ಭಾರತದಲ್ಲಿ ಸುಮಾರು ೫೦ ಪ್ರಭೇದಗಳ ವಿಷದ ಹಾವುಗಳಿವೆ. ತೊಂದರೆ ಮಾಡಿದಾಗ ಮಾತ್ರ ಅವು ಕಚ್ಚುತ್ತವೆ. ಮನುಷ್ಯ ವಾಸಿಸುವ ಸ್ಥಳಗಳಿಗೂ ಸಹ ಕೆಲವು ಬರುವುದಿಲ್ಲ. ಮನುಷ್ಯ ಮುಖ್ಯವಾಗಿ ನಾಲ್ಕು ಜಾತಿಯ ವಿಷದ ಹಾವುಗಳನ್ನು ಗುರುತಿಸಲು ಕಲಿತು, ಅವುಗಳಿಂದ ದೂರವಿರುವುದು ಒಳ್ಳೆಯದು. ಅವು ಯಾವುವೆಂದರೆ ನಾಗರಹಾವು, ಕಡಂಬಳ, ಕನ್ನಡಿಹಾವು ಮತ್ತು ಕಲ್ಲುಹಾವು ಅಥವಾ ಮಿಡಿನಾಗರಹಾವು.

. ನಾಗರಹಾವು : ಭಾರತದಲ್ಲಿನ ನಾಗರಹಾವುಗಳಲ್ಲಿ ಮೂರು ವಿಧಗಳಿವೆ. ಹೆಡೆಯ ಮೇಲ್ಭಾಗದಲ್ಲಿ ಒಂದು ಚುಕ್ಕೆಯಿರುವ ನಾಗರ, ಎರಡು ಚುಕ್ಕೆಗಳ ನಾಗರ ಮತ್ತು ಕರಿನಾಗರ. ಕಾಳಿಂಗಸರ್ಪವು ನಿಜವಾದ ನಾಗರಹಾವಲ್ಲ. ಆಫ್ರಿಕಾದಲ್ಲಿರುವ ಉಗುಳುವ ನಾಗರಹಾವು ತನ್ನ ಶತ್ರುವಿನ ಕಣ್ಣಿಗೆ ನೇರವಾಗಿ ವಿಷವನ್ನು ‘ಉಗುಳಿ’ ಕಣ್ಣು ಕುರುಡಾಗುವಂತೆ ಮಾಡಿ ತಪ್ಪಿಸಿಕೊಳ್ಳುತ್ತದೆ.

ಭಾರತದಲ್ಲಿ ನಾಗರಹಾವು ವಿಶೇಷವಾಗಿ ಹೊಲ ಗದ್ದೆ, ಹಳ್ಳತಿಟ್ಟು ಮತ್ತು ಕಾಡುಗಳಲ್ಲಿ ಕಂಡುಬರುತ್ತದೆ. ಅದಕ್ಕೆ ತಾನು ವಾಸಿಸುವ ಸ್ಥಳದ ಮಣ್ಣಿನ ಬಣ್ಣವಿರುತ್ತದೆ. ೧.೫-೧.೮ ಮೀಟರ್ ಉದ್ದದ ಶರೀರ, ತಲೆಯ ಮೇಲೆ ಚಪ್ಪಟೆಯಾದ ಅಗಲವಿರುವ ಹುರುಪೆಗಳು, ಹೆಡೆ ಬಿಚ್ಚುವ ಶಕ್ತಿ ಮತ್ತು ಹೆಡೆಯ ಮೇಲ್ಬಾಗದಲ್ಲಿ ‘U’ ಆಕಾರದ ಗುರುತು- ಇವು ನಾಗರಹಾವಿನ ಲಕ್ಷಣಗಳು. ಕಪ್ಪೆ, ಇಲಿ ಮತ್ತು ಪಕ್ಷಿಯ ಮೊಟ್ಟೆಗಳು ನಾಗರಹಾವಿನ ಸಾಮಾನ್ಯ ಆಹಾರ. ಮರದ ಪೊಟರೆ, ಇಲಿಯ ಬಿಲ ಮತ್ತು ಹುತ್ತಗಳಲ್ಲಿ ಇದು ವಾಸಿಸುತ್ತದೆ. ಇಲಿಗಳನ್ನು ಹುಡುಕುತ್ತಾ ಬರುವ ಈ ಹಾವು ಭತ್ತದ ಗದ್ದೆ ಮತ್ತು ಉಗ್ರಾಣಗಳ ಹತ್ತಿರ ಕಂಡು ಬರಬಹುದು. ಇದು ಆಕ್ರಮಣಕಾರಿ ಜೀವಿಯಲ್ಲ. ತೊಂದರೆಯಾದಾಗ ಸಾಮಾನ್ಯವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಶತ್ರು ತುಂಬ ಹತ್ತಿರವಿದ್ದರೆ, ತನ್ನ ಶರೀರದ ಮುಂಭಾಗವನ್ನೆತ್ತಿ ಭಯ ಮತ್ತು ಕೋಪ ದಿಂದ ಹೆಡೆ ಬಿಚ್ಚಿ ಭುಸುಗುಟ್ಟುತ್ತಾ ಕಚ್ಚಲು ಸಿದ್ಧವಾಗುತ್ತದೆ. ಮತ್ತೆ ತೊಂದರೆ ಬಂದರೆ ಕಚ್ಚಲು ಪ್ರಯುತ್ನಿಸುವುದು. ಇಲ್ಲವಾದರೆ ತಾನೇ ಹೆಡೆ ಮಡಚಿಕೊಂಡು ಮುಂದೆ ಹೋಗುವುದು. ಹೆಣ್ಣು ನಾಗರಹಾವು ಜೂನ್ ಮತ್ತು ಆಗಸ್ಟ್ ತಿಂಗಳುಗಳ ನಡುವೆ ೧೦ ರಿಂದ ೩೦ ಮೊಟ್ಟೆಗಳನ್ನಿಡುತ್ತದೆ. ಎರಡು ತಿಂಗಳ ನಂತರ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. ನಾಗರಹಾವು ನೋಡಲು ಕೇರೆಹಾವಿನಂತೆಯೇ ಕಾಣುತ್ತದೆ. ಆದ್ದರಿಂದ ನಾಗರಹಾವನ್ನು ಗುರುತಿಸುವಾಗ ಎಚ್ಚರಿಕೆ ವಹಿಸಬೇಕು. ಕೇರೆಹಾವಿಗೆ ಚೂಪಾದ ತಲೆ ಮತ್ತು ದೊಡ್ಡ ಕಣ್ಣುಗಳಿವೆ. ಆದರೆ ನಾಗರಹಾವಿಗೆ ಗುಂಡನೆಯ ತಲೆಯಿದೆ ಮತ್ತು ಹೆಡೆಯ ಮೇಲೆ ಕನ್ನಡಕದ ಗುರುತು (U) ಇರುತ್ತದೆ.

. ಕಡಂಬಳ : ಕಡಂಬಳ ಅಥವಾ ಬಳೆವಡಕವನ್ನು ಗುರುತಿಸುವುದು ಸುಲಭ. ೧.೨-೧.೮ ಮೀಟರ್ ಉದ್ದನೆಯ ಶರೀರ, ಮೈಮೇಲಿನ ನೇರಳೆ ಬಣ್ಣದ ಮೇಲೆ ಅಲ್ಲಲ್ಲಿ ಬಿಳಿಯ ಅಡ್ಡಪಟ್ಟಿಗಳು ಮತ್ತು ಅಷ್ಟಕೋನಾಕಾರದ ಬೆನ್ನಿನ ಹುರುಪೆಗಳು-ಕಡಂಬಳದ ಮುಖ್ಯ ಲಕ್ಷಣಗಳು. ಅಲ್ಲದೆ ತಲೆಯು ಚಿಕ್ಕದಾಗಿ ಮೊಂಡವಾಗಿರುತ್ತದೆ. ಅತ್ಯಂತ ವಿಷಕಾರಿಯಾದ ಈ ಹಾವು ರಾತ್ರಿಯ ವೇಳೆ ಚಟುವಟಿಕೆಯಿಂದಿರುವ ನಿಶಾಚರಿ. ಭಾರತದ ಎಲ್ಲಾ ಕಡೆಗಳಲ್ಲಿ ವಾಸಿಸುವ ಈ ಹಾವು ವಿಶೇಷವಾಗಿ ಮರಳು ಮಿಶ್ರಿತ ಮಣ್ಣಿರುವ ಸ್ಥಳಗಳಲ್ಲಿನ ಇಲಿಯ ಬಿಲಗಳಲ್ಲಿ ಕಂಡುಬರುತ್ತದೆ. ಇಟ್ಟಿಗೆ ಗೂಡು ಮತ್ತು ಸೌದೆಗಳನ್ನು ಒಟ್ಟಿರುವ ಜಾಗಗಳಲ್ಲಿಯೂ ಇದು ಕಂಡುಬರುವುದು. ಇಲಿ, ಹಲ್ಲಿ ಮತ್ತು ಪಕ್ಷಿಗಳು ಇದರ ಆಹಾರ. ಇತರೆ ಹಾವುಗಳನ್ನು ಹಿಡಿದು ನುಂಗುವುದು ಇದರ ವಿಶೇಷ ಗುಣ. ಹೆಣ್ಣು ಕಡಂಬಳ ೧೦-೧೫ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳೊಡೆದು ಮರಿಹಾವುಗಳು ಹೊರಬರುವವರೆಗೂ ಮೊಟ್ಟೆಗಳನ್ನು ರಕ್ಷಿಸುತ್ತದೆ. ಪುಕ್ಕಲು ಸ್ವಭಾವದ ಈ ಹಾವು ಮನುಷ್ಯನನ್ನು ಕಂಡ ತಕ್ಷಣ ಮರೆಯಾಗುತ್ತದೆ. ಆದರೆ ಶರೀರವನ್ನು ತುಳಿದಾಗ ಅಥವಾ ಶರೀರಕ್ಕೆ ಪೆಟ್ಟಾದಾಗ ಕೋಪದಿಂದ ಕಚ್ಚುವುದಕ್ಕೆ ಮುಂದಾಗುತ್ತದೆ. ಕಡಂಬಳ ಹಾವನ್ನು ಒಮ್ಮೊಮ್ಮೆ ಚಿಕ್ಕದಾದ ಹಾಗೂ ವಿಷವಲ್ಲದ ಕಟ್ಟುಹಾವು (ತೋಳದ ಹಾವು) ಎಂದು ತಪ್ಪು ತಿಳಿಯುವ ಸಾಧ್ಯತೆ ಇದೆ. ಆದ್ದರಿಂದ ಕಡಂಬಳ ಹಾವನ್ನು ಗುರುತಿಸುವಾಗ ಎಚ್ಚರವಹಿಸಬೇಕು.

. ಉರಿಮಂಡಲಹಾವು (ರಸೆಲ್ಸ್ ವೈಪರ್) : ಕನ್ನಡಿ ಅಥವಾ ಉರಿಮಂಡಲದ ಹಾವನ್ನು ಸುಲಭವಾಗಿ ಗುರುತಿಸಬಹುದು. ಸುಮಾರು ೧.೫ ಮೀಟರ್ ಉದ್ದ, ದಪ್ಪನೆಯ ಶರೀರ, ಮೈಮೇಲೆ ಹಳದಿಬಣ್ಣ ಮತ್ತು ವಜ್ರಾಕಾರಾದ ಕಪ್ಪು ಚುಕ್ಕೆಗಳ ಮೂರುಸಾಲುಗಳು, ತ್ರಿಕೋನಾಕಾರದ ಚಪ್ಪಟೆಯ ತಲೆ- ಇವು ಉರಿಮಂಡಲಹಾವಿನ ಮುಖ್ಯ ಲಕ್ಷಣಗಳು. ಇದು ಹೊಲಗದ್ದೆಗಳ ಸಮೀಪ ಮತ್ತು ಕಾಡುಗಳಲ್ಲಿ ವಾಸಿಸುತ್ತದೆ. ಸಂಜೆಯ ವೇಳೆ ಸಂಚಾರಕ್ಕೆ ಬಂದು, ತನ್ನ ಪ್ರಿಯ ಆಹಾರಗಳಾದ ಇಲಿ ಮತ್ತು ಕಪ್ಪೆಗಳನ್ನು ಬೇಟೆಯಾಡುತ್ತದೆ. ಹೊಲಗಳ ಸುತ್ತ ಸಾಮಾನ್ಯವಾಗಿ ಕಂಡುಬರುವ ಕಳ್ಳಿ, ಕತ್ತಾಳೆ ಮತ್ತು ಮುಳ್ಳು ಪೊದೆಗಳಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ. ಆದ್ದರಿಂದ ನೀವು ಇಂತಹ ಪೊದೆಗಳ ಸಮೀಪ ಓಡಾಡುವಾಗ ಎಚ್ಚರದಿಂದಿರಿ ! ತೊಂದರೆ ಮಾಡಿದಾಗ ಇದು ರೋಷದಿಂದ ಕಚ್ಚುತ್ತದೆ. ಹೆಣ್ಣು ಹಾವು ೨೦ ರಿಂದ ೪೦ ಮರಿಗಳನ್ನು ಹಾಕುತ್ತದೆ. ಇತರ ಹಾವುಗಳಂತೆ ಮೊಟ್ಟೆಗಳನ್ನಿಡುವ ಬದಲು ಗರ್ಭದಲ್ಲಿಯೇ ಮೊಟ್ಟೆಗಳನ್ನು ಉಳಿಸಿಕೊಂಡು ಮರಿ ಹಾಕುವುದು ಈ ಹಾವುಗಳ ವಿಶೇಷ ಗುಣ. ಉರಿಮಂಡಲಹಾವನ್ನು ಒಂದೊಂದು ಸಾರಿ ಮರಿ ಹೆಬ್ಬಾವೆಂದು ತಪ್ಪು ತಿಳಿಯುವ ಸಾಧ್ಯತೆಯಿದೆ. ಹಾಗೆಯೇ ಹೆಬ್ಬಾವಿನ ಮರಿಯನ್ನು ಮಂಡಲ ಹಾವೆಂದು ತಿಳಿಯುವ ಸಾಧ್ಯತೆ ಇದೆ. ಹೆಬ್ಬಾವಿಗೆ ವಜ್ರಾಕಾರದ ಕಪ್ಪು ಚುಕ್ಕೆಗಳ ಸಾಲುಗಳಿರುವುದಿಲ್ಲ.

. ಕಲ್ಲು ಹಾವು (ಇಂಡಿಯನ್ ಲಿಟಲ್ ವೈಪರ್) : ಕಲ್ಲು ಹಾವು ಅಥವಾ ಕೊಳಕು ಮಂಡಲ ಅಥವಾ ಮಿಡಿನಾಗರ ಎಂಬ ಹೆಸರುಗಳಿರುವ ಈ ಹಾವು ವಿಷದ ಹಾವುಗಳಲ್ಲಿಯೇ ಅತ್ಯಂತ ಚಿಕ್ಕದು. ಕೇವಲ ೩೦-೩೫ ಸೆಂ.ಮೀ. ಉದ್ದವಿರುತ್ತದೆ. ಸಾಮಾನ್ಯವಾಗಿ ಕಲ್ಲು-ಮರಳು ಇರುವ ಪ್ರದೇಶಗಳಲ್ಲಿ ಈ ಹಾವು ವಾಸಿಸುತ್ತದೆ. ತ್ರಿಕೋನಾಕಾರದ ತಲೆ, ಚಿಕ್ಕದಾದ ಶರೀರ, ತಲೆಯ ಮೇಲೆ ಕಾಣುವ ಬಾಣದ ತುದಿ ಗುರುತು – ಇದರ ಮುಖ್ಯ ಲಕ್ಷಣಗಳು. ಕಂದು ಬಣ್ಣದ ಇದರ ಶರೀರದ ಮೇಲೆ ಬಿಳಿಯ ಬಣ್ಣದ ಉದ್ದವಾದ ಸೊಟ್ಟ ಸೊಟ್ಟನೆಯ ಪಟ್ಟೆಗಳು ಕಂಡು ಬರುತ್ತವೆ. ಈ ಹಾವುಗಳು ಬಂಡೆಗಳ ಕೆಳಗೆ, ಚಿಕ್ಕ ಚಿಕ್ಕ ಕಲ್ಲುಗಳ ಕೆಳಗೆ ಮತ್ತು ಸಣ್ಣ ಪೊದೆಗಳಲ್ಲಿ ಕಂಡು ಬರುತ್ತವೆ. ಕಡಂಬಳದಂತೆ ಇವೂ ಸಹ ನಿಶಾಚರಿಗಳು. ಆದರೆ ಹಿಂದಿನ ರಾತ್ರಿ ಮಳೆಯಾಗಿದ್ದರೆ ಬೆಳಗಿನ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರಬಹುದು. ಇವು ಬೇಸಿಗೆಯಲ್ಲಿ ಶರೀರವನ್ನು ತಂಪಾಗಿಡಲು ನೆರಳಿನಲ್ಲಿ ಮಲಗಿರುತ್ತವೆ ಮತ್ತು ಚಳಿಗಾಲದಲ್ಲಿ ಬಿಸಿಲು ಕಾಯಿಸುತ್ತವೆ. ಇವು ಇಲಿ, ಚಿಕ್ಕ ಪುಟ್ಟ ಪಕ್ಷಿ ಮತ್ತು ಹಲ್ಲಿಗಳನ್ನು ತಿನ್ನುತ್ತವೆ. ಹೆಣ್ಣು ಹಾವು ೪ ರಿಂದ ೮ ಮರಿಗಳನ್ನು ಹಾಕುತ್ತದೆ. ಆಗತಾನೆ ಹುಟ್ಟಿದ ಮರಿ ಹಾವು ಕೇವಲ ೮ ಸೆಂ.ಮೀ ಉದ್ದವಿರುತ್ತದೆ. ಕೊಳಕುಮಂಡಲದ ಹಾವನ್ನು ಒಮ್ಮೊಮ್ಮೆ ಉದ್ದವಾದ ನಿರುಪದ್ರವಿ ಬೆಕ್ಕು ಹಾವೆಂದು ತಪ್ಪು ತಿಳಿಯುವ ಸಾಧ್ಯತೆಯಿದೆ.

ಮನುಷ್ಯವಾಸದ ಜಾಗಗಳಲ್ಲಿ ಕಂಡುಬರುವ ಈ ಮೇಲಿನ ನಾಲ್ಕು ವಿಷದ ಹಾವುಗಳನ್ನು ಗುರುತಿಸಲು ಕಲಿಯುವುದು ಮುಖ್ಯ. ಈ ಹಾವುಗಳ ಕಡಿತದಿಂದ ಜೀವ ಉಳಿಸಿಕೊಳ್ಳಲು ಇಂಥ ಕಲಿಕೆ ತುಂಬ ಸಹಾಯಕ.

ವಿಷದ ಇತರೆ ಹಾವುಗಳು

ಮೇಲೆ ತಿಳಿಸಿದ ನಾಲ್ಕು ವಿಷದ ಹಾವುಗಳ ಜೊತೆಗೆ ಇನ್ನೂ ಅನೇಕ ವಿಷದ ಹಾವುಗಳ ಪಟ್ಟಿಯನ್ನು ನಾವು ಮಾಡಬಹುದು. ಆದರೆ ಅವು ಮನುಷ್ಯನಿಗೆ ಕಂಡುಬರುವ ಸಾಧ್ಯತೆ ಕಡಿಮೆ. ಅವುಗಳನ್ನು ನೋಡಲು ನಿರ್ದಿಷ್ಟವಾದ ಸ್ಥಳಗಳಿಗೇ ಹೋಗಬೇಕು. ಅವು ಮನುಷ್ಯನನ್ನು ಕಚ್ಚುವ ಸಾಧ್ಯತೆಯೂ ಕಡಿಮೆ. ಇತರೆ ವಿಷದ ಹಾವುಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬಹುದು. ಅವ ಕಡಲಹಾವುಗಳು, ಗುಳಿ ಮಂಡಲಗಳು, ಕಾಳಿಂಗಸರ್ಪಗಳು ಮತ್ತು ಹವಳದ ಹಾವುಗಳು.

. ಕಡಲ ಹಾವುಗಳು : ಸಮುದ್ರದಲ್ಲಿ ವಾಸಿಸುವ ಎಲ್ಲಾ ಹಾವುಗಳು ವಿಷದ ಹಾವುಗಳು. ಭಾರತದ ಸಮುದ್ರಗಳಲ್ಲಿ ೨೦ ಜಾತಿಯ ಹಾವುಗಳು ವಾಸಿಸುತ್ತವೆ. ಅತಿಹೆಚ್ಚು ಕಂಡುಬರುವಂಥವು ಕೊಕ್ಕೆ ಮೂಗಿನ ಹಾವು ಮತ್ತು ಪಟ್ಟೆಗಳ ಕಡಲ ಹಾವುಗಳು. ಎಲ್ಲ ಕಡಲ ಹಾವುಗಳ ಬಾಲ ಚಪ್ಪಟೆಯಾಗಿದ್ದು ದೋಣಿಗಳ ಹುಟ್ಟಿನಂತೆ ಈಜಲು ಸಹಾಯಮಾಡುತ್ತದೆ. ಇವು ಮೀನುಗಳನ್ನು ಕಚ್ಚಿ ವಿಷದಿಂದ ಜ್ಞಾನ ತಪ್ಪುವಂತೆ ಮಾಡುತ್ತವೆ ಮತ್ತು ಅನಂತರ ನುಂಗುತ್ತವೆ. ಅನೇಕ ಕಡಲ ಹಾವುಗಳು ಮರಿ ಹಾಕುತ್ತವೆ.

ಕಡಲ ಹಾವುಗಳು ಉಸಿರು ಕಟ್ಟಿ ಐದು ಗಂಟೆಗಳವರೆಗೆ ನೀರಿನಲ್ಲಿ ಮುಳುಗಿರಬಲ್ಲವು. ನೂರು ಮೀಟರ್‌ಗಿಂತಲೂ ಹೆಚ್ಚು ಆಳಕ್ಕೆ ಹೋಗಬಲ್ಲವು. ಎಲ್ಲ ಕಡಲ ಹಾವುಗಳು ಸೋಮಾರಿ ಪ್ರವೃತ್ತಿಯವು. ಬೆಸ್ತರ ಬಲೆಯಲ್ಲಿ ಒಮ್ಮೊಮ್ಮೆ ಬರುವ ಈ ಹಾವುಗಳನ್ನು ಬೆಸ್ತರ ಮಕ್ಕಳು ಬಾಲ ಹಿಡಿದು ಮೇಲಕ್ಕೆಸೆದು ಆಟವಾಡುವುದುಂಟು. ಅವನ್ನು ಪುನಃ ಸಮುದ್ರಕ್ಕೂ ಎಸೆಯುತ್ತಾರೆ. ಒಂದು ವೇಳೆ ಕಡಲ ಹಾವು ಕಚ್ಚಿದರೆ ಸಾವು ಖಂಡಿತ. ಭಾರತದಲ್ಲಿ ಈ ಹಾವುಗಳ ವಿಷಕ್ಕೆ ಪ್ರತಿವಿಷ ತಯಾರಿಸುತ್ತಿಲ್ಲ. ಆಸ್ಟ್ರೇಲಿಯಾದಲ್ಲಿ ಮಾತ್ರ ಕಡಲಹಾವುಗಳ ಪ್ರತಿವಿಷ ತಯಾರಿಸುತ್ತಾರೆ.

. ಗುಳಿಮಂಡಲಗಳು : ಇತರೆ ಮಂಡಲ ಹಾವುಗಳಿಗಿರುವಂತೆಯೇ ಗುಳಿಮಂಡಲಗಳ ತಲೆಯ ಮೇಲೆ ಸಣ್ಣ ಹುರುಪೆಗಳಿರುತ್ತವೆ. ಆದರೆ ಇವಕ್ಕೆ ಮೂಗಿನ ಹೊಳ್ಳೆ ಮತ್ತು ಕಣ್ಣುಗಳ ನಡುವೆ ಚಿಕ್ಕ ಗುಳಿಗಳಿರುತ್ತವೆ. ಈ ಗುಳಿಗಳು ಶಾಖ ಗ್ರಹಣಕ್ಕೆ ಸಹಾಯಕಾರಿ. ಕಣ್ಣು ಮುಚ್ಚಿದರೂ ಕೇವಲ ಶಾಖವನ್ನು ಗ್ರಹಿಸುವುದರಿಂದಲೇ ಬಿಸಿರಕ್ತ ಪ್ರಾಣಿಗಳನ್ನು ಬೇಟೆಯಾಡಬಲ್ಲವು. ಇವು ಕಾಫಿ ಮತ್ತು ಟೀ ತೋಟಗಳಲ್ಲಿ, ಬಿದಿರುಮಳೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಗುಳಿಮಂಡಲಗಳಲ್ಲಿ ೧೫ಕ್ಕಿಂತ ಹೆಚ್ಚು ಪ್ರಭೇದಗಳಿವೆ. ಇವೆಲ್ಲಾ ಕಾಡುಹಾವುಗಳು. ಕಪ್ಪೆ, ಹಲ್ಲಿ ಮತ್ತು ಚಿಕ್ಕ ಪಕ್ಷಿಗಳನ್ನು ತಿನ್ನುತ್ತವೆ. ಮರಿಹಾವುಗಳು ಕಪ್ಪೆ ಮತ್ತು ಹಲ್ಲಿಗಳನ್ನು ಹಿಡಿದು ತಿನ್ನಲು ಒಂದು ತಂತ್ರ ಹೂಡುತ್ತವೆ. ಅವು ತಮ್ಮ ಬಣ್ಣದ ಬಾಲವನ್ನು ಮೇಲಕ್ಕೆ ಎತ್ತುತ್ತವೆ. ಬಣ್ಣದ ವಸ್ತುವೇನಿರಬಹುದೆಂದು ಹತ್ತಿರ ಬರುವ ಕಪ್ಪೆ ಮತ್ತು ಹಲ್ಲಿಗಳನ್ನು ಮರಿಗಳು ಹಿಡಿದು ನುಂಗುತ್ತವೆ. ಕೆಲವು ಗುಳಿಮಂಡಲಗಳು ಮರದ ಮೇಲೆ ಹಾಗೂ ನದಿಯ ದಂಡೆಯ ತಂಪಾದ ನೆಲ ಮತ್ತು ಪೊದೆಗಳಲ್ಲಿ ವಾಸಿಸುತ್ತವೆ. ಇವುಗಳ ವಿಷ ಹೆಚ್ಚು ಪ್ರಭಾವಶಾಲಿ ಯಾಗಿಲ್ಲದ ಕಾರಣ, ಇವುಗಳ ಕಡಿತದಿಂದ ಸಾವಿನ ಸಾಧ್ಯತೆ ಕಡಿಮೆ.

. ಕಾಳಿಂಗ ಸರ್ಪಗಳು : ಪ್ರಂಪಂಚದ ಅತ್ಯಂತ ಉದ್ದನೆಯ ವಿಷದ ಹಾವುಗಳೆಂದರೆ ಕಾಳಿಂಗ ಸರ್ಪಗಳು. ಇವು ಅನೇಕ ಆಶ್ಚರ್ಯಗಳ ಆಗರ. ಇವು ಗೂಡು ಕಟ್ಟುತ್ತವೆ. ಗಂಡು ಮತ್ತು ಹೆಣ್ಣು ಹಾವುಗಳು ಬಹುಶಃ ಜೀವನಪರ್ಯಂತ ಒಟ್ಟಿಗೆ ಜೀವಿಸುತ್ತವೆ. ಇವು ಪಶ್ಚಿಮ ಘಟ್ಟಗಳ ಅರಣ್ಯಗಳು ಮತ್ತು ಹಿಮಾಲಯದ ತಪ್ಪಲುಗಳಲ್ಲಿ ವಾಸಿಸುತ್ತವೆ. ಅಪರೂಪಕ್ಕೆ ಕಾಫಿ ಮತ್ತು ಟೀ ತೋಟಗಳಲ್ಲಿಯೂ ಕಂಡುಬರುತ್ತವೆ. ಹೆಣ್ಣು ಕಾಳಿಂಗಸರ್ಪವು ಎಲೆಗಳ ಗುಡ್ಡೆಯನ್ನು ಮಾಡಿ, ಅದರಲ್ಲಿ ೨೦ ರಿಂದ ೩೦ ಮೊಟ್ಟೆಗಳನ್ನಿಡುತ್ತವೆ. ೬೦ ದಿನಗಳ ನಂತರ ಮೊಟ್ಟೆಗಳೊಡೆದು ಮರಿಗಳು ಹೊರಬರುವ ತನಕ ಗೂಡಿನ ಸಮೀಪದಲ್ಲಿಯೇ ಇದ್ದು ರಕ್ಷಣೆ ನೀಡುತ್ತದೆ. ಆಹಾರವಾಗಿ ಇತರೆ ಹಾವುಗಳನ್ನು ನುಂಗುವುದು ಇವುಗಳ ವಿಶೇಷ ಗುಣ. ದೊಡ್ಡಹಾವುಗಳು ಕೇರೆಹಾವುಗಳನ್ನು ನುಂಗಿದರೆ ಚಿಕ್ಕ ಕಾಳಿಂಗ ಸರ್ಪಗಳು ನೀರುಹಾವು ಮತ್ತು ಹುಲ್ಲುಹಾವುಗಳನ್ನು ನುಂಗುತ್ತವೆ. ೩.೨-೪.೨ ಮೀಟರ್ ಉದ್ದನೆಯ ಶರೀರ, ಕಪ್ಪು ಬಣ್ಣದ ಮೈಮೇಲೆ ಅಲ್ಲಲ್ಲಿ ಬಿಳಿ ಚುಕ್ಕೆಗಳು, ಉದ್ದವಾದ ಆದರೆ ಅಗಲವಲ್ಲದ ಹೆಡೆ,

೧.೨ ರಿಂದ ೧.೫ ಮೀಟರ್ ಎತ್ತರ ಹೆಡೆಯನ್ನು ಮೇಲಕ್ಕೆತ್ತುವ ಶಕ್ತಿ, ಕಾಳಿಂಗಸರ್ಪಗಳ ಮುಖ್ಯ ಲಕ್ಷಣಗಳು. ಆಗುಂಬೆಯ ಕಾಡುಗಳಲ್ಲಿ ಕಾಳಿಂಗ ಸರ್ಪಗಳು ಹೇರಳವಾಗಿ ಜೀವಿಸುತ್ತಿವೆ. ಕೇವಲ ದಟ್ಟವಾದ ಕಾಡುಗಳಲ್ಲಿ ಕಂಡುಬರುವ ಈ ಹಾವುಗಳು ಮನುಷ್ಯನನ್ನು ಕಚ್ಚಿ ಸಾಯಿಸಿರುವ ಸಂಗತಿ ಇಲ್ಲವೇ ಇಲ್ಲವೆನ್ನಬಹುದು.

೪. ಹವಳದ ಹಾವುಗಳು : ಭಾರತದಲ್ಲಿ ಇವುಗಳ ಐದು ಪ್ರಭೇದಗಳಿವೆ. ತೆಳ್ಳನೆಯ ಶರೀರ, ಹೊಳೆಯುವ ಬಣ್ಣದ ಪಟ್ಟೆಗಳು ಮತ್ತು ಸುಮಾರು ಒಂದು ಮೀಟರ್ ಉದ್ದದ ಶರೀರ – ಇವು ಹವಳದ ಹಾವುಗಳ ಮುಖ್ಯ ಲಕ್ಷಣಗಳು. ಇವು ಪೊದೆ ಹಾಗೂ ಹಿಮಾಲಯದ ಪರ್ವತಗಳಲ್ಲಿ ವಾಸಿಸುತ್ತವೆ. ಇವು ನಿಶಾಚರಿಗಳು. ಬೆಳಗಿನ ಹೊತ್ತು ಮರದ ದಿಮ್ಮಿಗಳ ಕೆಳಗೆ ಅಥವಾ ಎಲೆಗಳ ಕೆಳಗೆ ವಿಶ್ರಾಂತಿ ಪಡೆಯುತ್ತವೆ. ಇವುಗಳ ಕಡಿತದಿಂದ ನಮ್ಮ ದೇಶದಲ್ಲಿ ಮನುಷ್ಯರು ಸತ್ತ ವರದಿಯಿಲ್ಲ.