ಮನೆಯ ಪ್ರಧಾನ ಬಾಗಿಲಿಗೆ ಹಲಸು, ಅಡಿಪಟ್ಟಿಗೆ ಹುನುಗಲು, ಕಿಟಕಿ ಬಾಗಿಲಿಗೆ ಬೆಟ್ಟಹೊನ್ನೆ, ಕಂಬಕ್ಕೆ ಹಲಸು, ಬೀಟೆ, ತೊಲೆಗೆ ಮತ್ತಿ, ನಂದಿ ಮರದಿಂದ ಪಕಾಸು ಹಾಗೂ ರೀಪು ತಯಾರಿ. ಮನೆಯ ಕೋಳುಕಂಬ ಹಾಗೂ ಎಳೆಗೆ ಹುನಾಲು  ಮರ. ಮಲಗುವ ಮಂಚಕ್ಕೆ ಕಾಸರಕ ಹೀಗೆ  ಮಲೆನಾಡಿನಲ್ಲಿ ೩೦ ವರ್ಷಗಳ ಹಿಂದೆ ಒಂದು ಮನೆಗೆ ಬಳಸುತ್ತಿದ್ದ  ಕಟ್ಟಿಗೆಗಳ ವಿವರ ಸಂಗ್ರಹಿಸಿದರೆ ಅವು ಕಾಡಿನ ರಹಸ್ಯ ಹೇಳುವಷ್ಟು  ಪ್ರಭಾವಿಯಾಗಿವೆ.


ನೇಗಿಲಿಗೆ ಬಳಸುವದು ಕಾಸರಕ ಮರ, ಕತ್ತಿಯ ಹಿಡಿಗೆ ಊರ ಹೊನ್ನೆ ಬೇರು, ನುರುಕಲು ಗಿಡ  ಬೇಕು. ಹಿರಿಯಜ್ಜನ ಊರುಗೋಲು ಮಂದಾರ ಕಟ್ಟಿಗೆಯದಾದರೆ ಒಳ್ಳೆಯದು, ಕಡಗೋಲಿಗೆ  ಹಾಲು ಬರುವ ಗಿಡವಾಗಬೇಕು ಹಾಗಾಗಿ ಹಾಲು ಖೈರ ಶ್ರೇಷ್ಟ, ರೊಟ್ಟಿಮಣೆಗೆ ಹಲಸು, ಸಾಗವಾನಿ   ಉಪಯುಕ್ತ, ಸಲಿಕೆ(ಗುದ್ದಲಿ) ಕಾವು ಮಾಡಲು ಬಿಲ್‌ಹಾಯಿಗ ಒಳ್ಳೆಯದು, ದೇವರ ಪೀಠಕ್ಕೆ  ನೀರು ಸಹಿಷ್ಣುಗುಣದ  ಬೀಟೆ, ಹಲಸು, ವಾಟೆ ಮರ ಬಳಕೆ. ದೇವಾಲಯದ  ರಥ, ಧ್ವಜ ಕಂಬಕ್ಕೆ ವಾಟೆ, ರಂಜಲು, ಮನೆ ಬಳಕೆಗೆ ಉಪ್ಪು ಸಂಗ್ರಹಿಸುವ ಪೆಟ್ಟಿಗೆಗೆ ಉಪ್ಪುಚಂದ್ರಿಕೆ, ಜೇನು ಸಾಕುವ ಪೆಟ್ಟಿಗೆಗೆ ನಂದಿ, ಹೇನು ತೆಗೆಯುವ ಹಣಿಗೆಗೆ ಶಿವಣೆ, ಕೂಗಲ ಬಳ್ಳಿಯ ಕವಳದ ಮರಿಗೆ, ಬೆತ್ತದ ಬುಟ್ಟಿ, ಕೃಷಿ ಬೇಲಿಗೆ ನಾರ್ಲೆ ಬಳ್ಳಿ, ಮೀನು ಹಿಡಿಯುವದಕ್ಕೆ  ಶ್ರೀತಾಳೆಕಾಯಿ, ಜೊಟ್ಟೆಯಿಂದ ನೀರೆತ್ತಲು ಬಗಿನೆ ಮರದ ಬಕೆಟ್! ಕಬ್ಬಿನಗಾಣ ಕಬ್ಬಿಣದ್ದಾಗುವ ಪೂರ್ವದಲ್ಲಿ ಮಸೆಮರದ ಕಟ್ಟಿಗೆಯಲ್ಲಿ ಗಾಣ ತಯಾರಿ. ಅಷ್ಟೇಕೆ ಆಲೆಮನೆಯಲ್ಲಿ ಕೋಣನನ್ನು ಹೊಡೆಯಲು ಬಳಸುವ ಕೋಲು ಕಾಸರಕದ್ದಾದರೆ ಉತ್ತಮ ಎಂದು ಕುಂದಾಪುರದ ಆಲೆಮಾಮ ಹೇಳಿದ್ದು ನೆನಪಿರಬಹುದು!

ಕಾಡು ಹಳ್ಳಿಗೆ ಬಂದು  ಕಟ್ಟಿಗೆ ಗುಣ ನೋಡಿ ಯಾವ ಮರ ಯಾವ ಕೆಲಸಕ್ಕೆ ಬಳಸಬೇಕು ಎಂದು ಯಾರೂ ನಮಗೆ ಪಾಠ ಮಾಡಿಲ್ಲ. ಕಡಿದು ಬಳಸಿದ ತಿಳುವಳಿಕೆಯಲ್ಲಿ ಇಂತಹ ಜ್ಞಾನ ಬೆಳೆದಿದೆ. ಒಂದು ಮೊಳೆ ಬಳಸದೆ ಮನೆ ನಿರ್ಮಿಸುವ ಪರಿಣಿತಿ ನಮ್ಮಲ್ಲಿತ್ತು. ಮೊಳೆಗೆ ಬದಲು ಆಗ ಕಟ್ಟಿಗೆ ಬೆಣೆ ಬಳಕೆ. ಚಳಿಗೆ ಕುಗ್ಗಿ, ಮಳೆಗೆ ಹಿಗ್ಗುವ ಕಾಷ್ಠ ಗುಣ ಬಾಗಿಲು, ಕಿಟಕಿಗಳ ಪಟ್ಟಿ, ಸಂದು ಕೂಡಿಸುವ ನಾಜೂಕಿನ ಕೆಲಸಕ್ಕೆ ದೊಡ್ಡ ಸಮಸ್ಯೆ. ಬಿದಿರು ಬೆಣೆ, ಲಕ್ಕಿ ಬೆಣೆ ಬಳಸಿದರೆ ಬಾಗಿಲ ಹಲಗೆಗಳನ್ನು ಪಟ್ಟಿಗೆ ಹೊಂದಿ ಕೂಡ್ರಿಸಬಹುದು, ಅದು ಯಾವ ಕಾಲಕ್ಕೂ ಗಾತ್ರ ವ್ಯತ್ಯಯವಾಗದು ಎಂದು ಆಚಾರಿಗಳಿಗೆ ಅನುಭವ ಕಲಿಸಿತು. ಮಾವಿನ ಮರ ಕಡಿದು ಗರಗಸದಲ್ಲಿ ಹಲಗೆ ತಯಾರಿಸಿ ನೇರ ಹಸಿಕಟ್ಟಿಗೆ ಮನೆಗೆ ಬಳಸಿದ ವರ್ಷ ಕೀಟಬಾದೆಯಿಂದ ಹಲಗೆ ಹಾಳು. ಮಾವಿನ ನಾಟಾ ಕೊರೆದ ಬಳಿಕ ತಿಂಗಳ ಕಾಲ ನೀರಲ್ಲಿ ನೆನೆಹಾಕುವ ಸಂಸ್ಕರಣೆ, ಅಲ್ಲಿ ಕೀಟತಡೆಗೆ ಸುಲಭ ಅಸ್ತ್ರ ಗೋಚರಿಸಿತು!. ಮನೆ ಮಹಡಿಗೆ ಹಲಗೆ ಹಾಕಿ ಮಣ್ಣು ಹಾಕುವದು ವಾಡಿಕೆ, ಕೆಲವು ಕಟ್ಟಿಗೆಗಳು ಮಣ್ಣಿಗೆ ಬೇಗ ಹಾಳಾಗುತ್ತವೆ. ಭರಣಿಗೆ ಮರದ ಹಲಗೆ ಬಳಸಿದರೆ ಅದರ ಕಹಿಗುಣಕ್ಕೆ ಗೆದ್ದಲು ಕಾಟ ಕಡಿಮೆಯೆಂಬ ಅರಿವು ಬೆಳೆಯಿತು. ಹೆಬ್ಬಲಸು, ಹೊನ್ನೆ ಮುಂತಾದ ಹಲಗೆ ಬಳಸಿದಾಗ ಗೆದ್ದಲು ನಿಯಂತ್ರಣಕ್ಕೆ ಮಹಡಿಯ ಹಲಗೆಯ ಮೇಲೆ ದಾಲ್ಚಿನ್ನಿ ಎಲೆ ಹಾಕಬಹುದು ಎಂದು ಯಾವುದೋ ಮನೆಯ ಅನುಭವ ಇನ್ನೊಂದು ಮನೆಗೆ ಹರಿದು ಬಂತು. ಈಗ ನೂರಾರು ವರ್ಷಗಳ  ಮಹಡಿ ಕೆಡವಿದರೆ ಅದರ ಮಣ್ಣೊಳಗೆ ಶತಮಾನದ ಎಲೆಗಳು ನಿನ್ನೆ ಕೊಯ್ದ ಎಲೆಗಳಂತೆ ಸುರಕ್ಷಿತವಾಗಿರುವದನ್ನು ಗಮನಿಸಬಹುದು. ಶಿರಸಿಯಲ್ಲಿ ರಸ್ತೆ ಅಗಲೀಕರಣ ನಡೆದಾಗ ಹಳೆ ಹಳೆಯ ಕಟ್ಟಡ ಕೆಡವಿದರು, ಶತಮಾನದ ದಾಲ್ಚಿನ್ನಿ ಎಲೆಗಳು ಇಲ್ಲಿನ  ಬೀದಿಗೆ ಬಿದ್ದು ಪರಂಪರೆಯ ಸಾಕ್ಷ್ಯ ಹೇಳಿದವು.

ಮನೆಯ ಪ್ರಧಾನ ಬಾಗಿಲಿಗೆ ಹಲಸು, ಅಡಿಪಟ್ಟಿಗೆ ಹುನುಗಲು, ಕಿಟಕಿ ಬಾಗಿಲಿಗೆ ಬೆಟ್ಟಹೊನ್ನೆ, ಕಂಬಕ್ಕೆ ಹಲಸು, ಬೀಟೆ, ತೊಲೆಗೆ ಮತ್ತಿ, ನಂದಿ ಮರದಿಂದ ಪಕಾಸು ಹಾಗೂ ರೀಪು ತಯಾರಿ. ಮನೆಯ ಕೋಳುಕಂಬ ಹಾಗೂ ಎಳೆಗೆ ಹುನಾಲು ಮರ. ಮಲಗುವ ಮಂಚಕ್ಕೆ ಕಾಸರಕ, ಹೀಗೆ ಮಲೆನಾಡಿನಲ್ಲಿ ೩೦ ವರ್ಷಗಳ ಹಿಂದೆ ಒಂದು ಮನೆಗೆ ಬಳಸುತ್ತಿದ್ದ ಕಟ್ಟಿಗೆಗಳ ವಿವರ ಸಂಗ್ರಹಿಸಿದರೆ ಅವು ಕಾಡಿನ ರಹಸ್ಯ ಹೇಳುವಷ್ಟು ಪ್ರಭಾವಿಯಾಗಿವೆ. ನಿರ್ಮಾಣಕ್ಕೆ ಬಳಸುವ ಬಹುತೇಕ ಕಟ್ಟಿಗೆಗಳು ಪಕ್ಕದ ಕಾಡಿನಿಂದ ಬಂದವು. ೪೦-೪೫ ಜಾತಿಯ ಕಟ್ಟಿಗೆ, ನಾರು, ಎಲೆ ಬಳಸಿ ಪ್ರತಿ ಊರಿನಲ್ಲಿ ಮನೆ ನಿರ್ಮಾಣ.  ಯಾವ  ಮರವನ್ನು  ಹೇಗೆ ಬಳಸಬೇಕು, ಯಾವ  ಮರವನ್ನು ಬಳಸಬಾರದು ಎಂಬ ವಿಧಿ-ನಿಷೇಧಗಳಿಗೆ  ಸ್ಥಳೀಯ  ಅರಣ್ಯ ಸಂಪತ್ತಿನ  ಆಧಾರ, ಇಲ್ಲಿ  ಹಲವು ಲಕ್ಷ ಮರ ಕಡಿದು ಗಳಿಸಿದ ಅಪಾರ ಅನುಭವಗಳಿವೆ. ಓದು ಬಾರದವರು ನಮ್ಮ ಅಡವಿ ಓದಿ ಸಸ್ಯ ಗುಣದ ಹಲವು ಸಂಗತಿ ಕಲಿತಿದ್ದಾರೆ !

ಇತ್ತೀಚೆಗೆ ಶೃಂಗೇರಿ ಕಾಡಿನ ಬಗಿನೆ ಮರಗಳು ನೂರಾರು ಕಿಲೋ ಮೀಟರ್ ದೂರದ ಬಯಲುಸೀಮೆಗೆ ಲಾರಿ ಏರಿ ಹೊರಟಿದ್ದವು. ಶಿಕಾರಿಪುರದಲ್ಲಿ ಮಾರ್ಗ ಮಧ್ಯೆ ಲಾರಿ ನಿಲ್ಲಿಸಿ ಖಾಸಗಿ ವಿಚಾರಣೆ ಆರಂಭಿಸಿದೆ. ನಮ್ಮ ಕಾಡುಗಳಲ್ಲಿ ಮರ ಅಪುರೂಪವಾಗುತ್ತಿವೆ, ಕಾಡಿನ ಮರಗಳೆಲ್ಲ ಹೀಗೆ ಲಾರಿ ಏರಿದರೆ ಹೇಗೆಂಬ ಚಿಂತೆ. ಗದ್ದೆ ಉಳುಮೆ ಬಳಿಕ ಹೆಂಡೆ ಒಡೆಯುವದು, ನೆಲ ಸಮತಟ್ಟುಗೊಳಿಸುವದು, ನಾಟಿಗೆ ಮುಂಚೆ ಕೆಸರು ಮಣ್ಣು ಜಾರಿಸುವದಕ್ಕೆ ಕೊರಡು ಹೊಡೆಯಬೇಕು. ಅದಕ್ಕೆ ಬಗಿನೆ ಲಾಯಕ್ಕು, ಅದಕ್ಕೆ ಮರ ಒಡೆದು  ಕೊರಡು ತಯಾರಿಸುತ್ತಾರೆ . ಕಾಡು ಕಣಿವೆಯ ಮರವನ್ನು  ನೆರೆಯ ಕೃಷಿಕರು ಬಳಸುವದಷ್ಟೇ  ವಿಶೇಷವಲ್ಲ. ಈ ಮರ ಬಳಕೆಯ ಜ್ಞಾನ ಕಾಡಿನಿಂದ ೨೦೦-೩೦೦ಕಿಲೋ ಮೀಟರ್ ದೂರದ ಬಯಲುಸೀಮೆಗಳಲ್ಲೂ ತಲತಲಾಂತರಗಳಿಂದ ಬೆಳೆದು ಬಂದಿದೆ. ಹಿಂದೆ ತಲೆಹೊರೆ, ಚಕ್ಕಡಿಯಲ್ಲಿ  ಆ ಊರು ತಲುಪುತ್ತಿದ್ದ ಮರಗಳು ಈಗ ಲಾರಿ ಏರಿ  ಕೃಷಿ ಏಳ್ಗೆಗೆ ಹೋಗುತ್ತಿವೆ. ನಮ್ಮ ಕಾಡಿನ ಬಿದಿರು ಬಳಸಿ ನಿರ್ಮಿಸಿದ  ಬಯಲು ಸೀಮೆಯ ಮಣ್ಣಿನ ಮನೆಗಳು ಅಲ್ಲಿ ಶತಮಾನಗಳಿಂದ ನಿಂತು ಬಳಕೆಯ ಬೆರಗು ಹೇಳುತ್ತಿವೆ.

ಉತ್ತರ ಕನ್ನಡದ ಉಳವಿ ಜಾತ್ರೆಗೆ ಸಾವಿರಾರು ಎತ್ತಿನ ಗಾಡಿಗಳಲ್ಲಿ ಬಯಲು ನಾಡಿನ ಜನ ಬರುತ್ತಿದ್ದರು. ಸುಗ್ಗಿ ಮುಗಿದ ಬಳಿಕ ಕಾಡು ಕಣಿವೆಯ ಚನ್ನಬಸವಣ್ಣನ ದರ್ಶನ ಎಲ್ಲರಿಗೂ ಪುಣ್ಯದ  ಕೆಲಸ. ಜಾತ್ರೆಗೆ ೧೫ ದಿನ ಮುಂಚಿತವಾಗಿ ಸಂಸಾರ ಸಮೇತ ಬರುತ್ತಿದ್ದ ರೈತರು ಕಾಳಿ ಕಣಿವೆಯ ಕಾಡಿನ ಬಗಿನೆ, ಬೆತ್ತ ಕಡಿಯುತ್ತಿದ್ದರು. ಎತ್ತಿನಗಾಡಿಗೆ ಹೊಸ ರಂಗು ನೀಡುತ್ತಿದ್ದರು. ಅಗತ್ಯ ಕೃಷಿ  ಉಪಕರಣ  ರೂಪಿಸಿಕೊಂಡು ಊರಿಗೆ ಮರಳುತಿದ್ದರು. ಇಲ್ಲಿನ  ಯಾವ ಕಣಿವೆಯಲ್ಲಿ ಯಾವ ಜಾತಿ ಮರವಿದೆ ಎಂಬ ತಿಳುವಳಿಕೆ  ಉಳವಿ ಊರಿನವರಿಗಿಂತ ಜಾತ್ರೆಗೆ ಬರುವ ಕೃಷಿಕರಿಗೆ ಚೆನ್ನಾಗಿ ತಿಳಿದಿತ್ತು!.

ಹಸುರು ಲೋಕದ ಹಳೆ ಕತೆ ಹುಡುಕಿದರೆ ಮರ ಬಳಕೆಯ ಇನ್ನಷ್ಟು ಸ್ವಾರಸ್ಯ ಸಾಕಷ್ಟಿದೆ. ಆದರೆ  ಇಂದಿನ ಬಳಕೆಗೆ ಮರ ಏಲ್ಲಿ ಎಂಬುದು ಮುಖ್ಯ ಪ್ರಶ್ನೆ. ನಮ್ಮ ಒತ್ತಡಕ್ಕೆ  ಸಸ್ಯಲೋಕ ಕಣ್ಣೆದುರು  ಖಾಲಿಯಾಗಿದೆ, ಪರಿಸರ ತಲ್ಲಣ ಇಷ್ಟು ಕಾಲ ಕಡಿದವರಿಗೆ ಇನ್ನು ‘ಮರ ಇಲ್ಲಣ್ಣ’ ಎಂದು ಸಾರಿ ಹೇಳುತ್ತಿದೆ. ಕಾಡಿನ ಪ್ರತಿ ಸಸ್ಯದ ಬಳಕೆ ಜ್ಞಾನ ಕಡಿದವರಿಗೆ ಒಲಿದಿದೆ. ಈಗ ನಾವು ಗಿಡದ ನೋವು ಕೊಂಚ ಆಲಿಸಬೇಕು. ಹೊಲ ಮನೆಗೆ ಬಳಸುತ್ತಿದ್ದ ಸಸ್ಯ ಲೋಕವನ್ನು ಈ ನೆಲದಲ್ಲಿ ಉಳಿಸಿ ಬೆಳೆಸಬೇಕು.