ಹಕ್ಕಿಗಳ ವಲಸೆ, ಪಕ್ಷಿಶಾಸ್ತ್ರಗಳಲ್ಲೆಲ್ಲಾ ಅತಿ ರೋಮಾಂಚನಕಾರಿಯಾದ ವಿಷಯ. ಅವುಗಳ ಹಾರಾಟದ ದೂರ, ಕರಾರುವಾಕ್ಕಾದ ಹಾಗೂ ಶಿಸ್ತಾದ ಓಡಾಟ, ಇವು ವರ್ಷದ ಋತುಗಳನ್ನೂ ಮೀರಿಸುತ್ತವೆ. ಮನುಷ್ಯನ ಕುತೂಹಲವನ್ನು ಯುಗಯುಗಗಳಿಂದಲೂ ಪಕ್ಷಿಗಳ ವಲಸೆ ಹೆಚ್ಚಿಸುತ್ತಲೇ ಇದೆ. ರೆಡ್ ಇಂಡಿಯನ್ನರು ಅವರ ತಿಂಗಳುಗಳನ್ನು ಹಕ್ಕಿಗಳ ಆಗಮನದಿಂದಲೇ ಹೆಸರಿಸುತ್ತಿದ್ದರಂತೆ.


ವೈಜ್ಞಾನಿಕ ಬೆಳವಣಿಗೆಯೊಂದಿಗೆ, ಹಕ್ಕಿಗಳ ವಲಸೆಯ ಬಗ್ಗೆ ಎಷ್ಟೋ ವಿಚಾರಗಳು ಇಂದು ನಮಗೆ ತಿಳಿದಿವೆಯಾದರೂ ಇನ್ನೆಷ್ಟೋ ವಿಚಾರಗಳು ಇನ್ನೂ ನಿಗೂಢವಾಗಿವೆ. ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಬಾಲಾಡಿ, ಸುವರ್ಣ, ಕೊಕ್ಕರೆ ಮುಂತಾದ ಹಕ್ಕಿಗಳು ಇದ್ದಕ್ಕಿದ್ದಂತೆ ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಾಣಿಸಿಕೊಳ್ಳುವುದನ್ನು ನಾವೆಲ್ಲಾ ಗಮನಿಸಿದ್ದೇವೆ. ಕೆಲವೇ ದಶಕಗಳ ಹಿಂದೆ, ಬಾಲಾಡಿ, ಕೋಗಿಲೆ ಮುಂತಾದ ಹಕ್ಕಿಗಳು ಎಲ್ಲೋ ಹಿಮಗಳ ಮಧ್ಯೆ ಉಳಿದ ಪ್ರಾಣಿಗಳಂತೆ ನಿಶ್ಚೇಷ್ಟವಾಗಿರುತ್ತವೆಂದು ಜನ ನಂಬಿದ್ದರು.

ವಲಸೆಯೆಂದರೆ, ಉತ್ತಮ ಪರಿಸರವನ್ನು ಹೊಂದಲು, ಒಂದೆಡೆಯಿಂದ ಮತ್ತೊಂದೆಡೆಗೆ, ಮತ್ತೆ ಅಲ್ಲಿಗೇ ಹಿಂದಿರುಗುವಂತೆ, ಪಕ್ಷಿಗಳು ನಡೆಸುವ ನಿಯತಕಾಲಿಕ ಓಡಾಟ. ಗಡಿಯಾರದ ಲೋಲಕದಂತೆ ವರ್ಷ ವರ್ಷ ನಡೆಯುವ ಈ ಸಂಚಾರ, ಪ್ರಪಂಚದ ಎಷ್ಟೋ ಸಸ್ತನಿಗಳಲ್ಲಿ ಹಾಗು ಜಲಚರಗಳಲ್ಲಿಯೂ ಇದೆ. ಆದರೂ ಪಕ್ಷಿಗಳ ಬಿಸಿರಕ್ತದ ಒಡಲು, ಗರಿಗಳಿಂದಾವೃತವಾದ ದೇಹ ಮತ್ತು ಹಾರಾಟದ ಶಕ್ತಿ ಇವುಗಳಿಂದಾಗಿ ಪಕ್ಷಿಗಳಲ್ಲಿ ವಲಸೆ ಹೋಗುವ ಸ್ವಭಾವ ಗರಿಷ್ಟ ಪ್ರಮಾಣದಲ್ಲಿ ಎದ್ದುಕಾಣುತ್ತದೆ. ಹಕ್ಕಿಗಳಿಗೆ, ಸ್ವಾಭಾವಿಕವಾಗಿಯೇ ನೈಸರ್ಗಿಕ ಕಷ್ಟಾವಸ್ಥೆಗಳನ್ನು ತಡೆದುಕೊಳ್ಳುವ ಶಕ್ತಿಯಿದೆ. ಆದರೂ, ಅತಿ ಶೀತ ಪ್ರದೇಶಗಳಲ್ಲಿ ವರ್ಷದ ಹಲವು ತಿಂಗಳು ಹಿಮಪಾತವಾಗುವುದರಿಂದ ಆಹಾರದ ಕೊರತೆ ಉದ್ಭವಿಸುತ್ತದೆ. ಹೀಗಾಗಿ ಆಹಾರದ ಅನ್ವೇಷಣೆಯಲ್ಲಿ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ.
ವರ್ಷದ ಒಂದೇ ಸಮಯದಲ್ಲಿ, ಭೂಮಿಯ ಎರಡು ಪ್ರದೇಶಗಳಲ್ಲಿ ಋತುಗಳಿಗನುಸಾರವಾಗಿ ಒಂದು ಕಡೆ ವಿಷಮ ಪರಿಸ್ಥಿತಿಯೂ ಮತ್ತೊಂದೆಡೆ ಅನುಕೂಲಕರವಾದ ಪರಿಸ್ಥಿತಿಯೂ ಇರುವುದರಿಂದ ಈ ಗುಣಗಳನ್ನು ಪಕ್ಷಿಗಳು ತಮ್ಮ ಬದುಕಿಗೆ ಸಮರ್ಥವಾಗಿ ಬಳಸಿಕೊಳ್ಳುತ್ತವೆ.

ಒಂದು ಹಕ್ಕಿಯ ವಲಸೆಯಲ್ಲಿ ಎರಡು ನಿರ್ದಿಷ್ಟ ಗಮ್ಯಸ್ಥಾನಗಳಿವೆ. ಒಂದು, ಪಕ್ಷಿಗಳು ಗೂಡುಕಟ್ಟಿ ಮರಿಮಾಡುವ ತಾಣ. ಇದನ್ನು ಹಕ್ಕಿಗಳ ಮನೆಯೆನ್ನಬಹುದು. ಎರಡು, ಆಹಾರವನ್ನು ಸಂಗ್ರಹಿಸುವ ಮತ್ತು ವಿಶ್ರಾಂತಿ ಪಡೆಯುವ ತಾಣ.

ಪಕ್ಷಿಗಳು ವಲಸೆ ಹೋಗುವ ದೂರ ಹಲವು ಹತ್ತು ಕಿ.ಮೀಗಳಿಂದ ಸಾವಿರಾರು ಕಿ.ಮೀ.ವರೆಗೂ ಇರುತ್ತದೆ. ಉದಾಹರಣೆಗೆ, ಭಾರತದ ಗಂಗಾಬಯಲಿನಲ್ಲಿ ವಾಸಿಸುವ ಕೆಲವು ಹಕ್ಕಿಗಳು ಹಿಮಾಲಯದ ತಪ್ಪಲಿಗೆ ವಲಸೆ ಹೋದರೆ, ಮತ್ತೆ ಕೆಲವು ಹಕ್ಕಿಗಳು ಸಾವಿರಾರು ಕಿ.ಮೀ ದಾಟಿ ಭಾರತಕ್ಕೆ ಬರುತ್ತವೆ. ಪ್ರಪಂಚದಲ್ಲಿಯೇ ಅತಿ ದೂರ ವಲಸೆ ಪ್ರಯಾಣ ಮಾಡುವ ಹಕ್ಕಿ ಆಕ್ರ್ಟಿಕ್ ಟರ್ನ್. ಇದು ಉತ್ತರ ಧ್ರುವ ಪ್ರದೇಶದಿಂದ ವಲಸೆ ಹೊರಟು ಭೂಗೋಳವನ್ನೇ ಸವೆಸಿ, ದಕ್ಷಿಣ ಧ್ರುವ ಪ್ರದೇಶವನ್ನು ಬೇಸಿಗೆಯಲ್ಲಿ ತಲುತ್ತದೆ. ನಂತರ, ನಃ ಉತ್ತರ ಧ್ರುವಕ್ಕೆ ವಾಪಸಾಗುತ್ತದೆ. ವರ್ಷಂಪ್ರತಿ ಈ ಹಕ್ಕಿಗಳು ವಲಸೆ ಹೋಗುವ ಒಟ್ಟು ದೂರ 35,000 ಕಿ.ಮೀಗಳು!

ಪಕ್ಷಿಗಳ ವಲಸೆ ಸಾಧಾರಣವಾಗಿ ಉತ್ತರದಿಂದ ದಕ್ಷಿಣಕ್ಕೆ ಇರುವುದಾದರೂ, ರ್ವ-ಪಶ್ಚಿಮ ದಿಕ್ಕಿನಲ್ಲಿ ಕೂಡಾ ಕೆಲವು ಹಕ್ಕಿಗಳು ವಲಸೆ ಹೋಗುತ್ತವೆ. ರ್ವದಿಂದ ಪಶ್ಚಿಮಕ್ಕೆ ವಲಸೆ ಹೋಗುವ ಹಕ್ಕಿಗಳಲ್ಲಿ ಒಂದು ಸೋಜಿಗದ ಸಂಗತಿಯನ್ನು ಕಾಣಬಹುದು. ಇಲ್ಲಿ ಕೆಲವು ಪಕ್ಷಿಗಳು ತಾವಿರುವ ತಾಣದಿಂದ ಅದೇ ರೀತಿ ಹವಾಮಾನವಿರುವ ಇನ್ನೊಂದು ಪ್ರದೇಶಕ್ಕೆ ಅಥವಾ ಕೆಲವೇ ಕಿ.ಮೀ ದೂರವಿರುವ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಹೀಗೆ ಸ್ಥಳೀಯ ವಲಸೆ ಕ್ರಮಗಳು ಹೇಗೆ ಉಪಯುಕ್ತ ಅಥವಾ ಅವುಗಳ ಜೀವನಕ್ಕೆ ಹೇಗೆ ಮುಖ್ಯ ಎಂಬುದನ್ನು ಅರಿಯಲು ಇನ್ನೂ ಸಾಧ್ಯವಾಗಿಲ್ಲ. ಉದಾಹರಣೆಗೆ, ಸುವರ್ಣಪಕ್ಷಿ ಮತ್ತು ನೊಣಹಿಡುಕಗಳು ಮಳೆಗಾಲದಲ್ಲಿ ಪಶ್ಚಿಮ ಭಾರತದ ಪಟ್ಟಣಗಳನ್ನು ತ್ಯಜಿಸಿ ಮಧ್ಯ ಭಾರತದ ಒಳನಾಡು ಮತ್ತು ದಕ್ಷಿಣ ಪ್ರಸ್ಥಭೂಮಿಯೆಡೆಗೆ ಹೋಗಿ, ಸೆಪ್ಟೆಂಬರ್ ತಿಂಗಳಲ್ಲೇ ಹಿಂದಿರುಗುತ್ತವೆ.

ಹಕ್ಕಿಗಳು ವಲಸೆ ಹೋಗುವುದು ಏಕೆ ಮತ್ತು ಹೇಗೆ ಎಂಬ ವಿಚಾರದಲ್ಲಿ ಅನೇಕ ವೈಜ್ಞಾನಿಕ ಸಿದ್ಧಾಂತಗಳು ಇದ್ದರೂ ಯಾವೊಂದು ಸಿದ್ಧಾಂತವೂ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗಿಲ್ಲ. ಹಕ್ಕಿಗಳ ವಲಸೆಯ ಬಗ್ಗೆ ಹೇಳುವಾಗ ನಾವು ಕೆಲವೊಂದು ವಾಸ್ತವಾಂಶಗಳನ್ನು ಮನಗಾಣಬಹುದು. 1. ಧ್ರುವ ಪ್ರದೇಶಗಳಲ್ಲಿ ಹಕ್ಕಿಗಳು ಚಳಿ ಮತ್ತು ಹಿಮಗಾಳಿಯನ್ನು ತಪ್ಪಿಸಿಕೊಳ್ಳಬೇಕಾಗುವುದು. 2. ಕೆಲವು ತಿಂಗಳ ಕಾಲ ಇಂತಹ ಪ್ರದೇಶಗಳಲ್ಲಿ ಹಗಲು ಕಡಿಮೆಯಿರುವುದರಿಂದ ಆಹಾರ ಹುಡುಕಲು ಕಷ್ಟವಾಗುವುದು. 3. ಹೆ್ಪಗಟ್ಟಿದ ವಾತಾವರಣದಲ್ಲಿ ಆಹಾರದ ಕೊರತೆಯೂ ಕಂಡುಬರುವುದು. ಈ ಕುಂದುಕೊರತೆಗಳನ್ನೆಲ್ಲಾ ಅವು ಮತ್ತೊಂದು ಗಮ್ಯಸ್ಥಾನದಲ್ಲಿ ನೀಗಿಕೊಳ್ಳಬಲ್ಲವು.

ದೂರ ಪ್ರಯಾಣ ಆರಂಭಿಸುವುದಕ್ಕೆ ಮುಂಚೆ, ವಲಸೆಹೋಗುವ ಪಕ್ಷಿಗಳು ಅನೇಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ಪ್ರಯಾಣದ ಸಮಯದಲ್ಲಿ ಷಕವಾಗುವಂತೆ, ಹೆಚ್ಚು ಹೆಚ್ಚು ತಿಂದು ಒಂದು ಪದರು ಅಧಿಕ ಕೊಬ್ಬನ್ನು ದೇಹದಲ್ಲಿ ಶೇಖರಿಸಿಕೊಳ್ಳುತ್ತವೆ; ವೃತ್ತಾಕಾರವಾಗಿ ಅಥವಾ ಗುಂಪಾಗಿ ಹಾರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತವೆ. ವಲಸೆಯಲ್ಲಿ ಹೆಚ್ಚಿನ ಹಕ್ಕಿಗಳು ದೊಡ್ಡ ಇಲ್ಲವೆ ಸಣ್ಣ ಗುಂಪಾಗಿ ಹಾರಿದರೆ, ಕೆಲವು ಪ್ರಭೇದದ ಹಕ್ಕಿಗಳು ಒಂಟಿಯಾಗಿಯೇ ಹಾರುತ್ತವೆ. ಸಣ್ಣ ಪಕ್ಷಿಗಳು ಗಂಟೆಗೆ ಸುಮಾರು ಮೂವತ್ತು ಕಿ.ಮೀ ಹಾರಿದರೆ, ದೊಡ್ಡ ಹಕ್ಕಿಗಳು ಎಂಭತ್ತು ಕಿ.ಮೀ ವೇಗದಲ್ಲಿ ಹಾರಬಲ್ಲವು. ಸಾಮಾನ್ಯವಾಗಿ ಎಲ್ಲಾ ಪಕ್ಷಿಗಳು ದಿನಕ್ಕೆ ಎಂಟು ತಾಸು ಪ್ರಯಾಣ ಮಾಡಬಲ್ಲವು.
ಸಮುದ್ರವನ್ನು ದಾಟಬೇಕಾದಲ್ಲಿ ಬಹುದೂರ ಸಾಗಬೇಕಾದ್ದು ಅನಿವಾರ್ಯವಾದಾಗ ಕೆಲವು ಹಕ್ಕಿಗಳು ಅವಿಶ್ರಾಂತವಾಗಿ 35ರಿಂದ 38 ಗಂಟೆ ಹಾರುವ ಸಂದರ್ಭವೂ ಇದೆ. ಅಲ್ಲದೆ, ಹಕ್ಕಿಗಳು ಅಲ್ಲಲ್ಲಿ ತಂಗುವ ಸ್ಥಳಗಳಲ್ಲಿ ಪ್ರತಿಕೂಲ ವಾತಾವರಣಕ್ಕೂ, ರಭಸದ ಗಾಳಿಗೂ ಸಿಲುಕಿ ಸಾವು-ನೋವುಗಳು ಅಧಿಕವಾಗುವ ಸಂಭವವೂ ಇದೆ. ಹೀಗಾಗಿ, ವಲಸೆ ಪ್ರಯಾಣ ಬಹಳ ಕಷ್ಟದಾಯಕವೂ, ಶ್ರಮಭರಿತವೂ ಅಲ್ಲದೆ ಅನೇಕ ವೇಳೆ ಅಪಾಯಕಾರಿಯೂ ಹೌದು.

ಹಗಲು ಹೊತ್ತು ವಲಸೆ ಹಾರುವ ಹಕ್ಕಿಗಳಿಗೆ ಸೂರ್ಯನೇ ದಿಕ್ಸೂಚಿಯಾಗಿರುತ್ತಾನೆ. ಆಕಾಶದಲ್ಲಿ ಸೂರ್ಯನಿರುವ ಕೋನವನ್ನನುಸರಿಸಿ ವಲಸೆ ಪಕ್ಷಿಗಳು ತಮ್ಮ ಪ್ರಯಾಣವನ್ನು ಮುಂದುವರಿಸುತ್ತವೆ. ಮಂಜು-ಮೋಡ ಮುಸುಕಿದ ವಾತಾವರಣದಲ್ಲಿ ಅವು ದಾರಿತ್ಪತ್ತವೆಂದು ತಿಳಿದಿದೆ. ಆದರೆ ಒಂದು ಸಾರಿ ಸೂರ್ಯನು ಮೋಡಗಳಿಂದ ಹೊರಬಂದರೆ, ಅವು ತಮ್ಮ ದಿಕ್ಕನ್ನು ಸರಿಪಡಿಸಿಕೊಳ್ಳುತ್ತವೆ.

ರಾತ್ರಿ ವೇಳೆಯ ಪ್ರಯಾಣ ಹೆಚ್ಚು ಸುರಕ್ಷಿತ. ಈ ವೇಳೆಯಲ್ಲಿ ಇತರ ಪ್ರಾಣಿಗಳಿಂದ ಜೀವಕ್ಕೆ ತೊಂದರೆಯಿಲ್ಲದಿರುವುದೇ ಇದಕ್ಕೆ ಕಾರಣ. ರಾತ್ರಿವೇಳೆ ನಕ್ಷತ್ರಗಳು ಹಾಗೂ ನಕ್ಷತ್ರಂಜಗಳೇ ಈ ಹಕ್ಕಿಗಳಿಗೆ ಮಾರ್ಗದರ್ಶಿ.

ವಲಸೆ ಪ್ರಕ್ರಿಯೆಯಲ್ಲಿ ಒಟ್ಟು ಮೂರು ವಿಚಾರಗಳನ್ನು ನಾವು ಗಮನಿಸಬಹುದು: 1. ವಲಸೆ ಹೋಗಲು ಅಧಿಸೂಚನೆ 2. ಗಮ್ಯಸ್ಥಾನದ ದಾರಿಸೂಚಿ 3. ಮತ್ತೆ ಹೊರಟ ಸ್ಥಳಕ್ಕೆ ವಾಪಸಾಗಲು ಅಧಿಸೂಚನೆ.

ವಲಸೆ ಹೋಗುವ ಸಮಯ ಬಂದಾಗ ಹಕ್ಕಿಗೆ ಮತ್ತೊಂದು ಪ್ರದೇಶಕ್ಕೆ ಹೋಗಲು ಹೇಗೆ ತಿಳಿಯುತ್ತದೆ? ಇದು ಬಹಳ ಕ್ಲಿಷ್ಟವಾದ ಪ್ರಶ್ನೆ. ವಿಜ್ಞಾನಿಗಳು ಎಷ್ಟೋ ರೀತಿ ಉತ್ತರಿಸಲು ಪ್ರಯತ್ನಿಸಿದರೂ ಒಂದು ಒಮ್ಮತಕ್ಕೆ ಬಂದಿಲ್ಲ. ಧ್ರುವಪ್ರದೇಶಗಳಲ್ಲಿ, ಆ ಕಾಲಕ್ಕೆ ಪ್ರತಿದಿನ ಬೇಗನೆ ಕತ್ತಲು ಕವಿಯುವುದರಿಂದ, ಹಗಲು ಸಣ್ಣದಾಗುತ್ತ ಹೋಗುವುದು. ಅದೇ ವೇಳೆಗೆ ಹೆಣ್ಣು ಹಕ್ಕಿಯು ಗರ್ಭ ಧರಿಸಲು ತಯಾರಾಗುವುದು ಮತ್ತೊಂದು ಕಾರಣ. ಏಕೆಂದರೆ ಗರ್ಭ ಧರಿಸದ ಹಕ್ಕಿಯಲ್ಲಿ ವಲಸೆ ಹೋಗುವ ಪ್ರವೃತ್ತಿ ಇಲ್ಲದಿರುವುದು ಮೇಲಿನ ಕಾರಣಕ್ಕೆ ಸಮರ್ಥನೆ ನೀಡುತ್ತದೆ.

ಇನ್ನು ಆ ಹಕ್ಕಿಗಳಿಗೆ ಗಮ್ಯಸ್ಥಾನ ಹಾಗೂ ಅಲ್ಲಿಗೆ ತಲುವ ದಾರಿ ತಿಳಿಯುವುದಾದರೂ ಹೇಗೆ? ಇದು ಮತ್ತೊಂದು ಕಠಿಣ ಪ್ರಶ್ನೆ. ವಸಂತಋತುವಿನಲ್ಲಿ ಮೊದಲು ಬಂದು ತಲುವುದು ಗಂಡು ಹಕ್ಕಿಗಳು. ನಂತರ ಹೆಣ್ಣುಹಕ್ಕಿಗಳೂ, ಕೊನೆಯಲ್ಲಿ ಮರಿಹಕ್ಕಿಗಳೂ ಬರುತ್ತವೆ. ಚಳಿಗಾಲದಲ್ಲಿ ಹಕ್ಕಿಗಳು ಹಿಂದಿರುಗುವಾಗ ಈ ಕ್ರಮ ವಿರುದ್ಧವಾಗುವುದನ್ನು ನಾವು ಕಾಣುತ್ತೇವೆ. ಅಂದರೆ, ಹಿಂದಿರುಗುವಾಗ ಉಳಿದ ಹಕ್ಕಿಗಳಿಗೆ ಮಾರ್ಗದರ್ಶಕರಾಗಿ ಮರಿಹಕ್ಕಿಗಳು ಹೋದರೆ, ಕೊನೆಯಲ್ಲಿ ಗಂಡುಹಕ್ಕಿಗಳು ತಲುತ್ತವೆ! ಆಶ್ಚರ್ಯಕರ ವಿಚಾರವೆಂದರೆ, ಹಿಂದಿರುಗುವಾಗ ಮರಿಹಕ್ಕಿಗಳು, ಅಂದರೆ, ಇದೇ ಮೊದಲ ಬಾರಿಗೆ ವಲಸೆ ಹಾರುತ್ತಿರುವ ಮರಿಹಕ್ಕಿಗಳಿಗೆ ತಮ್ಮ ಷಕರು ಮೊದಲು ಹೊರಟ ಸ್ಥಳವನ್ನೇ ನೇರವಾಗಿ ತಲುಪಲು ಹೇಗೆ ಸಾಧ್ಯ? ಅಲ್ಲದೆ, 600ರಿಂದ 1,200 ಮೀಟರ್ ಎತ್ತರದಲ್ಲಿ ಹಾರುತ್ತಿರುವಾಗ ಭೂಮಿಯ ಮೇಲಿನ ಸಣ್ಣ-ಟ್ಟ ಹೆಗ್ಗುರುತುಗಳು ಈ ಹಕ್ಕಿಗಳಿಗೆ ಸಹಾಯಕಾರಿಯಾಗುವ ಸಂಭವವೇ ಇಲ್ಲವೆನ್ನಬಹುದು. ಈ ವಿಸ್ಮಯಕರ ಕಾರ್ಯಕ್ಕೆ ಕಾರಣ ಸಾವಿರಾರು ವರ್ಷಗಳಿಂದ ಅನುವಂಶೀಯವಾಗಿ ಈ ಹಕ್ಕಿಗಳಲ್ಲಿ ಬಂದಂತಹ ಹುಟ್ಟರಿವು ಎಂಬುದು ನಿಸ್ಸಂಶಯ. ಇದಕ್ಕೆ ರಕವಾಗಿ ಹಕ್ಕಿಗಳ ಮೆದುಳಿನಲ್ಲಿರುವ ಅಯಸ್ಕಾಂತೀಯ ಶಕ್ತಿಯೂ ದಿಕ್ಸೂಚಿಯಂತೆ ಕೆಲಸ ನಿರ್ವಹಿಸುತ್ತದೆ. ಹುಟ್ಟಿನಿಂದಲೇ ಬರುವ ಇಂತಹ ಸಹಜ ಪ್ರವೃತ್ತಿಯನ್ನು ಹಕ್ಕಿಗಳು ಗೂಡುಕಟ್ಟುವ ವಿಚಾರದಲ್ಲಿಯೂ ನಾವು ಕಾಣಬಹುದು. ಗೀಜಗ, ಸಿಂಪಿಗ ಮುಂತಾದ ಪಕ್ಷಿಗಳು ಯಾವುದೇ ಸಹಾಯ, ಹಿಂದಿನ ಅನುಭವ ಅಥವಾ ತರಬೇತಿಯಿಲ್ಲದೆಯೇ ಅಚ್ಚುಕಟ್ಟಾಗಿ ಅವುಗಳ ಗೂಡನ್ನು ಕಟ್ಟಬಲ್ಲವು.
ತಮ್ಮ ಮೂಲಸ್ಥಾನಕ್ಕೆ ಹಿಂದಿರುಗುವ ವಿಚಾರದಲ್ಲಿಯೂ ಹಕ್ಕಿಗಳು ಅಷ್ಟೇ ನಿಖರವಾಗಿ ನಿರ್ದಿಷ್ಟ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತವೆ. ಸರಿಸುಮಾರು ಪ್ರತಿಬಾರಿಯೂ ಅದೇ ಸ್ಥಳವನ್ನು ಮಾತ್ರವಲ್ಲದೆ ಅದೇ ಮರದ ಮೇಲೆ ಕಳೆದ ವರ್ಷದ ಗೂಡನ್ನೇ ಆಶ್ರಯಿಸುವುದು ಮತ್ತೊಂದು ಸೋಜಿಗದ ಸಂಗತಿ. ತಮ್ಮ ಹಳೆಯ ಜಾಗವನ್ನು ಈ ಹಕ್ಕಿಗಳು ನೆನಪಿನಲ್ಲಿಟ್ಟುಕೊಳ್ಳಬಲ್ಲವೆಂಬುದು ಇದರಿಂದ ಸಾಬೀತಾಗುವುದು.

ಪ್ರತಿವರ್ಷ ತಪ್ಪದೆ ಅದೇ ದಿನ, ಅದೇ ಸ್ಥಳಕ್ಕೆ, ಕರಾರುವಾಕ್ಕಾಗಿ ಒಂದು ಹಕ್ಕಿ ನಿರ್ದಿಷ್ಟ ದಾರಿಯನ್ನನುಸರಿಸಿ, ಸಾವಿರಾರು ಕಿ.ಮೀಗಳ ಪ್ರಯಾಣವನ್ನು ಮಾಡಿ ತಲುತ್ತದೆ ಎನ್ನುವುದು ಯಾರಿಗೂ ಆಶ್ಚರ್ಯವನ್ನುಂಟುಮಾಡದಿರದು. ಉದಾಹರಣೆಗೆ, ಚಳಿಗಾಲದಲ್ಲಿ, ಕೇರಳದಲ್ಲಿ ಉಂಗುರ ಹಾಕಿದ ಒಂದು ಹಳದಿ ಬಾಲಾಡಿ, ಮುಂದಿನ ವಸಂತದಲ್ಲಿ ಕಾಬುಲ್ ಮತ್ತು ಅಫ್ಾನಿಸ್ತಾನದಲ್ಲಿ ಕಾಣಸಿಕ್ಕಿದೆ. ಹಿಮಾಲಯದ ಯಾವುದೋ ಭಾಗದಲ್ಲಿ ಮರಿಮಾಡುವ ಬೂದುಬಾಲಾಡಿ, ಸುಮಾರು 2,000 ಕಿಮೀ ದೂರ ಹಾರಿ ಪ್ರತಿವರ್ಷ ಸೆಪ್ಟೆಂಬರ್ 6ನೇ ತಾರೀಕು ನಮ್ಮ ಮನೆಯ ತೋಟಕ್ಕೆ ಬರುವುದನ್ನು ನಾನು ಕಳೆದ ಹನ್ನೊಂದು ವರ್ಷಗಳಿಂದ ನೋಡುತ್ತಿದ್ದೇನೆ.

ಭಾರತದಲ್ಲಿ ಅತಿ ಹೆಚ್ಚು ವಲಸೆ ಹಕ್ಕಿಗಳ ಬಗ್ಗೆ ಸಂಶೋಧನೆ ನಡೆಸಲ್ಪಡುವ ಸ್ಥಳ, ರಾಜಾಸ್ತಾನದ ಭರತ್ರ. ಇಲ್ಲಿ ಪ್ರತಿವರ್ಷ ಆಗಸ್ಟ್ನಲ್ಲಿ ಸೈಬೀರಿಯನ್ ಕೊಕ್ಕರೆಗಳ ಆಗಮನದೊಂದಿಗೆ, ಚಳಿಗಾಲದ ಹಕ್ಕಿವಲಸೆ ಪ್ರಾರಂಭವಾಗುತ್ತದೆ. ಪ್ರಪಂಚದಾದ್ಯಂತ ವಿಜ್ಞಾನಿಗಳು ಈ ಅದ್ಭುತ ದೃಶ್ಯವನ್ನು ನೋಡಲು ಹಲವು ವಾರಗಳ ಮುಂಚಿತವಾಗಿ ಬಿಡಾರ ಹೂಡುತ್ತಾರೆ. ಸೈಬೀರಿಯನ್ ಕೊಕ್ಕರೆಗಳು 4,600 ಕಿ.ಮೀ. ದೂರದ ಸೈಬೀರಿಯದಿಂದ ಹಾರಿ ಇಲ್ಲಿಗೆ ವಲಸೆ ಬರುತ್ತವೆ. ಬಹಳ ಅಪರೂಪದ ಈ ಹಕ್ಕಿಗಳ ಸಂಖ್ಯೆ ಇಂದು ಕೇವಲ 200 ಎಂದು ಅಂದಾಜು ಮಾಡಲಾಗಿದೆ. ಹತ್ತು ವರ್ಷಗಳ ಹಿಂದೆ ಭರತ್ರಕ್ಕೆ ಒಂದೇ ಒಂದು ಸೈಬೀರಿಯನ್ ಕೊಕ್ಕರೆಯೂ ಬರಲಿಲ್ಲ. ಇದು ವಿಜ್ಞಾನಿಗಳಿಗೆ ಬಹು ದಿಗಿಲು ಹುಟ್ಟಿಸಿತ್ತು. ಭರತ್ರಕ್ಕೆ ಆಗಮಿಸುವ ವಲಸೆ ಹಕ್ಕಿಗಳ ವಾಪಸಾತಿ ಮಾರ್ಚ್ ತಿಂಗಳಿನಿಂದ ಶುರುವಾಗುತ್ತದೆ.

ಭಾರತದ ಒಟ್ಟು 2,060 ಪ್ರಭೇದ ಮತ್ತು ಒಳಪ್ರಭೇದದ ಪಕ್ಷಿಗಳಲ್ಲಿ ಸುಮಾರು 344 ಪ್ರಭೇದದ ಹಕ್ಕಿಗಳು ವಲಸೆ ಹೋಗುತ್ತವೆ. ಈ ಹಕ್ಕಿಗಳು ಹೆಚ್ಚಾಗಿ ಉತ್ತರ ಯುರೋಪ್ ಮತ್ತು ಏಷ್ಯಾ ಖಂಡಗಳಿಗೆ ಸೇರಿದುವಾಗಿವೆ. ಬೇಸಿಗೆಯ ಕಾಲದಲ್ಲಿ, ಅಂದರೆ, ಮೇ ತಿಂಗಳಿನಿಂದ ಜುಲೈವರೆಗೆ, ಈ ಪಕ್ಷಿಗಳು ಹಿಮಾಲಯದಿಂದ ಉತ್ತರಕ್ಕಿರುವ ಪರ್ವತ ಪ್ರದೇಶಗಳಲ್ಲಿ ಗೂಡುಕಟ್ಟಿ ಮರಿಮಾಡುತ್ತವೆ. ಆ ಪ್ರದೇಶಗಳಲ್ಲಿ ಚಳಿಗಾಲ ಶುರುವಾದೊಡನೆ (ಜುಲೈ-ಆಗಸ್ಟ್ ತಿಂಗಳಲ್ಲಿ) ಇವು ದಕ್ಷಿಣದೆಡೆಗೆ, ಅಂದರೆ ಪಶ್ಚಿಮ ಆಫ್ರಿಕದಿಂದ ರ್ವ ಏಷ್ಯಾ, ಭಾರತ ಮತ್ತು ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ಕಡೆಗೆ ವಲಸೆ ಬರುತ್ತವೆ.

ವಲಸೆ ಬರುವ ಹಕ್ಕಿಗಳನ್ನು ಮತ್ತು ಅವು ಹಿಡಿಯುವ ದಾರಿಯನ್ನು ಕಂಡುಹಿಡಿಯುವುದು ಹೇಗೆ? ಇದಕ್ಕಾಗಿ ವಿಜ್ಞಾನಿಗಳು ಹಾಗೂ ಹವ್ಯಾಸಿ ಪಕ್ಷಿವೀಕ್ಷಕರ ತಂಡವೇ ಭಾಗವಹಿಸುತ್ತದೆ. ಅನೇಕ ಹಕ್ಕಿಗಳನ್ನು ಬಲೆಬೀಸಿ ಹಿಡಿದು, ಅವುಗಳ ಕಾಲಿಗೆ ಅಲ್ಯುಮಿನಿಯಂ ಅಥವಾ ಪ್ಲಾಸ್ಟಿಕ್ಕಿನ ಪಟ್ಟಿಯನ್ನು ಸುತ್ತಿ ಕಟ್ಟುತ್ತಾರೆ. ಇವುಗಳನ್ನು ರಿಂಗಿಂಗ್ ಅಥವಾ ಬ್ಯಾಂಡಿಂಗ್ ಎನ್ನುತ್ತೇವೆ. ಈ ಪಟ್ಟಿಯಲ್ಲಿ ಹಕ್ಕಿಯ ಸಂಖ್ಯೆ, ವಿವರಗಳನ್ನು ತಿಳಿಸಬೇಕಾದ ವಿಳಾಸ, ಮುಂತಾದುವುಗಳನ್ನು ದಾಖಲು ಮಾಡಲಾಗಿರುತ್ತದೆ.

ಮುಂದೆ ಈ ಹಕ್ಕಿಗಳು ಯಾರಿಗಾದರೂ ದೊರಕಿದಲ್ಲಿ, ಇಲ್ಲವೆ ಕಂಡಲ್ಲಿ, ಗುರುತು ಮಾಡಲಾದ ವಿಳಾಸಕ್ಕೆ ಸಂಪರ್ಕಿಸಿ ವಿವರ ತಿಳಿಸುತ್ತಾರೆ. ಇದಲ್ಲದೆ, ವಲಸೆಹಕ್ಕಿಗಳ ಬಗ್ಗೆ ತಿಳಿಯಲು, ಇತ್ತೀಚಿನ ದಿನಗಲ್ಲಿ ಹೊಸ ಹೊಸ ವೈಜ್ಞಾನಿಕ ಸಾಧನಗಳನ್ನು ಉಪಯೋಗಿಸಲಾಗುತ್ತದೆ.

1. ರೇಡಿಯೋ ಟೆಲಿಮೆಟ್ರಿ: ಇದರಲ್ಲಿ ಒಂದು ಅತಿ ಚಿಕ್ಕ, ಅಷ್ಟೇ ಪ್ರಬಲ ರೇಡಿಯೋ ಟ್ರಾನ್ಸ್ಮಿಟರ್ನ್ನು ಹಕ್ಕಿಯ ದೇಹದ ಒಂದು ಭಾಗದಲ್ಲಿ ಭದ್ರವಾಗಿ ಲಗತ್ತಿಸಿ ಹಕ್ಕಿಯು ಹಾರಿದಂತೆಲ್ಲ ಅದರ ಇರವನ್ನು ರೇಡಿಯೋ ತರಂಗಗಳ ಮೂಲಕ ಗುರುತಿಸಲಾಗುತ್ತದೆ. ದೊಡ್ಡ ಹಕ್ಕಿಗಳು ಮತ್ತು ಕಾಡು ಪ್ರಾಣಿಗಳಲ್ಲಿ ಇದನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ. ಆದರೆ, ಸಾವಿರಾರು ಕಿ.ಮೀ ದೂರಗಳಿಗೆ ಈ ವಿಧಾನವನ್ನು ಉಪಯೋಗಿಸಲಾಗುವುದಿಲ್ಲ.

2. ಉಪಗ್ರಹ ಬಳಕೆ: ಇದರಲ್ಲಿ ಒಂದು ಬಗೆಯ, ಉಪಗ್ರಹದೊಂದಿಗೆ ಸಂಪರ್ಕವಿರುವ ಟ್ರಾನ್ಸಿಸ್ಟರ್ನ್ನು ಹಕ್ಕಿಯಲ್ಲಿ ಅಳವಡಿಸಿ ಆ ಮೂಲಕ ಹಕ್ಕಿಯು ಹಾರುವ ದಾರಿಯನ್ನು ಗುರುತುಮಾಡಿಕೊಳ್ಳಲಾಗುವುದು. ಸೈಬೀರಿಯನ್ ಕೊಕ್ಕರೆಗಳಲ್ಲಿ ಈ ವಿಧಾನವನ್ನು ಉಪಯೋಗಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

3. ರಡಾರ್ಗಳ ಬಳಕೆ: ಇಲ್ಲಿಯೂ ರೇಡಿಯೋ ತರಂಗಗಳ ಬದಲಿಗೆ ರಡಾರ್ಗಳನ್ನು ಬಳಸಿ ಹಕ್ಕಿಗಳ ಇರವನ್ನು, ಅವು ವಲಸೆ ಹೋಗುವ ದಾರಿಯನ್ನು ಪತ್ತೆಹಚ್ಚಿ, ಗುರುತಿಸಲಾಗುತ್ತದೆ.

1959ರಿಂದ ನಮ್ಮ ದೇಶದ ಬಾಂಬೇ ನ್ಯಾಚುರಲ್ ಹಿಸ್ಟರಿ ಸೊಸೈಟಿಯವರು ಪರಿಣಾಮಕಾರಿಯಾಗಿ ವಲಸೆ ಪಕ್ಷಿಗಳಿಗೆ ಉಂಗುರ ತೊಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹೆಸರಾಂತ ಪಕ್ಷಿವಿಜ್ಞಾನಿ ಡಾ. ಸಲೀಂ ಆಲಿಯವರ ನೇತೃತ್ವದಲ್ಲಿ ಪ್ರಾರಂಭಗೊಂಡ ಈ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಮುಂದುವರೆದಿದೆ. ಈ ಪರಿಶ್ರಮದಿಂದ ಇಂದು ವಲಸೆ ಪಕ್ಷಿಗಳ ಬಗ್ಗೆ ವಿಜ್ಞಾನಿಗಳಿಗೆ ಬಹಳಷ್ಟು ಮಾಹಿತಿ ದೊರಕಿದೆ.

ಪ್ರತಿವರ್ಷ ವಲಸೆ ಹೋಗುವ ಚಲನವಲನವನ್ನು ದಾಖಲಿಸುವ ಕಾರ್ಯದಲ್ಲಿ ಕೆಲವು ಮುಖ್ಯ ಅಂಶಗಳನ್ನು ಗಮನದಲ್ಲಿರಿಸಬೇಕು. ವಾಡಿಕೆಯಂತೆ, ವಲಸೆ ಬರುವ ಹಕ್ಕಿ ಬಾರದಿದ್ದಲ್ಲಿ ಅಥವಾ ಹೊಸ ಹಕ್ಕಿಯೊಂದು ನಮ್ಮ ಸುತ್ತ-ಮುತ್ತ ಕಾಣಿಸಿಕೊಂಡಾಗ ಈ ಗೈರುಹಾಜರಿಗಾಗಲೀ, ಆಗಮನಕ್ಕಾಗಲೀ, ಹಲವಾರು ಕಾರಣಗಳಿರಬಹುದು. ದಾರಿಯಲ್ಲಿ ಆಹಾರದ ಕೊರತೆಯುಂಟಾಗಿ, ಹಕ್ಕಿಯು ಬೇರೆ ಮಾರ್ಗವನ್ನು ಹಿಡಿದಿರಬಹುದು ಅಥವಾ ವಿಷರಿತ ಆಹಾರ ಸೇವಿಸಿ ಹಕ್ಕಿಗಳು ಮರಣ ಹೊಂದಿರುವ ಸಾಧ್ಯತೆಯೂ ಇದೆ; ಇಲ್ಲವೇ ಆ ಹಕ್ಕಿಗಳ ಬೇಟೆಯಾಗಿರಬಹುದು. ಇದಲ್ಲದೆ, ದಾರಿಯಲ್ಲಿ ಯಾವುದೇ ನೈಸರ್ಗಿಕ ಪ್ರಕೋಪಗಳಿಗೆ ಬಲಿಯಾಗಿರುವ ಸಾಧ್ಯತೆಗಳನ್ನೂ ಉಪೇಕ್ಷಿಸುವಂತಿಲ್ಲ. ಮತ್ತಾವುದೋ ಸ್ಥಳದಲ್ಲಿ ವಿಕೋಪವುಂಟಾಗಿ ಬೇರೆಡೆ ಹೋಗಬೇಕಾಗಿದ್ದ ಇತರ ಹಕ್ಕಿಗಳು ದಾರಿ ಬದಲಿಸಿ ಇತ್ತ ಹಾರಿ ಬಂದಿರಲೂಬಹುದು.

ವಲಸೆ ಹೋಗುವ ಹಕ್ಕಿಗಳ ಮನೆ ಮತ್ತು ಗಮ್ಯಸ್ಥಾನಗಳಲ್ಲಿ ಅಥವಾ ಇವು ವಲಸೆ ಹೋಗುವ ದಾರಿಯಲ್ಲಿ ಯಾವುದೇ ಗುರುತರವಾದ ಪ್ರಾಕೃತಿಕ ಬದಲಾವಣೆಗಳಾದರೂ ಅವು ಈ ಪಕ್ಷಿಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಈ ಪರಿಣಾಮ ಮುಂದೆ ಇತರ ಜೀವಿಗಳ ಮೇಲೂ, ಕೊನೆಯಲ್ಲಿ ಮನುಷ್ಯನ ಮೇಲೂ ಪ್ರಭಾವ ಬೀರಬಹುದು. ಪಕ್ಷಿಗಳ ಒಡನಾಟ, ನಮ್ಮ ಜೀವನದಲ್ಲಿ ಅನಿವಾರ್ಯ ಹಾಗೂ ಅವಶ್ಯಕ. ಹೀಗೆ ಹಕ್ಕಿಗಳ ವಲಸೆಯೆಂಬುದು ಬರೀ ರೋಮಾಂಚಕಾರಿ ವಿಷಯವಷ್ಟೇ ಅಲ್ಲದೆ, ಪರಿಸರ ವಿಜ್ಞಾನಿಗಳಿಗೂ ಬಹು ಉಪಯುಕ್ತವಾಗಿದೆ.