ಭಾನುವಾರ ಬೆಳಗಿನ ಸಮಯ. ಸುಮಾರು ಏಳು ಗಂಟೆ ಇರಬಹುದು. ಶ್ರೀನಿವಾಸ್ ಬೆಳಗಿನ ವಾಯುವಿಹಾರ ಮುಗಿಸಿಕೊಂಡು ಮನೆಗೆ ಹಿಂತಿರುಗಿದರು. ಗೇಟ್ ತೆರೆದು ಒಳಕ್ಕೆ ಹೆಜ್ಜೆ ಇಟ್ಟರು. ಮನೆಯ ಮುಂದಿನ ಕೈತೋಟದಲ್ಲಿ ಎಲ್ಲ ಗಿಡಗಳು ನಳನಳಿಸುತ್ತಿದ್ದವು. ಬಿರಿದ ಹೂಗಳ ವಾಸನೆ ಹರಡಿತ್ತು. ಚಪ್ಪಲಿ ಬಿಟ್ಟು ಬಿಸಿ ಕಾಫಿ ಹೀರುತ್ತಾ ದಿನಪತ್ರಿಕೆ ಓದುವುದು ಇವರ ಅಭ್ಯಾಸ. ಎಂದಿನಂತೆ ಚಪ್ಪಲಿ ಬಿಟ್ಟು ತೆರೆದ ಮುಂಬಾಗಿಲು ದಾಟಿ ಒಳಕ್ಕೆ ಬಂದರು. ಅವರಿಗೆ ಪರಮಾಶ್ಚರ್ಯದ ಆಹ್ವಾನ ಸಿಕ್ಕಿತು !

ಮನೆಯ ಒಳಕ್ಕೆ ಒಂದು ಹಾವು ನುಗ್ಗಿತ್ತು. ಹೊಳೆಯುವ ಹುರುಪೆಗಳ ಹಾಗೂ ಬಳಕುವ ಹಾವಿನ ಶರೀರ ನೋಡಿದ ತಕ್ಷಣ ಜೀವವೇ ಬಾಯಿಗೆ ಬಂದಂತಾಯಿತು. ‘ಹಾಂ. ಹಾವು’ ಎಂದು ಕೂಗಿದರು. ಮನೆಯೊಳಗಿದ್ದ ಹೆಂಡತಿ, ಮಕ್ಕಳನ್ನು ಕೂಗಿ ಎಚ್ಚರಿಸಿದರು. ಭಯಭೀತರಾದ ಮನೆ ಮಂದಿ ದಿಗ್ಮೂಢರಾದರು. ಏನು ಮಾಡಬೇಕೆಂಬುದೇ ತೋಚದಾಯಿತು.

‘ಅಯ್ಯೋ ನಾಗರ ಹಾವು ! ಹೆಡೆ ಎತ್ತಿದೆ !!’ ಎಂದು ಮಗ ಕೂಗಿದ. ‘ಆ ರೂಮಿನಿಂದ ಓಡಿ ಬನ್ನಿ’ ಎಂದಳು ಪತ್ನಿ. ಹಾವು ಮುಂದೆ ಮುಂದೆ ಸಾಗಿತು. ಅಷ್ಟರಲ್ಲಿ ಮಗನಿಗೆ ಒಂದು ವಿಷಯ ಹೊಳೆಯಿತು. ಗೆಳೆಯ ಕೈಸರ್‌ನ ನೆನಪಾಯಿತು. ಆತ ಧೈರ್ಯಶಾಲಿ. ಗುಂಡಪ್ಪ ಮಾಸ್ತರ ಮಾರ್ಗದರ್ಶನದಲ್ಲಿ ಹಾವುಗಳನ್ನು ಸುರಕ್ಷಿತವಾಗಿ ಹಿಡಿಯುವ ಹಾಗೂ ಕಾಡುಗಳಲ್ಲಿ ಅವನ್ನು ಬಿಡುವ ಹವ್ಯಾಸ ರೂಢಿ ಮಾಡಿಕೊಂಡಿದ್ದ. ತಕ್ಷಣ ಅಪ್ಪನಿಗೆ ಹೇಳಿದ ಅಪ್ಪಾಜಿ ನಾನು ಹಾವಿನ ಚಲನೆಯನ್ನು ಗಮನಿಸುತ್ತಿರುತ್ತೇನೆ. ನೀವು ನನ್ನ ಗೆಳೆಯ ಕೈಸರ್‌ಗೆ ಫೋನ್ ಮಾಡಿ. ಆತ ಬಂದು ಹಾವನ್ನು ಹಿಡಿದುಕೊಂಡು ಹೋಗುತ್ತಾನೆ. ಅಲ್ಲದೆ ಮೊಬೈಲ್ ಫೋನಿನ ನಂಬರ್ ಅನ್ನೂ ಹೇಳಿದ. ಫೋನ್ ನಂಬರ್ ೯೯೮೬೭೮೦೦೪೯ ಎಂದ. ತಂದೆ ಫೋನ್ ಮಾಡಿದರು. ‘ಹಲೋ ಕೈಸರ್ ನಾನು ಶ್ರೀನಿವಾಸ್ ಅಂತ. ನಮ್ಮ ಮನೆ ಜಯನಗರ ಪೂರ್ವದಲ್ಲಿದೆ. ನಮ್ಮ ಮನೆಗೆ ನಾಗರಹಾವು ಬಂದಿದೆ. ದಯವಿಟ್ಟು ಬರ‍್ತೀರಾ” ಎಂದರು.

“ಸಾರ್, ನಮಸ್ಕಾರ, ನಾನು ಈಗ ತಿಪಟೂರಿಗೆ ಬಂದಿದ್ದೇನೆ. ಆದರೂ ನೀವು ಯೋಚನೆ ಮಾಡಬೇಡಿ. ನಮ್ಮದು ಗೆಳೆಯರ ಒಂದು ಗುಂಪಿದೆ. ನಿಮ್ಮ ಮನೆ ವಿಳಾಸ ಸರಿಯಾಗಿ ಹೇಳಿ. ಹಾವು ಎಲ್ಲಿದೆ ಎಂಬುದನ್ನು ಒಬ್ಬರು ನೋಡುತ್ತಿರಿ. ಹತ್ತು-ಹದಿನೈದು ನಿಮಿಷದಲ್ಲಿ ಯಾರಾದರೂ ಬರುತ್ತಾರೆ” ಎಂದು ಧೈರ್ಯ ಹೇಳಿದರು ಕೈಸರ್.

ಶ್ರೀನಿವಾಸ್‌ರವರಿಗೆ ಭಯ ಮತ್ತಷ್ಟು ಹೆಚ್ಚಾಯಿತು. “ನಾನು ಹೋದ ವಾರವೇ ಹೇಳಿದೆ. ನಾಗರಪೂಜೆ ಮಾಡಿಸಿ” ಎಂದು ಹೆಂಡತಿ ಗೊಣಗ ತೊಡಗಿದಳು. ಅಷ್ಟರಲ್ಲಿ ಶ್ರೀನಿವಾಸರ ಮೊಬೈಲ್ ಶಬ್ದ ಮಾಡತೊಡಗಿತು. “ಹಲೋ ಸಾರ್ ನಾನು ಕೈಸರ್, ಪೃಥ್ವಿ ಎಂಬ ಹುಡುಗ ಸ್ವಲ್ಪ ಹೊತ್ತಿನಲ್ಲಿಯೇ ಬರುತ್ತಾನೆ. ಅವನಿಗೆ ನಿಮ್ಮ ನಂಬರ್ ಕೊಟ್ಟಿದ್ದೇನೆ. ಹೆದರಿಕೋಬೇಡಿ ಸಾರ್” ಎಂದ.

ಮನಸ್ಸಿಗೆ ಸ್ವಲ್ಪ ಹಗುರವೆನಿಸಿದರೂ ಹೃದಯದ ಬಡಿತ ಸ್ವಲ್ಪ ಹೆಚ್ಚಾಯಿತು. ಅಕ್ಕಪಕ್ಕದ ಮನೆಯವರೂ ಬಂದರು. “ಭರ್ಜಿ ತನ್ನಿ. ಹೊಡೆದು ಸಾಯಿಸೋಣ” ಎಂದರು. ಒಬ್ಬರು “ಏಟಿಗೆ ತಪ್ಪಿಸಿಕೊಂಡರೆ ನಾಗರಹಾವು ಹನ್ನೆರಡು ವರ್ಷ ದ್ವೇಷ ಸಾಧಿಸುತ್ತೆ” ಎಂದರು ಮತ್ತೊಬ್ಬರು. “ಏನೋ ದೋಷ ಆಗಿದೆ. ಅದಕ್ಕೆ ಹಾವು ಬಂದಿರೋದು” ಎಂದರು ಶಾಸ್ತ್ರಿಗಳು.

ಅಷ್ಟರಲ್ಲಿ ಮೋಟರ್ ಬೈಕ್ ಶಬ್ದ ಮನೆಯ ಸಮೀಪ ಬಂದಂತಾಯಿತು. ಎಲ್ಲರ ಗಮನ ಆ ಕಡೆ ತಿರುಗಿತು. ಹದಿಹರೆಯದ ಯುವಕ. ಮಂದಹಾಸ ಬೀರುತ್ತಾ ಮನೆಯೊಳಗೆ ಬಂದ. ಹಾವು ಎಲ್ಲಿದೆಯೆಂದು ಕೇಳಿ ತಿಳಿದುಕೊಂಡ. “ತಲೆದಿಂಬಿನ ಕವರುಗಳಿದ್ದರೆ ಎರಡು ಕವರುಗಳನ್ನು ನೀಡಿ” ಎಂದು ಮನೆಯೊಡತಿಗೆ ಮನವಿ ಮಾಡಿದ. ಸದ್ಯ ಮನೆಗೆ ಬಂದ ಆಗಂತುಕ ಅತಿಥಿಯನ್ನು ಕೊಂಡೊಯ್ಯಲು ಯಾರೋ ಬಂದಿದ್ದಾರೆ. ತಲೆದಿಂಬಿನ ಕವರ್‌ಗಳು ಹೋದರೂ ಪರವಾಗಿಲ್ಲ. ಬಂದಿರುವ ಅಪಾಯ ತಪ್ಪಿದರೆ ಸಾಕು ಎಂದು ಭಾವಿಸಿ ಮಲಗುವ ಕೋಣೆಯಲ್ಲಿದ್ದ ಕವರುಗಳನ್ನು ಆಕೆ ನೀಡಿದರು.

ಯುವಕ ಕವರುಗಳ ಹೊಲಿಗೆ ಸರಿಯಾಗಿದೆಯೇ ಯಾವುದಾದರೂ ಮೂಲೆಯಲ್ಲಿ ಹರಿದಿದೆಯೇ ಎಂದು ಪರೀಕ್ಷಿಸಿದ. ಒಂದು ಕವರಿನ ಬಾಯಿಗೆ ತಾನು ತಂದಿದ್ದ ಸುಮಾರು ಎರಡು ಅಡಿ ಉದ್ದದ ಹಾಗೂ ಮೂರು ಅಂಗುಲ ಅಗಲದ ಪ್ಲಾಸ್ಟಿಕ್ ಪೈಪಿಗೆ ಕಟ್ಟಿದ.

“ನೋಡಿ ನಿಮ್ಮ ಮಗನನ್ನು ಬಿಟ್ಟು ನೀವೆಲ್ಲ ಹೊರಗೆ ಹೋಗಿ. ಆಕಸ್ಮಿಕವಾಗಿ ಅದು ನಿಮ್ಮ ಕಡೆ ಬರಬಹುದು” ಎಂದ. ತಕ್ಷಣ ಎಲ್ಲರೂ ಖಾಲಿಯಾದರು.

“ಹಾವು ಅಲ್ಲಿ ಟಿ.ವಿ. ಸ್ಟಾಂಡ್ ಕೆಳಗೆ, ಆ ಮೂಲೆಯಲ್ಲಿದೆ” ಎಂದ ಶ್ರೀನಿವಾಸರ ಪತ್ರ.

“ಓ.ಕೆ.” ಎಂದ ಪೃಥ್ವಿ ತೆಳುವಾದ ಹಾಗೂ ಸುಮಾರು ೫ ಅಡಿ ಉದ್ದನೆಯ ಕಡ್ಡಿಯಿಂದ ಹಾವಿರುವ ಕಡೆ ನೆಲವನ್ನು ಕುಟ್ಟತೊಡಗಿದ ಮತ್ತು ಪ್ಲಾಸ್ಟಿಕ್ ಪೈಪನ್ನು ವಿರುದ್ಧ ದಿಕ್ಕಿನಲ್ಲಿ ನೆಲದ ಮೇಲಿಟ್ಟ. ಸಮೀಪ ಹೋಗಿ ಹಾವಿನ ಚಲನೆಯನ್ನು ಗಮನಿಸತೊಡಗಿದ. ಕಿಟಕಿಯಿಂದ ಇಣುಕಿ ನೋಡುತ್ತಿದ್ದ ಜನರಿಗೆ ಕುತೂಹಲ. ಒಂದು ರೀತಿಯ ಮನರಂಜನೆ. “ಸಾರ್ ಹೆಡೆ ಎತ್ತಿದರೆ ಕಷ್ಟ. ಹಿಂದೂ ಮುಂದೂ ನೋಡದೆ ಹೊಡೆದು ಹಾಕಿ” ಎಂದರು ಒಬ್ಬರು.

ಅಯ್ಯೋ ಟಿ.ವಿ. ಇದೆ. ಅದನ್ನು ಹೊಡೆದು ಬಿಟ್ಟೀರಾ ನಾನು ‘ಮುಕ್ತ ಮುಕ್ತ’ ಸೀರಿಯಲ್ ನೋಡಬೇಕು ಎಂದರು ಮನೆಯೊಡತಿ.

ಮೌನವಾಗಿ ಎಲ್ಲ ಗಮನವನ್ನು ಹಾವಿನ ಕಡೆ ಕೇಂದ್ರೀಕರಿಸಿದ್ದ ಯುವಕ ಹಾವು ಮುಂದೆ ಸಾಗಲು ಹೊರಟಿದ್ದನ್ನು ನೋಡಿದ. ಪ್ಲಾಸ್ಟಿಕ್ ಪೈಪಿನ ಬಾಯಿಯನ್ನು ಹಾವು ಬರುತ್ತಿದ್ದ ದಿಕ್ಕಿನಲ್ಲಿ ಇಟ್ಟ. ಹಾವು ಅದನ್ನು ಬಿಲವೆಂದೇ ಭಾವಿಸಿ ಅದರೊಳಗೆ ಸರಿಯಿತು. ತಕ್ಷಣ ಪೈಪನ್ನು ಮೇಲಕ್ಕೆತ್ತಿ, ಹಾವು ತಲೆದಿಂಬಿನ ಚೀಲದೊಳಕ್ಕೆ ಬೀಳುವಂತೆ ಮಾಡಿದ. ಪೈಪನ್ನು ತೆಗೆದು ಚೀಲದ ಬಾಯಿಯನ್ನು ಬಟ್ಟೆಯ ದಾರದಿಂದ ಬಿಗಿಯಾಗಿ ಕಟ್ಟಿದ. ಕ್ಷಣಾರ್ಧದಲ್ಲಿ ಎಲ್ಲ ಕೆಲಸ ಮುಗಿಯಿತು. ಎಲ್ಲರೂ ನಿಟ್ಟುಸಿರು ಬಿಟ್ಟರು.

ಹಾವಿರುವ ಚೀಲವನ್ನು ಕೈಯಲ್ಲಿ ಹಿಡಿದು ಹೊರನಡೆದ. ಮನೆಯ ಹೊರಗೆ ಜನಗಳ ಜಾತ್ರೆಯೇ ನೆರೆದಿತ್ತು. ‘ಎಂಥ ಹಾವು ಸಾರ್?’ ‘ಕಂಟಕ ಎಷ್ಟಿದೆ ಸಾರ್’, ‘ನೀವು ಇದನ್ನು ಏನ್ ಮಾಡ್ತೀರಾ’ …. ಪ್ರಶ್ನೆಗಳ ಸುರಿಮಳೆಯೇ ಉಂಟಾಯಿತು.

ಯುವ ಗೆಳೆಯ ಎಲ್ಲರ ಪ್ರಶ್ನೆಗೂ ತಾಳ್ಮೆಯಿಂದ ಉತ್ತರಿಸಿದ. ಹಾವನ್ನು ನಗರದ ಹೊರಗಿರುವ ಕಾಡಿನಲ್ಲಿ ಬಿಡುವುದಾಗಿ ತಿಳಿಸಿದ. ನಿನ್ನೆ ಸಂಜೆ ಮತ್ತೊಂದು ಮನೆಯಲ್ಲಿಯೂ ನಾಗರಹಾವು ಸಿಕ್ಕಿತ್ತು. ಎರಡನ್ನೂ ಕಾಡಿಗೆ, ಅವುಗಳ ವಾಸಸ್ಥಾನಕ್ಕೆ ಬಿಡುತ್ತೇವೆ ಎಂದು ಹೇಳಿದ. ಪ್ರಕೃತಿಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಸರ್ಪಗಳನ್ನು ಉಳಿಸುವುದೇ ನಮ್ಮ ಧ್ಯೇಯ. ನಮ್ಮ ಗೆಳೆಯರ ಗುಂಪಿದೆ.

ಅಷ್ಟೇ ಏಕೆ ಬಹುತೇಕ ನಗರಗಳಲ್ಲಿ ನಮ್ಮಂತಹ ಸರ್ಪ ಪ್ರಿಯರ ಬಳಗವಿದೆ ಎಂದ. “ಹೌದು ಮೈಸೂರಿನಲ್ಲಿ ಸ್ನೇಕ್ ಶ್ಯಾಮ್ ಇಲ್ಲವೇ ಅದೇ ರೀತಿ” ಎಂದು ಯಾರೋ ಕೂಗಿ ಹೇಳಿದರು. ಸಾರ್ ನಿಮ್ಮ ನಂಬರ್ ನೀಡಿ ಎಂದರು ಒಬ್ಬರು. ಆತ ೯೮೮೬೦೬೫೮೬೨ ಎಂದು ಹೇಳಿದ.

ಶ್ರೀನಿವಾಸ್ ಹಾಗೂ ಕುಟುಂಬದ ಎಲ್ಲ ಸದಸ್ಯರು ಸರ್ಪ ಪ್ರಿಯ ಗೆಳೆಯನಿಗೆ ವಂದಿಸಿದರು. ಹಾವಿನ ಚೀಲವನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ ಯುವಕನನ್ನು ಎಲ್ಲರೂ ನೋಡುತ್ತಾ ನಿಂತರು. ಹಾವುಗಳ ಬಗ್ಗೆ ತಮಗೆ ತಿಳಿದಿರುವ ಜ್ಞಾನ, ನಂಬಿಕೆ, ಮೌಢ್ಯಗಳನ್ನು ಚರ್ಚಿಸಲಾರಂಭಿಸಿದರು.