ಹಾವುಗಳ ಬಗ್ಗೆ ಹೊಸ ವಿವರಗಳು ಬರುತ್ತಲೇ ಇವೆ. ಈ ವಿಚಿತ್ರ ಹಾಗೂ ಕುತೂಹಲಕಾರಿ ಜೀವಿಗಳ ಜೀವನದಲ್ಲಿ ಅದೆಷ್ಟು ವೈಚಿತ್ರ್ಯಗಳಿವೆಯೋ? ನಿಗೂಢ ವಿಷಯಗಳಿವೆಯೋ ?

ನಾವು ಹಾವುಗಳನ್ನು ಸಾಕಲೂಬಹುದು. ನೀರು ಹಾವು ಮತ್ತು ಮಣ್ಣುಮುಕ್ಕ ಹಾವುಗಳನ್ನು ಪಳಗಿಸಲೂಬಹುದು. ಆದರೆ ಹಾವುಗಳನ್ನು ಸಾಕುವುದಕ್ಕೆ ಮೀನುಗಳನ್ನು ಸಾಕಲು ಉಪಯೋಗಿಸುವ ಉತ್ತಮವಾದ ತೊಟ್ಟಿಗಳು ಬೇಕು. ಅವುಗಳಿಗೆ ಆಗಾಗ್ಗೆ ಮೀನು, ಕಪ್ಪೆ, ಇಲಿಗಳನ್ನು ಆಹಾರವಾಗಿ ನೀಡಬೇಕು. ತೊಟ್ಟಿಯ ಮುಚ್ಚಳ ಭದ್ರವಾಗಿರಬೇಕು. ಇಲ್ಲದಿದ್ದರೆ ಹಾವುಗಳು ತೊಟ್ಟಿಯಿಂದ ಹೊರಕ್ಕೆ ಬರುತ್ತವೆ. ತೊಟ್ಟಿಯನ್ನು ಚೊಕ್ಕಟವಾಗಿಡಬೇಕು. ಹೆಬ್ಬಾವು ಮತ್ತು ಕೇರೆ ಹಾವುಗಳನ್ನು ಜಾಲರಿಯಿರುವ ಪೆಟ್ಟಿಗೆಗಳಲ್ಲಿ ಸಾಕಬಹುದು. ನೀರನ್ನು ಮತ್ತು ಆಹಾರವನ್ನು ಸರಿಯಾಗಿ ಒದಗಿಸಬೇಕು. ಇಷ್ಟಾದರೂ ಕೆಲವು ಹಾವುಗಳು ಸಾಕಿದಾಗ ಆಹಾರ ತಿನ್ನದೆ ಉಪವಾಸ ಬೀಳುತ್ತವೆ ಅಥವಾ ಸದಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆಗ ಹಾವುಗಳನ್ನು ಅವುಗಳ ನೈಸರ್ಗಿಕ ಪರಿಸರಕ್ಕೆ ಸ್ವೇಚ್ಛೆಯಾಗಿ ಜೀವಿಸಲು ಬಿಡುವುದು ಒಳ್ಳೆಯದು.

ಇತ್ತೀಚೆಗೆ ಹಲವಾರು ಸಾಹಸಿಗಳು ಎಲ್ಲ ಜಾತಿಯ ಹಾವುಗಳನ್ನು ಸಂಗ್ರಹಾಲಯದ ರೀತಿ ಸಾಕಲು ಪ್ರಾರಂಭಿಸಿದ್ದಾರೆ. ರೋಮಾಲಸ್ ವಿಟೇಕರ್‌ರವರ ಮದ್ರಾಸಿನ ‘ಸರ್ಪಧಾಮ’ವು ಪ್ರಸಿದ್ಧವಾದದ್ದು. ಕರ್ನಾಟಕದಲ್ಲಿಯೂ ಹಲವಾರು ಸರ್ಪಪ್ರಿಯ ಸಾಹಸಿಗಳು ಹಾವುಗಳನ್ನು ಸಾಕಿ ಅವುಗಳ ಜೊತೆ ವಾಸಿಸುವುದಕ್ಕೆ ಪ್ರಾರಂಭಿಸಿದ್ದಾರೆ !

ಅರಣ್ಯಗಳು ಕಡಿಮೆಯಾದಂತೆ ನಗರಗಳು ಹೆಚ್ಚಿದಂತೆ ಹಾವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಿಸರ್ಗದ ಕೊಡುಗೆಗಳಾದ ಸರ್ಪಗಳನ್ನು ವಿಷಕಾರಿಯೆಂದು ಮತ್ತು ಅನುಪಯೋಗಿಯೆಂದು ಅವುಗಳನ್ನು ನಾಶಪಡಿಸುವುದು ಸಾಧುವಲ್ಲ. ಪ್ರಕೃತಿಯಲ್ಲಿ ಮನುಷ್ಯರಂತೆ ಅವಕ್ಕೂ ಒಂದು ಸ್ಥಾನವಿದೆ. ಅಲ್ಲದೆ ಅವುಗಳು ಬದುಕುವುದರಿಂದ ಮನುಷ್ಯನಿಗೆ ಅನುಕೂಲವಿದೆ. ಹಾವುಗಳನ್ನು ನೋಡಿ ವಿಷದ ಹಾವುಗಳನ್ನು ಗುರುತಿಸುವುದಕ್ಕೆ ಕಲಿತು, ನಿಸರ್ಗದ ಸಮತೋಲನದಲ್ಲಿ ಹಾವುಗಳ ಪಾತ್ರಗಳನ್ನು ಗಮನಿಸಿದಲ್ಲಿ ನಮ್ಮ ಉಳಿವು ಮತ್ತು ಹಾವುಗಳ ಬಾಳು ಎರಡೂ ಸಾಧ್ಯ.