ಚರ್ಮರೋಗಗಳಲ್ಲಿ ಒಂದಾದ ಸೋರಿಯಾಸಿಸ್ ಒಬ್ಬರಿಂದೊಬ್ಬರಿಗೆ ಹರಡುವಂತಹುದಲ್ಲ. ಯಾವುದೇ ವಯಸ್ಸಿನಲ್ಲಿ ಕಂಡು ಬರುವಂತಹ ಕಾಯಿಲೆಯಾದರೂ ಸಾಮಾನ್ಯವಾಗಿ 15 ರಿಂದ 40 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ದೀರ್ಘಾವಧಿಯ ಕಾಯಿಲೆಯಾಗಿದ್ದು, ಆಗಾಗ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಕೆಲವು ಬಾರಿ ಇದು ಹೆಚ್ಚಾಗುವುದಕ್ಕೆ ಕಾರಣಗಳೇ ಬೇಕಿಲ್ಲ.

ತಲೆ ಮತ್ತು ದೇಹದ ಯಾವುದೇ ಭಾಗದಲ್ಲಿ ನಿರ್ದಿಷ್ಟ ಕೆಂಪುಕಲೆಗಳುಂಟಾಗಿ ಅವುಗಳ ಮೇಲೆ ಬೆಳ್ಳಿಯ ವರ್ಣದ ಚಕ್ಕೆಗಳಾಗುತ್ತವೆ (Silver Scales). ಹೀಗಾಗುವುದಕ್ಕೆ ಮುಖ್ಯ ಕಾರಣವೆಂದರೆ ಚರ್ಮದ ತಳಪದರಗಳ ಜೀವಕೋಶಗಳು ಹೆಚ್ಚು ಹೆಚ್ಚಾಗಿ ವಿಭಜನೆಗೊಳ್ಳುವುದು. ಇವು ಕೆಳಗಿನಿಂದ ಚರ್ಮದ ಮೇಲ್ಪದರಕ್ಕೆ ಹೋಗುತ್ತವೆ. ಸಾಮಾನ್ಯವಾಗಿ ಇವು ಸಹಜ ಸ್ಥಿತಿಯಲ್ಲಿ ಹಾಗೆ ಹೋಗಲು 28 ದಿನಗಳು ಬೇಕು. ಆದರೆ ಸೋರಿಯಾಸಿಸ್‌ನಲ್ಲಿ ಕೇವಲ 5-6 ದಿನಗಳಲ್ಲೇ ಇವು ಚರ್ಮದ ಮೇಲ್ಪದರಕ್ಕೆ ಬಂದುಬಿಡುತ್ತವೆ. ಆಗ ಚರ್ಮದಲ್ಲಿ ಕಲೆಗಳುಂಟಾಗುತ್ತವೆ.

ಸೋರಿಯಾಸಿಸ್‌ಗೆ ನಿರ್ದಿಷ್ಟ ಕಾರಣಗಳು ತಿಳಿದಿಲ್ಲ. ಅನುವಂಶೀಯತೆಯು ಒಂದು ಕಾರಣ. ತಂದೆ ತಾಯಿಯರಲ್ಲಿ ಯಾರಾದರೊಬ್ಬರಿಗೆ ಕಾಯಿಲೆಯಿದ್ದರೆ, ಮಕ್ಕಳಿಗೆ ಶೇ. 15ರಷ್ಟು ರೋಗವುಂಟಾಗುವ ಸಾಧ್ಯತೆಯಿರುತ್ತದೆ. ಇಬ್ಬರಿಗೂ ರೋಗವಿದ್ದರೆ

ಶೇ. 50ರಷ್ಟಿರುತ್ತದೆ. ತಂದೆ, ತಾಯಿಯರಿಗೆ ರೋಗವಿರದೇ ಮಗುವಿಗೆ ಸೋರಿಯಾಸಿಸ್‌ ಕಂಡುಬಂದಲ್ಲಿ ಮುಂದೆ ಆತನ ಸಂತಾನಕ್ಕೆ ಶೇ. 10ರಷ್ಟು ಕಾಯಿಲೆ ಉಂಟಾಗುವ ಸಾಧ್ಯತೆಯಿರುತ್ತದೆ.

ಚರ್ಮದ ಜೀವರಾಸಾಯನಿಕ ವಸ್ತುಗಳಲ್ಲಾಗುವ ಏರುಪೇರುಗಳು ರೋಗಕ್ಕೆ ಪ್ರಮುಖ ಕಾರಣ. ಚರ್ಮದ ಮೇಲ್ಪದರದಲ್ಲಿರುವ ಕೆಲವು ಪ್ರತಿಜನಕ ವಸ್ತುಗಳಿಗೆ ದೇಹವು ತೋರಿಸುವ ಮರೆವಣೆ ಪ್ರತಿಕ್ರಿಯೆಯಿಂದ ಹೀಗಾಗುತ್ತದೆ. ಇದರರ್ಥವೇನೆಂದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ನಮಗೆ ವಿರುದ್ಧವಾಗುವುದು.

ಚರ್ಮಕ್ಕೆ ಉಂಟಾಗುವ ಗಾಯಗಳು, ಉದಾಹರಣೆಗೆ ಕೆರೆತ ಅಥವಾ ಏಟು ಬಿದ್ದು ಆಗುವ ಗಾಯಗಳು ಕಲೆಗಳನ್ನು ಹೆಚ್ಚಿಸುತ್ತವೆ. ಸೂರ್ಯನ (ಅತಿ ಬಿಸಿಲು) ಕಿರಣಗಳು ಕೆಲವರಲ್ಲಿ ಕಲೆಗಳನ್ನು ಹೆಚ್ಚಿಸುತ್ತವೆ. ಇದಕ್ಕೆ ಕಾರಣವೆಂದರೆ ಅದರಲ್ಲಿರುವ ಅತಿ ನೇರಳೆ ಕಿರಣಗಳು.

ಕೆಲವು ಕಾಯಿಲೆಗಳಿಗೆ ಬಳಸುವ ಔಷಧಿಗಳು, ಅಧಿಕ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಕೆಲವು ಔಷಧಿಗಳಿಂದ ಸೋರಿಯಾಸಿಸ್ ಹೆಚ್ಚಾಗುತ್ತದೆ.

ಆತಂಕ, ಮಾನಸಿಕ ಒತ್ತಡ, ತೀವ್ರಭಾವನೆಗಳು ರೋಗ ಲಕ್ಷಣಗಳನ್ನು ಹೆಚ್ಚಿಸುತ್ತವೆ.

ಸೋರಿಯಾಸಿಸ್ನಲ್ಲಿ ಕಲೆಗಳು ಕೆಲವು ಮಿಲಿ ಮೀಟರ್ಗಳಿಂದ ಸುಮಾರು ಸೆಂಟಿ ಮೀಟರ್ಗಳಷ್ಟು ಅಗಲವಾಗಿದ್ದು, ನಿರ್ದಿಷ್ಟ ಅಂಚುಗಳನ್ನು ಪಡೆದಿರುತ್ತವೆ. ಇವು ಕೆಂಪಗಿದ್ದು, ಒಣಗಿದ ಬಿಳಿ ಬಣ್ಣದ ಚಕ್ಕೆಗಳಿಂದ ಮುಚ್ಚಲ್ಪಟ್ಟಿರುತ್ತವೆ. ಸಾಮಾನ್ಯವಾಗಿ ಮೊಣಕೈಗಳು, ಮೊಣಕಾಲುಗಳು ಹಾಗೂ ಬೆನ್ನಿನ ಕೆಳಭಾಗದಲ್ಲಿ ಕಲೆಗಳಾಗುತ್ತವೆ. ಇವಲ್ಲದೇ ತಲೆಯ ಚರ್ಮ, ಉಗುರುಗಳು, ಮಡಿಕೆಗಳು, ಅಂಗೈಗಳು, ಜನನೇಂದ್ರಿಯ ಪ್ರದೇಶ ಮೊದಲಾದ ಭಾಗಗಳಲ್ಲಿಯೂ ಉಂಟಾಗುತ್ತವೆ.

ಕೆಲವರಲ್ಲಿ ಸತತವಾಗಿ ತಲೆ ಬಾಚಿಕೊಳ್ಳುವಾಗ ತಲೆಯ ಚರ್ಮಕ್ಕೆ ಸುಲಭವಾಗಿ ಪೆಟ್ಟು ಬಿದ್ದು ಸಾಮಾನ್ಯವಾಗಿ ಸೋರಿಯಾಸಿಸ್ ಉಂಟಾಗುತ್ತದೆ. ಚಕ್ಕೆಗಳಿರುವ ಹಾಗೂ ಚಕ್ಕೆಗಳಿಲ್ಲದ ಚರ್ಮದ ಪ್ರದೇಶಗಳು ಅಕ್ಕಪಕ್ಕದಲ್ಲಿದ್ದು ಇದರಿಂದುಂಟಾಗುವ ಉಬ್ಬು ಪ್ರದೇಶಗಳು ಕಾಣುವುದಕ್ಕಿಂತ ಸ್ಪರ್ಶಕ್ಕೆ ಸುಲಭವಾಗಿ ಸಿಗುತ್ತದೆ. ರೋಗವು ತೀವ್ರವಾಗಿದ್ದರೆ ಕೂದಲು ಉದುರುತ್ತದೆ.

ಸೋರಿಯಾಸಿಸ್‌ನಿಂದ ಬಳಲುವವರಲ್ಲಿ ಅರ್ಧದಷ್ಟು ಜನರಿಗೆ ಉಗುರುಗಳ ತೊಂದರೆಯಾಗುತ್ತವೆ. ಉಗುರುಗಳಲ್ಲಿ ಮೊದಮೊದಲು ಸಣ್ಣ ಹಳ್ಳಗಳಾಗಿ ಕ್ರಮೇಣ ಅವು ಚರ್ಮದಿಂದ ಕಿತ್ತು ಬರುತ್ತವೆ. ಉಗುರುಗಳ ತಳದಲ್ಲಿ ಕಲೆಗಳಾಗುತ್ತವೆ.

ಚರ್ಮದ ಮಡಿಕೆಗಳಲ್ಲಿ ಅಂದರೆ ಸ್ತನಗಳ ಕೆಳಭಾಗದ ಚರ್ಮದಲ್ಲಿ, ಕಂಕುಳ ಚರ್ಮದಲ್ಲಿ, ನಿತಂಬಗಳ ಮಧ್ಯೆ ಮೊದಲಾದ ಪ್ರದೇಶಗಳಲ್ಲಿ ಕಲೆಗಳು ಚಕ್ಕೆಗಳನ್ನು ಪಡೆದಿರದೇ ಕೆಂಪಗಿದ್ದು ಹೊಳೆಯುತ್ತಿರುತ್ತವೆ. ಈ ಜಾಗದಲ್ಲಿ ಚರ್ಮವು ಮಡಿಕೆಗಳಾಗಿ ಸಂಪರ್ಕ ಹೊಂದುವುದರಿಂದ ಒತ್ತಡವುಂಟಾಗಿ ಕಲೆಗಳು ಉಂಟಾಗಲು ಪ್ರಚೋದನೆ ಸಿಗುತ್ತದೆ.

ಅಂಗೈಯಲ್ಲಿ ಸೋರಿಯಾಸಿಸ್ ಉಂಟಾದರೆ, ಅದನ್ನು ಗುರುತಿಸುವುದೇ ಕಷ್ಟವಾಗುತ್ತದೆ. ಏಕೆಂದರೆ ಇಲ್ಲಿನ ಕಲೆಗಳಿಗೆ ನಿರ್ದಿಷ್ಟ ಅಂಚುಗಳಿರುವುದಿಲ್ಲ ಮತ್ತು ಇವು ಅಷ್ಟಾಗಿ ಕೆಂಪಗಿರುವುದಿಲ್ಲ.

ಮಕ್ಕಳಲ್ಲಿ ಮತ್ತು ಯುವ ವಯಸ್ಸಿನಲ್ಲಿ ಇನ್ನೊಂದು ವಿಧವಾದ ಸೋರಿಯಾಸಿಸ್ ಕಂಡುಬರುತ್ತದೆ. ಇದು ನೀರಿನ ಹನಿಗಳಂತಹ ಗಂಧೆಗಳ ರೂಪದಲ್ಲಿ ಬೇಗಬೇಗನೇ ಕಾಣಿಸಿಕೊಳ್ಳುತ್ತದೆ. ಒಮ್ಮೆಲೆ ಅನೇಕ ಗಂಧೆಗಳುಂಟಾಗಿ ಕೆಲವೇ ತಿಂಗಳುಗಳಲ್ಲಿ ಹೊರಟುಹೋಗುತ್ತವೆ. ಆದರೆ ರೋಗಿಗಳು ಮುಂದೆ ಚಕ್ಕೆ ಮತ್ತು ಕಲೆಯ ರೂಪದ ಸೋರಿಯಾಸಿಸ್‌ಗೆ ಒಳಗಾಗುವ ಸಾಧ್ಯತೆಯಿರುತ್ತದೆ.

ಕೆಂಪು ಚರ್ಮದ ಸೋರಿಯಾಸಿಸ್‌ನಲ್ಲಿ ಚರ್ಮವು ಎಲ್ಲೆಡೆ ಕೆಂಪಾಗಿ, ಚಕ್ಕೆಗಳುಂಟಾಗುತ್ತವೆ. ರೋಗಿಗೆ ಜ್ವರವೂ ಉಂಟಾಗಬಹುದು. ಜ್ವರ ಕೆಲವು ಬಾರಿ ಹೆಚ್ಚಾಗಬಹುದು ಮತ್ತು ಕಡಿಮೆಯಾಗಬಹುದು. ದೇಹದ ಯಾವುದೇ ಭಾಗದಲ್ಲಿ ಇದು ಕಾಣಿಸಿಕೊಳ್ಳಬಹುದಾದರೂ ಸಾಮಾನ್ಯವಾಗಿ ಅಂಗೈ ಮತ್ತು ಅಂಗಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ. ನವೆ, ಉರಿ ಇರುತ್ತದೆ.

ಚಿಕಿತ್ಸೆ : ದೈಹಿಕ ಮತ್ತು ಮಾನಸಿಕ ಚಿಕಿತ್ಸೆ ಅಗತ್ಯ.

ಮನೆ ಔಷಧಿ :

* ಸೌತೆಕಾಯಿಯ ರಸವನ್ನು ತೆಗೆದು ಮೈಗೆ ಹಚ್ಚಿ ಸ್ನಾನ ಮಾಡಬೇಕು ಮತ್ತು ಸೌತೆಯ ರಸವನ್ನು ಕುಡಿಯಬೇಕು.

* ಶ್ರೀಗಂಧದ ಪುಡಿ ಮತ್ತು ಬೇವಿನ ಎಣ್ಣೆಯನ್ನು ಲೇಪಿಸಿಕೊಳ್ಳಬೇಕು.

* ಜಾಜಿ ಸೊಪ್ಪನ್ನು ಅರೆದು ರಸ ತೆಗೆದು ಬೆಣ್ಣೆಯೊಂದಿಗೆ ಕಲೆಸಿ ರಾತ್ರಿ ತೆಗೆದಿಟ್ಟು ಬೆಳಿಗ್ಗೆ ಆ ಬೆಣ್ಣೆಯನ್ನು ಕಾಯಿಸಿ ತುಪ್ಪ ತಯಾರಿಸಿ, ಆ ತುಪ್ಪವನ್ನು ಹಚ್ಚುತ್ತಿರಬೇಕು.

* ಗರಿಕೆ ಮತ್ತು ಅರಿಶಿನದ ಪುಡಿ ಎರಡನ್ನೂ ಬೇವಿನೆಣ್ಣೆಯಲ್ಲಿ ಅರೆದು ಲೇಪಿಸಬೇಕು.

* ಅರಿಶಿನ, ಬೇವಿನೆಲೆ ರಸ ಮತ್ತು ಹಾಲು ಬೆರೆಸಿ ಲೇಪಿಸಬೇಕು.

* ಆಡುಸೋಗೆಯ ಎಳೆಯ ಎಲೆಗಳನ್ನು ಸ್ವಲ್ಪ ಅರಿಶಿನ ಬೆರೆಸಿ ಅರೆದು ಪೇಸ್ಟ್ ತಯಾರಿಸಿ ಲೇಪಿಸಿ ಒಂದು ಗಂಟೆ ಸಮಯ ಬಿಟ್ಟು ಸ್ನಾನ ಮಾಡಬೇಕು.

* ಕಿತ್ತಲೆ ಸಿಪ್ಪೆ ಒಣಗಿಸಿ ನುಣ್ಣಗೆ ಪುಡಿ ಮಾಡಿ ಬೇವಿನೆಣ್ಣೆಯಲ್ಲಿ ಬೆರೆಸಿ ಮೈಗೆ ಹಚ್ಚಿ ಒಂದು ಗಂಟೆ ಸಮಯ ಬಿಟ್ಟು ಸ್ನಾನ ಮಾಡಬೇಕು.

* ತುಂಬೆಯ ರಸವನ್ನು ಲೇಪಿಸಬೇಕು.

* ಹುಣಸೆ ಸೊಪ್ಪು, ಬೇವಿನೆಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಶೋಧಿಸಿ ಈ ಕಷಾಯ ಸ್ವಲ್ಪ ಬೆಚ್ಚಗಿರುವಾಗ ಈ ಕಷಾಯದಿಂದ ತೊಳೆದು ಕೊಳ್ಳಬೇಕು.

* ನಿಂಬೆಯ ರಸ, ವೀಳ್ಯದೆಲೆಯ ರಸ ಮತ್ತು ಕೊಬ್ಬರಿ ಎಣ್ಣೆ ಸಮಭಾಗ ಸೇರಿಸಿ ತೈಲ ತಯಾರಿಸಬೇಕು. ಇದಕ್ಕೆ ಏಲಕ್ಕಿ ಮತ್ತು ಕಹಿ ಜೀರಿಗೆ ಪುಡಿ ಸೇರಿಸಬೇಕು. ಇದನ್ನು ಆಗಾಗ ಮೈಗೆ ಲೇಪಿಸುತ್ತಿರಬೇಕು.

* ಕೆಮ್ಮಣ್ಣನ್ನು ಲೇಪಿಸಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು. ನಯವಾದ ಪುಡಿ ಇರಬೇಕು.

* ನೆಲ್ಲಿಕಾಯಿಯ ಕಷಾಯ ತಯಾರಿಸಿ ಅದಕ್ಕೆ ಮಜ್ಜಿಗೆ ಬೆರೆಸಿ ಇದರಿಂದ ತೊಳೆಯಬೇಕು.

* ಮೂಲಂಗಿ ಬೀಜವನ್ನು ನಿಂಬೆಯ ರಸದಲ್ಲಿ ಅರೆದು ಲೇಪಿಸಬೇಕು.

* ಹೊಂಗೆಯ ಎಣ್ಣೆಯನ್ನು ಬೇವಿನೆಣ್ಣೆ ಬೆರೆಸಿ ಲೇಪಿಸಬೇಕು.

* ಅಮೃತಬಳ್ಳಿ, ಬೇವಿನೆಲೆಯ ರಸ ಬೆರೆಸಿ ಲೇಪಿಸಬೇಕು.

* ಬಾಳೆಹಣ್ಣಿನ ಸಿಪ್ಪೆಯನ್ನು ಒಣಗಿಸಿ, ಸುಟ್ಟು ಭಸ್ಮ ಮಾಡಿ ಕೊಬ್ಬರಿ ಎಣ್ಣೆ ಅಥವಾ ಬೆಣ್ಣೆಯಲ್ಲಿ ಬೆರೆಸಿ ಹಚ್ಚುವುದು.

* ಲೋಳೆಸರದ ತಿರುಳು ಅಥವಾ ಲೋಳೆಸರದ ಜೆಲ್ ಲೇಪಿಸಬೇಕು.

ಸ್ನಾನ ಚೂರ್ಣ :

ಹೆಸರುಕಾಳು 1 ಕೆ.ಜಿ., ಕಡಲೆ ಕಾಳು 1 ಕೆ.ಜಿ., ಸೀಗೆ ಪುಡಿ 1 ಕೆ.ಜಿ., ಕಸ್ತೂರಿ ಅರಿಶಿನ 50 ಗ್ರಾಂ, ಶ್ರೀಗಂಧ 50 ಗ್ರಾಂ, ಕಚೋರ 50 ಗ್ರಾಂ, ಆರತಿ ಕರ್ಪೂರ 20 ಗ್ರಾಂ ಇವುಗಳನ್ನೆಲ್ಲ ಸೇರಿಸಿ ಪುಡಿ ಮಾಡಿ ತೆಗೆದಿಟ್ಟುಕೊಂಡು ಸ್ನಾನಕ್ಕೆ ಬಳಸಬೇಕು.

ಔಷಧಿ ಸೇವನೆ :

1) ಸೊಗದೆಬೇರು ಮತ್ತು ಕೊತ್ತಂಬರಿ ಬೀಜ ಸಮಭಾಗ ಪುಡಿ ಮಾಡಿ 20 ಗ್ರಾಂನಷ್ಟು ಪುಡಿಯನ್ನು ಅರ್ಧ ಲೀಟ್ ನೀರಿನಲ್ಲಿ ಹಾಕಿ ಕಷಾಯ ತಯಾರಿಸಿ, ಅರ್ಧದಷ್ಟು ಉಳಿದಾಗ ಇಳಿಸಿ ಹಾಲು, ಸಕ್ಕರೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು.

2) ಅಮೃತಬಳ್ಳಿ, ನೆಗ್ಗಿಲುಮುಳ್ಳು, ಬೇವಿನ ತೊಗಟೆ ಸಮಭಾಗ ತೆಗೆದುಕೊಂಡು ಕಷಾಯ ತಯಾರಿಸಿ ದಿನಕ್ಕೆರಡು ಬಾರಿ 15 ದಿನಗಳ ಕಾಲ ಕುಡಿಯಬೇಕು.

3) ಸೊಗದೆ ಬೇರಿನ ಕಷಾಯ ತಯಾರಿಸಿ ಕುಡಿಯಬೇಕು.

4) ನಿಂಬಪುಷ್ಪ ರಸಾಯನ – ಬೇವಿನ ಹೂಗಳನ್ನು ಹಳೆಯ ಮಣ್ಣಿನ ಮಡಕೆಯಲ್ಲಿ ಹಾಕಿ ಅದು ಮುಳುಗುವಷ್ಟು ಜೇನು ಸೇರಿಸಿ ಮುಚ್ಚಿಡಬೇಕು. ಇದನ್ನು ಒಂದು ತಿಂಗಳು ಇಟ್ಟಿದ್ದು, ಅನಂತರ ಇದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಖಾಲಿ ಹೊಟ್ಟೆಯಲ್ಲಿ ಒಂದರಿಂದ ಎರಡು ಚಮಚ ತಿಂದು ಹಾಲು ಕುಡಿಯಬೇಕು.

5) ಬ್ರಾಹ್ಮಿಯನ್ನು ಬೇರು ಸಹಿತ ಕಿತ್ತು ತಂದು ನೆರಳಲ್ಲಿ ಒಣಗಿಸಿ, ನುಣ್ಣಗಿನ ಪುಡಿ ಮಾಡಿ ಅರ್ಧ ಚಮಚೆಯಷ್ಟನ್ನು ದಿನಕ್ಕೆರಡು ಬಾರಿ ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬೇಕು. ಅಲ್ಲದೇ ಬ್ರಾಹ್ಮಿಯನ್ನು ಅರೆದು ಮೈಗೆ ಲೇಪಿಸಬಹುದು.

6) ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಶುದ್ಧವಾದ ಅರಿಶಿನ ಪುಡಿ (ಅಂಗಡಿಯಲ್ಲಿ ದೊರೆಯುವ ಅರಿಶಿನ ಪುಡಿ ಉಪಯೋಗಿಸದೇ ಅರಿಶಿನ ಕೊಂಬನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು) ಯನ್ನು ಸ್ವಲ್ಪ ಬೆಲ್ಲ ಬೆರೆಸಿ ಕುಡಿಯಬೇಕು.

7) ಬೇವಿನೆಲೆಯ ಅಥವಾ ತೊಗಟೆಯ ಕಷಾಯ ತಯಾರಿಸಿ ಕುಡಿಯಬೇಕು.

8) ತುಳಸಿ ರಸ, ಅಮೃತಬಳ್ಳಿ, ಬೇವಿನೆಲೆ ರಸ ಸಮಭಾಗ ಸೇವನೆ ಮಾಡಬೇಕು.

ಈ ಮನೆ ಔಷಧಿಯಿಂದ ಕಡಿಮೆಯಾಗದಿದ್ದಲ್ಲಿ ಆಯುರ್ವೇದ ವೈದ್ಯರನ್ನು ಕಂಡು ಚಿಕಿತ್ಸೆಯನ್ನು ಪಡೆಯಬೇಕು. ಅವರು ರೋಗಿಯ ದೇಹ ಪ್ರಕೃತಿ, ವಯಸ್ಸು, ಕಾಯಿಲೆಯ ತೀವ್ರತೆ ಮುಂತಾದವುಗಳನ್ನು ನೋಡಿ ಚಿಕಿತ್ಸೆ ನೀಡುತ್ತಾರೆ. ಆದರೆ ರೋಗಿಗೆ ತಾಳ್ಮೆ ಬಹಳ ಬೇಕು. ಕೆಮ್ಮು, ನೆಗಡಿ, ಜ್ವರದ ಹಾಗೆ ತಕ್ಷಣ ವಾಸಿಯಾಗುವುದಿಲ್ಲ. ಪಂಚಕರ್ಮ ಚಿಕಿತ್ಸೆಯೂ ಬೇಕಾಗುತ್ತದೆ. ವಿರೇಚನ ಚಿಕಿತ್ಸೆ ಅಂತೂ ಬಹಳ ಮುಖ್ಯ. ಸ್ನೇಹನ, ಸ್ವೇದನ ಇವುಗಳ ನಂತರ ವಿರೇಚನ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ದೇಹದಲ್ಲಿನ ವಿಷ ವಸ್ತುಗಳೆಲ್ಲ ಹೊರ ಹೋಗಲು ಸಹಾಯಕವಾಗುತ್ತದೆ. ಇದು ಸೋರಿಯಾಸಿ್ನಿಂದ ಬಳಲುವವರಿಗೆ ಮಾತ್ರವಲ್ಲ ಎಲ್ಲರಿಗೂ ಒಳ್ಳೆಯದು.

ವಿರೇಚನದ ನಂತರ ಯಾವ ಔಷಧಿಯನ್ನು ಸೇವಿಸಿದರೂ ಅದರ ಗ್ರಹಿಕೆ ಸುಲಭವಾಗಿರುತ್ತದೆ. ಔಷಧಿ ಚಿಕಿತ್ಸೆಯೂ ಫಲಪ್ರದವಾಗಿ ಬೇಗನೆ ವಾಸಿಯಾಗುತ್ತದೆ. ಸೋರಿಯಾಸಿಸ್‌ಗೆ ಉತ್ತಮವಾದ ಔಷಧಿಗಳು ಲಭ್ಯವಿದೆ. ಖದಿರಾರಿಷ್ಟ, ಮಹಾಮಂಜಿಷ್ಠಾದಿ ಕಷಾಯ, ಮಹಾತಿಕ್ತಕ ಘೃತ, ಗಂಧಕ ರಸಾಯನ ಮುಂತಾದ ಅನೇಕ ಔಷಧಿಗಳು ಇವೆ. ಯಾರಿಗೆ ಯಾವ ಔಷಧಿ ಸೂಕ್ತ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ. ಎಷ್ಟು ಕಾಲ ತೆಗೆದುಕೊಳ್ಳಬಹುದೆಂಬುದನ್ನು ಅವರೇ ನಿರ್ಧರಿಸುತ್ತಾರೆ.

ಆಹಾರ :

ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅಲಸಂದೆ, ಕಡಲೆ, ಅವರೆಕಾಳು, ಗಿಣ್ಣು, ಚೀ್ ಮುಂತಾದವುಗಳನ್ನು ಸೇವಿಸಬಾರದು.

ಯಾವುದು ತಿನ್ನಬಹುದು ?

ಹೆಸರುಕಾಳು, ಹೆಸರುಬೇಳೆ, ತೊಗರಿಬೇಳೆ, ಗೋಧಿ, ಹಳೆಯ ಅಕ್ಕಿ, ಹಸುವಿನ ಹಾಲು, ಮಜ್ಜಿಗೆ, ಪಡುವಲಕಾಯಿ, ಹಾಗಲಕಾಯಿ, ಹೀರೆಕಾಯಿ, ಸೌತೆಕಾಯಿ ಮುಂತಾದ ತರಕಾರಿಗಳು. ಜೇನುತುಪ್ಪ, ಕಲ್ಲುಸಕ್ಕರೆ, ಬೆಳ್ಳುಳ್ಳಿ, ನುಗ್ಗೆಕಾಯಿ, ತೊಂಡೆಕಾಯಿ, ನೆಲ್ಲಿಕಾಯಿ, ದಾಳಿಂಬೆ, ಒಣದ್ರಾಕ್ಷಿ ಒಳ್ಳೆಯದು.

ನೀರು ಸಾಕಷ್ಟು ಕುಡಿಯಬೇಕು. ಮಲಬದ್ಧತೆಯಿದ್ದಲ್ಲಿ ಎಚ್ಚರವಹಿಸಬೇಕು. ಸೊಪ್ಪು, ತರಕಾರಿ ಹೆಚ್ಚು ಸೇವಿಸಬೇಕು. ತರಕಾರಿ ಸೂಪ್ ತಯಾರಿಸಿ ಕುಡಿಯಬೇಕು. ರಾತ್ರಿ ಹೊತ್ತು ಬೇಗನೇ ಊಟ ಮಾಡಬೇಕು. ಮಲಗುವ ಮುಂಚೆ ಒಂದು ಲೋಟ ಬಿಸಿನೀರು ಕುಡಿಯಬೇಕು.

ಹೆಚ್ಚು ಶ್ರಮದ ಕೆಲಸ ಮಾಡಬಾರದು. ಬೆವರು ಹೆಚ್ಚು ಬರುತ್ತಿದ್ದಲ್ಲಿ ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು. ಮೈ ಒರೆಸುವ ಟವಲನ್ನು ಪ್ರತಿದಿನ ಒಗೆದು ಒಣಗಿಸಬೇಕು. ಬಿಸಿನೀರಲ್ಲಿ ಒಗೆದು ಬಿಸಿಲಿನಲ್ಲಿ ಒಣಗಿಸಬೇಕು. ಸ್ವಚ್ಛತೆ ಬಹಳ ಮುಖ್ಯ.

ಹತ್ತಿಯ ಬಟ್ಟೆಗಳನ್ನು ಧರಿಸಬೇಕು. ಸಿಂಥೆಟಿಕಬಟ್ಟೆ ಧರಿಸುವುದರಿಂದ ಕಾಯಿಲೆ ಹೆಚ್ಚಾಗಬಹುದು.

ಅಡುಗೆ :

ನುಗ್ಗೆಕಾಯಿ ಸಾರು : ನುಗ್ಗೆಕಾಯಿಯನ್ನು ತೊಳೆದು ಚಿಕ್ಕ ತುಂಡುಗಳಾಗಿ ಮಾಡಿಕೊಂಡು ಕುಕ್ಕರಿನಲ್ಲಿ ಬೇಯಿಸಿ.

1 ಚಮಚೆ ತುಪ್ಪ ಒಗ್ಗರಣೆಗೆ ಹಾಕಿ, ಜೀರಿಗೆ, ಬೆಳ್ಳುಳ್ಳಿ ಜಜ್ಜಿ, ಸ್ವಲ್ಪ ಶುಂಠಿ ಸೇರಿಸಿ ಪೇ್‌ಟ ತಯಾರಿಸಿ, ಸ್ವಲ್ಪ ಬಾಡಿಸಿ ನಂತರ 1 ಚಮಚೆ ಹುರಿದು ಪುಡಿ ಮಾಡಿದ ಧನಿಯ ಸೇರಿಸಿ, 5-10 ಕಾಳು ಮೆಣಸು ಕುಟ್ಟಿ  ಸೇರಿಸಿ, ಉಪ್ಪು ಸೇರಿಸಿ ಒಲೆಯಿಂದ ಇಳಿಸಿ, ಬೇಳೆ ಕಟ್ಟು  ಬೆರೆಸಿ ಮತ್ತು ನುಗ್ಗೆಕಾಯಿ ಸೇರಿಸಿ.

ಗಣಿಕೆ ಸೊಪ್ಪಿನ ಪಲ್ಯ : ಗಣಿಕೆ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿ ಎಣ್ಣೆಯಲ್ಲಿ ಬಾಡಿಸಿ, ಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಬೆರೆಸಬೇಕು.

ಅಜವಾನ ಚಪಾತಿ : ಗೋಧಿ ಹಿಟ್ಟಿಗೆ ಕಾಲು ಚಮಚೆ ಅಜವಾನ, ನುಣ್ಣಗೆ ಜಜ್ಜಿದ ಶುಂಠಿ ಪೇ್‌ಟ, ಉಪ್ಪು ತಕ್ಕಷ್ಟು ಹಾಗೂ ಒಂದು ಚಮಚೆ ಕಾಯಿಸಿದ ತುಪ್ಪ ಸೇರಿಸಿ ಬೇಕಾಗುವಷ್ಟು ನೀರು ಸೇರಿಸಿ ಚಪಾತಿಯ ಹಾಗೆ ಹಿಟ್ಟು ತಯಾರಿಸಿಕೊಳ್ಳಿ. ಲಟ್ಟಿಸಿ ಸುಡಬೇಕು. ಬಿಸಿಯಾಗಿರುವಾಗ ತಿನ್ನಬೇಕು.

ಹೆಸರುಬೇಳೆ ಗಂಜಿ : ಹೆಸರುಬೇಳೆ ಹುರಿದು, ಮೂರು ಲೋಟ ನೀರು ಸೇರಿಸಿ ಕುದಿಸಿ, ಉಪ್ಪು ಬೆರೆಸಿ ಕುಡಿಯಬೇಕು.

ಮಾನಸಿಕ ಸ್ಥಿತಿ : ಕೇವಲ ಔಷಧಿ ಚಿಕಿತ್ಸೆ ಮಾತ್ರವಲ್ಲ ಸೋರಿಯಾಸಿಸ್ ರೋಗಿಗಳಿಗೆ ಆಪ್ತಸಲಹೆಯು ಬಹಳ ಮುಖ್ಯ. ಆತಂಕ, ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಇವು ಒಂದಕ್ಕೊಂದು ಪೂರಕವಾಗಿರುತ್ತವೆ. ಕಾಯಿಲೆಯಿಂದ ಆತಂಕ ಉಂಟಾಗುತ್ತದೆ. ಆತಂಕದಿಂದ ಕಾಯಿಲೆ ಹೆಚ್ಚಾಗುತ್ತದೆ. ರೋಗಿಯ ಮನಸ್ಸಿಗೆ ನೆಮ್ಮದಿ ಬಹುಮುಖ್ಯ. ಕಾಯಿಲೆಯ ಬಗ್ಗೆ ನಕಾರಾತ್ಮಕ ಭಾವನೆ ಬೆಳೆಸಿಕೊಳ್ಳದೇ ಸಕಾರಾತ್ಮಕವಾಗಿರಬೇಕು. ಕುಟುಂಬದವರ ಸಹಕಾರವೂ ಬೇಕು. ಕಾಯಿಲೆಯನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿರಬೇಕು. ಚಟುವಟಿಕೆಯಿಂದಿರಬೇಕು. ವೈದ್ಯರು ಕೂಡ ಕೇವಲ ಚಿಕಿತ್ಸೆಯ ಕಡೆಗೆ ಮಾತ್ರ ಗಮನ ಕೊಡದೇ ಆಪ್ತ ಸಲಹೆ ನೀಡಬೇಕು. ಯಾವ ರೀತಿ ಸೋರಿಯಾಸಿಸ್‌ನೊಂದಿಗೆ ಬದುಕಬೇಕು ಎಂಬುದನ್ನು ಹೇಳಿಕೊಡಬೇಕು. ಧ್ಯಾನ, ಯೋಗ, ವ್ಯಾಯಾಮ ಅಥವಾ ವಾಕಿಂಗ್ ಹೀಗೆ ಯಾವುದಾದರೊಂದು ದೈಹಿಕ ಚಟುವಟಿಕೆ ಬೇಕು. ಅಲ್ಲದೇ ಒಂದು ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಂಗೀತ ಕೇಳುವುದು, ಕಲಿಯುವುದು, ಪುಸ್ತಕಗಳನ್ನು ಓದುವುದು, ಕೈತೋಟ ಮಾಡುವುದು ಹೀಗೆ ಯಾವುದಾದರೊಂದು ಮನಸ್ಸಿಗೆ ಸಂತೋಷ ಕೊಡುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಸೋರಿಯಾಸಿಸ್‌ನ ದುಷ್ಪರಿಣಾಮಗಳು :

ಶೇ. 5ರಷ್ಟು ಸೋರಿಯಾಸಿಸ್‌ನಿಂದ ಬಳಲುವ ರೋಗಿಗಳಲ್ಲಿ ಕೀಲುಗಳು ತೊಂದರೆಗೊಳಗಾಗುತ್ತವೆ. ಇದಕ್ಕೆ ಸೋರಿಯಾಸಿಸ್‌ ಸಂಧಿವಾತ ಎಂದು ಹೆಸರು. ಸಾಮಾನ್ಯವಾಗಿ ಬೆರಳುಗಳ ಮೂಳೆಗಳ ಕೀಲುಗಳು ಬಾಧಿತವಾಗುತ್ತವೆ. ಕೆಲವೊಮ್ಮೆ  ಒಂದು ದೊಡ್ಡ ಕೀಲು ಕೂಡ ತೊಂದರೆಗೊಳಗಾಗಬಹುದು. ಇದು ಬೆರಳುಗಳನ್ನು  ಮತ್ತು ಬೆರಳು ತುದಿಯ ಕೀಲನ್ನು ಬಾಧಿಸುತ್ತದೆ. ಬೆನ್ನುಮೂಳೆ, ಮಣಿಕಟ್ಟಿನ ಕೀಲುಗಳಲ್ಲಿಯೂ ತೊಂದರೆ ಉಂಟಾಗಬಹುದು.

ಸೋರಿಯಾಸಿಸ್‌ನಿಂದ ಬಳಲುವವರು ಧೈರ್ಯಗೆಡದೇ ಚಿಕಿತ್ಸೆ, ಆಹಾರ, ಆಪ್ತ ಸಲಹೆ ಸರಿಯಾಗಿದ್ದಲ್ಲಿ, ಕಾಯಿಲೆ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಯಾವುದೇ ತೊಂದರೆಯಾಗದೇ ಇತರರಂತೆ ಸಹಜ ಜೀವನ ನಡೆಸಬಹುದು.