ರಕ್ತದ ಒತ್ತಡ ಎಂದರೆ ರಕ್ತನಾಳಗಳಲ್ಲಿ ಹರಿಯುವ ರಕ್ತವು ಅವುಗಳ ಭಿತ್ತಿಯ ಮೇಲೆ ಉಂಟು ಮಾಡುವ ಒತ್ತಡ. ದೇಹದಾದ್ಯಂತ ರಕ್ತ ಪರಿಚಲನೆಯನ್ನು ಕಾಯ್ದಿರಿಸಲು ನಾವೆಲ್ಲರೂ ನಿರ್ದಿಷ್ಟ ಮಟ್ಟದ ರಕ್ತದ ಒತ್ತಡವನ್ನು ಹೊಂದಿರಬೇಕು. ಹೃದಯವು ರಕ್ತವನ್ನು ಪಂಪ್ ಮಾಡುತ್ತದೆ. ಇದರಿಂದ ಇಡೀ ದೇಹಕ್ಕೆ ರಕ್ತ ಸರಬರಾಜಾಗುತ್ತದೆ. ಮೇಲಿನ ಮತ್ತು ಕೆಳಗಿನ ಮಹಾಅಭಿಧಮನಿಗಳು ದೇಹದ ಎಲ್ಲ ಭಾಗಗಳಿಂದಲೂ ಮಲಿನ ರಕ್ತವನ್ನು, ಬಲಹೃತ್ಕರ್ಣಕ್ಕೆ ತರುತ್ತವೆ. ಈ ರಕ್ತವು ಬಲಹೃತ್ಕರ್ಣದಿಂದ ಬಲ ಹೃತ್ಕುಕ್ಷಿಯ ಸಂಕುಚನದಿಂದ ಇದು ಶ್ವಾಸ ಅಪಧಮನಿಗೆ ಹೋಗಿ ಅದರ ಮೂಲಕ ಶ್ವಾಸಕೋಶಗಳನ್ನು ಸೇರುತ್ತದೆ. ಶ್ವಾಸಕೋಶಗಳಲ್ಲಿ ರಕ್ತವು ಶುದ್ಧಗೊಂಡು, ಶ್ವಾಸ ಅಭಿಧಮನಿಗಳ ಮೂಲಕ ಎಡ ಹೃತ್ಕರ್ಣವನ್ನು ಸೇರುತ್ತವೆ. ಎಡ ಹೃತ್ಕರ್ಣದಿಂದ ರಕ್ತವು ಎಡಹೃತ್ಕುಕ್ಷಿಯನ್ನು ತಲುಪಿದ ಬಳಿಕ, ಎಡ ಹೃತ್ಕುಕ್ಷಿಯು ಸಂಕುಚನಗೊಂಡು ರಕ್ತವನ್ನು ಮಹಾ ಅಪಧಮನಿಗೆ ಪಂಪ್ ಮಾಡುತ್ತದೆ. ರಕ್ತವು ಮಹಾಅಪಧಮನಿಯ (ಅಯೊರ್ಟಾ) ಮೂಲಕ ಇಡೀ ದೇಹಕ್ಕೆ ಸರಬರಾಜಾಗುತ್ತದೆ. ಈ ಇಡಿಯ ಚಕ್ರ 0.8 ಕ್ಷಣಗಳ ಅವಧಿಯಲ್ಲಾಗುತ್ತದೆ. ನಮ್ಮ ದೇಹದ ರಕ್ತ ನಾಳಗಳಲ್ಲಿ ಕೆಲಮಟ್ಟಿನ ಒತ್ತಡ ಸದಾ ಇದ್ದೇ ಇರುತ್ತದೆ, ಇರಬೇಕು. ಒತ್ತಡ ಪ್ರತಿಕ್ಷಣವೂ ಒಂದೇ ಮಟ್ಟದಲ್ಲಿರುವುದಿಲ್ಲ. ರಕ್ತನಾಳಗಳಲ್ಲಿ ಈ ಒತ್ತಡ ಅಲೆಯಂತೆ ಮೇಲೇರುತ್ತ – ಇಳಿಯುತ್ತ ಸಾಗುತ್ತದೆ. ಈ ಒತ್ತಡವನ್ನು ಸ್ಪಿಗ್ಮೊಮ್ಯಾನೊಮೀಟರ್ ಅಂದರೆ ರಕ್ತದ ಒತ್ತಡ ಮಾಪಕದಿಂದ ಅಳೆಯುತ್ತೇವೆ. ಎಡ ಹೃತ್ಕುಕ್ಷಿ ಧಮನಿಯೊಳಕ್ಕೆ ರಕ್ತವನ್ನು ತಳ್ಳಲ್ಪಡುವಾಗ ಒತ್ತಡದ ಮಟ್ಟ ಹೆಚ್ಚಿರುತ್ತದೆ ಮತ್ತು ವಿಶ್ರಾಂತಿಯ ಸಮಯದಲ್ಲಿ ಕಡಿಮೆಯಾಗಿರುತ್ತದೆ. ಸಾಮಾನ್ಯವಾಗಿ ಒತ್ತಡವನ್ನು 120/80 mm Hg ಎಂದು ವಿವರಿಸಲಾಗುವುದು. ರಕ್ತವು ಒಳಗೆ ತಳ್ಳಲ್ಪಡುವಾಗ ಧಮನಿಯ ಒತ್ತಡ ಏರುತ್ತದೆ ಮತ್ತು ಅಲ್ಲಿಂದ ರಕ್ತ ಹರಿದು ಹೋಗುವ ಮಧ್ಯಂತರ ಕಾಲದಲ್ಲಿ ಒತ್ತಡ ಕಡಿಮೆಯಾಗುತ್ತದೆ.

ನಾವು ಸಾಮಾನ್ಯವಾಗಿ ಅಳತೆ, ತೂಕ ಮುಂತಾದವುಗಳನ್ನು ಹೇಳುವಾಗ ಮೀಟರ್, ಕೆ.ಜಿ. ಎಂಬುದನ್ನು ಬಳಸುವಂತೆ ರಕ್ತದೊತ್ತಡವನ್ನು ವಿವರಿಸುವಾಗಲೂ ಒಂದು ಮಾನದಂಡವನ್ನು ಬಳಸುತ್ತೇವೆ. ರಕ್ತದೊತ್ತಡ (ಮಿ.ಮಿ. ಎಚ್.ಜಿ.) ಅಳೆಯುವ ಮಾಪಕದಲ್ಲಿ ಒಂದು ಗಾಜಿನ ಕೊಳವೆ ಇರುತ್ತದೆ. ಅದರ ಅಡಿಯಲ್ಲಿ ಪಾದರಸ ಇರುತ್ತದೆ. ವ್ಯಕ್ತಿಯ ರಕ್ತದ ಒತ್ತಡ ನೋಡುವಾಗ ತೋಳಿನ ಸುತ್ತ ರಬ್ಬ್ ಚೀಲದ ಪಟ್ಟಿಯೊಂದನ್ನು ಕಟ್ಟಿ ಚೀಲದೊಳಕ್ಕೆ ಗಾಳಿಯನ್ನು ಅಮುಕಿದಾಗ ಧಮನಿಯು ಸಂಪೂರ್ಣವಾಗಿ ಒತ್ತಲ್ಪಡುವುದು. ಆಗ ರಕ್ತವು ತನ್ನ ಶಕ್ತಿಯಿಂದ ಈ ನಾಳದ ಮೂಲಕ ಪ್ರವಹಿಸಲು ಹಾದಿ ಮಾಡಿಕೊಳ್ಳುವುದು. ಅದು ರಕ್ತದ ಗರಿಷ್ಠ ಒತ್ತಡವಾದ ಸಂಕುಚನ ಒತ್ತಡವನ್ನು (ಸಿಸ್ಟೊಲ್) ಸೂಚಿಸುವುದು. ಅನಂತರ ಚೀಲದಲ್ಲಿರುವ ಗಾಳಿಯನ್ನು ನಿಧಾನವಾಗಿ ಹೊರಬಿಡುತ್ತಾ ಸಾಗಿದಂತೆ ಧಮನಿಯ ಮೇಲಿನ ಒತ್ತಡ ಸಂಪೂರ್ಣವಾಗಿ ಇಲ್ಲದಾಗುವುದು, ಅದು ವ್ಯಾಕೋಚನ ಒತ್ತಡ (ಡೈಯಾಸ್ಟೋಲ್) 120/80 ಮಿ.ಮಿ. ಎಚ್.ಜಿ. ಎಂಬುದನ್ನು ಸಾಮಾನ್ಯ ಒತ್ತಡ ಎಂದರೂ ವ್ಯಕ್ತಿಯಿಂದ ವ್ಯಕ್ತಿಗೆ, ಕಾಲ, ಸನ್ನಿವೇಶಗಳಿಗೆ ಸ್ವಲ್ಪ ಮಟ್ಟಿನ ಬದಲಾವಣೆ ಇರುತ್ತದೆ. ಸಂಕುಚನ ಒತ್ತಡವು 100 ರಿಂದ 130ರ ವರೆಗೆ, ವ್ಯಾಕೋಚನ ಒತ್ತಡ 60 ರಿಂದ 90ರ ವರೆಗೆ ವ್ಯತ್ಯಾಸವನ್ನು ತೋರಿಸಬಹುದು. ಅದೆಲ್ಲವನ್ನು ಸಹಜ ಒತ್ತಡ ಎಂದು ಪರಿಗಣಿಸಲಾಗುವುದು. ಸಾಮಾನ್ಯ ಒತ್ತಡವನ್ನು ಕಾಯುವಲ್ಲಿ ನರಮಂಡಲ ಮತ್ತು ರಸದೂತಗಳು ಪ್ರಭಾವ ಬೀರುತ್ತವೆ.

ರಕ್ತದ ಒತ್ತಡದ ಏರಿಕೆಯನ್ನು ಒಂದು ಕಾಯಿಲೆಯೆಂದು ಪರಿಗಣಿಸದೇ ಅದೊಂದು ಲಕ್ಷಣವೆಂದು ತಿಳಿಯಲಾಗುತ್ತದೆ. ಅನೇಕ ಕಾರಣಗಳಿಂದ ರಕ್ತದ ಒತ್ತಡದಲ್ಲಿ ಏರಿಕೆಯುಂಟಾಗುತ್ತದೆ. ಕೋಪ, ಆತಂಕ, ತಳಮಳ ಮುಂತಾದವು ರಕ್ತದ ಒತ್ತಡವನ್ನು ಏರಿಸಬಲ್ಲವು. ಇವೆಲ್ಲವೂ ಸಹಜ ಸನ್ನಿವೇಶಗಳು. ಸಂಪೂರ್ಣ ವಿಶ್ರಾಂತಿಯ ನಂತರ, ಉಲ್ಲಾಸಕರ ಸನ್ನಿವೇಶ, ದೀರ್ಘ ಉಸಿರಾಟ, ಬಿಗಿತ ಸಡಿಲಗೊಳಿಸಿಕೊಳ್ಳುವುದರಿಂದ, ಒತ್ತಡ ಸಹಜ ಸ್ಥಿತಿಗೆ ಬರುತ್ತದೆ. ದಿನನಿತ್ಯದ ಚಟುವಟಿಕೆಗಳು ಒತ್ತಡದ ಮಟ್ಟವನ್ನು ಬದಲಿಸುತ್ತವೆ. ನಿದ್ದೆಯಿಂದ ಎದ್ದ ಮೇಲೆ, ಬೆಳಿಗ್ಗೆ ಒತ್ತಡ ಇರುತ್ತದೆ. ಆದರೆ ಓಡಿದಾಗ, ಬೆಟ್ಟ ಹತ್ತಿದಾಗ, ಮೆಟ್ಟಿಲು ಹತ್ತಿದಾಗ, ಆಟ ನೋಡುತ್ತಿದ್ದಾಗ, ಕೋಪ ಮಾಡಿಕೊಂಡಾಗ, ಉದ್ರಿಕ್ತ, ಬೀಭತ್ಸ ದೃಶ್ಯಗಳನ್ನು ನೋಡುತ್ತಿದ್ದರೆ ಇದರಿಂದ ಉಂಟಾಗುವ ದೈಹಿಕ, ಮಾನಸಿಕ ಸ್ಥಿತಿಗತಿಗಳ ಬದಲಾವಣೆಯು ಒತ್ತಡದ ಮಟ್ಟವನ್ನು ಬದಲಾಯಿಸಬಹುದು. ಈ ರೀತಿಯ ಏರಿಕೆ ನಂತರ ತಾನೇ ಕಡಿಮೆಯಾಗುತ್ತದೆ. ಇದನ್ನು ಮಹತ್ವದ್ದೆಂದು ಪರಿಗಣಿಸಲಾಗುವುದಿಲ್ಲ.

ಪದೇ ಪದೇ ರಕ್ತದ ಒತ್ತಡವನ್ನು ಅಳೆದಾಗ 140/90 ಮಿ.ಮಿ. ಎಚ್.ಜಿ. (ಪಾದರಸ) ಅಥವಾ ಅದಕ್ಕಿಂತ ಹೆಚ್ಚು ಒತ್ತಡವನ್ನು ತೋರಿಸುತ್ತಿದ್ದರೆ ಅದು ರಕ್ತದ ಏರೊತ್ತಡ ಅಥವಾ ಅಧಿಕ ರಕ್ತದ ಒತ್ತಡ, ಹೈ ಬಿ.ಪಿ. ಎನಿಸಿಕೊಳ್ಳುತ್ತದೆ. ರಕ್ತವು ಎಡ ಹೃತ್ಕುಕ್ಷಿಯಿಂದ ಮುಕ್ತವಾಗಿ ಹರಿಯವುದಕ್ಕೆ ರಕ್ತದ ಏರೊತ್ತಡ ಪ್ರತಿಬಂಧಕವಾಗುತ್ತದೆ. ಇದು ಹೃದಯಕ್ಕೆ ಕಠಿಣ ಶ್ರಮವನ್ನೊಡ್ಡುತ್ತದೆ. ರಕ್ತದ ಒತ್ತಡದ ಏರಿಕೆಯಿಂದ ಅದರ ಗುರಿಯ ಅಂಗಗಳಾದ ಹೃದಯ, ಮಿದುಳು, ಮೂತ್ರಪಿಂಡ, ಕಣ್ಣುಗಳಿಗೆ ಯಾವುದೇ ಧಕ್ಕೆಯುಂಟಾಗದಂತೆ ನೋಡಿಕೊಳ್ಳುವುದು ಬಹುಮುಖ್ಯ. ಇಂದು ಸಾಧಾರಣ ಕಾಣಿಸಿಕೊಳ್ಳುವ ಹೃದ್ರೋಗ ರಕ್ತದ ಏರೊತ್ತಡದಿಂದ ಬರುವಂತಹುದು. ಭಾರತದಲ್ಲಿ ಹೃದ್ರೋಗ ಪ್ರಕರಣಗಳಲ್ಲಿ ಮೂರರಲ್ಲಿ ಒಂದು ಪ್ರಕರಣಕ್ಕೆ ರಕ್ತದ ಏರೊತ್ತಡ ಕಾರಣ. ಪ್ರತಿವರ್ಷವೂ ವೃದ್ಧರಲ್ಲಿ ಹೆಚ್ಚಿನ ಸಂಖ್ಯೆಯ ಮರಣವು ರಕ್ತದ ಏರೊತ್ತಡ ಮತ್ತು ಅದರ ದುಷ್ಪರಿಣಾಮದಿಂದಲೇ ಉಂಟಾಗುತ್ತದೆ. ಧಮನಿಗಳು ಪೆಡಸಾಗವುದು, ಪಾರ್ಶ್ವವಾಯು (ಪೆರಾಲಿಸಿಸ್), ಹೃದಯದ ವೈಫಲ್ಯ ಮುಂತಾದವುಗಳು ಸಂಭವಿಸುವುದಕ್ಕೆ ಕಾರಣವಾಗುತ್ತದೆ. ಅನೇಕ ಪ್ರಕರಣಗಳಲ್ಲಿ ಒತ್ತಡ ಏರಿಕೆಗೆ ಕಾರಣಗಳು ನಿಗೂಢ. ಸೌಮ್ಯರೂಪದ ರಕ್ತದ ಒತ್ತಡ ಸಹಜ ಚಟುವಟಿಕೆಯ ದೀರ್ಘಕಾಲದ ಜೀವನಕ್ಕೆ ಅಡ್ಡಿಯಾಗುವುದಿಲ್ಲ. ರಕ್ತದ ಒತ್ತಡದಲ್ಲಿ ಮತ್ತೊಂದು ವಿಷಯವೆಂದರೆ ರಕ್ತದ ಒತ್ತಡ ಹೆಚ್ಚಿಸುವ ಗುಣ ಹೊಂದಿರುವ ನಿರ್ದಿಷ್ಟ ರಾಸಾಯನಿಕ ವಸ್ತುವೊಂದು ರಕ್ತವಾಹಿನಿಯನ್ನು ಸೇರಿ, ರಕ್ತದಲ್ಲಿ ಪರಿಚಲನೆಯಾಗಿ, ಶರೀರದ ಎಲ್ಲ ಕಿರಿಯ ರಕ್ತನಾಳಗಳನ್ನು ಸಂಕುಚನಗೊಳಿಸಿ ರಕ್ತದ ಏರೊತ್ತಡವನ್ನು ಉಂಟುಮಾಡುತ್ತದೆ. ಈ ವಸ್ತುವಿನ ಸ್ವಭಾವ ನಿಗೂಢ. ಹೆಚ್ಚು ಉಪ್ಪಿನ ಸೇವನೆ ಮಾಡುವುದು, ಮದ್ಯಪಾನ, ಪೊಟ್ಯಾಸಿಯಂ ಕೊರತೆ, ಧೂಮಪಾನ, ದೈಹಿಕ ಚಟುವಟಿಕೆ ಇಲ್ಲದಿರುವುದು ರಕ್ತದ ಏರೊತ್ತಡಕ್ಕೆ ಕಾರಣವಾಗಬಹುದು.

ಸಂಕುಚನ ಮತ್ತು ವ್ಯಾಕೋಚನ ರಕ್ತದ ಏರೊತ್ತಡಗಳು ದೇಹದ ಬೇರೆ ಬೇರೆ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರಬಲ್ಲವಾದರೂ, ತೀರ ಇತ್ತೀಚಿನವರೆಗೂ ಕೇವಲ ಏರಿದ ವ್ಯಾಕೋಚನ ಒತ್ತಡ ಹೆಚ್ಚು ಅಪಾಯಕಾರಿ ಎಂಬ ತಿಳುವಳಿಕೆಯಿದ್ದಿತು. ಏರಿದ ಸಂಕುಚನ ಒತ್ತಡ ಹೃದಯ ರಕ್ತನಾಳ ರೋಗದ ಪ್ರಮುಖ ಕಾರಣಗಳ ಲ್ಲೊಂದಾಗಿದ್ದು ಅದನ್ನು ಚಿಕಿತ್ಸೆಯಿಂದ ನಿಯಂತ್ರಣಕ್ಕೆ ತಂದಲ್ಲಿ ಪಾರ್ಶ್ವವಾಯು, ಹೃದಯ ರೋಗಗಳ ಸಂಭವ ದೂರವಾಗುತ್ತವೆಂದು ಇತ್ತೀಚೆಗೆ ಗುರುತಿಸಲಾಗಿದೆ.

ಕೆಲವರಲ್ಲಿ ರಕ್ತದ ಏರೊತ್ತಡ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಕೆಲವರಲ್ಲಿ ತಲೆನೋವು, ಮೂಗಿನಿಂದ ರಕ್ತಸ್ರಾವ ಉಂಟಾಗಬಹುದು. ದೃಷ್ಟಿದೋಷ, ವಾಂತಿ, ತಲೆಸುತ್ತು, ನೆನಪಿನ ಶಕ್ತಿ ಕುಗ್ಗುವುದು ಮುಂತಾದವುಗಳು ರಕ್ತದ ಒತ್ತಡ ತುಂಬ ಹೆಚ್ಚಿದ್ದಾಗ ಕಾಣಿಸಿಕೊಳ್ಳಬಹುದು.

ಬಹಳಷ್ಟು ಜನರಲ್ಲಿ ಸೌಮ್ಯ ರಕ್ತದ ಏರೊತ್ತಡವನ್ನು ಔಷಧರಹಿತವಾಗಿಯೇ ನಿಯಂತ್ರಣಕ್ಕೆ ತರಬಹುದು. ರಕ್ತದ ಏರೊತ್ತಡ ನಿಯಂತ್ರಣಕ್ಕೆ ತರುವ ಕೆಲವು ಸೂತ್ರಗಳು ಹೀಗಿವೆ.

ತೂಕವನ್ನು ಇಳಿಸಿಕೊಳ್ಳುವುದು ಅಥವಾ ಬೊಜ್ಜು ಕರಗಿಸಿಕೊಳ್ಳುವುದು – ಬೊಜ್ಜು – ಅನೇಕ ಹೃದಯ – ರಕ್ತನಾಳ ರೋಗಗಳಿಗೆ ಕಾರಣವಾಗುತ್ತವೆ. ಅನೇಕರು ತೆಳ್ಳಗಿದ್ದವರು ಅಂದರೆ ಬೊಜ್ಜು ಇಲ್ಲದವರಲ್ಲಿ ಕೂಡ ರಕ್ತದ ಏರೊತ್ತಡ ಇರುತ್ತದೆಯೆಂಬುದು ನಿಜವಾದರೂ ಸ್ಥೂಲಕಾಯದ ವ್ಯಕ್ತಿಗಳಲ್ಲಿ ಸಹಜ ತೂಕವುಳ್ಳ ವ್ಯಕ್ತಿಗಳಿಗಿಂತ ಮೂರು ಪಟ್ಟು ಹೆಚ್ಚು ರಕ್ತದ ಏರೊತ್ತಡ ಉಂಟಾಗುತ್ತದೆ. ವ್ಯಕ್ತಿಯ ಎತ್ತರ ಮತ್ತು ವಯಸ್ಸಿಗನುಗುಣವಾಗಿ ಮತ್ತು ಮೂಳೆಗಳ ರಚನೆಗೆ ತಕ್ಕಂತೆ ತೂಕದಲ್ಲಿ ಹೆಚ್ಚಳವಿದೆಯೇ ಎಂದು ಕಂಡುಕೊಳ್ಳಬಹುದು. ಬೊಜ್ಜುಳ್ಳ ವ್ಯಕ್ತಿಗಳು ಹಾಗೆಂದು ಗಾಬರಿಯಾಗಬೇಕಿಲ್ಲ. ಸ್ವಲ್ಪಮಟ್ಟಿಗೆ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡರೂ ಉತ್ತಮ ಫಲಿತಾಂಶ ಅವರದಾಗುತ್ತದೆ. ಅವರ ರಕ್ತದ ಏರೊತ್ತಡ ನಿಯಂತ್ರಣಕ್ಕೆ ಬರಲು ತುಂಬ ಸಹಕಾರಿಯಾಗುತ್ತದೆ. ಕಡಿಮೆ ಪ್ರಮಾಣದಲ್ಲಿ ಕೊಬ್ಬು ಮತ್ತು ಕೆಲೊರಿ ಸೇವಿಸಿ ನಿಯಮಿತವಾಗಿ ವ್ಯಾಯಾಮ, ನಡಿಗೆ ಅಥವಾ ಯೋಗಾಸನ ಮಾಡಿದಲ್ಲಿ ತೂಕ ಇಳಿಸಬಹುದು. ವೇಗಗತಿಯ ನಡಿಗೆಯಲ್ಲಿ ಉಂಟಾಗುವ ಸಂಕುಚನ ಮತ್ತು ಸಡಲಿಕೆಗಳು ಚಕ್ರದಂತೆ ಜರುಗಿ ದೇಹಕ್ಕೆ ಶುದ್ಧವಾದ ಗಾಳಿಯನ್ನು ಒದಗಿಸುತ್ತದೆ.

ಉಪ್ಪಿನ ಸೇವನೆಯಲ್ಲಿ ಮಿತಿ – ಊಟದಲ್ಲಿ ಉಪ್ಪಿನ ಸೇವನೆಯನ್ನು ಮಿತಿಗೊಳಿಸಿಕೊಳ್ಳಬೇಕು. ಕಡಿಮೆ ಉಪ್ಪು ಸೇವನೆ 8-10 ಮಿ.ಮೀ. ಎಚ್.ಜಿ. ಒತ್ತಡವನ್ನು ಕಡಿಮೆ ಮಾಡಬಲ್ಲುದು. ವೃದ್ಧರಲ್ಲಿ ಇದು ಹೆಚ್ಚು ಪರಿಣಾಮಕಾರಿ ಎನಿಸಿದೆ. ದಿನನಿತ್ಯದ ಆಹಾರದಲ್ಲಿ ಈಗ ತೆಗೆದುಕೊಳ್ಳುತ್ತಿರುವ ಉಪ್ಪಿನ ಪ್ರಮಾಣದಲ್ಲಿ 5 ಗ್ರಾಂ ತಗ್ಗಿಸಬೇಕು. ಊಟ ಮಾಡುವಾಗ ಮೇಲೆ ಉಪ್ಪು ಹಾಕಿಕೊಳ್ಳುವುದು ಬೇಡ. ಮೊಸರನ್ನಕ್ಕೂ, ಮಜ್ಜಿಗೆಗೂ ಉಪ್ಪು ಹಾಕಿಕೊಳ್ಳುವುದು ಬೇಡ. ಸೊಪ್ಪುಗಳನ್ನು ಬೇಯಿಸುವಾಗಲೂ ಅತ್ಯಂತ ಕಡಿಮೆ ಉಪ್ಪು ಹಾಕಬೇಕು ಅಥವಾ ಹಾಕದೇ ಇದ್ದರೂ ಒಳ್ಳೆಯದು. ಏಕೆಂದರೆ ಅದರಲ್ಲಿಯೇ ಉಪ್ಪಿನಂಶ ಇರುತ್ತದೆ. ಉಪ್ಪಿನ ಅಂಶ ಹೆಚ್ಚಿರುವಂತಹ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಚೀಪ್ಸ, ಉಪ್ಪಿರುವ ಬ್ರೆಡ್ ಸೇವನೆ ಬೇಡ. ಅದಕ್ಕೆ ಬದಲು ಸೈಂಧವ ಲವಣ ತೆಗೆದುಕೊಳ್ಳಬಹುದು. ಅದರಲ್ಲಿ ಪೊಟ್ಯಾಸಿಯಂ ಇರುತ್ತದೆ. ಇದು ರಕ್ತದ ಏರೊತ್ತಡವನ್ನು ಇಳಿಸುತ್ತದೆ.

ಮದ್ಯಪಾನ ನಿಲ್ಲಿಸಿ – ಮದ್ಯಪಾನಕ್ಕೂ ಮತ್ತು ರಕ್ತದ ಏರೊತ್ತಡಕ್ಕೂ ಬಲು ಹತ್ತಿರದ ನಂಟು. ಮದ್ಯಪಾನಿಗಳು ಮದ್ಯದ ಪ್ರಮಾಣವನ್ನು ತಗ್ಗಿಸುತ್ತ ಬಂದು ನಿಲ್ಲಿಸಬಹುದು.

ಪ್ರೊಟಿನ್ ಹೆಚ್ಚು ಸೇವಿಸಿ – ಕೆಲವು ಅಧ್ಯಯನಗಳಿಂದ ಪ್ರೊಟಿನ್ ಹೆಚ್ಚು ಸೇವಿಸುವುದರಿಂದ ಏರೊತ್ತಡ ಕಡಿಮೆಯಾಗುತ್ತದೆಂದು ತಿಳಿದುಬಂದಿದೆ. ಆದರೆ ಪ್ರಾಣಿಜನ್ಯ ಪ್ರೊಟಿನ್‌ಗಿಂತ ಸಸ್ಯಜನ್ಯ ಪ್ರೊಟಿನ್ ಉತ್ತಮ. ಅದರಲ್ಲಿನ ಅಮೈನೋ ಆಮ್ಲಗಳ ರಚನೆ ಮುಖ್ಯವಾಗಿದೆ.

ಧೂಮಪಾನ – ಹೃದಯ ರೋಗಗಳು ಮತ್ತು ಮಿದುಳಿನ ರಕ್ತನಾಳದ ರೋಗಗಳಿಗೆ ಧೂಮಪಾನ ಬಹುಮುಖ್ಯ ಕಾರಣವೆನ್ನಿಸಿದೆ. ಧೂಮಪಾನವನ್ನು ನಿಲ್ಲಿಸಲೇಬೇಕು.

ಸದಾ ಸಂತಸದಿಂದಿರಿ – ನಾವು ಆತಂಕದಿಂದ ಇದ್ದಾಗ ನಮ್ಮ ರಕ್ತದ ಒತ್ತಡ ಏರುತ್ತದೆ. ಸಂತೋಷದಿಂದ ಇದ್ದಾಗ ಇಳಿಯುತ್ತದೆ. ಇದು ಸಂಶೋಧನೆಗಳಿಂದಲೂ ದೃಢಪಟ್ಟಿದೆ. ಭಾವನೆಗಳು ತೀವ್ರವಾಗಿರುವಾಗ, ಉದ್ವಿಗ್ನಗೊಂಡಾಗ, ಕೋಪದಿಂದ ರಕ್ತದ ಒತ್ತಡವು ಹೆಚ್ಚುತ್ತದೆ. ಇದಲ್ಲದೇ ಅಧ್ಯಯನಗಳ ಪ್ರಕಾರ ಮನೆಯ ಒಳಗಿನ ಆತಂಕಕ್ಕಿಂತ ಹೊರಗಿನ ಆತಂಕಗಳು ರಕ್ತದ ಒತ್ತಡವನ್ನು ಹೆಚ್ಚಿಸುತ್ತವೆ. ಉದಾ :- ಟ್ರಾಫಿಕಸಿಕ್ಕಿಹಾಕಿಕೊಂಡಿರುತ್ತೇವೆ. ಮುಂದುಗಡೆ ವಾಹನಗಳು ಮುಂದೆ ಸಾಗಲ್ಲ. ಬೈದುಕೊಳ್ಳುತ್ತಿರುತ್ತೇವೆ. ಆಗ ಟೆನ್ಶನ್ ಇರುತ್ತದೆ. ಅದನ್ನು ಕಡಿಮೆ ಮಾಡಿಕೊಳ್ಳ ಬೇಕೆಂದರೆ ಸಂಗೀತವನ್ನೋ ಇಲ್ಲವೇ ಉತ್ತಮವಾದ ಭಾಷಣಗಳನ್ನೋ ಕೇಳುತ್ತಾ ಹೋಗಬೇಕು. ಮನಸ್ಸಿಗೆ ತಂತಾನೇ ಶಾಂತಿ ಮೂಡುತ್ತದೆ. ಟೆನ್ಶನ್ ಮಾಡಿಕೊಂಡರೆ ಟ್ರಾಫಿಕ ಏನೂ ಕಮ್ಮಿಯಾಗುವುದಿಲ್ಲ ಅಲ್ಲವೇ ?

ಮಾತು ಕಡಿಮೆ ಮಾಡಿ – ಅನಾವಶ್ಯಕವಾಗಿ ಜಗಳವಾಡುವುದರಿಂದ, ವಾದ ಮಾಡುವುದರಿಂದಲೂ ಅಂದರೆ ಗಂಡ, ಹೆಂಡತಿ ಮೇಲೆ ರೇಗುವುದು, ಹೆಂಡತಿ, ಗಂಡನ ಮೇಲೆ ರೇಗುವುದು, ಬಾಸ್ ತನ್ನ ಕೆಳಗಿನವರ ಮೇಲೆ ಕೂಗಾಡುವುದರಿಂದ ರಕ್ತದ ಒತ್ತಡ ಹೆಚ್ಚುತ್ತದೆ. ಎತ್ತರದ ಧ್ವನಿಯಲ್ಲಿ ನಾವು ಕೂಡಾಗುವುದರಿಂದ ಸಹಜವಾಗಿರುವವರಿಗೆ ಶೇಕಡ 10 ರಿಂದ 50ರ ವರೆಗೂ ರಕ್ತದ ಒತ್ತಡ ಹೆಚ್ಚುತ್ತದೆ. ರಕ್ತದ ಏರೊತ್ತಡವಿರುವವರಲ್ಲಿ ಇದು ಇನ್ನಷ್ಟು ಹೆಚ್ಚಾಗುತ್ತದೆ.

ನಿಮ್ಮ ಗಂಡ/ಹೆಂಡತಿಯ ರಕ್ತದ ಒತ್ತಡ ಗಮನಿಸಿ – ದೀರ್ಘಕಾಲದ ಸಂಸಾರ ನಡೆಸಿದ ನಂತರ, ವಯಸ್ಸಾದ ನಂತರ ಗಂಡ ಹೆಂಡಿರಲ್ಲಿ ಅನೇಕ ವಿಷಯಗಳಲ್ಲಿ ವಾಗ್ವಾದಗಳಾಗಬಹುದು. ಕೆಲವರು ಸದಾ ಅತೃಪ್ತಿಯನ್ನು ಅನುಭವಿಸುತ್ತಿರುತ್ತಾರೆ. ಒಬ್ಬರು ಡಯಾಬೆಟಿಕ ಇದ್ದಾಗ ಸಿಹಿ ಅವರಿಗೆ ಕೊಡದೇ ಇವರು ತಿನ್ನುವುದಕ್ಕೆ ಆಗುವುದಿಲ್ಲ. ತಿನ್ನಬೇಕು ಅಂತ ಇಷ್ಟವಿರುತ್ತದೆ. ಅದು ಮನಸ್ಸಲ್ಲೇ ಕೊರೆಯುತ್ತಿರುತ್ತದೆ. ಹೀಗೆ ಬೇರೆ ಬೇರೆ ಕಾರಣಗಳಿರಬಹುದು. ಒಬ್ಬರಿಗೆ ರಕ್ತದ ಒತ್ತಡ ಇದೆಯೆಂದು ಕೂಡಲೇ ವೈದ್ಯರ ಬಳಿ ಹೋದಾಗ ಇಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಚಿಕಿತ್ಸೆ : ಆರಂಭದ ಹಂತದಲ್ಲಿ ಕೇವಲ ಪಥ್ಯ, ವ್ಯಾಯಾಮ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವ ಚಟುವಟಿಕೆಗಳಿಂದ ನಿಯಂತ್ರಣಕ್ಕೆ ತರಬಹುದಾಗಿದೆ.

ಮನೆ ಔಷಧಿ :

1) ಸರ್ಪಗಂಧದ ಬೇರನ್ನು ಕುಟ್ಟಿ ನುಣ್ಣಗಿನ ಪುಡಿ ಮಾಡಿಟ್ಟು ಕೊಳ್ಳಬೇಕು. ಇದನ್ನು ಒಂದು ಚಮಚೆ ದಿನಕ್ಕೆರಡು ಬಾರಿ ಬೆಳಿಗ್ಗೆ ಹಾಗೂ ಸಂಜೆ ಜೇನುತುಪ್ಪದಲ್ಲಿ ಬೆರೆಸಿ ಸೇವನೆ ಮಾಡಬೇಕು.

2) ಬೆಳಿಗ್ಗೆ ಹಾಗೂ ಸಂಜೆ ಹಸಿ ಈರುಳ್ಳಿಯ ರಸದಲ್ಲಿ ಜೇನುತುಪ್ಪ ಬೆರೆಸಿ ಸೇವಿಸಬೇಕು.

3) ಒಂದು ಲೋಟ ಹಾಲಿನಲ್ಲಿ ಒಂದು ಇಡೀ ಬೆಳ್ಳುಳ್ಳಿಯನ್ನು ಹಾಕಿ ಕುದಿಸಿ ಅದಕ್ಕೆ 10 ಗ್ರಾಂ ಒಣದ್ರಾಕ್ಷಿ ಸೇರಿಸಿ ಇಡಬೇಕು. ರಾತ್ರಿ ಮಲಗುವಾಗ ಆ ಬೆಳ್ಳುಳ್ಳಿಯನ್ನು ತೆಗೆದು ಹಾಕಿ ದ್ರಾಕ್ಷಿ ತಿಂದು ಹಾಲು ಕುಡಿಯಬೇಕು. ಇದನ್ನು 15 ದಿನದಿಂದ 1 ತಿಂಗಳು ಮಾಡಬೇಕು.

4) ಅಮೃತಬಳ್ಳಿಯನ್ನು ಜಜ್ಜಿ ರಸ ತೆಗೆದು ಎರಡು ಚಮಚೆಯಷ್ಟು ಬೆಳಿಗ್ಗೆ ಹಾಗೂ ರಾತ್ರಿ ಊಟಕ್ಕೆ ಮುಂಚೆ ಕುಡಿಯಬೇಕು.

5) ಬ್ರಾಹ್ಮಿ ಎಲೆಯ ರಸವನ್ನು ದಿನಕ್ಕೆರಡು ಬಾರಿ ಎರಡು ಚಮಚೆ ಜೇನುತುಪ್ಪದೊಂದಿಗೆ ಸೇವಿಸಬೇಕು.

6) ಬೇವಿನೆಲೆಯ ರಸ ಇಲ್ಲವೇ ಬೇವಿನ ತೊಗಟೆಯ ಕಷಾಯ ತಯಾರಿಸಿ ನಿಯಮಿತವಾಗಿ ಸೇವಿಸಿದಲ್ಲಿ ರಕ್ತದ ಏರೊತ್ತಡ ನಿಯಂತ್ರಣಕ್ಕೆ ಬರುತ್ತದೆ.

7) ಮೆಂತ್ಯದ ಪುಡಿ ಒಂದು ಚಮಚೆಯಷ್ಟನ್ನು ನೀರಿನೊಂದಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.

8) ದಾಲ್ಚಿನ್ನಿಯ ಪುಡಿಯನ್ನು ಅರ್ಧ ಚಮಚೆ ಜೇನಿನೊಂದಿಗೆ ಇಲ್ಲವೇ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಬೇಕು.

9) ಸದಾಪುಷ್ಪಿಯ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಒಂದು ಚಮಚೆ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕಾಯಿಸಿ ಕಷಾಯ ತಯಾರಿಸಬೇಕು. ಈ ಕಷಾಯವನ್ನು ಬೆಳಿಗ್ಗೆ ಹಾಗೂ ಸಂಜೆ ಸೇವಿಸಬೇಕು.

10) ಬ್ರಾಹ್ಮಿ ತೈಲವನ್ನು ತಲೆಗೆ ಲೇಪಿಸಿಕೊಳ್ಳಬೇಕು. ಗುಲಾಬಿ ತೈಲವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಿಕೊಳ್ಳಬಹುದು.

ಮನೆ ಔಷಧಿಯಿಂದ ರಕ್ತದ ಒತ್ತಡ ಕಡಿಮೆಯಾಗದಿದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಔಷಧಿ ಸೇವನೆ ಮಾಡಬೇಕು. ಕೆಲವರಲ್ಲಿ ಅತಿಯಾದ ಆತಂಕ, ಖಿನ್ನತೆಗಳಿದ್ದು ರಕ್ತದ ಏರೊತ್ತಡ ಔಷಧಿಯಿಂದ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಪಂಚಕರ್ಮ ಚಿಕಿತ್ಸೆ ನೀಡಬೇಕಾಗುತ್ತದೆ. ಶಿರೋಧಾರ ಅದರಲ್ಲಿಯೂ ತಕ್ರಧಾರಾ ಚಿಕಿತ್ಸೆ ತುಂಬ ಉತ್ತಮವಾದುದು. ಔಷಧ ದ್ರವ್ಯಗಳಿಂದ ಕಷಾಯ ತಯಾರಿಸಿ ಮಜ್ಜಿಗೆಯೊಂದಿಗೆ ಬೆರೆಸಿ ಅದರಿಂದ ಧಾರಾ ಚಿಕಿತ್ಸೆ ನೀಡುವುದು ತುಂಬ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ರಕ್ತದ ಏರೊತ್ತಡ ಹೊಂದಿರುವವರು ಅವರ ಆರೋಗ್ಯದ ಬಗೆಗಿನ ಕೌಟುಂಬಿಕ ಇತಿಹಾಸ, ಸಕ್ಕರೆ ಕಾಯಿಲೆ, ಇತರ ಕಾಯಿಲೆಗಳೇನಾದರೂ ಇದೆಯೇ ಎಂಬುದನ್ನು ಗಮನಿಸಿ ಅವುಗಳಿಗೂ ಚಿಕಿತ್ಸೆ ತೆಗೆದುಕೊಳ್ಳಬೇಕು. ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ದೈಹಿಕ ವ್ಯಾಯಾಮದತ್ತ ಗಮನಕೊಟ್ಟು ದೇಹದ ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಆಹಾರ, ಮನೋಲ್ಲಾಸಕರ ಹವ್ಯಾಸಗಳು ಜೀವನಕ್ಕೆ ಹೊಸ ಹುರುಪು ತಂದುಕೊಟ್ಟು ಒತ್ತಡವನ್ನು ಹತೋಟಿಯಲ್ಲಿರಿಸುತ್ತವೆ. ರಕ್ತದ ಒತ್ತಡ ಸರಿಯಾದ ಮಟ್ಟ ಕಾಯ್ದುಕೊಂಡಲ್ಲಿ ಹೃದಯ, ಮಿದುಳು ಮತ್ತು ಮೂತ್ರಪಿಂಡದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು. ಏರೊತ್ತಡಕ್ಕೆ ಗುಡ್‌ಬೈ ಹೇಳಿ ಆರೋಗ್ಯಕರ ಜೀವನ ನಡೆಸಬಹುದು.

ಲೋ ಬಿ.ಪಿ. ಅಥವಾ ರಕ್ತದೊತ್ತಡ ತಗ್ಗುವುದು – ಕೆಲವರಲ್ಲಿ ಸಡ್ ಆಗಿ ಎದ್ದು ನಿಂತರೆ ತಲೆಸುತ್ತು ಕಂಡುಬರುತ್ತದೆ. 20 ಮಿ.ಮಿ. ಎಚ್.ಜಿ. (ಪಾದರಸ) ಒತ್ತಡ ಕಡಿಮೆಯಾಗಬಹುದು. ರಕ್ತದ ಏರೊತ್ತಡಕ್ಕೆ ಹೋಲಿಸಿದರೆ ಇದು ಕಡಿಮೆ ಜನರನ್ನು ಕಾಡಿಸುತ್ತದೆ ಮತ್ತು 55 ವರ್ಷ ಮೀರಿದವರಲ್ಲಿ ಹೆಚ್ಚಿನಂಶ ಲೋ ಬಿ.ಪಿ. ಕಂಡುಬರುವುದಿಲ್ಲ. ರಕ್ತದ ಏರೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿರುವವರಲ್ಲಿ, ಖಿನ್ನತೆ ನಿವಾರಕಗಳನ್ನು ತೆಗೆದುಕೊಳ್ಳುವವರಲ್ಲಿ, ಮೂತ್ರದ ಹೆಚ್ಚಳಕ್ಕೆ ಔಷಧಿ ತೆಗೆದುಕೊಳ್ಳುತ್ತಿರುವವರಲ್ಲಿ, ಹೃದ್ರೋಗಕ್ಕೆ ಔಷಧಿ ತೆಗೆದುಕೊಳ್ಳುತ್ತಿರುವವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಸಣ್ಣಗೆ ತಲೆನೋವು, ಬೆವರುವುದು, ಅಶಕ್ತತೆ, ತಲೆಸುತ್ತಿ ಬೀಳುವುದು ಮುಂತಾದವುಗಳ ಕಂಡು ಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು. ಕೆಲವು ಸರಳ ವ್ಯಾಯಾಮಗಳು ರಕ್ತದ ಒತ್ತಡ ಹೆಚ್ಚಿಸಬಲ್ಲವು. 100 ಸಂಖ್ಯೆಯನ್ನು ಎಷ್ಟು ಬೇಗ ಸಾಧ್ಯವಾಗುವುದೋ ಅಷ್ಟು ವೇಗವಾಗಿ 1ರವರೆಗೂ ಉಲ್ಟಾ ಎಣಿಸುವುದು. ಒಂದು ಲೋಟ ನೀರಿಗೆ ಚಿಟಿಕೆ ಉಪ್ಪು, ಒಂದು ಚಮಚ ಸಕ್ಕರೆ ಹಾಕಿ ಕುಡಿಯುವುದು, ನೀರನ್ನು ಹೆಚ್ಚು ಕುಡಿಯುವುದು, ಜ್ಯೂಸ್, ಗಂಜಿ ಮುಂತಾದವುಗಳನ್ನು ಹೆಚ್ಚು ಕುಡಿಯುವುದು. ಒಂದೇ ಬಾರಿಗೆ ಹೊಟ್ಟೆ ತುಂಬ ತಿನ್ನುವುದಕ್ಕಿಂತ ಆಗಾಗ ಸ್ವಲ್ಪ ಸ್ವಲ್ಪ ತಿನ್ನುವುದು, ಮಲಗಿಕೊಳ್ಳುವಾಗ ದಿಂಬು ಸ್ವಲ್ಪ ಎತ್ತರವಾಗಿರಲಿ. ಏಳುವಾಗ ನಿಧಾನವಾಗಿ ಸ್ವಲ್ಪ ಹೊತ್ತು ಹಾಸಿಗೆಯ ಮೇಲೆ ಕುಳಿತು ನಂತರ ಏಳುವುದು. ತಕ್ಷಣವೇ ಏಳಬಾರದು.

ಆಗಾಗ ರಕ್ತದ ಒತ್ತಡವನ್ನು ಗಮನಿಸಿಕೊಳ್ಳುತ್ತಿರಬೇಕು.

1) ಅಶ್ವಗಂಧ ಪುಡಿಯನ್ನು ಒಂದು ಚಮಚೆಯಷ್ಟನ್ನು ಜೇನುತುಪ್ಪದೊಂದಿಗೆ ಬೆರೆಸಿ ಊಟದ ನಂತರ ಎರಡು ಹೊತ್ತು ಸೇವಿಸಬೇಕು.

2) ಶತಾವರಿ ಪುಡಿಯನ್ನು ಜೇನು ಇಲ್ಲವೇ ಹಾಲಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

3) ಆಹಾರದಲ್ಲಿ ಹೆಚ್ಚು ಹಣ್ಣುಗಳ ಸೇವನೆ ಇರಲಿ. ಹಾಲು, ಮೊಸರು, ತುಪ್ಪ ಸೇವಿಸಿ.