ಸೋಲಿಗರ ಪೋಡಿನ ಅಜ್ಜ ಶಾಲೆಗೆ ಬಂದು ಗಿಡಮೂಲಿಕಾ ಜ್ಞಾನದ ಪಾಠ ಮಾಡುವಾಗ ಕಲಿಯುವ ಸಂಗತಿ ಪ್ಯಾಂಟು ಹಾಕಿದ ಮೇಷ್ಟ್ರಲ್ಲಿ ಮಾತ್ರವಲ್ಲ ಊರಿನ ಜನರಲ್ಲಿಯೂ ಇದೆ ಎಂಬ ಕಲ್ಪನೆ ಮೂಡಲು ಸಾಧ್ಯವಾಯಿತು. ಶಾಲಾ ಶಿಕ್ಷಣದಲ್ಲಿಯೂ ಈಗ ಆಗಬೇಕಾದುದು ಇದೇ ಕೆಲಸ, ಊರಿನ ಭೂಮಿಯಲ್ಲಿ ಅರಿಯುವ ಅವಕಾಶ ತೋರಿಸುವದು ಮುಖ್ಯ ಗುರಿ. ಆಗ ಅನ್ನದ ವೃತ್ತಿಯನ್ನು ಅಭಿಮಾನದಿಂದ ನೋಡಲು ಮನಸ್ಸಿಗೆ ಸಾಧ್ಯವಾಗುತ್ತದೆ. ಭಾರತದ ಕೃಷಿಕರು ಬಡವರು……ಅವರು ಬೆವರಿಳಿಸಿ ದುಡಿಯುತ್ತಾರೆಎಂದು ಕಾಲದ ಪಾಠ ಓದುತ್ತಿದ್ದರೆ ನೆಲದ ಪ್ರೀತಿ ರವಷ್ಟೂ ಹುಟ್ಟುವದಿಲ್ಲ, ಬದುಕುವ ಸಾಧ್ಯತೆ ತೆರೆದುಕೊಳ್ಳುವದಿಲ್ಲ. ಬದುಕಿ ಗೆದ್ದವರ, ನೆಮ್ಮದಿ ಕಂಡವರ ಮಾರ್ಗಪಥ ಅರಿತಾಗ ಮಾತ್ರ ಮಕ್ಕಳಿಗೆ ಕೃಷಿ ನೀತಿ ಆಪ್ತವಾಗುತ್ತದೆ.


ಮನೆ ಮಕ್ಕಳನ್ನು ಕೃಷಿ ಕಾರ್ಯಗಳಲ್ಲಿ ತೊಡಗಿಸುವ ಹಿರಿಯರ ಜಾಣ್ಮೆ ಈಗ ದಾರಿ ತಪ್ಪಿದೆ. ಹಿಂದಿನಂತೆ ಈಗ ಮನೆ ತುಂಬ ಮಕ್ಕಳಿಲ್ಲ, ಇರುವ ಒಂದೇ ಮಗುವಿಗೆ ಒಳ್ಳೆಯ ಶಿಕ್ಷಣ ಒದಗಿಸುವ ಕಾಳಜಿ ಹೆಚ್ಚಿದೆ. ಪಾಠ, ಟ್ಯೂಷನ್, ಪ್ರವೇಶ ಪರೀಕ್ಷೆ, ವಾರ್ಷಿಕ ಪರೀಕ್ಷೆ ಎಂದು ಮಗುವಿನ ಮನಸ್ಸನ್ನು ನಗರ ಸುಖದ ನೌಕರಿ ನೇರಕ್ಕೆ ಕಟ್ಟುವ ಕೆಲಸ ಸಾಗಿದೆ. ತಿಂಗಳುಗಟ್ಟಲೆ ರಜೆಯಿದ್ದರೂ ಗದ್ದೆ ಕೆಲಸಕ್ಕೊ, ತೋಟದ ಕೆಲಸಕ್ಕೊ ಮಕ್ಕಳು ದುಡಿಯುವದು ನಮ್ಮ ಪ್ರತಿಷ್ಠೆಗೆ ಕುಂದು ಎಂಬ ಮನೋಭಾವ ಬೆಳೆದಿದೆ. ಮನೆಯ ಜಮೀನು ಎಲ್ಲಿದೆ? ಗಡಿ ಗುರುತುಗಳೆಲ್ಲಿವೆ? ದೊಡ್ಡಿಯಲ್ಲಿ ಎಷ್ಟು ಜಾನುವಾರು ಇದೆ? ತೋಟದಲ್ಲಿ ಯಾವ ಕಾಲಕ್ಕೆ ಯಾವ ಕೆಲಸ ಮಾಡುತ್ತಾರೆ? ಕನಿಷ್ಠ ಪ್ರಶ್ನೆಗಳಿಗೂ ಉತ್ತರಿಸುವ ತಾಕತ್ತು ಕೃಷಿಕರ ಮನೆಯ ಪ್ರೌಢಶಾಲಾ ಮಕ್ಕಳಿಗೂ ಇಲ್ಲ! ಕೃಷಿ ನೆಲದ ಆಧಾರದಲ್ಲಿ ಜೀವನ ನಡೆಸುವ ಕುಟುಂಬಕ್ಕೆ ಭವಿಷ್ಯದ ನೆಲೆಯಲ್ಲಿ ಕೃಷಿ ಜ್ಞಾನ ಬೇಕು. ನೌಕರಿ ಓಟದಲ್ಲಿ ಸಾಗಿರುವ ಸಮೂಹ ಮಕ್ಕಳ ಮನಸ್ಸು ತೋಟಕ್ಕೆ ನುಗ್ಗದಂತೆ ಒತ್ತಾಯದ ಬೇಲಿ ಹಾಕುತ್ತಿದೆ.

ಗ್ರಾಮೀಣ ಶಾಲೆಗಳ ಶಿಕ್ಷಣ ಮಾರ್ಗವನ್ನು ಪುನರ್ ವಿಮರ್ಶಿಸುವ ಸಂದರ್ಭ ಎದುರಾಗಿದೆ. ಶಾಲೆಯ ಅವಧಿಯಲ್ಲಿ ಸ್ಥಳೀಯ ಕೃಷಿ, ಪರಿಸರದ ಮಾಹಿತಿ ಹಂಚುವ ಕಾರ್ಯ ಹೆಚ್ಚಬೇಕಾಗಿರುವುದು ಇಂದಿನ ತುರ್ತು ಅಗತ್ಯ. ಕರಾವಳಿಯ ಮಕ್ಕಳಿಗೆ ಬೀಸು ಬಲೆ, ಗೋರು ಬಲೆ, ಚಿಟ್ಟಕಂಟ್ಲಿ, ಕುರ್ಕಿಯಂತಹ ಮೀನುಗಾರಿಕೆ ಪರಿಕರಗಳ ಬಳಕೆ ಸೂಕ್ಷ್ಮಗಳನ್ನು ಹೇಳಬಹುದು, ಬಯಲು ಸೀಮೆಯ ಮಕ್ಕಳಿಗೆ ಅಲ್ಲಿನ ಮಣ್ಣಿನ ವಿವಿಧ ಮಾದರಿಗಳಲ್ಲಿ ಹೇಗೆ ಬೆಳೆ ತೆಗೆಯುವರೆಂಬ ಜಾಣ್ಮೆ ತೋರಿಸಬಹುದು, ಮಲೆನಾಡಿನ ವೈವಿಧ್ಯಮಯ ತೋಟಗಾರಿಕಾ ಬೆಳೆಗಳ ಕೃಷಿ ಅರಿವನ್ನು ನೆಲದ ಮಕ್ಕಳಿಗೆ ತಿಳಿಸಬಹುದು. ಪ್ರತಿ ಶಾಲೆಯ ಸುತ್ತಲಿನ ಕೃಷಿ ಭೂಮಿಗೆ ಮಹತ್ವದ ಚಟುವಟಿಕೆ ವೀಕ್ಷಣೆಗೆ ಕರೆದೊಯ್ಯಬಹುದು…..ಹೀಗೆ ಸಾಧ್ಯತೆಗಳು ಹತ್ತಾರು. ಊರಿನ ಕೃಷಿ ಜ್ಞಾನ ಬಲ್ಲವರಲ್ಲಿ ತಿಂಗಳಿಗೊಮ್ಮೆ ಪಾಠ ಮಾಡಿಸಬಹುದು. ನಮ್ಮ ಶಾಲಾ ಮೇಷ್ಟ್ರುಗಳು ಹಳ್ಳಿ ಜ್ಞಾನಗಳನ್ನು ಶಾಲೆಯಲ್ಲಿ ಕ್ರೋಢೀಕರಿಸಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಹಂಚುವ ಮನೋಭಾವ ಹೊಂದಬೇಕು. ಇದು ಒಂದು ಪಾಠದಲ್ಲಿ, ಪ್ರಶ್ನೋತ್ತರಕ್ಕೆ ನಡೆಯುವ ಚಟುವಟಿಕೆಯಾಗದೇ ಮನದಾಳಕ್ಕೆ ಇಳಿಯುವ ಪ್ರಾತ್ಯಕ್ಷಿಕೆಯಾಗಬೇಕು. ತರಗತಿಯಲ್ಲಿ ಮತ್ತೆ ಮತ್ತೆ ಹೇಳಿ ನೆನಪಿಸುವ ಕಾರ್ಯ ಬೇಕು. ಒಂದು ಕುತೂಹಲಕರ ಆಟ, ಮನೋರಂಜನೆ, ಹಬ್ಬ, ಆಸಕ್ತಿದಾಯಕ ಚಟುವಟಿಕೆಯಂತೆ ಮಕ್ಕಳಿಗೆ ಕೃಷಿ ವಿಚಾರ ಬಿತ್ತಬೇಕು. ಯಾವುದೇ ಕಾರಣಕ್ಕೂ ಮಕ್ಕಳಿಗೆ ಹೊರೆಯಾಗಬಾರದು. ಅಕಾಡೆಮಿಕ್ ಶಿಸ್ತು ಬೇಕಾಗಿಲ್ಲ, ಪರೀಕ್ಷೆ ಭಯದಲ್ಲಿ ಓದುವ ಅಗತ್ಯವಿಲ್ಲದೇ ಈ ಕಾರ್ಯ ನಡೆಸಬಹುದು.

ಕೃಷಿ ಅರಿವಿಗೆ ಮನೆಯಲ್ಲಿಯೇ ಅವಕಾಶವಿರುವಾಗ ಶಾಲೆಯ ಸಮಯವನ್ನು ಏಕೆ ಇದಕ್ಕೆ ಒಳಪಡಿಸಬೇಕು? ಕೃಷಿ ವಿಚಾರ ಹೇಳುವದನ್ನು ಶಾಲೆ ಮಾಡುವದಾದರೆ ಮಕ್ಕಳನ್ನು ಶಾಲೆಗೆ ಕಳಿಸದೇ ಮನೆಯಲ್ಲಿಯೇ ಪಾಠ ನಡೆಸಬಹುದಿತ್ತಲ್ಲವೇ? ಚರ್ಚೆಗಳು ಏಳಬಹುದು. ಮಕ್ಕಳೆಲ್ಲ ಸೇರಿ ಒಂದು ಮಾಹಿತಿ, ಚಟುವಟಿಕೆಯಲ್ಲಿ ಪಾಲ್ಗೊಳ್ಳುವಾಗ ಪೈಪೋಟಿಯಲ್ಲಿ ಮನಸ್ಸು ಕಲಿಕೆಗೆ ಒಗ್ಗುತ್ತದೆ. ಅಷ್ಟಕ್ಕೂ ಮನೆಯಲ್ಲಿ ಮಣ್ಣು ಮುಟ್ಟದಂತೆ ಮಕ್ಕಳನ್ನು ನೆಲದ ಎತ್ತರದಲ್ಲಿ ಬೆಳೆಸಲು ಭವಿಷ್ಯದ ವಿವೇಚನೆಯಿಲ್ಲದೇ ಕೃಷಿಕರು ಸಾಗಿದ್ದೇವೆ, ಕೃಷಿಗೆ ಭವಿಷ್ಯವೇ ಇಲ್ಲವೆಂದು ಬೊಬ್ಬೆ ಹೊಡೆದಿದ್ದೇವೆ. ಸ್ವತಃ ನಾವೇ ಕೃಷಿ ಅಭಿಮಾನ ಶೂನ್ಯರಾಗಿದ್ದೇವೆ. ಶಾಲೆ ಶಿಕ್ಷಣ ಈಗ ಮಕ್ಕಳ ಮುಖೇನ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಎಳೆಯ ಮಕ್ಕಳು ಕೃಷಿ ವಿಚಾರ ಪಡೆದ ಮಾತ್ರಕ್ಕೆ ಅವರೆಲ್ಲ ಮುಂದೆ ಒಳ್ಳೆಯ ಕೃಷಿಕರಾಗಿ ಹಳ್ಳಿಯಲ್ಲಿ ನೇಗಿಲು ಹಿಡಿದು ನೆಲೆಸುತ್ತಾರೆಂದು ಅರ್ಥವಲ್ಲ, ಹಾಗೇ ಭಾವಿಸುವದೂ ಸರಿಯಲ್ಲ. ಆದರೆ ಪರಿಸರದ ಅರಿವು ಪರೋಕ್ಷವಾಗಿ ಭವಿಷ್ಯಕ್ಕೆ ನೆರವಾಗುತ್ತದೆ. ನಮ್ಮ ಮಕ್ಕಳು ಅಧಿಕಾರಿಯಾಗಿ ನಿರ್ಣಯ ತೆಗೆದುಕೊಳ್ಳುವ ಸಂದರ್ಭ ಬಂದಾಗ ನೆಲದ ಸಾಮಾನ್ಯ ಅರಿವು ಕೃಷಿಕಪರ ನಿರ್ಧಾರ ಕೃಷಿಗೊಳ್ಳಲು ಪ್ರೇರೇಪಿಸಬಹುದು.

ಬಿಳಿಗಿರಿ ರಂಗನ ಬೆಟ್ಟದ ಸೋಲಿಗರ ಮಕ್ಕಳಿಗೆ ಶಿಕ್ಷಣ ನೀಡಲು ಅಲ್ಲಿನ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಮಕ್ಕಳ ಪರಿಸರದ ಭಾಷೆ, ಹಾಡುಗಳ ಮುಖೇನವೇ ಪಾಠ ಮಾಡುವ ಪಠ್ಯ ರೂಪಿಸಿದೆ. ತಮ್ಮ ಸೋಲಿಗರ ಪೋಡಿನ ಅಜ್ಜ ಶಾಲೆಗೆ ಬಂದು ಗಿಡಮೂಲಿಕಾ ಜ್ಞಾನದ ಪಾಠ ಮಾಡುವಾಗ ಕಲಿಯುವ ಸಂಗತಿ ಪ್ಯಾಂಟು ಹಾಕಿದ ಮೇಷ್ಟ್ರಲ್ಲಿ ಮಾತ್ರವಲ್ಲ ಊರಿನ ಜನರಲ್ಲಿಯೂ ಇದೆ ಎಂಬ ಕಲ್ಪನೆ ಮೂಡಲು ಸಾಧ್ಯವಾಯಿತು. ಶಾಲಾ ಶಿಕ್ಷಣದಲ್ಲಿಯೂ ಈಗ ಆಗಬೇಕಾದುದು ಇದೇ ಕೆಲಸ, ಊರಿನ ಭೂಮಿಯಲ್ಲಿ ಅರಿಯುವ ಅವಕಾಶ ತೋರಿಸುವದು ಮುಖ್ಯ ಗುರಿ. ಆಗ ಅನ್ನದ ವೃತ್ತಿಯನ್ನು ಅಭಿಮಾನದಿಂದ ನೋಡಲು ಮನಸ್ಸಿಗೆ ಸಾಧ್ಯವಾಗುತ್ತದೆ. ‘ಭಾರತದ ಕೃಷಿಕರು ಬಡವರು…..ಅವರು ಬೆವರಿಳಿಸಿ ದುಡಿಯುತ್ತಾರೆ’ ಎಂದು ಕಾಲದ ಪಾಠ ಓದುತ್ತಿದ್ದರೆ ನೆಲದ ಪ್ರೀತಿ ರವಷ್ಟೂ ಹುಟ್ಟುವದಿಲ್ಲ, ಬದುಕಲು ಸಾಧ್ಯತೆ ತೆರೆದುಕೊಳ್ಳುವದಿಲ್ಲ. ಬದುಕಿ ಗೆದ್ದವರ, ನೆಮ್ಮದಿ ಕಂಡವರ ಮಾರ್ಗಪಥ ಅರಿತಾಗ ಮಾತ್ರ ಮಕ್ಕಳಿಗೆ ಕೃಷಿ ನೀತಿ ಆಪ್ತವಾಗುತ್ತದೆ.

ಒಂದು ಕಾಲಕ್ಕೆ ಬಹುತೇಕ ಶಾಲೆಗಳಿಗೆ ಕೃಷಿ ಚಟುವಟಿಕೆಗೆ ಭೂಮಿಯಿತ್ತು. ಶಾಲೆಯ ಮಕ್ಕಳು ಶಾಲೆಯ ಗದ್ದೆ ನಾಟಿ ಮಾಡುತ್ತಿದ್ದ ದಿನಗಳಿದ್ದವು. ಡೆನ್ಮಾರ್ಕ್ ನೆರವಿನ ಯೋಜನೆಯಲ್ಲಿ ಕರ್ನಾಟಕದ ಆಯ್ದ ಶಾಲೆಗಳಿಗೆ ತೋಟಕ್ಕೆ ಭೂಮಿ, ಹಣ್ಣು ಹಂಪಲು ಸಸಿ, ಪಂಪ್‌ಸೆಟ್ ವ್ಯವಸ್ಥೆಯನ್ನು ೪೦ ವರ್ಷಗಳ ಹಿಂದೆಯೇ ಸರಕಾರ ನೀಡಿತ್ತು. ಕಾಂಪೋಸ್ಟ್ ನಿರ್ಮಾಣ, ಸಸಿ ನೆಡುವ ವಿಧಾನ, ಕೃಷಿ ಬೆಳೆ ನಿರ್ವಹಣೆಯ ಪಾಠವನ್ನು ಆ ಕಾಲಕ್ಕೆ ಮಕ್ಕಳು ಕಲಿತಿದ್ದಾರೆ. ಈಗಲೂ ಹಲವು ಶಾಲೆಗಳು ಸರಕಾರದ ಕೃಷಿ ಪಾಠ ಶಾಲೆಗಳಿಗಿಂತ ಪರಿಣಾಮಕಾರಿಯಾಗಿ ಮಕ್ಕಳಿಗೆ ಅನುಭವ ಪಾಠ ಹಂಚುತ್ತಿವೆ. ಒಂದು ಅಡಿಕೆ ಸಸಿ ನಾಟಿ ಮಾಡಿ ಹೇಗೆ ನಿರ್ವಹಣೆ ಮಾಡಿದರೆ ನಾಲ್ಕು ವರ್ಷಕ್ಕೆ ಫಲ ಸಾಧ್ಯವೆಂಬ ಅರಿವು ಶಾಲೆಯಲ್ಲಿ ಸಸಿ ನೆಟ್ಟ ಮಕ್ಕಳಿಗೆ ಎಂದೂ ಮರೆಯದ ಪಾಠವಾಗುತ್ತದೆ. ಶಾಲೆಯ ಮಣ್ಣಿನಲ್ಲಿ ಕೃಷಿ ಭವಿಷ್ಯದ ಕನ್ನಡಿಯಿದೆ, ಬೆಳೆವ ಮಕ್ಕಳ ಬದುಕಿಗೆ ಮುನ್ನುಡಿ ಬರೆಯುವ ಕೆಲಸಕ್ಕೆ ಮಕ್ಕಳು, ಪಾಲಕರು, ಶಿಕ್ಷಕ ಸಹಭಾಗಿತ್ವದಲ್ಲಿ ಹಸುರು ಶಿಕ್ಷಣದ ಚಿಂತನೆ ಸಾಕಾರವಾಗಬೇಕು. ರಾಜ್ಯದ ಅಲ್ಲಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಪರಿಸರ ಶಿಕ್ಷಣ ಇಂತಹ ಯತ್ನಗಳಿಗೆ ಮಾದರಿ ಮಾರ್ಗ ತೋರಿಸಬಹುದು.