕ್ತಿ ಮೂಲ. ನಮಗೆ ಬೆಳಕು, ಫ್ಯಾನ್, ಹವಾನಿಯಂತ್ರಕಗಳು, ಕಂಪ್ಯೂಟರ್‌ಗಳು ಮತ್ತು ಇತರೆ ಗೃಹೋಪಯೋಗಿ ಉಪಕರಣಗಳನ್ನು ಬಳಸಲು ಉಷ್ಣಶಕ್ತಿ ಸ್ಥಾವರಗಳಿಂದ ಉತ್ಪಾದನೆಯಾಗುವ ವಿದ್ಯುತ್ ಬೇಕಾಗಬಹುದು.

೨. ನಮ್ಮ ನಗರಗಳಲ್ಲಿ ಸ್ಕೂಟರ್, ಬೈಕ್, ರೈಲು, ಕಾರು, ಬಸ್ಸು, ಲಾರಿ ಮುಂತಾದವು ಪ್ರಮುಖ ಸಾರಿಗೆ ವಾಹನಗಳು. ಇವು ಪ್ರಮುಖವಾಗಿ ಫಾಸಿಲ್ ಇಂಧನಗಳಾದ ಪೆಟ್ರೋಲ್ ಅಥವಾ ಡೀಸೆಲ್ ಅವಲಂಬಿಸಿವೆ.

೩. ಕೈಗಾರಿಕೆಗಳಿಗೆ ಗ್ರಾಹಕತೆ ಎಂಬುದು ಪ್ರಮುಖ ಅಂಶ. ಹೆಚ್ಚು ಜನರು ಭೋಗದ ವಸ್ತುಗಳನ್ನು, ಅವಶ್ಯಕ ವಸ್ತುಗಳನ್ನು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವಂತಾದರೆ, ಕೈಗಾರಿಕೆಗಳು ಶ್ರೀಮಂತವಾಗುತ್ತವೆ. ಬಹುತೇಕ ಕೈಗಾರಿಕೆಗಳು ಫಾಸಿಲ್ ಇಂಧನಗಳ ದಹನದಿಂದ ಬರುವ ಶಕ್ತಿಯನ್ನು ಬಳಸಿ ವಸ್ತುಗಳನ್ನು ತಯಾರಿಸುತ್ತವೆ. ಅಲ್ಲದೆ ನಾವು ಹೆಚ್ಚು ವಸ್ತುಗಳನ್ನು ಬಳಸಿದಾಗ, ಹೆಚ್ಚೆಚ್ಚು ತ್ಯಾಜ್ಯ ಉಂಟಾಗುತ್ತದೆ.

೪. ನಾವು ಉತ್ಪತ್ತಿ ಮಾಡುವ ಬಹಳಷ್ಟು ತ್ಯಾಜ್ಯವು (ಉದಾಹರಣೆಗೆ ಪ್ಲಾಸ್ಟಿಕ್) ಕೊಳೆಯುವುದಿಲ್ಲ. ಪರಿಸರದಲ್ಲಿ ಸಾವಿರಾರು ವರ್ಷಗಳ ಕಾಲ ಹಾಗೆ ಇರುತ್ತದೆ ಮತ್ತು ಪರಿಸರಕ್ಕೆ ಅಪಾಯ ಉಂಟು ಮಾಡುತ್ತದೆ.

೫. ನಾವು ಶಾಲಾ ಕಾಲೇಜುಗಳಲ್ಲಿ, ಕಛೇರಿಗಳಲ್ಲಿ ಅಧಿಕ ಪ್ರಮಾಣದ ಕಾಗದವನ್ನು ಬಳಸುತ್ತೇವೆ. ಪ್ರತಿದಿನ ನಾವು ಬಳಸುವ ಕಾಗದದ ತಯಾರಿಕೆಗೆ ಅನೇಕ ಮರಗಳು ಉರುಳಬೇಕಾಗುತ್ತವೆ.

೬. ಮನೆಗಳ ನಿರ್ಮಾಣಕ್ಕೆ ಅಧಿಕ ಪ್ರಮಾಣದ ಚೌಬೀನೆಯನ್ನು ಬಳಸುತ್ತೇವೆ. ಇದರಿಂದ ಅರಣ್ಯನಾಶವಾಗುತ್ತದೆ.

೭. ಅನೇಕ ವೇಳೆ ಪರಿಸರಕ್ಕೆ ಆಗುವ ಆಘಾತ ಅಗೋಚರವಾಗಿರುತ್ತದೆ, ನೇರವಾಗಿ ಕಂಡು ಬರುವುದಿಲ್ಲ. ಉದಾಹರಣೆಗೆ ನಾವು ಕೆಲವು ಉಪಕರಣಗಳನ್ನು ಬ್ಯಾಟರಿ ಸೆಲ್‌ಗಳಿಂದ ನಡೆಸುವುದರಿಂದ ನಾವು ಪರಿಸರ ಹಾಗೂ ಹವಾಗುಣಕ್ಕೆ ಆಘಾತ ತಪ್ಪಿಸಿದ್ದೇವೆ ಎಂದು ಭಾವಿಸುತ್ತೇವೆ. ನಮ್ಮ ಮೊಬೈಲುಗಳಿಂದ, ಹ್ಯಾಂಡಿಕ್ಯಾಮುಗಳಿಂದ ಹೊಗೆಯೇನೂ ಬರುವುದಿಲ್ಲ ! ಆದರೆ ಬ್ಯಾಟರಿಗಳ ತಯಾರಿಕೆಗೆ ಬಳಸುವ ವಿವಿಧ ಲೋಹಗಳು, ರಸಾಯನಿಕಗಳು, ಪ್ಲಾಸ್ಟಿಕ್ ಮುಂತಾದವನ್ನು ನಾವು ಮರೆತು ಬಿಡುತ್ತೇವೆ. ಇವನ್ನು ತಯಾರಿಸುವ ಪ್ರತಿ ಕೈಗಾರಿಕೆಗಳು ವಿದ್ಯುತ್ತನ್ನು ಬಳಸುತ್ತವೆ. ಅಲ್ಲದೆ ವಾಯುಗುಣ ಬದಲಾವಣೆಗೆ ಕೊಡುಗೆ ನೀಡುವ ಹಲವಾರು ಮಲಿನ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ !

೮. ಜನಸಂಖ್ಯಾ ಬೆಳವಣಿಗೆ ಎಂದರೆ ಆಹಾರ ತಿನ್ನಲು ಇನ್ನಷ್ಟು ಜನ ಸೇರಿದಂತೆ. ಕೃಷಿ ವಿಸ್ತರಣೆಗೆ ಇರುವ ನೆಲ ವಿಸ್ತರಣೆಗೊಳ್ಳುವುದಿಲ್ಲ. ವಾಸ್ತವವಾಗಿ ಪರಿಸರ ಅವನತಿಯಿಂದ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಇರುವ ನೆಲದಲ್ಲಿಯೇ ಇಳುವರಿ ಹೆಚ್ಚು ಪಡೆಯಲು ಹೈಬ್ರಿಡ್ ತಳಿಗಳನ್ನು ಬಳಸಲಾಗುತ್ತಿದೆ ಮತ್ತು ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಹೈಬ್ರಿಡ್ ತಳಿಗಳಿಗೆ ಅಧಿಕ ಪ್ರಮಾಣದ ರಸಗೊಬ್ಬರ ಬೇಕು. ರಸಗೊಬ್ಬರ ಹಾಕಿದಾಗ N2O ಅನಿಲಗಳು ಹೆಚ್ಚು ವಾಯುಗೋಳಕ್ಕೆ ಸೇರುತ್ತವೆ. ಅಲ್ಲದೆ ರಸಗೊಬ್ಬರ ಕೈಗಾರಿಕೆಗಳಿಂದ ಇತರೆ ಮಲಿನಕಾರಿ ವಸ್ತುಗಳು ಹೊರಬರುತ್ತವೆ. ಹೊಲಗದ್ದೆಗಳಿಂದ ರಸಗೊಬ್ಬರವು ಮೇಲ್ಮೈ ನೀರಿನಲ್ಲಿ ಸೇರಿ ನದಿ, ಕೆರೆ ನೀರನ್ನು ಮಲಿನಗೊಳಿಸುತ್ತದೆ.

—-

ಪ್ರಮುಖ ಹಸಿರು ಅನಿಲಗಳ ಕಾಲಾನುಕ್ರಮದ ವಿವರಗಳು

ವಿವರಗಳು CO2    CH4     N2O    CFC

ಪ್ರಮಾಣ (ಸಾರೀಕರಣ)

೧೮೫೦ ರಲ್ಲಿ                                           ೨೮೦ ppm        ೧೧೫೦ ppb      ೨೮೫ ppb         ೦ ppb

೧೯೮೫ ರಲ್ಲಿ                                            ೩೪೫ ppm       ೧೭೯೦ ppb       ೩೦೫ ppb         ೦.೪ ppb

೨೦೭೫ ಕ್ಕೆ ನಿರೀಕ್ಷೆ                                    ೫೨೬ ppm       ೪೪೦೨ ppb      ೪೭೮ ppb         ೩.೮ ppb

ವಾರ್ಷಿಕವಾಗಿ ಶೇ. ಹೆಚ್ಚಳ                        ೦.೪      ೧.೦      ೦.೨      ೫.೦

ಸಾಪೇಕ್ಷತಾ ಹಸಿರುಮನೆ ದಕ್ಷತೆ, CO2       ೧          ೨೫       ೨೩೦     ೧೫೦೦

ಪ್ರಸ್ತುತ ಹಸಿರುಮನೆಗೆ ಕೊಡುಗೆ %             ೫೭       ೧೨       ೬          ೨೫

೧೯೮೫ ರಿಂದ ೨೦೭೫ ರಷ್ಟಕ್ಕೆ

ನಿರೀಕ್ಷಿಸಿರುವ % ಏರಿಕೆ                             ೦.೫೭    ೧.೦      ೦.೫      ೨.೫

ಸಮತೋಲ ಉಷ್ಣತೆ ಬದಲಾವಣೆ               ೩.೧೨    ೦.೬೨    ೦.೨೮    ೦.೯೩

(೧೮೫೦-೨೦೭೫, ನಿರೀಕ್ಷಿತ) ೦ಸೆ.                                       ಒಟ್ಟು ೪.೯೫

ಒಟ್ಟು ಉಷ್ಣತೆಯ ಬದಲಾವಣೆ, %               ೬೩        ೧೨       ೦೬       ೧೯

ಒಟ್ಟು ೧೦೦%

ಜೀವಿತಾವಧಿ (ವರ್ಷಗಳಲ್ಲಿ)                        ೧೦೦     ೧೦       ೧೫೦    ೧೦೦