ವಿಶ್ವದ ಎಲ್ಲ ಸ್ಥಳಗಳಲ್ಲಿಯೂ ಕಳೆದ ನಾಲ್ಕೈದು ದಶಕಗಳಿಂದ ವಾಯುಗುಣ ಬದಲಾಗುತ್ತಿರುವುದು ದೃಢ ಪಟ್ಟಿದೆ. ಅದು ತೀವ್ರ ದರದಲ್ಲಿ ಹಾಗೂ ಮಾನವನ ಚಟುವಟಿಕೆಗಳಿಂದ ಬದಲಾಗುತ್ತಿರುವುದು ಆತಂಕದ ವಿಷಯ. ಕೆಲವು ಪ್ರಮುಖ ಅಂಕಿ ಅಂಶಗಳು ಹೀಗಿವೆ :

೧. ಕಳೆದ ಒಂದು ನೂರು ವರ್ಷಗಳಲ್ಲಿ ಜಾಗತಿಕ ತಾಪವು ೦.೭ ರಿಂದ ೧.೫೦ ಸೆ. ರಷ್ಟು ಅಧಿಕವಾಗಿದೆ.

೨. ಕ್ರಿಸ್ತ ಶಕ ೨೧೦೦ರ ಹೊತ್ತಿಗೆ ೧೯೯೦ರಲ್ಲಿದ್ದ ತಾಪಕ್ಕೆ ಹೋಲಿಸಿದರೆ ೧.೪ ರಿಂದ ೫.೮೦ಸೆ. ನಷ್ಟು ತಾಪ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ.

೩. ಕಳೆದ ಶತಮಾನದಲ್ಲಿ ಸಮುದ್ರ ಮಟ್ಟ ಏರಿರುವುದಕ್ಕೆ ಹೋಲಿಸಿದರೆ ಈಗ ಪ್ರತಿಶತ ೫೦ ರಷ್ಟು ವೇಗವಾಗಿ ಸಮುದ್ರಮಟ್ಟ ಏರುತ್ತಿದೆ.

೪. ಕ್ರಿಸ್ತ ಶಕ ೨೧೦೦ರ ವೇಳೆಗೆ ೩.೫ ರಿಂದ ೩೪.೬ ಅಂಗುಲಗಳಷ್ಟು ಸಮುದ್ರ ಮಟ್ಟ ಅಧಿಕವಾಗಬಹುದೆಂದು ವಿಜ್ಞಾನಿಗಳು ಊಹಿಸಿದ್ದಾರೆ.

೫. ಹಿಂದಿನ ಶತಮಾನದಲ್ಲಿ ಐದು ಅತ್ಯಧಿಕ ಬಿಸಿ ವಾತಾವರಣದ ವರ್ಷಗಳು ಉಂಟಾಗಿವೆ. ೨೦೦೫, ೧೯೯೮, ೨೦೦೨, ೨೦೦೩, ೨೦೦೪. ಅತಿ ಹೆಚ್ಚಿನ ತಾಪವಿದ್ದ ಹತ್ತು ವರ್ಷಗಳು ೧೯೯೦ರ ನಂತರವೇ ಉಂಟಾಗಿವೆ.

೬. ಕೈಗಾರಿಕಾ ಕ್ರಾಂತಿಯ ನಂತರ ಕಾರ್ಬನ್ ಡೈ ಆಕ್ಸೈಡ್‌ನ ಪ್ರಮಾಣ ವಾಯುಗೋಳದಲ್ಲಿ ಪ್ರತಿಶತ ೩೫ ರಷ್ಟು ಅಧಿಕವಾಗಿದೆ.

೭. ಮಾನವನ ಚಟುವಟಿಕೆಗಳಿಂದಲೇ ವಾಯುಗೋಳಕ್ಕೆ ಪ್ರತಿ ವರ್ಷ ಸುಮಾರು ೭ ಬಿಲಿಯನ್ ಮೆಟ್ರಿನ್ ಟನ್ನುಗಳಷ್ಟು ಕಾರ್ಬನ್ ಸೇರುತ್ತಿದೆ.

೮. ೨೦೩೦ರ ವೇಳೆಗೆ ವಿಶ್ವದಲ್ಲಿ ವಾಹನಗಳ ಸಂಖ್ಯೆ ೫೦% ಅಧಿಕವಾಗುವುದು.

೯. ಅಮೆರಿಕಾ ದೇಶದ ತಾಪವು ಈಗಾಗಲೇ ಸುಮಾರು ೪೦ ಫ್ಯಾ.ನಷ್ಟು ಅಧಿಕಗೊಂಡಿದೆ.

೧೦. ಜಾಗತಿಕ ತಾಪ ಏರಿಕೆಯಿಂದ ಕೃಷಿ ಮತ್ತು ಜೀವಿ ವೈವಿಧ್ಯ ಅಪಾಯಕ್ಕೆ ಸಿಲುಕಿವೆ. ಪ್ರತಿಶತ ೧೦ ರಷ್ಟು ಸಸ್ಯಗಳು ಅಪಾಯದ ಅಂಚಿನಲ್ಲಿವೆ.

೧೧. ಎರಡು ಕೋಟಿಗೂ ಅಧಿಕ ಅಮೆರಿಕನ್ನರು ಅಸ್ತಮಾದಿಂದ ನರಳುತ್ತಿದ್ದಾರೆ. ಇವರಲ್ಲಿ ೬೩ ಲಕ್ಷ ಮಕ್ಕಳು, ಹಸಿರು ಮನೆ ಅನಿಲಗಳ ಹೊರಸೂಸುವಿಕೆ ಹೆಚ್ಚಾದಂತೆ ರೋಗಿಗಳ ಸಂಖ್ಯೆಯೂ ಹೆಚ್ಚುವುದೆಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

೧೨. ನಗರಗಳಲ್ಲಿ ಧೂಳಿನ ಕವಳ ಹಿಡಿಯುವ ದಿನಗಳು ಹೆಚ್ಚಾಗುತ್ತಿವೆ.

೧೩. ಮಲೇರಿಯ ರೋಗದಂತಹ ರೋಗಗಳು ಉಲ್ಬಣಗೊಳ್ಳುತ್ತಿವೆ. ತೆಂಗಿನ ಗಿಡಗಳಿಗೆ ನುಸಿ ಪೀಡೆ, ಮನುಷ್ಯನಿಗೆ ಚಿಕೂನ್‌ಗುನ್ಯಾ, ಡೆಂಗ್ಯೂ, ಎಚ್೧ಎನ್೧ ಜ್ವರ ಮುಂತಾದ ರೋಗಗಳು ಅಧಿಕಗೊಂಡಿವೆ.

೧೪. ೧೯೭೦ರ ನಂತರ ಉತ್ತರ ಧ್ರುವದಲ್ಲಿ ಬೃಹತ್ ಪ್ರಮಾಣದ ಹಿಮ ಕರಗಿದೆ. ಟೆಕ್ಸಾಸ್‌ನ ಎರಡರಷ್ಟು ಪ್ರದೇಶದ ಹಿಮ ಕರಗಿದೆ ಎಂದು ಅಂದಾಜು ಮಾಡಲಾಗಿದೆ.

೧೫. ಹಿಮಾಲಯ ಪರ್ವತ ಶ್ರೇಣಿಗಳ ಹಿಮ ತುಂಬಿದ ಪ್ರದೇಶ ಕಡಿಮೆಯಾಗಿದೆ.

೧೬. ಚಂಡ ಮಾರುತಗಳ ಪ್ರಮಾಣ, ತೀವ್ರತೆ ಅಧಿಕವಾಗಿದೆ. ಐಲ, ಕತ್ರೀನಾಗಳು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿವೆ. ಕೋಟ್ಯಾಂತರ ರೂ.ಗಳ ಆಸ್ತಿ ಪಾಸ್ತಿ ನಷ್ಟವಾಗಿದೆ.

೧೭. ಅತಿ ಮಳೆಯಿಂದ ಪ್ರವಾಹಗಳು ಒಂದು ಕಡೆ, ವಿರಳ ಮಳೆಯಿಂದ ಕ್ಷಾಮ ಮತ್ತೊಂದು ಕಡೆ ಉಂಟಾಗುವುದು ಅಧಿಕವಾಗಿದೆ.

೧೮. ಭಾರತದಲ್ಲಿ ಮಳೆಗಾಲಗಳಲ್ಲಿ ಏರುಪೇರಾಗಿದೆ. ಮುಂಗಾರು ಮಳೆ ಹದಿನೈದು ದಿನ ತಡವಾಗಿ ಅಥವಾ ಮುಂಚಿತವಾಗಿ ಬರುತ್ತಿದೆ. ಮಳೆ ಬೀಳುವ ಪ್ರಮಾಣ, ಸಮಯ ಹಾಗೂ ಶೈಲಿಯಲ್ಲಿ ಬದಲಾವಣೆಗಳಾಗಿವೆ. ಚಂಡಮಾರುತಗಳ ತೀವ್ರತೆ ಹೆಚ್ಚಿದೆ. ಬರಗಾಲ, ಪ್ರವಾಹ, ಶೀತಗಾಳಿ, ಬಿಸಿಹವೆಗಳ ಆಘಾತ ಹೆಚ್ಚಿದೆ.

೧೯. ಹವಾಗುಣ ಬದಲಾವಣೆಯಿಂದ ಸುಮಾರು ೮೫% ಅಮೆಜಾನ್ ಅರಣ್ಯಗಳು ಅಪಾಯದಲ್ಲಿ ಸಿಲುಕಿವೆ.