ಒಲೆ ಹತ್ತಿ ಉರಿವೊಡೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದೊಡೆ ನಿಲಬಹುದೇ ?

ಅಣ್ಣ ಬಸವಣ್ಣನ ಈ ವಚನದ ಸಾಲುಗಳು ಇಂದು ಹೆಚ್ಚು ಪ್ರಸ್ತುತ. ಧರೆ ಹತ್ತಿ ಉರಿಯಲಾರಂಭಿಸಿದೆ. ಹವಾಮಾನ ಮೊದಲಿನಂತಿಲ್ಲ. ವಾಯುಗುಣ ತೀವ್ರವಾಗಿ ಬದಲಾಗುತ್ತಿದೆ. ಬೇಸಗೆ ಕಾಲ ಅತಿಯಾದ ಬೇಸಗೆ ಕಾಲವಾಗುತ್ತಿದೆ. ಬರಗಾಲಗಳು ಹೆಚ್ಚುತ್ತಿವೆ. ಅವುಗಳ ತೀವ್ರತೆಯೂ ಹೆಚ್ಚುತ್ತಿದೆ. ಚಳಿಗಾಲದಲ್ಲಿ ಅತಿಯಾದ ಚಳಿ, ಮಳೆಗಾಲದಲ್ಲಿ ಅತಿ ಮಳೆ, ಇಲ್ಲವಾದರೆ ಮಳೆಯೇ ಇಲ್ಲ ; ಬಂದರೆ ಒಂದೇ ದಿನ ಉಧೋ ಎಂದು ಸುರಿಯುವ ಕುಂಭದ್ರೋಣ ಮಳೆ. ಪ್ರವಾಹದಲ್ಲಿ ಮಕ್ಕಳು ಮರಿಗಳೂ ಕೊಚ್ಚಿ ಹೋಗುತ್ತಿವೆ. ತಗ್ಗು ಪ್ರದೇಶಗಳಲ್ಲಿ ಜಲ ಪ್ರವಾಹ ಉಂಟಾಗಿ ಜನರು ಅಧಿಕ ಸಾವು ನೋವು ಅನುಭವಿಸಬೇಕಿದೆ. ಹೀಗೆ ನೈಸರ್ಗಿಕ ವೈಪರೀತ್ಯಗಳು ಹೆಚ್ಚುತ್ತಿವೆ.

ಏಕೀ ಬದಲಾವಣೆ ? ಈ ಏರುಪೇರಿಗೆ ಕಾರಣರಾರು ? ಅಥವಾ ಪ್ರತಿವರ್ಷ ಉಂಟಾಗುವ ಸಾಮಾನ್ಯ ಬದಲಾವಣೆಗಳನ್ನೇ ಮನುಷ್ಯ ಸಹಿಸಲಾರದೆ ಹೀಗೆ ಊಹೆ ಮಾಡುತ್ತಿದ್ದಾನೋ ?

“ಅಯ್ಯೋ ಇದು ಕಲಿಯುಗ ಪಾಪಿಗಳ ಸಂಖ್ಯೆ ಹೆಚ್ಚಾಗಿದೆ. ಭೂತಾಯಿ ಸಿಟ್ಟಿಗೆದ್ದಿದ್ದಾಳೆ” ಎಂದು ಹಪಹಪಿಸುವರೂ ಉಂಟು. “ಮಾಡಿದುಣ್ಣೋ ಮಹಾರಾಯ” ಎಂಬ ಗಾದೆಯಂತೆ ಮಾನವ ಮಾಡಿದ ದುರಾಕ್ರಮಣಕ್ಕೆ ಭೂದೇವಿಯ ಮಾರುತ್ತರ ಇದು ಎನ್ನುವವರೂ ಇದ್ದಾರೆ. ಇಂತಹ ಪ್ರಶ್ನೆಗಳಿಗೆ, ಆಲೋಚನೆಗಳಿಗೆ ಸ್ಪಷ್ಟವಾದ ವೈಜ್ಞಾನಿಕ ತಿಳುವಳಿಕೆ ನೀಡುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಲಾಗಿದೆ.

ವಾಯುಗುಣ ಎಂದರೇನು ?

ವಾಯುಗುಣ, ಹವಾಗುಣ ಎಂಬ ಪದಗಳನ್ನು ನಾವು ಇಂಗ್ಲಿಷಿನ Climate ಎಂಬ ಪದಕ್ಕೆ ಸಮಾನವಾಗಿ ಬಳಸುತ್ತೇವೆ. ಅದೇ ರೀತಿ ಹವಾಮಾನ ಎಂಬ ಪದವನ್ನು ಇಂಗ್ಲಿಷಿನ  Weather ಎಂಬ ಪದಕ್ಕೆ ಸಮಾನವಾಗಿ ಬಳಸುತ್ತೇವೆ. ಕನ್ನಡದಲ್ಲಿ ಒಮ್ಮೊಮ್ಮೆ ಇವೆರಡು ಪದಗಳನ್ನು ಸಮಾನ ಅರ್ಥದಲ್ಲಿಯೂ ಬಳಸುವುದಿದೆ. ಈ ಪುಸ್ತಕದಲ್ಲಿ ಹವಾಮಾನ ಎಂದರೆ Weather ಮತ್ತು ವಾಯುಗುಣ ಎಂದರೆ Climate ಎಂಬ ಅರ್ಥದಲ್ಲಿ ಬಳಸಲಾಗಿದೆ.

ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಹವಾಮಾನ Weather ಪ್ರಮುಖ ಪಾತ್ರ ವಹಿಸುವುದು. ನಾವು ದಿನನಿತ್ಯದ ಸಂಭಾಷಣೆಯಲ್ಲಿ ಹವಾಮಾನವನ್ನು ಬಳಸುತ್ತೇವೆ. ಅನೇಕ ವೇಳೆ ಹವಾಮಾನದ ಬಗ್ಗೆ ಹರಟೆಯನ್ನು ಕೊಚ್ಚುತ್ತೇವೆ. “ಹಾಂ, ಈ ಹೊತ್ತು ಎಷ್ಟು ಧಗೆ”, “ತಂಪುಗಾಳಿ ಬೀಸುತ್ತಿದೆ ಒಳ್ಳೆಯ ಹವಾಮಾನ”, “ಮೋಡಗಳು ದಟ್ಟವಾಗಿವೆ, ಇಂದು ಮಳೆ ಬರಬಹುದು” – ಹೀಗೆ ನಾವು ಹವಾಮಾನದ ಬಗ್ಗೆ ಗಮನಹರಿಸುತ್ತೇವೆ.  ಅಲ್ಲದೆ ರೇಡಿಯೋ, ಟಿವಿಗಳಲ್ಲಿ  ವಾರ್ತೆಗಳು ಬಂದಾಗ ಹವಾಮಾನ ವರದಿಗೆ ಕಾಯುತ್ತಿರುತ್ತೇವೆ. “ಕ್ರಿಕೆಟ್ ಆಟ ಭಾರತಕ್ಕೂ ಆಸ್ಟ್ರೇಲಿಯಾಕ್ಕೂ ನಡೆಯುತ್ತಿದೆ. ಮಳೆ ಬಂದರೆ ಡ್ರಾ ಆಗುತ್ತೋ ಏನೋ” ಎಂದು ಕಾತುರ ವ್ಯಕ್ತಪಡಿಸುತ್ತೇವೆ. “ಒಂದು ವಾರದಿಂದ ಮಳೆ ಬಂದಿಲ್ಲ ಜೋಳದ ತೆನೆ ಒಣಗಿ ಹೋಗುತ್ತವೆ” ಎಂಬ ರೈತನ ನಿಟ್ಟುಸಿರು ಕೇಳಿರುತ್ತೇವೆ.

ನಾವಿರುವ ಸ್ಥಳದಲ್ಲಿ ದಿನನಿತ್ಯ ಉಂಟಾಗುವ ಮಳೆ, ಬೀಸುವ ಗಾಳಿ, ಮೋಡ, ಉಷ್ಣತೆ ಮುಂತಾದವನ್ನು ಹವಾಮಾನ (Weather) ಎನ್ನುತ್ತೇವೆ. ನಾವು ಉಷ್ಣತೆಯನ್ನು ಅಳೆಯಲು ಥರ್ಮಾಮೀಟರ್ ಬಳಸುತ್ತೇವೆ. ಸೆಲಿಸಿಯಸ್‌ನಲ್ಲಿ ಅಥವಾ ಫ್ಯಾರನ್‌ಹೀಟ್‌ನಲ್ಲಿ ಹೇಳುತ್ತೇವೆ. ಅದೇ ರೀತಿ ಬೀಸುವ ಗಾಳಿಯನ್ನು ಅಳೆಯಲು ಅನಿಮೊಮೀಟರ್ ಬಳಸುತ್ತೇವೆ. ಗಂಟೆಗೆ ಇಷ್ಟು ಕಿಲೋಮೀಟರ್‌ಗಳಲ್ಲಿ ಗಾಳಿ ಬೀಸುತ್ತಿದೆ ಎನ್ನುತ್ತೇವೆ. ಬಿದ್ದ ಮಳೆಯ ಪ್ರಮಾಣವನ್ನು ಅಳೆಯಲು ಮಳೆಮಾಪಕ ಅಂದರೆ ರೈನ್‌ಗೇಜ್ ಬಳಸುತ್ತೇವೆ. ಮಿಲಿಮೀಟರ್‌ಗಳಲ್ಲಿ ಮಳೆಯ ಅಳತೆಯನ್ನು ಹೇಳುತ್ತೇವೆ. ಗಾಳಿಯಲ್ಲಿನ ತೇವಾಂಶವನ್ನು ಹೈಗ್ರೊಮೀಟರ್‌ನಿಂದ ಅಳೆಯುತ್ತೇವೆ ಮತ್ತು ಶೇಕಡಾವಾರು ತೇವಾಂಶವೆಂದು ಹೇಳುತ್ತೇವೆ. ಆಕಾಶದಲ್ಲಿನ ಮೋಡಗಳ ಪ್ರಮಾಣವನ್ನು ಸಹ ಲೆಕ್ಕ ಹಾಕುವರು.

ಹವಾಮಾನವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಅಲ್ಲದೆ ಬೆಳಗಿನ ಹೊತ್ತು ಒಂದು ರೀತಿಯ ಹವಾಮಾನ, ಮಧ್ಯಾಹ್ನ ಮತ್ತೊಂದು ರೀತಿಯ ಹವಾಮಾನವಿರುತ್ತದೆ. ಹವಾಮಾನವು ಆ ಸ್ಥಳವು ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ ಎಂಬುದನ್ನು ಹಾಗೂ ಭೂಗೋಳಿಕ ಸ್ಥಾನವನ್ನು ಅವಲಂಬಿಸಿರುತ್ತದೆ. ಹವಾಮಾನದ ಕಾಲಾವಧಿಯು ಕೆಲವು ಗಂಟೆಗಳು ಅಥವಾ  ಕೆಲವು ದಿನಗಳಿಗೆ ಸೀಮಿತವಾಗಿ ವರದಿ ಮಾಡುತ್ತೇವೆ. ಉದಾಹರಣೆಗೆ ರೇಡಿಯೊ ಅಥವಾ ದೂರದರ್ಶನದ ವಾರ್ತೆಗಳಲ್ಲಿ ಹವಾಮಾನದ ವರದಿ ಕೇಳಿರುತ್ತೇವೆ. “ಇಂದು ಮೋಡ ಮುಸುಕಿದ ವಾತಾವರಣ ಅಲ್ಲಲ್ಲಿ ತುಂತುರು ಮಳೆ ಬೀಳಬಹುದು. ಮುಂದಿನ ಎರಡು ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ” ಎಂಬ ಮಾತುಗಳನ್ನು ಆಲಿಸಿರುತ್ತೇವೆ. ಹವಾಮಾನದ ಬಗ್ಗೆ ನಾವು ಸಾಕಷ್ಟು ಗಮನವನ್ನೂ ನೀಡುತ್ತೇವೆ. ಆದರೆ ನಾವು ವಾಯುಗುಣಕ್ಕೆ (Climate) ಹೆಚ್ಚಿನ ಗಮನ ನೀಡುವುದಿಲ್ಲ. ಪ್ರತಿವರ್ಷ ಉಂಟಾಗುವ ಮಳೆಯ ಪ್ರಮಾಣದಲ್ಲಿ ಋತುಗಳ ಬದಲಾವಣೆಯಲ್ಲಿ, ಚಂಡಮಾರುತಗಳಲ್ಲಿ ಪ್ರತಿ ಸ್ಥಳಕ್ಕೂ ಒಂದು ನಿರ್ದಿಷ್ಟ ಪ್ರಮಾಣ ಹಾಗೂ ಅನುಕ್ರಮವಿರುತ್ತವೆ. ಸರಿಸುಮಾರು ಎಲ್ಲ ವರ್ಷಗಳಲ್ಲಿಯೂ ಹವಾಗುಣದಲ್ಲಿ ಒಂದೇ ರೀತಿಯ ವಿನ್ಯಾಸವಿರುತ್ತದೆ ಎಂಬುದು ನಮ್ಮ ನಂಬಿಕೆ. ಸರಳವಾಗಿ ಹೇಳುವುದಾದಲ್ಲಿ ಹಲವು ದಶಕಗಳಲ್ಲಿನ ಹವಾಮಾನದ ಸರಾಸರಿಯನ್ನು ನಾವು ವಾಯುಗುಣ (Climate) ಎನ್ನುತ್ತೇವೆ. ಉದಾಹರಣೆಗೆ ಬೆಂಗಳೂರು ಪ್ರದೇಶದಲ್ಲಿ ವಾರ್ಷಿಕ ಮಳೆಯ ಸರಾಸರಿ ೧೦೫೫ ಮಿ.ಮೀ. ಇಲ್ಲಿಯ ಋತುಗಳನ್ನು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಉಷ್ಣ ತೇವಾಂಶ (Hot wet), ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ತಂಪು ತೇವಾಂಶ (Cold wet), ಡಿಸೆಂಬರ್‌ನಿಂದ ಫೆಬ್ರವರಿವರೆಗೆ ತಂಪು ಶುಷ್ಕ (Cold dry) ಮತ್ತು ಮಾರ್ಚ್‌ನಿಂದ ಮೇವರೆಗೆ ಉಷ್ಣ ಶುಷ್ಕ (Hot dry) ಕಾಲಗಳೆಂದು ವರ್ಗೀಕರಿಸಬಹುದು. ಅದೇ ರೀತಿ ಪ್ರತಿ ಸ್ಥಳಕ್ಕೂ ತನ್ನದೇ ಆದ ಸರಾಸರಿಯ ವಾಯುಗುಣವಿರುತ್ತದೆ. ಸಾಮಾನ್ಯವಾಗಿ ೩೦ ವರ್ಷಗಳ ಸರಾಸರಿ ಹವಾಮಾನವನ್ನು ವಾಯುಗುಣ ಎನ್ನುತ್ತೇವೆ.

ಆದರೆ ಈ ವಾಯುಗುಣ ಇತ್ತೀಚಿನ ವರ್ಷಗಳಲ್ಲಿ ಏಕೋ ಏನೋ ಬದಲಾಗುತ್ತಿದೆ ಎಂಬುದು ಎಲ್ಲರಿಗೂ ಅನುಭವಕ್ಕೆ ಬಂದಿದೆ. ಹತ್ತು ವರ್ಷಗಳ ಹಿಂದಿದ್ದ ರೀತಿಯಲ್ಲಿ ಇಂದು ಮಳೆ ಬೀಳುತ್ತಿಲ್ಲ. ಉಷ್ಣತೆಯಲ್ಲಿಯೂ ವ್ಯತ್ಯಾಸಗಳಾಗಿವೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಹೌದು, ಈ ಬದಲಾವಣೆ ಕೇವಲ ಅನಿಸಿಕೆಯಲ್ಲ. ವಾಸ್ತವ ಸಂಗತಿ. ಈ ಬದಲಾವಣೆ ನಿಧಾನವಾಗಿ ಉಂಟಾಗುತ್ತಿರುವುದರಿಂದ ನಾವು ಹೆಚ್ಚಾಗಿ ಗಮನಿಸಿಲ್ಲ. ಹಾಗಾಗಿ ಆ ಬಗ್ಗೆ ಯೋಚಿಸಿಯೂ ಇಲ್ಲ !

ಯಾವುದೇ ವಿಶಾಲವಾದ ಭೂಪ್ರದೇಶಕ್ಕೆ ಒಂದು ನಿರ್ದಿಷ್ಟ ವಾಯುಗುಣವಿರುತ್ತದೆ. ಉದಾಹರಣೆಗೆ ಉತ್ತರ ಕರ್ನಾಟಕಕ್ಕೆ ಒಂದು ನಿರ್ದಿಷ್ಟ ನಮೂನೆಯ ವಾಯುಗುಣವಿದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲ ಭೂಪ್ರದೇಶಗಳ ಒಟ್ಟಾರೆ ಭೂಗ್ರಹದ ವಾಯುಗುಣ ಬದಲಾವಣೆಯಾಗುತ್ತಿರುವುದು ಆತಂಕದ ವಿಷಯ. ವಾಯುಗುಣ ಬದಲಾವಣೆಯು ಆಧುನಿಕ ಮಾನವನಿಗೆ ಒಂದು ಸವಾಲು. ಭೂಗ್ರಹದ ಅತಿ ದೊಡ್ಡ ಸಮಸ್ಯೆ. ನಾವು ಈ ತಕ್ಷಣ ಪ್ರತಿಸ್ಪಂದಿಸುವ ಅಗತ್ಯವಿದೆ. ಅದರ ಭೀಕರ ಪರಿಣಾಮಗಳನ್ನು ಕಡಿಮೆ ಮಾಡಲು ಹಾಗೂ ನಿವಾರಿಸಲು ಕಾರ್ಯ ಪ್ರವೃತ್ತರಾಗಬೇಕಿದೆ. ಹತ್ತು ಹಲವು ಪರಿಹಾರೋಪಾಯಗಳನ್ನು ತಕ್ಷಣವೇ ಆರಂಭಿಸಬೇಕಿದೆ. ಜಗತ್ತಿನ ಎಲ್ಲ ರಾಷ್ಟ್ರಗಳ ಜನರೂ ಸಮರೋಪಾದಿಯಲ್ಲಿ ಕಾರ್ಯಮಗ್ನರಾಗುವ ಅಗತ್ಯವಿದೆ. ಇಲ್ಲವಾದಲ್ಲಿ ಭೀಕರ ಪರಿಣಾಮ, ಸಹಸ್ರಾರು ಜೀವಿಗಳ ನಾಶ, ಅಧಿಕ ಸಾವು-ನೋವು ಕಾದಿಟ್ಟ ಬುತ್ತಿ. ಭೂಮಿಯ ಯಾವುದೇ ಪ್ರದೇಶದ ವಾಯುಗುಣ ಹಲವು ಅಂಶಗಳ ಸೂಕ್ಷ್ಮವಾದ ಸಮತೋಲನದಿಂದಾಗಿದೆ. ವಾಯುಗುಣ ನಿರ್ಧರಿಸುವಲ್ಲಿ ಸೂರ್ಯ, ವಾಯುಗೋಳ, ಸಾಗರಗಳು, ಜಲವ್ಯವಸ್ಥೆ, ಸಸ್ಯಗಳು, ಪ್ರಾಣಿಗಳು ಮತ್ತು ಭೌಗೋಳಿಕ (Topography) ಲಕ್ಷಣಗಳು ಪ್ರಮುಖ ಪಾತ್ರ ವಹಿಸುತ್ತವೆ ಮತ್ತು ಸಂಕೀರ್ಣ ಪ್ರಕ್ರಿಯೆಗಳಿಗೆ ಒಳಗಾಗಿ ಒಂದು ಸಮತೋಲನವನ್ನು ಸ್ಥಾಪಿಸುತ್ತವೆ. ಮಳೆ, ಸೂರ್ಯನ ಬೆಳಕು, ತೇವಾಂಶ, ಬೀಸುವ ಗಾಳಿ ಮತ್ತು ಉಷ್ಣತೆ ವಾಯುಗುಣದಲ್ಲಿ ಗಮನಿಸುವ ಪ್ರಮುಖ ಲಕ್ಷಣಗಳು. ಭೂಮಿಯ ಒಟ್ಟು ಹವಾಗುಣವು ಅದರ ದ್ರವ್ಯ, ಸೂರ್ಯನಿಂದಿರುವ ದೂರ ಮತ್ತು ವಾಯುಗೋಳದಲ್ಲಿರುವ ಸಂಯೋಜನೆಯನ್ನು ಅವಲಂಬಿಸಿದೆ.

ಕಳೆದ ೧೫೦ ವರ್ಷಗಳಲ್ಲಿ ವಾಯುಗುಣ ನಿಧಾನವಾಗಿ ಬದಲಾಗುತ್ತಿರುವುದನ್ನು ನಾವು ದಾಖಲಿಸಿದ್ದೇವೆ. ಸೂಕ್ಷ್ಮವಾಗಿ ಗಮನಿಸಿದ್ದೇವೆ. ಭೂಮಿಯ ಸರಾಸರಿ ಉಷ್ಣತೆ ಏರುತ್ತಿದೆ. ಬಿಸಿ ಗಾಳಿಯ ವಾತಾವರಣ ಉಂಟಾಗುತ್ತಿದೆ. ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಬದಲಾವಣೆ ಗಳಾಗುತ್ತಿದ್ದು ಜಾಗತಿಕ ಬಿಸಿ ಏರುವಿಕೆ ಉಂಟಾಗುತ್ತಿದೆ. ಇದರಿಂದಾಗಿ ಅನೇಕಾನೇಕ ಪರಿಣಾಮಗಳಾಗುತ್ತಿವೆ. ವಾಯುವಿನ ತಾಪಮಾನ ಏರಿದಂತೆ ಹವಾಮಾನದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಬೀಸುವ ಗಾಳಿಯ ದಿಕ್ಕು, ವೇಗ ಮತ್ತು ಮಳೆಯ ಪ್ರಮಾಣ, ಆಲಿಕಲ್ಲು ಹಾಗೂ ಹಿಮ ಬೀಳುವುದರಲ್ಲಿ ಬದಲಾವಣೆಗಳು ಉಂಟಾಗುತ್ತಿವೆ. ಇವುಗಳಲ್ಲಿ ಆಗುತ್ತಿರುವ ಬದಲಾವಣೆಯ ರೀತಿಗಳನ್ನು ಗಮನಿಸಿದರೆ ಅತ್ಯಂತ ದೀರ್ಘ ಕಾಲಿಕ ಹಾಗೂ ಊಹಿಸಲು ಅಸಾಧ್ಯವಾದ ಪಾರಿಸಾರಿಕ ಪರಿಣಾಮಗಳಾಗಬಹುದು.

ನೈಸರ್ಗಿಕವಾಗಿ ಉಂಟಾಗುವ ವಾಯುಗುಣದ ಬದಲಾವಣೆ ಒಂದು ಮಿತಿಯಲ್ಲಿ ರುವುದು. ಮಾನವ ಚಟುವಟಿಕೆಗಳು ಈ ಬದಲಾವಣೆಯ ವೇಗ ಮತ್ತು ತೀವ್ರತೆಯನ್ನು ಹೆಚ್ಚಿಸಿವೆ. ಮನುಷ್ಯ ವಾಯುಗೋಳಕ್ಕೆ ಹೆಚ್ಚೆಚ್ಚು ಹಸಿರು ಮನೆ ಅನಿಲಗಳನ್ನು (Green House Gases-GHGs) ಸೇರಿಸುತ್ತಿದ್ದಾನೆ. ಇದರಿಂದ ಉಂಟಾಗುತ್ತಿರುವ ಜಾಗತಿಕ ಬಿಸಿಯೇರುವಿಕೆಯ ಪ್ರಮಾಣ ಮತ್ತು ವೇಗದ ಬಗ್ಗೆ ವಿಜ್ಞಾನಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ.

ವಿಜ್ಞಾನಿಗಳು ಈ ಬಗ್ಗೆ ವಿಚಾರ ಮಂಥನ ನಡೆಸಿದ್ದಾರೆ. ತೆರೆದ ಮನಸ್ಸಿನಿಂದ ವಿಮರ್ಶಿಸುತ್ತಿದ್ದಾರೆ. ಪ್ರಪಂಚಾದ್ಯಂತ ಹಲವು ಬಾರಿ ಸಭೆ ಸೇರಿ ಅಂಕಿ ಅಂಶಗಳ ತುಲನೆ ಮಾಡುತ್ತಿದ್ದಾರೆ. ಆಧಾರ ಸಹಿತ ಕಲ್ಪನೆಗಳನ್ನು ಮಾಡುತ್ತಿದ್ದಾರೆ. ವಿವಿಧ ಅಂಕಿ ಅಂಶಗಳನ್ನು ನಿರಂತರವಾಗಿ ಸಂಗ್ರಹಿಸುತ್ತಿದ್ದಾರೆ. ಜಾಗತಿಕ ಬಿಸಿಯೇರುವಿಕೆಯನ್ನು ತಡೆಗಟ್ಟಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ನಿವಾರಣೋಪಾಯಗಳನ್ನು ಪಟ್ಟಿ ಮಾಡುತ್ತಿದ್ದಾರೆ. ಇವರೆಲ್ಲರ ಪ್ರಯತ್ನವನ್ನು ಒಗ್ಗೂಡಿಸಿ, ಸಭೆ ಸೇರಿಸಲು ವಿಶ್ವ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. “ಜಾಗತಿಕ ವಾಯುಗುಣ ಬದಲಾವಣೆಯಲ್ಲಿ ಮಾನವನ ಚಟುವಟಿಕೆಗಳು ನಿರ್ಧಾರಕ ಪಾತ್ರ ವಹಿಸಿವೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ” ಎಂದು ವಾಯುಗುಣ ಬದಲಾವಣೆಯ ಅಂತರ ಸರ್ಕಾರಿ ಸಮಿತಿ (Intergovernmental Panel on Climate change) ೧೯೯೫ರಲ್ಲಿ ನಡೆಸಿದ ಅಧ್ಯಯನವು ತಿಳಿಸಿದೆ.

ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (United Nations’ Enviromental Programme – UNEP)ದ ಪ್ರಕಾರ ಕಳೆದ ೧೦೦ ವರ್ಷಗಳಲ್ಲಿ ಭೂ ಮೇಲ್ಮೈಯ ತಾಪ ಸುಮಾರು ೦.೫ರಷ್ಟು ಅಧಿಕವಾಗಿದೆ. ಅದರಿಂದಾಗಿ ಕ್ರಿಸ್ತ ಶಕ ೨೦೫೦ರ ವೇಳೆಗೆ ವಿಶ್ವದಲ್ಲಿ ಯಾವುದೇ ಹಿಮಹಾಸು (glacier) ಇರುವುದಿಲ್ಲ ಎಂದು ಊಹಿಸಲಾಗಿದೆ. ಹಿಮ ಕರಗುವುದರಿಂದ ಆಗಾಗ್ಗೆ ಪ್ರವಾಹಗಳು ಹಾಗೂ ಸಮುದ್ರಮಟ್ಟದಲ್ಲಿ ಏರಿಕೆ ಉಂಟಾಗುತ್ತದೆ.

೨೦೨೦ರ ವೇಳೆಗೆ ನೈಲ್ ನದಿ ಮುಖಜ ಭೂಮಿಯಲ್ಲಿ ಸುಮಾರು ೧೫% ಭೂಮಿ ಪೂರ್ಣ ಅವನತಿಗೆ ಒಳಗಾಗುವುದು. ದಕ್ಷಿಣ ಏಷ್ಯಾದಲ್ಲಿ ಭತ್ತ, ಜೋಳ, ಕಿರುಧಾನ್ಯಗಳ ಉತ್ಪಾದನೆಯಲ್ಲಿ ೧೦% ಕುಸಿತ ಉಂಟಾಗುವುದು.

ಜಾಗತಿಕ ಬಿಸಿಯೇರುವಿಕೆಯಿಂದ ಭಾರತದ ಮೇಲಾಗುವ ಪರಿಣಾಮ ಮತ್ತಷ್ಟು ತೀವ್ರ, ಪ್ರತಿ ೨೦ ಸೆ. ಉಷ್ಣತೆ ಏರುವಿಕೆಯಿಂದ ಜಿ.ಡಿ.ಪಿ.ಯು ೫% ಕುಸಿಯುವುದು. ಅನಂತರದ ೬೦ ಸೆ.ಗೆ ಏರಿಕೆಗೆ ೧೫-೧೬% ಕುಸಿತ ಉಂಟಾಗುವುದು. ಆಹಾರ ಮತ್ತು ಕೃಷಿ ಸಂಸ್ಥೆಯ ಅಂದಾಜಿನ ಪ್ರಕಾರ ಭಾರತ ೧೨೫ ಮೆಟ್ರಿಕ್ ಟನ್ ಧಾನ್ಯ ಉತ್ಪಾದನೆಯ ಕುಸಿತವನ್ನು ಅನುಭವಿಸುವುದು. ಕಳೆದ ಏಳು ವರ್ಷಗಳಲ್ಲಿ  ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಸುಮಾರು ೩೦ ಸೆ. ಅಧಿಕ ಉಷ್ಣತೆಯಾಗಿರುವುದರಿಂದ ಗೋಧಿ ಉತ್ಪಾದನೆಯು ಹರಿಯಾಣ ರಾಜ್ಯದಲ್ಲಿ ೨೦೦೦-೦೧ರಲ್ಲಿ ಪ್ರತಿ ಹೆಕ್ಟೇರಿಗೆ ೪೧೦೬ ಕೆ.ಜಿ. ಇದ್ದದ್ದು ೨೦೦೩-೦೪ರಲ್ಲಿ ೩೯೩೭ ಕೆ.ಜಿ.ಗೆ ಇಳಿದಿದೆ. ಆದ್ದರಿಂದ ಹವಾಗುಣ ಬದಲಾವಣೆಯ ನೇರ ಪ್ರಭಾವ ಆಹಾರ ಉತ್ಪಾದನೆಯ ಕುಸಿತದಲ್ಲಿ ಕಾಣಬಹುದು.

ಪ್ರಖ್ಯಾತ ಪರಿಸರ ತಜ್ಞ ಮಾರಿಸ್ ಸ್ಟ್ರಾಂಗ್ ಹೇಳಿಕೆ ಹೀಗಿದೆ : “ನಾವಿನ್ನು ತಕ್ಷಣ ಹವಾಗುಣ ವೈಪರೀತ್ಯಕ್ಕೆ ಮೊದಲು ಗಮನ ನೀಡಬೇಕು. ಮನುಷ್ಯನ ಆಲೋಚನಾ ವಿಧಾನಗಳನ್ನು ಬದಲಿಸುವುದೇ ಒಂದು ದೊಡ್ಡ ಸವಾಲು. ಮುಂಬರಲಿರುವ ಸಮಸ್ಯೆಗಳನ್ನು ಎಷ್ಟೇ ವಿವರಿಸಿದರೂ ಇನ್ನೂ ನಂಬುವ ಹಾಗೂ ಚಿಂತಿಸುವ ಸ್ಥಿತಿಗೆ ಬಂದಿಲ್ಲ. ಹವಾಗುಣ ವೈಪರೀತ್ಯದಿಂದ ಹಾಗೂ ಇತರೆ ಜಾಗತಿಕ ಸಮಸ್ಯೆಗಳಿಂದ ಮಾನವ ಜೀವಿಯ ಭವಿಷ್ಯವೇ ಅಂಧಕಾರದಲ್ಲಿರುವುದಕ್ಕೆ ಈ ಆಲಸ್ಯವೇ ಅಡ್ಡಗೋಡೆಯಾಗಿದೆ. ಹವಾಗುಣ ವೈಪರೀತ್ಯದ ಸವಾಲು ಎದುರಿಸಲು ಸಾಕಷ್ಟು ದೀರ್ಘ ಸಮಯ, ಸಿದ್ಧತೆ ಬೇಕು. ಆದ್ದರಿಂದ ನಾವು ಅನಾಹುತವನ್ನು ತಪ್ಪಿಸಲು ಆದಷ್ಟು ಬೇಗ ಕಾರ್ಯಪ್ರವೃತ್ತರಾಗಬೇಕು.”

ವಾಯುಗುಣ ಬದಲಾವಣೆಯು ಸಹಜವಾಗಿಯೇ ಏರುಪೇರಾಗುತ್ತಿದೆ ಮತ್ತು ಈ ವ್ಯತ್ಯಾಸವು ಪ್ರಕೃತಿಯಲ್ಲಿನ ಬದಲಾವಣೆಯ ಇತಿಮಿತಿಯಲ್ಲಿಯೇ ಇದೆ ಎಂದು ವಾದಿಸುವ ವಿಜ್ಞಾನಿಗಳ ಗುಂಪೂ ಇದೆ.

ಹಾಗಾಗಿ ಇದು ಚರ್ಚಾಸ್ಪದ ವಿಷಯ. ವಿವಿಧ ವಿಜ್ಞಾನಿಗಳ ಅಭಿಪ್ರಾಯ ವಿಭಿನ್ನವಾಗಿದೆ. ಆದರೆ ನೈಸರ್ಗಿಕ ಕಾರಣಗಳಿಗಿಂತ ಮಾನವ ನಿರ್ಮಿತ ಕಾರಣಗಳಿಂದ ಜಾಗತಿಕ ತಾಪ ಏರಿಕೆ ಕಾರಣವಾಗಿದೆ ಎಂಬುದು ಸತ್ಯ ಸಂಗತಿ. ಈ ಬಗ್ಗೆ ಮುಂದಿನ ಅಧ್ಯಾಯಗಳಲ್ಲಿ ವಿವರಗಳನ್ನು ತಿಳಿಯೋಣ.