ಬೇಸಿಗೆಯ ಧಗೆ ಕಳೆದು ಮೊದಲ ಮಳೆ ಸುರಿದು ಭೂಮಿ ತಂಪಾದಾಗ ನಮ್ಮ ಮನಸ್ಸಿಗೆ ಉಂಟಾಗುವ ಆನಂದ ಅವರ್ಣನೀಯ. ಮಳೆ ಸಮೃದ್ಧಿಯ ಸಂಕೇತ. `ನಾಸ್ತಿಮೇಘ ಸಮಂತೋಯಂಮಳೆನೀರಿಗೆ ಸಮನಾದ ನೀರು ಇನ್ನೊಂದಿಲ್ಲ. ನಮ್ಮ ಬದುಕು ಮಳೆಯನ್ನು ಅವಲಂಬಿಸಿದೆ. ಮಳೆಗಾಗಿ ಪರ್ಜನ್ಯ ಜಪ ಮಾಡುವುದಿದೆ. ಮಳೆಯ ಒಂದೊಂದು ನಕ್ಷತ್ರಗಳಿಗೂ ಒಂದೊಂದು ಗಾದೆಯೇ ಇದೆ.

`ಭರಣಿ ಮಳೆ ಹೊಯ್ದರೆ ಧರೆ ಎಲ್ಲ ಬೆಳೆ
`ವಿಶಾಖಾ ಆಗದಿದ್ರೆ ವಿಷಕ್ಕೂ ರೊಕ್ಕಿಲ್ಲ
`ಮಘಾ ಮಳೆ ಸುರಿದರೆ ಮಗಿ ಹಾಲು ಕುಡಿದಂತೆ

ಆದಿಕವಿ ಪಂಪನಿಂದ ಆಧುನಿಕ ಕವಿಗಳವರೆಗೆ ವರ್ಷಧಾರೆಯ ಕುರಿತು ವರ್ಣಿಸದ ಕಾವ್ಯಗಳೇ ಇಲ್ಲ. ತಾನ್ಸೇನ್ ಮೇಘ್ ಮಲ್ಹಾರ್ ನುಡಿಸಿ, ಮಳೆ ಸುರಿಸಿದ್ದನೆಂಬುದನ್ನು ತಿಳಿದಿದ್ದೇವೆ. ಪ್ರತಿ ಜೀವಿಗೂ ಜೀವ ತುಂಬುವ ಮಳೆಗಾಲದಲ್ಲಿ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನೋಡೋಣ.

ಆಹಾರ :

ಬೇಸಿಗೆಯ ನಂತರ ಮಳೆಗಾಲದ ಆಗಮನವಾಗುವುದರಿಂದ ಕಾಯ್ದ ಭೂಮಿಯ ಮೇಲೆ ಮಳೆ ಸುರಿದು ತಂಪಾಗುತ್ತದೆ. ಬೇಸಿಗೆಯ ಬೇಗೆಗೆ ನಾವು ನೀರನ್ನು ಹೆಚ್ಚು ಕುಡಿಯುವುದರಿಂದ ಹಸಿವೆಯು ಕಡಿಮೆಯಾಗುತ್ತದೆ. ಮಳೆಗಾಲದಲ್ಲಿ ತಂಪಾಗಿರುವ ಮಳೆಯ ನೀರನ್ನು ಕುಡಿಯುವುದರಿಂದ ಹಸಿವೆ ಮತ್ತಷ್ಟು ಕುಂದುತ್ತದೆ. ಹೀಗೆ ಇಂಗಿದ ಹಸಿವೆ ಸರಿಪಡಿಸಿಕೊಳ್ಳಲು ನಾವು ಷಡ್ರಸಗಳನ್ನು ಅಂದರೆ ಸಿಹಿ, ಕಹಿ, ಹುಳಿ, ಉಪ್ಪು, ಖಾರ ಮತ್ತು ಒಗರು ರುಚಿಯನ್ನು ಹೊಂದಿರುವ ಆಹಾರ ಸೇವಿಸಬೇಕು. ಇವುಗಳಲ್ಲಿ ಹುಳಿ, ಸಿಹಿ ಮತ್ತು ಉಪ್ಪು ರುಚಿಯ ಆಹಾರಗಳನ್ನು ಹೆಚ್ಚಾಗಿ ಬಳಸಬೇಕು. ಹುಣಸೆಹಣ್ಣು, ಟೊಮೆಟೋ, ನಿಂಬೆ ಹಣ್ಣನ್ನು ಆಹಾರದಲ್ಲಿ ಬಳಸಬೇಕು. ಈ ಕಾಲದಲ್ಲಿ ಮಿತ ಆಹಾರ ಸೇವನೆ ಮಾಡಬೇಕು. ಏಕೆಂದರೆ ಈ ಕಾಲದಲ್ಲಿ ಜೀರ್ಣಶಕ್ತಿಯು ಕುಂದುವುದರಿಂದ ಹೊಟ್ಟೆ ತುಂಬ ಉಂಡರೆ ಅಜೀರ್ಣ ಮುಂತಾದ ಕಾಯಿಲೆಗಳು ತಲೆದೋರಬಹುದು. ಹೊಸ ಅಕ್ಕಿಯ ಬದಲಾಗಿ ಹಳೆಯ ಅಕ್ಕಿಯನ್ನು ಬಳಸಿದರೆ ಸುಲಭವಾಗಿ ಜೀರ್ಣವಾಗುತ್ತದೆ.

ತರಕಾರಿ ಸಾಂಬಾರ್ಗಳ ಬದಲಿಗೆ ತೊಗರಿಬೇಳೆ ಕಟ್ಟು, ಹುರುಳಿಯ ಕಟ್ಟಿನಿಂದ ತಯಾರಿಸಿದ ಸಾರು ಊಟಕ್ಕೆ ಬಳಸಿದರೆ ಜೀರ್ಣಶಕ್ತಿಗೆ ಒಳ್ಳೆಯದು. ಬ್ರೆಡ್, ಚಪಾತಿಗಳ ಜೊತೆಗೆ ಜೇನುತುಪ್ಪ ಸವರಿ ಬಳಸಬಹುದು. ಮಳೆಗಾಲದಲ್ಲಿ ಮೊಸರು ಬಳಸಬಾರದು. ಗಟ್ಟಿ ಮೊಸರು ಜೀರ್ಣಿಸಲು ಜಡ. ಅದು ಕಫವನ್ನು ಕೆರಳಿಸಿ ನೆಗಡಿ, ಕೆಮ್ಮು ಮತ್ತು ಉಬ್ಬಸವನ್ನು ಹೆಚ್ಚಿಸುತ್ತದೆ. ಮೊಸರನ್ನು ಸದಾ ಬಳಸುವವರು ಈ ಕಾಲದಲ್ಲಿ ಮೊಸರನ್ನು ಕಡೆದು ಸ್ವಲ್ಪ ಕರಿಮೆಣಸಿನ ಪುಡಿ ಉಪ್ಪು ಬೆರೆಸಿ ಮಿತ ಪ್ರಮಾಣದಲ್ಲಿ ಉಪಯೋಗಿಸಬಹುದು.

ಊಟದ ಕೊನೆಯಲ್ಲಿ ಮಜ್ಜಿಗೆ ಬಳಸುವುದು ಮಳೆಗಾಲದಲ್ಲಿ ಜೀರ್ಣಶಕ್ತಿ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಮೊಸರಿಗೆ ನೀರು ಸೇರಿಸಿ ಬಳಸುವುದು, ಹುಳಿ ಮೊಸರಿಗೆ ಹಾಲು ಬೆರೆಸಿ ಊಟ ಮಾಡುವುದು, ಮಜ್ಜಿಗೆಗೆ ಸಕ್ಕರೆ, ಉಪ್ಪು, ಒಗ್ಗರಣೆ ಮುಂತಾದವುಗಳನ್ನು ಹಾಕಿ ಬಳಸುವ ಕ್ರಮಗಳು ಆರೋಗ್ಯಕ್ಕೆ ಹಿತಕರವಲ್ಲ. ಹದವಾಗಿ ಹೆಪ್ಪಾದ ಮೊಸರಿಗೆ ಸ್ವಲ್ಪ ನೀರನ್ನು ಸೇರಿಸಿ ಕಡೆದು ಮಜ್ಜಿಗೆ ತಯಾರಿಸಿ ಊಟಕ್ಕೆ ಬಳಸಬೇಕು. ಮಕ್ಕಳಿಗೆ ಮಾತ್ರ ಮಜ್ಜಿಗೆಯನ್ನು ಜಿಡ್ಡು ತೆಗೆಯದೇ ಕುಡಿಯಲು ಇಲ್ಲವೇ ಊಟಕ್ಕೆ ಕೊಡಬೇಕು. ಜೀರ್ಣಶಕ್ತಿ ಕಡಿಮೆಯಿರುವವರು ಮಜ್ಜಿಗೆಗೆ ಕರಿಬೇವು ಸೇರಿಸಿ ಕಡೆದು ನಂತರ ಉಪಯೋಗಿಸಬೇಕು. ಬೊಜ್ಜು ದೇಹವುಳ್ಳವರು ತಿಳಿಮಜ್ಜಿಗೆ ಕುಡಿಯುವುದು ಸೂಕ್ತ.

ಈ ಕಾಲದಲ್ಲಿ ಆಹಾರದಲ್ಲಿ ಉಪ್ಪನ್ನು ಮಿತವಾಗಿ ಬಳಸಿದರೆ ಜೀರ್ಣಶಕ್ತಿಗೆ ಹಿತಕರ. ಹುಣಸೇಹಣ್ಣು, ನೆಲ್ಲಿಕಾಯಿ, ಮಾದಲ ಹಣ್ಣು, ಪುನರ್ಪುಳಿ, ದಾಳಿಂಬೆ, ಮಾವಿನಕಾಯಿಯ ಸಾರು, ಸಾಂಬಾರು ರುಚಿ. ಇದರ ಬಳಕೆಯಿಂದ ಆಹಾರದ ರುಚಿ ಹೆಚ್ಚುವುದು, ಹಸಿವೆ ಉತ್ತಮಗೊಳ್ಳುವುದು. ಮಲವಿಸರ್ಜನೆ ಸರಿಯಾಗಿ ಆಗುವುದು. ಮಾದಳದ ಹಣ್ಣನ್ನು ಬಳಸುವುದರಿಂದ ಹೊಟ್ಟೆ ತೊಳೆಸುವಿಕೆ, ವಾಂತಿ ಕಡಿಮೆಯಾಗಿ ಹಸಿವೆ ಹೆಚ್ಚುತ್ತದೆ. ಪುನರ್ಪುಳಿ (ಕೋಕ್) ಬಾಯಾರಿಕೆ ತಗ್ಗಿಸಿ ಹಸಿವೆ ಹೆಚ್ಚಿಸುತ್ತದೆ. ಪಿತ್ತ ವಿಕಾರಗಳನ್ನು ಶಮನ ಮಾಡುತ್ತದೆ. ಇದು ಘಟ್ಟ ಪ್ರದೇಶಗಳಲ್ಲಿ ಬೆಳೆಯುವುದರಿಂದ ಅಲ್ಲಿನ ಜನ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಈ ಹಣ್ಣನ್ನು ಒಣಗಿಸಿಟ್ಟುಕೊಂಡು ಎಲ್ಲ ಕಾಲಗಳಲ್ಲಿ ಬಳಸುತ್ತಾರೆ.

ದಾಳಿಂಬೆ ಹಣ್ಣನ್ನು ಉಪಯೋಗಿಸಿದರೆ ಪಿತ್ತದ ತೊಂದರೆಗಳು ನಿವಾರಣೆಯಾಗುತ್ತವೆ. ಅಧಿಕ ಸಿಹಿ, ಸ್ವಲ್ಪ ಹುಳಿ ರುಚಿಯಿರುವ ಇದು ಹಸಿವೆ ಹೆಚ್ಚಿಸುತ್ತದೆ. ತಂಪು ಗುಣ ಹೊಂದಿದ್ದು ದೇಹಶ್ರಮ ನಿವಾರಿಸುತ್ತದೆ. ಬಾಯಿಗೆ ರುಚಿ ಕೊಡುತ್ತದೆ. ಮಾವಿನ ಕಾಯಿ ಮಳೆಗಾಲದಲ್ಲಿ ಸಿಗುವುದಿಲ್ಲವಾದರೂ ಇದರ ವಿವಿಧ ಬಗೆಯ ಉಪ್ಪಿನಕಾಯಿಯನ್ನು ಮಿತವಾಗಿ ಬಳಸಿದರೆ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಮಾವಿನ ಕಾಯಿಯು ಉಷ್ಣ ಗುಣ ಹೊಂದಿದ್ದು ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ, ಚರ್ಮದ ಕಾಂತಿ ಹೆಚ್ಚಿಸುತ್ತದೆ.

ಟೊಮೆಟೋ ಹಣ್ಣು ರುಚಿಯಲ್ಲಿ ಸಿಹಿ ಮತ್ತು ಹುಳಿಯಾಗಿದ್ದು ಇದರ ಬಳಕೆಯಿಂದ ಜೀರ್ಣಶಕ್ತಿ ದೇಹದ ಶಕ್ತಿ ಹೆಚ್ಚುವುದು. ಪ್ರತಿದಿನ ಅಡುಗೆಗೆ ಇದನ್ನು ಉಪಯೋಗಿಸಿದರೆ ಹುಳಿತೇಗು, ಆಮ್ಲಪಿತ್ತದ ತೊಂದರೆಗಳು ಹೆಚ್ಚಾಗಬಹುದು.

ನೆಲ್ಲಿಕಾಯಿಯ ಬಳಕೆಯಿಂದ ರುಚಿ ಹೆಚ್ಚುವುದಲ್ಲದೇ, ವಾಕರಿಕೆ, ಮಲಬದ್ಧತೆ, ಹೊಟ್ಟೆ ಉಬ್ಬರ ನಿವಾರಣೆಯಾಗುವುದು. ನೆಲ್ಲಿಕಾಯಿಯು ನಮ್ಮ ದೇಹದಲ್ಲಿ ವಾತ, ಪಿತ್ತ ಮತ್ತು ಕಫಗಳು ಕೆರಳಿದ್ದರೆ ಅವನ್ನು ಶಮನಗೊಳಿಸಿ ದೇಹದ ಎಲ್ಲ ಧಾತುಗಳಿಗೂ ಶಕ್ತಿ ನೀಡುತ್ತದೆ. ನೆಲ್ಲಿಕಾಯಿಯು ಮಳೆಗಾಲದಲ್ಲಿ ಸಿಗುವುದಿಲ್ಲವಾದರೂ ಇದರ ಉಪ್ಪಿನ ಕಾಯಿಯನ್ನು ಮಿತವಾಗಿ ಬಳಸಬಹುದು. ಈ ಕಾಲದಲ್ಲಿ ಸಂಡಿಗೆ, ಹಪ್ಪಳ ಬಳಸಬೇಕು. ಚಟ್ನಿಪುಡಿ, ಉಪ್ಪಿನಕಾಯಿ ಬಳಸಬೇಕು. ಮಳೆಗಾಲದಲ್ಲಿ ತಂಗಳು ಆಹಾರ ಪದಾರ್ಥ, ಫ್ರಿಜ್‌ನಲ್ಲಿಟ್ಟ ಆಹಾರ ಪದಾರ್ಥ, ತಣ್ಣನೆಯ ನೀರು, ಐಸ್‌ಕ್ರೀಂ, ಶರಬ್, ತಂಪು ಪಾನೀಯಗಳ ಸೇವನೆ ಬೇಡ. ಅನ್ನ, ಸಾರು, ಮುದ್ದೆ, ರೊಟ್ಟಿ, ಚಪಾತಿಗಳನ್ನು ಬಿಸಿಬಿಸಿಯಾಗಿರುವಾಗಲೇ ತಿನ್ನಬೇಕು.

ಗೋಧಿ ಚಿತ್ರಾನ್ನ :

ಗೋಧಿಯನ್ನು ಒಡಕಲಾಗಿ ಕುಟ್ಟಿ ತರಿ ಮಾಡಿಕೊಳ್ಳಬೇಕು. ಒಂದು ಭಾಗ ಗೋಧಿ ತರಿಗೆ 5ರಷ್ಟು ನೀರು ಹಾಕಿ ಉರಿಯ ಮೇಲೆ ಬೇಯಿಸಿಕೊಳ್ಳಬೇಕು. ಗಂಜಿ ನೀರನ್ನು ಬಸಿದುಕೊಂಡು ಅದನ್ನು ಸಾರು ತಯಾರಿಸಲು ಬಳಸಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ , ಸಾಸುವೆ ಒಗ್ಗರಣೆ ಹಾಕಿ ಅದಕ್ಕೆ ಕಾಳು ಮೆಣಸು ಇಲ್ಲವೇ ಒಣಮೆಣಸಿನಕಾಯಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿದ ಗೋಧಿ ತರಿ ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ನಿಂಬೆರಸ, ಕೊತ್ತಂಬರಿ ಸೊಪ್ಪು ಹಾಕಬೇಕು. ಗೋಧಿ ಚಿತ್ರಾನ್ನ ಉಬ್ಬಸ ರೋಗಿಗಳಿಗೆ ಮತ್ತು ಬಹುಮೂತ್ರ ಪ್ರವೃತ್ತಿ ಇರುವವರಿಗೆ ತುಂಬ ಉತ್ತಮವಾದುದು.

ಉಸುಲಿ (ಗುಗ್ಗರಿ) :

ಹೆಸರುಕಾಳು ಅಥವಾ ಮಡಕೆ ಕಾಳು ನೆನೆಯಿಸಿ, ಬೇಯಿಸಿ, ಸಾಸುವೆ, ಒಣಮೆಣಸಿನಕಾಯಿ ಒಗ್ಗರಣೆ ಹಾಕಿ ಉಸುಲಿ ತಯಾರಿಸಬೇಕು. ಒಣಕೊಬ್ಬರಿ ತುರಿಯನ್ನು ಮೇಲೆ ಹಾಕಬೇಕು.

ಅಂಗಾರ ಕರ್ಕಟಿ (ಕೆಂಡದ ರೊಟ್ಟಿ) :

ಒಂದು ಭಾಗ ಗೋಧಿ ಹಿಟ್ಟಿಗೆ 1/8 ಭಾಗ ಕಡಲೆ ಹಿಟ್ಟು ಬೆರೆಸಿ, ಓಮ, ಹಿಂಗು, ಉಪ್ಪು, ತುಪ್ಪ ಹಾಕಿ ನೀರಿನಲ್ಲಿ ಹಿಟ್ಟನ್ನು ಚೆನ್ನಾಗಿ ಕಲೆಸಿಕೊಳ್ಳಬೇಕು. ನಂತರ ದುಂಡನೆಯ ಉಂಡೆ ಮಾಡಿ ಲಟ್ಟಿಸಿ, ಕೆಂಡದಲ್ಲಿ ಕೆಂಪಗೆ ಸುಡಬೇಕು. ಮಳೆ ಬೀಳುವಾಗ ಇದನ್ನು ತಿಂದಲ್ಲಿ ತುಂಬ ಹಿತಕರ. ಇದು ಬಲವನ್ನು ಹೆಚ್ಚಿಸುವುದಲ್ಲದೆ ಜೀರ್ಣಕ್ಕೆ ಸುಲಭ ಮತ್ತು ಕಫ ಹೆಚ್ಚಾಗಿರುವ ಕೆಮ್ಮು, ನೆಗಡಿ, ಉಬ್ಬಸ ರೋಗಿಗಳಿಗೆ ವಾತರೋಗಗಳಿಂದ ಬಳಲುವವರಿಗೆ ಹೃದ್ರೋಗಿಗಳಿಗೆ ತುಂಬ ಉತ್ತಮವಾದುದು.

ಕಷಾಯದ ಪುಡಿ :

ಧನಿಯಾ 100 ಗ್ರಾಂ, ಸುಗಂಧಿ ಬೇರು 50 ಗ್ರಾಂ, ಜೀರಿಗೆ 50 ಗ್ರಾಂ, ಕಾಳುಮೆಣಸು 50 ಗ್ರಾಂ, ಜೇಷ್ಠಮಧು 50 ಗ್ರಾಂ, ಹಿಪ್ಪಲಿ 50 ಗ್ರಾಂ, ದಾಲ್ಚಿನ್ನಿ 25 ಗ್ರಾಂ, ಒಣಶುಂಠಿ, ಏಲಕ್ಕಿ, ಜಾಪತ್ರೆ, ಜಾಕಾಯಿ 10 ಗ್ರಾಂ ಎಲ್ಲವನ್ನೂ ಸೇರಿಸಿ ನುಣ್ಣಗಿನ ಪುಡಿ ಮಾಡಿಟ್ಟುಕೊಳ್ಳಬೇಕು.

ಬೇಕೆನಿಸಿದಾಗ ಕಷಾಯ ತಯಾರಿಸಿ ಕುಡಿಯಬಹುದು. ಒಂದು ಲೋಟ ನೀರಿಗೆ ಅರ್ಧ ಚಮಚೆ ಪುಡಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸಬೇಕು. ಮೂರ್ನಾಲ್ಕು ನಿಮಿಷಗಳ ಕುದಿತದ ನಂತರ ಬೆಲ್ಲ ಅಥವಾ ಸಕ್ಕರೆ ಬೆರೆಸಿ ಇಳಿಸಿ, ಬೇಕೆನಿಸಿದಲ್ಲಿ ಹಾಲು ಬೆರೆಸಬಹುದು.

ಜೇಷ್ಠಮಧು ಸೂಪ್ :

ಹೆಸರುಬೇಳೆ 2 ಚಮಚೆ, ತೊಗರಿಬೇಳೆ 2 ಚಮಚೆ, ಟೊಮೆಟೋ ಹಣ್ಣು 2, ಜೇಷ್ಠಮಧು 100 ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲದ ಪುಡಿ ಸ್ವಲ್ಪ, ಕಾಳು ಮೆಣಸಿನ ಪುಡಿ ರುಚಿಗೆ ತಕ್ಕಷ್ಟು ಇರಲಿ.

ಜೇಷ್ಠಮಧುವನ್ನು ಜಜ್ಜಿ ಹೆಸರುಬೇಳೆ, ತೊಗರಿಬೇಳೆ ಮತ್ತು ಟೊಮೆಟೋ ಹಣ್ಣಿನೊಂದಿಗೆ ಸಾಕಷ್ಟು ನೀರಿನಲ್ಲಿ ಬೇಯಿಸಬೇಕು. ಬೆಂದಿರುವ ಜೇಷ್ಠಮಧುವಿನಿಂದ ರಸ ಹಿಂಡಿ ತೆಗೆದು ನಾರಿನಂತಹ ಭಾಗವನ್ನು ಎಸೆದು ಬಿಡಬೇಕು. ನಂತರ ಬೆಂದಿರುವ ಎಲ್ಲ ಪದಾರ್ಥವನ್ನೂ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಎರಡು ಬಟ್ಟಲು ನೀರು ಸೇರಿಸಿ ಉಪ್ಪು, ಬೆಲ್ಲ ಸೇರಿಸಿ ಮತ್ತೆ ಒಲೆಯ ಮೇಲಿಟ್ಟು ಕುದಿಸಬೇಕು. ಕುದಿದ ನಂತರ ಒಲೆಯಿಂದ ಇಳಿಸಿ, ಕಾಳು ಮೆಣಸಿನ ಪುಡಿ ಬೆರೆಸಿ ಬಿಸಿಯಾಗಿರುವಾಗಲೇ ಕುಡಿಯಬೇಕು. ಈ ಸೂಪ್ ಅಜೀರ್ಣ, ಕೆಮ್ಮು, ಗಂಟಲುನೋವು, ನೆಗಡಿಯಿಂದ ಬಳಲುವವರಿಗೆ ಉತ್ತಮವಾದುದು.

ಅಡಿಕೆ ಪುಡಿ :

ಬಡೆಸೋಪು 200 ಗ್ರಾಂ, ಅಡಿಕೆ 200 ಗ್ರಾಂ, ಜೇಷ್ಠಮಧು 100 ಗ್ರಾಂ, ಏಲಕ್ಕಿ, ಲವಂಗ 10 ಗ್ರಾಂ, ಒಣಕೊಬ್ಬರಿ ತುರಿ 100 ಗ್ರಾಂ, ಜಾಕಾಯಿ, ಜಾಪತ್ರೆ 5 ಗ್ರಾಂ, ಕಲ್ಲಂಗಡಿ ಬೀಜ 50 ಗ್ರಾಂ, ಕರಬೂಜ ಬೀಜ 50 ಗ್ರಾಂ, ತುಪ್ಪ, ಪಚ್ಚಕರ್ಪೂರ ಸ್ವಲ್ಪ.

ಅಡಿಕೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಬಡೆಸೋಪನ್ನು ಮತ್ತು ಲವಂಗವನ್ನು ಹುರಿದುಕೊಳ್ಳಬೇಕು. ನಂತರ ಬೇರೆ ಬೇರೆಯಾಗಿ ಪುಡಿ ಮಾಡಿಕೊಳ್ಳಬೇಕು. ಜೇಷ್ಠಮಧುವನ್ನು ಪುಡಿ ಮಾಡಿ ಒಣಕೊಬ್ಬರಿ ತುರಿ, ಕಲ್ಲಂಗಡಿ ಬೀಜ, ಕರಬೂಜ ಬೀಜ, ಪಚ್ಚಕರ್ಪೂರ, ಬೇಕೆನಿಸಿದಲ್ಲಿ ಸ್ವಲ್ಪ ಸಕ್ಕರೆ ಪುಡಿ ಬೆರೆಸಿಟ್ಟಲ್ಲಿ ರುಚಿಕರ ಅಡಿಕೆಪುಡಿ ಸಿದ್ಧ. ಊಟದ ನಂತರ ಸ್ವಲ್ಪ ಬಾಯಿಗೆ ಹಾಕಿಕೊಂಡಲ್ಲಿ ಆಹಾರ ಜೀರ್ಣಿಸಲು ಸಹಾಯವಾಗುವುದಲ್ಲದೇ ಬಾಯಿಯೂ ಘಮಘಮಿಸುತ್ತದೆ.

ತರಕಾರಿ :

ಪಡವಲಕಾಯಿ, ಹೀರೇಕಾಯಿ, ಎಳೆಯ ಬದನೆಕಾಯಿ, ನುಗ್ಗೇಕಾಯಿ, ಎಲೆಯ ಮೂಲಂಗಿ, ಸುವರ್ಣಗೆಡ್ಡೆ, ಹಸಿಶುಂಠಿ ಬಳಸಬೇಕು.

ಕುಡಿಯುವ ನೀರು :

ಜೀವನಂ ಜೀವಿನಾಂ ಜೀವೋ ಜಗತ್ಸರ್ವಂತು ತನ್ಮಯಂ

ನಾದೋತ್ಕಂತ ನಿಷೇಧೇನ ಕದಾ ಚಿದ್ವಾರಿ ವಾರ್ಯತೇ

ಜೀವಿಗಳಿಗೆ ನೀರು ಜೀವನಾಧಾರ. ಆದ್ದರಿಂದಲೇ ಎಂತಹ ಸ್ಥಿತಿಯಲ್ಲಿಯೂ ನೀರನ್ನು ನಿಷೇಧಿಸಬಾರದು. ಮಳೆಗಾಲದಲ್ಲಿ ನೀರನ್ನು ಕುರಿತು ಎಚ್ಚರವಹಿಸಬೇಕಾದುದು ಬಹಳ ಮುಖ್ಯ. ಕಲುಷಿತ ನೀರಿನಿಂದ ವಾಂತಿ, ಭೇದಿ, ಕೆಮ್ಮು, ನೆಗಡಿ, ಗಂಟಲು ನೋವು, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಟೈಫಾಯ್‌ಡವರೆಗೂ ಕಾಣಿಸಿಕೊಳ್ಳಬಹುದು. ಆದ್ದರಿಂದ ಕುದಿಸಿ ಆರಿಸಿದ ನೀರು ಕುಡಿಯುವುದು ಸೂಕ್ತ. ನೀರನ್ನು ಕನಿಷ್ಠ 10 ನಿಮಿಷ ಕುದಿಸಿ, ಅದೇ ಪಾತ್ರೆಯಲ್ಲಿ ಆರಿಸಿ ಕುಡಿದರೆ ಬ್ಯಾಕ್ಟೀರಿಯಾ ಸೋಂಕುಗಳು ಉಂಟಾಗಲಾರವು. ಅಲ್ಲದೇ ನೀರನ್ನು ಕುದಿಸುವಾಗ ಒಂದು ಚಿಕ್ಕ ಶುಂಠಿ ತುಂಡು ಹಾಕಿ ಕುದಿಸಿದಲ್ಲಿ ಇನ್ನೂ ಉತ್ತಮ. ಶುಂಠಿ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಕಫ ಉಂಟಾಗುವುದಿಲ್ಲ. ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಆಹಾರ ಜೀರ್ಣಿಸಲು ಸಹಕಾರಿಯಾಗುತ್ತದೆ. ಜೇನುತುಪ್ಪ ಬೆರೆಸಿದ ನೀರು ಕುಡಿಯುವುದು ಒಳ್ಳೆಯದು. ಜೇನುತುಪ್ಪದ ಸೇವನೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಲೋಟ ನೀರಿಗೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಕುಡಿಯಬೇಕು. ಕೆಲವರು ನೀರನ್ನು ಕಾಯಿಸಿ ಫಿಲ್ಟ್ಗೆ ಹಾಕುತ್ತಾರೆ. ಆದರೆ ಫಿಲ್ಟ್ ಮಾಡಿದ ನೀರನ್ನು ಕಾಯಿಸಿ ಕುಡಿಯುವುದು ಒಳ್ಳೆಯದು. ಅಲ್ಲದೇ ಫಿಲ್ಟ್ ಬಳಸುವವರು ಕ್ಯಾಂಡ್ಗಳನ್ನು ಆಗಾಗ ಶುದ್ಧಿಗೊಳಿಸುತ್ತಿರಬೇಕು. ಗಂಟಲು ನೋವು, ಉಬ್ಬಸವಿರುವವರು ಬಿಸಿಯಾಗಿರುವ ನೀರನ್ನೇ ಕುಡಿಯಬೇಕು. ಹೊರಗೆ ನೀರು ಕುಡಿಯುವ ಸಮಯ ಬಂದಲ್ಲಿ ಬಿಸಿ ನೀರನ್ನೇ ಕುಡಿಯಬೇಕು. ನೌಕರಿಗೆ, ಶಾಲೆಗೆ ಹೋಗುವವರು ನೀರಿನ ಬಾಟಲಿಯನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು.

ಪರಿಸರ :

ಪರಿಸರದ ಸ್ವಚ್ಛತೆ ಬಹಳ ಮುಖ್ಯ. ಮನೆಯ ಒಳಗೆ ಮತ್ತು ಹೊರಗೆ ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಸುತ್ತಮುತ್ತ ಗುಂಡಿಗಳಿದ್ದಲ್ಲಿ ನೀರು ನಿಲ್ಲುವಂತಿದ್ದರೆ ಅಂತಹವುಗಳಿಂದಲೇ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಮಲೇರಿಯ, ಚಿಕೂನ್‌ಗುನ್ಯಾದಂತಹ ಕಾಯಿಲೆಗಳು ಹರಡುವುದು ಹೆಚ್ಚು. ಬ್ಲೀಚಿಂಗ್ ಪೌಡ್ ಹಾಕಿ ಸ್ವಚ್ಛಗೊಳಿಸಬೇಕು. ಕಸ, ಕಡ್ಡಿ, ಒಡೆದ ಕುಂಡ, ತೆಂಗಿನ ಚಿಪ್ಪು ಮುಂತಾದವುಗಳನ್ನು ಹಾಗೆಯೇ ಬಿಡಬಾರದು. ಸ್ವಚ್ಛತೆಯೇ ನಮ್ಮ ಪ್ರಥಮ ಆದ್ಯತೆಯಾಗಬೇಕು.

ಉಡುಪು :

ಹೊರಗೆ ತಿರುಗಾಡಲು ಹೋಗುವಾಗ ಕೊಡೆ ಸದಾ ಜೊತೆಯಲ್ಲಿರಬೇಕು. ರೇನ್‌ ಕೋಟ್ ಇಟ್ಟುಕೊಂಡಲ್ಲಿ ಇನ್ನೂ ಉತ್ತಮ. ಬೆಚ್ಚಗಿನ ಉಡುಪು ಧರಿಸಬೇಕು. ಕಾಲಿಗೆ ಶೂಸ್ ಇಲ್ಲವೇ ಸಾಕಹಾಕಿ ಚಪ್ಪಲಿ ಧರಿಸಿ. ದ್ವಿಚಕ್ರ ವಾಹನಗಳಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡುವವರು ಕಿವಿಗೆ ಹತ್ತಿ ಇರಿಸಿಕೊಳ್ಳಬೇಕು ಇಲ್ಲವೇ ಸ್ಕಾರ್ಫ್ ಕಟ್ಟಿಕೊಳ್ಳಬೇಕು. ಬೆಳಗಿನ ಸಮಯ ವಾಕಹೋಗುವವರು ಉಲ್ಲನ್‌ ಟೊಪ್ಪಿ ಧರಿಸಿ ಹೋಗಬೇಕು. ಮನೆಯಲ್ಲಿಯೂ ಹವಾ್ ಚಪ್ಪಲಿ ಧರಿಸಿ ಓಡಾಡುವುದು ಸೂಕ್ತ.

ಸಾಮಾನ್ಯ ಕಾಯಿಲೆಗಳು :

ಮಳೆಗಾಲದಲ್ಲಿ ಸ್ವಲ್ಪ ಮಳೆಯಲ್ಲಿ ನೆನೆದರೂ ತಕ್ಷಣ ಜ್ವರ ಕಾಣಿಸಿಕೊಳ್ಳುತ್ತದೆ. ಅಲರ್ಜಿಯ ತೊಂದರೆಯಿರುವವರಿಗಂತೂ ಸೀನು ಬರುವುದು, ಮೂಗು ಕಟ್ಟುವುದು ಅತ್ಯಂತ ಸಾಮಾನ್ಯ. ಉಬ್ಬಸ ರೋಗಿಗಳಿಗಂತೂ ತುಂಬ ಕಷ್ಟ. ಹೊರಗಡೆ ಮೋಡ ಕಟ್ಟಿದ ವಾತಾವರಣ ಕಂಡ ಕೂಡಲೇ ಉಸಿರಾಟದಲ್ಲಿ ಏರುಪೇರು ಉಂಟಾಗುತ್ತದೆ. ಸಂಧಿವಾತ ಅಂದರೆ ಮಂಡಿನೋವಿನಿಂದ ಬಳಲುವವರಿಗೂ, ಚರ್ಮದ ಕಾಯಿಲೆಗಳು, ಇಸಬು, ಸೋರಿಯಾಸಿಸ್, ಪಿತ್ತದ ಗಂಧೆಗಳು ಹೆಚ್ಚಾಗುತ್ತವೆ.

ಜ್ವರ :

ಎರಡು ಚಮಚೆ ತುಳಸಿ ಎಲೆಯ ರಸಕ್ಕೆ 2 ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ, ಇದಕ್ಕೆ ಜೇನುತುಪ್ಪ ಬೆರೆಸಿ ಸೇವಿಸಬೇಕು. ಮೂರು ಗಂಟೆಗಳಿಗೊಮ್ಮೆ ತೆಗೆದು ಕೊಳ್ಳಬೇಕು. ಅಮೃತ ಬಳ್ಳಿಯ ರಸವನ್ನು ಜೇನಿನೊಂದಿಗೆ ಬೆರೆಸಿ ದಿನಕ್ಕೆ ನಾಲ್ಕೈದು ಬಾರಿ ಕುಡಿಯಬೇಕು.

ಭೇದಿ :

ಲಂಘನ ಅಂದರೆ ಉಪವಾಸ ಮಾಡಬೇಕು. ಓಮದ ಪುಡಿ ಒಂದು ಚಮಚೆ, ಒಂದು ಚಿಟಿಕೆ ಸೈಂಧವ ಲವಣ, ಜೇಷ್ಠ ಮಧುವಿನ ಪುಡಿ ಒಂದು ಚಮಚೆ ಎಲ್ಲವನ್ನೂ ಸೇರಿಸಿ ಮಜ್ಜಿಗೆಯೊಡನೆ ದಿನಕ್ಕೆ ಮೂರು ಬಾರಿ ಕುಡಿಯಬೇಕು. ಆಮ ಮತ್ತು ಹೊಟ್ಟೆ ನೋವಿನೊಂದಿಗೆ ಕೂಡಿ ಭೇದಿಯಾಗುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತದೆ.

ಹೊಟ್ಟೆನೋವು :

ಅರ್ಧಲೋಟ ಬಿಸಿ ನೀರಿಗೆ ಅರ್ಧ ಚಮಚೆ ಬೆಳ್ಳುಳ್ಳಿ ರಸ ಇಲ್ಲವೇ ಹೆಸರು ಕಾಳು ಗಾತ್ರದ ಹಿಂಗು ಹಾಕಿ, ಒಂದು ಚಿಟಿಕೆ ಸೈಂಧವ ಲವಣ ಬೆರೆಸಿ ಕುಡಿದಲ್ಲಿ ನೋವು ಕಡಿಮೆಯಾಗುತ್ತದೆ.

ಹೊಟ್ಟೆಯುಬ್ಬರ :

ಕೊತ್ತಂಬರಿ ಬೀಜ (ಧನಿಯ) ಮತ್ತು ಜೀರಿಗೆ ಸಮಭಾಗ ಪುಡಿಮಾಡಿ ಕಷಾಯ ತಯಾರಿಸಿ ಸ್ವಲ್ಪ ಬೆಲ್ಲ ಬೆರೆಸಿ ಕುಡಿಯಬೇಕು.

ನೆಗಡಿ :

ಒಂದು ಲವಂಗವನ್ನು ಬಾಯಲ್ಲಿರಿಸಿ ಅದರ ರಸ ನುಂಗುತ್ತಿರಬೇಕು. ಅರಿಶಿನ ಪುಡಿಯನ್ನು ಕೆಂಡದ ಮೇಲೆ ಹಾಕಿ ಇಲ್ಲವೇ ಅರಿಶಿನ ಕೊಂಬಿನ ತುದಿಯನ್ನು ಕೆಂಡದಲ್ಲಿ ಸುಟ್ಟು ಅದರ ಹೊಗೆಯನ್ನು ಮೂಗಿನಿಂದ ಎಳೆದುಕೊಳ್ಳಬೇಕು.

ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿನೀರು ಇಲ್ಲವೇ ಬಿಸಿ ಹಾಲಿಗೆ ಅರ್ಧ ಚಮಚೆ ಶುದ್ಧವಾದ ಅರಿಶಿನ ಪುಡಿ ಬೆರೆಸಿ, ಸ್ವಲ್ಪ ಬೆಲ್ಲ ಹಾಕಿ ಕುಡಿಯಬೇಕು. ಅರಿಶಿನ ಪುಡಿಯನ್ನು ಅಂಗಡಿಯಲ್ಲಿ ಸಿದ್ಧ ಪಾಕೆಟ್ ಖರೀದಿಸದೇ ಅರಿಶಿನ ಕೊಂಬು ತಂದು ಪುಡಿ ಮಾಡಿಟ್ಟುಕೊಂಡಲ್ಲಿ ಉತ್ತಮ.

ಕೆಮ್ಮು :

ಶುಂಠಿ, ಹಿಪ್ಪಲಿ, ಮೆಣಸು ಪ್ರತಿಯೊಂದು 10 ಗ್ರಾಂ, ಜೇಷ್ಠಮಧು 30 ಗ್ರಾಂ ಎಲ್ಲವನ್ನು ಕುಟ್ಟಿ ನುಣ್ಣಗೆ ಪುಡಿ ಮಾಡಿಟ್ಟುಕೊಂಡು ಒಂದು ಚಮಚೆ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು.

5 ಚಮಚೆ ಆಡುಸೋಗೆ ಎಲೆಯ ರಸಕ್ಕೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಬೆಳಿಗ್ಗೆ ಹಾಗೂ ರಾತ್ರಿ ಊಟಕ್ಕೆ ಮುಂಚೆ ಸೇವಿಸಬೇಕು.

ಗಂಟಲು ನೋವು :

10 ಗ್ರಾಂ ಜೇಷ್ಠಮಧು ಕುಟ್ಟಿ ಪುಡಿ ಮಾಡಿ ಅದನ್ನು ಒಂದು ಲೋಟ ನೀರಿನಲ್ಲಿ ಕಷಾಯಕ್ಕಿಟ್ಟು ಅರ್ಧಲೋಟಕ್ಕಿಳಿಸಿ, ಆರಿಸಿ, ಶೋಧಿಸಿ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು.

ದ್ರಾಕ್ಷಿ, ಕಾಳುಮೆಣಸು, ಜೇಷ್ಠಮಧು ಸಮಪ್ರಮಾಣದಲ್ಲಿ ಕುಟ್ಟಿ ಮಾತ್ರೆ ತಯಾರಿಸಿಟ್ಟುಕೊಂಡು ಎರಡು ಮಾತ್ರೆಯನ್ನು ದಿನಕ್ಕೆ ಮೂರು ಬಾರಿ ಸೇವಿಸಬೇಕು.

ಆಡುಸೋಗೆ ಎಲೆಗೆ ಸ್ವಲ್ಪ ಬಿಸಿನೀರು ಹಾಕಿ ರಸ ತೆಗೆದು ಆ ರಸವನ್ನು ಐದು ಚಮಚೆ ತೆಗೆದುಕೊಂಡು 3-4 ಚಿಟಿಕೆ ಹಿಪ್ಪಲಿ ಪುಡಿ ಮತ್ತು ಜೇನುತುಪ್ಪ ಬೆರೆಸಿ ಮೂರ್ನಾಲ್ಕು ಬಾರಿ ಸೇವಿಸಬೇಕು.

ಉಬ್ಬಸ :

ಅರಿಶಿನ, ಕಾಳುಮೆಣಸು, ಹಿಪ್ಪಲಿ, ದ್ರಾಕ್ಷಿ, ಬೆಲ್ಲ, ಕಚೋರ, ಶುಂಠಿ ಇವುಗಳನ್ನು ಸಮಭಾಗ ಪುಡಿ ಮಾಡಿ 5 ಗ್ರಾಂನಷ್ಟು ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆರಡು ಇಲ್ಲವೇ ಮೂರು ಬಾರಿ ಸೇವಿಸಬೇಕು.

ಆಡುಸೋಗೆ ಎಲೆ, ಬೆಳ್ಳುಳ್ಳಿ, ಮೆಣಸು, ಹಿಪ್ಪಲಿ, ಕಟುಕರೋಹಿಣಿ ಈ ಎಲ್ಲವುಗಳನ್ನು ಸೇರಿಸಿ ಅರೆದು ಒಂದು ಚಮಚೆಯಷ್ಟನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಉಬ್ಬಸ ಕಡಿಮೆಯಾಗುತ್ತದೆ.

ಸ್ವರ ಒಡೆದಿದ್ದರೆ :

ಒಂದೆಲಗ, ಬಜೆ, ಶುಂಠಿ, ಹಿಪ್ಪಲಿ ಸಮಭಾಗ ಕುಟ್ಟಿ ಪುಡಿ ಮಾಡಿಟ್ಟುಕೊಂಡು ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಬೇಕು.

ಸಂಧಿವಾತ :

ಧನಿಯಾ, ಒಣಶುಂಠಿ ಎರಡನ್ನು 10 ಗ್ರಾಂ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿ ನಾಲ್ಕು ಲೋಟ ನೀರಿನಲ್ಲಿ ಹಾಕಿ ಕಷಾಯಕ್ಕಿಟ್ಟು ಒಂದು ಲೋಟಕ್ಕೆ ಇಳಿಸಿ, ಶೋಧಿಸಿ ದಿನಕ್ಕೆರಡು ಬಾರಿ ಕುಡಿಯಬೇಕು.

ನೋವಿರುವ ಜಾಗಕ್ಕೆ ಎಳ್ಳೆಣ್ಣೆ ಮತ್ತು ಸಾಸುವೆ ಎಣ್ಣೆಯನ್ನು ಬಿಸಿ ಮಾಡಿ ಹಚ್ಚಿ ಮಸಾ್ ಮಾಡಿ ನಂತರ ಶಾಖ ತೆಗೆದುಕೊಳ್ಳಬೇಕು.

ಒಣಶುಂಠಿಯನ್ನು ನೀರಿನಲ್ಲಿ ತೇಯ್ದು ತೆಳುವಾಗಿ ನೋವಿರುವ ಜಾಗಕ್ಕೆ ಲೇಪಿಸಬೇಕು. ಹೊಂಗೆಯ ಎಲೆಯನ್ನು ಹಾಕಿ ಕುದಿಸಿದ ನೀರಿನಿಂದ ಶಾಖ ತೆಗೆದುಕೊಳ್ಳಬೇಕು.

ಚರ್ಮದ ಆರೈಕೆ :

ಚರ್ಮ ನಮಗೆ ರಕ್ಷಾ ಕವಚ. ಎಲ್ಲರಿಗೂ ಆರೋಗ್ಯಕರವಾದ, ಕಾಂತಿಯುತ ಚರ್ಮ ಬೇಕು. ಮಳೆಯಿಂದಾಗಿ ಶೀತದ ಗಾಳಿ ಬೀಸುವುದರಿಂದ ಚರ್ಮ ಒರಟಾಗುತ್ತದೆ. ತನ್ನ ಸಹಜ ಮೃದುತ್ವ ಕಳೆದುಕೊಂಡು ಸುಕ್ಕಾಗುತ್ತದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಚರ್ಮದ ತೊಂದರೆಗಳು ಪಿತ್ತದ ಗಂಧೆಗಳೇಳುವುದು, ನವೆಯಾಗುವುದು, ಬಿಳಿಚಿಬ್ಬು, ತಲೆಹೊಟ್ಟು, ಹೇನಿನ ತೊಂದರೆ ಮುಂತಾದವುಗಳು ಹೆಚ್ಚಾಗುತ್ತವೆ.

ಒಣಚರ್ಮ :

ತೆಂಗಿನಕಾಯಿಯ ತಾಜಾ ತಿರುಳನ್ನು ತೆಗೆದುಕೊಂಡು ಮೃದುವಾಗಿ ಚರ್ಮಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಮುಖದ ಚರ್ಮ, ಕೈಕಾಲುಗಳು ಹೂವಿನಂತೆ ಕೋಮಲವಾಗುತ್ತವೆ. ವಾರಕ್ಕೊಮ್ಮೆ ಮುಖಕ್ಕೆ ಬಾಳೆಹಣ್ಣು ಮತ್ತು ಪಪ್ಪಾಯ ಹಣ್ಣಿನ ಪೇಸ್ಟ್ ಮಾಡಿಕೊಂಡು ಹಚ್ಚಿಕೊಂಡು ಅರ್ಧ ಗಂಟೆಯ ನಂತರ ತೊಳೆದುಕೊಳ್ಳಬೇಕು. ದಿನಕ್ಕೊಮ್ಮೆ ಮೊಸರನ್ನು ಮುಖಕ್ಕೆ ಲೇಪಿಸಿಕೊಂಡು ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕು. ಪ್ರತಿದಿನ ರಾತ್ರಿ ಬಾದಾಮಿ ಎಣ್ಣೆ ಇಲ್ಲವೇ ಕುಂಕುಮಾದಿ ತೈಲದಿಂದ ಮುಖಕ್ಕೆ ಮೇಲ್ಮುಖವಾಗಿ ಮಸಾಜ್ ಮಾಡಿಕೊಳ್ಳಬೇಕು.

ಬೆಂಡೆಕಾಯಿಯ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿ ಅರ್ಧ ಗಂಟೆಯ ನಂತರ ಮುಖ ತೊಳೆಯಬೇಕು.

ಎಣ್ಣೆ ಚರ್ಮ :

ಎಣ್ಣೆ ಚರ್ಮ ಹೊಂದಿರುವವರು ಮುಖಕ್ಕೆ ಒಣಗಿದ ಗುಲಾಬಿ ದಳಗಳ ಪುಡಿ ಮತ್ತು ಕೆಂಪು ಚಂದನದ ಪುಡಿಯನ್ನು ಗುಲಾಬಿ ಜಲದಲ್ಲಿ ಬೆರೆಸಿ ಹಚ್ಚಿಕೊಳ್ಳಬೇಕು.

ಅಕ್ಕಿಹಿಟ್ಟು, ಕಡಲೆಹಿಟ್ಟು, ಅರಿಶಿನ (ಸ್ವಲ್ಪ) ಮತ್ತು ಮೊಸರು ಬೆರೆಸಿ ಮುಖಕ್ಕೆ ಲೇಪಿಸಿ ಸ್ವಲ್ಪ ಸಮಯ ಬಿಟ್ಟು ತೊಳೆಯಬೇಕು. ವಾರಕ್ಕೊಮ್ಮೆ ಬೀಟ್‌ರೂಟ್‌ ಮತ್ತು ಕ್ಯಾರೆಟನ್ನು ಸಣ್ಣಗೆ ಹಚ್ಚಿ ಮಿಕ್ಸಿಗೆ ಹಾಕಿ ಪೇಸ್ಟ ತಯಾರಿಸಿಕೊಂಡು ಮುಖಕ್ಕೆ ಲೇಪಿಸಿ ಅರ್ಧಗಂಟೆ ಬಿಟ್ಟು ಮುಖ ತೊಳೆಯಬೇಕು. ಸೇಬು ಹಣ್ಣಿನ ಮುಖ ಲೇಪ ಕೂಡ ಒಳ್ಳೆಯದು.

ಮಾಯಿಶ್ಚರೈಸ್ :

ಮನೆಯಲ್ಲಿಯೇ ಮಾಯಿಶ್ಚರೈಸ್ ತಯಾರಿಸಿಕೊಂಡು ಪ್ರತಿದಿನ ಮಲಗುವ ಮುಂಚೆ ಮುಖಕ್ಕೆ ಹಚ್ಚಿಕೊಂಡಲ್ಲಿ ಹಗಲು ಹೊತ್ತಿನಲ್ಲಿ ಯಾವುದೇ ಕ್ರೀಂ ಬಳಸುವ ಅವಶ್ಯಕತೆಯಿರುವುದಿಲ್ಲ.

ಲೋಳೆಸರದ (ಅಲೊವೆರಾ) ತಿರುಳು ಅಥವಾ ಜೆಲ್ 2 ಚಮಚೆ, ಬಾದಾಮಿ ಎಣ್ಣೆ 1 ಚಮಚೆ, ಬೆಣ್ಣೆ ಅರ್ಧ ಚಮಚೆ, ಗುಲಾಬಿ ಜಲ ಒಂದು ಚಮಚೆ ಈ ಎಲ್ಲವನ್ನೂ ಬೆರೆಸಿಟ್ಟುಕೊಂಡು ರಾತ್ರಿ ಹೊತ್ತು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ತುಟಿಗಳಿಗೆ :

ಪ್ರತಿದಿನ ರಾತ್ರಿ ಮಲಗುವಾಗ ತುಪ್ಪ ಅಥವಾ ಬೆಣ್ಣೆ ಇಲ್ಲವೇ ಮಜ್ಜಿಗೆ ತುಟಿಗಳಿಗೆ ಹಚ್ಚಿಕೊಂಡು ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕು.

ಸ್ನಾನದ ಚೂರ್ಣ :

ಕಡಲೆಕಾಳು, ಹೆಸರುಕಾಳು, ಮೆಂತ್ಯ ಇವುಗಳನ್ನು 1:1:1/4 ಪ್ರಮಾಣದಲ್ಲಿ ಹಿಟ್ಟು ತಯಾರಿಸಿಕೊಳ್ಳಬೇಕು. ಈ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲೆಸಿ ಸ್ನಾನಕ್ಕೆ ಬಳಸುವುದರಿಂದ ಸಾಬೂನಿನಂತೆ ಸ್ವಚ್ಛ ಮಾಡುವುದಲ್ಲದೇ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮರೋಗದಿಂದ ಬಳಲುವವರು ಈ ಪುಡಿಗೆ ನಿಂಬೆಹಣ್ಣಿನ ಸಿಪ್ಪೆ, ಕಿತ್ತಳೆ ಸಿಪ್ಪೆ, ತುಳಸಿ, ಕಸ್ತೂರಿ, ಅರಿಶಿನ, ಕಚೋರ, ಸೇರಿಸಿ ಬೆರೆಸಿಟ್ಟುಕೊಂಡು ಬಳಸಬೇಕು.

ತಲೆಹೊಟ್ಟು :

ತಲೆಹೊಟ್ಟಿನಿಂದ ಬಳಲುವವರು ವಾರಕ್ಕೆರಡು ಇಲ್ಲವೇ ಮೂರು ಬಾರಿ ತಲೆ ಸ್ನಾನ ಮಾಡಬೇಕು. ಒಣಗಿಸಿದ ಬೇವಿನೆಲೆಯ ಪುಡಿ, ತುಳಸಿ ಪುಡಿ, ನೆಲ್ಲಿಕಾಯಿ ಪುಡಿಯನ್ನು ಸಮಭಾಗ ತೆಗೆದುಕೊಂಡು ನೀರಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿನ ಬುಡಕ್ಕೆ ಹಚ್ಚಿ ಒಂದು ಗಂಟೆ ಇಲ್ಲವೇ ಎರಡು ಗಂಟೆ ಸಮಯ ಬಿಟ್ಟು ನಂತರ ತೊಳೆದುಕೊಳ್ಳಬೇಕು. ವಾರಕ್ಕೊಂದು ಬಾರಿ ಹೀಗೆ ಮಾಡುವುದರಿಂದ ಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.

ನೆಲ್ಲಿಕಾಯಿ ಕಷಾಯ ತಯಾರಿಸಿ ಅದರಿಂದ ತಲೆಯನ್ನು ತೊಳೆದುಕೊಂಡಲ್ಲಿ ತಲೆಹೊಟ್ಟು ಕಡಿಮೆಯಾಗುತ್ತದೆ.

ತಲೆಯ ಸ್ನಾನಕ್ಕೆ ಪುಡಿ :

ಹೆಸರುಕಾಳು, ಮೆಂತ್ಯ, ಎಳ್ಳು ಇವುಗಳನ್ನು 1:1/4:1/4 ಸೇರಿಸಿ ಹಿಟ್ಟು ತಯಾರಿಸಿಕೊಂಡಲ್ಲಿ ಉತ್ತಮ. ಇದು ಕಂಡೀಷನ್ ತರಹ ಕೆಲಸ ಮಾಡುತ್ತದೆ.

ದಾಸವಾಳದ ಎಲೆಯನ್ನು ರುಬ್ಬಿ ತಲೆಗೆ ಹಚ್ಚಿ ತೊಳೆದುಕೊಳ್ಳುವುದರಿಂದ ಅದು ಶಾಂಪೂ ತರಹ ಕೆಲಸ ಮಾಡುತ್ತದೆ.

ಕೂದಲಿನ ಸುಗಂಧಕ್ಕೆ :

ಗುಲಾಬಿ ಜಲ, ನಿಂಬೆರಸ ಬೆರೆಸಿದ ನೀರಿನಿಂದ ತಲೆಗೂದಲನ್ನು ತೊಳೆದುಕೊಳ್ಳುವುದರಿಂದ ಕೂದಲಿಗೆ ಉತ್ತಮ ಸುವಾಸನೆ ಬರುತ್ತದೆ.

ಸ್ನಾನದ ನಂತರ ಗುಗ್ಗುಲು, ಸಾಂಬ್ರಾಣಿ ಮುಂತಾದ ಧೂಪದ್ರವ್ಯಗಳಿಂದ ಕೂದಲನ್ನು ಒಣಗಿಸಿಕೊಳ್ಳುವುದರಿಂದ ಕೂದಲಿಗೆ ಹಿತವಾದ ಪರಿಮಳ ಬರುತ್ತದೆ. ಹೀಗೆ ಮಾಡುವುದರಿಂದ ನೆಗಡಿ, ಕೆಮ್ಮು ಬಾಧಿಸುವುದಿಲ್ಲ.

ಚರ್ಮರೋಗಗಳು :

ಇಸಬು, ಸೋರಿಯಾಸಿಸ್ ಮುಂತಾದವುಗಳಿಂದ ಬಳಲುವವರು ರಕ್ತಶುದ್ಧಿಗೆ ಸೊಗದೆ ಬೇರಿನ ಕಷಾಯ ಕುಡಿಯಬೇಕು. ಸೊಗದೆ ಬೇರನ್ನು ಕುಟ್ಟಿ ಪುಡಿ ಮಾಡಿ 10 ಗ್ರಾಂ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಅರ್ಧ ಲೋಟಕ್ಕೆ ಇಳಿದಾಗ ಅದಕ್ಕೆ ಹಾಲು, ಬೆಲ್ಲ ಬೆರೆಸಿ ಕುಡಿಯಬೇಕು. ಬೇವಿನೆಣ್ಣೆ, ಶ್ರೀಗಂಧ, ಕಚೋರ ಸೇರಿಸಿ ಮೈಗೆ ಲೇಪಿಸಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು. ಹೊಂಗೆಯ ರಸ ಮತ್ತು ಬೇವಿನೆಲೆಯ ರಸ ಬೆರೆಸಿ ಹಚ್ಚಿಕೊಳ್ಳುವುದು ಒಳ್ಳೆಯದು.

ಬಿಳಿಚಿಬ್ಬು :

ಕೆಲವರಲ್ಲಿ ಎದೆ, ಕುತ್ತಿಗೆ, ಬೆನ್ನಿನ ಭಾಗದಲ್ಲಿ ಬಿಳಿಯ ಚುಕ್ಕೆ ಮತ್ತು ಮಚ್ಚೆಗಳಾಗಿರುತ್ತವೆ. ಅಂತಹವರು ಶ್ರೀಗಂಧ ಮತ್ತು ಬಜೆಯನ್ನು ಮಜ್ಜಿಗೆಯಲ್ಲಿ ಅರೆದು ಲೇಪಿಸಿಕೊಂಡು ಒಂದು ಗಂಟೆ ಸಮಯ ಬಿಟ್ಟು ಸ್ನಾನ ಮಾಡಬೇಕು.

ನವೆ, ಪಿತ್ತದ ಗಂಧೆ :

ಅಲರ್ಜಿಯಿಂದ ಪಿತ್ತದ ಗಂಧೆಗಳಾಗುವುದರಿಂದ ನವೆ, ಉರಿ ಇರುತ್ತದೆ. ದೊಡ್ಡಪತ್ರೆಯ ಎಲೆಯನ್ನು ಚಟ್ನಿಯಂತೆ ಅರೆದು ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ತೊಳೆದುಕೊಳ್ಳಬೇಕು. ದೊಡ್ಡ ಪತ್ರೆಯ ಎಲೆಗಳ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆರಡು ಇಲ್ಲವೇ ಮೂರು ಬಾರಿ ಕುಡಿಯಬೇಕು.

ತಲೆಯ ಹೇನಿಗೆ :

ಕಹಿ ಜೀರಿಗೆಯನ್ನು ನಿಂಬೆಯ ರಸದಲ್ಲಿ ಅರೆದು ತಲೆಗೆ ಹಚ್ಚಿ ನಾಲ್ಕು ಗಂಟೆ ಬಿಟ್ಟು ಸ್ನಾನ ಮಾಡಬೇಕು. ಇದನ್ನು ವಾರಕ್ಕೊಮ್ಮೆ ಮಾಡಬೇಕು. ಕೊಬ್ಬರಿ ಎಣ್ಣೆಯಲ್ಲಿ ಬೇವಿನೆಣ್ಣೆ ಬೆರೆಸಿ ತಲೆಗೆ ಪ್ರತಿದಿನ ಹಚ್ಚಿಕೊಳ್ಳಬೇಕು.

ಕೆಸರು ಹುಣ್ಣು :

ಕಾಲಿನ ಬೆರಳುಗಳ ಸಂದಿಗಳಲ್ಲಿ ನವೆಯಾಗುವುದು, ಕೆಂಪಾಗಿ ನೋವು ಉಂಟಾಗುತ್ತದೆ. ಸದಾ ನೀರಿನಲ್ಲಿ ಕೆಲಸ ಮಾಡುವವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

20 ಗ್ರಾಂ ಜೇನುಮೇಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಕರಗಿಸಿ ನಂತರ ಅದಕ್ಕೆ 10 ಮಿಲಿ ಬೇವಿನೆಣ್ಣೆ ಮತ್ತು 10 ಮಿಲಿ ಕೊಬ್ಬರಿ ಎಣ್ಣೆ ಬೆರೆಸಿ ಆರಿದ ನಂತರ ಬಾಟಲಿಯಲ್ಲಿ ತುಂಬಿಟ್ಟುಕೊಳ್ಳಬೇಕು. ಬೆಳಿಗ್ಗೆ ಕೆಲಸವೆಲ್ಲ ಮುಗಿದ ನಂತರ ಕಾಲಿನ ಬೆರಳುಗಳ ಸಂದಿಗಳಲ್ಲಿರುವ ತೇವಾಂಶವನ್ನು ಒರೆಸಿಕೊಂಡು, ಒಣಗಿದ ನಂತರ ಈ ಮುಲಾಮನ್ನು ಹಚ್ಚಿಕೊಳ್ಳಬೇಕು. ರಾತ್ರಿ ಮಲಗುವ ಮುಂಚೆಯೂ ಮುಲಾಮನ್ನು ಲೇಪಿಸಿಕೊಂಡಲ್ಲಿ ಒಳ್ಳೆಯದು.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು :

ಕಾಯಿಲೆಗಳು ಬಾರದಂತೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚೆ ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು.

ಚಿಕೂನ್‌ ಗುನ್ಯಾ ಬಾರದಂತೆ ನೋಡಿಕೊಳ್ಳಲು ಈ ಕಾಯಿಲೆ ಕಂಡುಬರುವ ಪ್ರದೇಶದಲ್ಲಿ ವಾಸಿಸುವವರು ಅಮೃತಬಳ್ಳಿ ರಸ, ತುಳಸಿ ರಸವನ್ನು ನೆಲ್ಲಿಕಾಯಿ ಪುಡಿಯೊಂದಿಗೆ ಜೇನುತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.