ಅನುಬಂಧ 1

ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡ ರಾಯರ ವಿಚಾರಗಳು
ಚೇರ್ಕಾಡಿ ಟೆಕ್ನಿಕ್ ಮತ್ತು ರಾಮಚಂದ್ರರಾಯರು
(ಕೋ.ಮ.ಕಾರಂತ-ಕಸ್ತೂರಿ ಮಾಸಪತ್ರಿಕೆ – ಫೆಬ್ರವರಿ 1996)

ರಾಮಚಂದ್ರರಾಯರು ಬ್ರಹ್ಮಾವರದಿಂದ ಐದು ಮೈಲು ಪೂರ್ವಕ್ಕಿರುವ ಆರೂರು ಗ್ರಾಮದವರು. ಅವರ ವ್ಯವಸಾಯ ವಿಧಾನಕ್ಕೆ ಚೇರ್ಕಾಡಿ ಪದ್ಧತಿ ಎಂದು ಹೆಸರು ಬಂದಿರುವುದು ಕೇವಲ ಆಕಸ್ಮಿಕ. ಚೇರ್ಕಾಡಿ ಮತ್ತು ಆರೂರು ಗ್ರಾಮಗಳ ಗಡಿಯಲ್ಲಿ ಅವರ ಮನೆ. ಚೇರ್ಕಾಡಿ ಪೇಟೆಗೆ ಹತ್ತಿರ ಅವರ ಇರವು. ಒಬ್ಬರು ಚೇರ್ಕಾಡಿ ಪದ್ಧತಿ ಎಂದು ಕರೆದರು. ಆಮೇಲೆ ಅದು ಹಾಗೆ ಉಳಿಯಿತು. ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಗಿಂತ ಒಂದೂವರೆ ಇಂಚು ಹೆಚ್ಚು ಎತ್ತರ, ಸುಮಾರು 120 ಪೌಂಡು ತೂಗುವ ನಲವತ್ತೆಂಟು ವರ್ಷ ಪ್ರಾಯದ ರಾಮಚಂದ್ರರಾಯರಿಗೆ ಇಬ್ಬರು ಹೆಂಡಿರು, ಜೊತೆಗಾತಿಯಾದ ಲಕ್ಷ್ಮಿ ಮತ್ತು ಅನ್ನ ಕೊಡುವ ಒಂದು ಎಕರೆ ಭೂಮಿ. ನಾಲ್ಕು ಜನ ಮಕ್ಕಳು-ಸುಮತಿ, ಮಂಜುನಾಥ, ಆನಂದ ಮತ್ತು ಕುಟ್ಟಿಕಾಯಮೆ. ನಾಲ್ಕನೆಯದು ಒಂದು ಭತ್ತದ ಜಾತಿ. ಸೊಂಟದ ಸುತ್ತ ಒಂದು ಖಾದಿ ಪಂಚೆ, ಅವರೇ ಕೈಯಿಂದ ತಯಾರಿಸಿದ್ದು. ಎದೆಯ ಮೇಲೊಂದು ಜನಿವಾರ. ಕಣ್ಣಿನ ಸುತ್ತ ಅನುಭವದ ಕಪ್ಪುಚಕ್ರ. ಬಾಯಿ ತುಂಬಾ ಮಾತು. ತುಟಿಯ ತುದಿಯಲ್ಲಿ ನಗು. ಹಿಂದಕ್ಕೆಳೆದು ಬಾಚಿದ ತಲೆಕೂದಲು. ಕಣ್ಣಿನಲ್ಲಿ ಆತ್ಮವಿಶ್ವಾಸದ ಹೊಳಪು.

ಅರ್ಧ ಹಂಚು, ಅರ್ಧ ಹುಲ್ಲಿನ ಮನೆಯ ಮಣ್ಣಿನ ಜಗಲಿಯ ಮೇಲೆ ಕುಳಿತು ನಾನು ಅವರೊಡನೆ ಮಾತನಾಡುತ್ತಿದ್ದೇನೆ. ನನ್ನ ಬೆನ್ನ ಹಿಂದೆ ಹಟ್ಟಿ. ಮೂರು ದನಗಳು ಹುಲ್ಲು ಜಗಿಯುವ ಶಬ್ದ. ಮನೆಯ ಒಳಗಿನಿಂದ ಕೈಮಗ್ಗದ ಖಟ್ ಖಟ್ ಶಬ್ದ, ಅವರ ಹೆಂಡತಿ ಅದರ ಮೇಲೆ ಕೆಲಸ ಮಾಡುತ್ತಿರಬೇಕು. ಶಬ್ದದ ಹಿನ್ನೆಲೆ ಸಂಗೀತ. ಸುತ್ತಮುತ್ತ ಮೂಲೆ ಮೂಲೆಗಳಲ್ಲಿ ಮತ್ತು ಹೊರಗೆ ಗೋಡೆಗೆ ಒರಗಿ ನಿಂತ ಹಾರೆ, ಪಿಕ್ಕಾಸು, ಗುದ್ದಲಿ, ಖಾದಿ ಕೇಂದ್ರ ಬೋರ್ಡಿನ ಬಳಿ, ಎದುರು ಕಿಟಕಿಯ ದಳಿಗಳಿಗೆ ಒರಗಿ ನಿಂತ ಭತ್ತದ ಗೊಂಚಲನ್ನು ಹೊತ್ತ ಮೂರು ಮಾದರಿಯ ಸಸಿಗಳು. ಹಸುವಿನ ಹಾಲನ್ನು ತುಂಬಿಕೊಂಡ ಲೋಟ ನನ್ನೆದುರು ಕುಳಿತಿದೆ. ರಾಮಚಂದ್ರರಾಯರು ಮಾತನಾಡುತ್ತಲೇ ಇದ್ದಾರೆ. ತಮ್ಮ ಕಿರಿಯ ಹೆಂಡತಿ-ಒಂದು ಎಕರೆ ಭೂಮಿ-ಬಗೆಗೆ ಮಾತನಾಡಲು ಅವರ ತವಕ ಹೇಳತೀರದು.

ನೋಡಿ ನಾನು ಬರುವಾಗ ಇದು ಕಾಡು. ಬೆಟ್ಟಗುಡ್ಡ. ಬೆಟ್ಟು ಎಂದರೆ ಹೇಗಿರಬೇಕು ನೀವೇ ಯೋಚನೆ ಮಾಡಿ. ಒಂದು ಬಾವಿ ಬಿಟ್ಟರೆ ಬೇರೆ ನೀರಿನ ತಾವೇ ಇಲ್ಲ. ಆದರೆ ಸ್ವಾವಲಂಬನೆಯ ಆಸೆ ನನ್ನನ್ನು ಧೈರ್ಯಗೆಡಲು ಬಿಡಲಿಲ್ಲ. ಬಂದೆ, ಮನೆ ಕಟ್ಟಿದೆ. ಗಿಡಗಂಟಿ, ಕಲ್ಲು ಮುಳ್ಳು ಸವರಿದೆ. ಸಾಧನೆ ಮಾಡಿದೆ. ಎತ್ತು ತಂದು ಉತ್ತು ಬಿತ್ತು ನೋಡಿದೆ. ನೆಲ ಒಲಿಯಲಿಲ್ಲ. ಹತ್ತು ವರ್ಷ ಕಾಲ ಹೋರಾಡಿದೆ. ನಾನು ಸೋತು ಹೋದೆನೇ ಎಂದು ಅನೇಕ ಬಾರಿ ಅನ್ನಿಸಿತು. ಆದರೆ, ಪ್ರಯೋಗ ಮಾಡಿ, ಮಾಡಿ ಕೊನೆಗೊಮ್ಮೆ ನೆಲ ನಕ್ಕಿತು. ಗಿಡ ಹಸುರಾಯ್ತು. ಭತ್ತ ಮನೆ ತುಂಬಿತ್ತು. ಈಗ ನನಗೆ ಹೆದರಿಕೆ ಇಲ್ಲ. ಮಳೆರಾಯ ಸಿಟ್ಟು ಮಾಡಲಿ, ನಗಲಿ, ಅಳಲಿ, ಚಿಂತೆ ಇಲ್ಲ. ನೋಡಿ ಈ ವರ್ಷದಂತೆ ಎಂದೂ ಆಗಿಲ್ಲ. ಮಳೆ ಕೈ ಕೊಟ್ಟಿತು. ಎಷ್ಟೋ ಕಡೆ ಬೆಳೆ ಹಾಳಾಯಿತು. ನೀರಿನಾಶ್ರಯವಿದ್ದ ಬೆಟ್ಟ ಗದ್ದೆಗಳಲ್ಲೂ ಭತ್ತ ಹೊಟ್ಟಾಯಿತು. ಆದರೆ ನನಗೆ ಈ ಬೆಟ್ಟು ಗದ್ದೆ ಕೈ ಕೊಡಲಿಲ್ಲ. ಏಕೆ? ರಾಮಚಂದ್ರರಾಯರು ಮಾಟ ಮಂತ್ರ ಮಾಡಿದ್ದಾರೆಯೇ? ಮನೆಯ ಮುಂದಿನ ಗದ್ದೆ ನೋಡಿದರೆ ಇಲ್ಲೇನು ಮೆಣಸು, ಗೆಣಸು ಬೆಳೆಸುತ್ತಿದ್ದಾರೆಯೇ ಎಂದು ಅನ್ನಿಸುತ್ತದೆ. ಪೂರ್ವ ಪಶ್ಚಿಮಕ್ಕೆ ಮಲಗಿರುವ ಸಾಲಾದ ಏರಿಗಳು. ಈ ಏರಿಗಳ ಮೇಲೆ ಹದವಾದ ದೂರದಲ್ಲಿ ನೆಡಲ್ಪಟ್ಟ ಭತ್ತದ ಸಸಿಗಳು. ಅವಶ್ಯಕತೆಯೇ ಆವಿಷ್ಕಾರದ ತಾಯಿ ಎಂಬ ಗಾದೆ ರಾಮಚಂದ್ರ ರಾಯರಂಥವರನ್ನು ಕಂಡೇ ಹುಟ್ಟಿರಬೇಕು. ಇಲ್ಲದೇ ಇದ್ದರೆ ನಾಲ್ಕು ಪೌಂಡು ಕುಟ್ಟಿಕಾಯಮ ಬೀಜ ಹಾಕಿ ಒಂದು ಎಕರೆ ಬೆಟ್ಟು ಭೂಮಿಯಲ್ಲಿ 70 ಮುಡಿ, ಸುಮಾರು 20 ಕ್ವಿಂಟಲ್, ಭತ್ತವನ್ನು ಈ ಮನುಷ್ಯ ಬೆಳೆಸುತ್ತಾನೆಂದರೆ ಯಾರಿಗೆ ಆಶ್ಚರ್ಯ ಆಗಿರಲಿಕ್ಕಿಲ್ಲ? ನೀರಿನಾಶ್ರಯವಿದ್ದು ಹಾಗೂ ಮಳೆ ಚೆನ್ನಾಗಿ ಸಹಕರಿಸಿದರೆ, ಸಾಮಾನ್ಯವಾಗಿ ಬಯಲು ಗದ್ದೆಯಲ್ಲಿ ಉತ್ತಮ ಫಸಲೆಂದು ಐವತ್ತು-ಅರುವತ್ತು ಮುಡಿ ಭತ್ತ ಬೆಳೆಯಬಹುದು. ಆದರೆ ಮಳೆಯ ವಿಶೇಷ ಹಂಗಿಲ್ಲದೇ ಇಳಿಜಾರು ಬೆಟ್ಟು ಗದ್ದೆಯ ಏರಿಗಳಲ್ಲಿ ಇವರು ಅದಕ್ಕಿಂತಲೂ ಹೆಚ್ಚು ಫಸಲು ತೆಗೆದಿದ್ದಾರಲ್ಲ?

ಅಕ್ಕಿಮುಡಿಗೆ ಎರಡು ರೂಪಾಯಿ ಇದ್ದ ಕಾಲದಲ್ಲಿ ಗಾಂಧೀಜಿ ಆಹಾರ ಸಮಸ್ಯೆ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಆಗ ಯಾರೂ ಗಾಂಧಿಯನ್ನು ನಂಬಲಿಲ್ಲ. ಆಗ ತಿಂದು ತೇಗುವಷ್ಟು ಆಹಾರವಿತ್ತು. ಅಕ್ಕಿ ಕೊಳ್ಳಲು ತವಕ ಪಡುವವರೇ ಇರಲಿಲ್ಲ. ಆಗ ಜನ ನಕ್ಕಿದ್ದರು. ಈಗ? ಅಳುತ್ತಿದ್ದಾರೆ. ನೀವು ಏನೇ ಹೇಳಿ, ಇವರೇ, ನಮ್ಮ ಅನ್ನ ನಾವು ಮಾಡಿಕೊಳ್ಳಬೇಕು. ಪ್ರತಿಯೊಂದು ಸಂಸಾರ ನಮ್ಮ ಹಾಗೆ ಸ್ವಾವಲಂಬಿತವಾದರೆ, ಆಹಾರ ಸಮಸ್ಯೆ ಇದೆಯೇ? ಹೇಳಿ. ನಾವು ಮಾರುವುದು ಬೇಡ. ಹೊಟ್ಟೆಯ ಬೆಂಕಿಯನ್ನು ತಣ್ಣಗಾಗಿಸುವಷ್ಟು ಆಹಾರವಾದರೂ ಬೇಡವೇ? ಮನೆಯಲ್ಲಿ ಎರಡು ಮೂರು ಹಸು ಇದ್ದರೆ, ಒಂದು ಎಕರೆ ಭೂಮಿಗೆ ಗೊಬ್ಬರ ಆಯಿತು. ಮನೆಯೊಳಗೆ ಹಾಲು ಮೊಸರು ಆಯಿತು. ಪೇಟೆಯಲ್ಲಿ ಎಷ್ಟೋ ಮನೆಗಳಲ್ಲಿ ಗೊಬ್ಬರ ಇಟ್ಟುಕೊಳ್ಳಲು ಬೇಡವಾಗಿ ಹೊರಗೆ ಕೊಡುತ್ತಾರೆ. ಅದನ್ನೇ ಇಟ್ಟುಕೊಂಡು ನಾನು ಹೇಳಿದ ವಿಧಾನ ಅನುಸರಿಸಿದರೆ ನಮಗೆ ಅಸಹ್ಯವಾಗಿ ಕಾಣುವ ವಸ್ತು, ನಮ್ಮ ಆಹಾರದ ಉತ್ಪತ್ತಿಗೆ ಅನಿವಾರ್ಯವಾಗಿರುತ್ತದೆ.

ರಾಮಚಂದ್ರರಾಯರು ಈ ವಿಧಾನದಲ್ಲಿ ಬರಿಯ ಭತ್ತವಲ್ಲ-ರಾಗಿಯನ್ನೂ ಬೆಳೆದಿದ್ದಾರೆ. ಇಪ್ಪತ್ತು ಸೆಂಟ್ಸ್ ಜಾಗದಲ್ಲಿ ನಾಲ್ಕು ಮುಡಿ ರಾಗಿ ಬೆಳೆದಿದ್ದಾರೆ. ಅವರ ದೃಷ್ಟಿಯಲ್ಲಿ ಇದೇ ಸರ್ವೋದಯ. ಅವರು ಸರ್ವೋದಯ ಚಳವಳಕ್ಕೆ ಸೇರಿದವರಲ್ಲ. ಆದರೆ ಅಕ್ಷರಶಃ ಆ ತತ್ವವನ್ನು ಸಾಕ್ಷಾತ್ಕರಿಸಿಕೊಂಡರು. ಈ ಸರ್ವೋದಯ ಪದ್ಧತಿಯನ್ನು-ಹಾಗೆಂದು ರಾಮಚಂದ್ರರಾಯರು ಕರೆಯುತ್ತಾರೆ, ಮಳೆ ಕೈಕೊಟ್ಟರೂ ಹಾನಿಯಲ್ಲ. (ನೋಡಿ ಸಸಿ ಒಂಬತ್ತು ಇಂಚು ಆಳದಲ್ಲಿ ಇರುವುದರಿಂದ, ಭೂಮಿಯೊಳಗಿನ ತಂಪು ಅದಕ್ಕೆ ಸಿಗುತ್ತದೆ. ಬಿಸಿಲು ಬಿದ್ದರೂ ಗಿಡ ಕರಟಿ ಹೋಗುವುದಿಲ್ಲ). ಎತ್ತು ಇಲ್ಲದಿದ್ದರೂ ನಡೆಯುತ್ತದೆ. ಇಳಿಜಾರು ಬೆಟ್ಟುಗದ್ದೆಯಾದರೂ ಪರವಾಯಿಲ್ಲ.

ಈ ಒಕ್ಕೈ ಸಾಧಕನನ್ನು ಕಂಡು ನಕ್ಕವರು, ಈಗ ತಲೆದೂಗುತ್ತಿದ್ದಾರೆ. ತಮ್ಮ ಆಲಸ್ಯವನ್ನು ಮುಚ್ಚಿಕೊಳ್ಳಲು ಇದು ರಾಮಚಂದ್ರರಾಯರಿಗೆ ಸರಿ ಎಂದು ಹೇಳುವವರು ಇದ್ದಾರೆ. ಆದರೆ ಅವರಿಗೆ ಯಾವುದರ ಪರಿವೆಯೂ ಇಲ್ಲ. ಈಗ ಎರಡನೇ ಬೆಳೆ ತೆಗೆಯುವುದು ಸಾಧ್ಯವೇ? ಎಂದು ಪ್ರಯೋಗ ನಡೆಸಿದ್ದಾರೆ. ಬೆಳೆದ ಸಸಿಯನ್ನು ನಾನು ನೋಡಿದ್ದೇನೆ. ಇದು ಯಶಸ್ವಿಯಾದರೆ, ವ್ಯವಸಾಯದ ಚರಿತ್ರೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗುತ್ತದೆ. ಖಾಲಿ ಲೋಟ ಎದುರು ಕೂತಿದೆ. ಹಾಲು ಕುಡಿದುದು ಮರೆತೇ ಹೋಗಿದೆ. ಹಸು ಹುಲ್ಲು ಜಗಿಯುವ ಶಬ್ದ, ಕೈಮಗ್ಗದ ಜೋಗುಳ, ಹೊಟ್ಟೆಯ ಬೆಂಕಿಯಿಂದ ಎದ್ದು ಬಂದ ಫಿನಿಕ್ಸ್ ಪಕ್ಷಿ-ಕದಿರು ಹೊತ್ತ ಮಾದರಿ ಸಸಿಗಳು-

ನಮಸ್ಕಾರ ಬರುತ್ತೇನೆ. ಇಲ್ಲ, ನಿಮ್ಮನ್ನು ಅಲ್ಲಿಯವರೆಗೆ ಬಿಟ್ಟು ಬರುತ್ತೇನೆ.

ಹಸಿರು ಉಸಿರಿನ ಚೇರ್ಕಾಡಿ ರಾಮಚಂದ್ರ ರಾಯರು
(ಉದಯವಾಣಿ ದಿನಪತ್ರಿಕೆ 29-08-1971 – ವಿಶುಕುಮಾರ್)

ನಮ್ಮ ದೇಶದಲ್ಲಿ ಎಂಥೆಂಥ ಜನರಿದ್ದಾರೆಂದರೆ ಕೆಲಸ ಕೊಡಿ, ಕೆಲಸ ಕೊಡಿ ಎಂದು ಪೇಟೆ ಪಟ್ಟಣಗಳಲ್ಲಿ ಬೀದಿ ಬೀದಿ ಅಲೆದು ಕ್ಯೂ ನಿಲ್ಲುವವರಿದ್ದಾರೆ. ನಿರುದ್ಯೋಗ ನಿರುದ್ಯೋಗ ಎಂದು ಭಾಷಣ ಬಿಗಿಯುವವರಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದೆ, ಆಹಾರದ ಅಭಾವ, ಕುಟುಂಬ ಯೋಜನೆ ಮಾಡಿ ಎಂದು ಹೇಳುವ ಮಂತ್ರಿಗಳಿದ್ದಾರೆ. ನಮಗೆ ಭೂಮಿ ಇಲ್ಲ, ಸಾಲ ಕೊಡಿ ಎನ್ನುವ ರೈತರಿದ್ದಾರೆ. ಗೇಣಿದಾರರು ಭೂಮಿಯನ್ನು ಕೊಡುವುದಿಲ್ಲ, ಸಾಲವನ್ನು ಹಿಂತಿರುಗಿಸುವುದಿಲ್ಲ ಎಂದು ಕೋರ್ಟಿಗೆ ಅಲೆದು ನೆತ್ತಿಗೆ ಕೈ ಇಡುವವರಿದ್ದಾರೆ.

ಇದು ಯಾವ ರಗಳೆಯೂ ಇಲ್ಲದೆ ಪ್ರಕೃತಿಯೊಂದಿಗೆ ಹೋರಾಡಿದ ಒಬ್ಬ ರೈತರು ಇಲ್ಲಿದ್ದಾರೆ. ಅವರೊಬ್ಬ ವಿಚಿತ್ರ ಅಲ್ಲ, ಅದ್ಭುತ ವ್ಯಕ್ತಿ ಎಂದು ಅವರನ್ನು ಕಂಡವರಿಗೆ ಮನದಟ್ಟಾಗುತ್ತದೆ. ಬ್ರಹ್ಮಾವರದಿಂದ ಐದಾರು ಮೈಲು ದೂರ ಚೇರ್ಕಾಡಿಯ ರಸ್ತೆ ತಾಗಿ ಹಲವು ಮುಳ್ಳು ಬೆಳೆಯುವ ಕುಮೇರಿ ಜಾಗವಿದೆ. ಎಲ್ಲಿ ತಲೆ ಎತ್ತಿ ನೋಡಿದರೂ ಕಾಣುವುದು ಮುಳ್ಳು, ಪಾಪಸ್‌ಕಲ್ಲಿ ಬೇಲಿಗಳು. ಇಂಥ ಅಲಕ್ಷಿತ ಭೂಮಿಯ ಮಧ್ಯೆ ಸುಮಾರು ಒಂದೂವರೆ ಎಕರೆ ಸ್ಥಳದಲ್ಲಿ ಒಂದು ಖಾದಿ ಧಾಮ. ಖಾದಿ ಧಾಮ ಎಂದರೆ ಖಾದಿ ಬಟ್ಟೆಯನ್ನು ತಯಾರಿಸುವುದೇ ಎಂದು ನಿರೀಕ್ಷಿಸಿದರೆ ತಪ್ಪಾದೀತು. ಈ ಖಾದಿ ಧಾಮದಲ್ಲಿ ಉತ್ಪಾದನೆಯಾಗುವುದು ಭತ್ತ, ರಾಗಿ, ಹಲಸು, ಗೇರು, ಕಬ್ಬು, ಬದನೆ, ಬಾಳೆ, ವೀಳ್ಯದೆಲೆ, ಮಾವು, ಕಾಳುಮೆಣಸು, ಮರಗೆಣಸು ಇತ್ಯಾದಿ, ಇತ್ಯಾದಿ.

ಮುಳ್ಳು ಬೇಲಿಗೆ ಹಾಕಿದ ತಡಮೆಯ ಮೇಲೆ ಹೈಜಂಪ್ ಮಾಡಿ, ಯಾರದೋ ಗದ್ದೆಯ ಒಳಗೆ ಕಾಲಿಟ್ಟಿದ್ದೇನೆ ಎಂದು ಅನುಭವಿಸುತ್ತಾ ಹುಲುಸಾಗಿ ಬೆಳೆದ ಹುಲ್ಲುಗಳ ಮೇಲೆ ಹಸನಾಗಿ ನಡೆಯುತ್ತಾ ಹೋಗುವಾಗಲೇ ಹಸಿರು ಪೈರುಗಳ ನಡುವೆ ಒಬ್ಬ ಬ್ರಾಹ್ಮಣ ರೈತ ಹಾಗೂ ಅವರ ಹೆಂಡತಿ ದುಡಿಯುವುದು ಕಾಣುತ್ತದೆ. ಯಾರೋ ಬಂದಿದ್ದಾರೆ ಎಂದುಕೊಂಡು ರೈತ ಬೇಗ ಬೇಗನೆ ಕೆಲಸವನ್ನು ಅರ್ಧದಲ್ಲಿ ಬಿಟ್ಟು, ಬತ್ತಲೆ ಇರುವ ದೇಹದ ನಡುವಿಗೆ ಒಂದು ಬೈರಾಸನ್ನು ಸುತ್ತಿ ಅಂಗಿ ಬಟ್ಟೆ ಧರಿಸಲೆಂದು ಒಳಗೆ ಓಡುತ್ತಾರೆ. ರಾಯರೇ, ಸ್ವಲ್ಪ ಹಾಗೆ ಇರಿ, ಓಡಬೇಡಿ ಎನ್ನಬೇಕು. ಅಂಗಿ ಹಾಕಿಕೊಂಡು ಬರುತ್ತೇನೆ ಎನ್ನುತ್ತಾರೆ. ಅಂಗಿ ಬೇಡ, ಈ ವೇಷದಲ್ಲೆ ಫೋಟೋ ತೆಗೆಯಬೇಕು ಎನ್ನಬೇಕು. ಅದಕ್ಕೆ ಅವರು ತನ್ನ ಫೋಟೋದ ವಿಷಯ ಬಿಟ್ಟು, ನೋಡಿ ಈ ಪೈರಿನ ಬೆಳೆ ಎಷ್ಟು ಚೆನ್ನಾಗಿದೆ. ಇದರ ಫೋಟೋ ಹೊಡೆಯಿರಿ. ಇಲ್ಲಿ ಮಾವಿನ ಮರಕ್ಕೆ ಸುತ್ತಿದ ಕಾಳುಮೆಣಸಿನ ಬಳ್ಳಿ ಹಬ್ಬಿದ್ದು ನೋಡಿ, ಇದರ ಫೋಟೋ ಚೆನ್ನಾಗಿ ಬರುತ್ತದೆ ಎನ್ನುತ್ತಾರೆ.

ಇವರನ್ನೇ ಹೇಳಿದ್ದು ಅದ್ಭುತ ಮನುಷ್ಯ ಎಂದು! ಮುಳ್ಳು ಕಂಟೆಗಳ ಕಾಡಿನ ನಡುವೆ ಪಚ್ಚೆ ಹಸಿರುಗಳಿಂದ ತಲೆದೂಗುತ್ತಾ ಸ್ವಾಗತಿಸುವ ಬೆಳೆಗಳು, ನಗು ನಗುತ್ತಾ ಸ್ವಾಗತಿಸುವ ಬೆತ್ತಲೆಯ ರೈತ, ಚಾಮರ ಬೀಸುತ್ತಾ ಸ್ವಾಗತಿಸುವ ನಾಯಿಮರಿ ಇವರೆಲ್ಲದರ ಆದರಕ್ಕೆ ಪಾತ್ರರಾಗಿ ಮನೆಯೊಳಗೆ ಕಾಲಿಟ್ಟರೆ, ವರಾಂಡದಲ್ಲಿ ಕಟ್ಟಿ ಹಾಕಿದ ಮುಗ್ಧ ಕರು. ಇವರ ನಡುವಿನಲ್ಲಿರುವ ಈ ರೈತ ಏನಂಥ ಅದ್ಭುತ ಎಂದು ವಾಚಕರು ಊಹಿಸಬಹುದು. ನಮ್ಮಲ್ಲಿ ನೂರಾರು, ನೂರಾರು ಮತ್ತು ನೂರಾರು ರೈತರೂ ಬೇಸಾಯಗಾರರೂ ಇದ್ದಾರೆ. ಚೇರ್ಕಾಡಿಯ ರಾಮಚಂದ್ರ ರಾಯರು ಅವರೆಲ್ಲರಿಗಿಂತಲೂ ಅದ್ಭುತ ಸಾಧನೆಯನ್ನು ಮಾಡಿದ ರೈತ. ಇಂಥ ರೈತ ನಾಡಿನಲ್ಲೇಕೆ, ದೇಶದಲ್ಲೇ ಸಿಗಲಾರರು ಎಂದರೆ ಅತಿಶಯೋಕ್ತಿಯಲ್ಲ.

ಕುಮೇರಿ ಜಾಗದ ಪೊದೆಗಳನ್ನು, ಗಿಡಗಳನ್ನು ಕಡಿದರು. ನೆಲವನ್ನು ಸಮತಟ್ಟು ಮಾಡಿದರು. ಎತ್ತುಗಳನ್ನು ತಂದು ಉತ್ತರು, ಬಿತ್ತಿದರು, ನೇಯ್ಗೆಯಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ಗುಡ್ಡೆಗೆ ಹಾಕಿದರು. ಹತ್ತು ವರ್ಷಗಳ ಕಾಲ ಶ್ರಮ ವಹಿಸಿ ಸಾಧಿಸಿದರೂ ಗುಡ್ಡದಲ್ಲಿ ಪೈರು ಬೆಳೆಯಲಿಲ್ಲ. ಕಾಯಿಪಲ್ಯಗಳು ಆಗೊಮ್ಮೆ ಈಗೊಮ್ಮೆ ಬೆಳೆದರೂ ನಿರೀಕ್ಷಿಸಿದ ಫಲ ದೊರೆಯಲಿಲ್ಲ. ಒಮ್ಮೆ ಆಕಸ್ಮಿಕವಾಗಿ ಭೂಮಿಯ ಮೇಲೆ ಬಿದ್ದ ಭತ್ತದಲ್ಲಿ ಅರ್ಧ ಪಾವಿನಷ್ಟು ಭತ್ತ ಸಿಕ್ಕಿತು. ಎತ್ತು ತಂದು ಉತ್ತರೂ ಬೆಳೆಯದ ಭತ್ತ ಅದರಷ್ಟಕ್ಕೆ ಸರ್ವ ಸ್ವತಂತ್ರವಾಗಿ ಏಕೆ ಬೆಳೆಯಿತು ಎಂದು ಕುತೂಹಲಪಟ್ಟು ಪ್ರಯೋಗಕ್ಕಾಗಿ ಐವತ್ತು ಸೆಂಟ್ಸ್ ಜಾಗದಲ್ಲಿ ನೆಲವನ್ನು ಹಾರೆ ಪಿಕ್ಕಾಸುಗಳಿಂದಲೇ ಉತ್ತು ಭತ್ತ ಬಿತ್ತಿದರು. ಗುಡ್ಡೆ ನೆಲ್ಲು ತಳಿ ಬೆಳೆಯುವುದಕ್ಕೆ ಇದೇ ಪ್ರಯೋಗ ನಾಂದಿಯಾಯಿತು. ಇದಕ್ಕೆ ಸರ್ವೋದಯ ಪದ್ಧತಿ ಎಂದು ಹೆಸರಿಟ್ಟು ರಾಮಚಂದ್ರ ರಾಯರು ಈಗ ಐವತ್ತು ಸೆಂಟ್ಸ್ ಜಾಗದಲ್ಲಿ ಮೂವತ್ತು ಮುಡಿ ಅಕ್ಕಿ ಗಳಿಸುತ್ತಾರೆ.

ಮನೆಯ ಪಕ್ಕದಲ್ಲಿ ಒಂದು ಬಾವಿ ಇದೆ. ಅದಕ್ಕೆ ಪಂಪುಸೆಟ್ಟ್ ಇಲ್ಲ. ಅವರೇ ತಯಾರಿಸಿದ ಒಂದು ಕೈರಾಟೆ ಇದೆ. ರಾಟೆಗೆ ಎರಡು ತಟ್ಟೆಗಳನ್ನು ಸಿಕ್ಕಿಸಿ ಅದನ್ನು ಗಂಡ ಹೆಂಡತಿ ತಿರುಗಿಸಿದಾಗ ಸ್ವಯಂಚಾಲಿತ ನೀರು ಹೊಯ್ಯುತ್ತಾ ಇರುತ್ತವೆ. ಐವತ್ತು ಸೆಂಟ್ಸ್ ಜಾಗದಲ್ಲಿ ರಾಗಿ ಬಿತ್ತಿದ್ದಾರೆ. ಅದು ಕೂಡ ಹಸಿರು ಹಸಿರಾಗಿ ಬೆಳೆದು ಭತ್ತ ಪೈರಿನೊಂದಿಗೆ ಪೈಪೋಟಿಗೆ ನಿಂತಿದೆ. ಸ್ವಲ್ಪ  ಜಾಗದಲ್ಲಿ ಮರಗೆಣಸು ಬೆಳೆಸಿದ್ದಾರೆ. ಇದರಿಂದ ಕಾಫಿಗೆ ಬೇಕಾದ ತಿಂಡಿಗಳನ್ನು ತಯಾರಿಸುತ್ತಾರೆ. ಈ ಗೆಣಸಿಗೆ ಬರಗಾಲ ಗಡ್ಡೆ ಎಂದೂ ಹೆಸರಿದೆ. ಇದು ಮಳೆ ಇಲ್ಲದಿದ್ದಾಗ ಬೆಳೆಯುತ್ತದೆ. ಮುಂದೆ ಒಂದು ಹಲಸಿನ ಮರವಿದೆ. ಅದು ಕೊಡುವ ಹಲಸಿನ ಕಾಯಿಯಿಂದ ಹಪ್ಪಳ ತಯಾರಿಸಿ ಊಟಕ್ಕೆ ಉಪಯೋಗಿಸಿ ಉಳಿದುದನ್ನು ಮಾರಾಟ ಮಾಡುತ್ತಾರೆ. ಅದೇ ಹಲಸಿನ ಮರಕ್ಕೆ ಮೆಣಸಿನ ಬಳ್ಳಿ ಸುಂದರವಾಗಿ ಹಬ್ಬಿ ನಗುತ್ತಿರುತ್ತದೆ. ನೋಡಲಿಕ್ಕೆ ಚಂದವೂ ಆಯ್ತು. ಮಾರಾಟಕ್ಕೆ ಕಾಳು ಮೆಣಸು ಸಿಗುತ್ತದೆ. ಮಾವಿನ ಮರದಿಂದ ಸಿಗುವ ಮಾವುಗಳಿಂದ ಜೀವನಕ್ಕೆ ಬೇಕಾದುದೆಲ್ಲವನ್ನು ಉಪಯೋಗಿಸಿ ಹೆಚ್ಚಿಗೆ ಉಳಿದುದರಲ್ಲಿ ಸಿಹಿತಿಂಡಿ ಮಾಡಿ ಮಾರುತ್ತಾರೆ. ಅದರಿಂದಲೂ ನೂರಿನ್ನೂರು ರೂಪಾಯಿ ಸಂಪಾದನೆ. ಅದೇ ಮಾವಿನ ಮರಕ್ಕೆ ವೀಳ್ಯದೆಲೆ ಬಳ್ಳಿ ಹಬ್ಬಿದೆ. ಅದರಿಂದ ಎಲೆ ಮಾರಾಟ ಮಾಡಿ ನೂರೈವತ್ತು ರೂಪಾಯಿ ಗಳಿಸುತ್ತಾರೆ. ಐದಾರು ಗೇರುಮರಗಳಿವೆ. ಅದಕ್ಕೆ ನೀರು ಹೊಯ್ಯಬೇಕಾಗಿಲ್ಲ. ಅದರಷ್ಟಕ್ಕೆ ಅವು ಫಲ ಕೊಡುತ್ತವೆ. ಅದರಿಂದ ಸಿಕ್ಕಿದ ಗೇರುಬೀಜಗಳನ್ನು ಹುರಿದು ಅವರೇ ಪ್ಯಾಕು ಮಾಡಿ ಮಾರಾಟ ಮಾಡಿ ಇನ್ನೂರು ರೂಪಾಯಿ ಸಂಪಾದನೆ.

ಕೃತಿಯಲ್ಲಿ ಮಾತ್ರವಲ್ಲದೆ ಮಾತಿನಲ್ಲಿಯೂ ಉಪದೇಶ ಕೊಡುವುದರಲ್ಲಿ ರಾಮಚಂದ್ರ ರಾಯರು ಮೊದಲಿಗರು. ಎಪ್ಪತ್ತು ಕೋಟಿ ಜನಸಂಖ್ಯೆಗೆ ಆಹಾರ ಕೊಡುವಷ್ಟು ಬೆಳೆ ಬೆಳೆಯುವುದಿಲ್ಲ. ಆಹಾರ ಸಾಕಾಗುವುದಿಲ್ಲ. ಅದಕ್ಕಾಗಿ ಕುಟುಂಬ ಯೋಜನೆ ಮಾಡಿ ಎಂದು ಸರಕಾರ ಲಕ್ಷೋಪಲಕ್ಷ ಹಣವನ್ನು ವ್ಯಯಿಸುತ್ತದೆ. ಎಪ್ಪತ್ತು ಅಲ್ಲ, ಇನ್ನೂರು ಕೋಟಿ ಜನ ಹುಟ್ಟಿದರೂ ಈ ದೇಶದಲ್ಲಿ ಬೇಕಾಗುವಷ್ಟು ಭೂಮಿ ಇದೆ. ಬಡಬಗ್ಗರಿಗೆ ಭೂಮಿಯನ್ನು ಹಂಚಿಕೊಡಲಿ. ಕುಟುಂಬ ಯೋಜನೆಗೆ ಮಾಡುವ ಖರ್ಚನ್ನು ಗುಡ್ಡಗಳಲ್ಲಿ ಪೈರು ಬೆಳೆಸುವುದಕ್ಕೆ ಖರ್ಚು ಮಾಡಲಿ. ನಾನು ಸಾಧಿಸಿ ಕೊಡುತ್ತೇನೆ. ನೂರು ನೂರೈವತ್ತು ರೂಪಾಯಿ ಸಂಬಳಕ್ಕೆ ಹುಡುಗಿಯರು ಹುಡುಗರು ಮಾನ ಮರ್ಯಾದೆ ಕಳೆದುಕೊಂಡು ಪೇಟೆ ಪಟ್ಟಣಗಳಲ್ಲಿ ಕೆಲಸ ಮಾಡುವುದು ಯಾಕೆ ಸ್ವಾಮಿ? ಸಂಬಳ ಹೆಚ್ಚಿಗೆ ಸಿಕ್ಕಿದರೆ ಆ ಮಾತು ಬೇರೆ. ಪ್ರಕೃತಿ ನಮಗೆಷ್ಟು ಅನುಕೂಲ ಒದಗಿಸಿಕೊಟ್ಟಿದೆ ನೋಡಿ. ಇದನ್ನು ಉಪಯೋಗಿಸುವ ನಾವು ಇನ್ನೊಬ್ಬರ ಕೂಲಿ ಚಾಕರಿಗೆ ಏಕೆ ಹೋಗಬೇಕು? ನಮ್ಮಷ್ಟಕ್ಕೆ ನಾವು ದೊಡ್ಡವರಾಗಬೇಕು. ಜನ ಇವತ್ತು ಯಾವುದಕ್ಕೂ ಸೀಟಿಲ್ಲ ಎನ್ನುತ್ತಾರೆ. ನೌಕರಿಗೂ ಸೀಟಿಲ್ಲ. ಮಂತ್ರಿ ಪದವಿಗೂ ಸೀಟಿಲ್ಲ. ಇಲ್ಲದಿದ್ದರೆ ಹೋಗಲಿ. ಇಲ್ಲಿ, ಈ ಗುಡ್ಡದಲ್ಲಿ, ಈ ಕಾಡಿನಲ್ಲಿ ಬೇಕಾದಷ್ಟು ಸೀಟುಗಳುಂಟು. ಕೋಟಿ ಜನ ಬಂದರೂ ಸೀಟು ಉಂಟು. ಬ್ಯಾಂಕಿನವರು ಹಣ ಸಾಲ ತೆಗೆದುಕೊಳ್ಳಿ ಎನ್ನುತ್ತಾರೆ. ನಾನು ಹೇಳುವುದಾದರೆ ಬಡವರಿಗೆ ಸಾಲ ಕೊಡಬೇಡಿ. ನೀವು ಕೊಡುವ ಸಾಲದಿಂದ ಆತ ಪಂಪುಸೆಟ್ಟು, ಮೈಕುಸೆಟ್ಟು, ರೇಡಿಯೋ ಸೆಟ್ಟು ತಂದು ಹಣ ಖರ್ಚು ಮಾಡುತ್ತಾನೆ. ಪಸಲಿನಿಂದ ಸಿಗುವ ಹಣ ಬಡ್ಡಿ ತೀರಿಸಲಿಕ್ಕೂ ಸಾಕಾಗುವುದಿಲ್ಲ. ಒಂದು ದಿನ ಸಾಲ ತೀರಿಸಲಾರದೆ ಎಲ್ಲಾ ಅಡವಿಟ್ಟು ದಿಕ್ಕಾಪಾಲಾಗುತ್ತಾನೆ. ಸಾಲ ಕೊಡಬೇಡಿ, ಬಡವರನ್ನು ಲಗಾಡಿ ತೆಗೆಯಬೇಡಿ.

ಇವೆಲ್ಲಾ ರಾಮಚಂದ್ರ ರಾಯರ ಅನುಭವದಿಂದ ಹೊರಟ ಮುತ್ತಿನ ಮಣಿಗಳು. ಮುನ್ನೂರ ಅರುವತ್ತೈದು ದಿನವೂ ಅವರಿಗೆ ಮನೆಯಲ್ಲಿ ಕೆಲಸ ಇದ್ದೇ ಇರುತ್ತದೆ. ಕೆಲಸ ಮಾಡಿದವರಿಗೆ ಬಡತನವೆಂಬುದಿಲ್ಲ. ಅನಾರೋಗ್ಯ ಎಂಬುದಿಲ್ಲ. ಆಲಸ್ಯ, ಉದಾಸೀನ ಇಲ್ಲವೇ ಇಲ್ಲ. ಎಮ್ಮೆಯ ಹಾಗೆ ಹೊಟ್ಟೆ ಬೆಳೆಯುವುದಿಲ್ಲ, ಪರಾವಲಂಬನೆ ಬೇಡ. ಸ್ವಾವಲಂಬನೆ. ಇದು ರಾಮಚಂದ್ರ ರಾಯರ ಯಶಸ್ಸಿನ ಮಂತ್ರ. ಎಲ್ಲಿಯವರೆಗೆ ಸ್ವಾವಲಂಬನೆ ಎಂದರೆ ಮಾರಾಟ ಮಾಡಿಯೇ ಗೊತ್ತು ವಿನಾ ಕಾಸಿಗೆ ಪಡಕೊಂಡದದು ಇಲ್ಲ. ಅವರ ಮೈಮೇಲೆ ಹಾಕಿಕೊಂಡ ಅಂಗಿ ಕೂಡಾ ಅವರೇ ನೇಯ್ದದ್ದು. ವ್ಯಕ್ತಿಯ ಹಿರಿಮೆಗೆ ಅದ್ಭುತಕ್ಕೆ ಇದಕ್ಕಿಂತ ಹೆಚ್ಚಿನ ಕಾರಣ ಬೇಕೆ? ರಾಮಚಂದ್ರ ರಾಯರನ್ನು ದೃಷ್ಟಾಂತವಾಗಿ ಇಟ್ಟುಕೊಂಡಿದ್ದರೆ ಒಕ್ಕಲು ಹಿತ ಮಸೂದೆಯ ಕಾನೂನು ಇವತ್ತಿಗೆ ಅಗತ್ಯವೇ ಇರಲಿಲ್ಲ.

ರಾಮಚಂದ್ರ ರಾಯರ ಸಾಧನೆಯನ್ನು ಗುರುತಿಸಿ ಉಡುಪಿ ನಗರಸಭೆಯವರು ಒಂದು ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಅವರಿಗೆ ಹಾರೆ ಪಿಕ್ಕಾಸು ಗುದ್ದಲಿಯನ್ನು ಕೊಟ್ಟು ಸನ್ಮಾನ ಮಾಡಿದ್ದಾರೆ. ನಿಜಕ್ಕೂ ಪ್ರಶಂಸನೀಯ ಕಾರ್ಯ. ಉಡುಪಿಯ ಬಸ್‌ನಿಲ್ದಾಣದ ಹತ್ತಿರದಲ್ಲಿ ಒಂದು ಗಾಂಧಿ ಮಂಟಪವಿದೆ. ಗಾಂಧಿ ಶತಾಬ್ದಿಯ ದಿನದಂದು ಪ್ರತಿಮೆಯನ್ನು ಅನಾವರಣ ಮಾಡಲು ಯೋಗ್ಯ ಪ್ರಜೆ ಒಬ್ಬ ಬೇಕಾಗಿದ್ದ. ಗಾಂಧೀಜಿಯ ಬಗ್ಗೆ ಭಾಷಣವನ್ನು ಬಿಗಿಯುತ್ತಾರೆಯೇ ವಿನಾ ಅವರ ತತ್ವಗಳನ್ನು ಪಾಲಿಸಿದವರು ಯಾರಿದ್ದಾರೆ? ಇದ್ದರೆ ರಾಮಚಂದ್ರ ರಾಯರು ಒಬ್ಬರೇ! ಕೊನೆಗೆ ಅವರ ಕೈಯಿಂದಲೇ ಅನಾವರಣ ಮಾಡಿಸಲಾಗಿತ್ತು.

ಸಾಧಕರಿವರು : ಅಲ್ಲಿ ಪುಕುವೋಕಾ, ಇಲ್ಲಿ ಚೇರ್ಕಾಡಿ
(ಅಡಿಕೆ ಪತ್ರಿಕೆ – ಮೇ 1995 – ಶ್ರೀಪಡ್ರೆ)

ನಾಲ್ಕು ದಶಕಗಳ ಹಿಂದೊಂದು ದಿನ ಬಹುವರ್ಷಗಳಿಂದ ಉಳದೆ, ಕೃಷಿ ಮಾಡದೆ, ಹಡಿಲು ಬಿಟ್ಟ ಗದ್ದೆಯಲ್ಲಿ ಹುಲ್ಲು ಕಳೆಗಳ ರಾಶಿಯ ನಡುವಿನಿಂದೆದ್ದು ಬೆಳೆದ ಭತ್ತದ ಗಿಡಗಳು ಜಪಾನಿನ ಯುವಕನೊಬ್ಬನ ಕಣ್ಣಿಗೆ ಬಿತ್ತು. ಅದು ಒಂದು ಹುಲ್ಲಿನ ಕ್ರಾಂತಿಯ ಉಗಮ. ನೀರು ನಿಲ್ಲಿಸದೆ, ಉಳದೆ, ರಸಗೊಬ್ಬರವಿಲ್ಲದೆ, ಕೃಷಿಯೋಗ್ಯವಲ್ಲವೆಂದೆಣಿಸಿದ ಭೂಮಿಯಲ್ಲೂ ಕೃಷಿ ಮಾಡುವ ಪುಕುವೋಕ ವಿಧಾನದ ಆವಿಷ್ಕಾರವಾಯಿತು. ಜಗತ್ತಿನಲ್ಲಿ ಪರ್ಯಾಯ ಕೃಷಿಯ ಹರಿಕಾರನೆಂದು ಹೆಸರಾದ ಮಸನೋಬ ಪುಕುವೋಕಾ ಬದುಕಿಗೆ ತಿರುವು ನೀಡಿದ ಈ ಘಟನೆ ಈಗ ಚರಿತ್ರೆ.

ಹೆಚ್ಚು ಕಮ್ಮಿ ಇದೇ ಕಾಲಘಟ್ಟದಲ್ಲಿ, ಗಾಂಧೀಜಿಯ ಅನ್ನ, ವಸ್ತ್ರ ಸ್ವಾವಲಂಬನೆಯ ಕರೆಗೆ ಓಗೊಟ್ಟು ದಕ್ಷಿಣ ಕನ್ನಡದ ತರುಣರೊಬ್ಬರಿಗೆ ಇಂತಹುದೇ ಸನ್ನಿವೇಶದಲ್ಲಿ ಜ್ಞಾನೋದಯವಾಯಿತು. ಮೆಣಸಿನ ಏರಿಯಲ್ಲಿ ದಷ್ಟಪುಷ್ಟವಾಗಿ ಬೆಳೆದ ತೆನೆ ತುಂಬಿದ ಭತ್ತದ ಗಿಡ ಕಂಡು ಹುಟ್ಟಿತೊಂದು ಹೊಸ ಕುಮೇರಿ ಭತ್ತದ ಕೃಷಿ ಕ್ರಮ. ಚೇರ್ಕಾಡಿ ಪದ್ಧತಿ. ಉಳುಮೆ, ಎತ್ತು, ಹೆಚ್ಚು ನೀರು ಬೇಡದ, ಗುಡ್ಡ ತುದಿಯ ಬಡ ಜನರೂ ಬೆಳೆಸಿ ಹೊಟ್ಟೆ ತುಂಬಿಸಿಕೊಳ್ಳಬಲ್ಲ ಕೃಷಿ. ಹಸಿರು ಕ್ರಾಂತಿಯ ಹೆಸರಿನಲ್ಲಿ, ರಸ ಕೃಷಿಯ ಅಲೆ ಬಂದು ಆಗಷ್ಟೇ ಬೇರು ಬಿಡತೊಡಗಿದ ಚೇರ್ಕಾಡಿ ಪದ್ಧತಿ ಮತ್ತು ಅದರ ಹಿಂದಿನ ಉದಾತ್ತ ತತ್ವದ ಪ್ರಭಾವವನ್ನು ಕೊಚ್ಚಿಕೊಂಡು ಹೋಗದಿದ್ದರೆ ಬಹುಶಃ ಈ ಸಾಧನೆ ತಿಳಿಯಲು ಚರಿತ್ರೆಯನ್ನು ಕೆದಕಬೇಕಾಗುತ್ತಿರಲಿಲ್ಲ.

ಜಪಾನಿನ ಪುಕುವೋಕಾ ಮತ್ತು ಚೇರ್ಕಾಡಿ ರಾಮಚಂದ್ರ ರಾಯರು ಇಬ್ಬರ ತತ್ವಗಳಲ್ಲೂ ಸಾಮ್ಯವಿದೆ. ಎರಡೂ ಸ್ವಾವಲಂಬನೆಗೆ ಒತ್ತು ಕೊಡುವ, ಕೃಷಿಯನ್ನು ನೆಮ್ಮದಿಯ ನೆಲೆವೀಡಾಗಿಸುವ, ಮಾನವನ ಬೇಕುಗಳಿಗೆ ಕಡಿವಾಣ ಹಾಕುವ, ಬಾಹ್ಯ ಓಳಸುರಿಗಳಿಲ್ಲದ ಸ್ವಯಂಪೂರ್ಣ ಸಹಜ ಕೃಷಿ ಪದ್ಧತಿಗಳು. ರಸ ಕೃಷಿಯಿಂದ ಬೇಸತ್ತ ರೈತರಿಗೆ ಪುಕುವೋಕಾ ತತ್ವಗಳು ಅಪ್ಯಾಯವೆನಿಸಿದರೆ, ಅದೇಕೋ ಹಿತ್ತಲ ಗಿಡ ಚೇರ್ಕಾಡಿಯವರ ತತ್ವಗಳಿಗೆ ಮರಳಿ ಜನಾದರ ಸಿಕ್ಕಿಲ್ಲ. ಆದರೆ ಅವರ ತತ್ವಗಳು ಇಂದಿಗೂ ಪ್ರಸ್ತುತ.

ಚೇರ್ಕಾಡಿಯವರ ಸಂದರ್ಶಕರ ಪುಸ್ತಕದಲ್ಲೊಬ್ಬ ತರುಣ ಬರೆದ ಈ ಮಾತು ಓದಿ : ಪುಕುವೋಕಾ ಬಗ್ಗೆ ಓದಿದಾಗ, ಹೀಗಿರಲು ಸಾಧ್ಯವೇ ಅನಿಸಿತ್ತು. ಚೇರ್ಕಾಡಿ ಪದ್ಧತಿಯ ಬ್ರಹ್ಮ ರಾಮಚಂದ್ರ ರಾಯರ ಶ್ರಮದ ಫಲ ನೋಡಿದ ಮೇಲೆ ನಮ್ಮೊಳಗಣ ಪುಕುವೋಕನಿಗೆ ಹೊರೆಗಲ್ಲಾ ಹುಡುಕುವುದರಲ್ಲಿ ಅರ್ಥವಿಲ್ಲ ಎನಿಸಿತು. ನಿಮ್ಮ ಉದಾಹರಣೆ ಕೃಷಿಯನ್ನು ತುಳಿದು ಯಂತ್ರ ಸಂಸ್ಕೃತಿಯ ಬೀಜ ಬಿತ್ತುವವರ ಮನ ಪರಿವರ್ತಿಸುವ ಮಾದರಿಯಾಗಲಿ.

ಬ್ರಹ್ಮಾವರದಿಂದ ಹೆಬ್ರಿಗೆ ಹೋಗುವ ರಸ್ತೆಯಲ್ಲಿ ಎಂಟು ಕಿ.ಮೀ. ದೂರದ ಚೇರ್ಕಾಡಿಯಲ್ಲಿ ರಾಮಚಂದ್ರ ರಾಯರದ್ದು ಒಂದು ಹೆಕ್ಟೇರು ಜಮೀನು. ಮಾವು, ತೆಂಗು, ಕರಿಮೆಣಸು, ಅನಾನಾಸು, ಗೇರುಬೀಜ, ಹತ್ತಿ ಎಲ್ಲವೂ ಹೇಳಿಕೊಳ್ಳುವಂತಹ ನೀರಾವರಿ ಇಲ್ಲದ ಒಣ ಕೃಷಿ. ಪುಟ್ಟ ಮನೆ. ಕರೆಂಟಿಲ್ಲ. ಬೆಳಕಿಗೆ ಚಿಮಿಣಿ ಎಣ್ಣೆ. ಒಂದು ಬಾವಿ, ಪಂಪು ಸೆಟ್ಟಿಲ್ಲ. ಗಿಡಗಳಿಗೆ ನೀರು ಹಾಕಲು ನಾನು ಒಂದು ಪಾಲು ಇಟ್ಟುಕೊಂಡಿದ್ದೇನೆ ಎನ್ನುವ ರಾಯರು ದಿನನಿತ್ಯ ಗಿಡಮರಗಳಿಗೆ ಬಾವಿಯ ನೀರು ಉಣಿಸುತ್ತಾರೆ. ಇನ್ನೊಂದು ಪಾಲು ಕೆಲಸ ಚಿಕ್ಕಮಗ ಆನಂದ ರಾವ ಅವರಿಗೆ. ಇಬ್ಬರು ಮಕ್ಕಳು. ದೊಡ್ಡ ಮಗ ಬ್ಯಾಂಕ್ ಅಧಿಕಾರಿ. ಆನಂದ ರಾವ್ ಅಪ್ಪನ ಜೊತೆ ನೆಮ್ಮದಿಯಲ್ಲಿದ್ದಾರೆ. ಎಸ್‌ಎಸ್‌ಎಲ್‌ಸಿ ನಪಾಸಾದ ನಂತರ ಕೃಷಿಗೆ ಕೈಗೂಡಿಸಿದ ಅವರೂ ಅಪ್ಪನ ಸ್ವಾವಲಂಬನೆಯ ತತ್ವಕ್ಕೆ ದನಿಗೂಡಿಸುತ್ತಿದ್ದಾರೆ.

ಅಲ್ಪಾನ್ಸೋ, ಹೊನ್ನೆಬೆಟ್ಟು, ಕಸಿ ಅಂತೆಲ್ಲಾ 8-10 ಸಮೃದ್ಧ ಫಸಲಿನ ಮಾವಿನ ಮರಗಳು. ಫಲ ಗುತ್ತಿಗೆಗೆ ಕೊಟ್ಟಿದ್ದರಿಂದ ನಾಲ್ಕು ಸಾವಿರ ರೂಪಾಯಿಗಳು ಬರುತ್ತವೆ. ಸಿಲ್ಕ್ ಕಾಟನ್ ಮರಗಳಿಂದ ಮಗ ಕೊಯ್ದ ಕೋಡುಗಳನ್ನು ರಾಯರು ಬಿಡಿಸಿ ಹತ್ತಿಯನ್ನು ಮಾರುತ್ತಾರೆ. ಬಹುವಾರ್ಷಿಕ ಮರಗಳಿಗೆ ಹಬ್ಬಿಸಿದ ಕರಿಮೆಣಸು ಬಳ್ಳಿಗಳಿಂದ ವರ್ಷಕ್ಕೆ 200-250 ಕಿಲೋ ಬೆಳೆ ಸಿಗುತ್ತದೆ. ನೆಟ್ಟುಬಿಟ್ಟ ಬಾಳೆ ಮಳೆಗಾಲದಲ್ಲಿ ನೀರು ಕುಡಿದು ವರ್ಷಕ್ಕೆ 1000 ರೂಪಾಯಿ ತಂದರೆ, ತೆಂಗಿನ ಮರದ ಕೊತ್ತಳಿಗೆ 1000 ರೂಪಾಯಿ ಕೊಡಿಸುತ್ತದೆ. 4-5 ಕ್ವಿಂಟಾಲ್ ಗೇರುಬೀಜ, 2000 ತೆಂಗಿನಕಾಯಿ.

ತಾರುಣ್ಯದಲ್ಲಿ ನೀರು ಸೇದಿ ಸುಸ್ತಾಗಿ ರಾಯರು ಸರ್ವೋದಯ ರಾಟೆ ಆವಿಷ್ಕರಿಸಿ ಬಳಸುತ್ತಿದ್ದಾರೆ. ಎರಡು ಜನ ಬೇಕು. ಎರಡು ಬಾಲ್ದಿ. ಒಂದು ಬಾಲ್ದಿ ಮೇಲೆ. ರಾಟೆಯನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸಬೇಕು. ಹೀಗೆ ಕಡಿಮೆ ಶ್ರಮದಲ್ಲಿ ಬಂದ ಬಾಲ್ದಿಯನ್ನು ಕೈಯಿಂದ ಮುಟ್ಟಬೇಕಿಲ್ಲ. ಬಿದ್ದ ನೀರು ಸಂಗ್ರಹವಾಗಿ ಹರಿದು ಗಿಡಗಳಿಗೆ ಹೋಗುವ ವ್ಯವಸ್ಥೆಯಿದೆ.

ರಾಸಾಯನಿಕ ಕೃಷಿಯ ಹಾನಿಯ ಅರಿವಿಗಿಂತಲೂ ಸ್ವಾವಲಂಬನೆಗಾಗಿ ಸಹಜ ಕೃಷಿ ನೆಚ್ಚಿಕೊಂಡ ರಾಯರ ಕಷ್ಟ ಕಂಡು ದಿ ಟಿ.ಎ.ಪೈ ಒಂದು ಪಂಪ್‌ಸೆಟ್ ಮಫತ್ತಾಗಿ ಕೊಡಲು ಮುಂದೆ ಬಂದರಂತೆ. ನಾನೇ ಬೇಡವೆಂದು ನಿರಾಕರಿಸಿದೆ. ಈಗ ನೋಡಿ ಮೇ ತಿಂಗಳವರೆಗೂ ಬಾವಿಯಲ್ಲಿ ನೀರಿದೆ. ಪಂಪು ಹಾಕಿದ್ದರೆ ಮೂರೇ ತಿಂಗಳಲ್ಲಿ ಆರಿ ಹೋಗುತ್ತಿತ್ತು. ಬಾವಿ ನೀರು ಸಾಕಾಗುವ ಕಾರಣ ಇನ್ನೊಂದು ಕೊಳವನ್ನು ಅವರು ಬಳಸುತ್ತಿಲ್ಲ. ಮರದ ಬುಡಕ್ಕೆಲ್ಲಾ ಸುತ್ತಲಿನ ತರಗೆಲೆ, ಮುಳಿಹುಲ್ಲುಗಳ ಮುಚ್ಚಿಗೆ. ನೋಡಿ, ಈಗಲೂ ಎಷ್ಟು ಪಸೆ ಇದೆ ಎಂದು ತೋರಿಸುತ್ತಾರೆ.

ಮೊದಲಿನಿಂದಲೂ ಅಡಿಕೆ, ಮಲ್ಲಿಗೆಗೆ ಆಸಕ್ತಿ ತೋರಿಸಲಿಲ್ಲ. ಹೊಟ್ಟೆ ತುಂಬಿಸುವ ಸಾಹಿತ್ಯಕ್ಕೆ ಮಾತ್ರ ಒತ್ತು. ಒಂದು ಸಿಲೋನ ಹಲಸು ನವೆಂಬರನಲ್ಲಿ ಗುಜ್ಜೆ ಬಿಡುತ್ತದೆ. ಒಂದು ಗುಜ್ಜೆ ಮೂರು ಯಾ ನಾಲ್ಕು ರೂಪಾಯಿಗೆ ಧಾರಾಳ ಹೋಗುತ್ತದೆ. ಈ ದಶಂಬರದಲ್ಲಿ 200-300 ಗುಜ್ಜೆ ಮಾರಿದ್ದೇನೆ. ಪುಕುವೋಕಾ ಹೇಳುವುದು ಸುಳ್ಳಲ್ಲ ಸ್ವಾಮಿ. ಪ್ರಕೃತಿಯಲ್ಲಿ ಅಷ್ಟು ಶಕ್ತಿ ಇದೆ. ಒಂದಷ್ಟು ಅನುಕೂಲ ಒದಗಿಸಿದರೆ ಸಾಕು, ಈ ಗಿಡ ಮರ ಫಸಲು ಕೊಡುತ್ತವೆ.

ಒಮ್ಮೆ ವಿಮೆ ಇಳಿಸಿದ್ದ ಚೇರ್ಕಾಡಿಯವರಿಗೆ ಕಂತು ಕಟ್ಟಲಾಗಲಿಲ್ಲವಂತೆ. ಅನಂತರ ನನಗೆ ಅರ್ಥವಾಯಿತು. ಜಮೀನಿರುವವರಿಗೆ ವಿಮೆ ಈ ಬಹುವಾರ್ಷಿಕ ಮರಗಳದ್ದೇ ಸಾಕು ಅಂತ. ಹಾಗೆ ಹಲಸು, ಮಾವು ನೆಟ್ಟೆ. ಒಂದಷ್ಟು ಕಸ ಮಸ ಬುಡಕ್ಕೆ ಸೇರಿಸಿ, ಸ್ವಲ್ಪ ಬೂದಿ ಮಾಡಿ ಹಾಕಿದರೆ ಸಾಕು, ಅವು ಚೆನ್ನಾಗಿ ಫಲ ಕೊಡುತ್ತವೆ. ದಾರಿಯಲ್ಲಿ ಹೋಗುತ್ತಿದ್ದಾಗ 2-3 ಜಾಪೆಯ ಜಾಗಕ್ಕೆ ತೆಂಗಿನ ಮಡಲು ಮುಚ್ಚಿತ್ತು. ಹಾ! ಇದು ನೋಡಿ ನನ್ನ ಫಿಕ್ಸೆಡ್ ಡೆಪಾಸಿಟ್, ಶುಂಠಿ ಬೆಳೆ. ಬೆಳೆದಾಗ ಬೆಲೆ ಚೆನ್ನಾಗಿಲ್ಲದಿದ್ದರೆ ಹೀಗೆ ಮುಚ್ಚಿಟ್ಟರೆ ಬೆಲೆ ಬಂದಾಗ ಮಾರಬಹುದು. ಅಥವಾ ಪುನಃ ಕೃಷಿ ಮಾಡಬಹುದು. ದುಡ್ಡು ಹುಗಿದಿಟ್ಟ ಹಾಗೆ.

ಅನಾನಾಸು ಹಣ್ಣು ಮಾರುವಾಗ, ಅದರ ತಲೆಯನ್ನೆಲ್ಲಾ ನೀರು ಬೀಳುವ ತೆಂಗಿನ ಮರದ ಬುಡದಲ್ಲಿಡುತ್ತಾರೆ. ಮಳೆ ಬಂದಾಗ ಅದನ್ನು ಅಲ್ಲಲ್ಲಿ ನೆಡಲು ಸಾಧ್ಯ. ಕೃಷಿಯಲ್ಲಿ ಇಂತಾ ಸೂಕ್ಷ್ಮಗಳಿರಬೇಕು. ಇವರು ಕಂಡುಕೊಂಡ ಇನ್ನೊಂದು ಸ್ವಾರಸ್ಯಕರ ಸೂಕ್ಷ್ಮ, ಗಿಡಗಳನ್ನು ಹುತ್ತ ಇರುವಲ್ಲಿ ನೆಟ್ಟರೆ ದಷ್ಟಪುಷ್ಟವಾಗಿ ಬೆಳೆಯುತ್ತವೆ. ಕಳೆದ ವರ್ಷದಿಂದೀಚೆಗೆ ಇವರು ತಮ್ಮ ರಾಟೆಯನು ಪ್ರಯೋಗಾರ್ಥವಾಗಿ ಬಳಸುತ್ತಿಲ್ಲ. ಕೊಡದಲ್ಲೆತ್ತಿದ ನೀರೇ ಸಾಕಾದರೆ ಮತ್ತೆ ಯಾಕೆ ಉರುಡಬೇಕು? ರಾಟೆಗೆ ಇಬ್ಬರು ಬೇಕು ನೋಡಿ, ಈ ವರ್ಷದ ಪ್ರಯೋಗ ಸರಿಯಾಗದಿದ್ದರೆ ಮತ್ತೆ ರಾಟೆ ಬಳಸುತ್ತೇವೆ.

ಈ ಇಳಿಪ್ರಾಯದಲ್ಲೂ, ಬಡತನದಲ್ಲೂ ರಾಯರಲ್ಲಿ ಗೊಣಗಾಟ ಇಲ್ಲ. ನೆಮ್ಮದಿ ಎದ್ದು ಕಾಣುತ್ತದೆ. ಮರ ಇಂತಿಷ್ಟೇ ಬೆಳೆ ಕೊಡಬೇಕೆಂದು ಕಡ್ಡಾಯವಿಲ್ಲ. ಸ್ವಾಭಾವಿಕವಾಗಿ ಬರುವಷ್ಟು ಬರಲಿ. ನಾನು ತೃಪ್ತ. ಬಲಾತ್ಕಾರ ಸ್ಪ್ರೇ ಮಾಡಿ ಬೆಳೆ ತೆಗೆಯುವುದು ಸರಿಯಲ್ಲ. ಹಲವು ಮೂಲಗಳಿಂದ ಆದಾಯ ಬಂದಾಗ ಪೂರೈಸುತ್ತದೆ. ಅತ್ಯಲ್ಪ ನೀರಿನ ಕೃಷಿಯಲ್ಲಿ, ರಾಯರು ಏನಿಲ್ಲವೆಂದರೂ 20000 ರೂಪಾಯಿ ಉಳಿಸಿ ಕಾಪಿಡುತ್ತಾರೆ. ಹೆಚ್ಚು ನೀರಿಲ್ಲದೆ ಬದುಕಲು, ಕೃಷಿ ಮಾಡಲು ಕಲಿಯಬೇಕೆನ್ನುವುದು ನನ್ನ ಧೋರಣೆ. ಸಾಲ ಮಾಡಬಾರದು. ಮೊನ್ನೆ ಮೊನ್ನೆ ಒಬ್ಬರು ಬ್ಯಾಂಕ್ ಅಧಿಕಾರಿ ಸುಲಭ ಬೆಲೆಯಲ್ಲಿ ಸೌರದೀಪ ಹಾಕಿಸಲು ಸಲಹೆ ಮಾಡಿದರು. ಸಾಲ ಕೊಡಲೂ ಬಂದರು. ಲೆಕ್ಕ ಹಾಕಿದ ಇವರು, ಇದರ ಬಡ್ಡಿಯ ಹಣದಲ್ಲಿ ನಾನು ಚಿಮಿಣಿ ದೀಪ ಉರಿಸಿಯೇನು ಎಂದರಂತೆ.

ಸಿಂಡಿಕೇಟ್ ಪ್ರತಿಷ್ಠಾನ ಚೇರ್ಕಾಡಿಯವರ ಸಾಧನೆಗೆ ಒಳ್ಳೆಯ ಪ್ರಚಾರ ನೀಡಿತ್ತು.  ಈಗ ಬಸ್ರೂರಿನ ಸ್ವಯಂಸೇವಾ ಸಂಸ್ಥೆ, ನಂದನಾ ರೆಡ್ಡಿಯವರ ಗ್ರಾಮಾಶ್ರಮ ಇವರ ಕೃಷಿ ಕ್ರಮದಲ್ಲಿ ಆಸಕ್ತಿ ವಹಿಸಿ ಪ್ರಚಾರ ನೀಡತೊಡಗಿದೆ. ಇದು ಬಿಟ್ಟರೆ ಸರಕಾರಿ ಕೃಪಾಪೋಷಿತ ಏಕಮುಖ ಕೃಷಿ ವಿಸ್ತರಣಾ ವ್ಯವಸ್ಥೆಗೆ ಇವರ ಸಾಧನೆಗೆ ಕನ್ನಡಿ ಹಿಡಿಯಬೇಕೆಂದು ಅನ್ನಿಸಿಲ್ಲ.

ರಾಗಿ ಕುಡಿಯುವವನಿಗೆ ಮೀಸೆ ಹಿಡಿಯಲು ಹದಿನೈದು ಜನ ಎಂಬ ಗಾದೆಯಿದೆ. ಕೃಷಿಗೆ ಪಂಪ್‌ಸೆಟ್ಟ್, ಮಶಿನರಿ ಅಂತ ತೀರಾ ಬೇಕಾದಕ್ಕೆ ಬೇಕೇ ಹೊರತು, ಈ ಯಂತ್ರಗಳು ನಮ್ಮ ಮೇಲೆ ಸವಾರಿ ಮಾಡಲು ಬಿಡಬಾರದು. ನಾವು ಅವುಗಳ ಮೇಲೆ ಸವಾರಿ ಮಾಡಬೇಕು. ನಾವು ರಾಷ್ಟ್ರಕ್ಕೆ, ಸಮಾಜಕ್ಕೆ, ಮಕ್ಕಳಿಗೆ ಭಾರವಾಗಬಾರದು ಎನ್ನುವ ರಾಯರು ಮೂರು ತತ್ವಗಳನ್ನು ಹೇಳುತ್ತಾರೆ. ಮುಕ್ಕಾಲಂಶ ಆದರೂ ಸ್ವಾವಲಂಬಿ ಆಗಬೇಕು. ಬಿಸಿಲು ಕುದುರೆ ಹಿಡಿಯಲು, ಆಕಾಶಕ್ಕೆ ಏಣಿ ಹಾಕಲು ಹೋಗಬಾರದು. ಕೃಷಿಯಲ್ಲಿ ಅನಿರೀಕ್ಷಿತ ಬಂದರೆ ಅದಕ್ಕೆ ಶರಣಾಗುವುದೇ ಒಳ್ಳೆಯದು. ಈ ಮಣ್ಣಿನಲ್ಲಿ ಹಲವು ಪ್ರಯೋಗ ಮಾಡಿದ್ದೇನೆ. ಹರಿವೆ ಬಿತ್ತಿದರೆ 21 ದಿನದಲ್ಲಿ, ಬಸಳೆ ನೆಟ್ಟು 45 ದಿನದಲ್ಲಿ ಮಾರಾಟ ಮಾಡಬಹುದು. ಮಳೆಗಾಲದಲ್ಲಿ ಕುಂಬಳ, ಬೆಂಡೆ, ಅಲಸಂಡೆ-ಹಲವು ತರಕಾರಿ ಮಾಡಿ ಮಿಕ್ಕಿದ್ದನ್ನು ಮಾರುತ್ತೇವೆ. ನಿಮಗೆ ಇಲ್ಲೇ ಪೇಟೆ ಹತ್ತಿರದಲ್ಲಿದೆ, ಹಳ್ಳಿಯಲ್ಲಿ ಇಷ್ಟು ಪ್ರತಿಫಲ ಸಿಗದಲ್ಲಾ ಎಂದರೆ, ಹಳ್ಳಿಯವರು ಮುಕ್ಕಾಲಂಶ ಸ್ವಾವಲಂಬಿ ಆದರೆ ಮತ್ತೆ ಚಿಂತೆ ಇಲ್ಲ. ನಮಗೆ ಬೇಕಾದ್ದನ್ನ ನಾವೇ ಬೆಳೆಸಬೇಕು. ಶುಂಠಿ, ಗೇರು, ಕರಿಮೆಣಸು-ಹೀಗೆ ಸ್ವಲ್ಪ ಕಾಲ ಇರಿಸಿ ಮಾರಬಹುದಾದ ಬೆಳೆ ತೆಗೆಯಬೇಕು. ಅವಸರದಲ್ಲಿ ಮಾರುಕಟ್ಟೆ ಹುಡುಕುವಂತಹ ಬೆಳೆ ಬೇಡ.

ತಮ್ಮ ಕೃಷಿ ಕ್ರಮಗಳೆಲ್ಲಾ ನಾಲ್ಕು ತಿಂಗಳು ಮಳೆ ಬರುವ ಎಲ್ಲೆಡೆಯಲ್ಲೂ ನಡೆಯುವಂತಾದ್ದು. ಈ ಕಾರಣಕ್ಕಾಗಿ ಈ ವಿಚಾರಕ್ಕೆ ಬೆಳಕು ಬೀಳಬೇಕು ಎನ್ನುತ್ತಾರೆ. ಒಂದು ಸಲ ಇಲ್ಲಿಗೆ ಭೇಟಿ ನೀಡಿದ ಹಿರಿಯ ಬ್ಯಾಂಕ್ ಅಧಿಕಾರಿಗಳು ಐಆರ್‌ಡಿಪಿ, ಅದು ಇದು ಅಂತ ಬಡ ಶ್ರಮಿಕ ವರ್ಗದವರಿಗೆ ಸಾಲ ಕೊಡುವ ಬದಲು ಇಂತಹ ಒಣಭೂಮಿಯ ಕೃಷಿಯ ಯಶೋಗಾಥೆ ತೋರಿಸಿ ಅದರ ಮರ್ಮ ತಿಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರಂತೆ.

ಕಾಂಕ್ರಿಟ್ ಗೋಡೆಗಳ ಒಳಗೆ ಮಕ್ಕಳನ್ನು ಕೂರಿಸಿ ನೀಡುವ ಇಂದಿನ ಶಿಕ್ಷಣದಲ್ಲಿ ಅವರಿಗೆ ಪ್ರಕೃತಿಯ ಮಹತ್ವ ಅರ್ಥವಾಗುವುದಿಲ್ಲ. ಪ್ರಕೃತಿಯೇ ದೇವರು. ಇದನ್ನು ಅರ್ಥ ಮಾಡಿಕೊಳ್ಳದೆ ಹೊರಗೆ ದೇವರ ಶೋಧ ವ್ಯರ್ಥ. ದನದ ಕೆಚ್ಚಲಿನಿಂದ ರಕ್ತ ಹೀರುವ ಇಂಬಳವಾಗದೆ, ನೊರೆ ಹಾಲು ಕುಡಿದ ಮಕ್ಕಳಾದರೆ ಯಾವುದಕ್ಕೂ ಕೊರತೆಯಿಲ್ಲ ಎನ್ನುವುದು ಚೇರ್ಕಾಡಿಯವರ ಸಂದೇಶ.

ಒಂದಿಷ್ಟು ಸೀಮೆಎಣ್ಣೆ, ಗಾಂಧೀಜಿ ಜನ್ಮದಿನದಂದು ಸಬ್ಸಿಡಿ ಬಟ್ಟೆ, ಕೃಷಿಗೆ ಅತ್ಯಲ್ಪ ನೆಲಗಡಲೆ ಹಿಂಡಿ ಬಿಟ್ಟರೆ ರಾಯರು ಕೊಂಡು ತರುವ ವಸ್ತುಗಳು ಅತ್ಯಲ್ಪ. ಯಾರಿಗಾದರೂ ಸರಕು ಸಂಸ್ಕೃತಿಯಲ್ಲಿ, ಒತ್ತುಗುಂಡಿ ತಂತ್ರಜ್ಞಾನದ ಸುಳಿಯಲ್ಲಿ ನಾವು ಎಷ್ಟು ಪರಾಧೀನವಾಗಿದ್ದೇವೆ ಎಂಬುದರ ಖಚಿತ ಚಿತ್ರ ಸಿಗಬೇಕಾದರೆ ಒಮ್ಮೆ ಚೇರ್ಕಾಡಿಯವರ ಆಶ್ರಮಕ್ಕೆ ಭೇಟಿ ನೀಡಬೇಕು. ಮಳೆಯಾಶ್ರಯದ ತುಂಬ ಅಪಾಯಗಳಿರುವ ಕೃಷಿ ಬಗ್ಗೆ ಸಂಶೋಧನೆ ಸಾಕಷ್ಟು ಆಗಿಲ್ಲ ಎಂಬ ದೂರು ಹೇಳುವವರು, ವಿಶೇಷವಾಗಿ ದುಡಿಯುವ ಚಲ, ತಿಳಿದುಕೊಳ್ಳುವ ಮುಕ್ತ ಮನಸ್ಸು ಇರುವ ನಮ್ಮ ದರ್ಕಾಸ್ತು ಮತ್ತಿತರ ಚಿಕ್ಕ ಒಣ ಭೂಮಿಗಳ ಒಡೆಯರು, ಪಾಲಿಸಿ ನಿರ್ಮಾತೃಗಳು ಮತ್ತು ವಿಸ್ತರಣಾ ಅಧಿಕಾರಿಗಳು ಇವರ ಕೃಷಿ ಕ್ರಮವನ್ನು ಅಭ್ಯಸಿಸಬೇಕು.

ಅಲ್ಲಿ ಪುಕುವೋಕಾ, ಇಲ್ಲಿ ಚೇರ್ಕಾಡಿ. ಒಂದೊಮ್ಮೆ ಪುಕುವೋಕಾನನ್ನು ನಂಬದವರೂ, ಚೇರ್ಕಾಡಿಯವರ ಸಾಧನೆ ಕಂಡರೆ ತಮ್ಮ ಅಭಿಪ್ರಾಯ ಬದಲಿಸಬಹುದು. ಮಾಹಿತಿ ತಿಳಿಯಬಯಸುವವರಿಗೆಲ್ಲಾ ರಾಯರದು ಮುಕ್ತ ಸ್ವಾಗತ.

ಚೇರ್ಕಾಡಿ ಕೃಷಿ-ಒಂದು ಹುಲ್ಲಿನ ಕ್ರಾಂತಿ!
ಚೇರ್ಕಾಡಿ ರಾಮಚಂದ್ರ ರಾಯರು  ನಮಗೇಕೆ ಪ್ರಸ್ತುತ
(ತರಂಗ-ಆಗಸ್ಟ್ 18, 1996-ನರೇಂದ್ರ ರೈ ದೇರ್ಲ)

ಚೇರ್ಕಾಡಿ ರಾಮಚಂದ್ರ ರಾಯರ ಕೃಷಿ ಸಾಹಸ-ಸಂದೇಶವನ್ನು ನೋಡುವಾಗ, ಕೇಳುವಾಗ ಪರ್ಯಾಯ ಕೃಷಿಯ ಹರಿಕಾರ ಜಪಾನಿನ ಮಸನೋಬ ಪುಕುವೋಕಾ ನೆನಪಿಗೆ ಬರುತ್ತಾರೆ. ಪುಕುವೋಕಾ ಭಾರತದವರೇ ಆಗಿದ್ದರೆ ಅವರನ್ನೇ ರಾಯರು ಕದ್ದದ್ದು ಎನ್ನಬಹುದಿತ್ತು ಅಥವಾ ಇವರಿಬ್ಬರೂ ಒಂದೇ ತಾಯಿಯ ಮಕ್ಕಳು ಎನ್ನಬಹುದಿತ್ತು. ಯಾಕೆಂದರೆ ಕೃಷಿಯಲ್ಲಿ ಇವರಿಬ್ಬರ ಐಡಿಯಾ-ಆವಿಷ್ಕಾರ ಒಂದೇ. ಅದು ಪೂರ್ಣ ಸಾವಯವದ ಒಂದು ಹುಲ್ಲಿನ ಕ್ರಾಂತಿ.

ಒಂದು ಹುಲ್ಲಿನ ಕ್ರಾಂತಿಯ ಜನಕ ಪುಕುವೋಕಾ ಅವರ ಕೃಷಿ ಚಿಂತನೆಗೂ ರಾಮಚಂದ್ರ ರಾಯರ ಸಾಗುವಳಿ ತಂತ್ರಕ್ಕೂ ಬಹಳ ಸಾಮ್ಯವಿದೆ. ಕೃಷಿಯ ನೆಪದಲ್ಲಿ ಭೂಮಿಯನ್ನು ಉಳುವುದು, ಕಡಿಯುವುದು, ತೋಡುವುದು ಇದಾವುದೂ ಪುಕುವೋಕ ಅವರಿಗೆ ಇಷ್ಟವಿರಲಿಲ್ಲ. ಮೊಳಕೆ-ಚಿಗುರು ಕ್ರಿಯೆ ಈ ನೆಲದಲ್ಲಿ ಅತ್ಯಂತ ಸಹಜಕ್ರಿಯೆ ಎಂಬುದನ್ನು ತಿಳಿದ ಅವರು ಬರಡು ನೆಲದಲ್ಲಿ ನೀರು ನಿಲ್ಲಿಸದೆ, ಉಳದೆ, ರಸಗೊಬ್ಬರ ಸುರಿಯದೆ ಕೃಷಿ ಮಾಡಿದರು. ಮಣ್ಣಿಗೆ ಸಹಜ ಸಾರವಿದೆ. ರಸಗೊಬ್ಬರದ ವಿಷವುಣ್ಣಿಸಿ ಮಾಡುವ ಕೃಷಿ ಹೆಡ್ಡಧೂಮದ ಕೃಷಿ ಸಾಧನೆ ಎನ್ನುವ ಅವರು ಉತ್ತಮ ಜಾತಿಯ ಭತ್ತ, ಬಾರ್ಲಿಯನ್ನು ನೆಲದ ಮೇಲೆ ಬೇಕಾಬಿಟ್ಟಿ ಉತ್ತಿದರು. ಅದರ ಮೇಲೆ ಭತ್ತದ ಹುಲ್ಲನ್ನು ಚೆಲ್ಲಿದರು. ಮಳೆನೀರಿಗೆ ಈ ಮೇಲು ಹಾಸು ಕೊಳೆಯಿತು. ಅತ್ಯಂತ ಸಹಜವೆಂಬಂತೆ ಕೊಳೆತ ಬೈಹುಲ್ಲಿನ ಎಡೆಯಿಂದ ಭತ್ತ ಚಿಗುರತೊಡಗಿತು. ತನ್ನಿಂದ ತಾನೆ ಹುಟ್ಟಿ ಬೆಳೆದು ಸಮೃದ್ಧ ಪ್ರತಿಫಲ ನೀಡುವ ಪ್ರಕೃತಿಯ ಬದುಕು ಬಗೆ ಪುಕುವೋಕಾ ಅವರನ್ನು ನಿರಂತರ ಗಹನ ಸೂಕ್ಷ್ಮಗಳಿಗೆ ತಳ್ಳಿತು. ಮೂವತ್ತು ವರ್ಷಗಳ ಕಾಲ ರಂಗಿನ ಲೋಕದಿಂದ ದೂರವುಳಿದು, ಉದ್ಯೋಗಕ್ಕೆ ರಾಜೀನಾಮೆ ನೀಡಿ ಹೊರಜಗತ್ತಿಗೆ ಅಜ್ಞಾತವಾಗಿ ಮಣ್ಣಿನ ಸಾಧ್ಯತೆಗಳನ್ನು ಅವರು ಬೆರಗುಗಣ್ಣಿನಿಂದ ನೋಡಿದರು.

ಚೇರ್ಕಾಡಿಯವರು ಮಾಡಿದ್ದು ಇದನ್ನೇ. ಒಂದೇ ಒಂದು ವ್ಯತ್ಯಾಸವೆಂದರೆ ಪುಕುವೋಕಾ ವಿಜ್ಞಾನ ವಿದ್ಯಾರ್ಥಿ. ನಿರಂತರ ಬೆನ್ನು ಬಿಡದಂತಹ ಹೊರ ಜಗತ್ತಿನ ಸಂಬಂಧ ಸಂವೇದನೆ ಅವರೊಂದಿಗೆ ಇತ್ತು. ಚೇರ್ಕಾಡಿಯವರಿಗೆ ತನ್ನ ತೋಟವೇ ಜಗತ್ತು. ಹೊರ ಜಗತ್ತನ್ನು ಅವರು ನಂಬುವುದು ಕಡಿಮೆ. ಪ್ರತಿಯೊಂದನ್ನು ತಾತ್ವಿಕವಾಗಿ ವಿವೇಚಿಸಿ ರಂಗಿನ ಬದುಕಿಗೆ ಸವಾಲಾಗುತ್ತಾರೆ. ಪುಕುವೋಕಾ-ಚೇರ್ಕಾಡಿ ಇವರಿಬ್ಬರೂ ಮಾಡಿರುವುದು ಕೇವಲ ಮಾನವಶಕ್ತಿಯನ್ನಷ್ಟೇ ಆಧರಿಸಿದ ಸ್ವಾವಲಂಬನೆಯ ಕೃಷಿಯನ್ನು. ಬಾಹ್ಯ ಒಳಸುರಿಗಳ ಪ್ರವೇಶವಿಲ್ಲದೆ, ಕಂಪ್ಯೂಟ ಲೆಕ್ಕಾಚಾರಗಳ ಕಿರಿಕಿರಿಯಿಲ್ಲದ ಸ್ವಯಂಪೂರ್ಣ ಸಹಜ ಕೃಷಿಯನ್ನು. ಆದರೆ ಪುಕುವೋಕಾ ಪಡೆದಷ್ಟು ಜನಾದರ ಚೇರ್ಕಾಡಿಯವರಿಗೆ ದೊರೆಯಲಿಲ್ಲ. ಅವರು ರೂಪಿಸಿದ ಸರ್ವೋದಯ ಕೃಷಿ ಪದ್ಧತಿ ಇಂದು ಪೂರ್ಣ ಎಂಬಂತೆ ಸ್ಥಗಿತಗೊಂಡಿದೆ. ಈಗ ಅವರಲ್ಲಿ ಉಳಿದಿರುವುದು ಕೃಷಿಕರ ಇಂದಿನ ಬದುಕಿಗೆ ತೀರ ಅಪ್ಯಾಯಮಾನವಾದ ಸಂದೇಶಗಳು.

ಕರ್ನಾಟಕದ ಅನೇಕ ಕಡೆಗಳಲ್ಲಿರುವ ಗುಡ್ಡೆ, ಕುಮೇರಿ, ಇಳಿಜಾರು ಮತ್ತು ಬಯಲು ಪ್ರದೇಶಗಳಲ್ಲಿ ಕಡಿಮೆ ಖರ್ಚಿನಿಂದ, ಕೇವಲ ಮಾನವ ಶ್ರಮದಿಂದಷ್ಟೇ ಹೆಚ್ಚು ಉತ್ಪನ್ನ ಪಡೆಯಲು ಚೇರ್ಕಾಡಿ ಪದ್ಧತಿಯನ್ನು ಉಪಯೋಗಿಸಬಹುದು. ಮುಖ್ಯವಾಗಿ ಪಶ್ಚಿಮ ಕರಾವಳಿಯ ಉದ್ದಕ್ಕೂ ಸಾಕಷ್ಟು ಮಳೆ ಬೀಳುವ ಗುಡ್ಡಗಳಲ್ಲಿ, ಕೃಷಿ ಜಮೀನುಗಳಲ್ಲಿ ಮನೆಗೆ ಆವರಿಸಿದ ವಳಚ್ಚಿಲ್‌ಗಳಲ್ಲಿ ಈ ಪದ್ಧತಿ ಅತ್ಯಂತ ಪರಿಣಾಮಕಾರಿ.

ರಾಮಚಂದ್ರ ರಾಯರ ಸಾಧನೆಯ ಮೂಲ ಇರುವುದು ಗಾಂಧೀ ತತ್ವಗಳ ಆಚರಣೆಯಲ್ಲಿ. ಯಾರೋ ಬೆಳೆಸಿದ್ದನ್ನು ನಾವು ತಿಂದರೆ ಅದು ಕಳ್ಳತನ-ಗಾಂಧಿಯ ಈ ಮಾತು ನನ್ನ ಸ್ವಾವಲಂಬನೆಗೆ ಮೂಲ. ಪರಾವಲಂಬಿಯಾಗಿ ನಾನು ಎಂದೂ ಬದುಕಲಾರೆ ಎನ್ನುತ್ತಾರೆ. ಮಣ್ಣಿನಲ್ಲಿ ಹಲವು ಪ್ರಯೋಗ ಮಾಡಿದ ರಾಯರು ಪ್ರಕೃತಿಯ ಚಕ್ರವನ್ನು ಪೂರ್ಣಗೊಳಿಸಿದ್ದಾರೆ ಅನ್ನಿಸುತ್ತದೆ. ಕೃಷಿಯಿಂದ ಪೂರ್ಣ ಸ್ವಾವಲಂಬಿ ಯಾಗಬೇಕು. ಬಿಸಿಲು ಕುದುರೆ ಹಿಡಿದು ನುಗ್ಗುವುದಲ್ಲ. ಅನಿರೀಕ್ಷಿತ ಆವಾಂತರಗಳಿಗೆ ಶರಣಾಗುವ ಮನಸ್ಸು ಬೇಕು-ಇದು ರಾಯರ ಕೃಷಿ ಸಂದೇಶ. ಕೃಷಿಯ ನಿಜವಾದ ಖುಷಿ ರಾಯರ ತೋಟವನ್ನು ನೋಡುವುದರಿಂದಲ್ಲ. ಹಾಗೆ ಮಾಡಿ ಅನುಭವಿಸುವುದರಿಂದ.

ಅನುಬಂಧ 2

ಸಂದರ್ಶಕರ ಅಭಿಪ್ರಾಯಗಳು
ಎಂ. ಯಮುನಾಚಾರ್ಯ, ಗಾಂಧೀ ವಿಚಾರ ಪರಿಷತ್, ಮೈಸೂರು (04.10.1965)

ಒಂದು ಎಕರೆ ಮತ್ತು ಸ್ವಾತಂತ್ರ್ಯ ಎಂಬ ಅಮೇರಿಕದ ಪುಸ್ತಕ ಒಂದಿದೆ. ಅದು ಓದಿದಾಗ ಸಾಧ್ಯವೇ ಎನಿಸುತ್ತದೆ. ಆದರೆ ಇಲ್ಲಿ ಶ್ರೀ ರಾಮಚಂದ್ರ ರಾಯರ ಸರ್ವೋದಯ ಪದ್ಧತಿಯ ವ್ಯವಸಾಯ ನೋಡಿದಾಗ ಒಂದು ಎಕರೆ ಭೂಮಿಯನ್ನು ಶ್ರದ್ಧೆ, ನಿಷ್ಠೆ, ಆಸಕ್ತಿ ಇಟ್ಟು ಶ್ರಮಿಸಿದರೆ, ಸ್ವಾತಂತ್ರ್ಯ ಸಾಧ್ಯವೆಂಬುದು ಅರ್ಥವಾಗುತ್ತದೆ. ವ್ಯವಸಾಯ ಈ ಕ್ರಮ ಹಿಡಿದರೆ ನಮ್ಮ ದೇಶದಲ್ಲಿ ಆಹಾರದ ಅಭಾವವೆಂಬುದು ಹಾರಿ ಹೋಗುವುದರಲ್ಲಿ ಸಂಶಯವಿಲ್ಲ. ಇಂತಹ ವ್ಯವಸಾಯ ಕ್ರಮ ನಾಡಿನಲ್ಲೆಲ್ಲಾ ಸಿದ್ಧಿಸುವಂತೆ ಮತ್ತು ವೃದ್ಧಿಯಾಗುವಂತೆ ಇಲಾಖೆಯವರು ವ್ಯವಸ್ಥೆ ಇಡಬೇಕಾದುದು ಅಗತ್ಯ. ನಾವು ಇಲ್ಲಿಗೆ ಬಂದು ಈ ಸತ್ಕಾರ್ಯ ವ್ಯವಸಾಯ ನೋಡಿ ಸಂತೋಷಗೊಂಡಿದ್ದೇವೆ.

ಕೆ.ವಿ. ಬೆಳಿರಾಯ, ಸಿಂಡಿಕೇಟ್ ಬ್ಯಾಂಕ್, ಮಣಿಪಾಲ

ಶ್ರೀ ರಾಮಚಂದ್ರ ರಾಯರ ಹೊಸ ರೀತಿಯ ಸರ್ವೋದಯ ಕೃಷಿ ಪದ್ಧತಿ ಆದರ್ಶನೀಯ ಮತ್ತು ಅನುಕರಣೀಯ. ಸಾಧ್ಯತೆಯನ್ನು ಕಣ್ಣು ಕಟ್ಟುವಂತೆ ಮಾಡಿ ತೋರಿಸಿದ ದಿಟ್ಟ ವ್ಯಕ್ತಿ. ಈ ರೀತಿಯ ಕೃಷಿಯನ್ನು ಅನುಸರಿಸಿ ಪ್ರತಿಯೊಬ್ಬ ರೈತನು ತನ್ನ ಮನಪೂರ್ಣ ಪ್ರಯತ್ನ ಮಾಡಿದರೆ ನಮ್ಮ ಮುಂದಿನ ಆಹಾರ ಅಭಾವದ ಪ್ರಶ್ನೆಯನ್ನು ನೀಗಿಸುವುದು ಎಷ್ಟರ ಕೆಲಸ?

ಡಾ ವಿ.ಎಸ್. ಆಚಾರ್ಯ, ಅಧ್ಯಕ್ಷರು, ಉಡುಪಿ ನಗರಸಭೆ (17-09-1969)

ಶ್ರೀ ರಾಮಚಂದ್ರ ರಾಯರ ಕೃಷಿಪದ್ಧತಿ, ಅದಕ್ಕಾಗಿ ಅವರು ಪಡುತ್ತಿರುವ ಶ್ರಮ, ದುಡಿಮೆ ನಿಜವಾಗಿ ಆದರ್ಶ. ನಿರಾಶೆಯ ಮೋಡ ಎಲ್ಲೆಲ್ಲೂ ಕವಿದಿರುವಾಗ ಸರ್ವೋದಯ ಪದ್ಧತಿ ಮಾತ್ರ ನಮ್ಮನ್ನು ಕಾಪಾಡಬಲ್ಲದು ಎನ್ನುವುದು ಇಲ್ಲಿಯ ಕೃಷಿಯನ್ನು ನೋಡಿ ಮನವರಿಕೆಯಾಗಿದೆ.

ಗೋಪಾಲಕೃಷ್ಣ ಎಮ್.ಆರ್. ರಾಮನ ಸಂಶೋಧನ ಸಂಸ್ಥೆ, ಬೆಂಗಳೂರು (22.11.1997)

ಶ್ರೀ ರಾಮಚಂದ್ರ ರಾಯರ ಜೀವನ ಕೃಷಿ ವಿಧಾನಗಳು, ಸ್ವಾವಲಂಬನೆಯ ದಾರಿಯಲ್ಲೊಂದು ಮುಖ್ಯವಾದ ಮೈಲಿಗಲ್ಲು. ಇದರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಮೊಗೆದಷ್ಟು ಮುಗಿಯದ ಜಲರಾಶಿ. ನಮ್ಮ ಇಂದಿನ ಸಮಾಜದ ಹೆಚ್ಚಿನಂಶ ಜನರು ಅವರ ಸಮಯ, ಕರ್ತವ್ಯ ಪ್ರಜ್ಞೆಯ ಜೀವನ ವಿಧಾನವನ್ನು, ಕೃಷಿ ಹಾಗೂ ಇತರ ಎಲ್ಲಾ ಕ್ಷೇತ್ರಗಳಲ್ಲೂ ಅನುಸರಿಸಿದರೆ, ದೇಶವು ಸುಸ್ಥಿಗೆ ಮರಳುವಲ್ಲಿ ಸಹಾಯವಾಗುತ್ತದೆ. ಶ್ರೀಯುತರ ತಪೋಭೂಮಿಯನ್ನು ನೋಡಿ ಅತೀವ ಆನಂದವಾಯಿತು. ನಮ್ಮ ಜನರು ಆರ್ಥಿಕ ಸಹಾಯಕ್ಕಾಗಿ ಇನ್ನೊಬ್ಬರತ್ತ ಕೈಚಾಚುವುದನ್ನು ಮರೆತು, ತಾವೇ ಸ್ವತಃ ಕಷ್ಟಪಟ್ಟು ಕೆಲಸ ಮಾಡಿ ಬೇರೊಬ್ಬರಿಗೆ ಉಪದ್ರವವಾಗದಂತೆ ಸ್ವಂತ ಬುದ್ಧಿಯನ್ನು ಉಪಯೋಗಿಸಿ ಕೆಲಸ ಮಾಡಿದಲ್ಲಿ ಖಂಡಿತವಾಗಿ ಜೀವನದಲ್ಲಿ, ನೈತಿಕವಾದ ಹಾದಿಯಲ್ಲಿ ಮುಂದೆ ಬರಲು ಸಾಧ್ಯ ಎನಿಸಿತು. ಇದು ಹಗಲಿನ ಸೂರ್ಯನಷ್ಟೇ ಸತ್ಯ. ಮಹಾತ್ಮಾ ಗಾಂಧಿಯವರ ತತ್ವಗಳನ್ನು ಇಂದಿಗೂ ಪಾಲಿಸುತ್ತಿರುವ ಶ್ರೀ ರಾಯರು ನೂರ್ಕಾಲ ಆರೋಗ್ಯವಾಗಿ ಬಾಳಿ ಬದುಕಿ, ಸಮುದ್ರದಲ್ಲಿ ಚಲಿಸುವ ಹಡಗುಗಳಿಗೆ ದಾರಿ ತೋರುವ ದೀಪಸ್ತಂಭಗಳಂತೆ ಜನರಿಗೆ ಮಾರ್ಗದರ್ಶಿಗಳಾಗಿ ಇರಲೆಂದು ಆಶಿಸುವೆ.