ಆಧುನಿಕ ಬದುಕಿನ ಶೈಲಿಯ ಬಳುವಳಿ ಈ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಅಂದರೆ ತಪ್ಪಾಗಲಾರದು. ಇದು ಸ್ಪರ್ಧಾತ್ಮಕ ಯುಗ.ಎಲ್ಲಾ ರಂಗಗಳಲ್ಲಿಯೂ ಸ್ಪರ್ಧೆಯ ಮೂಲಕ ಮುಂದೆ ಹೋಗುವ ಬಯಕೆ. ಜನಸಂಖ್ಯಾ

ಸ್ಫೋಟದ ಈ ಯುಗದಲ್ಲಿ ನಿರುದ್ಯೋಗ, ವಸತಿ ಸೌಕರ್ಯಗಳ ಕೊರತೆ ಎಲ್ಲರನ್ನು ಕಾಡುತ್ತಿದೆ. ಈ ಗಣಕಯಾಂತ್ರಿಕ ಯುಗದಲ್ಲಿ ಯುವ ಜನತೆ ಹಗಲು-ರಾತ್ರಿ ವ್ಯತ್ಯಾಸವೆನ್ನದೇ ದುಡಿಯುತ್ತ ತಮ್ಮ ದೇಹದ ಶಕ್ತಿಗಿಂತ ಎರಡು ಪಟ್ಟು – ನಾಲ್ಕು ಪಟ್ಟು ಕೆಲಸ ಮಾಡುತ್ತ, ಅವಧಿ ಪೂರ್ಣವಾಗುವುದರೊಳಗೆ ಕೆಲಸವನ್ನು ಪೂರೈಸಲು ಒದ್ದಾಡುತ್ತ ತೀವ್ರತರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದಾಗಿ 30 ವರ್ಷಕ್ಕೆ ಕಾಯಿಲೆಗೆ ಅವರಿಗರಿವಿಲ್ಲದೇ ಆಹ್ವಾನ ನೀಡುತ್ತಾರೆ. ಮಧುಮೇಹವನ್ನು ಒಂದು ಕಾಯಿಲೆ ಎಂದು ಪರಿಗಣಿಸದೇ ರಕ್ತದಲ್ಲಿ ಸಕ್ಕರೆ ಅಂಶದಲ್ಲಿನ ಹೆಚ್ಚಳ ಎಂದು ಮಾತ್ರ ಗುರುತಿಸಬೇಕು. ಆಯುರ್ವೇದದಲ್ಲಿ ಇದನ್ನು ಕಫದೋಷದಿಂದ ಉತ್ಪತ್ತಿ ಯಾಗುವಂತಹುದು ಎಂದು ಹೇಳಿದ್ದಾರೆ. ಹತ್ತು ವಿಧವಾದ ಪ್ರಮೇಹ ರೋಗಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹ ಅನುವಂಶೀಯವಾಗಿ ಬರಬಹುದು. ಇಲ್ಲವೇ ವ್ಯಕ್ತಿಯ ಮಿತಿಯಿಲ್ಲದ ಆಹಾರ ಸೇವನೆ, ವ್ಯಾಯಾಮವಿಲ್ಲದ ಆರಾಮದಾಯಕ ಜೀವನಶೈಲಿ ಮತ್ತು ಮಾನಸಿಕ ಒತ್ತಡದ ಬದುಕು ಈ ಎಲ್ಲವೂ ಕಾರಣಗಳಾಗಿರಬಹುದು. ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಜೀವಕಣಗಳು ಉತ್ಪತ್ತಿ ಮಾಡುವ ಇನ್ಸುಲಿನ್‌ ವ್ಯತ್ಯಯ ಆಗುತ್ತದೆ. ಇನ್ಸುಲಿನ್ ಉತ್ಪತ್ತಿ ಕಡಿಮೆ ಆಗಬಹುದು ಅಥವಾ ಉತ್ಪತ್ತಿಯಾದರೂ ಅದು ಕಾರ್ಯಶೂನ್ಯ (ಇನ್ಆಕ್ಟಿವ್) ಆಗಬಹುದು. ಇದರಿಂದ ಶರೀರದ ಪೋಷಣೆ ಸರಿಯಾಗಿ ಆಗುವುದಿಲ್ಲ. ಏಕೆಂದರೆ ಇದರಿಂದ ಆಹಾರದಲ್ಲಿ ಸಕ್ಕರೆ ಮತ್ತು ಪಿಷ್ಠದ ಅಂಶಗಳನ್ನು ಶರೀರದ ಜೀವಕೋಶಗಳು ಸರಿಯಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವುದಿಲ್ಲ. ಇದರಿಂದ ರಕ್ತದಲ್ಲಿ ಸಕ್ಕರೆಯ ಅಂಶವು ಮೂತ್ರಪಿಂಡಗಳು ಉಳಿಸಿಕೊಳ್ಳುವ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ಸಂಗ್ರಹವಾಗುತ್ತದೆ. ಇದರ ಪರಿಣಾಮವೇನೆಂದರೆ ಮೂತ್ರದಲ್ಲಿ ಸಕ್ಕರೆ ಜೊತೆಯಲ್ಲಿ ಖನಿಜಾಂಶಗಳು ಮತ್ತು ನೀರಿನಲ್ಲಿ ಕರಗುವಂತಹ ವಿಟಮಿನ್‌ಗಳು (ಜೀವಸತ್ವಗಳು) ಹೊರಹೋಗುತ್ತವೆ. ಶರೀರದ ಜೀವಕೋಶಗಳಲ್ಲಿ ಆಮ್ಲಜನಕದ ಸಹಾಯದಿಂದ ಸಕ್ಕರೆಯನ್ನು ಜೀರ್ಣಿಸುವುದಕ್ಕೆ ಇನ್ಸುಲಿನ್ ಅತ್ಯಂತ ಅವಶ್ಯಕ.

ವಿಶ್ವದಾದ್ಯಂತ ಮಧುಮೇಹ ಶೇ. 4ರಷ್ಟು ಮಧ್ಯ ವಯಸ್ಕರಲ್ಲಿದೆ. ವಿಶ್ವದಲ್ಲಿ ಸುಮಾರು 143 ದಶಲಕ್ಷ ಜನ ಬಳಲುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ 2025ನೇ ಇಸವಿ ಹೊತ್ತಿಗೆ ಶೇ. 5.4 ತಲುಪುವ ಅಂದಾಜಿದೆ ಅಂದರೆ 300 ದಶಲಕ್ಷ ಜನ ಇದಕ್ಕೆ ಗುರಿಯಾಗಬಹುದು. ಇದರಲ್ಲಿ ಶೇ. 77ರಷ್ಟು ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ರಾಷ್ಟ್ರಗಳಲ್ಲಿ ಎಂದು ತಿಳಿದುಬಂದಿದೆ. ನಗರೀಕರಣ, ಕೈಗಾರಿಕೆಗಳು, ಆರ್ಥಿಕ, ಸಾಮಾಜಿಕ ಮುನ್ನಡೆ ಇದಕ್ಕೆ ಕಾರಣವೆಂದು ಭಾವಿಸಬಹುದು. ನಗರ ಪ್ರದೇಶಗಳಲ್ಲಿನ ಜನರ ಬೊಜ್ಜು ಕೂಡ ಒಂದು ಪ್ರಮುಖ ಕಾರಣ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೋಲಿಸಿದಾಗ ಮಧುಮೇಹ ಉಂಟಾಗುವ ವಯೋಮಾನದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. 45 ರಿಂದ 65 ವರ್ಷ ವಯೋಮಾನದವರಲ್ಲಿ ಹೆಚ್ಚು. ಕೆಲವರಲ್ಲಿ 30-35ಕ್ಕೆಲ್ಲ ಕಾಣಿಸಿಕೊಳ್ಳುವುದು ಇದೆ. ಅಂದರೆ ದುಡಿಯುವ ವಯಸ್ಸಿನವರಲ್ಲಿ ಬರುವುದು ಹೆಚ್ಚು. ಪ್ರಸ್ತುತ ಮಧುಮೇಹ ಏಷ್ಯಾ ಖಂಡದ ಅತಿಮುಖ್ಯವಾದ ಆರೋಗ್ಯದ ಪಿಡುಗಾಗಿದೆ.

ಯಾವ ಲಕ್ಷಣಗಳು ಕಂಡು ಬರುತ್ತವೆ ?

ಅತೀ ಹಸಿವು, ಬಾಯಿ ಒಣಗುವುದು, ಅತಿ ದಾಹ, ಅತಿ ಪ್ರಮಾಣದ ಮೂತ್ರ ವಿಸರ್ಜನೆ, ಪದೇ ಪದೇ ಮತ್ತು ಅವಸರವಾಗಿ ಮೂತ್ರ ವಿಸರ್ಜನೆ ಮಾಡಬೇಕಾಗಿ ಬರುವುದು, ಈ ಎಲ್ಲ ಲಕ್ಷಣಗಳು ಇರುತ್ತವೆ. ಆರಂಭದ ಹಂತದಲ್ಲಿ  ಅಸ್ಪಷ್ಟವಾದ, ವಿವರಿಸಲಾಗದ ಆಯಾಸ, ಸುಸ್ತು, ದೈಹಿಕ ಮತ್ತು ಮಾನಸಿಕ ಬಲಹೀನತೆ, ತೂಕ ಕಳೆದುಕೊಳ್ಳುವುದು, ಮೈ ಕೈ ನೋವು, ಪದೇ ಪದೇ ಕನ್ನಡಕ ಬದಲಾಯಿಸಬೇಕಾಗುವ ದೃಷ್ಟಿ ದೋಷಗಳು, ಜನನೇಂದ್ರಿಯದಲ್ಲಿ ನವೆಯಾಗುವುದು, ಲೈಂಗಿಕ ದುರ್ಬಲತೆ ಮುಂತಾದ ತೊಂದರೆಗಳು ಕಂಡುಬಂದಲ್ಲಿ ಸಕ್ಕರೆ ಕಾಯಿಲೆ ಇರಬಹುದೇನೋ ಎಂಬ ಅನುಮಾನದಿಂದ ರಕ್ತ ಮತ್ತು ಮೂತ್ರದ ಪರೀಕ್ಷೆ ಮಾಡಿಸಬೇಕು. ಅದರಲ್ಲಿಯೂ ತಂದೆ-ತಾಯಿ ಮತ್ತು ರಕ್ತ ಸಂಬಂಧಿಗಳಲ್ಲಿ ಮಧುಮೇಹವಿದ್ದಲ್ಲಿ 35 ವರ್ಷ ದಾಟಿದ ನಂತರ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಕುಟುಂಬದವರಲ್ಲಿ ಮಧುಮೇಹವಿದ್ದ ಪ್ರತಿಯೊಬ್ಬರೂ ಮಧುಮೇಹದ ವಾಹಕ (ಕ್ಯಾರಿಯ್) ಎಂದು ಅನುಮಾನಪಡಬೇಕು. ಈ ರೋಗ ವಾಹಕರು ಮಧುಮೇಹಕ್ಕೆ ಬಹಳ ಬೇಗ ಒಳಗಾಗುತ್ತಾರೆ. ಪ್ರೌಢಾವಸ್ಥೆ, ಗರ್ಭಾವಸ್ಥೆ, ಋತುಬಂಧ, ಮಾನಸಿಕ ಒತ್ತಡ ಅಥವಾ ಚಿಂತೆ ಮಧುಮೇಹವನ್ನು ಉಂಟುಮಾಡುತ್ತದೆ.

ಮಧುಮೇಹವನ್ನು ಸರಿಯಾಗಿ ನಿಯಂತ್ರಿಸಿದಲ್ಲಿ ಯಾವುದೇ ತೊಂದರೆಗಳಿಲ್ಲದೇ ಬದುಕನ್ನು ನಡೆಸಬಹುದು. ಆಹಾರ, ಔಷಧಿ, ವ್ಯಾಯಾಮ ಮತ್ತು ಮಾನಸಿಕ ಒತ್ತಡವನ್ನು ನಿಭಾಯಿಸುವುದು ಈ ಎಲ್ಲವನ್ನು ಸರಿಯಾಗಿ ಪಾಲಿಸಿದಲ್ಲಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸುವುದು ಕಷ್ಟವೇನಿಲ್ಲ. ಒಂದು ಮಾತು ನೆನಪಿಟ್ಟುಕೊಳ್ಳಬೇಕು. ಯಾವುದೇ ಚಿಕಿತ್ಸಾ ಪದ್ಧತಿಯಿಂದ ಇದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ನಿಯಂತ್ರಣದಲ್ಲಿರಿಸಬಹುದು ಅಷ್ಟೇ. ನಿಯಂತ್ರಣ ದಲ್ಲಿರಿಸುವುದರಿಂದ  ದೀರ್ಘಾಯುಷ್ಯದ  ಬದುಕು  ಅವರದಾಗುತ್ತದೆ.

ಮಧುಮೇಹ ಅಂತ ತಿಳಿದ ಕೂಡಲೇ ಖಿನ್ನತೆಗೆ ಒಳಗಾಗುವುದು ಸಾಮಾನ್ಯ. ಏನೋ ಕಾಯಿಲೆ ಬಂದು ಬಿಟ್ಟಿತು ಎಂದು ಹೆದರಿಕೊಳ್ಳುತ್ತಾರೆ. ಯಾವುದೇ ಒಂದು ಕಾಯಿಲೆ ಬೇರೆಯವರಿಗೆ ಬಂದಾಗ ನಾವೇ ಅನೇಕ ಸಲಹೆ-ಸೂಚನೆ ಕೊಡುತ್ತಿರುತ್ತೇವೆ. ನಮಗೇ ಬಂದಾಗ ಹೆದರಿ ಬೆಂಡಾಗಿ ಬಿಡುತ್ತೇವೆ. ಬೇರೆಯವರಿಗೆ ನಾವು ಏನೇನು ಸಲಹೆ, ಸೂಚನೆಗಳನ್ನು ಕೊಡುತ್ತೀವೋ ನಾವೂ ಅವುಗಳನ್ನು ಪಾಲಿಸಬೇಕು. ಹೌದು ಬಂದಿದೆ, ಅದನ್ನು ನಿಭಾಯಿಸುವುದಷ್ಟೇ ನಮ್ಮ ಕೆಲಸ ಅಂತ ತಿಳಿಯಬೇಕು. ಗೆಳೆಯ/ಗೆಳತಿಯನ್ನು ಹೇಗೆ ಪ್ರೀತಿಸುತ್ತೇವೋ ಹಾಗೆಯೇ ಕಾಯಿಲೆಯ ಬಗೆಗೆ ಅರಿವು, ಪ್ರೀತಿ ಬೆಳೆಸಿಕೊಂಡರೆ ಮತ್ತು ಜೀವನದಲ್ಲಿ ಸಕಾರಾತ್ಮಕ ಮನೋಭಾವ ಇದ್ದಲ್ಲಿ ಸುಲಭವಾಗಿ ನಿಭಾಯಿಸಬಹುದು, ನಿಯಂತ್ರಿಸಬಹುದು.

ಆಹಾರ – ಮಧುಮೇಹಕ್ಕೆ ಮೂಲಾಧಾರ ಚಿಕಿತ್ಸೆ ಆಹಾರದ ಮೂಲಕವೇ ಆಗಬೇಕು. ಆಹಾರ ಶರೀರದ ಅಗತ್ಯಕ್ಕೆ ತಕ್ಕಂತೆ ಇರಬೇಕೇ ಹೊರತು ಬಾಯಿ ರುಚಿಗೆ ಅಲ್ಲ. ಒಬ್ಬ ವ್ಯಕ್ತಿಯ ಎತ್ತರ, ವಯಸ್ಸು, ತೂಕಕ್ಕೆ ಅನುಗುಣವಾಗಿ ಆಹಾರ ಪ್ರತಿ ಕಿಲೋಗ್ರಾಂಗೆ 30 ಕ್ಯಾಲೊರಿ ಇರಬೇಕು. ಉದಾ : 60 ಕೆ.ಜಿ. ತೂಕವಿದ್ದರೆ 1800 ಕ್ಯಾಲೊರಿ ಆಹಾರ ಅಗತ್ಯ.

ದೇಹದ ತೂಕ ಹೆಚ್ಚಾಗಿರುವಂತಹ ಮಧುಮೇಹಿಗಳಿಗೆ ಪ್ರತಿ ಕೆ.ಜಿ. ತೂಕಕ್ಕೆ 25 ಕ್ಯಾಲೊರಿ ಸಾಕು. ತೆಳ್ಳಗಿರುವ ಮಧುಮೇಹಿಗಳಿಗೆ ಪ್ರತಿ ಕೆ.ಜಿ. ತೂಕಕ್ಕೆ 30 ಕ್ಯಾಲೊರಿಗಿಂತ ಹೆಚ್ಚು ಬೇಕು. ತಮ್ಮ ಆಹಾರವನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವ ರೀತಿ ಆಹಾರ ಹೊಂದಿಸಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಆಹಾರ ಆಯ್ಕೆ ಮಾಡಿಕೊಳ್ಳುವಾಗ ಆಹಾರದಲ್ಲಿ ಯಾವ ಅಂಶಗಳಿವೆ, ಸಕ್ಕರೆಯ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿದಿರಬೇಕು. ಏಕೆಂದರೆ ಧಾನ್ಯಗಳಾದ ಗೋಧಿ, ಅಕ್ಕಿ, ಸಜ್ಜೆ, ಜೋಳ, ನವಣೆ ಮುಂತಾದವುಗಳು 70 ರಿಂದ 80% ಪಿಷ್ಠ (ಕಾರ್ಬೊಹೈಡ್ರೇ್)ವನ್ನೊಳ ಗೊಂಡಿರುತ್ತವೆ. ದ್ವಿದಳ ಧಾನ್ಯಗಳು 56 ರಿಂದ 60%, ಬೀಜಗಳು (ಶೇಂಗಾ) 10 ರಿಂದ 20%, ಹಾಲು 5%, ಎಲೆತರಕಾರಿ 3 ರಿಂದ 5%, ಎಲೆಯಿಲ್ಲದ ತರಕಾರಿಗಳು 6 ರಿಂದ 16%, ಗೆಡ್ಡೆ ಗೆಣಸುಗಳು 15 ರಿಂದ 25%, ತಾಜಾ ಹಣ್ಣುಗಳು ಅವುಗಳಲ್ಲಿ ಸಿಹಿಯಾದ ಸಕ್ಕರೆಯನ್ನು ಕಲ್ಲಂಗಡಿ 5%, ಬಾಳೆಹಣ್ಣು 35% ಹೊಂದಿರುತ್ತವೆ.

ಪಿಷ್ಟ ಮತ್ತು ಪ್ರೊಟಿನ್‌ಗಳು ಒಂದು ಗ್ರಾಂಗೆ 4 ಕ್ಯಾಲೊರಿಯನ್ನು, ಕೊಬ್ಬು ಪ್ರತಿ ಗ್ರಾಂಗೆ 9 ಕ್ಯಾಲೊರಿಗಳನ್ನು ಕೊಡುತ್ತವೆ. ಆಹಾರದ ಆಯ್ಕೆಯಲ್ಲಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

1) ಸಿಹಿ ತಿಂಡಿಗಳನ್ನು ಸೇವಿಸಬೇಡಿ. ಸಿಹಿ ಸೇವಿಸಬೇಕೆನ್ನುವ ಮಧುಮೇಹಿಗಳಿಗೆ ಒಂದು ಸಿಹಿ ಸುದ್ಧಿ ಇದೆ. ಸ್ಟಿವಿಯಾ ಸಕ್ಕರೆಯನ್ನು ಬಳಸಬಹುದು. ಸ್ಟಿವಿಯಾ ಸಕ್ಕರೆಯಲ್ಲಿ ಯಾವುದೇ ಕ್ಯಾಲೊರಿ ಇರುವುದಿಲ್ಲ. ಸ್ಟಿವಿಯಾ ಗಿಡವನ್ನು ಮನೆಯಲ್ಲಿಯೇ ಬೆಳೆಸಬಹುದು. ಇದಕ್ಕೆ ಸಿಹಿ ತುಳಸಿ ಅಂತ ಹೆಸರು. ಎಲೆ ತಿಂದಾಗ ಚಾಕೋಲೆಟ್ ತಿಂದಂತೆ ಅನ್ನಿಸುತ್ತದೆ. 1000 ಸೆಂಟಿಗ್ರೇಡ್‌ನಲ್ಲಿಯೂ ಈ ಸಕ್ಕರೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇತರ ಸಕ್ಕರೆಯಂತೆ ಹುಳಿಗಟ್ಟುವುದಿಲ್ಲ. ಸಕ್ಕರೆಯಿಂದಾಗುವ ತೊಂದರೆಗಳು ಬರುವುದಿಲ್ಲ. ಈ ಸಕ್ಕರೆಯನ್ನು ಮಧುಮೇಹಿಗಳು ಧಾರಾಳವಾಗಿ ಬಳಸಬಹುದು. ಪಾಯಸಕ್ಕೆ ಹಾಕಿಕೊಳ್ಳಬಹುದು. ಈ ಸ್ಟಿವಿಯಾ ಸಕ್ಕರೆ ಮಧುಮೇಹಿಗಳಿಗೆ, ಬೊಜ್ಜುಳ್ಳವರಿಗೆ, ಕೊಲೆಸ್ಟ್ರಾಲ್ ಇರುವವರಿಗೆ ಕೂಡ ಉತ್ತಮವಾದುದು. ಕೆಲವು ಔಷಧಿ ಅಂಗಡಿಗಳಲ್ಲಿ ಸ್ಟಿವಿಯಾ ಸಕ್ಕರೆ ದೊರೆಯುತ್ತದೆ ಇಲ್ಲವೇ ಎಲೆಗಳನ್ನು ಒಣಗಿಸಿಟ್ಟುಕೊಂಡು ಪುಡಿ ತಯಾರಿಸಿಟ್ಟುಕೊಳ್ಳಬಹುದು.

2) ಆಲೂಗೆಡ್ಡೆ, ಗೆಣಸು, ಸಬ್ಬಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಪಿಷ್ಠವನ್ನೊಳಗೊಂಡಿರು ವುದರಿಂದ ಇವುಗಳನ್ನು ತಿನ್ನದೇ ಇದ್ದರೆ ಒಳಿತು. ತಿನ್ನಲೇ ಬೇಕೆನಿಸಿದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು.

ಒಬ್ಬ ವಯಸ್ಕ ವ್ಯಕ್ತಿಯ ಆಹಾರವು 180 ರಿಂದ 200 ಗ್ರಾಂನಷ್ಟು ಪಿಷ್ಠ, 60 ಗ್ರಾಂ ಪ್ರೊಟಿನ್, 70 ರಿಂದ 90 ಗ್ರಾಂ ಕೊಬ್ಬನ್ನು ಹಾಲು ಸೇರಿದಂತೆ 1800 ಕ್ಯಾಲೊರಿ ಒದಗಿಸಬೇಕು. ಆಹಾರವನ್ನು ಸರಿಯಾಗಿ ನಿಯಂತ್ರಿಸದಿದ್ದಲ್ಲಿ ಔಷಧಿಯೂ ಕೆಲಸ ಮಾಡಲಾರದು. ಮಧುಮೇಹಿಗಳು ತಿನ್ನಬೇಕು, ಆದರೆ ಹೊಟ್ಟೆ ಬಿರಿಯುವಷ್ಟು ಅಲ್ಲ, ಸ್ವಲ್ಪ ಹಸಿವಿದ್ದಾಗಲೇ ತಟ್ಟೆ ಬಿಟ್ಟು ಏಳಬೇಕು. ಎರಡನೇ ಬಾರಿ ಬಡಿಸಲು ಬಂದಾಗ ಬೇಡ ಎಂಬುದನ್ನು ರೂಢಿಸಿಕೊಳ್ಳಬೇಕು.

ದಿನಬಳಕೆಯ ಕೆಲವು ಆಹಾರ ತಯಾರಿಕಾ ಕ್ರಮಗಳು :

ದೋಸೆ : ಅಕ್ಕಿ 4 ಲೋಟ, ಉದ್ದಿನ ಬೇಳೆ 1 ಲೋಟ, ಮೆಂತ್ಯ 4 ಚಮಚೆ, ರಾಗಿಹಿಟ್ಟು ಅರ್ಧ ಲೋಟ, ಗೋಧಿ ಹಿಟ್ಟು ಅರ್ಧ ಲೋಟ. ನೆನೆಸಿದ ಅಕ್ಕಿ, ಉದ್ದಿನಬೇಳೆ, ಮೆಂತ್ಯ ರುಬ್ಬಿಟ್ಟುಕೊಳ್ಳಬೇಕು. ಅದರ ಜೊತೆಗೆ ರಾಗಿಹಿಟ್ಟು ಮತ್ತು ಗೋಧಿ ಹಿಟ್ಟು ಕಲೆಸಿಡಬೇಕು. ಇದರಿಂದ ದೋಸೆ ತಯಾರಿಸಬೇಕು.

ಅಮೃತಬಳ್ಳಿ ತಂಬುಳಿ : ಅಮೃತಬಳ್ಳಿಯ ಎಳೆಯ ಎಲೆ ಮತ್ತು ಕಾಂಡವನ್ನು ಕತ್ತರಿಸಿ ತುಂಡು ಮಾಡಿಕೊಂಡು, ಸ್ವಲ್ಪ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಹುರಿದುಕೊಳ್ಳಬೇಕು. ನಂತರ ರುಬ್ಬಿಕೊಂಡು ಗಟ್ಟಿ ಮೊಸರು ಇಲ್ಲವೆ ಮಜ್ಜಿಗೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಉಪಯೋಗಿಸಬೇಕು. ಬೇಕೆನಿಸಿದರೆ ಒಗ್ಗರಣೆ ಕೊಡಬಹುದು.

ಕರಿಬೇವಿನ ಪಲ್ಯ : 200 ಗ್ರಾಂ ಕರಿಬೇವಿನ ಸೊಪ್ಪು, 1 ಕಪ್ ಕಾಯಿತುರಿ, 3-4 ಒಣಮೆಣಸಿನಕಾಯಿ, 2 ಚಮಚೆ ಎಣ್ಣೆ, ಒಂದು ಚಮಚೆ ಜೀರಿಗೆ, 2 ಚಮಚೆ ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಹುಣಸೇಹಣ್ಣಿನ ರಸ.

ಕರಿಬೇವನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಒಲೆಯ ಮೇಲೆ ಪಾತ್ರೆಯಿಟ್ಟು ಒಗ್ಗರಣೆಗೆ ಎಣ್ಣೆ ಹಾಕಿ ಒಣಮೆಣಸಿನಕಾಯಿ, ಜೀರಿಗೆ, ಉದ್ದಿನಬೇಳೆ, ಸಾಸಿವೆ ಹಾಕಬೇಕು. ನಂತರ ಹೆಚ್ಚಿಟ್ಟ ಕರಿಬೇವಿನ ಸೊಪ್ಪು ಹಾಕಿ ಮೂರ್ನಾಲ್ಕು ನಿಮಿಷ ಹುರಿಯಬೇಕು. ನಂತರ ತೆಂಗಿನಕಾಯಿ ತುರಿ ಬೆರೆಸಬೇಕು. ಬೇಯುವಾಗ ಉಪ್ಪು, ಹುಳಿ, ಮೆಣಸಿನ ಹುಡಿ ಸೇರಿಸಬೇಕು.

ಚಕ್ರಮುನಿ ತಂಬುಳಿ : ಚಕ್ರಮುನಿ ಸೊಪ್ಪನ್ನು ಸ್ವಲ್ಪ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಹುರಿದುಕೊಳ್ಳಬೇಕು. ತೆಂಗಿನ ತುರಿಯೊಂದಿಗೆ ರುಬ್ಬಿಕೊಂಡು ಮೊಸರು ಇಲ್ಲವೇ ಮಜ್ಜಿಗೆಯಲ್ಲಿ ಬೆರೆಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಬೇಕೆನಿಸಿದಲ್ಲಿ ಒಗ್ಗರಣೆ ಕೊಡಬಹುದು.

ಮೆಂತ್ಯ ಸೊಪ್ಪಿನ ಖಾರದ ಕಡುಬು : ಗೋದಿಹಿಟ್ಟು ಅರ್ಧ ಕೆ.ಜಿ., ಎಣ್ಣೆ 4 ಚಮಚೆ, ಮೆಂತ್ಯ ಸೊಪ್ಪು 4 ಕಟ್ಟು (ದೊಡ್ಡದು) ಅಥವಾ 8 ಕಟ್ಟು (ಸಣ್ಣದು), ಇಡೀ ಬೆಳ್ಳುಳ್ಳಿ 5, ಹಸಿಮೆಣಸಿನಕಾಯಿ 8, ಉಪ್ಪು ರುಚಿಗೆ ತಕ್ಕಷ್ಟು, ಸಾಸುವೆ, ಜೀರಿಗೆ ಒಗ್ಗರಣೆಗೆ.

ಗೋದಿಹಿಟ್ಟನ್ನು ಉಪ್ಪು, ಎಣ್ಣೆ (ಸ್ವಲ್ಪ), ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಬೇಕು. ನಂತರ ಅದನ್ನು ಚಿಕ್ಕಚಿಕ್ಕ ಗೋಲಿ ಗಾತ್ರದ ಉಂಡೆಗಳನ್ನು ಮಾಡಿಟ್ಟುಕೊಳ್ಳಬೇಕು. ಈ ಉಂಡೆಗಳನ್ನು, ಪಾತ್ರೆಯಲ್ಲಿ ನೀರು ಹಾಕಿ ಒಲೆಯ ಮೇಲಿಟ್ಟು ನೀರು ಕುದಿ ಹಿಡಿದ ಮೇಲೆ ಹಾಕಬೇಕು. ಉಂಡೆಗಳು ಒಂದಕ್ಕೊಂದು ಅಂಟದಂತೆ ಸ್ವಲ್ಪ ಎಣ್ಣೆ ಹಾಕಬೇಕು. ಉಂಡೆ ಬೆಂದ ನಂತರ ನೀರನ್ನು ಬಸಿದು ತೆಗೆದಿರಿಸಬೇಕು. ಉಂಡೆಗಳನ್ನು ಕುಕ್ಕ್ನಲ್ಲಿಯೂ ಬೇಯಿಸಬಹುದು.

ಮೆಂತ್ಯ ಸೊಪ್ಪನ್ನು ಬಿಡಿಸಿ ಸ್ವಚ್ಛವಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ಸಿಪ್ಪೆತೆಗೆದ ಬೆಳ್ಳುಳ್ಳಿ ಎಸಳುಗಳನ್ನು ಹೆಚ್ಚಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ ಸಾಸುವೆ, ಉದ್ದಿನಬೇಳೆ, ಜೀರಿಗೆ ಹಾಕಬೇಕು. ನಂತರ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ಬಾಡಿಸಿ ಕೂಡಲೇ ಸೊಪ್ಪನ್ನು ಹಾಕಬೇಕು. ಅದಕ್ಕೆ ಸ್ವಲ್ಪ ಅರಿಶಿನ ಪುಡಿ, ಉಪ್ಪು ಹಾಕಿ ಮುಚ್ಚಿಡಬೇಕು. ಬೆಂದ ನಂತರ ಅದಕ್ಕೆ ಬೇಯಿಸಿದ ಉಂಡೆಗಳನ್ನು ಸೇರಿಸಿಡಬೇಕು. ಬಿಸಿಬಿಸಿಯಾದ ಮೆಂತ್ಯ ಸೊಪ್ಪಿನ ಖಾರದ ಕಡಬು ಸಿದ್ಧ. ಇದು ತಿನ್ನಲು ರುಚಿಕರ ಹಾಗೂ ಪುಷ್ಟಿಕರವೂ ಹೌದು.

ಪಲ್ಯ -1 : ಸೊಪ್ಪನ್ನು ಸ್ವಚ್ಛಗೊಳಿಸಿಕೊಂಡು ಸಣ್ಣಗೆ ಹೆಚ್ಚಿಕೊಂಡು, ಸಣ್ಣಗೆ ಹೆಚ್ಚಿದ ಈರುಳ್ಳಿಯೊಂದಿಗೆ ಒಗ್ಗರಣೆ ಹಾಕಿ, ಅದಕ್ಕೆ ಟೊಮ್ಯಾಟೋ ಹಾಕಿ, ಉಪ್ಪು, ಸಾಂಬಾರು ಪುಡಿ ಹಾಕಿ ಸ್ವಲ್ಪ ಬೇಯಿಸಿಕೊಳ್ಳಬೇಕು. ಇದು ಅನ್ನ ಮತ್ತು ರೊಟ್ಟಿಯೊಂದಿಗೆ ತಿನ್ನಲು ರುಚಿ.

ಪಲ್ಯ -2 : ತೊಗರಿಬೇಳೆ ಇಲ್ಲವೇ ಹೆಸರುಬೇಳೆಯನ್ನು ಬೇಯಿಸಿಟ್ಟುಕೊಳ್ಳಬೇಕು. ತೊಳೆದು ಸಣ್ಣಗೆ ಹೆಚ್ಚಿದ ಮೆಂತ್ಯಸೊಪ್ಪನ್ನು ಎಣ್ಣೆ ಇಲ್ಲವೇ ತುಪ್ಪದ ಒಗ್ಗರಣೆಯಲ್ಲಿ ಬಾಡಿಸಿಕೊಳ್ಳಬೇಕು. ಇದಕ್ಕೆ ಹಸಿಮೆಣಸಿನಕಾಯಿ ಇಲ್ಲವೇ ಒಣಮೆಣಸಿನ ಕಾಯಿ ಸೇರಿಸಿಕೊಳ್ಳಬೇಕು. ಹುಣಸೆಹುಳಿ ಇಲ್ಲವೇ ಟೊಮೆಟೋ ಸಣ್ಣಗೆ ಹೆಚ್ಚಿ ಹಾಕಿಕೊಳ್ಳಬೇಕು. ನಂತರ ಬೇಳೆಯೊಂದಿಗೆ ಇದನ್ನು ಬೆರೆಸಿ ಐದು ನಿಮಿಷ ಒಲೆಯ ಮೇಲಿಡಬೇಕು. ಈ ಪಲ್ಯ ಚಪಾತಿ, ರೊಟ್ಟಿ  ಮತ್ತು ಅನ್ನದೊಂದಿಗೆ ತಿನ್ನಲು ರುಚಿಕರ.

ವರಣ್ ಫಳ್ : ಮಹಾರಾಷ್ಟ್ರದಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ. ಗೋಧಿಹಿಟ್ಟು ಕಾಲು ಕೆ.ಜಿ., ಉಪ್ಪು, ಎಣ್ಣೆ ಸ್ವಲ್ಪ, ತೊಗರಿಬೇಳೆ 100 ಗ್ರಾಂ, ಮೆಂತ್ಯಸೊಪ್ಪು 2 ಕಟ್ಟು, ಒಣಮೆಣಸಿನಕಾಯಿ ಪುಡಿ, ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಧನಿಯ ಪ್ರತಿಯೊಂದು 50 ಗ್ರಾಂ, ಕರಿಬೇವು, ಹಿಂಗು, ಹುಣಸೆ ರಸ ಸ್ವಲ್ಪ.

ಗೋಧಿಹಿಟ್ಟಿಗೆ ಉಪ್ಪು, ಸ್ವಲ್ಪ ಎಣ್ಣೆ ಹಾಕಿ, ನೀರು ಬೆರೆಸಿ ಚಪಾತಿ ಹಿಟ್ಟಿನ ಕಣಕ ತಯಾರಿಸಿಟ್ಟು ನೆನೆಸಿಟ್ಟುಕೊಳ್ಳಬೇಕು. ಬೇಳೆಯನ್ನು ಬೇಯಿಸಿಟ್ಟುಕೊಳ್ಳಬೇಕು. ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಧನಿಯಾಗಳನ್ನು ಹುರಿದು ಪುಡಿಮಾಡಿಟ್ಟು ಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಗ್ಗರಣೆ ಹಾಕಿ ಅರಿಶಿನ, ಕರಿಬೇವು ಹಾಕಿ ತೊಳೆದು ಹೆಚ್ಚಿಟ್ಟುಕೊಂಡ ಮೆಂತ್ಯ ಸೊಪ್ಪನ್ನು ಹಾಕಿ ಬೇಯಿಸಬೇಕು. ನಂತರ ಬೇಯಿಸಿದ ಬೇಳೆ, ನೀರು, ಹುರಿದ ಮಸಾಲೆ ಪುಡಿ ಎಲ್ಲವನ್ನೂ ಹಾಕಿ ಕುದಿಸಬೇಕು. ಹುಣಸೆ ರಸವನ್ನು ಹಾಕಬೇಕು. ಹುಳಿಯ ಹದಕ್ಕೆ ಕುದಿಸಬೇಕು. ಸ್ವಲ್ಪ ನೀರಾಗಿದ್ದಲ್ಲಿ ಒಳ್ಳೆಯದು. ನಂತರ ಕಣಕವನ್ನು ಚಪಾತಿಯಂತೆ ಲಟ್ಟಿಸಿಕೊಂಡು ದುಂಡಗೆ ಅಥವಾ ಚೌಕಾಕಾರ ಅಥವಾ ವಜ್ರಾಕೃತಿ ಹೀಗೆ ನಮಗೆ ಬೇಕಾದಂತಹ ಆಕಾರದಲ್ಲಿ ಕತ್ತರಿಸಿಕೊಂಡು ಕುದಿಯುತ್ತಿರುವ ಹುಳಿಗೆ ಇವುಗಳನ್ನು ಹಾಕಬೇಕು. ಈ ಕಣಕದ ಹಾಳೆಗಳು ಹುಳಿಯನ್ನು (ಸಾಂಬಾರನ್ನು) ಹೀರಿಕೊಂಡಂತೆಲ್ಲ ಹುಳಿ ಗಟ್ಟಿಯಾಗುತ್ತ ಬರುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಒಗ್ಗರಣೆಗೆ ಹಿಂಗು ಅಥವಾ ಬೆಳ್ಳುಳ್ಳಿ ಹಾಕಬಹುದು. ವರುಣ್ ಫಳ್ ಸಿದ್ಧ.

ಚಪಾತಿ : ಗೋಧಿಹಿಟ್ಟು, ಮೆಂತ್ಯ ಪುಡಿ ಬೆರೆಸಿ ಹಿಟ್ಟು ಕಲೆಸಿಟ್ಟುಕೊಳ್ಳಬೇಕು. ಇಲ್ಲದಿದ್ದರೆ 5 ಕೆ.ಜಿ. ಗೋಧಿಗೆ 100 ಗ್ರಾಂ ಮೆಂತ್ಯ ಬೆರೆಸಿ ಹಿಟ್ಟು ಹಾಕಿಸಿಟ್ಟುಕೊಳ್ಳಬೇಕು. ಈ ಹಿಟ್ಟಿನಿಂದ ಚಪಾತಿ ತಯಾರಿಸಬೇಕು.

ಕೋಸಂಬರಿ : ಮೊಳಕೆ ಕಟ್ಟಿದ ಹೆಸರುಕಾಳು, ಸ್ವಲ್ಪ ಮೆಂತ್ಯ, ಜೊತೆಗೆ ಸೌತೆಕಾಯಿ, ಈರುಳ್ಳಿ, ಟೊಮೆಟೋ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿಟ್ಟುಕೊಳ್ಳ ಬೇಕು. ಎಲ್ಲವನ್ನೂ ಬೆರೆಸಿ ಕೋಸಂಬರಿ ತಯಾರಿಸಿ ಸಾಯಂಕಾಲದ ತಿಂಡಿಗೆ ಬಳಸಬೇಕು.

ಮಸಾಲ ಮಜ್ಜಿಗೆ : ಒಂದು ಲೋಟ ಮಜ್ಜಿಗೆಗೆ ಜೀರಿಗೆ ಪುಡಿ, ಶುಂಠಿ ರಸ, ಮೆಂತ್ಯ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಕುಡಿಯಬೇಕು.

ಹಾಗಲಕಾಯಿ ಚಿ‌ಪ್ಸ : ಹಾಗಲಕಾಯಿಯನ್ನು ತೆಳುವಾಗಿ ಗೋಲಾಕಾರದಲ್ಲಿ ಹೆಚ್ಚಿಕೊಂಡು ಒಂದು ಗಂಟೆ ಕಾಲ ಉಪ್ಪು, ಅರಿಶಿನ, ನಿಂಬೆರಸದಲ್ಲಿ ನೆನೆಯಿಸಿಟ್ಟು ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಟ್ಟುಕೊಳ್ಳಬೇಕು. ಬೇಕಾದಾಗ ಓವನ್‌ಲ್ಲಿ 1600 ಉಷ್ಣತೆಯಲ್ಲಿ ಒಂದು ನಿಮಿಷ ಇಟ್ಟರೆ ರುಚಿಯಾದ ಗರಿಗರಿಯಾದ ಚಿಪ್ಸ ಸಿದ್ಧವಾಗುತ್ತದೆ.

ಔಷಧಿ ಚಿಕಿತ್ಸೆ :

ಆರಂಭದ ಹಂತದಲ್ಲಿ ಮಧುಮೇಹಿಗಳು ಕೆಲವು ಮನೆ ಔಷಧಿಗಳ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ಆದರೆ ಈಗಾಗಲೇ ಔಷಧಿ ಸೇವಿಸುತ್ತಿರುವ ಮಧುಮೇಹಿಗಳು ಔಷಧಿಯೊಂದಿಗೆ ಇದನ್ನು ತೆಗೆದುಕೊಂಡಲ್ಲಿ ಕೆಲವು ದಿನಗಳಾದ ಮೇಲೆ ಔಷಧಿ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದಾಗಿದೆ.

* ನೆಲ್ಲಿಕಾಯಿ ರಸ ಎರಡು ಚಮಚೆಗೆ ನಾಲ್ಕು ಚಿಟಿಕೆ ಅರಿಶಿನ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬೇಕು.

* ಮಧುನಾಶಿನಿ ಹೆಸರೇ ಸೂಚಿಸುವಂತೆ ಮಧುವನ್ನು ನಾಶ ಮಾಡುವಂತಹುದು. ಈ ಸಸ್ಯದ ವಿಶಿಷ್ಟತೆಯೆಂದರೆ ಈ ಎಲೆಯನ್ನು ತಿಂದು ಸಕ್ಕರೆ, ಬೆಲ್ಲ ತಿಂದಲ್ಲಿ ಸಿಹಿ ಕಾಣುವುದಿಲ್ಲ. ಮಧುನಾಶಿನಿಯ ಎಲೆಯ ರಸ ಮತ್ತು ಬೇವಿನ ತೊಗಟೆಯ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯಬೇಕು.

* ನೇರಳೆ ಬೀಜದ ಪುಡಿ ಮತ್ತು ನೆಲ್ಲಿಕಾಯಿ ಪುಡಿ ಸಮಭಾಗ ಸೇರಿ ಬೆಳಿಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಕುಡಿಯಬೇಕು.

* ಬಿಲ್ವಪತ್ರೆಯ ರಸ ಇಲ್ಲವೇ ಬೇವಿನ ತೊಗಟೆಯ ಕಷಾಯ ಕುಡಿಯಬೇಕು.

* ಬೇವಿನ ಸೊಪ್ಪಿನ ರಸ 4 ಚಮಚೆ ಕುಡಿಯಬೇಕು.

* ಏಲಕ್ಕಿ, ಶುಂಠಿ, ಜೀರಿಗೆ ಸಮಭಾಗ ಪುಡಿ ಮಾಡಿ 6 ಗ್ರಾಂನಷ್ಟನ್ನು ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಹಾಗೂ ರಾತ್ರಿ ಖಾಲಿ ಹೊಟ್ಟೆಗೆ ಸೇವಿಸಬೇಕು.

* ಅಮೃತಬಳ್ಳಿಯ ಎಲೆ ಮತ್ತು ಕಾಂಡವನ್ನು ಜಜ್ಜಿ ರಸ ತೆಗೆದು ಮೂರು ಇಲ್ಲವೇ ನಾಲ್ಕು ಚಮಚೆಯಷ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಅಮೃತ ಬಳ್ಳಿಯನ್ನು ಮನೆಯಲ್ಲಿಯೇ ಬೆಳೆಸಬಹುದು.

* ಬೆಳಿಗ್ಗೆ ವಾಕಹೋಗುವಾಗ ಇಲ್ಲವೇ ಮನೆ ಕೆಲಸ ಮಾಡುವಾಗ ಒಂದು ಚಿಟಿಕೆ ಧನಿಯಾ ಮತ್ತು ಜೀರಿಗೆ ಪುಡಿ ಬಾಯಲ್ಲಿರಿಸಿಕೊಂಡು ಚಪ್ಪರಿಸುತ್ತಿರಬೇಕು.

ವ್ಯಾಯಾಮ :

ಆಹಾರ ಮತ್ತು ಔಷಧಿಯಷ್ಟೇ ಪ್ರಾಮುಖ್ಯತೆ ವ್ಯಾಯಾಮಕ್ಕೆ ಇದೆ. ಆರಾಮದಾಯಕ ಜೀವನಶೈಲಿಯಿಂದ ಕಾಣಿಸಿಕೊಳ್ಳುವ ಕಾಯಿಲೆ ಮಧುಮೇಹ ವಾದುದರಿಂದ ದೇಹಕ್ಕೆ ಶ್ರಮ ಕೊಡುವಂತಹ, ನಾವು ಸೇವಿಸುವ ಆಹಾರದಲ್ಲಿನ ಕ್ಯಾಲೊರಿ ಹೊರಹಾಕಲು ದಿನಕ್ಕೆ ಒಂದು ಗಂಟೆಯ ನಡಿಗೆ ಇಲ್ಲವೇ ಅರ್ಧ ಗಂಟೆ ವ್ಯಾಯಾಮ, ಯೋಗಾಭ್ಯಾಸ ಬೇಕೇ ಬೇಕು. ಕೆಲವರು ಮಧುಮೇಹಿಗಳು ಒಂದು ತಿಂಗಳು ವ್ಯಾಯಾಮ ಅಥವಾ ನಡಿಗೆ ಮಾಡಿ ರಕ್ತದಲ್ಲಿ ಸಕ್ಕರೆ ಅಂಶ ತಗ್ಗಿದ ಕೂಡಲೇ ನಿಲ್ಲಿಸಿ ಬಿಡುತ್ತಾರೆ. ಹಾಗಾಗಕೂಡದು, ವ್ಯಾಯಾಮದಲ್ಲಿ ಒಂದು ಶಿಸ್ತನ್ನು ರೂಢಿಸಿಕೊಳ್ಳಬೇಕು. ಪ್ರತಿದಿನ ನಿದ್ದೆ, ಸ್ನಾನ, ಕೆಲಸಗಳಂತೆ ಇದೂ ಕೂಡ ಅವಿಭಾಜ್ಯ ಅಂಗವಾಗಬೇಕು.

ಮಧುಮೇಹ ನಿಯಂತ್ರಿಸುವಲ್ಲಿ ಕೆಲವು ಪ್ರಮುಖ ಸೂಚನೆಗಳು :

* ಕಾಯಿಲೆಯ ಬಗ್ಗೆ ಸಂಪೂರ್ಣ ತಿಳುವಳಿಕೆ ಇರಬೇಕು.

* ಸರಿಯಾದ ಆಹಾರ ಕ್ರಮ.

* ವ್ಯಾಯಾಮ.

* ಔಷಧಿ.

* ಮಾನಸಿಕ ಒತ್ತಡ ನಿಭಾಯಿಸುವಿಕೆ.