ಈವರೆಗಿನ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಪ್ರತಿಷ್ಠಾನ ಪ್ರಶಸ್ತಿ ಪುರಸ್ಕೃತರು

1. ಡಾ| ಕೋಟ ಶಿವರಾಮ ಕಾರಂತ:
ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕೋಟ ಶಿವರಾಮ ಕಾರಂತರು ಕಲೆ ಹಾಗೂ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಗಾಗಿ ಅವರಿಗೆ ಕೆ.ಎಸ್. ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿ ನೀಡಲಾಗಿದೆ.

2. ಶ್ರೀಮತಿ ಮೇಧಾ ಪಾಟ್ಕರ್
ನರ್ಮದಾ ಬಚಾವೋ ಆಂದೋಲನದ ರೂವಾರಿ, ಖ್ಯಾತ ಪರಿಸರ ತಜ್ಞೆ ಮೇಧಾಪಾಟ್ಕರ್ ಅವರ ಪರಿಸರ ಕಾಳಜಿ ಹಾಗೂ ಪರಿಸರ ರಕ್ಷಣೆಯ ಕುರಿತಾದ ಹೋರಾಟವನ್ನು ಮೆಚ್ಚಿ ಈ ಪ್ರಶಸ್ತಿಯಿಂದ ಅವರನ್ನು ಗೌರವಿಸಲಾಗಿದೆ.

3. ಅರುಣ್ ಶೌರಿ
ಈ ಸಮಾಜದಲ್ಲಿ ಅನ್ಯಾಯ – ಅವ್ಯವಹಾರಗಳನ್ನು ಮಾಡುವ ಮಂದಿ ಯಾರಿಗೆ ಹೆದರದೇ ಇದ್ದರೂ, ಪತ್ರಿಕೆಗಳಿಗೆ ಖಂಡಿತವಾಗಿಯೂ ಹೆದರುತ್ತಾರೆ ಎಂಬ ಮಾತು ಕಹಿಯಾದರೂ ಸತ್ಯ. ಉತ್ತಮ ಪತ್ರಕರ್ತರಾಗಿದ್ದುಕೊಂಡು, ಭ್ರಷ್ಟತೆಯನ್ನು ಬಯಲಿಗೆಳೆದ ಅರುಣ್ ಶೌರಿಯವರಿಗೆ ಪತ್ರಿಕೋದ್ಯಮಕ್ಕೆ ನೀಡಿದ ಅನುಪಮ ಸೇವೆಗಾಗಿ ಕೆ.ಎಸ್. ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿ ದೊರೆತಿದೆ.

4. ಡಾ| ಮನಮೋಹನ್ ಸಿಂಗ್
ಈ ದೇಶದ ಸಮರ್ಥ ನಾಯಕರಾಗಿರುವ ಡಾ| ಮನಮೋಹನ್ ಸಿಂಗ್ ಅವರು ಅರ್ಥಶಾಸ್ತ್ರ  ತಜ್ಞರಾಗಿ ಅರ್ಥ ವ್ಯವಸ್ಥೆಯ ಸುಧಾರಣೆಗಾಗಿ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

5. ಡಾ| ಪ್ರಕಾಶ್ ಅಮ್ಟೆ ಮತ್ತು ಡಾ| (ಶ್ರೀಮತಿ) ಮಂದಾಕಿನಿ ಅಮ್ಟೆ
ಬಾಬಾ ಅಮ್ಟೆಯವರ ಸುಪುತ್ರರಾದ ಡಾ| ಪ್ರಕಾಶ್ ಅಮ್ಟೆ ಹಾಗೂ ಅವರ ಪತ್ನಿ ಶ್ರೀಮತಿ ಮಂದಾಕಿನಿ ಅಮ್ಟೆಯವರು ಮಹಾರಾಷ್ಟ್ರದ ನಾಗ್ಪುರದಲ್ಲಿ ಮಧ್ಯ ಆದಿವಾಸಿಗಳ ಸುಧಾರಣೆಗೆ ಸಂಬಂಧಿಸಿ ಗೈದ ಸೇವೆಯನ್ನು ಗುರುತಿಸಿ ಕೆ.ಎಸ್. ಹೆಗ್ಡೆ ಪ್ರತಿಷ್ಠಾನ ಪ್ರಶಸ್ತಿಯನ್ನಿತ್ತು ಗೌರವಿಸಲಾಗಿದೆ.

6. ಎಂಟು ಮಂದಿ ರಕ್ಷಣಾ ಪಡೆಯ ಯೋಧರಿಗೆ
2001ರ ದಶಂಬರ ತಿಂಗಳಿನಲ್ಲಿ ಭಯೋತ್ಪಾದಕರು ನವದೆಹಲಿಯ ಸಂಸತ್ ಭವನದ ಮೇಲೆ ದಾಳಿ ನಡೆಸಿದಾಗ ಜೀವದ ಹಂಗು ತೊರೆದು ಹೋರಾಡಿ ಮಡಿದ ಎಂಟು ಮಂದಿ ಯೋಧರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.

7. ಸೋಲಿ ಜೆ. ಸೊರಾಬ್ಜಿ
ಕಾನೂನು ಹಾಗೂ ಮಾನವ ಹಕ್ಕು ಕಾಪಾಡುವಲ್ಲಿ ತನ್ನದೇ ಆದ ಕೊಡುಗೆ ನೀಡಿದ ಮಾಜಿ ಅಟಾರ್ನಿ ಜನರಲ್ ಸೋಲಿ ಜೆ. ಸೊರಾಬ್ಜಿಯವರು ನ್ಯಾ| ಕೆ.ಎಸ್. ಹೆಗ್ಡೆ ಪ್ರಶಸ್ತಿಯಿಂದ ಪುರಸ್ಕೃತರಾದ ಹಿರಿಯರು.

8. ಡಾ| ಮೈಕಲ್ ಇ.ಡಿ.ಬೆಕೆ
ಅಮೇರಿಕಾದ ಜಗತ್ಪ್ರಸಿದ್ಧ ಹೃದ್ರೋಗ ತಜ್ಞರಾಗಿರುವ ಇವರಿಗೆ ಕೆ.ಎಸ್. ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿ ನೀಡಲಾಗಿದೆ.
ಶ್ರೀ ಎನ್. ವಿನಯ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆ ಪ್ರತಿಷ್ಠಾನವು ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಪರಿಸರ, ಅರ್ಥಶಾಸ್ತ್ರ, ಸಮಾಜ ಸೇವೆ, ಕಾನೂನು ಹಾಗೂ ಮಾನವ ಹಕ್ಕು ರಕ್ಷಣಾ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಗಣ್ಯರನ್ನು ಗುರುತಿಸುವ – ಗೌರವಿಸುವ ಮೂಲಕ ಸಮಾಜ ಋಣವನ್ನು ತೀರಿಸುತ್ತ ಬಂದಿದೆ. ಈ ಮಹತ್ತರವಾದ ಕ್ಷೇತ್ರಗಳಲ್ಲಿನ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಇಂದಿನ ಯುವ ಜನತೆ ಅನುಸರಿಸುವುದಕ್ಕೆ – ಅನುಕರಿಸುವುದಕ್ಕೆ ಅವಕಾಶ ಕಲ್ಪಿಸಿದೆ.

ನಿಟ್ಟೆ ವಿಶ್ವವಿದ್ಯಾನಿಲಯ

1979ರಲ್ಲಿ ಜನ್ಮತಳೆದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರ ಕನಸಿನ ಕೂಸಾದ ನಿಟ್ಟೆ ವಿದ್ಯಾಸಂಸ್ಥೆಯಿಂದು 30ರ ಹರೆಯದ ಯುವಶಕ್ತಿಯಾಗಿದೆ. ದೇಶದ ಬೇರೆ ಬೇರೆ ಭಾಗಗಳ ವಿದ್ಯಾರ್ಥಿಗಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸಿದೆ. ಬಹುದೊಡ್ಡ ಸಂಸ್ಥೆಯಾಗಿ ಬೆಳೆದಿರುವ ನಿಟ್ಟೆ ವಿದ್ಯಾಸಂಸ್ಥೆಯು 2008 ಜೂನ್ 28ರಂದು ಸ್ವಯಂ ವಿಶ್ವವಿದ್ಯಾನಿಲಯದ ಗೌರವ ಪಡೆದಿದೆ. ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು ಮಂಗಳೂರು, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ), ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ನಿಟ್ಟೆ ಉಷಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಹಾಗೂ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪಿಸಿಯೋಥೆರಪಿ ಶಿಕ್ಷಣ ಸಂಸ್ಥೆಗಳು ಸ್ವಯಂ ವಿಶ್ವವಿದ್ಯಾಲಯದಲ್ಲಿ ಸೇರಿಕೊಂಡಿವೆ.

ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರ ಕೊನೆಯ ದಿನಗಳು

ಸಾರ್ವಜನಿಕ ಬದುಕಿನಿಂದ ನಿವೃತ್ತಿ ಹೊಂದಿದ ನ್ಯಾಯಮೂರ್ತಿ ಕೆ.ಎಸ್. ಹೆಗ್ಡೆಯವರು ನಿಟ್ಟೆ ವಿದ್ಯಾಸಂಸ್ಥೆಯ ಮೂಲಕ ಲಕ್ಷಾಂತರ ಮಂದಿಗೆ ವಿದ್ಯಾದಾನ ಮಾಡಿದರು. ಜನಹಿತ ಕಾರ್ಯಗಳ ಜೊತೆಗೆ ವಿದ್ಯಾಸರಸ್ವತಿಯ ಆರಾಧನೆಯಲ್ಲೇ ಸಂತಸ ಕಂಡರು. ನ್ಯಾಯಮೂರ್ತಿ ಕೌಡೂರು ಸದಾನಂದ ಹೆಗ್ಡೆಯವರು ಅಂದು ಹಾಕಿದ ಶೈಕ್ಷಣಿಕ ತಳಹದಿ ಭದ್ರವಾಗಿರುವುದರಿಂದಲೇ ನಿಟ್ಟೆ ಶಿಕ್ಷಣ ಸಂಸ್ಥೆ ಇಂದು ರಾಷ್ಟ್ರ- ವಿಶ್ವಮಟ್ಟದಲ್ಲೇ ಗುರುತಿಸಲ್ಪಟ್ಟಿದೆ.

ಶ್ರೇಷ್ಠ ನ್ಯಾಯವಾದಿಯಾಗಿ, ರಾಜ್ಯಸಭೆಯ ಸದಸ್ಯರಾಗಿ, ರಾಜ್ಯ – ರಾಷ್ಟ್ರಗಳ ಹೈಕೋರ್ಟ್ – ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ, ಸಾಂಸದಿಕರಾಗಿ, ಲೋಕಸಭೆಯ ಸ್ಪೀಕರ್ ಆಗಿ, ಬಿಜೆಪಿಯ ರಾಷ್ಟ್ರೀಯ ನಾಯಕರಾಗಿ, ಸರಸ್ವತಿಯ ಆರಾಧಕರಾಗಿ,  ಸ್ವಪ್ರತಿಭೆ ಮತ್ತು ಸಾಧನೆಗಳಿಂದ ದೇಶದ ಅತ್ಯುನ್ನತ ಹುದ್ದೆಗೆ ಏರಿದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಕಾನೂನು ರಂಗಗಳಲ್ಲಿ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸಿದ ದೀಮಂತ ವ್ಯಕ್ತಿಯಾಗಿ ಮೆರೆದವರು ಕೆ.ಎಸ್. ಹೆಗ್ಡೆಯವರು. ನಿರ್ಬೀತ, ಕಳಂಕರಹಿತ ವ್ಯಕ್ತಿತ್ವ, ಚಾರಿತ್ರ್ಯ ಸಂಪನ್ನ ಜೀವನವನ್ನು ಹೊಂದಿದ್ದು, ಮಾನವೀಯ ಮೌಲ್ಯಗಳನ್ನು ಕೆ.ಎಸ್. ಹೆಗ್ಡೆಯವರು ಮೈಗೂಡಿಸಿಕೊಂಡಿದ್ದರು. ಈ ನಾಡಿನ ಜನ ಎಂದೂ ಮರೆಯಲಾಗದಂತಹ ಬದುಕನ್ನು ಬಾಳಿದ್ದ ಕೆ.ಎಸ್. ಹೆಗ್ಡೆಯವರ ಕೊನೆಯ ದಿನಗಳು ಶಾಂತಿದಾಯಕವಾಗಿತ್ತು. ತಮ್ಮ ಮೊಮ್ಮಗಳ ಹುಟ್ಟು ಹಬ್ಬದ ಸಂಭ್ರಮ ಆ ದಿನ ಮನೆಯಲ್ಲಿ! ಸಿಹಿ ಪದಾರ್ಥವೆಂದರೆ ಅಷ್ಟೇನೂ ಇಷ್ಟಪಡದ ಹೆಗ್ಡೆಯವರು ತಮ್ಮ ಮುದ್ದಿನ ಮೊಮ್ಮಗಳ ಹುಟ್ಟು ಹಬ್ಬವಾದ್ದರಿಂದ ಜಿಲೇಬಿ ತಿಂದರು. ನಗುಮೊಗದ ಮೊಮ್ಮಗಳನ್ನು ನೋಡಿ, ‘ನನ್ನ ಮುದ್ದು ಕಂದ, ಇದು ನಾನು ತಿನ್ನುವ ಕೊನೆಯ ಸಿಹಿ. ನನ್ನ ಪಾಡಿಗೆ ಇನ್ನು ನನ್ನನ್ನು ಬಿಟ್ಟುಬಿಡಿ’ ಎಂದು ಹೇಳಿದರು. ಸದಾ ಭಗವಂತನ ಸ್ಮರಣೆ ಮಾಡುತ್ತಿದ್ದ ಹೆಗ್ಡೆಯವರು ಆ ದಿನ ಕೂಡಾ –

ಈಶ ನಿನ್ನ ಚರಣ ಭಜನೆ
ಆಸೆಯಿಂದ ಮಾಡುವೆನು
ದೋಷ ರಾಶಿ ನಾಶ ಮಾಡು
ಶ್ರೀಶ ಕೇಶವಾ

ಎಂಬ ಗೀತೆಯನ್ನು ಕೇಳುತ್ತಾ 1990 ಮೇ 25ರ ರಾತ್ರಿ ಚಿರನಿದ್ರೆಗೆ ಜಾರಿದರು. 81 ವರ್ಷಗಳ ತುಂಬು ಜೀವನವನ್ನುಂಡ ಕೆ.ಎಸ್. ಹೆಗ್ಡೆಯವರು ಬದುಕಿನ – ಸಮಾಜದ ಬೇರೆ ಬೇರೆ ಮಗ್ಗುಲುಗಳ ಅನುಭವಗಳನ್ನು ತಮ್ಮದಾಗಿಸಿಕೊಂಡರು.

ಸಾಧನಾಶರೀರಿಯಾದ ವ್ಯಕ್ತಿ ತನ್ನ ಬದುಕಿನುದ್ದಕ್ಕೂ ಮಹತ್ತರವಾದುದನ್ನು ಸಾದಿಸುತ್ತ, ಜನಾನುರಾಗಿಯಾಗಿ ಲೋಕಮನ್ನಣೆಯನ್ನು ಗಳಿಸುವಂತೆ, ಭೌತಿಕ ಶರೀರದಿಂದ ದೂರವಾದರೂ ಕೀರ್ತಿಶರೀರಿಯಾಗಿ ನಿರಂತರ ಉಳಿಯುತ್ತಾನೆ. ಅವನು ನಡೆದಾಡಿದ ನೆಲದಲ್ಲಿ, ಕಟ್ಟಿ ಬೆಳೆಸಿದ ಸಂಸ್ಥೆಗಳಲ್ಲಿ ಆ ಅವ್ಯಕ್ತ ಶರೀರದ ಮೂಲಚೈತನ್ಯ ಅಗೋಚರವಾಗಿ ನಿರೀಕ್ಷೆಗೂ ಮೀರಿದ ಪ್ರಭಾವಲಯವನ್ನು ನಿರ್ಮಿಸುತ್ತದೆ. ಆತ್ಮ ಅವಿನಾಶಿ – ಅಮರ ಎನ್ನುವುದು ಬೋಧವಾಗುತ್ತದೆ. ಈ ನಿಟ್ಟಿನಲ್ಲಿ ಕೌಡೂರು ಸದಾನಂದ ಹೆಗ್ಡೆಯವರು ನಿಜಕ್ಕೂ ಅಮರರು.

ಕೆ.ಎಸ್. ಹೆಗ್ಡೆಯವರು ಬಿಟ್ಟುಹೋದ ಆಸ್ತಿ

ಮನುಷ್ಯ ಪ್ರಪಂಚಕ್ಕೆ ಕೇಳದೆಯೇ ಬರುತ್ತಾನೆ, ಹೇಳದೆಯೇ ಹೊರಟು ಹೋಗುತ್ತಾನೆ. ಅವನು ಬಿಟ್ಟುಹೋಗುವುದು ಬದುಕಿನ ಆದರ್ಶವನ್ನು ಮಾತ್ರ. ಕೆ.ಎಸ್. ಹೆಗ್ಡೆಯವರು ನಿಷ್ಠುರ ನ್ಯಾಯವಾದಿಯಾಗಿ, ನ್ಯಾಯಮೂರ್ತಿಗಳಾಗಿ, ನ್ಯಾಯಾಂಗದ ಗೌರವ – ಘನತೆಯನ್ನು ಎತ್ತಿಹಿಡಿದವರಾಗಿ ಮರೆಯಲಾರದ ವ್ಯಕ್ತಿತ್ವವನ್ನು ಬಿಟ್ಟುಹೋಗಿದ್ದಾರೆ. ರಾಜಕೀಯದ ಕೆಸರಾಟದ ನಡುವೆಯೂ ಒಂದಿಷ್ಟೂ ಕೊಳೆಯನ್ನು ಅಂಟಿಸಿಕೊಳ್ಳದೆ, ಅಪ್ಪಟ ರಾಜಕಾರಣಿಯಾಗಿ ಹಂತ ಹಂತವಾಗಿ ಮೇಲೇರಿ ರಾಜನೀತಿಜ್ಞನೆಂದು ತೋರಿಸಿಕೊಟ್ಟು ಕಣ್ಮರೆಯಾಗಿದ್ದಾರೆ.

ಸಮಾಜಮುಖಿ ಚಿಂತನೆಯಲ್ಲಿ ತೊಡಗಿ, ತೀರ ಹಿಂದುಳಿದ ಗ್ರಾಮೀಣ ಪ್ರದೇಶವೊಂದನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹೇಗೆ ಕಟ್ಟಿ ನಿಲ್ಲಿಸಬಹುದೆಂಬುದನ್ನು ಎತ್ತಿ ತೋರಿ ದೂರ ಸರಿದಿದ್ದಾರೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಸಮಾಜವನ್ನು ಕಟ್ಟುವ ಕನಸನ್ನು ಕಂಡು, ಕಂಡ ಕನಸನ್ನು ನನಸುಗೊಳಿಸಿ, ಬಹುಕಾಲ ನೆನಪಿನಲ್ಲಿಡುವ ಕೆಲಸವನ್ನು ಮಾಡಿ ಇಹಲೋಕದಿಂದ ದೂರವಾಗಿದ್ದಾರೆ. ತಮ್ಮ ಜೀವನಾದರ್ಶವನ್ನು ಎತ್ತಿತೋರುವ ಸುಸಂಸ್ಕೃತ ಮಕ್ಕಳನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ. ಹೀಗಾಗಿ ಕೌಡೂರು ಸದಾನಂದ ಹೆಗ್ಡೆಯವರು ನಮಗೆಲ್ಲ ಅನುಕರಣೀಯರು- ಅನುಸರಣೀಯರು. ಅಬಿನಂದನೀಯರು – ಅಬಿವಂದನೀಯರು.

ಮಹಾಚೇತನದ ಸಂಸ್ಮರಣೆ

16 ಜೂನ್ 2008ರಿಂದ 16 ಜೂನ್ 2009. ನಿಟ್ಟೆ ವಿದ್ಯಾಸಂಸ್ಥೆಗೆ ಉತ್ಸವದ ಉತ್ಸಾಹ. ಕಾರಣ ಸಂಸ್ಥೆಯ ಸ್ಥಾಪಕರಾದ ಕೌಡೂರು ಸದಾನಂದ ಹೆಗ್ಡೆಯವರ ಜನ್ಮಶತಾಬ್ದದ ಸಂಸ್ಮರಣೆ. ಸಮಾಜದಲ್ಲಿ ಬಹು ಜನ ಮರೆಯಬಾರದ್ದನ್ನು ಮರೆತು ಬಿಡುತ್ತಾರೆ. ಮರೆಯಬೇಕಾದ್ದನ್ನು ನೆನಪಿಟ್ಟುಕೊಳ್ಳುತ್ತಾರೆ. ನಮ್ಮ ಆದರ್ಶಗಳು ಹುದುಗಿರುವುದೇ ನಿನ್ನೆಯ ಒಡಲಲ್ಲಿ. ನಿನ್ನೆಯನ್ನು ಮರೆತವನಿಗೆ ಇಂದು ಭದ್ರವೆನಿಸುವುದಿಲ್ಲ. ನಾಳೆ ಸುಭದ್ರವಾಗುವುದಿಲ್ಲ. ಹೀಗಾಗಿ, ಕೆ.ಎಸ್. ಹೆಗ್ಡೆಯವರು ಸಾರಿದ, ಎತ್ತಿ ತೋರಿದ ಮೌಲ್ಯಗಳ ಸಂಸ್ಮರಣೆ ಮಾಡಬೇಕಾದ್ದು ಸಂಸ್ಥೆಯಲ್ಲಿರುವ ನಮ್ಮೆಲ್ಲರ ಆದ್ಯ ಕರ್ತವ್ಯ.

ಕೆ.ಎಸ್. ಹೆಗ್ಡೆಯವರು ನಿನ್ನೆಯ ಬಳುವಳಿಯೊಂದಿಗೆ ನಾಳೆಯ ನಿರೀಕ್ಷೆಯನ್ನು ಕಾಣುತ್ತ ಇಂದು ಸಾರ್ಥಕವಾಗಿ ಬಾಳಿದವರು. ಬದುಕಿನುದ್ದಕ್ಕೂ ಕನಸನ್ನು ಕಾಣುತ್ತ, ಕಂಡ ಕನಸನ್ನು ನನಸಾಗಿಸುತ್ತ, ಇಡೀ ಸಮಾಜಕ್ಕೆ ಮಾರ್ಗದರ್ಶಿಯಾದವರು. ಹೀಗಾಗಿ, ಅವರು ಕನಸನ್ನು ನೆಟ್ಟು ಹೋದರು; ನೆನಪನ್ನು ಬಿಟ್ಟು ಹೋದರು. ಅವರು ನೆಟ್ಟು ಹೋದ ಬೆಳಕಿನ ಬೀಜವಿಂದು ಹೆಮ್ಮರವಾಗಿ ನಳನಳಿಸುತ್ತಿದೆ. ಹೂ-ಹಣ್ಣು-ಫಲಭಾರಗಳಿಂದ ಬಾಗುತ್ತಿದೆ. ಇಲ್ಲಿ ತಂಪಿದೆ, ಸೊಂಪಿದೆ, ಕಂಪಿದೆ ಎಂದು ಕೈ ಬೀಸಿ ಕರೆಯುತ್ತಿದೆ ನಿಟ್ಟೆ ವಿದ್ಯಾಸಂಸ್ಥೆ.

ಇಲ್ಲಿ ಎಳೆಯ ಮಕ್ಕಳ ಜೀಕು ಜೋಕಾಲಿಯಿಂದ ತೊಡಗಿ, ಅವರವರ ಮನಸಿನ-ಅವರವರ ಕನಸಿನ ಶೈಕ್ಷಣಿಕ ಬೇಕುಗಳ ಕಾಣ್ಕೆಯಿದೆ. ಇದು ಪುಣ್ಯ ಪುರುಷ ಕೆ.ಎಸ್. ಹೆಗ್ಡೆಯವರ ಅವಿಸ್ಮರಣೀಯ ಕಾಣ್ಕೆ. ದೊಡ್ಡವರೆಂದೂ ಸಣ್ಣ ಕೆಲಸದಿಂದ ತೃಪ್ತರಾಗುವುದಿಲ್ಲ. ಅವರು ಸದಾ ದೊಡ್ಡ ಕೆಲಸವನ್ನು ಮಾಡಿಯೇ ದೊಡ್ಡವರೆನ್ನಿಸಿ ಕೊಳ್ಳುತ್ತಾರೆ. ಕೆ.ಎಸ್. ಹೆಗ್ಡೆಯವರು ಈ ರಾಷ್ಟ್ರದ ಉನ್ನತ ಹುದ್ದೆಗೆ ಏರಿದ್ದರೂ ರೈತಾಪಿ ಜನರ ಪ್ರಾಮಾಣಿಕತೆ, ಮಹಾಮಾನವನ ಮುಗ್ಧತೆ, ಧಾರ್ಮಿಕ ವ್ಯಕ್ತಿಯ ಸಜ್ಜನಿಕೆ, ವಿದ್ಯಾವಂತನ ಸರಳತೆ, ಸುಸಂಸ್ಕೃತನ ಶ್ರದ್ಧೆ ಅವರಲ್ಲಿತ್ತು. ರಾಜಕೀಯ ವ್ಯಕ್ತಿಯಾಗಿದ್ದು, ಬಳಿಕ ನ್ಯಾಯಾಂಗದ ಉನ್ನತ ಸ್ಥಾನಕ್ಕೇರಿದ ಅಪೂರ್ವ ವ್ಯಕ್ತಿ ಕೆ.ಎಸ್. ಹೆಗ್ಡೆಯವರಾಗಿದ್ದರೂ, ಅವರ ರಾಜಕೀಯ ನಿಲುವು ನ್ಯಾಯಾಂಗದಲ್ಲಿ ಎಂದೂ ತಲೆಹಾಕಲಿಲ್ಲ. ಪೂರ್ವಾಗ್ರಹಗಳಿಂದ ಮುಕ್ತರಾಗಿದ್ದ ಇವರು ನ್ಯಾಯೋಚಿತ ತೀರ್ಮಾನಗಳಿಗೆ ಇನ್ನೊಂದು ಹೆಸರಾಗಿದ್ದರು. ಪ್ರಜಾಪ್ರಭುತ್ವದ ಜೀವನಾಡಿಯಾಗಿ ಸರಕಾರದ ಕರ್ತವ್ಯ ನಿರ್ವಹಿಸುವಲ್ಲಿ ಸ್ಫೂರ್ತಿಯಾಗಿದ್ದ ಕೆ.ಎಸ್. ಹೆಗ್ಡೆಯವರು ಒಂದು ವೇಳೆ ರಾಷ್ಟ್ರಪತಿಯಾಗಿದ್ದಿದ್ದರೆ ಪ್ರಾಯಃ ಈ ದೇಶದ ರಾಜಕೀಯ ಇತಿಹಾಸವೇ ಬದಲಾಗುತ್ತಿತ್ತು.

ಅಪ್ಪಟ ದೇಶಪ್ರೇಮಿಯಾಗಿದ್ದ ಕೆ.ಎಸ್. ಹೆಗ್ಡೆಯವರು ನಿಜವಾದ ಅರ್ಥದಲ್ಲಿ ಮಣ್ಣಿನ ಮಗನಾಗಿದ್ದರು. ಸಾಮಾಜಿಕ ಸ್ಪಂದನವೇ ಅವರ ಉಸಿರಾಗಿತ್ತು. ಸತತ ಪರಿಶ್ರಮ ಹಾಗೂ ಅಧ್ಯಯನ ಶೀಲತೆಯಿಂದ ಅಸಾಧಾರಣ ವ್ಯಕ್ತಿತ್ವವುಳ್ಳವರಾಗಿದ್ದರು. ಅಶಿಕ್ಷಿತ ಹಾಗೂ ಶೋಷಿತ ಮುಗ್ಧರ ಬಗೆಗೆ ಅಪಾರ ಕಾಳಜಿ ಹೊಂದಿದ್ದು ಮಾತ್ರವಲ್ಲದೆ, ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ ಸಾಧ್ಯವೆಂಬ ವಿಶ್ವಾಸವುಳ್ಳವರಾಗಿದ್ದರು. ಧೈರ್ಯ ಮತ್ತು ಕರ್ತವ್ಯ ಪಾಲನೆ ಅವರ ಶಕ್ತಿಗಳಾಗಿದ್ದು, ಅವರ ಎಲ್ಲ ತೀರ್ಪುಗಳಲ್ಲಿಯೂ ಭಾರತೀಯನ ಮೂಲಭೂತ ಹಕ್ಕುಗಳ ರಕ್ಷಣೆಯ ಕಳಕಳಿ ಎದ್ದು ಕಾಣುತ್ತಿತ್ತು.

ನ್ಯಾಯವಾದಿಗಳಾಗಿ, ನ್ಯಾಯಾಧೀಶರಾಗಿ, ನ್ಯಾಯಮೂರ್ತಿಗಳಾಗಿ ವೃತ್ತಿ ಜೀವನದ ಗೌರವವನ್ನು ಮೆರೆದವರು ಹೆಗ್ಡೆಯವರು. ರುಚಿಶುದ್ಧಿಯ ರಾಜಕೀಯವನ್ನು ಬಾಳಿದವರು ಹೆಗ್ಡೆಯವರು. ಅವರ ಬದುಕು – ಹೋರಾಟದ ಬದುಕು. ಈ ಹೋರಾಟ – ಅಸತ್ಯದೊಡನೆ ಹೋರಾಟ, ಕತ್ತಲೆಯೊಡನೆ ಹೋರಾಟ, ಅಜ್ಞಾನದೊಡನೆ ಹೋರಾಟ, ಸಮಾಜದ ಎಲ್ಲ ಅನಿಷ್ಟಗಳೊಡನೆ ಹೋರಾಟ. ಈ ಹೋರಾಟದಲ್ಲಿ ಕೆ.ಎಸ್. ಹೆಗ್ಡೆಯವರು ಸಫಲತೆ, ಸಾರ್ಥಕತೆ ಕಂಡ ಸದಾನಂದರು. ನಮ್ಮ ಪಾಲಿಗೆ ಇಂದೂ ನಮ್ಮೊಡನಿರುವ ಚಿದಾನಂದರು.

* * *