ಪಕ್ಷಿಗಳು ಒಂದು ಭೂ ಆವಾಸದ ವಸ್ತುಸ್ಥಿತಿಯ ಕನ್ನಡಿಯಿದ್ದಂತೆ. ಮಾನವನ ಸ್ವಾರ್ಥ, ದುರಾಸೆ, ಕ್ರೂರತೆಯಿಂದಾಗಿ ಇಂದು ಎಷ್ಟೋ ಜೀವಿಗಳು ಕಣ್ಮರೆಯಾಗಿವೆ. ಜನಸಂಖ್ಯಾ ಸ್ಫೋಟ, ನಗರೀಕರಣ, ಔದ್ಯೋಗೀಕರಣ, ಆಧುನಿಕ ಬೇಸಾಯದಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ರಾಸುಗಳ ಮೇವಿಗೆ ಕಾಡುಗಳ ಬಳಕೆ, ಪ್ರಾಣಿಹತ್ಯೆ ಮುಂತಾದ ದುಷ್ಪರಿಣಾಮಗಳಿಂದ ಇಂದು ಎಷ್ಟೋ ಪಕ್ಷಿಸಂಕುಲಗಳು ವಿನಾಶದ ಹಾದಿ ಹಿಡಿದಿವೆ. ದಿನೇ ದಿನೇ ಅತಿ ವೇಗವಾಗಿ ಹೆಚ್ಚುತ್ತಿರುವ ದೂರಸಂಪರ್ಕ ಮತ್ತು ವಿವಿಧ ಟೆಲಿ-ಮಾಧ್ಯಮ ಸಂಪರ್ಕ ಸಾಧನಗಳು ತಮ್ಮ ವಿದ್ಯುದಯಸ್ಕಾಂತ ಕಿರಣಗಳಿಂದ ಈಗಾಗಲೇ ವಾಯು-ಶಬ್ದ ಮಾಲಿನ್ಯದಿಂದ ತುಂಬಿ ಹೋಗಿರುವ ವಾತಾವರಣವನ್ನು ಆವರಿಸುತ್ತಿವೆ. ಈ ಸಂಕೀರ್ಣ ಪರಿಸ್ಥಿತಿಯು ಜೀವಿಗಳ ಮೇಲೆ ಎಂತಹ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಇನ್ನೂ ಹೆಚ್ಚಿನ ವೈಜ್ಞಾನಿಕ ಸಂಶೋಧನೆ ನಡೆಯಬೇಕಾಗಿದೆ.

ವೇಗವಾಗಿ ನಡೆಯುತ್ತಿರುವ ಈ ಬದಲಾವಣೆಗಳನ್ನು ಸೈರಿಸಿಕೊಂಡು ಬಾಳುವ ಶಕ್ತಿ ಕೆಲವು ಹಕ್ಕಿಗಳಿಗಿದ್ದರೂ, ಅನೇಕ ಪಕ್ಷಿಗಳಿಗೆ ಇದು ದುಸ್ಸಾಹಸವಾಗಿ ತೋರುತ್ತದೆ. ಪರಿಸರದಲ್ಲಿ ಕನಿಷ್ಟ ಬದಲಾವಣೆಗಳಾದರೂ ಇಂತಹ ಹಕ್ಕಿಗಳ ಸಂಖ್ಯೆ ಮತ್ತು ನಡವಳಿಕೆಯಲ್ಲಿ ಗಣನೀಯ ವ್ಯತ್ಯಾಸಗಳಾಗಿ ಬಿಡುತ್ತವೆ. ಆರೋಗ್ಯಕರ ನೈಸರ್ಗಿಕ ವಾತಾವರಣದ ಸೂಚಕಗಳಾಗಿರುವ ಈ ಹಕ್ಕಿಗಳು ಪರಿಸರ ಸಂರಕ್ಷಣೆಯ ಕೀಲಿಕೈಗಳು.

ಭೂ ಆವಾಸಗಳಲ್ಲಿ ಯಾವುದೇ ಬದಲಾವಣೆಯಾದರೂ, ಅದು ಜೀವವೈವಿಧ್ಯತೆಯ ಮೇಲೆ ನೇರ ಪರಿಣಾಮ ಬೀರುವುದು ಕಂಡುಬರುತ್ತದೆ. ಹಕ್ಕಿಗಳು ಪರಿಸರ ವೈಪರೀತ್ಯಗಳಿಗೆ ಬಹು ಸೂಕ್ಷ್ಮವಾಗಿ ಸ್ಪಂದಿಸುತ್ತವೆ. ಇಂತಹ ವಾತಾವರಣದಲ್ಲಿ ವಾಸಿಸುವ ಪಕ್ಷಿಗಳ ಸಂಖ್ಯೆ ಮತ್ತು ನಡವಳಿಕೆಯ ಏರುಪೇರುಗಳ ಅಧ್ಯಯನ ಹಾಗೂ ಅರಿವು ಆ ಪರಿಸರದಲ್ಲಿ ಉಂಟಾಗಿರುವ ದುಷ್ಪರಿಣಾಮಗಳ ಆಳವನ್ನು ತೋರಿಸುತ್ತದೆ. ಪರಿಸರದ ಆರೋಗ್ಯ-ಅನಾರೋಗ್ಯಗಳಿಗೆ ಪಕ್ಷಿಗಳು ಅದ್ಭುತವಾದ ದಿಕ್ಸೂಜಿಗಳೆಂದು ವಿಜ್ಞಾನಿಗಳು ಪರಿಗಣಿಸಿದ್ದಾರೆ. ಕೊಡಗಿನಲ್ಲಿ ಇಂತಹ ಕೀಲಿಕೈ ಪಕ್ಷಿಗಳು ಬಹಳಷ್ಟು ಇವೆ. ಅವು ಯಾವುವೆಂದರೆ, ಕಾಕರಣೆ ಹಕ್ಕಿ, ಹೆಮ್ಮರಕುಟ್ಟಿಗ, ಸರಳು ಸಿಳ್ಳಾರ, ದಾಸಮಂಗಟ್ಟೆ, ನೀಲಗಿರಿ ಪಾರಿವಾಳ, ನೀಲಿಗಿಳಿ, ಬೂದುತಲೆ ಪಿಕಳಾರ, ಬಿಳಿಹೊಟ್ಟೆಯ ಮಟಪಕ್ಷಿ, ನೀಲಗಿರಿ ಮತ್ತು ಬಿಳಿಹೊಟ್ಟೆಯ ನೊಣಹಿಡುಕಗಳು, ಕರಿಗಿಡುಗ, ಕಪ್ಪೆಬಾಯಿ, ಹಾಗೂ ವೈನಾಡ್, ನೀಲಗಿರಿ ಮತ್ತು ಬೂದು-ಎದೆಯ ನಗೆಮಲ್ಲಗಳು.

ಪ್ರಾಕೃತಿಕ ಸಂಪತ್ತನ್ನು ಉಳಿಸಬೇಕು, ಪರಿಸರವನ್ನು ರಕ್ಷಿಸಬೇಕು ಮುಂತಾದ ಕೂಗು ಈಗ ಎಲ್ಲೆಡೆ ಕೇಳಿಬರುತ್ತಿದೆ. ಈ ದಿಶೆಯಲ್ಲಿ ಸರಕಾರ ಮತ್ತು ಅನೇಕ ಸಂ-ಸಂಸ್ಥೆಗಳು ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಅದರಲ್ಲೂ ಯುವಕ-ಯುವತಿಯರು ಹೆಚ್ಚಿನ ಕಳಕಳಿ ತೋರುತ್ತಿರುವುದು ಬಹಳ ಸಮಾಧಾನದ ವಿಷಯ. ಪಕ್ಷಿವೀಕ್ಷಣೆ ಮತ್ತು ಅವುಗಳ ಆವಾಸಗಳ ಅಧ್ಯಯನವೂ ಪ್ರಕೃತಿಯನ್ನು ವಿಸ್ತಾರವಾಗಿ-ಆಳವಾಗಿ ಅರಿಯಲು ಮಾತ್ರವಲ್ಲದೆ, ಆರೋಗ್ಯರ್ಣ ಪರಿಸರದ ಕಲ್ಪನೆ ಮತ್ತು ಜೀವವೈವಿಧ್ಯತೆಯ ವಿವಿಧ ಕೊಂಡಿಗಳ ತಿಳಿವಳಿಕೆ ಹೆಚ್ಚುವಲ್ಲಿಯೂ ಸಹಾಯ ಮಾಡುವುದು.

ಕೊಡಗು ಸಾಮಾಜಿಕ, ಸಾಂಸ್ಕೃತಿಕ, ವಾಣಿಜ್ಯ, ವಿದ್ಯೆ ಮುಂತಾದ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದುವರಿದ ಜಿಲ್ಲೆಯಾಗಿದೆ. ಕೊಡಗಿನ ಪಕ್ಷಿಸಂಕುಲದ ಬಗ್ಗೆ ಬರೆದಿರುವ ನನ್ನ ಚೊಚ್ಚಲ ಹೊತ್ತಗೆಯನ್ನು ಎಲ್ಲರೂ ತೆರೆದ ಹೃದಯದಿಂದ ಸ್ವೀಕರಿಸಿ, ಇದರ ಪ್ರಯೋಜನವನ್ನು ಪಡೆದು, ಪಕ್ಷಿವೀಕ್ಷಣೆ, ತನ್ಮೂಲಕ ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಆಲೋಚಿಸುವರೆಂದು ನಂಬಿದ್ದೇನೆ. ಈ ಸ್ತಕ ಹೆಚ್ಚು ಹೆಚ್ಚು ವಿದ್ಯಾಗಳನ್ನು, ಯುವಜನಾಂಗವನ್ನು ಪಕ್ಷಿವೀಕ್ಷಣೆಯೆಂಬ ಹವ್ಯಾಸದಲ್ಲಿ ತೊಡಗುವಂತೆ ಪ್ರೇರೇಪಿಸಿ, ್ರತ್ಸಾಹಿಸಿ, ಅವರು ಪ್ರಕೃತಿ ರಕ್ಷಕರೆಂಬ ಹೆಗ್ಗಳಿಕೆಗೆ ಪಾತ್ರರಾಗಲೆಂದು ಹಾರೈಸುತ್ತೇನೆ.

ಡಾ| ಎಸ್. ವಿ. ನರಸಿಂಹನ್
ವೀರಾಜಪೇಟೆ 571 218