ಸಮಕಾಲೀನ  ಜನಜೀವನದ  ಬದುಕನ್ನು  ಸೂಕ್ಷ್ಮವಾಗಿ ಅವಲೋಕಿಸಿದರೆ, ನುಡಿಯೊಂದಾಗಿ – ನಡೆ ಇನ್ನೊಂದಾಗಿ ಕಾಣುತ್ತದೆ. ಹೇಳುವ ಆದರ್ಶ ಒಂದು, ಬಾಳುವ ವಾಸ್ತವ ಇನ್ನೊಂದಾಗಿರುತ್ತದೆ. ಎಲ್ಲೋ, ಅಲ್ಲೊಮ್ಮೆ – ಇಲ್ಲೊಮ್ಮೆ ನುಡಿಯ ನೇರಕೆ ನಡೆದ ದೀಮಂತ ವ್ಯಕ್ತಿಗಳನ್ನು ನಾವು ಕಾಣುತ್ತೇವೆ. ನಮ್ಮ ಅಂತಃಕರಣ ಇಂಥವರ ಎದುರು ಬಾಗುತ್ತದೆ; ಸದಾಕಾಲ ಆ ವ್ಯಕ್ತಿಯನ್ನು, ವ್ಯಕ್ತಿಯ ಆದರ್ಶವನ್ನು ಸ್ಮರಿಸುತ್ತ ಅವರಂತಾಗಬೇಕೆಂದು ಬಯಸುತ್ತದೆ. ಆದರೆ ಇಂಥ ವ್ಯಕ್ತಿಗಳು ಅಪೂರ್ವಕ್ಕೆ ಕಾಣಸಿಗುತ್ತಾರಷ್ಟೇ. ಈ ಬಗೆಯ ವಿರಳ ಚೇತನರಲ್ಲಿ ಸದಾ ಸ್ಮರಣೀಯರಾದವರು – ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆಯವರು.

ಅಖಿಲ ಲೋಕ ಸಂಚಾರಿಗಳೂ, ವಿಚಾರಪರರೂ ಆದ ನಾರದ ರಲ್ಲಿ ಒಮ್ಮೆ ಮಹರ್ಷಿ ಬಾದರಾಯಣರು ‘ಕೋನವಸ್ಮಿನ್ ಸಾಂಪ್ರತಂ ಲೋಕೋ ಗುಣವಾನ್ ಮಹಾಪುರುಷ’ (ಈ ಲೋಕದಲ್ಲಿ ಮಹಾಪುರುಷನಾದವನು ಯಾರು?) – ಎಂಬುದಾಗಿ ಪ್ರಶ್ನಿಸಿದ್ದರಂತೆ. ಈ ಪ್ರಶ್ನೆಗೆ ಉತ್ತರಿಸುತ್ತ ನಾರದರು, ‘‘ಶ್ರೀರಾಮನೇ ಅಂಥ ಮಹಾಪುರುಷನೆಂದು, ಅವನಲ್ಲಿ ಮಹಾಪುರುಷನಿಗಿರಬೇಕಾದ ಸಕಲ ಗುಣ, ಯೋಗ್ಯತೆಗಳಿವೆ’’ಯೆಂದು ಆ ಕಾಲಕ್ಕೇ ಅಂದಿದ್ದರಂತೆ.  ಈ  ಜಗದ ಪುಣ್ಯವಿಶೇಷದಿಂದ ಇಂಥ ಮಹಾಪುರುಷ ಎಲ್ಲೋ ಶತಮಾನ – ಶತಮಾನಗಳಿಗೊಮ್ಮೆ ಹುಟ್ಟಿಬರುತ್ತಾನೆ. ಇಡೀ ಮನುಕುಲಕ್ಕೇ ಮಾದರಿಯೆನ್ನಿಸುವಂತೆ ಬಾಳುತ್ತಾನೆ, ತನ್ನ ಅಸಾಧಾರಣವಾದ ವ್ಯಕ್ತಿತ್ವವನ್ನು ನಾಡಿನಾದ್ಯಂತ ಪಸರಿಸುತ್ತಾನೆ. ಪ್ರಾಯಶಃ ಇಪ್ಪತ್ತನೆಯ ಶತಮಾನದಲ್ಲಿ ಬಾಳಿ ಬದುಕಿದ್ದ ಕೌಡೂರು ಸದಾನಂದ ಹೆಗ್ಡೆಯವರು ಇಂಥ ಮಹಾಪುರುಷರಾಗಿದ್ದರು ಎಂಬ ನಂಬಿಕೆ ನನ್ನದು.

ಯಾವುದೇ ಒಂದು ಜನಾಂಗ ಬದುಕುವುದಕ್ಕೆ, ಬೆಳೆಯುವುದಕ್ಕೆ, ಪ್ರಬುದ್ಧತೆಯನ್ನು ಸಂಪಾದಿಸುವುದಕ್ಕೆ, ಸಾಧನೆಯ ಶಿಖರವನ್ನೇರುವುದಕ್ಕೆ – ಪ್ರಾಚೀನದ ನೆನಹು, ವರ್ತಮಾನದ ಅರಿವು ಹಾಗೂ ಭವಿಷ್ಯತ್ತಿನ ಕಲ್ಪನೆ – ಈ ಮೂರೂ ಬೇಕಾಗುತ್ತದೆ. ಹಳೆಯ ಸತ್ವವನ್ನು ಹೀರಿಕೊಂಡು, ಹೊಸ ಸತ್ವವನ್ನು ಬರಮಾಡಿಕೊಂಡು, ಗುರಿಯ ದೃಷ್ಟಿಯೊಂದಿಗೆ – ಅಚಲ ನಿರ್ಧಾರದಿಂದ ಯಾರು ಮುನ್ನಡೆಯುವರೋ ಅವರಿಗೆ ಹೊಸ ಕ್ಷಿತಿಜಗಳು ಕಾಣುತ್ತವೆ ಎಂಬ ಭರವಸೆ ನಮ್ಮಲ್ಲಿರುವುದರಿಂದಲೇ ದಿವಂಗತ ಕೆ.ಎಸ್. ಹೆಗ್ಡೆಯವರ  ನೆನಪು ನಮಗೆ ನಿರಂತರ ಸ್ಫೂರ್ತಿ!

ಬಾಲ್ಯ – ಶಿಕ್ಷಣ

ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಕೌಡೂರು ಎಂಬಲ್ಲಿ 1909 ಜೂನ್ 16ರಂದು ಸದಾನಂದ ಹೆಗ್ಡೆಯವರು ಕೌಡೂರು ನಾಯರ್‌ಬೆಟ್ಟು ಸುಬ್ಬಯ್ಯ ಹೆಗ್ಡೆ ಹಾಗೂ ಇರ್ಮಾಡಿ ಲಿಂಗಮ್ಮ ಶೆಡ್ತಿ ದಂಪತಿಯ ಏಳು ಜನ ಮಕ್ಕಳಲ್ಲಿ ಕಿರಿಯ ಮಗನಾಗಿ ಜನಿಸಿದರು. ಇಡೀ ಊರಿಗೆ ಗೌರವದ ವ್ಯಕ್ತಿಯಾಗಿದ್ದ ಸುಬ್ಬಯ್ಯ ಹೆಗ್ಡೆಯವರು ತನ್ನ ಸುತ್ತಲಿನ ಸಮಾಜದ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸಿ, ಜನರಿಗೆ ನ್ಯಾಯ ದೊರಕಿಸಿಕೊಡುತ್ತಿದ್ದರು. ಎಳವೆಯಲ್ಲಿಯೇ ತನ್ನ ತಂದೆಯವರ ನ್ಯಾಯ ತೀರ್ಮಾನದ ವೈಖರಿಯಿಂದ ಆಸಕ್ತರಾಗಿದ್ದ ಕೆ.ಎಸ್. ಹೆಗ್ಡೆಯವರು ಆ ದಿನಗಳಲ್ಲೇ ಮುಂದೆ ತಾನೊಬ್ಬ ನ್ಯಾಯಾಧೀಶನಾಗಿ ನ್ಯಾಯ ನೀಡಬೇಕು ಎಂದು ನಿರ್ಧರಿಸಿರಬೇಕು! ‘ಇಡೀ ಊರಿನ ಜನರೆಲ್ಲರೂ ನಮ್ಮವರು’ ಎಂದು ತಿಳಿದುಕೊಂಡು, ಅವರನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ತನ್ನ ತಾಯ್ತಂದೆಯರ ಜೀವನಾದರ್ಶ ಮಗನ ಮೇಲೆ ಅದಾಗಲೇ ಪಡಿಯಚ್ಚು ಮೂಡಿಸಿತ್ತು. ಸಮಾಜದ ಋಣ ತೀರಿಸಲು ‘ಸಮಾಜಸೇವೆ’ ಉತ್ತಮ ಮಾರ್ಗ ಎಂದರಿತ ಕೆ.ಎಸ್. ಹೆಗ್ಡೆಯವರು ಚಿಕ್ಕ ಬಾಲಕನಾಗಿದ್ದಾಗಲೇ ಗ್ರಾಮ ಸ್ವರಾಜ್ಯದ ಕನಸನ್ನು ಕಂಡಿದ್ದರು.

ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಕೌಡೂರು ಅಂದು ಯಾವುದೇ ಸೌಲಭ್ಯಗಳಿಲ್ಲದ ಕುಗ್ರಾಮವಾಗಿತ್ತು. ಹೀಗಾಗಿ, ಕೌಡೂರಿನಿಂದ ಸುಮಾರು 15 ಕಿ.ಮೀ. ದೂರದ ಕಾರ್ಕಳದಲ್ಲಿ ಶಿಕ್ಷಣ ಪಡೆಯುವುದು ಕೆ.ಎಸ್. ಹೆಗ್ಡೆಯವರಿಗೆ ಆಗ ಅನಿವಾರ್ಯವಾಗಿತ್ತು. ಕಾರ್ಕಳದ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ಅವರು, ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಓದಿದರು.  ಗುರುವಿನ ಉಪದೇಶದಿಂದಲ್ಲದೆ ವಿದ್ಯೆಯು ಪಕ್ವವಾಗದು, ಫಲಿಸಲಾರದು. ‘‘ಉತ್ತಮ ಗುರುವಿನ ಉಪದೇಶವಿಲ್ಲದ ಶಿಷ್ಯರು ಬಳ್ಳಿ ಕುರುಡರಂತೆ ಹಳ್ಳಕ್ಕೆ ಬೀಳುವರು’’ ಎಂದು ನಂಬಿದ್ದವರು ಬಾಲಕ ಕೆ.ಎಸ್. ಹೆಗ್ಡೆಯವರು.

ವಿದ್ಯೆ ಕಲಿತರೆ ಇಲ್ಲ, ಬುದ್ಧಿ ಕಲಿತರೆ ಇಲ್ಲ
ಉದ್ಯೋಗ ಮಾಡಿದರೆ ಇಲ್ಲ, ಗುರುಮುಖ
ಇದ್ದಲ್ಲದಿಲ್ಲ – ಸರ್ವಜ್ಞ

ಗುರುರಾಯನುಪದೇಶ ದೊರೆಕೊಂಡಿತಾದೆಡೆ
ಹರಿಯುವುದು ಪಾಪವೆಂತೆನಲು ವಜ್ರದಿಂ
ಗಿರಿಯ ಹೊಯ್ದಂತೆ – ಸರ್ವಜ್ಞ

ಎಂಬ ಸರ್ವಜ್ಞನ ವಚನಗಳನ್ನು ಅದಾಗಲೇ ಮೈಗೂಡಿಸಿಕೊಂಡಿದ್ದ ಬಾಲಕ ಸದಾನಂದ ಗುರುಗಳಿಗೆ ತಕ್ಕ (ಬೇಕಾದ) ಶಿಷ್ಯನಾಗಿದ್ದರು. ತನ್ನ ಶಾಲಾ ದಿನಗಳಲ್ಲಿಯೇ ಅಸಾಮಾನ್ಯವಾದ ನಾಯಕತ್ವದಿಂದಾಗಿ ಗುರುಗಳೆಲ್ಲರ ಗಮನ ಸೆಳೆದರು. ಪಾಠದ ಜೊತೆಯಲ್ಲಿ ಪಾಠೇತರ ಚಟುವಟಿಕೆಗಳಲ್ಲಿಯೂ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದ ಇವರೊಬ್ಬ ಉತ್ತಮ ಮಾತುಗಾರನಾಗಿ ಆಗಲೇ ಮಿಂಚಿದವರು. ಪ್ರೌಢಶಾಲಾ ವಿದ್ಯಾಭ್ಯಾಸದ ಬಳಿಕ ಕೆ.ಎಸ್. ಹೆಗ್ಡೆಯವರು ಮಂಗಳೂರಿನ ಸಂತ ಅಲಾಶಿಯಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಶಿಕ್ಷಣದ ಬಗೆಗಿನ ವಿಶೇಷ ಒಲವು, ಶ್ರದ್ಧೆ – ಪ್ರಯತ್ನಗಳಿಂದಾಗಿ ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಆನರ್ಸ್‌ಪದವಿ ಗಳಿಸಿದರು. ಓದಿನ ಹಸಿವು ಇನ್ನೂ ಹೆಚ್ಚಾಗಿದ್ದರಿಂದ ಕೆ.ಎಸ್. ಹೆಗ್ಡೆಯವರು ಉನ್ನತ ವ್ಯಾಸಂಗಕ್ಕಾಗಿ ಕಾನೂನು ರಂಗ ಆರಿಸಿಕೊಂಡರು. ಬಳಿಕ ಮದರಾಸಿನ ಸರಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

ನ್ಯಾಯವಾದಿಯಾಗಿ

ಉತ್ತಮವಾದ ಒಂದು ಕೆಲಸವನ್ನು ಆರಂಬಿಸುವ ಮುನ್ನ  ನಮ್ಮ ಮೇಲೆ ನಾವೇ ಹೊರಿಸಿಕೊಳ್ಳುವ ಹೊಣೆಗಾರಿಕೆಯೇ ಸಂಕಲ್ಪ. ಅದೊಂದು ಮಾನಸಿಕ ಪ್ರತಿಜ್ಞೆ. ಅದೊಂದು ಶಪಥ, ಅದೊಂದು ನಿರ್ಧಾರ. ಸಂಕಲ್ಪವೆನ್ನುವುದು ನಿಶ್ಚಿತ ಗುರಿಯ ಕಡೆಗೆ ಸಾಗುವ ಸನ್ನಾಹದ ಮೊದಲ ಹೆಜ್ಜೆ. ಸಂಕಲ್ಪದಿಂದ ಮನಸ್ಸು ದೃಢವಾಗುತ್ತದೆ. ಆತ್ಮವಿಶ್ವಾಸ ಬೆಳೆಯುತ್ತದೆ. ಧೈರ್ಯದಿಂದ ಮುನ್ನುಗ್ಗಲು ಪ್ರಚೋದನೆ ಸಿಗುತ್ತದೆ. ಹುಮ್ಮಸ್ಸು ಬರುತ್ತದೆ. ಸಂಕಲ್ಪ ನಮ್ಮ ಮಾನಸಿಕ ಸಿದ್ಧತೆ. ಹೀಗಾಗಿಯೇ ಜೀವನದಲ್ಲಿ ಏನನ್ನಾದರೂ ಸಾಧಿಸಿಯೇ ತೀರುತ್ತೇನೆ ಎಂಬ ದೃಢ ಸಂಕಲ್ಪದಿಂದಲೇ ಕೆ.ಎಸ್. ಹೆಗ್ಡೆಯವರು ತಮ್ಮ ಸಾಧನೆಯ ಸಿದ್ಧಿಗಾಗಿ ಕಾನೂನು ರಂಗವನ್ನು ಆಯ್ದುಕೊಂಡರು.

ಪ್ರಾಥಮಿಕ ಶಿಕ್ಷಣ ಪಡೆದ ಕಾರ್ಕಳದಲ್ಲಿಯೇ 1933ರಲ್ಲಿ ಕೆ.ಎಸ್. ಹೆಗ್ಡೆಯವರು ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಆ ಕಾಲಕ್ಕೆ ಬಹಳಷ್ಟು ಹೆಸರು ಮಾಡಿದ್ದ ಖ್ಯಾತ ನ್ಯಾಯವಾದಿ ಶಿವ ಭಟ್ ಇವರ ಮಾರ್ಗದರ್ಶನದಲ್ಲಿ ಏಳು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ‘ವಾಣಿಜ್ಯ ನಗರಿ’ ಎಂದು ಕರೆಸಿಕೊಂಡಿದ್ದ ಮಂಗಳೂರು ಅಂದು ನಾಡಿನ ಬೇರೆ ಬೇರೆ ಸ್ಥಳಗಳ ನ್ಯಾಯವಾದಿಗಳನ್ನು ತನ್ನತ್ತ ಸೆಳೆದಿತ್ತು. ಸದಾನಂದ ಹೆಗ್ಡೆಯವರೂ ಸಹಜವಾಗಿಯೇ ಮಂಗಳೂರಿನತ್ತ ಗಮನ ಹರಿಸಿದರು. 1940ರಲ್ಲಿ ತಮ್ಮ ವೃತ್ತಿಯನ್ನು ಮಂಗಳೂರಿನ ಜಿಲ್ಲಾ ಮುಖ್ಯ ಕಛೇರಿಗೆ ಸ್ಥಳಾಂತರಿಸಿದರು. ತನ್ನ ಅನುಭವದಿಂದಾಗಿ ಮಂಗಳೂರಿನಲ್ಲಿ ಕೆ.ಎಸ್. ಹೆಗ್ಡೆಯವರು ಸ್ವತಂತ್ರ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸತೊಡಗಿದರು. ಕೃಷಿಕ ಕುಟುಂಬದಿಂದ ಬಂದಿದ್ದ ಹೆಗ್ಡೆಯವರು ಕೃಷಿಕ ಸಮುದಾಯದ ಬಗೆಗೆ ವಿಶೇಷ ಕಾಳಜಿ ಹೊಂದಿದ್ದರು. ತಮ್ಮ ಕೈಲಾದ ಮಟ್ಟಿಗೆ ರೈತರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸಿದ್ದರು. ಕನ್ನಡದ ಹಿರಿಯ ಸಾಹಿತಿ, ಕವಿ ಕಯ್ಯರ ಕಿಂಞಣ್ಣ ರೈಯವರು ತಮ್ಮ ಹೆಂಡತಿಯ ಹೆಸರಿನಲ್ಲಿದ್ದ ಜಾಗದ ವ್ಯಾಜ್ಯವನ್ನು ಪರಿಹರಿಸಿ ನ್ಯಾಯ ತಂದುಕೊಟ್ಟ ಕೆ.ಎಸ್. ಹೆಗ್ಡೆಯವರನ್ನು ಈಗಲೂ ನೆನೆಸಿಕೊಳ್ಳುತ್ತಿರುವುದು ಹೆಗ್ಡೆಯವರು ರೈತರ ಬಗೆಗೆ ಹೊಂದಿದ್ದ ಕಳಕಳಿಗೆ ಸ್ಪಷ್ಟ ನಿದರ್ಶನವಾಗಿದೆ.

‘ಸತ್ಯಕ್ಕೆ ಸಾವಿಲ್ಲ’ ಎನ್ನುವಂತೆ, ನ್ಯಾಯವಾದಿ ಕೆ. ಸದಾನಂದ ಹೆಗ್ಡೆಯವರ ಕಾರ್ಯವೈಖರಿ ಬಹುಬೇಗನೆ ಜನಮಾನ್ಯತೆ ಪಡೆಯಿತು. ಹೀಗಾಗಿಯೇ ಅವರು 1946ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಪಿರ್ಯಾದಿದಾರ (ಪಬ್ಲಿಕ್ ಪ್ರಾಸಿಕ್ಯೂಟರ್) ಹಾಗೂ ಸರಕಾರಿ ನ್ಯಾಯವಾದಿಯಾಗಿ ನೇಮಕಗೊಂಡರು. ಈ ಹಿಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಎಂ.ಕೆ. ನಂಬಿಯಾರ್ ಅವರ ಸ್ಥಾನವನ್ನು ತುಂಬಿದ್ದ ಕೆ.ಎಸ್. ಹೆಗ್ಡೆಯವರು ರಾಜ್ಯಸಭೆಯ ಸದಸ್ಯರಾಗುವವರೆಗೂ (1952ರ ವರೆಗೂ) ತಮ್ಮ ಹುದ್ದೆಯಲ್ಲಿ ಮುಂದುವರಿದರು.

ರಾಜಕೀಯ ಆಸಕ್ತಿ

ಕಾನೂನು ರಂಗದಲ್ಲಿ ಅಸಾಮಾನ್ಯ ದೂರದೃಷ್ಟಿ ಹೊಂದಿದ್ದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರಿಗೆ ರಾಜಕೀಯ ಕ್ಷೇತ್ರದಲ್ಲೂ ವಿಶೇಷ ಆಸಕ್ತಿಯಿತ್ತು. ಪ್ರಪ್ರಥಮ ರಾಜ್ಯಸಭೆಯ ಸದಸ್ಯರಾಗಿ ಚುನಾಯಿತರಾದ ಇವರು 1954ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾದಿವೇಶನದಲ್ಲಿ ಭಾರತದ ಪ್ರತಿನಿದಿಯಾಗಿ ಪಾಲ್ಗೊಳ್ಳುವ ಅವಕಾಶವೂ ದೊರಕಿತ್ತು. ಕಾರ್ಕಳದ ಹಳ್ಳಿಯೊಂದರಲ್ಲಿ ಹುಟ್ಟಿದ ಹುಡುಗನೋರ್ವ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು, ಅದೂ ಕೂಡ ತನ್ನ ರಾಷ್ಟ್ರದ ಪ್ರತಿನಿದಿಯಾಗಿ! ಕಾರ್ಕಳದ ಜನತೆಯಷ್ಟೇ ಅಲ್ಲ; ಭಾರತೀಯರೆಲ್ಲರೂ ಈ ಹೆಮ್ಮೆಯ ಪುತ್ರನ ಬಗೆಗೆ ಅಭಿಮಾನದಿಂದ ಬೀಗಿದ್ದರು.

ರಾಜ್ಯಸಭೆಯ ಸದಸ್ಯರಾಗಿದ್ದ ಕೆ.ಎಸ್. ಹೆಗ್ಡೆಯವರು ಆಗಿನ ಮದರಾಸು ಸರಕಾರದ ಸಚಿವರಾಗಿದ್ದ ಎ.ಬಿ. ಶೆಟ್ಟಿ ಹಾಗೂ ವಿಧಾನಸಭೆಯ ಸದಸ್ಯರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರ ನಿಕಟವರ್ತಿಗಳಾಗಿ ಕೆಲಸ ಮಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಹೆಗ್ಡೆಯವರು ರಾಜಕೀಯ ರಂಗದಲ್ಲಿ ಪರಿಣತಿ ಹೊಂದಿದ್ದರು. ಹೀಗಾಗಿಯೇ ಇವರು ನ್ಯಾಯಾಂಗ ಪಕ್ಷದ ದಿವಾನ್ ಮಹಾಬಲ ಹೆಗ್ಡೆಯವರ ಪ್ರತಿಸ್ಪರ್ದಿಯಾಗಿ ಜಿಲ್ಲಾ ಮಂಡಳಿಯ ಚುನಾವಣಾ ಕಣಕ್ಕಿಳಿದಿದ್ದ ಎ.ಬಿ. ಶೆಟ್ಟಿಯವರ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹೆಗ್ಡೆಯವರ ವಾಕ್ಚಾತುರ್ಯ ಎಂಥವರನ್ನೂ ಸೆಳೆಯುವಂಥದು! ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿ ದುಡಿದ ಹೆಗ್ಡೆಯವರು ಭಾರತೀಯ ರಾಷ್ಟ್ರೀಯ ಪಕ್ಷದ ನಾಯಕರಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

2008ರ ಜೂನ್ 16ರಂದು ಮಂಗಳೂರಿನಲ್ಲಿ ನಡೆದ ‘ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರ ಜನ್ಮಶತಾಬ್ದ ವರ್ಷಾಚರಣೆ’ಯ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಲ್.ಕೆ. ಅಡ್ವಾಣಿಯವರು ಮಾತನಾಡುತ್ತ, ‘‘1977ರಲ್ಲಿಯೇ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ಭಾರತದ ಪ್ರಧಾನಿಯಾಗಬೇಕಿತ್ತು’’ ಎಂದು ಹೇಳಿದ್ದರು. ನುಡಿದಂತೆ ನಡೆವ – ನಡೆದಂತೆ ನುಡಿವ ಕೆ.ಎಸ್. ಹೆಗ್ಡೆಯವರ ರಾಜಕೀಯ ಒಲವು – ಪರಿಣತಿ ಹಾಗೂ ಸಮರ್ಥ ನಾಯಕತ್ವಕ್ಕೆ ಅಡ್ವಾಣಿಯವರೆಂದ ಮಾತು ಕನ್ನಡಿ ಹಿಡಿದಂತಿದೆ.

ರಾಜ್ಯಸಭಾ ಸದಸ್ಯರಾಗಿದ್ದ ಕೆ.ಎಸ್. ಹೆಗ್ಡೆಯವರು ಶ್ರೀನಿವಾಸ ಮಲ್ಯರ ಜೊತೆ ಸೇರಿಕೊಂಡು ಸರಕಾರದ ಸಹಾಯಧನದೊಂದಿಗೆ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದರು. ಇದರ ಫಲವಾಗಿಯೇ ಜಿಲ್ಲೆಯಾದ್ಯಂತ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳು ನಿರ್ಮಾಣಗೊಂಡವು. ಈ ಕಾಲದಲ್ಲಿಯೇ ದಕ್ಷಿಣ ಕನ್ನಡದ ಆರ್ಥಿಕ ಪ್ರಗತಿಯ ಹೊಸ ಅಧ್ಯಾಯ ಆರಂಭಗೊಂಡಿತು.

ಸಚಿವ ಸ್ಥಾನಕ್ಕೆ ಆಹ್ವಾನ

1954ರಲ್ಲಿ ನ್ಯೂಯಾರ್ಕ್‌ನಿಂದ ಮರಳಿ ತಾಯ್ನಡಿಗೆ ಬಂದಿದ್ದ ಸದಾನಂದ ಹೆಗ್ಡೆಯವರಿಗೆ ಒಂದು ಅಚ್ಚರಿ ಕಾದಿತ್ತು. ಸಂಪುಟ ದರ್ಜೆಯ ರಾಜ್ಯ ಸಚಿವರಾಗುವುದಕ್ಕೆ ಅವರಿಗೆ ಆಹ್ವಾನವಿತ್ತು. ಯಾವತ್ತೂ ಅಧಿಕಾರಕ್ಕಾಗಿ ಹಾತೊರೆಯದೆ ‘ಜನರ ಸೇವೆ ಮಾಡಲು ಅಧಿಕಾರಿಯೇ ಆಗಬೇಕೆಂದೇನೂ ಇಲ್ಲ’ ಎಂಬುದನ್ನು ಬಲವಾಗಿ ನಂಬಿದ್ದ ಕೆ.ಎಸ್. ಹೆಗ್ಡೆಯವರು ನಯವಾಗಿಯೇ ಸಚಿವ ಸ್ಥಾನವನ್ನು ಒಲ್ಲೆನೆಂದಿದ್ದರು. ಮಂಗಳೂರು ಹಾಗೂ ಮದರಾಸಿನಲ್ಲಿದ್ದ ಎರಡು ಮನೆಗಳ ಜವಾಬ್ದಾರಿ ನಿರ್ವಹಣೆಯ ಜೊತೆಯಲ್ಲಿ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ವ್ಯಯಿಸಬೇಕು. ಆದ್ದರಿಂದ ಮಂತ್ರಿಯಾಗಿ ಹಣ ಖರ್ಚು ಮಾಡಲು ತನ್ನಿಂದ ಸಾಧ್ಯವಿಲ್ಲ ಎಂಬುದು ಹೆಗ್ಡೆಯವರಿಗೆ ಮನದಟ್ಟಾಗಿತ್ತು. ‘ಮಂತ್ರಿಯಾಗುವುದೇ ದುಡ್ಡು ಮಾಡುವುದಕ್ಕೆ’ ಎಂದು ತಿಳಿದಿರುವ ಇಂದಿನ ಮಂತ್ರಿಗಳ ಬದಲಾಗಿ, ಕೆ.ಎಸ್. ಹೆಗ್ಡೆಯವರಂತಹ ನಿಸ್ವಾರ್ಥ ಮನೋಭಾವದ ನಾಯಕರು ನಮಗಿಂದು ಬೇಕಾಗಿದ್ದಾರೆ ಎಂದು ನನಗನ್ನಿಸುತ್ತದೆ.

ರಾಜಕೀಯವಾಗಿ ಬಹಳಷ್ಟು ಆಸಕ್ತರಾಗಿದ್ದರೂ ಕೆಲಕಾಲದ ಬಳಿಕ ಕೆ.ಎಸ್. ಹೆಗ್ಡೆಯವರು ಮತ್ತೆ ಕಾನೂನು ರಂಗದಲ್ಲಿಯೇ ತಮ್ಮ ವೃತ್ತಿಯನ್ನು ಮುಂದುವರಿಸಲು ಬಯಸಿದರು. ಅವರ ಈ ನಿರ್ಧಾರ ಅವರ ನಿಕಟವರ್ತಿಯಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರಿಗೆ ಸಮಾಧಾನವಾಗಲಿಲ್ಲ. ಆದರೂ ಕೆ.ಎಸ್. ಹೆಗ್ಡೆಯವರು 1957ರಲ್ಲಿ ಮೈಸೂರು ಹೈಕೋರ್ಟ್‌ನ (ಈಗಿನ ಕರ್ನಾಟಕ ಸರಕಾರ) ನ್ಯಾಯವಾದಿಯಾಗಿ ನೇಮಕಗೊಂಡಾಗ ರಾಜ್ಯಸಭಾ ಸದಸ್ಯನ ಸ್ಥಾನಕ್ಕೆ ರಾಜೀನಾಮೆಯಿತ್ತರು.

1977ರಲ್ಲಿ ಲೋಕಸಭೆಯ ಸ್ಪೀಕರ್ ಆಗಿ ಚುನಾಯಿತರಾಗಿ 1980ರ ವರೆಗೆ ರಾಜಕೀಯ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಲೋಕನಾಯಕ ಜಯಪ್ರಕಾಶ ನಾರಾಯಣ್‌ರ ನೇತೃತ್ವದ ಲೋಕಸಂಘರ್ಷ ಸಮಿತಿಯಲ್ಲಿದ್ದುಕೊಂಡು ತುರ್ತು ಪರಿಸ್ಥಿತಿಯ ವಿರುದ್ಧ ಸಕ್ರಿಯ ಹೋರಾಟ ನಡೆಸಿದ್ದರು.

ಕಾಸರಗೋಡು – ಕರ್ನಾಟಕಕ್ಕೆ ಹೋರಾಟ

ನವೆಂಬರ್ 1, 1956ರಿಂದ ಅನ್ವಯವಾಗುವಂತೆ ಕಾಸರಗೋಡನ್ನು ಕರ್ನಾಟಕದ ಒಂದು ಜಿಲ್ಲೆಯಾಗಿ ಉಳಿಸಿಕೊಳ್ಳಬೇಕೆಂದು ಹೋರಾಟ ಮಾಡಿದ ಪ್ರಮುಖ ಕನ್ನಡಿಗರಲ್ಲಿ ಕೆ.ಎಸ್. ಹೆಗ್ಡೆಯವರೂ ಒಬ್ಬರು ಎಂಬುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಕೆ.ಆರ್. ಕಾರಂತ, ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ. ಕುಣಿಕುಳ್ಳಾಯ, ಎಂ. ಉಮೇಶ ರಾವ್, ಬಿ.ಎಸ್. ಕಕ್ಕಿಲ್ಲಾಯ, ಕಯ್ಯರ ಕಿಂಞಣ್ಣ ರೈ ಮೊದಲಾದವರ ಹೋರಾಟವನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಕುರಿತಾಗಿ ಕಾಸರಗೋಡು ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆದ ಅನೇಕ ಪ್ರತಿಭಟನಾ ಮೇಳಗಳಲ್ಲಿ, ಸಭೆಗಳಲ್ಲಿ ಕೆ.ಎಸ್. ಹೆಗ್ಡೆಯವರು ಸಕ್ರಿಯವಾಗಿ ಭಾಗವಹಿಸಿದ್ದರು. ಅಪ್ಪಟ ದೇಶಪ್ರೇಮಿಯಾಗಿದ್ದ ಈ ಕನ್ನಡಿಗನ ಕನ್ನಡ ಭಾಷಾಬಿಮಾನ ಆಗಲೇ ತಲೆಯೆತ್ತಿ ನಿಂತಿತ್ತು.

ಹೊಸತಾಗಿ ರಚಿಸಲ್ಪಟ್ಟ ರಾಜ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾರ್ವಜನಿಕವಾಗಿ ಗುರುತಿಸಲ್ಪಟ್ಟಿದ್ದ ವ್ಯಕ್ತಿಯೋರ್ವರನ್ನು ನಿಯೋಜಿಸಬೇಕಾಗಿತ್ತು. ಕರ್ನಾಟಕದ ಆಗಿನ ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪನವರು, ಸ್ವಾತಂತ್ರ್ಯ ಹೋರಾಟಗಾರರಾದ ನಾರಾಯಣ ಎಸ್. ಕಿಲ್ಲೆಯವರ ಹೆಸರನ್ನು ನಿಯೋಜಿಸಿದರು. ಆಗ ಸ್ವತಃ ಕಿಲ್ಲೆಯವರೇ ಮುಖ್ಯಮಂತ್ರಿಯವರೊಂದಿಗೆ, ಸದಾನಂದ ಹೆಗ್ಡೆಯವರ ಹೆಸರನ್ನು ನಿಯೋಜಿಸುವಂತೆ ಸಾಕಷ್ಟು ಒತ್ತಾಯಿಸಿದ್ದರು. ಏಕೆಂದರೆ, ಕಾನೂನು ಹಾಗೂ ಸಂವಿಧಾನಿಕ ವಿಚಾರವಾಗಿ ಕೆ.ಎಸ್. ಹೆಗ್ಡೆಯವರು ತನಗಿಂತ ಸಮರ್ಥರಾಗಿದ್ದರು ಎಂಬುದಾಗಿ ಕಿಲ್ಲೆಯವರು ಪ್ರತಿಪಾದಿಸಿದರು. ಕಿಲ್ಲೆಯವರಂದಂತೆಯೇ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಎಸ್. ಹೆಗ್ಡೆಯವರು ರಾಷ್ಟ್ರ ರಾಜಕಾರಣದಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ವೈಯಕ್ತಿಕವಾಗಿ ಅವರು ಬಹು ಎತ್ತರದ ಮಟ್ಟವನ್ನೇರಿದರು. ನಿಸ್ವಾರ್ಥಿ ಕಿಲ್ಲೆಯವರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕವಿ ಕಯ್ಯರರು ‘‘ಕಿಲ್ಲೆಯವರ ನಿಸ್ವಾರ್ಥ ಮನೋಭಾವದಿಂದಾಗಿ ಈ ದೇಶ ಓರ್ವ ಪ್ರತಿಭಾವಂತ, ಸಮರ್ಥ ರಾಜಕೀಯ ಮುತ್ಸದ್ಧಿಯನ್ನು ಪಡೆಯುವಂತಾಯಿತು. ಇದಕ್ಕಾಗಿ ಕಿಲ್ಲೆಯವರಿಗೆ ತುಂಬು ಹೃದಯದ ಕೃತಜ್ಞತೆಗಳು’’ ಎಂಬುದಾಗಿ ಹೇಳಿದ್ದಾರೆ.

ಕೆ.ಎಸ್. ಹೆಗ್ಡೆಯವರು ತಮ್ಮ ಅಸಾಧಾರಣವಾದ ಬುದ್ಧಿಮತ್ತೆ ಹಾಗೂ ಯೋಗ್ಯತೆಯಿಂದಾಗಿ 1957ರವರೆಗೂ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಲೋಕಸಭೆಯ ಅಧ್ಯಕ್ಷೀಯ ಮಂಡಳಿಯ ಸದಸ್ಯರಾಗಿದ್ದುಕೊಂಡು, ಅನಂತರ ಸಾರ್ವಜನಿಕ ಲೆಕ್ಕಶಾಸ್ತ್ರ ಸಮಿತಿ ಹಾಗೂ ನಿಯಮ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಈ ಅವದಿಯಲ್ಲಿ ಕೆ.ಎಸ್. ಹೆಗ್ಡೆಯವರು ಸಂಯುಕ್ತ ರಾಷ್ಟ್ರಗಳ 9ನೇ ಜಂಟಿ ಅಧಿವೇಶನದಲ್ಲಿ ಭಾಗವಹಿಸಿದ್ದರು. ರೈಲ್ವೆ ಮಂಡಳಿಯಲ್ಲಿನ ಭ್ರಷ್ಟಾಚಾರ ವಿಚಾರಣಾ ಸಮಿತಿಯ ಸದಸ್ಯರೂ ಆಗಿದ್ದ ಅವರು ಆ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಬೆಳಕಿಗೆ ತಂದರು. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಆಡಳಿತ ವಿಭಾಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು.

ನ್ಯಾಯಾಧೀಶರಾಗಿ

ರಾಜ್ಯಸಭಾ ಸದಸ್ಯತ್ವವನ್ನು ತೊರೆದ ಬಳಿಕ 1957ರಲ್ಲಿ ಕೆ.ಎಸ್. ಹೆಗ್ಡೆಯವರು ಮೈಸೂರು ಹೈಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡರು. ತಮ್ಮ ಅಸಾಧಾರಣವಾದ ಮತ್ತು ನಿಷ್ಪಕ್ಷಪಾತವಾದ ನ್ಯಾಯತೀರ್ಮಾನ ವೈಖರಿಯಿಂದಾಗಿ ಹೆಗ್ಡೆಯವರು ಬಹು ಅಲ್ಪಕಾಲದಲ್ಲಿಯೇ ಜನಮನ್ನಣೆ ಪಡೆದರು.

1966ರವರೆಗೆ ಮೈಸೂರು ಹೈಕೋರ್ಟ್‌ನ ನ್ಯಾಯಾಧೀಶರಾಗಿ ದುಡಿದ ಹೆಗ್ಡೆಯವರು ಹೊಸದಿಲ್ಲಿ ಹಾಗೂ ಹಿಮಾಚಲ ಪ್ರದೇಶಗಳ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಸಮ್ಮತವಾದ ತೀರ್ಮಾನ ನೀಡುವ ಮೂಲಕ ಕೆ.ಎಸ್. ಹೆಗ್ಡೆಯವರು ಎಲ್ಲರ ಮನೆಮಾತಾಗಿದ್ದರು. ಸದಾ ನ್ಯಾಯಕ್ಕಾಗಿಯೇ ಹೋರಾಟ ನಡೆಸಿ, ಅದರಲ್ಲಿಯೇ ಆನಂದವನ್ನು ಕಾಣುತ್ತಿದ್ದ ಸದಾನಂದ ಹೆಗ್ಡೆಯವರು ತಮ್ಮ ಪ್ರಾಮಾಣಿಕತೆಯನ್ನು ಹಾಗೂ ವೃತ್ತಿಘನತೆಯನ್ನು ಎತ್ತಿಹಿಡಿದಿದ್ದರು. ಯಾವತ್ತೂ ಜನರಿಗಾದ ಅನ್ಯಾಯವನ್ನು ತೀವ್ರವಾಗಿ ಪ್ರತಿಭಟಿಸುತ್ತಿದ್ದರು. ನ್ಯಾಯಾಂಗದ ದೃಷ್ಟಿಯಲ್ಲಿ ಸತ್ಯಸಂಧತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರಿಗೆ ಸರಿಸಾಟಿಯಾದ ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಈ ಕಾರಣದಿಂದಲೇ ‘ಒಂದು ಭ್ರಷ್ಟ ಸಮಾಜವು ಯಾವತ್ತೂ ಒಂದು ಸಾಮಾಜಿಕ ಬದ್ಧತೆಯನ್ನು ಬೆಳೆಸಲಾರದು’ ಎಂಬುದಾಗಿ ಹೆಗ್ಡೆಯವರು ಅಭಿಪ್ರಾಯಪಟ್ಟಿದ್ದರು.

1967ರಲ್ಲಿ ಹೆಗ್ಡೆಯವರು ನ್ಯಾಯಾಂಗದ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ಸುಪ್ರೀಂಕೋರ್ಟಿನ ನ್ಯಾಯಾಧೀಶರಾದ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆಗೆ ಭಾಜನರಾದರು. ತಮ್ಮ ವೃತ್ತಿಯ ಕ್ಷೇತ್ರದಲ್ಲೇ ಸತತ ಪರಿಶ್ರಮ ಮತ್ತು ಸಾಧನೆಗಳಿಂದ ಎತ್ತರದ ಪೀಠಗಳನ್ನು ಅಲಂಕರಿಸಿದ ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆಯವರು ದೇಶದ ಹಿತ ಹಾಗೂ ಜನಹಿತವನ್ನು ತಮ್ಮ ಸಾಮಾಜಿಕ ಬದುಕಿನ ಕೇಂದ್ರಬಿಂದುವಾಗಿಸಿಕೊಂಡರು.

‘ಅಭಿಪ್ರಾಯ ವ್ಯತ್ಯಾಸ’ವೆನ್ನುವುದು ಪ್ರತಿಯೊಬ್ಬರಲ್ಲೂ, ಪ್ರತಿಯೊಂದು ವಿಷಯಕ್ಕೂ ಇದ್ದೇ ಇರುತ್ತದೆ. ಆದರೆ ಇದು ವ್ಯಕ್ತಿಯ ಘನತೆ, ಗೌರವಗಳನ್ನು ಕಡೆಗಣಿಸುವ ಮಟ್ಟಕ್ಕೆ ಹೋಗಬಾರದು. ಹಾಗೊಮ್ಮೆ ಆದಲ್ಲಿ ದಕ್ಷರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದು ಅಸಾಧ್ಯವಾಗುತ್ತದೆ. ಪ್ರಾಯಃ ಕೆ.ಎಸ್. ಹೆಗ್ಡೆಯವರಿಗೂ ಇದೇ ಅನುಭವವಾಗಿರಬೇಕು.

ಸ್ಪಷ್ಟವಾದಿ – ಲೋಕವಿರೋದಿ ಎಂಬ ಮಾತೊಂದಿದೆ. ಆದರೆ ಹೆಗ್ಡೆಯವರು ತನ್ನ ಸ್ಪಷ್ಟವಾದ ನಿಲುವಿನಿಂದ ಲೋಕ ವಿರೋದಿಗಳಾಗಲಿಲ್ಲ; ಲೋಕ ಪ್ರಿಯರಾದರು. ಸರಕಾರವೂ ಇದರಿಂದ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಸರಕಾರಕ್ಕೆ ಬೇಕಾದುದು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಜನ ಮಾತ್ರ. 1973ರಲ್ಲಿ ಕೆ.ಎಸ್. ಹೆಗ್ಡೆಯವರು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಿದ, ಅಂದಿನ ಸರಕಾರದ ಅಸಮರ್ಪಕ ನಿರ್ಧಾರವನ್ನು ಪ್ರತಿಭಟಿಸಿ, 1973 ಎಪ್ರಿಲ್ 25ರಂದು ತಮ್ಮ ನ್ಯಾಯಾಧೀಶ ಹುದ್ದೆಗೆ ರಾಜಿನಾಮೆಯಿತ್ತರು.

ಸಂಯತಂ ಕೋಮಲಂ ಚಿತ್ತಂ
ಸಾಧೋರಾಪದಿ ಕರ್ಕಶಮ್
ಸುಕುಮಾರಂ ಮಧೌಪತ್ರಂ ತರೋಃ ಸ್ಯಾತ್
ಕಠಿನಂ ಶುಚೌ

ಸತ್ಪುರುಷರ ಮನಸ್ಸು ಸಹಜ ಕೋಮಲವಾಗಿರುತ್ತದೆ. ಆದರೆ, ಆಪತ್ಕಾಲದಲ್ಲಿ ಕಠಿಣವಾಗುತ್ತದೆ. ವಸಂತ ಕಾಲದಲ್ಲಿ ಸುಂದರವಾದ ಮರದ ಚಿಗುರೆಲೆಗಳು ಬೇಸಗೆಯಲ್ಲಿ ಒರಟಾಗುವಂತೆ ಸರಕಾರದ ನಿಲುವು ಕೆ.ಎಸ್. ಹೆಗ್ಡೆಯವರನ್ನು ಕಠೋರವಾಗುವಂತೆ ಮಾಡಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳೆಂಬ ಮೂರು ಅಂಗಗಳಿವೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ದಾರಿ ತಪ್ಪಿದಾಗ (ಮಾಡಬಾರದ್ದನ್ನು ಮಾಡಿದಾಗ) ಮಾರ್ಗದರ್ಶನ ನೀಡಿ ಸರಿಪಡಿಸಬೇಕಾದುದು ನ್ಯಾಯಾಂಗದ ಹೊಣೆಗಾರಿಕೆ. ನ್ಯಾಯಾಂಗ ಸಶಕ್ತವಾಗಿರದ ರಾಷ್ಟ್ರದಲ್ಲಿನ ಆಡಳಿತ ವ್ಯವಸ್ಥೆ ಕುಸಿಯುತ್ತದೆ; ಅಸ್ತವ್ಯಸ್ತವಾಗುತ್ತದೆ. ಹೆಗ್ಡೆಯವರಿಗೆ ಈ ಎಚ್ಚರದ ಅರಿವು ಇತ್ತು. ಹೀಗಾಗಿಯೇ ಸರಕಾರದ ಧೋರಣೆಯನ್ನವರು ಪ್ರತಿಭಟಿಸಿದರು. ಮಾತ್ರವಲ್ಲ ಈ ದೇಶದ ಧರ್ಮಶಾಸ್ತ್ರದಲ್ಲೂ ಒಂದು ಮಾತಿದೆ. ಎಲ್ಲೇ ಅನ್ಯಾಯ ನಡೆಯಲಿ, ಆ ಸಭೆಯಲ್ಲಿ ತಿಳಿದವರಿದ್ದರೆ ಸುಮ್ಮನೆ ಕುಳಿತುಕೊಳ್ಳಬಾರದು, ತಿಳಿಯ ಹೇಳಬೇಕು. ಹೀಗೆ ಹೇಳಿಯೂ ಸಫಲರಾಗದಿದ್ದರೆ ಪ್ರತಿಭಟಿಸಬೇಕು. ಪ್ರತಿಭಟನೆಯೂ ವಿಫಲವಾದಾಗ ಆ ಜಾಗವನ್ನು ಬಿಟ್ಟು ದೂರ ಸರಿಯಬೇಕು. ನ್ಯಾಯಮೂರ್ತಿ ಹೆಗ್ಡೆಯವರು ಮಾಡಿದ್ದೂ ಇದನ್ನೇ. ಅನ್ಯಾಯದ ಕುರಿತು ಹೇಳಿ ನೋಡಿದರು. ಪ್ರತಿಭಟಿಸಿದರು. ಅನಂತರ ರಾಜೀನಾಮೆ ಕೊಟ್ಟು ಹೊರಟುಹೋದರು. ಇಡೀ ದೇಶದ ಬುದ್ಧಿಜೀವಿಗಳು ಹೆಗ್ಡೆಯವರ ಈ ವರ್ತನೆಯನ್ನು ಮೆಚ್ಚಿ ಕೊಂಡಾಡಿದರು. ಭಾರತವೇ ಏಕೆ? ವಿದೇಶಗಳಲ್ಲಿಯೂ ಹೆಗ್ಡೆಯವರ ದಿಟ್ಟ ನಿಲುವನ್ನು ಜನ ಮೆಚ್ಚಿ ನುಡಿದರು.

ನ್ಯಾಯಮೂರ್ತಿ ಸದಾನಂದ ಹೆಗ್ಡೆಯವರ ಜೊತೆಯಲ್ಲೇ ನ್ಯಾಯಮೂರ್ತಿ ಜೆ.ಎಂ. ಶೇಲಟ್ ಹಾಗೂ ಎ.ಎನ್. ಗ್ರೋವರ್ ಕೂಡ ರಾಜೀನಾಮೆ ನೀಡಿ ತಮ್ಮ ವೃತ್ತಿ ಘನತೆ ಹಾಗೂ ಸ್ವಾಭಿಮಾನವನ್ನು ಎತ್ತಿ ತೋರಿದರು; ಕಾನೂನು ರಂಗದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಿದರು. ಏಕಕಾಲಕ್ಕೆ ಮೂವರು ಹಿರಿಯ ನ್ಯಾಯಮೂರ್ತಿಗಳ ರಾಜಿನಾಮೆಯು ಸಾಂವಿಧಾನಿಕ ಚರಿತ್ರೆಯಲ್ಲಿಯೇ ಒಂದು ಮಹತ್ತರವಾದ ಬದಲಾವಣೆಯ ಕೇಂದ್ರ ವಾಯಿತು. ನ್ಯಾಯಾಂಗದ ದೃಷ್ಟಿಯಲ್ಲಿ ಸಂವಿಧಾನದ ಬಗೆಗಿನ ಸಾಮಾನ್ಯ ವ್ಯಕ್ತಿಯೊಬ್ಬನ ನಂಬಿಕೆ ಭದ್ರವಾಯಿತು. ಹೀಗಾಗಿಯೇ ಆರೋಗ್ಯವಂತ ಪ್ರಜಾಪ್ರಭುತ್ವದ ಹಾಗೂ ಆರೋಗ್ಯದಾಯಕ ನ್ಯಾಯಾಂಗದ ಬಗೆಗೆ ಕಾಳಜಿಯಿರುವ ದೇಶದ ಎಲ್ಲ ರಾಜಕೀಯ ಪಕ್ಷಗಳೂ, ಎಲ್ಲ ರಾಜಕಾರಣಿಗಳೂ ಈ ಐತಿಹಾಸಿಕ ಘಟನೆಯನ್ನು ನೆನಪಿನಲ್ಲಿಟ್ಟು ಕೊಳ್ಳುವಂತಾಯಿತು.

ಮನುಷ್ಯನಾದವನು ಕೇವಲ ಉಂಡುಟ್ಟು ಬೆಳೆದರೆ ಸಾಲದು. ಉಚ್ಚ ಆದರ್ಶ, ಉನ್ನತ ದೃಷ್ಟಿ ಹಾಗೂ ಉಜ್ವಲ ಆಚರಣೆಗಳನ್ನಿರಿಸಿಕೊಂಡು ಬದುಕಿದರೆ ಮಾತ್ರ ಆತನ ಬದುಕು ಚೈತನ್ಯದಿಂದ ಕೂಡಿರುತ್ತದೆ ಎಂದು ನಂಬಿ ಬಾಳಿದ್ದವರು ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು.

ಸಹೃದಯ ಓದುಗ

ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ಒಬ್ಬ ಸಹೃದಯಿ ಓದುಗನಾಗಿದ್ದರು. ತನ್ನ ವೃತ್ತಿಜೀವನಕ್ಕೆ ಸಂಬಂಧಪಟ್ಟ ಹಾಗೂ ಜ್ಞಾನ ಬುತ್ತಿ ತುಂಬಬಲ್ಲ ಅನೇಕ ಪುಸ್ತಕಗಳನ್ನು ಓದುತ್ತಿದ್ದರು. ಲೋಕಸಭೆಯ ಸದಸ್ಯರಾಗಿದ್ದ ಅವದಿಯಲ್ಲಿ ಅವರು ಓದಿದ್ದ ‘ನ್ಯಾಯಾಂಗ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ಮಾರ್ಗದರ್ಶಿ ನಡವಳಿಕೆಗಳು’ – ಕೆ.ಎಸ್. ಹೆಗ್ಡೆಯವರ ಅಚ್ಚುಮೆಚ್ಚಿನ ಪುಸ್ತಕಗಳಾಗಿದ್ದವು. ಬಿಡುವಿಲ್ಲದ ಕೆಲಸದ ನಡುವೆಯೂ ರಾಮಾಯಣ, ಮಹಾಭಾರತ – ಭಗವದ್ಗೀತೆ ಮೊದಲಾದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು. ಪುಸ್ತಕಗಳನ್ನು ಕೊಂಡಾಡುವುದರ ಜೊತೆಯಲ್ಲಿ ಕೊಂಡು ಓದುತ್ತಿದ್ದ ಕೆ.ಎಸ್. ಹೆಗ್ಡೆಯವರು ಉತ್ತಮ ಬರೆಹಗಾರರನ್ನು ಸದಾ ಪ್ರೋತ್ಸಾಹಿಸುತ್ತಿದ್ದರು.

ಸದಾ ಓದುವ ಹಸಿವಿನಿಂದ ಕೂಡಿದ್ದ ಕೆ.ಎಸ್. ಹೆಗ್ಡೆಯವರು ಪ್ರಜಾಸತ್ತೆಯ ಧ್ಯೇಯ – ಉದ್ದೇಶಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಪ್ರಜಾಸತ್ತಾತ್ಮಕವಾದ ಸಾಮಾಜಿಕ ವ್ಯವಸ್ಥೆಯ ನಾಗರಿಕರಾಗುವಂತೆ ನಾವು ನಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿದ್ದು, ನಮ್ಮ ಮಕ್ಕಳು ಸ್ವತಂತ್ರ ಸಮಾಜವಾದಿ ಸಮಾಜದಲ್ಲಿ ಸ್ವತಂತ್ರ – ಸಮಾನ ಸ್ತ್ರೀ – ಪುರುಷರಂತೆ ಬದುಕಿ – ಬಾಳಲು ಕಲಿಯಲು ಅವಕಾಶ ಕಲ್ಪಿಸಲಾಗಿದೆ ಎಂಬ ಕಾಳಜಿ ಹೆಗ್ಡೆಯವರಲ್ಲಿತ್ತು. ನಮ್ಮಲ್ಲಿ ಸುಶಿಕ್ಷಿತರೆಂದು ಕರೆಸಿಕೊಳ್ಳುವವರಲ್ಲಿ ಕೂಡ ಅನೇಕರು ತಮ್ಮ ಸಹವರ್ತಿಗಳೊಂದಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಬಂಧ ಬೆಳೆಸಿಕೊಳ್ಳುವ ಮನೋವೃತ್ತಿಯನ್ನು ಅರಿತಿಲ್ಲ. ಹೀಗಾಗಿ ನಮ್ಮ ದೇಶದ, ಎಲ್ಲಾ ವರ್ಗದ ಜನರಿಗೂ ಪ್ರಜಾಸತ್ತಾತ್ಮಕವಾದ ಪ್ರವೃತ್ತಿಯನ್ನು ಕಲಿಸುವ ಅನಿವಾರ್ಯತೆ ಇದೆ ಎಂಬ ಕಾಳಜಿಯನ್ನು ಕೆ.ಎಸ್. ಹೆಗ್ಡೆಯವರು ಹೊಂದಿದ್ದರು.

ಜ್ಞಾನಸಂಪಾದನೆ ಒಂದು ನಿರಂತರವಾದ ಕ್ರಿಯೆಯಾಗಿದ್ದು ಅದನ್ನು ಮನಸ್ಸಿನ ಉಗ್ರಾಣದಲ್ಲಿ ಶೇಖರಿಸಿಡಬೇಕು. ಅವಶ್ಯವಾದಾಗ ಉಪಯೋಗಿಸಿಕೊಳ್ಳಬೇಕೆಂಬುದನ್ನು ಕೆ.ಎಸ್. ಹೆಗ್ಡೆಯವರು ಚೆನ್ನಾಗಿ ತಿಳಿದವರಾಗಿದ್ದರು. ಒಂದು ಒಳ್ಳೆಯ ಪುಸ್ತಕವು ಕಷ್ಟ ಕಾಲದಲ್ಲಿ ಸ್ನೇಹಿತನಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಏಕಾಕಿತನದ ಭಾರವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಎಂತಹ ಆಳವಾದ ದುಃಖವನ್ನೂ ಮರೆಯಲು ಸಹಾಯ ಮಾಡುತ್ತದೆ ಎಂಬುದನ್ನು ಸಹೃದಯ ಓದುಗರಾಗಿದ್ದ ಸದಾನಂದ ಹೆಗ್ಡೆಯವರು ಅದಾಗಲೇ ಮನವರಿಕೆ ಮಾಡಿಕೊಂಡಿದ್ದರು.

ದಿನದಿಂದ ದಿನಕ್ಕೆ ಭ್ರಷ್ಟವಾಗುತ್ತಿರುವ ಸಮಾಜದಲ್ಲಿ ಯಾವುದೇ ರಾಜಕೀಯ ಪೋಷಣೆಗಳಿಗೆ ಬಗ್ಗದೆ, ಯಾವುದೇ ಸಾಮಾಜಿಕ ಯೋಜನೆಗಳಿಗೆ, ಯಾವುದೇ ಧಾರ್ಮಿಕ ಉಪದೇಶಗಳಿಗೆ ಸಾಧ್ಯವಾಗದೇ ಇರುವಂತಹ ಮನುಷ್ಯರ ಮನಸ್ಸುಗಳ ಪರಿವರ್ತನೆಯು ಕೇವಲ ಒಳ್ಳೆಯ ಪುಸ್ತಕಗಳಿಂದ ಮಾತ್ರ ಸಾಧ್ಯ ಎಂದು ಬಲವಾಗಿ ನಂಬಿದ್ದರಿಂದಲೇ ಕೆ.ಎಸ್. ಹೆಗ್ಡೆಯವರು ಪುಸ್ತಕಗಳನ್ನು ನೆಚ್ಚಿಕೊಂಡಿದ್ದರು; ಮೆಚ್ಚಿಕೊಂಡಿದ್ದರು. ಹೀಗಾಗಿಯೇ ಕೆಲಸದ ಒತ್ತಡದ ನಡುವೆಯೂ ತಮ್ಮ ಮನಸ್ಸನ್ನು ಓದಿನ ಮೂಲಕ ಪ್ರಶಾಂತವಾಗಿರಿಸಿಕೊಳ್ಳುತ್ತಿದ್ದರು. ಕೆಲಸ ಮಾಡಲು ಬಿಡುವಿಲ್ಲದ ಇಂದಿನ ದಿನಗಳಲ್ಲಿ ಪುಸ್ತಕ ಓದುವುದಾದರೂ ಹೇಗೆ ಎಂದುಕೊಂಡು ಮುಖ ಸಿಂಡರಿಸುವ ಮಂದಿಗೆಲ್ಲ ಪ್ರಾಯಶಃ ಸಹೃದಯ ಓದುಗರಾದ ಹೆಗ್ಡೆಯವರು ಖಂಡಿತವಾಗಿ ಆದರ್ಶಪ್ರಾಯರಾಗಿದ್ದಾರೆ.

ಯಥಾಚಿತ್ತಂ ತಥಾ ವಾಚೋ ಯಥಾ ವಾಚಸ್ತಥಾ ಕ್ರಿಯಾಂ
ಚಿತ್ತೇ ವಾಚಿ ಕ್ರಿಯಾಯಾಂ ಚ ಮಹತಾಮೇಕರೂಪತಾ

ಮನಸ್ಸಿನಂತೆ ಮಾತು, ಮಾತಿನಂತೆ ನಡೆ, ಸಜ್ಜನರಲ್ಲಿ ಮನಸ್ಸು, ಮಾತು ಮತ್ತು ನಡವಳಿಕೆಗಳು ಒಂದೇ ರೀತಿಯಾಗಿರುತ್ತವೆ. ‘ಪುಸ್ತಕಪ್ರೇಮಿ’ಯಾಗಿದ್ದ ಕೆ.ಎಸ್. ಹೆಗ್ಡೆಯವರು ಉತ್ತಮ ಪುಸ್ತಕಗಳ ಸಂಸರ್ಗದಿಂದಾಗಿ ನುಡಿದಂತೆ ನಡೆವ – ನಡೆದಂತೆ ನುಡಿವ ವ್ಯಕ್ತಿಯಾಗಿದ್ದರು.

ಪುಸ್ತಕವೋ ಪತ್ರಿಕೆಯೋ ಕೊಳ್ಳುವುದಕೆಂದು
ಮೀಸಲಿಡು ರೂಪಾಯಿಯಲಿ ಪೈಸೆಯೊಂದು
ಪುಕ್ಕಟೆಯೆ ನೀನೋದಿ ಹೊಡೆಯುತಿರೆ ಲೊಟ್ಟೆ
ಹೇಗೆ ತಂಪಾದೀತು ಬರೆದವನ ಹೊಟ್ಟೆ?

ಎಂಬ ದಿನಕರ ದೇಸಾಯಿಯವರ ಚುಟುಕವನ್ನು ಚೆನ್ನಾಗಿ ಅರಿತಿದ್ದ ಹೆಗ್ಡೆಯವರು ಸ್ವತಃ ತಾವೇ ಪುಸ್ತಕಗಳನ್ನು ಖರೀದಿಸಿ, ಬರೆಹಗಾರರ ಹೊಟ್ಟೆ ತಂಪಾಗಿಸುತ್ತಿದ್ದರು. ಬೌದ್ಧಿಕವಾಗಿ ಬಹಳಷ್ಟು ಬೆಳೆದರು.

ರಾಜಕೀಯ ಮುತ್ಸದ್ದಿ

ರಾಜಕೀಯ ವ್ಯವಸ್ಥೆಯಲ್ಲಿಯೇ ಪ್ರಜಾಪ್ರಭುತ್ವ ಸರ್ವೋತ್ಕೃಷ್ಟವಾದುದು ಎಂಬುದು ಬಹುಜನ ಒಪ್ಪಿಕೊಂಡ, ಸ್ವೀಕರಿಸಿಕೊಂಡ ಒಂದು ವ್ಯವಸ್ಥೆ. ಇದು ಸರಿಯೇ. ಆದರೂ ಕೆಲವೊಮ್ಮೆ ಈ ವ್ಯವಸ್ಥೆ ಬುದ್ಧಿಜೀವಿಗಳ ತಲೆ ತಿನ್ನುವುದೂ ಇದೆ. ಹೀಗಾಗಿಯೇ ‘ಪ್ರಜಾಪ್ರಭುತ್ವವು ಕ್ರಮೇಣ ಅನಾಯಕತ್ವವಾಗುತ್ತದೆ’ ಎಂಬ ಮಾತೂ ಇದೆ. ಹೀಗೆ ಅನಾಯಕತ್ವವಾಗುವುದಕ್ಕೆ, ಅವಿದ್ಯಾವಂತ – ಸ್ವಾರ್ಥಪರ ರಾಜಕಾರಣಿಗಳೇ ಕಾರಣ.

ರಾಜಕಾರಣಕ್ಕೆ ಬೇಕಾದುದು ತೀವ್ರ ಸೇವಾಸಕ್ತಿ, ದೇಶ – ವಿದೇಶಗಳ ರಾಜಕೀಯದ ಸ್ಥಿತ್ಯಂತರಗಳ ಸರಿಯಾದ ಮಾಹಿತಿ, ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಬಲವಾದ ಇಚ್ಛಾಶಕ್ತಿ, ಸಂವಿಧಾನದ ಮೂಲಭೂತ ತತ್ವಗಳ ಹಿತಾಸಕ್ತಿ. ಈ ಎಲ್ಲ ಗುಣಗಳು ಕೂಡಿದ್ದರೇನೇ ವ್ಯಕ್ತಿಯೊಬ್ಬ ರಾಜಕೀಯ ರಂಗದಲ್ಲಿ ಯಶಸ್ವಿಯಾಗಬಲ್ಲ. ರಾಜನೈತಿಕ ಶಿಕ್ಷಣವಿಲ್ಲದೆ ಕೇವಲ ಮತದಾನದಿಂದ ಮೇಲೆದ್ದು ಬಂದವನು ಪ್ರಜಾಪ್ರಭುತ್ವವನ್ನು ಕಟ್ಟಲಾರ ಎಂಬ ಅರಿವು ಕೆ.ಎಸ್. ಹೆಗ್ಡೆಯವರಲ್ಲಿ ಸ್ಪಷ್ಟವಾಗಿತ್ತು. ಆದುದರಿಂದಲೇ ಅವರೋರ್ವ ಸ್ವಯಂ ಅರ್ಹತೆಯಿಂದ ಬೆಳೆದುನಿಂತ ರಾಜಕೀಯ ಮುತ್ಸದ್ಧಿ!

ಅಧಿಕಾರದಾಹ ನಮ್ಮ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳಬೇಕೆಂಬ ಎಚ್ಚರ ಕೆ.ಎಸ್. ಹೆಗ್ಡೆಯವರಿಗಿತ್ತು. ಮಾನವತೆಯ ಸೇವೆಯ ದಾಹ, ಪ್ರತಿಯೊಬ್ಬ ಮನುಷ್ಯನೂ ತಾನು ಸರ್ವೋನ್ನತ ಮಟ್ಟಕ್ಕೆ ಏರಬಲ್ಲ ಶಕ್ತಿಯುಳ್ಳ ವ್ಯಕ್ತಿ ಎಂದು ಭಾವಿಸುವಂತೆ ಮಾಡಬಲ್ಲ ಸೇವೆಯ ದಾಹ ನಮ್ಮಲ್ಲಿ ಹುಟ್ಟಿ ಬರಬೇಕು ಎಂಬ ಬಯಕೆ ಅವರದಾಗಿತ್ತು. ಇಡೀ ರಾಷ್ಟ್ರದ ಮಾನವ ಸಮುದಾಯ ‘ನನ್ನವರು’ ಎಂಬ ಭಾವನೆ ಪ್ರತಿಯೊಬ್ಬ ರಾಜಕಾರಣಿಯಲ್ಲೂ ಇರಬೇಕು ಎಂದು ಭಾವಿಸಿದ್ದ ಕೆ.ಎಸ್. ಹೆಗ್ಡೆಯವರು ಅದನ್ನು ನುಡಿದಂತೆ ನಡೆದು ತೋರಿದರು. ತಮ್ಮ ನಿಸ್ವಾರ್ಥ ಮನೋಭಾವದಿಂದಾಗಿ ರಾಜ್ಯಸಭೆಯ ಸದಸ್ಯರಾಗಿ, ಸಾಂಸದಿಕರಾಗಿ, ಲೋಕಸಭೆಯ ಸ್ಪೀಕರ್ ಆಗಿ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರಾಗಿ ಈ ರಾಷ್ಟ್ರದ ಜನತೆ ಸದಾ ನೆನಪಿಟ್ಟುಕೊಳ್ಳುವಂತಹ ದೀಮಂತ ವ್ಯಕ್ತಿತ್ವವನ್ನು ಮೆರೆದರು.

ಅಪ್ಪಟ ದೇಶಪ್ರೇಮಿಯಾಗಿದ್ದ ಹೆಗ್ಡೆಯವರು ಅನ್ಯಾಯದ ವಿರುದ್ಧ ಧ್ವನಿಯೆತ್ತಲೆಂದೇ ಲೋಕಸಭಾ ಚುನಾವಣೆಗೆ ಸ್ಪರ್ದಿಸಿದರು. ಜಯ ಗಳಿಸಿದರು. ಲೋಕಸಭೆಯ ಸ್ಪೀಕರ್ ಆಗಿ ಸಂಸತ್ತಿನ ಘನತೆಯನ್ನು ಎತ್ತಿ ಹಿಡಿದರು. ನ್ಯಾಯ – ನಿಷ್ಠೆಯ ಮೇರು ವ್ಯಕ್ತಿತ್ವವನ್ನು ಮೆರೆದರು. ತನ್ನ ಅಧಿಕಾರಾವಧಿಯಲ್ಲಿ ಮಹತ್ತರವಾದುದನ್ನು ಸಾಧಿಸಿ ಲೋಕಮನ್ನಣೆ ಗಳಿಸಿದರು.

ಸಂಸ್ಕೃತಿ ಚಿಂತಕ

‘ಸಂಸ್ಕೃತಿ’ ಎನ್ನುವುದು ನಾವು ಹೇಳಿಕೊಳ್ಳುವುದಲ್ಲ. ಅದನ್ನು ಇನ್ನೊಬ್ಬರು ನಮ್ಮೊಳಗೆ ಕಂಡುಕೊಳ್ಳುವುದು. ನಾವು ಓದಿದ್ದೆಲ್ಲ ಮರೆತು ಹೋಗಬಹುದು. ಆದರೆ ನಾವು ಅಳವಡಿಸಿಕೊಂಡು ಹೋದ ಸಂಸ್ಕೃತಿ ನಮ್ಮನ್ನು ಬಿಟ್ಟುಹೋಗುವುದಿಲ್ಲ. ವಾಸ್ತವದ ‘ವಿಷ’ವನ್ನು ನುಂಗಿಕೊಂಡು ಯಾರು ನಂಜುಂಡರಾಗಿರುತ್ತಾರೆಯೋ ಅವರಿಂದ ಮಾತ್ರ ‘ಅಮೃತ’ ಸೃಷ್ಟಿಯ ಕಾರ್ಯ ನಡೆಯುತ್ತದೆ. ದೇಶದಲ್ಲಿ ಇಂಥ ವ್ಯಕ್ತಿಗಳು ಹೆಚ್ಚಿದಷ್ಟೂ ದೇಶದ ಜೀವನ ಮಧುರವಾಗುತ್ತದೆ. ತನ್ನ ಕೆಳಗೆ – ಅಕ್ಕಪಕ್ಕದಲ್ಲಿ – ಸುತ್ತಲೂ ಕೊಳಕು ಇದೆ ಎಂದು ತಿಳಿದರೂ ಮರವು ಯಾವತ್ತೂ ತನ್ನ ಬೇರುಗಳನ್ನು ಸಂಕುಚಿತಗೊಳಿಸಿಕೊಳ್ಳುವುದಿಲ್ಲ. ಖುಷಿಯಿಂದಲೇ ಪಕ್ಕದ ಕೊಳಕನ್ನು ಹೀರಿಕೊಂಡು, ಸುಗಂಧಭರಿತ ಫಲಪುಷ್ಪಗಳನ್ನು ಕೊಡುತ್ತದೆ. ಹೀಗಾಗಿಯೇ ಕೆ.ಎಸ್. ಹೆಗ್ಡೆಯವರಿಗೆ ಕಣ್ಣು ಮುಚ್ಚಿಕೊಂಡು, ಕೈ ಕಟ್ಟಿಕೊಂಡು ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ. ತನ್ನ ಸ್ಥಾನದ ಅರಿವು, ಪರರ ಮನದ ಇಂಗಿತವನ್ನು ಅರಿಯುವ ಸಾಮರ್ಥ್ಯ, ಸ್ವಾರ್ಥದ ಮೇಲಿನ ನಿಯಂತ್ರಣ, ಆಹ್ಲಾದಕರ ಪ್ರವೃತ್ತಿ ಹಾಗೂ ಸಮನ್ವಯ ದೃಷ್ಟಿಗಳನ್ನು ಹೊಂದಿದ್ದು ಸಂಸ್ಕೃತಿವಂತರಾಗಿದ್ದವರು ಕೆ.ಎಸ್. ಹೆಗ್ಡೆಯವರು. ಅವರೊಬ್ಬ ಸದಬಿರುಚಿಯ ಕನಸುಗಾರ ಮಾತ್ರವಲ್ಲ, ಸಂಸ್ಕೃತಿ ಚಿಂತಕರಾಗಿದ್ದರು. ಇಂದಿನ ಯುವ ಜನಾಂಗ ದೇವರನ್ನು ಮರೆತು ಬದುಕುತ್ತಿರುವುದನ್ನು ಕಂಡ ಹೆಗ್ಡೆಯವರು ತಾನು ಪ್ರಾರಂಭಿಸಿದ ವಿದ್ಯಾಸಂಸ್ಥೆಯ ಸಂಕೀರ್ಣದಲ್ಲಿಯೇ ಶ್ರೀ ಮಹಾಗಣಪತಿ ದೇವಾಲಯ ನಿರ್ಮಿಸಿದರು. ದೇವಾಲಯ ಹಾಗೂ ವಿದ್ಯಾಲಯಗಳು ಸಮಾಜ ಪುರುಷನ ಎರಡು ಕಣ್ಣುಗಳಂತೆ ಎಂದು ಅವರು ತಿಳಿದಿದ್ದರು. ದೇವರಲ್ಲಿ ವಿಶ್ವಾಸವು ಮಾನವನ ಜೀವನಕ್ಕೆ ಅರ್ಥವನ್ನೂ, ಉದ್ದೇಶವನ್ನೂ ನೀಡುತ್ತದೆ ಎಂಬುದನ್ನವರು ಬಲವಾಗಿ ನಂಬಿದ್ದರು. ವಿದ್ಯಾಲಯದ ಹತ್ತಿರದಲ್ಲಿಯೇ ದೇವಾಲಯವನ್ನು ಸ್ಥಾಪಿಸಿದರೆ ಇಂದಿನ ಯುವ ಪೀಳಿಗೆ ದೇವರ ಇರುವಿಕೆಯ ಜೊತೆಯಲ್ಲಿ ಬದುಕಿನ ಅರ್ಥವನ್ನು ಕಂಡುಕೊಳ್ಳಬಹುದು ಎಂಬ ಆಕಾಂಕ್ಷೆ ಅವರದ್ದಾಗಿತ್ತು.

ನಮ್ಮ ಪ್ರಾಚೀನ ಪರಂಪರೆಯಲ್ಲಿ ಭಗವಂತನನ್ನು ಅರಿಯುವುದಕ್ಕಾಗಿ ನವ ವಿಧ ಭಕ್ತಿಯನ್ನು ಹೇಳಲಾಗಿದೆ. ಅವುಗಳೆಂದರೆ – ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ ಮತ್ತು ಆತ್ಮ ನಿವೇದನ. ಹೀಗಾಗಿ, ಜನರನ್ನು ಭಗವಂತನ ಭಜನೆ, ಧ್ಯಾನ, ಕೀರ್ತನೆಗಳಲ್ಲಿ ತೊಡಗಿಸಬೇಕಾದುದು ತನ್ನ ಪರಮ ಕರ್ತವ್ಯವೆಂದು ಸದಾನಂದ ಹೆಗ್ಡೆಯವರು ತಿಳಿದಿದ್ದರು. ಬದುಕಿನ ಗುರಿಯನ್ನರಿತು, ಪರಮಾತ್ಮನ ಸ್ಪರ್ಶದ ಅನುಭವಕ್ಕಾಗಿ, ಅಂತರಂಗದ ಶುದ್ಧಿಗಾಗಿ ‘ಸಮಾಜಸೇವೆ’ಯ ದೀಕ್ಷೆ ಪಡೆಯುವ ಉದ್ದೇಶ ಅವರದ್ದಾಗಿತ್ತು. ಆದುದರಿಂದಲೇ ದೇವಸ್ಥಾನದಲ್ಲಿ ಪ್ರತಿವರ್ಷವೂ ಅನೇಕ ಧಾರ್ಮಿಕ ಉಪನ್ಯಾಸಗಳನ್ನು, ಪುರಾಣ, ಭಾರತ, ರಾಮಾಯಣ ಪ್ರವಚನಗಳನ್ನು ಏರ್ಪಡಿಸುತ್ತಿದ್ದರು. ವಿದ್ಯಾಭೂಷಣರ ಸಂಗೀತ ಕಚೇರಿಯೆಂದರೆ ಕೆ.ಎಸ್. ಹೆಗ್ಡೆಯವರಿಗೆ ಪ್ರಾಣ. ಭಜನೆ, ಹರಿಕಥೆ, ಯಕ್ಷಗಾನ ತಾಳಮದ್ದಳೆಗಳನ್ನು ಆಯೋಜಿಸುವುದು ಮಾತ್ರವಲ್ಲದೆ, ಕಾರ್ಯಕ್ರಮದ ಕೊನೆಯವರೆಗೂ ಇದ್ದು ಅದನ್ನು ನಿರ್ವಹಿಸಿದ ಕಲಾವಿದರನ್ನು, ವಿದ್ವಾಂಸರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಸಹೃದಯ ಪ್ರೇಕ್ಷಕನೇ ಕಲಾವಿದನಿಗೆ ನಿಜವಾದ ಸ್ಫೂರ್ತಿ ಎಂಬುದನ್ನವರು ಚೆನ್ನಾಗಿ ಅರಿತಿದ್ದರು. ಈಗಿನ ಕಾಲದಲ್ಲಿ ದಾಕ್ಷಿಣ್ಯಕ್ಕೋ, ಪ್ರಚಾರಕ್ಕೋ ಕಾರ್ಯಕ್ರಮಗಳನ್ನು ಮಾಡುವವರಿದ್ದಾರೆ; ಆದರೆ ನೋಡುವವರಿಲ್ಲ – ಕೇಳುವವರಿಲ್ಲ. ಸಂಘಟಕರಿಗೇ ಬೇಡವಾದ, ಸಂಘಟಕರೇ ಹಾಜರಿರದ ಕಾರ್ಯಕ್ರಮಗಳು ಸತ್ತ ್ವಪೂರ್ಣವಾಗಿರುವುದಾದರೂ ಹೇಗೆ? ಜನಪ್ರಿಯವಾಗುವುದಾದರೂ ಹೇಗೆ?

ಕೆ.ಎಸ್. ಹೆಗ್ಡೆಯವರಿಗೆ ದೈವಭಕ್ತಿ ಎನ್ನುವುದು ಸಹಜ ಸಂಸ್ಕೃತಿಯ ಪ್ರಕಟರೂಪವೇ ಆಗಿತ್ತು. ವಿದ್ಯಾಲಯದ ಆವರಣದಲ್ಲಿಯೇ ಈ ಕಾರ್ಯಕ್ರಮ ಏರ್ಪಡಿಸಲು ಒಂದು ಕಾರಣವೂ ಇತ್ತು. ನಾಲ್ಕು ಗೋಡೆಗಳ ನಡುವೆ ಕಲಿಯುವ ಪಾಠಕ್ಕಿಂತ ತರಗತಿ ಕೋಣೆಯ ಹೊರಗಿನ ಪಾಠವೇ ನಮ್ಮ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ತರಗತಿ ಕೋಣೆಯ ಹೊರಗಿನ ಪಾಠಗಳೇ ಸಾಂಸ್ಕೃತಿಕ ಚಟುವಟಿಕೆಗಳು. ಈ ಚಟುವಟಿಕೆಗಳನ್ನು ಹೆಗ್ಡೆಯವರು ಕೇವಲ ಮಕ್ಕಳನ್ನು – ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ಮಾಡಿಲ್ಲ. ಅವರ ದೃಷ್ಟಿಯಲ್ಲಿ ಶಿಕ್ಷಕರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮುಖ್ಯವಾಗಿತ್ತು. ಯಾವನೇ ಒಬ್ಬ ವ್ಯಕ್ತಿ ತನ್ನ ಊರಿನ – ನಾಡಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಾಗ ಅವನು ಬೌದ್ಧಿಕವಾಗಿ ಸಾಕಷ್ಟು ಬೆಳೆಯುತ್ತಾನೆ, ಹೃದಯವಂತ ನಾಗುತ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ನಾಡಿನ ಸಂಸ್ಕೃತಿಯ ಬಗೆಗೆ ಹೆಮ್ಮೆ ಪಟ್ಟುಕೊಳ್ಳುತ್ತಾನೆ. ನಿಟ್ಟೆ ಹಾಗೂ ಪರಿಸರದ ಜನತೆಗೆ ಸಾಂಸ್ಕೃತಿಕವಾಗಿ ಬಹಳಷ್ಟನ್ನು ನೀಡಿದ ಕೆ.ಎಸ್. ಹೆಗ್ಡೆಯವರ ಹೃದಯ ಶ್ರೀಮಂತಿಕೆಗೆ ಖಂಡಿತವಾಗಿ ನಾವು ತಲೆಬಾಗಲೇಬೇಕು.

ಸಮಾಜಮುಖಿ ಕನಸು

‘‘ನನಗಾಗಿ ಸ್ವಲ್ಪ; ಸಮಾಜಕ್ಕಾಗಿ ಸರ್ವಸ್ವ’’ ಎಂಬುದನ್ನು ಬಲವಾಗಿ ನಂಬಿದ್ದ ಕೆ.ಎಸ್. ಹೆಗ್ಡೆಯವರು ತನ್ನ ಸಮಾಜಕ್ಕಾಗಿ ತಾನು ಏನನ್ನಾದರೂ ಮಾಡಲೇಬೇಕೆಂಬ ಕನಸು ಕಂಡವರು. ಕನಸು ಕಾಣುವುದು ಮನುಷ್ಯನ ಸಹಜ ಸ್ವಭಾವ. ಕನಸು ಕಾಣುವುದು ದೊಡ್ಡದಲ್ಲ; ಕಂಡ ಕನಸನ್ನು ನನಸಾಗಿಸುವುದು ದೊಡ್ಡದು. ತನಗಾಗಿ – ತನ್ನವರಿಗಾಗಿ ಕನಸು ಕಾಣುವುದು ದೊಡ್ಡದಲ್ಲ; ತಾನು ಬದುಕಿದ ಸಮಾಜಕ್ಕಾಗಿ – ದೇಶಕ್ಕಾಗಿ ಕನಸು ಕಾಣುವುದು ದೊಡ್ಡದು. ಸದಾನಂದ ಹೆಗ್ಡೆಯವರು ಕಂಡ ಕನಸು – ಮನುಕುಲದ ಭವಿಷ್ಯದ ಕನಸು. ದೊಡ್ಡ ಮನುಷ್ಯರು ಮಾತ್ರ ದೊಡ್ಡ ಕನಸನ್ನು ಕಾಣುತ್ತಾರೆ. ಕಂಡ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ದೊಡ್ಡವರಾದ ಹೆಗ್ಡೆಯವರು ದೊಡ್ಡ ದೊಡ್ಡ ಕನಸುಗಳನ್ನು ಕಂಡರು; ಅವುಗಳನ್ನೆಲ್ಲ ಕಾರ್ಯಗತಗೊಳಿಸಿದರು ಕೂಡ.

ಮನುಷ್ಯನಾಗಿ ಹುಟ್ಟಿದ ಮೇಲೆ ಅವನ ಬಾಳಿಗೊಂದು ಗುರಿ ಇರಬೇಕು. ಗುರಿಯಿಲ್ಲದ ಜೀವನ ಪರಿಮಳವಿಲ್ಲದ ಹೂವಿನಂತೆ; ಗುರಿಯಿಲ್ಲದ ಜೀವನ ಚುಕ್ಕಾಣಿಯಿಲ್ಲದ ಹಡಗಿನಂತೆ. ಕೆ.ಎಸ್. ಹೆಗ್ಡೆಯವರ ಬಾಳಿಗೆ ಒಂದು ಸ್ಪಷ್ಟವಾದ ಗುರಿ ಇತ್ತು. ಈ ಗುರಿ ಮುಟ್ಟಲು ನೇರವಾದ ದಾರಿಯೂ ಇತ್ತು. ಇಂದಿನ ಅನೇಕ ಜನರಿಗೆ ದಾರಿಯೂ ಇಲ್ಲ, ಗುರಿಯೂ ಇಲ್ಲ. ಹೇಳುವ ಮಾತಿಗೂ – ಬಾಳುವ ಆದರ್ಶಕ್ಕೂ ಸಂಬಂಧವೇ ಇಲ್ಲ. ಕೆ.ಎಸ್. ಹೆಗ್ಡೆಯವರು ಆದರ್ಶವನ್ನು ನುಡಿದು ಹೇಳಲಿಲ್ಲ; ನಡೆದು ತೋರಿದರು.

ಸಮಾಜದ ಋಣ ತೀರಿಸಲು ಸಮಾಜ ಸೇವೆಯೇ ಉತ್ತಮ ಮಾರ್ಗ ಎಂದು ತಿಳಿದ ಕೆ.ಎಸ್. ಹೆಗ್ಡೆಯವರು ಯಾವುದೇ ಒಂದು ಜನಾಂಗ ಪ್ರಗತಿಯನ್ನು ಸಾದಿಸಬೇಕಾದರೆ ಶೈಕ್ಷಣಿಕವಾದ ಪ್ರಗತಿ ಮೊತ್ತಮೊದಲಿನ ಆದ್ಯತೆಯಾಗಬೇಕೆಂದು ತಿಳಿದರು. ಇದಕ್ಕಾಗಿ ತಮ್ಮ ಹೆಂಡತಿಯ ಊರಾದ ನಿಟ್ಟೆಯನ್ನು ಆರಿಸಿಕೊಂಡರು. ಅಧಿಕಾರದಲ್ಲಿದ್ದರೆ ಮಾತ್ರ ಸಮಾಜಸೇವೆ ಮಾಡಲು ಸಾಧ್ಯ ಎಂಬ ಮೌಢ್ಯದಿಂದ ಕೂಡಿರುವ ಇಂದಿನ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಕೆ.ಎಸ್. ಹೆಗ್ಡೆಯವರು ನಿಜವಾಗಿಯೂ ಒಂದು ಸವಾಲಾದರು. ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಿದ ಸರಕಾರದ ವಿರುದ್ಧ ಪ್ರತಿಭಟಿಸಿದರು. ಜನರ ಏಳಿಗೆಯತ್ತ ಮೊಗ ಮಾಡಿದರು.

ಸಮಾಜವನ್ನುಳಿದು ಯಾವತ್ತೂ ನಮ್ಮ ಬದುಕಿಗೆ ನೆಲೆಯಿಲ್ಲ, ಬೆಲೆಯಿಲ್ಲ. ತಾನು ಸಮಾಜಕ್ಕಾಗಿ; ಸಮಾಜ ತನಗಾಗಿ – ಈ ಸಾಮರಸ್ಯದ ಸಾಂಗತ್ಯದಲ್ಲೇ ನಮ್ಮ ಸಂತೋಷ ಇರಬೇಕಾಗಿದೆ. ಹೀಗಾಗಿಯೇ ಕೆ.ಎಸ್. ಹೆಗ್ಡೆಯವರು ಸಮಾಜಕ್ಕೆ ಶಿಕ್ಷಣ ನೀಡುವ ಕಾಯಕಕ್ಕೆ ಮುಂದಾದರು. 1979 ಆಗಸ್ಟ್ 30ರಂದು ಏಳು ಜನ ಬುದ್ಧಿಜೀವಿಗಳು ಒಟ್ಟು ಸೇರಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದರು. ನಿಟ್ಟೆಯಲ್ಲಿ ಆರಂಭಗೊಂಡ ಈ ವಿದ್ಯಾಸಂಸ್ಥೆಗೆ ‘ನಿಟ್ಟೆ ವಿದ್ಯಾಸಂಸ್ಥೆ’ ಎಂಬುದಾಗಿ ನಾಮಕರಣ ಮಾಡಲಾಯಿತು. ಸಂಸ್ಥೆಯ ಸ್ಫೂರ್ತಿಯ ಪ್ರೇರಕರಾದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರೇ ನಿಟ್ಟೆ ವಿದ್ಯಾಸಂಸ್ಥೆಯ ಸ್ಥಾಪಕರೆನ್ನಿಸಿಕೊಂಡರು. ಕುಗ್ರಾಮವಾಗಿದ್ದ ನಿಟ್ಟೆಯಲ್ಲಿ ಪ್ರೌಢಶಾಲೆಯೊಂದನ್ನು ಸ್ಥಾಪಿಸುವ ಹಂಬಲದಿಂದ 1980ರಲ್ಲಿ ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರೌಢಶಾಲೆಯನ್ನು ಸ್ಥಾಪಿಸಿದರು. ಕೆ.ಎಸ್. ಹೆಗ್ಡೆಯವರ ಭಾವ ಡಾ| ಶಂಕರ ಅಡ್ಯಂತಾಯ ಆ ಕಾಲದಲ್ಲಿ ಬಹಳ ಜನಮನ್ನಣೆ ಪಡೆದ ವೈದ್ಯರಾಗಿದ್ದರಿಂದ ಸಂಸ್ಥೆಯ ಚೊಚ್ಚಲ ಜ್ಞಾನದೇಗುಲಕ್ಕೆ ಅವರ ಹೆಸರನ್ನಿಡಲಾಯಿತು. ತನ್ನದೇ ಆದ ಸ್ವಂತ ಕಟ್ಟಡವಿಲ್ಲದೇ ಇದ್ದುದರಿಂದ ನಿಟ್ಟೆ ಗ್ರಾಮ ಪಂಚಾಯತಿಯ ಯುವಕ ಮಂಡಲದ ಕಟ್ಟಡದಲ್ಲಿ ಶಾಲೆ ಆರಂಭಗೊಂಡಿತು. ಜೂನ್ 2, 1980ರಂದು 76 ಮಕ್ಕಳಿಗಾಗಿ ಪ್ರೌಢಶಾಲೆ ಪ್ರಾರಂಭವಾಯಿತು. ಪ್ರತ್ಯೇಕ ತರಗತಿ ಕೋಣೆಗಳು ಇಲ್ಲವಾದ್ದರಿಂದ ಒಂದೇ ಸಭಾಂಗಣದಲ್ಲಿ ಎರಡು ವಿಭಾಗಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಕೆ.ಎಸ್ ಹೆಗ್ಡೆಯವರ ದ್ವಿತೀಯ ಪುತ್ರ ಶ್ರೀ ಎನ್. ವಿನಯ ಹೆಗ್ಡೆಯವರು ಶಾಲಾ ಸಂಚಾಲಕರಾಗಿ ನೇಮಕಗೊಂಡರು.

1981ರಲ್ಲಿ ನಿಟ್ಟೆ ವಿದ್ಯಾಸಂಸ್ಥೆಯು 8 ಎಕರೆಗಳಷ್ಟು ವಿಸ್ತೀರ್ಣವುಳ್ಳ ಸ್ಥಳದಲ್ಲೇ ತನ್ನದೇ ಆದ ಶಾಲಾ ಕಟ್ಟಡವನ್ನು ರಚಿಸಿತು. ಅಕ್ಟೋಬರ್ 31, 1981ರಿಂದ ನೂತನ ಶಾಲಾ ಕಟ್ಟಡದಲ್ಲಿ ತರಗತಿಗಳು ಮುಂದುವರಿದವು. 1984ರಲ್ಲಿ ಡಾ| ಎನ್. ಶಂಕರ ಅಡ್ಯಂತಾಯ ಪ್ರೌಢಶಾಲೆಯು ಪದವಿ ಪೂರ್ವ ವಿದ್ಯಾಲಯವಾಗಿ ಮೇಲ್ದರ್ಜೆಗೇರಿತು. ಒಂದು ಶಾಲೆಗೆ ಇರಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದ ಈ ಪ್ರೌಢಶಾಲೆಯ ಅಧ್ಯಾಪಕರು ಹಾಗೂ ಸಿಬ್ಬಂದಿ 1989ರಿಂದ ಸರಕಾರೀ ವೇತನ ಪಡೆಯುವ ಅರ್ಹತೆ ಪಡಕೊಂಡರು.

ಪರಂಪರೆಯ ಮುನ್ನಡೆ

ಪ್ರತಿಯೊಬ್ಬ ಮನುಷ್ಯ ಸಾಧಿಸಿಕೊಳ್ಳಬೇಕಾದ ಬಹುದೊಡ್ಡ ಸಂಪತ್ತು, ಶಾಶ್ವತವಾದ ಸಂಪತ್ತು – ಅವನ ಗುಣ ಸಂಪತ್ತು. ಈ ಗುಣ ಎಲ್ಲಿಂದ ಬರುತ್ತದೆ? ಕೆಲವರಿಗೆ ಪರಂಪರೆಯಿಂದ ಬರುತ್ತದೆ. ಹಲವರಿಗೆ ಪರಿಸರದಿಂದ ಬರುತ್ತದೆ. ಇನ್ನು ಕೆಲವರಿಗೆ ಕಲಿಕೆಯಿಂದ ಬರುತ್ತದೆ. ಮತ್ತೆ ಹಲವರಿಗೆ ಸ್ವಯಂ ಚಿಂತನೆಯಿಂದ ಬರುತ್ತದೆ. ಕೆ.ಎಸ್. ಹೆಗ್ಡೆಯವರು ತಮ್ಮ ತಂದೆ ಸುಬ್ಬಯ್ಯ ಹೆಗ್ಡೆ ಹಾಗೂ ತಾಯಿ ಲಿಂಗಮ್ಮ ಶೆಡ್ತಿಯವರ ಗುಣಸಾರವನ್ನು ಹೀರಿಕೊಂಡು ಬೆಳೆದವರು. ಅನಂತರ ತನ್ನಿಂದ ತಾನಾಗಿಯೇ ಈ ಗುಣಗಳನ್ನು ಹೆಚ್ಚಿಸಿಕೊಂಡವರು. ಸದಾನಂದ ಹೆಗ್ಡೆಯವರ ಈ ಗುಣ ಸಂಪತ್ತು ಅವರ ಮಕ್ಕಳಲ್ಲಿ ಬೆಳೆದು ಬಂದಿರುವುದನ್ನು ನಾವಿಂದು ಸ್ಪಷ್ಟವಾಗಿ ಕಾಣುತ್ತಿದ್ದೇವೆ. ಇದಕ್ಕೆ ನಿದರ್ಶನ ನಿಟ್ಟೆ ವಿದ್ಯಾಸಂಸ್ಥೆಯ ಈಗಿನ ಅಧ್ಯಕ್ಷರಾಗಿರುವ ಶ್ರೀ ಎನ್. ವಿನಯ ಹೆಗ್ಡೆಯವರು. ನಮ್ಮಲ್ಲೊಂದು ಪ್ರಸಿದ್ಧವಾದ ಮಾತಿದೆ : ‘ವಿದ್ಯಾ ದದಾತಿ ವಿನಯಂ’. ವಿದ್ಯೆ ವಿನಯವನ್ನು ತಂದುಕೊಡುತ್ತದೆ. ಯಾವ ವಿದ್ಯೆ ವಿನಯವನ್ನು ತಂದೀಯಲಾರದೋ ಅದನ್ನು ‘ವಿದ್ಯೆ’ ಎನ್ನಲಾಗದು. ಈ ದೃಷ್ಟಿಯಿಂದಲೇ ‘ವಿದ್ಯೆಗೆ ವಿನಯವೇ ಭೂಷಣ’ ಎನ್ನುವುದು.

ವಿನಯ ಹೆಗ್ಡೆಯವರು ಮಿತಭಾಷಿ ಮಾತ್ರವಲ್ಲ; ಮೃದುಭಾಷಿ ಕೂಡ. ಸದಾ ತಾಳ್ಮೆಯ ವ್ಯಕ್ತಿತ್ವ. ನಿರಂತರವಾಗಿ ಸಮಾಜದ – ತನ್ನ ಸುತ್ತಣ ಜನರ ಒಳಿತನ್ನು ಬಯಸುವ ದೀಮಂತ ವ್ಯಕ್ತಿ. ಹೆಸರಿಗೆ ಅನ್ವರ್ಥವಾಗಿರುವಂತೆ ನಯ-ವಿನಯದ ಸಾಕಾರಮೂರ್ತಿ. ಅವರೇ ಹೇಳುವಂತೆ, ಅವರ ತಾಯ್ತಂದೆಯರೇ ಅವರ ವ್ಯಕ್ತಿತ್ವವನ್ನು ರೂಪಿಸಿದವರು. ಯಾವುದೇ ಕೆಲಸವಾದರೂ ಸರಿ, ಅದನ್ನು ಒಳ್ಳೆಯ ರೀತಿಯಿಂದ ಇತರರಿಗೆ ಅನ್ಯಾಯವಾಗದಂತೆ ಮಾಡಬೇಕು ಎಂಬುದಾಗಿ ಕೆ.ಎಸ್. ಹೆಗ್ಡೆಯವರು ಹೇಳುತ್ತಿದ್ದರಂತೆ. ಹೀಗಾಗಿ, ತಂದೆಯ ಹೆಸರಿಗೆ – ಅವರ ಅಭಿಪ್ರಾಯಗಳಿಗೆ ಸ್ವಲ್ಪವೂ ಕಳಂಕ ಬರದಂತೆ ಅವರ ಮಕ್ಕಳೆಲ್ಲರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೃಹಿಣಿಯಾಗಿದ್ದ ಶ್ರೀಮತಿ ಮೀನಾಕ್ಷಿ ಹೆಗ್ಡೆಯವರು ತಮ್ಮ ಮಕ್ಕಳ ಮೇಲೆ ಹರಿಸಿದ್ದ ಒಲುಮೆಯ ಧಾರೆ ಅವರ ಮಕ್ಕಳಲ್ಲಿ ರಕ್ತಗತವಾಗಿ ಬಂದಿರುವುದಂತೂ ಸತ್ಯ. ಅವರು ಹೇಳಿಕೊಟ್ಟ – ತೋರಿಕೊಟ್ಟ ‘ಪರೋಪಕಾರವೇ ದೊಡ್ಡ ಆಸ್ತಿ’ ಎಂಬ ಬೀಜಮಂತ್ರ ವಿನಯ ಹೆಗ್ಡೆಯವರ ಬಾಳಿನಲ್ಲಿ ತಾರಕ ಮಂತ್ರವಾಯಿತು. ತಾಯ್ತಂದೆಯವರಲ್ಲಿದ್ದ ಸರಳತೆ ಅವರಲ್ಲಿ ಆಗಲೇ ಪಡಿಮೂಡಿತ್ತು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಂತೆಯೇ ಖಜಿಞಟ್ಝಛಿ ್ಝಜಿಜ್ಞಿಜ; ಜಿಜ ಠಿಜ್ಞಿಜ್ಞಿಜ  ಎನ್ನುವುದು ವಿನಯ ಹೆಗ್ಡೆಯವರ ಬದುಕಿನಲ್ಲಿ ಎದ್ದು ಕಾಣುವ ಸತ್ಯತೆ.

ವಿನಯ ಹೆಗ್ಡೆಯವರ ಒಡನಾಟಕ್ಕೆ ಬಂದವರಿಗೆಲ್ಲ ‘ವಿನಯ’ದ ವಿಶೇಷತೆಯೇ, ಹಿರಿಮೆಯೇ ಅರಿವಾಗುತ್ತದೆ. ತನ್ನ ವಿನಯವಂತಿಕೆಯಿಂದಾಗಿಯೇ ವಿನಯ ಹೆಗ್ಡೆಯವರು ಬಹುಜನಕ್ಕೆ ಬಹುಬೇಗನೇ ಆಪ್ತರಾಗುತ್ತಾರೆ. ಈ ‘ವಿನಯ’ – ಹೆಗ್ಡೆಯವರ ದೌರ್ಬಲ್ಯವಲ್ಲ; ಅದು ಅವರ ಸಾಮರ್ಥ್ಯ. ಯಾರಾದರೂ ಇದನ್ನು ದೌರ್ಬಲ್ಯವೆಂದು ತಿಳಿದುಕೊಂಡರೆ, ಸ್ವಪ್ರಯೋಜನಾಕಾಂಕ್ಷಿಗಳಾದರೆ, ವಿನಯ ಹೆಗ್ಡೆಯವರು ಆಗ ‘ವಜ್ರಾದಪೀ ಕಠೋರಾಣಿ’ಯಾಗುತ್ತಾರೆ. ‘ವಜ್ರಾದಪೀ ಕಠೋರಾಣಿ, ಮೃದೂನೀ ಕುಸುಮಾದಪೀ’ ಎಂಬ ಮಾತಿದೆ. ವಿನಯ ಹೆಗ್ಡೆಯವರು ಕಠೋರರೂ ಹೌದು; ಕುಸುಮ ಕೋಮಲರೂ ಹೌದು. ಅವರು ಯಾವತ್ತೂ ತಮ್ಮ ನೌಕರರನ್ನು – ನೌಕರರೆಂದು ಕಂಡವರೇ ಅಲ್ಲ. ತನ್ನ ಕುಟುಂಬದ ಬಂಧುಗಳೆಂದು ತಿಳಿದವರು. ಅವರ ನೋವು – ನಲಿವುಗಳಲ್ಲಿ ಪಾಲ್ಗೊಂಡವರು. ತಪ್ಪಿದಾಗ ತಿದ್ದಿ ಮುನ್ನಡೆಸಿದವರು. ತಂದೆಯವರ ಕನಸಿನ ಮಹಾಸೌಧ (ಶಿಕ್ಷಣ ಸಂಸ್ಥೆ)ವನ್ನು ನಿರ್ಮಿಸಿ ಧನ್ಯತೆಯನ್ನು ಕಂಡವರು. ಮಾತಾ ಪಿತೃಗಳ ಋಣ ತೀರಿಸಿದವರು.

ಎನ್. ವಿನಯ ಹೆಗ್ಡೆ ಅವರಿಗೆ ತಂದೆ ಸದಾನಂದ ಹೆಗ್ಡೆಯವರು ದೀಪದರ್ಶಿಯಾಗಿದ್ದರು. ಅವರ ತಾಯಿ ಮೀನಾಕ್ಷಿ ಹೆಗ್ಡೆಯವರು ಈ ದೀಪ ಆರದಂತೆ ಸದಾ ಎಣ್ಣೆಯನ್ನು ಹೊಯ್ಯುತ್ತಿದ್ದರು. ಹೀಗಾಗಿಯೇ ಎನ್. ವಿನಯ ಹೆಗ್ಡೆಯವರು ಕಟ್ಟಿದ ಸಂಸ್ಥೆಗಳಿಗೆ ಅವರ ತಂದೆ – ತಾಯಿಯರ ಹೆಸರು, ಬಂಧು ಬಳಗದವರ ಹೆಸರನ್ನಿಟ್ಟು ಅವರ ಕ್ರತುಚೇತನಗಳಿಗೆ ಗೌರವ ಸಮರ್ಪಿಸಿದ್ದಾರೆ. ಸರಳ – ಸಜ್ಜನಿಕೆಯ ಸಾಕಾರಮೂರ್ತಿ ಎನ್. ವಿನಯ ಹೆಗ್ಡೆಯವರ ಸಮರ್ಥ ನಾಯಕತ್ವದಿಂದಾಗಿ ನಿಟ್ಟೆ ವಿದ್ಯಾಸಂಸ್ಥೆಯು ದೇಶ – ವಿದೇಶಗಳಲ್ಲಿ ಗುರುತಿಸಲ್ಪಟ್ಟಿರುವುದು – ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನಮಗೆಲ್ಲ ಹೆಮ್ಮೆಯ ಸಂಗತಿ.

ನಿಟ್ಟೆ ವಿದ್ಯಾಸಂಸ್ಥೆಯ ಅನ್ನ ತಿಂದು ಬದುಕುತ್ತಿರುವ ನಾನು ವಿನಯ ಹೆಗ್ಡೆಯವರ ಕುರಿತು, ಅವರ ಹೃದಯ ವೈಶಾಲ್ಯತೆಯ ಕುರಿತು ಒಂದು ಮಾತನ್ನು ಇಲ್ಲಿ ಉಲ್ಲೇಖಿಸದೇ ಇದ್ದರೆ ಪ್ರಾಯಶಃ ಕೃತಘ್ನಳೇ ಸರಿ. 1994ರಲ್ಲಿ ನಿಟ್ಟೆ ವಿದ್ಯಾಸಂಸ್ಥೆಗೆ ಕೆಲಸಕ್ಕೆ ಸೇರಿದಾಗ ನಾನು ಕೇವಲ ಬಿ.ಕಾಂ. ಪದವೀಧರೆ. ಕಾಲೇಜಿನ ಕಛೇರಿಯಲ್ಲಿ ಗುಮಾಸ್ತಳಾಗಿ ಕೆಲಸ ನಿರ್ವಹಿಸುತ್ತಿದ್ದ ನನಗೆ ಆಕಸ್ಮಿಕವಾಗಿ ಅಧ್ಯಾಪಿಕೆಯಾಗುವ ಅವಕಾಶವನ್ನು ಕಲ್ಪಿಸಿದವರು ಆಗಿನ ಪ್ರಾಂಶುಪಾಲರಾಗಿದ್ದ ಶ್ರೀ ಕೆ. ಅರವಿಂದ ಹೆಗ್ಡೆಯವರು ಹಾಗೂ ಶ್ರೀ ಎನ್. ವಿನಯ ಹೆಗ್ಡೆಯವರು. ಎಂದಿನಂತೆ ಒಂದು ಸಂಜೆ ನಿಟ್ಟೆಯ ಮಹಿಳಾ ವಸತಿ ಗೃಹದಿಂದ ‘ಸನ್ಮತಿ ಭವನ’ (ಕೆ.ಎಸ್. ಹೆಗ್ಡೆಯವರ ಸ್ಮಾರಕ ಸ್ಥಳ)ದತ್ತ ಹೆಜ್ಜೆ ಹಾಕುತ್ತಿದ್ದೆ. ಇದ್ದಕ್ಕಿದ್ದಂತೆ ಎನ್. ವಿನಯ ಹೆಗ್ಡೆಯವರ ಕಾರು ನಿಂತಿತು. ಅನಿರೀಕ್ಷಿತವಾಗಿ ಬಂದ ಕಾರಿನಲ್ಲಿದ್ದ ಹೆಗ್ಡೆಯವರನ್ನು ಕಂಡು ವಂದಿಸಿದೆ. ‘ನಿಮ್ಮನ್ನು ಟೀಚರ್ ಆಗಿ ನೇಮಕ ಮಾಡಿದ್ದೇನೆ. ಎರಡು ವಾರದಲ್ಲಿ ನಿಮಗೆ ನೇಮಕಾತಿ ಪತ್ರ ಸಿಗುತ್ತದೆ’ ಎಂದಿನಂತೆ ಮೃದು ಧ್ವನಿ. ನನ್ನ ಕಿವಿಗಳನ್ನು ನಾನೇ ನಂಬಲಾಗಲಿಲ್ಲ. ಕಣ್ಣಿನಲ್ಲಿ ಒಂದೇ ಸವನೆ ನೀರು ಸುರಿದಿತ್ತು. ಕೊಂಚ ಸಾವರಿಸಿಕೊಂಡು ಮತ್ತೆ ಉತ್ತರಿಸಿದೆ. ‘ಸರ್, ನಾನು ಟ್ರೈನ್ಡ್ (ತರಬೇತಿ ಹೊಂದಿದವಳು) ಅಲ್ಲ. ನನಗೇಕೆ ಶಿಕ್ಷಕಿಯ ಕೆಲಸ ಕೊಡುತ್ತೀರಿ?’ ತಕ್ಷಣ ಹೆಗ್ಡೆಯವರೆಂದರು – ‘ನಮಗೆ ವಿದ್ಯಾರ್ಹತೆ ಮುಖ್ಯವಲ್ಲಮ್ಮ – ಸಾಮರ್ಥ್ಯ ಮುಖ್ಯ’. ಕಾರು ಹೊರಟಿತು. ನನ್ನ ದಾರಿ ನಾನು ಹಿಡಿದೆ. ಉದ್ಯೋಗ ಗಿಟ್ಟಿಸಲು ವಿದ್ಯಾರ್ಹತೆಯೇ ಮಾನದಂಡವಾಗಿರುವ ಇಂದಿನ ಕಾಲದಲ್ಲಿಯೂ ಕೂಡ ‘ಸಾಮರ್ಥ್ಯ’ವನ್ನು ಗುರುತಿಸುವ ವ್ಯಕ್ತಿಯೊಬ್ಬರು ಇದ್ದಾರಲ್ಲ! ಎಂದುಕೊಂಡು ಮನಸ್ಸಿನಲ್ಲಿಯೇ ಅವರಿಗೆ ಕೃತಜ್ಞತೆ ಸಲ್ಲಿಸಿದೆ.

ಜವಾನ, ಗುಮಾಸ್ತ, ಶಿಕ್ಷಕ, ಪ್ರಾಂಶುಪಾಲರೆನ್ನುವ ಭೇದವಿಲ್ಲದೆ, ಹಿರಿ-ಕಿರಿಯರೆನ್ನುವ ತಾರತಮ್ಯವಿಲ್ಲದೆ, ಜಾತಿ-ಮತ-ಪಂಥಗಳ ಅಂತರವಿಲ್ಲದೆ, ಎಲ್ಲರನ್ನೂ ಪ್ರೀತಿಯಿಂದ ಕಾಣುವ ಎನ್. ವಿನಯ ಹೆಗ್ಡೆಯವರ ಅಂತರಂಗ ವೈಶಾಲ್ಯಕ್ಕೆ ನಾವು ಯಾವತ್ತೂ ತಲೆಬಾಗಲೇ ಬೇಕು.

ಕೆ.ಎಸ್. ಹೆಗ್ಡೆಯವರ ಜ್ಯೇಷ್ಠ ಪುತ್ರರಾದ ಪ್ರಸನ್ನ ಹೆಗ್ಡೆಯವರು ಭಾರತೀಯ ನೌಕಾದಳದಲ್ಲಿ ನೌಕಾದಿಪತಿಯಾಗಿದ್ದುಕೊಂಡು, ರಷ್ಯಾ, ಮಾಸ್ಕೋ ದೇಶಗಳ ನೌಕಾ ಸೇನೆಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತುತ ಲೆಮಿನಾ ಫೌಂಡ್ರೀಸ್ ಹಾಗೂ ಲೆಮಿನಾ ಸಸ್ಪೆನ್‌ಶನ್ಸ್ ಲಿಮಿಟೆಡ್ ಕೈಗಾರಿಕಾ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದಾರೆ.

‘ತಾಯಿಯಂತೆ ಮಗಳು, ನೂಲಿನಂತೆ ಸೀರೆ’ ಎಂಬ ಮಾತು ನಮ್ಮಲ್ಲಿ ರೂಡಿಯಲ್ಲಿದೆ. ಅನೇಕ ವೇಳೆ ‘ತಂದೆಯಂತೆ ಮಗ’ ಎನ್ನುವ ಮಾತು ಕೂಡ ಸಾರ್ಥಕವಾಗುವುದನ್ನು ನಾವು ಕಂಡಿದ್ದೇವೆ. ಕೆ.ಎಸ್. ಹೆಗ್ಡೆಯವರ ಹಿರಿಯ ಮಗ ಪ್ರಸನ್ನ ಹೆಗ್ಡೆಯವರು ಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸಿ, ಊರಿನ ಹಾಗೂ ಸುತ್ತಮುತ್ತಲಿನ ಜನತೆ ಆರ್ಥಿಕವಾಗಿ ಸಬಲರಾಗುವುದಕ್ಕೆ ಸಹಕರಿಸಿದರು. ಎರಡನೆಯ ಮಗ ವಿನಯ ಹೆಗ್ಡೆಯವರು ನಿಟ್ಟೆ ವಿದ್ಯಾಸಂಸ್ಥೆಯನ್ನು ಬೆಳೆಸುವ – ಮುನ್ನಡೆಸುವ ಮೂಲಕ ತನ್ನ ತಂದೆಯವರು ಆರಂಭಿಸಿದ ವಿದ್ಯಾ ದಾನವನ್ನು ಮುಂದುವರಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳನ್ನು ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯ್ದರು. ಮೂರನೆಯವರಾದ ಎನ್. ಸಂತೋಷ ಹೆಗ್ಡೆಯವರು ತನ್ನ ತಂದೆಯವರಂತೆಯೇ ಕಾನೂನು ರಂಗ ಆರಿಸಿಕೊಂಡರು; ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಇದೀಗ ನಮ್ಮ ರಾಜ್ಯದ ಲೋಕಾಯುಕ್ತರಾಗಿದ್ದುಕೊಂಡು ಭ್ರಷ್ಟ ರಾಜಕಾರಣಿಗಳ, ಅಧಿಕಾರಿಗಳ ಅವ್ಯವಹಾರವನ್ನು ಬಯಲಿಗೆಳೆಯುತ್ತಿದ್ದಾರೆ. ರಕ್ತಗತವಾಗಿ ಬಂದಿರುವ ‘ಅನ್ಯಾಯದ ವಿರುದ್ಧ ಪ್ರತಿಭಟಿಸುವ’ ಗುಣದಿಂದಾಗಿ ಸಂತೋಷ ಹೆಗ್ಡೆಯವರು ಯಾವುದೇ ಅಂಜಿಕೆಯಿಲ್ಲದೆ, ಯಾವುದೇ ಪಕ್ಷ – ಸಂಬಂಧಗಳನ್ನು ಲೆಕ್ಕಿಸದೆ ಅನ್ಯಾಯ – ಅವ್ಯವಹಾರಗಳನ್ನು ಬಯಲಿಗೆಳೆಯುತ್ತಿದ್ದಾರೆ. ದೇಶವನ್ನು ಪೆಡಂಭೂತವಾಗಿ ಕಾಡುತ್ತಿರುವ ಭ್ರಷ್ಟಾಚಾರ – ಲಂಚಗುಳಿತನದಿಂದಾಗಿ ನಮ್ಮ ದೇಶ ಖಂಡಿತವಾಗಿ ಅಭಿವೃದ್ಧಿ ಸಾದಿಸಲಾರದು ಎಂಬುದರ ಕಟು ಸತ್ಯವನ್ನು ಸಂತೋಷ ಹೆಗ್ಡೆಯವರು ಸರಿಯಾಗಿ ಅರ್ಥೈಸಿಕೊಂಡಿದ್ದಾರೆ.

ಇಂದು ಈ ಸಮಾಜದ ಭ್ರಷ್ಟರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆಯವರು ವಕೀಲಿ ವೃತ್ತಿಗೆ ಬಂದುದು ಒಂದು ಆಕಸ್ಮಿಕ. ತಂದೆ ನ್ಯಾಯಮೂರ್ತಿಯಾಗಿದ್ದರೂ ಮಕ್ಕಳು ವಕೀಲಿ ವೃತ್ತಿಗೆ ಬರಬೇಕೆಂದು ಎಂದೂ ಬಯಸಿರಲಿಲ್ಲ. ತಾಯಿಯ ಆಸೆಯಂತೆ ಮೆಡಿಕಲ್ ಕಾಲೇಜು ಸೇರಿದ್ದ ಸಂತೋಷ್ ಹೆಗ್ಡೆಯವರು ತನಗಿಂತ ಮೂರು-ನಾಲ್ಕು ವರ್ಷ ಚಿಕ್ಕವರಾಗಿದ್ದ ಸಹಪಾಠಿಗಳೊಂದಿಗೆ ಕಲಿಯುವುದು ಕಷ್ಟವೆನ್ನಿಸಿ ತನ್ನ ತಂದೆಯವರಿಗೆ ತಿಳಿಸಿದರು. ಆಗ ಕೆ.ಎಸ್. ಹೆಗ್ಡೆಯವರು ವಿದ್ಯಾಭ್ಯಾಸದ ಆಯ್ಕೆಯ ನಿರ್ಧಾರವನ್ನು ಮಗನಿಗೇ ವಹಿಸಿದರು. ಪದವಿ ಮುಗಿಸಿ, ಉತ್ತಮ ಕೆಲಸ ಗಿಟ್ಟಿಸಬೇಕೆಂಬ ಒಂದೇ ಉದ್ದೇಶದಿಂದ ಸಂತೋಷ್ ಹೆಗ್ಡೆಯವರು ಕಾನೂನು ರಂಗ ಸೇರಿದರು.

ಕರ್ನಾಟಕದ ಅಡ್ವೊಕೇಟ್ ಜನರಲ್ ಹುದ್ದೆಯಿಂದ ಹಿಡಿದು ಅಡಿಶನಲ್ ಸಾಲಿಸಿಟರ್ ಜನರಲ್, ಸಾಲಿಸಿಟರ್ ಜನರಲ್, ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗುವ ವಿಷಯದಲ್ಲಿ ಕೆ.ಎಸ್. ಹೆಗ್ಡೆಯವರು ಅನುಭವಿಸಿದ್ದ ನೋವಿನ ಅರಿವು ಮಗನಲ್ಲೂ ಇತ್ತು. ಹೀಗಾಗಿ, ಸಂತೋಷ್ ಹೆಗ್ಡೆಯವರು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಯ ಹುದ್ದೆಯನ್ನು ಸ್ವೀಕರಿಸಲು ಹಿಂದೆ-ಮುಂದೆ ನೋಡಿದ್ದರು. ಅನಂತರ ತಾಯಿ ಮೀನಾಕ್ಷಿ ಹೆಗ್ಡೆಯವರ ಆಣತಿಯಂತೆ ಹೊಣೆ ಹೊತ್ತರು. ನಿವೃತ್ತರಾದ ಬಳಿಕ ದೂರಸಂಪರ್ಕ ವ್ಯಾಜ್ಯ ಪರಿಹಾರ ನ್ಯಾಯ ಮಂಡಳಿಯ ಅಧ್ಯಕ್ಷರಾದರು. ಇಲ್ಲಿ ಇವರಿಗೆ ಸಾಕಷ್ಟು ಸಂಭಾವನೆ ಸಿಗುತ್ತಿತ್ತು. ಆದುದರಿಂದಲೇ ಸಂತೋಷ್ ಹೆಗ್ಡೆಯವರಿಗೆ ದೇಶ ಸುತ್ತುವ ಹವ್ಯಾಸ. ಇದುವರೆಗೆ ಇವರು ಸುಮಾರು 35 ದೇಶಗಳನ್ನು ಸುತ್ತಿದ್ದಾರೆ. ದೇಶ ಸುತ್ತಿ ನೋಡು; ಕೋಶ ಓದಿ ನೋಡು ಎಂಬ ಮಾತಿನಂತೆ ಅನೇಕ ದೇಶಗಳನ್ನು ಸುತ್ತಿ ತಮ್ಮ ಅನುಭವದ ಬುತ್ತಿಯನ್ನು ತುಂಬಿಕೊಂಡಿದ್ದಾರೆ, ಎನ್. ಸಂತೋಷ್ ಹೆಗ್ಡೆಯವರು.

ಇವರು ಕರ್ನಾಟಕದ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಹಲವು ವಿವಾದಗಳ ಕೇಂದ್ರಬಿಂದುವಾಗಿದ್ದಾರೆ. 34 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಆರೋಪ ಹಾಗೂ ವಿವಾದಗಳು ಇವರ ಹತ್ತಿರ ಸುಳಿದಿರಲಿಲ್ಲ. ಎಲ್ಲೆಂದರಲ್ಲಿ ಪ್ರಶಂಸೆಗಳ ಸುರಿಮಳೆ. ತನ್ನ ನೆಚ್ಚಿನ ಸ್ಥಳವಾದ ಬೆಂಗಳೂರಿನಲ್ಲಿರಬೇಕು ಎಂಬ ಏಕೈಕ ಉದ್ದೇಶದಿಂದ ಲೋಕಾಯುಕ್ತರ ಹುದ್ದೆಯನ್ನು ಅಲಂಕರಿಸಲು ಒಪ್ಪಿಗೆ ನೀಡಿದಂದಿನಿಂದ ವಿವಾದಗಳದ್ದೇ ಸರಮಾಲೆ. ಇಂದು ವಿವಾದಗಳು ಅವರಿಂದ ಸ್ವಲ್ಪ ಮಟ್ಟಿಗೆ ದೂರ ಸರಿದಿದ್ದರೂ, ಹುದ್ದೆಯನ್ನು ನೀಡಿದವರ, ಅವರ ವಿರೋದಿಗಳ ಹಾಗೂ ಸಮಾಜದ ಒಂದು ವರ್ಗದವರ ಕೆಂಗಣ್ಣಿಗೆ ಸಂತೋಷ್ ಹೆಗ್ಡೆಯವರು ಗುರಿಯಾಗಿದ್ದಾರೆ. ಆದರೆ, ಅಂಜಿಕೆ ಹಿಂದೆ ಸರಿಯುವ ಜಾಯಮಾನ ಇವರದ್ದಲ್ಲ.

ಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿಯೇ ಹುಟ್ಟುತ್ತದೆ ಎನ್ನುವಂತೆ ಯಾವುದೇ ಒತ್ತಡಗಳಿಗೆ ಮಣಿಯದ, ನ್ಯಾಯೋಚಿತ ತೀರ್ಮಾನಗಳಿಗೆ ಇನ್ನೊಂದು ಹೆಸರಾಗಿದ್ದ ಕೆ.ಎಸ್. ಹೆಗ್ಡೆಯವರ ಮಗನಾಗಿ ಸಂತೋಷ್ ಹೆಗ್ಡೆಯವರು ಹುಟ್ಟಿರುವುದು ಈ ಮಣ್ಣಿನ ಪುಣ್ಯ ವಿಶೇಷ – ಎಂದರೆ ಅತಿಶಯೋಕ್ತಿಯಾಗಲಾರದು. ಕಾನೂನಲ್ಲಿರುವುದನ್ನು ಮಾತ್ರ ನಾನು ನಿರ್ವಹಿಸುತ್ತೇನೆ. ಅದರ ಹೊರತಾಗಿ ನಾನೇನೂ ಮಾಡುವುದಿಲ್ಲ. ಈ ಕಾರಣಕ್ಕಾಗಿ ಯಾರ ವಿರೋಧ ಎದುರಾದರೂ ಚಿಂತೆಯಿಲ್ಲ. ಈ ಹುದ್ದೆಯಿಂದ ನಾನೇನೂ ಸಂಪಾದನೆ ಮಾಡಬೇಕಾಗಿಲ್ಲ. ಸಮಾಜದಲ್ಲಿ ನೊಂದವರಿಗೆ, ಶೋಷಿತರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುವುದೇ ನನ್ನ ಗುರಿ. ಹಿಂದಿನ ಹುದ್ದೆಗಳ ನಿರ್ವಹಣೆಯಿಂದ ಗಳಿಸಿರುವ ಹಣ ಸಾಕು ಎಂದು ಹೇಳುವ ಸಂತೋಷ್ ಹೆಗ್ಡೆಯವರು ಆತ್ಮಸ್ಥೆ ರ್ಯದ, ಆತ್ಮ ತೃಪ್ತಿಯ ಬದುಕು ನಿಜಕ್ಕೂ ಇತರರಿಗೆ ಮಾದರಿಯಾಗಿದೆ. ಮಾತ್ರವಲ್ಲ, ಅಧಿಕಾರಿಯಾಗುವುದೇ ಹಣ ಮಾಡುವುದಕ್ಕಾಗಿ ಎಂಬ ಮನೋಭಾವ ಹೊಂದಿರುವ ಭ್ರಷ್ಟ ಅಧಿಕಾರಿಗಳು ನಾಚುವಂತಿದೆ.

ಕೆ.ಎಸ್. ಹೆಗ್ಡೆ ಹಾಗೂ ಮೀನಾಕ್ಷಿ ಹೆಗ್ಡೆ ದಂಪತಿಯ 6 ಜನ ಮಕ್ಕಳಲ್ಲಿ ಮೂವರು ಪುತ್ರಿಯರು. ಅವರ ಮಗಳು ನಿರ್ಮಲಾ ಅಡ್ಯಂತಾಯ ಪ್ರಸ್ತುತ ಮುಂಬಯಿಯಲ್ಲಿ ವಾಸವಾಗಿದ್ದಾರೆ. ಆಶಾ ಅಜಿಲ ಹಾಗೂ ಉಷಾ ಪೂಂಜ ಅವರು ಅವಳಿ ಸಹೋದರಿಯರು. ಅಮೇರಿಕದಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿದ್ದ ಉಷಾ ಪೂಂಜ ಅವರು ಅನಾರೋಗ್ಯದಿಂದಾಗಿ ಇಹಲೋಕದಿಂದ ದೂರವಾಗಿದ್ದಾರೆ. ಆದರೂ ಅವರ ಹೆಸರಿನಲ್ಲಿರುವ ‘ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್, ಮಂಗಳೂರು’ ಸಂಸ್ಥೆಯು ಪ್ರತಿದಿನವೂ ನಮಗೆ ಅವರನ್ನು ನೆನಪಿಸುತ್ತಿದೆ. ಆಶಾ ಅಜಿಲ ಅವರು ಹೊರದೇಶದಲ್ಲಿದ್ದುಕೊಂಡು ಅನೇಕ ಮಹಿಳಾ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದವರು. ತಮ್ಮ ಪತಿಯ ನಿಧನದ ಬಳಿಕ ಇದೀಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಶಿಕ್ಷಣದ ಬಗೆಗೆ ಸಾಕಷ್ಟು ಕಾಳಜಿ ಹೊಂದಿದ್ದ, ಬಹಳಷ್ಟು ಪ್ರಾಮುಖ್ಯತೆ ನೀಡಿದ್ದ ಕೌಡೂರು ಸದಾನಂದ ಹೆಗ್ಡೆಯವರ ಮಕ್ಕಳು – ಮೊಮ್ಮಕ್ಕಳೂ ಸೇರಿದಂತೆ ಇಡೀ ಕುಟುಂಬ ವಿದ್ಯಾವಂತ ಕುಟುಂಬ. ಹೀಗಾಗಿ ಕೆ.ಎಸ್. ಹೆಗ್ಡೆಯವರ ಪರಂಪರೆಯ ಮುನ್ನಡೆ ಈ ನಾಡಿಗೆ ಮಾದರಿಯೆನ್ನಿಸಿದೆ.

ತ್ಯಾಗಮಯೀ ಮಾತೆ – ಮೀನಾಕ್ಷಿ ಹೆಗ್ಡೆಯವರು

ಭಾರತೀಯ ಸಂಸ್ಕೃತಿ ಭವ್ಯ, ದಿವ್ಯ ಅನ್ನುವವರೆಲ್ಲ ಅದು ಉಳಿಯುವುದೂ ಬೆಳೆಯುವುದೂ ಸ್ತ್ರೀಯರಿಂದ ಅನ್ನುತ್ತಾರೆ. ಇದು ಅಕ್ಷರಶಃ ಸತ್ಯ. ‘ಒಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬಳು ಸ್ತ್ರೀ ಖಂಡಿತವಾಗಿಯೂ ಇರುತ್ತಾಳೆ’ ಎಂದು ನಮ್ಮ ಹಿರಿಯರು ಹೇಳಿರುವ ಮಾತನ್ನು ನಾವು ಖಂಡಿತವಾಗಿ ಒಪ್ಪಲೇಬೇಕು. ಕೆ.ಎಸ್. ಹೆಗ್ಡೆಯವರ ಎಲ್ಲ ಸಾಧನೆಗಳ ಹಿಂದೆ ಅವರ ಪತ್ನಿ ಮೀನಾಕ್ಷಿ ಹೆಗ್ಡೆಯವರ ಬಹುದೊಡ್ಡ ತ್ಯಾಗವಿದೆ ಎಂಬುದನ್ನು ನಾವೆಂದೂ ಮರೆಯಲಾಗದು. ತನ್ನ ಗಂಡನ ಪ್ರತಿಯೊಂದು ಯೋಚನೆ – ಯೋಜನೆಗಳ ಸ್ಫೂರ್ತಿಯಾಗಿದ್ದುಕೊಂಡು, ಜೀವನದಲ್ಲಿ ಅವರ ನೆರಳಿನಂತೆ ಹಿಂಬಾಲಿಸಿದರು.

ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತು, ‘ಅತಿಥಿ ದೇವೋಭವ’ ಎಂಬುದನ್ನು ತಿಳಿದು – ಮನೆಗೆ ಬರುವ ಅತಿಥಿಗಳನ್ನು, ಕೆ.ಎಸ್. ಹೆಗ್ಡೆಯವರ ಸ್ನೇಹಿತರನ್ನು ಆದರದಿಂದ ಸತ್ಕರಿಸಿದರು. ತನ್ನ ಅಕ್ಕಪಕ್ಕದವರ (ನೆರೆಹೊರೆಯವರ) ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿದರು. ತಾನು ಉಣ್ಣುವುದರ ಜೊತೆಯಲ್ಲಿ ಕಷ್ಟದಲ್ಲಿದ್ದವರಿಗೆ – ಬಡವರಿಗೆ ಉಣಬಡಿಸುತ್ತಿದ್ದರು, ಸಹಕರಿಸುತ್ತಿದ್ದರು. ಇವರ ಬಳಿಗೆ ಸಹಾಯ ಕೇಳಿ ಬಂದ ಯಾವನೇ ಆಗಲಿ, ಬರಿಗೈಯಲ್ಲಿ ಹಿಂದಿರುಗುತ್ತಿರಲಿಲ್ಲ. ಈ ಕಾರಣದಿಂದಾಗಿಯೇ ಅವರು ಊರವರ ಮಾತೆಯಾಗಿದ್ದರು. ತನ್ನ ಮಕ್ಕಳನ್ನು ಜವಾಬ್ದಾರಿಯಿಂದ ಬೆಳೆಸಿ, ಸಮಾಜದ ಜನ ಅವರನ್ನು ಗುರುತಿಸುವಂತಹ ವ್ಯಕ್ತಿಗಳನ್ನಾಗಿ ರೂಪಿಸಿದರು. ಮಕ್ಕಳೆಲ್ಲರೂ ಅಮ್ಮನ ಜೊತೆ ಹೆಚ್ಚು ಸಲುಗೆಯಿಂದ ಇರುತ್ತಿದ್ದರು. ಅಪ್ಪನನ್ನು ಕಂಡರೆ ಅವರಿಗೆಲ್ಲ ಭಯಮಿಶ್ರಿತ ಗೌರವವಿತ್ತು.

ಕೆ.ಎಸ್. ಹೆಗ್ಡೆಯವರನ್ನು ಹತ್ತಿರದಿಂದ ಕಂಡು ಮಾತನಾಡುವ ಅವಕಾಶ ನನಗೆ ಯಾವತ್ತೂ ಸಿಕ್ಕಿರಲಿಲ್ಲ. ಆದರೆ ಮೀನಾಕ್ಷಿ ಹೆಗ್ಡೆಯವರ ಸ್ಪರ್ಶದ ಹರುಷವನ್ನು ನಾನೆಂದೂ ಮರೆಯುವಂತಿಲ್ಲ. 1995ರಲ್ಲಿ ನಾನು ನಿಟ್ಟೆ ವಿದ್ಯಾಸಂಸ್ಥೆಯಲ್ಲಿಯೇ ದುಡಿಯುತ್ತಿದ್ದ ಸಂದರ್ಭದಲ್ಲಿ ಮೀನಾಕ್ಷಿ ಹೆಗ್ಡೆಯವರನ್ನು ಕಾಣುವುದಕ್ಕಾಗಿ ನಿಟ್ಟೆಯಲ್ಲಿನ ಅವರ ಮನೆಗೆ ಹೋಗಿದ್ದೆ. ಬಾಗಿಲು ತೆರೆಯುತ್ತಿದ್ದಂತೆ ನನಗೆ ಬಿಳಿಸೀರೆಯುಟ್ಟಿದ್ದ ಮೀನಾಕ್ಷಿ ಹೆಗ್ಡೆಯವರ ನಗುಮೊಗದ ದರ್ಶನವಾಯಿತು. ತಕ್ಷಣ ನನಗೆ ನೆನಪಾಗಿದ್ದು ಇಡೀ ಜಗತ್ತಿನ ಮಾತೆ – ಮದರ್ ಥೆರೆಸಾ ಅವರು. ಮೀನಾಕ್ಷಿ ಹೆಗ್ಡೆಯವರಿಗೆ ನನ್ನನ್ನು ನಾನು ಪರಿಚಯಿಸಿಕೊಂಡೆ. ಕೆ.ಎಸ್. ಹೆಗ್ಡೆಯವರ ಕುರಿತು ನಾನು ‘ಮುಂಗಾರು’ ದೈನಿಕದಲ್ಲಿ ಬರೆದಿದ್ದ ಲೇಖನವನ್ನು ಓದಿ ಹೇಳುವಂತೆ ನನ್ನಲ್ಲಿ ಕೇಳಿಕೊಂಡರು. ಲೇಖನ ಓದಿ ಮುಗಿಸುತ್ತಿದ್ದಂತೆ ನನ್ನನ್ನು ಬಿಗಿದಪ್ಪಿಕೊಂಡರು. ಕೆನ್ನೆಗಳ ತುಂಬ ಲೆಕ್ಕವಿಲ್ಲದಷ್ಟು ಸಿಹಿಮುತ್ತುಗಳನ್ನು ಕೊಟ್ಟರು. ನಿರೀಕ್ಷಿಸದೆ ಇದ್ದ ಈ ಸ್ಪರ್ಶದ ಅನುಭವ ನಾನೆಂದೂ ಮರೆಯಲಾಗದಂಥದ್ದು! ಮೊತ್ತಮೊದಲ ಬಾರಿಗೆ ಭೇಟಿಯಾದ ನನ್ನನ್ನೇ ಇಷ್ಟು ಪ್ರೀತಿಸುತ್ತಿರಬೇಕಾದರೆ – ತನ್ನ ಅಕ್ಕಪಕ್ಕದ ಜನರನ್ನು ಅವರೆಷ್ಟು ಪ್ರೀತಿಯಿಂದ ಕಂಡಿರಲಿಕ್ಕಿಲ್ಲ? ಅನ್ನುವ ಪ್ರಶ್ನೆ ನನ್ನನ್ನು ಆಗಲೇ ಕಾಡಿತ್ತು.

ಕಾಪಿ – ತಿಂಡಿ, ಕೊನೆಗೆ ಊಟ ಎಲ್ಲವನ್ನೂ ಮುಗಿಸಿ – ಸಾಯಂಕಾಲದ ಹೊತ್ತಿಗೆ ನಾನು ಅವರ ಮನೆಯಿಂದ ಹಿಂತಿರುಗಿ ಬಂದಿದ್ದೆ. ಅವರುಟ್ಟ ಬಿಳಿಯ ಸೀರೆಯಷ್ಟೇ ಅವರ ಮನೆ – ಮನಸ್ಸು ಎಲ್ಲವೂ ಶುಭ್ರವಾಗಿತ್ತು. ಇಂಥ ನಿಷ್ಕಲ್ಮಶ ಹೃದಯದ ಮಾತೆ ತನ್ನ ಸ್ವಾರ್ಥವೆಲ್ಲವನ್ನು ಕಳಚಿ, ಗಂಡನ ಧ್ಯೇಯ – ಧೋರಣೆಗಳನ್ನು ಗೌರವಿಸಿ ಪ್ರೋತ್ಸಾಹಿಸಿದವರು. ಹೀಗಾಗಿಯೇ ಕೆ.ಎಸ್. ಹೆಗ್ಡೆಯವರು ಬಹು ಎತ್ತರದ ಸ್ಥಾನಕ್ಕೇರಿ ಬಹುಮಾನ್ಯರಾದವರು. ಕೆ.ಎಸ್. ಹೆಗ್ಡೆಯವರ ಸಾಧನೆಯ ಹಿಂದೆ ಅವರ ಪತ್ನಿ ಮೀನಾಕ್ಷಿ ಹೆಗ್ಡೆಯವರ ಬಹುದೊಡ್ಡ ತ್ಯಾಗವಿದೆ ಎಂಬುದನ್ನು ನಾವು ಮರೆಯಬಾರದು.

ಪರೋಪಕಾರಾರ್ಥಂ ಇದಂ ಶರೀರಂ ಎನ್ನುವಂತೆ ಪರರ ಉಪಕಾರಕ್ಕಾಗಿಯೇ ತನ್ನ ಜೀವವನ್ನು ಸವೆಸಿದವರು ಮೀನಾಕ್ಷಿ ಹೆಗ್ಡೆಯವರು. ತಮ್ಮ ಆರು ಜನ ಮಕ್ಕಳಿಗೂ ಪರೋಪಕಾರವೇ ಬದುಕಿನ ದೊಡ್ಡ ಆಸ್ತಿ ಎಂಬ ಪಾಠವನ್ನು ಕಲಿಸಿದವರು. ಪ್ರೀತಿ ಬೆಂದ ಬಾಳಿಗೆ ಸಮಾಧಾನ ನೀಡುತ್ತದೆ, ಉದ್ವಿಗ್ನತೆಗೆ ಸಾಂತ್ವನ ನೀಡುತ್ತದೆ. ನಿರಾಶೆಯ ಮುಗಿಲುಗಳನ್ನು ದೂರ ಸರಿಸಿ ಆಶೆಯ ಹೊಂಗಿರಣ ಮೂಡಿಸುತ್ತದೆ. ಪ್ರೀತಿಸುವುದು ಬದುಕಿನ ಚೆಲುವನ್ನು ಇಮ್ಮಡಿಗೊಳಿಸುತ್ತದೆ ಎಂಬ ಸತ್ಯವನ್ನರಿತು ತನ್ನ ಸುತ್ತಣ ಜನರನ್ನೆಲ್ಲ ಪ್ರೀತಿಯಿಂದ ಕಂಡವರು. ಹೆತ್ತ ಮಕ್ಕಳಿಗಷ್ಟೇ ಅಲ್ಲದೆ, ಸುತ್ತಮುತ್ತಲ ಜನರಿಗೆಲ್ಲ ಅಮ್ಮನಾದವರು. ಈ ಮಾತೃ ಹೃದಯದ ವಾತ್ಸಲ್ಯವನ್ನುಂಡವರು ಈಗಲೂ ಆಗಾಗ ಅಮ್ಮನನ್ನು ನೆನೆಸಿಕೊಳ್ಳುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ; ಕಿವಿಯಾರೆ ಕೇಳಿದ್ದೇನೆ.

ದೀನಾನಾಂ ಸ್ವಗುಣ ಫಲನತಃ ಸಜ್ಜನಾನಾಂ ಕುಟುಂಬೀ
ಆದರ್ಶಃ ರಕ್ಷಿತಾನಾಂ ಸುಚರಿತನಿಕಷಃ ಶೀಲವೇಲಾ ಸಮುದ್ರಃ
ಸತ್ಕರ್ತಾ ನಾವ ಮಂತಾ ಪುರುಷ ಗುಣನಿದಿರ್ದಕ್ಷಿಣೋದಾರ ಸತ್ತವಂ
ಹ್ಯೇಕಃ ಶ್ಲಾಘ್ಯಃ ಸಜೀವತ್ಯದಿಕ ಗುಣತಯಾ ಚೋಚ್ಛವಸಂತೀವ ಚಾನ್ಯೇ

ಬಡವರಿಗೆ ಕಲ್ಪವೃಕ್ಷದಂತೆ ಸಹಾಯ ಮಾಡುವವನು, ತನ್ನ ಒಳ್ಳೆಯ ಗುಣಗಳೆಂಬ ಹಣ್ಣಿನ ಭಾರದಿಂದ ಬಾಗಿದವನು, ಸಜ್ಜನರಿಂದಾದ ಕುಟುಂಬವುಳ್ಳವನು, ಎಲ್ಲರನ್ನೂ ಸತ್ಕರಿಸುವವನು, ಯಾರನ್ನೂ ಅವಮಾನಗೊಳಿಸದವನು, ಸತ್ಪುರುಷನಲ್ಲಿರಬೇಕಾದ ಎಲ್ಲ ಗುಣಗಳಿಗೂ ನಿದಿಯಾದವನು, ದಾಕ್ಷಿಣ್ಯ ಔದಾರ್ಯಗಳಿಂದ ಕೂಡಿದವನು ಮಾತ್ರ ನಿಜವಾದ ಬದುಕನ್ನು ಬಾಳುತ್ತಾನೆ. ಉಳಿದವರು ಸುಮ್ಮನೆ ಉಸಿರಾಡುತ್ತಾರೆ – ಎನ್ನುವಂತೆ ಮೀನಾಕ್ಷಿ ಹೆಗ್ಡೆಯವರು ನಿಜವಾದ ಬದುಕನ್ನು ಬಾಳಿದವರು. ಇಹಲೋಕದಿಂದ ಭೌತಿಕವಾಗಿ ದೂರವಾದರೂ ನಮ್ಮ ಮನದಂಗಳದಲ್ಲಿ ನಿತ್ಯ ನೂತನರಾಗಿದ್ದಾರೆ.

ಗ್ರಾಮಾಬಿವೃದ್ಧಿಯ ಕನಸು

‘ಗ್ರಾಮ’ವೆಂಬುದು ಒಂದು ರಾಷ್ಟ್ರದ ಬೆನ್ನೆಲುಬು. ಈ ಬೆನ್ನೆಲುಬು ಬಲಿಷ್ಠವಾಗಿದ್ದರೆ ಮಾತ್ರ ಒಂದು ಸದೃಢ ರಾಷ್ಟ್ರದ ನಿರ್ಮಾಣವಾಗಬಲ್ಲುದು ಎಂಬ ತಿಳಿವಳಿಕೆ ಕೆ.ಎಸ್. ಹೆಗ್ಡೆಯವರಲ್ಲಿತ್ತು. ಆದುದರಿಂದಾಗಿ ಸಮಾಜದ ಋಣ ತೀರಿಸಲು ಸಮಾಜಸೇವೆ ಮಾಡಬೇಕೆಂದುಕೊಂಡ ಅವರು ಅಭಿವೃದ್ಧಿಗೆ ಮುನ್ನ ಗ್ರಾಮದ – ‘ಬೇಕು’ಗಳ ಕುರಿತು ಮಾಹಿತಿ ಸಂಗ್ರಹಿಸಬೇಕೆಂಬ ಕನಸನ್ನು ಕಂಡು – ನನಸಾಗಿಸಲು ಯತ್ನಿಸಿದರು.

ಸುಪ್ರೀಂಕೋರ್ಟಿನ ನ್ಯಾಯಾಧೀಶರ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಕೆ.ಎಸ್. ಹೆಗ್ಡೆಯವರ ಚಿತ್ತ ಹರಿದದ್ದು ದಿಲ್ಲಿಯಿಂದ ಹಳ್ಳಿಗೆ. ನಿಟ್ಟೆಯಲ್ಲಿ ನೆಲೆನಿಂತ ಅವರು ಸುತ್ತ ಕಣ್ಣು ಹಾಯಿಸಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷವಾದರೂ ಗ್ರಾಮೀಣ ಅಭಿವೃದ್ಧಿ ಸಾಕಷ್ಟು ಆಗಿರಲಿಲ್ಲ. ಹೊರಗಣ್ಣಿನಿಂದ ನೋಡಿದರು; ಒಳಗಣ್ಣಿನಿಂದ ಚಿಂತಿಸಿದರು. ಮಾನ್ಯ ಹೆಗ್ಡೆಯವರು ಜನರ ಹತ್ತಿರ ಹೋದರು. ತನ್ನ ಹತ್ತಿರಕ್ಕೂ ಆತ್ಮೀಯತೆಯಿಂದ ಬರಮಾಡಿಕೊಂಡರು. ಸುಖ ಕಷ್ಟ ವಿಚಾರಿಸಿದರು. ಆಗ ತಿಳಿದುಬಂತು – ಸರಕಾರದ ಯೋಚನೆ – ಯೋಜನೆಗಳು ಜನಸಾಮಾನ್ಯರ ಬಳಿಗೆ ಬರಲೇ ಇಲ್ಲವೆಂದು. ಸರಿ; ಕಾರ್ಯಪ್ರವೃತ್ತರಾದರು. ಸರಕಾರದ ಎಲ್ಲ ಇಲಾಖೆಗಳ ಯೋಜನೆಗಳ ಮಾಹಿತಿಯನ್ನು ತರಿಸಿಕೊಂಡರು. ಜನರಿಗೆ ತಿಳಿಯಹೇಳಿದರು. ಯಾವತ್ತೂ ಯೋಜನೆಯ ಪ್ರಯೋಜನ ಪಡೆಯುವುದು ಜನರ ಹಕ್ಕು ಎಂಬುದನ್ನು ತೋರಿಸಿಕೊಟ್ಟರು. ಈ ಯೋಚನೆ – ಯೋಜನೆಗಳ ಮಾಹಿತಿಕೋಶವಾಗಿ ‘ಮಾಹಿತಿ ದರ್ಪಣ’ ಪ್ರಕಟವಾಯಿತು. 2009 ಕೆ.ಎಸ್. ಹೆಗ್ಡೆಯವರ ಜನ್ಮಶತಾಬ್ದ ಆಚರಣೆಯ ಸಂದರ್ಭದಲ್ಲಿ ಇದನ್ನು ಹೊರ ತರಲಾಯಿತು.

ಸ್ವಾತಂತ್ರ್ಯವಿರುವುದೇ ಸ್ವತಂತ್ರವಾಗಿ, ಸಶಕ್ತವಾಗಿ ಬದುಕುವುದಕ್ಕೆ. ಅದರಲ್ಲೂ ನಮ್ಮದು ಬಹುದೊಡ್ಡ ಪ್ರಜಾಪ್ರಭುತ್ವ. ಸರಕಾರ ಕಾಲ ಕಾಲಕ್ಕೆ ಜನಹಿತಕಾರಿಯಾದ ಯೋಜನೆಗಳನ್ನು ಕೈಗೊಳ್ಳುತ್ತದೆ. ಈ ಯೋಜನೆಯ ಅನುಷ್ಠಾನಕ್ಕೆ ವಿವಿಧ ಇಲಾಖೆಗಳಿರುತ್ತವೆ. ತಮ್ಮ ಹೆಸರಿನ ದೊಡ್ಡ ದೊಡ್ಡ ನಾಮಫಲಕಗಳನ್ನು ತೂಗು ಹಾಕಿಕೊಂಡಿರುವ ಇಲಾಖೆಗಳು ನಿಷ್ಕ್ರಿಯವಾಗಿರುತ್ತವೆ. ತಮ್ಮ ಬಳಿಗೆ ಬರುವವರಿಗೆ, ತಮ್ಮನ್ನು ನೋಡಿಕೊಳ್ಳುವವರಿಗೆ ನೆರವಾಗುತ್ತವೆ. ಎಲ್ಲೋ ಕೆಲವರು ಯೋಜನೆಗಳ ಪೂರ್ಣ ಪ್ರಯೋಜನ ಪಡೆಯುತ್ತಾರೆ. ಗ್ರಾಮೀಣ ಪ್ರದೇಶದ ಜನ ಇದ್ದಂತೆಯೇ ಇದ್ದಲ್ಲಿಯೇ ಇರುತ್ತಾರೆ. ಗ್ರಾಮೀಣರ ಮನೆ ತಲುಪುವ ಮುನ್ನವೇ ಅದೆಷ್ಟೋ ಯೋಜನೆಗಳು ಸೋರಿಹೋಗುತ್ತವೆ. ಈ ನಗ್ನಸತ್ಯವನ್ನು ಕಂಡ ಹೆಗ್ಡೆಯವರು ಸರಕಾರದ ಎಲ್ಲ ಯೋಜನೆಗಳನ್ನು ಎಲ್ಲರ ಮನೆಯ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಿದರು.

ಈ ‘ಮಾಹಿತಿ ದರ್ಪಣ’ದಲ್ಲಿ ಏನುಂಟು, ಏನಿಲ್ಲ? ಸರಕಾರದ ಮೂವತ್ತು ಇಲಾಖೆಗಳ, ವಿವಿಧ ಯೋಜನೆಗಳ, ಅವುಗಳನ್ನು ಪಡೆಯುವ ವಿಧಾನದ, ಅರ್ಹತೆಯ ಪೂರ್ಣ ಮಾಹಿತಿ ಇಲ್ಲಿದೆ. ಪ್ರಾಯಶಃ ಯಾವ ಇಲಾಖೆಯ ಕಚೇರಿಗೆ ಹೋದರೂ ಇಷ್ಟೊಂದು ಮಾಹಿತಿ ಸುಲಭವಾಗಿ ಸಿಗಲಾರದು; ಇಲಾಖಾ ಅಧಿಕಾರಿಗಳೂ ಹೇಳಲಾರರು.  ಈ ‘ಮಾಹಿತಿ ದರ್ಪಣ’ದಲ್ಲಿ  ಕಾಲ ಕಾಲಕ್ಕೆ ರೂಪುಗೊಂಡ ಎಲ್ಲ ಯೋಜನೆಗಳ ಸರಿಯಾದ ಮಾಹಿತಿಯಿದೆ. ಇದನ್ನು ಜನಕ್ಕೆ ಮುಟ್ಟಿಸಿದವರೇ ಹೆಗ್ಡೆಯವರು. ಅವರು ಕೇವಲ ಮಾಹಿತಿಯನ್ನು ಮುಟ್ಟಿಸಿ ಸುಮ್ಮನಾಗಲಿಲ್ಲ. ಸೌಲಭ್ಯ ಸಿಗುವವರೆಗೆ ನೆರವಾದರು. ತನ್ನ ಅಳಿಲ ಸೇವೆಯನ್ನು ಸಮಾಜಕ್ಕೆ ಸಲ್ಲಿಸಿದರು. ಇದರೊಂದಿಗೆ ವೈಯಕ್ತಿಕವಾಗಿಯೂ ಗ್ರಾಮೀಣ ಅಭಿವೃದ್ಧಿಗೆ ನೆರವಾದರು. ಇವುಗಳಲ್ಲಿ ಶಿಕ್ಷಣ, ವೈದ್ಯಕೀಯ ನೆರವು, ನೀರಾವರಿ ಸೌಲಭ್ಯ ಮುಖ್ಯವಾದವುಗಳು. ಇದರೊಂದಿಗೆ ಹೆಗ್ಡೆಯವರಲ್ಲಿ ಸಂಸ್ಕೃತಿಯ ಚಿಂತನೆಯೂ ಇತ್ತು.

ಎಲ್ಲಿ ಸಂಕಲ್ಪದ ಶುದ್ಧಿಯಿರುತ್ತದೋ ಅಲ್ಲಿ ಸಂಕಲ್ಪದ ಸಿದ್ಧಿಯಿರುತ್ತದೆ. ಈ ಶುದ್ಧಿಯಿಂದಾಗಿಯೇ ಮಾನ್ಯ ಹೆಗ್ಡೆಯವರು ಬೀಜಕ್ಷೇಪ ಮಾಡಿದ ನಿಟ್ಟೆ ವಿದ್ಯಾಸಂಸ್ಥೆಯಿಂದು ಹೆಮ್ಮರವಾಗಿ ಬೆಳೆದುನಿಂತು ಸತ್ಫಲವನ್ನು ನೀಡುತ್ತಿದೆ. ಇದರ ಹಿಂದೆ ಕೆ.ಎಸ್. ಹೆಗ್ಡೆಯವರ ಪುತ್ರ ಮಾನ್ಯ ಎನ್. ವಿನಯ ಹೆಗ್ಡೆಯವರ ಕ್ರತುಶಕ್ತಿಯಿದೆ; ತಿಳಿಗಣ್ಣಿನ ಚಿಂತನೆಯಿದೆ. ಬಂಧುಗಳ ಬೆಂಬಲವಿದೆ; ಮುಂಬಲವಿದೆ. ಹೀಗಾಗಿಯೇ ನಿಟ್ಟೆ ವಿದ್ಯಾ ಸಂಸ್ಥೆಯಿಂದು ಮಂಗಳೂರು – ಬೆಂಗಳೂರು ಹಾಗೂ ನಿಟ್ಟೆಯೂ ಸೇರಿದಂತೆ 24 ಶಿಕ್ಷಣ ಸಂಸ್ಥೆಗಳನ್ನು ಹಾಗೂ ಹದಿನೇಳು ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ಹೊಂದಿದ್ದು, ದೇಶಾದ್ಯಂತ ಹೆಸರು ಮಾಡಿದೆ. ಹುಟ್ಟಿದ ಮಗುವೊಂದು ಮೂರು ವರ್ಷದಿಂದ ಆರಂಭಿಸಿ – ತನ್ನ ಪೂರ್ಣ ವಿದ್ಯಾಭ್ಯಾಸವನ್ನು ಪೂರೈಸುವವರೆಗೂ ಕಲಿಯಲು ಇಲ್ಲಿ ವಿಪುಲ ಅವಕಾಶವಿದೆ.