ನಮ್ಮ ಸುತ್ತಲ ಜಗತ್ತಿನ ಸುಂದರ ಹಾಗೂ ಆಶ್ಚರ್ಯಕರ ಪ್ರಾಣಿಗಳಲ್ಲಿ ಹಾವುಗಳು ಪ್ರಮುಖವಾದವು. ಇವುಗಳ ಮೈಬಣ್ಣ, ಶರೀರದ ಆಕಾರ, ಚಲನೆಯ ರೀತಿ, ವಿಷದ ಪ್ರಭಾವ ಮತ್ತು ಜೀವನಕ್ರಮ ಬೇರೆಲ್ಲ ಪ್ರಾಣಿಗಳಿಗಿಂತ ವಿಶಿಷ್ಟ. ಪ್ರಕೃತಿಯ ಆಶ್ಚರ್ಯಗಳನ್ನು ಅರಿತುಕೊಳ್ಳಲು ಬಯಸುವವರಿಗೆ ಹಾವುಗಳು ತುಂಬಾ ಆಕರ್ಷಕ ಹಾಗೂ ಅನುಕೂಲಕರ ಜೀವಿಗಳು, ಏಕೆಂದರೆ ಮನೆಯ ಸುತ್ತಲ ಆವರಣದಲ್ಲಿ, ಗಿಡಗಂಟೆ ಪೊದೆಗಳ ಒಳಗೆ, ಹೊಲ-ಗದ್ದೆಗಳಲ್ಲಿ, ಇಲಿಯ ಬಿಲ ಮತ್ತು ಹುತ್ತಗಳ ಸಮೀಪ ನಾವು ಹಾವುಗಳನ್ನು ಕಾಣಬಹುದು.

ನೋಡಿದ ತಕ್ಷಣ ವಿಷದ ಹಾವೆಂದು ಹೆದರಿ ಓಡುವವರು ಕೆಲವರಿದ್ದರೆ, ಭಯ-ಭಕ್ತಿಯಿಂದ ಕೈಮುಗಿಯುವವರು ಹಲವರಿರುತ್ತಾರೆ. ಅನೇಕರು “ಹೊಡೆಯಿರಿ”, “ಸಾಯಿಸಿ” ಎಂದು ಕೂಗಿ ಹಾವನ್ನು ಸಾಯಿಸಿರುವುದನ್ನು ನೀವು ಕಂಡಿರಬಹುದು. ನಿಮಗೆ ಕಂಡುಬರುವ ಎಲ್ಲ ಹಾವುಗಳೂ ವಿಷದ ಹಾವುಗಳಲ್ಲ. ವಿಷವಲ್ಲದ ಅನೇಕ ಹಾವುಗಳನ್ನು ನೀವು ಸಾಕುಪ್ರಾಣಿಗಳಂತೆ ಸಾಕಬಹುದು ಮತ್ತು ಕೈಯಿಂದ ಮುಟ್ಟಲೂಬಹುದು. ಅದಕ್ಕೆ ವಿಷವಲ್ಲದ ಹಾವುಗಳನ್ನು ಸುಲಭವಾಗಿ ಗುರುತಿಸುವುದನ್ನು ಮೊದಲು ನೀವು ತಿಳಿದು ಕೊಳ್ಳಬೇಕು.

ಹಾವುಗಳಿಗೂ ನಮಗೂ ಬಿಡಿಸಲಾಗದ ಸಂಬಂಧವಿದೆ. ನಮ್ಮ ಸಂಸ್ಕೃತಿಯಲ್ಲಿ ಮತ್ತು ದಿನನಿತ್ಯ ಜೀವನದಲ್ಲಿ ಹಾವುಗಳಿಗೆ ವಿಶಿಷ್ಟವಾದ ಸ್ಥಾನವಿದೆ. ನಾಗಜನಾಂಗ, ನಾಗಾಲ್ಯಾಂಡ್, ನಾಗರಕಲ್ಲು, ನಾಗಪಂಚಮಿ, ವೈದ್ಯಚಿನ್ಹೆ, ಹಾವಾಡಿಗ, ಹಾವಿನಚರ್ಮ ಮಾರಾಟ, ಸರ್ಪಸಂಗ್ರಹಾಲಯ, ಸರ್ಪವಿಷ ಸಂಶೋಧನೆ- ಹೀಗೆ ನಮ್ಮ ಜೀವನದಲ್ಲಿ ಹಾವುಗಳು ಹಾಸುಹೊಕ್ಕಾಗಿ ಬೆರೆತಿವೆ.

ನಾಗರಾಜ, ನಾಗಮಣಿ, ನಾಗಭೂಷಣ, ನಾಗಾಭರಣ ಮುಂತಾದ ಹೆಸರುಗಳು ಜನಪ್ರಿಯ ಹಾಗೂ ಸಾಮಾನ್ಯ ಹೆಸರುಗಳು.

ಪ್ರಪಂಚದಲ್ಲಿ ಸುಮಾರು ೨೦೦೦ ಪ್ರಭೇದದ ಹಾವುಗಳಿವೆ. ನಮ್ಮ ದೇಶದಲ್ಲಿ ೨೧೬ ಪ್ರಭೇದದ ಹಾವುಗಳಿವೆ. ಅವುಗಳಲ್ಲಿ ೫೨ ಮಾತ್ರ ಮನುಷ್ಯನಿಗೆ ಕಚ್ಚಿದಾಗ ವಿಷವೇರುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ೧೪೫ ಪ್ರಭೇದದ ಹಾವುಗಳಿವೆ.

ಬಳುಕುವ ದುಂಡನೆಯ ಶರೀರದ ಮೇಲೆ ಬಣ್ಣ ಬಣ್ಣದ ಪಟ್ಟೆಗಳನ್ನು ಹೊಂದಿ, ಹೊಟ್ಟೆಯ ಮೇಲೆ ತೆವಳುತ್ತಾ ಸರಿಯುವ ಹಾವುಗಳ ಜೀವನ ಅತ್ಯಂತ ಕುತೂಹಲಕಾರಿ. ಭೂಮಿಯ ಮೇಲೆ ಮನುಷ್ಯನ ವಿಕಾಸಕ್ಕಿಂತ ಮೊದಲು ಇಂದಿಗೆ ಸುಮಾರು ೨೪೦ ಮಿಲಿಯನ್ ವರ್ಷಗಳ ಹಿಂದೆ ಹಾವುಗಳು ವಿಕಾಸಗೊಂಡವು. ಹಲ್ಲಿ ಮತ್ತು ಮೊಸಳೆಗಳಂತೆ ಹಾವುಗಳು ಸರೀಸೃಪ ವರ್ಗಕ್ಕೆ ಸೇರಿವೆ. ಬಿಲದಲ್ಲಿ ವಾಸಮಾಡಲು ಯೋಗ್ಯ ಹೊಂದಾಣಿಕೆಗಳು ಅವಕ್ಕಿವೆ.

ಕೈಕಾಲುಗಳಿಲ್ಲದ ಈ ನೀಳ ಶರೀರಿಗಳನ್ನು ತೆವಳುವ ಪ್ರಾಣಿಗಳು ಸರ್ಪಗಳೆಂದು ಕರೆಯುವುದು ಅತ್ಯಂತ ಯುಕ್ತ. ಇವುಗಳ ಶರೀರ ಹುರುಪೆಗಳಿಂದ ಆವೃತವಾಗಿದೆ. ಶರೀರವನ್ನು ತಲೆ, ಉದರ ಮತ್ತು ಬಾಲವೆಂದು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು. ತಲೆಯ ತುದಿಯಲ್ಲಿ ಅಗಲವಾದ ಬಾಯಿಯಿದೆ. ಬಾಯಿ ಎತ್ತ ಬೇಕಾದರೂ ಬಾಗಬಲ್ಲದು. ಅಗಲವಾಗಿ ಹಿಗ್ಗಬಲ್ಲದು. ಆದ್ದರಿಂದ ಹಾವುಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ನುಂಗಬಲ್ಲವು.  ಕೆಳದವಡೆ ಮಧ್ಯದಲ್ಲಿ ಸೀಳು ಇದೆ. ಈ ಸೀಳಿನ ಮುಖಾಂತರ ಎರಡೆಳೆ ನಾಲಗೆಯು ಆಗಾಗ್ಗೆ ಹೊರಬರುತ್ತಿರುತ್ತದೆ. ಹಾವು ನಾಲಗೆಯ ಮುಖಾಂತರ ವಾಸನೆಯನ್ನು ಗ್ರಹಿಸುತ್ತದೆ. ಗಾಳಿಯಲ್ಲಿರುವ ವಾಸನೆಯ ಕಣಗಳನ್ನು ನಾಲಗೆ ಬಾಯಿಯೊಳಗಿನ ಜಾಕಬ್‌ಸನ್ ಅಂಗ ಎಂಬ ಭಾಗಕ್ಕೆ ಸಾಗಿಸುತ್ತದೆ. ಉಸಿರಾಡಲು ಬಾಯಿಯ ಮೇಲ್ಭಾಗದಲ್ಲಿ ಎರಡು ಮೂಗಿನ ಹೊಳ್ಳೆಗಳಿರುತ್ತವೆ. ಹಾವಿನ ಕಣ್ಣುಗಳಿಗೆ ನಮ್ಮಂತೆ ಕಣ್ಣು ರೆಪ್ಪೆಗಳಿಲ್ಲ. ಆದ್ದರಿಂದ ಹಾವುಗಳು ಕಣ್ಣು ಮಿಟುಕಿಸಲು ಸಾಧ್ಯವೇ ಇಲ್ಲ. ಆದರೆ ಕಣ್ಣುಗಳ ಮೇಲಿನ ಪಾರದರ್ಶಕವಾದ ಹುರುಪೆ ಕಣ್ಣಿಗೆ ರಕ್ಷಣೆ ನೀಡುತ್ತದೆ. ಪಾರದರ್ಶಕವಾದ ಹುರುಪೆಯಿರುವುದರಿಂದ ಹಾವುಗಳು ಒಂದೇ ಸಮನೆ ದಿಟ್ಟಿಸಿ ನೋಡುವಂತೆ ನಮಗೆ ಭಾಸವಾಗುತ್ತದೆ. ಹಾವುಗಳಿಗೆ ತೀಕ್ಷ್ಣದೃಷ್ಟಿಯಿಲ್ಲ. ಅನೇಕ ವೇಳೆ ಅವು ಸಮೀಪದ ವಸ್ತುಗಳನ್ನೇ ಗುರುತಿಸಲಾರವು.

ನಮ್ಮಂತೆ ಅವಕ್ಕೆ ಹೊರಕಿವಿಗಳಿಲ. ಕಿವಿಯ ತಮಟೆಗಳೂ ಇಲ್ಲ. ಆದ್ದರಿಂದ ಎಲ್ಲಾ ಹಾವುಗಳು ಹುಟ್ಟು ಕಿವುಡು ಪ್ರಾಣಿಗಳು. ಆದರೆ ನೆಲದಲ್ಲಿನ ಕಂಪನಗಳನ್ನು ಅವು ಗ್ರಹಿಸಬಲ್ಲವು.

ಹಾವುಗಳ ಗಾತ್ರ ಮತ್ತು ಉದ್ದ ವೈವಿಧ್ಯಮಯ. ಕಾಳಿಂಗ ಸರ್ಪ ೫ ಮೀಟರಿಗೂ ಹೆಚ್ಚು ಉದ್ದ ಬೆಳೆಯುತ್ತದೆ. ಅದರ ತೋರ ಮನುಷ್ಯನ ತೋಳಿನಷ್ಟಿರುತ್ತದೆ. ಹೆಬ್ಬಾವು ೭ ರಿಂದ ೮ ಮೀಟರ್ ಉದ್ದ ಬೆಳೆಯುತ್ತದೆ. ತೊಡೆಗಿಂತ ಹೆಚ್ಚು ತೋರ ಇರುತ್ತದೆ. ಆದರೆ ಮಣ್ಣಾವು ಕೇವಲ ೧-೧೨ ಸೆಂಟಿ ಮೀಟರ್ ಉದ್ದವೂ ಎರೆಹುಳುವಷ್ಟು ತೋರವೂ ಇರುತ್ತದೆ. ಇದನ್ನು ಹಾವೆಂದು ನಂಬುವುದೇ ಕಷ್ಟ, ಅಷ್ಟು ಚಿಕ್ಕದು.

ಮರಳುಗಾಡು, ಹಳ್ಳಕೊಳ್ಳ, ನದಿ, ಸಾಗರ, ಸರೋವರ, ಹೊಲಗದ್ದೆ ಗಳಿಂದ ಹಿಡಿದು ಕಾಡು, ಬೆಟ್ಟಗುಡ್ಡಗಳವರೆಗೆ ಮತ್ತು ಹಿಮಾಲಯ ಪರ್ವತಗಳ ೫೦೦೦ ಮೀಟರ್‌ಗಳ ಎತ್ತರದಲ್ಲಿಯೂ ಹಾವುಗಳು ವಾಸಿಸುತ್ತವೆ. ಅನೇಕ ಹಾವುಗಳು ಇಲಿಯ ಬಿಲಗಳಲ್ಲಿ, ಹುತ್ತಗಳಲ್ಲಿ ಅಥವಾ ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ನಮ್ಮಂತೆ ಶರೀರದ ಶಾಖವನ್ನು ಕಾಪಾಡಿಕೊಳ್ಳುವುದಕ್ಕೆ ಅವಕ್ಕೆ ಬರುವುದಿಲ್ಲ. ಆದ್ದರಿಂದ ಇವನ್ನು ಶೀತರಕ್ತ ಪ್ರಾಣಿಗಳೆಂದು ಕರೆಯುತ್ತಾರೆ. ಹಾಗಾಗಿ ಹಾವುಗಳು ಜಗತ್ತಿನ ಧ್ರುವಪ್ರದೇಶಗಳನ್ನುಳಿದು ಬೇರೆಲ್ಲೆಡೆ ವಾಸಿಸುತ್ತವೆ. ನ್ಯೂಜಿಲ್ಯಾಂಡ್ ದೇಶದಲ್ಲಿ ಹಾವುಗಳೇ ಇಲ. ಐರ್‌ಲ್ಯಾಂಡ್ ದೇಶದಲ್ಲಿ ವಿಷದ ಹಾವುಗಳಿಲ್ಲ. ಉಷ್ಣವಲಯದ ದೇಶಗಳಲ್ಲಿ ಇವುಗಳ ಸಂಖ್ಯೆ ಹೆಚ್ಚು. ಕಾಡುಗಳಲ್ಲಿ ಮತ್ತು ಸಸ್ಯರಾಶಿ ಹೆಚ್ಚಿರುವಲ್ಲಿ ಹಾವುಗಳ ಸಂಖ್ಯೆಯೂ ಸಾಮಾನ್ಯವಾಗಿ ಹೆಚ್ಚಿರುತ್ತದೆ.

ಸ್ವರಕ್ಷಣೆಗಾಗಿ ಹಾವುಗಳ ಮೈಬಣ್ಣ ಸಾಮಾನ್ಯವಾಗಿ ಅವು ವಾಸಿಸುವ ಪರಿಸರಕ್ಕೆ ಹೊಂದಿಕೊಂಡಿರುತ್ತದೆ. ಹೊಲಗಳಲ್ಲಿ ನಾಗರಹಾವು ಅಥವಾ ಕೇರೆ ಹಾವು ಚಲಿಸದೆ ಇದ್ದಲ್ಲಿ ಮಣ್ಣಿನ ಬಣ್ಣವಿರುವ ಇವನ್ನು ಗುರುತಿಸುವುದು ಕಷ್ಟ. ಅದೇ ರೀತಿ ಗಿಡಮರಗಳ ಮೇಲೆ ವಾಸಿಸುವ ಹಸಿರು ಹಾವನ್ನು ಮರದ ಎಲೆಗಳ ಮಧ್ಯೆ ಗುರುತಿಸುವುದೇ ಕಷ್ಟ, ಆದರೆ ಕಾರಲ್ ಹಾವುಗಳ ಮತ್ತು ಬಣ್ಣದ ಕಡಂಬಳ ಹಾವುಗಳ ಮೈಮೇಲೆ ಬಣ್ಣ ಬಣ್ಣದ ಪಟ್ಟೆಗಳಿವೆ. ಇವು ಇತರರಿಗೆ ಭಯ ಹುಟ್ಟಿಸಲು ಮತ್ತು ಎಚ್ಚರಿಸಲು ಉಪಯೋಗ.

ಹುರುಪೆಗಳಿಂದ ಕೂಡಿದ ತೆಳುವಾದ ಚರ್ಮವನ್ನು ಹಾವುಗಳು ಹೊರಹಾಕುತ್ತವೆ. ಇದನ್ನು ಪೊರೆ ಬಿಡುವುದು ಎಂದು ಕರೆಯುವರು. ಪೊರೆ ಬಿಡುವುದಕ್ಕಿಂತ ಮುಂಚೆ ಹಾವಿನ ಬಣ್ಣ ಸ್ವಲ್ಪ ಬಿಳುಪಾಗಿ, ಪೊರೆ ಶರೀರದಿಂದ ಸಡಿಲವಾಗುತ್ತಾ ಬರುತ್ತದೆ. ಅನಂತರ ನಾವು ಅಂಗಿಯನ್ನು ಬಿಚ್ಚಿ ಹಾಕುವ ರೀತಿಯಲ್ಲಿ ಪೊರೆಯೂ ಹಾವಿನ ಶರೀರದಿಂದ ಹೊರಬರುತ್ತದೆ. ಪೊರೆ ಬಿಡುವ ಸಂದರ್ಭದಲ್ಲಿ ಹಾವುಗಳು ಆಲಸಿಗಳಾಗಿರುತ್ತವೆ. ಪೊರೆ ಕಳಚಿದ ಹಾವಿನ ಶರೀರ ಮಿರಮಿರನೆ ಹೊಳೆಯುತ್ತಿರುತ್ತದೆ. ಪೊರೆ ಬಿಡುವ ಕಾಲವು ಹಾವಿನ ವಯಸ್ಸು ಮತ್ತು ಲಿಂಗವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ೭೨ ರಿಂದ ೨೧೦ ದಿನಗಳ ಅಂತರದಲ್ಲಿ ಹಾವುಗಳು ಪೊರೆ ಬಿಡುತ್ತಿರುತ್ತವೆ. ಚಳಿಗಾಲಕ್ಕಿಂತ ಬೇಸಿಗೆ ಕಾಲದಲ್ಲಿ ಹಾವುಗಳು ಹೆಚ್ಚು ಪೊರೆ ಬಿಡುತ್ತವೆ.

ಎಲ್ಲ ಹಾವುಗಳು ಮಾಂಸಾಹಾರಿಗಳು. ಒಳ್ಳೆ ಹಾವು ನೀರಿನಲ್ಲಿರುವ ಮೀನು ಮತ್ತು ಕಪ್ಪೆಗಳನ್ನು ನುಂಗುತ್ತದೆ. ಮರದ ಮೇಲಿನ ಹಾವುಗಳು ಪಕ್ಷಿಯ ಮೊಟ್ಟೆ ಅಥವಾ ಮರಿಗಳನ್ನು ನುಂಗುತ್ತವೆ. ನೆಲದ ಮೇಲಿನ ಹಾವುಗಳು  ಇಲಿ, ಹಲ್ಲಿ ಮತ್ತು ಕಪ್ಪೆಗಳನ್ನು ಭಕ್ಷಿಸುತ್ತವೆ. ಹೆಬ್ಬಾವು ದೊಡ್ಡ ದೊಡ್ಡ ಪಕ್ಷಿಗಳನ್ನು ಮತ್ತು ಒಮ್ಮೊಮ್ಮೆ ಜಿಂಕೆಗಳನ್ನೂ ನುಂಗಿ ನೊಣೆಯುವುದುಂಟು. ಕೆಲವು ಹಾವುಗಳು ಸ್ವಜಾತಿ ಭಕ್ಷಕರೂ ಹೌದು. ತಮ್ಮ ಸ್ವಂತ ಮರಿಗಳನ್ನೇ ನುಂಗುವುದು ಇಲ್ಲಿ ಸಾಮಾನ್ಯ. ಅವುಗಳ ಎದೆ ಗೂಡಿನ ಪಕ್ಕೆಲುಬುಗಳು ನಮ್ಮಲ್ಲಿರುವಂತೆ ಒಂದಕ್ಕೊಂದು ಸೇರಿರುವುದಿಲ್ಲ. ಆದ್ದರಿಂದ ಹಾವುಗಳು ಆಹಾರವನ್ನು ನುಂಗಿದಂತೆ ಹೊಟ್ಟೆ ದಪ್ಪದಾಗುತ್ತಾ ಹೋಗುತ್ತದೆ.

ಬೇಟೆಯನ್ನು ನುಂಗುತ್ತವೆಯೇ ಹೊರತು ಅವು ನಮ್ಮಂತೆ ಅಗಿಯುವುದಿಲ್ಲ. ನುಂಗಲು ಸಹಾಯವಾಗುವಂತೆ ಎರಡೂ ದವಡೆಗಳ ಹಲ್ಲುಗಳು ಒಳಕ್ಕೆ ಬಾಗಿರುತ್ತವೆ. ಬೇಟೆಯು ಹಾವಿನ ಬಾಯಿಯಿಂದ ತಪ್ಪಿಸಿಕೊಳ್ಳಲು ಹೊರಬರುವುದಕ್ಕೆ ಪ್ರಯುತ್ನಿಸಿದಂತೆ ಹಲ್ಲುಗಳು ಬೇಟೆಯ ಶರೀರಕ್ಕೆ ಹೆಚ್ಚು ನಾಟಿ ತಪ್ಪಿಸಿಕೊಳ್ಳಲು ಅಸಾಧ್ಯವಾಗುವಂತೆ ಮಾಡುತ್ತವೆ. ವಿಷದ ಹಾವುಗಳಲ್ಲಿ ಮಾತ್ರ ಒಂದು ಜೊತೆ ದೊಡ್ಡ ವಿಷದ ಹಲ್ಲುಗಳಿರುತ್ತವೆ. ಈ ವಿಷದಂತಗಳ ಮೂಲಕ ಬೇಟೆಗೆ ವಿಷನಾಟುವುದರಿಂದ ಬೇಟೆಯ ಜ್ಞಾನ ತಪ್ಪಿಸಿ ಅವು ಸುಲಭವಾಗಿ ನುಂಗುವವು. ತಮ್ಮ ಶರೀರದಲ್ಲಿ ಹಾವುಗಳು ಕೊಬ್ಬನ್ನು ಶೇಖರಿಸಿಕೊಳ್ಳುವುದರಿಂದ ಅವು ಪ್ರತಿದಿನ ಅಹಾರ ತಿನ್ನಬೇಕಿಲ್ಲ. ಚಿಕ್ಕ ಹಾವುಗಳು ಕೆಲವು ದಿನಗಳಿಗೊಮ್ಮೆ ಆಹಾರ ತಿಂದರೆ ದೊಡ್ಡವು ಕೆಲವು ವಾರ ಅಥವಾ ತಿಂಗಳು ಉಪವಾಸವಿರುತ್ತವೆ.

ಹಾವುಗಳು ಪ್ರಾಣಿ ಸಂಗ್ರಹಾಲಯಗಳಲ್ಲಿ ೪ ರಿಂದ ೬ ವರ್ಷಗಳವರೆಗೆ ಮಾತ್ರ ಬದುಕಿದ ದಾಖಲೆಗಳಿವೆ. ಆದರೆ ನಿಸರ್ಗದಲ್ಲಿ ಸ್ವತಂತ್ರವಾಗಿ ಜೀವಿಸುವಾಗ ೨೫ ರಿಂದ ೪೦ ವರ್ಷಗಳವರೆಗೆ ಬದುಕಬಹುದು. ಇದುವರೆಗೆ ದಾಖಲೆಯಾದಂತೆ ಹಾವುಗಳು ಗರಿಷ್ಟ ಬದುಕಿರುವ ಕಾಲ ಹೀಗಿವೆ :

ಹಾವು                                       ವರ್ಷ                            ತಿಂಗಳು

ಕೇರೆ ಹಾವು                                ೧೦                                ೭

ಹೆಬ್ಬಾವು                                                ೩೪                                ೨

ಮಣ್ಣುಮುಕ್ಕ                                ೧೩                               ೧೦

ನಾಗರ ಹಾವು                             ೨೧                                ೬

ಕಡಂಬಳ                                   ೧೧                                ೬

ಕಲ್ಲು ಹಾವು (ಮಿಡಿನಾಗರ)                        ೧೦                                ೩

ಪ್ರತಿಯೊಂದು ಹಾವಿನ ಪ್ರಭೇದದಲ್ಲಿಯೂ ಗಂಡು ಮತ್ತು ಹೆಣ್ಣು ಪ್ರತ್ಯೇಕ ವಾಗಿರುತ್ತವೆ. ಹೆಣ್ಣು ಹಾವು ಬೆದೆಯ ಕಾಲದಲ್ಲಿ ಒಂದು ವಿಶಿಷ್ಟವಾದ ವಾಸನೆಯನ್ನು ತಾನು ಹರಿದು ಬಂದ ಮಣ್ಣಿನಲ್ಲಿ ಬಿಡುತ್ತದೆ. ಈ ವಾಸನೆಯನ್ನು ಗುರುತಿಸಿ ಗಂಡು ಹಾವು ಹೆಣ್ಣನ್ನು ಹುಡುಕುತ್ತಾ ಬಂದು ಅದರೊಡನೆ ಕೂಡುತ್ತದೆ. ಒಮ್ಮೊಮ್ಮೆ ಅನೇಕ ಗಂಡು ಹಾವುಗಳು ಒಂದು ಹೆಣ್ಣು ಹಾವಿನ ಹಿಂದೆ ಬೀಳುವುದು ಉಂಟು ! ಗಂಡು ಹೆಣ್ಣು ಕೂಡಿದ ನಂತರ ೬೦-೮೦ ದಿನಗಳಲ್ಲಿ  ಹೆಣ್ಣು ಹಾವು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆ ಸಾಮಾನ್ಯವಾಗಿ ಬಿಳುಪಾಗಿರುತ್ತದೆ.  ಪಕ್ಷಿಗಳ ಮೊಟ್ಟೆಗಳಂತೆ ಇವುಗಳ ಹೊರ ಕವಚ ಗಡುಸಾಗಿರುವುದಿಲ್ಲ. ಸುರಕ್ಷಿತ ಸ್ಥಳಗಳಲ್ಲಿ ಹೆಣ್ಣು ಹಾವು ಮೊಟ್ಟೆಗಳನ್ನಿಡುತ್ತದೆ. ಸುಮಾರು ೬೦-೮೦ ದಿನಗಳಲ್ಲಿ ಮೊಟ್ಟೆಗಳೊಡೆದು ಮರಿಗಳು ಬರುವವರೆಗೆ ಅವನ್ನು ರಕ್ಷಿಸುತ್ತಾ ಕಾಯುತ್ತವೆ. ಕೆಲವು ಮೊಟ್ಟೆಗಳನ್ನಿಟ್ಟ ಮೇಲೆ ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತವೆ. ಇಂತಹ ಮೊಟ್ಟೆಗಳನ್ನು ಉಡ, ಮುಂಗಸಿ ಮುಂತಾದ ಪ್ರಾಣಿಗಳು ತಿನ್ನಲೂ ಬಹುದು.

ಎಲ್ಲಾ ಹಾವುಗಳು ಮೊಟ್ಟೆಗಳನ್ನಿಡುವುದಿಲ್ಲ. ಕೆಲವು ಮರಿ ಹಾಕುತ್ತವೆ. ಇಂತಹ ಹಾವುಗಳು ಮೊಟ್ಟೆಗಳನ್ನು ಗರ್ಭದಲ್ಲಿಯೇ ಉಳಿಸಿಕೊಂಡು ಕಾವು ಕೊಡುತ್ತವೆ. ಆದರೆ ಇಲಿ, ಕೋತಿ, ಮನುಷ್ಯ ಮುಂತಾದ ಸಸ್ತನಿಗಳಲ್ಲಿರುವಂತೆ ಮೊಟ್ಟೆಗಳು ತಾಯಿಯ ಗರ್ಭಕ್ಕೆ ಅಂಟಿಕೊಂಡು ಗರ್ಭದ ಮೂಲಕ ತಾಯಿಯಿಂದ ಆಹಾರ, ಆಮ್ಲಜನಕ ಪಡೆಯುವುದಿಲ್ಲ. ಮಂಡಲದ ಹಾವುಗಳು, ಹಸಿರು ಹಾವುಗಳು, ಕಡಲ ಹಾವುಗಳು ಮತ್ತು ಮಣ್ಣು ಮುಕ್ಕ ಹಾವುಗಳು ಮರಿಹಾಕುತ್ತವೆ. ಆಗತಾನೆ ಹುಟ್ಟಿದ ಹಾವು ಒಂದು ಎರೆಹುಳುವಿನಷ್ಟು ಚಿಕ್ಕದಿರಬಹುದು ಅಥವಾ ಸುಮಾರು ೩೦ ಸೆಂ.ಮೀ. ಉದ್ದವಿರಬಹುದು. ಮರಿಗಳಲ್ಲಿ ಬೆಳವಣಿಗೆ ಹೆಚ್ಚು. ಮೊದಲ ಎರಡು ತಿಂಗಳಲ್ಲಿ ಎರಡರಷ್ಟು ದೊಡ್ಡದಾಗುತ್ತವೆ. ಹೆಬ್ಬಾವು ಕೇವಲ ಎರಡು ವರ್ಷಗಳಲ್ಲಿ ಒಂದು ಮೀಟರ್ ಇದ್ದುದು ೩.೫ ಮೀಟರ್ ಉದ್ದ ಬೆಳೆಯುತ್ತದೆ. ಮರಿ ಹಾವುಗಳು ಹೆಚ್ಚೆಚ್ಚು ಬೆಳೆಯುವುದರಿಂದ ಪ್ರತಿ ತಿಂಗಳೂ ಪೊರೆ ಬಿಡುತ್ತವೆ.

ತಂದೆ ತಾಯಿಗಳ ಪೋಷಣೆ ಸಿಗದ ಹಾವಿನ ಮರಿಗಳ ಜೀವನ ಕಷ್ಟ ದಿಂದಲೇ ಪ್ರಾರಂಭವಾಗುತ್ತದೆ. ಪಕ್ಷಿಗಳು, ಆಮೆ, ಮುಂಗಸಿ, ಮತ್ತು ಒಮ್ಮೊಮ್ಮೆ ದೊಡ್ಡ ಕಪ್ಪೆಗಳಿಗೂ ಮರಿ ಹಾವುಗಳು ಆಹಾರವಾಗುತ್ತವೆ. ಮರಿಹಾವುಗಳಿಗೆ ಕೀಟಗಳು, ಇಲಿಮರಿ ಮತ್ತು ಸಣ್ಣ ಕಪ್ಪೆಗಳೇ ಆಹಾರ. ಸಾಮಾನ್ಯವಾಗಿ ಮಳೆಗಾಲದ ಪ್ರಾರಂಭದಲ್ಲಿ ಮೊಟ್ಟೆಗಳೊಡೆದು ಮರಿ ಹಾವುಗಳು ಬರುವುದರಿಂದ ಗೊದಮಟ್ಟೆಗಳು, ಕೀಟಗಳು ಮತ್ತು ಮೀನುಗಳು ಆ ಕಾಲದಲ್ಲಿ ಹೇರಳವಾಗಿ ದೊರೆಯುತ್ತವೆ.

ಮನುಷ್ಯನೇ ಹಾವುಗಳ ಪ್ರಮುಖ ಶತ್ರು. ಅವನು ವಿನಾಕಾರಣ ಹಾವುಗಳನ್ನು ಕೊಲ್ಲು ತ್ತಾನೆ. ಅವು ವಾಸಿಸುವ ಸ್ಥಳದ ಸುತ್ತಮುತ್ತ ವಿಷಕಾರಿ ವಸ್ತುಗಳನ್ನು ಸಿಂಪಡಿಸುತ್ತಾನೆ ಮತ್ತು ಅವು ವಾಸಮಾಡುವ ಕಾಡನ್ನು ಬರಿದು ಮಾಡುತ್ತಾನೆ. ಮನುಷ್ಯನಲ್ಲದೆ ಹಾವುಗಳಿಗೆ ನೈಸರ್ಗಿಕ ಶತ್ರುಗಳೂ ಇದ್ದಾರೆ. ಮುಂಗಸಿ ಹಾವಿನ ಆಜನ್ಮ ಶತ್ರು. ಹಾವು ಮತ್ತು ಮುಂಗಸಿಯ ಜಗಳದಲ್ಲಿ ದಪ್ಪನೆಯ ಚರ್ಮ, ಬಿರುಸು ಕೂದಲು ಮತ್ತು ಉನ್ನತ ಮೆದುಳು ಇರುವ  ಮುಂಗಸಿಯೇ  ಗೆಲ್ಲುತ್ತದೆ.  ನವಿಲು,

ಹದ್ದು, ಗೂಬೆ, ಕೊಕ್ಕರೆಗಳು ಹಾವುಗಳನ್ನು ಕೊಲ್ಲುತ್ತವೆ, ತಿನ್ನುತ್ತವೆ. ತಮ್ಮ ಮೊಟ್ಟೆ ಅಥವಾ ಮರಿಗಳನ್ನು ರಕ್ಷಿಸುವುದಕ್ಕಾಗಿ ಗೂಡಿನ ಸಮೀಪ ಬರುವ ಹಾವುಗಳನ್ನು ಈ ಪಕ್ಷಿಗಳು ಹಿಡಿದು ಕೊಲ್ಲುತ್ತವೆ.

ಒರಟಾದ ಸ್ಥಳದಲ್ಲಿ ಹಾವುಗಳು ಸುಲಭವಾಗಿ ಚಲಿಸುತ್ತವೆ. ನುಣುಪು ಜಾಗದಲ್ಲಿ ಚಲಿಸಲು ಅವಕ್ಕೆ ಕಷ್ಟ. ಉದರದ ಕೆಳಭಾಗದಲ್ಲಿರುವ ಅಗಲವಾದ ಹುರುಪೆಗಳು ಚಲಿಸಲು ಸಹಾಯ ಮಾಡುತ್ತವೆ. ತಮ್ಮ ಶರೀರವನ್ನು ಅತ್ತಿತ್ತ ವಾಲಿಸುತ್ತಾ, ಬಳಕುತ್ತಾ ಹಾವುಗಳು ನೆಲದ ಮೇಲೆ ಹರಿದು ಚಲಿಸುತ್ತವೆ. ಆದರೆ ಹೆಬ್ಬಾವು ಮತ್ತು ಮಂಡಲದ ಹಾವುಗಳು ಹೆಚ್ಚಿನ ಬಳುಕಿಲ್ಲದೆ ನೇರವಾಗಿ ಚಲಿಸುತ್ತವೆ. ಅನೇಕ ಹಾವುಗಳು ಮರಗಳನ್ನು ಹತ್ತಬಲ್ಲವು, ನೀರಿನಲ್ಲಿ ಈಜಬಲ್ಲವು. ಸಮುದ್ರದ ಹಾವುಗಳ ಬಾಲ ಚಪ್ಪಟೆಯಾಗಿದ್ದು ದೋಣಿಯ ಹುಟ್ಟಿನಂತೆ ಈಜಲು ಸಹಾಯಕ.

ಹಾವುಗಳು ಜೀವನ ಸಾಗಿಸಲು ವಿವಿಧ ರಕ್ಷಣಾ ತಂತ್ರಗಳನ್ನು ಬಳಸಿಕೊಳ್ಳುತ್ತವೆ. ಹೆಬ್ಬಾವು ಮತ್ತು ಮಂಡಲದ ಹಾವು ಜೋರಾಗಿ ಉಸಿರು ಬಿಡುತ್ತಾ ಶಬ್ದ ಮಾಡಿ ಇತರರನ್ನು ಹೆದರಿಸುತ್ತವೆ. ಕೆಲವು ತಮ್ಮ ಶರೀರ ಮತ್ತು ಕುತ್ತಿಗೆಯನ್ನು ಅಗಲ ಮಾಡಿ ಶತ್ರುಗಳಲ್ಲಿ ಭಯ ಹುಟ್ಟಿಸುತ್ತವೆ. ನಾಗರ ಹೆಡೆ ಎಂಥವರ ಎದೆಯಲ್ಲಿಯೂ ನಡುಕ ಹುಟ್ಟಿಸುತ್ತದೆ. ನೀರಿನಲ್ಲಿ ವಾಸಿಸುವ ನಿರುಪದ್ರವಿ ಒಳ್ಳೆ ಹಾವು ಕೂಡ ಶರೀರವನ್ನು ಹಿಗ್ಗಿಸಿ ಹೆದರಿಸಲು ಪ್ರಯತ್ನಿಸುತ್ತದೆ. ಕೆಲವು ಹಾವುಗಳು ನಿಶ್ಯಬ್ಧದಿಂದ ನಿಂತಲ್ಲೇ ನಿಂತು ಶತ್ರುಗಳಿಗೆ ಗುರುತು ಸಿಗದಂತೆ ನಟಿಸುತ್ತವೆ. ಕೇರೆ ಹಾವು ತನ್ನ ಬಾಲದಿಂದ ಚುಚ್ಚಲು ಪ್ರಯತ್ನಿಸುತ್ತದೆ. ವಿಷದ ಹಾವುಗಳನ್ನು ತುಳಿದಾಗ, ಹೊಡೆದಾಗ ಅಥವಾ ತಪ್ಪಿಸಿಕೊಳ್ಳಲು ಅವಕ್ಕೆ ಬೇರೆ ಮಾರ್ಗವಿಲ್ಲದಿದ್ದಾಗ ಮಾತ್ರ ಕಚ್ಚುತ್ತವೆ. ಹಾವುಗಳ ಮುಖ್ಯ ರಕ್ಷಣೆಯೆಂದರೆ ಮನುಷ್ಯನ ಕಣ್ಣಿಗೆ ಕಾಣದಂತೆ ಬದುಕುವುದು. ಅವು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಮಗೆ ಗೋಚರವಾಗದಂತೆ ಜೀವನ ಸಾಗಿಸಲು ಪ್ರಯತ್ನಿಸುತ್ತವೆ.