ಸಂಧಿಗಳಲ್ಲಿ ಅಂದರೆ ಕೀಲುಗಳಲ್ಲಿ ದೂಷಿತವಾದ ವಾಯು (ವಾತ) ಸೇರಿಕೊಂಡು ನೋವು ಉಂಟಾಗುವುದಕ್ಕೆ ಸಂಧಿವಾತ ಅಂತ ಹೆಸರು. ಕೀಲುಗಳಲ್ಲಿ ಅದರಲ್ಲಿಯೂ ಮಂಡಿಯಲ್ಲಿ ನೋವು ಹೆಚ್ಚಾಗಿರುತ್ತದೆ. ನೆಲದ ಮೇಲೆ ಕುಳಿತುಕೊಂಡು ಮೇಲೇಳುವಾಗ ಮತ್ತು ಬೆಳಿಗ್ಗೆ ಹಾಸಿಗೆ ಬಿಟ್ಟು ಮೇಲೇಳುವಾಗ ನೋವು ಇನ್ನೂ ಹೆಚ್ಚು. ಚಳಿಗಾಲದಲ್ಲಿ ಸಾಮಾನ್ಯವಾಗಿ ನೋವು ಅಧಿಕ. ಚಳಿಗೆ ಮಾಂಸಖಂಡಗಳಲ್ಲಿ ಬಿಗಿತ ಬಂದು ನೋವು ಹೆಚ್ಚಾಗುತ್ತದೆ. ಕುಕ್ಕರಗಾಲಿನಲ್ಲಿ ಕುಳಿತುಕೊಳ್ಳುವುದಕ್ಕೆ, ಕಾಲು ಮಡಚುವುದಕ್ಕೆ ಮತ್ತು ಚಾಚುವುದಕ್ಕೆ ಕಷ್ಟವೆನಿಸುತ್ತದೆ. ಕೀಲುನೋವಿನಿಂದ ಬಳಲುವವರು ಮಲ ವಿಸರ್ಜನೆಗೆ ಹೋಗಿ ಬರುವಷ್ಟರಲ್ಲಿ ಸುಸ್ತಾಗಿ ಬಿಡುತ್ತಾರೆ. ಇಂಡಿಯನ್ ಟಾಯ್ಲೆಟ್‌ಗಿಂತ ಕಮೋಡ್ ಒಳ್ಳೆಯದು. ಸಾಮಾನ್ಯವಾಗಿ ಸ್ತ್ರೀಯರಲ್ಲಿ 40 ವರ್ಷ ಮೇಲ್ಪಟ್ಟವರಲ್ಲಿ ಅದರಲ್ಲಿಯೂ ಬೊಜ್ಜು ಮೈಯುಳ್ಳವರಲ್ಲಿ ಮುಟ್ಟು ನಿಂತ ಮೇಲೆ ಅಥವಾ ನಿಲ್ಲುವ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಷಮ ಆಹಾರ ವಿಹಾರ ಅಂದರೆ ಮೊಸರು, ತುಪ್ಪ ಒಟ್ಟಿಗೆ ತಿನ್ನುವುದು, ಮೀನು, ಮೊಸರು  ತಿನ್ನುವುದು, ಒಮ್ಮೆ ತಯಾರಿಸಿದ ಕಷಾಯವನ್ನು ಮತ್ತೆ ಬಿಸಿ ಮಾಡಿ ತಿನ್ನುವುದು, ಜೇನುತುಪ್ಪ ಬಿಸಿ ಮಾಡಿ ಸೇವಿಸುವುದು. ಇವುಗಳಿಗೆ ವಿರುದ್ಧಾಹಾರ ಅಂತ ಕರೆಯುತ್ತೇವೆ. ವಿರುದ್ಧಾಹಾರ ಸೇವನೆಯಿಂದ ಸಂಧಿವಾತ ಉಂಟಾಗುತ್ತದೆ.

ಸರ್ವಜ್ಞನ ಒಂದು ವಚನ ಏನು ಹೇಳುತ್ತದೆ ಗೊತ್ತೆ ?

ವಿರುದ್ಧ ಎಂಬುವನು ಹಕ್ಕಿಯಂತಾಗುವನು

ಸಿಕ್ಕು ರೋಗದಲಿ ವೈದ್ಯನಿಗೆ ಕೊಕ್ಕವನಿಕ್ಕುತಲಿರುವ ಸರ್ವಜ್ಞ

ಇದನ್ನು ಈಗಿನ ಕಾಲಕ್ಕೆ ಹೋಲಿಸಿದರೆ ರೊಕ್ಕವನಿಕ್ಕುತಲಿರುವ ಎಂದು ಹೇಳಬಹುದು.

ಈ ವಿರುದ್ಧಾಹಾರ ಸೇವನೆಯಲ್ಲದೆ ಅತಿ ವ್ಯಾಯಾಮ ಮಾಡುವುದು, ಅತಿಶ್ರಮ, ಅತಿಯಾಗಿ ಭಾರ ಹೊರುವುದು, ದಿನಕ್ಕೆ 8 ಗಂಟೆ ನಿಂತುಕೊಂಡು ಕೆಲಸ ಮಾಡುವುದು, ಅತಿ ಮೈಥುನ, ಅತಿ ರಕ್ತಸ್ರಾವ, ದಪ್ಪಗಿರುವವರಲ್ಲಿ ದೇಹದ ಭಾರವೆಲ್ಲ ಮಂಡಿಯ ಮೇಲೆ ಬೀಳುತ್ತದೆಯಾದ್ದರಿಂದ, ವಯಸ್ಸಾದ ನಂತರ ಮೂಳೆ / ಮಜ್ಜೆ ಸವೆಯುವುದರಿಂದಲೂ ಹಾಗೂ ದೇಹದಲ್ಲಿ ಸುಣ್ಣಾಂಶ ಕಡಿಮೆಯಾಗುವುದರಿಂದಲೂ ಇದು ಕಾಣಿಸಿಕೊಳ್ಳುತ್ತದೆ.

ಕೀಲು ನೋವಿಗೆ ಎರಡು ವಿಧದ ಚಿಕಿತ್ಸೆ ಇದೆ. ಶಮನ ಮತ್ತು ಶೋಧನ ಚಿಕಿತ್ಸೆ. ದೂಷಿತವಾದ ದೋಷವನ್ನು ಅಲ್ಲಿಯೇ ಶಮನಗೊಳಿಸುವುದಕ್ಕೆ ಶಮನ ಚಿಕಿತ್ಸೆ ಅಂತ ಹೆಸರು. ಶಮನದಲ್ಲಿ ಔಷಧಿ ಸೇವನೆ ಮತ್ತು ಬಾಹ್ಯ ಚಿಕಿತ್ಸೆ ನೀಡಬೇಕಾಗುತ್ತದೆ. ಆರಂಭದ ಹಂತದಲ್ಲಿ ಮನೆ ಔಷಧಿ ಸೇವನೆ ಮಾಡಬಹುದು.

ಮನೆ ಔಷಧಿ :

* ಕೊತ್ತಂಬರಿ ಬೀಜ ಅಂದರೆ ಧನಿಯ ಮತ್ತು ಒಣಶುಂಠಿ ಎರಡನ್ನು 5 ಗ್ರಾಂನಷ್ಟು ತೆಗೆದುಕೊಂಡು ಕುಟ್ಟಿ ಪುಡಿ ಮಾಡಬೇಕು. ನಾಲ್ಕು ಲೋಟ ನೀರಿನಲ್ಲಿ ಈ ಪುಡಿ ಹಾಕಿ ಒಲೆಯ ಮೇಲೆ ಕುದಿಯಲು ಇಡಬೇಕು. ಸಣ್ಣಗಿನ ಉರಿ ಇರಬೇಕು. ಚೆನ್ನಾಗಿ ಕುದಿದು ಕಷಾಯ ಒಂದು ಲೋಟದಷ್ಟಾದಾಗ ಇಳಿಸಿ, ಶೋಧಿಸಿ ಬೆಳಿಗ್ಗೆ ಅರ್ಧ ಲೋಟ ಹಾಗೂ ರಾತ್ರಿ ಅರ್ಧ ಲೋಟ ಕುಡಿಯಬೇಕು. ಇದನ್ನು ಹದಿನೈದು ದಿನಗಳ ಕಾಲ ಕುಡಿಯಬೇಕು.

* ಬೆಳ್ಳುಳ್ಳಿ, ಶುಂಠಿ, ಲಕ್ಕಿಸೊಪ್ಪು ಈ ಮೂರನ್ನು ಪ್ರತಿಯೊಂದು ಹತ್ತು ಗ್ರಾಂನಷ್ಟು ತೆಗೆದುಕೊಂಡು ಪುಡಿ ಮಾಡಿ ಒಂದು ಲೀಟ್ ನೀರಿನಲ್ಲಿ ಹಾಕಿ ಸಣ್ಣಗಿನ ಉರಿಯಲ್ಲಿ ಕುದಿಸಿ, ಕಾಲು ಲೀಟರಿನಷ್ಟು ಉಳಿದಾಗ ಕಷಾಯವನ್ನು ಇಳಿಸಿ, ಶೋಧಿಸಿ ಬೆಳಿಗ್ಗೆ ಹಾಗೂ ರಾತ್ರಿ ಕುಡಿಯಬೇಕು. ಇದನ್ನು ಎರಡು ವಾರಗಳ ಕಾಲ ಸೇವಿಸಬೇಕು.

* 3 ಗ್ರಾಂ ಸೊಗದೆ ಬೇರಿನ ಪುಡಿಯನ್ನು ದಿನಕ್ಕೆ ಎರಡು ಬಾರಿ ಜೇನುತುಪ್ಪ ದೊಂದಿಗೆ ಸೇವನೆ ಮಾಡಬೇಕು.

* 40 ಗ್ರಾಂ ಬೆಳ್ಳುಳ್ಳಿ, ಸೈಂಧವ ಲವಣ, ಜೀರಿಗೆ, ಶುಂಠಿ, ಮೆಣಸು, ಹಿಪ್ಪಲಿ, ಹುರಿದ ಹಿಂಗು ಪ್ರತಿಯೊಂದು 5 ಗ್ರಾಂ ಇವುಗಳನ್ನೆಲ್ಲ ಅರೆದು ಮಾತ್ರೆ ತಯಾರಿಸಿಟ್ಟುಕೊಂಡು ಬೆಳಿಗ್ಗೆ ಹಾಗೂ ರಾತ್ರಿ ಒಂದೊಂದು ಮಾತ್ರೆಯಂತೆ 15 ದಿನ ಸೇವನೆ ಮಾಡಬೇಕು.

* ಅಮೃತಬಳ್ಳಿಯ ಕಾಂಡದ ಚೂರ್ಣ (2 ಚಮಚೆ) ಹಾಗೂ ಕಾಳು ಮೆಣಸಿನ ಪುಡಿ ಅರ್ಧ ಚಮಚೆ ಇವುಗಳನ್ನು ಸೇರಿಸಿ ಕಷಾಯ ತಯಾರಿಸಿಕೊಂಡು ಪ್ರತಿದಿನ ಎರಡು ಹೊತ್ತು ಕುಡಿಯಬೇಕು.

* 20 ತುಳಸಿ ಎಲೆ, 5 ಕಾಳು ಮೆಣಸು ಎರಡನ್ನೂ ಸೇರಿಸಿ ಅರೆದು ಅದಕ್ಕೆ ಒಂದು ಚಮಚೆ ತುಪ್ಪ ಸೇರಿಸಿ ಬೆಳಿಗ್ಗೆ ಹಾಗೂ ರಾತ್ರಿ ಸೇವನೆ ಮಾಡಬೇಕು.

* ಅರ್ಧ ಚಮಚೆ ಅಳಲೆಕಾಯಿ ಸಿಪ್ಪೆಯನ್ನು ಪುಡಿ ಮಾಡಿ ಅರ್ಧ ಚಮಚೆ ಶುದ್ಧವಾದ ಹರಳೆಣ್ಣೆಯಲ್ಲಿ ಬೆರೆಸಿ ಪ್ರತಿದಿನ ಬೆಳಿಗ್ಗೆ ಒಂದು ವಾರಕಾಲ ಸೇವಿಸಬೇಕು.

* ತುಂಬೆಯ ಕಷಾಯ ತಯಾರಿಸಿ ಅದಕ್ಕೆ ಹಿಪ್ಪಲಿ ಪುಡಿ ಒಂದು ಚಮಚೆ ಹಾಗೂ ಜೇನುತುಪ್ಪ ಒಂದು ಚಮಚೆ ಸೇರಿಸಿ ಪ್ರತಿದಿನ ಎರಡು ಹೊತ್ತು ಸೇವಿಸಬೇಕು.

* ಬಹು ಸುಲಭವಾದ ಚಿಕಿತ್ಸೆ – 4 ಗ್ರಾಂ ಬೆಳ್ಳುಳ್ಳಿಯನ್ನು ನುಣ್ಣಗೆ ಅರೆದು ಅದಕ್ಕೆ ಒಂದು ಚಮಚೆ ತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಬೇಕು.

ಬಾಹ್ಯ ಚಿಕಿತ್ಸೆ :

* ಹೊಂಗೆಯ ಎಣ್ಣೆಯಲ್ಲಿ ಸ್ವಲ್ಪ ಕರ್ಪೂರ ಬೆರೆಸಿ ಅದನ್ನು ಬಿಸಿ ಮಾಡಿ ನೋವಿರುವ ಜಾಗದಲ್ಲಿ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು.

* ಎಳ್ಳೆಣ್ಣೆ ಅಥವಾ ಸಾಸುವೆ ಎಣ್ಣೆಯನ್ನು ಬಿಸಿ ಮಾಡಿ ನೋವಿರುವ ಜಾಗಕ್ಕೆ ಉಜ್ಜಿಕೊಳ್ಳಬೇಕು.

* ದಾಲ್ಚಿನ್ನಿಯನ್ನು ಬಿಸಿ ನೀರಿನಲ್ಲಿ ಅರೆದು ಲೇಪ ಹಾಕಿ ನಂತರ ಬಿಸಿ ಶಾಖ ತೆಗೆದುಕೊಳ್ಳಬೇಕು.

* ಹೊಂಗೆಯ ಎಲೆಯನ್ನು ಹಾಕಿ ಕುದಿಸಿದ ನೀರಿನಿಂದ ಶಾಖ ತೆಗೆದುಕೊಳ್ಳಬೇಕು.

* ನುಗ್ಗೆಸೊಪ್ಪು, ತುಳಸಿ ಎಲೆಗಳನ್ನು ಹುರಿದು ಬಟ್ಟೆಯಲ್ಲಿ ಕಟ್ಟಿ ಪೋಟಲಿ ತಯಾರಿಸಿ ಕೊಂಡು ಬಿಸಿ ಮಾಡಿಕೊಂಡು ಅದರಿಂದ ಶಾಖ ತೆಗೆದುಕೊಳ್ಳಬೇಕು.

* ತೆಂಗಿನಕಾಯಿ, ನುಗ್ಗೆಸೊಪ್ಪು, ನಿಂಬೆಹಣ್ಣು, ಹರಳು ಗಿಡದ ಎಲೆ, ಬೆಳ್ಳುಳ್ಳಿ ಎಲ್ಲವನ್ನು ಹುರಿದು ಬಿಸಿ ಮಾಡಿ ಬಟ್ಟೆಯಲ್ಲಿ ಕಟ್ಟಿಕೊಂಡು ಬಿಸಿ ಮಾಡಿ ಶಾಖ ತೆಗೆದುಕೊಳ್ಳಬೇಕು.

* ಬಹಳ ಸುಲಭವಾದ ವಿಧಾನವೆಂದರೆ ಆಲೂಗೆಡ್ಡೆ ಬೇಯಿಸಿದ ನೀರಿನಿಂದ ಶಾಖ ತೆಗೆದುಕೊಳ್ಳುವುದು.

* ಮರಳನ್ನು ಕಾವಲಿಯಲ್ಲಿ ಬಿಸಿ ಮಾಡಿಕೊಂಡು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ಬಿಸಿ ಮಾಡಿ ಶಾಖ ತೆಗೆದುಕೊಳ್ಳುವುದು.

* ಜೇನುತುಪ್ಪದ ಪಟ್ಟು ಹಾಕಬೇಕು.

* ಎಕ್ಕದ ಎಲೆಗಳನ್ನು ಬಿಸಿ ಮಾಡಿ ಲೇಪ ಹಾಕಬೇಕು.

* ಅರ್ಧ ಈರುಳ್ಳಿ, ಬೆಳ್ಳುಳ್ಳಿ ಏಳು-ಎಂಟು ಎಸಳು, ಹಿಂಗು, ಕಾಳುಮೆಣಸು ಅರೆದು ಲೇಪ ಹಾಕಬೇಕು. 45 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.

ಶೋಧನ ಚಿಕಿತ್ಸೆ :

ದೀರ್ಘಕಾಲದಿಂದ ಸಂಧಿವಾತದಿಂದ ಬಳಲುತ್ತಿರುವವರಿಗೆ ಮನೆ ಮದ್ದಿನಿಂದ ಕಡಿಮೆಯಾಗದಿದ್ದಲ್ಲಿ, ಔಷಧಿ ಸೇವನೆಯಿಂದ ಕಡಿಮೆಯಾಗದಿದ್ದಲ್ಲಿ ಶೋಧನ ಚಿಕಿತ್ಸೆ ಅತ್ಯುತ್ತಮವಾದುದು. ಪಂಚಕರ್ಮ ಚಿಕಿತ್ಸೆಯಿಂದ ನೋವು ಕಡಿಮೆಯಾಗುತ್ತದೆ.

ಆದರೆ ಈ ಚಿಕಿತ್ಸೆ ಮನೆಯಲ್ಲಿ ತೆಗೆದುಕೊಳ್ಳುವಂತಹುದಲ್ಲ. ಹತ್ತಿರದಲ್ಲಿರುವ ಆಯುರ್ವೇದ ಆಸ್ಪತ್ರೆಗೆ ಹೋದರೆ ವೈದ್ಯರು ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪ್ರಕೃತಿ ಬಲ, ವಯಸ್ಸಿಗನುಗುಣವಾಗಿ ವಿಧಿವತ್ತಾಗಿ ಶೋಧನ ಚಿಕಿತ್ಸೆ ನೀಡುತ್ತಾರೆ.

ಇದರೊಂದಿಗೆ ರಸಾಯನ ಚಿಕಿತ್ಸೆಯೂ ನೀಡಬೇಕಾಗುತ್ತದೆ. ಅಶ್ವಗಂಧ, ಶತಾವರಿ, ಆಮಲಕಿ (ನೆಲ್ಲಿಕಾಯಿ), ಹಿಪ್ಪಲಿ ಮುಂತಾದವುಗಳು ರಸಾಯನವಾಗಿ ಕೆಲಸ ಮಾಡುತ್ತವೆ.

ಪಥ್ಯ :

ದೇಹಕ್ಕೆ ಒಗ್ಗುವಂತಹುದು ಮತ್ತು ಯಾವುದೇ ರೀತಿಯ ಹಾನಿಯನ್ನುಂಟು ಮಾಡದಿರುವಂತಹುದು ಪಥ್ಯ. ಹುರುಳಿ, ಹೆಸರುಬೇಳೆ ಒಳ್ಳೆಯದು. ಹೆಸರು ಬೇಳೆ ಬೇಯಿಸಿ ಕಟ್ಟು ತೆಗೆದು ಅದಕ್ಕೆ ಉಪ್ಪು, ಜೀರಿಗೆ ಪುಡಿ ಬೆರೆಸಿ ಕುಡಿಯಬೇಕು. ಹುರುಳಿಗೆ ದೇಹದ ಕೊಬ್ಬನ್ನು ಕರಗಿಸುವ ಶಕ್ತಿ ಇದೆ. ಹುರುಳಿ ಬೇಯಿಸಿ ಕಟ್ಟು ತೆಗೆದು ಕುಡಿಯಬೇಕು. ಹಾಗಲಕಾಯಿ, ನುಗ್ಗೆಕಾಯಿ, ನುಗ್ಗೆಸೊಪ್ಪು, ಗೋಧಿ, ನವಣೆ, ಜೋಳ, ಮಜ್ಜಿಗೆ, ಮೆಂತ್ಯ ಸೊಪ್ಪು, ಬೆಳ್ಳುಳ್ಳಿ ಹಾಗೂ ಮುಂತಾದವುಗಳನ್ನು ಹೆಚ್ಚು ಸೇವನೆ ಮಾಡಬೇಕು.

ಅಪಥ್ಯ :

ಯಾವುದನ್ನು ಸೇವನೆ ಮಾಡಬಾರದು ? ಆಹಾರದಲ್ಲಿ ಅಲಸಂದೆ, ಕಡಲೆಕಾಳು, ಅವರೆಕಾಳು, ಅತಿಯಾದ ಖಾರ, ಮಸಾಲೆ ಪದಾರ್ಥಗಳು, ಉದ್ದು, ಬಟಾಣಿ ಮತ್ತು ಖಾರದ ಪದಾರ್ಥಗಳು ಮತ್ತು ಅಜೀರ್ಣ ಉಂಟು ಮಾಡುವ ಪದಾರ್ಥಗಳನ್ನು ಸೇವಿಸಬಾರದು.

ವ್ಯಾಯಾಮ : ಪ್ರತಿದಿನ ಸರಳವಾದ ವ್ಯಾಯಾಮ ಮತ್ತು ನಡಿಗೆ ಒಳ್ಳೆಯದು. ಬೊಜ್ಜು ಮೈಯುಳ್ಳವರು ದೇಹದ ತೂಕ ಇಳಿಸಬೇಕು.

ಸಿಹಿಮೂತ್ರರೋಗ, ಹೃದ್ರೋಗ ಮುಂತಾದ ರೋಗಗಳಿಂದ ಬಳಲುವವರಿಗೆ ಕೀಲು ನೋವು ಕಂಡುಬಂದಲ್ಲಿ ತಾವೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ವೈದ್ಯರನ್ನು ಕಂಡು ಚಿಕಿತ್ಸೆ  ಪಡೆಯುವುದು ಒಳ್ಳೆಯದು.