ಮಹಾತ್ಮಾ ಗಾಂಧಿ – ಚೇರ್ಕಾಡಿ ಗಾಂಧಿ

ಗಾಂಧೀಜಿಯ ಬಾಲ್ಯ ಸಹಜವಾಗಿತ್ತು. ತನ್ನ ಚಿಂತನ ಶಕ್ತಿಯಿಂದ ಉತ್ತಮ ಗುಣಗಳನ್ನು ರೂಢಿಸಿಕೊಳ್ಳಲು, ಉದಾತ್ತ ಗುಣಗಳ ತಾಯಿಯ ಮಾರ್ಗದರ್ಶನವಿತ್ತು. ತನ್ನ ಜೀವನದ ವಿವಿಧ ಹಂತಗಳಲ್ಲಿ ಅನುಭವಿಸಿದ ಪರಿಸ್ಥಿತಿಯನ್ನಾಧರಿಸಿ, ತನ್ನ ಸ್ವಂತ ಚಿಂತನೆಗಳ ಮೂಲಕ ಮಾನವ ಕುಲದ ಸಮಾನತೆಗಾಗಿ ತನ್ನ ಜೀವನವನ್ನು ಸವೆಸಿದ ಮಹಾ ಆತ್ಮ ಗಾಂಧೀಜಿ. ಭಾರತ ದೇಶದ ಮೂಲೆ ಮೂಲೆಗೂ ಸಂಚರಿಸಿ ಇಲ್ಲಿಯ ಪ್ರಜೆಗಳ ಕಷ್ಟಗಳನ್ನು ಅಭ್ಯಾಸ ಮಾಡಿದ್ದರು. ಭಾರತದ ಪ್ರತಿಯೊಬ್ಬ ಪ್ರಜೆಯ ಉದ್ದಾರಕ್ಕಾಗಿ ತನ್ನ ಜೀವಮಾನವಿಡೀ ಚಿಂತನೆ ನಡೆಸಿದ್ದಾರೆ. ಅವರ ಜೀವನ ತತ್ವಗಳನ್ನು ಸಂಪೂರ್ಣವಾಗಿ ಅರಿತುಕೊಂಡವರು ಈ ಪ್ರಪಂಚದಲ್ಲಿ ಸಿಗಲಾರರು. ಸಮಾಜದಲ್ಲಿ ಮಾನವರೇ ಸೃಷ್ಟಿಸಿಕೊಂಡ ಮೇಲುಕೀಳೆಂಬ ಪದ್ಧತಿಯಿಂದ ನಡೆಯುವ ಅನ್ಯಾಯವನ್ನು ಅಂತ್ಯಗೊಳಿಸುವತ್ತ ಚಿಂತನೆ ನಡೆಸಿ, ಸರಿಪಡಿಸಲು ಹೋರಾಡಿದ ಧೀಮಂತ ವ್ಯಕ್ತಿ. ಅವರನ್ನು ಅನುಸರಿಸುವುದು ಸುಲಭದ ಮಾತಲ್ಲ. ಅವರ ಜೀವನ ತೆರೆದ ಪುಸ್ತಕ. ಅದನ್ನು ಅಥೈಸಿಕೊಂಡು ಓದಿ ತನ್ನ ಜೀವನದಲ್ಲಿ ಅನುಷ್ಠಾರಗೊಳಿಸಿಕೊಂಡವರೆಲ್ಲರಿಗೂ ಜೀವನ ಅತ್ಯಂತ ಸುಖಮಯ.

ಗಾಂಧೀಜಿಯವರ ಸಮಕಾಲೀನರಲ್ಲದಿದ್ದರೂ, ಅವರನ್ನು ನೋಡಿ ಪ್ರೇರಣೆ ಪಡೆಯುವ ಅವಕಾಶ ದೊರೆಯದಿದ್ದರೂ, ಕೇವಲ ಅವರ ತತ್ವಗಳನ್ನು ಕೇಳಿ ಪ್ರಭಾವಿತರಾಗಿ, ಅವುಗಳಲ್ಲಿ ಕೆಲವನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ಮೂಡಿಸಿಕೊಂಡು, ಅವರ ಚಿಂತನೆಯ ಹಾದಿಯಲ್ಲಿಯೇ ನಡೆದು ಯಶಸ್ಸನ್ನು ಕಂಡ ಅಪರೂಪದ ವ್ಯಕ್ತಿ ದಿ ಚೇರ್ಕಾಡಿ ರಾಮಚಂದ್ರ ರಾಯರು. ಗಾಂಧೀಜಿಯವರ ಸ್ವಾವಲಂಬನೆ ತತ್ವ ಹಾಗೂ ಕೃಷಿ ಮತ್ತು ಕೈಗಾರಿಕೆಯೆರಡನ್ನೂ ಜೀವನದಲ್ಲಿ ಅಳವಡಿಸಿಕೊಂಡು, ತನ್ನ ಕಾಯಕದಲ್ಲಿಯೇ ಸಮಾಜಕ್ಕೆ ಮಾರ್ಗದರ್ಶಿಯಾಗಿ ಒಂಬತ್ತು ದಶಕಗಳ ಸಾರ್ಥಕ ಜೀವನ ನಡೆಸಿದವರು. ಭೂತಾಯಿಯನ್ನು ಅತ್ಯಂತ ಸರಳ ರೀತಿಯಲ್ಲಿ ಅರ್ಥ ಮಾಡಿಕೊಂಡು, ನೆಮ್ಮದಿಯ ಬದುಕನ್ನು ಕಂಡುಕೊಂಡ ವಿಶಿಷ್ಟ ವ್ಯಕ್ತಿ. ಪ್ರಪಂಚದ ಇತರ ಲಕ್ಷಾಂತರ ಜೀವಿಗಳಂತೆ ಪ್ರಕೃತಿಯಲ್ಲಿ ಬೆರೆತು, ತನ್ನ ಜೀವನಾವಶ್ಯಕತೆಗಳನ್ನು ಪೂರೈಸಿಕೊಂಡರೆ ಸುಖ, ಶಾಂತಿ ತಮ್ಮ ಕಾಲು ಬುಡದಲ್ಲಿ ಪಡೆಯಲು ಸಾಧ್ಯವೆನ್ನುವುದಕ್ಕೆ ಜೀವಂತ ಉದಾಹರಣೆಯಾಗಿದ್ದವರು. ಇವರಲ್ಲಿ ಗಾಂಧೀಜಿಯವರ ಮಟ್ಟದ ಉನ್ನತ ವಿಚಾರ ಲಹರಿಗಳು ಇಲ್ಲದಿರಬಹುದು. ಆದರೆ ಅನ್ನ ಮತ್ತು ವಸ್ತ್ರ ಸ್ವಾವಲಂಬನೆಯ ವಿಚಾರದಲ್ಲಿ ಅವರ ನೈಜ ಅನುಯಾಯಿಯಾಗಿದ್ದರು.

ಕೃಷಿಯನ್ನು ನಂಬಿ ಬದುಕು ಸಾಧಿಸಲು ಅಸಾಧ್ಯವೆನ್ನುವ ಕಾಲದಲ್ಲಿ, ಹಿರಿಯರ ಕೃಷಿತೋ ನಾಸ್ತಿ ದುರ್ಭಿಕ್ಷಂ ಎನ್ನುವುದನ್ನು  ಮತ್ತೊಮ್ಮೆ ಸಮಾಜಕ್ಕೆ ಸಾಧಿಸಿ ತೋರಿಸಿದ ಧೀಮಂತ ವ್ಯಕ್ತಿ ದಿ ಚೇರ್ಕಾಡಿ ರಾಮಚಂದ್ರ ರಾಯರು.

ಹೋರಾಟದ ಶೈಶವ

ಚೇರ್ಕಾಡಿಯವರ ಜನನ ದಿನಾಂಕವನ್ನು ಕರಾರುವಾಕ್ಕಾಗಿ ನೆನಪಿಟ್ಟು ಕೊಂಡವರಿಲ್ಲ. ಬಡತನದ ಕುಟುಂಬಗಳಲ್ಲಿ ಜೀವನ ನಿರ್ವಹಣೆಯೇ ಮೂಲಭೂತ ಅವಶ್ಯಕತೆ ಹಾಗೂ ಸಮಸ್ಯೆ. ಇಂತಹ ಸಂಸಾರಗಳಲ್ಲಿ ಹುಟ್ಟು ಸಾವಿಗೆ ಹೆಚ್ಚಿನ ಮನ್ನಣೆಯಿಲ್ಲ. ತಂದೆ ನಾರಾಯಣ ರಾವ್, ಮಡಿಕೇರಿ ಜಿಲ್ಲೆಯ ಅರೆಕಾಡು ಎನ್ನುವ ಸಣ್ಣ ಹಳ್ಳಿಯಲ್ಲಿ ಸ್ವಲ್ಪ ಜಮೀನು ಹೊಂದಿದ್ದವರು. ಯಾವುದಕ್ಕೂ ನಿಖರ ಮಾಹಿತಿಯಿಲ್ಲ. ಅದರಲ್ಲಿ ಬರುತ್ತಿದ್ದ ಆದಾಯ ಸಂಸಾರದ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಪಿತ್ರಾರ್ಜಿತವಾಗಿ ಬಂದ ಭವಿಷ್ಯ, ನಾಟಿವೈದ್ಯ ಮತ್ತು ತಾಂತ್ರಿಕ ವಿದ್ಯೆಗಳನ್ನು ಅವಲಂಬಿಸಿದ್ದರು. ಆದರೂ ನಿಶ್ಚಿಂತೆಯ ದಿನಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಸೇವೆಗೆ ಇಂತಿಷ್ಟೇ ಶುಲ್ಕವೆಂದು ನಿರ್ಧರಿಸುವ ದಿನಗಳಾಗಿರಲಿಲ್ಲ. ಕೊಟ್ಟದ್ದನ್ನು ಪ್ರಸಾದವೆಂದು ಸ್ವೀಕರಿಸುವ ಕಾಲ. ಇವರ ಸಹಾಯ, ಸೇವೆ ಕೋರಿ ಬರುವವರೆಲ್ಲಾ ತಾವೇ ಸ್ವತಃ ಕಷ್ಟ ಎದುರಿಸುತ್ತಿದ್ದವರು. ಹಲವಾರು ಸಂದರ್ಭಗಳಲ್ಲಿ ಪರವೂರಿಗೆ ಕೆಲಸದ ನಿಮಿತ್ತ ಹೋಗಬೇಕಾಗುತ್ತಿತ್ತು. ಕೆಲವು ಸಲ ಅದೇ ದಿನ ಮರಳಿ ಮನೆಗೆ ಬರಲಾಗುತ್ತಿರಲಿಲ್ಲ. ಮನೆಯಲ್ಲಿ ಮುಂಚಿತವಾಗಿ ತಿಳಿಸುವುದು ಅಸಾಧ್ಯ. ಅದೇ ದಿನ ಮರಳಿ ಬಾರದ ದಿನಗಳನ್ನು ಮನೆಯವರೆಲ್ಲಾ ಆತಂಕದಲ್ಲಿಯೇ ಬೆಳಗು ಮಾಡುವುದು ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ತಾಯಿ ಜಾನಕಿಯ ಮನಸ್ಥಿತಿ, ಒತ್ತಡ ಊಹಿಸಲು ಸಾಧ್ಯವಿಲ್ಲ. ಸದಾ ಅಸ್ಥಿರತೆಯಲ್ಲಿ ನಾಳಿನ ದಿನಗಳನ್ನು ಕಳೆಯುತ್ತಿರುವಾಗ ಮಕ್ಕಳು ಹುಟ್ಟಿದ ದಿನಾಂಕವನ್ನು ನೆನೆಪಿಟ್ಟುಕೊಳ್ಳುವುದೂ ಸುಲಭವಲ್ಲ. ಜಾತಕ ಬರೆಸುವ ಕ್ರಮವಿತ್ತು. ಅದನ್ನು ಜೋಪಾನವಾಗಿ ಕಾಯ್ದಿಡುವ ವ್ಯವಸ್ಥೆ ಕಡಿಮೆ. ರಾಯರ ಜನ್ಮ ದಿನದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ತಿಳುವಳಿಕೆ ಬಂದ ನಂತರ ಊಹಿಸಿಕೊಂಡ ವರ್ಷ 1919ನೇ ಇಸವಿ.

ರಾಯರಿಗೆ ಸುಮಾರು ಎರಡು ವರ್ಷ ವಯಸ್ಸಾದಾಗ ಒಂದು ದಿನ ತಂದೆ ಸಾಯಂಕಾಲ ಮನೆಗೆ ಮರಳಲಿಲ್ಲ. ತಾಯಿ ಆತಂಕದಲ್ಲಿಯೇ ರಾತ್ರಿ ಕಳೆದರು. ಮುಂಜಾನೆ ನೆರೆಹೊರೆಯವರು ತಂದೆಯ ಶವವನ್ನು ಮನೆಯ ಮುಂದೆ ತಂದಿರಿಸಿದರು. ಯಾರಿಗೂ ಸಾವಿನ ಖಚಿತವಾದ ಕಾರಣ ಗೊತ್ತಿಲ್ಲ. ಕಣ್ಣಾರೆ ಕಂಡವರಿಲ್ಲ. ನಿಜ ತಿಳಿಸಲು ತಂದೆಯ ಜೀವದಲ್ಲಿ ಉಸಿರಿಲ್ಲ. ಅದು ಹೃದಯ ಸ್ಥಂಭನ, ವಿಷ ಜಂತುವಿನ ಕಡಿತ ಅಥವಾ ತಾಂತ್ರಿಕ ವಿದ್ಯೆಯನ್ನು ಪ್ರಯೋಗಿಸುತ್ತಿದ್ದರಿಂದ ಶತ್ರುಗಳ ಪ್ರತೀಕಾರವೂ ಇದ್ದಿರಬಹುದು. ಬಂಧು ಬಾಂಧವರನ್ನು ಕರೆಯಲು ಸಂವಹನ ಮಾಧ್ಯಮ ಇಂದಿನಂತಿರಲಿಲ್ಲ. ನೆರೆಹೊರೆಯವರೇ ಸೇರಿ ಶವ ಸಂಸ್ಕಾರ ನಡೆಸಿದರು. ರಾತ್ರಿಯಿಡೀ ತಾಯಿ ಹೇಗೆ ಸುಧಾರಿಸಿಕೊಂಡರೆನ್ನುವುದು ರಾಯರ ಊಹನೆಗೂ ನಿಲುಕದ ವಿಷಯ. ಆದರೆ ಮುಂಜಾನೆ ಎದ್ದಾಗ, ತಾಯಿ ಪತಿಯನ್ನನುಸರಿಸಿ ಮರಳಿ ಬಾರದ ಪ್ರಪಂಚಕ್ಕೆ ಪ್ರಯಾಣಿಸಿದ್ದು ಅವರ ನಿಶ್ಚಲ ದೇಹವನ್ನು ನೋಡಿದಾಗಲೇ ತಿಳಿದದ್ದು.

ಬಾಲ್ಯ ವಿವಾಹ ಸಾಮಾನ್ಯವಾಗಿದ್ದ ಕಾಲವಾದ್ದರಿಂದ, ರಾಯರ ಹಿರಿಯಕ್ಕನನ್ನು ಸಣ್ಣ ಪ್ರಾಯದಲ್ಲಿಯೇ ಧರ್ಮಸ್ಥಳದ ಮುಖ್ಯಪ್ರಾಣ ಎನ್ನುವವರೊಂದಿಗೆ ವಿವಾಹ ಮಾಡಿಸಿದ್ದರು. ಅವರಿಗೆ ಸುದ್ದಿ ತಿಳಿದು ಅರೆಕಾಡಿಗೆ ಬರುವಷ್ಟರಲ್ಲಿ ವೈಕುಂಠ ಸಮಾರಾಧನೆ ನಡೆಸಬೇಕಾದ ದಿನಗಳು ಬಂದಿದ್ದವು. ಭಾವನ ಸಂಸಾರವೂ ಬಡತನದ್ದೇ. ಇಲ್ಲಿಯ ಆಸ್ತಿ ಪಾಸ್ತಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡು ಎರಡೂ ಕಡೆಯಿರಲು  ಸಾಧ್ಯವಿರಲಿಲ್ಲ.  ಆದ್ದರಿಂದ ಎಲ್ಲಾ ನಾಲ್ಕು ಜನ ಅನಾಥ ಮಕ್ಕಳನ್ನುರಾಯರ ಎರಡನೇ ಅಕ್ಕ, ಅಣ್ಣ ಮತ್ತು ತಮ್ಮ ತಮ್ಮೊಡನೆ ಧರ್ಮಸ್ಥಳಕ್ಕೆ ಕರೆದೊಯ್ದರು. ಅಲ್ಲಿಗೆ ರಾಯರ ಜನ್ಮಸ್ಥಳದ ನಂಟು ಮುಗಿಯಿತು. ನಂತರ ವಾಪಾಸು ಹೋಗುವ ಪ್ರಮೇಯ ಬರಲಿಲ್ಲ. ತಂದೆಯ ಮನೆ, ಆಸ್ತಿಯೆಲ್ಲಾ ಮಕ್ಕಳೊಂದಿಗೆ ಅನಾಥವಾಯಿತು. ಮುಂದೆ ಅದರ ಭೂಕಂದಾಯವನ್ನು ಯಾರೂ ಕಟ್ಟದ್ದರಿಂದ, ಸರಕಾರ ಮನೆ ಜಮೀನನ್ನು ಹರಾಜು ಹಾಕಿ ಯಾರದೋ ಪಾಲಾಗುವಂತೆ ನೋಡಿಕೊಳ್ಳಲಾಯಿತು.

ಧರ್ಮಸ್ಥಳದ ಅಕ್ಕ ಭಾವನ ಸಂಸಾರ ಕೂಡಾ ಬಡತನದ್ದೇ. ಎಷ್ಟು ಕಷ್ಟವೆನ್ನುವುದನ್ನು ತಿಳಿದುಕೊಳ್ಳುವ ಶಕ್ತಿ ರಾಯರ ಮಿದುಳಿಗಿರಲಿಲ್ಲ. ಹೊಟ್ಟೆಗೆ ಹಿಟ್ಟು ಬೀಳುತ್ತಿತ್ತು. ಮಕ್ಕಳಾಟದಲ್ಲಿ ಸಮಯ ಜಾರುತ್ತಿತ್ತು. ಇಲ್ಲಿ ಕಳೆದ ದಿನಗಳನ್ನು ಮುಂದೆ ನೆನಪಿಸಿಕೊಳ್ಳಲಾಗಲಿಲ್ಲ. ಹೆತ್ತವರ ವಾತ್ಸಲ್ಯ ವಂಚಿತರಾಗಿ ಬದುಕಿದರೂ, ಮುಂದಿನ ದಿನಗಳಲ್ಲಿ ಅದರ ಬಗ್ಗೆ ಕೊರಗಿದವರಲ್ಲ. ಶೈಶವದಿಂದ  ಪ್ರಾರಂಭವಾದ ಹೋರಾಟವನ್ನು ಸಹಜವಾಗಿ ಸ್ವೀಕರಿಸಿ, ಸಮಾಜದಲ್ಲಿ ದಿಟ್ಟ ಹೆಜ್ಜೆಗಳನ್ನಿಡುತ್ತಾ ಯಾರಿಗೂ ತಲೆಬಾಗದೆ, ಸ್ವತಂತ್ರರಾಗಿ ಬದುಕಿದರು. ಇವರ ಸಮಗ್ರ ಬದುಕನ್ನು ಅವಲೋಕಿಸಿದಾಗ ಇವರೊಬ್ಬ ಹುಟ್ಟು ಹೋರಾಟಗಾರರೆನಿಸದೆ ಇರದು. ಅವರ ಜೀವನ ತೆರೆದ ಪುಸ್ತಕದಂತಿದೆ.

ಅರೆಕಾಡಿನಿಂದ ಚೇರ್ಕಾಡಿಗೆ

ಧರ್ಮಸ್ಥಳದ ಭಾವನ ಮನೆಯಲ್ಲಿ ಒಂದು ವರ್ಷ ಕಳೆದಿರಬಹುದು. ಇವರ ಎರಡನೇ ಅಕ್ಕನನ್ನು ಚೇರ್ಕಾಡಿಯಲ್ಲಿರುವ ವೆಂಕಟ್ರಾಯರಿಗೆ ಮದುವೆ ಮಾಡಿ ಕೊಡಲಾಯಿತು. ಮದುವೆ ಧರ್ಮಸ್ಥಳದಲ್ಲಿ. ಸಮಾರಂಭ ಸಂಭ್ರಮದಲ್ಲಿ ನಡೆದಿತ್ತೋ ಇಲ್ಲವೋ ಎಂಬುದರ ಅರಿವಿಲ್ಲ. ಚೇರ್ಕಾಡಿಯ ಭಾವನ ಸ್ಥಿತಿಯೂ ಉಳಿದವರಂತೆಯೇ. ಆದರೂ ಮರುದಿನ ಎರಡನೇ ಅಕ್ಕ ಮೀನಾಕ್ಷಿಯೊಂದಿಗೆ ಭಾವ ವಾಪಾಸು ಪ್ರಯಾಣ ಪ್ರಾರಂಭಿಸಿದಾಗ, ಮೂರು ಜನ ಗಂಡುಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡು ಧರ್ಮಸ್ಥಳದಿಂದ ಕಾರ್ಕಳದ ವರೆಗೆ ಎತ್ತಿನ ಬಂಡಿ, ಅಲ್ಲಿಂದ ಹಿರಿಯಡ್ಕದ ವರೆಗೆ ಬಸ್ಸು ನಂತರದ ಐದು ಮೈಲು ಕಾಲು ನಡಿಗೆಯಲ್ಲಿ  ಪ್ರಯಾಣಿಸಿ ತಮ್ಮ ಮನೆಗೆ ತಲುಪಿದರು. ಹೀಗೆ ಮೂರು ವರ್ಷಗಳ ಅವಧಿಯಲ್ಲಿ, ತಿಳಿದುಕೊಳ್ಳುವ ಶಕ್ತಿಯಿಲ್ಲದ ಸಮಯದಲ್ಲಿ, ಊಹಿಸಲಾಗದ ಘಟನೆಗಳು ಕನಸಿನಂತೆ ನಡೆದು ಹೋದವು. ರಾಯರ ಬಾಲ್ಯ ಅಯೋಮಯ.

ರಾಯರ ಪುಟ್ಟ ಪುಟ್ಟ ಹೆಜ್ಜೆಗಳು ಬಲಿಯಲು ಪ್ರಾರಂಭಿಸಿತು. ಮನೆಯಲ್ಲಿ ಭಾವನಿಗೆ ನಿರ್ದಿಷ್ಟ ಆದಾಯವಿರಲಿಲ್ಲ. ಸಣ್ಣ ಜಮೀನಿದ್ದರೂ ಬೇಸಾಯ ಮಾಡುತ್ತಿರಲಿಲ್ಲ. ನೆರಹೊರೆಯವರ ವ್ಯಾಜ್ಯ ತೀರ್ಮಾನ ಮಾಡುವುದು, ಕಾನೂನು ಹೇಳಿಕೊಡುವುದು ಇದರಿಂದಲೇ ಸಣ್ಣ ಗಳಿಕೆ. ಮನೆಯಲ್ಲಿ ಎರಡು ದನ, ಅದರಲ್ಲಿ ಸ್ವಲ್ಪ ಉತ್ಪತ್ತಿ. ದನ ಮೇಯಿಸಿಕೊಂಡು, ಗುಡ್ಡ ಅಲೆದಾಡಿಕೊಂಡು, ಪ್ರಕೃತಿಯ ಮಡಿಲಲ್ಲಿ, ಅತಂತ್ರ ಬದುಕಿನಲ್ಲಿಯೂ ಸ್ವತಂತ್ರ ಬಾಲ್ಯ ಕಳೆಯುತ್ತಿತ್ತು.

ಹೀಗೊಮ್ಮೆ ಮನೆಯ ಹತ್ತಿರ ಬಂದ ಅಲೆಮಾರಿ ದನವನ್ನೋಡಿಸಲು ಹೋಗಿ ಆವರಣವಿಲ್ಲದ ನೀರಿದ್ದ ಬಾವಿಗೆ ರಾಯರು ಬಿದ್ದರು. ಜನಸಂಖ್ಯೆ ಕಡಿಮೆಯಿರುವ ಪ್ರದೇಶದಲ್ಲಿದ್ದ ಬಾವಿಯ ಕಡೆ ಗಮನವಿಟ್ಟಿರುವವರು ಕಡಿಮೆ. ಅದೃಷ್ಟವಶಾತ್ ನೆರೆಮನೆಯಲ್ಲಿದ್ದವರು ನೋಡಿ ಬೊಬ್ಬೆ ಹಾಕಿ ಜನ ಸೇರಿಸುವಷ್ಟರಲ್ಲಿ ಮಾಣಿ ಕೈಕಾಲು ಬಡಿದು ಸುಸ್ತಾಗಿ ನೀರು ಕುಡಿಯಲು ಪ್ರಾರಂಭಿಸಿಯಾಗಿತ್ತು. ಬಾವಿಯಿಂದ ಮೇಲೆತ್ತುವಾಗ ಮೇಲಿದ್ದವರಿಗೆ ಮಾಣಿಯು ಬದುಕುವ ಭರವಸೆಯಿರಲಿಲ್ಲ. ಆದರೆ ಮುಂದೆ ಸಮಾಜಕ್ಕೆ ಮಾರ್ಗದರ್ಶಕರಾಗಿ ಬದುಕುವ ಜವಾಬ್ದಾರಿಯನ್ನು ಭೂಮಿಗೆ ಬರುವಾಗಲೇ ಬ್ರಹ್ಮ ಬರೆದು ಕಳುಹಿಸಿದ್ದರಿಂದ, ಬಾವಿಯಿಂದ ಮೇಲೆ ಬರುವಾಗ ಇನ್ನೂ ಉಸಿರಾಟ ನಿಂತಿರಲಿಲ್ಲ. ಹೊಟ್ಟೆಯೊಳಗಿದ್ದ ನೀರನ್ನು ಕಾರಿಸಿದ ನಂತರ ಯಥಾಸ್ಥಿತಿಗೆ ತಲುಪಿದರು.

ಭಾವ ದುರ್ವಾಸನ ಅವತಾರ. ತಪ್ಪು ಮಾಡಿದರೆ ಕಠಿಣ ಶಿಕ್ಷೆ. ಅದು ಮನೆಯಲ್ಲಿಯೂ, ಸಮಾಜದಲ್ಲಿಯೂ ನಡೆಯುತ್ತಿತ್ತು. ಅವರೊಂದಿಗೆ ಜಗಳಕ್ಕೆ ನಿಂತವರಿಗೆ ಬಿಸಿ ಎಣ್ಣೆ ಮಾಡಿ ಮೈಮೇಲೆ ಎರಚುವುದರಿಂದ ಹಿಡಿದು ನಾನಾ ರೀತಿಯ ಪ್ರಯೋಗ ಅವರಲ್ಲಿತ್ತು. ತಪ್ಪು ಮಾಡಿದಾಗ ಕಟ್ಟಿ ಹಾಕಿ, ಬೆಲ್ಲದ ನೀರು ಮೈಮೇಲೆ ಸುರಿದು ನಂತರ ಚೌಳಿಕೆಂಪಿರುವೆಯನ್ನು ಮೈಮೇಲೆ ಬಿಡುವ ಕಾರ್ಯಕ್ರಮಗಳೂ ಇರುತ್ತಿದ್ದವು. ಬಾಲ್ಯದಲ್ಲಿ ಸಹಜ ಕುತೂಹಲದಿಂದ, ಸೇದಿ ಬಿಸಾಕಿದ ಬೀಡಿ ತುದಿಗಳನ್ನು ಸಂಗ್ರಹಿಸಿ ಸೇದುವ ಚಟವನ್ನು ಪ್ರಾರಂಭಿಸಿದ್ದರು. ಅದನ್ನು ಅಕ್ಕ ನೋಡಿ, ಭಾವನಲ್ಲಿ ತಿಳಿಸುವೆನೆಂದೊಡನೆ, ಅವರ ಶಿಕ್ಷೆಗಳ ನಮೂನೆ ಜ್ಞಾಪಿಸಿಕೊಂಡು ಅದರ ಗೊಡವೆಗೆ ಮುಂದೆ ಹೋಗಲಿಲ್ಲ.

ಗಾಂಧೀ ತತ್ವ – ವಸ್ತ್ರ ಸ್ವಾವಲಂಬನೆ

ರಾಯರಿಗೆ ಶಿಕ್ಷಣ ಪಡೆಯುವ ವಯಸ್ಸು ಮೀರಿದರೂ ಮನೆಯ ಹತ್ತಿರ ಶಿಕ್ಷಣ ಸಂಸ್ಥೆ ಇಲ್ಲದ್ದರಿಂದ ಶಾಲೆಗೆ ದಾಖಲಾಗಲು ಸಾಧ್ಯವಾಗಲಿಲ್ಲ. ಮನೆಯಲ್ಲಿಯೇ ಭಾವನಿಂದ ಅಕ್ಷರಾಭ್ಯಾಸ, ಮಂತ್ರ ಪಠಣ, ಪೂಜಾ ವಿಧಿಗಳು ಕಲಿಸಲ್ಪಟ್ಟವು. ಗುರುಗಳ ಸ್ಥಾನದಲ್ಲಿ ನಿಂತು, ತನಗೆ ತಿಳಿದಷ್ಟನ್ನು ವರ್ಗಾಯಿಸಿದ್ದರು. ಸರಿಯಾಗಿ ಒಪ್ಪಿಸದಿದ್ದರೆ ಶಿಕ್ಷೆ ತಪ್ಪಿದ್ದಲ್ಲ. ಆದ್ದರಿಂದ ಅವರು ಕಲಿಸಿದ್ದನ್ನೆಲ್ಲಾ ಚಾಚೂ ತಪ್ಪದೆ ಒಪ್ಪಿಸುತ್ತಿದ್ದರು.

1928ರಲ್ಲಿ ಚೇರ್ಕಾಡಿಯ ಮುಂಡ್ಕಿನಜೆಡ್ಡಿನಲ್ಲಿ ಊರಿನ ಮಹನೀಯರ ಶ್ರಮದಿಂದ ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ನಂತರ ಒಂದೆರಡು ವರ್ಷದೊಳಗೆ ರಾಯರು ಆಧುನಿಕ ಉಡುಗೆ ತೊಡುಗೆ ರಹಿತರಾಗಿ ತನ್ನ ಹತ್ತನೇ ವರ್ಷದ ಸುಮಾರಿಗೆ ಒಂದನೇ ತರಗತಿಗೆ ದಾಖಲಾದರು. ಭಾವನಿಂದ ಕಲಿತ ಮನೆಪಾಠದ ವಿದ್ಯೆಯ ಹಿನ್ನೆಲೆ, ಇವರ ಬುದ್ಧಿಮತ್ತೆ ಮತ್ತು ಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಸೇರಿದ ಆರು ತಿಂಗಳೊಳಗೆ ಇವರನ್ನು ಎರಡನೇ ತರಗತಿಗೆ ಶಿಫಾರಸು ಮಾಡಿ ಸೇರಿಸಲಾಯಿತು. ಇದು ಶಾಲೆಗೆ ಸೇರಿದ ಒಂದು ವರ್ಷದಲ್ಲಿಯೇ ಮೂರನೇ ತರಗತಿಗೆ ತೇರ್ಗಡೆಯಾಗಲು ಸಹಕಾರಿಯಾಯಿತು.

ಗಾಂಧೀಜಿಯವರ ಹೋರಾಟದ ದಿನಗಳವು. ಎಲ್ಲರೂ ಸ್ವತಂತ್ರ ಭಾರತದ ಕನಸು ಕಾಣುತ್ತಿದ್ದವರು. ಶಾಲೆಯಲ್ಲಿ ಮಕ್ಕಳಿಗೆ ಗಾಂಧೀ ತತ್ವ ಮತ್ತು ವಿಚಾರಗಳನ್ನು ವಿವರಿಸುತ್ತಿದ್ದ ಕಾಲವದು. ಚೇರ್ಕಾಡಿ ಶಾಲೆಯ ರಾಮಚಂದ್ರ ಪಾಟೀಲ ಮಾಸ್ತರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗಾಂಧೀಜಿಯವರ ವಸ್ತ್ರ ಸ್ವಾವಲಂಬನೆಯನ್ನು ಅನುಷ್ಠಾನ ಗೊಳಿಸಲೋಸುಗ ಒಂದು ಮಗ್ಗವನ್ನು ಶಾಲೆಯಲ್ಲಿ ಸ್ಥಾಪಿಸಿ, ಮಕ್ಕಳಿಗೆ ನುರಿತವರಿಂದ ಬಟ್ಟೆ ತಯಾರಿಸುವುದನ್ನು ಪಠ್ಯೇತರ ಚಟುವಟಿಕೆಯಾಗಿ ಕಲಿಸಲು ಪ್ರಾರಂಭಿಸಿದರು. ಅವರಿಗೆ ಗಾಂಧೀ ವಿಚಾರದಲ್ಲಿ ಅಚಲ ಶ್ರದ್ಧೆ. ಅದನ್ನು ಮಕ್ಕಳಿಗೆ ಆಸಕ್ತಿಯಿಂದ ಬೋಧಿಸುತ್ತಿದ್ದರು. ವಿದೇಶಿ ವಸ್ತುಗಳ ಬಹಿಷ್ಕಾರದ ಸಮಯದಲ್ಲಿ ಮಕ್ಕಳಿಗೆ ಸ್ವತಂತ್ರ ಜೀವನದ ಮಾಹಿತಿಯನ್ನು ಕೊಡುವ ಕಾರ್ಯಕ್ರಮದ ಸೂಕ್ಷ್ಮವನ್ನು ಅರಿತ ರಾಯರು ತನ್ನ ಜೀವನೋಪಾಯ ವೃತ್ತಿಗೆ ಇದು ಸೂಕ್ತ ಅಂದುಕೊಂಡರು.

ತರುಣಾವಸ್ಥೆಯತ್ತ ಹೆಜ್ಜೆಯಿಡುತ್ತಿದ್ದ ರಾಯರಿಗೆ ಜೀವನದಲ್ಲಿ ನೆಲೆ ಕಂಡುಕೊಳ್ಳುವ ಅಗತ್ಯವಿತ್ತು. ವಸ್ತ್ರ ತಯಾರಿಸುವುದರಿಂದ ಸ್ವತಂತ್ರ ಬದುಕು ಸಾಧಿಸಲು ಸಾಧ್ಯವಿರುವ ಹಿನ್ನಲೆ ಮತ್ತು ಗಾಂಧೀಜಿಯ ತತ್ವ ವಿಚಾರಗಳು ಅವರಿಗೆ ಭರವಸೆ ಮೂಡಿಸಿದ್ದರಿಂದ, ಆಸಕ್ತಿಯಿಂದ ಮಗ್ಗದಲ್ಲಿ ವಸ್ತ್ರ ತಯಾರಿಸುವ ತರಬೇತಿ ಪಡೆಯಲಾರಂಭಿಸಿದರು. ಶಾಲೆಯ ಶಿಕ್ಷಣ ಮಹತ್ವವೆನಿಸಲಿಲ್ಲ. ವೃತ್ತಿ ಶಿಕ್ಷಣ ಪಡೆದುಕೊಂಡ ರಾಯರು, ಮೂರನೇ ತರಗತಿಗೆ, ಶಾಲೆಯ ಶಿಕ್ಷಣಕ್ಕೆ ವಿದಾಯ ಹೇಳಿದರು. ನೇಕಾರಿಕೆ ಕುಲಕಸುಬಲ್ಲದಿದ್ದರೂ, ನೇಕಾರರಿಗಿಂತ ಚೆನ್ನಾಗಿ ನೇಯುವ ಕಲೆಯನ್ನು ಕರಗತ ಮಾಡಿಕೊಂಡರು. ಇವರ ಸ್ವಯಂ ಸ್ಪೂರ್ತಿಯಿಂದ ಕಲಿತ ವಿದ್ಯೆಯಿಂದ ಆದಾಯ ಪಡೆಯುವುದನ್ನು ಗಮನಿಸಿದ ಭಾವ, ಮನೆಯಲ್ಲಿಯೇ ಒಂದು ಮಗ್ಗ ಹೊಂದಿಸಿಕೊಟ್ಟು ಅವರ ಸಂಸಾರದ ಆದಾಯ ಹೆಚ್ಚಿಸಿಕೊಳ್ಳುವಂತೆ ನೋಡಿಕೊಂಡರು. ರಾಯರು ಕೂಡಾ ತನ್ನ ಭವಿಷ್ಯದ ಚಿಂತನೆ ಮಾಡಿ, ತಾನು ದುಡಿದ ಹಣದಲ್ಲಿ ಸ್ವಲ್ಪ ಭಾಗ ತನ್ನ ಉಪಯೋಗಕ್ಕೆ ಉಳಿಸಲು ಮನಸ್ಸು ಮಾಡಿದರು.  ರಾಯರ ಈ ಚಿಂತನೆ ಭಾವನಿಗೆ ಹಿಡಿಸಲಿಲ್ಲ. ಒಂದು ದಿನ ಜಗಳ ಮಾಡಿ ಉಟ್ಟ ಬಟ್ಟೆಯಲ್ಲಿಯೇ ಮನೆ ಬಿಡುವಂತೆ ಆದೇಶ ಮಾಡಿದರು. ಅದನ್ನು ಸವಾಲಾಗಿ ಸ್ವೀಕರಿಸಿ, ಮನೆಯಿಂದ ಏನನ್ನು ತೆಗೆದುಕೊಳ್ಳದೆ, ಉಟ್ಟಿದ್ದ ಬೈರಾಸಿನಲ್ಲಿಯೇ ಐದು ಮೈಲು ದೂರದ ಬ್ರಹ್ಮಾವರಕ್ಕೆ ನಡೆದುಕೊಂಡು ಹೋಗಿ ಅಗತ್ಯದ ಬಟ್ಟ್ಟೆಯನ್ನು ಹೊಂದಿಸಿಕೊಂಡು, ಶಾಲೆಯಲ್ಲಿ ತನ್ನ ಮಗ್ಗದ ಗುರುವಾಗಿದ್ದ ಸಾಲಿಕೇರಿಯ ವೀರಣ್ಣ ಶೆಟ್ಟಿಗಾರರ ಮನೆಯಲ್ಲಿ ವಾಸ್ತವ್ಯ ಹೂಡಿ ತನ್ನ ವೃತ್ತಿಯನ್ನು ಮುಂದುವರಿಸಿ ಸ್ವಾವಲಂಬನೆಯ ದಾರಿ ಹಿಡಿದರು. ಸ್ವತಃ ಅಡುಗೆ ಮಾಡಿಕೊಂಡು ಹಸಿವು ನೀಗಿಸಿಕೊಳ್ಳುವುದರ ಜೊತೆಗೆ ಬಿಡುವಿದ್ದಾಗ ಗಾಂಧೀ ಚಿಂತನೆಗಳತ್ತ ಗಮನ ಹರಿಸಿಕೊಂಡು ಅವರ ಮಾರ್ಗದಲ್ಲಿ ನಡೆಯುವ ಸಾಹಸ ಮಾಡುತ್ತಿದ್ದರು. ತನ್ನ ಖರ್ಚಿಗೆ ಮೀರಿದ ಆದಾಯ ಕೇವಲ ವಸ್ತ್ರ ತಯಾರಿಸುವುದರಿಂದ ಬರಲಾರಂಭಿಸಿತು. ಯಾವ ರೀತಿಯ ದುರಭ್ಯಾಸವನ್ನೂ ಅಂಟಿಸಿಕೊಳ್ಳದ ರಾಯರಿಗೆ ಹಣ ಉಳಿಸುವುದು ಕಷ್ಟವಾಗಲಿಲ್ಲ. ಗಾಂಧೀಜಿಯವರ ವಸ್ತ್ರ ಸ್ವಾವಲಂಬನೆಯಲ್ಲಿ ಸತ್ಯವನ್ನು ಅನುಭವಿಸಿ, ಜೀವನದಲ್ಲಿ ಸುಖದ ಭರವಸೆಯನ್ನು ನೋಡಲಾರಂಭಿಸಿದರು.

ಜೊತೆಗಾತಿಯೊಡನೆ ಜೀವನ ಪ್ರಯಾಣ

ಜೀವನಾವಶ್ಯಕ ಆದಾಯದ ದಾರಿಯನ್ನು ಕಂಡುಕೊಂಡ ನಂತರ, ಸಹಜವಾಗಿ ಜೊತೆಗಾತಿಯ ಅವಶ್ಯಕತೆಯತ್ತ ಮನಸ್ಸು ತಿರುಗಲಾರಂಭಿಸಿತು. ಸುಂದರ ಯುವಕ ಮತ್ತು ಸಂಸಾರ ನಿಭಾಯಿಸಲು ವೃತ್ತಿಯಿರುವಾಗ, ಭಾವೀ ಪತ್ನಿಯ ಸೋದರ ಮಾವ ತನ್ನ ತಂಗಿ ಮಗಳ ಪ್ರಸ್ತಾಪವನ್ನು ಮಾಡಿದರು. ಎರಡನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಷೋಡಷ ವರ್ಷದ ಲಕ್ಷ್ಮೀಯವರು ಮಲತಾಯಿಯಿಂದ ಸಹಜವಾಗಿ ಬೇರ್ಪಡಲು ತಯಾರಿದ್ದು, ರಾಯರ ಪ್ರಸ್ತಾಪವನ್ನು ಒಪ್ಪಿಕೊಂಡರು. 1944ರಲ್ಲಿ ಉಡುಪಿಯ ಸಮೀಪದ ಪುತ್ತೂರು ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ಗುರುಹಿರಿಯರ ಸಮಕ್ಷಮದಲ್ಲಿ ರಾಯರ ಅರ್ಧಾಂಗಿಯಾಗಿ ಅವರೊಂದಿಗೆ ಹೆಜ್ಜೆ ಹಾಕಲು ತಯಾರಾದರು. ಮದುವೆಯ ನಂತರ ಹಲವಾರು ಕಷ್ಟದ ಸಂದರ್ಭಗಳು ಎದುರಾದರೂ ಸಹಿಸಿಕೊಂಡು ಅವರನ್ನು ಅನುಸರಿಸಿಕೊಂಡು ಬದುಕಿದರು. ಪತಿಯ ಆಶೆ ಆಕಾಂಕ್ಷೆಗಳಿಗೆ ವಿರುದ್ಧವಾಗಿ ವರ್ತಿಸುವುದನ್ನು ಅವರು ಕಲ್ಪಿಸಿಕೊಳ್ಳಲಾರರು ಕೂಡ. ಮಗ್ಗವನ್ನೇ ನೋಡದವರು, ಸ್ವ ಇಚ್ಛೆಯಿಂದ ಮಗ್ಗ ಕಲಿತು ಪತಿಗೆ ಸಮನಾಗಿ ದುಡಿದರು. ಕೆಲವು ಸಂದರ್ಭಗಳಲ್ಲಿ ಪತಿಗಿಂತಲೂ ಹೆಚ್ಚು ಕೆಲಸ ಮಾಡಿದ ಧೀರ ಗೃಹಿಣಿಯಾಗಿದ್ದರು.

ಮನೆಯ ಕೆಲಸ, ಗೋಸೇವೆ, ಮಕ್ಕಳ ಲಾಲನೆ ಪಾಲನೆ, ನೇಯ್ಗೆ ಮುಂತಾದ ಕಾಯಕಗಳಲ್ಲಿ ತೃಪ್ತಿಯನ್ನು ಕಂಡರು. ರಾಯರು ಮಗ್ಗ ಮತ್ತು ಭೂಮಿಯಲ್ಲಿ ಅವಿರತ ಶ್ರಮ ಪಟ್ಟಿದ್ದರ ಪರಿಣಾಮ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಸ್ಥಳೀಯ ವೈದ್ಯರಿಗೆ ರೋಗದ ಗುಟ್ಟು ತಿಳಿಯದೆ ಮಂಗಳೂರಿನಲ್ಲಿ  ಹೆಚ್ಚಿನ ಚಿಕಿತ್ಸೆಗಾಗಿ ತೆರಳುವ ಪ್ರಸಂಗ ಬಂತು. ಆರು ತಿಂಗಳು ಅವರ ಅನುಪಸ್ಥಿತಿಯಲ್ಲಿ ತಾನೇ ಮಗ್ಗದಲ್ಲಿ ಕೆಲಸ ಮಾಡಿ ಸಂಪಾದಿಸಿ ಸಂಸಾರದ ಮತ್ತು ಔಷಧ ಖರ್ಚುಗಳನ್ನು ನಿಭಾಯಿಸಿ ತೃಪ್ತಿ ಪಟ್ಟಿದ್ದಾರೆ. ಚಿಕಿತ್ಸೆಗೆ ಹಣ ಕಡಿಮೆಯಾದಾಗ, ತವರು ಮನೆಯಲ್ಲಿ ಕೊಟ್ಟ ಆಭರಣವನ್ನು ಮಾರಿ ಪತಿಯನ್ನು ಉಳಿಸಿಕೊಂಡಿದ್ದರು. ಮುಂದೆ ಆಭರಣಗಳನ್ನು ಮರಳಿ ಹೊಂದುವ ಆಸೆಯಿದ್ದರೂ, ಪತಿಯ ಇಚ್ಛೆಗೆ ವಿರುದ್ಧವಾಗಿ ಅದನ್ನು ಹೊಂದಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅವರ ಅತಿ ಶ್ರಮದ ಫಲಸ್ವರೂಪ 1980ರ ಹೊತ್ತಿಗೆ ಮನೆ ಕೆಲಸ ಮಾಡಲೂ ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆಗ ಅವರ ವಯಸ್ಸು ಸುಮಾರು ಅರವತ್ತೈದು ವರ್ಷಗಳು. ಆದರೂ ತನ್ನ ಕೆಲಸವನ್ನು ತಾನೇ ಮಾಡಿ ಯಾರಿಗೂ ಹೊರೆಯಾಗದೆ ಬದುಕುತ್ತಿದ್ದಾರೆ. 81ನೇ ವಯಸ್ಸಿನಲ್ಲಿ ತನ್ನ ಜೀವನ ಸಂಗಾತಿಯನ್ನು ಕಳೆದುಕೊಂಡಾಗ, ಅದನ್ನು ನಿಸರ್ಗ ನಿಯಮದಂತೆ ಸ್ವೀಕರಿಸಿ, ನಿರ್ಲಿಪ್ತ ಜೀವನಕ್ಕೆ ಒಗ್ಗಿಕೊಂಡು ಯಾರಿಗೂ ಭಾರವಾಗದೇ ಕಿರಿಯ ಮಗನೊಡನೆ ಕಾಲ ಕಳೆಯುತ್ತಿದ್ದಾರೆ.

ಆಹಾರದ ಅಭಾವ:
ಗಾಂಧೀಜಿಯ ಅನ್ನ ಸ್ವಾವಲಂಬನೆಯ ತತ್ವ

ರಾಯರು ಶ್ರದ್ಧೆಯಿಂದ ಮಾಡುತ್ತಿದ್ದ ಕೆಲಸದ ಫಲಸ್ವರೂಪ, ಬ್ರಹ್ಮಾವರದ ಖಾದಿ ಕೇಂದ್ರವನ್ನು ನಡೆಸುವ ಜವಾಬ್ದಾರಿ ಹುಡುಕಿಕೊಂಡು ಬಂತು. ಮುಂದೆ ಮಂಗಳೂರಿನ ಖಾದಿ ಕೆಂದ್ರದಲ್ಲಿ ಖರೀದಿಸಿದ ಕೆಲವು ನೂಲುಗಳು ಜಿಡುಕಿನಿಂದ ಕೂಡಿದ್ದು, ಯಾವ ನೇಕಾರರೂ ಅದನ್ನು ಸ್ವೀಕರಿಸಲು ತಯಾರಿರಲಿಲ್ಲ. ಹಣ ಕೊಟ್ಟು ಖರೀದಿಸಿದ ಸಾಕಷ್ಟು ನೂಲನ್ನು ಏನು ಮಾಡುವುದೆಂಬುದೇ ಕೇಂದ್ರಕ್ಕೆ ಚಿಂತೆಯಾಗಿತ್ತು. ರಾಯರ ಕೈಚಳಕದ ಸುದ್ದಿ ಅವರಿಗೆ ತಲುಪಿದ್ದರಿಂದ ಅವರನ್ನು ಕರೆಸಿ ಅದಕ್ಕೇನಾದರೂ ಗತಿ ಕಾಣಿಸಿಕೊಡಲು ಕೇಳಿಕೊಳ್ಳಲಾಯಿತು. ರಾಯರು ಅದನ್ನು ಪರಿಶೀಲಿಸಿ ವಸ್ತ್ರ ಮಾಡಿಕೊಡುವ ಜವಾಬ್ದಾರಿ ವಹಿಸಿಕೊಂಡರು. ಅವರ ಕೈಯಲ್ಲಿ ಹಠಮಾರಿ ನೂಲಿಗೆ ಬಗ್ಗದೆ ಬೇರೆ ಉಪಾಯವಿರಲಿಲ್ಲ. ಜಿಡಕು ನೂಲಿನಿಂದ ತಯಾರಾದ ಗುಣ ಮಟ್ಟದ ವಸ್ತ್ರ ನೋಡಿ ಕೇಂದ್ರದವರಿಗೆ ಪರಮಾಶ್ಚರ್ಯ. ಇಲ್ಲಿಯ ಯಶಸ್ಸು ರಾಯರನ್ನು ಮೂಡಬಿದ್ರೆಯ ಖಾದಿ ಕೇಂದ್ರ  ತಲುಪುವಂತೆ ಮಾಡಿತು. ಅಲ್ಲಿ ಖಾದಿ ಉತ್ಪಾದನೆಯ ಜೊತೆಗೆ ಗೋಶಾಲೆಯ ಜವಾಬ್ದಾರಿ ಕೂಡಾ ಇವರ ಹೆಗಲಿಗೆ ಬಂತು. ಕೇಂದ್ರವನ್ನು ನೋಡಿಕೊಳ್ಳುವ ಜವಾಬ್ದಾರಿ ಬಂದಾಗಲೂ ತನ್ನ ಕೆಲಸವನ್ನು ಬಿಡಲಿಲ್ಲ. ಉಳಿದ ಕೆಲಸಗಾರರನ್ನು ಹುರಿದುಂಬಿಸಿ ಕೆಲಸ ತೆಗೆದುಕೊಳ್ಳುವುದರೊಂದಿಗೆ ತನ್ನ ಪಾಲಿನ ನೇಯುವ ಕೆಲಸ ಮಾಡುತ್ತಾ ಉತ್ತಮ ಮಾರ್ಗದರ್ಶಕರಾಗಿದ್ದರು. ಇಲ್ಲಿ ಅವರ ಜೀವನದಲ್ಲಿ ಪುತ್ರಿಯ ಆಗಮನವಾಯಿತು.

ಸುಮಾರು 1949ರ ಸಮಯದಲ್ಲಿ ಎರಡನೇ ಮಹಾಯುದ್ಧದ ಪರಿಣಾಮ, ಹಣ ಕೊಟ್ಟರೂ ಅಕ್ಕಿ ಸಿಗಲಾರದ ಪರಿಸ್ಥಿತಿ ಉಂಟಾಗಿ ಜನರೆಲ್ಲಾ ಕಂಗಾಲು. ಸರಕಾರ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಿ ಹೇಗೋ ನಿಭಾಯಿಸುತ್ತಿತ್ತು. ಹಣವಿದ್ದರೂ ಹೊಟ್ಟೆ ಪೂರ್ತಿ ಹಿಟ್ಟಿಗೆ ಗತಿಯಿಲ್ಲದಾಯಿತು. ನಮ್ಮ ಪ್ರದೇಶಕ್ಕೆ ಒಗ್ಗದ ಹಿಟ್ಟನ್ನು ಬಳಸಿ ಪ್ರಾಣ ರಕ್ಷಣೆಯನ್ನು ಮಾಡಿಕೊಳ್ಳುವ ಪರಿಸ್ಥಿತಿ. ಸದ್ಯದ ದೇಶದ ಪರಿಸ್ಥಿತಿಯೂ ಯೋಚಿಸುವಂತೆ ಮಾಡುತ್ತಿದೆ. ರೈತರ ಉತ್ಪಾದನೆಗೆ ಅಸಲು ಬೆಲೆ ಕೂಡಾ ದೊರೆಯದ ಸನ್ನಿವೇಶ, ಸಮಾಜದ ಹಿತ ಕಾಪಾಡಲಾರದು. ಆಹಾರಕ್ಕಾಗಿ ಯುದ್ಧವಾಗುವ ಸಂದರ್ಭ ಬಂದರೂ ಆಶ್ಚರ್ಯವಿಲ್ಲ.

ಈ ಸಂದರ್ಭದಲ್ಲಿ ರಾಯರ ಮನಸ್ಸಿಗೆ ಬಂದದ್ದು ಗಾಂಧೀಜಿಯವರ ಅನ್ನ ಸ್ವಾವಲಂಬನೆಯ ತತ್ವ. ವಸ್ತ್ರ ಸ್ವಾವಲಂಬನೆಯಲ್ಲಿ ಉತ್ತೀರ್ಣರಾಗಿ ಜೀವನೋಪಾಯ ವೃತ್ತಿಯನ್ನು ಕಂಡುಕೊಂಡರೂ ಹಸಿವನ್ನು ತಣಿಸಿಕೊಳ್ಳಲು ಅಸಾಧ್ಯವಾದುದು ಅವರನ್ನು ಈ ದಿಸೆಯಲ್ಲಿ ಚಿಂತನೆ ಮಾಡುವಂತೆ ಪ್ರೇರೇಪಿಸಿತು. ಅದೇ ಸಮಯದಲ್ಲಿ ಖಾದಿ ಉತ್ಪನ್ನಗಳಿಗೆ ಬೇಡಿಕೆಯೂ ಕಡಿಮೆಯಾಗತೊಡಗಿತ್ತು. ಆಧುನಿಕ ಜವಳಿ ಯಂತ್ರಗಳ ಭರಾಟೆಯಲ್ಲಿ ಕೈಮಗ್ಗದ ಉತ್ಪಾದನೆಗಳು ಜನರಿಗೆ ದುಬಾರಿಯೆನಿಸಿದವು. ನೂಲಿನ ಸರಬರಾಜು ಕಡಿಮೆ, ನೇಯ್ದ ವಸ್ತ್ರಕ್ಕೆ ಬೇಡಿಕೆಯಿಲ್ಲದ ಪರಿಸ್ಥಿತಿ. ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ಒಗ್ಗೂಡಿಸಿದ ಚರಕ ಕ್ರಾಂತಿ ಭಾರತ ಸ್ವತಂತ್ರವಾದ ನಂತರ ಸ್ವಯಂ ಚಾಲಿತ ಯಂತ್ರಗಳ ಸದ್ದಿನಲ್ಲಿ ನಿಂತುಹೋಯಿತು. ಗಾಂಧೀಜಿಯ ಸ್ವರಾಜ್ಯ ಕಲ್ಪನೆಯಲ್ಲಿದ್ದ, ಭಾರತದ ಜನರಿಗೆ ಉದ್ಯೋಗ ಒದಗಿಸುವ ಬಟ್ಟೆ ಮತ್ತು ಕೃಷಿ ಕ್ಷೇತ್ರಗಳು ನಿರ್ಲಕ್ಷ್ಯಕ್ಕೆ ಒಳಗಾದುದು ದೇಶದ ದುರಂತ. ರಾಯರಿಗೆ, ಸ್ವತಂತ್ರ ಭಾರತದಲ್ಲಿ ವಸ್ತ್ರ ಸ್ವಾವಲಂಬನೆಯ ಮಂತ್ರ ತನ್ನ ಅಸ್ತಿತ್ವವನ್ನು ಕಳೆದುಕೊಂಡು ನಿರುದ್ಯೋಗ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಗೋಚರಿಸತೊಡಗಿತು. ಅಂತಹ ಸ್ಥಿತಿ ಬರುವ ಮುನ್ನವೇ ಪರ್ಯಾಯ ಸುಸ್ಥಿರ ಮಾರ್ಗದ ಚಿಂತನೆಯಲ್ಲಿದ್ದಾಗ, ಗಾಂಧೀಜಿಯವರ ಅನ್ನ ಸ್ವ್ವಾವಲಂಬನೆ ನೆನಪಿಗೆ ಬಂತು.

ಹಸಿವು ತಣಿಸಲು ಬೇಕಾದುದನ್ನು ತಾನೇ ಸಂಪಾದಿಸಿಕೊಂಡರೆ, ಮೂಲಭೂತ ಸಮಸ್ಯೆಗೆ ಪರಿಹಾರ. ಆದರೆ ಅನ್ನ ಬೆಳೆಯುವುದೆಲ್ಲಿ? ಹಿರಿಯರು ಮಾಡಿಟ್ಟ ಆಸ್ತಿಯಿಲ್ಲ. ಮಗ್ಗದಲ್ಲಿ ಸಂಪಾದಿಸಿದ ಹಣದ ಬಹುಭಾಗ ಸಂಸಾರದ ನಿರ್ವಹಣೆಯಲ್ಲಿಯೇ ವೆಚ್ಚವಾಗಿತ್ತು. ಉಳಿಸಿದ ಹಣ ಜಾಗ ಖರೀದಿಸಲು ಸಾಲದು. ಗೇಣಿಗಾದರೂ ಸರಿ, ಮೂಡಬಿದರೆಯ ಆಸುಪಾಸು ಎರಡು ಎಕರೆ ಜಾಗವನ್ನು ಹೊಂದಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು. ಎಲ್ಲಿಯೂ ಅವರಿಗೆ ಸರಿಹೊಂದುವ ಜಾಗ ಸಿಗಲಿಲ್ಲ. ಮತ್ತೆ ನೆನಪಾದುದು, ಸುಮಾರು ಒಂದು ದಶಕದ ಹಿಂದೆ ವಿದಾಯ ಹೇಳಿದ ಚೇರ್ಕಾಡಿ.

ಮರಳಿ ಚೇರ್ಕಾಡಿಗೆ

ಒಂದು ದಶಕದ ಹಿಂದೆ ಉಟ್ಟ ಬಟ್ಟ್ಟೆಯಲ್ಲಿಯೇ ಚೇರ್ಕಾಡಿಗೆ ವಿದಾಯ ಹೇಳಿದ ನಂತರ ಭಾವನೊಂದಿಗೆ ಸಂಪರ್ಕವಿರಲಿಲ್ಲ. ಆದರೆ ಅವರ ಹತ್ತಿರ ಸುಮಾರು ಎರಡು ಎಕರೆ ಗುಡ್ಡ ಜಾಗವಿರುವುದು ತಿಳಿದಿತ್ತು. ಅದನ್ನು ಖರೀದಿಸಲು ಇವರ ಸಂಪಾದನೆಯ ಹಣದ ಭಾಗ ವಿನಿಯೋಗವಾಗಿದ್ದೂ ಗೊತ್ತಿತ್ತು. ಎಲ್ಲೆಲ್ಲಿ ಅಲೆದಾಡುವುದಕ್ಕಿಂತ ಭಾವನ ಹತ್ತಿರ ಹೋದರೆ ಹೇಗೆ ಎನ್ನುವ ವಿಚಾರ ಮನಸ್ಸಿಗೆ ಬಂದು ಸ್ನೇಹಿತರ ಮೂಲಕ ಕೇಳಿಸಿದರು.

ರಾಯರು ದುಡಿದು ಗಳಿಸಿದ್ದರಲ್ಲಿ ತನಗೆ ಪೂರ್ಣ ಹಕ್ಕಿದೆ ಅಂದುಕೊಂಡಿದ್ದ ಭಾವ, ಹಣ ಕೊಡಲು ನಿರಾಕರಿಸಿದ್ದಕ್ಕೆ ಮನೆ ಬಿಟ್ಟು ಹೊರಡು ಎಂದು ಆವೇಶದ ಭರದಲ್ಲಿ ಹೇಳಿದ್ದರು. ಇಬ್ಬರೂ ಅದನ್ನು ಪ್ರತಿಷ್ಠೆಯ ವಿಚಾರವಾಗಿಸಿಕೊಂಡು, ಒಬ್ಬರನ್ನೊಬ್ಬರು ಭೇಟಿಯಾಗಲು ಪ್ರಯತ್ನಿಸಲಿಲ್ಲ. ಅವರಿಗೂ ರಾಯರನ್ನು ಓಡಿಸಿದ ಕೊರಗು ಕಾಡುತ್ತಿತ್ತು. ಅವರ ಮದುವೆಯಾದ ಒಬ್ಬಳೇ ಮಗಳು ವಾಂತಿ ಭೇದಿಗೆ ಸರಿಯಾದ ಚಿಕಿತ್ಸೆ ನೀಡಲಾಗದೆ ತೀರಿಕೊಂಡಿದ್ದಳು. ತನ್ನ ಇಳಿ ವಯಸ್ಸು ಪ್ರಾರಂಭವಾದ ಸಮಯದಲ್ಲಿ  ರಾಯರೇ ಒಂದು ಮೆಟ್ಟಲು ಇಳಿದದ್ದು ಭಾವನಿಗೆ ಸಾಕಾಯಿತು. ಕೂಡಲೇ ಮೂಡಬಿದರೆಯ ಬಸ್ಸು ಹತ್ತಿ ರಾಯರನ್ನು ಭೇಟಿಯಾಗಿ ಆತ್ಮೀಯವಾಗಿ ಕರೆದರು. ಭಾವ ವಾಸಿಸುತ್ತಿದ್ದುದು ಮುಂಡ್ಕಿನಜೆಡ್ಡು ಚೇರ್ಕಾಡಿ ಗ್ರಾಮದ ಗಡಿ. ಅವರ ಎರಡೂವರೆ ಎಕ್ರೆ ಜಾಗವಿದ್ದುದು ಆರೂರಿನ ಗಡಿಯಲ್ಲಿ, ಅರ್ಧ ಕಿ. ಮೀ. ಅಂತರದಲ್ಲಿ. ಗ್ರಾಮ ಬೇರೆ ಬೇರೆ. ಆರೂರಿನ ಜಾಗವನ್ನು ಇಚ್ಛಾನುಸಾರ ಮೂಲಗೇಣಿಗೆ ಬರೆದುಕೊಟ್ಟದ್ದೂ ಆಯಿತು. ರಾಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಜಾಗ ಹೊಂದಿಸಿಕೊಳ್ಳುವುದೇ ಸಮಸ್ಯೆಯಾದಾಗ, ಯಾವ ಪ್ರತಿಫಲವಿಲ್ಲದೇ ಹೂವಿನಷ್ಟು ಹಗುರವಾಗಿ ಕೆಲಸ ನಡೆದುಹೋಯಿತು. ಇನ್ನು ಮೂಡಬಿದರೆಯ ಖಾದಿ ಕೇಂದ್ರದಲ್ಲಿ ಮುಂದುವರಿಯುವುದರಲ್ಲಿ ಅವರಿಗೆ ಯಾವ ಆಸಕ್ತಿಯೂ ಉಳಿಯಲಿಲ್ಲ. ಮುಳುಗುವ ಹಡಗನ್ನು ನಂಬಿಕೊಂಡಿರುವುದು ಮೂರ್ಖತನವೆಂದು ಎಣಿಸಿ, ಅನ್ನ ಸ್ವಾವಲಂಬನೆಯ ದಾರಿ ಹುಡುಕಲು ಅಣಿಯಾದರು.

1951ರ ಬೇಸಿಗೆಯಲ್ಲಿ ಮೂಡಬಿದರೆಗೆ ವಿದಾಯ ಹೇಳಿ, ಆರೂರಿನ ತನ್ನ ಮೂಲಗೇಣಿ ಜಾಗಕ್ಕೆ ಹೆಂಡತಿ ಮಗಳೊಂದಿಗೆ ಬಂದಿಳಿದರು. ಗುಡ್ಡ ಜಾಗ. ಇಳಿಜಾರು ಪ್ರದೇಶ. ಕಲ್ಲು ಮುಳ್ಳು ಬಿಟ್ಟರೆ ಬೇರೇನೂ ಸಿಗದು. ನೆತ್ತಿಯ ಮೇಲೆ ಸೂರ್ಯನೇ ಆಸರೆ. ಭಾವ ತೋಡಿಸಿದ ಬಾವಿಯಲ್ಲಿ ನೀರಿನ  ಸಂಪತ್ತು ಬಿಟ್ಟರೆ ಎಲ್ಲಾ ಭಣ, ಭಣ. ಇಲ್ಲಿಯೇ ಸೂಕ್ತ ಜಾಗ ಆರಿಸಿ ಒಂದು ಅರಮನೆ ನಿರ್ಮಿಸಿಕೊಂಡರು. ಸದಾ ಕತ್ತಲೆಯ ಅಡಿಗೆಮನೆ, ಇನ್ನೊಂದು  ಪಡಸಾಲೆ. ಇದು ಮಲಗುವ ಕೋಣೆಯೂ ಕೂಡಾ. ಮೂರು ಜನ ಮಲಗುವ ಈ ಜಾಗದಲ್ಲಿ ತನ್ನೊಂದಿಗೆ ತಂದಿದ್ದ ಮಗ್ಗಕ್ಕೆ ಕೂಡಾ ತಂಗಲು ಸ್ಥಳ. ಇದು ರಾಯರ ಅರಮನೆಯ ವಿವರ. ಮಗ್ಗದ ಮಧ್ಯದಲ್ಲಿ ಜಾಗ ಮಾಡಿಕೊಂಡು ರಾತ್ರಿ ಗಾಢ  ನಿದ್ರೆ. ಮನೆಯ ಪೂರ್ಣ ವಿಸ್ತಾರ ಸುಮಾರು ಮುನ್ನೂರು ಚದರಡಿ. ಮಳೆ, ಬಿಸಿಲಿನ ರಕ್ಷಣೆಗೆ ಹುಲ್ಲಿನ ಛಾವಣಿ. ಪ್ರತಿವರ್ಷ ಹೊಸ ಹುಲ್ಲಿನ ಹೊದಿಕೆಯಾಗಬೇಕು. ಅತ್ಯಂತ ಸರಳ ಗುಡಿಸಲಿನಲ್ಲಿ ರಾಯರ ಅನ್ನ ಸ್ವಾವಲಂಬನೆಯ ಹೋರಾಟ ಪ್ರಾರಂಭ. ಈ ಸಮಯದಲ್ಲಿ ಮಡದಿಗೆ ನಾಲ್ಕನೆಯ ಗರ್ಭಧಾರಣೆಯಾಗಿತ್ತು. ಸ್ವಲ್ಪ ದಿನಗಳಲ್ಲಿ ಅವರನ್ನು ಮಗಳೊಂದಿಗೆ ಮಂಗಳೂರಿನ ತವರು ಮನೆಗೆ ಕಳುಹಿಸಿದರು. ತಾನೊಬ್ಬನೆ ಕೃಷಿ ತಪಸ್ಸನ್ನು ಪ್ರಾರಂಭಿಸಿದರು. 1952ರಲ್ಲಿ ಹಿರಿಯ ಮಗನ ಜನನವಾಯಿತು. ಬಚ್ಚಲು, ಸಂಡಾಸಿಲ್ಲದ ಈ ಮನೆಯಲ್ಲಿ ಈಗ ನಾಲ್ಕು ಜನರ ವಾಸ.

ಭೂಮಿ ತಾಯಿಯೊಂದಿಗೆ ಬೆಸುಗೆ

ತನ್ನದೇ ಸ್ವಂತ ಜಮೀನು ದೊರೆತದ್ದು ರಾಯರಿಗೆ ಆನೆ ಬಲ ಬಂದಿತ್ತು. ಭೂಮಿತಾಯಿಯ ಮಡಿಲಲ್ಲಿ ಯಶಸ್ವಿಯಾಗಿ ಬದುಕುವೆನೆಂಬ ಆತ್ಮವಿಶ್ವಾಸ ಉಕ್ಕುತ್ತಿತ್ತು. ಯಾವಾಗ ಭೂಮಿಯನ್ನು ಉತ್ತು ಬೆಳೆದು ಉಣ್ಣುವೆನೋ ಎನ್ನುವ ತವಕ. ಆದರೆ ಮೊದಲನೇ ವರ್ಷ ಕಾಲಿಟ್ಟಾಗ ಮಳೆಗಾಲ ಪ್ರಾರಂಭವಾಗುವ ದಿನಗಳಾದ್ದರಿಂದ ಆ ವರ್ಷ ಮಗ್ಗ ನಂಬಿಕೊಂಡೇ ಜೀವನ ಸಾಗಿಸಬೇಕಾಯಿತು. ತನ್ನ ನೇಯ್ಗೆ ಕಾಯಕದ ಮಧ್ಯೆ ಬಿಡುವು ಮಾಡಿಕೊಂಡು ಭೂಮಿ ಹಸನು ಮಾಡುವುದು, ಗೊಬ್ಬರ ಸರಬರಾಜು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ತರಕಾರಿ ಬೆಳೆಸುವ ಪ್ರಯೋಗವೂ ನಡೆದಿತ್ತು.

ಇಲ್ಲಿಯ ಮುಖ್ಯ ಆಹಾರ ಧಾನ್ಯ ಭತ್ತ. ಇದನ್ನು ಬೆಳೆಸಲು ಸಮತಟ್ಟಾದ ಜಾಗ, ಉಳುಮೆ ಮಾಡಲು ಎತ್ತು, ನೇಗಿಲುಗಳ ಅವಶ್ಯಕತೆ, ಜೊತೆಗೆ ನೀರು ನಿಲ್ಲಿಸಿ ಬೆಳೆಸಬೇಕು. ಇದು ನೀರಿರುವ ಬಯಲು ಪ್ರದೇಶದಲ್ಲಿ ಸುಲಭ. ಆದರೆ ರಾಯರ ಪಾಲಿಗೆ ಬಂದದ್ದು ಇಳಿಜಾರು ಗುಡ್ಡ ಪ್ರದೇಶ. ಇಲ್ಲಿ ಮಳೆ ಬಂದ ಅರ್ಧ ಗಂಟೆಯಲ್ಲಿ ನೀರು ಬಿದ್ದ ಕುರುಹೇ ಇರುವುದಿಲ್ಲ. ಇಂತಹ ಬರಡು ಜಾಗದಲ್ಲಿ ಭತ್ತ ಬೆಳೆಯುವ ಸಾಹಸಕ್ಕೆ ಇಳಿದರು. ಜಾಗ ಸಮತಟ್ಟು ಮಾಡಿ ಮಳೆ ಬರುವಾಗ ನೀರನ್ನು ಹಿಡಿದಿಟ್ಟು, ಬಾಡಿಗೆಗೆ ಎತ್ತು, ನೇಗಿಲು, ಕೂಲಿಯಾಳುಗಳನ್ನು ಹೊಂದಿಸಿ ಮಳೆಗಾಲದ ಪ್ರಾರಂಭದಲ್ಲಿ ಭತ್ತ ಬೆಳೆಸುವ ಹರಸಾಹಸ. ಮಗ್ಗದಲ್ಲಿನ ಸಂಪಾದನೆ ಮಣ್ಣಿಗೆ ಸುರಿಯುವುದು. ಉತ್ಪತ್ತಿಗಿಂತ ಖರ್ಚು ಹೆಚ್ಚು. ನೆರೆಹೊರೆಯಲ್ಲಿ ಸಮಯಕ್ಕೆ ಸರಿಯಾಗಿ ಕೃಷಿ ಪರಿಕರಗಳು, ಕೂಲಿಯಾಳುಗಳು ದೊರೆಯದೆ ಕಷ್ಟವಾಗುತ್ತಿತ್ತು. ಕೇವಲ ಭತ್ತವಲ್ಲದೆ, ತರಕಾರಿ, ಬಾಳೆ, ಮೆಣಸು ಮುಂತಾದ ಅಲ್ಪ ಕಾಲದಲ್ಲಿ ಬೆಳೆಯುವ ಆಹಾರ ಪದಾರ್ಥಗಳನ್ನು, ದೀರ್ಘಕಾಲದ ತೆಂಗು, ಗೇರು, ಹಲಸು, ಮಾವು ಬೆಳೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದರು.  ಸುಮಾರು ಹತ್ತು ವರ್ಷ ಇದೇ ಅಸಫಲತೆಯ ಹೋರಾಟದ ಪುನರಾವರ್ತನೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅನ್ನ ಸ್ವಾವಲಂಬನೆಯ ಗುರಿಯನ್ನು ಬಿಡಲಿಲ್ಲ.

ದೇಶದ ಹಸಿರು ಕ್ರಾಂತಿಯ ಸಮಯದಲ್ಲಿ ರಾಯರ ನೆಲದಲ್ಲಿ ಒಂದು ಹುಲ್ಲಿನ ಯಶಸ್ವೀ ಕ್ರಾಂತಿ

ಗುಡ್ಡ ಜಾಗದಲ್ಲಿ ಅನ್ನ ಸ್ವಾವಲಂಬನೆಯ ನಿರಂತರ ಹೋರಾಟದಲ್ಲಿ ತೊಡಗಿದ್ದ ರಾಯರಿಗೆ ಗುರಿ ಮುಟ್ಟುವ ಸಂಶಯ ಕಾಡತೊಡಗಿತ್ತು. ಅದಕ್ಕೆ ಸರಿಯಾಗಿ ಗುಡ್ಡ ಜಾಗದಲ್ಲಿ ಭತ್ತ ಬೆಳೆಯುವುದು ಅಸಾಧ್ಯ ಎನ್ನುವ ಸ್ಥಳೀಯ ಜನರ ಅನುಭವದ ತೀರ್ಪುಗಳು ಬೇರೆ. ಇನ್ನೇನು ರೈತಾಪಿ ಜನರ ತೀರ್ಮಾನ ಸ್ವೀಕರಿಸಿ ಯುದ್ದ ನಿಲ್ಲಿಸಬೇಕೆನ್ನುವ ಸ್ಥಿತಿಯಲ್ಲಿಯೂ ಭೂಮಿ ತಾಯಿಯಲ್ಲಿನ ಭರವಸೆ ಕುಗ್ಗಿರಲಿಲ್ಲ. ಅರವತ್ತರ ದಶಕದ ಪ್ರಾರಂಭದ ಮಳೆಗಾಲದಲ್ಲಿ ಮೆಣಸಿನ ಬೆಳೆ ಮಾಡಿದ್ದರು. ಗೊಬ್ಬರ ಹಾಕಿ ಏರಿ ಮಾಡಿ ಆಸಕ್ತಿಯಿಂದ ಬೆಳೆಸಿದ್ದರು. ಆದರೆ ಮಳೆ ಹೆಚ್ಚಾದ್ದರಿಂದ ಮೆಣಸಿನ ಗಿಡಗಳೆಲ್ಲಾ ಕೊಳೆತು ಹೋಯಿತು. ಬೇಸರದಲ್ಲಿ ಆ ಜಾಗದತ್ತ ಹೋಗುವ ಮನಸ್ಸು ಮಾಡಲಿಲ್ಲ. ಮಳೆಗಾಲದ ಕೊನೆಯಲ್ಲೊಮ್ಮೆ ಅತ್ತ ಹಾಯ್ದಗ, ಮೆಣಸಿನ ಏರಿಯಲ್ಲಿ ಒಂದು ಭತ್ತದ ಗಿಡ ಸುಮಾರು ಹದಿನಾರು ಕವಲೊಡೆದು ರಾಯರನ್ನು ಕೈಬೀಸಿ ಕರೆಯುತ್ತಿತ್ತು. ನನ್ನನ್ನು ನೋಡಿ ಹೊಸ ಪ್ರಯೋಗ ಪ್ರಾರಂಭಿಸು ಎಂದು ಕರೆ ನೀಡುತ್ತಿತ್ತು. ನಂಬಿದ ಭೂತಾಯಿ ನನ್ನ ನಿರಾಶೆಯ ಸಂದರ್ಭದಲ್ಲಿ ಧೃತಿಗೆಡಲು ಅವಕಾಶ ನೀಡದೆ ಮತ್ತೆ ಕಾರ್ಯೋನ್ಮುಖನಾಗಲು ಉತ್ತೇಜಿಸಿದಳು ಎನ್ನುವ ಮಾತನ್ನು ಆ ಸಂದರ್ಭ ನೆನೆಸಿಕೊಂಡು ರಾಯರು ಆಗಾಗ ಹೇಳುತ್ತಿದ್ದರು. ಅಲ್ಲಿಗೆ ರಾಯರ ವಿಜ್ಞಾನಿ ಮನಸ್ಸು ಜಾಗೃತವಾಯಿತು. ನೀರಿಲ್ಲದೆಯೇ ಒಂದು ಭತ್ತದ ಬೀಜ ಮೆಣಸಿನ ಏರಿಯಲ್ಲಿ ಅರ್ಧ ಪಾವು ಭತ್ತ ಕೊಡಬಲ್ಲುದಾದರೆ, ಸೂಕ್ತ ರೀತಿಯಲ್ಲಿ ಬೆಳೆಸಿದರೆ, ಎಕರೆಗೆ ಅರವತ್ತು ಮುಡಿ ಬೆಳೆಯಲು ಅಡ್ಡಿಯಿಲ್ಲ ಎನ್ನುವ ಲೆಕ್ಕಾಚಾರ ಹಾಕಿದರು.

ಮುಂದಿನ ವರ್ಷದಿಂದ ರಾಯರ ಗುಡ್ಡ ಪ್ರದೇಶದಲ್ಲಿ ಭತ್ತ ಬೆಳೆಯುವ ಹೊಸ ಪದ್ಧತಿಯ ಆವಿಷ್ಕಾರದಲ್ಲಿ ತೊಡಗಿದರು. ಇದಕ್ಕೆ ನೀರು ಬೇಡ, ಎತ್ತು ಬೇಡ, ನೇಗಿಲು ಬೇಡ. ಕೇವಲ ಹಾರೆ ಪಿಕ್ಕಾಸುಗಳಿಂದ ಹುಡುಗನಿಂದ ಮುದುಕರ ವರೆಗೆ ಅವರವರ ಶಕ್ತ್ಯಾನುಸಾರ ಬೆಳೆಸುವ ಪದ್ಧತಿಗೆ ನಾಂದಿ ಹಾಡಿದರು. ಒಂದು ಎಕರೆಯಲ್ಲಿ ಅರವತ್ತು ಮುಡಿ ಭತ್ತ ಬೆಳೆಸಿ ಜನ ಬೆರಗಾಗುವಂತೆ ಮಾಡಿದರು. ನೀರಿದ್ದ ಪ್ರದೇಶದಲ್ಲಿ ಕೂಡಾ ಇಷ್ಟು ಸುಲಭದಲ್ಲಿ, ಕಡಿಮೆ ಖರ್ಚಿನಲ್ಲಿ ಬೆಳೆಸಲು ಅಸಾಧ್ಯ. ರಾಯರು ಇದಕ್ಕೆ ಸರ್ವೋದಯ ಪದ್ಧತಿಯೆಂದು ಕರೆದರು. ಜನರು ಚೇರ್ಕಾಡಿ ಪದ್ಧತಿಯೆಂದು ನಾಮಕರಣ ಮಾಡಿ ಸಾಕಷ್ಟು ಪ್ರಚಾರ ಮಾಡಿದರು. ಏನೇ ಆದರೂ ಹಸಿರು ಕ್ರಾಂತಿಗೆ ರಾಯರ ಈ ಕೊಡುಗೆಯಲ್ಲಿ, ಬಡತನ ನಿವಾರಣೋಪಾಯವೂ ಅಡಗಿತ್ತು.

ಆ ಸಮಯದಲ್ಲಿ ದೇಶದಲ್ಲಿ ಆಹಾರದ ಆಭಾವದ ಪರಿಸ್ಥಿತಿ. ಹಸಿರು ಕ್ರಾಂತಿಯ ಕರೆ ಕೊಟ್ಟು ಹೆಚ್ಚು ಆಹಾರ ವಸ್ತುಗಳ ಉತ್ಪಾದನೆಗೆ ದೇಶವನ್ನು ಸಜ್ಜುಗೊಳಿಸಲಾಗಿತ್ತು. ಕೃಷಿ ವಿಜ್ಞಾನಿಗಳೆಲ್ಲಾ ವಿದೇಶದ ಆಧುನಿಕ ವೈಜ್ಞಾನಿಕ ಪದ್ಧತಿ, ರಸಗೊಬ್ಬರ, ಕೀಟನಾಶಕಗಳನ್ನು ಗೊತ್ತು ಗುರಿಯಿಲ್ಲದೆ ಪ್ರಯೋಗಿಸಿ ಹೆಚ್ಚು ಉತ್ಪಾದನೆಯ ಗುರಿ ತಲುಪಲು ಪೈಪೋಟಿ ನಡೆಸಿ ಸಫಲಾರದರು. ಆದರೆ ಹೆಚ್ಚು ಉತ್ಪಾದನೆಯ ಭರಾಟೆಯಲ್ಲಿ, ಮಣ್ಣಿನ ಫಲವತ್ತತೆಯನ್ನು ಬಲಿಕೊಟ್ಟದ್ದು ಗಮನಕ್ಕೆ ಬಂದದ್ದು ಮೂವತ್ತು ವರ್ಷಗಳ ನಂತರ.

ಆದರೆ ಅದೇ ಸಂದರ್ಭದಲ್ಲಿ ರಾಯರ ಸುಸ್ಥಿರ ಕೃಷಿ ಪದ್ಧತಿ ವೈಜ್ಞಾನಿಕ  ಪದ್ಧತಿಗಿಂತಲೂ ಉತ್ತಮ ಮಟ್ಟದಲ್ಲಿದ್ದುದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಇವರ ಪದ್ಧತಿಯಲ್ಲಿ ಕಡಿಮೆ ನೀರು, ಕಡಿಮೆ ಬೀಜ, ಕೇವಲ ಸಾವಯವ ಗೊಬ್ಬರದ ಬಳಕೆ. ಉತ್ಪತ್ತಿ ಹೆಚ್ಚು. ಯಾವ ಯಂತ್ರ ತಂತ್ರಗಳ ಬಳಕೆಯಿಲ್ಲ. ದೈಹಿಕ ಪರಿಶ್ರಮವೊಂದೇ ಸಾಕು. ಒಬ್ಬ ಮನುಷ್ಯನಿಗೆ ಹತ್ತು ಸೆಂಟ್ಸ್ ಜಾಗಿನಲ್ಲಿ ವರ್ಷಕ್ಕೆ ಸಾಕಾಗುವಷ್ಟು ಭತ್ತ, ರಾಗಿ ಗೋಧಿ ಬೆಳೆಸಿಕೊಳ್ಳಲು ಸಾಧ್ಯ. ಹತ್ತು ವರ್ಷಗಳ ನಿರಂತರ ಚಿಂತನೆ, ಹೋರಾಟ ಕೊನೆಗೂ ಯಶಸ್ವಿಯಾಯಿತು. ಮುಂದೆ ಎರಡು ದಶಕಗಳ ಕಾಲ ತಾನು ಸ್ವತಃ ಈ ಮಾದರಿ ಪದ್ದತಿಯಲ್ಲಿ ಭತ್ತ ಬೆಳೆದು ಕ್ರಾಂತಿಯನ್ನು ಮಾಡಿದರು. ಆರ್ಥಿಕವಾಗಿಯೂ ಸ್ಥಿರತೆಯನ್ನು ಕಂಡುಕೊಂಡರು.

ದೇಶದ ಹಸಿರು ಕ್ರಾಂತಿಯ ತಪ್ಪು ಕ್ರಮಗಳಿಂದ ದಾರಿ ತಪ್ಪಿತು. ಆದರೆ ರಾಯರ ಒಂದು ಹುಲ್ಲಿನ ಕ್ರಾಂತಿ ಸರ್ವಕಾಲದಲ್ಲಿಯೂ ಪ್ರಸ್ತುತವಾಯಿತು. ಕೊನೆಗೂ ಭೂಮಿ ತಾಯಿ ಅವರ ಕೈಬಿಡಲಿಲ್ಲ. ಇವರ ನವೀನ ಕೃಷಿ ಪದ್ಧತಿ ದೇಶದ ವಿವಿಧ ಭಾಗಗಳಿಂದ ರೈತರನ್ನು ಆಕರ್ಷಿಸಿತ್ತು. ಆದರೆ ವಿಜ್ಞಾನಿಗಳ, ಜನಪ್ರತಿನಿಧಿಗಳ, ಅಧಿಕಾರಿಗಳ ಬೆಂಬಲವಿಲ್ಲದೆ ಜನಸಾಮಾನ್ಯರನ್ನು ಮುಟ್ಟುವುದರಲ್ಲಿ ಯಶಸ್ವಿಯಾಗಲಿಲ್ಲ. ಇದೇ ಸಮಯದಲ್ಲಿ ಜಪಾನಿನ ವಿಜ್ಞಾನಿ ಮಸನೋಬ ಪುಕುವೋಕ ಆವಿಷ್ಕಾರ ಮಾಡಿದ ಒಂದು ಹುಲ್ಲಿನ ಕ್ರಾಂತಿ ಪ್ರಪಂಚದ ಮೂಲೆಗಳನ್ನು ತಲುಪುವಲ್ಲಿ ಯಶಸ್ವಿಯಾಯಿತು. ಇಬ್ಬರ ಕೃಷಿ ಪದ್ಧತಿಯಲ್ಲಿ ವ್ಯತ್ತಾಸವೇನೂ ಇರಲಿಲ್ಲ. ಗಾಂಧೀ ತತ್ವದ ಆಧಾರದ ಮೇರೆಗೆ ಸ್ವಂತ ಶ್ರಮದಲ್ಲಿ ಕಂಡುಕೊಂಡ ಈ ಪದ್ಧತಿಗೆ ಸೋಮಾರಿಗಳ, ಭೃಷ್ಟರ ಪ್ರಪಂಚದಲ್ಲಿ  ಸೂಕ್ತ ಸ್ಥಾನ, ಉತ್ತೇಜನ ದೊರೆಯಲಿಲ್ಲ. ಇದು ಕೋಟ್ಯಾಂತರ ಬಡಜನರ ದುರಾದೃಷ್ಟವೆಂದುಕೊಳ್ಳಬಹುದು.

ಆಳದ ಬಾವಿಯಿಂದ ನೀರೆತ್ತುವ ತಂತ್ರಜ್ಞಾನ

ಅನ್ನ ಸ್ವಾವಲಂಬನೆಯಲ್ಲಿ ಯಶಸ್ಸನ್ನು ಕಂಡ ನಂತರದ ಆದ್ಯತೆ ಗಿಡಗಳಿಗೆ ಬಾವಿಯ ನೀರುಣಿಸುವ ಕಾರ್ಯಕ್ರಮ. ರಾಯರ ಬಾವಿ 40 ಅಡಿ ಆಳವಿದ್ದು ಮಳೆಗಾಲದ ನಂತರ ನೀರೆತ್ತುವುದು ಸಾಹಸ. ಪಾರಂಪರಿಕ ವಿಧಾನಗಳಾದ, ಏತ, ಸಂಬಳಿಗೆ, ರಾಟೆ ಯಾವುದೂ ಇಲ್ಲಿ ನಡೆಯುವುದಿಲ್ಲ. ಗಾಂಧೀ ತತ್ವಗಳಲ್ಲಿ ಸತ್ಯವನ್ನು ಕಂಡ ರಾಯರಿಗೆ ಯಂತ್ರಗಳು ನಮ್ಮ ಮೇಲೆ ಸವಾರಿ ಮಾಡುವುದು ಒಪ್ಪಿಗೆಯಿಲ್ಲ. ಸಮಾಜದ ಎಲ್ಲರಿಗೂ ಅನುಕೂಲವಾಗುವಂತೆ ಸರಳ ಹಾಗೂ ಕಡಿಮೆ ಖರ್ಚಿನ ನೀರೆತ್ತುವ ಸಾಧನದ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಪಂಪಸೆಟ್ಟ್ ಖರೀದಿಸಿದರೆ ಅದರ ನಿರ್ವಹಣೆಯೇ ಬಡ ರೈತನಿಗೆ ಸಮಸ್ಯೆಯಾಗುತ್ತದೆ. ತಾನು ನೂಲುತ್ತಿದ್ದ ರಾಟೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸೂಕ್ತ ಮಾರ್ಪಾಡುಗಳೊಂದಿಗೆ ನೀರೆತ್ತಲು ಉಪಯೋಗಿಸುವ ಯೋಚನೆ ಬಂದೊಡನೆ ಕಾರ್ಯಪ್ರರ್ವತ್ತರಾದರು. ಮೂರಡಿ ವ್ಯಾಸದ ರಾಟೆಯನ್ನು ಬಾವಿ ಮದ್ಯದಲ್ಲಿಟ್ಟು, ಎರಡು ಬದಿಗೂ ತಿರುಗಿಸಲು ಬೇಕಾದ ಕೈ ಜೋಡಿಸಿದರು. ರಾಟೆಗೆ ಎರಡು ಬದಿಯಲ್ಲಿ ನೀರಿಗೆ ತಾಗುವಷ್ಟು ಉದ್ದದ ಹಗ್ಗ ಕಟ್ಟಿ ಅದರ ತುದಿಗೆ ಎರಡು ಬಾಲ್ದಿಯನ್ನು ಕಟ್ಟಿದರು. ಒಂದು ಬಾಲ್ದಿ ಮೇಲೆ ಬರುವಾಗ ಇನ್ನೊಂದು ಬಾಲ್ದಿ ಕೆಳಗೆ ಹೋಗುವ ಹಾಗೆ ಜೋಡಿಸಿಕೊಂಡರು. ಒಂದು ಬಾಲ್ದಿಯ ನೀರು ರಾಟೆಯ ಮಧ್ಯಕ್ಕೆ ಬಂದು ಸುರಿಯುವಾಗ ಅದರ ಕೆಳಗೆ ಇರಿಸಿದ ಹರಿಣಿಯ ಮೂಲಕ ಬಾವಿ ಹೊರಗೆ ಹೋಗುವ ಹಾಗೆ ವ್ಯವಸ್ಥೆ ರಚಿಸಿಕೊಂಡರು. ಒಂದು ಬಾಲ್ದಿ ನೀರು ಬಂದು ಸುರಿದ ನಂತರ ಅದರ ವಿರುದ್ಧ ದಿಕ್ಕಿನಲ್ಲಿ ರಾಟೆ ತಿರುಗಿಸಿದಾಗ ನೀರು ಸುರಿಸಿದ ಬಾಲ್ದಿ ಕೆಳಗೆ ಹೋಗಿ, ಕೆಳಗೆ ನೀರು ತುಂಬಿಸಿಕೊಂಡ ಬಾಲ್ದಿ ಮೇಲೆ ಬರುತ್ತದೆ. ಇದು ಅತ್ಯಂತ ಸುಲಭ, ಸರಳ ಮತ್ತು ಎಷ್ಟು ಆಳದ ಬಾವಿಯಿಂದಲೂ ನೀರೆತ್ತಲು ಸಾಧ್ಯ. ಮಿನಿಟಿಗೆ 10 ಲೀಟರ ನೀರು ಹಿಡಿಯುವ 6 ಬಾಲ್ದಿ ಅನಾಯಾಸವಾಗಿ ಮೇಲೆ ಬರುತ್ತದೆ. ಒಂದು ಗಂಟೆ ಅವಧಿಯಲ್ಲಿ 3600 ಲೀಟರ್ ನೀರು ಮೇಲೆ ತರಲು ಸಾಧ್ಯ. ಇದು ಎರಡೆಕರೆ ಜಮೀನು ಹೊಂದಿದ ರೈತನಿಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಧಾರಾಳ.

ಹಳ್ಳಿಯಲ್ಲಿ ಮಲ ಮೂತ್ರಗಳ ನಿರ್ವಹಣೆಗೆ ಸಮರ್ಥ ಸುಲಭ ವಿಧಾನ

ರಾಯರು ಎಲ್ಲದರಲ್ಲೂ ಲೆಕ್ಕಾಚಾರದ ಮನುಷ್ಯ. ಶರೀರದ ಅನಗತ್ಯ ಪದಾರ್ಥಗಳನ್ನು ಸುಮ್ಮನೆ ಮಣ್ಣಿನೊಳಗೆ ಯಾವ ಉಪಯೋಗಕ್ಕೂ ಬಾರದಂತೆ ಶೇಖರಿಸುವುದು ಅವರಿಗೆ ಹಿತವಾಗಲಿಲ್ಲ. ಅದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಕಂಡುಕೊಳ್ಳುವತ್ತ ಚಿಂತನೆ ಮಾಡಿ ಯಶಸ್ವಿಯಾದರು. ಇದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುವಲ್ಲಿಯೂ ಸಫಲರಾದರು. ಇದರ ವಿವರಗಳು ಹೀಗಿದೆ.

ನಮ್ಮ ಶರೀರ ಅಗತ್ಯವಿಲ್ಲದ/ಹೆಚ್ಚಾದ ಪದಾರ್ಥಗಳನ್ನು ಪ್ರಕೃತಿ ನಿಯಮದಂತೆ ಹೊರ ಹಾಕುತ್ತದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಅನೇಕ ಕಾಯಿಲೆಗಳಿಗೆ ಮೂಲವಾಗಬಹುದು. ಅದರಲ್ಲೂ ನಾವು ವಾಸಿಸುವ ಪರಿಸರದಲ್ಲಿ ಇದನ್ನು ಯಶಸ್ವಿಯಾಗಿ ಪುನಃ ಮಣ್ಣಿಗೆ ಸೇರಿಸುವುದು ಅತ್ಯಗತ್ಯ. ಹಳ್ಳಿಯಲ್ಲಿ ವಾಸಿಸುವವರು ಇದರ ಬಗ್ಗೆ ಜಾಗೃತಿಯನ್ನು ಸ್ವತಃ ಕಂಡುಕೊಳ್ಳುವವರ ಸಂಖ್ಯೆ ಅತಿ ಕಡಿಮೆ. ನಮ್ಮ ದೇಶದಲ್ಲಿ ಕೇವಲ 30% ಜನರಿಗೆ ಮಾತ್ರ ಸಂಡಾಸಿನ ಸೌಲಭ್ಯವಿದೆಯೆಂದರೆ ಸಮಸ್ಯೆಯ ಅಗಾಧತೆಯ ಅರಿವಾಗಬಹುದು. ಎಲ್ಲೆಂದರಲ್ಲಿ ಮಲ ವಿಸರ್ಜಿಸುವ ಅಭ್ಯಾಸ ಹಲವಾರು ಕಾಯಿಲೆಗಳಿಗೆ ಮೂಲ ಕಾರಣವಾಗುತ್ತದೆ. ಹಾಗೆಯೇ ಮಾನವರ ಮಲ ಮೂತ್ರಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಕೃಷಿ ಭೂಮಿಯನ್ನು ಫಲವತ್ತಾನ್ನಾಗಿ ಮಾಡಲು ಅನ್ಯ ಗೊಬ್ಬರಗಳ ಅವಶ್ಯಕತೆಯಿಲ್ಲ.

ಹಳ್ಳಿ ಜನರು ಅತೀ ಕಡಿಮೆ ವೆಚ್ಚದಲ್ಲಿ ಉಪಯೋಗಿಸಬಹುದಾದ ಬಹು ಉಪಯೋಗಿ ಪರಿಸರಸ್ನೇಹಿ ಸಂಡಾಸನ್ನು ರಾಯರು ಕಂಡುಕೊಂಡು ಉಪಯೋಗಿಸುತ್ತಿದ್ದರು. ಇದು ಮಲ ವಿಸರ್ಜನೆಯನ್ನು ಯಶಸ್ವಿಯಾಗಿ ನಿರ್ವಹಿಸುವುದರ ಜೊತೆಗೆ ರೈತರ ಜಮೀನನ್ನು ಫಲವತ್ತಾನ್ನಾಗಿ ಪರಿವರ್ತಿಸುತ್ತದೆ. ಇದಕ್ಕೆ ಅಗತ್ಯವಿರುವುದು ಎಲ್ಲಾ ಸ್ಯಾನಿಟರಿ ಅಂಗಡಿಗಳಲ್ಲಿ ದೊರೆಯುವ ಬೇಸಿನ್ ಮಾತ್ರ. ಮೂರು ಆಡಿ ಉದ್ದಗಲ ಮತ್ತು ಆಳವಿರುವ ಹೊಂಡ ತೋಡಿ ಒಂದು ಬದಿಯಲ್ಲಿ ಬೇಸಿನ್‌ನನ್ನು ಮಣ್ಣಿನಿಂದಲೇ ತಾತ್ಕಾಲಿಕ ನೆಲೆಯಲ್ಲಿ ಕೂರಿಸಬೇಕು. ಹೊಂಡವನ್ನು ಮೂರು, ನಾಲ್ಕು ಕಟ್ಟಿಗೆಯಿಂದ ಮುಚ್ಚಿ, ಅದರ ಮೇಲೆ ಗಿಡ ಮರಗಳ ಗೆಲ್ಲು ಅಥವಾ ಅಡಿಕೆ/ತೆಂಗಿನ ದಬ್ಬೆಗಳನ್ನು ಅಡ್ಡವಾಗಿ ಇಟ್ಟು ತೆಳುವಾಗಿ ಮಣ್ಣನ್ನು ಹರಡಬೇಕು. ಬೇಸಿನ್ ಇರುವ ಸುತ್ತ ಒಬ್ಬರು ಕುಳಿತುಕೊಳ್ಳಲು ಬೇಕಾಗುವ ಜಾಗಕ್ಕೆ ಸೋಗೆಯ ತಟ್ಟಿ ಕಟ್ಟಿಕೊಂಡರೆ ದಿನದ ಯಾವ ಹೊತ್ತಿನಲ್ಲಿಯೂ ಪಾಯಿಖಾನೆ ಮಾಡಬಹುದು. ತಲೆಯ ಮೇಲೆ ಪ್ಲಾಷ್ಟಿಕ್‌ನ್ನು ಹೊದಿಸಿಕೊಂಡರೆ ಮಳೆ, ಬಿಸಿಲು ಯಾವಾಗ ಬೇಕಾದರೂ ಬಳಸಬಹುದು. ಈ ಪಾಯಿಖಾನೆಯನ್ನು ಆರು ತಿಂಗಳ ಕಾಲ ಉಪಯೋಗಿಸಿ ಮತ್ತೆ ಬೇರೆಡೆಗೆ ಸ್ಥಳಾಂತರಿಸಬಹುದು. ಹೊಂಡದಲ್ಲಿ ಅರ್ಧಕ್ಕಿಂತ ಸ್ವಲ್ಪ ಜಾಸ್ತಿ ತರಗೆಲೆಗಳನ್ನು ತುಂಬಿಸಿಟ್ಟರೆ ಆರು
ತಿಂಗಳಲ್ಲಿ ಅತ್ಯುತ್ತಮ ಸಾವಯವ ಗೊಬ್ಬರ ತಯಾರಾಗುತ್ತದೆ. ಆರು ತಿಂಗಳ ಕಾಲ ಬಳಸಿದ ಹೊಂಡಕ್ಕೆ ಸುಣ್ಣ ಹಾಕಿ ಸ್ವಲ್ಪ ದಿನ ಬಿಟ್ಟರೆ ಅದು ಮಣ್ಣಾಗಿ ಯಾವ ವಾಸನೆಯೂ ಇರುವುದಿಲ್ಲ. ಇದನ್ನು ಸಾವಯವ ಗೊಬ್ಬರದಂತೆ ಬಳಸಬಹುದು. ಬೇಡವಾದರೆ ಅದರಲ್ಲಿ ತೆಂಗಿನ ಸಸಿ ನೆಡಬಹುದು. ಹಾಗೆಯೇ ಬಿಟ್ಟರೆ ಸುತ್ತಮುತ್ತಲಿನ ಮರಗಳು ಅದರ ಸಾರವನ್ನು ಹೀರಿಕೊಳ್ಳುತ್ತವೆ. ವೈಜ್ಞಾನಿಕವಾಗಿ ಮಾನವನ ಮಲದಲ್ಲಿ 1.30% ಸಾರಜನಕ, 1.00% ರಂಜಕ, 0.40% ಪೊಟ್ಯಾಶ್ ಇದೆ ಎಂದು ದೃಢ ಪಟ್ಟಿದೆ.

ಹಳ್ಳಿಯಲ್ಲಿ ಇಂತಹ ಸಂಡಾಸನ್ನು ಐನೂರು ರೂಪಾಯಿ ವೆಚ್ಚದೊಳಗೆ ಮಾಡಿಕೊಳ್ಳಬಹುದು. ಇದರಿಂದ ಪರಿಸರವನ್ನು ಚೊಕ್ಕಟವಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದನ್ನು ನಗರದಲ್ಲಿ ಕೂಡಾ ಮನೆಯ ಸುತ್ತ ಜಾಗವಿದ್ದಲ್ಲಿ ಉಪಯೋಗಿಸಲು ಅಡ್ಡಿಯಿಲ್ಲ. ಯಾರಿಗೂ ಇದರಿಂದ ಹಾನಿಯಿಲ್ಲ. ಕುಡಿಯುವ ನೀರಿನ ಬಾವಿಯಿಂದ ಕನಿಷ್ಠ 30 ಅಡಿ ದೂರ ಕಾಯ್ದುಕೊಳ್ಳುವುದು ಅಗತ್ಯ.

ಸಾವಯವ ಕೃಷಿ

ಹಸಿರು ಕ್ರಾಂತಿಯ ಕಾಲದಲ್ಲಿ ಕೃಷಿ ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ನಡೆಸಿದ ಪ್ರಯೋಗ ಫಲದಿಂದ ಕೃತಕವಾಗಿ ರಾಸಾಯನಿಕ ಗೊಬ್ಬರದ ಆವಿಷ್ಕಾರವಾಯಿತು. ಇಂತಹ ಗೊಬ್ಬರಗಳು ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆಯನ್ನು ನೀಗಿಸಲಿಕ್ಕೆ ಮಾತ್ರ ಸೀಮಿತವಾಗಬೇಕಿತ್ತು. ಆದರೆ ಇವುಗಳನ್ನು ಬಳಸಿದಾಗ ದೊರೆತ ಆರಂಭದ ಫಲಿತಾಂಶದಿಂದ ಉತ್ತೇಜಿತರಾದ ರೈತರು, ಅದನ್ನೇ ನೆಲಕ್ಕೆ ಹಾಕಿ ಹೆಚ್ಚಿನ ಇಳುವರಿ ತೆಗೆಯುವಲ್ಲಿ ಸಫಲರಾದರು. ಇದನ್ನು ತಯಾರಿಸುವ ಕಂಪೆನಿಗಳು ಮತ್ತು ಮಾರಾಟಗಾರರು ಮನ ಬಂದಂತೆ ಪ್ರಚಾರ ಮಾಡಿ ಹಣ ಗಳಿಸುವುದರಲ್ಲಿಯೂ ಯಶಸ್ವಿಯಾದರು. ಆದರೆ ರುಚಿಯಿದೆಯೆಂದು ಬರೀ ಸಿಹಿಯನ್ನು ಸೇವಿಸಿದವರ ಪರಿಸ್ಥಿತಿ ಭೂಮಿಗೂ ಬಂತು. ಇದರ ದುಷ್ಪರಿಣಾಮ ತಿಳಿಯಲು ಮೂರು ದಶಕಗಳೇ ಬೇಕಾದವು.

ರಾಯರು ಕೂಡಾ ರಸಗೊಬ್ಬರಗಳ ಭರಾಟೆಯಲ್ಲಿ ಸ್ವಲ್ಪ ದಿಕ್ಕು ತಪ್ಪಿದ್ದುಂಟು. ಆದರೆ ಹಟ್ಟಿ ಗೊಬ್ಬರದೊಂದಿಗೆ ಮಿತವಾಗಿ ಬಳಸಿದ್ದರಿಂದ ಅಂತಹ ಹಾನಿಯೇನೂ ಆಗಲಿಲ್ಲ. ರಾಯರ ತತ್ವ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ  ಮತ್ತು ಭೂಮಿ ತಾಯಿಯಿಂದ ಸಾಧ್ಯವಾಗದ್ದಕ್ಕಿಂತ ಹೆಚ್ಚು ಬಯಸಬಾರದು. ಹಾಲು ಸಿಗುತ್ತದೆಂದು ಕೆಚ್ಚಲು ಕೊಯ್ಯುವ ಕೆಲಸ ಮಾಡಬಾರದು. ರಸ ಗೊಬ್ಬರದ ಆವಾಂತರ ಕೆಲವು ವರ್ಷಗಳಲ್ಲಿಯೇ ಗಮನಕ್ಕೆ ಬಂದು, ಅದರ ಬಳಕೆಯನ್ನು ಸಂಪೂರ್ಣ ನಿಲ್ಲಿಸಿ. ಕೇವಲ ಪಶುಗಳ ಸೆಗಣಿ, ಗಂಜಳ, ಸೊಪ್ಪು, ದರಗು ಮಣ್ಣಿಗೆ ಸೇರಿಸಿ ಸುಸ್ಥಿರ ಕೃಷಿಯನ್ನು ಅಭಿವೃದ್ಧಿಪಡಿಸಿದರು. ಇದು ಯಾವ ಕಾಲಕ್ಕೂ ಪ್ರಸ್ತುತ. ಈಗಲೂ ಅವರ ತೋಟದಲ್ಲಿ ಪರಿಸರದ ಸಸ್ಯಗಳ ತ್ಯಾಜ್ಯಗಳೇ ಗೊಬ್ಬರ. ಸೆಗಣಿಯ ಬಳಕೆ ಕೂಡಾ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಆದರೆ ಇಳುವರಿಯಲ್ಲಿ ವ್ಯತಾಸವಿಲ್ಲ.

ಇವರ ತೋಟದ ವಿಶೇಷತೆಯನ್ನು ಅವರು ಬೆಳೆಸುವ ಅನಾನಾಸು, ಕಾಳುಮೆಣಸುಗಳಲ್ಲಿ ಕಾಣಬಹುದು. ಅನಾನಾಸಿನ ನಾಟಿ ವ್ಯವಸ್ಥಿತ ರೀತಿಯಲ್ಲಿರುವಂತೆ ಕಾಣುವುದಿಲ್ಲ. ತೋಟದ ತುಂಬಾ ಬಿಸಾಡಿದ ಹಾಗೆ ಕಾಣುತ್ತದೆ. ಮಳೆಗಾಲದಲ್ಲಿ ಹುಲ್ಲಿನ ಮಧ್ಯೆ ಕಾಣುವುದೆ ಇಲ್ಲ. ಆದರೆ ಎಪ್ರಿಲ್ ತಿಂಗಳಲ್ಲಿ ಭೂಮಿಯಿಂದ ಕಮಲ ಅರಳಿದಂತೆ ಅವರ ಜಾಗದ ತುಂಬಾ ಅದರ ಜುಟ್ಟು ಪ್ರತ್ಯಕ್ಷವಾಗಲು ಶುರುವಾಗುತ್ತದೆ. ಮೇಯಲ್ಲಿ ಮಾಗಿದ ಹಣ್ಣು ಕಾಯಿಗಳು ಕೈಬೀಸಿ ಕರೆಯುತ್ತವೆ. ಅವುಗಳಿಗೆ ನೀರೂ ಇಲ್ಲ, ಗೊಬ್ಬರವೂ ಇಲ್ಲ. ಆದರೆ ಸಿಹಿ ಸಕ್ಕರೆಗಿಂತ ದುಪ್ಪಟ್ಟು. ಹತ್ತಿರದ ಮಾರುಕಟ್ಟೆಯಲ್ಲಿ ಚೇರ್ಕಾಡಿಯವರ ಅನಾನಾಸೆಂದೇ ಪ್ರಸಿದ್ಧಿ ಪಡೆದ ಹಣ್ಣಿಗೆ ಮೊದಲ ಆದ್ಯತೆ. ವರ್ಷಕ್ಕೆ ಸುಮಾರು ಒಂದೂವರೆ ಟನ್‌ನಷ್ಟು ಬೆಳೆಯುವ ಬೆಳೆಯಿಂದ 15000ಕ್ಕೂ ಮಿಕ್ಕಿದ ಆದಾಯ.  ಆವರೆನ್ನುವಂತೆ ಸೋಮಾರಿತನ ಬಿಟ್ಟು, ತನ್ನ ಮಣ್ಣಿನ ವಿಜ್ಞಾನಿ ತಾನೇ ಆದರೆ ಈ ಭೂಮಿಯಲ್ಲಿ ಬಡವರು ಯಾರೂ ಇಲ್ಲ.

ಎರಡು ಎಕರೆ ಮತ್ತು ಸ್ವಾತಂತ್ರ್ಯ

ರಾಯರ ತೊಟ ವೀಕ್ಷಿಸಲು ಬಂದ ಮಹನಿಯರೊಬ್ಬರು ಒಂದು ಎಕರೆ ಮತ್ತು ಸ್ವಾತಂತ್ರ್ಯ ಎನ್ನುವ ಪುಸ್ತಕವನ್ನು ವಿದೇಶದಲ್ಲಿ ಓದಿದೆ. ಇದು ಸಾಧ್ಯವೇ ಎಂದು ಅನುಮಾನಿಸಿದ್ದೆ. ಆದರೆ ನಿಮ್ಮ ತೋಟ ನೋಡಿದ ನಂತರ ಇದು ಸತ್ಯವೆಂದು ಮನವರಿಕೆಯಾಯಿತು ಎಂದರಂತೆ. ಈ ಪ್ರಪಂಚದಲ್ಲಿ ಬಡವರಾಗಿ ಹುಟ್ಟುವುದು ಪಾಪಿಗಳು ಎನ್ನುವ ಅಭಿಪ್ರಾಯವಿದೆ. ಆದರೆ ರಾಯರ ಅನುಭವದಲ್ಲಿ ಹುಟ್ಟುವಾಗ ಪ್ರತಿಯೊಬ್ಬನಿಗೂ ಬೆಲೆಕಟ್ಟಲಾಗದ ಆಸ್ತಿಯನ್ನು ದೇವರು ಕೊಟ್ಟು ಕಳುಹಿಸುತ್ತಾನೆ. ಮಾನವನ ಪ್ರತಿಯೊಂದು ಅವಯವ ಅದ್ಭುತ ಮತ್ತು ದುಡಿದು ತಿನ್ನಲು ಸೂಕ್ತ. ಅದಕ್ಕೆ ಬೆಲೆ ಕಟ್ಟಿದರೆ ಮೂರ್ಖತನವಾದೀತು. ಅವರ ಪ್ರಕಾರ ಸೋಮಾರಿತನದಿಂದ ಬಡವರಾಗಿ, ಸಮಾಜಕ್ಕೆ ಹೊರೆಯಾಗಿ ಬದುಕುತ್ತಿರುವವರು ಪಾಪಿಗಳು.

ಎರಡು ಎಕರೆ ಜಾಗದಲ್ಲಿ ಒಂದು ಕುಟುಂಬದ ನಿರ್ವಹಣೆ ಸಾಧ್ಯವಿದೆ. ನಿಸರ್ಗದಲ್ಲಿ ಜನಿಸುವ ಪ್ರ್ರತಿಯೊಂದು ಜೀವಿಗೂ ಬದುಕಲು ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯಿದೆ. ಆದರೆ ಮನುಷ್ಯನ ದುರಾಶೆಗೆ ಹಾಗೂ ಸೋಮಾರಿತನಕ್ಕೆ ಇಲ್ಲಿ ಅವಕಾಶವಿಲ್ಲ. ರಾಯರು ಹುಟ್ಟು, ಬಾಲ್ಯವನ್ನು ಅವಲೋಕಿಸಿದರೆ ಅವರು ಸಮಾಜ ಘಾತುಕರಾಗಿಯೋ, ಹೊರೆಯಾಗಿಯೋ ಬದುಕುವ ಸಾಧ್ಯತೆ ಕಾಣುತ್ತದೆ. ಇಲ್ಲವೇ ಕಳ್ಳನೋ, ದರೋಡೆಕೋರನೋ ಆಗಿ ಜೀವಿಸುವ ವಾತಾವರಣ. ಆದರೆ ತನ್ನ ಸ್ವಂತ ಬುದ್ಧಿಶಕ್ತಿಯಿಂದ, ಸಶ್ರಮದಿಂದ ಕೇವಲ ಎರಡು ಎಕರೆ ಗುಡ್ಡೆ ಭೂಮಿಯಲ್ಲಿ ಸ್ಥಳೀಯರ ಪ್ರಕಾರ ಯಾವುದಕ್ಕೂ ಪ್ರಯೋಜನ ಬಾರದ ಜಾಗ ಸತತ ಹೋರಾಟ ನಡೆಸಿ ಕಸದಿಂದ ರಸ ತೆಗೆದು ತೃಪ್ತಿಯ ಜೀವನ ನಡೆಸಿದುದಲ್ಲದೆ, ಇತರರಿಗೂ ಮಾರ್ಗದರ್ಶಿಯಾಗಿ ಸಾರ್ಥಕ ಬದುಕು ಸಾಗಿಸಿದರು. ಪ್ರಪಂಚ ತ್ಯಜಿಸುವಾಗ ಉಳಿಸಿದ ಹಣದ ಬಡ್ಡಿಯಿಂದ ಎರಡು ಕುಟುಂಬ ನಿಶ್ಚಿಂತೆಯಿಂದ ಜೀವನ ಸಾಗಿಸಬಹುದು. ದೇಶ ಸ್ವತಂತ್ರವಾದ 60 ವರ್ಷಗಳ ನಂತರವೂ ಬಡತನ ನಿವಾರಣೆ ಮಾಡಲು ದೇಶ ಕಂಡ ವಿವಿಧ ಮುಖಗಳ, ಆದರೆ ಒಂದೇ ತತ್ವದಹಣ ನುಂಗುವ ಸರಕಾರಗಳಿಗೆ ಸಾಧ್ಯವಾಗಲಿಲ್ಲ. ಮಹಾತ್ಮಾ ಗಾಂಧಿ ಮತ್ತು ಚೇರ್ಕಾಡಿ ಗಾಂಧಿಯಿಬ್ಬರೂ ತಮ್ಮ ತತ್ವ, ಸಿದ್ಧಾಂತ, ಕೆಲಸಗಳಿಂದ ಬಡತನ ನಿವಾರಣೋಪಾಯ ಗಳನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಸಂಬಂಧಪಟ್ಟವರು ಇದಕ್ಕೆ ಸ್ಪಂದಿಸದೆ, ಕಣ್ಣು ಮುಚ್ಚಿಕೊಂಡಲ್ಲಿ ಯಾವ ದೇವರಿಂದಲೂ ಬಡತನ ನಿವಾರಣೆ ಸಾಧ್ಯವಿಲ್ಲ.

ರಾಯರ ಸಾಧನೆಯಲ್ಲಿ ಭಾಗಿಗಳು

ಪ್ರಾರಂಭದಲ್ಲಿ ಜನರು ಇವರ ಸಾಧನೆಯನ್ನು ಪ್ರಯೋಜನಕ್ಕೆ ಬಾರದ್ದು ಎಂದು ಕಡೆಗಣಿಸಿದ್ದುಂಟು. ಆದರೆ ಅವರ ಕಾಯಕದಲ್ಲಿ ಸತ್ಯವನ್ನು ಕಂಡ ಹಲವಾರು ಜನರು ಅವರನ್ನು ಮೆಚ್ಚಿ, ಅವರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸಿದವರಿದ್ದಾರೆ. ಅವರಲ್ಲಿ ದಿ ಖದ್ದರ್ ಶ್ರೀನಿವಾಸ ಪೈಗಳು ಒಬ್ಬರು. ಗಾಂಧೀ ಮತ್ತು ವಿನೋಬಾರ ಅನುಯಾಯಿಗಳಾಗಿದ್ದ ಇವರು ರಾಯರ ಕೃಷಿ ಕ್ರಮವನ್ನು ಮುದ್ರಿಸಿ ಸಮಾಜದಲ್ಲಿ ಪ್ರಚಾರವಾಗುವಂತೆಯೂ ಮಾಡಿದ್ದರು. ರಾಯರಿಗೆ ಅವರು ಹೇಳುತ್ತಿದ್ದ ಮಾತು ರಾಯರೇ ನಮ್ಮ ಕೆಲಸ ಒಂದು ಹಣತೆ ಹಚ್ಚಿ ಇಡುವುದು ಮಾತ್ರ. ಅದರ ಬೆಳಕಿನಿಂದ ಸಾವಿರಾರು ಜನ ಪ್ರಯೋಜನ ಪಡೆಯುತ್ತಾರೆ ಎನ್ನುವುದು ಅವರ ನಿಸ್ವಾರ್ಥ ಬಯಕೆಗೆ ಸಾಕ್ಷಿ. ಇವರ ಕೃಷಿ ಮತ್ತು ಜೀವನ ಪದ್ಧತಿ ಜನರ ಗಮನಕ್ಕೆ ಬರುವಂತೆ ಆಸಕ್ತಿ ವಹಿಸಿದವರಲ್ಲಿ ಸಿಂಡಿಕೇಟ್ ಬ್ಯಾಂಕಿನ ಕೆ.ಎಂ. ಉಡುಪರು ಪ್ರಮುಖರು. 1961ರಿಂದಲೇ ರಾಯರ ಒಡನಾಟವಿರಿಸಿಕೊಂಡ ಉಡುಪರು ಬ್ಯಾಂಕ್ ಮತ್ತು ಸಿಂಡಿಕೇಟ್ ಕೃಷಿ ಪ್ರತಿಷ್ಠಾನದ ಮೂಲಕ ಇವರ ಪದ್ಧತಿಯನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸಿದ್ದಾರೆ. ಸಣ್ಣ ಹಿಡುವಳಿ ಮತ್ತು ಸುಸ್ಥಿರ ಕೃಷಿಯನ್ನು ಇವರ ಪದ್ಧತಿಯ ಆಧಾರದ ಮೇಲೆ ಹುಟ್ಟುಹಾಕಿ ಲಕ್ಷಾಂತರ ಜನ ಕೃಷಿಕರಿಗೆ ತಲುಪಿಸಲು ಕಾರಣರಾಗಿದ್ದಾರೆ. ಕೃಷಿಯಿಂದ ತೃಪ್ತಿಯ ಜೀವನ ಸಾಧ್ಯವೆಂದು ಜಾಗೃತಗೊಳಿಸಿ ಈಗಲೂ ಅದನ್ನು ನಂಬಿಕೊಂಡೇ ಇರುವ ವ್ಯಕ್ತಿಯಿವರು. ರಾಯರ ಸುಖ, ಸಮಸ್ಯೆಗಳನ್ನು ಆಪ್ತಮಿತ್ರರಾಗಿ ಹಂಚಿಕೊಂಡು ಅವರ ಕೊನೆಯ ದಿನಗಳ ವರೆಗೂ ಆತ್ಮೀಯರಾಗಿ ಉಳಿದವರು. ಕೊನೆಗೆ ಅವರ ಅಂತಿಮ ದರ್ಶನ ಮಾಡಿ ಗೌರವವನ್ನು ಕೊಟ್ಟು ತನ್ನ ಕರ್ತವ್ಯ ನಿಭಾಯಿಸಿದ್ದಾರೆ.

ಹೀಗೆ ಸಾವಿರಾರು ಮಂದಿ ಇವರ ಸಾಧನೆ  ಮೆಚ್ಚಿ ಸಮಾಜದಲ್ಲಿ ಪ್ರಚಾರ ಮಾಡಿದ್ದಾರೆ. ಅಂತಹವರ ಲೆಕ್ಕವೇ ಸಿಗುತ್ತಿಲ್ಲ. ಪತ್ರಿಕೆಗಳು ಕೂಡಾ 1966 ರಿಂದ ನಿರಂತರ ಇವರ ಸದ್ದಿಲ್ಲದ ಕೃಷಿಯಿಂದ ಬಡತನ ನಿವಾರಣ ಕಾಯಕಗಳನ್ನು ಸಮಾಜಕ್ಕೆ ಪರಿಚಯಿಸಿವೆ. ಅದನ್ನು ನೋಡಿ ಸಾವಿರಾರು ಮಂದಿ ಇವರ ಕ್ಷೇತ್ರ ಸಂದರ್ಶಿಸಿ, ಸತ್ಯ ದರ್ಶನ ಮಾಡಿದ್ದಾರೆ.

ರಾಯರ ಸಮಾಜಮುಖಿ ಚಿಂತನೆಗಳು

ರಾಯರು ಕೇವಲ ಕಾಯಕವನ್ನು ಮಾಡಿಕೊಂಡು ಕುಳಿತವರಲ್ಲ. ಉತ್ತಮ ಸಂವಾದಕರು ಹೌದು. ಆಸಕ್ತ ಸಂದರ್ಶಕರೊಡನೆ ಚರ್ಚಿಸಿ ತಾನು ನಂಬಿದ ತತ್ವ ಮತ್ತು ಯಶಸ್ಸಿನ ಕೆಲಸಗಳನ್ನು ಮನದಟ್ಟಾಗುವಂತೆ ವಿವರಿಸುವುದರಲ್ಲಿಯೂ ಸಿದ್ಧಹಸ್ತರು. ಕೇಳಿದವರು ತಲೆದೂಗಿಕೊಂಡೇ ಮರಳುವಂತೆ ಅವರ ವಿಚಾರ ಲಹರಿ ಸಾಗುತ್ತಿತ್ತು. ಅವರ ಕೆಲವು ಚಿಂತನೆಗಳನ್ನು ಆಯ್ದು ಕೆಳಗೆ ಕೊಡಲಾಗಿದೆ.

ನಾವು ಭೂಮಿಯನ್ನು ಆಳುವವರಲ್ಲ. ಬದಲಿಗೆ ಭೂಮಿ ನಮ್ಮನ್ನು ಆಳುತ್ತದೆ. ನಾವ್ಯಾರು ಭೂಮಿ ಇದ್ದಷ್ಟು ಕಾಲ ಬದುಕುವವರಲ್ಲ. ಇಂತಹ ನಂಬಿಕೆಗಳು ನಮ್ಮಲ್ಲಿರಬೇಕು. ಇದರಿಂದಾಗಿ ಉತ್ತಮ ಕೃಷಿಕರಾಗುವುದು ಸಾಧ್ಯ. ಇದನ್ನೇ ನನ್ನ ಬದುಕಿನುದ್ದಕ್ಕೂ ಪಾಲಿಸುತ್ತಾ ಬಂದಿದ್ದೇನೆ.

ನಾನು ಮದುವೆಯಾದ ಆರಂಭದಲ್ಲಿ ಇನ್ಸುರೆನ್ಸ್ ಏಜೆಂಟರೊಬ್ಬರು ನನ್ನಲ್ಲಿಗೆ ಬಂದರು. ನಿಮ್ಮ ಹೆಂಡತಿ ಮಕ್ಕಳ ಜೀವನ ಭದ್ರತೆಗಾಗಿ ಒಂದು ಪಾಲಿಸಿ ಮಾಡೋಣವೇ ಎಂದರು. ಸದಾ ಅಭದ್ರತೆಯಲ್ಲಿ ಬೆಳೆದು ಬಂದ ನಾನು ಸರಿ ಎನಿಸಿ ಅದಕ್ಕೆ ಒಪ್ಪಿದೆ. ವರ್ಷವೂ 36 ರೂಪಾಯಿ ಪ್ರೀಮಿಯಂ ಕಟ್ಟುತ್ತಾ ಹೋದರೆ 30 ವರ್ಷದ ನಂತರ ಅಂದರೆ ನನ್ನ 55ನೇ ವರ್ಷದಲ್ಲಿ ಒಂದು ಸಾವಿರ ರೂಪಾಯಿ ದೊರೆಯುತ್ತದೆ ಎಂದರು. ಅದೇ ರೀತಿ ಕಟ್ಟುತ್ತಾ ಬಂದೆ. ನನ್ನ ಆರ್ಥಿಕ ಸಮಸ್ಯೆ ಜಟಿಲವಾಗುತ್ತಾ ಬಂತು. ಕಾರಣ ಕೆಲವು ವರ್ಷಗಳ ಬಳಿಕ ಕಂತು ಕಟ್ಟಲಾಗಲಿಲ್ಲ. ನಾನೇ ತಪ್ಪಿದ ಮೇಲೆ ಎಲ್ಲವೂ ನಿರರ್ಥಕವಾಯಿತೆಂದು ಬಗೆದೆ. ಆದರೆ ನಾನು ಬೇರೊಂದು ದಾರಿ ಹುಡುಕಿಕೊಂಡೆ. ನಮ್ಮ ಹಿತ್ತಲಿನಲ್ಲಿ ಖಾಲಿ ಜಾಗವನ್ನು ಆಯ್ದು ಎಂಟು ಕಸಿ ಮಾವಿನ ಗಿಡಗಳನ್ನು ನೆಟ್ಟೆ. ಅವುಗಳನ್ನು ಒಳ್ಳೆಯ ರೀತಿಯಲ್ಲಿ ಸಾಕಿದೆ. ಕೇವಲ ಏಳು ವರ್ಷಗಳಲ್ಲಿ ವಿಶಾಲವಾಗಿ ಬೆಳೆದು ಮರದ ತುಂಬಾ ಫಲ ಕಾಣಿಸಿತು. ಅದೇ ವರ್ಷ ಮಾವಿನ ಫಸಲನ್ನು ನಾಲ್ಕು ಸಾವಿರ ರೂಪಾಯಿಗೆ ಬಿಟ್ಟುಕೊಟ್ಟೆ. ಆ ಮೇಲೆ ಪ್ರತಿವರ್ಷವೂ ಸಾವಿರಾರು ರೂಪಾಯಿಗಳ ಇಳುವರಿ ಪಡೆಯುತ್ತಾ ಬಂದೆ. ಇದೇ ನನ್ನ ಜೀವವಿಮೆ ಅಂದುಕೊಂಡೆ. ಅಂದರೆ 30 ವರ್ಷಗಳ ಬಳಿಕ ಒಂದು ಸಾವಿರವಲ್ಲ. ಬದಲಿಗೆ ಪ್ರತಿ ವರ್ಷವೂ ಸಾವಿರಾರು ರೂಪಾಯಿಗಳು ದೊರೆಯುತ್ತಿವೆ.

ಚಿಕ್ಕ ಹಿಡುವಳಿಯಲ್ಲಿ, ನನ್ನ ರೀತಿಯ ಸರ್ವೋದಯ ಕೃಷಿ ಪದ್ಧತಿ ಅನುಸರಿಸಿದರೆ ಎಲ್ಲ ಕೃಷಿಕರ ಉದ್ಧಾರವಾಗುತ್ತದೆ. ನಿರುದ್ಯೋಗಕ್ಕೆ ಉತ್ತರವಾಗುತ್ತದೆ. ಇದು ಸುಲಭ ಮತ್ತು ಎಲ್ಲರೂ ಮಾಡಬಹುದಾದ್ದು.

ಈ ಭೂಮಿ ಒಂದು ಆಕಾಶವಾಣಿ ಇದ್ದಂತೆ. ಅದರಲ್ಲಿ ನಿರಂತರ ಕಾರ್ಯಕ್ರಮಗಳು ಇರುತ್ತವೆ. ಆದರೆ ನಾವು ಕೇಳಲು ಸ್ವಿಚ್  ಹಾಕಬೇಕು. ಭೂಮಿಯಲ್ಲೂ ರೇಡಿಯೋದಂತೆ ನಿರಂತರ ಕಾರ್ಯಕ್ರಮಗಳು ತುಂಬಿರುತ್ತವೆ. ಅವು ನಮಗೆ ಕೇಳಬೇಕಾದರೆ, ಅರ್ಥವಾಗಬೇಕಾದರೆ, ಅನುಭವಿಸಬೇಕಾದರೆ ಗಿಡ, ಮರ, ಬಳ್ಳಿಗಳಂತಹ ಸ್ವಿಚ್ ಅದುಮ ಬೇಕು. ಕೇವಲ ಒಂದೇ ಒಂದು ಬಳ್ಳಿ, ಪ್ರಕೃತಿಯ ಪರಿಸ್ಥಿತಿ- ಅಂತರಂಗವನ್ನು ಪ್ರಕಟಿಸಬಹುದು.

ನಾನು ಹೇಳುವುದಾದರೆ ಬ್ಯಾಂಕಿನವರೇ, ಬಡವರಿಗೆ ಸಾಲ ಕೊಡಬೇಡಿ. ನೀವು ಕೊಡುವ ಸಾಲದಿಂದ ಆತ ಪಂಪು ಸೆಟ್ಟು, ಮೈಕು ಸೆಟ್ಟು, ರೇಡಿಯೋ ಸೆಟ್ಟು ತಂದು ಹಣ ಖರ್ಚು ಮಾಡುತ್ತಾನೆ. ಫಸಲಿನಿಂದ ಸಿಗುವ ಹಣ ಬಡ್ಡಿ ತೀರಿಸಲಿಕ್ಕೂ ಸಾಕಾಗುವುದಿಲ್ಲ. ಒಂದು ದಿನ ಸಾಲ ತೀರಿಸಲಾರದೆ ಎಲ್ಲಾ ಅಡವಿಟ್ಟು ದಿಕ್ಕಾಪಾಲಾಗುತ್ತಾನೆ. ಸಾಲ ಕೊಡಬೇಡಿ, ಬಡವರನ್ನು ಲಗಾಡಿ ತೆಗೆಯಬೇಡಿ.

ನಾನು ಇಲ್ಲಿಗೆ ಬಂದದ್ದು ಎಟೆಂಡರ್ ಆಗಿ. ಅನಂತರ ಕ್ಲರ್ಕ ಆದೆ.  ಮುಂದೆ ಆಫೀಸರ್- ಮನೇಜರ್ ಆಗಿ ಬಡ್ತಿ ಪಡೆದೆ. ಈಗ ನಾನು ಎಂ.ಡಿ. ಕೃಷಿ ರಂಗದಲ್ಲಿ ಯಂತ್ರಗಳು ನಮ್ಮ ಮೇಲೆ ಸವಾರಿ ಮಾಡಬಾರದು. ನಾವು ಅವುಗಳ ಮೇಲೆ ಸವಾರಿ ಮಾಡಬೇಕು.  ಮರ ಇಂತಿಷ್ಟೇ ಬೆಳೆ ಕೊಡಬೇಕೆಂದು ನನಗೆ ಕಡ್ಡಾಯ ಇಲ್ಲ. ಅದು ಎಷ್ಟು ಕೊಡುತ್ತದೋ ಅಷ್ಟು ಕೊಡಲಿ. ನಾನು ತೃಪ್ತ. ಬಲಾತ್ಕಾರದಿಂದ ಬೆಳೆ ತೆಗೆಯುವುದು ಸರಿಯಲ್ಲ.  ನಮಗೆ ಪ್ರಕೃತಿ ಒಂದು ಹೊಟ್ಟೆಗೆ ಎರಡು ಕೈಗಳನ್ನು ಕೊಟ್ಟಿದೆ. ಮನಸ್ಸು ಮಾಡಿದರೆ ನಾವು ಅದರಿಂದ ಎಷ್ಟೆಲ್ಲಾ ಸಂಪಾದಿಸಬಹುದು ಮಾರಾಯ್ರೆ.  ಈ ಆಧುನಿಕತೆ ನಮ್ಮ ಬದುಕಿನ ನೇಯ್ಗೆಯನ್ನು ಕತ್ತರಿಸಿ ಹಾಕುತ್ತಿದೆ. ಆಧುನಿಕತೆ ಎಂಬುದು ಕುದುರೆಯ ರೀತಿ. ಅದನ್ನು ನಾವು ಸವಾರಿ ಮಾಡಬೇಕೇ ಹೊರತು ಅದು ನಮ್ಮನ್ನು ಸವಾರಿ ಮಾಡಬಾರದು.

ಗಾಂಧೀಜಿ, ಗುಡಿಕೈಗಾರಿಕೆ ನಮ್ಮ ದೇಶ ಗಳಿಸಿರುವ ಸ್ವಾತಂತ್ರ್ಯವನ್ನು ಉಳಿಸಬಹುದು ಎಂದಿದ್ದರು. ಆದರೆ ಬಹುರಾಷ್ಟ್ರೀಯ ಕಂಪೆನಿಗಳು ನಮಗೆ ಸಿಕ್ಕಿರುವ ಸ್ವಾತಂತ್ರ್ಯದ ಎಲ್ಲವನ್ನೂ ಮಣ್ಣುಗೂಡಿಸಿ, ಪರಾವಲಂಬಿಯಾಗಿಸುತ್ತಿವೆ. ಆಧುನಿಕ ಉದ್ಯಮ ಒಂದು ರೀತಿಯಲ್ಲಿ ಸಮಯಸಾಧಕ ಹಾಗೂ ಸಂಹಾರಕ ಗುಣಗಳನ್ನು ಹೊಂದಿರುತ್ತದೆ.

ಈ ಭೂಮಿ ನೊರೆಹಾಲು ಕೊಡುವ ಕೆಚ್ಚಲು, ಹಾಲನ್ನು ಕುಡಿದು ಸುಖ ಅನುಭವಿಸಬೇಕಾದ ಜನ ಸಾರಾಯಿ ಕುಡಿದು ಸಾಯುತ್ತಿದ್ದಾರೆ.

ನನ್ನಿಂದ ಈ ರಾಷ್ಟ್ರಕ್ಕೆ ಯಾವ ನಷ್ಟವೂ ಇಲ್ಲ, ಭಾರವೂ ಇಲ್ಲ. ನಾನು ಕರೆಂಟು ಕೊಡಿ, ಸಾಲ ಕೊಡಿ, ಫೋನ್ ಕೊಡಿ, ಸಬ್ಸಿಡಿ ಕೊಡಿ ಎಂದು ಕೇಳುವುದಿಲ್ಲ. ನಾನು ಭೂಮಿಯ ಅನುಗ್ರಹದಿಂದ ಬದುಕುತ್ತಿದ್ದೇನೆ.

ಯಾರೋ ಬೆಳೆಸಿದ್ದನ್ನು ಕೃಷಿಕರಾಗಿ ನಾವು ಅಪೇಕ್ಷಿಸಿ ತಿನ್ನುವುದು ಕಳ್ಳತನವಲ್ಲವೆ?

ಕೃಷಿಕರಿಗೆ ಕೃಷಿಯಲ್ಲಿ ರಾತ್ರಿ ಬೆಳಗಾಗುವುದರೊಳಗೆ ಹಣ ಸಂಪಾದನೆ ಮಾಡುವ ಯೋಚನೆ ಸಲ್ಲ. ಅವರಿಗೆ ಕೃಷಿ ಹೊಂದಿಕೆಯಾಗುವುದಿಲ್ಲ. ಅಂತಹವರು ಒಂದಂಕೆ ಲಾಟರಿಯಲ್ಲಿ ಹಣ ತೊಡಗಿಸಿ ಅದೃಷ್ಟ ಪರೀಕ್ಷೆ ಮಾಡಬಹುದು.

ಯಾಕೆ ಸ್ವಾಮಿ ಕೃಷಿಯಲ್ಲಿ ಗುದ್ದಾಟ, ನನಗಿಷ್ಟೇ ಬೇಕೆಂದು ನಾನು ಪ್ರಕೃತಿಯನ್ನು ಆಗ್ರಹಿಸುವುದಿಲ್ಲ. ಭಗವಂತ ಕೊಟ್ಟಷ್ಟರಲ್ಲಿ ನನಗೆ ತೃಪ್ತಿ ಇದೆ. ಜಾಸ್ತಿ ಇಳುವರಿಗೆ ಸ್ಪ್ರೇ, ರಾಸಾಯನಿಕ ಗೊಬ್ಬರ ಯಾವುದನ್ನೂ ನಾನು ಬಳಸುವುದಿಲ್ಲ. ಭಗವಂತ ಕೊಟ್ಟಷ್ಟರಲ್ಲಿ ನನಗೆ ತೃಪ್ತಿಯಿದೆ.

ಯಾರ್ಯಾರೋ ಬೆಳೆಸಿದ್ದನ್ನು ನಾವು ತಿಂದರೆ ಅದು ಕಳ್ಳತನ. ಗಾಂಧಿಯ ಈ ಮಾತು ನನ್ನ ಸಾಧನೆಗೆ ಮೂಲ. ಪರಾವಲಂಬಿಯಾಗಿ ನಾನು ಎಂದಿಗೂ ಬದುಕಲಾರೆ.

ತಾಯಿ ತನ್ನ ಮಗು ಅಳುತ್ತಿರುವಾಗ ಒಂದು ತುಂಡು ಬೆಲ್ಲ ಕೊಟ್ಟು ಸಮಾಧಾನ ಮಾಡುತ್ತಾಳೆ. ಬೆಲ್ಲವನ್ನು ನೆಚ್ಚಿಕೊಂಡು ಮಗು ಸುಮ್ಮನಾಗುತ್ತದೆ. ಇದೇ ರೀತಿ ಈ ಭೂಮಿಯಲ್ಲಿ ದುಡಿದರೆ ಆ ತಾಯಿ ಕೂಡಾ ನಮಗೆ ಏನಾದರೂ ಸಿಹಿ ಕೊಡುತ್ತಾ ಇರುತ್ತಾಳೆ.

ಈ ನೀರು, ಗಾಳಿ, ನೆಲ ಯಾರೊಬ್ಬರಿಗೂ ಸೇರಿದ್ದಲ್ಲ. ಅದನ್ನು ಒಬ್ಬರೇ ಇಟ್ಟುಕೊಂಡರೆ ಉಳಿದವರು ಉಸಿರುಕಟ್ಟಿ ಸಾಯುವುದೆ? 90 ಕೋಟಿ ಜನರಿಗೆ ಆಹಾರವಿಲ್ಲವೆಂದು ಸರಕಾರ ಬೊಬ್ಬೆ ಹೊಡೆಯುತ್ತಿದೆ. ಕುಟುಂಬ ಯೋಜನೆ ಮಾಡಿ ಎಂದು ಕೋಟಿ ಕೋಟಿ ರೂಪಾಯಿ ವ್ಯಯ ಮಾಡುತ್ತಿದೆ. ತೊಂಬತ್ತು ಅಲ್ಲ ಇನ್ನೂ ನೂರು ಕೋಟಿ ಜನ ಮಿಕ್ಕಿದರೂ ಈ ದೇಶದಲ್ಲಿ ಆಹಾರಕ್ಕೆ, ಭೂಮಿಗೆ ಬರಗಾಲವಿಲ್ಲ. ಯಾರಿಗೆ ಭೂಮಿ ಇಲ್ಲವೋ ಅವರಿಗೆ ಎರಡು ಎಕರೆ ಜಾಗ ಹಂಚಿಕೊಡಿ. ಎಲ್ಲರೂ ನನ್ನಂತೆ ಮಾಡಲಿ.

ಒಬ್ಬ ಅಸ್ಪಶ್ಯ ದಾರಿಯಲ್ಲಿ ಸಂಚರಿಸಬೇಕಾದರೆ ಎಲ್ಲರಿಗೂ ನಮಸ್ಕಾರ ಎಂದು ಎರಡೂ ಕೈ ಸೇರಿಸಿ ಬಗ್ಗಿ ನಮ್ರತೆಯಿಂದ ನಮಸ್ಕರಿಸುತ್ತಿದ್ದ. ಅದಕ್ಕೆ ಪ್ರತಿಯಾಗಿ ಅವರೆಲ್ಲರೂ ಹುಂ ಎಂದು ಗಂಭೀರದಿಂದ ಸ್ವೀಕರಿಸುತ್ತಿದ್ದರು. ಕೊನೆಗೊಂದು ದಿನ ಅದೇ ವ್ಯಕ್ತಿಗೆ ದೊಡ್ಡ ನಿಧಿ ದೊರೆತಿದೆ ಎಂದು ಪ್ರಚಾರವಾಗಿ ಬಿಟ್ಟಿತು. ಆ ಕ್ಷಣದಿಂದ ಜನರೆಲ್ಲಾ ಅವನಿಗೇ ನಮಸ್ಕಾರ ಕೊಡಲು ಪ್ರಾರಂಭಿಸಿದರು. ಆ ವ್ಯಕ್ತಿ ಪ್ರತಿಯೊಬ್ಬನ ನಮಸ್ಕಾರಕ್ಕೂ ಆಯ್ತು ತಲುಪಿಸುತ್ತೇನೆ ಎಂದು ಹೇಳುತ್ತಾ ಮುಂದುವರಿಯುತ್ತಿದ್ದ. ಒಮ್ಮೆ ಓರ್ವ ವ್ಯಕ್ತಿ ಆತನನ್ನು ಈತ ಎಲ್ಲಿಗೆ ನಮಸ್ಕಾರ ತಲುಪಿಸುತ್ತಾನೆ ನೋಡುವಾ ಎಂದು ಹಿಂಬಾಲಿಸಿದ. ಆತ ಮನೆ ಒಳಗೆ ಚಾವಡಿ ಕೋಣೆವರೆಗೂ ಹೋದ. ಆಗ ಮುಂದಿದ್ದವ ಹಿಂದೆ ಮುಂದೆ ನೋಡದೆ ಟ್ರಜರಿಯ ಬಾಗಿಲು ತೆಗೆದು ನಿನಗೆ ಇಂತಿಂತವರು ನಮಸ್ಕಾರ ತಿಳಿಸಿದ್ದಾರೆಂದು ಅದನ್ನೆಲ್ಲಾ ಒಪ್ಪಿಸಿದ. ಅವನಲ್ಲಿ ಹಣವಿದ್ದುದರಿಂದ ಅವನಿಗೆ ನಮಸ್ಕಾರ. ಅದೇ ರೀತಿ ನನಗೆ ಇದೊಂದು ಸಣ್ಣ ಭೂಮಿ ಇದ್ದುದರಿಂದ ನನಗೊಂದು ಹೆಸರು. ಅದು ನನ್ನದಲ್ಲ ನನ್ನ ಶ್ರಮದ್ದು, ಪ್ರಕೃತಿಗೆ ಸೇರಿದ್ದು.

ಸಾಮಾನ್ಯ ಹಕ್ಕಿಗಳು ತನ್ನ ಮಕ್ಕಳನ್ನು ಸಾಕಲು ಗೂಡು ಕಟ್ಟುವುದರಿಂದ ಹಿಡಿದು ರೆಕ್ಕೆ ಬಲವಾಗುವ ತನಕ  ಶ್ರಮ ಪಡುತ್ತವೆ. ಆದರೆ ಕೋಳಿ ಹಾಗಲ್ಲ. ಮೊಟ್ಟೆಯೊಡೆದ ನಂತರ ಕೋಳಿಮರಿಗಳನ್ನು ತಾಯಿ ಕೋಳಿ ತನ್ನೊಂದಿಗೆ ಕರೆದೊಯ್ದು ಅಲ್ಲಲ್ಲಿ ಮಣ್ಣು ಕೆದಕಿ, ಇಲ್ಲಿ ಆಹಾರವಿದೆ. ನೀವು ತಿನ್ನಬಹುದು ಎಂದು ತೋರಿಸಿ ಕೊಡುತ್ತದೆ. ನನ್ನ ಜೀವನ ಕ್ರಮ ಹೀಗಿದೆ. ನನ್ನ ಮಕ್ಕಳಿಗೂ ನಾನು ಇದೇ ರೀತಿ ಹೇಳಿ ಕೊಟ್ಟವ. ಬದುಕುವಂತೆ ಅನ್ನ ತಂದು ಕಾಲ ಬುಡಕ್ಕೆ ಹಾಕಲಿಲ್ಲ. ಬದಲಾಗಿ ಬದುಕುವ ದಾರಿ ತೋರಿಸಿದ್ದೇನೆ.

ಜೀವನ ಎಂಬುದು ಒಂದು ಹಾಯಿ ಕಟ್ಟಿದ ದೋಣಿಯಂತಿರಬೇಕು. ಒಮ್ಮೆ ಹಾಯಿ ಕಟ್ಟಿದರೆ ಅದರಲ್ಲಿ ನಾವು ನಿಶ್ಚಿಂತೆಯಿಂದ ಜಾಗರೂಕತೆಯಲ್ಲಿ ಮುಂದೆ ಹೋಗುವಂತಿರಬೇಕು. ಬದಲಾಗಿ ಅನುದಿನ ಪರ್ಯಂತ, ಜೀವನವೆಂಬ ದೋಣಿಗೆ ಹುಟ್ಟು ಹಾಕುತ್ತಾ ಮುಂದೆ ಚಲಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ರೈಲಿನಲ್ಲಿ ಕುಳಿತವ, ಬಸ್ಸಿನಲ್ಲಿ ಕುಳಿತವ ಗಂಟನ್ನು ತಲೆಯ ಮೇಲೆ ಮತ್ತೂ ಹೊರಬೇಕಾಗಿಲ್ಲ. ರೈಲು ಅವನ ಜೊತೆ ಅದನ್ನೂ ಹೊರಬಲ್ಲದು. ಆದುದರಿಂದ ಅದನ್ನು ಇಡುವ ಜಾಗದಲ್ಲಿ ಇಟ್ಟು ಆರಾಮವಾಗಿ ಕುಳಿತುಕೊಳ್ಳಬಹುದು.

ಪ್ರಕೃತಿಯೇ ನಮಗೊಂದು ಕಾಲೇಜ್. ಆಸಕ್ತಿಯಿಂದ ಪ್ರಾಮಾಣಿಕವಾಗಿ ದುಡಿಯುತ್ತ್ತಾ ಹೋದರೆ ಎಲ್ಲಾ ಅನುಭವವೂ ಇಲ್ಲಿ ದೊರೆಯುತ್ತದೆ.

ನಮ್ಮಲ್ಲಿ ಸಮಯ ಸಾಧಕ ಯಂತ್ರ, ಪೂರಕ ಮತ್ತು ಸಂಹಾರಕ  ಎನ್ನುವ ಮೂರು ಯಂತ್ರಗಳಿವೆ. ಇದನ್ನು ಬೇಕಾದಷ್ಟೇ ಉಪಯೋಗ ಮಾಡಿಕೊಳ್ಳಬೇಕು. ಆಧುನಿಕತೆಯ ಮೇಲೆ ನಾವು ಸವಾರಿ ಮಾಡಬೇಕೇ ಹೊರತು ನಮ್ಮ ಮೇಲೆ ಅದು ಸವಾರಿ ಮಾಡಬಾರದು. ಇದು ವರೆಗೆ ನನಗೆ ಆಧುನಿಕತೆಯ ಯಾವ ಅವಶ್ಯಕತೆಯೂ ಬೀಳಲಿಲ್ಲ. ಮುಂದೆಯೂ ಬೀಳಲಿಕ್ಕಿಲ್ಲ. ಇದು ಕೇವಲ ಭ್ರಮೆ ಅಷ್ಟೇ.

ಈಗ ನೋಡಿ ಕೃಷಿ ಕೇಂದ್ರಕ್ಕೆಲ್ಲಾ ಹೋದರೆ ಉಳಲು, ಕಟಾವು ಮಾಡಲು … ಹೀಗೆ ಎಂತೆಂತಹ ಯಂತ್ರಗಳನ್ನು ತಯಾರು ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ತಯಾರಾದರೂ ಕೂಡಾ ನಮ್ಮ ರಾಷ್ಟ್ರದ 40% ಮಂದಿ ಇನ್ನೂ ಕಷ್ಟದಲ್ಲಿ ಇದ್ದಾರಲ್ಲ. ಅದು ಹೇಗೆ? ಅವೆಲ್ಲಾ ಇವರಿಗೆ ಮುಟ್ಟಲೇ ಇಲ್ಲವೆ? ಅದಕ್ಕಾಗಿ ನಾನು ಹೇಳುವುದು ಈ ಯಂತ್ರಗಳೆಲ್ಲಾ ಕೇಂದ್ರೀಕೃತವಾಗಿವೆ ವಿನಃ ವಿಕೇಂದ್ರೀಕರಣ ಆಗಿಲ್ಲ. ಎಲ್ಲರಿಗೆ ಮುಟ್ಟಲಿಕ್ಕೆ ಸಾಧ್ಯವೂ ಇಲ್ಲ. ಗಾಂಧೀಜಿಯವರು ಹೇಳಿದಂತೆ ಗ್ರಾಮೀಣಾಭಿವೃದ್ಧಿ ಆಗಬೇಕು. ಅಂದರೆ ಪ್ರತಿಯೊಬ್ಬರಿಗೂ ಅವಕಾಶ, ಮಣ್ಣು, ಸಂಪನ್ಮೂಲ ಸಿಗಬೇಕು. ಇದನ್ನು ಎಲ್ಲರೂ ಪಾಲು ಹಂಚಿಕೊಳ್ಳಬೇಕು. ಇತಿಹಾಸದಿಂದ ನಾವು ಏನು ನೋಡ್ತಾ ಇದ್ದೇವೆ ಎಂದರೆ ರಾಜರುಗಳು ಕೊಳ್ಳೆ ಹೊಡೆದು ಕಪ್ಪ ಕಾಣಿಕೆ ತಂದು ದೊಡ್ಡ ದೊಡ್ಡ ಅರಮನೆಗಳನ್ನು ಕಟ್ಟಿಕೊಂಡರೆ ಹೊರತು 40% ಬಡವರ ಬಗ್ಗೆ ಯೋಚಿಸಲೇ ಇಲ್ಲ. ಇವತ್ತಿನ ರಾಜಕಾರಣಿಗಳದ್ದೂ ಇದೇ ವ್ಯಾಪಾರ.

ಮೋಸ ಮಾಡುವುದು ಗಿಡಗಳಿಗೆ ಗೊತ್ತೇ ಇಲ್ಲ. ಮಾನವನಿಂದಲೇ ಅವು ಮೋಸ ಹೋಗುವುದುಂಟು.

ಕೃಷಿಕನಾದವ ತೋಟದಲ್ಲೇ ಇರಬೇಕು, ಆತನಿಗೆ ತಿರುಗಾಟ ಸಲ್ಲದು. ತಿರುಗಾಟ ಅನಿಯವಾರ್ಯವಾದರೆ ಹಿಡಿತದಲ್ಲಿರಲಿ.

ನಮ್ಮ ಯುವಕರು ಕೃಷಿಯು ಕಲಿಕೆಗೆ ತಕ್ಕ ಉದ್ಯೋಗವಲ್ಲ ಅಂತ ಭಾವನೆ ಬೆಳೆಸಿಕೊಂಡಿದ್ದಾರೆ. ಇಂದಿನ ಪರಿಸ್ಥಿತಿ ಏನಾಗಿದೆಯೆಂದರೆ ಕೃಷಿಯಲ್ಲಿ ಸಂಶೋಧನೆ ಮಾಡುವವರು ಶ್ರೀಮಂತರಾಗಿದ್ದಾರೆ. ದುಡಿಯುವವರು ಬಡವರಾಗಿದ್ದಾರೆ. ಇವರ ಮಧ್ಯೆ ಹೊಂದಾಣಿಕೆಯೇ ಇಲ್ಲ. ಕೃಷಿ ವಿಜ್ಞಾನಿಗಳು ಭೂಮಿಗಿಳಿದು ದುಡಿಯಲಿ,

ಒಂದು ಮಗುವಿನ ಕುತೂಹಲ, ವಿಜ್ಞಾನಿಯ ಪ್ರಯೋಗ ಶೀಲತೆ, ಕೆಲಸಗಾರನ ಶ್ರಮ, ಹಾಗೂ ತಾಯಿಯ ತಾಳ್ಮೆ ಇದ್ದಾಗ ಮಾತ್ರ ನಾವು ಉತ್ತಮ ಕೃಷಿಕರಾಗಬಹುದು.

ನಾವು ಹತ್ತು ಪೈಸೆ ದುಡಿದರೆ, ಭೂಮಿತಾಯಿ ಉಳಿದ ತೊಂಬತ್ತು ಪೈಸೆ ನೀಡುತ್ತಾಳೆ.

ಇಂದಿನ ಪರಿಸ್ಥಿತಿ ಏನಾಗಿದೆಯೆಂದರೆ, ಕೃಷಿಯಲ್ಲಿ ಸಂಶೋಧನೆ ಮಾಡುವವರು ಶ್ರೀಮಂತರಾಗಿದ್ದಾರೆ, ಬೆವರು ಸುರಿಸಿ ಕೃಷಿಯಲ್ಲಿ ತೊಡಗಿಸಿಕೊಂಡವರು ಬಡವರಾಗಿದ್ದಾರೆ.

ಅಳಿದ ಮೇಲೆ

91 ವರ್ಷಗಳ ಸುದೀರ್ಘ, ಸಾರ್ಥಕ ಜೀವನ ನಡೆಸಿದ ಚೇರ್ಕಾಡಿ ರಾಮಚಂದ್ರ ರಾಯರು ಸಹಜವಾಗಿ ವೃದ್ಧಾಪ್ಯದಿಂದ ಇಹಲೋಕವನ್ನು 21-0-2010 ರಂದು ತ್ಯಜಿಸಿದರು. ತನ್ನ ಸಮಾಜಮುಖಿ ಚಿಂತನೆಗಳಿಂದೊಡಗೂಡಿದ ಸೋಮಾರಿ ರಹಿತ ಜೀವನ ನಡೆಸಿ ಕೊನೆತನಕ ಮಾನಸಿಕವಾಗಿಯೂ, ದೈಹಿಕವಾಗಿಯೂ ಆರೋಗ್ಯದಿಂದಿದ್ದರು. ಸಮಾಜಕ್ಕೆ ಹೊರೆಯಾಗದೆ, ಮಾರ್ಗದರ್ಶಕರಾಗಿ, ಗಾಂಧೀಜಿಯವರ ತತ್ವ, ಸಿದ್ಧಾಂತಗಳಲ್ಲಿ ಸತ್ಯವನ್ನು ಕಂಡು ಅದರಂತೆ ನಡೆದವರು. ಸಮಾಜದಲ್ಲಿ ಅವರಿಗೊಂದು ವಿಶಿಷ್ಟ ಸ್ಥಾನ ಕಲ್ಪಿಸಿಕೊಂಡಿದ್ದರು. ದೇಶ ವಿದೇಶಗಳ ಸಾವಿರಾರು ಜನರು ಅವರ ಕರ್ಮಭೂಮಿಯ ದರ್ಶನ ಮಾಡಿದ್ದಾರೆ, ಪ್ರೇರಿತರಾಗಿದ್ದಾರೆ.

ಬದುಕಿರುವಾಗ ಎಷ್ಟು ಉತ್ತಮ ಕೆಲಸ ಮಾಡಿದರೂ, ಸಮಾಜಕ್ಕೆ ಒಳಿತನ್ನು ಮಾಡಿದರೂ, ಪ್ರಪಂಚದಿಂದ ನಿರ್ಗಮಿಸಿದ ನಂತರ ನೆನಪಿಸಿಕೊಳ್ಳದಿರುವುದು ಈ ಜೀವಜಗತ್ತಿನ ನಿಯಮ. ದೇಶಕ್ಕೆ ಸ್ಯಾತಂತ್ರ್ಯ ಕೊಡಿಸುವಲ್ಲಿ ಮುಂಚೂಣಿಯಲ್ಲಿದ್ದ  ಮಾನವ ಕುಲದ ಸಮಾನತೆಗಾಗಿ ಚಿಂತನೆ ನಡೆಸಿದ ಮಹಾತ್ಮ ಗಾಂಧೀಜಿಯವರನ್ನು ಅವರಿರುವಾಗಲೇ ತಿರಸ್ಕರಿಸಿ, ಗುಂಡಿಟ್ಟು ಸಾಯಿಸಿರುವುದು ಇದಕ್ಕೆ ಜ್ವಲಂತ ಉದಾಹರಣೆ. ಇನ್ನು ಉಳಿದವರು ಯಾವ ಲೆಕ್ಕ? ಅವರವರ ಕುಟುಂಬಸ್ಥರಿಗೆ ಮಾತ್ರ ನೆನಪಿಸುವ ಹಕ್ಕೆಂದು ಸಮಾಜದ ಜನ  ನಿರ್ಧರಿಸಿಕೊಂಡಿದ್ದಾರೆ.

ಚೇರ್ಕಾಡಿಯವರ ವಿಷಯದಲ್ಲಿಯೂ ಬದಲಾವಣೆಯೇನು ಆಗಿಲ್ಲ. ಅವರ ಅಭಿಮಾನಿಗಳು ರಾಜ್ಯದಾದ್ಯಂತ ಇದ್ದರು. ಕೊನೆಯ ಕೆಲವು ದಿನಗಳು ಅವರ ಆರೋಗ್ಯ ಸರಿಯಿಲ್ಲದಾಗ, ಅಂತ್ಯಕಾಲ ಸಮೀಪಿಸಿದಾಗ ಹಲವಾರು ಜನರು ವಿಚಾರಿಸಿಕೊಂಡಿದ್ದಾರೆ. ಅವರು ತೀರಿಹೋದ ವಿಷಯ ಮರುದಿನ ಕನ್ನಡ, ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಪ್ರಕಟವಾಗಿ ಅದೇ ದಿನ ಅಂತ್ಯಕ್ರಿಯೆ ಎಂದು ಸೂಚಿಸಲಾಗಿತ್ತು. ಅವರ ಯೋಗ್ಯತೆ ಹಾಗೂ ಹತ್ತಿರದ ಜನ ಸಂಖ್ಯೆ ಗಮನಿಸಿ ಸುಮಾರು 300 ಜನರಾದರೂ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಹುದೆಂದು ಊಹಿಸಿಕೊಳ್ಳಲಾಗಿತ್ತು. ಆದರೆ ಹಾಜರಾಗಿದ್ದು 50ಕ್ಕಿಂತಲೂ ಕಡಿಮೆ ಜನ. ಕೃಷಿಕನಿಗೆ ನೀಡುವ ಗೌರವದ ಪ್ರತೀಕವಾದ ಕೃಷಿಕರ ಪ್ರತಿಷ್ಠೆಯ ಕೃಷಿ ಪಂಡಿತ ಪ್ರಶಸ್ತಿಯನ್ನು ದಯಪಾಲಿಸಿದ ಸರಕಾರ, ಕೃಷಿ ಇಲಾಖೆಗಳಿಗೆ, ಸಮಾಜದ ಕೃಷಿಕರನ್ನು ತನ್ನ ಕಾಯಕದಿಂದಲೇ ಹುರಿದುಂಬಿಸುತ್ತಿದ್ದ ರಾಯರ ಅಂತ್ಯ ಕಾಲದಲ್ಲಿ ಭಾಗಿಯಾಗುವ ಇಲ್ಲವೆ ಸಂದೇಶವನ್ನು ಕಳಿಸುವ ಸೌಜನ್ಯವೂ ಇಲ್ಲದಿರುವುದು, ಬಹುಶಃ ಕೃಷಿ ಪಂಡಿತ ಪ್ರಶಸ್ತಿಗೆ ಅಗೌರವ ಎನಿಸುತ್ತದೆ.

ಆದರೆ ಕರ್ನಾಟಕದ ಎಲ್ಲಾ ಪ್ರಮುಖ ದಿನ ಹಾಗೂ ನಿಯತಕಾಲಿಕಗಳು, ಆಕಾಶವಾಣಿ ಕೇಂದ್ರಗಳು ರಾಯರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಸಾಧನೆಗಳನ್ನು ಮತ್ತೊಮ್ಮೆ ನೆನಪಿಸಿಕೊಂಡು ಸಮಾಜಕ್ಕೆ ಪರಿಚಯಿಸಿವೆ. ಮುದ್ರಣ ಮಾಧ್ಯಮದವರು ಸಾಕಷ್ಟು ಪ್ರಚಾರ ನೀಡಿ ಕೃಷಿ ಋಷಿಗೆ ನಮನ, ಗೌರವ ಸಲ್ಲಿಸಿರುವುದು ಅತಿ ಸಂತಸದ ವಿಚಾರ.

ಏನೇ ಇರಲಿ, ಸರಳ ಜೀವನ ನಡೆಸಿ, ಪ್ರಾಮಾಣಿಕರಾಗಿ ಬದುಕಿ, ಆಧುನಿಕ ಸಮಾಜದ ಯಾವ ಆಮಿಷಕ್ಕೂ ಒಳಗಾಗದೆ, ನಿಸರ್ಗ/ ಪ್ರಕೃತಿಯನ್ನೇ ದೇವರೆಂದು ಪೂಜಿಸಿ ಜೀವನ ಸಾರ್ಥಕ್ಯವನ್ನು ಕಂಡುಕೊಂಡರು. ಅನಾಥರಾದರೂ, ಸಮಾಜದ ಅತ್ಯಂತ ಕಡೆಯ ವ್ಯಕ್ತಿಯೂ ಕೂಡಾ ಸ್ವಂತ ಪರಿಶ್ರದ ಮೂಲಕ ಗೌರವದಿಂದ ಬಾಳಲು ಸಾಧ್ಯವೆನ್ನುವುದನ್ನು ತನ್ನ ಎರಡೆಕರೆ ಜಮೀನಿನಲ್ಲಿ ಬರೆದಿಟ್ಟು ಹೋದ ಚೇರ್ಕಾಡಿ ಗಾಂಧಿಗೆ ಗೌರವದ ಪ್ರಣಾಮಗಳು.

ಸರ್ವೇ ಜನಾಃ ಸುಖಿನೋ ಭವಂತು

ಮುಗಿಸುವ ಮೊದಲು

ಚೇರ್ಕಾಡಿಯವರು ಆವಿಷ್ಕರಿಸಿದ ಭತ್ತ ಬೆಳೆಯುವ ಕ್ರಮ ಎಲ್ಲಾ ಜಮೀನಿನಲ್ಲೂ, ಎಲ್ಲಾ ಕಾಲದಲ್ಲಿಯೂ ಪ್ರಸ್ತುತ. ಕೆಲವು ಮಾರ್ಪಾಡುಗಳು ಬೇಕಾಗಬಹುದು. ಕೇವಲ ತಮ್ಮ ದೈಹಿಕ ಶ್ರಮದಿಂದ ತಮ್ಮ ಅನ್ನವನ್ನು ಉತ್ಪಾದಿಸಿಕೊಳ್ಳಲು ಸಾಧ್ಯವಿರುವ ಈ ಪದ್ಧತಿ ಸಾರ್ವತ್ರಿಕವಾದರೆ ಬಡತನ ನಿವಾರಣೆಯೂ ಸಾಧ್ಯ. ಇದು ಚೇರ್ಕಾಡಿಯವರೊಂದಿಗೆ ನಶಿಸಿಹೋಗಬಾರದು, ಮುಂದಿನ ತಲೆಮಾರಿಗೆ ಹರಿಯಲಿ ಎಂಬ ಸದುದ್ದೇಶದಿಂದ, ಅವರು ಸ್ವತಃ ಬರೆದಿಟ್ಟ ಕ್ರಮವನ್ನು ಕೆಳಗೆ ಕೊಡಲಾಗಿದೆ.

ಸರ್ವೋದಯ ಚೇರ್ಕಾಡಿ ಭತ್ತದ ಕೃಷಿ – ಬೆಳೆಯುವ ವಿಧಾನ

ಭೂಮಿಯ ಲಕ್ಷಣ: ಸಾಮಾನ್ಯವಾಗಿ ನೀರಾಶ್ರಯವಿಲ್ಲದ ಎತ್ತರದ ಗುಡ್ಡ ಪ್ರದೇಶಗಳಲ್ಲೂ ಭತ್ತ ಬೆಳೆಯುವುದು ಸಾಧ್ಯ. ಫಲವತ್ತಾದ ಮೆಕ್ಕಲು ಮಣ್ಣೇ ಬೇಕೆಂದಿಲ್ಲ. ಕ್ರಮೇಣ ಗಟ್ಟಿ ನೆಲ ಮೆದು ಮಣ್ಣಾಗಿ ಪರಿವರ್ತಿತವಾಗುತ್ತದೆ. ಮಣ್ಣಿನಲ್ಲಿ ಕನಿಷ್ಟ ತೇವಾಂಶ ಇದ್ದರೆ ಸಾಕು. ನೀರು ನಿಲ್ಲಿಸುವ ಅಗತ್ಯವಿಲ್ಲದುದರಿಂದ ನೆಲ ಸಮತಟ್ಟಾಗಿರಬೇಕಾಗಿಲ್ಲ. ಮುಂಗಾರು ಮಳೆಯ ಲಯಕ್ಕನುಗುಣವಾಗಿ ಬೇಸಾಯದಲ್ಲಿ ತೊಡಗಿಸಿಕೊಳ್ಳಬೇಕು. ಬೆಟ್ಟು ಗದ್ದೆ, ಮಕ್ಕಿ, ಮಜಲು, ಬೋಳು ಗುಡ್ಡ ಪ್ರದೇಶ 0ಾವುದಾದರು ಕೂಡಾ ಉತ್ಕೃಷ್ಟ ಇಳುವರಿಗೆ ಮೋಸವಿಲ್ಲ. ಹತ್ತಿರ ಮರ ಮಟ್ಟುಗಳು ಇಲ್ಲದ ಬಯಲು ಜಾಗದಲ್ಲಿ ಫಲಿತಾಂಶ ಹೆಚ್ಚು.

ಸಾಧನ ಸಲಕರಣೆಗಳು: ಹಾರೆ, ಗುದ್ದಲಿ, ಕತ್ತಿ ಮುಂತಾದ ಸರಳ ಉಪಕರಣಗಳು

ಬೀಜ: ರಾಜಕಾಯೆಮೆ, ಕೊತ್ತಂಬರಿ, ಕುಟ್ಟಿಕಾಯೆಮೆ, ರಾಜಮಣಿ ಮುಂತಾದ ಹೆಸರುಗಳಿಂದ ಪರಿಚಿತವಿರುವ ಸ್ಥಳೀಯ ಭತ್ತದ ತಳಿ ಈ ಪದ್ಧತಿಗೆ ಹೆಚ್ಚು ಸೂಕ್ತ. ಗಿಡ್ಡ ಜಾತಿ0ು ಬೇರೆ ತಳಿಗಳು ಕೂಡಾ ಆಗುತ್ತವೆ. ಒಂದು ಎಕರೆ ಪ್ರದೇಶದಲ್ಲಿ ನಾಟಿ ಮಾಡಲು ಒಂದು ಕಿಲೊ ಬೀಜ ಸಾಕು.

ಬೇಸಾಯ ಕ್ರಮದ ವಿವಿಧ ಹಂತಗಳು: ನೆಲವನ್ನು ಹಾರೆ ಗುದ್ದಲಿಗಳ ಸಹಾಯದಿಂದ ಸ್ವಚ್ಚಗೊಳಿಸಿ ಹದ ಬರಿಸುವುದರ ಹೊರತು ಎತ್ತು, ನೇಗಿಲು ಬಳಸಿದ ಉಳುಮೆ ಬೇಕಾಗಿಲ್ಲ. ಮೊದಲನೇ ಸಲ ಮಣ್ಣು ಗಟ್ಟಿಯಾಗಿದ್ದರೆ ನೇಗಿಲನಲ್ಲಿ ಉಳುಮೆ ಮಾಡಬಹುದು. ಆ ನಂತರದ ವರ್ಷಗಳಲ್ಲಿ ಉಳುಮೆಯ ಅಗತ್ಯವಿರುವುದಿಲ್ಲ. ಒಟ್ಟಿನಲ್ಲಿ ಭೂಮಿಯ ಮೇಲ್ಪದರ ನಾಲ್ಕು ಇಂಚು ಮಾತ್ರ ಹದ ಮಾಡಿದರೆ ಸಾಕು. ಅನಗತ್ಯದ ಕಸ, ಬೇರು, ಕಡ್ಡಿಗಳನ್ನು ತೆಗೆದು ಮಣ್ಣನ್ನು ಶುಚಿಗೊಳಿಸಿ, ಎರಡು ಇಂಚು ಆಳವುಳ್ಳ  ಸಾಲುಗಳನ್ನು ರಚಿಸುವುದು. ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಇಪ್ಪತ್ತೆರಡು ಇಂಚು ಅಂತರ ಸಾಕು. ಒಂದು ಸೆಂಟ್ ಜಾಗೆಯಲ್ಲಿ ಹದಿನೈದು ಅಡಿ ಉದ್ದದ ಹದಿನಾರು ಸಾಲುಗಳು ಬರುತ್ತವೆ. ಸಾಲಿನ ಹೊಂಡದಲ್ಲಿ ಸಿದ್ಧ್ದ ಮಾಡಿಕೊಂಡ ಹುಡಿಗೊಬ್ಬರ, ಬೂದಿ ಹಾಕಿ ಸಾಧಾರಣ ಏಳೆಂಟು ಇಂಚು ಆಳ ಕೊಚ್ಚಿ ಇರಿಸಿಕೊಳ್ಳಬೇಕು. ಒಂದು ಎಕರೆಗೆ 10 ಗಾಡಿ ಹಟ್ಟಿ ಗೊಬ್ಬರಹುಡಿ ಮತ್ತು 30 ಚೀಲ ಕರಿ/ಬಿಳಿ ಬೂದಿ ಬಳಸುವುದು.

ಸಸಿ ಮಾಡುವಿಕೆ: ನೆಡಲು ಯೋಗ್ಯವಾದ ಸಸಿಗಳನ್ನು ಪ್ರತ್ಯೇಕವಾಗಿ ಪಾತಿಗಳಲ್ಲಿ ಬೆಳೆಸಬೇಕು. ಮೇ ತಿಂಗಳ ಎರಡನೇ ಯಾ ಮೂರನೇ ವಾರದಲ್ಲಿ ಸಣ್ಣ ಸಣ್ಣ ಹದಿನಾರು ಅಡಿ ಉದ್ದ ನಾಲ್ಕು ಆಡಿ ಅಗಲದ ಪಾತಿ ಮಾಡಿ ಹುಡಿ ಗೊಬ್ಬರ ಸೇರಿಸಿ ನೀರು ಹಾಕಿದ ಪಸೆ ಮಣ್ಣಿನಲ್ಲಿ ಬೀಜ ಬಿತ್ತಿ ಸಸಿ ಬೆಳೆಸಬೇಕು. ಸುಲಭವಾಗಿ ಕೀಳಬಹುದಾದ ರೀತಿಯಲ್ಲಿ ಪಾತಿಗಳನ್ನು ರಚಿಸಿಕೊಂಡಿರುವುದರಿಂದ ಬೇರುಗಳಿಗೆ ಪೆಟ್ಟಾಗುವುದಿಲ್ಲ.

ಒಂದು ಎಕರೆ ಸ್ಥಳಕ್ಕೆ ಬೇಕಾದ ನೇಜಿಗೆ, 4 ಅಡಿ ಅಗಲ ಮತ್ತು 16 ಅಡಿ ಉದ್ದದ 10 ಮಡಿಗಳ ಅಗತ್ಯವಿದೆ. ಹಾರೆಯಿಂದ ಮಣ್ಣು ಮಗುಚಿ ಪುಡಿ ಮಾಡಿಕೊಳ್ಳಬೇಕು. ಇದಕ್ಕೆ ಉತ್ತಮವಾದ 1 ಗಾಡಿ25 ಬುಟ್ಟಿ ಪುಡಿ ಗೊಬ್ಬರ ಮಡಿಗಳಿಗೆ ಚೆಲ್ಲಿ ಮಣ್ಣಿನೊಂದಿಗೆ ಬೆರೆಸಿ ಸಮತಟ್ಟು ಮಾಡಿಕೊಳ್ಳಬೇಕು. 1 ಮಡಿಗೆ ಸುಮಾರು ಮುಕ್ಕಾಲು ಪಾವು ಬೀಜವನ್ನು ತೆಳ್ಳಗೆ ಹರಡಬೇಕು. ಆ ಮೇಲೆ ಮಡಿಯೊಂದಕ್ಕೆ 1 ಯಾ 2 ಬುಟ್ಟಿ ಒಣ ಬೂದಿ ಮತ್ತು ಅದರ ಮೇಲೆ ಎರಡು ಬುಟ್ಟಿ ಭತ್ತದ ಹೊಟ್ಟನ್ನು ಸಮವಾಗಿ ಹರಡಬೇಕು. ನಂತರ ಮಡಿಯ ಸುತ್ತಲಿನ ಹುಡಿ ಮಣ್ಣನ್ನು ಸುಮಾರು ಅರ್ಧ ಇಂಚಿನಷ್ಟು ದಪ್ಪನಾಗಿ ಹರಡಬೇಕು. ದಿನಕ್ಕೆ ಒಂದು ಸಲ ಮಣ್ಣು ಒದ್ದೆಯಾಗುವಷ್ಟು ನೀರನ್ನು ಚಿಮುಕಿಸಬೇಕು. ಮಡಿಗಳಲ್ಲಿ ನೀರು ನಿಲ್ಲಬಾರದು. ಹೀಗೆ ಮಾಡಿದರೆ ಎಲ್ಲಾ ಬೀಜಗಳು ಕ್ರಮವಾಗಿ ಮೊಳಕೆ ಬರುತ್ತವೆ. 10 ದಿನಗಳ ನಂತರ ಮಡಿಯಲ್ಲಿ ಬೆಳೆದ ಕಳೆ ಗಿಡಗಳನ್ನು ಕಿತ್ತು ಬಿಸಾಡುವುದು ಅವಶ್ಯ. ಈ ನೇಜಿಯನ್ನು 20 ರಿಂದ 30 ದಿನಗಳ ಒಳಗೆ ಅಂದರೆ ಮಳೆಗಾಲ ಪ್ರಾರಂಭವಾದೊಡನೆ ನಾಟಿ ಶುರು ಮಾಡಬಹುದು.

ನಾಟಿ ಮತ್ತು ನಿರ್ವಹಣೆ: ಪಶ್ಚಿಮ ಕರಾವಳಿಯಲ್ಲಿ ಸಾಧಾರಣ ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆ ಪ್ರಾರಂಭವಾಗುವುದು. ಈ ಸಮಯದಲ್ಲಿ ಮೊದಲೇ ತಯಾರು ಮಾಡಿಕೊಂಡ ಸಾಲುಗಳಲ್ಲಿ ಎಂಟು ಇಂಚು ಅಂತರದಲ್ಲಿ ನಾಟಿ ಮಾಡಬೇಕು.  ಕವಲೊಡೆದ ಸಸಿಯಾದರೆ 1 ಇಲ್ಲವಾದರೆ 2 ಸಸಿಗಳನ್ನು ನೆಡಬಹುದು. ಮಳೆ ಬರುತ್ತಿದ್ದರೆ ಬೆಳಿಗ್ಗೆ, ಇಲ್ಲವಾದರೆ ಸಂಜೆ ಹೊತ್ತು ನಾಟಿ ಕೆಲಸ ಮುಗಿಸುವುದು ಸೂಕ್ತ. ಏರಿಯ ಮಣ್ಣನ್ನು ಮುಟ್ಟಬಾರದು. ಒಣ ನೆಲದಲ್ಲಿ ಮೊಳೆತ ಸಸಿಗಳಿಗೆ ಹೆಚ್ಚಿನ ನೀರು ಗೊಬ್ಬರ ಅವಕಾಶ ದೊರೆಯುವುದರಿಂದ ಹುಲುಸಾಗಿ ಮೇಲೇಳುತ್ತವೆ.

ಹದಿನೈದು ದಿನಗಳ ಬಳಿಕ ಬೇಗ ಕೊಳೆಯುವ ಹಸಿ ಸೊಪ್ಪುಗಳು, ಸಸಿ0ು ಎರಡೂ ಬದಿಗಳಲ್ಲಿ ಇಟ್ಟು, ಎರಡು ದಿನ ಕೊಳೆತ ಸೆಗಣಿ ನೀರು, ನೆಲಕಡಲೆ ಹಿಂಡಿ ನೀರು ಕೊಡುವುದು.

ಇದಾದ ಒಂದು ತಿಂಗಳಲ್ಲಿ ಸಾಮಾನ್ಯ ಎಂಟರಿಂದ ಹತ್ತು ಹಿಲ್ಲೆ ಬರುತ್ತವೆ. ಆಗ ಮತ್ತೊಮ್ಮೆ ಹುಡಿಗೊಬ್ಬರ, ಕೊಳೆತ ಸೆಗಣಿನೀರು, ನೆಲಗಡಲೆ ನೀರು ಕೊಟ್ಟು ಮೊದಲು ಎತ್ತರವಿದ್ದ ಜಾಗದ ಮಣ್ಣನ್ನು ಕೀಸಿ ಗಿಡದ ಬುಡಕ್ಕೆ ಹಾಕಬೇಕು. ಆಗ ನೆಲ ಸಮತಟ್ಟಾಗುತ್ತದೆ. ಈ ರೀತಿಯ ಗೊಬ್ಬರ ಬಳಸಿ ನಂತರ ಮಣ್ಣು ಮುಚ್ಚುವುದು ಬಲಿತ ಸಸಿಗಳ ಬುಡ ಭದ್ರವಾಗಲು ಸಹಾಯಕವಾಗುತ್ತದೆ. ಅಂತೆಯೇ ಹಸಿರು ಗೊಬ್ಬರ ಕೊಳೆತು ಬೇರು ಪಸರಿಸಲು ಸಹಕಾರಿಯಾಗುತ್ತದೆ.

ಗಿಡ ನೆಟ್ಟ ಸುಮಾರು ಅರವತ್ತು ಎಪ್ಪತ್ತು ದಿನಗಳಲ್ಲಿ ಬೂದಿ, ನೆಲಗಡಲೆ, ಸೆಗಣಿ ನೀರಿನ ಮಿಶ್ರ ಮಾಡಿ ಬುಡಕ್ಕೆ ಕೊಟ್ಟು ಮಧ್ಯ ಭಾಗದ ಮಣ್ಣನ್ನು ಕೀಸಿ ಬುಡಕ್ಕೆ ಹಾಕುವುದು. ಇದರಿಂದ ಬುಡ ಇನ್ನಷ್ಟು ಗಟ್ಟಿಯಾಗುವುದರ ಜೊತೆಗೆ, ಸಸಿಗಳು ಆಹಾರ ಹುಡುಕಲು ದೂರ ಹೋಗಬೇಕಾಗಿಲ್ಲ. ಹುಲುಸಾಗಿ ಬೆಳೆಯಲು ಸಾಧ್ಯ. ಎರಡು ಭತ್ತದ ಸಸಿ ಇಪ್ಪತ್ತಕ್ಕೂ ಹೆಚ್ಚು ಸಸಿಗಳಾಗುತ್ತವೆ. ಈಗ ಏರಿ ಇದ್ದ ಜಾಗ ಕಣಿಯಾಗುತ್ತದೆ. ಮುಂದಿನ ವರ್ಷ, ಸುಮಾರು ನಾಲ್ಕು ಇಂಚು ಆಳದ ಈ ಕಣಿಯಲ್ಲಿ ನಾಟಿ ಮಾಡಬಹುದು. ಪುನಃ ಸಾಲು ತೆಗೆಯುವ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಎರಡು ಸಲ ಮಣ್ಣನ್ನು ಸರಿಸುವುದರಿಂದ ಕಳೆಯ ಬಾಧೆ ಇರುವುದಿಲ್ಲ. ಹಾಗೇನಾದರೂ ಇದ್ದರೆ ಅದನ್ನು ಏರಿಯಲ್ಲಿ ಹೋಗಿ ಗಿಡಕ್ಕೆ ಪೆಟ್ಟಾಗದಂತೆ ಕೀಳುವುದು ಸುಲಭ. ಸಾಧಾರಣ ನೂರಿಪ್ಪತ್ತು ದಿವಸಗಳಲ್ಲಿ ಭತ್ತ ಕಟಾವಿಗೆ ಸಿದ್ಧವಾಗುತ್ತದೆ. ಈ ರೀತಿ ಮಾಡಿದ ಕೃಷಿಗೆ ರೋಗ ಬಾಧೆ ಇರುವುದಿಲ್ಲ. ಕದಿರೊಡೆಯುವ ಸಂದರ್ಭದಲ್ಲಿ ಗಂಟು ಬಾಧೆ ಕಾಣಿಸಿಕೊಂಡಲ್ಲಿ ಐವತ್ತು ಗ್ರಾಂ ಮೆಣಸಿನ ಪುಡಿ, ಎರಡು ಸೇರು ಬೂದಿ ಮತ್ತು ಸುಣ್ಣದ ಹುಡಿಯೊಂದಿಗೆ ಮಿಶ್ರ ಮಾಡಿ ಗಿಡಗಳಿಗೆ ಬೀಸಿ ಹಾರಿಸಿದರೆ ಈ ಬಾಧೆ ನಿವಾರಣೆಯಾಗುತ್ತದೆ. ಎಕರೆಗೆ ನಲವತ್ತೈದರಿಂದ ಅರವತ್ತು ಮುಡಿ ಇಳುವರಿ ಬರುತ್ತದೆ.

ಈ ಸರ್ವೋದಯ ಕೃಷಿ ವಿಧಾನಕ್ಕೆ ಮಳೆಯ ನೀರು ಸಾಕಾಗುತ್ತದೆ. ಮಳೆಗಾಲದಲ್ಲಿ ಗಾಳಿ ಪಶ್ಚಿಮ ದಿಕ್ಕಿನಿಂದ ಬೀಸುವುದರಿಂದ, ಸಾಲುಗಳನ್ನು ಪೂರ್ವ ಪಶ್ಚಿಮವಾಗಿ ತೆಗೆದರೆ ಗಾಳಿ ಏರಿಗಳ ಮಧ್ಯದಲ್ಲಿ ಸಾಗಿ ಗಿಡಗಳನ್ನು ಬೀಳಿಸುವುದಿಲ್ಲ. ನಾಟಿ ಮಾಡುವಾಗ ಇದ್ದ ಒಂದು ಸಸಿಯು ಬೆಳೆದು ಫಸಲು ಬರುವ ಹೊತ್ತಿಗೆ 30ರಿಂದ 40 ಗಿಡಗಳಾಗಿ ಇಡೀ ಗದ್ದೆ ಹಸಿರು ಸೀರೆ ಉಟ್ಟಂತೆ ಕಂಗೊಳಿಸುತ್ತಿರುತ್ತದೆ.

ಇದೇ ಮಾದರಿಯಲ್ಲಿ ರಾಗಿ ಬೆಳೆದು ಎಕರೆಗೆ 12 ಕ್ವಿಂಟಲ್ ಫಸಲು ತೆಗೆಯಬಹುದು. ನೀರಿನ ಅನುಕೂಲವಿದ್ದಲ್ಲಿ, ಕಟಾವಿನ ನಂತರ ಒಂದಿಲ್ಲೊಂದು ತರಕಾರಿ ಬೆಳೆದು ಆದಾಯ ಹೆಚ್ಚಿಸಿಕೊಳ್ಳಬಹುದು. ದ್ವಿದಳ ಧಾನ್ಯಗಳನ್ನೂ ಬೆಳೆಸಬಹುದು.

ಆಹಾರ ಬೆಳೆಗಳ ನಂತರ ವಿಶ್ರಾಂತಿ ದಿನಗಳಲ್ಲಿ ಸಣ್ಣ ಪ್ರಮಾಣದ ಗುಡಿಕೈಗಾರಿಕೆ, ಸೇವಾ ಕ್ಷೇತ್ರ ಯಾ ಉಪಕಸುಬುಗಳಲ್ಲಿ ತೊಡಗಿಸಿಕೊಂಡು ಜೀವನದ ಸಾರ್ಥಕ್ಯವನ್ನು ಕಂಡುಕೊಳ್ಳಬಹುದು.

ಈ ಪದ್ಧತಿಯಲ್ಲಿ ರಾಯರು 1965 ರಿಂದ ಇಪ್ಪತ್ತು ವರ್ಷಗಳ ಕಾಲ ಅವರ ಎರಡು ಎಕ್ರೆ ಜಾಗದಲ್ಲಿ ಕಡಿಮೆ ಉತ್ಪಾದನಾ ಖರ್ಚಿನಲ್ಲಿ ಹೆಚ್ಚಿನ ಉತ್ಪತ್ತಿ ತೆಗೆದು ಎಲ್ಲರನ್ನು ಬೆರಗುಗೊಳಿಸಿದ್ದಾರೆ.