ಪುಟ್ಟ ಕೀಟಗಳನ್ನು, ಬೆಳೆ ಹಾನಿ ಮಾಡುವ ವನ್ಯ ಜೀವಿಗಳನ್ನು ನಿಯಂತ್ರಿಸುವುದಕ್ಕೆ ಭೂತ ದೈವಗಳ ಆರಾಧನೆಯನ್ನು ಇಂದಿನ ವಿಜ್ಞಾನಯುಗದಲ್ಲಿ ಒಪ್ಪಲು ಸಾಧ್ಯವಿಲ್ಲ. ಅಪ್ಪಟ ಸೈಟಿಂಫಿಕ್ ಜೀವಿಗಳಿಗೆ ಇಂತಹ ವಿಚಾರಗಳ ಪ್ರಸ್ತಾಪ ಕೂಡಾ ಸಿಟ್ಟೇರಿಸಬಹುದು. ಕೀಟನಾಶಕಗಳ ಮುಖೇನ ನಿಯಂತ್ರಿಸಬಹುದಾದುದನ್ನು ಕಲ್ಲು ದೇವರ ಮುಖೇನ ಹೇಗೆ ನಿಯಂತ್ರಿಸುತ್ತಾರೆಂಬ ಪ್ರಶ್ನೆ ಉದಯಿಸಬಹುದು. ಕಾರ್ಯ-ಕಾರಣಗಳನ್ನು ನಂಬಿ ನಡೆಯುವ ವಿಜ್ಞಾನ ಇವು ಮೌಢ್ಯಗಳೆಂದು ಸುಲಭದಲ್ಲಿ ಬದಿಗೆ ತಳ್ಳಬಹುದು. ವಿಜ್ಞಾನ, ತಂತ್ರಜ್ಞಾನ ಎಷ್ಟೇ  ಮುಂದುವರಿದಿದ್ದರೂ ಅದು ಹಳ್ಳಿಯ ರಸ್ತೆ ಬದಲಿಸಬಹುದು, ವಾಹನಗಳಲ್ಲಿ ಮಾರ್ಪಾಟು ಮಾಡಬಹುದು, ಆದರೆ ಹಳ್ಳಿಮನೆಗಳನ್ನು ಕಾಡುವ ಕ್ರಿಮಿ ಕೀಟಗಳ ಬಗೆಗಿನ ನಂಬಿಕೆ ಅಷ್ಟು ಬೇಗ ಬದಲಾಗದು  ಎಂಬುದಕ್ಕೆ  ಇರುವೆ, ಸೊಳ್ಳೆ, ದುಂಬಿಗಳ ಕುರಿತ  ಸಂಗತಿಗಳೇ ಸಾಕ್ಷಿ.


ಮಳೆಗಾಲ ಆರಂಭದಲ್ಲಿ  ಮಣ್ಣಿನ ಮನೆಯ ನೆಲಕ್ಕೆ ತಂಪೇರುತ್ತಿದ್ದಂತೆ ಭೂಗತದಿಂದ ಒಂದು ಜಾತಿ ಇರುವೆ ಸೈನ್ಯಗಳ ಆಗಮನವಾಗುತ್ತಿತ್ತು. ಕೆಂಪುಬಣ್ಣದ  ಇವನ್ನು  ‘ಕೇಶ್‌ಯರಾ'( ಕೇಶ ಇರುವೆ) ಎಂದು ಗ್ರಾಮ್ಯದಲ್ಲಿ  ಕರೆಯುತ್ತಿದ್ದರು. ಮಣ್ಣು ನೆಲದಲ್ಲಿ ಚಾಪೆಹಾಕಿ ಮಲಗಿದ್ದರೆ ನಡುರಾತ್ರಿಯಲ್ಲಿ  ಇವುಗಳ ಸೈನ್ಯ ಪ್ರತ್ಯಕ್ಷವಾಗಿ ತಲೆಗೂದಲಿಗೆ ( ಬಹುಶಃ ಇದೇ ಕಾರಣಕ್ಕೆ ಇದಕ್ಕೆ ಕೇಶ ಇರುವೆ ಎಂದಿರಬಹುದು !) ಮುತ್ತುತ್ತಿದ್ದವು, ಕೈ ಕಾಲು ಕಿವಿಯೆನ್ನದೇ  ಕಚ್ಚುತ್ತಿದ್ದವು. ಒಂದೆರಡು ಇರುವೆ ಕಡಿದರೂ ವಿಪರೀತ ಉರಿ, ಮಹಡಿ ಮನೆಗಳಿಲ್ಲದ ಕಾಲಕ್ಕೆ ಇವು ಮಲೆನಾಡಿನ  ಮಣ್ಣಿನ ಮನೆಗೆ ಎರಗಿದಾಗಂತೂ  ಥೇಟ್ ಭಯೋತ್ಪಾದಕ ಸೈನ್ಯಬಂದಂತೆ ಇಡೀ ರಾತ್ರಿ ಜಾಗರಣೆ! ವರ್ಷಕ್ಕೊ ಎರಡು ವರ್ಷಕ್ಕೊಮ್ಮೆ ಅತಿಥಿಗಳಂತೆ ಆಗಮಿಸುವ ಇವನ್ನು  ಮನೆಮಂದಿ ಇರುವೆಯೆಂದು ಕರೆಯುವದಕ್ಕಿಂತ ದೇವಧೂತರೆಂದು ಭಾವಿಸುತ್ತಿದ್ದರು. ‘ಚೆನ್ನಕೇಶವ ದೇವಸ್ಥಾನಕ್ಕೆ  ಹಣ್ಣುಕಾಯಿ ಮಾಡಿಸಿದರೆ  ಇರುವೆಗಳು ಹೋಗುತ್ತವೆಂಬುದು’  ಎಲ್ಲ ಹಿರಿಯರ ಬಲವಾದ ನಂಬಿಕೆ! ಹತ್ತಿರದ ದೇವಾಲಯದತ್ತ ತೆಂಗಿನಕಾಯಿ ಹಿಡಿದು ಓಡುತ್ತಿದ್ದರು. ನಾವು ಚಿಕ್ಕವರಿದ್ದಾಗ  ದೇವಾಲಯಕ್ಕೆ  ಹಣ್ಣುಕಾಯಿಗೆ ಹೋದಾಗ ‘ಓಹ್! ಕೇಶ್ ಇರುವೆ ಬಂತಾ?’  ಎಂದು ಪೂಜೆಗೆ ಮುಂಚೆ ಪೂಜಾರಿ ಕೇಳುತ್ತಿದ್ದುದು ಇನ್ನೂ ನೆನಪಿದೆ. ಬಹುಶಃ ಪೂಜಾರಿಗೆ ಹೇಳಿಯೇ ಈ ದೇವಧೂತ ಇರುವೆಗಳು ನಮ್ಮ ಮನೆಗೆ ಬಂದಿರಬಹುದೆಂದೂ, ದೇವರನ್ನು ಮರೆತರೆ ನೆನಪಿಸುವ ಕೆಲಸ ಇವು ಮಾಡುತ್ತಿವೆಯೆಂದು ಆ ಕಾಲಕ್ಕೆ ಭಾವಿಸಿದ್ದೆವು. ಮನೆಗೆ ಈ ಕೆಂಪಿರುವೆ ಬಂದರಷ್ಟೇ ಚೆನ್ನಕೇಶವ ದೇವಾಲಯಕ್ಕೆ ಹಣ್ಣುಕಾಯಿಗೆ ಜನ ಬರುತ್ತಾರೆಂಬ ಪೂಜಾನುಭವದಲ್ಲಿ  ಅವರು ಇರುವೆ ಭವಿಷ್ಯ ಹೇಳುತ್ತಿದ್ದರೆಂದು  ಆ ಮೇಲೆ ತಿಳಿಯಿತು.

ಹೊಟ್‌ನುಶಿ ಎಂದು ಕರೆಯಲ್ಪಡುವ ಒಂದು ಜಾತಿಯ ಸಣ್ಣಕೀಟ ಉತ್ತರ ಕನ್ನಡದ ಕುಮಟಾದ ಮರ್ಸೆಹಳ್ಳಿಯ ಜನ, ಜಾನುವಾರುಗಳನ್ನು ವಿಪರೀತ ಕಾಡಿಸುತ್ತದೆ. ಏಪ್ರಿಲ್ ತಿಂಗಳು ಬಂತೆಂದರೆ ಕಾಡಿಗೆ ದನಕರು ಬಿಡುವಂತಿಲ್ಲ,  ಅವು ಈ ಸೊಳ್ಳೆಕಡಿತದಿಂದ  ಕಂಗಾಲಾಗಿ ಓಡುತ್ತವೆ. ದೂರದ ಊರುಗಳಿಂದ ಖರೀದಿಸಿ ತಂದ ಜಾನುವಾರುಗಳು ಕೀಟ ಕಡಿತದಿಂದ ಸಾವನ್ನಪ್ಪುತ್ತವೆ. ಇದು ಇತ್ತೀಚಿನ ಸಮಸ್ಯೆಯಲ್ಲ, ಲಾಗಾಯ್ತಿನಿಂದ ಈ ಸೊಳ್ಳೆಕಾಟ ಇದ್ದದ್ದೇ!  ಅದಕ್ಕೆ ಈ ಊರಿನಲ್ಲಿ  ‘ಹೊಟ್‌ನುಶಿ ಭೂತ’ ಎಂಬ ಭೂತಕ್ಕೆ ಗಡಿಹಬ್ಬದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ, ಕೀಟದಿಂದ ಬಚಾವು ಮಾಡಿಕೊಡಬೇಕೆಂದು ಪ್ರಾರ್ಥಿಸುವ  ಪರಂಪರೆಯಿದೆ!.

ಕಾಡು ಗರ್ಭದ ಜೊಯಿಡಾದ ಶಿವಪುರದ್ದು ಇನ್ನೊಂದು ವಿಚಿತ್ರ ಕತೆ. ಇಲ್ಲಿ ಕಟ್ಟೇವಾಡ್ಲು  ಎಂಬ ಬೀಟ್ಲ್ ಊರಿಗೆ ಭಯ ಹುಟ್ಟಿಸುತ್ತಿದೆ. ಇಲ್ಲಿನ ಕೆಲವೇ ಕೆಲವು ಮನೆಗಳಿಗೆ ಬೇಸಿಗೆಯಲ್ಲಿ ಒಂದೆರಡು ಮಳೆ ಸುರಿದ ಬಳಿಕ  ಇವು ಹಾಜರು. ಮನೆ ಛಾವಣಿ, ಗೋಡೆ, ನೆಲ, ಸಂಧುಗಳಲ್ಲಿ ಇವುಗಳದೇ ದೈತ್ಯ ಸೈನ್ಯ, ಬಿಳಿ ಗೋಡೆಗೆ  ಕಪ್ಪು ಚಾಪೆ ಹೊದೆಸಿಟ್ಟಂತೆ ಲಕ್ಷಾಂತರ  ಬೀಟ್ಲ್‌ಗಳ ಹರಿದಾಟ. ಇಲ್ಲಿನ ೪-೫ಮನೆಗಳಲ್ಲಿ ಮಾತ್ರ ಕಾಣಸಿಗುವ ಈ ದುಂಬಿಗಳು ರಾತ್ರಿ ದೀಪ ಉರಿಸಿದ ಬಳಿಕ ಕಾಡಿನೆಡೆಯಿಂದ ಹಾರಿ ಮನೆ ಸೇರುತ್ತವೆ. ಒಮ್ಮೆ ಮನೆಗೆ ಬಂದವು ಅಲ್ಲೇ ಠಿಕಾಣೆ. ಹಾಸಿಗೆ ತುಂಬೆಲ್ಲ ಹರಿದಾಡಿ, ಮೈಮೇಲೆ ಕಚಗುಳಿ ಇಡುತ್ತ ಕಿವಿ ಸಂಧಿಯಲ್ಲಿ ನುಸುಳಿ ಅಸಾಧ್ಯ ಹಿಂಸೆ ನೀಡುತ್ತವೆ. ವಿದ್ಯುತ್ ಇದ್ದರೂ ದೀಪ ಉರಿಸುವಂತಿಲ್ಲ, ಹಾಸಿಗೆ ಹಾಸಿದರೂ ಮಲಗಿ ನಿದ್ದೆ ಮಾಡುವಂತಿಲ್ಲ!’ ಎಂಬುದು ಪರಿಸ್ಥಿತಿ. ಬರೋಬ್ಬರಿ ೩-೪ ತಿಂಗಳ ಕಾಲ ಇವುಗಳ ಉಪಟಳವಿರುತ್ತದೆ. ಇಲ್ಲಿನ ನೇತುರ್ಗಾ ಹಳ್ಳಿಯ ಗೋಪಾಲಕೃಷ್ಣ ಭಾಗ್ವತ್‌ರ ಮಹಾಮನೆಯಲ್ಲಂತೂ ಅಲ್ಲಿನ ಅಷ್ಟೂ ಕಟ್ಟೆವಾಡ್ಲು ಸಂಗ್ರಹಿಸಿದರೆ ಕನಿಷ್ಟ ೨-೩ಕ್ವಿಂಟಾಲ್  ಸಿಗಬಹುದು!  ಇವು ಸರಿಸುಮಾರು ೫೦-೬೦ವರ್ಷಗಳಿಂದಲೂ  ಹೀಗೆ  ಕಾಟ ಕೊಡುತ್ತಿವೆ. ಜನ ಇದನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಿಸಿ ಕೊನೆಗೆ ಸಹಜವೆಂಬಂತೆ ಒಪ್ಪಿಕೊಂಡು ಸಹಬಾಳ್ವೆ ನಡೆಸಿದ್ದಾರೆ. ಏನೇ ಮಾಡಿದರೂ ಇವು ಮನೆ ಬಿಟ್ಟು ತೊಲಗುವದಿಲ್ಲವೆಂದು ತಿಳಿದ ಬಳಿಕ ಮನೆ ಮಹಡಿಯಲ್ಲಿ ಇಡೀ ರಾತ್ರಿ ದೀಪ ಉರಿಸಿ ಒಂದೆಡೆ ಆಕರ್ಷಿಸುತ್ತಾರೆ, ಮನೆ ಜಗುಲಿಗೆ ಬರುವುದನ್ನು  ಮಹಡಿಯಲ್ಲಿ ನಿಲ್ಲಿಸುತ್ತಾರೆ. ಇವನ್ನು ಕೀಟ ಎಂಬುದಕ್ಕಿಂತ  ಈಶ್ವರನ  ಗಣದ ಕಾಟ  ಎಂದು ಹಿರಿಯರು ಗುರುತಿಸುತ್ತಾರೆ.  ಊರಿನ ಈಶ್ವರ ದೇವಾಲಯ ಸರಿಪಡಿಸಿದರೆ, ಪೂಜೆ ಅರ್ಪಿಸಿದರೆ  ಕಟ್ಟೆವಾಡ್ಲು ನಿಯಂತ್ರಿಸಬಹುದೆಂದು ಕೆಲವರು ಲೆಕ್ಕಹಾಕುತ್ತಾರೆ.

ಜಾನುವಾರುಗಳ ದೊಡ್ಡಿಯಲ್ಲಿ ವಿಪರೀತ ಉಣ್ಣಿ(ಉಣುಗು)ಗಳ ಕಾಟ, ಹಸುಕರುಗಳ ರಕ್ತ ಹೀರಿ ಅವುಗಳ ಆರೋಗ್ಯ ಹದಗೆಡಿಸುತ್ತವೆ, ಸಾವು ಸಂಭವಿಸುತ್ತವೆ. ಇವುಗಳ ನಿಯಂತ್ರಣಕ್ಕೆ   ಧಾರ್ಮಿಕ ಕೆಲಸ ಮಾಡಿಸುವದನ್ನು ಮಲೆನಾಡಿನಲ್ಲಿ ಕಾಣುತ್ತೇವೆ. ಭತ್ತದ ಗದ್ದೆಗಳಿಗೆ ಕಾಡು ಪ್ರಾಣಿಗಳ ದಾಳಿ ನಿಯಂತ್ರಣಕ್ಕೆ  ಹೊಲದ ಅಂಚಿನಲ್ಲಿ ಬೇಟೆ ಬೀರಪ್ಪನಿಗೆ ಹರಕೆ ಒಪ್ಪಿಸುವ ಪರಿಪಾಠವಿದೆ. ಪೂಜೆ ಅರ್ಪಿಸಿದರೆ ಬೀರಪ್ಪ ಹೊಲ ಕಾಯುತ್ತಾನೆ ಎಂಬುದನ್ನು  ಯಾರು ಒಪ್ಪಲಿ ಬಿಡಲಿ  ಇಂದಿಗೂ ಹಲವು ಹಳ್ಳಿಗಳಲ್ಲಿ  ಬೇಟೆ ಬೀರಪ್ಪನಿಗೆ ಪೂಜೆ ಸಲ್ಲುತ್ತದೆ.

ಪುಟ್ಟ ಕೀಟಗಳನ್ನು, ಬೆಳೆ ಹಾನಿ ಮಾಡುವ ವನ್ಯ ಜೀವಿಗಳನ್ನು ನಿಯಂತ್ರಿಸುವದಕ್ಕೆ ಭೂತ ದೈವಗಳ ಆರಾಧನೆಯನ್ನು ಇಂದಿನ ವಿಜ್ಞಾನಯುಗದಲ್ಲಿ ಒಪ್ಪಲು ಸಾಧ್ಯವಿಲ್ಲ. ಅಪ್ಪಟ ಸೈಟಿಂಫಿಕ್ ಜೀವಿಗಳಿಗೆ ಇಂತಹ ವಿಚಾರಗಳ ಪ್ರಸ್ತಾಪ ಕೂಡಾ ಸಿಟ್ಟೇರಿಸಬಹುದು. ಕೀಟನಾಶಕಗಳ ಮುಖೇನ ನಿಯಂತ್ರಿಸಬಹುದಾದುದನ್ನು ಕಲ್ಲು ದೇವರ ಮುಖೇನ ಹೇಗೆ ನಿಯಂತ್ರಿಸುತ್ತಾರೆಂಬ ಪ್ರಶ್ನೆ ಉದಯಿಸಬಹುದು. ಕಾರ್ಯ-ಕಾರಣಗಳನ್ನು ನಂಬಿ ನಡೆಯುವ “ಜ್ಜಾನ ಇವು ಮೌಢ್ಯಗಳೆಂದು ಸುಲಭದಲ್ಲಿ ಬದಿಗೆ ತಳ್ಳಬಹುದು. ವಿಜ್ಞಾನ, ತಂತ್ರಜ್ಞಾನ ಎಷ್ಟೇ  ಮುಂದುವರಿದಿದ್ದರೂ ಅದು ಹಳ್ಳಿಯ ರಸ್ತೆ ಬದಲಿಸಬಹುದು, ವಾಹನಗಳಲ್ಲಿ ಮಾರ್ಪಾಟು ಮಾಡಬಹುದು, ಆದರೆ ಹಳ್ಳಿಮನೆಗಳನ್ನು ಕಾಡುವ ಕ್ರಿಮಿ ಕೀಟಗಳ ಬಗೆಗಿನ ನಂಬಿಕೆ ಅಷ್ಟು ಬೇಗ ಬದಲಾಗದು  ಎಂಬುದಕ್ಕೆ  ಇರುವೆ, ಸೊಳ್ಳೆ, ದುಂಬಿಗಳ ಕುರಿತ  ಸಂಗತಿಗಳೇ ಸಾಕ್ಷಿ. ಇದನ್ನು ಕಾಡು ಹಳ್ಳಿಗಳ ಕೀಟಾರಾಧನೆಯ ವಿಶಿಷ್ಟ ಸಂಸ್ಕೃತಿ  ಎನ್ನಬಹುದು! ಇಲ್ಲಿ ಕೀಟ ಭಯದಲ್ಲಿ ಭಕ್ತಿ ಜನಿಸಿದ ಚಿತ್ರ ನೋಡಬಹುದು. ಕಾಡು ಗರ್ಭದಲ್ಲಿ ಬದುಕು ಕಟ್ಟುವಾಗಿನ ಸಂದರ್ಭದಲ್ಲಿ  ಎದುರಾದ ಅಡಚಣೆಗಳನ್ನು ಪೂಜೆ ನಂಬಿಕೆಗಳ ಮುಖೇನ ಬಗೆಹರಿಸುವ ದಾರಿ ಹುಡುಕುವದು ಕಾಲಸ್ಥಳದ ಅನಿವಾರ್ಯ. ದೈವ ಭಕ್ತಿಯಲ್ಲಿ ನಿಯಂತ್ರಿಸಬಹುದೆಂಬ ನಂಬಿಕೆಯೇ ಬದುಕು ಸಾಗಿಸುವ ಎಕೈಕ ಆಧಾರ. ಕಷ್ಟಗಳ ನಡುವೆಯೂ ಭರವಸೆ ಹುಟ್ಟಿಸುವ ದಾರಿ. ಶಿವಪುರದ  ಕಟ್ಟೆವಾಡ್ಲುಗಳ ನಡುವೆ ಒಂದು ರಾತ್ರಿ ಕಳೆದ ಅನುಭವವೇ ನನಗಿನ್ನೂ ಕಾಡುತ್ತಿದೆ. ಪ್ರತಿ ನಿಮಿಷಕ್ಕೊಂದರಂತೆ ಎಲ್ಲಿಂದಲೋ ನುಸುಳಿ ಹಾಸಿಗೆ ಹೊಕ್ಕು ಮೈಯಲ್ಲಿ ಹರಿದಾಡುವ ದುಂಬಿಗಳು ಇಡೀ ರಾತ್ರಿ ನಿದ್ದೆ ಕದ್ದವು, ಆ ಪ್ರತಿ ಕ್ಷಣವೂ  ಈ ದುಂಬಿ ಕೊಲ್ಲಲು ಕೀಟನಾಶಕ ಸಿಂಪಡಿಸಬಹುದೆಂದು ಆಗಾಗ ಯೋಚಿಸುತ್ತಿದ್ದೆ, ಹೊತ್ತು ಕಳೆದಂತೆ ದುಂಬಿ ದಾಳಿಯ ಹಿಂಸೆ ಹೇಸಿಗೆಯಾಗಿ ದೇವರನ್ನೇ  ಮೊರೆ ಹೋಗುವ ಹಂತಕ್ಕೆ  ಪರಿವರ್ತನೆಯಾಗಿದ್ದೆ! ನಮ್ಮಂತವರ ಒಂದು ದಿನದ ಅನುಭವವೇ ಹೀಗಾಗಿರುವಾಗ ಹಲವು ತಿಂಗಳಕಾಲ ಇವುಗಳ ಜತೆ ಕಾಲಹಾಕಬೇಕಾದ ಕಾಡು ಗರ್ಭದ ಜನ ಹುಳುಹಪ್ಪಟೆ ನಿಯಂತ್ರಣಕ್ಕೆ ಕಾಣದ ದೇವರಿಗೆ ಕೈ ಮುಗಿದಿದ್ದು ಯಾರಿಗೂ ಅರ್ಥವಾಗುವಂತಹುದೇ!. ಅರ್ಥವಾಗದವರು ಈ ಪ್ರದೇಶಗಳಲ್ಲಿ  ಒಂದೆರಡು ದಿನ ಇದ್ದು ಅನುಭವಿಸಿ ನೋಡಬಹುದು.