ಒಂದು ಗಾದೆ ಮಾತಿದೆ “ತಲೆ ಇರುವವರಿಗೆಲ್ಲ ನೋವು ಇದ್ದದ್ದೇ” ಎಂದು. ತಲೆ ನೋವು ಅನುಭವಿಸದೇ ಇರುವ ವ್ಯಕ್ತಿ ಸಿಗುವುದು ಬಹಳ ಅಪರೂಪ. ಶೇಕಡ 90ರಷ್ಟು ತಲೆನೋವು, ಮಾಂಸಖಂಡದ ಬಿಗಿತ ಅಥವಾ ಒತ್ತಡದಿಂದ ಬರುವಂತಹದು. ನೋವು ತಲೆಯ ಸಂಪೂರ್ಣ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ನೆತ್ತಿ, ಹುಬ್ಬುಗಳ ಮಧ್ಯೆ, ಹಣೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವರು ಬಹುಬೇಗ ತಲೆನೋವಿಗೆ ಒಳಗಾಗುತ್ತಾರೆ. ತಲೆನೋವು ಕೆಲವರಲ್ಲಿ ಯಾವಾಗಲಾದರೊಮ್ಮೆ ಕಾಣಿಸಿಕೊಳ್ಳಬಹುದು ಮತ್ತೆ ಕೆಲವರಲ್ಲಿ ಪದೇ ಪದೇ ಕಂಡುಬರಬಹುದು. ತಲೆಯ ಆರ್ಧ ಭಾಗದಲ್ಲಿ ಮಾತ್ರ ನೋವು ಕಾಣಿಸಿಕೊಂಡಲ್ಲಿ ಅರೆತಲೆನೋವು ಅಥವಾ ಮೈಗ್ರೇನ್ ಎನ್ನುತ್ತೇವೆ. ಮೈಗ್ರೇನ್ ಅನುವಂಶೀಯವಾಗಿಯೂ ಕಾಣಿಸಿಕೊಳ್ಳುತ್ತದೆ. ಒಂದು ವಿಶೇಷ ಸಂಗತಿಯೆಂದರೆ ಮೈಗ್ರೇನ್‌ಗೆ ಒಳಗಾಗುವವರಲ್ಲಿ ಮಹಿಳೆಯರೇ ಅಧಿಕ. ಮೈಗ್ರೇನ್‌ನಿಂದ ಬಳಲುವರರಲ್ಲಿ ಶೇಕಡ 70 ಮಹಿಳೆಯರೇ. ಮೈಗ್ರೇನ್‌ ಕೆಲವರಲ್ಲಿ ಸೌಮ್ಯವಾಗಿರಬಹುದು. ಕೆಲವರಲ್ಲಿ ವಾಂತಿ ಬರುವುದು, ಓಕರಿಕೆ ಬಂದಂತಾಗುವುದು, ಬಾಯಲ್ಲಿ ನೀರು  ಬರುವುದು.

ತಲೆ ಸುತ್ತು ಕೂಡ ಕಂಡುಬರುವುದು. ಮೈಗ್ರೇನ್‌ ತಲೆನೋವು ಕಾಣಿಸಿಕೊಳ್ಳುವ ಮುಂಚೆ ಕೆಲವರಲ್ಲಿ ದೃಷ್ಟಿ ಮಂದವಾಗುವುದು, ಕಣ್ಣಿನ ಮುಂದೆ ಆಕೃತಿಗಳು ತೇಲಾಡಿದಂತಾಗುವುದು, ತೋಳು, ಕಾಲುಗಳಲ್ಲಿ ಜೋಮು ಹಿಡಿದಂತಾಗುವುದು ಆಗಬಹುದು. ಪುರುಷರಲ್ಲಿ ಅತಿಯಾಗಿ ಧೂಮಪಾನ ಮಾಡುವವರಲ್ಲಿ ಪದೇ ಪದೇ ತೀವ್ರತರ ತಲೆನೋವು ಕಾಣಿಸಿಕೊಳ್ಳಬಹುದು. ಅರೆ ತಲೆನೋವು ಬೆಳಿಗ್ಗೆ  ಆರಂಭವಾಗಿ ಹೊತ್ತೇರುತ್ತ ಹೋದಂತೆಲ್ಲ ಹೆಚ್ಚಾಗುವುದು. ಸಂಜೆ ಹೊತ್ತಿಗೆ ತಂತಾನೆ ಕಡಿಮೆಯಾಗುವುದು. ಆಯುರ್ವೇದದಲ್ಲಿ ಇದಕ್ಕೆ ಸೂರ್ಯವರ್ತ ಎಂಬ ಹೆಸರಿದೆ. ಸೂರ್ಯನ ಪ್ರಖರತೆಯಂತೆ ಮೈಗ್ರೇನ್‌ನಲ್ಲಿಯೂ ನೋವು ಹೆಚ್ಚಾಗುವುದರಿಂದ ಈ ಹೆಸರನ್ನು ನೀಡಿದ್ದಾರೆ. ಈ ನೋವು ಕೆಲವರಲ್ಲಿ ವಾರಕ್ಕೊಮ್ಮೆ ಇಲ್ಲವೇ 15 ದಿನಗಳಿಗೊಮ್ಮೆ ಬರಬಹುದು. ಇನ್ನು ಕೆಲವರಲ್ಲಿ ಪ್ರತಿದಿನವೂ ಬರಬಹುದು. ಮಹಿಳೆಯರಲ್ಲಿ ಮುಟ್ಟು ಬರುವ ಮುಂಚೆ ಕೂಡ ಬರಬಹುದು. ಮುಟ್ಟಿಗೆ ಮುಂಚೆ ಹೊಟ್ಟೆನೋವು, ಸೊಂಟನೋವು ಬರುವ ಹಾಗೆ ತಲೆನೋವು ಕೂಡ ಕಾಣಿಸಿಕೊಳ್ಳಬಹುದು.

ಕಾರಣಗಳು :

1) ಶೀತದ ಗಾಳಿ – ಮಳೆಗಾಲ, ಚಳಿಗಾಲಗಳಲ್ಲಿ ನಸುಕಿನಲ್ಲಿ ಮತ್ತು ರಾತ್ರಿಯ ಹೊತ್ತು ಹೊರಗಿನ ಗಾಳಿಯಲ್ಲಿ ತಿರುಗಾಡುವಾಗ ಬೆಚ್ಚಗಿನ ಉಡುಪು ಧರಿಸಬೇಕು. ಕಿವಿಗೆ ಹತ್ತಿ ಇಟ್ಟುಕೊಳ್ಳಬೇಕು. ದ್ವಿಚಕ್ರ ವಾಹನದಲ್ಲಿ ತಿರುಗಾಡುವಾಗ ಹಿಂಬದಿ ಕುಳಿತವರು ಕೂಡ ಹೆಲ್ಮೆಟ್ ಧರಿಸಬೇಕು ಇಲ್ಲವೇ ಸ್ಕಾರ್ಫ ಧರಿಸಬೇಕು. ಕೈಗೆ ಗ್ಲೌಸ, ಕಾಲುಗಳಿಗೆ ಸಾಕ್ಸ ಧರಿಸಿ ಚಪ್ಪಲಿ ಹಾಕಿಕೊಳ್ಳಬೇಕು.

2) ದೃಷ್ಟಿದೋಷ – ದೃಷ್ಟಿದೋಷವಿದ್ದಲ್ಲಿ ಪದೇ ಪದೇ ತಲೆನೋವು ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚು ಹೊತ್ತು ಓದಿದಾಗ, ಟಿ.ವಿ., ಕಂಪ್ಯೂಟ್ ವೀಕ್ಷಿಸಿದಾಗ ತಲೆನೋವು ಕಾಣಿಸಿಕೊಳ್ಳುತ್ತಿದ್ದಲ್ಲಿ ಒಮ್ಮೆ ಕಣ್ಣಿನ ತಜ್ಞ ವೈದ್ಯರನ್ನು ಕಂಡು ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಅವರ ಸಲಹೆಯ ಮೇರೆಗೆ ಕನ್ನಡಕ ಧರಿಸಿದಲ್ಲಿ ನೋವು ಕಡಿಮೆಯಾಗುತ್ತದೆ.

3) ಮಲಬದ್ಧತೆ – ಮಲಬದ್ಧತೆ ಇರುವವರಲ್ಲಿ ತಲೆನೋವಿನ ಸಮಸ್ಯೆ ಕಂಡುಬರುತ್ತದೆ. ಆದ್ದರಿಂದ ಆಹಾರದಲ್ಲಿ ನಾರಿನಂಶ ಹೆಚ್ಚಾಗಿರುವ ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಮಾಡಬೇಕು. ರಾತ್ರಿ ಸಮಯ ಬೇಗನೆ ಊಟ ಮಾಡಬೇಕು. ಮಿತವಾಗಿ ಊಟ ಮಾಡಬೇಕು. ದಿನಕ್ಕೆ 3 ಲೀಟ್ ನೀರು ಕುಡಿಯಬೇಕು. ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಬೆಳಿಗ್ಗೆ ಹಾಗೂ ರಾತ್ರಿ ಊಟದ ನಂತರ ಸ್ವಲ್ಪ ಹೊತ್ತು ನಡಿಗೆ ಒಳ್ಳೆಯದು. ರಾತ್ರಿ ಊಟದ ನಂತರ ಮಲಗುವ ಸಮಯದಲ್ಲಿ ನಡುವೆ ಕನಿಷ್ಠ ಎರಡು ಗಂಟೆಗಳ ಅಂತರವಿರಲಿ.

4) ಮಾನಸಿಕ ಒತ್ತಡ – ಮಾನಸಿಕ ಒತ್ತಡ ಅತಿಯಾದಲ್ಲಿ ಒತ್ತಡದ ತಲೆನೋವು (Tension Headache) ಕಾಣಿಸಿಕೊಳ್ಳುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಮಯದ ಪರಿಪಾಲನೆ ಬಹಳ ಮುಖ್ಯ. ಒಬ್ಬರೇ ಎಲ್ಲವನ್ನು ಮಾಡುವುದಕ್ಕಿಂತ ಕೆಲಸಗಳನ್ನು, ಜವಾಬ್ದಾರಿ ಗಳನ್ನು ಪರಸ್ಪರ ಹಂಚಿಕೊಂಡಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಹವ್ಯಾಸಗಳನ್ನು, ಸಂತೋಷ ಕೊಡುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಸಂಗೀತ ಆಲಿಸುವುದು, ಸಾಹಿತ್ಯ ಓದುವುದು, ಧ್ಯಾನ ಮಾಡುವುದು, ಚಿಕ್ಕ ಮಕ್ಕಳೊಂದಿಗೆ ಆಟವಾಡುವುದು, ಒತ್ತಡ ಹೆಚ್ಚಾಗಿರುವ ಸಮಯದಲ್ಲಿ ಜೀವನದಲ್ಲಿ ಹಿಂದೆ ಜರುಗಿದ ಸಂತೋಷದ ಘಟನೆಗಳನ್ನು ಮೆಲುಕು ಹಾಕುವುದು, ಇದರಿಂದ ಮನಸ್ಸು ಉಲ್ಲಸಿತವಾಗುತ್ತದೆ.

5) ದುಃಖ – ಯಾವುದೇ ಕಾರಣದಿಂದ ದುಃಖ ಉಂಟಾಗಿದ್ದಲ್ಲಿ ಅಳು ತಂತಾನೇ ಬರುತ್ತದೆ. ಹೆಚ್ಚು ಹೊತ್ತು ಅತ್ತಾಗ ಅಥವಾ ಅಳದೇ ದುಃಖವನ್ನು ತಡೆದುಕೊಂಡಾಗಲೂ ತಲೆನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಅಳು ತಡೆಯುವುದು ಬೇಡ. ಅತ್ತು ಬಿಡಬೇಕು. ಮನಸ್ಸು ನಿರಾಳವಾಗುತ್ತದೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವುದೂ ಒಳ್ಳೆಯದು.

6) ಅತಿ ಗಟ್ಟಿಯಾದ ಶಬ್ದ ಕೇಳುವುದು – ಮೈಕಾಸುರನ ಹಾವಳಿ ವಿಪರೀತ. ಕನ್ನಡ ರಾಜ್ಯೋತ್ಸವ, ಅಣ್ಣಮ್ಮ ಉತ್ಸವ ಮತ್ತು ಗಣೇಶೋತ್ಸವ ಆಚರಿಸುವವರು ಅಬ್ಬರದ ಮೈಕ್ ಹಾಕಿಕೊಂಡು ತಮ್ಮ ಭಕ್ತಿ ಪ್ರದರ್ಶಿಸುತ್ತಾರೆ. ಅಂತಹ ಶಬ್ದದಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿಯೂ ಕೆಲವರು ಜೋರಾಗಿ ಟೇಪ್‌ರೆಕಾರ್ಡ್ ಹಾಕುವುದು, ಪಾಪ್‌ ಸಂಗೀತ ಕೇಳುವುದು, ಟಿ.ವಿ. ಕೂಡ ಜೋರಾಗಿ ಹಾಕಿಕೊಂಡಿರುತ್ತಾರೆ. ಶಬ್ದ ಮಾಲಿನ್ಯದಿಂದ ಒತ್ತಡದ ತಲೆನೋವು ಕಾಣಿಸಿಕೊಳ್ಳಬಹುದು. ದೀಪಾವಳಿ ಸಮಯದಲ್ಲಿ ಪಟಾಕಿ ಶಬ್ದದಿಂದಲೂ ತಲೆನೋವು ಉಂಟಾಗಬಹುದು. ಅಂತಹ ಸಮಯದಲ್ಲಿ ಕಿವಿಗೆ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು.

7) ಅತಿಯಾಗಿ ಟಿ.ವಿ. ವೀಕ್ಷಣೆ ಮಾಡುವುದು – ಈಗಂತೂ ಧಾರಾವಾಹಿಗಳ ಸುರಿಮಳೆ. ಅಲ್ಲದೇ ಎಲ್ಲಾ ಚಾನೆಲ್‌ಗಳನ್ನು ಲೆಕ್ಕ ಹಾಕಿದರೆ ದಿನವೊಂದಕ್ಕೆ 50 ರಿಂದ 60 ಸಿನಿಮಾ ಬರುತ್ತವೆ. ಕೆಲವರಿಗೆ ಟಿ.ವಿ. ವೀಕ್ಷಣೆ ಚಟ ಆಗಿದೆ. ಕೆಲವರಿಗೆ ಧಾರಾವಾಹಿ ನೋಡದೇ ಇದ್ರೆ ಸಮಾಧಾನ ಇರೋದಿಲ್ಲ. ಅತಿಯಾಗಿ ಟಿ.ವಿ. ನೋಡುವುದರಿಂದಲೂ ತಲೆನೋವು ಕಾಣಿಸಿಕೊಳ್ಳುತ್ತದೆ.

8) ನಿದ್ದೆಗೆಡುವುದು – ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿ/ನಿಯರು ನಿದ್ದೆಗೆಟ್ಟು ಓದುವುದು ಸಾಮಾನ್ಯ. ಮರುದಿನ ತಲೆನೋವು ಬಾಧಿಸುವುದು ಗ್ಯಾರಂಟಿ. ಕೆಲವು ಪ್ರದೇಶಗಳಲ್ಲಿ ಮಧ್ಯರಾತ್ರಿ `ನಲ್ಲಿ’ ನೀರು ಬರುತ್ತದೆ. ನೀರು ಹಿಡಿಯಲು ಏಳಲೇಬೇಕು. ಈಗಂತೂ ಬಿ.ಪಿ.ಓ.ಗಳಲ್ಲಿ ಕೆಲಸ ಮಾಡುವವರಿಗೆ ಹಗಲು, ರಾತ್ರಿ ಎಂಬ ಭೇದವಿಲ್ಲ. ನೈಟ್ ಡ್ಯೂಟಿ ಮಾಡಲೇಬೇಕು. ಅಂತಹವರಲ್ಲಿಯೂ ತಲೆನೋವು ಅತ್ಯಂತ ಸಾಮಾನ್ಯ.

9) ಹಸಿವು ತಡೆಯುವುದು – ಉಪವಾಸ ಮಾಡುವ ರೂಢಿಯಿರುವವರಲ್ಲಿ ಅಥವಾ ಕೆಲಸಗಳ ಮಧ್ಯೆ ಊಟಕ್ಕೆ ಸಮಯವಿಲ್ಲದೆ ಬಹುಹೊತ್ತಿನವರೆಗೆ ಹೊಟ್ಟೆ ಖಾಲಿಯಿಡುವುದರಿಂದಲೂ ತಲೆನೋವು ಉಂಟಾಗುತ್ತದೆ. ಬೆಳಗಿನ ತಿಂಡಿ ತಿನ್ನುವುದು ಬಹಳ ಮುಖ್ಯ.

10) ಸೈನುಸೈಟಿಸ್ – ಚಳಿಯ ವಾತಾವರಣದಲ್ಲಿ, ಮಳೆ ಬೀಳುವ ಸಮಯದಲ್ಲಿ ಕೆಲವರಲ್ಲಿ ನೆಗಡಿ ಮತ್ತು ತಲೆಯಭಾಗ, ಹಣೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

11) ಅತಿಯಾದ ಬಿಸಿಲಿನಲ್ಲಿ ತಿರುಗಾಟ -ಬೇಸಿಗೆಯಲ್ಲಿ ಅತಿಯಾದ ಬಿಸಿಲಿನಲ್ಲಿ ತಿರುಗಾಡುವುದರಿಂದ ತಲೆನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ 12 ರಿಂದ 4 ಗಂಟೆಯವರೆಗಿನ ಬಿಸಿಲಿನಲ್ಲಿ ಹೆಚ್ಚು ತಿರುಗಾಡುವುದು ಬೇಡ. ತಿರುಗಾಡುವ ಸಮಯದಲ್ಲಿ ಕೊಡೆ ಹಿಡಿದು ಓಡಾಡಬೇಕು. ತಂಪು ಕನ್ನಡಕ ಧರಿಸಬೇಕು. ಆಗಾಗ ಕರವಸ್ತ್ರವನ್ನು ತಣ್ಣೀರಿನಲ್ಲಿ ಅದ್ದಿ ತಲೆಯ ಮೇಲೆ ಹಾಕಿಕೊಳ್ಳುತ್ತಿರಬೇಕು.

12) ಶಾಲೆ, ಕಾಲೇಜಿಗೆ, ಕಛೇರಿಗೆ ಹೋಗುವವರು ಬೆಳಗಿನ ಸಮಯ ಅವಸರದಲ್ಲಿ ತಲೆಗೆ ಸ್ನಾನ ಮಾಡಿ ತಲೆಕೂದಲನ್ನು ಒಣಗಿಸದೇ ಹಾಗೇ ಓಡುತ್ತಾರೆ. ಹೊರಗಿನ ವಾತಾವರಣದ ಧೂಳು, ಹೊಗೆಯಿಂದ ತಲೆನೋವು ಉಂಟಾಗಬಹುದು. ಆದ್ದರಿಂದ ಅಂತಹ ಸಮಯದಲ್ಲಿ ಸ್ವಲ್ಪ ಬೇಗ ಎದ್ದು ತಲೆಗೆ ಸ್ನಾನ ಮಾಡಿ ತಲೆಕೂದಲು ಒಣಗಿಸಿಕೊಂಡು ನಂತರ ಮನೆಯಿಂದ ಹೊರಡಬೇಕು.

13) ಮಿದುಳಿನಲ್ಲಿ ಗಡ್ಡೆ ಇದ್ದಲ್ಲಿ – ಆಗಾಗ ಸಹಿಸಲಸಾಧ್ಯವಾದ ತಲೆನೋವು ಬರುವುದು, ತಲೆ ನೋವಿನ ಜೊತೆಗೆ ವಾಂತಿ, ತಲೆಸುತ್ತು ಬಂದು ಕಣ್ಣು ಮಂಜಾಗುವುದು ಇದ್ದಲ್ಲಿ, ಪ್ರಜ್ಞೆ ತಪ್ಪುವುದು ಇದ್ದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಅಂತಹವರಲ್ಲಿ ಬ್ರೇನ್ ಟ್ಯುಮರ್ (ಮಿದುಳಿನಲ್ಲಿ ಗಡ್ಡೆ) ಇರಬಹುದು. ತಕ್ಷಣ ರೋಗಪತ್ತೆ ಹಚ್ಚಿದಲ್ಲಿ, ಶಸ್ತ್ರ ಚಿಕಿತ್ಸೆಯಿಂದ ಸರಿಪಡಿಸ ಬಹುದು.

14) ರಕ್ತದೊತ್ತಡ – ಅಧಿಕ ರಕ್ತದೊತ್ತಡಯಿರುವವರಲ್ಲಿ ಆಗಾಗ ತಲೆನೋವು, ತಲೆ ಸುತ್ತು ಇರುತ್ತದೆ.

ಸಲಹೆಗಳು :

* ತಲೆನೋವು ಇರುವಾಗ ಮಲಗುವ ವಿಧಾನ ಬಹಳ ಮುಖ್ಯ. ಬೋರಲು ಅಂದರೆ ಹೊಟ್ಟೆ ಮೇಲೆ ಮಲಗಬಾರದು. ಇದರಿಂದ ಕುತ್ತಿಗೆಯ ಮಾಂಸಖಂಡಗಳಲ್ಲಿ ಬಿಗಿತ ಉಂಟಾಗಿ ನೋವು ಹೆಚ್ಚಾಗಬಹುದು. ಬೆನ್ನಿನ ಮೇಲೆ ಮಲಗಬೇಕು.

* ಒತ್ತಡದ ತಲೆನೋವಿರುವ ಸಮಯದಲ್ಲಿ ದೀರ್ಘವಾದ ಉಸಿರಾಟ ತುಂಬಾ ಸಹಾಯವಾಗುತ್ತದೆ. ದೀರ್ಘವಾಗಿ ಉಸಿರು ತೆಗೆದುಕೊಳ್ಳುವುದು, ಬಿಡುವುದು ಮಾಡಬೇಕು.

* ನಮ್ಮ  ಹಿರಿಯರು ಮಾಡುತ್ತಿದ್ದಂತೆ ತಲೆನೋವು ಬಂದಾಗ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಳ್ಳುವುದು ಕೂಡ ಒಳ್ಳೆಯದೆ. ಇದರಿಂದ ಸ್ವಲ್ಪ ಮಟ್ಟಿಗೆ ನೋವು ತಗ್ಗುವುದು.

* ಕೆಲವರಲ್ಲಿ ಕಾಫಿ ಕುಡಿಯುವುದು ತುಂಬಾ ಅಭ್ಯಾಸ ಆಗಿರುತ್ತದೆ. ಬೆಳಗಿನ ಕಾಫಿ ಮಿಸ್ ಆದಾಗ ಅವರಲ್ಲಿ ತಲೆನೋವು ಕಂಡುಬರುತ್ತದೆ. ಆದರೆ ಕಾಫಿಯ ಸೇವನೆ ಅತಿಯಾದರೂ ತಲೆನೋವು ಕಾಣಿಸಿಕೊಳ್ಳುತ್ತದೆ. ಮಿತವಾಗಿದ್ದರೆ ಒಳ್ಳೆಯದು.

* ಚ್ಯುಯಿಂಗ್ ಗಮ್, ಬಬ್ಬಲ್‌ಗಮ್ ಚಪ್ಪರಿಸುವುದನ್ನು ರೂಢಿಸಿ ಕೊಂಡಿರುವುದು, ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಕಡ್ಡಿಪುಡಿ, ತಂಬಾಕು ಜಗಿಯುವುದು, ಸದಾ ಬಾಯಲ್ಲಿ ಏನನ್ನಾದರೂ ಇಟ್ಟುಕೊಂಡು ಅಗಿಯುವುದರಿಂದ ಬಿಗಿತ ಉಂಟಾಗಿ ನೋವು ಕಾಣಿಸಿಕೊಳ್ಳಬಹುದು. ಆ ಚಟ ಬಿಟ್ಟು ಬಿಡುವುದೇ ಅದಕ್ಕೆ ಪರಿಹಾರ.

* ಆಹಾರ ಪದಾರ್ಥಗಳನ್ನು ತಯಾರಿಸುವಾಗ ಬಳಸುವ ಎಂ.ಎಸ್.ಜಿ. (ಮೋನೋಸೋಡಿಯಂ ಗ್ಲುಟಮೇಟ್) ಸೇವನೆ ಕೂಡ ತಲೆನೋವಿಗೆ ಕಾರಣ. ಅನೇಕ ಚೈನೀಸ್ ಡಿಶ್‌ಗಳಲ್ಲಿ ಅದರಲ್ಲೂ ನಾವೆಲ್ಲರೂ ಅತ್ಯಂತ ಇಷ್ಟಪಡುವ ಗೋಬಿಮಂಚೂರಿ ಅಥವಾ ಯಾವುದೇ ಮಂಚೂರಿಯಲ್ಲಾಗಲೀ ಮೊನೋಸೋಡಿಯಂ ಗ್ಲುಟಮೇಟ್ ಬೆರೆಸಿರುತ್ತಾರೆ.

* ಮತ್ತೊಂದು ಮಖ್ಯವಾದದ್ದು ಚಾಕೋಲೇಟ್ ಸೇವನೆ – ಚಾಕೋಲೇಟ್ ನಲ್ಲಿರುವ ಟೈರಾಮಿನ್ ಎಂಬ ಅಂಶ ಅನೇಕರಲ್ಲಿ ಅದರಲ್ಲಿ ಮಕ್ಕಳಲ್ಲಿ ಕಂಡುಬರುವ ತಲೆನೋವಿಗೆ ಕಾರಣವಾಗಿದೆ ಅಂತ ತಿಳಿದುಬಂದಿದೆ.

ಮನೆ ಔಷಧಿ :

* ಶುಂಠಿಯನ್ನು ಹಾಲಿನಲ್ಲಿ ತೇಯ್ದು ಹಣೆಯ ಮೇಲೆ ಪಟ್ಟು ಹಾಕಬೇಕು.

* ನುಗ್ಗೆಸೊಪ್ಪಿನ ರಸ ತೆಗೆದು ಅದರಲ್ಲಿ ಶುಂಠಿಯನ್ನು ಅರೆದು ಹಣೆಗೆ ಲೇಪಿಸಬೇಕು.

* ಈರುಳ್ಳಿಯ ರಸ ತೆಗೆದು ಅದಕ್ಕೆ ಒಂದು ಚಿಟಿಕೆ ಅರಿಶಿನ, ಒಂದು ಚಮಚ ಜೇನು ಬೆರೆಸಿ ದಿನಕ್ಕೆರಡು ಬಾರಿ ಎರಡು ಚಮಚೆ ಸೇವಿಸಬೇಕು.

* ದಾಲ್ಚಿನ್ನಿಯನ್ನು ನಿಂಬೆರಸದಲ್ಲಿ ತೇಯ್ದು ಹಣೆಗೆ ಲೇಪಿಸಬೇಕು.

* ಬಜೆಯನ್ನು ಪುಡಿ ಮಾಡಿ ಬಟ್ಟೆಯಲ್ಲಿ ಹಾಕಿ ಅದರಿಂದ ಮೂಸುತ್ತಿರಬೇಕು.

* ಕಾಳು ಮೆಣಸನ್ನು ಗರುಗದ ಸೊಪ್ಪಿನ ರಸದಲ್ಲಿ ಅರೆದು ಹಣೆಗೆ ಹಚ್ಚಬೇಕು.

* ಹಸುವಿನ ತುಪ್ಪದಲ್ಲಿ ಬೆಲ್ಲ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.

* ಕೊತ್ತಂಬರಿ ಸೊಪ್ಪಿನ ರಸ 1 ಭಾಗ, ಎಳ್ಳೆಣ್ಣೆ ಅರ್ಧ ಭಾಗ, ಪನ್ನೀರು ಅರ್ಧ ಭಾಗ ಸೇರಿಸಿ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಸಣ್ಣಗಿನ ಉರಿಯಲ್ಲಿ ನೀರಿನಂಶ ಹೋಗುವವರೆಗೂ ಕಾಯಿಸಿ, ಆರಿಸಿ ಬಾಟಲಿಯಲ್ಲಿ ತೆಗೆದಿಟ್ಟು ಕೊಂಡು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ.

* ತುಳಸಿಯ ರಸ ಮತ್ತು ಏಲಕ್ಕಿಯನ್ನು ಅರೆದು ಹಣೆಗೆ ಲೇಪಿಸುವುದು.

ಮೈಗ್ರೇನ್ :

1) ನೆಲ್ಲಿಕಾಯಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಹಣೆಗೆ ಹಚ್ಚಬೇಕು. ಆಗಾಗ್ಗೆ ಲೇಪಿಸು ತ್ತಿರಬೇಕು. ಇದನ್ನು ನೆತ್ತಿಗೂ ಲೇಪಿಸಬೇಕು.

2) ಹಸುವಿನ ಹಾಲಿನಲ್ಲಿ ಬಾದಾಮಿಯನ್ನು ಅರೆದು ಅದಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ 15 ದಿನಗಳ ಕಾಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಮನೆ ಔಷಧಿಗಳಿಂದ ಕಡಿಮೆಯಾಗದಿದ್ದಲ್ಲಿ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ಆಯುರ್ವೇದ ವೈದ್ಯರು ನಿಮ್ಮ ಪ್ರಕೃತಿ, ಬಲ, ವಯಸ್ಸಿನ ಆಧಾರದ ಮೇಲೆ ಯಾವ ಔಷಧಿ ಸೂಕ್ತ ಅನ್ನುವುದನ್ನು ನಿರ್ಧರಿಸುವರು. ಪಂಚಕರ್ಮ ಚಿಕಿತ್ಸೆಯಲ್ಲಿ ಒಂದಾದ ನಸ್ಯ ಕರ್ಮ ಅತ್ಯಂತ ಉಪಯುಕ್ತವಾದುದು. ಇದನ್ನು 7 ದಿನಗಳ ಕಾಲ ತೆಗೆದುಕೊಳ್ಳಬೇಕಾಗುತ್ತದೆ.

ತಲೆನೋವು ತಗ್ಗಿಸುವ ಸರಳ ವ್ಯಾಯಾಮ :

1) ಹುಬ್ಬುಗಳು ಮೇಲೇರಿಸಿ ಇಳಿಸುವುದನ್ನು ತ್ವರಿತಗತಿಯಲ್ಲಿ ಮಾಡಬೇಕು.

2) ಜೋರಾಗಿ ಬಾಯಿ ತೆರೆದು ಮುಚ್ಚುವುದು, ಆಕಳಿಸುವ ರೀತಿ ಮಾಡುವುದು.

3) ಹೆಬ್ಬೆರಳು ಇಲ್ಲವೇ ತೋರುಬೆರಳಿನಿಂದ ನೋವಿರುವ ಕಡೆಗೆ ಒತ್ತಿಕೊಳ್ಳಬೇಕು. ಆಕ್ಯುಪ್ರೆಶ್‌ನಲ್ಲಿ ಇದನ್ನೆ ಅನುಸರಿಸಲಾಗುತ್ತದೆ. ಎಷ್ಟೋ ಸಲ ತಲೆನೋವು ಬಂದಾಗ ನಮ್ಮ ಆತ್ಮೀಯರು ಹಣೆಯ ಮೇಲೆ ಕೈಯಿರಿಸಿದಾಗ ನೋವು ಕಡಿಮೆಯಾದಂತಾಗುವುದು. ಆತ್ಮೀಯರ ಸ್ಪರ್ಶ ನಿಜಕ್ಕೂ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

ಯಾವಾಗ ವೈದ್ಯರನ್ನು ಕಾಣಬೇಕು ?

* ನಿಮ್ಮ ವಯಸ್ಸು 40 ಮೀರಿದ್ದು ಮುಂಚೆ ಯಾವತ್ತೂ ಹೆಚ್ಚು ಬಾಧಿಸದಿದ್ದ ತಲೆನೋವು ಪದೇ ಪದೇ ಬಾಧಿಸುತ್ತಿದ್ದರೆ,

* ತಲೆನೋವು ತಲೆಯ ಬೇರೆ ಬೇರೆ ಭಾಗಗಳಲ್ಲಿ ಮೇಲಿಂದ ಮೇಲೆ ಬರುತ್ತಿದ್ದಲ್ಲಿ,

* ಯಾವುದೇ ಮನೆ ಔಷಧಿ, ಮಾತ್ರೆಗೆ ತಲೆ ನೋವು ತಗ್ಗದಿದ್ದಾಗ,

* ಯಾವುದೇ ಕಾರಣವಿಲ್ಲದೆ ಆಗಾಗ ಬಾಧಿಸುತ್ತಿದ್ದಲ್ಲಿ,

* ತಲೆನೋವಿನಿಂದ ಕೆಲಸದಲ್ಲಿ ಏಕಾಗ್ರತೆ ಕಳೆದುಕೊಂಡು ಪದೇ ಪದೇ ರಜೆ ಹಾಕಬೇಕಾದ ಸಂದರ್ಭದಲ್ಲಿ,

* ತಲೆನೋವಿನಿಂದ ನೆನಪಿನ ಶಕ್ತಿ ಕಡಿಮೆಯಾಗುವುದು, ಕಣ್ಣು ಮಂಜಾಗುವುದು, ಪ್ರಜ್ಞೆ ತಪ್ಪುವುದು, ತಲೆಸುತ್ತು ಬರುತ್ತಿದ್ದಲ್ಲಿ,

* ತಲೆನೋವಿನೊಂದಿಗೆ ಬೇರೆ ರೀತಿಯ ದೈಹಿಕ ತೊಂದರೆಗಳು ಕಾಣಿಸಿಕೊಂಡಲ್ಲಿ ತಡಮಾಡದೆ ವೈದ್ಯರನ್ನು ಕಾಣಬೇಕು.