ನಮ್ಮ ದೇಶದಲ್ಲಿ ೧೬೦ ಕ್ಕಿಂತಲೂ ಹೆಚ್ಚು ಪ್ರಭೇದದ ವಿಷವಿಲ್ಲದ ಹಾವುಗಳಿವೆ. ಇವು ವಾಸ ಮಾಡುವ ಸ್ಥಳದ ಆಧಾರದ ಮೇಲೆ ಮಣ್ಣು ಕೊರೆಯುವ ಹಾವುಗಳು, ನೆಲದ ಹಾವುಗಳು, ನೀರು ಹಾವುಗಳು ಮತ್ತು ಮರದ ಹಾವುಗಳೆಂದು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬಹುದು. ಇವು ಮನುಷ್ಯನಿಗೆ ಕಚ್ಚಿದರೆ ಅಪಾಯವೇನೂ ಇಲ್ಲ.

ಮಣ್ಣು ಕೊರೆಯುವ ಹಾವುಗಳು

ಇವು ತಮ್ಮ ತಲೆಯಿಂದ ಮಣ್ಣನ್ನು ಕೊರೆದು ಬಿಲಗಳನ್ನು ಮಾಡಿಕೊಂಡು ಜೀವಿಸುತ್ತವೆ. ಇವುಗಳ ತಲೆಬುರುಡೆ ಗಟ್ಟಿಯಾಗಿರುವುದರಿಂದ ಮತ್ತು ಕುತ್ತಿಗೆಯ ಮಾಂಸಖಂಡಗಳು ಬಲಯುತವಾಗಿರುವುದರಿಂದ ತೆಳುವಾದ ಮಣ್ಣನ್ನು ಬುಲ್ಡೋಜರ್‌ನಂತೆ ನೂಕಿ ಇವು ಒಳನುಗ್ಗುತ್ತವೆ. ಮಣ್ಣಿನೊಳಗೆ ವಾಸಿಸುವುದರಿಂದ ಇವುಗಳ ಶರೀರ ತಂಪಾಗಿರುತ್ತದೆ.  ಈ ಹಾವುಗಳನ್ನು ಮೂರು ಗುಂಪುಗಳಾಗಿ ವಿಂಗಡಿಸುತ್ತಾರೆ.

ಮಣ್ಣು ಹಾವುಗಳು

ಮಣ್ಣಿನೊಳಗೆ ವಾಸಿಸಲು ಹೊಂದಾಣಿಕೆ ಪಡೆದಿರುವ ಈ ಹಾವುಗಳು ತೋಟದ ಮಣ್ಣಿನಲ್ಲಿ, ಮರದ ದಿಮ್ಮಿಗಳ ತೊಗಟೆಯಲ್ಲಿ, ಕೊಳೆಯುತ್ತಿರುವ ಎಲೆಗಳ ಕೆಳಗೆ ಮತ್ತು ಹುತ್ತದ ಮಣ್ಣಿನಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ೧೪ ಪ್ರಭೇದಗಳಿವೆ. ಇವು ಭಾರತದ ಅತಿ ಚಿಕ್ಕ ಹಾವುಗಳು. ಸುಮಾರು ೧೨.೫ ಸೆಂ.ಮೀ. ಉದ್ದದ ತೆಳ್ಳನೆಯ ಶರೀರ ಹೊಂದಿರುವ ಇವು ಎರೆಹುಳುಗಳಂತೆಯೇ ಕಾಣುತ್ತವೆ. ಆದರೆ ಇವಕ್ಕೆ ಕಂದು ಬಣ್ಣವಿರುತ್ತದೆ ಮತ್ತು ಶರೀರದ ತುಂಬ ಹುರುಪೆಗಳಿರುತ್ತವೆ. ತೆಳ್ಳನೆಯ ಶರೀರ, ನುಣುಪಾದ ಹೊಳೆಯುವ ಹುರುಪೆಗಳು, ಮೊಂಡಾದ ತಲೆ ಮತ್ತು ಬಾಲ, ಕಂದು ಅಥವಾ ಕಪ್ಪು ಬಣ್ಣದ ಶರೀರ ಮತ್ತು ಸಣ್ಣ ಚುಕ್ಕೆಗಳಂತಹ ಎರಡು ಕಣ್ಣುಗಳು – ಇವು ಮಣ್ಣು ಹಾವುಗಳ ಮುಖ್ಯ ಲಕ್ಷಣಗಳು. ಬಾಲದ ತುದಿಯಲ್ಲಿ ಸಣ್ಣ ಮೊಳೆಯಂತಹ ಹುರುಪೆಯಿರುತ್ತದೆ. ಇವು ಗೆದ್ದಲು, ಇರುವೆಗಳ ಮೊಟ್ಟೆ, ಮರಿ ಮತ್ತು ಎರೆಹುಳುಗಳನ್ನು ತಿನ್ನುತ್ತವೆ. ಇವನ್ನು ಕೈಯಲ್ಲಿ ಹಿಡಿದಾಗ, ಇತರ ಮಣ್ಣು ಕೊರೆಯುವ ಹಾವುಗಳಂತೆ ಬಾಲದಿಂದ ಚುಚ್ಚುತ್ತವೆ. ಇವುಗಳಲ್ಲಿ ಗಂಡು ಹಾವಿಲ್ಲ. ಹೆಣ್ಣು ಹಾವು ಅನಿಶೇಕ ವಿಧಾನದಿಂದ ೫ ರಿಂದ ೮ ಮೊಟ್ಟೆಗಳನ್ನಿಡುತ್ತದೆ.  ಕೆಲವು ಕಡೆ ಇವನ್ನು ಕುರುಡು ಹಾವುಗಳೆನ್ನುತ್ತಾರೆ.

ಕವಚ ಬಾಲದ ಹಾವುಗಳು

ದಕ್ಷಿಣ ಭಾರತದ ಪರ್ವತಗಳ ಮಣ್ಣಿನಲ್ಲಿ ವಿಶೇಷವಾಗಿ ಕಂಡುಬರುವ ಈ ಹಾವುಗಳ ಎರಡೂ ತುದಿಗಳು ಮೊಂಡಾಗಿರುತ್ತವೆ. ಸುಮಾರು ಹೆಬ್ಬೆರಳಿನಷ್ಟು ದಪ್ಪದ ಶರೀರದ ಮೇಲ್ಭಾಗದಲ್ಲಿ ಮಾಸಲು ಬಣ್ಣ ಮತ್ತು ತಳಭಾಗದಲ್ಲಿ ಹಳದಿ ಮಿಶ್ರಿತ ಕಂದು ಬಣ್ಣಗಳು, ಕೆಂಪು ಚುಕ್ಕೆಗಳು ಇವೆ. ಹುರುಪೆಗಳು ನುಣುಪಾಗಿದ್ದು ಹೊಳೆಯುತ್ತಿರುತ್ತವೆ ಮತ್ತು ಮಣ್ಣು ಶರೀರಕ್ಕೆ ಅಂಟಿಕೊಳ್ಳುವುದಿಲ್ಲ. ಈ ಗುಂಪಿಗೆ ಸೇರಿದ ೪೦ ಕ್ಕಿಂತಲೂ ಹೆಚ್ಚು ಪ್ರಭೇದಗಳು ಭಾರತದಲ್ಲಿವೆ.  ಇವು ೩ ರಿಂದ ೫ ಮರಿ ಹಾಕುತ್ತವೆ. ಇವು ಕೀಟ, ಎರೆಹುಳು ಮತ್ತು ಡಿಂಬಗಳನ್ನು ತಿನ್ನುತ್ತವೆ.

ಪ್ರತಿಯೊಂದು ಬೆಟ್ಟದ ಸಾಲಿನಲ್ಲಿಯೂ ವಿಶಿಷ್ಟ ಹೊಂದಾಣಿಕೆ ಪಡೆದ ಒಂದು ಪ್ರಭೇದದ ಕವಚ ಬಾಲದ ಹಾವು ಕಂಡು ಬರುವುದು. ಇದು ಅತ್ಯಂತ ಕುತೂಹಲಕಾರಿ ವಿಷಯ. ಇತ್ತೀಚೆಗೆ ಅರಣ್ಯಗಳು ನಾಶವಾಗುತ್ತಿರುವುದರಿಂದ, ಅರಣ್ಯಗಳಲ್ಲಿ ವಾಸಿಸುವ ಈ ಹಾವುಗಳೂ ನಾಶವಾಗುತ್ತಿವೆ.

ಮಣ್ಣುಮುಕ್ಕ ಹಾವುಗಳು

ಇವು ಹೆಬ್ಬಾವುಗಳ ಸಂಬಂಧಿಗಳು. ಇವು ತಮ್ಮ ಶರೀರದಿಂದ ಬೇಟೆಯನ್ನು ಸುತ್ತಿ ಹಿಸುಕಿ ಸಾಯಿಸುತ್ತವೆ. ಭಾರತದಲ್ಲಿ ಇವುಗಳ ಎರಡು ಪ್ರಭೇದಗಳಿವೆ.

ಸಾಮಾನ್ಯ ಮಣ್ಣು ಮುಕ್ಕ ಅಥವಾ ನೇತ್ರ ಗಾಡ್ಚಿ ಹಾವು ಹೆಚ್ಚಾಗಿ ಬಯಲು ಮತ್ತು ಗುಡ್ಡಗಳ ಪ್ರದೇಶಗಳಲ್ಲಿರುತ್ತದೆ. ಸುಮಾರು ೫೦ ಸೆಂ.ಮೀ. ಉದ್ದ, ಅಗಲವಾದ ಶರೀರ, ಚಿಕ್ಕದಾದ ಒರಟು ಬಾಲ, ತಿಳಿ ಹಳದಿ ಬಣ್ಣದ ಶರೀರದ ಮೇಲೆ ಇಟ್ಟಿಗೆ ಅಥವಾ ಕಪ್ಪು ಬಣ್ಣದ ಮಚ್ಚೆಗಳ ಸಾಲು – ಇವು ಈ ಹಾವಿನ ಮುಖ್ಯ ಲಕ್ಷಣಗಳು. ಹೆಬ್ಬಾವಿನ ಮರಿಯಂತೆ ಇರುವ ಈ ಹಾವನ್ನು ಒಮ್ಮೊಮ್ಮೆ ಕೊಳಕು ಮಂಡಲದ ಹಾವೆಂದು ತಪ್ಪು ತಿಳಿಯುವ ಸಾಧ್ಯತೆಯಿದೆ. ಆದರೆ ಕೊಳಕು ಮಂಡಲದಲ್ಲಿ ಮಚ್ಚೆಗಳು ವಜ್ರಾಕಾರದಲ್ಲಿರುತ್ತವೆ ಮತ್ತು ಕ್ರಮವಾಗಿ ಮೂರು ಸಾಲುಗಳಿರುತ್ತವೆ. ಇದು ಮರಳು ಮಣ್ಣು, ಇಲಿಯ ಬಿಲಗಳು, ಇಟ್ಟಿಗೆ ಗೂಡುಗಳು ಮತ್ತು ಕಲ್ಲುಗುಡ್ಡೆಗಳಲ್ಲಿ ವಾಸಿಸುತ್ತವೆ. ಆದ್ದರಿಂದ ಇದನ್ನು ಕಾಮನ್ ಸ್ಯಾಂಡ್‌ಬೋವ – ಸಾಮಾನ್ಯ ಮರಳ ಹೆಬ್ಬಾವು ಎಂದೂ ಕರೆಯುವರು. ನಿಶಾಚರಿಯಾದ ಈ ಹಾವು ಸಂಜೆ ಹೊತ್ತು ಬಿಲದಿಂದ ತಲೆ ಮತ್ತು ಕತ್ತನ್ನು ಹೊರ ಚಾಚಿ ಇಲಿ, ಕಪ್ಪೆ, ಹಲ್ಲಿ ಮತ್ತು ಪಕ್ಷಿಗಳನ್ನು ಬೇಟೆಯಾಡುತ್ತದೆ.  ಇದನ್ನು ಕೈಯಿಂದ ಹಿಡಿದಾಗ ಕೈಗೆ ಸುತ್ತಿಕೊಂಡು ಬಿರುಸಾಗಿ ಕಚ್ಚುವುದು. ಆದರೆ ಇದು ವಿಷದ ಹಾವಲ್ಲ. ಈ ಹಾವನ್ನು ಹೆದರಿಸಿದಾಗ ಶರೀರದ ಕೆಳಗೆ ತಲೆ ಹುದುಗಿಸಿಕೊಂಡು ರಕ್ಷಣೆ ಪಡೆಯುತ್ತದೆ. ಹೆಣ್ಣು ಮಣ್ಣುಮುಕ್ಕ ಹಾವು ೬ ರಿಂದ ೮ ಮರಿ ಹಾಕುತ್ತದೆ. ಈ ಹಾವನ್ನು ಕೆಲವು ಕಡೆ ಉಸಿರು ಮಂಡಲವೆಂದು ಕರೆಯುತ್ತಾರೆ. ಅನೇಕ ವೇಳೆ ಹಾವಾಡಿಗರು ಈ ಹಾವಿನ ಕಡಿತದಿಂದ ಕುಷ್ಠರೋಗ ಬರುತ್ತದೆಂದೂ ಮತ್ತು ಇದರ ಉಸಿರು ತಾಕಿದರೆ ಚರ್ಮರೋಗ ಬರುತ್ತದೆಂದೂ ಸುಳ್ಳು ಹೇಳುತ್ತಾರೆ.

ಕೆಂಪು ಮಣ್ಣು ಮುಕ್ಕ ಅಥವಾ ಎರಡು ತಲೆ ಹಾವು, ಒಂದೇ ಆಕಾರ ಮತ್ತು ಗಾತ್ರದ ತಲೆ ಮತ್ತು ಬಾಲ ಹೊಂದಿರುತ್ತದೆ.  ಆದ್ದರಿಂದಲೇ ಇದನ್ನು ಎರಡು ತಲೆ ಹಾವೆಂದು ಕರೆಯುತ್ತಾರೆ.  ಸುಮಾರು ೧ ಮೀಟರ್ ಉದ್ದದ ಶರೀರ, ಮೊಂಡು ತಲೆ ಮತ್ತು ಬಾಲ, ಶರೀರದ ತುಂಬ ಸಣ್ಣನೆಯ ಹುರುಪೆಗಳು – ಇವು ಈ ಹಾವಿನ ಮುಖ್ಯ ಲಕ್ಷಣಗಳು. ತೆಳು ಕೆಂಪಿನ ಬಣ್ಣ ಮತ್ತು ನುಣುಪಾದ ಹೊಳೆಯುವ ಹುರುಪೆಗಳು ಇದಕ್ಕಿವೆ. ಈ ಹಾವಿಗೆ ತುಂಬ ತಾಳ್ಮೆ ಇದೆ, ಕಚ್ಚುವುದಿಲ್ಲ.  ಆದ್ದರಿಂದ ಮಕ್ಕಳಲ್ಲಿ ಹಾವುಗಳ ಬಗ್ಗೆ ಧೈರ್ಯ ಮೂಡಿಸಲು ಮತ್ತು ಕೈಯಿಂದ ಮುಟ್ಟಿಸಲು ಈ ಹಾವು ಅತ್ಯಂತ ಯುಕ್ತವಾದುದು. ಇದು ಇಲಿ, ಕಪ್ಪೆ ಮತ್ತು ಹಲ್ಲಿಗಳನ್ನು ತಿನ್ನುತ್ತದೆ. ಬಿಲಗಳಲ್ಲಿ ನುಗ್ಗಿ ಇಲಿ ಹಿಡಿದು ತಿನ್ನುವುದರಲ್ಲಿ ಇದು ನಿಸ್ಸೀಮ.

ನೆಲದ ಮೇಲಿನ ಇತರ ಹಾವುಗಳು

ನೆಲದ ಮೇಲೆ ವಿವಿಧ ರೀತಿಯ ಹಾವುಗಳು ಜೀವಿಸುತ್ತವೆ. ಅವುಗಳಲ್ಲಿ ಕೇರೆಹಾವು, ಹೆಬ್ಬಾವು, ತೋಳದ ಹಾವು, ಕಟುಗಲ ಹಾವು ಮುಖ್ಯವಾದವು.

ಕೇರೆಹಾವು ಸಾಮಾನ್ಯವಾಗಿ ಎಲ್ಲ ಸ್ಥಳಗಳಲ್ಲಿ ಕಂಡು ಬರುತ್ತದೆ. ಸುಮಾರು ೨ ಮೀಟರ್ ಉದ್ದದ ಶರೀರ, ತೆಳುವಾದ ಕುತ್ತಿಗೆ ದೊಡ್ಡ ಕಣ್ಣುಗಳು, ಮಾಸಲು ಹಳದಿ ಬಣ್ಣದ ಮೈ, ವೇಗದ ಚಲನೆ ಮತ್ತು ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣ – ಇವು ಕೇರೆಹಾವಿನ ಮುಖ್ಯ ಲಕ್ಷಣಗಳು. ಈ ಹಾವನ್ನು ನಾಗರಹಾವೆಂದು ತಿಳಿಯುವ ಸಾಧ್ಯತೆ ಹೆಚ್ಚು. ಆದರೆ ನಾಗರಹಾವಿಗಿಂತ ಉದ್ದನೆಯ ಮತ್ತು ತೆಳುವಾದ ಶರೀರ ಕೇರೆಹಾವಿಗಿದೆ.  ನಾಗರಹಾವಿನ ಕುತ್ತಿಗೆ ದಪ್ಪ, ಹೆಡೆ ಗುರುತು ಅದಕ್ಕಿದೆ. ಕೇರೆ ಹಾವಿನ ಕುತ್ತಿಗೆ ತೆಳುವಾಗಿರುತ್ತದೆ.  ಇದಕ್ಕೆ ನಾಗರಹಾವಿಗಿಂತ ಚೂಪಾದ ತಲೆ ಮತ್ತು ಅಗಲವಾದ ಕಣ್ಣು ಇದೆ.

ಹುತ್ತ ಮತ್ತು ಇಲಿಯ ಬಿಲಗಳಲ್ಲಿ ಸಾಮಾನ್ಯವಾಗಿ ವಾಸಿಸುವ ಕೇರೆ ಹಾವುಗಳು ಹುಲ್ಲುಗಾವಲು, ಭತ್ತದ ಗದ್ದೆ ಮತ್ತು ಉಗ್ರಾಣಗಳ ಹತ್ತಿರ ಇಲಿಗಳನ್ನು ಹುಡುಕಿಕೊಂಡು ಬರುತ್ತವೆ.  ಇಲಿಯೆಂದರೆ ಈ ಹಾವುಗಳಿಗೆ ಪಂಚಪ್ರಾಣ.  ಆದ್ದರಿಂದ ಇವನ್ನು ಇಲಿಹಾವು ಗಳೆಂದೂ ಕರೆಯುತ್ತಾರೆ. ಬೆಳಗಿನ ಹೊತ್ತು ಚಟುವಟಿಕೆಯಿಂದಿರುವ ಈ ಹಾವುಗಳು ಮನುಷ್ಯನ ವಾಸದ ಸುತ್ತಮುತ್ತ ಬದುಕಿದರೂ, ಮನುಷ್ಯನ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸುತ್ತವೆ.  ಹೆದರಿದಾಗ ಗಂಟಲನ್ನು ಹಿಗ್ಗಿಸಿ ಬುಸುಗುಟ್ಟುತ್ತವೆ ಮತ್ತು ಕಚ್ಚಲು ಮುಂದಾಗುತ್ತವೆ. ವಿಷವಲ್ಲದ ಕಡಿತ ಸಾಕಷ್ಟು ನೋವುಂಟು ಮಾಡಬಲ್ಲದು. ಇದರ ಬಾಲಕ್ಕೆ ಸುತ್ತಿಕೊಳ್ಳುವ ಶಕ್ತಿಯಿದೆ. ತುಳಿದ ವ್ಯಕ್ತಿಯ ಕಾಲಿಗೆ ಅಥವಾ ಬೇಟೆಯ ಶರೀರಕ್ಕೆ ಸುತ್ತಿಕೊಂಡು ಒಂದು ವಿಶಿಷ್ಟ ಗಂಟು ಹಾಕಬಲ್ಲುದು.  ಆದ್ದರಿಂದ ಕೆಲವರು ಈ ಹಾವಿಗೆ ಬಾಲದಲ್ಲಿ ವಿಷವಿದೆ, ಬಾಲದಿಂದ ಕಚ್ಚುತ್ತದೆ ಎಂದು ತಪ್ಪಾಗಿ ತಿಳಿದಿದ್ದಾರೆ. ಹೆಣ್ಣು ಕೇರೆಹಾವು ೮ ರಿಂದ ೧೬ ಮೊಟ್ಟೆಗಳನ್ನಿಡುತ್ತದೆ. ಇವು ೬೦ ದಿನಗಳಲ್ಲಿ ಒಡೆದು ಮರಿಗಳು ಹೊರಬರುತ್ತವೆ. ಮರಿಗಳು ಕಪ್ಪೆಗಳನ್ನು ತಿನ್ನುತ್ತಾ ಬೆಳೆಯುತ್ತವೆ.  ಬೆದೆಕಾಲದಲ್ಲಿ ಗಂಡು ಕೇರೆಹಾವು ತನ್ನ ಕ್ಷೇತ್ರಕ್ಕೆ ಬೇರೆ ಗಂಡು ಕೇರೆಹಾವು ಬಂದರೆ ಜಗಳಕ್ಕೆ ಇಳಿಯುತ್ತದೆ.  ಆಗ ಇವು ಒಂದಕ್ಕೊಂದು ಸುತ್ತಿಕೊಂಡು ಎದುರಾಳಿಯ ತಲೆಯನ್ನು ನೆಲಕ್ಕೆ ತಗುಲಿಸಲು ಪ್ರಯತ್ನಿಸುತ್ತವೆ.

ಈ ರೀತಿಯ ಕುಸ್ತಿಯನ್ನು ಅನೇಕರು ಗಂಡು-ಹೆಣ್ಣು ಹಾವುಗಳ ಕೂಡುವಿಕೆ ಅಥವಾ ಬೆಣೆಯೆಂದು ತಪ್ಪಾಗಿ ಭಾವಿಸುತ್ತಾರೆ.

ಹೆಬ್ಬಾವುಗಳು

ಜಗತ್ತಿನ ಅತಿ ದೊಡ್ಡ ಹಾವುಗಳಲ್ಲಿ ಹೆಬ್ಬಾವುಗಳೂ ಸೇರಿವೆ. ೮ ರಿಂದ ೯ ಮೀಟರ್ ಉದ್ದ ಬೆಳೆಯುವ ಇವು ಚೆನ್ನಾಗಿ ಬೆಳೆದಿರುವ ಚಿರತೆಯನ್ನು ಸೋಲಿಸಿ ನುಂಗಬಲ್ಲವು. ಇವುಗಳಲ್ಲಿ ಎರಡು ಪ್ರಭೇದಗಳಿವೆ. ಭಾರತದ ಕಲ್ಲು ಹೆಬ್ಬಾವು ಮತ್ತು ರಾಜ ಹೆಬ್ಬಾವು.

ಕಲ್ಲು ಹೆಬ್ಬಾವು ಅಥವಾ ದಾಸರ ಹಾವು ೩ ರಿಂದ ೬ ಮೀಟರ್ ಉದ್ದವಿರುತ್ತದೆ. ಬಾಣದ ತುದಿಯಂತಹ ಚೂಪಾದ ತಲೆ, ದಪ್ಪನೆಯ, ದುಂಡು ದುಂಡಾದ ಶರೀರ, ನುಣುಪಾದ ಹುರುಪೆಗಳು, ಹೊಳೆಯುವ ಮಚ್ಚೆಯ ಸಾಲು ಮತ್ತು ಮೊಂಡು ಬಾಲ – ಇದರ ಮುಖ್ಯ ಲಕ್ಷಣಗಳು. ಹಳದಿ ಅಥವಾ ಕಂದು ಬಣ್ಣದ ಮಚ್ಚೆಗಳು ಅನುಕ್ರಮವಾಗಿರದೆ ಹರಿದ ಬಟ್ಟೆಯಂತಿರುತ್ತವೆ. ಶರೀರದ ತಳಭಾಗಕ್ಕೆ ತಿಳಿಹಳದಿ ಅಥವಾ ಕಿತ್ತಲೆ ಬಣ್ಣವನ್ನು ಹೊಂದಿರುತ್ತದೆ. ಗುದದ್ವಾರದ ಬಳಿ ಎರಡು ಚೂಪಾದ ಮುಳ್ಳುಗಳಿರುತ್ತವೆ. ಇವು ಹಿಂಗಾಲುಗಳ ಅವಶೇಷಗಳು. ಎಲ್ಲಾ ಕಾಡುಗಳಲ್ಲಿ ಇವು ವಾಸಿಸುತ್ತವೆ. ಕಲ್ಲು ಬಂಡೆಗಳ ಸಂದು-ಗೊಂದುಗಳು, ಗವಿಗಳು, ಮರದ ಪೊಟರೆಗಳು, ಮೊಲದ ಬಿಲಗಳು ಈ ಹಾವುಗಳ ವಾಸಸ್ಥಾನ.

ಸಾಮಾನ್ಯವಾಗಿ ಹೆಬ್ಬಾವುಗಳು ಇಲಿ, ಪಕ್ಷಿ, ನರಿ ಮತ್ತು ಬೆಕ್ಕುಗಳನ್ನು ನುಂಗುತ್ತವೆ. ಒಮ್ಮೊಮ್ಮೆ ಚಿರತೆ, ಜಿಂಕೆ, ಮೇಕೆ ಮತ್ತು ಕಾಡು ಹಂದಿಗಳನ್ನೂ ತಿನ್ನುವುದುಂಟು.  ಬೇಟೆಯ ಹತ್ತಿರ ನಿಧಾನವಾಗಿ ಕದ್ದು ಚಲಿಸಿ, ಅನಂತರ ಮಿಂಚಿನಂತೆ ಬೇಟೆಯ ಮೇಲೆರಗಿ ಅದರ ಮೈಯನ್ನು ಸುತ್ತಿ ಬೇಟೆಯನ್ನು ಹಿಸುಕಿ ಸಾಯಿಸುತ್ತದೆ. ಹೆಬ್ಬಾವು ಮನುಷ್ಯನನ್ನು ನುಂಗಿದ ಯಾವುದೇ ಅಧಿಕೃತ ವರದಿ ಸಿಕ್ಕಿಲ್ಲ. ಇವು ನಿಶಾಚಾರಿಗಳು, ಒಳ್ಳೆಯ ಬೇಟೆಯನ್ನು ನುಂಗಿದ ಅನಂತರ ಈ ಹಾವು ಕೆಲವು ದಿನ ಅಥವಾ ವಾರಗಳ ಕಾಲ ಆಲಸಿಯಂತೆ ಕಾಲ ಕಳೆಯುತ್ತದೆ. ರಾಜ ಹೆಬ್ಬಾವು ನಿಕೋಬಾರ್ ದ್ವೀಪಗಳಲ್ಲಿ ವಾಸಿಸುತ್ತವೆ.  ಇವು ೮ ರಿಂದ ೧೦ ಮೀಟರ್ ಉದ್ದವಿರುತ್ತದೆ.

ಕಟ್ಟುಹಾವು

ಹುಲ್ಲು ಇರುವ ಜಾಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಹಾವುಗಳನ್ನು “ಹುಲ್ಲು ಹಾವು” ಎಂದು ಕರೆಯುತ್ತಾರೆ. ಭತ್ತದ ಗದ್ದೆಗಳ ಬದುಗಳಲ್ಲಿ, ಕೊಳ ಹಾಗೂ ಸರೋವರದ ದಡಗಳಲ್ಲಿ, ಹುಲ್ಲು ಬೆಳೆದಿರುವ ಜಾಗಗಳಲ್ಲಿ ಮತ್ತು ಪೊದೆಗಳಲ್ಲಿ ಇವು ವಾಸಿಸುತ್ತವೆ. ಬೆಳಗಿನ ಹೊತ್ತು ಚಟುವಟಿಕೆಯಿಂದಿರುತ್ತವೆ ಮತ್ತು ರಾತ್ರಿಯ ಹೊತ್ತು ಕಲ್ಲು ಬಂಡೆಗಳ ಸಂದುಗಳಲ್ಲಿ, ಮರದ ಪೊಟರೆಗಳಲ್ಲಿ ಮತ್ತು ಪೊದೆಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಇವು ಸುಮಾರು ೪೦ ರಿಂದ ೮೦ ಸೆಂ.ಮೀ. ಉದ್ದ ಬೆಳೆಯುತ್ತವೆ.  ಚಿಕ್ಕ ಶರೀರ, ಒರಟು ಹುರುಪೆಗಳು, ತಿಳಿ ಅಥವಾ ಕಂದು ಬಣ್ಣದ ಶರೀರ, ಬೆನ್ನಿನ ಮೇಲೆ ಎರಡು ಹಳದಿಯ ಉದ್ದನೆಯ ಪಟ್ಟೆಗಳು – ಈ ಹಾವುಗಳ ಮುಖ್ಯ ಲಕ್ಷಣಗಳು. ತಲೆಯಲ್ಲಿ ಕಂದು ಬಣ್ಣವಿದ್ದರೂ, ದವಡೆ, ಕೆನ್ನೆ ಮತ್ತು ಪಾರ್ಶ್ವಭಾಗದಲ್ಲಿ ಬಿಳಿ ಅಥವಾ ಹಳದಿ ಬಣ್ಣ. ಹೆದರಿದಾಗ ಈ ಹಾವು ಚಿಕ್ಕ ಹೆಡೆಯನ್ನು ಬಿಚ್ಚುವುದು. ಆದರೆ ಕೈಯಿಂದ ಈ ಹಾವನ್ನು ಹಿಡಿದರೂ ಕಚ್ಚುವುದು ಅಪರೂಪ.

ಇವು ನೆಲಗಪ್ಪೆ, ಸಣ್ಣ ಹಲ್ಲಿ ಮತ್ತು ಇಲಿಗಳನ್ನು ತಿನ್ನುತ್ತವೆ. ಮರಿ ಹಾವುಗಳು, ಕೀಟ, ಗೊದಮೊಟ್ಟೆ ಮತ್ತು ಸಣ್ಣ ನೆಲಗಪ್ಪೆಗಳನ್ನು ತಿನ್ನುತ್ತವೆ. ಹೆಣ್ಣು ಹಾವು ೮-೧೨ ಮೊಟ್ಟೆಗಳನ್ನಿಡುತ್ತದೆ. ಸಾಮಾನ್ಯವಾಗಿ ತೋಟಗಳಲ್ಲಿ ಕಂಡು ಬರುವ ಈ ಹಾವನ್ನು ‘ಮರಿ ನಾಗರ’ವೆಂದು ತಪ್ಪಾಗಿ ತಿಳಿದು ಸಾಯಿಸುತ್ತಾರೆ. ಆದರೆ ಇದು ಸೌಮ್ಯವಾದ ನಿರುಪದ್ರವಿ ಪ್ರಾಣಿ.

ತೋಳ ಹಾವುಗಳು

ಸುಮಾರು ೩೦ ರಿಂದ ೮೦ ಸೆಂ.ಮೀ. ಉದ್ದನೆಯ ತೆಳು ಶರೀರದ ಈ ಹಾವುಗಳು ಸಾಮಾನ್ಯವಾಗಿ ಮನೆಗಳ ಆಸುಪಾಸಿನಲ್ಲಿ ಕಂಡುಬರುತ್ತವೆ.  ಆದ್ದರಿಂದ ಇದನ್ನು ‘ಗೃಹವಾಸಿ’ ಹಾವುಗಳೆಂದು ಕರೆಯುತ್ತಾರೆ. ಕೆಲವು ಕಡೆ ಕಟುಗಲ ಹುಳು ಅಥವಾ ಕಟುಗಲ ಹಾವೆಂದು ಕರೆಯುತ್ತಾರೆ. ನುಣುಪಾದ ಹೊಳೆಯುವ ಹುರುಪೆಗಳು, ಕಂದು ಅಥವಾ ಕರಿಯ ಬಣ್ಣದ ಶರೀರದ ಮೇಲೆ ೧೦ ರಿಂದ ೨೦ ತೆಳುವಾದ ಬಿಳಿ ಅಥವಾ ಹಳದಿಯ ಅಡ್ಡ ಪಟ್ಟೆಗಳು, ಹೊರಚಾಚಿರುವ ಕಡು ಕಪ್ಪು ಬಣ್ಣದ ಕಣ್ಣುಗಳು – ಮುಖ್ಯ ಲಕ್ಷಣಗಳು. ತಲೆ ಚಪ್ಪಟೆ ಹಾಗೂ ಚೂಪಾಗಿರುತ್ತದೆ.

ಇವು ಕಲ್ಲು ಗುಡ್ಡೆ, ಗುಹೆ, ಮರದ ಪೊಟರೆ, ದಿಮ್ಮಿಗಳ ಕೆಳಗೆ ವಾಸಿಸುತ್ತವೆ. ಮಣ್ಣು ಗುಡ್ಡೆ, ಇಟ್ಟಿಗೆ ಗೂಡು, ಸಿಮೆಂಟ್ ಕಟ್ಟಡದ ಸಂದುಗಳು, ಕಟ್ಟಿಗೆ ಹೊರೆಗಳು, ಈ ಜಾತಿಯ ಹಾವುಗಳಿಗೆ ಹೇಳಿ ಮಾಡಿಸಿದಂತಹ ಜಾಗಗಳು, ಇಂತಹ ಸ್ಥಳಗಳಲ್ಲಿ ಹೆಚ್ಚಾಗಿ ಹಲ್ಲಿಗಳಿರುವುದರಿಂದ, ಹಾವುಗಳಿಗೆ ಸುಲಭವಾಗಿ ಆಹಾರ ದೊರಕುತ್ತದೆ. ಇವು ನಿಶಾಚರಿಗಳು, ಮರಗಳನ್ನು ಮತ್ತು ಒರಟಾದ ಗೋಡೆಗಳನ್ನು ಹತ್ತಬಲ್ಲವು. ಇವುಗಳ ಮುಂದವಡೆಯ ಹಲ್ಲುಗಳು ಕೋರೆ ಹಲ್ಲುಗಳಂತೆ ಉದ್ದವಾಗಿರುತ್ತವೆ. ಆದ್ದರಿಂದ ಇವನ್ನು ತೋಳದ ಹಾವುಗಳೆಂದೂ ಕರೆಯುತ್ತಾರೆ. ಇವು ಸಣ್ಣ ಹಲ್ಲಿ, ಕಪ್ಪೆ, ಹಾವುರಾಣಿಗಳನ್ನು ತಿನ್ನುತ್ತವೆ. ೫-೭ ಮೊಟ್ಟೆಗಳನ್ನಿಡುತ್ತವೆ. ಸಾಮಾನ್ಯವಾಗಿ ಇವನ್ನು ಕಡಂಬಳ ಹಾವುಗಳೆಂದು ತಪ್ಪಾಗಿ ಭಾವಿಸಿಕೊಳ್ಳುತ್ತಾರೆ. ಇವುಗಳಲ್ಲಿ ಬಿಳಿಯ ಪಟ್ಟೆಗಳು ತಲೆಯ ಹತ್ತಿರ ಚೆನ್ನಾಗಿ ಕಾಣುತ್ತದೆ.  ಬಾಲದ ಹತ್ತಿರ ಇವು ಚೆನ್ನಾಗಿ ಕಾಣುವುದಿಲ್ಲ. ಆದರೆ ಕಡಂಬಳ ಹಾವುಗಳಲ್ಲಿ ಬಿಳಿಯ ಅಡ್ಡಪಟ್ಟೆಗಳು ತಲೆಯ ಹತ್ತಿರ ಚೆನ್ನಾಗಿ ಕಾಣದೆ ಬಾಲದ ಹತ್ತಿರ ಚೆನ್ನಾಗಿ ಕಂಡುಬರುತ್ತವೆ.

ಮರದ ಹಾವುಗಳು

ಮರಗಳಲ್ಲಿ ವಾಸಿಸುವ  ಹಾವುಗಳು ತೆಳುವಾದ ಉದ್ದ ಶರೀರ ಹೊಂದಿರುತ್ತವೆ.  ಇವು ವೇಗವಾಗಿ ಚಲಿಸಬಲ್ಲವು, ಇವುಗಳ ದೃಷ್ಟಿ ತೀಕ್ಷ್ಣ. ಇವುಗಳನ್ನು ಹಸಿರು ಹಾವುಗಳು, ಬೆಕ್ಕು ಹಾವುಗಳು ಮತ್ತು ತಾಮ್ರದ ಬೆನ್ನಿನ ಹಾವುಗಳೆಂದು ವಿಂಗಡಿಸಬಹುದು.

ಗಿಳಿ ಹಸಿರು ಬಣ್ಣದ ಹಸಿರು ಹಾವುಗಳನ್ನು (ವೈನ್ ಸ್ನೇಕ್) ಎಲೆಗಳ ನಡುವೆ ಗುರುತಿಸುವುದೇ ಕಷ್ಟ. ಒಂದರಿಂದ ಎರಡು ಮೀಟರ್ ಉದ್ದದ ತೆಳುವಾದ ಶರೀರ, ಚೂಪಾದ ತ್ರಿಕೋನಾಕಾರದ ತಲೆ, ದೊಡ್ಡಕಣ್ಣುಗಳು ಮತ್ತು ಹಸಿರು ಬಣ್ಣದ ಮೈ – ಇವು ಈ ಹಾವುಗಳ ಮುಖ್ಯ ಲಕ್ಷಣಗಳು. ಹಾವಿನ ತಳಭಾಗ ತಿಳಿಯಾದ ಹಸಿರು ಅಥವಾ ಹಳದಿ ಬಣ್ಣವನ್ನು ಹೊಂದಿರುತ್ತದೆ. ಹುರುಪೆಗಳು ನುಣುಪಾಗಿರುತ್ತವೆ, ಆದರೆ ಹೊಳೆಯುವುದಿಲ್ಲ. ಇವಕ್ಕೆ ಸಿಟ್ಟು ಬಂದಾಗ ಶರೀರವನ್ನು ಊದಿಸಿಕೊಂಡು ಅಗಲವಾಗಿ ಬಾಯಿ ತೆರೆದು ಹೆದರಿಸುತ್ತವೆ. ಹಲ್ಲಿ, ಕಪ್ಪೆ ಮತ್ತು ಚಿಕ್ಕ ಪುಟ್ಟ ಪಕ್ಷಿಗಳನ್ನು ತಿನ್ನುತ್ತವೆ. ಇವುಗಳ ಹಿಂದಿನ ಹಲ್ಲುಗಳಲ್ಲಿ ವಿಷವಿದ್ದು, ಅವು ಬೇಟೆಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಇವು ಒಮ್ಮೆಗೆ ಸುಮಾರು ೮ ಮರಿ ಹಾಕುತ್ತವೆ. ಕೆಲವು ಕಡೆ ಈ ಹಾವುಗಳನ್ನು ರಾಮಬಾಣದ ಹಾವುಗಳೆಂದು ಕರೆಯುತ್ತಾರೆ. ಇವು ಅತ್ಯಂತ ವಿಷಕಾರಿಯೆಂದು, ಕಚ್ಚಿದರೆ ಸಾವು ಬರುತ್ತದೆಂದು ತಪ್ಪು ನಂಬಿಕೆಯಿರುವುದರಿಂದ ಸಾಮಾನ್ಯವಾಗಿ ಕಂಡ ತಕ್ಷಣ ಇವನ್ನು ಕೊಲ್ಲುತ್ತಾರೆ. ಇನ್ನೂ ಕೆಲವು ಕಡೆ ಇವು ಕಣ್ಣಿಗೆ ಚುಚ್ಚಿ ಕುರುಡರನ್ನಾಗಿ ಮಾಡುತ್ತವೆಂದು ನಂಬುತ್ತಾರೆ.

ಬೆಕ್ಕು ಹಾವುಗಳು (ಕ್ಯಾಟ್ ಸ್ನೇಕ್) ತುಂಬ ತೆಳುವಾದ ಶರೀರ ಹೊಂದಿವೆ.  ಸುಮಾರು ೬೫ ಸೆಂ.ಮೀ.ನಿಂದ ೧.೨೫ ಮೀ. ಉದ್ದದ ಶರೀರ, ಸಣ್ಣ ಕುತ್ತಿಗೆ, ಚಪ್ಪಟೆಯ ತಲೆ, ದೊಡ್ಡ ಕಣ್ಣುಗಳು ಮತ್ತು ಚೂಪಾದ ಉದ್ದ ಬಾಲ – ಇವುಗಳ ಮುಖ್ಯ ಲಕ್ಷಣಗಳು. ಕಂದು ಬಣ್ಣದ ಶರೀರದಲ್ಲಿ ಬಿಳಿಯ ಗೀಟುಗಳಿರುತ್ತವೆ. ತಲೆಯ ಮೇಲೆ ‘Y’ ಆಕಾರದ ಗುರುತಿರುತ್ತದೆ. ಇವುಗಳಲ್ಲಿ ಹನ್ನೊಂದು ಪ್ರಭೇದಗಳಿವೆ. ನೋಡಲು ಒಮ್ಮೊಮ್ಮೆ ವಿಷದ ಕಲ್ಲು ಹಾವು (Indian Little Viper) ಗಳಂತೆ ಕಾಣುತ್ತವೆ. ಇವು ತೆಂಗಿನ ಗರಿಗಳಿಗೆ ಸುತ್ತಿಕೊಂಡಿರುತ್ತವೆ. ತೆಂಗಿನ ಗರಿಗಳ ಗುಡಿಸಲುಗಳಲ್ಲೂ ಕಂಡು ಬರುತ್ತವೆ. ಇವು ನಿಶಾಚರಿಗಳು.

ಮರದ ಹಾವುಗಳಲ್ಲಿ ಹಾರುವ ಹಾವು ಬಹಳ ಪ್ರಸಿದ್ಧ (Chrysopelea omata). ಇದು ಸುಮಾರು ೩೦ ಮೀಟರ್ ಎತ್ತರದಿಂದ ಜಿಗಿದು ಗಾಳಿಯಲ್ಲಿ ತನ್ನ ಶರೀರವನ್ನು ಅಗಲ ಮಾಡಿಕೊಂಡು ನಿಧಾನವಾಗಿ ನೆಲದ ಮೇಲಿಳಿಯುತ್ತದೆ.  ಇದರ ಶರೀರಕ್ಕೆ ಕಪ್ಪು ಮಿಶ್ರಿತ ಹಳದಿ ಬಣ್ಣವಿದೆ. ಬಿಳಿ ಮತ್ತು ಕೆಂಪು ಚುಕ್ಕೆಗಳು ಅದರ ಮೇಲೆ ಕಂಡು ಬರುತ್ತವೆ.  ಒಮ್ಮೆಗೆ ಇದು ೬ ರಿಂದ ೧೨ ಮೊಟ್ಟೆಗಳನ್ನಿಡುತ್ತದೆ.

ತಾಮ್ರದ ಬೆನ್ನಿನ ಹಾವುಗಳು (Dendrelaphis tristis) ಗುಡಿಸಲುಗಳ ತೆಂಗಿನ ಗರಿ ಕೆಳಗೆ ಮತ್ತು ತೋಟಗಳಲ್ಲಿ ಕಂಡು ಬರುತ್ತವೆ.  ಒಂದರಿಂದ ೧.೫ ಮೀಟರ್ ಉದ್ದದ ತೆಳುವಾದ ಶರೀರ, ನುಣುಪಾದ ಹುರುಪೆಗಳು, ಮೈಮೇಲೆ ಕಂದು ಅಥವಾ ತಾಮ್ರವರ್ಣದ ಉದ್ದನೆಯ ಪಟ್ಟಿ – ಇವು ಈ ಹಾವುಗಳ ಮುಖ್ಯ ಲಕ್ಷಣಗಳು. ಇವುಗಳಲ್ಲಿ ೮ ಪ್ರಭೇದಗಳಿವೆ. ಜಾಲಿ ಮರ, ಈಚಲು ಮರ, ತಾಟೆನಿಂಗು ಮರಗಳಲ್ಲಿ ವಿಶೇಷವಾಗಿ ಕಂಡು ಬರುತ್ತವೆ.  ಮರಗಳಲ್ಲಿ ಕಂಡು ಬರುವ ಹಲ್ಲಿ ಮತ್ತು ಕಪ್ಪೆಗಳನ್ನು ಇವು ತಿನ್ನುತ್ತವೆ. ಹೆಣ್ಣು ಹಾವು ೬ ಉದ್ದನೆಯ ಮತ್ತು ತೆಳುವಾದ ಮೊಟ್ಟೆಗಳನ್ನಿಡುತ್ತದೆ.

ನೀರು ಹಾವುಗಳು

ಇವು ಸಿಹಿ ನೀರಿನಲ್ಲಿ ಜೀವಿಸುವ ಹಾವುಗಳು. ಇವುಗಳ ಶರೀರ ತುಂಬ ತೆಳುವೂ ಅಲ್ಲ, ದಪ್ಪವೂ ಅಲ್ಲ. ನೀರಿನಲ್ಲಿ ಸುಲಭವಾಗಿ ಈಜಬಲ್ಲ ಇವು ನೆಲದ ಮೇಲೆ ತೆವಳಲು ಕಷ್ಟ ಪಡುತ್ತವೆ. ಇವುಗಳ ಎಲ್ಲಾ ಹುರುಪೆಗಳು ಸ್ವಲ್ಪವಾದರೂ ಮಡಚಿಕೊಂಡಿರುತ್ತವೆ. ಆದ್ದರಿಂದ ನೀರು ಹಾವುಗಳನ್ನು ಬೆನ್ನು ಮಡಿಕೆ ಹಾವುಗಳೆಂದು ಕರೆಯುತ್ತಾರೆ. ಭಾರತದಲ್ಲಿನ ಯಾವುದೇ ನೀರು ಹಾವು ವಿಷದ ಹಾವಲ್ಲ. ಇವಕ್ಕೆ ಚೂಪಾದ ಹಲ್ಲುಗಳಿವೆ. ಆದ್ದರಿಂದ ಇವು ಕಚ್ಚಿದಾಗ ಗಾಯಗಳಾಗಬಹುದು. ಹೆಚ್ಚು ಕಂಡು ಬರುವ ನೀರು ಹಾವುಗಳೆಂದರೆ ಚುಕ್ಕೆಗಳ ನೀರು ಹಾವು, ಹಸಿರು ನೀರುಹಾವು ಮತ್ತು ನಾಯಿ ಮುಖದ ನೀರುಹಾವು.

ಚುಕ್ಕೆಗಳ ಬೆನ್ನು ಮಡಿಕೆ ಹಾವಿನ ಕಪ್ಪು ಅಥವಾ ಹಳದಿ ಬಣ್ಣದ ಶರೀರದ ಮೇಲೆ ಬಿಳಿ ಮತ್ತು ಕಪ್ಪು ಚುಕ್ಕೆಗಳಿವೆ. ಕಣ್ಣಿನ ಮೇಲೆ ಕಪ್ಪುಗೆರೆ ಹಾಗೂ ನೀಳವಾದ ತಲೆಯಿರುತ್ತದೆ. ಹಾವಿನ ತಳಭಾಗ ಬೆಳ್ಳಗೆ ಹೊಳೆಯುತ್ತಿರುತ್ತದೆ. ಸುಮಾರು ೬೦ ಸೆಂ.ಮೀ. ನಿಂದ ೧.೭೫ ಮೀಟರ್‌ವರೆಗೂ ಉದ್ದ ಬೆಳೆಯುತ್ತದೆ. ಸಾಮಾನ್ಯವಾಗಿ ಸಿಹಿನೀರು ಇರುವ ಎಲ್ಲ ಸ್ಥಳಗಳಲ್ಲಿಯೂ ಕಂಡು ಬರುತ್ತದೆ. ಹಗಲು ಮತ್ತು ರಾತ್ರಿಯ ವೇಳೆ ಸರೋವರ, ನದಿ ಮತ್ತು ಭತ್ತದ ಗದ್ದೆಗಳ ದಡದಲ್ಲಿ ಬೇಟೆಯಾಡುತ್ತಾ ಕಾಲ ಕಳೆಯುತ್ತದೆ. ಹೆದರಿಸಿದಾಗ ತಲೆಯನ್ನು ಚಪ್ಪಟೆ ಮಾಡಿ ನಾಗರಹಾವಿನಂತೆ ತಲೆ ಎತ್ತುತ್ತದೆ.  ವಿಷವಲ್ಲದ ಪ್ರಾಣಿಯಾದರೂ ಹಿಡಿದಾಗ ರೋಷದಿಂದ ಕಚ್ಚುತ್ತದೆ.  ಹೆಣ್ಣು ಹಾವು ನೀರಿನ ದಡದ ಬಿಲಗಳಲ್ಲಿ ೨೦-೪೦ ಮೊಟ್ಟೆಗಳನ್ನಿಟ್ಟು ಮೊಟ್ಟೆಯೊಡೆದು ಮರಿಗಳು ಹೊರಬರುವವರೆಗೂ ರಕ್ಷಣೆ ನೀಡುತ್ತದೆ.

ಅವಿಲ್ ಹಸಿರು ನೀರು ಹಾವು (Astretium schistosum) ೪೫ ಸೆಂ.ಮೀ.ನಿಂದ ಒಂದು ಮೀಟರ್ ಉದ್ದದ ಶರೀರ ಪಡೆದಿದೆ. ಮಬ್ಬು ಹಳದಿ ಛಾಯೆಯ ಕಡು ಹಸಿರು ಬಣ್ಣದ ಶರೀರ, ಚಿಕ್ಕದಾದ ತಲೆ ಮತ್ತು ತಳಭಾಗದಲ್ಲಿ ಹಳದಿ ಬಣ್ಣ – ಇವು ಈ ಹಾವಿನ ಮುಖ್ಯ ಲಕ್ಷಣಗಳು. ಕೆರೆ ಮತ್ತು ಹೊಂಡಗಳಲ್ಲಿ ವಿಶೇಷವಾಗಿ ಕಂಡು ಬರುವ ಈ ಹಾವುಗಳು ಏಡಿಗಳ ಬಿಲಗಳಲ್ಲಿ ವಾಸಿಸುತ್ತವೆ. ಇವನ್ನು ಕೈಯಿಂದ ಹಿಡಿದಾಗ ಸಾಮಾನ್ಯವಾಗಿ ಕಚ್ಚುವುದಿಲ್ಲ. ನೀರಿನಲ್ಲಿ ಸೊಳ್ಳೆಮರಿ ಮತ್ತು ಗೊದಮೊಟ್ಟೆಗಳನ್ನು ಇವು ತಿನ್ನುತ್ತವೆ. ಸೊಳ್ಳೆ ನಿಯಂತ್ರಣದಲ್ಲಿ ಇವು ಸಹಾಯಕ.

ನಾಯಿ ಮುಖದ ಹಾವು (Cerberusrhynchops) ಉಪ್ಪು ತಯಾರಿಸುವ ತೊಟ್ಟಿಗಳಲ್ಲಿ, ಒಳನುಗ್ಗಿದ ಕಡಲ ನೀರಿನ ಹೊಂಡಗಳಲ್ಲಿ ಮತ್ತು  ನದಿನೀರು ಸಮುದ್ರಕ್ಕೆ ಸೇರುವ ಜಾಗಗಳಲ್ಲಿ ಕಂಡು ಬರುತ್ತವೆ.  ಸುಮಾರು ೭೫ ರಿಂದ ೧೧೦ ಸೆಂ.ಮೀ. ಉದ್ದದ ಶರೀರ, ಕಣ್ಣಿನ ಹಿಂಭಾಗದಲ್ಲಿ ಎರಡು ಕಪ್ಪು ಪಟ್ಟೆಗಳು. ಉದ್ದನೆಯ ಮುಸುಡಿಯ ತಲೆ, ಮೈಮೇಲೆ ಕಪ್ಪು ಬಣ್ಣದ ಚುಕ್ಕೆಗಳು ಮತ್ತು ಪಟ್ಟೆಗಳು – ಇವು ಈ ಹಾವಿನ ಮುಖ್ಯ ಲಕ್ಷಣಗಳು.

ಎಲ್ಲಾ ನೀರು ಹಾವು ಅಥವಾ ಒಳ್ಳೆ ಹಾವುಗಳು ವಿಶೇಷವಾಗಿ ಮಳೆಗಾಲದಲ್ಲಿ ಕಂಡುಬರುತ್ತವೆ. ಒಮ್ಮೊಮ್ಮೆ ರಸ್ತೆಗಳಲ್ಲಿಯೂ ಕಂಡು ಬರುತ್ತವೆ. ಚರ್ಮಕ್ಕಾಗಿ ಈ ಹಾವುಗಳನ್ನು ಲಕ್ಷಗಟ್ಟಲೆ ಕೊಲ್ಲುತ್ತಾರೆ. ಆದ್ದರಿಂದ ಇವುಗಳ ಜೀವನ ಅಪಾಯದ ಅಂಚಿನಲ್ಲಿದೆ. ಈ ಹಾವುಗಳು ಕಚ್ಚಿದಲ್ಲಿ ಮೂರು ಬೊಗಸೆ ವಂಡು ನೀರನ್ನು ಕುಡಿಯಬೇಕೆಂಬ ನಂಬಿಕೆ ಕೆಲವರಲ್ಲಿದೆ.  ಇವು ವಿಷವಲ್ಲದ ಹಾವುಗಳಾಗಿದ್ದು ಜನರ ಭಯ ನಿವಾರಿಸಲು ಈ ನಂಬಿಕೆ ಬಂದಿರಬಹುದು.