ವಾಯುಗುಣ ಬದಲಾವಣೆ (Climate change) ಒಂದು ನೈಸರ್ಗಿಕ ಕ್ರಿಯೆ. ಭೂಮಿ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ವಾಯುಗುಣ ಬದಲಾವಣೆಯಾಗುತ್ತಿದೆ. ಕಳೆದ ೪೦೦,೦೦೦ ವರ್ಷಗಳಿಂದ ಭೂಮಿಯ ವಾಯುಗುಣದಲ್ಲಿ ಅಸ್ಥಿರತೆಯಿದ್ದು ನಿರ್ದಿಷ್ಟವಾದ ಉಷ್ಣ ಹಾಗೂ ಶೀತ ಅವಧಿಗಳು ಕಂಡುಬಂದಿವೆ. ಮಾನವ ವಿಕಾಸವಾದ ನಂತರವೂ ಮತ್ತು ನಾಗರೀಕತೆ ಅಸ್ಥಿತ್ವಕ್ಕೆ ಬಂದ ಮೇಲೂ ವಾಯುಗುಣದಲ್ಲಿ ಹಲವಾರು ಏರುಪೇರುಗಳಾಗಿವೆ.

ಒಂದು ಪ್ರದೇಶದ ಹವಾಮಾನದ ಸರಾಸರಿಯಲ್ಲಾಗುವ ಬದಲಾವಣೆಯನ್ನು ವಾಯುಗುಣ ಬದಲಾವಣೆ ಎನ್ನುವರು. ಇದು ತಾಪಮಾನ, ಬೀಸುವ ಗಾಳಿ ವಿಧಾನಗಳು ಮತ್ತು ಮಳೆ, ಹಿಮ ಬೀಳುವುದನ್ನು ಒಳಗೊಂಡಿದೆ.ಭೂಮಿಯ ವಾಯುಗುಣವು ಸೂರ್ಯನಿಂದ ಬರುವ ಶಕ್ತಿಯನ್ನು ಅವಲಂಬಿಸಿದೆ. ಸೂರ್ಯನಿಂದ ಶಕ್ತಿ ಪ್ರಮುಖವಾಗಿ ಬೆಳಕಿನ ರೂಪದಲ್ಲಿ (Visible light) ಭೂಮಿಯನ್ನು ತಲುಪುವುದು. ಇದರಲ್ಲಿ ಪ್ರತಿಶತ ೩೦ ರಷ್ಟು ಶಕ್ತಿಯು ತಕ್ಷಣ ಬಾಹ್ಯಾಕಾಶಕ್ಕೆ ಪ್ರತಿಫಲನಗೊಳ್ಳುವುದು. ಉಳಿದ ಶಕ್ತಿಯ ಪ್ರತಿಶತ ೭೦ ರಷ್ಟರಲ್ಲಿ ಬಹಳಷ್ಟು ವಾಯುಗೋಳದ ಮೂಲಕ ಭೂಮೇಲ್ಮೈಯನ್ನು ತಲುಪುವುದು. ಅದರಿಂದ ಭೂಮಿ ಬಿಸಿಯಾಗುವುದು. ಸೂರ್ಯನಿಗೆ ಹೋಲಿಸಿದರೆ, ಭೂಮಿಯು ತುಂಬ ತಂಪಾಗಿರುವ ಪ್ರಯುಕ್ತ ಗೋಚರ ಬೆಳಕು ಪ್ರತಿಫಲನವಾಗುವುದರ ಬದಲು ಅವಗೆಂಪು ಕಿರಣಗಳನ್ನು ಅಥವಾ ಉಷ್ಣತಾ ವಿಕಿರಣಗಳನ್ನು ಪ್ರತಿಫಲಿಸುತ್ತದೆ. ಇದು ಭೂ ವಾತಾವರಣದಲ್ಲಿ ಜಲಚಕ್ರ, ಇಂಗಾಲದ ಚಕ್ರ ಮುಂತಾದ ವಿವಿಧ ಚಲನಾ ಆವರ್ತಗಳಿಗೆ ಕಾರಣವಾಗಿದೆ ಮತ್ತು ವಾಯುಗುಣದ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುತ್ತಿದೆ. ವಾಯುಗೋಳದ ಓಜ಼ೋನ್ ಅನಿಲದ ಪದರವು ಸೂರ್ಯನ ಅತಿನೇರಳೆ (ಯು.ವಿ.) ಕಿರಣಗಳು ಒಳಬರದಂತೆ ತಡೆಯುತ್ತದೆ. ವಾಯುಗೋಳವು ಸೂರ್ಯನ ಶಕ್ತಿಯನ್ನು ಹೀಗೆ ಹಿಡಿದಿಟ್ಟುಕೊಳ್ಳದಿದ್ದರೆ ಮತ್ತು ಸೂರ್ಯನಿಂದ ಬರುವ ಅಪಾಯಕಾರಿಯಾದ ಯು.ವಿ. ಕಿರಣಗಳು ಭೂ ವಾತಾವರಣಕ್ಕೆ ಬರದಂತೆ ತಡೆಯದಿದ್ದರೆ,  ಭೂಮಿಯ ವಾಯುಗುಣವು ಇಂದಿನಂತೆ ಇರುತ್ತಿರಲಿಲ್ಲ. ಭೂಮಿಯನ್ನು ಬೆಚ್ಚಗಿಡಲು ಮತ್ತು ವಾಯುಗುಣವನ್ನು ನಿಯಂತ್ರಿಸಲು ಭೂಗ್ರಹದ ಈ ವೈಶಿಷ್ಟ್ಯದಿಂದ ಸಾಧ್ಯವಾಗಿದೆ.

ಭೂಮಿಯಿಂದ ಪ್ರತಿಫಲನಗೊಂಡ ಉಷ್ಣತಾ ವಿಕಿರಣವು ಕಾದ ಕಬ್ಬಿಣದಿಂದ ಹೊರಬರುವ ಶಾಖದಂತಿರುವುದು. ಇದು ಬಾಹ್ಯಾಕಾಶಕ್ಕೆ ಪ್ರಸರಣಗೊಳ್ಳಲು ಪ್ರಯತ್ನಿಸುವುದು. ಪ್ರತಿಶತ ೧೦ ರಷ್ಟು ಶಕ್ತಿ ಬಾಹ್ಯಾಕಾಶ ತಲುಪುವುದು. ಮಿಕ್ಕ ಶಕ್ತಿಯನ್ನು ವಾಯುಗೋಳದಲ್ಲಿರುವ ಕೆಲವು ಅನಿಲಗಳ ಕಣಗಳು ಹೀರಿಕೊಳ್ಳುತ್ತವೆ. ಈ ಕಣಗಳು ಹೀರಿಕೊಳ್ಳಲ್ಪಟ್ಟ ಶಕ್ತಿಯನ್ನು ಎಲ್ಲ ದಿಕ್ಕುಗಳಲ್ಲಿಯೂ ಪ್ರಸರಣವಾಗುವಂತೆ ಮಾಡುತ್ತವೆ. ಸ್ವಲ್ಪ ಪ್ರಮಾಣದ ಶಕ್ತಿಯು ಬಾಹ್ಯಾಕಾಶಕ್ಕೆ ತಲುಪುವುದು. ಉಳಿದ ಶಕ್ತಿ ಪುನಃ ಭೂ ಮೇಲ್ಮೈಯನ್ನು ತಟ್ಟುತ್ತದೆ. ಸೂರ್ಯನ ಕಿರಣಗಳಿಂದ ನೇರವಾಗಿ ಹಾಗೂ ಪುನಃ ಪ್ರಸರಣಗೊಂಡ ಅವಗೆಂಪು ಕಿರಣಗಳಿಂದ ಭೂ ಮೇಲ್ಮೈ ಬಿಸಿಯಾಗುತ್ತದೆ. ಇದರಿಂದಾಗಿ ನೀರು ಆವಿಯಾಗತೊಡಗುವುದು. ಗಾಳಿಯು ಮೇಲ್ಮುಖ ಸಂವಹನಕ್ಕೆ ಒಳಗಾಗುವುದು.  ಭೂಮಿ ಬೆಚ್ಚಗಾಗುವಂತೆ ಮಾಡುವ ವಾಯುಗೋಳದಲ್ಲಿರುವ ಅನಿಲಗಳನ್ನು ಹಸಿರುಮನೆ ಅನಿಲಗಳು (Green House Gases-GHGs) ಎನ್ನುವರು.

ಭೂ ಮೇಲ್ಮೈಯ ಸುತ್ತ ಒಂದು ಗಾಜಿನ ಹೊದಿಕೆಯ ರೀತಿಯಲ್ಲಿ ಹಸಿರುಮನೆ ಅನಿಲಗಳು ತಾಪವನ್ನು ತಡೆಹಿಡಿದು ಭೂವಾತಾವರಣ ಬೆಚ್ಚಗಾಗುವುದನ್ನು ಹಸಿರುಮನೆ ಪರಿಣಾಮ – ಗ್ರೀನ್ ಹೌಸ್ ಎಫೆಕ್ಟ್ ಎನ್ನುವರು. ಹೂಗಿಡ ಹಾಗೂ ಸಸಿಗಳನ್ನು ಬೆಳೆಸಲು ಬಳಸುವ ಪ್ಲಾಸ್ಟಿಕ್ ಅಥವಾ ಗಾಜಿನ ಹೊದಿಕೆ ಇರುವ ಮನೆಗಳನ್ನು ನೀವು  ನೋಡಿರಬಹುದು. ಅಲ್ಲಿ ಸೂರ್ಯನ  ಕಿರಣಗಳು ಗಾಜಿನ ಮೂಲಕ ಒಳ ನುಗ್ಗಿ, ಒಳಗಿರುವ ವಸ್ತು, ಕುಂಡ, ಗಿಡಗಳನ್ನು ಬೆಚ್ಚಗೆ ಮಾಡುವವು. ಅವುಗಳಿಂದ ಪ್ರತಿಫಲನಗೊಳ್ಳುವ ಉಷ್ಣತಾ ವಿಕಿರಣಗಳು ಹಸಿರುಮನೆಯಿಂದ ಹೊರಹೋಗದಂತೆ ಗಾಜು ತಡೆಯುವುದು. ಹಾಗಾಗಿ ಹಸಿರುಮನೆಗಳಲ್ಲಿ ಹೆಚ್ಚಿನ ತಾಪ ಇರುವುದು. ಇಲ್ಲಿ ನಡೆಯುವ ಕ್ರಿಯೆಯಂತೆಯೇ ಭೂಮಿಯಲ್ಲಿಯೂ GHGs ಅನಿಲಗಳಿಂದ ಕ್ರಿಯೆ ನಡೆಯುವುದರಿಂದ ಇದನ್ನು ಹಸಿರು ಮನೆ ಪರಿಣಾಮ ಎನ್ನುವರು.

೧೮೨೪ರಲ್ಲಿ ಪ್ರಥಮ ಬಾರಿಗೆ ಜೋಸೆಫ್ ಪೌರಿಯರ್ ‘ಹಸಿರು ಮನೆ ಪರಿಣಾಮ’ವನ್ನು ಕಂಡುಹಿಡಿದರು. ೧೮೯೬ರಲ್ಲಿ ವಾಂಟೆ ಅರ‍್ಹೆನಿಸ್ರವರು ಹಸಿರುಮನೆ ಪರಿಣಾಮವನ್ನು ಮೊದಲ ಬಾರಿಗೆ ಪರಿಮಾಣಾತ್ಮಕವಾಗಿ ಕಂಡುಹಿಡಿದರು.

ಭೂಮಿಯಲ್ಲಿರುವ ಪ್ರಮುಖ ಹಸಿರು ಮನೆ ಅನಿಲಗಳೆಂದರೆ ನೀರಾವಿ (ಇದು ಸುಮಾರು ೩೬-೭೦% ಹಸಿರು ಮನೆ ಪರಿಣಾಮ ಉಂಟು ಮಾಡುತ್ತದೆ), ಕಾರ್ಬನ್ ಡೈ ಆಕ್ಸೈಡ್ (CO2) ಇದು ೯-೨೬% ; ಮಿಥೇನ್ (CH4) – ಇದು ೪-೯ % ಮತ್ತು ಓಜೋನ್ – ಇದು ೩-೭% ಹಸಿರು ಮನೆ ಪರಿಣಾಮ ಉಂಟು ಮಾಡುತ್ತದೆ.

ವಾಯುಗೋಳದಲ್ಲಿನ CO2ನ ಪ್ರಮಾಣದಲ್ಲಿ ಋತುಮಾನಕ್ಕೆ ಅನುಗುಣವಾಗಿ ಸ್ವಲ್ಪ ಏರಿಳಿತವಿರುತ್ತದೆ. ಪ್ರತಿವರ್ಷ ಉತ್ತರಾರ್ಧಗೋಳದಲ್ಲಿ ವಸಂತಕಾಲದ ಕೊನೆಯಲ್ಲಿ ಗರಿಷ್ಠ ವಿರುತ್ತದೆ. ಆ ಸಮಯದಲ್ಲಿ ಗಿಡಮರಗಳ ಎಲೆಗಳು ಉದುರಿ ಬೋಳಾಗಿರುತ್ತದೆ. ಅನಂತರ ಧಾನ್ಯಗಳನ್ನು ಬೆಳೆಯುವ ಋತುಮಾನದಲ್ಲಿ ಕಡಿಮೆಯಾಗುತ್ತದೆ. ಏಕೆಂದರೆ ಆಗ ಸಸ್ಯಗಳು ವಾಯುಗೋಳದಲ್ಲಿನ ಸ್ವಲ್ಪ CO2ನ್ನು ಹೀರಿಕೊಳ್ಳುತ್ತವೆ.

ಸಮುದ್ರಗಳಲ್ಲಿರುವ ಜಲ ಪ್ರವಾಹಗಳು ಸಹ ಶಾಖವನ್ನು ವಿತರಿಸಲು ಸಹಾಯ ಮಾಡುತ್ತವೆ. ಒಂದು ಸ್ಥಳದ ವಾಯುಗುಣಕ್ಕೆ ಅಲ್ಲಿ ಬೀಳುವ ಮಳೆಯ ಪ್ರಮಾಣ ಪ್ರಮುಖ ಪಾತ್ರ ವಹಿಸುವುದು. ನೀರು ನಿರ್ಣಾಯಕ ಹಾಗೂ ಸಂಕೀರ್ಣ ಪಾತ್ರ ವಹಿಸುವುದು. ಅದು ಆವಿಯಾಗುವುದರಿಂದ ಭೂ ಪ್ರದೇಶವನ್ನು ತಂಪಾಗಿಡುವುದು, ಮೋಡ ಹಾಗೂ ಹಿಮ ಪ್ರದೇಶಗಳಿಂದ ಸೂರ್ಯನ ಶಕ್ತಿಯನ್ನು ಪ್ರತಿಫಲಿಸುವುದು ಮತ್ತು ನೀರಾವಿಯು ಹಸಿರುಮನೆ ಅನಿಲವಾಗಿ ಭೂಮಿಯನ್ನು ಬೆಚ್ಚಗಿಡಲು ಸಹಾಯ ಮಾಡುವುದು. ಭೂಮಿಯ ವಿಶಾಲ ಭೂ ಪ್ರದೇಶ, ಅಲ್ಲಿ ಪರ್ವತಗಳು, ಅರಣ್ಯಗಳು ಮತ್ತು ಪರಿಸರ ವ್ಯವಸ್ಥೆಗಳು ಸ್ಥಳೀಯ ಹಾಗೂ ಜಾಗತಿಕ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ.

ಭೂ ಇತಿಹಾಸದಲ್ಲಿ ವಾಯುಗುಣ ಬದಲಾವಣೆ

ಸುಮಾರು ೧೦೦ ಮಿಲಿಯನ್ ವರ್ಷಗಳ ಹಿಂದೆ ಭೂಮಿಯು ಅತಿ ಹೆಚ್ಚಿನ ತಾಪ ಅಂದರೆ ಇಂದಿನ ತಾಪಕ್ಕಿಂತ ೧೦೦ ಸೆ. ಅಧಿಕ ತಾಪ ಹೊಂದಿತ್ತು. ಸಮುದ್ರಗಳ ಮಟ್ಟ ಏರಿತ್ತು. ಭೂಖಂಡಗಳ ವಿಸ್ತಾರ ಕುಗ್ಗಿತ್ತು. ಅಧಿಕ ಸಂಖ್ಯೆಯ ಅಗ್ನಿ ಪರ್ವತಗಳಿಂದ ಹೆಚ್ಚು ಹೊರ ಬಂದ ಕಾರ್ಬನ್ ಡೈ‌ಆಕ್ಸೈಡ್ ಈ ಏರಿಕೆಗೆ ಕಾರಣವೆಂದು ವಿಜ್ಞಾನಿಗಳು ನಂಬಿದ್ದಾರೆ.

ಸುಮಾರು ಎರಡು ಮಿಲಿಯನ್ ವರ್ಷಗಳ ಹಿಂದೆ ಸರಾಸರಿ ತಾಪವು ಇಂದಿಗಿಂತ ಸುಮಾರು ೫೦ ಸೆ. ಕಡಿಮೆಯಿತ್ತು. ಉತ್ತರ ಧ್ರುವ ಮತ್ತು ಧ್ರುವಗಳ ಹಿಮಬಂಡೆಗಳಲ್ಲಿನ ಗಾಳಿಯ ಗುಳ್ಳೆಗಳನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಇಂದಿಗಿಂತ ಅಂದಿನ ಗಾಳಿಯಲ್ಲಿ ಕಾರ್ಬನ್ ಡೈ‌ಆಕ್ಸೈಡ್ ಮತ್ತು ಮಿಥೇನ್ ಅನಿಲ ಕಡಿಮೆ ಪ್ರಮಾಣದಲ್ಲಿದ್ದವು. ಹಾಗಾಗಿ ಹಸಿರುಮನೆ ಪರಿಣಾಮದ ಪ್ರಮಾಣ ಕುಸಿದಿತ್ತು ಮತ್ತು ವಾತಾವರಣ ತಂಪಾಗಿತ್ತು.

ಪ್ರತಿ ೧೦೦,೦೦೦ ವರ್ಷಗಳಿಗೊಮ್ಮೆ ಭೂಮಿಯ ಹವಾಗುಣದ ನಮೂನೆಯಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತವೆಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಇದಕ್ಕೆ ಪರ್ವತಗಳಲ್ಲಿ, ಕಣಿವೆಗಳಲ್ಲಿ, ನದಿ ಪಾತ್ರಗಳಲ್ಲಿ, ಪಳೆಯುಳಿಕೆ, ಹಿಮ ಬಂಡೆ ಮುಂತಾದವುಗಳಲ್ಲಿ ದೊರಕಿರುವ ವಿಸ್ತೃತ ಸಾಕ್ಷಿಗಳೇ ಕಾರಣ.

ಕಳೆದ ಕೆಲವು ಮಿಲಿಯನ್ ವರ್ಷಗಳಲ್ಲಿ ಭೂಮಿಯಲ್ಲಾಗಿರುವ ಬದಲಾವಣೆಗಳಿಗೆ ಈ ‘ನೈಸರ್ಗಿಕ ದಾಖಲೆಗಳು’ ಪ್ರಮುಖ ಸಾಕ್ಷಿಗಳು. ಹತ್ತು ಸಾವಿರ ವರ್ಷಗಳ ಹಿಂದೆ ಉಂಟಾದ ಅಂತಿಮ ಹಿಮಯುಗದಿಂದಾಗಿ ಅಧಿಕ ಸಂಖ್ಯೆಯ ಜೀವಿಗಳು ನಾಶವಾದವು.  ಉತ್ತರ ಅಮೆರಿಕಾ ಮತ್ತು ಯುರೋಪಿನ ಬಹುಭಾಗಗಳು ಹಿಮಾವೃತವಾಗಿದ್ದವು. ವಾಯುಗುಣ ಬೆಚ್ಚಗಾದಂತೆ ಹಿಮವು ನಿಧಾನವಾಗಿ ಕರಗಿತು. ೧೦ ರಿಂದ ೧೪ ಶತಮಾನಗಳ ಮಧ್ಯೆ ಜಾಗತಿಕ ತಾಪವು ಸರಾಸರಿಗಿಂತ ೧೦ ಸೆ. ಹೆಚ್ಚಾಗಿತ್ತು. ಅನಂತರ ೧೯ನೇ ಶತಮಾನದವರೆಗೆ ಮಿನಿ ಹಿಮಯುಗ ಉಂಟಾಯಿತು.

ಆದ್ದರಿಂದ ಭೂಮಿಯ ವಾಯುಗುಣವು ನಿಸರ್ಗದತ್ತವಾಗಿ ಬದಲಾಗುತ್ತಿರುತ್ತದೆ. ಎಲ್ಲ ಜೀವಿಗಳು ಈ ಬದಲಾವಣೆಗೆ ಹೊಂದಿಕೊಳ್ಳುತ್ತವೆ. ಆದರೆ ಕಳೆದ ೧೫೦-೨೦೦ ವರ್ಷಗಳಲ್ಲಿ ಈ ಬದಲಾವಣೆಯ ಗತಿ ತೀವ್ರವಾಗಿದೆ. ನಿಸರ್ಗದತ್ತವಾದ ಬದಲಾವಣೆಗಳು ನಿಧಾನ ಮತ್ತು ನಿಖರವಾಗಿ ಉಂಟಾಗುತ್ತಿದ್ದವು. ಆದರೆ ಕಳೆದ ಕೆಲವು ದಶಕಗಳಿಂದ ಉಂಟಾಗುತ್ತಿರುವ ಬದಲಾವಣೆಯ ವೇಗವು ವಿಜ್ಞಾನಿಗಳಲ್ಲಿ ಮತ್ತು ಹವಾಗುಣ ತಜ್ಞರಲ್ಲಿ ಆತಂಕವನ್ನುಂಟು ಮಾಡಿದೆ. ಮಾನವನ ಚಟುವಟಿಕೆಗಳೇ ಅತಿವೇಗದ ಈ ಬದಲಾವಣೆಗಳಿಗೆ ಪ್ರಮುಖ ಕಾರಣವೆಂದು ಆರೋಪಿಸಲಾಗುತ್ತಿದೆ. ಆಘಾತಕಾರಿ ಬದಲಾವಣೆಯಿಂದ ಪರಿಸರದಲ್ಲಿ ಭಾರಿ ಬಿಕ್ಕಟ್ಟು ಉಂಟಾಗುವುದು. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಮೇಲೂ ದುಷ್ಪರಿಣಾಮ ಉಂಟಾಗುವುದು. ಈ ತೀವ್ರವೇಗದ ಜಾಗತಿಕ ಹವಾಗುಣ ಬದಲಾವಣೆಗೆ ಜೀವಿಗಳು ಹೊಂದಿಕೊಳ್ಳುವುದಕ್ಕೆ ಸಮಯ ಸಿಗುತ್ತಿಲ್ಲ. ಹಾಗಾಗಿ ಅವು ವಿನಾಶದತ್ತ ಸಾಗುತ್ತಿವೆ.

ಹವಾಗುಣ ಬದಲಾವಣೆಯ ಈ ಬೃಹತ್ ಘಟನೆಯಲ್ಲಿ ಹಸಿರುಮನೆ ಪರಿಣಾಮಕ್ಕೆ ಪ್ರಮುಖ ಪಾತ್ರವಿದೆ. ಇದೊಂದು ನೈಸರ್ಗಿಕ ಕ್ರಿಯೆಯಾಗಿ ಭೂಮಿಯಲ್ಲಿನ ತಾಪವನ್ನು ನಿರ್ವಹಿಸುತ್ತಿತ್ತು. ಬಹುತೇಕ ಹಸಿರುಮನೆ ಅನಿಲಗಳು ನೈಸರ್ಗಿಕವಾಗಿಯೇ ಅಸ್ಥಿತ್ವದಲ್ಲಿವೆ. ಆದರೆ ಮಾನವನ ಚಟುವಟಿಕೆಗಳಿಂದ ಹಸಿರುಮನೆ ಪರಿಣಾಮದಲ್ಲಿರುವ ನೈಸರ್ಗಿಕ ಸಮತೋಲನ ಊಹಿಸಲು ಸಾಧ್ಯವಿಲ್ಲದ ವೇಗದಲ್ಲಿ ಬದಲಾಗಿ ಭೂಮಿಯ ತಾಪ ಏರುತ್ತಿದೆ. ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್ ಮುಂತಾದ ಫಾಸಿಲ್ ಇಂಧನಗಳ ದಹನ, ಕೃಷಿ, ಅರಣ್ಯನಾಶ, ಕೈಗಾರಿಕಾ ಚಟುವಟಿಕೆಗಳು ಮತ್ತು ಅತಿ ಗ್ರಾಹಕತೆ ಮುಂತಾದ ಮಾನವ ಚಟುವಟಿಕೆಗಳು ಜಾಗತಿಕ ವಾಯುಗುಣ ಬದಲಾವಣೆಗೆ ಕಾರಣವಾಗಿವೆ.

ವಾಯುಗೋಳದಲ್ಲಿ ಸುಮಾರು ಪ್ರತಿಶತ ೭೮ರಷ್ಟು ನೈಟ್ರೋಜನ್, ೨೧ ರಷ್ಟು ಆಕ್ಸಿಜನ್ ಮತ್ತು ಒಂದರಷ್ಟು ವಿವಿಧ ಅನಿಲಗಳಿವೆ. ಈ ಒಂದರಷ್ಟರಲ್ಲಿ ಹಸಿರುಮನೆ ಅನಿಲಗಳೂ ಸೇರಿವೆ. ನೈಸರ್ಗಿಕವಾಗಿ ದೊರೆಯುವ GHGs ಗಳೆಂದರೆ ನೀರಾವಿ, CO2, CH4, N2O  (ನೈಟ್ರಸ್ ಆಕ್ಸೈಡ್) ಮತ್ತು O3 (ಓಜೋನ್). ಇವು ಅಲ್ಪ ಪ್ರಮಾಣದ ಉಷ್ಣತಾ ವಿಕಿರಣವನ್ನು ಹೀರಿಕೊಳ್ಳುವುದರಿಂದ ಭೂಮೇಲ್ಮೈ ಬೆಚ್ಚಗಿದೆ. ಇವು ಭೂಮಿಯ ಸುತ್ತ ಹೊದಿಸಿರುವ ಹೊದಿಕೆ ಅಥವಾ ಗಾಜಿನಂತೆ ವರ್ತಿಸುತ್ತವೆ. ಜೀವಿಗಳು ಸುಖವಾಗಿ ಬಾಳಲು ಬೇಕಾದ ಬೆಚ್ಚನೆಯ ವಾತಾವರಣವನ್ನು ಈ ಅನಿಲಗಳು ಸೃಷ್ಟಿಸಿವೆ. ಈ ಪ್ರಕ್ರಿಯೆಯನ್ನು ನೈಸರ್ಗಿಕ ಹಸಿರು ಮನೆ ಪರಿಣಾಮ ಎನ್ನುವರು. ಇದನ್ನು ಭೂಮಿಯ ನೈಸರ್ಗಿಕ ತಾಪ ನಿಯಂತ್ರಣಾ ವ್ಯವಸ್ಥೆ ಎನ್ನಬಹುದು. ಈ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ವಾಯುಗೋಳದಲ್ಲಿ ಹಸಿರುಮನೆ ಅನಿಲಗಳು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಅತ್ಯಗತ್ಯ.

ಒಂದು ವೇಳೆ ಹಸಿರು ಮನೆ ಅನಿಲಗಳು ವಾಯುಗೋಳದಲ್ಲಿ ಇಲ್ಲದೆ ಹೋಗಿದ್ದಲ್ಲಿ ಭೂಮಿಯು ಇಂದಿರುವುದಕ್ಕಿಂತ ಪ್ರತಿಶತ ೩೦ ರಷ್ಟು ಶೀತಮಯವಾಗಿರುತ್ತಿತ್ತು. ಆಗ ಭೂಮಿಯ ಸರಾಸರಿ ಉಷ್ಣತೆಯು -೧೭೦ಸೆ. ಇರುತ್ತಿತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.  ಯಾವ ಜೀವಿಯೂ ಅಂತಹ ವಾತಾವರಣದಲ್ಲಿ ಬದುಕಿರುತ್ತಿರಲಿಲ್ಲ. ಉದಾಹರಣೆಗೆ ಮಂಗಳ ಗ್ರಹದ ವಾಯುಗೋಳ ತೆಳುವಾಗಿದ್ದು, ಅದರಲ್ಲಿ ಹಸಿರು ಮನೆ ಅನಿಲಗಳು ಕಡಿಮೆ ಪ್ರಮಾಣದಲ್ಲಿವೆ. ಆ ಗ್ರಹದಲ್ಲಿ ಯಾವುದೇ ಜೀವಿಯ ಕುರುಹೂ ಇಲ್ಲ. ಅಲ್ಲಿನ ವಾತಾವರಣದಲ್ಲಿ ಅತಿ ಶೀತಕರವಾದ ತಾಪ, ಅಂದರೆ ಸುಮಾರು -೬೦೦ಸೆ. ಕ್ಕಿಂತ ಕಡಿಮೆ ತಾಪವಿದೆ. ಆದರೆ ಶುಕ್ರಗ್ರಹದಲ್ಲಿನ ವಾಯುಗೋಳದಲ್ಲಿ ಹಸಿರು ಮನೆ ಅನಿಲಗಳೇ ಪ್ರಮುಖವಾಗಿವೆ. ಆದ್ದರಿಂದ ಅಲ್ಲಿನ ತಾಪವು ಅತಿ ಹೆಚ್ಚಿದ್ದು ಸುಮಾರು ೪೫೦೦ಸೆ. ಇರಬಹುದೆಂದು ಅಂದಾಜಿಸಲಾಗಿದೆ. ಹಾಗಾಗಿ ಯಾವುದೇ ಜೀವಿಯೂ ಅಲ್ಲಿಲ್ಲ.

ಇಂದು ಮಾನವ ಚಟುವಟಿಕೆಗಳು ಎಷ್ಟು ಅಧಿಕವಾಗಿವೆಯೆಂದರೆ ಹೆಚ್ಚಾಗಿರುವ ಹಸಿರುಮನೆ ಅನಿಲಗಳನ್ನು ಹೊರದೂಡಲು ನೈಸರ್ಗಿಕವಾದ ಯಾವುದೇ ವ್ಯವಸ್ಥೆಗೆ ಸಾಧ್ಯವಿಲ್ಲ. GHGs ಗಳು ಅಧಿಕವಾಗಿ ವಾಯುಗೋಳ ಸೇರಿದಂತೆ ವಾಯುಗುಣದಲ್ಲಿ ಬದಲಾವಣೆಗಳು ಉಂಟಾಗಿವೆ. ಜೀವಿಸಲು ಬೇಕಾದ ಪ್ರಮಾಣದಲ್ಲಿದ್ದ ಮತ್ತು ಸಾವಿರಾರು ವರ್ಷಗಳಿಂದ ಸ್ಥಿರವಾಗಿದ್ದ ವಾಯುಗುಣದ ಸ್ವಭಾವ ಬದಲಾಗಿದೆ. GHGs ಗಳಲ್ಲಿ ಅಧಿಕ ಪ್ರಮಾಣದಲ್ಲಿ CO2 ವಾಯುಗೋಳವನ್ನು ಸೇರುತ್ತಿದೆ. ಅದರಿಂದ ಮಾರಕ ಸಮಸ್ಯೆಗಳು ತಲೆದೋರುತ್ತಿವೆ. ಪ್ರಮುಖವಾಗಿ ಫಾಸಿಲ್ ಇಂಧನಗಳ ದಹನದಿಂದ CO2 ಉಂಟಾಗುತ್ತಿದೆ. ಕೈಗಾರಿಕಾ ಕ್ರಾಂತಿಯಿಂದ ಆರಂಭವಾದ ಈ ಕ್ರಿಯೆ ನಿರಂತರವಾಗಿ ಹೆಚ್ಚಾಗುತ್ತಿದೆ.

ಉಷ್ಣ ವಿದ್ಯುತ್ ಸ್ಥಾವರ, ಸಾರಿಗೆ, ಉರುವಲು ಸೌದೆ ದಹನ ಮತ್ತು ಕೈಗಾರಿಕಾ ಚಟುವಟಿಕೆಗಳಿಂದ ಅಧಿಕ ಪ್ರಮಾಣದ CO2 ಉಂಟಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ವಾತಾವರಣದ ತಾಪ ಏರುತ್ತಿದೆ. ಈ ಪ್ರಕ್ರಿಯೆಯನ್ನು ಜಾಗತಿಕ ಬಿಸಿಯೇರುವಿಕೆ ಎನ್ನುವರು.