ನಮ್ಮ ದೇಶದ ಎಲ್ಲ ಸಂಸ್ಕೃತಿಗಳ, ಭಾಷೆಗಳ ಕಥೆ, ಪುರಾಣ, ವೇದ, ಸಾಹಿತ್ಯ, ಜಾನಪದ, ಶಿಲ್ಪಕಲೆಗಳಲ್ಲಿ ಹಾವುಗಳ ಬಗ್ಗೆ ಒಂದಲ್ಲ ಒಂದು ವಿಷಯ ಪ್ರಸ್ತಾಪಿಸಲಾಗಿದೆ. ಅನೇಕ ವೇಳೆ ಕಥೆ ಪುರಾಣಗಳಲ್ಲಿ ಬರುವ ಸಂಗತಿಗಳನ್ನೇ ಸತ್ಯವೆಂದು ನಂಬುವ ಮತ್ತು ಆ ವಿಚಾರವನ್ನೇ ಪ್ರಚಾರ ಮಾಡುವ ಜನರು ದುರದೃಷ್ಟವಶಾತ್ ನಮ್ಮಲ್ಲಿ ಹೆಚ್ಚಿದ್ದಾರೆ. ಅಂತಹ ಕಥೆ, ಪುರಾಣ ಪ್ರಸಂಗಗಳನ್ನು ಪಠ್ಯಪುಸ್ತಕಗಳಲ್ಲಿಟ್ಟಾಗ ಅಥವಾ ಮನರಂಜನೆಯ ಚಲನಚಿತ್ರಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದಾಗ ಅನೇಕ ತಪ್ಪು ತಿಳುವಳಿಕೆಗಳನ್ನು ವಿದ್ಯಾವಂತರು ಮತ್ತು ಅವಿದ್ಯಾವಂತರೂ ಸತ್ಯವೆಂದೇ ನಂಬುತ್ತಾರೆ.


ಕೇವಲ ಒಂದು ಸಾರಿ ಕಚ್ಚುವುದರಿಂದ ಮನುಷ್ಯನನ್ನು ಸಾಯಿಸುವ ಶಕ್ತಿ ಹಾವಿಗೆ ಇರಬೇಕಾದರೆ, ಹಾವುಗಳಿಗೆ ಇನ್ನೂ ಹೆಚ್ಚಿನ ಶಕ್ತಿ ಇರಬಹುದೆಂದು ನಂಬಿ ನಾಗಾರಾಧನೆ ಪ್ರಾರಂಭವಾಗಿರಬಹುದು. ಅಲ್ಲದೆ ಪುರಾಣಗಳ ಬಗ್ಗೆ ಹೇಳಿದರೆ ಸಾಮಾನ್ಯ ಜನ ಭಯ-ಭಕ್ತಿಯಿಂದ ಕೇಳಬಹುದೆಂದು ನಾಗರ ಹಾವಿನ ಪಾತ್ರವನ್ನು ಸೃಷ್ಟಿಸಿರಬಹುದು. “ಆದಿಶೇಷನ ಹೆಡೆಯ ಮೇಲೆ ಈ ಭೂಮಿಯಿದೆ” “ನಾಗಕನ್ಯೆಯರು ಅತ್ಯಂತ ಸುಂದರವಾದ ಕನ್ಯೆಯರು”.

“ನಾಗಮಣಿ ಅತ್ಯಂತ ವಿಶಿಷ್ಟವಾದ ಸ್ವಯಂ ಪ್ರತಿಭೆಯುಳ್ಳ ಆಭರಣ” ಮುಂತಾದ ಪ್ರಸಂಗಗಳು ರೋಚಕ ನಿರೂಪಣೆಯಿಂದ ಕಲ್ಪನಾ ಲೋಕಕ್ಕೆ ಕೊಂಡೊಯ್ಯಲು ಮಾತ್ರ ಇವೆಯೆಂಬುದನ್ನು ನಾವು ತಿಳಿಯಬೇಕು.

ಕೋಟೆಕೊತ್ತಲಗಳ ಮೇಲೆ ನಾಗರಹಾವನ್ನು ಭದ್ರತೆಯ ಸಂಕೇತವಾಗಿ ಕೆತ್ತಿರುತ್ತಾರೆ. ರಾಜ ಹಾಗೂ ದೇವತೆಗಳ ವಿಗ್ರಹದ ಹಿಂದೆ ಪ್ರಭಾವಳಿಯಾಗಿ ಐದು ಅಥವಾ ಏಳು ಹೆಡೆಗಳ ಸರ್ಪವನ್ನು ಕಡೆದಿರುತ್ತಾರೆ. ಇವರು ಅಭಯ ಹಸ್ತ ನೀಡಬಲ್ಲ ಶಕ್ತಿಯುಳ್ಳವರು ಎಂಬುದು ಈ ಸಂಕೇತದ ಅರ್ಥವೆಂದು ಶಿಲ್ಪಕಲಾ ತಜ್ಞರು ಹೇಳುತ್ತಾರೆ. ನಮ್ಮಲ್ಲಿ ನಾಗ ಎಂಬ ಜನಾಂಗವೇ ಇದೆ. ನಾಗರ ಹಾವು ದುರ್ಯೋಧನನ ಲಾಂಛನವಾಗಿತ್ತು. ಇಂದಿಗೂ ನಾಗರಾಜ, ಕಾಳಿಂಗ, ನಾಗಭೂಷಣ, ನಾಗಮಣಿ, ನಾಗವೇಣಿ ಮುಂತಾದ ಹೆಸರುಗಳು ರೂಢಿಯಲ್ಲಿವೆ. ನಾಗರಕಲ್ಲು, ನಾಗರಕಟ್ಟೆ ಹೆಚ್ಚೂ ಕಡಿಮೆ ಎಲ್ಲಾ ಊರುಗಳಲ್ಲಿವೆ. ನಾಗರಹಾವಿಗೆಂದೇ ನಾಗಪಂಚಮಿ ಹಬ್ಬವನ್ನು ಆಚರಿಸುತ್ತಾರೆ. ಭಾರತ, ಸಿರಿಯ, ಜಪಾನ್, ಚೀನಾ ಮುಂತಾದ ದೇಶಗಳಲ್ಲಿಯೂ ಹಾವುಗಳನ್ನು ಪೂಜಿಸುತ್ತಾರೆ. ಕಾವ್ಯ, ವಚನ ಮತ್ತು ಜಾನಪದ ಸಾಹಿತ್ಯದಲ್ಲಿಯೂ ಹಾವುಗಳನ್ನು ಸಂಕೇತಗಳನ್ನಾಗಿ ಮತ್ತು ಉಪಮೆಯಾಗಿ ಉಪಯೋಗಿಸುತ್ತಾರೆ.

ಆದರೆ ವಾಸ್ತವ ಪ್ರಪಂಚದಲ್ಲಿ ನಾವು ಜೀವಿಸುತ್ತೇವೆ. ಯಾವುದೇ ಕಥಾ ಪ್ರಸಂಗವನ್ನು ವಿವೇಚನೆಯಿಂದ ಪರಿಗ್ರಹಿಸಬೇಕು. ನಾಗರಹಾವುಗಳು ಮನುಷ್ಯರ ರೂಪ ಪಡೆಯುವುದು, ದ್ವೇಷ ಸಾಧಿಸುವುದು, ಪೂಜಿಸಿದವರಿಗೆ ಸಹಾಯ ಮಾಡುವುದು ಚಲನಚಿತ್ರಗಳಲ್ಲಿ ಸಾಧ್ಯವೇ ಹೊರತು ವಾಸ್ತವದಲ್ಲಿ ಅಲ್ಲ ಎಂಬುದನ್ನು ನಾವು ತಿಳಿಯಬೇಕು.