ಹಕ್ಕಿಗಳಿಲ್ಲದ ಪ್ರಕೃತಿಯನ್ನು ಊಹಿಸಲೂ ಅಸಾಧ್ಯ. ಪಕ್ಷಿಗಳು ಮಾನವನ ವಿಕಾಸ ಮತ್ತು ಜೀವನದುದ್ದಕ್ಕೂ ಕಲೆ, ಶಿಲ್ಪ, ಸಾಹಿತ್ಯ ಮತ್ತು ಸಂಸ್ಕೃತಿ – ಹೀಗೆ ಎಲ್ಲಾ ಸ್ತರಗಳಲ್ಲೂ ಸ್ಪೂರ್ತಿ ನೀಡಿವೆ. ವೇದ-ಉಪನಿಷತ್ತುಗಳಲ್ಲಿ ಪಕ್ಷಿಗಳು ಪ್ರಕೃತಿಯ ಅದ್ಭುತ ಸೃಷ್ಟಿಯೆಂಬ ವರ್ಣನೆಯಿದೆ. ವಾಲ್ಮೀಕಿ ರಾಮಾಯಣದ ಪ್ರಾರಂಭವೇ ಕ್ರೌಂಚ ಪಕ್ಷಿಯ ಮರಣದಿಂದ. ಮುಂದೆ ಸೀತಾಪಹರಣದ ಸಮಯದಲ್ಲಿ ಜಟಾಯು ಮತ್ತು ಸಂಪಾತಿಗಳ ವೃತ್ತಾಂತವನ್ನು ಕಾಣುತ್ತೇವೆ. ಶಿಬಿ ಮಹಾರಾಜನ ಕಥೆಯಲ್ಲಿ ಬರುವ ಕತ, ಗಿಡುಗಗಳ ವೃತ್ತಾಂತ, ನಳನ ಕಥೆಯಲ್ಲಿ ಸಂದೇಶವಾಹಕದ ದ್ಯೋತಕವಾಗಿ ಬರುವ ಹಂಸದ ವಿಚಾರ ತಿಳಿದದ್ದೇ. ಚಾತಕ ಪಕ್ಷಿ ತಲೆಯೆತ್ತಿ ಬೀಳುತ್ತಿರುವ ಮಳೆ ನೀರನ್ನು ಮಾತ್ರ ಕುಡಿಯುತ್ತದೆ ಎಂಬ ಪ್ರತೀತಿಯೂ ಇದೆ. ಅಷ್ಟೇಕೆ, ಶ್ರೀವಿಷ್ಣು ಗರುಡವಾಹನ; ಸುಬ್ರಹ್ಮಣ್ಯನ ವಾಹನ ನವಿಲು, ಶನಿದೇವನ ವಾಹನ ಕಾಗೆ; ಅಲ್ಲದೆ ಸರಸ್ವತಿ, ಕಾಮಾಕ್ಷಿಯರೊಂದಿಗೆ ಹಂಸ ಮತ್ತು ಗಿಳಿಗಳು ಬೆಸೆದುಕೊಂಡಿವೆ. ವಿಷ್ಣುಶರ್ಮನ ಪಂಚತಂತ್ರದಲ್ಲಿ ಬರುವ ಹಕ್ಕಿಗಳು ಒಂದೇ ಎರಡೇ? ಹೀಗೆ ಹಕ್ಕಿಗಳು ನಮ್ಮ ದೇಶದ ರಾಣ ಕಥೆಗಳಲ್ಲೂ, ನೀತಿಕಥೆಗಳಲ್ಲೂ ಹಾಸುಹೊಕ್ಕಾಗಿವೆ. ಶಿಲ್ಪಕಲೆಯಲ್ಲಿಯೂ ನವಿಲು, ಗಿಳಿ, ಗರುಡ, ಹಂಸ ಮುಂತಾದ ಅನೇಕ ಹಕ್ಕಿಗಳನ್ನು ದೇಶದೆಲ್ಲೆಡೆ ಕಾಣಬಹುದು. ಚರಿತ್ರೆಯ ಟಗಳಲ್ಲೂ ಅನೇಕ ರಾಜಮಹಾರಾಜರ ಹಕ್ಕಿ ಒಡನಾಟವನ್ನು ಓದುತ್ತೇವೆ. ಸಾಹಿತಿಗಳಿಗಂತೂ ಅವರವರ ಭೌಗೋಳಿಕ ಹಿನ್ನೆಲೆಗನುಗುಣವಾಗಿ ಹಕ್ಕಿಗಳ ಬಣ್ಣ, ರೂಪ ಮತ್ತು ಕಂಠ ಇವೆಲ್ಲವೂ ಅತ್ಯಾಕರ್ಷಕ ಹಾಗೂ ಸ್ಫೂರ್ತಿದಾಯಕ. ಕನ್ನಡದ ಆದಿಕವಿ ಪಂಪ ಬನವಾಸಿಯ ವರ್ಣನೆ ಮಾಡುವಾಗ ಕೋಗಿಲೆಯಾಗಿ ಟ್ಟುವುದು ನಂದನದೊಳ್ ಬನವಾಸಿ ದೇಶದೊಳ್ ಎಂದು ಬಣ್ಣಿಸಿದರೆ, ಮಾಸ್ತಿ ವೆಂಕಟೇಶ ಅಯ್ಯಂಗಾರರು ಯಾವ ಹಕ್ಕಿಯಾದರೇನು ಕಾಗೆಯಾಗಿಯಾದರೂ ಕನ್ನಡನಾಡಿನಲ್ಲೇ ಹುಟ್ಟಬೇಕು ಎನ್ನುತ್ತಾರೆ!

ಒಂದೇ ಮಾತಿನಲ್ಲಿ ಬಣ್ಣಿಸಬೇಕೆಂದರೆ, ಹಕ್ಕಿಗಳು ಗರಿಗಳಿರುವ ಎರಡು ಕಾಲುಗಳ ಮೇಲೆ ನಡೆಯುವ ಪ್ರಾಣಿಗಳು. ಲೋಕದ ಇನ್ನಾವುದೇ ಜೀವಿಗೂ ಗರಿಗಳಿಲ್ಲ. ಗರಿಗಳು ನಮ್ಮ ಕೂದಲಿನಂತೆ ಕಂಡರೂ ಕೂದಲಿನ ರಚನೆಯೇ ಬೇರೆ, ಗರಿಗಳ ರಚನೆಯೇ ಬೇರೆ. ಗರಿಗಳಿರುವುದು ಹಕ್ಕಿಗಳಿಗೆ ಮಾತ್ರವಾದರೆ, ಕೂದಲು ಸಸ್ತನಿಗಳಿಗೆ ಮಾತ್ರ ಇರುತ್ತದೆ. ಹಕ್ಕಿಗಳಿಗೆ ಗರಿಗಳು ಬಂದದ್ದೆಲ್ಲಿಂದ?

ವಿಜ್ಞಾನಿಗಳು ಜುರಾಸಿಕ್ ಯುಗದಲ್ಲಿ ಅಂದರೆ, 16.5 ಕೋಟಿ ವರ್ಷಗಳ ಹಿಂದೆ, ಸರೀಸೃಪಗಳಿಂದ ಹಕ್ಕಿಗಳ ಉಗಮವಾಯಿತೆಂದು ಹೇಳುತ್ತಾರೆ. ನೆಲದ ಮೇಲೆ ತೆವಳುವ ಹಾವೆಲ್ಲಿ, ಸ್ವಚ್ಛಂದವಾಗಿ ಹಾರುವ ಹಕ್ಕಿಯೆಲ್ಲಿ- ಎಲ್ಲಿಂದೆಲ್ಲಿಯ ಸಂಬಂಧ, ಎಂದು ನಿಮಗನ್ನಿಸಬಹುದು.

ಸರೀಸೃಪಗಳಾಗಲೀ, ಹಕ್ಕಿಗಳಾಗಲೀ, ಮೊಟ್ಟೆಯಿಂದ ಮರಿಮಾಡುವ ಪ್ರಾಣಿಗಳು. ಇನ್ನೂ ಸೂಕ್ಷ್ಮವಾಗಿ ಗಮನಿಸಿ: ಕೋಳಿ, ನವಿಲು ಮುಂತಾದ ಹಕ್ಕಿಗಳ ಕಾಲುಗಳಲ್ಲಿ ಹುರುಪೆಗಳಿರುವುದನ್ನು ನೀವು ಕಂಡಿರಬಹುದು. ಅದೇ ಗಿಡುಗ, ಗೂಬೆ ಮುಂತಾದ ಹಕ್ಕಿಗಳಲ್ಲಿ ಈ ಕಾಲುಗಳು ಗರಿಗಳಿಂದ ಮುಚ್ಚಿರುತ್ತವೆ. ಅಂದರೆ, ಹುರುಪೆಯಂತಹ ಚರ್ಮದಿಂದ ಗರಿಗಳು ರೂಪಾಂತರಗೊಂಡು ವಿಕಾಸ ಹೊಂದಿವೆಯೆಂದಾಯಿತು. ಇದೇ ರೀತಿಯ ಹುರುಪೆಗಳನ್ನು ನಾವು ಹಾವು, ಮೊಸಳೆ ಮುಂತಾದ ಸರೀಸೃಪಗಳಲ್ಲಿ ಕಾಣುತ್ತೇವೆ. ಅಲ್ಲದೆ ಹಾವುಗಳು ವರ್ಷಕ್ಕೊಂದಾವೃತ್ತಿ ರೆ ಕಳಚುವಂತೆ, ಪಕ್ಷಿಗಳೂ ಹಳೆ ಗರಿಗಳನ್ನು ತೊರೆದು ಹೊಸ ಗರಿಗಳನ್ನು ಹೊಂದುತ್ತವೆ.

ಅತೀ ರಾತನ ಪಳೆಯುಳಿಕೆ, ಅರ್ಕಿಯೋಪ್ಟೆರಿಕ್ಸ್ ಲಿಥೋಗ್ರಾಫಿಕಾ ಎಂಬ ಪ್ರಭೇದದ ಹಕ್ಕಿ ಸರೀಸೃಪಗಳಿಗೂ, ಇಂದಿನ ಹಕ್ಕಿಗಳಿಗೂ ವಿಕಾಸದ ಕೊಂಡಿಯೆನಿಸಿಕೊಂಡಿದೆ. ಭೂಮಿಯ ಮೇಲೆ ವಾಸವಾಗಿರುವ ಸುಮಾರು ಎಂಟು ಸಾವಿರದ ಆರುನೂರಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳಲ್ಲಿ, ಎರಡು ಸಾವಿರದ ಅರವತ್ತಕ್ಕೂ ಹೆಚ್ಚು ಪ್ರಭೇದ-ಒಳಪ್ರಭೇದದ ಹಕ್ಕಿಗಳು ನಮ್ಮ ದೇಶದಲ್ಲಿವೆ. ಜಗತ್ತಿನಲ್ಲಿ ಇನ್ನೆಲ್ಲಿಯೂ ಕಂಡುಬಾರದ ಇಂತಹ ಪಕ್ಷಿವೈವಿಧ್ಯತೆಗೆ, ನಮ್ಮ ದೇಶದಲ್ಲಿರುವ ವಿವಿಧ ಭೂ ಆವಾಸಗಳೇ ಕಾರಣ ಎಂದು ಬೇರೆ ಹೇಳಬೇಕಿಲ್ಲ.

ದೇಹದ ರಚನೆ: ಪಕ್ಷಿಗಳು ಬಿಸಿರಕ್ತದ ಪ್ರಾಣಿಗಳು. ದೇಹದ ಶಾಖವನ್ನು ಒಂದೇ ಪ್ರಮಾಣದಲ್ಲಿರಿಸಲು ಹೆಚ್ಚು ಶ್ರಮಪಡಬೇಕು. ಗರಿಗಳು ದೇಹದ ಶಾಖವನ್ನು ನಷ್ಟವಾಗದಂತೆ ಉಳಿಸುತ್ತವೆ.

ದೇಹಕ್ಕೆ ಅಗತ್ಯ ಆಮ್ಲಜನಕವನ್ನು ರೈಸಲು ಉಸಿರಾಟದ ವೇಗವೂ ಹೆಚ್ಚು. ಹಕ್ಕಿಗಳ ಶ್ವಾಸಕೋಶದ ವ್ಯವಸ್ಥೆಯೇ ವಿಶಿಷ್ಟ. ಶ್ವಾಸಕೋಶದಲ್ಲಿರುವಂತೆಯೇ ಗಾಳಿಯ ಚೀಲಗಳು ದೇಹದ ಎಲ್ಲ ಅಂಗಾಂಗಗಳ ನಡುವೆಯೂ ಆವರಿಸಿವೆ. ಹಾರಲು ಗಟ್ಟಿಮುಟ್ಟಾದ ಮೂಳೆ ಬೇಕು, ಆದರೆ ಭಾರವಿರಬಾರದಲ್ಲ? ಆದ್ದರಿಂದ ಅವುಗಳ ಮೂಳೆಗಳೆಲ್ಲ ಟೊಳ್ಳಾದ ನಾಳಿಗಳು. ಅವುಗಳೊಳಗೂ ಗಾಳಿಯ ಚೀಲಗಳು! ಹೀಗಾಗಿ ದೇಹದಲ್ಲೆಲ್ಲಾ ಗಾಳಿಯ ಸಂಚಾರವಾಗಿ ಸಾಕಷ್ಟು ಆಮ್ಲಜನಕವನ್ನು ರೈಸುತ್ತವೆ.

ಪಕ್ಷಿಗಳಿಗೆ ಎಲ್ಲಕ್ಕಿಂತ ಮಿಗಿಲಾದ ಅಂಗ ಅವುಗಳ ರೆಕ್ಕೆ. ಮುಂಗಾಲುಗಳು ವಿಕಾಸಹೊಂದಿ, ಗರಿಗಳಿಂದಾವೃತವಾದ ಹಗುರ, ಜಲಾಭೇದ್ಯ ರೆಕ್ಕೆಗಳು, ಲೀಲಾಜಾಲವಾಗಿ, ಎಲ್ಲೂ ತಾಗದಂತೆ ಹಾರಲು-ಇಳಿಯಲು ತಯಾರಾದ, ಪ್ರಕೃತಿಯ ಅತಿಶಯ ಕೌಶಲ್ಯದ ಕಲಾಕೃತಿಗಳು. ಈ ಗರಿಗಳ ಬಣ್ಣ ಅವುಗಳಲ್ಲಿರುವ ಮೆಲಾನಿನ್, ಕೆರೋಟಿನಾಯ್ಡ್ ಮತ್ತು ಪಾರ್ಫಿನ್ಸ್ ವರ್ಣದ್ರವ್ಯಗಳ ವಿವಿಧ ಛಾಯೆಗಳಿಂದ ಉಂಟಾಗಿರುತ್ತವೆ. ಹಕ್ಕಿಗಳ ಬಣ್ಣಗಳು ಪರಿಸರದಲ್ಲಿ ತಮ್ಮ ಇರವನ್ನು ಮರೆಮಾಚಲು ಮತ್ತು ಸಂತಾನಋತುವಿನಲ್ಲಿ ಪರಸ್ಪರ ಆಕರ್ಷಿಸಲು ಸಹಾಯಕ. ರೆಕ್ಕೆಗಳನ್ನು ಬಳಸಿ ಸ್ವಚ್ಛಂದವಾಗಿ ಹಾರಾಡಲು ಸಾಮಥ್ರ್ಯ ಪಡೆದಿರುವಂತೆಯೇ, ಎತ್ತರದಲ್ಲಿ ಹಾರಾಡುವ ಗಿಡುಗ, ಹದ್ದುಗಳು ಬಿಸಿಗಾಳಿಯ ಮೇಲೊತ್ತಡದ ಉಪಯೋಗವನ್ನು ಪಡೆದು ಒಂದಿಷ್ಟೂ ರೆಕ್ಕೆ ಬಡಿಯದೆ ಶಕ್ತಿಯನ್ನು ಉಳಿಸುತ್ತವೆ.

ಹಕ್ಕಿಗಳ ದೃಷ್ಟಿ ಬಹುಸೂಕ್ಷ್ಮ. ನಮಗಿಂತ ಇಪ್ಪತ್ತು ಪಟ್ಟು ಹೆಚ್ಚು ಸ್ಫುಟವಾಗಿ ನೋಡಲು ಅವಕ್ಕೆ ಸಾಧ್ಯ. ಅಲ್ಲದೆ ಬಣ್ಣಗಳನ್ನೂ ಗುರುತಿಸಬಲ್ಲವು. ಸಂಯುಕ್ತ ಅಕ್ಷಿಗಳಿರುವ ಕೀಟಗಳಿಗೆ ಈ ಶಕ್ತಿಯಿಲ್ಲ. ಗೂಬೆ, ಮರಕುಟ್ಟಿಗ ಮುಂತಾದ ಹಕ್ಕಿಗಳು ಮೂರು ಆಯಾಮಗಳಲ್ಲಿಯೂ ನೋಡಬಲ್ಲವು. ನಿಶಾಚರ ಹಕ್ಕಿಗಳಿಗೆ ರಾತ್ರಿ ಹೊತ್ತೂ ಕೂಡ ದೃಷ್ಟಿ ಸೂಕ್ಷ್ಮವಾಗಿರುತ್ತದೆ. ದೂರದ ದೃಶ್ಯದಿಂದ ಫಕ್ಕನೆ ಹತ್ತಿರದ ದೃಶ್ಯವನ್ನು ನೋಡಲು ನಮಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ, ಹಕ್ಕಿಗಳಿಗೆ ಇದು ಒಂದೇ ಕ್ಷಣದ ಕೆಲಸ.

ಇನ್ನು ಶಬ್ದಗ್ರಹಣ ಶಕ್ತಿ ಹಕ್ಕಿಗಳಿಗೆ ಬಹು ತೀವ್ರವಾಗಿದೆ. ಅದರಲ್ಲೂ ರಾತ್ರಿ ವೇಳೆ ಬೇಟೆಯಾಡುವ ಹಕ್ಕಿಗಳಿಗೆ ಇದು ಅವಶ್ಯ. ಕತ್ತಲಲ್ಲಿ ಗುಹೆಗಳಲ್ಲಿ ಹಾರಾಡುವ ಕವಲುತೋಕೆ ಹಕ್ಕಿಗಳಿಗೆ ಪ್ರತಿಧ್ವನಿತ ತರಂಗಗಳಿಂದ ನೆಲೆ ಗೊತ್ತುಮಾಡುವ ಶಕ್ತಿಯಿದೆ. ಇತರ ಪಕ್ಷಿಗಳ ಸ್ವರವನ್ನು ಕೇಳಿ ಅನುಕರಿಸುವ ಕಲೆಯನ್ನು ಎಲೆಹಕ್ಕಿ, ಭೀಮರಾಜ, ಶಾಮ, ಕಳಿಂಗಗಳಲ್ಲಿ ಕಾಣಬಹುದು. ಬೆಟ್ಟದ ಮೈನಾ, ಮನುಷ್ಯನ ಸ್ವರವನ್ನೂ ಅನುಕರಿಸಬಲ್ಲವು. ಹಕ್ಕಿಗಳು ಆಗಂತುಕರ ಧ್ವನಿಯನ್ನು ಬಹು ಎಚ್ಚರಿಕೆಯಿಂದ ಕೇಳಿ, ಬೇಗ ಗುರುತು ಹಿಡಿಯುತ್ತವೆ.

ಹಕ್ಕಿಗಳಿಗೆ ರುಚಿಯನ್ನು ಗ್ರಹಿಸುವ ಶಕ್ತಿ ಬಹಳ ಕಡಿಮೆಯಾದರೆ, ್ರಾಣಶಕ್ತಿ ಅಥವಾ ವಾಸನೆಯನ್ನು ಗ್ರಹಿಸುವ ಶಕ್ತಿ ಇಲ್ಲವೇ ಇಲ್ಲ ಎನ್ನಬಹುದು. ಮೂಲತಃ ಹಕ್ಕಿಗಳಿಗೆ ತರ್ಕಬದ್ಧವಾಗಿ ಆಲೋಚಿಸುವ ಶಕ್ತಿಯೇನೂ ಇಲ್ಲ. ಯಾವುದನ್ನು ನಾವು ಅವುಗಳ ಬುದ್ಧಿವಂತಿಕೆಯ ನಡವಳಿಕೆಗಳು ಎಂದು ಭಾವಿಸುತ್ತೇವೋ, ಅವು ಹೆಚ್ಚಾಗಿ ಪಕ್ಷಿಗಳ ಹುಟ್ಟರಿವಿನ ಸಹಜ ಪ್ರಕೃತಿಯಾಗಿರುತ್ತವೆ.

ವಿವಿಧ ಅಂಗಗಳ ವಿಕಾಸ: ಹಕ್ಕಿಗಳ ಮುಂಗಾಲುಗಳು ರೆಕ್ಕೆಗಳಾಗಿ ಮಾರ್ಪಾಟಾಗಿರುವುದರಿಂದ, ಕೈಗಳ ಕೆಲಸವನ್ನು ಕಾಲು ಮತ್ತು ಬಾಯಿ ಮಾಡಬೇಕಾಗಿದೆ. ಇತರ ಪ್ರಾಣಿಗಳಿಗಿರುವಂತೆ ಪಕ್ಷಿಗಳಿಗೆ ಹಲ್ಲುಗಳಿಲ್ಲ. ಮೇಲ್ದವಡೆ-ಕೆಳದವಡೆ ಸೇರಿ ಕೊಕ್ಕಾಗಿದೆ. ಈ ಕೊಕ್ಕು ಬೇಟೆಯನ್ನು ಹಿಡಿಯಲು ಅಥವಾ ಆಹಾರವನ್ನು ಸೇವಿಸಲು ಮತ್ತು ಆತ್ಮರಕ್ಷಣೆಗಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ, ಹಲವಾರು ಜಾತಿಯ ಹಕ್ಕಿಗಳಿಗೆ ಕೀಟ, ಹುಳಗಳನ್ನು ತಿನ್ನುವ ಸ್ವಭಾವ. ಆದರೆ ಅವುಗಳನ್ನು ಹಿಡಿಯುವ ವಿಧಾನ ಬೇರೆ ಬೇರೆ. ನೊಣಹಿಡುಕ, ಜೇನುಮಗರೆಗಳು ಹಾರುತ್ತಿರುವ ಕೀಟಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದರೆ, ಮೈನಾ, ಚಂದ್ರಮುಕುಟಗಳು ನೆಲದ ಮೇಲಿಂದ ಹೆಕ್ಕಿ ತಿನ್ನುತ್ತವೆ ಹಾಗೂ ಮರಕುಟ್ಟಿಗಗಳು ಮರದ ತೊಗಟೆಯನ್ನು ಕುಕ್ಕಿ ಅದರೊಳಗಿಂದ ಕೀಟಗಳನ್ನು ಆರಿಸಿಕೊಳ್ಳುತ್ತವೆ. ಈ ಕಾರ್ಯಕ್ಕಾಗಿ, ಹಕ್ಕಿಗಳ ಕೊಕ್ಕುಗಳು ವಿವಿಧ ರೀತಿಯಲ್ಲಿ ಮಾರ್ಪಾಡಾಗಿವೆ. ಮಾಂಸವನ್ನು ಕಿತ್ತು, ಹರಿದು ತಿನ್ನಲು ಯೋಗ್ಯವಾದ ಚೂಪಾದ, ಹರಿತವಾದ, ಬಲಿಷ್ಠವಾದ, ಕೊಕ್ಕೆಯಂತೆ ಬಾಗಿರುವ ಗಿಡುಗ-ಹದ್ದು ಮುಂತಾದ ಹಿಂಸ್ರಪಕ್ಷಿಗಳ ಕೊಕ್ಕು; ಮರವನ್ನು ಕೊರೆಯಲು ಗಟ್ಟಿಮುಟ್ಟಾದ ಮರಕುಟ್ಟಿಗದ ಕೊಕ್ಕು; ಹೂಗಳ ಮಕರಂದವನ್ನು ಹೀರಲು ಉದ್ದವಾದ, ಕೆಳಕ್ಕೆ ಬಾಗಿರುವ ಸೂರಕ್ಕಿಗಳ ಕೊಕ್ಕು; ಕಾಳು-ಬೀಜಗಳನ್ನು ಒಡೆದು ತಿನ್ನಲು ರಾಟವಾಳ, ಗುಬ್ಬಚ್ಚಿಗಳ ಚೂಪಾದ, ಚಿಕ್ಕ ಕೊಕ್ಕು; ಅಗಲವಾಗಿ ‘ಆ’ ಎಂದು ಬಾಯ್ತೆರೆದು ಹಾರುತ್ತಿದ್ದರೆ, ಕೀಟಗಳು ತನ್ನಂತಾನೇ ಬಾಯೊಳಗೆ ಬೀಳುವ ಬಾನಾಡಿಯ ಕೊಕ್ಕು; ನೀರಿನಿಂದ ಬಸಿದು ತೆಗೆಯಲು ಜಾಲರಿಯಂತಹ ಚಮಚದ ಕೊಕ್ಕು, ಬಾತುಕೋಳಿಗಳ ಕೊಕ್ಕು; ಇನ್ನು ಎಲ್ಲಾ ರೀತಿಯ ಆಹಾರ ಬಯಸುವ ಕಾಗೆಯ ಬಹೂಪಯೋಗಿ ಕೊಕ್ಕು; ಇವೆಲ್ಲ ಉದಾಹರಣೆಗಳು.

ಹಾಗೆಯೇ ಕಾಲುಗಳು ಕೂಡ ಹಕ್ಕಿಗಳ ಓಡಾಟ, ಬೇಟೆ, ಮುಂತಾದ ಕೆಲಸಗಳಿಗೆ ತಕ್ಕಂತೆ ಮಾರ್ಪಾಡಾಗಿವೆ. ಜೌಗು ಪ್ರದೇಶಗಳಲ್ಲಿ ಆಹಾರ ಹುಡುಕುವ ಕೊಕ್ಕರೆ, ಬಕ ಮುಂತಾದ ಹಕ್ಕಿಗಳಿಗೆ ಹೂತು ಹೋಗದಂತೆ ಬಲಿಷ್ಠವಾದ ಕಾಲುಗಳು ಮತ್ತು ತೆಳುವಾದ, ಉದ್ದವಾದ, ಪಾದಗಳು; ನೀರಿನಲ್ಲಿ ಈಜಲು ಜಾಲಪಾದವಿರುವ ಹೆಜ್ಜಾರ್ಲೆ, ಬಾತುಗಳ ಕಾಲು; ಜಲಸಸ್ಯಗಳ ಮೇಲೆ ಅನಾಯಾಸವಾಗಿ ನಡೆದಾಡಲು ನೀಳ ಬೆರಳಿನ ದೇವನಕ್ಕಿಯ ಕಾಲು; ಬೇಟೆಯನ್ನು ಹಿಡಿಯಲು, ಮಾಂಸವನ್ನು ಬಗೆಯಲು ಚೂಪಾದ, ಹರಿತವಾದ ಉಗುರುಗಳಿರುವ ಹದ್ದು-ಗಿಡುಗಗಳ ಬಲಿಷ್ಠ ಕಾಲು; ನೆಲವನ್ನು ಕೆದಕಲು ತಕ್ಕ ಗೌಜುಗ, ಕೋಳಿಯ ಕಾಲು; ಓಡಲು ಗಟ್ಟಿಮುಟ್ಟಾದ ಪಾದವುಳ್ಳ ನೀಳಗಾಲು ಹಕ್ಕಿಯ ಕಾಲು; ಹತ್ತಲು-ಇಳಿಯಲು ತಕ್ಕುದಾದ ಮರಕುಟ್ಟಿಗ, ಗಿಳಿಯ ಕಾಲು; ಸಿಂಪಿಗ, ಗುಬ್ಬಚ್ಚಿ ಉಲಿಯಕ್ಕಿ ಮುಂತಾದ ಹಕ್ಕಿಗಳು ರೆಂಬೆಯ ಮೇಲೆ ಕುಳಿತುಕೊಳ್ಳಲು ತಕ್ಕುದಾದ ಸಣಕಲು ಕಾಲು ಮತ್ತು ಬೆರಳುಗಳು; ಇವೆಲ್ಲ ಉದಾಹರಣೆಗಳು.

ನೋಡಲು ಎಷ್ಟೋ ಜಾತಿಯ ಹಕ್ಕಿಗಳ ಗಂಡು-ಹೆಣ್ಣುಗಳು ವಿಭಿನ್ನವಾಗಿರುತ್ತವೆ. ಧ್ವನಿಯಲ್ಲಿ ಕೂಡ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ ಗಂಡು ಹಕ್ಕಿ ಆಕರ್ಷಕವಾಗಿರುತ್ತದೆ. ಸಂತಾನಋತುವಿನಲ್ಲಿ ಹೆಣ್ಣುಹಕ್ಕಿಯನ್ನು ಆಕರ್ಷಿಸಲು ಗಂಡುಹಕ್ಕಿಯು ಮಾಡುವ ನರ್ತನ, ಹಾಡುವಿಕೆ ಮತ್ತು ಇತರ ಅಂಗಚೇಷ್ಟೆಗಳನ್ನು ಕಾಣುತ್ತೇವೆ. ಒಂದು ಹಕ್ಕಿಗೆ ಒಂದಕ್ಕಿಂತ ಹೆಚ್ಚು ಸಂಗಾತಿಗಳು ಸಾಮಾನ್ಯ. ಕೆಲವು ಪ್ರಭೇದಗಳಲ್ಲಿ ಆಜನ್ಮ ಜೋಡಿಗಳನ್ನೂ ಕಾಣಬಹುದು.

ಸಂತಾನೋತ್ಪತ್ತಿ: ಗೂಡುಕಟ್ಟುವ ಕ್ರಿಯೆಯಲ್ಲಾಗಲಿ, ಮೊಟ್ಟೆಗಳಿಗೆ ಕಾವುಕೊಟ್ಟು, ಮರಿಗಳಿಗೆ ಗುಟುಕು ನೀಡಿ ಬೆಳೆಸುವ ಕಾರ್ಯದಲ್ಲಿಯೇ ಆಗಲಿ ಸಾಮಾನ್ಯವಾಗಿ ಎರಡೂ ಹಕ್ಕಿಗಳು ಕೆಲಸವನ್ನು ಹಂಚಿಕೊಳ್ಳುವುದನ್ನು ಕಾಣುತ್ತೇವೆ. ಅಪವಾದಗಳು ಇಲ್ಲದಿಲ್ಲ.

ಹಕ್ಕಿಗಳು ಗೂಡುಕಟ್ಟುವುದು ವಾಸಮಾಡಲಿಕ್ಕಲ್ಲ – ಅದು, ಮೊಟ್ಟೆಯಿಟ್ಟು, ಮರಿಮಾಡಿ, ಬೆಳೆಸುವ ಸಲುವಾಗಿ ಮಾತ್ರ. ಹಕ್ಕಿಗಳು ಗೂಡುಕಟ್ಟುವ ವಾಸ್ತುಶಿಲ್ಪ ಒಂದು ಅದ್ಭುತವಾದ, ವಿಶಿಷ್ಟವಾದ, ಹುಟ್ಟರಿವಿನಿಂದ ಬಂದ ಸಹಜ ಪ್ರವೃತ್ತಿ. ಗುಬ್ಬಚ್ಚಿ, ಗಿಳಿ, ಮೈನಾಗಳು ಮರ, ಕಟ್ಟಡ, ಅಥವಾ ಇತರ ಹಕ್ಕಿಗಳು ಮಾಡಿದ ರಂಧ್ರಗಳಲ್ಲಿ ಗೂಡು ಕಟ್ಟಿದರೆ, ನೀಳಗಾಲು, ಟಿಟ್ಟಿಭಗಳು ಯಾವುದೇ ಗೂಡು ಕಟ್ಟದೆ, ಮೊಟ್ಟೆಗಳನ್ನು ನೇರವಾಗಿ ನೆಲದ ಮೇಲೇ ಇಟ್ಟು ಕಾಪಾಡುತ್ತವೆ. ಬರೇ ಕಸ, ಒಣ ಕಡ್ಡಿ-ರೆಂಬೆಗಳಿಂದ ತಯಾರಿಸಿದ ಅಟ್ಟಣಿಗೆ ಗೂಡುಗಳಿಂದ ಹಿಡಿದು, ತಟ್ಟೆ-ಕಪ್ನಂತೆ ಒಣ ಹುಲ್ಲು, ಎಲೆ, ಹತ್ತಿಗಳಿಂದ ತಯಾರಾದ ಮೆದುವಾದ ಗೂಡುಗಳವರೆಗೆ; ಮರ-ಬದುಗಳನ್ನು ಕೊರೆದು ಸುರಂಗದಂತೆ ಮಾಡಿದ ಗೂಡುಗಳಿಂದ ಹಿಡಿದು, ನಾರು-ಬೇರು, ಮೃದುವಾದ ಹತ್ತಿಯಿಂದ ನಾಜೂಕಾಗಿ ನೇಯ್ದ ಗೂಡುಗಳವರೆಗೆ, ಸಾಮಾನ್ಯವಾಗಿ ಎಲ್ಲ ಹಕ್ಕಿಗಳು ತಮ್ಮ ಗೂಡನ್ನು ತಾವೇ ಕಟ್ಟಿಕೊಳ್ಳುತ್ತವೆ. ಬಾನಾಡಿಗಳು ಮಣ್ಣು, ಎಲೆಗಳನ್ನು ಎಂಜಲಿನೊಂದಿಗೆ ಅರೆದು ಮೆತ್ತಿದರೆ, ಮಂಗಟ್ಟೆಹಕ್ಕಿಗಳು ಹೆಣ್ಣುಹಕ್ಕಿಯನ್ನು ಟರೆಯೊಳಗೆ ಕುಳ್ಳಿರಿಸಿ, ಬರೇ ಕೊಕ್ಕು ಹೊರಗೆ ಕಾಣುವಂತೆ ಮಣ್ಣಿನಿಂದ ಮುಚ್ಚಿಬಿಡುತ್ತದೆ. ಇನ್ನು ಸಿಂಪಿಗ ಎರಡು ಎಲೆಗಳನ್ನು ಜೋಡಿಸಿ ಹೊಲೆದು ಗೂಡುಕಟ್ಟಿದರೆ, ನಾರು, ಹುಲ್ಲು-ಹತ್ತಿಯಿಂದ ರಚಿತವಾದ ಗೀಜಗನ ಗೂಡು ಪ್ರಸಿದ್ಧವಾಗಿದೆ. ಹಲವಾರು ಹಕ್ಕಿಗಳು ಒಟ್ಟಿಗೆ, ಸಮೂಹವಾಗಿ ಕಾಲೊನಿಯನ್ನು ಕಟ್ಟಿಕೊಳ್ಳುವುದೂ ಉಂಟು.
ಸಾಮಾನ್ಯವಾಗಿ ಹೆಣ್ಣುಹಕ್ಕಿ ಗೂಡು ಕಟ್ಟುವ ಕಾರ್ಯ ಮಾಡಿದರೆ, ಗಂಡುಹಕ್ಕಿ ಅಗತ್ಯ ಸಾಮಗ್ರಿಗಳನ್ನು ತಂದು ರೈಸುವ ಕೆಲಸ ವಹಿಸಿಕೊಳ್ಳುತ್ತದೆ. ಇವೆಲ್ಲಕ್ಕಿಂತ ವಿಚಿತ್ರವೆಂದರೆ, ಕೋಗಿಲೆಯ ಕುಟುಂಬಕ್ಕೆ ಸೇರಿದ ಹಕ್ಕಿಗಳು, ಗೂಡುಕಟ್ಟಿ, ಮೊಟ್ಟೆಯಿಟ್ಟು, ಕಾವುಕೊಟ್ಟು, ಗುಟುಕುನೀಡಿ, ಮರಿಗಳನ್ನು ಸಾಕಿ ಸಲಹುವ ಯಾವುದೇ ಗೋಜಿಗೆ ಹೋಗದೆ, ಉಪಾಯದಿಂದ ಹರಟೆಮಲ್ಲಗಳ ಗೂಡಿನಲ್ಲಿ ತಮ್ಮ ಮೊಟ್ಟೆಗಳನ್ನಿಟ್ಟು ನಿಶ್ಚಿಂತೆಯಿಂದ ಇದ್ದುಬಿಡುತ್ತವೆ!

ಇಷ್ಟೆಲ್ಲ ಪಾಡುಪಟ್ಟು, ಗೂಡು ಕಟ್ಟಿ ಮರಿಗಳನ್ನು ಬೆಳೆಸುವ ಕಾರ್ಯ ಹಕ್ಕಿಗಳ ವಾರ್ಷಿಕ ಜೀವನಚಕ್ರದಲ್ಲಿ ಅತಿ ಮುಖ್ಯವಾದ ಭಾಗ.  ಮೊಟ್ಟೆಯಿಟ್ಟು, ಕಾವುಕೊಟ್ಟು, ಮರಿಗಳಿಗೆ ಗುಟುಕು ನೀಡಿ ಬೆಳೆಸುವುದು ಸಾಮಾನ್ಯ ಕೆಲಸವೇನಲ್ಲ. ಇಷ್ಟಾದರೂ ಕ್ರೂರ ಪಕ್ಷಿ-ಪ್ರಾಣಿಗಳ ಹಸಿದ ಬಾಯಿಂದ, ನೈಸರ್ಗಿಕ ಪ್ರಕೋಪಗಳಿಂದ ಬದುಕಿ ಉಳಿಯುವ ಮರಿಗಳ ಸಂಖ್ಯೆ ಬಹಳ ಕಡಿಮೆ.

ಒಂದು ಗೂಡಿಗೆ ಎರಡರಿಂದ ಎಂಟು ಮೊಟ್ಟೆಗಳು ಸಾಮಾನ್ಯ. ಮರಿಹಕ್ಕಿಗಳಿಗೆ ಸಾಧಾರಣವಾಗಿ ಮೈಮೇಲೆ ರೆಕ್ಕೆಗಳು ಬೆಳೆದಿರುವುದಿಲ್ಲ, ಕಣ್ಣುಗಳು ಕಾಣಿಸುವುದಿಲ್ಲ- ಬಹಳ ನಾಜೂಕು ಮತ್ತು ಅಸಹಾಯಕ ಜೀವಿಗಳು. ಹೆತ್ತವರ ರಕ್ಷಣೆ-ಷಣೆ, ಬಹು ಅಗತ್ಯ. ಇವು ಪ್ರತಿದಿನ ತಮ್ಮ ದೇಹದ ಭಾರಕ್ಕಿಂತ ಹೆಚ್ಚು ಆಹಾರವನ್ನು ತಿಂದು ಬೆಳೆಯುತ್ತವೆ. ಎರಡು-ಮೂರು ವಾರಗಳಲ್ಲಿ ನಡೆಯಲು, ಕುಪ್ಪಳಿಸಲು, ಹಾರಲು, ಆಹಾರವನ್ನು ತಾವೆ ಸಂಪಾದಿಸಲು ಕಲಿಯುತ್ತವೆ.