ಏನೇ ಕಚ್ಚಲಿ ಯಾವ ಹಾವೇ ಕಚ್ಚಲಿ, ವಿಷದ ಹಾವೇ ಕಚ್ಚಿತೆಂಬ ಭಯ ಬೇರೂರಿ ಆತಂಕಕ್ಕೆ ಮತ್ತು ಜೀವ ಭಯಕ್ಕೆ ಕಾರಣವಾಗುತ್ತದೆ. ಅನೇಕ ಸಲ ಇಲಿ ಕಚ್ಚಿದಾಗಲೂ, ವಿಷದ ಹಾವೇ ಕಚ್ಚಿತೆಂದು ಭ್ರಮಿಸಿ, ಪ್ರಾಣಭಯದಿಂದ ಜ್ಞಾನತಪ್ಪಿದವರಿದ್ದಾರೆ ! ಹೃದಯಾಘಾತದಿಂದ ಸತ್ತವರು ಇದ್ದಾರೆ !

ಏನೇ ಕಚ್ಚಲಿ, ನಾವು ಧೈರ್ಯದಿಂದ ಸಮಸ್ಯೆಯನ್ನು ಎದುರಿಸಬೇಕು. ಏನಾದರೂ ಕಡಿದರೆ ಅದು ಹಾವೇ ಅಥವಾ ಬೇರೆ ಪ್ರಾಣಿಯೇ ಎಂಬುದನ್ನು ಮೊದಲು ತಿಳಿಯಬೇಕು. ಒಂದು ವೇಳೆ ಹಾವು ಕಚ್ಚಿದರೆ ಅದು ವಿಷದ ಹಾವೇ? ಅಲ್ಲವೇ? ಎಂಬುದನ್ನು ನಾವು ಸುಲಭವಾಗಿ ತಿಳಿಯಬಹುದು. ವಿಷದ ಹಾವು ಕಚ್ಚಿದರೆ ಚಿತ್ರದಲ್ಲಿ ತೋರಿಸಿರುವಂತೆ ಸಣ್ಣ ಹಲ್ಲುಗಳ ಗುರುತುಗಳ ಜೊತೆಗೆ ಎರಡು ದೊಡ್ಡ ವಿಷದಂತಗಳ ಗುರುತು ಕಾಣುತ್ತಿರುತ್ತz. ವಿಷವಲ್ಲದ ಹಾವು ಕಚ್ಚಿದರೆ ಚಿತ್ರದಲ್ಲಿ ಕಾಣುವಂತೆ ಒಂದೇ ಗಾತ್ರದ ಸಣ್ಣ ಹಲ್ಲುಗಳ ಗುರುತು ಕಾಣುತ್ತದೆ.

ವಿಷವಲ್ಲದ ಹಾವಿನ ಕಡಿತ ಕೇವಲ ಒಂದು ಸರಳ ಗಾಯದ ಪರಿಣಾಮಕ್ಕಿಂತ ಹೆಚ್ಚೇನು ಮಾಡುವುದಿಲ್ಲ. ಆದರೆ ವಿಷದ ಹಾವಿನ ಕಡಿತ ಕೆಲವೇ ನಿಮಿಷಗಳಲ್ಲಿ ತನ್ನ ಪರಿಣಾಮ ಬೀರುತ್ತದೆ. ಕಚ್ಚಿಸಿಕೊಂಡ ವ್ಯಕ್ತಿಯಲ್ಲಿ ಕಾಣಬರುವ ಲಕ್ಷಣಗಳಿಂದ ಯಾವ ವಿಷದ ಹಾವು ಕಚ್ಚಿದೆಯೆಂಬುದನ್ನು ತಿಳಿಯಬಹುದು.

ನಾಗರಹಾವಿನ ವಿಷ ನರಮಂಡಲದ ಮೇಲೆ ಪ್ರಭಾವ ಬಿರುತ್ತವೆ. ಇದು ಚಾಲಕ ನರಕೇಂದ್ರಗಳನ್ನು ಸ್ಥಗಿತಗೊಳಿಸಿ ಹೃದಯ ಬಡಿತ ಮತ್ತು ಉಸಿರಾಟ ನಿಲ್ಲುವಂತೆ ಮಾಡುತ್ತದೆ. ನಾಗರಹಾವು ಕಚ್ಚಿದ ವ್ಯಕ್ತಿಯಲ್ಲಿ ಕಾಣುವ ಕೆಲವು ಮುಖ್ಯ ಲಕ್ಷಣಗಳು ಹೀಗಿರುತ್ತವೆ :

ಕಚ್ಚಿದ ಜಾಗದಲ್ಲಿ ನೋವು, ಊತ, ದೃಷ್ಟಿ ಮಸುಕಾಗಿ ಕಣ್ಣುಗಳ ರೆಪ್ಪೆ ಮತ್ತು ಕಾಲುಗಳ ಸ್ವಾಧೀನ ತಪ್ಪುವುದು, ಮೈಬೆವರುವುದು, ನಾಲಗೆ ದಪ್ಪವಾದಂತೆ ಭಾಸವಾಗುವುದು. ಮಾತಿನಲ್ಲಿ ತೊದಲುವುದು, ಮೈಜಡವಾಗುವುದು, ಉಸಿರಾಟ ಕಷ್ಟವಾಗುವುದು ಮತ್ತು ಜ್ಞಾನ ತಪ್ಪುವುದು.

ಕಡಂಬಳ ಹಾವಿನ ವಿಷವೂ ಸಹ ನರಮಂಡಲದ ಮೇಲೆ ಪ್ರಭಾವ ಬೀರುತ್ತದೆ. ಈ ಹಾವಿನ ವಿಷದಂತಗಳು ಚಿಕ್ಕದಾಗಿರುತ್ತದೆ. ಆದರೆ ಇದರ ವಿಷ ನಾಗರಹಾವಿನ ವಿಷಕ್ಕಿಂತ ಮೂರು ಪಟ್ಟು ಹೆಚ್ಚು ವಿಷಕಾರಿ. ಈ ಹಾವು ಕಚ್ಚಿದಾಗ ಉಂಟಾಗುವ ಲಕ್ಷಣಗಳು ನಾಗರಹಾವಿನ ವಿಷದ ಪರಿಣಾಮದ ರೀತಿಯೇ ಇರುತ್ತದೆ. ಅದರ ಜೊತೆಗೆ ಈ ಕೆಳಗಿನ ಲಕ್ಷಣಗಳೂ ಕಂಡು ಬರುತ್ತವೆ.

ಸಾಮಾನ್ಯವಾಗಿ ಕಚ್ಚಿದ ಜಾಗದಲ್ಲಿ ನೋವಾಗಲೀ ಊತವಾಗಲೀ ಕಾಣುವುದಿಲ್ಲ. ಕಡಿತದ ಲಕ್ಷಣಗಳು ಕೆಲವು ಗಂಟೆಗಳಾದರೂ ಕಾಣದೆ ಇರಬಹುದು ಮತ್ತೆ ಇದ್ದಕ್ಕಿದ್ದ ಹಾಗೆ ಅತಿ ಶೀಘ್ರವಾಗಿ ಎಲ್ಲ ಲಕ್ಷಣಗಳೂ ಕಾಣಬಹುದು ಮತ್ತು ಅತಿಯಾದ ಹೊಟ್ಟೆನೋವು ಮತ್ತು ಕೀಲುಗಳ ನೋವು ಕಾಣಬಹುದು. ಕಡಂಬಳ ನಿಶಾಚರಿಯಾದುದರಿಂದ ರಾತ್ರಿಕಾಲದಲ್ಲೇ ಹೆಚ್ಚು ಕಡಿಯುವುದು.

ಉರಿಮಂಡಲದ ಹಾವಿನ ವಿಷ, ರಕ್ತದ ಮೆಲೆ ಪರಿಣಾಮ ಬೀರುತ್ತದೆ. ಮತ್ತು ಊತಕಗಳನ್ನು ನಾಶಪಡಿಸುತ್ತದೆ. ಈ ಹಾವಿನ ವಿಷದಂತಗಳು ಒಂದು ಸೆಂ.ಮೀ.ಗಿಂತ ಉದ್ದವಿದ್ದು ಬಾಗಿರುತ್ತದೆ. ಇದರ ವಿಷ, ನಾಗರಹಾವಿನ ವಿಷಕ್ಕಿಂತ ಮೂರನೇ ಒಂದು ಭಾಗದಷ್ಟು ಮಾತ್ರ ವಿಷಕಾರಿ. ಆದರೆ ವಿಷಗ್ರಂಥಿಗಳು ಮತ್ತು ವಿಷದಂತಗಳು ಗಾತ್ರದಲ್ಲಿ ತುಂಬ ದೊಡ್ಡವು. ಈ ಹಾವು ಕಚ್ಚಿದವರಲ್ಲಿ ಕಂಡು ಬರುವ ಲಕ್ಷಣಗಳು ಹೀಗಿರುತ್ತವೆ :

ಕಚ್ಚಿದ ಜಾಗದಲ್ಲಿ ತಕ್ಷಣ ಒಂದೇ ಸಮನೆ ಉರಿ, ಹೊಡೆತ ಪ್ರಾರಂಭವಾಗುವುದು. ಒಂದೆರಡು ಗಂಟೆಗಳಲ್ಲಿ ಅತಿಯಾದ ಊತ ಬರಬಹುದು. ಕಚ್ಚಿದ ಜಾಗದ ಸುತ್ತ ಬಣ್ಣ ಬದಲಾಗುವುದು. ನಿಶ್ಯಕ್ತಿ, ಓಕರಿಕೆ, ಹೊಟ್ಟೆತೊಳೆಸುವುದು, ವಾಂತಿ, ಉಗುಳು ಮತ್ತು ಮಲ ಮೂತ್ರಗಳಲ್ಲಿ ರಕ್ತಬರುವುದು, ಉಸಿರಾಟ ಮತ್ತು ದೃಷ್ಟಿ ಏರುಪೇರಾಗುವುದು.

ಕಲ್ಲು ಹಾವು ಅಥವಾ ಭಾರತದ ಪುಟ್ಟ ಮಂಡಲದ ಹಾವಿನ ವಿಷಕ್ಕೆ ರಕ್ತವನ್ನು ನೀರಾಗಿಸುವ ಗುಣವಿದೆ. ಇದರ ವಿಷ ಉರಿಮಂಡಲದ ಹಾವಿನ ವಿಷಕ್ಕಿಂತ ಹೆಚ್ಚು ಪ್ರಭಾವಶಾಲಿ. ಆದರೆ ಇದು ಕೇವಲ ಪುಟ್ಟ ಹಾವಾದುದರಿಂದ, ಇದಕ್ಕೆ ಹೆಚ್ಚು ವಿಷವಿಲ್ಲ. ಈ ಹಾವು ಕಚ್ಚಿದ ವ್ಯಕ್ತಿಯಲ್ಲಿ ಕಂಡುಬರುವ ಮುಖ್ಯ ಲಕ್ಷಣಗಳು ಹೀಗಿರುತ್ತವೆ :

ಕಚ್ಚಿದ ಜಾಗದಲ್ಲಿ ಉರಿ, ಹೊಡೆತ, ಅನಂತರ ಕೈ-ಕಾಲುಗಳ ಕೀಲುಗಳಲ್ಲಿ ನೋವು, ಎರಡು ಗಂಟೆಗಳೊಳಗಾಗಿ ಊತ, ವಸಡುಗಳಲ್ಲಿ ರಕ್ತ ಬರುವುದು, ಮೂತ್ರದಲ್ಲಿ ರಕ್ತ ಬರುವುದು, ನಿಶ್ಯಕ್ತಿ, ರಕ್ತ ಅಂತಸ್ರಾವ ಮತ್ತು ಹೃದಯ ಸ್ಥಂಭನದ ಸಾಧ್ಯತೆ.

ವಿಷದ ಹಾವು ಕಚ್ಚಿದ ಎಲ್ಲ ವ್ಯಕ್ತಿಗಳೂ ವಿಷವೇರಿ ಸಾಯುವುದಿಲ್ಲ. ವಿಷದ ಪ್ರಮಾಣ ಆ ವ್ಯಕ್ತಿಗೆ ಎಷ್ಟು ಸೇರಿದೆಯೆಂಬುದು ಸಾವನ್ನು ನಿರ್ಧರಿಸುತ್ತದೆ. ಒಬ್ಬ ವ್ಯಕ್ತಿಯ ಸಾವಿಗೆ ನಾಗರಹಾವಿನ ೧೨ ಮಿ.ಗ್ರಾಂ. ಕಡಂಬಳದ ೬ ಮಿ.ಗ್ರಾಂ., ಉರಿಮಂಡಲದ ೧೫ ಮಿ.ಗ್ರಾಂ. ಮತ್ತು ಭಾರತದ ಪುಟ್ಟ ಮಂಡಲದ ೮ ಮಿ.ಗ್ರಾಂ. ವಿಷ ಅವಶ್ಯವಾಗಿ ವ್ಯಕ್ತಿಯ ಶರೀರವನ್ನು ಸೇರಿರಬೇಕು. ಹಾವು ಕಚ್ಚಿದಾಗ ಅನೇಕ ಸಂದರ್ಭಗಳಲ್ಲಿ ಇಷ್ಟು ವಿಷ ಕಚ್ಚಿದ ವ್ಯಕ್ತಿಯ ಶರೀರಕ್ಕೆ ಹೋಗಿರುವುದಿಲ್ಲ. ಆದ್ದರಿಂದಲೇ ಸಾವುಗಳು ಕಡಿಮೆ. ಪ್ರತಿಯೊಬ್ಬ ವ್ಯಕ್ತಿಯ ಶರೀರದಲ್ಲಿಯೂ ಸಾಮಾನ್ಯ ನಿರೋಧಕ ಶಕ್ತಿಯಿದ್ದು, ಅದು ಅಲ್ಪ ಪ್ರಮಾಣದ ವಿಷದ ಪ್ರಭಾವವನ್ನು ತಡೆಯುತ್ತದೆ. ಮತ್ತು ಅಂತಹ ಸಂದರ್ಭಗಳಲ್ಲಿ ಮನುಷ್ಯ ಚಿಕಿತ್ಸೆಯಿಲ್ಲದೇ ಬದುಕಬಹುದು. ಹೆಚ್ಚು ವಿಷ ಸೇರಿದ್ದರೆ, ಆ ವ್ಯಕ್ತಿಗೆ ಪ್ರತಿವಿಷ ಚಿಕಿತ್ಸೆ ನೀಡದಿದ್ದರೆ ಸಾವುಂಟಾಗುತ್ತದೆ.

ಪ್ರಥಮ ಚಿಕಿತ್ಸೆ

ಒಬ್ಬ ವ್ಯಕ್ತಿಗೆ ವಿಷದ ಹಾವು ಕಚ್ಚಿದೆ ಎಂದು ತಿಳಿದ ತಕ್ಷಣ ನಾವು ಮಾಡಬೇಕಾದ ಪ್ರಥಮ ಚಿಕಿತ್ಸೆಯೆಂದರೆ :

ಹಾವು ಕಚ್ಚಿದ ಮೇಲ್ಭಾಗವನ್ನು ಬಟ್ಟೆಯ ಹಗ್ಗ ಅಥವಾ ಬೇರಾವುದಾದರೂ ವಸ್ತುವಿನಿಂದ ಭದ್ರವಾಗಿ ಬಿಗಿದು ಕಟ್ಟಿ, ರಕ್ತ ಪರಿಚಲನೆ ನಿಲ್ಲುವಂತೆ ಮಾಡಬೇಕು. ಹಾವು ಕಾಲಿಗೆ ಕಚ್ಚಿದ್ದರೆ ತೊಡೆಯ ಭಾಗದಲ್ಲಿ, ಕೈಗೆ ಕಚ್ಚಿದ್ದರೆ ತೋಳಿನ ಭಾಗದಲ್ಲಿ ಕಟ್ಟಬೇಕು. ಹಾವು ಕಚ್ಚಿದವರೆಲ್ಲಾ ಸಾಯುವುದಿಲ್ಲವೆಂದು ವ್ಯಕ್ತಿಯ ಭಯ ನಿವಾರಿಸಬೇಕು. ಹಾವು ಕಚ್ಚಿರುವ ಅಂಗವನ್ನು ಚಲಿಸುವುದಕ್ಕೆ ಬಿಡಬಾರದು. ಆ ವ್ಯಕ್ತಿಯು ಹೆದರಿ ಓಡಾಡುವುದಕ್ಕೆ ಬಿಡಬಾರದು. ಆತ ವಿಶ್ರಾಂತಿ ಪಡೆಯುವಂತೆ ಮಾಡಬೇಕು. ನಂತರ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಪ್ರತಿವಿಷ ಚಿಕಿತ್ಸೆ ಕೊಡಿಸಬೇಕು.

ಪ್ರತಿವಿಷ

ಹಾವಿನ ವಿಷಕ್ಕೆ ಸರಿಯಾದ ಔಷಧವೆಂದರೆ ಪ್ರತಿವಿಷ. ಇದನ್ನು ಮುಂಬಯಿಯ ಹಾಫ್‌ಕಿನ್ ಸಂಸ್ಥೆಯಲ್ಲಿ ತಯಾರಿಸುತ್ತಾರೆ. ನಾಗರ, ಉರಿಮಂಡಲ, ಕಡಂಬಳ ಮತ್ತು ಭಾರತದ ಪುಟ್ಟ ಮಂಡಲದ ಹಾವುಗಳ ವಿಷವನ್ನು ಅಲ್ಪ ಪ್ರಮಾಣದಲ್ಲಿ ಕುದುರೆಗಳಿಗೆ ಚುಚ್ಚುತ್ತಾರೆ. ಆಗ ಕುದುರೆಯ ರಕ್ತದಲ್ಲಿ ವಿಷ ನಿರೋಧಕ ಶಕ್ತಿ ವೃದ್ಧಿಯಾಗಿ ವಿಷವನ್ನು ನಾಶಪಡಿಸುತ್ತದೆ.  ಅನಂತರ ದಿನಗಳು ಕಳೆದಂತೆ ಕುದುರೆಗಳಿಗೆ ಚುಚ್ಚುವ ವಿಷದ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಹಾಗೆಯೇ ಕುದುರೆಗಳೂ ಹೆಚ್ಚು ಹೆಚ್ಚು ವಿಷ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಸಂಪೂರ್ಣ ವಿಷ ನಿರೋಧಕ ಶಕ್ತಿ ಬೆಳೆಸಿಕೊಂಡ ಕುದುರೆಗಳಿಂದ ರಕ್ತವನ್ನು ಶೇಖರಿಸಿ, ಅದರಲ್ಲಿರುವ ವಿಷ ನಿರೋಧಕ ಶಕ್ತಿ ಪಡೆದು ಲಸಿಕೆಯನ್ನು ಬೇರ್ಪಡಿಸಿ ಪುಡಿರೂಪದಲ್ಲಿ ಸಂಗ್ರಹಿಸುತ್ತಾರೆ. ಇದನ್ನು ಭಟ್ಟಿ ಇಳಿಸಿದ ನೀರಿನ ಜೊತೆ ಬೆರೆಸಿ ಚುಚ್ಚಿದಾಗ ಮನುಷ್ಯನ ಶರೀರದಲ್ಲಿ ಸೇರಿದ ವಿಷ ನಾಶವಾಗಿ ಹಾವು ಕಚ್ಚಲ್ಪಟ್ಟ ವ್ಯಕ್ತಿ ಗುಣಮುಖನಾಗುತ್ತಾನೆ.

ಹಾವಿನ ವಿಷವನ್ನು ಮಣಿ ಕಲ್ಲಿನಿಂದ ತೆಗೆಯಬಹುದೆಂದು ಹೇಳುತ್ತಾ, ಅವುಗಳ ಮಾರಾಟದಿಂದಲೇ ಜೀವನ ಸಾಗಿಸುವ ಅನೇಕ ಹಾವಾಡಿಗರಿದ್ದಾರೆ. ಮಂತ್ರದಿಂದ, ಬೇರು ಔಷಧಿಯಿಂದ ವಾಸಿ ಮಾಡುತ್ತೇವೆಂಬ ಜನರೂ ಇದ್ದಾರೆ.  ಹಾವು ಕಚ್ಚಿಸಿಕೊಂಡ ವ್ಯಕ್ತಿಯನ್ನು ಹನುಮಂತರಾಯನ ದೇವಸ್ಥಾನದಲ್ಲಿ ಮಲಗಿಸಿದರೆ ವಾಸಿಯಾಗುವುದೆಂಬ ಮೂಢನಂಬಿಕೆ ಕೆಲವು ಹಳ್ಳಿಗಳಲ್ಲಿದೆ. ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಯಾವ ಹಾವಾಡಿಗನಾಗಲೀ ಮಂತ್ರವಾದಿಯಾಗಲೀ ಹಾವಿನ ವಿಷದಿಂದ ಸಾಯುವ ಪ್ರಾಣಿಯನ್ನು ಬದುಕಿಸಲು ಸಾಧ್ಯವಾಗಿಲ್ಲ. ವಿಷದ ಹಾವು ಕಚ್ಚಿದ ವ್ಯಕ್ತಿಯನ್ನು ಬೇಗನೆ ಆಸ್ಪತ್ರೆಗೆ ಸೇರಿಸಿ ಪ್ರತಿವಿಷ ಚಿಕಿತ್ಸೆ ಕೊಡಿಸುವುದೇ ಸರಿಯಾದ ಮಾರ್ಗ