ಕಾಡಿನ ದಟ್ಟಣೆ, ವೈವಿಧ್ಯ ಕಡಿಮೆಯಾದ ಈ ಘಳಿಗೆಯಲ್ಲಿ ಹತ್ತಿ ಹೂವುಗಳ ಪರಾಗ, ಪುಷ್ಪರಸದ ಭರ್ಜರಿ ಅಂಗಡಿಗೆ ಜೇನು ದೊಡ್ಡ ಗಿರಾಕಿ. ಹತ್ತಿಯ ಹತ್ತೆಂಟು ಕುತ್ತು ಬಿಡಿಸಿದರೆ ಮಾತ್ರ ಬೆಳೆ ಬಚಾವು. ಜಿಗಿನೊಣ, ಕಾಯಿಕೊರಕ, ಮುರುಟು ರೋಗ ಎಂದು ಪ್ರತಿ ಹಂತವೂ ರೋಗ ರಂಗಸ್ಥಳ. ಬೆಳೆ ಗೆಲ್ಲಲು ಇಲ್ಲಿ ಮಳೆ ಸ್ನಾನದ ಹಾಗೇ ರಾಸಾಯನಿಕಗಳ ಸಿಂಚನ. ಅವನ್ತ್, ಎಡ್‌‌ಮಿಟ್, ಎಂಡೋಸಲ್ಪಾನ್, ಸೂಪರ್ ಕಿಲ್ಲರ್, ಮೊನೊಸಿಲ್, ಎಂಡೋಸಿಲ್, ಪಿನಾಲ್‌ಪಾಸ್‌ಗಳೆಂಬ ಬಜಾರಿನ ಹೊಸಹೊಸ  ಭರವಸೆ! ಅಲ್ಲಿ ನಮ್ಮ ಪುಟ್ಟ ಜೇನಿಗೆ ಸಾವಿನ ಅಸ್ತ್ರವಿದೆ.


ಬಟಾಬಯಲಿನ ಬಣ್ಣದ ಸ್ವರ್ಗದಂತೆ ಮುಂಡಗೋಡದ ಟಿಬೇಟಿಯನ್ ಕಾಲೋನಿಯ ಭವ್ಯ ನಿರ್ಮಾಣವಿದೆ. ಇಲ್ಲಿನ ಮಂದಿರದ ಗ್ರೈನೇಟ್ ಹಾಸಿನಲ್ಲಿ ಕಣ್ಣಾಡಿಸಿದರೆ ಈಗ ಹೆಜ್ಜೇನಿನ  ಶವಯಾತ್ರೆ ಕಾಣುತ್ತದೆ. ಕಟ್ಟಡದ ಗೋಡೆ, ಪಟ್ಟಿಗಳಲ್ಲಿ ನೇತು ಬಿದ್ದ ಗೂಡುಗಳಿಂದ ಆಗಾಗ ದುಂಬಿ ಕೆಳಕ್ಕುದುರುತ್ತವೆ. ಕಸಗುಡಿಸಿ  ಪೊರಕೆ ಇಡುವದರೊಳಗೆ ಮತ್ತಿಷ್ಟು ಜೇನು ಸಾವಿನ ಸಾಲು. ನೆಲಚಕ್ರದಂತೆ ತಿರುಗಿ ತಿರುಗಿ  ಕಣ್ಣೆದುರು ಅಸುನೀಗುವ ಮುಂಚೆ  ಇವು ನಮ್ಮ  ಕೃಷಿ ಬೆಳೆಗೆ ನೀಡಿದ ಪರಾಗಸ್ಪರ್ಶದ ನೆರವಿನ ಲೆಕ್ಕ ನೆನಪಿಸುತ್ತವೆ.

ಪ್ರತಿವರ್ಷ ೪೦-೫೦ ಜೇನು ಗೂಡುಗಳು ಇಲ್ಲಿನ ಟಿಬೆಟ್ ನಿರಾಶ್ರಿತರ ಕಾಲೋನಿಗಳಲ್ಲಿ ಆಶ್ರಯ ಪಡೆಯುತ್ತವೆ. ಲಾಮಾಗಳ ಧ್ಯಾನಕ್ಕೆ ಸಾಥ್ ನೀಡುವಂತೆ ಹೆಜ್ಜೇನಿನ ಝೇಂಕಾರ  ಓಂಕಾರದ ಪರಿಷ್ಕೃತ ಧ್ವನಿಯಂತೆ ಕೇಳುತ್ತದೆ. ಬಯಲು ಹೊಲಗಳ ಮಧ್ಯೆ ಎದ್ದ ಭವ್ಯ ಕಟ್ಟಡಗಳೆಂದರೆ ಕೃಷ್ಣ ಕುವರಿಯರಿಗೆ ಯಾಕೋ ಅಚ್ಚುಮೆಚ್ಚು. ಗಗನಚುಂಬಿ ಕಟ್ಟಡಗಳ ಛಾವಣಿ ಏರಿ ಸುತ್ತಲಿನ ಹೊಲಗಳತ್ತ ಒಮ್ಮೆ ಕಣ್ಣಾಡಿಸಬೇಕು. ಅರಶಿನಗೇರಿ, ಕೊಪ್ಪ, ಇಂದೂರು, ಉಗ್ಗನಕೇರಿ, ಬಸಾಪುರ, ಎರಬೈಲು ಮುಂತಾದ ಊರಿನ ಭೂಮಿ ಕಾಣುತ್ತವೆ.ಮಳೆ ಆಶ್ರಿತವಾಗಿ ಗೋವಿನ ಜೋಳ, ಜೋಳ, ಭತ್ತ, ಹತ್ತಿ ಬೆಳೆಗಳಿವೆ. ಅಲ್ಲೊಂದು ಇಲ್ಲೊಂದು ಮನೆಗಳ ಪಕ್ಕ ತೆಂಗಿನಮರ, ಕೆರೆಯಂಚಿನ ತಂಪಿನಲ್ಲಿ ಒಂದಿಷ್ಟು ಮುಟ್ಟಿದರೆ ಮುನಿ, ಕಳೆಗಿಡ, ಹುಲ್ಲು ಹೂವುಗಳು ಮಕರಂದ, ಪರಾಗ ಹಿಡಿದು  ಈ ಜೇನಿನ ಸಖ್ಯ  ಬೇಡುತ್ತವೆ. ಮೀಸೆಯಲ್ಲಿ ವಾಸನೆ ಗ್ರಹಿಸುವ ಐದು ಸಹಸ್ರಗ್ರಂಥಿಗಳು, ಸಂಯುಕ್ತ ನೇತ್ರಗಳಲ್ಲಿನ ಹತ್ತು ಸಹಸ್ರ ಸೂಕ್ಷ್ಮ ಮಸೂರ ವಿನ್ಯಾಸದ ಅದ್ಬುತ ಶಕ್ತಿಯ ಜೇನು ದುಂಬಿಯ ಪರಿಶ್ರಮ ನಮಗೆ ಗೊತ್ತೇ ಇದೆ. ಇವು ಸುಲಭಕ್ಕೆ ಹೂವು ಪತ್ತೆ ಹಚ್ಚಿ ೧೦-೨೦ ಕಿಲೋ ಮೀಟರ್ ಸುತ್ತಳತೆಯಲ್ಲಿ ಹಾರಾಡುತ್ತವೆ. ಹೊಲದ ಹೂವು ಜೇನಿನ ಸಂಗದಲ್ಲಿ ಫಲ ಭಾಗ್ಯ ಪಡೆಯುತ್ತವೆ.

ಮಳೆ ಕಡಿಮೆಯಾದಂತೆ ಇತ್ತೀಚಿನ ದಶಕಗಳಲ್ಲಿ ಹತ್ತಿಯ ಪ್ರೀತಿ ಹೆಚ್ಚಿದೆ. ವರ್ಷದಿಂದ ವರ್ಷಕ್ಕೆ ವೈಟ್ ಡೈಮಂಡ್ ಸಾಮ್ರಾಜ್ಯ ವ್ಯಾಪಿಸಿದೆ. ಕಾಡಿನ ದಟ್ಟಣೆ, ವೈವಿಧ್ಯ ಕಡಿಮೆಯಾದ ಈ  ಘಳಿಗೆಯಲ್ಲಿ ಹತ್ತಿ ಹೂವುಗಳ ಪರಾಗ, ಪುಷ್ಪರಸದ ಬರ್ಜರಿ ಅಂಗಡಿಗೆ ಜೇನು ದೊಡ್ಡ ಗಿರಾಕಿ. ಹತ್ತಿಯ ಹತ್ತೆಂಟು ಕುತ್ತು ಬಿಡಿಸಿದರೆ ಮಾತ್ರ ಬೆಳೆ ಬಚಾವು. ಜಿಗಿನೊಣ, ಕಾಯಿಕೊರಕ, ಮುರುಟು ರೋಗ ಎಂದು ಪ್ರತಿ ಹಂತವೂ ರೋಗ ರಂಗಸ್ಥಳ. ಬೆಳೆ ಗೆಲ್ಲಲು ಇಲ್ಲಿ ಮಳೆ ಸ್ನಾನದ ಹಾಗೇ ರಾಸಾಯನಿಕಗಳ ಸಿಂಚನ. ಎಕರೆಗೆ ೨೦-೨೫ ಸಾವಿರ ಆದಾಯದ ಕನಸು ಕಂಡವರ ಕೈಯಲ್ಲಿ ರಾಸಾಯನಿಕ ಅಸ್ತ್ರ. ಅವನ್ತ್, ಎಡ್‌‌ಮಿಟ್, ಎಂಡೋಸಲ್ಪಾನ್, ಸೂಪರ್ ಕಿಲ್ಲರ್, ಮೊನೊಸಿಲ್, ಎಂಡೋಸಿಲ್, ಪಿನಾಲ್‌ಪಾಸ್‌ಗಳೆಂಬ ಬಜಾರಿನ ಹೊಸಹೊಸ  ಬರವಸೆ ನಂಬಿದ ರಕ್ಕಸ ನೃತ್ಯ. ಹೊಲಗಳ ತುಂಬ ಕೀಟನಾಶಕ ಕೋಟೆ. ಹೊಲದ ಅಂಚಿನ  ರಸ್ತೆಯಲ್ಲಿ ಪಯಣಿಸಿದರೂ  ರಾಸಾಯನಿಕದ ಘಾಟು. ಶತ್ರು  ಹುಟ್ಟಡಗಿಸುವ ಅಸ್ತ್ರ  ಮಿತ್ರ ಕೀಟಗಳ  ಬದುಕು ದುಸ್ತರಗೊಳಿಸಿದೆ.  ಜೇನಿನ ಸಾವು  ಇಲ್ಲಿನ  ಒಂದು ಪುಟ್ಟ  ಸಾಕ್ಷ್ಯ. ಇಲ್ಲಿನ ಹೊಲದಂಚಿನ ಬೂರಗದ ಮರಕ್ಕೆ  ಹತ್ತಾರು ಜೇನು ಗೂಡು ಕಟ್ಟುತ್ತವೆ.  ಆದರೆ ಇಲ್ಲಿನ ಜೇನು ತೆಗೆಯುವ ಕಾಯಕ ಯಾರೂ ಮಾಡುವದಿಲ್ಲ. ಕಳೆದ ೬ ವರ್ಷದ ಹಿಂದೆ ಮರದ ಜೇನು ತೆಗೆದು ರುಚಿ ನೋಡಿದರೆ ಅಸಹ್ಯ ವಾಸನೆ!  ಇಲ್ಲಿನ ಜೇನು ತುಪ್ಪ ತಿನ್ನುವುದಕ್ಕೆ ಅಸಾಧ್ಯ. ಹೀಗಾಗಲು ಹೇಗೆ ಸಾಧ್ಯ? ಜೇನು ಬಲ್ಲವರು ಬೆರಗಿನಿಂದ ಕೇಳುತ್ತಾರೆ.

ಮಲೆನಾಡಿನ ಜೊಯಿಡಾ, ಯಲ್ಲಾಪುರ, ಶಿರಸಿ, ಸಿದ್ದಾಪುರ ಪ್ರದೇಶದ ಕಾಡುಗಳಲ್ಲಿ ಹೆಜ್ಜೇನು ಮರಗಳಿವೆ. ಇವನ್ನು  ಸತ್ನಾಲ್ ಮರ, ಪಡೆಮರ, ಜರ್ಬಂಧಿ ಮರ, ಎರ್ನಾಲ್ ಮರಗಳೆಂದು ಸ್ಥಳೀಯರು ಗುರುತಿಸುತ್ತಾರೆ. ಪ್ರಮುಖವಾಗಿ ದೈತ್ಯಾಕಾರದಲ್ಲಿ ಗಗನಚುಂಬಿಯಾಗಿ ಬೆಳೆಯುವ “ಟೆಟ್ರಾಮೆಲಸ್ ನ್ಯೂಡಿಪ್ಲೋರಾ” ವೃಕ್ಷವನ್ನು ಜೇನುಮರವೆನ್ನುವದು ವಾಡಿಕೆ. ಈ ಮರಗಳಿಗೆ ಪ್ರತಿವರ್ಷ ಬೇಸಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜೇನುಗೂಡು ಕಟ್ಟುತ್ತವೆ. ಕಾಡಿನ ಇನ್ನುಳಿದ ಮರಗಳಿಗಿಂತ ಅತಿ ಎತ್ತರವಾಗಿರುವ ಇದು ಜೇನಿನ ಅಕ್ಕರೆಯ ವಾಚ್‌ಟವರ್ ! ಹಿಂದೆ ಕಾಡು, ನದಿದಂಡೆ, ದೇವರ ಕಾಡುಗಳಲ್ಲಿದ್ದ ಮರಗಳು ಈಗ ಬಯಲಿಗೆ ಬಂದು ಒಂಟಿಯಾಗಿ ನಿಂತಿವೆ. ಒಂದಾದ ನಂತರ ಒಂದರಂತೆ ಹೂವರಳಿಸುವ ಸಸ್ಯ ಸಂಕುಲಗಳು ಕಡಿಮೆಯಾಗಿವೆ. ಸಿದ್ದಾಪುರ ಕಾನಸೂರಿನ ಕರಮನೆ, ಯಲ್ಲಾಪುರದ ಹೆಮ್ಮಾಡಿ, ಶಿರಸಿಯ ಮುಷ್ಕಿಯ ದೊಣ್ಣೆಕಾನು ಪ್ರದೇಶದಲ್ಲಿನ ಒಂದೊಂದು ಮರಗಳಲ್ಲಿ ಪ್ರತಿವರ್ಷ ತಲಾ ೩೦೦-೫೦೦ ಹೆಜ್ಜೇನು ಗೂಡುಗಳಿದ್ದ ದಾಖಲೆಯಿದೆ!. ಕಳೆದ ೨೦೦೨ರಲ್ಲಿ ಈ ಪ್ರದೇಶಗಳ ೪೫  ಹೆಜ್ಜೇನು ಮರಗಳ ಚಿತ್ರ ತೆಗೆಯಲು ಖುದ್ದು  ಓಡಾಡಿದ್ದೇನೆ. ಕಾಡು ಬದಲಾಗಿದೆ, ಜೇನು ಬರುವ ಪ್ರಮಾಣವೂ ಕಡಿಮೆಯಾಗಿದೆ ಎಂದು ಜನ ಮಾತಾಡಿದರು. ನಮ್ಮ ಪರಿಸರದ  ಆಗುಹೋಗುಗಳ  ವರ್ತಮಾನಗಳ  ಚಿತ್ರಗಳನ್ನು  ಜೇನು ಮರಗಳಲ್ಲಿ ಕಾಣಲು ಸಾಧ್ಯವಿದೆ. ಯಲ್ಲಾಪುರ ತಾಲೂಕಿನ ಕಾಳಿ ಕಣಿವೆ ಮೂಲೆಯಿಂದ ಬೇಡ್ತಿ ಕೊಳ್ಳದ ಕಾಡುಗಳಲ್ಲಿನ ಜೇನುಮರಗಳ ಪಟ್ಟಿ ಕುತೂಹಲಕರವಾಗಿದೆ. ಇಲ್ಲಿ ಪ್ರತಿ ೬-೮ ಕಿಲೋ ಮೀಟರ್‌ಗೆ ಒಂದು ಪಡೆಮರಗಳಿವೆ!  ಇವು ಸುತ್ತಲಿನ ಕಾಡಿನ ಕತೆ ಹೇಳುವ ಹಸುರು ಶಾಸನದಂತಿವೆ.  ಆದರೆ ಈಗ ಕಾಡಷ್ಟೇ ಅಲ್ಲ, ರೈತರೂ ಬದಲಾಗಿದ್ದಾರೆ. ಹಣದ ಬೆಳೆಯ ಹಿಂದೆ ಸಾಗುವ ಅನಿವಾರ್ಯತೆಯಲ್ಲಿ ಹೊಲ ಬೆಳೆ ಆಯ್ಕೆ, ನಿರ್ವಹಣೆಯ ಸ್ವರೂಪ ಬದಲಾಗಿದೆ. ಬಣ್ಣ, ಸುವಾಸನೆಯ ನೈಸರ್ಗಿಕ ಬೆರಗು ಚೆಲ್ಲಿ  ಪುಟ್ಟ ಕೀಟಗಳನ್ನು  ಲಾಗಾಯ್ತಿನಿಂದ ಸೆಳೆಯುವ ಹೂ ಮುಖದಲ್ಲೂ ರಾಸಾಯನಿಕದ ಕೋಟೆ ಎದ್ದಿದೆ, ಪರಿಣಾಮ ಮಧುರ ಜೇನಿಗೆ ಮೃತ್ಯುಪಾಶ ಒದಗಿದೆ!

ಪುಟ್ಟ ಕೀಟಗಳು ಪರಾಗಸ್ಪರ್ಶದ ಕ್ರಿಯೆಗೆ ನೀಡುವ ಅಮೂಲ್ಯ ಸಹಾಯ ನಮಗಿನ್ನೂ ಅರ್ಥವಾದಂತಿಲ್ಲ. ಇಂದು ನಮ್ಮ ಅಡುಗೆ ಮನೆಯ ಖಾದ್ಯ ತೈಲವಾದ ಫಾಮ್ ಆಯಿಲ್ ಹಿಂದೆ ವಿವಿಲ್(Elaeidotis Kamerunicus Fst)  ಎಂಬ ದುಂಬಿಯ ನೆರವಿದೆ. ಏಣ್ಣೆ ತಾಳೆ ದಕ್ಷಿಣ ಆಪ್ರಿಕಾದ  ಕಾಡು ಮರ. ಇಲ್ಲಿನ ಮೂಲನಿವಾಸಿಗಳು ಫಲದಿಂದ ಏಣ್ಣೆ ತೆಗೆಯುತ್ತಿದ್ದರು. ಮಹತ್ವ ಗಮನಿಸಿದ ಮಲೇಶಿಯಾದ ಜನ ಆಫ್ರಿಕಾ ಕಾಡಿನ ಸಸ್ಯ  ಪಡೆದು  ೧೯೭೯ರಲ್ಲಿ ಕೃಷಿ ಆರಂಭಿಸಿದರು. ಮರ ಬೆಳೆದು ಹೂ ಗೊನೆಗಳು ಬಂದವು. ಆದರೆ ಇಳುವರಿ ಇರಲಿಲ್ಲ. ಪರಿಣಾಮದ  ಅಧ್ಯಯನಕ್ಕೆ ಪುನಃ ಆಫ್ರಿಕಾ ಕಾಡಿನ ತಾಳೆ ಮರ ಏರಿದರು, ಪರಾಗಸ್ಪರ್ಶ ಕ್ರಿಯೆ ಗಮನಿಸಿದರು. ಸ್ಥಳೀಯ ವಿವಿಲ್ ದುಂಬಿ ನೆರವಾಗುತ್ತಿರುವದು ಗಮನಕ್ಕೆ ಬಂದಿತು. ೧೯೮೧ರಲ್ಲಿ ಪ್ರಥಮ ಬಾರಿಗೆ ವಿವಿಲ್ ದುಂಬಿಯನ್ನು ಮಲೆಶಿಯಾಕ್ಕೆ ತಂದರು. ಇಂದು ವಿಶ್ವದ ಪ್ರತಿಶತ ೫೮ ಪ್ರಮಾಣದ ಖಾದ್ಯತೈಲವನ್ನು ಮಲೇಶಿಯಾ ಉತ್ಪಾದಿಸುತ್ತಿದೆ.  ಇದರಲ್ಲಿ ಶೇಕಡಾ ೭೮ ಭಾಗ ಭಾರತ ಸೇರಿದಂತೆ ವಿವಿಧ ದೇಶಗಳಿಗೆ ರಪ್ತಾಗುತ್ತಿದೆ. ನಮ್ಮ ಅಡುಗೆಯ ಆಧಾರವಾಗಿದೆ. ಅಷ್ಟೇಕೆ ನಮ್ಮ ಶಿವಮೊಗ್ಗ ಪ್ರಾಂತ್ಯದಲ್ಲಿ ತಾಳೆ ಕೃಷಿ ಆರಂಭವಾಗಾಗ ಇಳುವರಿ ಸಮಸ್ಯೆ ಗೋಚರಿಸಿತು. ದೂರದ ಆಫ್ರಿಕಾದ ವಿವಿಲ್ ತಂದು ಮರಕ್ಕೆ ಬಿಟ್ಟ ಬಳಿಕ ಶೇಕಡಾ ೨೦-೩೦ರಷ್ಟು ಇಳುವರಿ ಹೆಚ್ಚಿದೆ.

ಕ್ರಿ.ಶ. ೧೮೪೦ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಐವಾ ಹಾಗೂ ಮಿಸೌರಿ ರಾಜ್ಯಗಳ ನಡುವೆ ಅಮೇರಿಕಾ ಸರ್ವೋಚ್ಚ ನ್ಯಾಯಾಲಯದಲ್ಲಿ ಸತತ ೧೨ ವರ್ಷ ಕಾಲ ಅಲ್ಲಿನ ಜೇನು ಮರಗಳ ಹಕ್ಕಿಗಾಗಿ ವ್ಯಾಜ್ಯ ನಡೆದಿದೆ. ಇದು ಹನಿವಾರ್ ಎಂದು ಪ್ರಸಿದ್ಧವಾಗಿದೆ. ಈಗ ಟಿಬೇಟಿಯನ್ ಕಾಲೋನಿಯ ಜೇನಿನ ಸ್ಥಿತಿ ಗಮನಿಸಿದರೆ ಜೇನಿನ ವಿರುದ್ಧ  ಇನ್ನೂ ದೊಡ್ಡ  ಹಿಟ್ಲರ್ ಕದನ  ನಡೆದಂತೆ ಕಾಣುತ್ತಿದೆ. “ನಮ್ಮ ಸಾವಿನ ಬಳಿಕ ವೆನಿಲ್ಲಾ ಹೂವನ್ನು ನೀವು ಪರಾಗಸ್ಪರ್ಶ ಮಾಡಿದಂತೆ ಎಲ್ಲ ಕೃಷಿ ಬೆಳೆಗಳ ಪರಾಗಸ್ಪರ್ಶಕ್ಕೆ ಶ್ರಮಿಸುತ್ತೀರಾ?” ಹೆಜ್ಜೇನಿನ ಹೆಣದ ಮಗ್ಗುಲಲ್ಲಿ ಹುದುಗಿದ ಮರಣ ಪತ್ರದಲ್ಲಿ ಮೈನಡಗಿಸುವ ಸಾಲುಗಳಿವೆ. ರೈತ ಆತ್ಮಹತ್ಯೆ ನಿತ್ಯ ಗಮನಿಸಿದವರಿಗೆ ಪುಟ್ಟಕೀಟದ ಸಾವು ತೀರಾ ತೀರಾ ಚಿಕ್ಕದ್ದು! ಆದರೆ ಪರಿಸರ ಪೋಲಿಸ್‌ರ ಪಂಚನಾಮೆ ನಡೆದರೆ ರೈತ ಸಾವಿಗೂ, ಹೆಜ್ಜೇನಿನ ಜೀವಯಾನಕ್ಕೂ ಸಂಬಂಧದ  ಸುಳಿವು ಸಿಗಬಹುದು.