ಊರಾಗ ಹೊಲ ಊಳಾಕ…. ಆಳು ಸಿಗಂಗಿಲ್ರೀ…. ಕೋರ್ಟ್ ಕೇಸ್ ನೆಡಸಾಕ ಯಜಮಾನ್ರಾಗಿ ನಾವೇ ಬರ್ಬೇಕಲ್ರೀ!ಕಟಕಟೆಯಲ್ಲಿ ನಿಂತವರಿಗೆ ಸಂದಿಗ್ಧವಿದೆ. ಹೊಲಕ್ಕೆ ಹೋಗೋದ್‌ಕ್ಕಿಂತ ಬರ್ತಾ ಬರ್ತಾ ಕೋರ್ಟ್ ತಿರುಗೋದು ಜಾಸ್ತಿ ಆತ್ರಿ!೧೫ ವರ್ಷಗಳಿಂದ ಅಲೆದಾಡಿದ ಹಾನಗಲ್ ರೈತನಿಗೆ ಜ್ಞಾನೋದಯವಾಗಿದೆ. ಆದರೆ ಕೇಸ್ ಬಿಡಲು ಮನಸ್ಸಿಲ್ಲ! ನ್ಯಾಯದ ನಿರೀಕ್ಷೆ, ಗೆದ್ದೇ ಗೆಲ್ಲಬೇಕೆಂಬ ಛಲವಿದೆ. ವಕೀಲರ ವಿಶ್ವಾಸ  ಮತ್ತೆ ಮತ್ತೆ ವಾಯಿದೆಗೆ ಎಳೆಯುತ್ತಿದೆ. ಮಕ್ಕಳ ಶಿಕ್ಷಣ, ಹಿರಿಮಗಳ ಮದುವೆ ಕೂಡಾ ಮರೆತು ನ್ಯಾಯದ ಬಾಗಿಲಲ್ಲಿ ವೃದ್ಧರಾದವರಿದ್ದಾರೆ!


ಬಯಲುಸೀಮೆಗೆ ಮಳೆ ಬಿದ್ದರೆ ಮುದಿ ಎತ್ತಿಗೂ ಮಲಗಲು ಪುರುಸೊತ್ತು ಸಿಗೋದಿಲ್ಲಹದ ಮಳೆಗೆ ಕಾಯುವ ಇಲ್ಲಿನ ಕೃಷಿಕರ ಶ್ರಮದ ಎಚ್ಚರ ಅದು. ಬಿದ್ದ ಮಳೆಗೆ ಹೊಲಕ್ಕೆ ನೇಗಿಲು ಇಳಿಸಬೇಕು, ಇಲ್ಲದಿದ್ದರೆ ಕೃಷಿಯಲ್ಲಿ ಏಳುವದು ಕಷ್ಟ. ನೆಲ ಸತ್ಯ ಅರಿತವರು ಹೊಲದ ತುಂಬ ನೇಗಿಲ ಸೈನ್ಯ ಜಮಾಯಿಸುತ್ತಾರೆ. ಉತ್ಸಾಹದಲ್ಲಿ ಉಳುಮೆ ಮಾಡುತ್ತಾರೆ. ಭೂಮಿಗೆ ಬೆಳೆಯ ಕನಸು ಬಿತ್ತುತ್ತಾರೆ. ಇಂತಹ ಹದ ಮಳೆಯ ಕಾಲಕ್ಕೆ ಹಾವೇರಿಗೆ ಹೋಗಿದ್ದೆ. ಹೊಲದ ಚಿತ್ರ ಗಮನಿಸಿದ ಬಳಿಕ ಅಲ್ಲಿನ ನ್ಯಾಯಾಲಯ ಪ್ರಾಂಗಣದಲ್ಲೂ  ಅಂತಹುದೇ ದ್ರಶ್ಯ. ಕಿಕ್ಕಿರಿದ ರೈತರನ್ನು ಕಂಡರೆ ಹದ ಮಳೆ ಮರೆತು ಹೊಲವೆಲ್ಲ ಕೋರ್ಟಗೆ ಬಂದಿದೆಯಾ?ಹೌಹಾರುವಂತೆ ನ್ಯಾಯ ಸಂತೆಯಲ್ಲಿ ಜನ ಜನ. ಕೆಲಸದ ತರಾತುರಿ ಬದಿಗೊತ್ತಿ ಅವರೆಲ್ಲ ಕೋರ್ಟ್ ಕರೆಗೆ ಓಡಿ ಬಂದವರು. ನಿತ್ಯವೂ ಇದೇ ಕತೆ. ಜಮೀನು ಒತ್ತುವರಿ, ಭೂಮಿ ಹಿಸ್ಸೆ, ಹೊಲದ ರಸ್ತೆ ಅತಿಕ್ರಮಣ, ನೀರು ಕಾಲುವೆ ಕಣ್ಮರೆ, ಕೆರೆ ನೀರಿನ ಹಕ್ಕು, ಹಿತ್ತಲಿನ ಹುಣಸೆಮರದ ಜಾಗ ಮಾರಾಟಕ್ಕೆ ತಡೆಯಾಜ್ಞೆ…. ಹೀಗೆ ಒಡಹುಟ್ಟಿದವರು, ನೆರೆಹೊರೆಯವರ ಮಧ್ಯೆ ಉದ್ಭವಿಸಿದ ನೂರಾರು ಕಾರಣಗಳು ಕಾದಾಟಕ್ಕೆ ಸೆಳೆದಿವೆ. ರೊಕ್ಕದ ತಾಕತ್ತಿಗಿಂತ ಜಗಳ ಗೆಲ್ಲುವ ಜಿದ್ದು ಹಲವರನ್ನು ಹಿಡಿದು ನಿಲ್ಲಿಸಿದೆ.

ಊರಾಗ ಹೊಲ ಊಳಾಕ…. ಆಳು ಸಿಗಂಗಿಲ್ರೀ…. ಕೋರ್ಟ್ ಕೇಸ್ ನೆಡಸಾಕ ಯಜಮಾನ್ರಾಗಿ ನಾವೇ ಬರ್ಬೇಕಲ್ರೀ!ಕಟಕಟೆಯಲ್ಲಿ ನಿಂತವರಿಗೆ ಸಂದಿಗ್ಧವಿದೆ. ಹೊಲಕ್ಕೆ ಹೋಗೋದ್‌ಕ್ಕಿಂತ ಬರ್ತಾ ಬರ್ತಾ ಕೋರ್ಟ್ ತಿರುಗೋದು ಜಾಸ್ತಿ ಆತ್ರಿ !೧೫ ವರ್ಷಗಳಿಂದ ಅಲೆದಾಡಿದ ಹಾನಗಲ್ ರೈತನಿಗೆ ಜ್ಞಾನೋದಯವಾಗಿದೆ. ಆದರೆ ಕೇಸ್ ಬಿಡಲು ಮನಸ್ಸಿಲ್ಲ! ನ್ಯಾಯದ ನಿರೀಕ್ಷೆ, ಗೆದ್ದೇ ಗೆಲ್ಲಬೇಕೆಂಬ ಛಲವಿದೆ. ವಕೀಲರ ವಿಶ್ವಾಸ  ಮತ್ತೆ ಮತ್ತೆ ವಾಯಿದೆಗೆ ಎಳೆಯುತ್ತಿದೆ. ಮಕ್ಕಳ ಶಿಕ್ಷಣ, ಹಿರಿಮಗಳ ಮದುವೆ ಕೂಡಾ ಮರೆತು ನ್ಯಾಯದ ಬಾಗಿಲಲ್ಲಿ ವೃದ್ಧರಾದವರಿದ್ದಾರೆ! ಕವಳದ ಸಂಚಿಯಲ್ಲಿ ಎಂಟು ಮಡಿಕೆ ಮಾಡಿಟ್ಟ ನೋಟು ತಿಕ್ಕುತ್ತ ದೊಡ್ಡ ರುಮಾಲದ ಹಿರಿಯರು ವಕೀಲರ ಫೀ ನೀಡುವ ಚಿತ್ರಗಳಂತೂ ಪ್ರವಾಹ, ಬರಕ್ಕಿಂತ ಮಿಗಿಲಾದ ಸಂಕಟ ಹುಟ್ಟಿಸುತ್ತಿದೆ. ನ್ಯಾಯದ ಬೆಲೆ ದುಬಾರಿಯಾಗಿದೆ, ಕೋರ್ಟ್ ಕೇಸ್ ಇಲ್ಲದಿದ್ದರೆ ಬಿತ್ತನೆ ಬೀಜ ಖರೀದಿ, ಮಕ್ಕಳ ಬಟ್ಟೆ, ಮುರಿದು ಬೀಳುವ ಮನೆ ದುರಸ್ತಿ ಮಾಡಬಹುದಿತ್ತು. ಒಂದು ಕ್ಷಣ ಯೋಚನೆ ಅಷ್ಟೆ! ಒಮ್ಮೆ ಕಾದಾಟ ಶುರುವಾದರೆ ಮುಕ್ತಾಯವಿಲ್ಲ, ಗಾಣಕ್ಕೆ ಕೈಕೊಟ್ಟಂತೆ ಪರಿಸ್ಥಿತಿ. ಹೆಚ್ಚಿನ ಪ್ರಕರಣಗಳಲ್ಲಿ ಮಧ್ಯವರ್ತಿ, ಪೈನಾನ್ಸ್ ಹಾಗೂ ವಕೀಲರು ಗೆಲ್ಲುತ್ತಾರೆ. ಹೋರಾಡುವ ಜಿದ್ದಿನಲ್ಲಿ ಮನದ ನೆಮ್ಮದಿ ಕಳಕೊಂಡು ಹೊಲದ ಕಾಳುಗಳುಗಳನ್ನು ಕಲಾಪಕ್ಕೆ ಸುರಿಯುತ್ತಾರೆ. ನ್ಯಾಯಾಲಯದಲ್ಲಿ ರಾಶಿ ಬಿದ್ದ ಪ್ರಕರಣಗಳು ರೈತರು ಮನಸ್ಸು ಮಾಡಿದರೆ ಊರಲ್ಲಿ ಬಗೆಹರಿಯುವಂತವು. ಒಡೆದ ಮನಸ್ಸು ಪೋಲಿಸ್ ಠಾಣ್ಯಕ್ಕೆ ಎಳೆಯಿತು, ಕೋರ್ಟಗೆ ಅಂಟಿದ ಬಳಿಕ ಹಿಂದಿರುಗುವ ದಾರಿ ಹಲವರಿಗೆ ಸಿಗಲಿಲ್ಲ. ಇದು ಪರಿಸ್ಥಿತಿ.

ಉಳುಮೆ, ಬಿತ್ತನೆ, ಗಿಡ ಬೆಳೆಸುವಂತಹ ರಚನಾತ್ಮಕ ಕೆಲಸಗಳಲ್ಲಿ ಬದುಕಿದವರು ಭೂ  ವ್ಯಾಜ್ಯಗಳಲ್ಲಿ ಹೆಚ್ಚಿನ ಸಮಯ ಕಳೆದಿದ್ದಾರೆ. ೧೯೮೦ರ ನಂತರದಲ್ಲಿ ಕೇಸಿನ ಕ್ರಾಂತಿ ಹೆಚ್ಚಿದೆ. ವಾಯಿದೆ, ತಡೆಯಾಜ್ಞೆ, ಬಂಧನ, ವಾರೆಂಟ್, ಜಜ್‌ಮೆಂಟ್ಓದು ಬಾರದ ಕೃಷಿಕರ ಕಲಿತ ಪದಗಳಾಗಿವೆ. ಗ್ರಾಮ ನ್ಯಯಾಲಯ, ಅರಳಿಕಟ್ಟೆ ಪಂಚಾಯಿತಿ, ಊರ ಪಟೇಲರ ನೇತೃತ್ವದಲ್ಲಿ ಖುಲ್ಲಾ ಆಗುತ್ತಿದ್ದ ಪ್ರಕರಣಗಳೆಲ್ಲ ನ್ಯಾಯಾಲಯದಲ್ಲಿ ಜಮೆಯಾಗಿವೆ. ವಿಳಂಬ ನ್ಯಾಯದ ವ್ಯವಸ್ಥೆ ರೈತರ ವಿಳಾಸಗಳನ್ನು  ಕೋರ್ಟ್‌ಗೆ ಬದಲಿಸಿದೆ. ತಂತ್ರ, ಪ್ರತಿತಂತ್ರ, ಮೇಲ್ಮನವಿ, ಹೈಕೋರ್ಟ್ ಎಂದು ಹನುಮನ ಬಾಲದಂತೆ ಬೆಳೆಯುತ್ತ ಹದ ಮಳೆಯಲ್ಲೂ ರೈತರಿಗೆ ಹೊಲ ಮರೆಯುವ ಕಾಠಿಣ್ಯ ಸಿದ್ದಿಸಿದೆ!  ಕೂಡಿ ಬಾಳುವದಕ್ಕಿಂತ ಕಾದಾಡುವ ಮನಸ್ಸು ಹೆಚ್ಚಿದೆ.

ಅವರು ವಕೀಲರ ಹೆಂಡ್ತಿಗೆ ಪವನ್ ಸರ ಮಾಡ್ಸಾಕ ಹತ್ಯಾರಮಾತು ಎಲ್ಲರಿಗೂ ಅರ್ಥವಾಗುತ್ತದೆ. ರೈತರ ದುಡ್ಡಿನಲ್ಲಿ ವಕೀಲರು ಮನೆ ಕಟ್ಟಿಕೊಳ್ಳುತ್ತಾರೆಂದು ವ್ಯಾಜ್ಯದ ಬಗೆಗೆ ಹರಟೆ ಒಡೆಯುವಾಗ ಮಾತಾಡುತ್ತಾರೆ. ಆದರೆ ಸಂದರ್ಭ ಬಂದರೆ ಕೋರ್ಟ ಕೇಸಿಗಾಗಿ ಮಾಗಲ್ಯಸರ ಅಡವಿಡಲೂ ಹಿಂಜರಿಯದ ಭೂಪರಿದ್ದಾರೆ! ಒಂದೆರಡು ಗುಂಟೆ ನೆಲಕ್ಕೆ ಲಕ್ಷಾಂತರ ಕಳೆದಿದ್ದಾರೆ… ಗಳಿಸುವ ಛಲದಲ್ಲಿ ಹಣ ಕೈಜಾರುತ್ತಿದೆ. ಸಣ್ಣಪುಟ್ಟ ವಿಷಯಕ್ಕೂ ಕೋರ್ಟ್‌ಗೆ ಹೋಗಬೇಕು, ಕೇಸು ಹಾಕಬೇಕು, ನೋಟಿಸ್ ಕೊಡಬೇಕುಮನಸ್ಥಿತಿ ಬೆಳೆದಿದೆ. ಕೃಷಿ ಉತ್ಪಾದನೆ ಹೆಚ್ಚಳ, ಟ್ರ್ಯಾಕ್ಟರ್ ಖರೀದಿ, ಕೆರೆ ನಿರ್ಮಾಣ, ಹೊಸ ಕೃಷಿ ಬಗೆಗೆ ಕನಿಷ್ಠ ಸಮಯ ನೀಡಲು ಪುರುಸೊತ್ತಿಲ್ಲದವರು ನಿತ್ಯ ಕೋರ್ಟ್ ಕ್ಯಾಂಟೀನ್‌ಗಳಲ್ಲಿ ವಕೀಲರಿಗೆ ಚಹ ಕುಡಿಸುತ್ತಾರೆ, ಮುಂದಿನ ಜಗಳಕ್ಕೆ ಬೆಳ್ಳಂಬೆಳಗ್ಗೆ ಕತ್ತಿ ಮಸೆಯುತ್ತಾರೆ.

ಕೋರ್ಟ್ ಜಗಳಗಳು ಹೇಗಿರುತ್ತವೆಂಬುದಕ್ಕೆ ಉತ್ತರ ಕನ್ನಡದ ಸಿದ್ದಾಪುರ ಹಳ್ಳಿಯಲ್ಲೊಂದು ಸ್ವಾರಸ್ಯಕರ  ಉದಾಹರಣೆ ಇದೆ. ಸಹೋದರರಿಬ್ಬರು ಕಳೆದ ಸುಮಾರು ೨೫ ವರ್ಷಗಳಿಂದ  ಶಿರಸಿ ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ೬೦-೬೫ರ ಹರೆಯದ ಈ ವ್ಯಕ್ತಿಗಳದು ಅಕ್ಕಪಕ್ಕದ ಮನೆ. ವಾಯಿದೆ ದಿನ ಬೆಳಿಗ್ಗೆ ಮನೆಯಿಂದ ಜತೆಯಾಗಿ ಹೊರಡುತ್ತಾರೆ. ಇಬ್ಬರೂ ಸೇರಿ ಬಸ್ಸೇರಿದರೆಂದರೆ ಅಂದು ಕೋರ್ಟ್‌ಗೆ ಹೋಗುತ್ತಾರೆಂಬುದು ಪುಟ್ಟ ಮಕ್ಕಳಿಗೂ ತಿಳಿದಿದೆ. ಶಿರಸಿ ತಲುಪಿದವರು ತಮ್ಮ ತಮ್ಮ ವಕೀಲರ ಕಚೇರಿಗೆ ಹೋಗುತ್ತಾರೆ, ನ್ಯಾಯ ಕಲಾಪಗಳಲ್ಲಿ ಭಾಗವಹಿಸಿ ವಕೀಲರ ಸಲಹೆ ಕೇಳುತ್ತಾರೆ. ಮಧ್ಯಾನ್ಹ ಇಬ್ಬರೂ ಸೇರಿ ಅಲ್ಲಿಯೇ ಖಾನಾವಳಿ ಊಟ. ಒಮ್ಮೆ ಅಣ್ಣ ಬಿಲ್ಲು ನೀಡಿದರೆ ಮತ್ತೊಮ್ಮೆ ತಮ್ಮ ನೀಡುತ್ತಾನೆ. ಸಾಯಂಕಾಲ ಕಿರಾಣಿ ಸಾಮಗ್ರಿ ಖರೀದಿಸಿ ಬಸ್ಸಿನಲ್ಲಿ ಹರಟೆ ಹೊಡೆಯುತ್ತ ಮನೆಗೆ ಮರಳುತ್ತಾರೆ. ಇವರು ಯಾವ ಕೇಸಿನ ಸಂಬಂಧ ಕೋರ್ಟ್ ತಿರುಗುತ್ತಾರೆ? ವಿಚಿತ್ರವೆಂದರೆ ಸ್ವತಃ ಇವರಿಬ್ಬರ ನಡುವೆ ಜಮೀನು ವ್ಯಾಜ್ಯವಿದೆ! ಅಣ್ಣ ತನಗೆ ಸರಿಯಾಗಿ ಭೂಮಿ ನೀಡಲಿಲ್ಲ ಎಂದು ತಮ್ಮ ತಕರಾರು ತೆಗೆದು ಕೋರ್ಟ್ ಮೆಟ್ಟಿಲೇರಿದ್ದಾನೆ. ತಮ್ಮ ತನ್ನ ಮನೆಯ ಜಾಗ ಅತಿಕ್ರಮಿಸಿದ್ದನೆಂದು ಅಣ್ಣ ಪ್ರತಿಯಾಗಿ ಕೇಸ್ ಹಾಕಿದ್ದಾನೆ. ಇವತ್ತಿಗೂ ಪ್ರಕರಣ ನಡೆದಿದೆ! ವಕೀಲರ ವಾದದಲ್ಲಿ ಮಾತ್ರ ಜಗಳವಿದೆ. ಒಬ್ಬೊಬ್ಬರೂ ಲಕ್ಷಾಂತರ ರೂಪಾಯಿ ನೀರು ಮಾಡಿದ್ದಾರೆ. ಜಗಳ ಇರುವದು ಕೋರ್ಟ್‌ನಲ್ಲಿ, ನಾವು ಮಾತ್ರ ಪ್ರೀತಿಯಲ್ಲಿ ಇದ್ದೇವೆ!ಎನ್ನುತ್ತಾರೆ. ನಿತ್ಯ ಜಗಳ, ಬೈಗುಳ, ಹೊಡೆದಾಟ ಯಾವುದೂ ಇಲ್ಲದೇ ತಣ್ಣಗೆ ಪ್ರಕರಣ ಸಾಗಿದೆ. ಇಷ್ಟೆಲ್ಲ ಸ್ನೇಹವಿರುವ ನೀವು ಕೋರ್ಟ್‌ಗೆ ಅಲೆಯದೇ ಮನೆಯಲ್ಲಿ ಇಬ್ಬರೇ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತಲ್ಲವೇ? ಒಮ್ಮೆ  ನಾನೇ ಕೇಳಿದ್ದೆ. ಕೋರ್ಟ್‌ಗೆ ಹೋಗಿದ್ದೇವೆ, ಅದು ಏನು ಹೇಳುತ್ತದೆಯೋ ಕೇಳಬೇಕು!ಇಬ್ಬರೂ ಒಟ್ಟಾಗಿ ಹೇಳಿದ ಉತ್ತರಕ್ಕೆ ದಂಗಾಗಬೇಕು. ಹತ್ತಿರವಿದ್ದವರ ಹೃದಯಕ್ಕೆ ಅರ್ಥವಾಗದ ನ್ಯಾಯವನ್ನು ಮತ್ತೆಲ್ಲಿ ಹುಡುಕಲು ಸಾಧ್ಯವಿದೆ?. ಕೇಸು ಹಾಕುವದಕ್ಕೆ ಸೆಕ್ಷನ್‌ಗಳಿವೆ, ವಾದಕ್ಕೆ ವಕೀಲರಿದ್ದಾರೆಂದು ಹೆಜ್ಜೆ ಹೆಜ್ಜೆಗೂ ಕೋರ್ಟ್‌ಗೆ ಅಲೆಯುವ ಚಾಳಿಗೆ ಮಿತಿ ಬೇಡವೇ?