“ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂಬ ಮಾತು ಪ್ರಚಲಿತದಲ್ಲಿದೆ. ಇದು ಯಾವ ಕಾಲದಲ್ಲಿ ಮೂಡಿಬಂದ ಮಾತು? ಕೃಷಿಯಿದ್ದರೆ ದುರ್ಭಿಕ್ಷೆ ಎಂಬುದಿಲ್ಲ ಎಂಬುದು ನಿಜವಾದರೂ, ಅದು ಯಾರಿಗೆ? ಕೃಷಿಕರಿಗೋ? ದೇಶವಾಸಿಗಳಿಗೋ? ಎಂಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ.

ಈಗ ಆ ಮಾತನ್ನು ಬಹುತೇಕ ರೈತರು ಕನ್ನಡ ನಾಡಿನಲ್ಲಿ ಒಪ್ಪಲಾರರು. ಒಪ್ಪುವ ಸ್ಥಿತಿ ಇಲ್ಲ. ಕೃಷಿ ಪ್ರಧಾನ ಭಾರತದಂತಹ ದೇಶದಲ್ಲಿ ಕೃಷಿಕರು ಸಮಸ್ಯೆಯ ತವರಾಗುತ್ತಿದ್ದಾರೆ. ಸರ್ಕಾರಗಳ ಆದ್ಯತೆ ಬದಲಾಗಿ ರೈತರು ಅತಂತ್ರರಾಗಿದ್ದಾರೆ. ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ನಾವು ಯಾವುದೇ ಬೌದ್ಧಿಕ ತೊಂದರೆಗಳಾದಾಗ, ಆಧ್ಯಾತ್ಮ ಸಾಧಕರಿರುವ ಹಿಮಾಲಯಗಳತ್ತ ದೃಷ್ಟಿ ಹರಿಸುತ್ತೇವೆ. ಋಷಿಗಳ, ಸಾಧಕರ ಅನುಭವ, ಅನುಭಾವಗಳ ರಸ ಸಂಗಮದಿಂದ ಹೊರಟ ದಿವ್ಯ ಮಾತುಗಳಲ್ಲಿ ಸಾಂತ್ವನದ ಬೆಳಕನ್ನು ಕಾಣುತ್ತೇವೆ.

ದಿವ್ಯ ನಿರ್ಲಕ್ಷ್ಯದಿಂದಾಗಿ ಸಮಸ್ಯೆಯನ್ನೇ ಮೈಯಾಂತ ಕೃಷಿಗೆ, ಕೃಷಿಕರಿಗೆ ಋಷಿ ಸದೃಶವಾದ ಒಬ್ಬ ವ್ಯಕ್ತಿ ನಮ್ಮ ನಡುವೆ ಇದ್ದಾರೆ. ಅದು ಕೂಡಾ ಆಶಾಕಿರಣದ ಹಾಗೆ.

ಹೆಚ್ಚು ಕಮ್ಮಿ ನೂರು ವರುಷಗಳಷ್ಟು ಕಾಲ, ನೂರು ಎಕರೆಯಷ್ಟು ಕೃಷಿ ಭೂಮಿಯಲ್ಲಿ ಕೃಷಿ ಮಾಡುತ್ತಾ ಬಂದಿದೆ ಸೋನ್ಸ್ ಕುಟುಂಬ. ಆ ಕುಟುಂಬದ ಕುಡಿ ಎಲ್.ಸಿ. ಸೋನ್ಸ್. ಅವರೊಬ್ಬ ಕೃಷಿಯ ಮೇರುಸಾಧಕ. ನೂರಾರು ವಿಧದ ಬೆಳೆಗಳನ್ನು ಬೆಳೆಯುತ್ತಾ ನಿತ್ಯ ನಿರಂತರ ಪ್ರಯೋಗಗಳಿಗೆ ಕೃಷಿಯನ್ನು ಒಳಪಡಿಸಿ ಯಶಸ್ಸಿನ ಮಾಲೆ ಹೊತ್ತವರು ಅವರು. ಸೋನ್ಸ್ ಎಂದ ಕೂಡಲೆ ಕರಾವಳಿ ಪ್ರದೇಶದಲ್ಲಿ ನೆನಪಾಗುವುದೇ ಮೂಡುಬಿದಿರೆಯಿಂದ 5 ಕಿ.ಮೀ., ಮಂಗಳೂರಿಂದ 40 ಕಿ.ಮೀ. ದೂರದಲ್ಲಿರುವ ಸೋನ್ಸ್ ಫಾರ್ಮ್, ಅದರೆದುರು ಕಂಗೊಳಿಸುವ ಅನಾನಾಸಿನ ಚಿತ್ರ-ತೋಟ. ಇನ್ನೂ ಏನೇನೋ ಇರುವ ವಿಶಿಷ್ಟ ಕೃಷಿ ವಿಶ್ವ. ಹೌದು ಅಲ್ಲಿದ್ದಾರೆ ಆರೇಳು ದಶಕಗಳ ಸಾರ್ಥಕ ಜೀವನವನ್ನು ಕೃಷಿಯಲ್ಲಿಯೇ ಕಂಡ ಸಾಧಕ ಲಿವಿಂಗ್‌ಸ್ಟನ್ ಚಂದ್ರಮೋಹನ್ ಸೋನ್ಸ್. ವಿಶ್ವದ ಹಿರಿಯಣ್ಣನೆಂದೇ ಬೀಗುವ ಅಮೇರಿಕಾದಲ್ಲಿ ಕೃಷಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದವರು ಅವರು. ಹಾಗಾಗಿ ಡಾ ಎಲ್.ಸಿ. ಸೋನ್ಸ್.

ಕೃಷಿ ಕ್ಷೇತ್ರದ ದುರ್ಭಿಕ್ಷೆಯ ಕ್ಷಣ ನೆನಪಾದಾಗಲೆಲ್ಲ ಕೃಷಿಕರಿಗೆ, ಕೃಷಿ ಪ್ರಿಯರಿಗೆ ಋಷಿಯ-ಚೈತನ್ಯದ ಚಿಲುಮೆಯಾಗಿ ಋಷಿ ತೆರನಾಗಿ ಕಾಣಿಸಿಕೊಳ್ಳುವವರು ಇವರು. ಅವರ ಪ್ರಯೋಗಗಳು ಅವರೆಂದೂ ನಿರಾಶರಾಗದಂತಹ ಅವಕಾಶವನ್ನು ಅವರಿಗೆ ಒದಗಿಸಿವೆ. ಕೃಷಿಕರ ನಡುವೆ ಎದ್ದು ತೋರುವ ಅಗ್ರಪಂಕ್ತಿಯ ಸಾಧಕರಲ್ಲಿ ಇವರೂ ಒಬ್ಬರು ಎಂಬುದಕ್ಕೆ ಎರಡು ಮಾತಿರಲಾರದು. ಶ್ರಮ ಮತ್ತು ಜ್ಞಾನದ ಸಮಪಾಕದಿಂದ ಕಡೆದು ನಿಂತಿರುವ ಪ್ರತಿಮೆ.

ಮಿತಭಾಷಿ, ಸೌಜನ್ಯಶೀಲ, ವಿನಯಶೀಲ, ಕುಶಲ ವ್ಯಾಪಾರಿ, ಸಾಧನಶೀಲ, ಪರಿಶ್ರಮಿ ಹೀಗೆ ಸೋನ್ಸ್‌ರ ವ್ಯಕ್ತಿತ್ವದ ಬಗೆಗೆ ಶಬ್ದಗಳ ಅಲಂಕಾರ ಮಾಡಬಹುದು. ವಿದ್ಯೆ ವಿನಯದಿಂದ ಶೋಭಿಸುತ್ತದೆ ಎಂಬ ಮಾತಿಗೆ ಉದಾರಣೆಯಾಗಿಯೂ ಇವರನ್ನು ಹೆಸರಿಸಬಹುದು. ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರೂ ಎಲ್ಲೂ ಎಲ್ಲವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳಲು ಬಯಸಿದವರಲ್ಲ. ತನಗೆ ಸಿಕ್ಕ ಗೌರವ ಧನ-ಇತ್ಯಾದಿ ಕೃಷಿಯೇತರ ಮೂಲದ ಹಣವನ್ನು ರೋಟರಿಯಂತಹ ಸಂಸ್ಥೆಯಲ್ಲಿ ಪರಿಸರ ನಿಧಿಯಾಗಿಸಿದರೂ ಅದಕ್ಕಾಗಿ ಬೀಗುವವರಲ್ಲ. ಅದು ಆಗ ಸಾಧ್ಯವಾಯಿತು ಎಂದು ನಿರಾಳವಾಗಿದ್ದುಬಿಡುವ ಜಾಯಮಾನ.

ಅವರಿಂದ ನೇರವಾಗಿ ತನು-ಮನ-ಧನ ಸಹಾಯ ಪಡೆದವರೆಷ್ಟೊ ಗೊತ್ತಿಲ್ಲ. ಆದರೆ ತನ್ನ ವಿದ್ಯೆಯನ್ನು, ತಾನು ಕಂಡುಕೊಂಡದ್ದನ್ನು ನಾಲ್ಕು ಜನರಿಗೆ ಹಂಚಬೇಕೆನ್ನುವ ನಿಚ್ಚಳ ತುಡಿತ ಅವರಲ್ಲಿದೆ. ಹೊಸ ಹೊಸ ಬೆಳೆಯನ್ನು ಸಾಕಷ್ಟು ಜನ ಬೆಳೆಸಿ ಅವರಿಗೆ ಆರ್ಥಿಕ ಬಲ ಬರಬೇಕು, ವಿದೇಶಗಳಲ್ಲಿರುವಂತೆ ನಮ್ಮ ಜ್ಞಾನವನ್ನು ಇತರರಿಗೆ ಹಂಚಬೇಕು ಎಂಬುದು ಅವರ ಖಚಿತ ಅಭಿಪ್ರಾಯವಾಗಿದೆ. ಭಾರತದಲ್ಲಿ ಕೆಲವೊಂದು ವಿಚಾರಗಳನ್ನು ಕೆಲವರು ದೈವೀದತ್ತವೆಂದು ವೈಭವೀಕರಿಸಿ ಮತ್ತೊಬ್ಬರಿಗೆ ತಿಳಿಸದೆ ಆ ವಿದ್ಯೆ-ವಿಚಾರ ಅವರೊಂದಿಗೆ ಸಾಯುತ್ತಿರುವ ಬಗೆಗೆ ಅವರಿಗೆ ವಿಷಾದವಿದೆ.

ಶಿಕ್ಷಣ ಹೊಂದುವುದು, ಅದರಲ್ಲೂ ಉನ್ನತ ಶಿಕ್ಷಣ ಪಡೆಯುವುದು ದೇಶ ಬಿಟ್ಟು ಹೋಗಲು – ಪಟ್ಟಣ ಸೇರಲು ಒಂದು ಪರವಾನಿಗೆ ಎಂಬ ಭಾವನೆ, ಸ್ಥಿತಿ ಇದೆ. ಡಾ ಎಲ್.ಸಿ. ಸೋನ್ಸ್ ಅದಕ್ಕೊಂದು ಅಪವಾದವಾಗಿದ್ದಾರೆ. ತಾನು ಕಲಿತ ವಿದ್ಯೆಯನ್ನು ತನ್ನ ಕೃಷಿಗೆ ತಾನೇ ಅಳವಡಿಸಿ, ಪಡೆದ ವಿದ್ಯೆಗೆ ವಿಶೇಷ ಅರ್ಥವನ್ನು ಬರೆಸಿದರು. ತಂದೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಕೃಷಿ, ಅದರ ನೆರಳಲ್ಲಿಯೇ ಬೆಳೆದು ತಮ್ಮ ತೋಟಕ್ಕೆ ಕೃಷಿ ಭೂಮಿಗೆ ಆಧುನಿಕತೆಯ ಸ್ಪರ್ಶ ನೀಡಿದವರು ಅವರು.  ಆ ಕಾರಣದಿಂದಾಗಿಯೇ ಮಾದರಿ ಕೃಷಿಕರಾಗಿ ಬೆಳೆದು ಗಮನ ಸೆಳೆದಿದ್ದಾರೆ. ನೂರಾರು-ಸಾವಿರಾರು ದೇಶ-ವಿದೇಶದ ಜನರನ್ನು ಬನ್ನಡ್ಕದ ತಮ್ಮ ಫಾರ್ಮ್‌ಗೆ ಸೆಳೆದಿದ್ದಾರೆ. ಐತಿಹಾಸಿಕ ಸ್ಥಳ ವೀಕ್ಷಣೆಗಾಗಿ ಬರುವ ವಿದೇಶಿಯರ ಪಟ್ಟಿ ತೆರೆದರೆ ಅದರಲ್ಲಿ ‘ಸೋನ್ಸ್ ಫಾರ್ಮ್’ ಸೇರುವಂತಹ ಮಹತ್ವದ ಕೆಲಸ ಇಲ್ಲಿ ಆಗಿದೆ. ಅದನ್ನು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿಯೂ ಬೆಳೆಸಿದ್ದಾರೆ.

ಲೋಕಲ್ ಬಸ್‌ನಲ್ಲಿ ಮೂಡುಬಿದಿರೆಯಿಂದ-ಕಾರ್ಕಳಕ್ಕೆ ಹೋಗುವಾಗ ಒಂದು ಬಸ್ ನಿಲ್ದಾಣಕ್ಕೆ ‘ಸೋನ್ಸ್’ ಎಂಬ ಹೆಸರು ಬಂದಿದೆ. ಐತಿಹಾಸಿಕವಾಗಿ ಮೂಡುಬಿದಿರೆಗೆ ‘ಜೈನಕಾಶಿ’, ಕಾರ್ಕಳಕ್ಕೆ ‘ಪಡು ತಿರುಪತಿ’ ಎಂಬ ಖ್ಯಾತಿಯಿದೆ. ಸೋನ್ಸ್ ಅವರ ಸಾಧನೆಯಿಂದಾಗಿ ಮೂಡುಬಿದಿರೆಯಲ್ಲಿ ‘ಸಸ್ಯ ಕಾಶಿ’ಯೊಂದು ತಲೆಎತ್ತಿ ನಿಂತಿದೆ. ಸಮಸ್ಯೆಗಳ ನಡುವೆ ತಲೆ ಕೆಳಗೆ ಹಾಕಿರುವ ಕೃಷಿಕರಿಗೆ, ಅವರಲ್ಲೊಬ್ಬನಾಗಿ ಸಮಸ್ಯೆಗೆ- ಸಮಸ್ಯೆಯೊಳಗಿನ ಪರಿಹಾರ ಸೂತ್ರ ನೀಡಿದ್ದಾರೆ, ನೀಡುತ್ತಿದ್ದಾರೆ. ಏಳುಬೀಳುಗಳ ಗೂಡಾಗಿರುವ ಕೃಷಿಗೆ ತಮ್ಮ ಸೂತ್ರಗಳ ಮೂಲಕವೇ ಉತ್ತರಿಸಿ, ಅದನ್ನು ಎತ್ತರಿಸುತ್ತಾ, ಬಿತ್ತರಿಸುತ್ತಾ ‘ಖುಷಿಕ’ರಾಗಿ ಬದುಕಿ ಆದರ್ಶ ಪ್ರಾಯರಾಗಿದ್ದಾರೆ. ಕೃಷಿಯನ್ನೇ ನಂಬಿ ಕೆಟ್ಟೆ – ಇನ್ನು ಉಳಿಗಾಲವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಯಾವನೇ ಒಬ್ಬ ರೈತ ಇವರನ್ನು ಒಮ್ಮೆ ಭೇಟಿಯಾದರೆ, ತೋಟದ ಅಮೃತ ಸದೃಶ ಗಾಳಿ ಸವಿದರೆ  ತನ್ನ ನಿರ್ಧಾರ ಬದಲಾಯಿಸದೇ ಇರಲಾರ. ಹಾಗಂತ ಹೇಳುವುದು ಸೋನ್ಸ್ ಫಾರ್ಮ್‌ಗೆ ಭೇಟಿ ನೀಡಿದವರಿಗೆ ಉತ್ಪ್ರೇಕ್ಷೆಯಾಗಿ ಕಾಣಲಾರದು, ಕಾಣುವುದಿಲ್ಲ.

ತಂದೆ ಕೃಷಿಯಲ್ಲಿ ಡಿಪ್ಲೊಮಾ ಮಾಡಿದವರು, ತಾಯಿ ಮೆಡಿಕಲ್‌ಗೆ ಸೇರಿ ಅರ್ಧದಲ್ಲಿ ಬಿಟ್ಟರೂ, ಹೋಮಿಯೋಪಥಿಕ್ ಶಿಕ್ಷಣ ಪಡೆದು ಅದರ ಉಪಯೋಗವನ್ನು ಜನರಿಗೆ ನೀಡಿದವರು. ತೋಟದ ಗಿಡಗಳೊಂದಿಗೆ ಬೆಳೆದ ಬಾಲಕ ಆಸಕ್ತಿಯಿಂದ ಓದಿದ್ದು ಸಸ್ಯಶಾಸ್ತ್ರವನ್ನು. ಹೌದು… ಬೋಟನಿ. ಗಿಡ-ಮರಗಳ ಹಣ್ಣು-ಹಂಪಲುಗಳ ಬಗೆಗೆ ವಿಜ್ಞಾನದ ಆಧಾರದಲ್ಲಿ ನಡೆಸಿದ ಅಧ್ಯಯನವನ್ನೇ ಮೊದಲು ಪ್ರಯೋಗಕ್ಕೆ ಇಳಿಸಿದರು. ಪ್ರಾದೇಶಿಕ ಹವಾಮಾನಕ್ಕೆ ಒಪ್ಪುವಂತಹ ಹಣ್ಣುಹಂಪಲುಗಳು ಯಾವುವು? ಅದನ್ನು ಪಡೆಯುವ ಬಗೆ ಎಂತು? ಎಂದು ಯೋಚಿಸಿದರು. ವಿದೇಶದವುಗಳಾಗಿದ್ದು ಇಲ್ಲಿಯೂ ಬೆಳೆಯಬಲ್ಲ ಗುಣಲಕ್ಷಣಗಳಿರುವ ಬೆಳೆಗಳನ್ನು ಗುರುತಿಸಿ-ತರಿಸಿ-ಮಗುವಿನಂತೆ ಬೆಳೆಸಿದರು.

ಪ್ರಯೋಗ ಫಲಪ್ರದವೆಂದು ತಿಳಿದಾಗಲೇ ಅವುಗಳನ್ನು ವಾಣಿಜ್ಯ ಬೆಳೆಯಾಗಿಸಿ ಬೆಳೆದು ಯಶಸ್ಸು ಪಡೆದರು.

ರ್ಯಾಂಬೊಟನ್, ಡೂರಿಯನ್, ಲಾಂಗ್ಸಾಟ್, ಮಲಯನ್ ಆಪಲ್, ಸೇರಿದಂತೆ ಅನೇಕ ಹಣ್ಣುಗಳನ್ನು ಈ ಭಾಗಕ್ಕೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇನ್ನು ಶಿಕ್ಷಣ ಸಾಕು ಎಂದು ಕೆಲಸಕ್ಕೆ ಸೇರಿದವರು ಸ್ನಾತಕೋತ್ತರ ಪದವಿಗೆ ಸೇರಿದರು. ಪಿಹೆಚ್.ಡಿ. ಯಂತಹ ಉನ್ನತ ಶಿಕ್ಷಣ ಆರ್ಥಿಕ-ಬಡತನದ ಕಾರಣಗಳಿಗಾಗಿ ಸಾಧ್ಯವಿಲ್ಲ ಎಂಬಾಗ ವಿದ್ಯಾರ್ಥಿ ವೇತನ ಸಹಿತ ಅವಕಾಶ ಅವರ ಪಾಲಿಗೆ ದೊರಕಿತು. ನಾಲ್ಕು ವಾರಗಳ ತರಬೇತಿ+ ಪ್ರಯಾಣ, ಆ ಪ್ರಯಾಣದ ಅವಧಿಯಲ್ಲಿ ಪ್ರಪಂಚ ತಿಳಿಯಲು ವಿದ್ಯಾರ್ಥಿ ವೇತನ ಪಡೆದವರಿಗಾಗಿ ಮಾಡಿದ್ದ ಸುವ್ಯವಸ್ಥೆ ಅವರ ಬದುಕಿಗೊಂದು ತಿರುವು ನೀಡಿತು. ಕಲಿಕೆಯ ಹಾದಿ – ಪ್ರಪಂಚ ಜ್ಞಾನದ ಹೆಬ್ಬಾಗಿಲನ್ನು ತೆರೆದು ಕೊಟ್ಟಿತು. ಈಜಿಪ್ಟ್, ಇಟಲಿ, ಜರ್ಮನಿ, ಫ್ರಾನ್ಸ್, ಹಾಲೆಂಡ್, ಇಂಗ್ಲೆಂಡ್, ಅಮೇರಿಕಾ ದೇಶಗಳ ಸುತ್ತಾಟ ಸಂಶೋಧನೆಗಳಿಗಾಗಿ ಹೊರಟಿದ್ದ ಸೋನ್ಸ್‌ರಿಗೆ ಹೊಸ ದಾರಿಗಳನ್ನು ಪ್ರವೇಶಿಸಲು ಹೆದ್ದಾರಿಯಾಯಿತು. ಯುರೋಪ್‌ನಾದ್ಯಂತ ಸಂಚರಿಸಿ ಕೃಷಿಯ ಕುರಿತಾದ ಹೊಸ ಟ್ರೆಂಡ್‌ಗಳನ್ನು ತಿಳಿದುಕೊಂಡರು.

ಅಲ್ಲಿ ಊರೂರಲ್ಲಿ ಕೃಷಿ-ಸಂಗ್ರಹಾಲಯಗಳು. ಅವುಗಳನ್ನು ಕಂಡಷ್ಟು ಸಂತೋಷ- ಪುಳಕ, ಪಡೆದದ್ದು ಸ್ಫೂರ್ತಿ. ಅದರ ಫಲಿತಾಂಶ ನಾಲ್ಕೈದು ಲಕ್ಷ ರೂಪಾಯಿಗಳನ್ನು 15 ವರ್ಷದ ಹಿಂದೆ ವ್ಯಯಿಸಿದ ಕೃಷಿ ಸಂಗ್ರಹಾಲಯ. ಅದಕ್ಕೊಂದು ಸಾರ್ವಜನಿಕ ಪ್ರದರ್ಶನದ ವ್ಯವಸ್ಥೆಗೆ ಅವರ ಮನದ ಕನ್ನಡಿಯಲ್ಲಿ ಮುನ್ನುಡಿ ಬರೆದಾಗಿದೆ. ಒಬ್ಬ ಮಗನಿಗೆ ಕೃಷಿ ವಿಷಯದಲ್ಲಿಯೇ ಎಂ.ಎಸ್ಸಿ. ಪದವಿ ಕೊಡಿಸಿ ಜೊತೆಗೂಡಿಸಿಕೊಂಡಿದ್ದಾರೆ. ಬಿ.ಕಾಂ. ಪದವಿ ಪಡೆದ, ಹಣ್ಣಿನ ಸಂಸ್ಕರಣೆಯಲ್ಲಿ ಡಿಪ್ಲೊಮಾವನ್ನು ಮೈಸೂರಿನ CFTRI ಸಂಸ್ಥೆಯಿಂದ ಪಡೆದ ತಮ್ಮ ಐ.ವಿ. ಸೋನ್ಸ್ ಜೊತೆಗಿದ್ದಾರೆ. 25ಕ್ಕೂ ಮಿಕ್ಕ ಕೃಷಿ ಕಾರ್ಮಿಕರಿಗೆ ಇಲ್ಲಿ ಉದ್ಯೋಗ ಸಿಕ್ಕಿದೆ. ಬೆಳೆ ವೈವಿಧ್ಯತೆಯ ಜೊತೆ ತಮ್ಮ ವಿಜಯೀ ಸೂತ್ರದೊಂದಿಗೆ ಸೋನ್ಸ್ ಅವರು ಈ ಶತಕ ಗಾತ್ರದ ಕೃಷಿ ಸಾಮ್ರಾಜ್ಯವನ್ನು ಸಮೃದ್ಧವಾಗಿ, ಸುದೃಢವಾಗಿ ಮುನ್ನಡೆಸುತ್ತಿದ್ದಾರೆ.

ಸಮಸ್ಯೆಗಳಿಂದಾಗಿ ನಷ್ಟದಾಯಕವಾದ ಭತ್ತದ ಕೃಷಿಗೆ ಗುಡ್‌ಬೈ ಹೇಳಿ ಅಲ್ಲೊಂದು ಬಿದಿರಿನ ನಂದನವನ ಸೃಷ್ಟಿಸಿದ್ದಾರೆ. ಕೃಷಿ ‘ನಷ್ಟೋದ್ಯಮ’ ಎಂಬ ಗೊಣಗಾಟದ ಜನರಿಗೆ ಲಾಭದ ಸಿಹಿಸಿಂಚನದ ಉತ್ತರ ನೀಡಿದ್ದಾರೆ. ಪ್ರವಾಸಿಗರ ವಾರಾಂತ್ಯ ಪ್ರವಾಸದ ಸ್ಥಳವೊಂದು ವೌನವಾಗಿಯೇ ಇಲ್ಲಿ ಮೂಡಿ ನಿಂತಿದೆ.

ಹಣ್ಣಿಗೊಂದು ತಮ್ಮ ‘ಸರ್‌ನೇಮ್’ನ ಬ್ರ್ಯಾಂಡ್ ಹೆಸರು ಅಚ್ಚೊತ್ತುವಂತೆ ಅನಾನಾಸುಗಳನ್ನು ಬೆಳೆಸಿದ್ದಾರೆ, ಬೆಳೆಸುತ್ತಾ ಬಂದಿದ್ದಾರೆ. ‘ಸೋನ್ಸ್ ಪೈನಾಪಲ್’ ಎಂಬುದೇ ಆ ಬ್ರ್ಯಾಂಡ್ ನೇಮ್.

ಜೀವನದ ಮುಕ್ಕಾಲು ಭಾಗ ಕಳೆದು ವೃದ್ಧಾಪ್ಯದತ್ತ ಮುಖ ಮಾಡಿರುವ ಸೋನ್ಸ್ ಅವರಲ್ಲಿ ತಾರುಣ್ಯದಲ್ಲಿದ್ದಷ್ಟು ಚೈತನ್ಯ ಇಲ್ಲದಿರಬಹುದು. ಅವರು ಈಗಲೂ ಕೃಷಿಯ ಬಗ್ಗೆ ಖುಷಿಯಿಂದ ಮಾತನಾಡಲು ಕುಳಿತರೆಂದರೆ ಅವರ ತರ್ಕಬದ್ಧವಾದ, ಅನುಭವಜನ್ಯವಾದ, ಪ್ರಯೋಗಕ್ಕೆ ಅಳವಡಿಸಬಹುದಾದ ಆಕರ್ಷಕ ವಿಚಾರಗಳು ಯಾರನ್ನಾದರೂ ಸೆರೆ ಹಿಡಿದಿಡುವಷ್ಟು ಶಕ್ತಿ ಹೊಂದಿವೆ. ದಿನಾಲೂ ಒಂದಿಷ್ಟು ಕೃಷಿಕರು ಹಣ್ಣು-ಗಿಡ ಕೊಳ್ಳುವ ಹೊತ್ತಿನಲ್ಲೇ ಒಂದಿಷ್ಟು ಮಾಹಿತಿಯನ್ನು ಅವರಿಂದ ಪಡೆದೇ ಪಡೆಯುತ್ತಾರೆ.

ತೋಟದಲ್ಲಿ ಅಳವಡಿಸಲಾಗಿರುವ ‘ಕುರುವಾಯಿ ಹಿಡಿಯುವ ಯಂತ್ರ’ ಇರಬಹುದು, ಆರೋಗ್ಯಕ್ಕೆ ಸಂಬಂಧಿಸಿದ ಅಮೇರಿಕದ ಮೂಲನಿವಾಸಿಗಳ ಮೆಡಿಸಿನ್ ವೀಲ್ ಆಗಿರಬಹುದು, ಭಾರತದಲ್ಲಿ ಅತಿವಿರಳವಾಗಿರುವ ‘ಲ್ಯಾಬಿರಿಂತ್’ ಪ್ರಯೋಗ ವಿರಬಹುದು, ಉಹಾಶೋಧದ ಶೋಧನೆ -ತರಬೇತಿಯಂತಹ ವಿಚಾರವಾಗಿರಬಹುದು, ಕಸದಿಂದ ರಸ ತೆಗೆಯುವ ಜಾಣ್ಮೆಯ ತಂತ್ರವಿರಬಹುದು, ರೋಟರಿಯಂತಹ ಸಂಸ್ಥೆಗಳ ಮೂಲಕ ಮಾಡಿರುವ ಸಮಾಜ ಸೇವೆಯ ವಿಚಾರವೇ ಇರಬಹುದು ಎಲ್ಲಾ ಕಡೆಗಳಲ್ಲೂ ತಮ್ಮ ಕ್ರಿಯಾಶೀಲತೆ (creativity)ಯಿಂದ ಮಿಂಚಿದವರು – ಶಹಬ್ಬಾಸ್ ಪಡೆದವರು.

ದೇಶ-ವಿದೇಶಗಳಲ್ಲಿ ಗೌರವಕ್ಕೆ-ಮನ್ನಣೆಗೆ ಪಾತ್ರರಾದ ಡಾ ಎಲ್.ಸಿ. ಸೋನ್ಸ್ ತಮ್ಮ ಸರಳತನದಿಂದಾಗಿ ಎಲ್ಲರಿಗೂ ಬೇಕಾದವರು. ಮೂಡುಬಿದಿರೆ ಪರಿಸರದ ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಒಬ್ಬರಾಗಿ ಮಾನ್ಯರಾಗಿದ್ದಾರೆ. ಅವರು ಕಂಡ ಕಡಲಕೆರೆಯ ನವನಿರ್ಮಾಣದ ಕನಸುಗಾರಿಕೆ ಈ ಪರಿಸರಕ್ಕೆ ನವಚೈತನ್ಯದ ಚಿಲುಮೆಯಾಗಿದೆ.

ಕೃಷಿ ಕುಟುಂಬದಲ್ಲಿ ಜನಿಸಿದ, 2-3 ಮೈಲು ನಡೆದೇ ಸಾಗಿ ಶಿಕ್ಷಣ ಮುಗಿಸಿದ ಸೋನ್ಸ್ ಈಗ ಬೆಳೆದು ನಿಂತಿರುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಯಾವುದೇ ಕ್ಷೇತ್ರದಲ್ಲಿ ಮುಂದಾಲೋಚನೆ, ಸಕಾಲಿಕ ತರ್ಕ-ಪೂರಕ ಪ್ರಯೋಗ ಅದೆಂತು ಪರಿಣಾಮಕಾರಿ ಎಂಬುದಕ್ಕೆ ಜೀವಂತ ನಿದರ್ಶನವಾಗಿ ಅವರು ಕಾಣುತ್ತಾರೆ. ಅವರನ್ನು ಬಲ್ಲವರು “ನಡೆದಾಡುವ ಕೃಷಿ ಜ್ಞಾನಕೋಶ” ಎಂದು ಹೇಳುವುದಿದೆ. ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ಪತ್ರಕರ್ತ-ಉದಯವಾಣಿ ಸುದ್ದಿಗಾರ ಧನಂಜಯ ಮೂಡುಬಿದಿರೆ ಅವರಿಗೆ ಇವರು ‘ಕೃಷಿಯ ಋಷಿ’ಯಾಗಿ ಕಂಡಿದ್ದಾರೆ.

ಪತ್ರಿಕೆಗಳು, ಆಧುನಿಕ ವಿದ್ಯುನ್ಮಾನಗಳಾದ ಅಂತರ್‌ಜಾಲ ತಾಣ ಪತ್ರಿಕೆಗಳು, ಟಿ.ವಿ. ಮಾಧ್ಯಮಗಳು ಸೋನ್ಸ್ ಸಾಧನೆಯ ಝಲಕುಗಳನ್ನು ಪ್ರಸಾರ ಮಾಡಿವೆ, ಬಿತ್ತರಿಸಿವೆ, ಪ್ರಶಂಸಿಸಿವೆ. ಜಾರುತ್ತಿರುವ ವಯಸ್ಸಿನಂತೆ ಉತ್ಸಾಹ ಬತ್ತದಿರುವಂತೆ ಪ್ರೋತ್ಸಾಹದ ಪ್ರಶಂಸೆಯ ಚೆನ್ನುಡಿಯ ಸೇಸೆ ಹಾಕಿ ಹುರಿದುಂಬಿಸುತ್ತಿವೆ.

‘ಜನವಾಹಿನಿ’ ದೈನಿಕದ ಪ್ರಧಾನ ವರದಿಗಾರನಾಗಿದ್ದ ವೇಳೆ ಸೋನ್ಸ್ ಅವರ ಊಹಾ ಶೋಧದ ತರಬೇತಿಯ ನೆಪದಲ್ಲಿ ಒಂದು ದಿನ ಅವರೊಂದಿಗೆ ಅವರ ತೋಟದಲ್ಲಿ ಕಳೆದ ಕ್ಷಣಗಳು ಇಂದಿಗೂ ನೆನಪಿವೆ. ‘ಮರದಲಿ ಮಾಡಿದ ಚಂದದ ಮನೆ’ ಊರು ಕೇರಿ ಅಂಕಣದಲ್ಲಿ ಪ್ರಕಟಗೊಂಡಿತ್ತು. ಯಾರನ್ನಾದರೂ ತಮ್ಮತ್ತ ಸೆಳೆಯಬಲ್ಲ, ಆಕರ್ಷಕ ಗುಣಗಳನ್ನು ಅಂದೇ ಅವರಲ್ಲಿ ಗುರುತಿಸಿದ್ದೆ. ಆ ದಿನದಿಂದ ಇಂದಿನವರೆಗೆ ನಂದಿನಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅಂತೆಯೇ ಸೋನ್ಸ್ ಫಾರ್ಮ್‌ನಲ್ಲಿ ಅಪಾರ ಬದಲಾವಣೆಗಳು, ಸುಧಾರಣೆಗಳು, ಪ್ರಯೋಗಗಳೂ ನಡೆದೇ ಇವೆ. ಸೋನ್ಸ್‌ರಿಗೆ ವಯಸ್ಸು ಸ್ವಲ್ಪ ಜಾಸ್ತಿಯಾಗಿದೆ, ಆದರೆ ಅವರ ಉತ್ಸಾಹಕ್ಕೆ ಅದು ಪರಿಣಾಮ ಬೀರುವಷ್ಟು ಅಲ್ಲ.

ಅಂದು ಅಮೇರಿಕಾದ ಮೊಂಟಾನಾ ವಿಶ್ವವಿದ್ಯಾಲಯದ ಘಟಿಕೋತ್ಸವದ ಸಂಭ್ರಮದಲ್ಲಿ ಭಾರತದ ವಿದ್ಯಾರ್ಥಿಯೊಬ್ಬರ ಹೆಸರು ಕರೆದಾಗ ಅವರು ಅಲ್ಲಿರಲಿಲ್ಲ. ಕಲಿಕೆ ಮುಗಿಸಿ ಊರಿಗೆ ಬರುವ ಲೆಕ್ಕಾಚಾರ ಹಾಕಿದ್ದ ಆ ಕ್ಷಣಗಳಿಗಿಂತ ಸಾಕಷ್ಟು ಮೊದಲೇ ಹೊರಟಾಗಿತ್ತು. ಅಮೇರಿಕಕ್ಕೆ ಬರುವ ಹಾದಿಯಲ್ಲಿ ಪಡೆದ ಶ್ರೀಮಂತ ಅನುಭವವನ್ನು ಊರಿಗೆ ಮರಳುವಾಗಲೂ ಪಡೆಯಲು ಇಚ್ಛಿಸಿದರು. ಬರುವಾಗ ಭೇಟಿ ನೀಡಲು ಸಾಧ್ಯವಾಗದಿದ್ದ ಇಂಗ್ಲೆಂಡ್‌ಗೂ ಭೇಟಿ ನೀಡಿದರು. ಗೆಳೆಯನ ಕಾರಲ್ಲಿ 2000-3000 ಕಿ.ಮೀ. ಕ್ರಮಿಸಿ ಯುರೋಪ್ ಸುತ್ತಿದರು. ಮುಂದೆ ತನ್ನ ಕೃಷಿ ಸಾಧನೆಯಿಂದಾಗಿ ತಾನು ಕಲಿತ ವಿ.ವಿ.ಯಿಂದ ‘ಶ್ರೇಷ್ಠ ಹಳೆವಿದ್ಯಾರ್ಥಿ’ ಗೌರವ ಸಿಗಬಹುದೆಂದು ಅವರು ಆಗ ಯೋಚಿಸಿಯೂ ಇರಲಾರರು. ಯಾವ ವೇದಿಕೆಯಲ್ಲಿ ಪಿಹೆಚ್.ಡಿ. ಯಂತಹ ಸಾಮಾನ್ಯ ಪದವಿ ಪಡೆಯಲು ಉಪಸ್ಥಿತಿರಲಿಲ್ಲವೋ ಅದೇ ವೇದಿಕೆಯಲ್ಲಿ 2000 ಇಸವಿಯಲ್ಲಿ ಘಟಿಕೋತ್ಸವದ ಸಂದರ್ಭದಲ್ಲೇ ಆ ಗೌರವ ಪಡೆದಾಗ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ವಿ.ವಿ. ತಮ್ಮ ಸಾಧನೆಯನ್ನು ಗುರುತಿಸಿ ಅಭಿಮಾನದಿಂದ ಬೀಗಿ, ಗೌರವದಿಂದ ಬಾಗಿ ಶ್ರೇಷ್ಠತೆಯ ಪದವಿ ನೀಡಿದಾಗ ಸೋನ್ಸ್ ಅವರಿಗೆ ತಾವು ಕೃಷಿಯಲ್ಲಿ ತೊಡಗಿಸಿಕೊಂಡ ಬಗೆಗೆ ಧನ್ಯತೆ. ಅವರು ಈ ಗೌರವ ಪಡೆದ ಮೊದಲ ಭಾರತೀಯ ಎಂಬುದು ನಮಗೆ ಅಭಿಮಾನ.

ಭಾರತದ ಪಡುಮಾರ್ನಾಡು ಎಂಬ ಪಂಚಾಯತ್ ವ್ಯಾಪ್ತಿಯ ಹಳ್ಳಿಯಲ್ಲಿದ್ದು ಕೊಂಡು ಅಮೇರಿಕಾದ ವಿ.ವಿ.ಯವರೆಗೆ ಮುಟ್ಟುವ ಸಾಧನೆ ಮಾಡಿದ ಸೋನ್ಸ್‌ರಿಗೆ ಮನದಾಳದ ಅಭಿನಂದನೆಗಳು. ಕನ್ನಡ ನಾಡಿನ ಸಾಧಕರ, ಕರಾವಳಿಯ ಹೆಮ್ಮೆಯ ಕುವರರ ಸಾಧನೆಯನ್ನು ದಾಖಲಿಸುವ ಕಾಂತಾವರ ಕನ್ನಡ ಸಂಘದ ಸಾಹಸ ‘‘ನಾಡಿಗೆ ನಮನ’’ ಪುಸ್ತಕಮಾಲೆ. ಈ ಮಾಲೆಯ ಮೊದಲ ಶತಕರ್ಧದಲ್ಲಿ ಸ್ಥಾನ ಪಡೆದು ಗುರುತಿಸಲ್ಪಟ್ಟಿರುವುದು ಹೆಮ್ಮೆಯ ವಿಚಾರವೇ ಆಗಿದೆ.

ಅಂದು ವಿ.ವಿ.ಯಿಂದ ಶಿಕ್ಷಣ ಮುಗಿಸಿ ಜೊತೆಗೂಡಿ ವಾಹನ ಚಲಾಯಿಸಿಕೊಂಡೇ ಯೂರೋಪ್ ಪ್ರವಾಸ ಮಾಡಲು ಸಾಥ್ ನೀಡಿದ ಗೆಳೆಯ ಕ್ರಿಸ್‌ಯಾರೊ ಇಂದಿಗೂ ಸಂಪರ್ಕದಲ್ಲಿದ್ದಾರೆ. ಅವರು ದೂರದ ಇಂಗ್ಲೆಂಡ್‌ನಿಂದ ಇಲ್ಲಿಗೆ ಬಂದಿದ್ದಾರೆ. ಇವರೂ ಅವರ ಮನೆಗೆ ಭೇಟಿ ನೀಡಿದ್ದಾರೆ. ವಿಶ್ವದ ವಿವಿಧ ಕೃಷಿ-ಶೋಧಕ ಮನಸ್ಸುಗಳು ಅವರ ಜೊತೆ ಸಂಪರ್ಕದಲ್ಲಿರುವುದು ಅದಕ್ಕಿಂತಲೂ ಹೆಚ್ಚಿನ ಹೆಮ್ಮೆಯ ಸಂಗತಿ.

ಮದುವೆ… ಮಕ್ಕಳು ಇತ್ಯಾದಿ

ವಿದೇಶದಲ್ಲಿ ಕಲಿತು ಹಿಂತಿರುಗಿದ ಅಣ್ಣನಿಗಾಗಿ ತಂಗಿ ವಧು ಶೋಧ ಆರಂಭಿಸಿದ್ದರು. ಪರಿಚಯವಿರುವ ಮಂಗಳೂರಿನ ಒಂದು ಹುಡುಗಿಯ ಬಗ್ಗೆ ಪ್ರಸ್ತಾಪ ನೀಡಿದಳು. ಬಿ.ಎಸ್ಸಿ; B.Ed. ಆಗಿದ್ದ ಸುಗುಣೆ ಬೆನಿಟಾ ವಧುವೆಂದು ನಿಶ್ಚಿತವಾಯಿತು. 1968ರಲ್ಲಿ ಸೋನ್ಸ್ ಬೆನಿಟಾರೊಂದಿಗೆ ದಾಂಪತ್ಯ ಪ್ರವೇಶಿಸಿದರು. ಪತಿಯ ಆಶಯಕ್ಕೆ ನೆರಳಾಗಿ ನಿಂತ ಮಿತಮಾತಿನ, ಬೆನಿಟಾ ಅವರ ಅರ್ಧಾಂಗಿಯಾಗಿ ಬಾಳನ್ನು ಬೆಳಗಿದರು.

ಸೋನಿಯಾ, ಸುನಿಲ್, ವಿನೋದ್, ಸಹನಾ ನಾಲ್ವರು ಮಕ್ಕಳು. ಎಲ್ಲರೂ ಉತ್ತಮ ಶಿಕ್ಷಣ ಪಡೆದವರು. ವಿನೋದ್ ತಂದೆಯಂತೆಯೇ ಕೃಷಿ ಆಸಕ್ತರಾಗಿ ಕೃಷಿಯಲ್ಲಿ ಎಂ.ಎಸ್ಸಿ ಪಡೆದು ತಂದೆಯೊಂದಿಗೆ ಕೃಷಿನಿರತರಾಗಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಸೋನಿಯಾ ಬಳ್ಳಾರಿಯಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದು ಅಲ್ಲಿ ‘ಜೆನೆಸಿಸ್ ಸ್ಕೂಲ್’ ಹೆಸರಿನ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸುನಿಲ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ಅಲ್ಲಿಯೇ ವಾಸಿಸುತ್ತಿದ್ದಾರೆ. ಕೊನೆಯ ಮಗಳು ಸಹನಾ ವಿವಾಹವಾಗಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪತಿಯೊಂದಿಗೆ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದಾರೆ. ಸೋನ್ಸ್ ತಮ್ಮ ಪತ್ನಿ ಬೆನಿಟಾರೊಂದಿಗೆ ಅಲ್ಲಿ 2009ರಲ್ಲಿ ಒಂದೆರಡು ತಿಂಗಳು ಇದ್ದು ಬಂದಿದ್ದಾರೆ. ಸುನಯನಾ, ಮನೀಶ್, ದಿಯಾ, ಅದಿತಿ ಅಜ್ಜನ ಪ್ರೀತಿಯ ಮೊಮ್ಮಕ್ಕಳು.

ಪತ್ನಿ ಕಂಡಂತೆ….

ಸೋನ್ಸ್ ಅವರಂತಹ ವ್ಯಕ್ತಿಯನ್ನು ಪತಿಯಾಗಿ ಪಡೆದುದರ ಬಗ್ಗೆ, ಸುಂದರ ಪರಿಸರ, ವಾತಾವರಣದಲ್ಲಿ ಬದುಕುತ್ತಿರುವ ಬಗ್ಗೆ, ಎಲ್ಲದರ ಬಗೆಗೂ ಸಾರ್ಥಕತೆಯ ಭಾವ ಪತ್ನಿ ಬೆನಿಟಾರ ಮುಖದಲ್ಲಿ. ‘‘ಕುಶಲ ವ್ಯಾಪಾರಿ ಎಂಬ ಶಬ್ದದ ಬಗೆ ಇದೊಂದು ಖಂಡಿತಾ ಅಲ್ಲ. ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡುವುದು ಸೋನ್ಸ್ ಅವರಿಗೆ ಸಾಧ್ಯವಾಗಿಲ್ಲ’’ ಎಂಬ ಎರಡು ವಾಕ್ಯಗಳನ್ನು ಬಿಟ್ಟರೆ ಮನೆಗೆ ಭೇಟಿ ನೀಡಿದ ಅವಧಿಯಲ್ಲಿ ಬೇರೆೇನನ್ನೂ ಅವರು ಉಚ್ಚರಿಸಿದ್ದಿಲ್ಲ. ಹೌದು ಪ್ರತಿ ಕೃಷಿಕರ ಪತ್ನಿಯರು-ಮನೆಯವರೂ ತಮ್ಮ ಕೃಷಿ ಉತ್ಪನ್ನಕ್ಕೆ ಉತ್ತಮ ಬೆಲೆ ಬರಬೇಕು ಎಂದು ಹಾರೈಸುವುದರ ರೂಪಕ ಈ ಮಾತಾಗಿರಬೇಕು. ಪತಿಯ ಕಠಿಣ ಶ್ರಮ, ಪ್ರಯೋಗಶೀಲತೆ ಹಾಗೂ ಸಾಧನೆಯ ಬಗೆಗೆ ಅವರ ಮಾತಲ್ಲಿ ತೂಕದ ಪ್ರಶಂಸೆ ಇದ್ದೇ ಇತ್ತು.

ತರಂಗ ಪತ್ರಿಕೆಯ ಪ್ರಯೋಗ

ಜನಪ್ರಿಯ ‘ತರಂಗ’ ವಾರಪತ್ರಿಕೆ ಮೂಡುಬಿದಿರೆಯ ‘ಸೋನ್ಸ್ ಕೃಷಿಲೋಕ ದಲ್ಲೊಂದು ದಿನ’ ಎಂಬ ಪ್ರಯೋಗವನ್ನು ಮಾಡಿ 25 ವರ್ಷ ಕಳೆದಿದೆ. ಆ ದಿನ ತರಂಗದ ಸಂಪಾದಕ ಮಂಡಳಿ ಇವರ ತೋಟದಲ್ಲಿ ಒಂದು ಇಡೀ ದಿನ ಕಳೆದು ಒಂದು ಪಿಕ್‌ನಿಕ್ ಜೊತೆ ವಿಷಯಗಳನ್ನು ಕಲಿತು 7 ಪುಟಗಳ ಲೇಖನ ಪ್ರಕಟಿಸಿತ್ತು. ಪತ್ರಿಕಾ ಮಾಧ್ಯಮವೊಂದರ ಪ್ರಯೋಗಕ್ಕೆ ಆಯ್ಕೆಯಾಗಿದ್ದರು, ಸೋನ್ಸ್. ಶರತ್ ಕಲ್ಕೊಡ್, ಪಿ. ಸುರೇಶ್ ಮಲ್ಯ, ತಿಲಕನಾಥ ಮಂಜೇಶ್ವರ ತಲಾ ಒಂದೊಂದು ಲೇಖನವನ್ನು ದಾಖಲಿಸಿ ಸೋನ್ಸ್ ಫಾರಂ ಎಂಬ ಸಸ್ಯ ವಿಶ್ವವನ್ನು ಜಗತ್ತಿಗೆ ಪರಿಚಯಿಸಿದ್ದರು.

ಹೀಗೊಂದು ಸ್ವಾರಸ್ಯ

ಅಮೇರಿಕಾದಲ್ಲಿ ಪಿಹೆಚ್.ಡಿ.ಗಾಗಿ ಅಧ್ಯಯನ ಮಾಡುತ್ತಿದ್ದ ಕಾಲ. ಕೆನಡಾದಲ್ಲಿನ ಸಸ್ಯಶಾಸ್ತ್ರ ವಿಚಾರ ಸಂಕಿರಣಕ್ಕಾಗಿ ತೆರಳುತ್ತಿದ್ದರು. ಫೆರ್ರಿ ಬೋಟ್‌ನಲ್ಲಿ ಹೋಗುತ್ತಿದ್ದಾಗ ಭಾರತದವರೊಬ್ಬರು ಸಿಕ್ಕಿದರು. ಮಾತಿಗೆ ಮಾತು ಮುಂದುವರಿಯುತ್ತಾ ಕರ್ನಾಟಕ ದವರೆಂದು ತಿಳಿಯಿತು. ಅವರು ಮಾತನಾಡುತ್ತಾ ನಾನು ಉಡುಪಿ ಎಂ.ಜಿ.ಎಂ.ನಲ್ಲಿ ಕಲಿತವ. ಹಾಗಾಗಿ ಕರಾವಳಿಯ ನಂಟು ಇದೆ ಎಂದರು. ಯಾವಾಗ, ಯಾರೆಲ್ಲ ನಿಮಗೆ ಕಲಿಸುತ್ತಿದ್ದರು ಎಂದಾಗ ಉಪನ್ಯಾಸಕರ ಪಟ್ಟಿ ಕೊಡುತ್ತಾ ಸೋನ್ಸ್‌ರ ಹೆಸರನ್ನು ಹೇಳಿದರು. ಆದರೆ ಆ ಮನುಷ್ಯನಿಗೆ ತನ್ನೆದುರು ಇರುವ ಸಸ್ಯವಿಜ್ಞಾನಿಯೇ ಆ ಸೋನ್ಸ್ ಎಂಬ ಬಗ್ಗೆ ಗೊತ್ತಿರಲಿಲ್ಲ. ಕೊನೆಗೆ ಗೊತ್ತಾದಾಗ ಇಬ್ಬರೂ ನಕ್ಕರಂತೆ. ಸಂತೋಷದಿಂದ ಪ್ರಯಾಣ ಬೆಳೆಸಿದರು. ಸ್ವಾರಸ್ಯಕರ ಘಟನೆ, ಮರೆಯಲಾರದ ಘಟನೆ, ಮರೆಯಲಾರದ ಸಂತಸದ ಕ್ಷಣ ನೆನಪಿಸಿ ಎಂದರೆ ಎಲ್ಲವನ್ನು ಸಮನಾಗಿ ಕಾಣುವ ಸೋನ್ಸ್‌ರಿಗೆ ಯಾವುದೂ ಭಿನ್ನವಾಗಿ ಕಾಣದಿರುವುದೇ ಸಹಜ. ಮತ್ತೆ ಮತ್ತೆ ಕೇಳಿದಾಗ ನೆನಪಾದ ಘಟನೆ ಇದು. ಉಪನ್ಯಾಸಕರಿಗೆ ಹೋದಲ್ಲೆಲ್ಲ ಶಿಷ್ಯ ಸಂಪತ್ತು ಎಂದು ಒಂದು ಸಂತಸದ ನಗು ಬೀರಿದರು.

ಹುಟ್ಟಿದ್ದು

ಬ್ರಿಟಿಷರ ಆಡಳಿತ ಕಾಲ. ಜರ್ಮನ್ ಮಿಶನರಿಗಳಿಗೆ ಸೇರಿದ್ದ ಬನ್ನಡ್ಕದ ಕೃಷಿಭೂಮಿಯ ಉಸ್ತುವಾರಿ ನೋಡುತ್ತಿದ್ದ ಆಲ್ಪ್ರೇಡ್ ಸೋನ್ಸ್ ಮತ್ತು ಶಾಂತಮ್ಮ ದಂಪತಿಗಳ ಮೊದಲ ಮಗನಾಗಿ 4-4-1934ರಂದು ಸೋನ್ಸ್ ಜನಿಸಿದರು. ಕುಟುಂಬದ ಹಿರಿಯ ಮಗ, ಪ್ರೀತಿಯ ಕುವರ. ತಂದೆ ಕೃಷಿಯಲ್ಲಿ ಡಿಪ್ಲೋಮಾ ಪಡೆದವರು. ತಾಯಿ ಹೊಮಿಯೋಪಥಿಕ್ ಸೇವೆ ಮಾಡುತ್ತಿದ್ದರು.

ಇಬ್ಬರು ತಂಗಿಯಂದಿರು. ಬಹಳ ಸಮಯದ ಬಳಿಕ ತಮ್ಮ ಇರ್ವಿನ್ ವಿ. ಸೋನ್ಸ್ ಹುಟ್ಟಿದರು. ನಾಲ್ಕು ಮಕ್ಕಳು ಜೊತೆಯಾಗಿ ಬೆಳೆದರು. ತಂದೆ ತಾಯಿಯಂತೆ ಉತ್ತಮ ಶಿಕ್ಷಣವನ್ನು ಪಡೆದರು. ಆಗ ಆಸ್ಪತ್ರೆಗಳೂ ದೂರವಿದ್ದ ಕಾಲ. ಈಗ ಸೋನ್ಸ್ ವಾಸಿಸುತ್ತಿರುವ ಮನೆಯ ಮುಂಭಾಗದಲ್ಲಿರುವ ಗ್ರಾಹಕ ಸೇವಾ ಕೇಂದ್ರವೇ ಆಗಿನ ಮನೆ. ಅಲ್ಲೇ ಸೋನ್ಸ್‌ರ ಜನನ, ಬಾಲ್ಯ.

ಪ್ರಾಥಮಿಕ ಶಾಲೆ

ಬನ್ನಡ್ಕದ ಬಾಸೆಲ್ ಮಿಶನ್ ಶಾಲೆಯಲ್ಲಿ ಆರಂಭದ ವಿದ್ಯಾಭ್ಯಾಸ. ಆಗ ಬಾಲವಾಡಿ -ಅಂಗನವಾಡಿ ಕೆ.ಜಿ.ಗಳು ಇಲ್ಲದ ಕಾಲ. 1ನೇ ಗೆ ನೇರವಾಗಿ ಸೇರ್ಪಡೆ. ಅಲ್ಲಿದ್ದ ಶ್ರೀಮತಿ ಫೆರ್ನಾಂಡಿಸ್ ಅವರ ಮಾರ್ಗದರ್ಶನ, ಪ್ರೀತಿಯ ಪ್ರೋತ್ಸಾಹ ಸೋನ್ಸ್‌ರಲ್ಲಿ ಅವರಿಗರಿವಿಲ್ಲ ದಂತೆ ಸ್ಫೂರ್ತಿ ತುಂಬಿತ್ತು. ಮಿಸೆಸ್ ಫೆರ್ನಾಂಡಿಸ್‌ರನ್ನು ಅವರು ಬಹಳ ಗೌರವದಿಂದ ಸ್ಮರಿಸಿಕೊಳ್ಳುತ್ತಾರೆ. ಕಲಿಕೆಯಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರು ಅವರು. ಐದನೇವರೆಗೆ ಅಲ್ಲೇ ಕಲಿಕೆ.

ಮರೆಯಲಾಗದ ಸೈಕಲ್

ಒಮ್ಮೆ ತೋಟದ ಕೆಲಸದವರೊಬ್ಬರೊಂದಿಗೆ ಶಾಲೆಗೆ ಹೋಗುತ್ತಿದ್ದರು. ಸೈಕಲ್‌ನ ಹಿಂದಿನ ಆಸನದಲ್ಲಿ ಎರಡು ಬದಿಗೂ ಕಾಲು ಹಾಕಿಕೊಂಡು ಆರಂಭವಾದ ಸೈಕಲ್ ಯಾನದ ಖುಷಿ ಅನುಭವಿಸುತ್ತಿದ್ದರು ಬಾಲಕ ಸೋನ್ಸ್.

ರಸ್ತೆ ನಡುವಿನ ಹೊಂಡಕ್ಕೆ ಸೈಕಲ್ ಬಿತ್ತು. ದೊಡ್ಡ ಅಪಘಾತವಾಗುವ ಸಾಧ್ಯತೆಯಿತ್ತು. ಎದ್ದು ನೋಡುವಾಗ ಕಾಲುಗಳಿಗೆ ಗಾಯವಾಗಿತ್ತು. ಆಗ ಆ್ಯಂಟಿ ಬಯೊಟಿಕ್ ಇಲ್ಲದ ಕಾರಣ ಒಂದು ತಿಂಗಳುಗಳ ಕಾಲ ಶಾಲೆಗೆ ಹೋಗಲಾಗಲಿಲ್ಲ. ಇದೊಂದು ಬಿಟ್ಟರೆ ಬಾಲ್ಯದ ಘಟನೆಗಳ ಬಗ್ಗೆ ಹೆಚ್ಚಿನ ನೆನಪುಗಳೇನು ಇಲ್ಲ ಎನ್ನುತ್ತಾರೆ ಅವರು.

ಅಲ್ಲಿಂದ ಮುಂದೆ ಜೈನ್‌ಶಾಲೆಗೆ ಸೇರ್ಪಡೆ. ಜೈನ್ ಹೈಸ್ಕೂಲ್ ಸೇರಿದಾಗ ಅಲ್ಲಿನ ಮುಖ್ಯೋಪಾಧ್ಯಾಯ ದೇವರಾವ್ ಎಂದರೆ ಎಲ್ಲರಿಗೂ ವಿಶೇಷ ಗೌರವ, ಒಂಥರಾ ಹೆದರಿಕೆ. ಅವರ ಆಂಗ್ಲ ಭಾಷಾ ಪಾಠವೆಂದರೆ ಎಲ್ಲರಿಗೂ ಇಷ್ಟ. ಮೊದಲಿನಿಂದಲೂ ಒಂದು ಶಿಸ್ತಿನೊಂದಿಗೆ ಬೆಳೆದ ಸೋನ್ಸ್‌ರಿಗೆ ಇಲ್ಲಿನ ವಾತಾವರಣ ಇಷ್ಟವಾಯಿತು. ಪೇಟೆಯ ಶಾಲೆ ಸೇರಿದ ಮೇಲಂತು 2-3 ಮೈಲುದ್ದ ದಾರಿ ಕ್ರಮಿಸಿ ಮನೆ ಸೇರುವುದು-ಶಾಲೆಗೆ ಬರುವುದೇ ದೊಡ್ಡ ದಿನಚರಿಯಾಗಿತ್ತು. ಹಾಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಕಲಿಕೆಯಲ್ಲಿ ಆಗ ಮೊದಲ ಸಾಲಿಗೆ ಬಂದಿದ್ದರೂ ತರಗತಿಗೆ ಮೊದಲಿಗನೇನು ಆಗಿರಲಿಲ್ಲ. ಅದು ಬಾಲಕ ಸೋನ್ಸ್‌ರಿಗೆ ಪ್ರಾಶಸ್ತ್ಯದ ವಿಷಯವೇ ಆಗಿರಲಿಲ್ಲ. ಅವರ ಗಮನ, ನಡೆದು ಸಾಗುವ ದಿನಚರಿಯ ಬಗೆಗೇ ಹೆಚ್ಚು ಕೇಂದ್ರೀಕರಿಸಿತ್ತು.

ಮಂಗಳೂರಲ್ಲಿ ಅರಳಿದ ಸೋನ್ಸ್

ಕೃಷಿ ಕುಟುಂಬ ಎಂದ ಕೂಡಲೇ ಕೇಳಬೇಕೆ ಮನೆಯಲ್ಲಿ ಕೆಲಸಗಳ ಒತ್ತಡ ಇದ್ದೇ ಇರುತ್ತದೆ. ಮೆಟ್ರಿಕ್ ಮುಗಿಸಿದಾಗ ಎಲ್ಲರೂ ಹುಡುಗ ಕಲಿಯುವುದಾದರೆ ಕಲಿಯಲಿ ಎಂಬ ನಿರ್ಧಾರಕ್ಕೆ ಬಂದಿದ್ದರು. ಹಾಗಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಇಂಟರ್ ಮೀಡಿಯೇಟ್ ಕಲಿಯಲು ತೆರಳಬೇಕಾಯಿತು.

ತಾಯಿಯ ತಂದೆ ಆನಂದ ಜೊಶ್ವಾ ಚರ್ಚ್‌ನಲ್ಲಿ ಪಾದ್ರಿಯಾಗಿ ಮಂಗಳೂರ ಲ್ಲಿದ್ದರು. ಅಲ್ಲಿಂದಲೇ ಕಾಲೇಜಿಗೆ ಹೋಗುವ ಅವಕಾಶವಾಯಿತು. ಅಲ್ಲಿ ಓದುವುದನ್ನು ಬಿಟ್ಟು ಬೇರೇನು ಕೆಲಸ ಇಲ್ಲದ್ದರಿಂದ ಮತ್ತು ಪೇಟೆಯ ವಾತಾವರಣ ಕಲಿಕೆಯಲ್ಲಿ ತೊಡಗಿಕೊಳ್ಳಲು ಹೆಚ್ಚು ಅಂಕ ಪಡೆಯಲು ಅನುಕೂಲವಾಗಿ ಪರಿಣಮಿಸಿತು.

ಪೇಟೆಯ ಮಕ್ಕಳೆಲ್ಲ ಇಂಗ್ಲಿಷ್ ಮಾತಾಡುತ್ತಿದ್ದರು. ಕನ್ನಡ ಮೀಡಿಯಂನಿಂದ ಬಂದ ಸಂಕೋಚದ ಹುಡುಗರು ಪ್ರತ್ಯೇಕ ಗುಂಪು ಕಟ್ಟಿಕೊಂಡೇ ಇರುತ್ತಿದ್ದರು. ಪರೀಕ್ಷೆ ಫಲಿತಾಂಶ ಬಂದಾಗ ಈ ಹುಡುಗರು ಉತ್ತಮ ಅಂಕ ಪಡೆದದ್ದು ಹುಮ್ಮಸ್ಸಿಗೆ ಕಾರಣವಾಯಿತು. ಸೋನ್ಸ್ ಆಗಲೇ ಟಾಪ್‌ಟೆನ್ ವಿದ್ಯಾರ್ಥಿಯಾಗಿದ್ದರು.

ಬೋಟನಿ, ಕೆಮೆಸ್ಟ್ರಿ, ಝುವಾಲಜಿ ಫಸ್ಟ್ ಕ್ಲಾಸ್ ಫಲಿತಾಂಶ. ಕುಟುಂಬಿಕರಿಗೆ ಸಂತಸ ತಂದಿತು. “ಆಗ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವೃಂದ ಪರೀಕ್ಷೆಯ ಫಲಿತಾಂಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿತ್ತು. ಫಲಿತಾಂಶವೂ ಚೆನ್ನಾಗಿತ್ತು. ಆಗಲೇ ಕಾಲೇಜಿಗೊಂದು ಹೆಸರಿತ್ತು” ಎಂದು ಕಾಲೇಜಿನ ಬಗೆಗೆ ನೆನಪಿಸುತ್ತಾರೆ.

ವಿಜ್ಞಾನದಲ್ಲಿ ಪದವಿ ಪಡೆಯುವ ಅವಕಾಶ ಮಂಗಳೂರಲ್ಲಿ ಇರಲಿಲ್ಲ. ಒಂದೋ ‘ಪಾಲ್‌ಘಾಟ್’ಗೆ, ಇಲ್ಲವೆ, ಮದ್ರಾಸ್‌ಗೆ ಹೋಗಬೇಕಾಗಿತ್ತು. ಮದ್ರಾಸ್‌ನ ಕ್ರಿಶ್ಚಿಯನ್ ಕಾಲೇಜಿಗೆ ಅವರು ಸೇರ್ಪಡೆಯಾದರು.

ಮಂಗಳೂರಿಂದ ಮದ್ರಾಸಿಗೆ

ಮದ್ರಾಸ್ಸಿಗೆ ಹೋದಾಗ ಭಾಷೆಯ ತೊಂದರೆಯಿರಲಿಲ್ಲ. ಇಂಗ್ಲಿಷ್ ಅಲ್ಲದೆ ಅನ್ಯ ಮಾರ್ಗವಿರಲಿಲ್ಲ. ಇಂಗ್ಲಿಷ್ ಮಾತಾಡುವುದು ಸುಲಭವಾಗುತ್ತಿದ್ದಂತೆ ಆತ್ಮವಿಶ್ವಾಸವೂ ಹೆಚ್ಚಿತು.

ಅಷ್ಟರವರೆಗೆ ನೋಟ್ಸ್-ಪಾಠವನ್ನೇ ಅವಲಂಬಿಸಿ ಕಲಿಯುವುದು ಪದ್ಧತಿಯಾಗಿತ್ತು. ಡಿಗ್ರಿಯಲ್ಲಿ ಎಲ್ಲವನ್ನು ವಿದ್ಯಾರ್ಥಿಗಳೇ ಪುಸ್ತಕಗಳ-ಉಪನ್ಯಾಸಕರ ಸಹಾಯದಿಂದ ಕಲಿಯಬೇಕಾಗಿತ್ತು. ತಮಗೆ ಬೇಕಾದ ನೋಟ್ಸ್ ಸಿದ್ಧಪಡಿಸಬೇಕಾಗಿತ್ತು.

ಅಲ್ಲಿ ಶ್ರೀಲಂಕಾ, ಮಲೇಶಿಯಾ ಮತ್ತು ಭಾರತದ ವಿವಿಧ ನಗರಗಳಿಂದ ಬಂದ ವಿದ್ಯಾರ್ಥಿಗಳಿದ್ದರು. ಹಾಗಾಗಿ ಅದೊಂದು ಜ್ಞಾನಾಸಕ್ತರಿಗೆ ಉತ್ತಮ ವಾತಾವರಣ. ಅದರ ಲಾಭ ಸೋನ್ಸ್‌ರಿಗಾಯಿತು. ಆರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ಸುಧಾರಿಸಿಕೊಂಡು ಉತ್ತಮ ಅಂಕ ಪಡೆದರು. ಆ ಅವಧಿಯಲ್ಲಿ ಅವರು ತಾಯಿಯನ್ನು ಕಳಕೊಂಡರು. ಆ ದುಃಖವನ್ನು ಸಹಿಸಿಕೊಂಡೇ ಅಂಕ ಪಡೆದು ಊರಿಗೆ ಮರಳಿದರು.

ಮರಳಿ ಮದ್ರಾಸಿಗೆ

ಉಡುಪಿಯಲ್ಲಿ ಮೂರು ವರ್ಷ ಕೆಲಸ ಮಾಡಿ ಮತ್ತೆ ಸ್ನಾತಕೋತ್ತರ ಪದವಿಗಾಗಿ ಮದ್ರಾಸು ಸೇರಬೇಕಾಯಿತು. ಇವರು 2 ವರ್ಷ ಓಡಿಯಾಡಿದ ಕಾಲೇಜು. ಹಾಗಾಗಿ ಮರು ಪಯಣ ಮೊದಲಿಗಿಂತ ಹೆಚ್ಚು ಸಂತೋಷದಾಯಕವಾಗಿತ್ತು. ಇಂಗ್ಲಿಷ್ ಕೂಡಾ ಚೆನ್ನಾಗಿ ಒಲಿದಿತ್ತು. ಕ್ರಿಶ್ಚಿಯನ್ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಮೊದಲ ಬ್ಯಾಚ್‌ನ ವಿದ್ಯಾರ್ಥಿ ಎಂಬ ಖುಷಿ. ಹಳೆವಿದ್ಯಾರ್ಥಿಯೆಂಬ ಕಾರಣದಿಂದ ಸುಲಭ ಪ್ರವೇಶ.

ಎರಡನೇ ಬಾರಿ ಮದ್ರಾಸ್‌ನ ವಾಸ, ಮದ್ರಾಸ್ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ಕಾಲೇಜು ಮೊದಲಾದೆಡೆ ಪಾಠಕ್ಕೆ ಹೋಗುವ ಅವಕಾಶ. ಎಲೆಕ್ಟ್ರಿಕಲ್ ರೈಲು ಪಾಸ್ ಇದ್ದುದರಿಂದ ತಿರುಗಾಟವೂ ಸುಗಮವಾಗಿತ್ತು.

ಕನ್ನಡಿಗ, ಸಾಹಿತಿ ಬಿ.ಜಿ.ಎಲ್. ಸ್ವಾಮಿಯವರು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಅಮೇರಿಕಾದಲ್ಲಿ ಹೆಸರು ಗಳಿಸಿದ್ದು, ಸೋನ್ಸ್ ಪಿ.ಜಿ.ಗೆ ಸೇರುವಾಗ ಪ್ರೆಸಿಡೆನ್ಸಿ ಕಾಲೇಜಿನ ಬಾಟನಿ ವಿಭಾಗದ ಮುಖ್ಯಸ್ಥರಾಗಿದ್ದರು. ಅದೂ ಕೂಡಾ ಕನ್ನಡಿಗನಾಗಿ ಸೋನ್ಸ್‌ರಿಗೆ ಅನುಕೂಲವಾಯಿತು. ಅಲ್ಲಿ ಪಲತ್ತಡ್ಕ ಕೇಶವ ಭಟ್ ಅವರು ಸೋನ್ಸ್‌ರ ಸಹಪಾಠಿ. ಅವರಿಬ್ಬರೂ ಸೇರಿ ಅಲ್ಲಿ ಗಿಡಗಳ ಬಗೆಗೆ, ಹಾವಸೆಗಳ ಕುರಿತು ಸಂಶೋಧನೆ ಮಾಡಿ ಕ್ಯಾಂಪಸ್‌ನಲ್ಲಿ ಒಂದಿಷ್ಟು ಖ್ಯಾತಿ ಪಡೆದಿದ್ದರು. ಹಾಗಾಗಿ ಪಾಠದ, ಗಿಡಗಳ ಕುರಿತ ಸಮಸ್ಯೆ ಯೇನಾದರೂ ಇದ್ದಾಗ ಪ್ರೊಫೆಸರ್‌ಗಳು ಕೂಡಾ ಇವರನ್ನೇ ತೋರಿಸುತ್ತಿದ್ದರು. ಹೀಗೆ… M.Sc… ಡಿಗ್ರಿ ಮುಗಿಸಿ ಊರಿಗೆ ಮರಳಿ ಬಂದು ಒಂದು ವರ್ಷ ತಂದೆಯೊಂದಿಗೆ ಕೃಷಿ ನಿರತರಾದರು.

ಮತ್ತೆ ಗರಿಗೆದರಿದ ಕನಸು

ಕಲಿಕೆಯಲ್ಲಿ ತೀರಾ ಮುಂದಿದ್ದ ಸೋನ್ಸ್ ಅವರಿಗೆ ಮದ್ರಾಸ್ ವಿ.ವಿ.ಯ ಪ್ರೊ. ಬಾದಾಮಿ ಪಿಹೆಚ್.ಡಿ.ಯಂತಹ ಶಿಕ್ಷಣ ಪಡೆಯಲು ಪ್ರೇರಣೆ ನೀಡಿದರು. ಸೋನ್ಸ್‌ರ ತಂದೆಯವರ ಬಗೆಗೆ, ಅವರ ಕೃಷಿ ಕಾಳಜಿಯಿಂದ ಪ್ರಭಾವಿತರಾಗಿದ್ದ ಕೆನರಾ ಬ್ಯಾಂಕ್‌ನ ಆಗಿನ ಚೇಯರ್‌ಮನ್‌ರ ತಮ್ಮ ಕಾರ್ಕಳದ ಮುಕುಂದ ಪ್ರಭು ಪದೇ ಪದೇ ಹೆಚ್ಚಿನ ಶಿಕ್ಷಣದ ಬಗ್ಗೆ ಒತ್ತುಕೊಟ್ಟು ಮಾತನಾಡುತ್ತಿದ್ದರು.

ಕೃಷಿಯನ್ನೇ ನಂಬಿದ್ದ ಕುಟುಂಬಕ್ಕೆ ಆರ್ಥಿಕವಾಗಿ ಅದು ಅಸಾಧ್ಯವಾಗಿತ್ತು. ಆಗ ಕನಸು ಗರಿಗೆದರಲು ಕಾರಣವಾದುದು ಅಮೇರಿಕಾದ ಫುಲ್ ಬ್ರೈಟ್ ಸ್ಕಾಲರ್ ಶಿಪ್. ಅದನ್ನು ಸನೆಟರ್ ಫುಲ್ ಬ್ರೈಟ್ ಎಂಬವರು ವಿದೇಶದ ವಿದ್ಯಾರ್ಥಿಗಳಿಗೆ ಅಮೇರಿಕಾದಲ್ಲಿ ಶಿಕ್ಷಣ ಮುಂದುವರೆಸಲು ಅನುಕೂಲವಾಗುವಂತೆ ಸ್ಥಾಪಿಸಿದ್ದರು. ಆ ಸ್ಕಾಲರ್‌ಶಿಪ್ ಸೋನ್ಸ್‌ರ ಬದುಕನ್ನು ಬದಲಾಯಿಸಿತು. ಉನ್ನತ ಶಿಕ್ಷಣಕ್ಕೆ ಒಂದಿಷ್ಟು ಹಣದೊಂದಿಗೆ ಅಮೇರಿಕಾದಲ್ಲಿ ಅವಕಾಶ ಇರುವುದನ್ನು ಖಚಿತ ಪಡಿಸಿಕೊಂಡ ಅವರು ಸ್ಕಾಲರ್‌ಶಿಪ್‌ನ ಪ್ರಯಾಣ ವೆಚ್ಚ ಭರಿಸುವ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿದರು. ದಕ್ಷಿಣ ಭಾರತ ಮಟ್ಟ ಮತ್ತು ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯೋಜನೆಗೆ ಆಯ್ಕೆಯಾದರು.

ಉಡುಪಿ ಎಂ.ಜಿ.ಎಂ. ಪ್ರೇರಣೆ

ಮದ್ರಾಸ್‌ನಲ್ಲಿರುವಾಗಲೇ ತಾಯಿಯನ್ನು ಕಳಕೊಂಡ ಸೋನ್ಸ್ ಊರಿಗೆ ಬಂದು ತಂದೆಯವರಿಗೆ ನೆರವಾಗುವ ನಿರ್ಧಾರಕ್ಕೆ ಬಂದಿದ್ದರು. ವಿಜ್ಞಾನದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮುಂದುವರಿಸುವುದನ್ನು ಬಿಟ್ಟು ಊರಲ್ಲಿಯೇ ಕೆಲಸ ಸಿಗುವಂತೆ ಅನುಕೂಲವಾಗಲು ಶಿಕ್ಷಕ ತರಬೇತಿ B.T.ಗೆ ಮಂಗಳೂರಿನಲ್ಲಿ ಡಿಗ್ರಿಯ ಬಳಿಕ ಸೇರಿಕೊಂಡರು.

B.T. ಮುಗಿಯುವಷ್ಟರಲ್ಲಿ ಪತ್ರಿಕೆಯೊಂದರಲ್ಲಿ ಜಾಹಿರಾತು ನೋಡಿದರು. ಉಡುಪಿಯ ಪ್ರತಿಷ್ಠಿತ ಕಾಲೇಜು ಎಂ.ಜಿ.ಎಂ.ನಲ್ಲಿ ಸಸ್ಯಶಾಸ್ತ್ರ ಕಲಿತವರು ಡೆಮೊನ್‌ಸ್ಟ್ರೇಟರ್ ಆಗಿ ಬೇಕಾಗಿದೆ ಎಂದಿತ್ತು. ‘ಪೈ’ ಪರಿವಾರದ ಕಾಲೇಜಲ್ಲಿ ಕೆಲಸ ಸಿಗುತ್ತದೆಯೋ? ಇಲ್ಲವೋ? ಎಂಬ ಗೊಂದಲದ ನಡುವೆ ಅರ್ಜಿ ಸಲ್ಲಿಸಿದರು. ಆಶ್ಚರ್ಯವೆಂಬಂತೆ ಯಾವುದೇ ಸಂದರ್ಶನ ಇತ್ಯಾದಿ ಇಲ್ಲದೆ ಕೆಲಸಕ್ಕೆ ಸೇರಲು ನೇಮಕಾತಿ ಪತ್ರ ಸಿಕ್ಕಿತು.

ಅಲ್ಲಿನ ಉಪನ್ಯಾಸಕರು Zoology (ಪ್ರಾಣಿಶಾಸ್ತ್ರ) ಕಲಿತವರು ಆಗಿದ್ದರು, ಸಸ್ಯಶಾಸ್ತ್ರ ಕಲಿತವರು ವಿಜ್ಞಾನ ವಿಭಾಗದಲ್ಲಿ ಇರಲೇಬೇಕೆಂಬ ನಿಯಮ ಅವರಿಗೆ ವರವಾಯಿತು. ಎಂ.ಜಿ.ಎಂ. ಕಾಲೇಜು ಸೇರಿದುದು ಅವರ ಮಾನಸಿಕ ವಿಕಾಸಕ್ಕೆ ಅವಕಾಶವಾಯಿತು. ಅಲ್ಲಿ ಎಲ್ಲರೂ ಸ್ನಾತಕೋತ್ತರ ಪದವಿಯವರೇ. ಹಾಗಾಗಿ ಉನ್ನತ ಶಿಕ್ಷಣದ ಕನಸು ಚಿಗುರೊಡೆಯಿತು. ತಾನೊಬ್ಬ ಇಲ್ಲಿ ಪಿ.ಜಿ. ಆಗದವನು ಎಂಬುದು ಕೊರತೆಯಾಗಿ ಕಾಡತೊಡಗಿತು. ಉನ್ನತ ಶಿಕ್ಷಣಕ್ಕೆ ಎಷ್ಟೆಲ್ಲ ಅವಕಾಶವಿದೆ ಎಂಬ ಅರಿವು ಅವರಿಗಾಯಿತು. “ಆಗ ಎಂ.ಜಿ.ಎಂ.ನಲ್ಲಿ ಸುಂದರರಾವ್ ಅವರು ಪ್ರಾಚಾರ್ಯರಾಗಿದ್ದರು. ಅಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿತ್ತು. ಹೆಚ್ಚಿನ ಕಲಿಕೆಯ ಕನಸು ಮೂಡಿದ್ದೇ ಹಾಗೆ” ಎಂದು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಮೂರು ವರ್ಷಗಳ ಸೇವೆಯ ನಂತರ ಮದ್ರಾಸ್‌ಗೆ ಎಂ.ಎಸ್ಸಿ.ಗಾಗಿ ತೆರಳಿದರು. ಕ್ರಿಶ್ಚಿಯನ್ ಕಾಲೇಜಿಗೆ ಅರ್ಜಿ ಹಾಕಿದ್ದರು. ಅವರು ಅದೇ ಕಾಲೇಜಿನ ಹಳೆ ವಿದ್ಯಾರ್ಥಿ ಯಾಗಿದ್ದುದು, ಹೊಸ ಬ್ಯಾಚ್ ಬೇರೆ. ಹೀಗೆ ಸುಲಭವಾಗಿ ಸೀಟ್ ಸಿಕ್ಕಿತು. ಎಂ.ಜಿ.ಎಂ.ನಲ್ಲಿ ಪಡೆದ ಸ್ಫೂರ್ತಿ, ತಾನು ಕಲಿತ ಕಾಲೇಜಲ್ಲಿಯೇ ಅವಕಾಶ ಅವರಿಗೆ ಮತ್ತಷ್ಟು ಹುರುಪು ನೀಡಿತು.

ಅಮೇರಿಕಾದ ಹಾದಿ… ಜ್ಞಾನ ದರ್ಶನ

ವಿದ್ಯಾರ್ಥಿ ವೇತನದ ‘ಟ್ರಾವೆಲ್ ಗ್ರ್ಯಾಂಟ್’ ಕಲಿಕೆಯ ಆಸಕ್ತಿಯುಳ್ಳ ಸೋನ್ಸ್‌ರಿಗೆ ಜ್ಞಾನದ ಹೊಸ ಬೆಳಕಿನ ದರ್ಶನಕ್ಕೆ ಕಾರಣವಾಯಿತು. ಮಂಗಳೂರು-ಅರ್ಕೊಣಂ ಜಂಕ್ಸನ್ ಮೂಲಕ ಮುಂಬಯಿಗೆ ಸೋನ್ಸ್ ತೆರಳಬೇಕಾಗಿತ್ತು. ಅಲ್ಲಿ ಒಂದು ವಾರ ಕಾಲ ಅಮೇರಿಕಾದ ತಜ್ಞರಿಂದ ದೇಶ-ಕೋಶ-ಜನಜೀವನ-ರಾಜಕೀಯ-ಸರ್ಕಾರದ ಬಗೆಗೆ ತರಬೇತಿಯಿತ್ತು. ಯಾವುದೇ ದೇಶಕ್ಕೆ ತೆರಳುವವರಿಗೆ ಈ ಜ್ಞಾನ ಅಗತ್ಯ ಮತ್ತು ಸಹಕಾರಿ.

ಅಲ್ಲಿಂದ ಹಡಗಿನಲ್ಲಿ ಮೂರು ವಾರಗಳ ಪಯಣ. ವಿಶ್ವದರ್ಶನ. ಆಳ ಸಮುದ್ರದ ನೀರ ಪರಿಸರದಲ್ಲಿ ಸಾಗುತ್ತಾ ‘ಏಡನ್’ ತಲುಪಿದಾಗ ಉದ್ದ ಗವನಿನಂತಹ ವೇಷ ಭೂಷಣದ ಜನ, ಒಂಟೆ ಯಾನ ನೋಡುವ ಅವಕಾಶ. ಯುದ್ಧದ ಬಳಿಕ ಆಗ ತಾನೆ ಸೂಯೇಜ್ ಕಾಲುವೆ ಹಡಗು ಯಾನಕ್ಕೆ ತೆರವಾಗಿತ್ತು.

ಕೈರೋದಲ್ಲಿ 10 ತಾಸುಗಳ ಭೂ ಯಾನ-ಸ್ಥಳ ದರ್ಶನ ಅವಕಾಶ ಜೊತೆಗಿತ್ತು. ಗಿಜ್ಜಾದಲ್ಲಿ ಪಿರಾಮಿಡ್‌ಗಳನ್ನು, ಈಜಿಪ್ಟಿಯನ್ ಸಂಗ್ರಹಾಲಯಗಳನ್ನು ನೋಡುವ ಅವಕಾಶ, ಹೊಸ ಪುಳಕ. ದೂರದಲ್ಲಿ ನೋಡುವಾಗ ಏನೂ ಅನಿಸದ, ಪಿರಮಿಡ್ ಬಳಿ ಬಂದಾಗ ನೀಡುವ ಅರಿವು ಆನಂದ ಅವರಿಗಾಯಿತು. ಎಷ್ಟೊಂದು ಅದ್ಭುತ ಎಂದು ಅವರಿಗೆ ಮನದಟ್ಟಾಯಿತು. 14 ಎಕ್ರೆ ವ್ಯಾಪಿಸಿರುವ 420 ಅಡಿಯ ಪಿರಾಮಿಡ್ ಸುತ್ತಮುತ್ತ ಜನ, ಒಂಟೆಯ ಮೇಲಿನ ಪಯಣ, ಹತ್ತಿರದ ನೋಟ ಅವರಿಗೆ ಹೊಸ ಲೋಕವನ್ನೇ ಕಾಣಿಸಿತು. ಇಟಲಿ, ರೋಮ್, ವ್ಯಾಟಿಕನ್ ದರ್ಶನ. ಅಲ್ಲಿ ಒಂದೆರಡು ದಿನ ಇರುವ ಅವಕಾಶವಿತ್ತು. ಅಲ್ಲಿನ ವಿದ್ಯಾರ್ಥಿಗಳು ಅವರನ್ನು ಎದುರುಗೊಂಡು ಅಲ್ಲಿನ ವಿಶೇಷಗಳು, ಆಹಾರ ವೈವಿಧ್ಯತೆಗಳನ್ನು ಪರಿಚಯಿಸುತ್ತಿದ್ದರು. ಮಾರ್ಗದ ಬದಿಯ ಹೊಟೇಲುಗಳಲ್ಲಿ ಆಹಾರ ಸೇವಿಸುತ್ತಾ ಸ್ಥಳೀಯ ಕಲಾವಿದರ ಹಾಡು, ನೃತ್ಯ ಇತ್ಯಾದಿಗಳನ್ನು ಬೀದಿ ಬದಿಯಲ್ಲಿಯೇ ಸವಿಯುವ ಅವಕಾಶ ಸಿಕ್ಕಿತು.

ಮತ್ತೆ ಹಡಗು ಸೇರಿ ಪ್ರಯಾಣ ಮುಂದುವರಿಸಲು ಅವರಿಗಾಗಿ ರೈಲೊಂದರಲ್ಲಿ ಮುಂಗಡ ಟಿಕೇಟು ಮಾಡಲಾಗಿತ್ತು. ಆದರೆ ಅದರಲ್ಲಿ ಆಸನ ಖಾಲಿ ಇರಲಿಲ್ಲ. ಕೆಲ ವಿದ್ಯಾರ್ಥಿಗಳೊಂದಿಗೆ ಸೋನ್ಸ್‌ರೂ ಕೂಡಾ ಅಲ್ಲಿದ್ದ ಅಮೇರಿಕಾ ದೂತಾವಾಸಕ್ಕೆ ತೆರಳಿ ಸಮಸ್ಯೆಯನ್ನು ತಿಳಿಸಿದರು. ಅಲ್ಲಿನ ಪ್ರಭಾವದಿಂದಾಗಿ ಮುಂದಿನ ರೈಲಿನಲ್ಲಿ ಟಿಕೇಟ್ ಸಿಕ್ಕಿತು.

ಅಮೇರಿಕನ್ ಎಂಬೆಸಿಯ ಪ್ರಭಾವದಿಂದಾಗಿ ಹಡಗು 20-30 ವಿದ್ಯಾರ್ಥಿ ಗಳಿಗಾಗಿ ಐದಾರು ಗಂಟೆ ಕಾಯಬೇಕಾಯಿತು. ಪ್ರಯಾಣಿಕರಂತೂ ವಿದ್ಯಾರ್ಥಿಗಳನ್ನು ದುರುಗುಟ್ಟಿ ನೋಡುತ್ತಾ, ಎಲ್ಲದಕ್ಕೂ ಇವರೇ ಕಾರಣ ಎಂಬ ಹಾಗೆ ನೋಡುತ್ತಿದ್ದರು.

ಯೂರೋಪ್‌ಗೆ ಬಂದು ಹೋಗುವ ವಿದ್ಯಾರ್ಥಿಗಳಿದ್ದ ಹಡಗಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮವಿತ್ತು. ಭಾರತದಿಂದ ಬಂದವರು ಭರತನಾಟ್ಯ, ಕಥಕ್ ನೃತ್ಯಗಳನ್ನು ವೇಷಭೂಷಣ ಸಹಿತ ಪ್ರದರ್ಶಿಸಿದರು. ವಿದೇಶಿ ವಿದ್ಯಾರ್ಥಿಗಳು ಕೂಡಾ ತಮ್ಮ ನೃತ್ಯ, ಸಂಗೀತ, ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದರು. ಸೋನ್ಸ್ ಅಲ್ಲಿ ಪ್ರತ್ಯೇಕ ಪ್ರದರ್ಶನ ನೀಡಲಿಲ್ಲ. ಆದರೆ ಅವರೊಂದಿಗೆ ಸೇರಿಕೊಂಡು ಸಂತಸ ಪಟ್ಟರು.

ಮೊದಲ ಹಡಗಿನ ಹಾದಿಯಲ್ಲಿ ಮತ್ತೊಂದು ಅವಿಸ್ಮರಣೀಯ ಘಟನೆ ನಡೆಯಿತು. ರಾತ್ರಿ ಹೊತ್ತು ಹಡಗು ಸಂಚರಿಸುವ ಹಾದಿಗೆ ಅನತಿ ದೂರದಲ್ಲಿಯೇ ವಿಶ್ವವಿಖ್ಯಾತ ‘ಸ್ಟ್ರಾಂಬೊಲಿ’ ಜ್ವಾಲಾಮುಖಿ ಮತ್ತು ‘ಎಟ್ನಾ’ ಜ್ವಾಲಾಮುಖಿಗಳನ್ನು ನೋಡುವ ಅವಕಾಶ ಅದಾಗಿತ್ತು.

ನ್ಯೂಯಾರ್ಕ್ ಬಂದರಿಗೆ ಹಡಗು ಬಂದಾಗ “ಸ್ಟ್ಯಾಚ್ಯೂ ಆಫ್ ಲಿಬರ್ಟಿ” ನೋಡಿದರೂ ಅಲ್ಲಿ ಇಳಿಯುವ ಅವಕಾಶ ಸಿಗಲಿಲ್ಲ. ನ್ಯೂಜೆರ್ಸಿಯ ಹೊಬೊಕೆನ್‌ನ ಮೂಲಕ ಅಮೇರಿಕಾ ಪ್ರವೇಶ ಪಡೆದರು. ಅಲ್ಲಿಂದ ಬಸ್‌ನಲ್ಲಿ ನ್ಯೂಯಾರ್ಕ್‌ಗೆ ತೆರಳಿದರು.

ಅಮೇರಿಕಾದಲ್ಲಿ ಮೊದಲ ದಿನ

ಅಮೇರಿಕಾದ ಪ್ರಮುಖ ಪಟ್ಟಣ ನ್ಯೂಯಾರ್ಕ್‌ನಲ್ಲಿ ಮೊದಲ ದಿನ ಕಳೆಯುವ ಅವಕಾಶ. ಗ್ರೇಹೌಂಡ್ ಹೆಸರಿನ ಬಸ್ ಸೇವೆ ಅಲ್ಲಿ ಆಗ ಇತ್ತು. ಸ್ವಯಂ ಸೇವಕರು ಬಂದು ಹೊಟೇಲಿಗೆ ಕರೆದೊಯ್ದರು. ಅರ್ಧ ಶತಕಕ್ಕಿಂತಲೂ ಮೊದಲೇ ಅಲ್ಲಿ ಮಾಳಿಗೆ ಬಸ್ ನಿಲ್ದಾಣವಿತ್ತು. ಬೇರೆ ಬೇರೆ ಊರಿಗೆ ಹೋಗುವ ಬಸ್‌ಗಳು ಬೇರೆ ಬೇರೆ ಮಾಳಿಗೆಗೆ ತೆರಳುತ್ತಿದ್ದುದು ವಿಸ್ಮಯವಾಗಿತ್ತು ಎಂದು ನೆನಪಿಸುತ್ತಾರೆ. ಅಲ್ಲಿ ಆಗ ಕಂಡ ಮತ್ತೊಂದು ವಿಶೇಷ ಎಂದರೆ ಆಟೋಮ್ಯಾಟಿಕ್ ರೆಸ್ಟಾರೆಂಟ್. ಅಲ್ಲಿ ಸೇವೆಗೆ ಮಾಣಿಗಳು ಯಾರು ಇರಲಿಲ್ಲ. ಕನ್ನಡಿ ಪೆಟ್ಟಿಗೆಗಳೊಳಗೆ ಆಹಾರ ಖಾದ್ಯಗಳನ್ನು ಇರಿಸಲಾಗಿತ್ತು. ಆಯಾ ಬೆಲೆಗೆ ಹೊಂದುವ ಕಾಯಿನ್ ಹಾಕಿ ಬೇಕಾದ ತಿಂಡಿ-ತಿನಸು ಪಡೆಯುವ ವ್ಯವಸ್ಥೆ ಅಲ್ಲಿತ್ತು. ಕುತೂಹಲದಿಂದಲೇ 2-3 ಐಟಂಗಳನ್ನು ಪಡೆದು ತಿಂದು ಬಂದದ್ದನ್ನು ಅವರಿನ್ನೂ ಮರೆತಿಲ್ಲ. ಅಲ್ಲಿಂದ ಭಾರತದಿಂದ ಬಂದ ವಿದ್ಯಾರ್ಥಿ ತಂಡದವರು ಅವರವರ ನಿಗದಿತ ಸ್ಥಳಗಳಿಗೆ ತೆರಳಿದರು.

ಮೊದಲ ವಿಮಾನಯಾನ

ನ್ಯೂಯಾರ್ಕ್ ಪಟ್ಟಣದಿಂದ ರೈಲಿನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ಅಲ್ಲಿಂದ ಮಧ್ಯ ಅಮೇರಿಕಾದ ಡೆನ್ವರ್‌ಗೆ ತೆರಳಬೇಕಾಗಿತ್ತು. ಅಲ್ಲಿಗೆ ಮುಟ್ಟುವಾಗ ನಡುರಾತ್ರಿ. ಪೂರ್ವದಿಂದ ಪಶ್ಚಿಮಕ್ಕೆ ತೆರಳುವಾಗ ಆಗುವ ಸಮಯ ವ್ಯತ್ಯಾಸವನ್ನು ಗಮನಿಸಿದರು. ಉದಾಹರಣೆಗೆ 3 ಗಂಟೆಗೆ ಹೊರಟು 3 ಗಂಟೆ ಪ್ರಯಾಣ ಮಾಡಿದರೂ 5 ಗಂಟೆಗೆ ತಲುಪುವ ವಿಚಿತ್ರ. ಅದು ವಿಶ್ವ ಸಮಯ ವ್ಯತ್ಯಾಸದಿಂದಾಗುವ ಪರಿಣಾಮ. ‘ಎಕ್ಸಪರಿಮೆಂಟ್ ಇನ್ ಇಂಟರ್‌ನ್ಯಾಶನಲ್ ಲಿವಿಂಗ್’ ಸಂಸ್ಥೆ ಅಮೇರಿಕಾಕ್ಕೆ ಬರುವ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗೆ ಹೊಂದುವಂತೆ ಒಂದು ವಾರ ವಾಸ ಮಾಡಲು ಅನುಕೂಲ ಮಾಡಿಕೊಟ್ಟಿತ್ತು. ಕೃಷಿ ಸಂಶೋಧನೆಗಾಗಿ ಬಂದಿದ್ದ ಅವರಿಗೆ ‘ಸ್ಟೀಮ್‌ಬೋಟ್ ಸ್ಪ್ರಿಂಗ್ಸ್’ ಎಂಬ ಊರಿನಲ್ಲಿ ದೊಡ್ಡ ಕೃಷಿ ಕುಟುಂಬದಲ್ಲಿ ವಾಸಿಸುವ ಅವಕಾಶ ಮಾಡಿಕೊಡಲಾಗಿತ್ತು.

ಆ ಕೃಷಿಕರು ವಿಮಾನ ನಿಲ್ದಾಣದಿಂದ 100-200 ಕಿ.ಮೀ. ದೂರದ ಅವರ ಊರಿಗೆ ಕಾರಲ್ಲಿ ಬಂದು ಕರೆದುಕೊಂಡು ಹೋದರು.

ಕೃಷಿ ಕುಟುಂಬದೊಂದಿಗೆ ವಾರ

ಕೃಷಿಯ ಬಗೆಗೆ ಶೋಧನೆಯ ಮನಸ್ಸು. ಸಿಕ್ಕಿದ ಅವಕಾಶವನ್ನು ಎಷ್ಟೇ ಕಷ್ಟವಾದರೂ ಬಾಚಿ ಬಿಡಬೇಕೆಂಬ ಉತ್ಸಾಹ. ಅಮೇರಿಕಾದ ಹಾದಿಯುದ್ದಕೂ ಕಣ್ಮನ, ಹೃದಯ, ಜ್ಞಾನ ಚಕ್ಷುವಿಗೂ ರಸದೌತಣ. ಈ ವಿದೇಶದ ನೆಲದಲ್ಲಿ ಅಲ್ಲಿನ ಅವರ ಸಂಶೋಧನೆ ಸಾಂಗವಾಗಿ ನೆರವೇರಲು ಹಳ್ಳಿ ವಾಸ ವ್ಯವಸ್ಥೆಯಾಗಿತ್ತು.

ಅಮೇರಿಕಾದ ಮುಖ್ಯ ಪಟ್ಟಣ ನ್ಯೂಯಾರ್ಕ್‌ನಲ್ಲಿ ಒಂದು ದಿನವಿದ್ದು ಡೆನ್ವರ್ ಪಟ್ಟಣಕ್ಕೆ ರಾತ್ರಿ ವಿಮಾನದಲ್ಲಿ ಬಂದಿಳಿದಾಗ ಕೃಷಿ ಕುಟುಂಬವೊಂದರ ಜೊತೆ ಕಳೆಯುವ ಸುಂದರ ಕ್ಷಣಗಳಿಗೆ ಮುನ್ನುಡಿ. ಡೆನ್ವರ್ ಪಟ್ಟಣದಿಂದ ಆ ಕೃಷಿ ಕುಟುಂಬದ ಸದಸ್ಯರು ಕಾರಿನಲ್ಲಿ ಕರೆದುಕೊಂಡು ಹೋದರು. ಮುಟ್ಟುವಾಗಲೇ ರಾತ್ರಿ 2.00 ಗಂಟೆ. 100-200 ಕಿ.ಮೀ. ದೂರದ ಹಾದಿ ಕ್ರಮಿಸಿ ಬಂದಿಳಿದದ್ದು ಸ್ಟೀಮ್ ಬೋಟ್ ಸ್ಪ್ರಿಂಗ್ಸ್ ಎಂಬ ಊರಿನಲ್ಲಿ. ಅವರದ್ದು 500 ಎಕರೆಯ ದೊಡ್ಡ ಫಾರ್ಮ್. ಆದರೆ ಕುರಿ ಸಾಕಣೆ ಮುಖ್ಯ ಕಸುಬು.

ಅದೇ ದಿನ ಮುಂಜಾವಿಗೆ ಆ ಊರಿಂದ 400-500 ಕಿ.ಮೀ. ದೂರದ ಊರಿನಲ್ಲಿ ನಡೆಯುವ ಕೃಷಿ ಮೇಳದಲ್ಲಿ ಭಾಗವಹಿಸಬೇಕಿತ್ತು. ಹಾಗಾಗಿ ಒಂದೆರಡು ಗಂಟೆ ನಿದ್ರೆ ಬಳಿಕ ಮತ್ತೊಂದು ಯಾನ. ಅಲ್ಲಿನ ಕೃಷಿ ಮೇಳದಲ್ಲಿ ಜಾನುವಾರುಗಳಿಗೆ ಹೆಚ್ಚಿನ ಆದ್ಯತೆ. ಕುರಿ ಏಲಂ ಮಾಡುವುದನ್ನು ನೋಡಿದ ಸೋನ್ಸ್‌ರಿಗೆ ಅಲ್ಲಿ ಅನೇಕ ಜಾತಿಯ ಕುರಿಗಳು ಮತ್ತು ಇತರ ಜಾನುವಾರುಗಳನ್ನು ನೋಡುವ ಅವಕಾಶ ಸಿಕ್ಕಿತು. ಒಂದು ದಿನ ಅಲ್ಲೇ ಕಳೆದು ಮತ್ತೆ ವಾಪಾಸ್ಸು.

ಆಗ ಬೇಸಗೆಯ ಕಾಲ. ಕುರಿಗಳಿಗೆ ಮೇವು ಕಟಾವು ಮಾಡಿ ಸಂಗ್ರಹಿಸುವ ಕೆಲಸ ನಡೆಯುತ್ತಿತ್ತು. ಸೋನ್ಸ್ ಹಳ್ಳಿಯ ಹಿನ್ನಲೆಯುಳ್ಳವರಾದ್ದರಿಂದ ಎಲ್ಲದಕ್ಕೂ ಸೈ. ಆ ಕಾಯಕವನ್ನು ಸಂತೋಷದಿಂದ ಅನುಭವಿಸಿ ಆ ಕುಟುಂಬಿಕರ, ಕೆಲಸಗಾರರ ಪ್ರೀತಿಗೆ ಪಾತ್ರರಾದರು.

ವಿ.ವಿ.ಯಲ್ಲಿ ನಾಲ್ಕು ಸಂವತ್ಸರ

ಅಮೇರಿಕಾದ ಕುರಿ ಸಾಕುವ ಬೃಹತ್ ಕೃಷಿಕ ಕುಟುಂಬದಲ್ಲಿ ಒಂದು ವಾರದ ಅನುಭವ ಪಡೆದು ಮೊಂಟಾನಾ ವಿ.ವಿ.ಗೆ ಬಂದರು ಸೋನ್ಸ್. ಅಲ್ಲಿ ಪ್ರೊ. ಚೆಸ್ಸಿನ್ ಅವರ ಶಿಷ್ಯತ್ವದೊಂದಿಗೆ ಪಿಹೆಚ್.ಡಿ. ಅಧ್ಯಯನ ಅವಕಾಶ. ತಿಂಗಳಿಗೆ 200 ಡಾಲರ್‌ನ ಗೌರವ ಧನ. ಅಷ್ಟರಲ್ಲಿ ಎಲ್ಲಾ ಖರ್ಚು, ವಿದ್ಯಾಭ್ಯಾಸದ ಫೀಸ್ ಹೊಂದಿಸಬೇಕಾಗಿತ್ತು. ಚೆಸ್ಸಿನ್ ಅವರ ಶಿಷ್ಯನ ಹೊಸ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಉಳಿಯುವ ಅವಕಾಶ. ಹಾಗಾಗಿ ನಡೆದೇ ವಿ.ವಿ.ಗೆ ಹೋಗಲು ಅನುಕೂಲ.

ಇಲ್ಲಿ ವಾರ್ಷಿಕ ಪರೀಕ್ಷಾ ಪದ್ಧತಿಯಿಂದ ಹೋದ ಸೋನ್ಸ್ ಅವರಿಗೆ ಅಲ್ಲಿನ ‘ಕ್ರೆಡಿಟ್ ಸ್ಕೀಮ್’ ತುಂಬಾ ಅನುಕೂಲವಾಗಿ ಪರಿಣಮಿಸಿತು. 3 ತಿಂಗಳಲ್ಲಿ ನಿಯಮದಂತೆ ಸಿಲೆಬಸ್‌ನ ಯಾವುದಾದರೂ ವಿಷಯಗಳನ್ನು ಅಧ್ಯಯನ ಮಾಡುವ ಅವಕಾಶ. ಮೊದಲ ಮೂರು ತಿಂಗಳಲ್ಲಿ ಉತ್ಕೃಷ್ಟ ದರ್ಜೆ (A)ಯೊಂದಿಗೆ ಸಿಕ್ಕ ನಾಲ್ಕು ಪಾಯಿಂಟ್‌ನಿಂದ ಅವರ ಉತ್ಸಾಹ ಇಮ್ಮಡಿಯಾಯಿತು. ಇಲ್ಲಿ ಮೊದಲಿಗಿಂತಲೂ ಹೆಚ್ಚಿನ ಸಾಧನೆ ಮಾಡಬಹುದು ಎಂಬ ಆತ್ಮವಿಶ್ವಾಸ ಹೆಚ್ಚಾಯಿತು.

ಒಂದು ಒಂದೂವರೆ ವರ್ಷವಾಗುವಾಗ ಅವರೊಂದು ಕಾರು ಹೊಂದಿದರು. ನಾಲ್ಕು ವರ್ಷಗಳ ಆ ಅವಧಿಯಲ್ಲಿ ಅಲ್ಲಿನ ಕೃಷಿಯ ವಿವಿಧ ಮಗ್ಗಲುಗಳು, ಮಾರಾಟ, ಪ್ರಯೋಗಗಳ ಜ್ಞಾನ, ಜೊತೆಗೊಂದು ಹೆಮ್ಮೆಯ ಪಿಹೆಚ್.ಡಿ. ಪದವಿ. ಅಲ್ಲಿನ ಟ್ರಾಫಿಕ್ ನಿಯಮಗಳು ಮತ್ತು ಪಾರ್ಕಿಂಗ್ ಸಮಸ್ಯೆಯಿಂದಾಗಿ ವಾಹನವನ್ನು ಮರಳಿ ಮನೆಯ ಹತ್ತಿರ ಪಾರ್ಕ್ ಮಾಡಿ ಸಿಟಿಗೆ ಸೈಕಲ್‌ನಲ್ಲಿ ತೆರಳಿದ್ದನ್ನು ಸೋನ್ಸ್ ಆಗಾಗ್ಗೆ ನೆನಪಿಸಿಕೊಳ್ಳುತ್ತಾರೆ.

ರೈತರ ಬದುಕು ಹಸನು – ಸೋನ್ಸ್ ಫಾರ್ಮುಲಾ

ಒಂದೇ ಬೆಳೆಗೆ ಹೊಂದಿಕೊಂಡಿರುವುದು ರೈತರ ಸಮಸ್ಯೆಯ ಮೂಲ ಎಂಬುದು ಸೋನ್ಸ್‌ರ ಶೋಧನೆ. ಬಹು ಬೆಳೆ ಅಥವಾ ವೈವಿಧ್ಯ ಬೆಳೆಗಳನ್ನು ಬೆಳೆಯುವುದೇ ಇದಕ್ಕೆ ಪರಿಹಾರ. ಇದೇ ನಿಜವಾಗಿಯೂ ಕೃಷಿಕರಿಗೆ ಇನ್ಶೂರೆನ್ಸ್.

ಸರ್ಕಾರ ವಿವಿಧ ಯೋಜನೆಗಳ ಮೂಲಕ ರೈತರ ಬೆಂಬಲಕ್ಕೆ ಬರಬಹುದು. ವಿವಿಧ ಬೆಳೆವಿಮಾ ಕಂಪನಿಗಳು ಸಹಾಯಕ್ಕೆ ನಿಲ್ಲಬಹುದು. ಆದರೆ ನಿಜವಾದ ಅರ್ಥದಲ್ಲಿ ಒಂದಕ್ಕಿಂತ ಹೆಚ್ಚು ಬೆಳೆ ಬೆಳೆಸುವುದು, ಪೂರಕ ಬೆಳೆ ಬೆಳೆಯುವುದು ಕೃಷಿಕರಿಗೆ ನಿಜವಾದ ಇನ್ಶೂರೆನ್ಸ್ – ಇದು ಸೋನ್ಸ್‌ರ ಖಚಿತ ಮಾತು. ಸಿಕ್ಕಿದಾಗಲೆಲ್ಲಾ ಈ ವಿಷಯವನ್ನು ಪುನರುಚ್ಚರಿಸುತ್ತಾರೆ ಅವರು.

ರೈತನಿಗೆ ಸಿಗುವ ಆದಾಯ ಕಡಿಮೆ ಆಗಿ, ಖರ್ಚು ಜಾಸ್ತಿಯಾದರೆ ಆದಾಯದ ಮೇಲೆ ಹೊಡೆತ ಬೀಳುತ್ತದೆ. ಅದಕ್ಕಾಗಿ ಮುಂಜಾಗ್ರತೆ ವಹಿಸಬೇಕು. ಯಾಂತ್ರೀಕರಣ ಸಹಾಯವನ್ನು ಅಗತ್ಯವಿರುವ ಮಟ್ಟದಲ್ಲಿ ಮಾಡಿಕೊಳ್ಳಬೇಕು. ಈಗಿನ ಪರಿಸ್ಥಿತಿಯಲ್ಲಿ ಆದಾಯದ ಬಹುತೇಕ ಅಂಶ ಮಧ್ಯವರ್ತಿಗಳ ಕೈಸೇರುತ್ತಿದೆ. ಮಧ್ಯವರ್ತಿಗಳು ಬೇಕು. ಆದರೆ ಅವರ ಪ್ರಭಾವ ಈಗಿನದಕ್ಕಿಂತ ಕಡಿಮೆಯಾಗಬೇಕಾದರೆ – ರೈತರ ನೇರ ಮಾರುಕಟ್ಟೆ ವ್ಯವಸ್ಥೆ ಬಲವಾಗಬೇಕು.

ಗ್ರಾಹಕರು ನೇರವಾಗಿ ರೈತರಿದ್ದಲ್ಲಿಗೆ ಬಂದು ತಮಗೆ ಬೇಕಾದ್ದನ್ನು ಕೊಂಡುಕೊಳ್ಳು ವಂತೆ ಆಗಬೇಕು. ಗ್ರಾಹಕರಿಗೂ ಪೇಟೆಗಿಂತ ಕೊಂಚ ಕಡಿಮೆ ಬೆಲೆಯಲ್ಲಿ, ಉತ್ತಮ ಗುಣಮಟ್ಟದ ವಸ್ತುಗಳು ಇಲ್ಲಿ ಸಿಗುತ್ತವೆ ಎಂಬ ಭಾವನೆ ಮೂಡಬೇಕು. ನೇರ ಗ್ರಾಹಕ ರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಬೇಕು. ಇದು ಅವರ ಸಲಹೆ.

ಕೆಲವು ಕಡೆ ರೈತರ ಸಂತೆಗಳು ನಡೆಯುತ್ತಿವೆ. ಅದರ ಉಪಯೋಗವೂ ರೈತರಿಗೆ ಆಗಿದೆ. ಸರ್ಕಾರ, ಸಹಾಯ ಎಂದಾಕ್ಷಣ ಸಬ್ಸಿಡಿಯ ನೆನಪು ನಮಗಾಗುತ್ತದೆ. ಅದರ ಬದಲು ರೈತರ ಉತ್ಪನ್ನಗಳಿಗೆ ಬೆಲೆ ಸಿಗುವ ಹಾಗೆ, ನೇರ ಮಾರಾಟಕ್ಕೆ ವ್ಯವಸ್ಥೆ, ಹೆಚ್ಚು ಹೆಚ್ಚು ಜನ ಕೃಷಿಯತ್ತ ಆಕರ್ಷಣೆ ಹೊಂದುವಂತಹ ಯೋಚನೆ – ಯೋಜನೆಗಳು ಬೇಕಾಗಿವೆ. ಕೃಷಿಯ ಪುನಶ್ಚೇತನಕ್ಕೆ ಕ್ರಿಯಾಶೀಲತೆಯೇ ಉತ್ತರವಾಗಬೇಕಾಗಿದೆ. ಹೀಗೆ ಅವರ ಸಂಶೋಧನಾ ಸೂತ್ರಗಳು ಸಾಗುತ್ತವೆ. ನಮ್ಮ ರೈತರಿಗೆ, ಸರ್ಕಾರಕ್ಕೆ ಇದೆಲ್ಲ ಬೇಗನೆ ಕೇಳಿಸಬೇಕಾಗಿದೆ.

ತಾಯ್ನಡಿನ ಪ್ರೀತಿ

ಹಂತಹಂತವಾಗಿ ಕೊಂಚ ಬಿಡುವಿನೊಂದಿಗೆ ಉನ್ನತ ಶಿಕ್ಷಣ ಪಡೆದರು. ಬಿಎಸ್ಸಿ-ಬಿಟಿ ಆದ ಮೇಲೆ 3 ವರ್ಷ ಬೋಧನೆ, ಬಳಿಕ ಎಂ.ಎಸ್ಸಿಗೆ ದಾಖಲು. ಅದನ್ನು ಮುಗಿಸಿ ಒಂದು ವರ್ಷ ತಂದೆಯ ಜೊತೆಗಿದ್ದು ಕೃಷಿ. ಬಳಿಕ ಅಮೇರಿಕಾದಲ್ಲಿ ಕೃಷಿಯಲ್ಲಿ ಪಿಹೆಚ್.ಡಿ. ಪದವಿ.

ಅಮೇರಿಕಾದಲ್ಲಿ ಪಿಹೆಚ್.ಡಿ. ಆದ ಮೇಲೆ ಕೇಳಬೇಕೆ? ಅಲ್ಲೇ ನಿಂತು ಕೆಲಸ ಮಾಡುವ ಅವಕಾಶವಿತ್ತು. ಒತ್ತಡವೂ ಇತ್ತು. ಆದರೆ ಸೋನ್ಸ್ ಅವರು ಊರಿಂದ ಹೊರಡುವಾಗಲೇ ಎಷ್ಟೇ ಕಲಿತರೂ ಭಾರತದಲ್ಲಿಯೇ ಕೆಲಸ, ವಾಸ ಎಂದು ನಿರ್ಧರಿಸಿ ಬಿಟ್ಟಿದ್ದರು. ಅದು ಬದಲಾಗದ ಗಟ್ಟಿ ನಿರ್ಧಾರ. ಅದೆಷ್ಟೊ ಮಂದಿ ಇಂತಹ ನಿರ್ಧಾರ ಕೈಗೊಂಡು ಬಳಿಕ ಅದಕ್ಕೆ ಎಳ್ಳು ನೀರು ಬಿಟ್ಟಿರಬಹುದು. ಆದರೆ ದೃಢ ಮನಸ್ಸಿನ ಯುವಕ ಸೋನ್ಸ್ ವಿದೇಶದ ಅವಕಾಶಗಳನ್ನು ಎಡಕಾಲಿನಿಂದ ಒದ್ದು ಬಿಟ್ಟರು.

ಇಲ್ಲಿ ಕಾಲ್ನಡಿಗೆ, ಸೈಕಲ್-ಹಳ್ಳಿ ಜೀವನದಲ್ಲಿ ಕಷ್ಟಪಟ್ಟಿದ್ದ ಅವರು ಅಮೇರಿಕಾದಲ್ಲಿ ಕಾರು, ಬಂಗ್ಲೆ ಕನಸು ಕಾಣಲಿಲ್ಲ. ಇದ್ದ ಕಾರನ್ನು ಮಾರಿ ಹಿಂತಿರುಗಿದರು. ತನ್ನ ಕಮಿಟ್‌ಮೆಂಟ್ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಅವರು ಪಿಹೆಚ್.ಡಿ. ಆದ ತಕ್ಷಣ ತಾಯ್ನಡಿಗೆ ಹಿಂತಿರುಗಿ ತೋರಿಸಿಕೊಟ್ಟರು. ಅಲ್ಲಿಂದ ಹಿಂತಿರುಗಿದ ಸೋನ್ಸ್ ಕೆಲಸದ ಬೇಟೆಗೆ ತೊಡಗದೆ ಜೀವನ ಪೂರ್ತಿ ಕೃಷಿಕನಾಗುವ ದೃಢನಿರ್ಧಾರ ತಳೆದರು. ಸಾಧಿಸಿದರೆ ಇಲ್ಲೂ ಸಾಧಿಸಬಹುದೆಂಬ ಬದುಕಿನ ಮುನ್ನುಡಿ ಬರೆದರು. ತಮ್ಮನ್ನು ತಾವೇ ಕೃಷಿಗೆ, ಭೂತಾಯಿಯ ಮಡಿಲ ಸೇವೆಗೆ ಸಮರ್ಪಿಸಿಕೊಂಡರು.

ವಿದೇಶದಲ್ಲಿ ಕೃಷಿ, ವಸ್ತುಸಂಗ್ರಹಾಲಯ, ಅಲ್ಲಿನ ಸಾಧನೆಗಳನ್ನು ಪ್ರತ್ಯಕ್ಷ ಕಂಡು ಬಂದ ಅವರಿಗೆ ತಂದೆಯ ಕನಸಿನ ಆಡೊಂಬಲವಾಗಿದ್ದ ಕೃಷಿಭೂಮಿ ಸ್ವರ್ಗವಾಗಿ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಕೃಷಿಯ ಸಾಧನೆ ಒಂಟಿ ಪಯಣವಾಗಬಾರದೆಂದು ತಿಳಿದು ತಮ್ಮನನ್ನು-ಒಬ್ಬ ಮಗನನ್ನು ಸೇರಿಸಿಕೊಂಡು ಹತ್ತಿರ ಹತ್ತಿರ ನೂರರಷ್ಟಿದ್ದ ಕೃಷಿ ಕಾರ್ಮಿಕ ಟೀಮ್ ಜೊತೆಗಿರಿಸಿ ಕೃಷಿ ಬದುಕಿನ ಪಯಣ ಆರಂಭಿಸಿದರು. ಪಯಣದ ಗಟ್ಟಿ ಹೆಜ್ಜೆಗಳು ಇತಿಹಾಸದ ಪುಟಗಳಲ್ಲಿ ಅಳಿಸಲಾಗದಂತೆ ಬರೆಯಲ್ಪಟ್ಟಿವೆ. ಸದಾ ಸಮಸ್ಯೆಯ ತವರೂರಾಗಿರುವ ರೈತರಿಗೆ ಆಶಾಕಿರಣವಾಗಬಲ್ಲ ಅಧ್ಯಾಯಗಳು ಇಲ್ಲಿ ದಾಖಲಾಗಿವೆ ಎಂಬುದು ಸಂತಸದ ವಿಚಾರ. ಊರು, ನಾಡು, ದೇಶ, ಜನ ಎಲ್ಲಾ ಹೆಮ್ಮೆಪಡುವಂತೆ ಡಾ. ಎಲ್.ಸಿ. ಸೋನ್ಸ್ ಬೆಳೆದು ನಿಂತಿದ್ದಾರೆ. 76ರ ಹರೆಯದಲ್ಲೂ ಲವಲವಿಕೆಯ ಪ್ರತಿಮೂರ್ತಿ ಯಾಗಿ ತೋಟದಲ್ಲಿ, ಮನೆಯಲ್ಲಿ, ನಮ್ಮೆದುರು ಕಾರ್ಯ ನಿರ್ವಹಿಸಿ ಎಲ್ಲರೂ ನಾಚುವಂತೆ ಮಾಡುತ್ತಿದ್ದಾರೆ. ತಾಯ್ನಡಿನ ಪ್ರೀತಿ ಸೋನ್ಸ್‌ರನ್ನು ಬೆಳೆಸಿದೆ, ಅವರ ವ್ಯಕ್ತಿತ್ವಕ್ಕೆ ಗರಿಮೆ ಮೂಡಿಸಿದೆ.

ಕಡಲುಕೆರೆಯ ಕನಸುಗಾರ

ತಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಬೇಸಿಗೆವರೆಗೆ ನೀರಿರುತ್ತಿದ್ದ ಕಡಲಕೆರೆ ದಿನಗಳೆದಂತೆ ಆಟದ ಮೈದಾನವಾಗಿ ಬಿಟ್ಟಿತ್ತು. ಬಿರು ಬೇಸಗೆಯಲ್ಲೂ ಪಕ್ಷಿ-ಪ್ರಾಣಿಗಳಿಗೆ ನೀರು ನೀಡುತ್ತಿದ್ದ ಕೆರೆ ಬತ್ತಿ ಹೋಗಿ ಉಸಿರುಗಟ್ಟಿತ್ತು. ಸುತ್ತಮುತ್ತಲು ಮಣ್ಣು ಹರಿದು ಬಂದು ಕೆರೆ ಮಾಯವಾಗಿತ್ತು. ದೇಶ-ವಿದೇಶ ಸುತ್ತಿ ಅನುಭವಿಯಾಗಿದ್ದ ಸೋನ್ಸ್‌ರನ್ನು ಕಡಲಕೆರೆ ಸದಾ ಕಾಡತೊಡಗಿತು. ಕಡಲಕೆರೆಗೆ ಕಾಯಕಲ್ಪ ನೀಡುವ ಕನಸು ಗರಿಗೆದರಿತು. ವಿವಿಧ ಸಂಸ್ಥೆಗಳ ಸಹಾಯ ಕೇಳಿದರು. ಕೊನೆಗೊಂದು ಸಂಸ್ಥೆ ಸಹಾಯ ಮಾಡಲು ಸಿದ್ಧವಾಯಿತು. ಅದಕ್ಕಾಗಿ ಒಂದು ಯೋಜನಾ ವರದಿ ಮಾಡಲು ಸೂಚಿಸಿತು. ಅದರಂತೆ 60-64 ಲಕ್ಷ ರೂಪಾಯಿಯ ಹೂಳೆತ್ತುವ ಯೋಜನೆ ಸಿದ್ಧವಾಯಿತು.

ರೋಟರಿ ಸಂಸ್ಥೆಯಲ್ಲಿ ಈ ಯೋಜನೆ ಚರ್ಚಿತವಾಗಿ ಇಷ್ಟು ದೊಡ್ಡ ಯೋಜನೆ ಸಾಧ್ಯವಾಗಲಿಕ್ಕಿಲ್ಲ, ಹಾಗಾಗಿ ಯಾವುದಾದರೂ ಅಂತಾರಾಷ್ಟ್ರೀಯ ಕ್ಲಬ್ ಮೂಲಕ ಯೋಜನೆಗೆ ಚಾಲನೆ ನೀಡುವ ನಿರ್ಧಾರಕ್ಕೆ ಬರಲಾಯಿತು. ದಕ್ಷಿಣ ಅಮೇರಿಕಾದ ರೋಟರಿ ಕ್ಲಬ್ ಸಂಸ್ಥೆಯೊಂದು ರೋಟರಿ ಖರ್ಚು ಮಾಡುವಷ್ಟೆ ಹಣವನ್ನು ಒದಗಿಸಲು ಸಿದ್ಧ ವಾಯಿತು. ಅಷ್ಟು ಹಣವಿರದೇ ಇದ್ದುದರಿಂದ ರೋಟರಿಯ ಹಣವನ್ನೂ ವಿನಿಯೋಗಿಸಿ 7.5 ಲಕ್ಷ ಹಣವನ್ನು ಪಡೆಯುವಲ್ಲಿ ರೋಟರಿ-ಸೋನ್ಸ್ ಜೊತೆಯಾಗಿ ಯಶಸ್ವಿಯಾದರು.

ಮೂಡುಬಿದಿರೆ ರೋಟರಿಯಲ್ಲಿ ಸೋನ್ಸ್ ಅವರು ಪರಿಸರ ನಿಧಿಯೊಂದನ್ನು ಸ್ಥಾಪಿಸಿದ್ದರು. ಅದರಲ್ಲಿ 2 ಲಕ್ಷದಷ್ಟು ಹಣವಿತ್ತು. ತಾವು ಊಹಾಶೋಧ ತರಬೇತಿ ಮತ್ತು ಕೃಷಿಯೇತರ ಮೂಲದಿಂದ ಪಡೆದ ಹಣದಿಂದ ಆ ‘ನಿಧಿ’ ಸ್ಥಾಪಿಸಿದ್ದರು.

ಕೆರೆಯ ಹೂಳೆತ್ತಿದ ಮಣ್ಣನ್ನು ರೈತರಿಗೆ ಮಾರಿ 2 ಲಕ್ಷದಷ್ಟು ಆದಾಯವಾಯಿತು. ಹೀಗೆ ಕೆಲಸ ಆರಂಭವಾಯಿತು. ಇಲಾಖೆಯ ವತಿಯಿಂದ ಸಾವಿರಾರು ಗಿಡಗಳನ್ನು ನೆಡಿಸಲಾಯಿತು. ಈಗ ಅವು ನೆರಳು ನೀಡುವಷ್ಟು ಬೆಳೆದಿವೆ. ಸ್ವಲ್ಪ ನೀರು ನಿಲ್ಲುವಷ್ಟು ಕೆಲಸ ಆಗುವಾಗ ನೀರು ನಿಲ್ಲುವಲ್ಲಿ ಪಕ್ಷಿಗಳು ಬರುತ್ತವೆ ಎಂಬ ಯೋಚನೆಯೊಂದಿಗೆ ನಡುಗುಡ್ಡೆ ರಚಿಸಲು ನಿರ್ಧರಿಸಲಾಯಿತು. ಹೂಳೆತ್ತಿದ ಮಣ್ಣನ್ನು ಹಾಕಿ ದ್ವೀಪ ನಿರ್ಮಾಣವಾಗಿದೆ. ಅಲ್ಲಿ ಹಕ್ಕಿಗಳನ್ನು ಆಕರ್ಷಿಸುವ ಹಣ್ಣುಹಂಪಲಿನ ಗಿಡ ಮರಗಳು ತಲೆ ಎತ್ತಿವೆ. ಹಕ್ಕಿಗಳ ಕಲರವ, ದೋಣಿ ವಿಹಾರ, ಕಂಬಳ ಎಲ್ಲವೂ ಬಂದಿವೆ.

ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿಗಳ ಕಾರ್ಯದರ್ಶಿತ್ವದಲ್ಲಿ ಕಡಲಕೆರೆ ನಿಸರ್ಗಧಾಮ ಟ್ರಸ್ಟ್ ರಚನೆಯಾಗಿದೆ. ಕಡಲಕೆರೆಯ ಕನಸುಗಳಿಂದ ಸಂತಸಗೊಂಡ ಸ್ಥಳೀಯ ಎಂ.ಎಲ್.ಎ.; ಹಿರಿಯ ರಾಜಕೀಯ ಧುರೀಣ ಕೆ. ಅಭಯಚಂದ್ರ ಅವರು ತಮ್ಮನ್ನು ತೊಡಗಿಸಿಕೊಂಡರು. ಅವರ ಪ್ರಯತ್ನದಿಂದ 28 ಲಕ್ಷ ರೂಪಾಯಿ ಬಂದಿದೆ. ಮೊದಲಿನಂತೆ ಬೇಸಿಗೆಯಲ್ಲೂ ಸಾಕಷ್ಟು ನೀರು ಕೆರೆಯಲ್ಲಿ ನಿಲ್ಲಬೇಕು ಎಂಬುದು ಸೋನ್ಸ್‌ರ ಕನಸು. ಟ್ರಸ್ಟ್‌ನ ಸದಸ್ಯರಾಗಿ ಇಂದಿಗೂ ತೊಡಗಿಕೊಂಡಿದ್ದಾರೆ.

ಮಂಗಳೂರಿನ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ ಸರ್ವೇಕ್ಷಣೆಯು ಕಡಲಕೆರೆಯ ಪುನರುತ್ಥಾನದಿಂದಾಗಿ ಸುತ್ತಮುತ್ತಲಿನ ಬಾವಿಗಳಲ್ಲಿ – ಪ್ರದೇಶದಲ್ಲಿ ಆಂತರಿಕ ಜಲಮಟ್ಟ ಹೆಚ್ಚಾಗಿರುವುದನ್ನು ದಾಖಲಿಸಿದೆ.

ಸೋನ್ಸ್‌ರ ಕನಸುಗಾರಿಕೆ ಮೂಡುಬಿದಿರೆಯ ಪರಿಸರಕ್ಕೆ ಶಾಶ್ವತ ಕೊಡುಗೆಯಾಗಿ ಪರಿಣಮಿಸಿದೆ. ಈ ಕನಸಿನ ಸಾಕಾರ ಸೋನ್ಸ್‌ರು ನೂರು ಕಾಲ ನೆನಪಲ್ಲಿ ಉಳಿಯುತ್ತಾರೆ. ಇದೊಂದು ಬಹುಪಯೋಗಿ ಯೋಜನೆಯಾಗಿ ಬೆಳೆಯಲಿ ಎಂಬುದು ಅವರ ಹಾರೈಕೆ.

ಮೆಡಿಸಿನ್ ವೀಲ್ (ಔಷಧಿ ಚಕ್ರ)

ಉಹಾಶೋಧದಿಂದ ಸಾಕಷ್ಟು ಪ್ರಭಾವಿತರಾಗಿದ್ದ ಅವರು ಶಕ್ತಿ ಕೇಂದ್ರಗಳ ಬಗ್ಗೆ ಗಮನ ಹರಿಸುವಾಗ ಗಮನ ಸೆಳೆದದ್ದು ಮೆಡಿಸಿನ್ ವೀಲ್. ಅಮೇರಿಕಾದ ಮೂಲ ನಿವಾಸಿಗಳಾದ ಅಮೆರಿಕನ್ ಇಂಡಿಯನ್ಸ್ ಮತ್ತು ಯುರೋಪಿನ ಡ್ರುಯಿಡ್ಸ್ ಜನಾಂಗ ದವರು ಪ್ರಕೃತಿಯ ಆರಾಧಕರು. ಅವರು ಶಕ್ತಿಕೇಂದ್ರಗಳಲ್ಲಿಯೇ ತಮ್ಮ ಆರಾಧನಾ ಮಂದಿರ ಗಳನ್ನು ಕಟ್ಟಿಕೊಂಡಿದ್ದಾರೆ. ಅಮೇರಿಕಾದ ಮೂಲ ನಿವಾಸಿಗಳು ಬೆಟ್ಟದ ಮೇಲೆ ತಮ್ಮ ಆರೋಗ್ಯ ವರ್ಧಿಸುವಂತೆ ಸಹಾಯವಾಗಲು ಮೆಡಿಸಿನ್ ವೀಲ್‌ಗಳನ್ನು ರಚಿಸಿಕೊಂಡಿದ್ದಾರೆ. ಅಲ್ಲಿ ಕೆಲವೊಂದು ದಿನಗಳಲ್ಲಿ ರಾತ್ರಿಯಿಡೀ ಕಳೆದು ಕುಣಿದು ಕುಪ್ಪಳಿಸಿ ಸಂತೋಷ ಪಡುತ್ತಾ ಆರೋಗ್ಯ ವರ್ಧಿಸಿಕೊಳ್ಳುತ್ತಿದ್ದರು.

ಈ ವಿಷಯದ ಕುರಿತು ಖಚಿತ ಮಾಹಿತಿ ಪಡೆದ ಸೋನ್ಸ್ ಅವರು ತಮ್ಮ ಕೃಷಿ ಭೂಮಿಯಲ್ಲಿಯೂ ಅದಕ್ಕೆ ಪೂರಕವಾಗಿರುವ ಸ್ಥಳದ ಶೋಧನೆ ಮಾಡಿದರು.

ಭೂಮಿಯೊಳಗೆ ನೀರು ಕವಲು ಕವಲಾಗಿ ಹರಿಯುವ ಅಂದರೆ ಒರತೆಗಳಿರುವ ಸಂಕೀರ್ಣ ಸ್ಥಳವನ್ನು ಗುರುತಿಸಿದರು. ಇಂಟರ್‌ನೆಟ್ ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿ ಪಡೆದು ಆ ಜಾಗದಲ್ಲಿ ಮೆಡಿಸಿನ್ ವೀಲ್ ಸ್ಥಾಪಿಸಿದರು. ಕೆಲವೊಂದು ಗುಣವಾಗದ ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ಗುಣ ಹೊಂದಲು ಮೆಡಿಸಿನ್ ವೀಲ್ ಸಹಾಯಕ ಎಂಬುದು ಸೋನ್ಸ್‌ರ ಅನಿಸಿಕೆ. ಕೆಲವು ಕಾಯಿಲೆಗಳಿಗೆ ರಾಮಬಾಣ ವಾಗಿರುವುದನ್ನು ಅವರು ಗಮನಿಸಿದ್ದಾರೆ.

ರುಮೇನಿಯಾದಲ್ಲಿ ಜನರು ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಪಡೆಯಲು ಈ ಶಕ್ತಿಯ ಪ್ರಯೋಗ ಮಾಡಿರುವುದು ಅವರ ಗಮನಕ್ಕೆ ಬಂದಿದೆ. ದೇಹದಲ್ಲಿರುವ ಕೆಲವು ನ್ಯೂನತೆಗಳನ್ನು ಅದು ಸರಿ ಮಾಡುತ್ತದೆ ಎಂಬುದು ಅವರ ಅಭಿಪ್ರಾಯವೂ ಆಗಿದೆ. ಇಲ್ಲೂ ಇಂತಹ ಪ್ರಯೋಗಕ್ಕೆ ಅವಕಾಶ ಇದೆ. ಮಳೆಗಾಲ ಹೊರತು ಪಡಿಸಿ ಆಸಕ್ತರಿಗೆ ಅನುಭವಿಸಲು ಅವಕಾಶವಿದೆ.

“ಜಾಗ ಗುರುತಿಸುವುದು, ಕಲ್ಲು, ಕೆಲಸದವರ ಸಂಬಳ ಹೀಗೆ ಕಡಿಮೆ ಖರ್ಚಿನಲ್ಲಿ ಅದು ನಿರ್ಮಾಣವಾಗಿದೆ. ಇನ್ನಷ್ಟು ಪ್ರಯೋಗಗಳನ್ನು ಮಾಡಿ ಅದರ ಉಪಯೋಗದ ಖಚಿತತೆಯನ್ನು ಸಾಬೀತು ಮಾಡಿಕೊಳ್ಳಬೇಕಾಗಿದೆ” ಎನ್ನುತ್ತಾರೆ ಅವರು.

ಕರಾವಳಿಯ ಏಕೈಕ ಲ್ಯಾಬರಿಂತ್

ಸದಾ ಪ್ರಯೋಗಶೀಲತೆಯ ಸೋನ್ಸ್ ಅವರಿಗೆ ಮೆಡಿಸಿನ್ ವೀಲ್‌ಗಿಂತ ಸ್ವಲ್ಪ ಭಿನ್ನವಾದ ‘ಲ್ಯಾಬರಿಂತ್’ ಕುತೂಹಲ ಮೂಡಿಸಿತು. ಗ್ರೀಸ್, ಸ್ಕಾಂಡಿನೇವಿಯಾ, ಪ್ರಾನ್ಸ್ ಗಳಲ್ಲೂ ವಿಶಿಷ್ಟವಾದ ಈ ಲ್ಯಾಬರಿಂತ್‌ಗಳಿವೆ. ಕ್ರೇಟ್ ದ್ವೀಪ ಸಮೂಹದಲ್ಲಿಯೂ ಲ್ಯಾಬರಿಂತ್‌ಗಳನ್ನು ಕಾಣಬಹುದಾಗಿದೆ.

ಆಕಾಶದಿಂದ ನೇರವಾಗಿ ಕಾಸ್ಮಿಕ್ ಎನರ್ಜಿ ಈ ಕೇಂದ್ರಗಳಿಗೆ ಬರುತ್ತದೆ. ಅಲ್ಲಿ ಉಂಟಾಗುವ ಕ್ರಿಯೆಗಳು ರೋಗನಿವಾರಕವಾಗಿ, ಆರೋಗ್ಯ ವರ್ಧಕವಾಗಿ ಪರಿಣಮಿಸುತ್ತವೆ ಎಂಬುದು ನಂಬಿಕೆ. ಇದು ಮೆಡಿಸಿನ್ ವೀಲ್‌ಗಿಂತ ಭಿನ್ನವಾದ ರಚನೆ. ಮೆಡಿಸಿನ್ ವೀಲ್ ಭೂಮಿಯ ಶಕ್ತಿಯನ್ನು ಆಧರಿಸಿರುವ ರಚನೆಯಾದರೆ ‘ಲ್ಯಾಬರಿಂತ್’ ಅದಕ್ಕಿಂತ ಭಿನ್ನವಾಗಿ ಸೌರಶಕ್ತಿ ಸಹಿತ ಶಕ್ತಿ ಸಂಚಲನದ ನಂಬಿಕೆಗಳನ್ನು ಆಧರಿಸಿದೆ. ಇದನ್ನೆಲ್ಲ ಗಮನಿಸಿದ ಸೋನ್ಸ್ ಅವರು ನಮ್ಮ ದೇಶದಲ್ಲಿ ಅಷ್ಟು ಪ್ರಚಾರಕ್ಕೆ ಬಾರದ 2 ಲ್ಯಾಬರಿಂತ್ ನಿರ್ಮಿಸಿದ್ದಾರೆ. ಲ್ಯಾಬರಿಂತ್‌ನ ಬಳಕೆಯಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ನಿವಾರಣೆಯಾಗಿ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಇಂತಹ ಕಡಿಮೆ ಖರ್ಚಿನ, ಹಿಂದಿನವರ ಶೋಧನೆಯ ವಿಚಾರಗಳಿಗೆ ಪ್ರಚಾರ ಸಿಗಬೇಕು. ಅವುಗಳ ಉಪಯೋಗದ ಬಗ್ಗೆ ವೈಜ್ಞಾನಿಕವಾಗಿ ಖಚಿತವಾಗಲು ಪ್ರಯೋಗಗಳು ನಡೆಯಬೇಕು ಎನ್ನುತ್ತಾರೆ ಅವರು.

ಅಮೇರಿಕಾದ ಆಸ್ಪತ್ರೆಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಲ್ಯಾಬರಿಂತ್ ಹೊಸ ಫ್ಯಾಶನ್ ಆಗಿದೆ. ಅಲ್ಲಿ ಬರುವ ರೋಗಿಗಳಿಗೆ ಲ್ಯಾಬರಿಂತ್ ನಡಿಗೆ ಮಾಡಿಸಿ ಮಾನಸಿಕವಾಗಿ ಅವರನ್ನು ಹುರಿದುಂಬಿಸುವ ಕೆಲಸವೂ ಆಗುತ್ತಿದೆ ಎನ್ನಲು ಮರೆಯುವುದಿಲ್ಲ.

ಕೃಷಿಗೊಂದು ಸಂಗ್ರಹಾಲಯ

ಪ್ರಪಂಚ ವೇಗವಾಗಿ ಬದಲಾವಣೆಗೆ ಒಳಗಾಗುತ್ತಿದೆ. ಜೀವನ ಕ್ರಮದಲ್ಲಿ ಕೃಷಿಯಲ್ಲಿ- ಹಳ್ಳಿಯಲ್ಲೂ ಬದಲಾವಣೆಗಳಾಗಿವೆ. ಮುಂಚೆ ಯಾವ ರೀತಿಯ ಕ್ರಮ ಇತ್ತು, ಯಾವ ರೀತಿಯ ವಸ್ತುಗಳ, ಉಪಕರಣಗಳ ಬಳಕೆ ಇತ್ತು ಎಂದು ಮುಂದಿನ ಪೀಳಿಗೆಗೆ ತಿಳಿಸಲು ಮ್ಯೂಸಿಯಂ ಒಂದು ಉತ್ತಮ ಸಾಧನ. ನಮ್ಮ ಹಿಂದಿನ ಸಾಮಗ್ರಿಗಳನ್ನು ಸಂಗ್ರಹಾಲಯ ದಲ್ಲಿ ಇಟ್ಟು ಹಿಂದಿನ ವಿಷಯಗಳ ಬಗ್ಗೆ ಯೋಗ್ಯ ಪಾಠ ಹೇಳಬಹುದಾಗಿದೆ.

ಕರಾವಳಿಯ ಕೃಷಿಯಲ್ಲೂ ಬದಲಾವಣೆಗಳು ಆಗುತ್ತಾ ಬಂದಿವೆ. 6-7 ದಶಕಗಳಲ್ಲಿ ಆಗಿರುವ ವ್ಯತ್ಯಯಗಳನ್ನು ಸೋನ್ಸ್ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಯೂರೋಪ್ ಸಹಿತ ವಿದೇಶ ಪ್ರವೇಶದ ವೇಳೆ ಪ್ರತಿ ಊರುಗಳಲ್ಲೂ ಆ ಊರಿನ ಇತಿಹಾಸವನ್ನು ದಾಖಲಿಸುವಂತಹ ‘ಮ್ಯೂಸಿಯಂ’ಗಳು ಇರುವುದನ್ನು ಅವರು ಪ್ರತ್ಯಕ್ಷವಾಗಿ ನೋಡಿದವರು. ಇಲ್ಲಿನ ಬೆಳವಣಿಗೆಯನ್ನು ದಾಖಲಿಸುವ ಮ್ಯೂಸಿಯಂ ಬೇಕು ಎನ್ನುವ ಬಯಕೆ ಅವರದ್ದು. ಧರ್ಮಸ್ಥಳ, ಮಂಗಳೂರು, ಬಂಟ್ವಾಳಗಳಲ್ಲಿ ಒಳ್ಳೆಯ ಮ್ಯೂಸಿಯಂಗಳಿವೆ. ಆದರೆ ಪ್ರತಿ ಊರಲ್ಲೂ ಆಯಾ ಊರಿನ ಮಹತ್ವವನ್ನು ತಿಳಿಸುವಂತೆ ಮ್ಯೂಸಿಯಂಗಳಿರಬೇಕು ಎಂಬುದು ಸೋನ್ಸ್ ಅವರ ನಿಲುವು.

ಅವರ ಹತ್ತಿರ ಆಸಕ್ತಿಯಿಂದ ಕೂಡಿಟ್ಟಿದ್ದ ಹಳೆಯ ಕೃಷಿ ಸಾಮಗ್ರಿಗಳು ಇದ್ದವು. 10-15 ವರ್ಷಗಳ ಹಿಂದೆ ಅವರು 4ರಿಂದ 5 ಲಕ್ಷ ರೂಪಾಯಿ ಖರ್ಚು ಮಾಡಿ ಮ್ಯೂಸಿಯಂಗಾಗಿ ಪ್ರತ್ಯೇಕ ಕಟ್ಟಡವೊಂದನ್ನು ಮನೆಯ ಸಮೀಪವೇ ನಿರ್ಮಿಸಿದ್ದಾರೆ. ವಿವಿಧ ಬಗೆಯ ನೊಗ, ನೇಗಿಲು, ಮಡಕೆಗಳು, ಕಂಬಳಕ್ಕೆ ಸಂಬಂಧಪಟ್ಟ ವಸ್ತುಗಳು, ತೋಟದ ಕೆಲಸದ ವೇಳೆ ಸಿಕ್ಕ ಶಿಲಾಯುಗದ ಕಲ್ಲುಗಳು, ಟಿಲ್ಲರ್, ಟ್ರ್ಯಾಕ್ಟರ್, ವಿದೇಶಿ ಪ್ರಿಂಟಿಂಗ್ ಮಿಶಿನ್, ಕಲೆಂಬಿ, ಮನೆಯ ಉಪಯೋಗದ ವಸ್ತುಗಳು ಹೀಗೆ ಇಲ್ಲಿವೆ. ಶ್ರೀಮಂತ ಸಂಗ್ರಹ. ಕೃಷಿಯ ಬದಲಾವಣೆಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವಂತಹ ವಸ್ತುಗಳಿವೆ. ಒಂದು ಬದಿಯಲ್ಲಿ ಸೋನ್ಸ್‌ರ ಸುಮಾರು 5,000 ಪುಸ್ತಕಗಳ ಸಂಗ್ರಹಾಲಯ.

ಇದನ್ನು ಆಸಕ್ತರಿಗೆ ತೋರಿಸಲಾಗುತ್ತಿದ್ದರೂ, ಅದನ್ನು  ವ್ಯವಸ್ಥಿತವಾಗಿ ಸಾರ್ವಜನಿಕರಿಗಾಗಿ ತೆರೆದಿಡುವ ಅವರ ಕನಸು ಶೀಘ್ರ ನನಸಾಗಲಿದೆ. “ಇದೊಂದು ಪ್ರಾರಂಭಿಕ ಹಂತ. ಇದು ನಿರಂತರವಾಗಿ ಬೆಳೆದುಕೊಂಡು ಹೋಗಬೇಕಾದ ಕೆಲಸ. ಕೃಷಿಗೆ ಸಂಬಂಧಪಟ್ಟ, ಆದರೆ ಬೇಡವೆಂದು ಭಾವಿಸುವ ವಸ್ತುಗಳನ್ನು ಬಿಸಾಡಿ ಹಾಳು ಮಾಡಬೇಡಿ, ಸಂಗ್ರಹಾಲಯಗಳಿಗೆ ಕೊಡಿ. ಅವು ಸಂಸ್ಕೃತಿಗೆ ಕೊಡುವ ಕೊಡುಗೆ”  ಎನ್ನುತ್ತಾರೆ ಸೋನ್ಸ್.

ಸೋನ್ಸ್ ಕುಟುಂಬ ವಿದ್ಯಾವಂತ ಕುಟುಂಬ. ದೇಶ-ವಿದೇಶಗಳಲ್ಲಿ ಕುಟುಂಬದ ಸದಸ್ಯರಿದ್ದಾರೆ. ಕುಟುಂಬ ಸದಸ್ಯರನ್ನು ಗುರುತಿಸಿ ಫೋಟೋ ಸಹಿತ ದಾಖಲಿಸುವ ಪ್ರಯತ್ನ ಆಗಿದೆ. ಅದು ಆಂಗ್ಲಭಾಷೆಯಲ್ಲಿ ಪುಸ್ತಕ ರೂಪದಲ್ಲೂ ಪ್ರಕಟಗೊಂಡಿದೆ. ಕುಟುಂಬ ಸದಸ್ಯರು ಪರಸ್ಪರ ತಮ್ಮ ಸಂಬಂಧಿಕರನ್ನು ತಿಳಿಯಲು ಇದೊಂದು ವಿಶೇಷ ಯತ್ನ. ಸೋನ್ಸ್ ಕುಟುಂಬದ ಸದಸ್ಯರು ಪಾಂಗಾಳದಲ್ಲಿ ಸೇರಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ. ಅಣುರೂಪಿ ಕುಟುಂಬ ವ್ಯವಸ್ಥೆಗೆ ಜಾರಿರುವ ಸಮಾಜದಲ್ಲಿ ಇದೊಂದು ಗಮನಾರ್ಹ ಪ್ರಯೋಗ. ಇಲ್ಲಿ ಎಲ್.ಸಿ. ಸೋನ್ಸ್ ಕುಟುಂಬ ವೃಕ್ಷವನ್ನು ನೀಡಲಾಗಿದೆ.

ಸಸ್ಯಕಾಶಿ… ಹಣ್ಣುಗಳ ರಾಜ

ಆಗಿನ ಬಾಸೆಲ್ ಈಗಿನ ಸೋನ್ಸ್ ಫಾರ್ಮ್ ನಿಜವಾಗಿಯೂ ಒಂದು ಸಸ್ಯಕಾಶಿ. ದೇಶ ವಿದೇಶದ, ವಿವಿಧ ಆಕಾರದ- ಜಾತಿಯ ನೂರಾರು ಗಿಡ, ಸಸಿ, ಹೂವಿನ ತಳಿಗಳು, ಹಣ್ಣಿನ ಗಿಡಗಳು ಇಲ್ಲಿ ಇವೆ. ಕೆಲವೊಂದು ಪ್ರಯೋಗಕ್ಕಾದರೆ, ಉಳಿದವು ವಾಣಿಜ್ಯ ಬೆಳೆಯಾಗಿ… ಇಸ್ರೇಲ್‌ಗೆ ಕೃಷಿ ಪ್ರವಾಸ ಮಾಡಿದ್ದ ವೇಳೆ ಪಡೆದ ಸ್ಫೂರ್ತಿಯಿಂದಾಗಿ ಅನಾನಾಸು ಗಿಡಗಳಿಗೂ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹನಿ ನೀರಾವರಿ ಅಳವಡಿಸುವ ದಾಖಲೆ ಅವರಿಂದಾಯಿತು. ಬಹುವ್ಯಾಪಿಯಾಗಿ ಹರಡಿರುವ ಅನಾನಾಸು ಇಲ್ಲಿ ಹಣ್ಣುಗಳ ರಾಜವೇ ಆಗಿ ಮೆರೆಯುತ್ತಿದೆ. ಅನಾನಾಸು ನಟ್ಟರೆ ಹಾವುಗಳು ಬರುತ್ತವೆ ಎಂಬ ನಂಬಿಕೆಗೆ ಸೋನ್ಸ್ ನಮಗೆ ಉತ್ತರ ನೀಡಿದ್ದಾರೆ. ಅನಾನಾಸಿಗೆ ಇಲಿಗಳ ಕಾಟ-ಅವುಗಳನ್ನು ತಿನ್ನಲು ಹಾವುಗಳು ಬರಬಹುದು. ಆದರೆ ಅನಾನಾಸಿನ ಪರಿಮಳಕ್ಕೆ ಹಾವುಗಳು ಎಂದೂ ಆಕರ್ಷಿತವಾಗುತ್ತಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇತ್ತೀಚಿಗೆ ನವಿಲುಗಳ ಸಂಖ್ಯೆ ವೃದ್ಧಿಯಾಗಿರುವುದರಿಂದ ಹಾವುಗಳ ಸಮಸ್ಯೆ ದೂರವಾಗಿದೆ.

ಕಡಿಮೆ ನೀರಿನ ಬಳಕೆಯಿಂದ ಕೃಷಿ ಮಾಡುವ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದ್ದಾರೆ ಅವರು. ತೋಟದಲ್ಲಿ ಇಂದಿಗೂ ಮುಖ್ಯ ಬೆಳೆ ತೆಂಗು. ಆದರೆ ಹೆಚ್ಚು ಫೇಮಸ್ ಆದದ್ದು ಇಲ್ಲಿನ ಅನಾನಾಸುಗಳು. ಮೂಡುಬಿದಿರೆ ಸೋನ್ಸ್ ಫಾರಂನ ಅನಾನಾಸುಗಳಿಗೆ ಮಂಗಳೂರು ಸೇರಿದಂತೆ ಭಾರೀ ಬೇಡಿಕೆಯಿದೆ. ಮುಂಬಯಿ-ಬೆಂಗಳೂರು-ದೆಹಲಿಗೂ ಇಲ್ಲಿನ ಅನಾನಾಸು ಹೋಗಿದೆ.

ಮೂಡುಬಿದಿರೆಯಲ್ಲಿ ಈಗ ಬೆಳೆಯುವ ಸ್ವಾದಿಷ್ಟ ಅನಾನಾಸು ಲಂಡನ್‌ನ ‘ಕ್ಯೂ’ ಗಾರ್ಡನ್ ಮೂಲದವು. ಹಾಗಾಗಿ ಅದು ‘ಕ್ಯೂ’ ಜಾತಿಯ ಅನಾನಾಸು. ಇದಕ್ಕೆ ಮಾರುಕಟ್ಟೆಯ ‘ಕಿಂಗ್’ ರಾಜ ಫಲವೆಂಬ ಹೆಸರಿದೆ. ಮಾರಿಸಿಯಸ್ ಮತ್ತು ದಕ್ಷಿಣ ಅಮೇರಿಕಾದ ಜಾತಿಗೆ “ಕ್ವೀನ್” ಅಥವಾ “ರಾಣಿ” ಹೆಸರಿದೆ.

ರಾಂಬಟನ್ : ಮಲೇಶಿಯಾದ ಹಣ್ಣು. ಈಗನ ನಮ್ಮ ಊರಿನ ಹಣ್ಣು ಎಂಬಷ್ಟೆ ಪ್ರಚಾರವಾಗಿದೆ. ಮಕ್ಕಳಿಗೂ ದೊಡ್ಡವರಿಗೂ ಹಣ್ಣು ಇಷ್ಟವಾಗಿದೆ. ಇದೆಲ್ಲಾ ಸಾಧ್ಯವಾದುದು ಡಾ ಸೋನ್ಸ್ ಅವರು ಕಳೆದ ನಾಲ್ಕು ದಶಕಗಳಿಂದ ಮಾಡಿದ ಪ್ರಯೋಗಗಳಿಂದಾಗಿಯೇ. ಮೈ ತುಂಬಾ ಕೂದಲಿರುವ ನಮ್ಮ ಕುಂಕುಮ ಕಾಯಿಯನ್ನು ನೆನಪಿಸುವ ಈ ಹಣ್ಣಿನ ಸಿಪ್ಪೆಯನ್ನು ಒಡೆದರೆ ಒಳಗೆ ಬೆಣ್ಣೆಯಂತಹ ತಿನ್ನುವ ಭಾಗ. ಭಾರಿ ಡಿಮ್ಯಾಂಡ್‌ನಿಂದ ಬೆಲೆ ಕೆ.ಜಿ.ಗೆ 100ರೂ ಕ್ಕೇರಿದೆ. ಮಾಲ್‌ಗಳಲ್ಲಿ 150ರಿಂದ 400 ರೂ. ಇದೆ.

17 ಕೆ.ಜಿ.ಗೆ 25-30 ಹಣ್ಣುಗಳು ಬೇಕಾಗುತ್ತವೆ. ‘ನೆಪಾಲಿಯಮ್ ಲೆಪ್ಪಾಸಮ್’ ಅದರ ವೈಜ್ಞಾನಿಕ ಹೆಸರು. ನಮ್ಮ ನೊರೆಕಾಯಿ ಜಾತಿಗೆ ಸೇರಿದ್ದು.

ಎಗ್‌ಫ್ರುಟ್ : ನೋಡಲು ನಮ್ಮ ಜಾರಿಗೆ ಹುಳಿಯಂತೆ ಕಾಣುವ ಮೊಟ್ಟೆಯಾಕಾರದ ಹಣ್ಣು, ಒಳಗೆ ಬೇಯಿಸಿದ ಮೊಟ್ಟೆಯಂತಹ ತಿನ್ನುವ ವಸ್ತು. ಅದರ ವೈಜ್ಞಾನಿಕ ಹೆಸರು ‘ಲುಕುಮಾ ಬಿಪೋರಾ’. ವಾಣಿಜ್ಯ ಬೆಳೆಯಾಗಿ ಸೋನ್ಸ್‌ರಿಗೆ ಇದು ಒಲಿಯದಿದ್ದರೂ ‘ಪೆರು’ ದೇಶದ ಹಣ್ಣನ್ನು ನಮ್ಮೆಲ್ಲರ ಹಣ್ಣಾಗಿಸಿದ ಕೀರ್ತಿ ಇದೆ.

ಹಲಸಿನ ಹಣ್ಣನ್ನು ಹೋಲುವ ಡೂರಿಯಾನ್ ಅದರ ವಿಶೇಷ ಪರಿಮಳದಿಂದಾಗಿ ನಮ್ಮ ಜನರಿಗೆ ಒಗ್ಗಲಿಲ್ಲ.

ಡ್ರಾಗನ್‌ಫ್ರುಟ್ : ಬ್ಯಾಂಕಾಕ್‌ನ ಸಂಸ್ಥೆ ಮಾರುಕಟ್ಟೆಯಿಂದ ತಂದ ಡ್ರಾಗನ್‌ಫ್ರುಟ್ ಇನ್ನೊಂದು ಆಕರ್ಷಣೆ. ಕಳ್ಳಿಯಲ್ಲಿ ಬೆಳೆಯುವ ಈ ಹಣ್ಣು ಚೈನಾಸ್ ಡ್ರಾಗನನ್ನು ಹೋಲುವುದರಿಂದ ಅದಕ್ಕೆ ಡ್ರಾಗನ್‌ಫ್ರುಟ್ ಎಂದು ಹೆಸರಂತೆ! ಒಂದೊಂದು ಅರ್ಧ ಕೆ.ಜಿ. ಇರುತ್ತದೆ. ಬಹಳ ಕಡಿಮೆ ಇಳುವರಿ.

“ಹಗಲು ದೀರ್ಘವಾಗಿರುವಾಗ ಹೂಬಿಟ್ಟು ಹಣ್ಣು ನೀಡುತ್ತದೆ, ಈ ಗಿಡ. ವಿದೇಶಗಳಲ್ಲಿ ಹೆಚ್ಚಿನ ವಿದ್ಯುತ್ ಬೆಳಕನ್ನು ನೀಡಿ ಅದು ಬೇಗ ಹೂ ಬಿಡುವಂತೆ ಹಣ್ಣು ಆಗುವಂತೆ ಮಾಡುವ ಪ್ರಯತ್ನ ನಡೆದಿದೆ. ಗೇಟಿನಿಂದ ಒಳಗೆ ಬರುವಾಗ ನೀವು ನೋಡಿದಂತೆ ಇಲ್ಲಿಯೂ ರಾತ್ರಿ 10ರ ವರೆಗೆ ಗಿಡಗಳಿಗೆ ಬೆಳಕು ನೀಡುವ ಪ್ರಯೋಗ ಮಾಡುತ್ತಿದ್ದೇನೆ. ನೋಡಬೇಕು” ಎಂದು ಅಭಿಪ್ರಾಯ ಪಡುತ್ತಾರೆ.

ಬಿದಿರಿನ ವನ

ಬಿದಿರಿನಿಂದಾಗಿ ಮೂಡುಬಿದಿರೆ ಎಂಬ ಹೆಸರು ಬಂದಿದೆ ಎಂಬುದು ಸರ್ವಸಮ್ಮತ ಸ್ಥಳನಾಮ ಹಿನ್ನಲೆ. ಆದರೆ ಮೂಡುಬಿದಿರೆ ಸುತ್ತಮುತ್ತ ಈಗ ನೋಡಿದರೆ ಹಾಗನ್ನಿಸುವುದಿಲ್ಲ. ಭತ್ತದಿಂದ ಬೇರೆಡೆ ತಿರುಗುವ ಮನ ಮಾಡುವಾಗ ಅವರ ಸಹಾಯಕ್ಕೆ ಬಂದದ್ದು ಬಿದಿರು. ಆ ಭತ್ತದ ಗದ್ದೆಯಿದ್ದಲ್ಲಿ ಈಗ ಸುಂದರವೂ, ಮನೋಹರವೂ ಆದ ಬಿದಿರು ವನ ತಲೆ ಎತ್ತಿದೆ. ದಿನವೊಂದಕ್ಕೆ ಅಡಿ ಎತ್ತರ ಬೆಳೆಯುವ ಬಿದಿರಿನ ಮೊಳಕೆ. ದೊಡ್ಡ ಗಾತ್ರದ ‘ಕನಿಲೆ’. ಗೆರೆಹಾಕಿ ಯಂತ್ರದಿಂದ ‘ಕಡಾವು’ ಹಿಡಿಸಿದಂತಹ ನೀಟಾದ ಬಿದಿರುಗಳು. ಆಕಾಶದಾಚೆ ಲಂಬವಾಗಿ ಹೋಗದೆ ಬಾಗುತ್ತಾ ಸಾಗುವಾಗಲೂ ನೆರವಾಗಿಯೇ ಇರುವ ಬಿದಿರಿನ ಮರಗಳು, ‘ಪಿರಾಮಿಡ್’ನಂತಹ ಶಕ್ತಿ ಕೇಂದ್ರವಾಗಿ ಮನಸ್ಸಿಗೆ ಉಲ್ಲಾಸ ನೀಡುವಂತಿವೆ ಎಂಬುದು ನನಗೂ ಜೊತೆಗೆ ಬಂದಿದ್ದ ಸೊಸೆ ಅಶ್ವಿನಿಗೂ ಅನಿಸಿತು. ಹೌದು, ಹೌದು. ನಿಮ್ಮ ಅನಿಸಿಕೆ ನಿಜವೇ. ಮನುಷ್ಯನಿಗೆ ಹಿತ ಕೊಡಬಲ್ಲ ವಿಶಿಷ್ಟ ವಾತಾವರಣ ಇಲ್ಲಿ ನಿರ್ಮಾಣವಾಗಿದೆ ಎಂದು ಪಕ್ಕದಲ್ಲಿಯೇ ಇದ್ದ ಸೋನ್ಸ್ ದನಿಗೂಡಿಸಿದರು. ಇಲ್ಲಿ ನಲ್ವತ್ತು ಜಾತಿಯ ಬಿದಿರುಗಳನ್ನು ಬೆಳೆಯಲಾಗಿದೆ. ಅವುಗಳಲ್ಲಿ ಕೆಲವು ಮಾತ್ರ ವಾಣಿಜ್ಯ ಯೋಗ್ಯ ತಳಿಗಳು.

ತಂದೆಯ ತ್ಯಾಗ… ಕೃಷಿ ಸೇವೆ

ಆಗಿನ ಬಾಸೆಲ್ ಮಿಶನ್ ಫಾರಂ ಸ್ಥಾಪನೆಯಾದದ್ದು 1926ರಲ್ಲಿ. ಮುದ್ರಣದಲ್ಲಿ ಹೊಸ ಹೆಜ್ಜೆ ಇಟ್ಟಿದ್ದ ಮಂಗಳೂರಿನ ಬಾಸೆಲ್ ಮಿಶನ್ ತೆಂಗಿನ ಬೆಳೆಯ ಪ್ರಯೋಗಕ್ಕೆ ಆ 40 ಎಕ್ರೆ ಭೂಮಿಯನ್ನು ಬಳಸಿತು. ಆದರೆ ಫಾರಂ ಲಾಭ ಕಾಣದೆ ನಷ್ಟದ ಹಾದಿ ಹಿಡಿಯಿತು. ಮೊದಲನೆ ಮಹಾಯುದ್ಧದ ಬಿಸಿ ತಟ್ಟಿದ್ದರಿಂದ ಜರ್ಮನ್-ಸ್ವಿಸ್ ಮಿಶನರಿಗಳ ಸಂಸ್ಥೆಯ ಈ ಫಾರಂನ್ನು ಮಾರಲು ನಿರ್ಧರಿಸಲಾಯಿತು.

ಮಾರಾಟದ ಹಾದಿಯಲ್ಲಿದ್ದ ಅದನ್ನು ಎಲ್.ಸಿ. ಸೋನ್ಸ್‌ರ ತಂದೆ ಆಲ್‌ಫ್ರೆಡ್ ಸೋನ್ಸ್ ತನಗೆ ಗೇಣಿಗೆ ನೀಡಬೇಕೆಂದು ಕೇಳಿಕೊಂಡರು. 1928ರಿಂದ ಫಾರಂನಲ್ಲಿ ಕೆಲಸಕ್ಕಿದ್ದ ಅವರ ಮನವಿಗೆ ಬಾಸೆಲ್ ಮಿಶನ್ ಸ್ಪಂದಿಸಿದ್ದರಿಂದ ಅದು ಅವರ ವಶಕ್ಕೆ ಬಂತು. ತೆಂಗಿನ ಬೆಳೆ ಬೆಳೆಯುವ ಅಲ್ಟ್ರೆಡ್ ಅವರ ಸಾಹಸ ಪ್ರಯೋಜನಕ್ಕೆ ಬರಲಿಲ್ಲ.

ಕಾಕತಾಳೀಯವೆಂಬಂತೆ ಅವರಿಗೆ ಕೊಚ್ಚಿನ್‌ನ ಕೃಷಿಕರೊಬ್ಬರು ಶ್ರೀಲಂಕಾದಿಂದ ತಂದಿದ್ದ ಅನಾನಾಸಿನ 50 ಮೊಳಕೆಗಳು ಸಿಕ್ಕವು. ಕಲ್ಲು ಪ್ರದೇಶವಾದರೂ ಅನಾನಾಸು ಅವರ ಕೈ ಹಿಡಿಯಿತು. ನಿರೀಕ್ಷೆಗೆ ಮೀರಿದ ಬೆಳೆ ಬಂತು. ವಾಣಿಜ್ಯ ಬೆಳೆಯಾಗಿ ಅದು ಅವರನ್ನು ಉದ್ಧರಿಸಿತು. ಹೀಗೆ ಆಕಸ್ಮಿಕವಾಗಿ ಬಂದ ಅನಾನಾಸು ಪ್ರಮುಖ ಬೆಳೆಯಾಗಿ ಬೆಳೆದಿದೆ. ಕರಾವಳಿಯ ಪ್ರದೇಶಕ್ಕೆ ಅನಾನಾಸನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಫಾರಂನಲ್ಲಿ ವರಮಾನ ಸಾಕಾಗದೆ ಇರುವಾಗ ಯುದ್ಧ ಸಮಯದಲ್ಲಿ ಅಸ್ಸಾಂನ ಆರ್ಮಿ ಫಾರಂನಲ್ಲಿ ದುಡಿದು ಕುಟುಂಬವನ್ನು, ಫಾರ್ಮನ್ನು ಸಾಕಿದರು. 78ರ ಹರೆಯದಲ್ಲಿ 1980ರಲ್ಲಿ ಕೃಷಿ ಮಾಡುತ್ತಲೇ ಕೊನೆಯುಸಿರೆಳೆದರು.

ಗುಸ್ತವ್ ಸೋನ್ಸ್ ಕುಟುಂಬ

ರೆ. ಕ್ರಿಸ್ಟ್ರೊಪ್ ಲಿಯೊನಾರ್ಡ್ ಗೀರ್ನರ್ ಅವರು ಮಂಗಳೂರಿಗೆ ಬಂದ ಆರಂಭದ ಮಿಶನರಿಗಳಲ್ಲಿ ಒಬ್ಬರು. ಅವರು 1851ರಲ್ಲಿ ಉಚ್ಚಿಲ ಮತ್ತು ಗುಡ್ಡೆ ಎಂಬಲ್ಲಿ ಚರ್ಚ್ ಸ್ಥಾಪಿಸಿದರು. ಸಮಸ್ಯೆಗೊಳಗಾಗಿದ್ದ 22 ಜನ ಅವರಿಂದ ಕ್ರೈಸ್ತ ಮತ ಸ್ವೀಕರಿಸಿದರು. ಅವರ ನಾಯಕ ಮಣಿ ಸೋನಾ-ಪೀಟರ್ ಸೋನ್ಸ್ ಆದರೆ ಆತನ ಪತ್ನಿ ಚಮಿಲಾ ಮಾರ್ತಾ ಆದರು. ಅವರ ಮೂರು ಮಕ್ಕಳಿಗೂ ಹನ್ನಾ, ಯೋಹನ್, ತಿಮೋತಿ ಎಂದು ಮರುನಾಮಕರಣವಾಯಿತು.

ಈ ದಂಪತಿಗಳ ಐದನೇ ಮಗನಾಗಿ 1855ರಲ್ಲಿ ಗುಸ್ತವ್ ಸೋನ್ಸ್‌ರ ಜನನ. ಅವರು 1878ರಲ್ಲಿ ಹಳೆಯಂಗಡಿಯ ಪಡುಹಿತ್ಲುನ ಶಾಂತಿಯವರನ್ನು ವಿವಾಹವಾದರು. 1842ರಲ್ಲಿ ಹಳೆಯಂಗಡಿಯಿಂದ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ ಮೊದಲಿಗರಾದ ಅಬ್ರಾಹಂ-ಸಾರಾ ದಂಪತಿಗಳ ಮೊಮ್ಮಗಳು ಶಾಂತಿ.

ಗುಡ್ಡೆ ಇಗರ್ಜಿಯ ಮಿಶನರಿ-ಇನ್-ಜಾರ್ಜ್ ಆಗಿದ್ದ ರೆ ಡಿಗ್ಲರ್ ಅವರು 1919ರಲ್ಲಿ ಗುಸ್ತವ್ ಸೋನ್ಸ್‌ರನ್ನು ಚರ್ಚ್‌ನ ಹಿರಿಯರಾಗಿ (elder) ನೇಮಿಸಿದರು.

ಗುಸ್ತವ್ ಸೋನ್ಸ್ ಅವರು ಸಾಕಷ್ಟು ದೊಡ್ಡ ಪ್ರಮಾಣದ ಜಮೀನು ಹೊಂದಿದ್ದರಲ್ಲದೆ ಪಾಂಗಾಳದ ದೊಡ್ಡ ಕೃಷಿಕರಾಗಿದ್ದರು. ಕುಟುಂಬ ಮತ್ತು ಆಸ್ತಿ ವಿಲೇವಾರಿಯ ಮಧ್ಯಸ್ತಿಕೆಯಲ್ಲಿ ಭಾರಿ ಹೆಸರು ಮಾಡಿದ್ದರು. ಕಂಬಳ ಅವರ ಪ್ರಮುಖ ಹವ್ಯಾಸವಾಗಿತ್ತು. ಅವರು ಜಿಲ್ಲೆಯ ಪ್ರಮುಖ ಕಂಬಳಗಳಲ್ಲಿ ಪಾಲ್ಗೊಂಡಿದ್ದರು. ಮತ್ಸೋದ್ಯಮದತ್ತ ಗಮನ ಹೊರಳಿದ್ದರಿಂದ ದೊಡ್ಡ ನಷ್ಟ ಅನುಭವಿಸಬೇಕಾಯಿತು. ಮತ್ತು ಭೂಮಿ-ಸಂಪತ್ತು ಕಳಕೊಳ್ಳಬೇಕಾಯಿತು. ಎಲ್.ಸಿ. ಸೋನ್ಸ್ ಈ ಸೋನ್ಸ್ ಕುಟುಂಬದ ಕುಡಿ.

ಸೋನ್ಸ್ ನರ್ಸರಿ

ಸೋನ್ಸ್ ನರ್ಸರಿ ಒಂದರ್ಥದಲ್ಲಿ ಡಾ ಸೋನ್ಸ್ ಅವರ ತಂದೆಯ ಕಾಲದಿಂದಲೇ ಆರಂಭವಾಗಿದೆ.

ದಿನಚರಿ… ಆಹಾರ…

ವರುಷ ಕಳೆದಂತೆ ದಿನಚರಿಯೂ ಸ್ವಲ್ಪ ವ್ಯತ್ಯಾಸವಾಗಿದೆ. ಆದರೂ ಈಗಲೂ ಸೋನ್ಸ್ 6.30ಕ್ಕೆ ಏಳುತ್ತಾರೆ. ಬೆಳಗ್ಗಿನ ಕೆಲಸ ಮುಗಿಸಿ ಸ್ವಲ್ಪ ವ್ಯಾಯಾಮ ಮಾಡುತ್ತಾರೆ. ಅದು ಹತ್ತರಿಂದ ಹದಿನೈದು ನಿಮಿಷಗಳ ಕಾಲ. ಕೃಷಿಯ ಚಟುವಟಿಕೆಯಿಂದ ದೇಹಕ್ಕೆ ವ್ಯಾಯಾಮ ಸಿಗುತ್ತದೆಯಾದರೂ ವ್ಯಾಯಾಮ ಸಿಗದ ದೇಹದ ಭಾಗಗಳಿಗೆ ಬೇಕಾದಂತೆ ಕೊಂಚ ವ್ಯಾಯಾಮ ಬೇಕು ಎಂಬುದು ಅವರ ಅನಿಸಿಕೆ. 8 ಗಂಟೆ ಹೊತ್ತಿಗೆ ಬೆಳಗ್ಗಿನ ತಿಂಡಿ-ತಿನಸು.

ಮೊದಲಾದರೆ ಕೃಷಿ ಕುಟುಂಬದಲ್ಲಿ ಸಾಂಪ್ರದಾಯಿಕ ಗಂಜಿ ಊಟ. ಈಗ ಇಡ್ಲಿ, ದೋಸೆ ಸಹಿತ ತಿಂಡಿಯಲ್ಲಿ ವೈವಿಧ್ಯತೆ ಬಂದಿದೆ. ತಿಂಡಿ ತಿನ್ನುತ್ತಲೇ ಅಂದು ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ. ಬಳಿಕ ಕೆಲಸದವರನ್ನು ಸೂಕ್ತ ಕೆಲಸಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುವುದು. ಹತ್ತು ಗಂಟೆ ಆಗುವಾಗ ಕೆಲಸದವರಿಗೂ ಎಲ್ಲರಿಗೂ ಚಾ-ತಿಂಡಿ.

ಮಧ್ಯಾಹ್ನ 1 ಗಂಟೆಗೆ ಊಟದ ಹೊತ್ತು. 1ರಿಂದ 2ರ ವರೆಗೆ ಊಟದ ವಿರಾಮ. ಆ ನಡುವೆ 10-15 ನಿಮಿಷದ ಲಘು ನಿದ್ರೆ. ಮತ್ತೆ ಕೆಲಸದ ಬಗೆಗೆ ನಿರ್ದೇಶನ, ಜವಾಬ್ದಾರಿಗಳ ಹಂಚಿಕೆ. ಬರುವ ಗ್ರಾಹಕರನ್ನು ನೋಡಿಕೊಳ್ಳುವುದು ಇರುತ್ತದೆ. 6.00ರಿಂದ 6.30ರ ವರೆಗೂ ವಾಹನಗಳಲ್ಲಿ ಗ್ರಾಹಕರು ತಮಗೆ ಬೇಕಾದ ಹಣ್ಣು-ಗಿಡ ಕೊಳ್ಳಲು ಬರುತ್ತಾ ಇರುತ್ತಾರೆ.

ಸಂಜೆ 6.30ರ ಬಳಿಕ ಬೆಳಗ್ಗೆ ಕಣ್ಣಾಡಿಸಿ ಬಿಟ್ಟಿದ್ದ ಪತ್ರಿಕೆಗಳತ್ತ ಗಮನ ಹರಿಸುವಿಕೆ, ಓದು. ಟಿ.ವಿ.ಯಲ್ಲಿ ಸುದ್ದಿ ವೀಕ್ಷಣೆ. ಗಂಭೀರ ಬರಹಗಳು, ಸಂಪಾದಕೀಯ ಬರಹಗಳಿಗಾಗಿ ಬಹಳ ಕಾಲದಿಂದ ದಿ. ಹಿಂದು ಪತ್ರಿಕೆಯನ್ನು ಓದುತ್ತಾ ಬಂದಿದ್ದಾರೆ. ಸಂಜೆಗೆ ಅದೊಂದು ನಿತ್ಯದ ಕೆಲಸ.

ರಾತ್ರಿ 8.00ರಿಂದ 8.30 ರಾತ್ರಿ ಊಟದ ಹೊತ್ತು. ರಾತ್ರಿ ಊಟಕ್ಕಂತೂ ಲಘು ಆಹಾರ. ಬೇಯಿಸದ ಆಹಾರ, ಮೊಳಕೆ ಬರಿಸಿದ ಆಹಾರವೇ ಹೆಚ್ಚು. ಮೊಳಕೆ ಬರಿಸಿದ ಆಹಾರಕ್ಕೆ ಮೊಸರು ಹಾಕಿ ಆಹಾರ ಸೇವನೆ. ಊಟದ ನಂತರದ ಅವಧಿ ಹೊಸ ಪುಸ್ತಕಗಳು, ಮ್ಯಾಗಸಿನ್‌ಗಳು, ಇಷ್ಟದ ಇತರ ಬರಹಗಳನ್ನು ಓದಲು ಇರುವ ಅವಕಾಶ. ರಾತ್ರಿ 11.00-11.30ಗೆ ನಿದ್ರೆ. ಮೊದಲಾದರೆ 12.30 ವರೆಗೂ ಓದಿನಲ್ಲಿ ತೊಡಗುವುದು ಇತ್ತು. ಈಗ ಸ್ವಲ್ಪ ಬೇಗ ವಿಶ್ರಾಂತಿಗೆ ಹೋಗಬೇಕೆನಿಸತೊಡಗಿದೆ ಎನ್ನಲು ಮರೆಯುವುದಿಲ್ಲ ಸೋನ್ಸ್.

ಮರದಲಿ ಮಾಡಿದ್ದ ಚಂದದ ಮನೆ

ಊಹಾಶೋಧದ ಬಗೆಗೆ ಸಾಕಷ್ಟು ತಿಳಿದ ಸೋನ್ಸ್ ಅವರು ತಮ್ಮ ಜಮೀನಿನಲ್ಲಿರುವ 300 ವರ್ಷಕ್ಕೂ ಹೆಚ್ಚು ವರ್ಷ ಬಾಳಿಕೆಯ ಶಾಂತಿ ಮರದ ಸುತ್ತ ಶಕ್ತಿ ಕೇಂದ್ರವೊಂದನ್ನು ಗುರುತಿಸಿದರು. ಅದಕ್ಕೆ ಕವಲು ಗೆಲ್ಲುಗಳನ್ನು ಬಳಸಿ ಒಂದು ಕೋಣೆಯ ‘ವೃಕ್ಷ ನಿವಾಸ’ ಸ್ಥಾಪಿಸಿದ್ದರು. ಆ ಜಾಗ ಸಹೋದರಿಯ ಪಾಲಿಗೆ ಹೋಗಿರುವುದರಿಂದ ವೀಕ್ಷಣೆಗೆ ಲಭ್ಯವಿಲ್ಲ.

ಮರದ ಮನೆಗೆ ಹತ್ತಲು ತಿರುಪಗಿ ಏಣಿಯಿತ್ತು. ಶಕ್ತಿ ಕೇಂದ್ರದ ಈ ಸ್ಥಾನದಲ್ಲಿ ಕುಳಿತು ಅಧ್ಯಯನ ಮಾಡುವ ಲೆಕ್ಕಾಚಾರ ಅವರದ್ದಾಗಿತ್ತು. ಕೆಲವು ವರ್ಷ ಆ ಅನುಭವವನ್ನು ಆಸಕ್ತರಿಗೆ ಉಣಬಡಿಸಿದರು. ಅವರ ತೋಟದಲ್ಲಿಯೇ ಆಗುತ್ತಿದ್ದ ಊಹಾಶೋಧದ ತರಬೇತಿಗೆ ಬರುವವರಿಗೆ ಇದೊಂದು ಸದವಕಾಶವಾಗಿತ್ತು. ಆ ಶಾಂತಿಯ ಮರದ ಹತ್ತಿರ ಕೈಗಳನ್ನು ಕೊಂಡು ಹೋದಾಗ ಶಕ್ತಿಯ-ಸ್ಪರ್ಶದ ಜ್ಞಾನ ಆಗುವುದನ್ನು ಅನೇಕರು ದಾಖಲಿಸಿದ್ದಾರೆ. ‘ಆಫ್ರಿಕಾದಲ್ಲಿ ಪ್ರಾಣಿ ವೀಕ್ಷಣೆಗೆ ಇಂತಹ ಮನೆಗಳನ್ನು ಮಾಡುವುದನ್ನು ನೋಡಿದ್ದೆ. ಶಕ್ತಿಕೇಂದ್ರದ ಪ್ರಯೋಗ ಪ್ರಾಣಿ, ಪಕ್ಷಿ ವೀಕ್ಷಣೆ ಎಲ್ಲದಕ್ಕೂ ಅನುಕೂಲವಾಗಲೆಂದು ಮಾಡಿಸಿದ್ದೆ’ ಎನ್ನುತ್ತಾರೆ ಸೋನ್ಸ್.

ಪಿರಾಮಿಡ್

ಪಾಠದಲ್ಲಿ ಓದಿದ್ದ, ಮಾಸ್ತರರಿಂದ ಕೇಳಿದ್ದ ಪಿರಾಮಿಡ್ಡ್‌ನ್ನು ಕಡಿಮೆ ಪ್ರಾಯ ದಲ್ಲಿಯೇ ನೋಡಿದ ಸೋನ್ಸ್ ಈಗ ಪಿರಾಮಿಡ್ ಒಂದನ್ನು ಕಟ್ಟಿದ್ದಾರೆ. ಯಾವುದೇ ಮಮ್ಮಿಯನ್ನು ಹೂತಿಡಲು ಅಲ್ಲ. ಅದು ಪಿರಾಮಿಡ್ ಕಟ್ಟಡ ಶಿಲ್ಪದ ಆಧಾರದಲ್ಲಿಯೇ ತಯಾರಾಗಿರುವ ಆಧುನಿಕ ರೀತಿಯ ಪಿರಾಮಿಡ್. ಮನೆಯ ಪಕ್ಕದಲ್ಲಿಯೇ ಇದೆ. ಅದರ ಕೇಂದ್ರ ಸ್ಥಾನದಲ್ಲಿ ಕುಳಿತರೆ ಶಕ್ತಿ ಸಂಚಯನವಾಗಿ ಆರೋಗ್ಯ ವರ್ಧಿಸುವುದೆಂಬ ನಂಬಿಕೆಯಿದೆ. ಅದೊಂದು ಧ್ಯಾನಕೇಂದ್ರ. ಸ್ವಲ್ಪ ಖರ್ಚಿನ ಬಾಬ್ತು. ಆದರೂ ಮನಸ್ಸಿಗೆ ಸಮಾಧಾನ ತರಬಲ್ಲ ನಿರ್ಮಿತಿ.