ಇಟಾಲಿಯನ್ ಪ್ರವಾಸಿ ಪಿಯೆತ್ರೊ ಡೆಲ್ಲಾವಲ್ಲೆ ಇಂದಿಗೆ ೩೬೦ ವರ್ಷದ ಹಿಂದೆ ಇಕ್ಕೇರಿ ಅರಸು ವೆಂಕಟಪ್ಪನ ಭೇಟಿಗೆ ಬಂದಿದ್ದರು, ಆಗ ರಾಯಭಾರಿ ವಿಠ್ಠಲ ಶೆಣೈ ಮುಖೇನ ರಾಜನಿಗೆ ಕಬ್ಬು ನೀಡಿದ ದಾಖಲೆಯಿದೆ. ಗಣೇಶ ಚೌತಿ, ಕಾರ್ತೀಕ ಉತ್ಸವಗಳಲ್ಲಿ ಕಬ್ಬು ಅರ್ಪಿಸುವ ನಮ್ಮ ಹಬ್ಬದ ಪರಂಪರೆ ಕೃಷಿ ಹಿನ್ನೆಲೆಯನ್ನು ಸಂಪ್ರದಾಯದ ಜತೆ  ಬೆಸೆದಿದೆ.


ಕಬ್ಬಿಗೆ ಒಂದು ಆಳುಎಂಬ ಮಾತು ಮಲೆನಾಡಿನಲ್ಲಿ ವಾಡಿಕೆಯಲ್ಲಿದೆ. ನಾಟಿ, ನೀರಾವರಿ, ಗೊಬ್ಬರ, ಆರೈಕೆ, ರಕ್ಷಣೆ, ಕಟಾವು, ಬೆಲ್ಲ ತಯಾರಿಯ ಕೆಲಸಗಳ ಸುದೀರ್ಘ ಪಟ್ಟಿ ಈ ಕೃಷಿಯ ಕತೆ ಹೇಳುತ್ತದೆ. ತಗಲುವ ವೆಚ್ಚ ಗಣನೆಗೆ ತೆಗೆದುಕೊಂಡು ಬೆಲ್ಲದ ಆದಾಯ ನೋಡಿದರೆ ನಿಕ್ಕೀ ನಷ್ಟ ಕಾಣುತ್ತದೆ. ಇದು ಇತ್ತೀಚಿನ ಕೃಷಿವೆಚ್ಚ ಗಮನಿಸಿ ಹೇಳುವ ಮಾತಲ್ಲ, ೨೦೦ ವರ್ಷಗಳ ಹಿಂದೆ ಕೆನರಾ ಜಿಲ್ಲೆಯ ಕೃಷಿ ದಾಖಲೆ ಬರೆದ ಫ್ರಾನ್ಸಿಸ್ ಬುಕಾನನ್ ಕೂಡ ಹೀಗೆ ಕಬ್ಬಿಗೆ ಕನ್ನಡಿ ಹಿಡಿದು  ಕೃಷಿ ಲುಕ್ಸಾನಿನ  ಚಿತ್ರ ವಿವರಿಸಿದ್ದರು.

ನಾಟಿ, ಗೊಬ್ಬರ, ನೀರಾವರಿಯಷ್ಟೇ ಮುಖ್ಯವಾದುದು ವನ್ಯಪ್ರಾಣಿಗಳಿಂದ ಬೆಳೆ ಸಂರಕ್ಷಣೆ. ನರಿ, ಕೋತಿ, ಹಂದಿಗಳ ಉಪಟಳ, ಬೆವರಿನ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತದೆ. ಇದಕ್ಕೆ ಸೂಕ್ತ ಕಾವಲು ಬೇಕು. ಕಬ್ಬಿನ ಗದ್ದೆಯನ್ನು ನರಿ ದಾಳಿಯಿಂದ ಬಚಾವು ಮಾಡಲು ಉತ್ತರ ಕನ್ನಡದ ಕುಮಟಾದ ಮೂರೂರಿನಲ್ಲಿ ಕಬ್ಬಿನ ಹಿಂಡಿಗೆಗಳಿಗೆ ಗದ್ದೆಯ ಕೆಸರು ಮಣ್ಣು ಬಳಿಯುವ ಲಾಗಾಯ್ತಿನ ಉಪಾಯವಿದೆ. ಸಿಹಿಸಿಹಿ ಕಬ್ಬು ತಿನ್ನುವ ಆಸೆಯಿಂದ ಕಬ್ಬಿನ ಬುಡಕ್ಕೆ ನರಿ ಬಾಯಿ ಹಾಕುತ್ತದೆ, ಆಗ ಅದರ ನಾಲಗೆಗೆ ಮಣ್ಣು ಸಿಗುವದರಿಂದ ಕಬ್ಬು ತಿನ್ನದೇ ನರಿ ಕಾಲ್ತೆಗೆಯುತ್ತದೆ. ನರಿಯನ್ನು ಸುಲಭದಲ್ಲಿ ಹೀಗೆ ನಿಯಂತ್ರಿಸುವ ಜಾಣ ಉಪಾಯ ಕೃಷಿಕರದು! ಬ್ರಿಟೀಷ್ ಕಾಲದಲ್ಲಿ  ಕೃಷಿ ರಕ್ಷಣೆಗೆ  ಕಾಡುಪ್ರಾಣಿ ಬೇಟೆಗೆ ಪ್ರೋತ್ಸಾಹ ಧನ ನೀಡುವ ಪದ್ದತಿ ಆರಂಭಕ್ಕೆ  ಕಬ್ಬಿನ ಕಷ್ಟವೂ ಒಂದು ಕಾರಣ. ಬೇಲಿ ನಿರ್ಮಾಣಕ್ಕೆ ಕಾಡಿನ ಬಿದಿರನ್ನು ಪುಕ್ಕಟೆಯಾಗಿ ನೀಡುವ ಕೆನರಾ  ಪ್ರಿವಿಲೇಜ್  ಆಕ್ಟ್ ನಿರ್ಧಾರ ಸಹ ಇದೇ ಹಿನ್ನಲೆಯದು. ಅಂತಿಮವಾಗಿ ಕಷ್ಟಪಟ್ಟು ಬೆಳೆ ಕಾಯ್ದವರಿಗೆ ಮಾತ್ರ ಮನೆ ಬಳಕೆಗೆ ಸ್ವಾದಿಷ್ಟ ಸಿಹಿಬೆಲ್ಲ  ಎಂಬುದು  ಎಲ್ಲರ ಸ್ವಾನುಭವ.

ಇಟಾಲಿಯನ್ ಪ್ರವಾಸಿ ಪಿಯೆತ್ರೊ ಡೆಲ್ಲಾವಲ್ಲೆ ಇಂದಿಗೆ ೩೬೦ ವರ್ಷದ ಹಿಂದೆ ಇಕ್ಕೇರಿ ಅರಸು ವೆಂಕಟಪ್ಪನ ಭೇಟಿಗೆ ಬಂದಿದ್ದರು, ಆಗ  ರಾಯಭಾರಿ ವಿಠ್ಟಲ ಶೆಣೈ ಮುಖೇನ ರಾಜನಿಗೆ ಕಬ್ಬು ನೀಡಿದ ದಾಖಲೆಯಿದೆ. ಗಣೇಶ ಚೌತಿ, ಕಾರ್ತೀಕ ಉತ್ಸವಗಳಲ್ಲಿ  ಕಬ್ಬು ಅರ್ಪಿಸುವ ನಮ್ಮ ಹಬ್ಬದ ಪರಂಪರೆ ಕೃಷಿ ಹಿನ್ನೆಲೆಯನ್ನು ಸಂಪ್ರದಾಯದ ಜತೆ ಬೆಸೆಯುತ್ತದೆ. ಬೆಲ್ಲ ತಯಾರಿಗೆಂದು ಮಲೆನಾಡಿನಲ್ಲಿ ಬೇಸಾಯ ಆದ್ಯತೆ. “ಕಬ್ಬಿನ ಕೃಷಿ ಜಾಸ್ತಿಯಾದರೆ ಭತ್ತದ ಕ್ಷೇತ್ರ ಕಡಿಮೆಯಾಗಬಹುದೇ?’ ಅನುಮಾನ ಕೆನರಾದಲ್ಲಿ ಒಮ್ಮೆ ಬ್ರಿಟೀಷರನ್ನು  ಕಾಡಿತ್ತು . ಸಾಮಾನ್ಯವಾಗಿ ಭತ್ತ ಬೇಸಾಯದ ಮಕ್ಕಿಗದ್ದೆಗಳಲ್ಲಿ ಕಬ್ಬು ಬೆಳೆಯಲಾಗುತ್ತಿತ್ತು. ಕಬ್ಬು ಆಸಕ್ತಿ ಹೆಚ್ಚಾದರೆ ಉಣ್ಣುವ ಅನ್ನಕ್ಕೆ  ತೊಂದರೆಯಾಗಬಹುದೆಂಬ ಇರಾದೆ.  ಆಗ ಕಲೆಕ್ಟರ್ ಮಿ. ರೀಡ್ ಕಬ್ಬಿನ ಕೃಷಿಯಿಂದ  ಭತ್ತದ ಬೆಳೆಗೆ ಯಾವುದೇ ತೊಂದರೆಯಿಲ್ಲಎಂಬ ಮಾಹಿತಿ ನೀಡಿದ್ದರು.  ಮಾರುಕಟ್ಟೆಯಲ್ಲಿ  ಬೆಲ್ಲಕ್ಕೆ ಬೇಡಿಕೆ ಇಲ್ಲ, ಹೀಗಾಗಿ ಬೇಸಾಯ ವಿಸ್ತರಿಸುವ ಲಕ್ಷಣಗಳಿರಲಿಲ್ಲ ಎಂಬುದು ವರದಿ ಸಾರಾಂಶ. ಒಂದು ಎಕರೆ ಕಬ್ಬು ಬೆಳೆದು ಬೆಲ್ಲ ತಯಾರಿಸಲು ಕ್ರಿಸ್ತಶಕ ೧೮೮೪ರಲ್ಲಿ  ೨೨೦ ರೂಪಾಯಿ ಖರ್ಚಾಗುತ್ತದೆಂಬುದು ಕ್ಯಾಂಬೆಲ್ ಲೆಕ್ಕಾಚಾರ! ಕಬ್ಬು ಎಲ್ಲರಿಗೂ ಬೇಕಾದ ಪೀಕು. ಸಾಕಷ್ಟು ಜಮೀನುಳ್ಳ ಪ್ರತಿಯೊಬ್ಬ ಖಾತೆದಾರನೂ ತನ್ನ ಜಮೀನಿನಲ್ಲಿ ಒಂದು ಸಣ್ಣ ಭಾಗದಲ್ಲಿ ಇದನ್ನು ಬೆಳೆಸುತ್ತಾನೆ. ಇದರಲ್ಲಿ ಬಿಳೆಕಬ್ಬು, ಪಟ್ಟಿ ಕಬ್ಬು ಹಾಗೂ ಮೋರಿಶಸ ಈ ಮೂರು ಮುಖ್ಯ ಜಾತಿಗಳಿವೆ. ಮೋರಿಶಸ ಜಾತಿಯ ಕಬ್ಬು ಬಿರುಸಾದ್ದರಿಂದ ಕಾಡು ಹಂದಿ ಹಾಗೂ ಇತರ ಪ್ರಾಣಿಗಳ ಬಾಧೆಗೆ ಪ್ರತಿಕೂಲವಿರುತ್ತದೆ ಎನ್ನುತ್ತದೆ ಕ್ರಿಸ್ತಶಕ ೧೯೨೮ರ ಸರ್ವೆ ಸೆಟ್ಲಮೆಂಟ್ ವರದಿ.

ಮಲೆನಾಡಿನಲ್ಲಿ ಮನೆ ಬಳಕೆಗೆ ಅಗತ್ಯವಾದ ಬೆಲ್ಲ ತಯಾರಿಗೆ ಮಾತ್ರ  ಕೃಷಿ ಆದ್ಯತೆ. ಗುಂಟೆ, ಹತ್ತು ಗುಂಟೆ ಕ್ಷೇತ್ರಗಳಲ್ಲಿ ಮಾತ್ರ ಬೇಸಾಯ. ಕಾಡಿನ ಮಸೆಮರದ ಕಟ್ಟಿಗೆ ಬಳಸಿ ಕಬ್ಬು ಅರೆಯಲು ಗಾಣ ತಯಾರಾಗುತ್ತಿದ್ದವು. ಮರದ ಗಾಣಗಳನ್ನು ಕೋಣ/ಜನರಿಂದ ಎಳೆಸುವ ಪರಿಪಾಠ. ಕಾಡುಕೊಳ್ಳದ ಹಳ್ಳಿಯಲ್ಲಿ ಆಲೆಮನೆ ನಡೆದಾಗ ಮರದ ಗಾಣ ಪರಸ್ಪರ ಒಂದಕ್ಕೊಂದು ತಿಕ್ಕುವ ಕಿರ್ರ್$ ಎಂಬ ಸಪ್ಪಳದಲ್ಲಿ ಎರಡು ಕಿಲೋ ಮೀಟರ್ ದೂರದಿಂದಲೂ ಆಲೆಮನೆ ಸ್ಥಳ ಗುರುತಿಸಬಹುದಿತ್ತಂತೆ ! ನಂತರದಲ್ಲಿ  ಕಬ್ಬಿಣದ ಗಾಣ, ಎಳೆಯಲು ಕೋಣಗಳು ಬಂದವು.  ಈಗ  ದಿಢೀರ್ ಕಬ್ಬು ಅರೆಯುವ ಮಶಿನ್ ಬಂದು ತಂತ್ರಜ್ಞಾನ ಸಾಕಷ್ಟು  ಸುಧಾರಿಸಿದೆ.

ಅಡಿಕೆ ತೋಟ ಮಾಡುವ ಪೂರ್ವದಲ್ಲಿ ಆ ಜಾಗದಲ್ಲಿ ಕಬ್ಬಿನ ಬೇಸಾಯ ಮಾಡಬೇಕು ಎಂಬುದು ನೆಲದ ಕೃಷಿ ಜ್ಞಾನ. ಅಡಿಕೆ ಬೆಳೆ ಪೂರ್ವದಲ್ಲಿ  ಕಬ್ಬಿನ  ಆದಾಯ, ಎಳೆಯ ಅಡಿಕೆ ಸಸಿಗಳಿಗೆ ಕಬ್ಬಿನ ನೆರಳು ದೊರೆಯುತ್ತದೆ, ಮಣ್ಣು ಸಡಿಲಾಗುತ್ತದೆಂಬ ಲೆಕ್ಕಾಚಾರ. ಸಾಮಾನ್ಯವಾಗಿ ಕೆರೆ, ನದಿ, ಝರಿ ನೀರಿನ ಅನುಕೂಲತೆಯಿರುವಲ್ಲಿ ಬೇಸಾಯ. ಮನೆಮನೆಯಲ್ಲಿ ಬೆಲ್ಲದ ಬಳಕೆ ಸಾಮಾನ್ಯ. ಅಗತ್ಯವಾದುದನ್ನು ಸ್ವತಃ ಬೆಳೆಯುವದರಲ್ಲಿ ಸ್ವಾವಲಂಬನೆ ಸುಖ. ಮಲೆನಾಡಿನಲ್ಲಿ  ಐದು ಜನರ ಒಂದು ಕುಟುಂಬ ವರ್ಷಕ್ಕೆ ಕನಿಷ್ಟ  ೨೦೦ ಕಿಲೋ ಬೆಲ್ಲ ಬಳಸುತ್ತದೆ. ಹಬ್ಬ ಹರಿದಿನಗಳಲ್ಲಿ ಕಡುವು, ಕಜ್ಜಾಯಕ್ಕೆ ಬಳಕೆ, ನಿತ್ಯ ಅಡುಗೆಗೆ ಬೇಕು. ದಿನ ಬೆಳಗ್ಗೆ ಉಪಹಾರಕ್ಕೆ ಬೆಲ್ಲದಲ್ಲಿ ದೇಸೀ ಸ್ವಾದ. ಗುಡ್ಡಗಾಡಿನ ಹಳ್ಳಿಯಲ್ಲಿ  ಬೇಸಿಗೆಯಲ್ಲಿ  ಮನೆಗೆ ಬಂದ ಅತಿಥಿಗಳಿಗೆ, ಕೆಲಸಗಾರರಿಗೆ ಬೆಲ್ಲ, ನೀರು ನೀಡುವ ಪರಂಪರೆ ಬೆಲ್ಲದ ಬೇರು ಮೂಲದ ಪ್ರೀತಿ ಹೇಳುತ್ತದೆ.

ಬೆಲ್ಲ ತಯಾರಿಗೆ ಕಟ್ಟಿಗೆ ಬೇಕು, ಒಂದು  ಅಡಿಗೆ (೧೬ ಡಬ್ಬಾ ಕಬ್ಬಿನ ಹಾಲು, ಅಂದರೆ ಸುಮಾರು ೩೫೦ ಲೀಟರ್ ಹಾಲು) ಕುದಿಸಿ ಬೆಲ್ಲ ತಯಾರಿಸಲು ಕನಿಷ್ಟ ೩೫೦ ಕಿಲೋ ಕಟ್ಟಿಗೆ  ಬಳಕೆ.  ಅರಣ್ಯನಾಶದ ಪರಿಣಾಮ ಕಟ್ಟಿಗೆ ಅಭಾವ ವಿಪರೀತ. ಸುಧಾರಿತ ಒಲೆಯಲ್ಲಿ ಕಬ್ಬಿನ ಸಿಪ್ಪೆ ಉರಿಸಿ ಬೆಲ್ಲ ತಯಾರಿಸುವ ವಿಧಾನವೇನೋ ಇದೆ, ಆದರೆ ವರ್ಷಕ್ಕೆ ಹತ್ತಾರು ಡಬ್ಬಿ ಬೆಲ್ಲ ತಯಾರಿಸುವವರಿಗೆ  ಒಲೆ ಸುಧಾರಿಸುವದಕ್ಕಿಂತ ಪಕ್ಕದ ಕಾಡು ಕಟ್ಟಿಗೆ ಸುಡುವ ಸುಲಭ ದಾರಿ. ಕಬ್ಬಿನ ಕೃಷಿ ಕಾಡಿಗೆ ಭಾರ ಹಾಕುತ್ತ ಹಾಕುತ್ತ  ಈಗ ಕಾಡಿಲ್ಲದೇ ಕ್ಷೇತ್ರ ಕಡಿಮೆಯಾಗಿದೆ. ನೀರಾವರಿ, ರಕ್ಷಣೆ, ಕೂಲಿಕಾರರ ಅಭಾವದಿಂದ  ದುಬಾರೀ ಕೃಷಿಯನ್ನು  ಜನ ಮರೆಯುತ್ತಿದ್ದಾರೆ.  ಕಬ್ಬಿನಗದ್ದೆ, ಕಬ್ಬಿನ ಹಕ್ಲು ಎಂಬ ಸ್ಥಳಗಳು ಈಗಲೂ ಹಲವು ಹಳ್ಳಿಗಳಲ್ಲಿದೆ. ಇಲ್ಲಿ ರಕ್ಷಣೆ, ನೀರಾವರಿ ಅನುಕೂಲತೆಯಿಂದ ಊರಿನ ಜನರೆಲ್ಲ ಮನೆ ಬಳಕೆಗೆ ಬೆಲ್ಲ ತಯಾರಿಗೆಂದು ಒಂದೇ ಸ್ಥಳದಲ್ಲಿ  ಬೇಸಾಯ ಮಾಡುತ್ತಿದ್ದರು. ಬಯಲಲ್ಲಿ ಅಲ್ಲೊಂದು ಇಲ್ಲೊಂದು ಸ್ಥಳದಲ್ಲಿ ಕೃಷಿ ನಡೆಸಿ ವನ್ಯಪ್ರಾಣಿಗಳಿಂದ ಹಾನಿ ಅನುಭವಿಸುವದಕ್ಕಿಂತ ರಕ್ಷಣೆಗೆ  ಸಹಕಾರ ತತ್ವದಲ್ಲಿ ಒಂದೇ ಸ್ಥಳದಲ್ಲಿ  ಕೃಷಿ  ನಡೆಯುತ್ತಿದ್ದವು. ಎಲ್ಲ ಒಂದಾಗಿ ಹಬ್ಬದಂತೆ ಆಲೆಮನೆ ಮಾಡುತ್ತಿದ್ದರು. ಸಿಹಿ ಬೆಲ್ಲದ ಆಸೆ ಹಳ್ಳಿಯ ಮನ ಮನಗಳನ್ನು ಒಂದಾಗಿ ಬೆಸೆದಿತ್ತು, ಅದು ಕೃಷಿ ಕಷ್ಟ ಎದುರಿಸುವ ಸಾಧ್ಯತೆಯಾಗಿತ್ತು.   ಕೃಷಿಯ ನಷ್ಟ ಶತಮಾನಗಳ ಹಿಂದೆಯೇ ತಿಳಿದಿದ್ದರೂ ರೈತರು ಮಾತ್ರ ಆಲೆಮನೆಯಲ್ಲಿ ಖುಷಿ  ಕಂಡಿದ್ದರು. ದುಪ್ಪಟ್ಟು ಹಣ ತೆತ್ತು ಖರೀದಿಸುವ ಮಾರುಕಟ್ಟೆ ಬೆಲ್ಲಕ್ಕಿಂತ ಕೃಷಿ ಕಷ್ಟದಲ್ಲೂ  ಎಂತದೋ ಸಮಾದಾನವಿತ್ತು. ಈಗ ಕಬ್ಬಿನ ವಿಚಾರದಲ್ಲಿ ಕಾಸು ನೋಡುವ ಅನಿವಾರ್ಯತೆ  ಬಂದಿದೆ. ನಮಗೆಲ್ಲ ಇಷ್ಟವಾದ ಆರೋಗ್ಯದ ಸಿಹಿ ಬೆಲ್ಲಕ್ಕೆ ಸಂಕಷ್ಟ ಒದಗಿದೆ. ಮಾರುಕಟ್ಟೆಯಲ್ಲಿ ಬೆಲ್ಲವಿಲ್ಲದೇ ಬೆಲೆ ಏರಿದೆ.