ರಾಯರ ಚಿಂತನಶೀಲ ದುಡಿಮೆ ಮತ್ತು ಕೃಷಿಯನ್ನು ಬದುಕುವ ರೀತಿಯನ್ನಾಗಿ ಸ್ವೀಕರಿಸಿದ ಮನೋಭಾವ ಕೃಷಿಕರನ್ನೂ, ಕೃಷಿಕರಲ್ಲದವರನ್ನೂ ಆಕರ್ಷಿಸಿಸಿತ್ತು. ಕೃಷಿ ಲಾಭದಾಯಕವಲ್ಲ ಇದರಲ್ಲಿ ತೃಪ್ತಿಯ ಜೀವನ ಕಂಡುಕೊಳ್ಳಲು ಸಾಧ್ಯವಿಲ್ಲವೆಂದು ನಿರ್ಧರಿಸಿದವರ ಸಂಖ್ಯೆ ಅಧಿಕ. ಅದರ ಪರಿಣಾಮ, ಸ್ವಾತಂತ್ರ್ಯ ಪೂರ್ವದಲ್ಲಿ 80%ರಷ್ಟಿದ್ದ ಕೃಷಿಕರ ಸಂಖ್ಯೆ ಈಗ 60%ಗಿಂತಲೂ ಕಡಿಮೆಯಾಗಿದೆ. ನಗರದ ಆಕರ್ಷಣೆಗೆ ಒಳಗಾಗಿ ಹಳ್ಳಿಯ ಫಲವತ್ತಾದ ಭೂಮಿಯನ್ನು ಮಾರಾಟ ಮಾಡಿ ನಗರದ ಕಡೆಗೆ ವಲಸೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಲ್ಲಿ ಸರಕಾರದ ಕೊಡುಗೆಯೂ ಸಾಕಷ್ಟಿದೆ. ನಗರದ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯೆಂದು ಪರಿಗಣಿಸಿ ನಗರಗಳನ್ನು ಬೆಳೆಯಲು ಬಿಟ್ಟದ್ದಲ್ಲದೆ, ಕೃಷಿಕರ ಉತ್ಪಾದನೆಗೆ ಸೂಕ್ತ ಬೆಲೆ ಸಿಗುವಂತೆ ನೋಡಿಕೊಳ್ಳುತ್ತಿಲ್ಲ. ರೈತರು ಗಲಾಟೆ ಮಾಡಿದಾಗ, ಸಾಲ ವಿನಾಯಿತಿ, ಬೆಂಬಲ ಬೆಲೆ ಮುಂತಾದ ತಾತ್ಕಾಲಿಕ ಕ್ರಮಗಳನ್ನು ಕೈಗೊಂಡು ಕಣ್ಣೊರೆಸುವ ಕೆಲಸ ಮಾಡಿ ಸಮಸ್ಯೆಗೆ ಪರಿಹಾರವಿಲ್ಲದಂತೆ ಮಾಡಲಾಗುತ್ತಿದೆ.

ರಾಯರಿಗೆ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಯನ್ನು ಅವರ ಇಳಿ ವಯಸ್ಸಿನಲ್ಲಿ ಅರ್ಜಿ ಹಾಕಿದ ಮೇಲೆ ನೀಡಲು ನಿರ್ಧರಿಸಿಲಾಗಿತ್ತು. ಅದನ್ನು ಕೊಡಲು ಎರಡು ವರ್ಷ ಕಾಯಿಸಿ, ನಂತರ ಮನೆಗೆ ಸದ್ದಿಲ್ಲದೆ ಬಂದು ಕೊಡುವ ಶಾಸ್ತ್ರ ಮಾಡಲಾಯಿತು. ರಾಯರಿಗೆ ಪ್ರಶಸ್ತಿಗಳ ಮೇಲೆ ಆಸಕ್ತಿಯೂ ಇರಲಿಲ್ಲ. ಆದರೆ ದೇಶದ ಬಡಜನರ ಉದ್ಧಾರವನ್ನು ಕೃಷಿ ಮೂಲಕ ಮಾಡಲು ಸಾಧ್ಯವೆನ್ನುವುದನ್ನು ತನ್ನ ಕಾಯಕದ ಮೂಲಕ ಸಾಧಿಸಿ ತೋರಿಸಿದ ವ್ಯಕ್ತಿಯನ್ನು ಸರಕಾರ ಸರಿಯಾದ ರೀತಿಯಲ್ಲಿ ಗೌರವಿಸಿದ್ದರೆ, ಸರಕಾರದ ಗೌರವ ಹೆಚ್ಚುತ್ತಿತ್ತು. ಅರ್ಜಿ ಹಾಕಿ ಪ್ರಶಸ್ತಿ ನೀಡುವ ಪ್ರಕ್ರಿಯೆ ಅತ್ಯಂತ ಕಳಪೆ ಪದ್ಧತಿ. ಕೃಷಿ ಇಲಾಖೆಯಲ್ಲಿ ಗ್ರಾಮ ಮಟ್ಟದಿಂದ ಹಿಡಿದು, ರಾಜ್ಯದ ರಾಜಧಾನಿಯಲ್ಲಿರುವ ಕೇಂದ್ರ ಕಛೇರಿಯ ತನಕ ವಿವಿಧ ಹಂತದಲ್ಲಿ ಪಧವೀದರರು, ಕೃಷಿ ವಿಜ್ಞಾನಿಗಳು, ನಾಗರೀಕ ಸೇವೆಯಲ್ಲಿ ತೇರ್ಗಡೆಯಾದವರು ಇದ್ದಾರೆ. ಇವರಿಗೆಲ್ಲಾ ಪ್ರತಿ ತಿಂಗಳು ಸಂಬಳ ಮಾತ್ರವಲ್ಲ, ನಿವೃತ್ತಿಯಾದ ನಂತರ ಪಿಂಚಣಿ ಸಿಗುತ್ತದೆ. ಕೃಷಿಕರಿಂದಾಗಿ ಇಷ್ಟು ಸೌಲಭ್ಯ ಪಡೆಯುವವರಲ್ಲಿ ಅವರವರ ಕಾರ್ಯವ್ಯಾಪ್ತಿಯಲ್ಲಿರುವ ಕೃಷಿಕರ ಬಗ್ಗೆ ಎಲ್ಲಾ ಮಾಹಿತಿ ಇರುತ್ತದೆ / ಇರಬೇಕು. ಇವರಿಗೆ ಕೃಷಿ ಪ್ರಶಸ್ತಿಗೆ ಆಯ್ಕೆ ಮಾಡುವ ಜವಾಬ್ದಾರಿ ಹೊರಲು ಯಾವ ರೀತಿಯ ಸಮಸ್ಯೆ ಕಾಡುತ್ತದೆ ಎಂಬುದು ಗೊತ್ತಾಗುವುದಿಲ್ಲ. ಪ್ರಶಸ್ತಿ ಪ್ರಕಟಿಸಿದ ಮೇಲೆ ಕೂಡಲೇ ಪ್ರದಾನ ಮಾಡಿದರೆ ಅದಕ್ಕೊಂದು ಗೌರವ. ಸಮಾಜದ ಅನ್ನದಾತನ ವಿಷಯದಲ್ಲಿ ಇಂತಹ ಅವಮಾನ, ಅವಹೇಳನ ಸರಕಾರಕ್ಕೆ / ಇಲಾಖೆಗೆ ಶೋಭೆ ತರುವಂಥದ್ದಲ್ಲ.

ಪ್ರತಿವರ್ಷ ಸಾವಿರಾರು ಜನ ರೈತರು ಇವರ ಕರ್ಮಭೂಮಿಯನ್ನು ಸಂದರ್ಶಿಸಿ ಮಾಹಿತಿ ಪಡೆದು ಹೊಸ ಚೈತನ್ಯದೊಂದಿಗೆ ಮರಳಿದ್ದಾರೆ. ಹಲವಾರು ಜನ ಅವರಿಂದ ಸ್ಫೂರ್ತಿ ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಇದು ರಾಯರಿಗೆ ಸಂದ ಅತ್ಯುನ್ನತ ಸನ್ಮಾನವಾಗಿತ್ತು. ಆಸಕ್ತರು ಇವರ ಕರ್ಮಭೂಮಿಯನ್ನು ಸಂದರ್ಶಿಸಲು ಬಂದಾಗ, ತನ್ನ ಇಳಿ ವಯಸ್ಸಿನಲ್ಲಿಯೂ ತರುಣರಾಗಿ, ತನ್ನೆಲ್ಲಾ ಅನುಭವಗಳನ್ನು ಯಾವ ಅಪೇಕ್ಷೆಯಿಲ್ಲದೆ ವರ್ಗಾಯಿಸುತ್ತಿದ್ದರು. ಇವರ ಸಾಧನೆಯ ವಿವರಗಳು ಮುದ್ರಣ ಮಾಧ್ಯಮದಲ್ಲಿ ಅವಿರತವಾಗಿ ಬರುತ್ತಿತ್ತು. ರಾಯರನ್ನು ಭೇಟಿಯಾಗದೆಯೇ ಸಾವಿರಾರು ಜನರು ಪ್ರೇರಿತರಾಗಿದ್ದಾರೆ. ದೇಹದಲ್ಲಿ ಶಕ್ತಿಯಿರುವಾಗ ರಾಜ್ಯದ ವಿವಿಧೆಡೆಯಿಂದ ಕರೆ ಬಂದಾಗ ಅಲ್ಲಿಗೆ ಹೋಗಿ ಮಾಹಿತಿ ನೀಡಿದ್ದಾರೆ. ಅವರನ್ನು ಗೌರವಿಸಿ ಸನ್ಮಾನಿಸಿದವರ ಸಂಖ್ಯೆಯೂ ಬಹಳ. ಯಾವುದಕ್ಕೂ ರಾಯರು ಲೆಕ್ಕವಿಟ್ಟಿಲ್ಲ.