“ಕಲ್ಲನಾಗರ ಕಂಡರೆ ಹಾಲನೆರೆಯೆಂಬರು,

ದಿಟದ ನಾಗರ ಕಂಡರೆ ಕೊಲ್ಲೆಂಬರು”

– ಬಸವಣ್ಣ

ಹಾವನ್ನು ಕಂಡ ತಕ್ಷಣ ಭಯ, ಆತಂಕ ಉಂಟಾದರೂ ನಮ್ಮಲ್ಲಿ ಹಾವನ್ನು ಕೊಲ್ಲಲು ಮುಂದಾಗುವವರು ಹೆಚ್ಚು. ಅದು ವಿಷದ ಅಥವಾ ವಿಷವಲ್ಲದ ಹಾವೇ ಎಂದು ತಿಳಿಯುವ ಗೋಜಿಗೇ ಹೋಗುವುದಿಲ್ಲ. ಒಬ್ಬರು ಕೋಲು ತಂದರೆ ಇನ್ನೊಬ್ಬರು ಭರ್ಜಿ ತರುತ್ತಾರೆ, ಮತ್ತೊಬ್ಬರು ದೊಡ್ಡ ಕಲ್ಲನ್ನೇ ಎಸೆಯಲು ಸಿದ್ಧರಾಗುತ್ತಾರೆ. ಒಟ್ಟಿನಲ್ಲಿ ಊರಿನ ಎಲ್ಲರೂ ಸೇರಿ ಸಂಭ್ರಮದಿಂದ ಹಾವನ್ನು ಕೊಲ್ಲಲು ಮುಂದಾಗುತ್ತಾರೆ. ಬಹುಶಃ ಈ ಸ್ವಭಾವಕ್ಕೆ ಹಾವುಗಳ ಬಗ್ಗೆ ನಮಗಿರುವ ಭಯವೇ ಮುಖ್ಯವಾದ ಕಾರಣ. ಅಷ್ಟು ಭಯ ಉಂಟಾಗುವುದಕ್ಕೆ ಅವುಗಳ ಬಗ್ಗೆ ನಮಗಿರುವ ಅಜ್ಞಾನವೇ ಮೂಲ ಕಾರಣ! ಹಾವನ್ನು ಕೊಲ್ಲುವುದು ಗಂಡಸುತನದ ಪ್ರತೀಕವೆಂದು ನಮ್ಮಲ್ಲಿ ಕೆಲವರು ನಂಬಿದ್ದಾರೆ. ನಾವೇಕೆ ಹಾವುಗಳನ್ನು ಅವುಗಳ ಪಾಡಿಗೆ ಬಿಡಬಾರದು? ವಿಷವಲ್ಲದ ಸೌಮ್ಯವಾದ ಹಾವುಗಳನ್ನು ಕೊಂದು ನಾವು ಸಾಧಿಸುವುದಾದರೂ ಏನನ್ನು?

ಹಾವುಗಳನ್ನು ಕೊಲ್ಲುವುದೇ ಕೆಲವರಿಗೆ ಜೀವನದ ಕಸುಬು. ಇವರು ಹಾವುಗಳನ್ನು ಕೊಂದು, ಚರ್ಮ ಸುಲಿದು, ಹದಮಾಡಿ ಮಾರುತ್ತಾರೆ. ಹಾವಿನ ಚರ್ಮಕ್ಕೆ ೨೫ ರಿಂದ ೫೦ ರೂಪಾಯಿಗಳ ಬೆಲೆಯಿದೆ. ಹಾವಿನ ಚರ್ಮವನ್ನು ಕೈಚೀಲ, ಪಾಕೆಟ್, ಬೆಲ್ಟ್ ಮತ್ತು ಬೂಟ್ಸ್‌ಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ವಿದೇಶಗಳಲ್ಲಿ ಈ ವಸ್ತುಗಳಿಗೆ ಅಪಾರವಾದ ಬೇಡಿಕೆಯಿದೆ. ಆದ್ದರಿಂದ ಹಾವಿನ ಚರ್ಮವನ್ನು ಕದ್ದು ರಫ್ತು ಮಾಡುತ್ತಾರೆ. ೧೯೬೮ರಲ್ಲಿ ಒಂದು ಅಂದಾಜಿನ ಪ್ರಕಾರ ಹತ್ತು ಮಿಲಿಯನ್ ಕೇರೆಹಾವು, ನಾಗರ, ಹೆಬ್ಬಾವು ಮುಂತಾದವುಗಳನ್ನು ಚರ್ಮಕ್ಕಾಗಿಯೇ ಕೊಲ್ಲಲಾಯಿತು. ಈಗ ಭಾರತ ಸರ್ಕಾರವು ಎಲ್ಲಾ ಹಾವುಗಳ ಚರ್ಮದ ರಫ್ತನ್ನು ನಿಷೇಧಿಸಿದೆ. ಹೆಬ್ಬಾವನ್ನು ರಕ್ಷಿತ ಹಾವೆಂದು ಘೋಷಿಸಲಾಗಿದೆ. ಇಷ್ಟಾಗಿಯೂ ಹಾವುಗಳ ಚರ್ಮದ ಕಳ್ಳ ವ್ಯಾಪಾರ ನಡೆಯುತ್ತಲೇ ಇದೆ. ಆದ್ದರಿಂದ ನಾವು ಹಾವಿನ ಚರ್ಮದ ವಸ್ತುಗಳನ್ನು ಕೊಳ್ಳದಿರೋಣ. ಒಂದು ವೇಳೆ ಕೊಳ್ಳುವವರನ್ನು ಕಂಡರೆ ಅವರಿಗೆ ತಿಳಿ ಹೇಳಿ ಹಾವಿನ ಚರ್ಮದ ವಸ್ತುಗಳನ್ನು ಕೊಂಡುಕೊಳ್ಳದಂತೆ ಮಾಡೋಣ. ಇದರಿಂದ ಒಂದು ಕೇರೆಹಾವು ಅಥವಾ ಮಣ್ಣುಮುಕ್ಕ ಅಥವಾ ಒಳ್ಳೆಹಾವಿನ ಜೀವವನ್ನು ಉಳಿಸಿದ ಭಾಗ್ಯ ನಮ್ಮದಾಗುತ್ತದೆ. ನಾವು ಕುರಿ ಕೋಳಿ ಸಾಕುವಂತೆ ಹಾವುಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾಕಿ ಅಭಿವೃದ್ಧಿಪಡಿಸಿದರೆ, ಆಗ ಮಾತ್ರ ಕೆಲವು ಹಾವುಗಳನ್ನು ಚರ್ಮಕ್ಕೆ ಅಥವಾ ಮಾಂಸಕ್ಕೆ ಸಾಯಿಸಬಹುದು. ಮಧ್ಯಪ್ರದೇಶ ಮತ್ತು ಅರುಣಾಚಲ ಪ್ರದೇಶದ ಕೆಲವು ಬುಡಕಟ್ಟು ಜನಾಂಗಗಳು ಹಾವುಗಳನ್ನು ತಿನ್ನುತ್ತಾರೆ. ಚೀನಾ, ಬರ್ಮಾ ಮತ್ತು ಅಮೇರಿಕಾ ದೇಶಗಳಲ್ಲಿ ಹಾವುಗಳನ್ನು ಅದರಲ್ಲಿಯೂ ಹೆಬ್ಬಾವನ್ನು ಆಹಾರವಾಗಿ ಉಪಯೋಗಿಸುತ್ತಾರೆ.

ಹಾವುಗಳಿಂದ ನಮಗೇನು ಪ್ರಯೋಜನ ? ನಾವು ಬೆಳೆಯುವ ಆಹಾರ ಧಾನ್ಯಗಳ ಸುಮಾರು ಶೇ.೫೦ರಷ್ಟನ್ನು ಇಲಿಗಳು ತಿಂದುಹಾಕುತ್ತವೆ. ಸುಗ್ಗಿಯಕಾಲದಲ್ಲಿ ನೀವು ಗದ್ದೆ ಬದುಗಳ ಸಮೀಪ ಇಲಿಬಿಲಗಳನ್ನು ನೋಡಿರಬಹುದು. ಒಂದೊಂದು ಬಿಲದಲ್ಲಿ ೧೦ ಕೆ.ಜಿ.ವರೆಗೂ ಧಾನ್ಯ ಸಂಗ್ರಹವಿರುತ್ತದೆ. ಬಿಲದೊಳಕ್ಕೂ ನುಗ್ಗಿ ಇಲಿಗಳನ್ನು ಹಿಡಿದು ತಿನ್ನುವ ಪ್ರಾಣಿಗಳಲ್ಲಿ ಹಾವುಗಳೇ ಅಗ್ರಮಾನ್ಯ. ಹಾವುಗಳು ಇಲಿಗಳನ್ನು ತಿಂದಮೇಲೆ ಅನೇಕ ವೇಳೆ ಬಿಲಗಳಲ್ಲಿಯೇ ವಾಸಿಸಲು ಪ್ರಾರಂಭಿಸುತ್ತವೆ. ನಾವು ಬೋನು, ಪಾಷಾಣ ಮುಂತಾದ ವಿಧಾನಗಳನ್ನು ಉಪಯೋಗಿಸುತ್ತಿದ್ದರೂ ಇಲಿಗಳ ನಿಯಂತ್ರಣ ಸಾಧ್ಯವಾಗಿಲ್ಲ. ಪಾಷಾಣಗಳಿಗೆ ಇಲಿಗಳು ಬೇಗ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಬೋನಿನ ಹತ್ತಿರ ಸುಳಿದಾಡುವುದನ್ನೇ ನಿಲ್ಲಿಸುತ್ತವೆ. ಬೋನಿನ ಹತ್ತಿರ ಬಂದರೂ, ಒಳಕ್ಕೆ ಬೀಳದಂತೆ ತಂತ್ರಮಾಡಿ ಆಹಾರದ ತುಣುಕುಗಳನ್ನು ತಿಂದು ಹೋಗುತ್ತವೆ. ಒಮ್ಮೊಮ್ಮೆ ಇಲಿಗಳು ಸಾಯಲೆಂದು ಸಿಂಪಡಿಸದ ಪಾಷಾಣವನ್ನು ದನಕರುಗಳು ತಿಂದು ಸತ್ತಿರುವುದೂ ಉಂಟು. ಲಕ್ಷಾಂತರ ವರ್ಷಗಳಿಂದ ನಿಸರ್ಗ ಸೃಷ್ಟಿಸಿದ ಹಾವುಗಳು ಇಲಿಗಳನ್ನು ನಿಯಂತ್ರಿಸುವುದಕ್ಕೆ ಹೇಳಿ ಮಾಡಿಸಿದಂತಿವೆ.

ಹಾವಿನ ವಿಷದಿಂದಲೂ ನಮಗೆ ಪ್ರಯೋಜನವಿದೆ. ಹಾವಿನ ವಿಷದಲ್ಲಿ ಉಪಯುಕ್ತ ರಾಸಾಯನಿಕಗಳಿವೆ. ಇವನ್ನು ಅನೇಕ ಖಾಯಿಲೆಗಳಿಗೆ ಔಷಧವನ್ನಾಗಿ ಉಪಯೋಗಿಸಬಹುದು. ನರಕಯಾತನೆಯ ನೋವು ನಿವಾರಿಸುವುದಕ್ಕೆ “ಕೋಬ್ರಾಕ್ಸಿನ್” ಎಂಬ ಔಷಧವನ್ನು ನಾಗರಹಾವಿನ ವಿಷದಿಂದ ತಯಾರಿಸುತ್ತಾರೆ. ಆಯುರ್ವೇದ ಔಷಧ ಪದ್ಧತಿಯಲ್ಲಿ ನಾಗರ ಹಾವಿನ ವಿಷವನ್ನು ಕ್ಷಯರೋಗದ ಔಷಧಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ರಕ್ತ ಹೆಪ್ಪುಗಟ್ಟದಿರುವ ಕಾಯಿಲೆಗಳಿಗೆ ಮಂಡಲ ಹಾವಿನ ವಿಷವನ್ನು ಔಷಧವನ್ನಾಗಿ ಉಪಯೋಗಿಸು ತ್ತಾರೆ. ಹಿಮೋಫಿಲಿಯ ಮತ್ತು ಅಂತರ್ ರಕ್ತಸ್ರಾವದ ಖಾಯಿಲೆಗಳಿಗೆ ಸೂಕ್ಷ್ಮ ಪ್ರಮಾಣದಲ್ಲಿ ಮಂಡಲ ಹಾವಿನ ವಿಷವನ್ನು ನೀಡಿದಾಗ ಉತ್ತಮ ಫಲಿತಾಂಶ ಕಂಡುಬಂದಿದೆ. ಆಯುರ್ವೇದ ಹಾಗೂ ನಾಟಿ ಔಷಧ ಪದ್ಧತಿಯಲ್ಲಿ ಹಾವಿನ ಮಾಂಸ, ಚರ್ಮ ಮತ್ತು ಪೊರೆಯಿಂದ ನಾನಾ ರೀತಿಯ ಔಷಧಗಳನ್ನು ತಯಾರಿಸಿ ರೋಗವನ್ನು ಗುಣಪಡಿಸಲು ಬಳಸುತ್ತಾರೆ. ಯುನಾನಿ ಔಷಧ ಪದ್ಧತಿಯಲ್ಲಿ ಹಾವಿನ ರಕ್ತವನ್ನು ತೊನ್ನು ರೋಗ ವಾಸಿ ಮಾಡಲು ಪ್ರಯೋಗಿಸುತ್ತಾರೆ.

ಹಾವಿನ ವಿಷದಲ್ಲಿ ಅಪರೂಪದ ಕಿಣ್ವಗಳಿವೆ. ಈ ಕಿಣ್ವಗಳನ್ನು ಬೇರ್ಪಡಿಸಿ ಅನೇಕ ಸಂಶೋಧನೆಗಳಿಗೆ ಹಾವಿನ ವಿಷವನ್ನು ವಿಜ್ಞಾನಿಗಳು ಉಪಯೋಗಿಸು ತ್ತಿದ್ದಾರೆ. ಆದ್ದರಿಂದ ಹಾವಿನ ವಿಷಕ್ಕೆ ವಿಪರೀತವಾದ ಬೇಡಿಕೆಯಿದೆ. ೧೦ ಮಿ.ಗ್ರಾಂ. ವಿಷಕ್ಕೆ ೧೨೦ ರೂ.ಗಳಿಗೂ ಬೆಲೆಯಿದೆ. ವಿಷದ ಹಾವು ಕಚ್ಚಿದವರನ್ನು ಗುಣಪಡಿಸಲು ಬೇಕಾದ ಪ್ರತಿವಿಷದ ಉತ್ಪಾದನೆಗೆ ಹಾವಿನ ವಿಷ ಬೇಕೇ ಬೇಕು. ಮುಂಬಯಿಯಲ್ಲಿರುವ ಹಾಫ್‌ಕಿನ್ ಸಂಶೋಧನಾಲಯ ಮತ್ತು ಕೊಲಾಲಿಯ ಕೇಂದ್ರ ಸಂಶೋಧನಾಲಯದಲ್ಲಿ ಹಾವಿನ ವಿಷವನ್ನು ಉಪಯೋಗಿಸಿಕೊಂಡು ಪ್ರತಿವಿಷ ತಯಾರಿಸುತ್ತಾರೆ.

ಬೇಟೆಗಾರ ಜೀವಿಗಳಾಗಿ ಹಾವುಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಾಣಿ, ಸಸ್ಯಗಳೊಂದಿಗೆ ಆಹಾರದ ಸರಪಳಿಯಲ್ಲಿ ಹಾವುಗಳು ಒಂದು ಮುಖ್ಯ ಕೊಂಡಿ. ಈ ಕೊಂಡಿ ಕಳಚಿದಲ್ಲಿ ಆಗಬಹುದಾದ ಅನಾಹುತದ ಪರಿಣಾಮ ನಮಗಿನ್ನೂ ಸರಿಯಾಗಿ ಗೊತ್ತಿಲ್ಲ. ಮೊದಲು ನಾವು ಪ್ರತಿಯೊಂದು ಪ್ರಭೇದದ ಹಾವಿನ ಪಾತ್ರ ನಿಸರ್ಗದಲ್ಲಿ ಹೇಗಿದೆ ಎಂಬುದನ್ನು ತಿಳಿದಲ್ಲಿ ಮಾತ್ರ ಅವುಗಳ ನಿಜವಾದ ಪ್ರಾಮುಖ್ಯವನ್ನು ಅರಿಯಲು ಸಾಧ್ಯ. ಅವುಗಳ ಜೀವನ ಕ್ರಮವನ್ನು ಅರಿತಲ್ಲಿ ನಮಗಿರುವ ಭಯ, ಆತಂಕ ನಿವಾರಣೆಯಾಗಿ, ಪ್ರೀತಿ ಪ್ರೇಮ ಹುಟ್ಟಲು ಸಾಧ್ಯ. ಅಷ್ಟೇ ಅಲ್ಲದೆ ನಿಸರ್ಗದ ಹಲವು ಆಶ್ಚರ್ಯಗಳಲ್ಲಿ ಅಪರೂಪದ ಮಾದರಿಗಳಾದ ಈ ಹಾವುಗಳು ನಮ್ಮ ಮುಂದಿನ ಪೀಳಿಗೆಯ ಜನರಿಗೆ ಮತ್ತು ಮಕ್ಕಳಿಗೆ ಜೀವಂತ ನೋಡುವುದಕ್ಕೆ ಮತ್ತು ತಿಳಿಯುವುದಕ್ಕೆ ಇರುವುದೂ ಸಹ ಮುಖ್ಯವಲ್ಲವೇ?