ಹಸು  ಎಂದರೆ ಹಿಂದೂಗಳಿಗೆ  ಅಪಾರ ಭಕ್ತಿ, ಎಲ್ಲ ಸಾಕುಪ್ರಾಣಿಗಳಿಗಿಂತ  ಇವಕ್ಕೆ  ಮಹತ್ವದ ಸ್ಥಾನ. ಕಾಮದೇನು ಎಂದು ಗುರುತಿಸಲ್ಪಡುವ ಈ ಪ್ರಾಣಿ  ನಿತ್ಯ  ಪೂಜಿಸಲ್ಪಡುತ್ತದೆ, ವರ್ಷದ ಕೆಲದಿನಗಳಲ್ಲಿ  ವಿಶೇಷ ಉತ್ಸವ ಆಚರಣೆಯಿದೆ. ಬ್ರಿಟಿಶ್ ದಾಖಲೆಯ ಈ ಸಾಲು ಓದಿದರೆ  ಆಕಳ  ಬಗೆಗೆ ಆಂಗ್ಲರು ಏಕೆ ನಿಬಂಧ ಬರೆದಿದ್ದರು ಎಂಬ ಪ್ರಶ್ನೆ ಉದಯಿಸಬಹುದು. ಗೋವಿನ ಬಗೆಗೆ ನಮಗೆ ಭಕ್ತಿ, ಇಂಗ್ಲೀಷರಿಗೆ ಭಯವಿತ್ತು! ನಾಡಿಗೆ ಬರುವವರಿಗೆ ಹಿಂದೂ ಸಂಸ್ಕೃತಿಯಲ್ಲಿನ ಹಸುವಿನ ಸ್ಥಾನ ಪರಿಚಯಿಸುವ ಅನಿವಾರ್ಯತೆ  ಅವರನ್ನು  ಆಗಾಗ ಕಾಡುತ್ತಿತ್ತು.


ಕ್ರಿ.ಶ. ೧೭೬೦ರಲ್ಲಿ ಇಂಗ್ಲೀಷರು  ಕೆನರಾದ ಹೊನ್ನಾವರದಲ್ಲಿ  ಕಾಳು ಮೆಣಸು ಗೋದಾಮಿನ ( ಕಾಳು ಮೆಣಸಿನ ಗೋದಾಮನ್ನು ಅವರು ಫ್ಯಾಕ್ಟರಿಎನ್ನುತ್ತಿದ್ದರು!) ಒಂದು ಶಾಖೆ ಹೊಂದಿದ್ದರು. ಅಲ್ಲಿನ ಮೆಣಸು ಖರೀದಿಗೆ  ಇಂಗ್ಲೀಷ್  ವರ್ತಕರ ಒಂದು  ಹಡಗು ಬಂತು.  ಜಾನ್‌ಬೆಸ್ಟ್ ನೇತ್ರತ್ವದಲ್ಲಿ  ೧೭ ಜನ ಹಡಗು  ಇಳಿದು ಹೊನ್ನಾವರ ಬೀದಿಗೆ  ಬಂದರು. ಅವರು ತಮ್ಮ ಜತೆ ಬುಲ್‌ಡಾಗ್ತಂದಿದ್ದರು. ಅದನ್ನು ಗೋದಾಮಿನ ಮುಖ್ಯಸ್ಥನಿಗೆ ನೀಡಬೇಕಿತ್ತು. ಗುಡ್ಡದಂಚಿನ ರಸ್ತೆಯಲ್ಲಿ ದೈತ್ಯ ನಾಯಿಯ ಜತೆ ಇವರು ನಡೆದು ಹೋಗುವಾಗ  ಆ ನಾಯಿ ನಾಟಿ ಹಸುವೊಂದರ ಮೇಲೆರಗಿ ಕಚ್ಚಿ ಸಾಯಿಸಿತು! ವಿದೇಶಿ ನಾಯಿ ಆಕಳನ್ನು  ಕಚ್ಚಿ ಕೊಂದ ಸುದ್ದಿ ಕ್ಷಣಾರ್ಧದಲ್ಲಿ ಊರೆಲ್ಲ ಹಬ್ಬಿತು, ಸ್ಥಳೀಯ ದೇವಾಲಯಕ್ಕೆ ಭಕ್ತನೊಬ್ಬ  ದಾನ ನೀಡಿದ ಹಸು ಅದು. ದೇವಾಲಯಕ್ಕೆ ಬಿಟ್ಟ ಪವಿತ್ರ ಗೋವನ್ನು ಇಂಗ್ಲೀಷರ ನಾಯಿ ಕೊಂದಿದ್ದು ಜನರನ್ನು ವಿಪರೀತ ರೊಚ್ಚಿಗೆಬ್ಬಿಸಿತು. ತಕ್ಷಣ ಜಾನ್‌ಬೆಸ್ಟ್ ಹಾಗೂ  ಜತೆಗಿದ್ದ  ೧೭ ವರ್ತಕರನ್ನು ಕೊಚ್ಚಿ ಸಾಯಿಸಿದರು! ದೈತ್ಯ ನಾಯಿಯನ್ನು ಕೊಂದರು. ದುರಂತದ ಬಗೆಗೆ  ಕನಿಕರ ವ್ಯಕ್ತಪಡಿಸಿದ ಕೆಲವರು ಅವರ ಹೆಣಗಳನ್ನು ಒಂದೆಡೆ ಹೂಳಿದರು. ಸುದ್ದಿ ತಿಳಿದು ಕಾರವಾರದಿಂದ ಸ್ಥಳಕ್ಕೆ ಇಂಗ್ಲೀಷ್ ಮುಖ್ಯಸ್ಥರು ಆಗಮಿಸಿದರು. “ಇದು ಜಾನ್ ಬೆಸ್ಟ್ ಹಾಗೂ  ಅವರ ೧೭ ಜನ ಸಹಚರರನ್ನು ಹೂಳಿದ ಸ್ಥಳ, ಮೂರ್ಖ ಪೂಜಾರಿ ಹಾಗೂ ರೊಚ್ಚಿಗೆದ್ದ ಜನರಿಂದ ಇವರೆಲ್ಲ ಜೀವ ತ್ಯಜಿಸಬೇಕಾಯಿತು ಎಂದು  ಆ  ಸಿಮೆಟ್ರಿ ಕಲ್ಲಿನ ಮೇಲೆ  ಘಟನೆಯ ವಿವರ ದಾಖಲಿಸಿದರು.

ಕಾರವಾರದಿಂದ ದಕ್ಷಿಣಕ್ಕೆ ೪೦ ಮೈಲು ದೂರದ ಹೊನ್ನಾವರದಲ್ಲಿ ಘಟನೆ ನಡೆದಿದೆಯೆಂದು ಮಾದವ ಅನಂತ ದೇಸಾಯಿ ಚಿತ್ತಾಕುಲ-ಕಾರವಾರ ಗ್ರಂಥದಲ್ಲಿ ದಾಖಲಿಸಿದ್ದಾರೆ. ಫಿಲಿಪ್ ಎಂಡರಸನ್‌ರ ಇಂಗ್ಲೀಷ್ ಇನ್ ವೆಸ್ಟರ್ನ ಇಂಡಿಯಾಪುಸ್ತಕ ಹಾಗೂ ಕ್ಯಾಪ್ಟನ್ ಅಲೆಕ್ಸಾಂಡರ್  ಆಂಡರ್‌ಸನ್‌ರ  ನ್ಯೂ ಅಕೌಂಟ್ ಆಫ್ ಈಸ್ಟ್ ಇಂಡೀಸ್ಕೃತಿಗಳು  ಈ  ಘಟನೆಯನ್ನು ದಾಖಲಿಸಿವೆ. ಸಿಮೆಟ್ರಿಯ ಬರೆಹ ಓದೋಣವೆಂದು ನಾನು  ಹೊನ್ನಾವರದ ಸ್ಮಶಾನದಲ್ಲಿ ಒಂದೆರಡು ಸಾರಿ ಓಡಾಡಿದ್ದೇನೆ, ಆದರೆ ೧೭೮೦ರ ನಂತರದಲ್ಲಿ  ಸತ್ತವರ ದಾಖಲೆ ದೊರಕಿದೆ. ಜಾನ್‌ಬೆಸ್ಟ್  ತಂಡದ ಸಾವಿನ ವಿವರ  ಇನ್ನೂ  ಸಿಮೆಟ್ರಿಯಲ್ಲಿ  ದೊರೆಯಲಿಲ್ಲ.

ನಾಯಿ ಆಕಳನ್ನು ಕಡಿದು ಸಾಯಿಸಿದ್ದು, ಜನರ ಸೇಡಿಗೆ ಇಂಗ್ಲೀಷರು ಕೊಲೆಯಾದದ್ದು ವಿದೇಶಿಯರನ್ನು ತಲ್ಲಣಗೊಳಿಸಿತು, ಹಸುವಿನ ಕುರಿತ ಅವರ ನೀತಿ ಬದಲಾಗಲು ಕಾರಣವಾಯಿತು. ಇಲ್ಲಿ ಹಸುವನ್ನು  ಪೂಜಿಸುತ್ತಾರೆ, ಅವನ್ನು  ಕೊಲ್ಲಬಾರದು, ಆಹಾರವಾಗಿ ಬಳಸಬಾರದುಎಂದು  ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಪರಿಪಾಟಕ್ಕೆ ಅದು ಮೂಲವಾಯಿತು. ಘಟನೆಯಿಂದ ಭಯಗೊಂಡ  ಬ್ರಿಟಿಶರು ಮುಂದೆ ಕಾಳುಮೆಣಸು ಮಾತ್ರ ಖರೀದಿಸುತ್ತಿದ್ದರೇ ವಿನಃ ಹೊನ್ನಾವರದಲ್ಲಿ ವಾಸ್ತವ್ಯ ಹೂಡುವ ಧೈರ್ಯ ಮಾಡಲಿಲ್ಲ ! ಸಮುದ್ರ ದಂಡೆಯಲ್ಲಿ ವಸಾಹತು ಸ್ಥಾಪನೆಯ ಸಂದರ್ಭದಲ್ಲಿ ಹೊನ್ನಾವರಕ್ಕೆ ಆದ್ಯತೆ  ಕಡಿಮೆಯಾಯಿತು, ಸನಿಹದ ಹಳದೀಪುರ ಹಳ್ಳಿಗೆ ನೀಡಿದ ಮಹತ್ವವನ್ನು ಈ ನಗರಕ್ಕೆ  ನೀಡಲಿಲ್ಲ!  ಇದಾಗಿ ಮತ್ತೆ ೧೪ ವರ್ಷಗಳ ಬಳಿಕ ಕಾರವಾರದಲ್ಲಿ  ಮೆಕ್ಸಿಕನ್ ಹಾಗೂ ಚೀನಾ ವ್ಯಾಪಾರಿಗಳು ಆಹಾರಕ್ಕಾಗಿ ಗೋವಧೆ ಮಾಡಿ  ಶಿಕ್ಷೆ ಅನುಭವಿಸಿದ ಪ್ರಸಂಗ ನಡೆದಿದೆ. ಈ ಘಟನೆಗಳ ಕುರಿತು  ಉನ್ನತ ಮಟ್ಟದ ಚರ್ಚೆಗಳು, ಪತ್ರ ವ್ಯವಹಾರಗಳೂ ನಡೆದಿವೆ!.

ಸಂಸ್ಕೃತಿ, ಕೃಷಿಯ ಅಗತ್ಯವಾಗಿ ನಾವು ಹಸುವನ್ನು ಲಾಗಾಯ್ತಿನಿಂದ ನೋಡಿದ್ದೇವೆ, ಆದರೆ  ಬ್ರಿಟೀಷರ ದೃಷ್ಟಿ ಬೇರೆಯೇ ಆಗಿತ್ತು. ಕಾಡು ಹುಲಿಗಳನ್ನು ಭೇಟೆಯಾಡುವ ಖಯಾಲಿಗೂ ಹಸುಗಳ ಬೇಡಿಕೆಯಿತ್ತು. ನಾಲ್ಕಾಣೆ, ಎಂಟಾಣೆಗಳಿಗೆ ಖರೀದಿಸುತ್ತಿದ್ದರು. ಹುಲಿ ಓಡಾಡುವ ಆಯಕಟ್ಟಿನ ನೆಲೆಗಳಲ್ಲಿ  ಜಾನುವಾರುಗಳನ್ನು ಮರಕ್ಕೆ  ಕಟ್ಟುತ್ತಿದ್ದರು. ಹಸು ತಿನ್ನಲು ಬರುವ ಹುಲಿಯನ್ನು ಬಿದಿರಿನ ಅಟ್ಟಣಿಗೆಯಲ್ಲಿ ಕೂತು ಕೊಲ್ಲುವ ಆಟ ನಡೆಯುತ್ತಿತ್ತು. ಶಿಕಾರಿ ಮೋಜಿಗೆ  ಜಾನುವಾರು ನೀಡಲು ಕೃಷಿಕರು ಸಿದ್ದರಿರಲಿಲ್ಲ, ಇದಕ್ಕಾಗಿ ಪದೇ ಪದೇ ಸಂಘರ್ಷಗಳು ನಡೆಯುತ್ತಿದ್ದವು. ಹುಬ್ಬಳ್ಳಿ, ಹಾವೇರಿಯ ಬಯಲು ಸೀಮೆಗಳಿಂದ ದನಕರು ಖರೀದಿಸಿ  ಹುಲಿ ಶಿಕಾರಿಗೆ ಬಳಸಲಾಗುತ್ತಿತ್ತು! ಪೂಜಿಸುವ ಹಸುಗಳನ್ನು ಕೊಲ್ಲುವ ಪ್ರಸಂಗ ಗಮನಿಸಿದ ಕೃಷಿಕರು ಆಗಾಗ ಸಿಡಿದೇಳುತ್ತಿದ್ದರು. ಹೊನ್ನಾವರ ಘಟನೆಯಂತೂ ವಿದೇಶಿಗರಿಗೆ  ಭಾರತೀಯ ಹಸು ಸಂಸ್ಕೃತಿ ಕುರಿತು  ಎಂದೂ  ಮರೆಯಲಾಗದ ದೊಡ್ಡ ಪಾಠ ಕಲಿಸಿತ್ತು.

ಇಂದಿಗೂ  ಕಸಾಯಿಖಾನೆಗೆ  ಜಾನುವಾರು ಸಾಗಾಟ ವಿಚಾರದಲ್ಲಿ  ಆಗಾಗ  ಸಂಘರ್ಷ ನಡೆಯುತ್ತದೆ. ಹಸು ಕೊಲ್ಲುವವರ ವಿರುದ್ದ ದೂರುಗಳು ದಾಖಲಾಗುತ್ತಿವೆ. ಗೋ ಶಾಲೆಗಳ ಮುಖೇನ ತಳಿ ಸಂರಕ್ಷಣೆಯ ಜಾಗೃತಿ ಬಿತ್ತರವಾಗುತ್ತಿದೆ. ಕೃಷಿ  ಬದುಕಿನ ಮಧ್ಯೆ  ಲಾಭ-ನಷ್ಟದ ತುಲನೆ ನಡೆಸಿದವರು ೧೫ ವರ್ಷ ಉಳುಮೆಗೆ ಬಳಸಿದ ಎತ್ತುಗಳನ್ನು ನಿರ್ದಾಕ್ಷಿಣ್ಯವಾಗಿ  ಕಸಾಯಿಖಾನೆಗೆ ನೀಡಿದ ಉದಾಹರಣೆಯಿದೆ.  ಅಷ್ಟೇಕೆ ಒಂದು ಕಾಲದಲ್ಲಿ  ಹುಲಿ ಶಿಕಾರಿಗೆ ಹಸು ನೀಡುವದಿಲ್ಲ ಎಂದು ಬ್ರಿಟಿಶರೆದುರು  ಪ್ರತಿಭಟಿಸಿದ್ದ  ಕಾಳಿ ಕಣಿವೆಯ ಹಳ್ಳಿಗರು ಈಗ ಸ್ವತಃ ಜಾನುವಾರುಗಳನ್ನು ಕಾಡಿಗೆ ಅಟ್ಟಿದ್ದಾರೆ! ಜಲಾಶಯ ಸನಿಹದ  ಕಾಡುಗಳಲ್ಲಿ ಮೇವು ಅರಸುತ್ತ ಸಾವಿರಾರು ಸಂಖ್ಯೆಯಲ್ಲಿ ಹಸುಕರುಗಳು ೧೦-೨೦ ವರ್ಷಗಳಿಂದ ಅಪ್ಪಟ ಕಾಡು ಪ್ರಾಣಿಗಳಂತೆ ಬದುಕುತ್ತಿವೆ. ಕಾಡಲ್ಲಿ ಕರು ಹಾಕುತ್ತ ಸಂತಾನ ಬೆಳೆಯುತ್ತಿದೆ. ಅವು ವರ್ಷಕ್ಕೆ ಒಮ್ಮೆಯೂ ಕೃಷಿಕರ ಕೈಗೆ ಸಿಗುವದಿಲ್ಲ! ಖಂಡವಿದಕೋ, ಮಾಂಸವಿದಕೋಎಂದು ಹುಲಿಗಳಿಗೆ ಆಹಾರವಾಗುತ್ತಿವೆ. ಒಂದು ಕಾಲಕ್ಕೆ ಇಂಗ್ಲೀಷರನ್ನು  ಬೆಚ್ಚಿಬೀಳಿಸಿದ ಗೋವಧೆ ಪ್ರಸಂಗ ಈಗ ನಮ್ಮನ್ನೂ  ಚಿಂತನೆಗೆ ಹಚ್ಚಿದೆ.