ನಿಮ್ಮ ಗೆಳೆಯರು ಮತ್ತು ಸಂಬಂಧಿಗಳು ಹಾವುಗಳ ಬಗ್ಗೆ ನಾನಾ ರೀತಿಯ ಕಥೆಗಳನ್ನು ಮತ್ತು ನಂಬಿಕೆಗಳನ್ನು ನಿಮಗೆ ತಿಳಿಸಿರಬಹುದು. ಬಹುಶಃ ಹಾವುಗಳ ಬಗ್ಗೆ ಇರುವಷ್ಟು ಕಟ್ಟುಕತೆಗಳು ಹಾಗೂ ತಪ್ಪು ತಿಳುವಳಿಕೆಗಳು ಇನ್ನಾವ ಪ್ರಾಣಿಗಳ ಬಗ್ಗೆಯೂ ಇಲ್ಲ. ನೀವು ಕೇಳುವ ಯಾವ ಸಂಗತಿಯನ್ನಾಗಲೀ, ಅದು ನಿಜವೋ ಸುಳ್ಳೋ ಎಂಬುದನ್ನು ಸಂಬಂಧಿತ ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬೇಕು. ಅಥವಾ ಹಾವುಗಳ ಬಗ್ಗೆ ಅಭ್ಯಾಸ ಮಾಡಿರುವವರನ್ನು ಕೇಳಿ ತಿಳಿದುಕೊಳ್ಳಬೇಕು. ಸಾಧ್ಯವಾದರೆ ಅಂತರಜಾಲದಿಂದ ಕರಾರುವಾಕ್ಕಾದ ಮಾಹಿತಿಯನ್ನು ಪಡೆಯಬೇಕು. ಹಾವುಗಳ ಜೀವನದ ಬಗ್ಗೆ ಹೆಚ್ಚು ವೈಜ್ಞಾನಿಕ ಅಭ್ಯಾಸ ಮಾಡಿದಂತೆ ನಿಮಗೆ ನಂಬಿಕೆಗಳ ಸತ್ಯಾಸತ್ಯ ಗೊತ್ತಾಗುತ್ತದೆ. ರೂಢಿಯಲ್ಲಿರುವ ಬಗೆಗಿನ ಕೆಲವು ನಂಬಿಕೆಗಳ ಸತ್ಯಾಸತ್ಯತೆಗಳು ಇಲ್ಲಿವೆ.

. ಆಕಾಶದಿಂದ ಮಳೆಯ ಜೊತೆಯಲ್ಲಿ ಹಾವುಗಳು ನೆಲಕ್ಕೆ ಬೀಳುತ್ತವೆಯೇ?

ಮೋಡಗಳಲ್ಲಿ ಹಾವುಗಳು ಜೀವಂತವಾಗಿರಲು ಸಾಧ್ಯವಿಲ್ಲ. ಮಳೆ ಬಂದಾಗ ನೀರು ತಗ್ಗಾದ ಸ್ಥಳಗಳಲ್ಲಿ ನಿಲ್ಲುತ್ತದೆ. ಅಂತಹ ನೀರಿನ ಹೊಂಡಗಳಲ್ಲಿ ಕಪ್ಪೆಗಳು ಸಂತಾನ ಅಭಿವೃದ್ಧಿ ಮಾಡಲು ಬರುತ್ತವೆ. ಆದ್ದರಿಂದ ಹೊಂಡಗಳಲ್ಲಿ ಕಪ್ಪೆಯ ಗೊದಮೊಟ್ಟೆಗಳು ಹೇರಳವಾಗಿರುತ್ತವೆ. ಹಾವುಗಳು ತಮ್ಮ ಆಹಾರವಾದ ಕಪ್ಪೆಯನ್ನು ಹಿಡಿಯಲು ಮಳೆ ಬಂದಾಗ ಬಿಲದಿಂದ ಹೊರಬರುತ್ತವೆ. ಅಲ್ಲದೆ ಹಾವಿನ ಮೊಟ್ಟೆಗಳೊಡೆದು ಮರಿಹಾವುಗಳು ಈ ಕಾಲದಲ್ಲಿಯೇ ಹೊರಬಂದು ಕಪ್ಪೆಮರಿಗಳನ್ನು ಬೇಟೆಯಾಡುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಮರಿಹಾವುಗಳು ಮತ್ತು ಹಾವುಗಳು ಹೆಚ್ಚಾಗಿ ಕಂಡು ಬರುತ್ತವೆ.

. ನಾಗರಹಾವು ಮತ್ತು ಕೇರೆಹಾವು ಸತಿಪತಿಗಳೇ ?

ನಮ್ಮಲ್ಲಿ ಅನೇಕರಿಗೆ ಕೇರೆಹಾವು ಗಂಡು ಮತ್ತು ನಾಗರಹಾವು ಹೆಣ್ಣು ಎಂಬ ತಪ್ಪು ಕಲ್ಪನೆಯಿದೆ. ಇವು ಬೇರೆ ಬೇರೆ ಪ್ರಭೇದಕ್ಕೆ ಸೇರಿದ ಹಾವುಗಳು. ನಾಗರಹಾವಿನ ಪ್ರಭೇದದಲ್ಲಿಯೇ ಗಂಡುನಾಗರ ಮತ್ತು ಹೆಣ್ಣು ನಾಗರಗಳಿವೆ. ಹಾಗೆಯೇ ಕೇರೆಹಾವಿನಲ್ಲೂ ಗಂಡು ಮತ್ತು ಹೆಣ್ಣುಗಳಿವೆ. ಹಾವುಗಳಲ್ಲಿ ಗಂಡು ಹೆಣ್ಣುಗಳನ್ನು ಹೊರನೋಟದಿಂದ ಗುರುತಿಸಲು ಸಾಧ್ಯವಿಲ್ಲ. ಕೇರೆಹಾವು ನಾಗರಹಾವಿನಂತೆಯೇ ಗೋಧಿಬಣ್ಣದ ಶರೀರ ಮತ್ತು ತಲೆಯ ಮೇಲೆ ಅಗಲವಾದ ಕವಚಗಳನ್ನು ಪಡೆದಿರುವುದರಿಂದ ಈ ನಂಬಿಕೆ ಬಂದಿರಬಹುದು.

. “ಹಾವಿನ ದ್ವೇಷ ಹನ್ನೆರಡು ವರ್ಷ” -ಇದು ನಿಜವೇ?

ನಾಗರಹಾವು ತನಗೆ ಏಟು ಕೊಟ್ಟ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಹನ್ನೆರಡು ವರ್ಷಗಳ ಕಾಲ ದ್ವೇಷ ಸಾಧಿಸುತ್ತದೆಂಬ ನಂಬಿಕೆ ಇದೆ. ಅನೇಕರು ಹಾವು ಯಾವರೀತಿಯಲ್ಲಿ ಸೇಡು ಸಾಧಿಸಿತು ಎಂದು ಕಥೆ ಹೇಳುತ್ತಾರೆ. ಆದರೆ ನಾಗರಹಾವು ವ್ಯಕ್ತಿಯನ್ನು ಗುರುತಿಸುತ್ತದೆ. ಮತ್ತು ದ್ವೇಷವನ್ನು ಸಾಧಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ.   ನಾಗರಹಾವನ್ನು ಆಕಸ್ಮಿಕವಾಗಿ ತುಳಿದಾಗ ಅಥವಾ ಸಾಯಿಸಲು ಹೊಡೆದಾಗ, ಅದು ಕಚ್ಚಲು ಪ್ರಯತ್ನಿಸುವುದು ಸಹಜ. ಏಟು ತಿಂದ ಹಾವು ಹೆಚ್ಚು ದೂರ ಹೋಗದೆ ಸುಮಾರು ೧೫ಮೀಟರುಗಳ ಸುತ್ತಳತೆಯ ಜಾಗದಲ್ಲಿರುತ್ತದೆ. ಯಾವುದೇ ಪ್ರಾಣಿ ಅಥವಾ ವಸ್ತು ಏಟು ತಿಂದ ಹಾವಿನ ಹತ್ತಿರ ಹೋದರೆ, ಅದನ್ನು ಕಚ್ಚುತ್ತದೆ. ಈ ರೀತಿಯ ಕೋಪ ಹಾವಿಗೆ ಏಟು ತಿಂದ ಮೂರು ನಾಲ್ಕು ಗಂಟೆಗಳ ಕಾಲ ಇರುತ್ತದೆ. ಅನಂತರ ನೋವನ್ನು ಮರೆತು ಮತ್ತು ಸೇಡನ್ನು ಮರೆತು ತನ್ನ ಪಾಡಿಗೆ ತಾನು ಹೋಗುತ್ತದೆ. ಮೂರು ನಾಲ್ಕು ಗಂಟೆಗಳ ಕಾಲ ಕೋಪ ತಾಳುವ ನಾಗರಹಾವಿಗೆ ಬಹುಶಃ ಬೇರೆ ಹಾವುಗಳಿಗಿಂತ ಚೆನ್ನಾಗಿ ವೃದ್ಧಿಯಾಗಿರುವ “ಸೆರೆಬಲಮ್” ಕಾರಣವಿರಬಹುದು. ಆದರೆ ಹನ್ನೆರಡು ವರ್ಷ ದ್ವೇಷ ಸಾಧಿಸುತ್ತದೆಂಬುದು ಸುಳ್ಳು.

. ಹಾವು ಕಚ್ಚಿದ ಮೇಲೆ ವಿಷ ಬಿಡಲು ತಲೆ ತಿರುಗಿಸುವುದು ಅವಶ್ಯವೇ?

ಹಾವು ಕಚ್ಚಿದ ತಕ್ಷಣ ವಿಷವು ಮಾಂಸವನ್ನು ಸೇರುತ್ತದೆ. ಇದೊಂದು ಅನೈಚ್ಛಿಕ ಕ್ರಿಯೆ. ವಿಷ ಬಿಡಲು ಹಾವು ತಲೆ ತಿರುಗಿಸಬೇಕಾಗಿಲ್ಲ. ನಾಗರಹಾವು ಮತ್ತು ಕಲ್ಲು ಹಾವಿನ ವಿಷದಂತಗಳು ಚಿಕ್ಕವು. ಮಂಡಲ ಹಾವಿನ ವಿಷದಂತಗಳು ಉದ್ದವಾಗಿದ್ದು ಕೊಕ್ಕೆಯಂತೆ ಬಾಗಿರುತ್ತವೆ. ಮಂಡಲದ ಹಾವು ಕಚ್ಚಿದಾಗ, ಅದರ ಉದ್ದವಾದ ವಿಷದಂತಗಳು ಮಾಂಸಲಗಳಲ್ಲಿ ಸಿಕ್ಕಿಕೊಳ್ಳುತ್ತವೆ. ಆದ್ದರಿಂದ ಮಂಡಲದ ಹಾವು ವಿಷದಂತಗಳನ್ನು ಹಿಂದೆ ತೆಗೆದುಕೊಳ್ಳುವಾಗ ತಲೆಯ ಮುಂಭಾಗವನ್ನು ತಿರುಗಿಸುತ್ತದೆ.

. ಮನುಷ್ಯನನ್ನು ಕಚ್ಚಿದ ಹಾವು ತನ್ನ ಬಾಲವನ್ನು ಮುರಿದುಕೊಳ್ಳುವುದೇ?

ಹಾವು ಮನುಷ್ಯನನ್ನು ಕಚ್ಚಿದಾಗ, ಅದರ ವಿಷ ಮನುಷ್ಯನಿಗೆ ಏರುವಂತೆ, ಮನುಷ್ಯನ ವಿಷವು ಹಾವಿಗೆ ಏರುತ್ತದೆಂದೂ ಈ ವಿಷದಿಂದ ಪಾರಾಗಲು ಹಾವು ತನ್ನ ಬಾಲವನ್ನು ಮುರಿದುಕೊಳ್ಳುತ್ತದೆಂದು ಅನೇಕರು ಹೇಳುತ್ತಾರೆ. ಇದೊಂದು ಆಧಾರ ರಹಿತ, ಅವೈಜ್ಞಾನಿಕ ಮೂಢ ನಂಬಿಕೆ.

. ವಯಸ್ಸಾದ ಹಾವಿಗೆ ಕೂದಲುಗಳಿರುತ್ತವೆಯೇ?

ಸಸ್ತನಿ ವರ್ಗಕ್ಕೆ ಸೇರಿದ ಪ್ರಾಣಿಗಳಲ್ಲಿ ಮಾತ್ರ ಕೂದಲುಗಳಿರುತ್ತವೆ. ಹಾವುಗಳು ಸರೀಸೃಪ ವರ್ಗಕ್ಕೆ ಸೇರಿದ ಪ್ರಾಣಿಗಳು, ಯಾವ ಹಾವಿಗೂ ಕೂದಲಿಲ್ಲ, ಕೆಲವು ಹಾವಾಡಿಗರು ಕುದುರೆಯ ಕೂದಲುಗಳನ್ನು ಹಾವಿನ ಚರ್ಮದೊಳಕ್ಕೆ ಸಿಗಿಸಿ, ಜನರಿಗೆ ಕೂದಲ ಹಾವೆಂದು ಹೇಳುತ್ತಾ ಮೋಸಮಾಡಿ ಹಣ ಪಡೆಯುವುದುಂಟು.

ಹಾವು ಪೊರೆ ಬಿಡುವಾಗ, ಒಂದೊಂದು ಸಾರಿ ಪೊರೆ ಸಂಪೂರ್ಣವಾಗಿ ಹೊರಬರದೆ ಅಲ್ಲಲ್ಲಿ ಪುಡಿ ಪುಡಿಯಾಗಬಹುದು. ಅಂತಹ ಹಾವುಗಳನ್ನು ದೂರದಿಂದ ನೋಡಿ ಕೂದಲುಗಳಿರುವ ಹಾವೆಂದು ತಪ್ಪಾಗಿ ತಿಳಿಯುವ ಸಾಧ್ಯತೆಗಳೂ ಇವೆ.

. ಎರಡು ತಲೆ, ಐದು ಹೆಡೆ, ಏಳು ಹೆಡೆ ಹಾವುಗಳಿವೆಯೇ?

ಮಣ್ಣುಮುಕ್ಕ ಹಾವನ್ನು ಎರಡು ತಲೆಯ ಹಾವೆಂದು ಕರೆಯುತ್ತಾರೆ. ಅದರ ತಲೆ ಮತ್ತು ಬಾಲ ಹೆಚ್ಚೂ ಕಡಿಮೆ ಒಂದೇ ಗಾತ್ರದವು. ಹಾವಾಡಿಗರು ಈ ಹಾವನ್ನು ತೋರಿಸಿ ಇದು ಎರಡು ತಲೆ ಹಾವೆಂದು ಆರು ತಿಂಗಳಿಗೊಮ್ಮೆ ಒಂದೊಂದು ತಲೆಯನ್ನು ಉಪಯೋಗಿಸುತ್ತದೆಂದೂ ಹೇಳುತ್ತಾರೆ. ಇವೆಲ್ಲಾ ಸುಳ್ಳು. ತಲೆ ಮತ್ತು ಬಾಲ ಒಂದೇ ಗಾತ್ರವಿದ್ದರೂ ತಲೆಯಲ್ಲಿ ಮಾತ್ರ ಬಾಯಿ ಮತ್ತು ಕಣ್ಣುಗಳು ಇರುವುದನ್ನು ನಾವು ಗಮನಿಸಬಹುದು.

ಒಮ್ಮೊಮ್ಮೆ ಒಂದು ಶರೀರ ಮತ್ತು ಎರಡು ತಲೆಯ ಹಾವಿನ ಮರಿಯನ್ನು ನೀವು ಕಾಣಬಹುದು. ಹಾವುಗಳಲ್ಲೇ ಏನು ಬೇರೆ ಪ್ರಾಣಿಗಳಲ್ಲಿಯೂ ಎರಡು ತಲೆ, ನಾಲ್ಕು ಕಾಲುಗಳ ವಿಚಿತ್ರ ಶಿಶುಗಳನ್ನು ನೋಡಬಹುದು. ಆದರೆ ಈ ರೀತಿಯ ಪ್ರಾಣಿಗಳು ಅನೇಕ ದಿನಗಳವರೆಗೆ ಬದುಕಲಾರವು. ಐದು ಹೆಡೆ ಮತ್ತು ಏಳು ಹೆಡೆಯ ಸರ್ಪಗಳು ಕೇವಲ ಕಲ್ಪನೆಯವು.

. ಹಾವುಗಳು ಹಾಲು ಕುಡಿಯುತ್ತವೆಯೇ?

“ಹಾವುಗಳಿಗೆ ಹಾಲು ಪ್ರೀತಿಯ ಆಹಾರ. ಕೇರೆ ಹಾವು ಕಾಡುಗಳಲ್ಲಿ ಹಸುಗಳ ಕಾಲುಗಳನ್ನು ತನ್ನ ಬಾಲದಿಂದ ಬಂಧಿಸಿ ಕೆಚ್ಚಲ ಹಾಲನ್ನು ಕುಡಿಯುತ್ತದೆ” ಎಂದು ಅನೇಕರು ನಂಬುತ್ತಾರೆ. ಈ ನಂಬಿಕೆಯಲ್ಲಿ ಯಾವುದೇ ಸತ್ಯವಿಲ್ಲ. ಸಸ್ತನಿಗಳಿಗೆ ಮಾತ್ರ ಹಾಲು ಪ್ರೀತಿಯ ಆಹಾರ. ಹಾವಾಡಿಗರು ಅನೇಕ ದಿನಗಳವರೆಗೆ ಹಾವುಗಳಿಗೆ ನೀರು ಮತ್ತು ಆಹಾರ ಹಾಕದೆ ಇಟ್ಟಿರುತ್ತಾರೆ. ಆದ್ದರಿಂದ ಹಲವಾರು ದಿನಗಳಿಂದ ನೀರನ್ನೂ ಕಾಣದ ಹಾವಾಡಿಗನ ಹಾವಿಗೆ ಹಾಲನ್ನು ನೀಡಿದಾಗ ಒಂದೆರಡು ಗುಟುಕು ಹಾಲನ್ನು ಅನಿವಾರ್ಯವಾಗಿ ಕುಡಿಯಬಹುದು. ಇದು ಕೇವಲ ಬಾಯಾರಿಕೆಯನ್ನು ಹೋಗಲಾಡಿಸಿಕೊಳ್ಳಲೇ ಹೊರತು ಹಾಲಿನ ಮೇಲಿನ ಪ್ರೀತಿಯಿಂದಲ್ಲ.

. ನಾಗರ ಹೆಡೆಯ ಮೇಲೆ ನಾಗಮಣಿ ಇರುವುದು ಸತ್ಯವೇ?

ಪುರಾಣ ಮತ್ತು ಜಾನಪದ ಕತೆಗಳಲ್ಲಿ “ನಾಗರಹಾವಿನ ತಲೆಯ ಮೇಲೆ ಸ್ವಪ್ರಕಾಶವುಳ್ಳ ನಾಗಮಣಿ ಇರುತ್ತದೆ. ನಾಗಮಣಿಯ ಬೆಳಕಿನ ಸಹಾಯದಿಂದ ನಾಗರಹಾವು ರಾತ್ರಿಯ ವೇಳೆ ಬೇಟೆಯಾಡುತ್ತದೆ. ನಾಗಮಣಿಗೆ ವಿಶೇಷ ಶಕ್ತಿಯಿದ್ದು, ಅದರ ಸ್ಪರ್ಷದಿಂದ ವಿಷದ ಹಾವಿನಿಂದ ಸತ್ತವರು ಬದುಕುತ್ತಾರೆ” ಎಂದು ವಿವರಿಸುವುದುಂಟು.

ಆದರೆ ಯಾವ ನಾಗರಹಾವಿನ ತಲೆಯ ಮೇಲೂ ನಾಗಮಣಿಯಿಲ್ಲ. ಬಹುಶಃ ರೆಪ್ಪೆಯಿರದ ಹೊಳೆಯುವ ಕಣ್ಣುಗಳು ಈ ನಂಬಿಕೆ ಬೆಳೆಯುವುದಕ್ಕೆ ಕಾರಣವಾಗಿರಬಹುದು. ಒಮ್ಮೆ ಹಾವಾಡಿಗ ತನ್ನ ಹತ್ತಿರ ನಾಗಮಣಿ ಇದೆಯೆಂದು ಹೇಳುತ್ತಿದ್ದ.  ಆತ ತೋರಿಸಿದ ವಸ್ತುವನ್ನು ಪರೀಕ್ಷಿಸಿದಾಗ, ಅದು ಕೇವಲ ಚರ್ಮದ ಒಂದು ತುಂಡೆಂದು ಗೊತ್ತಾಯಿತು ಮತ್ತು ಅದಕ್ಕೆ ಯಾವ ಶಕ್ತಿಯೂ ಇರಲಿಲ್ಲ.

೧೦. ಗರುಡ ಮಚ್ಚೆಯಿರುವವರಿಗೆ ಹಾವು ಕಚ್ಚುವುದಿಲ್ಲವೆ?

ಇದೊಂದು ಮೂಢ ನಂಬಿಕೆ. ವಿಷದ ಹಾವುಗಳು ತಮಗೆ ತೊಂದರೆ ನೀಡಿದವರನ್ನು ಕಚ್ಚುವುದು ಸಹಜ. ಆದರೆ ಗರುಡ ಮಚ್ಚೆ ತಮಗಿದೆ ಆದ್ದರಿಂದ ಹಾವು ತನ್ನನ್ನು ಕಚ್ಚುವುದಿಲ್ಲವೆಂಬ ನಂಬಿಕೆಯಿಂದ ಇವರು ಆತ್ಮವಿಶ್ವಾಸದಿಂದ ಹೆದರದೆ ಹಾವುಗಳನ್ನು ಹೊಡೆದು ಸಾಯಿಸಬಹುದು. ಮಿಕ್ಕವರು ಹೆದರಿಕೆಯಿಂದ ಓಡಬಹುದು !

೧೧. ಮುಂಗಸಿಗೆ ಹಾವು ಕಚ್ಚಿದರೂ ಮುಂಗಸಿ ಸಾಯುವುದಿಲ್ಲವೆ?

ಮುಂಗಸಿ ಅತಿ ಚುರುಕಾದ ಪ್ರಾಣಿ. ಇದು ಮಾಂಸಾಹಾರಿಯಾದುದರಿಂದ ಚೂಪಾದ ಉಗುರುಗಳೂ, ಕೋರೆ ಹಲ್ಲುಗಳೂ ಇದಕ್ಕಿವೆ. ಹಾವಿಗೂ ಮುಂಗಸಿಗೂ ಜಗಳವಾಗುವಾಗ ಮುಂಗಸಿ ಮುಂದೆ ಬಂದಂತೆ ನಟಿಸಿ, ಹಾವು ಕಚ್ಚಲು ಬಂದ ತಕ್ಷಣ ಹಿಂದಕ್ಕೆ ಹೊಗುತ್ತದೆ. ಹಾವು ರಭಸದಿಂದ ತಲೆಯನ್ನು ನೆಲಕ್ಕೆ ಅಪ್ಪಳಿಸಿದಾಗ, ಮುಂಗಸಿಯು ತಕ್ಷಣ ಮುಂದಕ್ಕೆ ಬಂದು ಹಾವಿನ ತಲೆಯನ್ನು ಹಿಡಿದುಕೊಳ್ಳುತ್ತದೆ. ಒಂದು ವೇಳೆ ಹಾವು ಮುಂಗಸಿಯನ್ನು ಕಚ್ಚಿದರೂ ವಿಷವು ಮುಂಗಸಿಯ ಶರೀರಕ್ಕೆ ನಾಟುವ ಸಾಧ್ಯತೆ ಕಡಿಮೆ. ಮುಂಗಸಿಯ ಮೈತುಂಬ ಒರಟಾದ ಕೂದಲು ಮತ್ತು ದಪ್ಪನೆಯ ಚರ್ಮವಿದೆ. ಆದ್ದರಿಂದ ಹಾವಿನ ವಿಷ ನಾಟುವುದು ಕಷ್ಟ. ಹಾವು ಮುಂಗಸಿ ಜಗಳದಲ್ಲಿ ಸಾಮಾನ್ಯವಾಗಿ ಮುಂಗಸಿ ಗೆಲ್ಲುತ್ತದೆ. ಆದರೆ ಹಾವು ಸರಿಯಾಗಿ ಕಚ್ಚಿದರೆ ಮುಂಗಸಿಯು ಸಾಯುತ್ತದೆ. ಮುಂಗಸಿಗೆ ಹಾವಿನ ವಿಷದ ದುಷ್ಪರಿಣಾಮವನ್ನು ಗುಣಪಡಿಸುವ ಯಾವ ಗೆಡ್ಡೆ ಗೆಣಸು ಗೊತ್ತಿಲ್ಲ. ಇದು ಕೇವಲ ಹಾವಾಡಿಗರ ಸುಳ್ಳು ಪ್ರಚಾರ.

೧೨. ಬಚ್ಚಿಟ್ಟ ಹಣದ ಸ್ಥಳವನ್ನು ಮತ್ತು ಪಾಳುಬಿದ್ದ ಮನೆಗಳನ್ನು ನಾಗರಹಾವು ರಕ್ಷಿಸುತ್ತದೆಯೇ?

ಹಳ್ಳಿಯಲ್ಲಿ ವಾಸಿಸುವವರ ಎಲ್ಲ ಮನೆಗಳಲ್ಲಿ ಇಲಿಗಳು ಸಾಮಾನ್ಯವಾಗಿರುತ್ತವೆ. ದವಸ ಧಾನ್ಯಗಳನ್ನು ಸಂಗ್ರಹ ಮಾಡುವ ಉಗ್ರಾಣಗಳ ಹತ್ತಿರ ಇಲಿಗಳು ಇನ್ನೂ ಹೆಚ್ಚಿರುತ್ತವೆ. ಇಲಿಗಳು ಹಾವುಗಳ ಅಚ್ಚು ಮೆಚ್ಚಿನ ಆಹಾರ. ಆದ್ದರಿಂದ ಇಲಿಗಳಿರುವ ಜಾಗಗಳಿಗೆ ಹಾವುಗಳು ಹುಡುಕಿಕೊಂಡು ಬರುತ್ತವೆ. ವಾಸಿಸುವುದನ್ನು ಬಿಟ್ಟ ಹಳೇ ಮನೆಗಳಲ್ಲಿ ಇಲಿಗಳು ಧೈರ್ಯವಾಗಿ ಓಡಾಡಿಕೊಂಡಿರುತ್ತವೆ. ಆದ್ದರಿಂದ ಹಾವುಗಳು ಅಲ್ಲಿಗೆ ಧೈರ್ಯವಾಗಿ ಬರುತ್ತವೆ. ಪಾಳುಬಿದ್ದ ಮನೆಗಳಿಗೆ ಹೋದಾಗ ಹಾವುಗಳನ್ನು ನೋಡಿ ಈ ನಂಬಿಕೆ ಬಂದಿರಬಹುದು. ಅಲ್ಲದೆ ಪಾಳುಬಿದ್ದ  ಮನೆಗಳಲ್ಲಿರಬಹುದಾದ ಗುಪ್ತಧನವನ್ನು ಹಾವುಗಳು ರಕ್ಷಿಸುತ್ತವೆ ಎಂಬ ನಂಬಿಕೆಯನ್ನು ಬಳಕೆಗೆ ತಂದಿರಬಹುದು.

೧೩. ನಾಗರಹಾವು ಪುಂಗಿಯ ನಾದಕ್ಕೆ ತಲೆದೂಗುತ್ತದೆಯೇ?

ಯಾವುದೇ ಹಾವುಗಳಿಗೂ ಹೊರಕಿವಿ, ಕಿವಿ ತಮಟೆ ಮತ್ತು ಮಧ್ಯಕಿವಿ ಇರುವುದಿಲ್ಲ. ಆದ್ದರಿಂದ ಹಾವುಗಳು ಹುಟ್ಟು ಕಿವುಡ ಪ್ರಾಣಿಗಳು. ಹಾಗಾಗಿ ಹಾವುಗಳಿಗೆ ಪುಂಗಿಯ ನಾದ ಕೇಳಿಸುವುದಿಲ್ಲ. ಪುಂಗಿಯ ಶಬ್ದಕ್ಕೆ ತಲೆದೂಗಲು ಸಾಧ್ಯವೂ ಇಲ್ಲ. ಹಾವಾಡಿಗರು ಪುಂಗಿಯನ್ನು ಊದಿ ಕೈ ಚಮತ್ಕಾರದಿಂದ ಹಾವು ಹೆಡೆಯಾಡಿಸುವಂತೆ ಮಾಡುತ್ತಾರೆ. ನೀವು ಇನ್ನೊಮ್ಮೆ ಹಾವಾಡಿಗನ ಆಟವನ್ನು ಸೂಕ್ಷ್ಮವಾಗಿ ಗಮನಿಸಿ. ಆತ ಹಾವಿನ ಬುಟ್ಟಿಯ ಮುಚ್ಚಳಕ್ಕೆ ಏಟು ಹಾಕಿ ಅಥವಾ ಉಸ್ಹ್ ಎಂದು ಗಾಳಿ ಊದಿ, ಮುಚ್ಚಳವನ್ನು ತೆಗೆಯುತ್ತಾನೆ, ತಕ್ಷಣ ತನ್ನ ಕೈ ಮುಷ್ಟಿಯನ್ನು ಅತ್ತಾ ಇತ್ತಾ ಆಡಿಸುತ್ತಾನೆ. ಹಾವು ಹೆಡೆಬಿಚ್ಚಿ ಸಿಟ್ಟಿನಿಂದ ಆತನ ಕೈಯನ್ನು ನೋಡಲು ಪ್ರಾರಂಭಿಸುತ್ತದೆ. ಅನಂತರ ಹಾವಾಡಿಗ ಪುಂಗಿಯನ್ನು ಊದಲು ಪ್ರಾರಂಭಿಸುತ್ತಾನೆ. ಪುಂಗಿಯ ಚೂಪಾದ ತುದಿಯನ್ನು ಹಾವಿನ ಹೆಡೆಯ ಹತ್ತಿರ ವಾಲಾಡಿಸುತ್ತಾ ಊದುತ್ತಾನೆ. ನಾಗರಹಾವು ಕಡ್ಡಿಯಂತಿರುವ ಪುಂಗಿಯ ಓಡಾಟವನ್ನು ಗಮನಿಸುತ್ತಾ ಹೆಡೆ ಆಡಿಸುತ್ತದೆ. ಪುಂಗಿಯು ಹುಟ್ಟು ಕಿವುಡ ಹಾವಿಗೆ ಹೆದರಿಕೆ ಉಂಟುಮಾಡುವ ಸಾಧನ ಮತ್ತು ಮನುಷ್ಯನಿಗೆ ಇಂಪಾದ ನಾದ ನೀಡುವ ಉಪಕರಣ !

ಹಾವಾಡಿಗ ಯಾವ ಕುಚೇಷ್ಟೆಯನ್ನೂ ಮಾಡದೆ ಪುಂಗಿಯನ್ನು ಎಷ್ಟೇ ಚೆನ್ನಾಗಿ ಊದಿದರೂ ನಾಗರಹಾವು ಹೆಡೆ ಬಿಚ್ಚುವುದಿಲ್ಲ.

೧೪.  ಮಂತ್ರದಿಂದ ಅಥವಾ ಬೇರು ಔಷಧಿಯಿಂದ ವಿಷಯುಕ್ತ ಹಾವು ಕಚ್ಚಿದವರನ್ನು ಬದುಕಿಸಬಹುದೇ?

ಮಂತ್ರಗಳಿಂದ ಹಾವು ಕಚ್ಚಿದವರನ್ನು ಗುಣಪಡಿಸಲು ಸಾಧ್ಯವಿಲ್ಲ. ಹಾಗೆಯೇ ಬೇರು ಔಷಧಿಯಿಂದಲೂ ಸಾಧ್ಯವಿಲ್ಲ. ಅನೇಕರು ಮಂತ್ರಗಳಿಂದ ಮತ್ತು ಬೇರುಗಳಿಂದ ಗುಣಪಡಿಸಿದ್ದೇವೆ ಎಂದು ಹೇಳುತ್ತಾರೆ. ಅವರ ಹೇಳಿಕೆಗಳನ್ನು  ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ವಿಷದ ಹಾವು ಕಚ್ಚಿ ಮಾರಕ ಪ್ರಮಾಣದ ವಿಷವೇರಿದ ಪ್ರಾಣಿಯನ್ನು ಇವರು ಬದುಕಿಸಲಾಗಿಲ್ಲ. ವಿಷದ ಹಾವಿನ ಕಡಿತಕ್ಕೆ ಪ್ರತಿವಿಷ ಚಿಕಿತ್ಸೆ ಮಾತ್ರ ಸರಿಯಾದ ಕ್ರಮ.