ಕೆಲವು ಪ್ರಾಣಿಗಳು ಹಾವುಗಳಂತೆ ಆಕಾರ ಹಾಗೂ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಅಂತಹವನ್ನು ಹಾವುಗಳೆಂದು ತಪ್ಪಾಗಿ ತಿಳಿಯುವ ಸಾಧ್ಯತೆ ಇದೆ. ಉಡ ಮತ್ತು ಹಾವುರಾಣಿಗಳಲ್ಲಿ ಹಾವುಗಳಲ್ಲಿರುವಂತೆ ಎರಡೆಳೆ ನಾಲಗೆಯಿರುತ್ತದೆ. ಆದರೆ ಹಲ್ಲಿಗಳಲ್ಲಿ ಎರಡು ಜೊತೆ ಕಾಲುಗಳಿವೆ.  ಕಣ್ಣುರೆಪ್ಪೆಗಳಿವೆ. ಇಷ್ಟಾಗಿಯೂ ಹಾವುರಾಣಿಯನ್ನು ಮೈತುಂಬ ವಿಷವಿರುವ ಪ್ರಾಣಿಯೆಂದು ಅನೇಕರು ನಂಬುತ್ತಾರೆ. ಹಾವುರಾಣಿ ಅತ್ಯಂತ ಸೌಮ್ಯವಾದ, ವಿಷವಿರದ, ಕೀಟಗಳನ್ನು ನುಂಗಿ ರೈತನಿಗೆ ಸಹಾಯ ಮಾಡುವ ಪ್ರಾಣಿ. ಇದು ವಿಷಯುಕ್ತವೆಂದು ತಪ್ಪು ತಿಳಿದು ಕೊಲ್ಲುವುದು ಸರಿಯಲ್ಲ. ಕೆಲವು ಹಲ್ಲಿಗಳಿಗೆ ಎರಡು ಜೊತೆ ಕಾಲುಗಳು ಸಹ ಇರುವುದಿಲ್ಲ. ಇಂತಹ ಹಲ್ಲಿಗಳನ್ನು ಹಾವುಗಳೆಂದು ತಿಳಿಯುತ್ತಾರೆ. ಉದಾಹರಣೆಗೆ “ಕುರುಡು ಹುಳ” ಅಥವಾ “ನಿಧಾನ ಹುಳ” ಕೈಕಾಲುಗಳಿಲ್ಲದ ಹಲ್ಲಿ. ಸೂಕ್ಷ್ಮವಾಗಿ ಈ ಪ್ರಾಣಿಯನ್ನು ಗಮನಿಸಿದರೆ, ಕಣ್ಣಿಗೆ ರೆಪ್ಪೆಗಳಿರುವುದನ್ನು ಕಿವಿಯ ರಂಧ್ರವಿರುವುದನ್ನೂ ನೋಡಬಹುದು.

ಬಿಲಗಳಲ್ಲಿ ವಾಸಿಸುವ ಕೆಲವು ದ್ವಿಚರಿಗಳು ಹಾವುಗಳಂತೆಯೇ ಕಾಣುತ್ತವೆ. ಉದಾಹರಣೆಗೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಸರಿನಲ್ಲಿ ಕಂಡುಬರುವ ಮಣ್ಣು ಹುಳ ಅಥವಾ ಹಿತ್ತಲ ಮಂಡಲ. ಆದರೆ ದ್ವಿಚರಿಯಾದ ಹಿತ್ತಲ ಮಂಡಲಕ್ಕೂ ಹಾವುಗಳಿಗೂ ವ್ಯತ್ಯಾಸಗಳಿವೆ. ಹಿತ್ತಲ ಮಂಡಲದಲ್ಲಿ ಮೂಗಿನ ಹೊಳ್ಳೆಯಲ್ಲಿ ಸಣ್ಣದಾದ ಎಳೆ ಇದೆ. ಶರೀರದ ತುದಿಯಲ್ಲಿ ಗುದದ್ವಾರವಿದೆ. ಹಾವುಗಳಲ್ಲಿ ಗುದದ್ವಾರವು ಉದರ ಮತ್ತು ಬಾಲದ ಮಧ್ಯೆ ಇರುತ್ತದೆ. ಹಾವುಗಳಲ್ಲಿ ಹುರುಪೆಗಳು ಚರ್ಮದಿಂದ ಹೊರಗಿದ್ದು ಚೆನ್ನಾಗಿ ಕಾಣಿಸುತ್ತವೆ.  ಆದರೆ ದ್ವಿಚರಿಗಳಲ್ಲಿ ಹುರುಪೆಗಳ ಪ್ರಮಾಣ ಕಡಿಮೆ ಮತ್ತು ಅವು ಚರ್ಮದಲ್ಲಿ ಹುದುಗಿಕೊಂಡಿರುತ್ತವೆ. ಹಿತ್ತಲಮಂಡಲ ಹಾವೂ ಅಲ್ಲ ; ಅದರಲ್ಲಿ ವಿಷವೂ ಇಲ್ಲ.

ಸಮುದ್ರದಲ್ಲಿ ವಾಸಿಸುವ ಹಾವು ಮೀನು (ಈಲ್)ಗಳೂ ಹಾವಿನಂತೆಯೇ ಇರುತ್ತವೆ. ಈ ಮೀನಿಗೆ ಹಾವಿನಂತೆಯೇ ನೀಳವಾದ ಶರೀರವಿದೆ ಮತ್ತು ಇತರ ಮೀನುಗಳಲ್ಲಿರುವಂತೆ ಈಜುರೆಕ್ಕೆಗಳಿಲ್ಲ. ಹಾವುಗಳಲ್ಲಿ ಶ್ವಾಸಕೋಶ ವಿರುತ್ತದೆ.  ಆದರೆ ಮೀನುಗಳಲ್ಲಿ ಕಿವುರುಗಳಿರುತ್ತವೆ.

ಮೂಳೆಯಿಲ್ಲದ ಎರೆಹುಳುವನ್ನೂ ಹಾವೆಂದು ನಂಬುವ ಸಾಧ್ಯತೆ ಯುಂಟು. ಎರೆಹುಳಕ್ಕೆ ಹಾವಿನಂತೆ ಮೂಳೆಯೂ ಇಲ್ಲ, ಹುರುಪೆಗಳೂ ಇಲ್ಲ, ಕಣ್ಣುಗಳೂ ಇಲ್ಲ, ಎರೆಹುಳದ ಶರೀರದಲ್ಲಿ ಅನೇಕ ಉಂಗುರ ಆಕಾರದ ವಲಯಗಳಿವೆ.  ಮತ್ತು ಇದರ ಗುದದ್ವಾರ ಶರೀರದ ತುದಿಯಲ್ಲಿರುತ್ತದೆ.

ಮನುಷ್ಯನ ಕರುಳಿನಲ್ಲಿ ಪರೋಪಜೀವಿಯಾಗಿ ವಾಸಿಸುವ ಜಂತು ಹುಳುವೂ ಹಾವಿನಂತೆಯೇ ಕಾಣಿಸುತ್ತದೆ. ಆದರೆ ಜಂತುಹುಳುವಿಗೆ ಮೂಳೆ ಇಲ್ಲ, ಹುರುಪೆಗಳೂ ಇಲ್ಲ, ದವಡೆಗಳೂ ಇಲ್ಲ, ಕಣ್ಣುಗಳೂ ಇಲ್ಲ. “ಕೂದಲು ಹುಳು” ಎಂದು ಕರೆಯುಲ್ಪಡುವ ಗಾರ್ಡಿಯಸ್ ದುಂಡುಹುಳವೂ ಹಾವಿನಂತೆಯೇ ಇರುತ್ತದೆ. ತೆಳ್ಳಗಿನ ಶರೀರದ ಈ ಹುಳುಗಳು ಸುಮಾರು ೬೦ ಸೆಂ.ಮೀ. ಉದ್ದ ಬೆಳೆಯುತ್ತವೆ. ಆದರೆ ಈ ಹುಳಕ್ಕೆ ಹುರುಪೆಗಳಿಲ್ಲ, ಮೂಳೆಯಿಲ್ಲ, ದವಡೆಗಳಿಲ್ಲ. ಇದೊಂದು ದುಂಡುಹುಳು, ಕೂದಲುಹುಳು ತನ್ನ ಜೀವನದ ಒಂದು ಭಾಗವನ್ನು ನೀರಿನಲ್ಲಿ ವಾಸಿಸುವ ಮೃದ್ವಂಗಿ, ಕೀಟ ಅಥವಾ ನೀರು ಹಾವಿನ ಶರೀರದಲ್ಲಿ ಪರೋಪಜೀವಿಯಾಗಿ ಕಳೆಯುತ್ತದೆ. ಇವುಗಳ ಶರೀರದಿಂದ ಮೊಟ್ಟೆಗಳು ಹೊರಬಂದು, ಮೊಟ್ಟೆಗಳೊಡೆದು ಸಾವಿರಾರು ಕೂದಲು ಹುಳುವಿನ ಮರಿಗಳೂ ಒಮ್ಮೆಗೇ ನೀರಿನಲ್ಲಿ ಕಂಡು ಬರುತ್ತವೆ.